०२६ अङ्गदयौवराज्याभिषेकः

वाचनम्
ಭಾಗಸೂಚನಾ

ಹನುಮಂತನು ಸುಗ್ರೀವನ ಪಟ್ಟಾಭಿಷೇಕಕ್ಕಾಗಿ ಶ್ರೀರಾಮನನ್ನು ಕಿಷ್ಕಿಧೆಗೆ ಆಮಂತ್ರಿಸಿದುದು, ನಗರ ಪ್ರವೇಶಕ್ಕೆ ಶ್ರೀರಾಮನ ನಿರಾಕರಣೆ, ಸುಗ್ರೀವಾಂಗದರ ಪಟ್ಟಾಭಿಷೇಕ

ಮೂಲಮ್ - 1

ತತಃ ಶೋಕಾಭಿಸಂತಪ್ತಂ ಸುಗ್ರೀವಂ ಕ್ಲಿನ್ನವಾಸಸಮ್ ।
ಶಾಖಾಮೃಗಮಹಾಮಾತ್ರಾಃ ಪರಿವಾರ್ಯೋಪತಸ್ಥಿರೇ ॥

ಮೂಲಮ್ - 2

ಅಭಿಗಮ್ಯ ಮಹಾಬಾಹುಂ ರಾಮಮಕ್ಲಿಷ್ಟಕಾರಿಣಮ್ ।
ಸ್ಥಿತಾಃ ಪ್ರಾಂಜಲಯಃ ಸರ್ವೇ ಪಿತಾಮಹಮಿವರ್ಷಯಃ ॥

ಅನುವಾದ

ಅನಂತರ ವಾನರ ಸೈನ್ಯದ ಮುಖ್ಯ-ಮುಖ್ಯ ವೀರರು (ಹನುಮಂತನೇ ಆದಿ) ಒದ್ದೆ ಬಟ್ಟೆಯುಟ್ಟ ಶೋಕ ಸಂತಪ್ತ ಸುಗ್ರೀವನನ್ನು ಸುತ್ತುವರೆದು ಅವನೊಂದಿಗೆ, ಅನಾಯಾಸವಾಗಿ ಮಹಾನ್ ಕರ್ಮಮಾಡುವ ಮಹಾಬಾಹು ಶ್ರೀರಾಮನ ಸೇವೆಯಲ್ಲಿ ಉಪಸ್ಥಿತರಾದರು. ಶ್ರೀರಾಮನ ಬಳಿಗೆ ಬಂದು ಬ್ರಹ್ಮದೇವರ ಮುಂದೆ ಮಹರ್ಷಿಗಳು ನಿಂತಿರುವಂತೆ, ಆ ಎಲ್ಲ ವಾನರರು ಕೈಮುಗಿದು ನಿಂತುಕೊಂಡರು.॥1-2॥

ಮೂಲಮ್ - 3

ತತಃ ಕಾಂಚನಶೈಲಾಭಸ್ತರುಣಾರ್ಕನಿಭಾನನಃ ।
ಅಬ್ರವೀತ್ ಪ್ರಾಂಜಲಿರ್ವಾಕ್ಯಂ ಹನುಮಾನ್ಮಾರುತಾತ್ಮಜಃ ॥

ಅನುವಾದ

ಬಳಿಕ ಸುವರ್ಣಮಯ ಮೇರುಪರ್ವತದಂತೆ ಪ್ರಾತಃಕಾಲದ ಸೂರ್ಯನಂತೆ ಅರುಣ ಪ್ರಭೆಯಿಂದ ಪ್ರಕಾಶಿತ ಮುಖವುಳ್ಳ, ಸುಂದರ, ವಿಶಾಲಕಾಯ ವಾಯುಪುತ್ರ ಹನುಮಂತನು ಕೈಮುಗಿದುಕೊಂಡು ನುಡಿದನು.॥3॥

ಮೂಲಮ್ - 4

ಭವತ್ಪ್ರಸಾದಾತ್ ಕಾಕುತ್ಸ್ಥ ಪಿತೃಪೈತಾಮಹಂ ಮಹತ್ ।
ವಾನರಾಣಾಂ ಸುದಂಷ್ಟ್ರಾಣಾಂ ಸಂಪನ್ನಬಲಶಾಲಿನಾಮ್ ॥

ಮೂಲಮ್ - 5½

ಮಹಾತ್ಮನಾಂ ಸುದುಷ್ಪ್ರಾಪಂ ಪ್ರಾಪ್ತೋ ರಾಜ್ಯಮಿದಂ ಪ್ರಭೋ ।
ಭವತಾ ಸಮನುಜ್ಞಾತಃ ಪ್ರವಿಶ್ಯ ನಗರಂ ಶುಭಮ್ ॥
ಸಂವಿಧಾಸ್ಯತಿ ಕಾರ್ಯಾಣಿ ಸರ್ವಾಣಿ ಸಸುಹೃದ್ಗಣಃ ।

ಅನುವಾದ

ಕಕುತ್ಸ್ಥ ಕುಲನಂದನ! ನಿನ್ನ ಕೃಪೆಯಿಂದ ಸುಗ್ರೀವನಿಗೆ ಸುಂದರ ದಾಡೆಗಳುಳ್ಳ ಬಲಸಂಪನ್ನ, ಮಹಾಮನಸ್ವೀ ತಂದೆ-ತಾತಂದಿರ ಕಾಲದಿಂದ ನಡೆದು ಬಂದ ವಾನರರ, ಈ ವಿಶಾಲ ಸಾಮ್ರಾಜ್ಯ ಪ್ರಾಪ್ತವಾಯಿತು. ಪ್ರಭೋ! ಇದು ಸಿಗುವುದು ಬಹಳ ಕಠಿಣವಾಗಿದ್ದರೂ ನಿನ್ನ ಪ್ರಸಾದದಿಂದ ಇದು ಇವನಿಗೆ ಸುಲಭವಾಯಿತು. ಈಗ ನೀನು ಅಪ್ಪಣೆ ಕೊಟ್ಟರೆ ತನ್ನ ಸುಂದರ ನಗರವನ್ನು ಪ್ರವೇಶಿಸಿ, ಸುಹೃದರೊಂದಿಗೆ ತನ್ನ ಎಲ್ಲ ರಾಜಕಾರ್ಯವನ್ನು ನಡೆಸಲಿ.॥4-5½॥

ಮೂಲಮ್ - 6

ಸ್ನಾತೋಽಯಂ ವಿವಿಧೈರ್ಗಂಧೈರೌಷಧೈಶ್ಚ ಯಥಾವಿಧಿ ॥

ಮೂಲಮ್ - 7½

ಅರ್ಚಯಿಷ್ಯತಿ ಮಾಲ್ಯೈಶ್ಚ ರತ್ನೈಶ್ಚ ತ್ವಾಂ ವಿಶೇಷತಃ ।
ಇಮಾಂ ಗಿರಿಗುಹಾಂ ರಮ್ಯಾಮಭಿಗಂತುಂತ್ವಮರ್ಹಸಿ ॥
ಕುರುಷ್ವ ಸ್ವಾಮಿಸಂಬಂಧಂ ವಾನರಾನ್ ಸಂಪ್ರಹರ್ಷಯ ।

ಅನುವಾದ

ಶಾಸ್ತ್ರವಿಧಿಗನುಸಾರ ನಾನಾ ಪ್ರಕಾರದ ಸುಗಂಧಿತ ಪದಾರ್ಥಗಳಿಂದ, ಔಷಧಿಗಳಿಂದ ಸಹಿತ ಜಲದಿಂದ ಇವನು ರಾಜ್ಯದಲ್ಲಿ ಪಟ್ಟಾಭಿಷಿಕ್ತನಾಗಿ, ಮಾಲೆಗಳಿಂದ ಮುತ್ತು ರತ್ನಗಳಿಂದ ನಿನ್ನನ್ನು ವಿಶೇಷವಾಗಿ ಪೂಜಿಸುವನು. ಆದ್ದರಿಂದ ನೀನು ಈ ರಮಣೀಯ ಪರ್ವತ-ಗುಹೆ ಕಿಷ್ಕಿಂಧೆಗೆ ಆಗಮಿಸುವ ಕೃಪೆ ಮಾಡಬೇಕು ಹಾಗೂ ಇವನನ್ನು ಈ ರಾಜ್ಯದ ಒಡೆಯನನ್ನಾಗಿಸಿ ವಾನರರ ಹರ್ಷವನ್ನು ವೃದ್ಧಿಗೊಳಿಸಬೇಕು.॥6-7½॥

ಮೂಲಮ್ - 8½

ಏವಮುಕ್ತೋ ಹನುಮತಾ ರಾಘವಃ ಪರವೀರಹಾ ॥
ಪ್ರತ್ಯುವಾಚ ಹನೂಮಂತಂ ಬುದ್ಧಿಮಾನ್ವಾಕ್ಯಕೋವಿದಃ ।

ಅನುವಾದ

ಹನುಮಂತನು ಹೀಗೆ ಹೇಳಿದಾಗ ಶತ್ರುವೀರರನ್ನು ಸಂಹರಿಸುವ, ವಾಕ್ಯಕೋವಿದನಾದ ಶ್ರೀರಘುನಾಥನು ಅವನಲ್ಲಿ ಹೀಗೆ ಹೇಳಿದನು.॥8½॥

ಮೂಲಮ್ - 9½

ಚತುರ್ದಶ ಸಮಾಃ ಸೌಮ್ಯ ಗ್ರಾಮಂ ವಾ ಯದಿ ವಾ ಪುರಮ್ ॥
ನ ಪ್ರವೇಕ್ಷ್ಯಾಮಿ ಹನುಮನ್ ಪಿತುರ್ನಿರ್ದೇಶಪಾಲಕಃ ।

ಅನುವಾದ

ಹನುಮಂತನೇ! ಸೌಮ್ಯನೇ! ನಾನು ಪಿತೃವಾಕ್ಯ ಪಾಲಿಸುತ್ತಾ ಇದ್ದೇನೆ; ಆದ್ದರಿಂದ ಹದಿನಾಲ್ಕು ವರ್ಷಗಳು ಪೂರ್ಣವಾಗುವ ತನಕ ಯಾವುದೇ ಗ್ರಾಮ ಅಥವಾ ನಗರವನ್ನು ಪ್ರವೇಶಿಸುವುದಿಲ್ಲ.॥9½॥

ಮೂಲಮ್ - 10½

ಸುಸಮೃದ್ಧಾಂ ಗುಹಾಂ ದಿವ್ಯಾಂ ಸುಗ್ರೀವೋ ವಾನರರ್ಷಭಃ ॥
ಪ್ರವಿಷ್ಟೋ ವಿಧಿವದ್ವೀರಃ ಕ್ಷಿಪ್ರಂ ರಾಜ್ಯೇಽಭಿಷಿಚ್ಯತಾಮ್ ।

ಅನುವಾದ

ವಾನರ ಶ್ರೇಷ್ಠ ವೀರ ಸುಗ್ರೀವನು ಈ ಸಮೃದ್ಧಿಶಾಲಿನೀ ದಿವ್ಯಗುಹೆಯನ್ನು ಪ್ರವೇಶಿಸಲಿ ಹಾಗೂ ಅಲ್ಲಿ ಶೀಘ್ರವಾಗಿ ಇವನ ವಿಧಿವತ್ತಾಗಿ ಪಟ್ಟಾಭಿಷೇಕ ಮಾಡಲಾಗುವುದು.॥10॥

ಮೂಲಮ್ - 11

ಏವಮುಕ್ತ್ವಾ ಹನೂಮಂತಂ ರಾಮಃ ಸುಗ್ರೀವಮಬ್ರವೀತ್ ॥

ಮೂಲಮ್ - 12

ವೃತ್ತಜ್ಞೋ ವೃತ್ತಸಂಪನ್ನಮುದಾರಬಲ ವಿಕ್ರಮಮ್ ।
ಇಮಮಪ್ಯಂಗದಂ ವೀರಂ ಯೌವರಾಜ್ಯೇಽಭಿಷೇಚಯ ॥

ಅನುವಾದ

ಹನುಮಂತನಲ್ಲಿ ಹೀಗೆ ಹೇಳಿ ಶ್ರೀರಾಮಚಂದ್ರನು ಸುಗ್ರೀವನಲ್ಲಿ ಹೇಳಿದನು - ಮಿತ್ರನೇ! ನೀನು ಲೌಕಿಕ ಮತ್ತು ಶಾಸ್ತ್ರೀಯ ಎಲ್ಲ ವ್ಯವಹಾರಗಳನ್ನು ತಿಳಿದಿರುವೆ, ಕುಮಾರ ಅಂಗದನು ಸದಾಚಾರ ಸಂಪನ್ನ, ಮಹಾಬಲ-ಪರಾಕ್ರಮದಿಂದ ಪರಿಪೂರ್ಣನಾಗಿರುವನು. ಇವನಲ್ಲಿ ವೀರಶ್ರೀ ತುಂಬಿ ತುಳುಕುತ್ತಿದೆ, ಆದ್ದರಿಂದ ನೀನು ಇವನಿಗೆ ಯುವರಾಜನಾಗಿ ಪಟ್ಟಕಟ್ಟು.॥11-12॥

ಮೂಲಮ್ - 13

ಜ್ಯೇಷ್ಠಸ್ಯ ಹಿ ಸುತೋ ಜ್ಯೇಷ್ಠಃ ಸದೃಶೋ ವಿಕ್ರಮೇಣ ಚ ।
ಅಂಗದೋಽಯಮದೀನಾತ್ಮಾ ಯೌವರಾಜ್ಯಸ್ಯ ಭಾಜನಮ್ ॥

ಅನುವಾದ

ಇವನು ನಿನ್ನ ಅಣ್ಣನ ಜ್ಯೇಷ್ಠ ಪುತ್ರನಾಗಿದ್ದಾನೆ. ಪರಾಕ್ರಮದಲ್ಲಿಯೂ ಅವನಂತೆಯೇ ಇದ್ದಾನೆ ಹಾಗೂ ಇವನ ಹೃದಯ ಉದಾರವಾಗಿದೆ. ಆದ್ದರಿಂದ ಅಂಗದನು ಯುವ ರಾಜನಾಗಲು ಸರ್ವಥಾ ಅಧಿಕಾರಿಯಾಗಿದ್ದಾನೆ.॥13॥

ಮೂಲಮ್ - 14

ಪೂರ್ವೋಽಯಂ ವಾರ್ಷಿಕೋ ಮಾಸಃ ಶ್ರಾವಣಃ ಸಲಿಲಾಗಮಃ ।
ಪ್ರವೃತ್ತಾಃ ಸೌಮ್ಯ ಚತ್ವಾರೋ ಮಾಸಾ ವಾರ್ಷಿಕ ಸಂಜ್ಞಿಕಾಃ ॥

ಅನುವಾದ

ಸೌಮ್ಯ! ಮಳೆಗಾಲದ ನಾಲ್ಕು ತಿಂಗಳ ಚಾತುರ್ಮಾಸ್ಯ ಬಂದಿದೆ. ಇದರಲ್ಲಿ ನೀರನ್ನು ಕೊಡುವಂತಹ ಮೊದಲನೆಯ ಶ್ರಾವಣವು ಪ್ರಾರಂಭವಾಗಿದೆ.॥14॥

ಮೂಲಮ್ - 15

ನಾಯಮುದ್ಯೋಗಸಮಯಃ ಪ್ರವಿಶ ತ್ವಂ ಪುರೀಂ ಶುಭಾಮ್ ।
ಅಸ್ಮಿನ್ ವತ್ಸ್ಯಾಮ್ಯಹಂ ಸೌಮ್ಯ ಪರ್ವತೇ ಸಹಲಕ್ಷ್ಮಣಃ ॥

ಅನುವಾದ

ಮಿತ್ರನೇ! ಇದು ಯಾರ ಮೇಲೆ ಆಕ್ರಮಣ ಮಾಡುವ ಸಮಯವಲ್ಲ. ಅದಕ್ಕಾಗಿ ನೀನು ನಿನ್ನ ಸುಂದರ ನಗರಕ್ಕೆ ಹೋಗು. ನಾನು ಲಕ್ಷ್ಮಣನೊಂದಿಗೆ ಈ ಪರ್ವತದಲ್ಲಿ ವಾಸಿಸುವೆನು.॥15॥

ಮೂಲಮ್ - 16

ಇಯಂ ಗಿರಿಗುಹಾ ರಮ್ಯಾ ವಿಶಾಲಾ ಯುಕ್ತಮಾರುತಾ ।
ಪ್ರಭೂತಸಲಿಲಾ ಸೌಮ್ಯ ಪ್ರಭೂತಕಮಲೋತ್ಪಲಾ ॥

ಅನುವಾದ

ಸುಗ್ರೀವನೇ! ಪರ್ವತದ ಈ ಗುಹೆಯು ಬಹಳ ರಮಣೀಯ, ವಿಶಾಲವಾಗಿದೆ. ಇದರಲ್ಲಿ ಆವಶ್ಯಕತೆಗನುಸಾರ ಗಾಳಿಯೂ ಸಿಗುತ್ತದೆ. ಇಲ್ಲಿ ನೀರು ಸಾಕಷ್ಟು ಇದ್ದು, ಕಮಲ ಹಾಗೂ ನೈದಿಲೆಗಳೂ ಬಹಳವಾಗಿವೆ.॥16॥

ಮೂಲಮ್ - 17½

ಕಾರ್ತಿಕೇ ಸಮನುಪ್ರಾಪ್ತೇ ತ್ವಂ ರಾವಣವಧೇ ಯತ ।
ಏಷ ನಃ ಸಮಯಃ ಸೌಮ್ಯ ಪ್ರವಿಶತ್ವಂ ಸ್ವಮಾಲಯಮ್ ॥
ಅಭಿಷಿಂಚಸ್ವ ರಾಜ್ಯೇ ಚ ಸುಹೃದಃ ಸಂಪ್ರಹರ್ಷಯ ।

ಅನುವಾದ

ಸಖನೇ! ಕಾರ್ತಿಕಮಾಸ ಬಂದಾಗ ನೀನು ರಾವಣನ ವಧೆಗಾಗಿ ಪ್ರಯತ್ನಿಸುವುದು. ಇದೇ ನಮ್ಮ ನಿಶ್ಚಯವಾಗಿದೆ. ಈಗ ನೀನು ನಿನ್ನ ಅರಮನೆಯನ್ನು ಪ್ರವೇಶಿಸಿ, ಪಟ್ಟಾಭಿಷಿಕ್ತನಾಗಿ, ಸುಹೃದಯರನ್ನು ಆನಂದಗೊಳಿಸು.॥17½॥

ಮೂಲಮ್ - 18½

ಇತಿ ರಾಮಾಭ್ಯನುಜ್ಞಾತಃ ಸುಗ್ರೀವೋ ವಾನರರ್ಷಭಃ ॥
ಪ್ರವಿವೇಶ ಪುರೀಂ ರಮ್ಯಾಂ ಕಿಷ್ಕಿಂಧಾ ವಾಲಿಪಾಲಿತಾಮ್ ।

ಅನುವಾದ

ಶ್ರೀರಾಮಚಂದ್ರನಿಂದ ಹೀಗೆ ಅಪ್ಪಣೆ ಪಡೆದು ವಾನರಶ್ರೇಷ್ಠ ಸುಗ್ರೀವನು ವಾಲಿಯಿಂದ ರಕ್ಷಿಸಲ್ಪಟ್ಟ ರಮಣೀಯ ಕಿಷ್ಕಿಂಧಾಪುರಿಗೆ ಹೊದನು.॥18½॥

ಮೂಲಮ್ - 19½

ತಂ ವಾನರ ಸಹಸ್ರಾಣಿ ಪ್ರವಿಷ್ಟಂ ವಾನರೇಶ್ವರಮ್ ॥
ಅಭಿವಾರ್ಯ ಪ್ರವಿಷ್ಟಾನಿ ಸರ್ವತಃ ಪ್ಲವಗೇಶ್ವರಮ್ ।

ಅನುವಾದ

ಆಗ ಗುಹೆಯನ್ನು ಹೊಕ್ಕ ಆ ವಾನರರಾಜನನ್ನು ಸುತ್ತುವರೆದು ಸಾವಿರಾರು ವಾನರರು ಅವನೊಂದಿಗೆ ಗುಹೆಯನ್ನು ಪ್ರವೇಶಿಸಿದರು.॥19½॥

ಮೂಲಮ್ - 20½

ತತಃ ಪ್ರಕೃತಯಃ ಸರ್ವಾ ದೃಷ್ಟ್ವಾ ಹರಿಗಣೇಶ್ವರಮ್ ॥
ಪ್ರಣಮ್ಯ ಮೂರ್ಧ್ನಾ ಪತಿತಾ ವಸುಧಾಯಾಂ ಸಮಾಹಿತಾಃ ।

ಅನುವಾದ

ವಾನರರಾಜನನ್ನು ನೋಡಿ ಪ್ರಜೆಯೇ ಆದಿ ಸಮಸ್ತ ಮಂತ್ರಿಗಳು ಏಕಾಗ್ರ ಚಿತ್ತರಾಗಿ ನೆಲಮುಟ್ಟಿ ಶಿರಬಾಗಿ ಅವನಿಗೆ ನಮಸ್ಕರಿಸಿದರು.॥20½॥

ಮೂಲಮ್ - 21½

ಸುಗ್ರೀವಃ ಪ್ರಕೃತೀಃ ಸರ್ವಾಃ ಸಂಭಾಷ್ಯೋತ್ಥಾಪ್ಯವೀರ್ಯವಾನ್ ॥
ಭ್ರಾತುರಂತಃಪುರಂ ಸೌಮ್ಯಂ ಪ್ರವಿವೇಶ ಮಹಾಬಲಃ ।

ಅನುವಾದ

ಮಹಾಬಲಿ ಪರಾಕ್ರಮಿ ಸುಗ್ರೀವನು ಅವರೆಲ್ಲರನ್ನು ಎಬ್ಬಿಸಿ, ಅವರೆಲ್ಲರೊಂದಿಗೆ ಮಾತುಕತೆಯಾಡಿ, ಅಣ್ಣನ ಸೌಮ್ಯ ಅಂತಃಪುರವನ್ನು ಪ್ರವೇಶಿಸಿದನು.॥21½॥

ಮೂಲಮ್ - 22½

ಪ್ರವಿಷ್ಟಂ ಭೀಮವಿಕ್ರಾಂತಂ ಸುಗ್ರೀವಂ ವಾನರರ್ಷಭಮ್ ॥
ಅಭ್ಯಷಿಂಚಂತ ಸುಹೃದಃ ಸಹಸ್ರಾಕ್ಷಮಿವಾಮರಾಃ ।

ಅನುವಾದ

ಭಯಂಕರ ಪರಾಕ್ರಮ ಪ್ರಕಟಿಸುವ ವಾನರಶ್ರೇಷ್ಠ ಸುಗ್ರೀವನು ಅಂತಃಪುರಕ್ಕೆ ಬಂದುದನ್ನು ನೋಡಿ, ಅವನ ಸುಹೃದಯರು-ದೇವತೆಗಳು ಸಹಸ್ರನೇತ್ರಧಾರೀ ಇಂದ್ರನಿಗೆ ಅಭಿಷೇಕ ಮಾಡಿದಂತೆಯೇ ಸುಗ್ರೀವನ ರಾಜ್ಯಾಭಿಷೇಕ ಮಾಡಿದರು.॥22½॥

ಮೂಲಮ್ - 23

ತಸ್ಯ ಪಾಂಡುರಮಾಜಹ್ರುಶ್ಘತ್ರಂ ಹೇಮಪರಿಷ್ಕೃತಮ್ ॥

ಮೂಲಮ್ - 24

ಶುಕ್ಲೇ ಚ ವಾಲವ್ಯಜನೇ ಹೇಮದಂಡೇ ಯಶಸ್ಕರೇ ।
ತಥಾ ರತ್ನಾನಿ ಸರ್ವಾಣಿ ಸರ್ವಬೀಜೌಷಧಾನಿ ಚ ॥

ಮೂಲಮ್ - 25

ಸಕ್ಷೀರಾಣಾಂ ಚ ವೃಕ್ಷಾಣಾಂ ಪ್ರರೋಹಾನ್ಕುಸುಮಾನಿ ಚ ।
ಶುಕ್ಲಾನಿ ಚೈತ್ರ ವಸ್ತ್ರಾಣಿ ಶ್ವೇತಂ ಚೈವಾನುಲೇಪನಮ್ ॥

ಮೂಲಮ್ - 26

ಸುಗಂಧೀನಿ ಚ ಮಾಲ್ಯಾನಿ ಸ್ಥಲಜಾನ್ಯಂಬುಜಾನಿ ಚ ।
ಚಂದನಾನಿ ಚ ದಿವ್ಯಾನಿ ಗಂಧಾಂಶ್ಚ ವಿವಿಧಾನ್ಬಹೂನ್ ॥

ಮೂಲಮ್ - 27

ಅಕ್ಷತಂ ಜಾತರೂಪಂ ಚ ಪ್ರಿಯಂಗುಮಧುಸರ್ಪಿಷೀ ।
ದಧಿ ಚರ್ಮ ಚ ವೈಯಾಘ್ರಂ ಪರಾರ್ಧ್ಯೆ ಚಾಪ್ಯುಪಾನಹೌ ॥

ಮೂಲಮ್ - 28

ಸಮಾಲಂಭನಮಾದಾಯ ಗೋರೋಚನಂ ಸಮನಃ ಶಿಲಾಮ್ ।
ಆಜಗ್ಮುಸ್ತತ್ರ ಮುದಿತಾ ವರಾಃ ಕನ್ಯಾಶ್ಚ ಷೋಡಶ ॥

ಅನುವಾದ

ಮೊದಲಿಗೆ ಅವರೆಲ್ಲರೂ ಸುಗ್ರೀವನಿಗಾಗಿ ಸ್ವರ್ಣಭೂಷಿತ ಶ್ವೇತ ಛತ್ರವನ್ನೂ, ಚಿನ್ನದ ಹಿಡಿಯುಳ್ಳ ಎರಡು ಬಿಳಿಯ ಚಾಮರಗಳನ್ನೂ, ಎಲ್ಲ ರೀತಿಯ ರತ್ನಗಳನ್ನೂ, ಬೀಜಗಳನ್ನೂ, ಔಷಧಿಗಳನ್ನೂ ಆಗ ತಾನೇ ಕತ್ತರಿಸಿ ತೊಟ್ಟಿಕ್ಕುತ್ತಿದ್ದ ಹಾಲಿನಿಂದಲೂ ಚಿಗುರೆಲೆಗಳಿಂದಲೂ ಕೂಡಿದ ಎಳೆಯ ಕೊಂಬೆಗಳನ್ನು, ಬಿಳಿಯ ಕುಸುಮಗಳನ್ನೂ, ಬಿಳಿಯ ವಸ್ತ್ರಗಳನ್ನೂ ಕರ್ಪೂರಾದಿ ಬಿಳಿಯ ಅನುಲೇಪನಗಳನ್ನು, ನೀರಿನಲ್ಲಿ ನೆಲದಲ್ಲಿ ಬೆಳೆಯುವ ಸುಗಂಧಯುಕ್ತವಾದ ಪುಷ್ಪಮಾಲೆಗಳನ್ನೂ, ದಿವ್ಯ ಚಂದನಗಳನ್ನೂ ನಾನಾ ಪ್ರಕಾರದ ಅನೇಕ ಸುಗಂಧಿತ ಪದಾರ್ಥಗಳನ್ನೂ, ಅಕ್ಷತೆಗಳನ್ನೂ, ಚಿನ್ನ, ನವಣೆ ಮುಂತಾದ ಧಾನ್ಯಗಳನ್ನೂ, ಜೇನುತುಪ್ಪವನ್ನೂ, ತುಪ್ಪ, ಮೊಸರನ್ನೂ, ಹುಲಿ ಚರ್ಮವನ್ನೂ, ಹಂದಿಯ ಚರ್ಮದ ಪಾದರಕ್ಷೆಗಳನ್ನೂ, ಅನುಲೇಪನ ದ್ರವ್ಯಗಳನ್ನೂ, ಗೋರೋಜನವನ್ನೂ, ಮಣಿಶಿಲೆಯನ್ನು ತಂದರು. ಪಟ್ಟಾಭಿಷೇಕದ ಸಮಯದಲ್ಲಿ ಮಂಗಳ ದ್ರವ್ಯಗಳೊಡನೆ ಶ್ರೇಷ್ಠರಾದ ಹದಿನಾರು ಕನ್ಯೆಯರೂ ಸುಗ್ರೀವನ ಬಳಿಗೆ ಆಗಮಿಸಿದರು.॥23-28॥

ಮೂಲಮ್ - 29

ತತಸ್ತೇ ವಾನರಶ್ರೇಷ್ಠಮಭಿಷೇಕ್ತುಂ ಯಥಾವಿಧಿ ।
ರತ್ನೈರ್ವಸ್ತ್ರೈಶ್ಚ ಭಕ್ಷ್ಯೈಶ್ಚ ತೋಷಯಿತ್ವಾ ದ್ವಿಜರ್ಷಭಾನ್ ॥

ಅನುವಾದ

ಅನಂತರ ಅವರೆಲ್ಲರೂ ಶ್ರೇಷ್ಠ ಬ್ರಾಹ್ಮಣರಿಗೆ ನಾನಾ ಪ್ರಕಾರದ ರತ್ನ-ವಸ್ತ್ರ ಮತ್ತು ಭಕ್ಷ್ಯಭೋಜ್ಯ ಪದಾರ್ಥಗಳಿಂದ ಸಂತುಷ್ಟಗೊಳಿಸಿ ವಾನರಶ್ರೇಷ್ಠ ಸುಗ್ರೀವನ ಪಟ್ಟಾಭಿಷೇಕವನ್ನು ವಿಧಿವತ್ತಾಗಿ ಪ್ರಾರಂಭಿಸಿದರು.॥29॥

ಮೂಲಮ್ - 30

ತತಃ ಕುಶಪರಿಸ್ತೀರ್ಣಂ ಸಮಿದ್ಧಂ ಜಾತವೇದಸಮ್ ।
ಮಂತ್ರಪೂತೇನ ಹವಿಷಾ ಹುತ್ವಾ ಮಂತ್ರವಿದೋ ಜನಾಃ ॥

ಅನುವಾದ

ಮಂತ್ರವೇತ್ತರಾದ ವಿಪ್ರರು ವೇದಿಯಲ್ಲಿ ಅಗ್ನಿಯನ್ನು ಸ್ಥಾಪಿಸಿ, ಅದನ್ನು ಪ್ರಜ್ವಲಿತಗೊಳಿಸಿ, ಸುತ್ತಲೂ ದರ್ಭೆಗಳನ್ನು ಹರಡಿ, ಅಗ್ನಿ ಸಂಸ್ಕಾರ ಮಾಡಿ ಮಂತ್ರಪೂರಿತ ಹವಿಸ್ಸನ್ನು ಅಗ್ನಿಯಲ್ಲಿ ಹೋಮಮಾಡಿದರು.॥30॥

ಮೂಲಮ್ - 31½

ತತೋ ಹೇಮಪ್ರತಿಷ್ಠಾನೇ ವರಾಸ್ತರಣಸಂವೃತೇ ।
ಪ್ರಾಸಾದಶಿಖರೇ ರಮ್ಯೇ ಚಿತ್ರಮಾಲ್ಯೋಪಶೋಭಿತೇ॥
ಪ್ರಾಂಗ್ಮುಖಂ ವಿಧಿವನ್ಮಂತ್ರೈಃ ಸ್ಥಾಪಯಿತ್ವಾ ವರಾಸನೇ ।

ಅನುವಾದ

ಅನಂತರ ಬಣ್ಣ-ಬಣ್ಣದ ಪುಷ್ಪಮಾಲೆಗಳಿಂದ ಸುಶೋಭಿತ, ರಮ್ಯವಾದ ಪ್ರಾಸಾದದ ಅಗ್ರಭಾಗದಲ್ಲಿದ್ದ ಸ್ವರ್ಣ ಸಿಂಹಾಸನವನ್ನು ಇರಿಸಿ, ಸುಂದರವಾದ ಮೇಲುಹೊದಿಕೆಯನ್ನು ಹಾಸಿ ಅದರ ಮೇಲೆ ಸುಗ್ರೀವನನ್ನು ಪೂರ್ವಾಭಿಮುಖವಾಗಿಸಿ ವಿಧಿವತ್ತಾಗಿ ಮಂತ್ರೋಚ್ಛಾರ ಮಾಡುತ್ತಾ ಕುಳ್ಳಿರಿಸಲಾಯಿತು.॥31½॥

ಮೂಲಮ್ - 32

ನದೀನದೇಭ್ಯಃ ಸಂಹೃತ್ಯ ತೀರ್ಥೇಭ್ಯಶ್ಚ ಸಮಂತತಃ ॥

ಮೂಲಮ್ - 33

ಆಹೃತ್ಯ ಚ ಸಮುದ್ರೇಭ್ಯಃ ಸರ್ವೇಭ್ಯೋ ವಾನರರ್ಷಭಾಃ ।
ಅಪಃ ಕನಕಕುಂಭೇಷು ನಿಧಾಯ ಮಿಮಲಂ ಜಲಮ್ ॥

ಮೂಲಮ್ - 34

ಶುಭೈರ್ಋಷಭಶೃಂಗೈಶ್ಚ ಕಲಶೈಶ್ಚೈವ ಕಾಂಚನೈಃ ।
ಶಾಸ್ತ್ರದೃಷ್ಟೇನ ವಿಧಿನಾ ಮಹರ್ಷಿವಿಹಿತೇನ ಚ ॥

ಮೂಲಮ್ - 35

ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ।
ಮೈಂದಶ್ಚ ದ್ವಿವಿದಶ್ಚೈವ ಹನುಮಾನ್ಜಾಂಬವಾಂಸ್ತಥಾ ॥

ಮೂಲಮ್ - 36

ಅಭ್ಯಷಿಂಚತ ಸುಗ್ರೀವಂ ಪ್ರಸನ್ನೇನ ಸುಗಂಧಿನಾ ।
ಸಲಿಲೇನ ಸಹಸ್ರಾಕ್ಷಂ ವಸವೋ ವಾಸವಂ ಯಥಾ ॥

ಅನುವಾದ

ಬಳಿಕ ಶ್ರೇಷ್ಠವಾನರರು ನದೀ, ನದಗಳ, ಎಲ್ಲ ದಿಕ್ಕುಗಳ ತೀರ್ಥಗಳನ್ನೂ, ಎಲ್ಲ ಸಮುದ್ರಗಳ ಜಲವನ್ನೂ ತಂದು ನಿರ್ಮಲ ಚಿನ್ನದ ಕಲಶಗಳಲ್ಲಿ ಇರಿಸಿದರು. ಮತ್ತೆ ಗಜ, ಗವಯ, ಗವಾಕ್ಷ, ಶರಭ, ಗಂಧಮಾದನ, ಮೈಂದ, ದ್ವಿವಿದ, ಹನುಮಂತ, ಜಾಂಬವಂತರು ಮಹರ್ಷಿಗಳು ತಿಳಿಸಿದ ಶಾಸ್ತ್ರೋಕ್ತವಿಧಿಗನುಸಾರ ಸುವರ್ಣಮಯ ಕಲಶಗಳಲ್ಲಿ ಇರಿಸಿದ ಸ್ವಚ್ಛ, ಸುಗಂಧಿತ ಜಲದಿಂದ ಗೂಳಿಯ ಕೊಂಬಿನಿಂದ, ವಸುಗಳು ಇಂದ್ರನ ಅಭಿಷೇಕ ಮಾಡಿದಂತೆ, ಸುಗ್ರೀವನ ಅಭಿಷೇಕ ಮಾಡಿದರು.॥32-36॥

ಮೂಲಮ್ - 37

ಅಭಿಷಿಕ್ತೇ ತು ಸುಗ್ರೀವೇ ಸರ್ವೇ ವಾನರಪುಂಗವಾಃ ।
ಪ್ರಚುಕ್ರುಶುರ್ಮಹಾತ್ಮಾನೋ ಹೃಷ್ಟಾಃ ಶತಸಹಸ್ರಶಃ ॥

ಅನುವಾದ

ಸುಗ್ರೀವನ ಪಟ್ಟಾಭಿಷೇಕವಾದ ಬಳಿಕ ಅಲ್ಲಿ ನೆರೆದ ಲಕ್ಷಗಟ್ಟಲೆ ಮಹಾಮನಸ್ವೀ ಶ್ರೇಷ್ಠವಾನರರು ಹರ್ಷದಿಂದ ಜಯಘೋಷಮಾಡತೊಡಗಿದರು.॥37॥

ಮೂಲಮ್ - 38

ರಾಮಸ್ಯ ತು ವಚಃ ಕುರ್ವನ್ ಸುಗ್ರೀವೋ ವಾನರೇಶ್ವರಃ ।
ಅಂಗದಂ ಸಂಪರಿಷ್ವಜ್ಯ ಯೌವರಾಜ್ಯೇಽಭ್ಯಷೇಚಯತ್ ॥

ಅನುವಾದ

ಶ್ರೀರಾಮಚಂದ್ರನ ಆಜ್ಞೆಯನ್ನು ಪಾಲಿಸುತ್ತಾ ವಾನರರಾಜ ಸುಗ್ರೀವನು ಅಂಗದನನ್ನು ಅಪ್ಪಿಕೊಂಡು ಅವನನ್ನು ಯುವರಾಜನಾಗಿ ಪಟ್ಟಾಭಿಷೇಕ ಮಾಡಿದನು.॥38॥

ಮೂಲಮ್ - 39

ಅಂಗದೇ ಚಾಭಿಷಿಕ್ತೇ ತು ಸಾನುಕ್ರೋಶಾಃ ಪ್ಲವಂಗಮಾಃ ।
ಸಾಧು ಸಾಧ್ವಿತಿ ಸುಗ್ರೀವಂ ಮಹಾತ್ಮಾನೋ ಹ್ಯಪೂಜಯನ್ ॥

ಅನುವಾದ

ಅಂಗದನ ಅಭಿಷೇಕವಾದ ಮೇಲೆ ಮಹಾಮನಸ್ವೀ ದಯಾಳು ವಾನರರು ‘ಸಾಧು, ಸಾಧು’ ಎಂದು ಹೇಳುತ್ತಾ ಸುಗ್ರೀವನನ್ನು ಅಭಿನಂದಿಸಿದರು.॥39॥

ಮೂಲಮ್ - 40

ರಾಮಂ ಚೈವ ಮಹಾತ್ಮಾನಂ ಲಕ್ಷ್ಮಣಂ ಚ ಪುನಃ ಪುನಃ ।
ಪ್ರೀತಾಶ್ಚ ತುಷ್ಟುವುಃ ಸರ್ವೇ ತಾದೃಶೇ ತತ್ರ ವರ್ತಿನಿ ॥

ಅನುವಾದ

ಈ ಪ್ರಕಾರ ಪಟ್ಟಾಭಿಷೇಕವಾಗಿ ಕಿಷ್ಕಿಂಧೆಯಲ್ಲಿ ಸುಗ್ರೀವ ಮತ್ತು ಅಂಗದರು ವಿರಾಜಮಾನರಾದಾಗ ಸಮಸ್ತವಾನರರು ಪರಮ ಪ್ರಸನ್ನರಾಗಿ ಶ್ರೀರಾಮ ಮತ್ತು ಲಕ್ಷ್ಮಣರನ್ನು ಪದೇ ಪದೇ ಸ್ತುತಿಸತೊಡಗಿದರು.॥40॥

ಮೂಲಮ್ - 41

ಹೃಷ್ಟಪುಷ್ಟಜನಾಕೀರ್ಣಾ ಪತಾಕಾಧ್ವಜಶೋಭಿತಾ ।
ಬಿಭೂವ ನಗರೀ ರಮ್ಯಾ ಕಿಷ್ಕಿಂಧಾ ಗಿರಗಹ್ವರೇ ॥

ಅನುವಾದ

ಆಗ ಪರ್ವತದ ಗುಹೆಯಲ್ಲಿ ನೆಲೆಗೊಂಡ ಕಿಷ್ಕಿಂಧಾಪುರಿಯು ಹೃಷ್ಟ-ಪುಷ್ಪ ಪುರವಾಸಿಗಳಿಂದ, ವ್ಯಾಪಿಸಿದ್ದು, ಧ್ವಜ-ಪತಾಕೆಗಳಿಂದ ಸುಶೋಭಿತವಾಗಿ ರಮಣೀಯವಾಗಿ ಕಂಡುಬರುತ್ತಿತ್ತು.॥41॥

ಮೂಲಮ್ - 42

ನಿವೇಧ್ಯ ರಾಮಾಯ ತದಾ ಮಹಾತ್ಮನೇ
ಮಹಾಭಿಷೇಕಂ ಕಪಿವಾಹಿನೀಪತಿಃ ।
ರುಮಾಂ ಚ ಭಾರ್ಯಾಮುಪಲಭ್ಯ ವೀರ್ಯವಾ-
ನವಾಪ ರಾಜ್ಯಂ ತ್ರಿದಶಾಧಿಪೋ ಯಥಾ ॥

ಅನುವಾದ

ವಾನರ ಸೈನ್ಯದ ಸ್ವಾಮಿ ಪರಾಕ್ರಮಿ ಸುಗ್ರೀವನು ಮಹಾತ್ಮಾ ಶ್ರೀರಾಮಚಂದ್ರನ ಬಳಿಗೆ ಹೋಗಿ ತನ್ನ ಮಹಾಭಿಷೇಕದ ಸಮಾಚಾರವನ್ನು ನಿವೇದಿಸಿಕೊಂಡನು. ತನ್ನ ಪತ್ನೀ ರುಮೆಯನ್ನು ಪಡೆದು ದೇವೇಂದ್ರನು ಮೂರು ಲೋಕಗಳ ಸಾಮ್ರಾಜ್ಯವನ್ನು ಪಡೆದಂತೆ, ಸುಗ್ರೀವನು ವಾನರರ ಸಾಮ್ರಾಜ್ಯವನ್ನು ಪ್ರಾಪ್ತಮಾಡಿಕೊಂಡನು.॥42॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತಾರನೆಯ ಸರ್ಗ ಸಂಪೂರ್ಣವಾಯಿತು.॥26॥