०२५ रामसान्त्वनम्

वाचनम्
ಭಾಗಸೂಚನಾ

ಶ್ರೀರಾಮನು ಸುಗ್ರೀವನನ್ನು, ತಾರೆಯನ್ನೂ, ಅಂಗದನನ್ನೂ ಸಮಾಧಾನಗೊಳಿಸುತ್ತಾ ವಾಲಿಯ ದಹನ ಸಂಸ್ಕಾರ ಮಾಡಲು ಆಜ್ಞಾಪಿಸಿದುದು, ಅಂಗದನಿಂದ ವಾಲಿಯ ದೇಹಸಂಸ್ಕಾರ

ಮೂಲಮ್ - 1

ಸ ಸುಗ್ರೀವಂ ಚ ತಾರಾಂ ಚ ಸಾಂಗದಾಂ ಸಹಲಕ್ಷ್ಮಣಃ ।
ಸಮಾನಶೋಕಃ ಕಾಕುತ್ಸ್ಥಃ ಸಾಂತ್ವಯನ್ನಿದಮಬ್ರವೀತ್ ॥

ಅನುವಾದ

ಲಕ್ಷ್ಮಣಸಹಿತ ಶ್ರೀರಾಮಚಂದ್ರನು ಸುಗ್ರೀವಾದಿಗಳಂತೆ ಶೋಕದಿಂದ ದುಃಖಿಯಾಗಿದ್ದನು. ಅವನು ಸುಗ್ರೀವ, ಅಂಗದ ಮತ್ತು ತಾರೆಯನ್ನು ಸಾಂತ್ವನಪಡಿಸುತ್ತಾ ಹೀಗೆ ಹೇಳಿದನು.॥1॥

ಮೂಲಮ್ - 2

ನ ಶೋಕಪರಿತಾಪೇನ ಶ್ರೇಯಸಾ ಯುಜ್ಯತೇ ಮೃತಃ ।
ಯದತ್ರಾನಂತರಂ ಕಾರ್ಯಂ ತತ್ಸಮಾಧಾತುಮರ್ಹಥ ॥

ಅನುವಾದ

ಶೋಕ-ಸಂತಾಪ ಮಾಡುವುದರಿಂದ ಸತ್ತಿರುವ ಜೀವಿಗೆ ಯಾವುದೇ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಈಗ ಮುಂದಿರುವ ಕರ್ತವ್ಯವನ್ನು ನೀವು ವಿಧಿವತ್ತಾಗಿ ನಡೆಸಬೇಕು.॥2॥

ಮೂಲಮ್ - 3

ಲೋಕವೃತ್ತಮನುಷ್ಠೇಯಂ ಕೃತಂ ವೋ ಭಾಷ್ಪಮೋಕ್ಷಣಮ್ ।
ನ ಕಾಲಾದುತ್ತರಂ ಕಿಂಚಿತ್ಕರ್ಮಶಕ್ಯಮುಪಾಸಿತುಮ್ ॥

ಅನುವಾದ

ನೀವೆಲ್ಲರೂ ತುಂಬಾ ಕಣ್ಣೀರು ಹರಿಸುವಿರಿ. ಇನ್ನು ಅದರ ಅವಶ್ಯಕತೆ ಇಲ್ಲ. ಲೋಕಾಚಾರವನ್ನು ಪಾಲಿಸಬೇಕಾಗಿದೆ. ಸಮಯ ಕಳೆದು ಯಾವುದೇ ವಿಹಿತ ಕರ್ಮಮಾಡಲಾಗುವುದಿಲ್ಲ. (ಏಕೆಂದರೆ ಉಚಿತ ಸಮಯದಲ್ಲಿ ಆ ಕರ್ಮವನ್ನು ಮಾಡದಿದ್ದರೆ ಅದರ ಯಾವುದೇ ಫಲ ಸಿಗುವುದಿಲ್ಲ.॥3॥

ಮೂಲಮ್ - 4

ನಿಯತಿಃ ಕಾರಣಂ ಲೋಕೇ ನಿಯತಿಃ ಕರ್ಮಸಾಧನಮ್ ।
ನಿಯತಿಃ ಸರ್ವಭೂತಾನಾಂ ನಿಯೋಗೇಷ್ವಿಹ ಕಾರಣಮ್ ॥

ಅನುವಾದ

ಜಗತ್ತಿನಲ್ಲಿ ಕಾಲವೇ ಎಲ್ಲರ ಕಾರಣವಾಗಿದೆ. ಅದೇ ಸಮಸ್ತ ಕರ್ಮಗಳ ಸಾಧನವಾಗಿದೆ, ಕಾಲವೇ ಸಮಸ್ತ ಪ್ರಾಣಿಗಳನ್ನು ಬೇರೆ ಬೇರೆ ಕರ್ಮಗಳಲ್ಲಿ ನಿಯುಕ್ತಗೊಳಿಸುವ ಕಾರಣವಾಗಿದೆ. (ಏಕೆಂದರೆ ಅದೇ ಎಲ್ಲರ ಪ್ರವರ್ತಕವಾಗಿದೆ..॥4॥

ಮೂಲಮ್ - 5

ನ ಕರ್ತಾ ಕಸ್ಯಚಿತ್ಕಶ್ಚಿನ್ನಯೋಗೇ ನಾಪಿ ಚೇಶ್ವರಃ ।
ಸ್ವಭಾವೇ ವರ್ತತೇ ಲೋಕಸ್ತಸ್ಯ ಕಾಲಃ ಪರಾಯಣಮ್ ॥

ಅನುವಾದ

ಯಾವನೇ ಪುರುಷನು ಸ್ವತಂತ್ರವಾಗಿ ಯಾವುದೇ ಕೆಲಸವನ್ನು ಮಾಡಲಾರನು ಮತ್ತು ಯಾರೇ ಬೇರೆಯವರನ್ನು ಅದರಲ್ಲಿ ತೊಡಗಿಸಲು ಶಕ್ತವಲ್ಲ. ಇಡೀ ಜಗತ್ತು ಸ್ವಭಾವಕ್ಕೆ ಅಧೀನವಾಗಿದೆ ಹಾಗೂ ಸ್ವಭಾವದ ಆಧಾರ ಕಾಲವಾಗಿದೆ.॥5॥

ಮೂಲಮ್ - 6

ನ ಕಾಲಃ ಕಾಲಮತ್ಯೇತಿ ನ ಕಾಲಃ ಪರಿಹೀಯತೇ ।
ಸ್ವಭಾವಂ ಚ ಸಮಾಸಾದ್ಯ ನ ಕಶ್ಚಿದತಿವರ್ತತೇ ॥

ಅನುವಾದ

ಕಾಲನೂ ಕೂಡ ಕಾಲವನ್ನು (ತಾನೇ ಮಾಡಿದ ವ್ಯವಸ್ಥೆಯನ್ನು) ಉಲ್ಲಂಘಿಸಲಾರನು. ಆ ಕಾಲವು ಎಂದೂ ಕ್ಷೀಣವಾಗುವುದಿಲ್ಲ. ಸ್ವಭಾವ (ಪ್ರಾರಬ್ಧ)ವನ್ನು ಪಡೆದು ಯಾರೂ ಅದನ್ನು ಉಲ್ಲಂಘಿಸಲಾರರು.॥6॥

ಮೂಲಮ್ - 7

ನ ಕಾಲಸ್ಯಾಸ್ತಿ ಬಂಧುತ್ವಂ ನ ಹೇತುರ್ನ ಪರಾಕ್ರಮಃ ।
ನ ಮಿತ್ರಜ್ಞಾನಿಸಂಬಂಧಃ ಕಾರಣಂ ನಾತ್ಮನೋ ವಶಃ ॥

ಅನುವಾದ

ಯಾರ ಜೊತೆಗೂ ಕಾಲಕ್ಕೆ ನೆಂಟತನ, ಮಿತ್ರತ್ವ ಅಥವಾ ಜ್ಞಾತಿ ಸಂಬಂಧವೂ ಇಲ್ಲ. ಅದನ್ನು ವಶಪಡಿಸಿಕೊಳ್ಳುವ ಯಾವ ಉಪಾಯವೂ ಇಲ್ಲ. ಅದರ ಮೇಲೆ ಯಾರ ಪರಾಕ್ರಮವೂ ನಡೆಯುವುದಿಲ್ಲ. ಕಾರಣಸ್ವರೂಪ ಭಗವಾನ್ ಕಾಲನು ಜೀವಿಯ ವಶದಲ್ಲಿ ಇಲ್ಲ.॥7॥

ಮೂಲಮ್ - 8

ಕಿಂ ತು ಕಾಲಪರೀಣಾಮೋ ದ್ರಷ್ಟವ್ಯಃ ಸಾಧು ಪಶ್ಯತಾ ।
ಧರ್ಮಶ್ಚಾರ್ಥಶ್ಚ ಕಾಮಶ್ಚ ಕಾಲಕ್ರಮಸಮಾಹಿತಾಃ ॥

ಅನುವಾದ

ಆದ್ದರಿಂದ ಸಾಧುದರ್ಶಿ ವಿವೇಕಿ ಪುರುಷನು ಎಲ್ಲವೂ ಕಾಲದ ಪರಿಣಾಮವೆಂದೇ ತಿಳಿಯಬೇಕು. ಧರ್ಮ, ಅರ್ಥ, ಕಾಮ ಇವುಗಳೂ ಕಾಲಕ್ರಮದಿಂದಲೇ ಪ್ರಾಪ್ತವಾಗುತ್ತವೆ.॥8॥

ಮೂಲಮ್ - 9

ಇತಃ ಸ್ವಾಂ ಪ್ರಕೃತಿಂ ವಾಲೀ ಗತಃ ಪ್ರಾಪ್ತಃ ಕ್ರಿಯಾಫಲಮ್ ।
ಸಾಮದಾನಾರ್ಥಸಂಯೋಗೈಃ ಪವಿತ್ರಂ ಪ್ಲವಗೇಶ್ವರಃ ॥

ಅನುವಾದ

(ನನ್ನಿಂದ ಹತನಾದ ಕಾರಣ) ವಾನರರಾಜ ವಾಲಿಯು ಶರೀರದಿಂದ ಮುಕ್ತನಾಗಿ ತನ್ನ ಶುದ್ಧ ಸ್ವರೂಪವನ್ನು ಹೊಂದಿರುವನು. ನೀತಿಶಾಸ್ತ್ರಕ್ಕನುಕೂಲ ಸಾಮ, ದಾನ ಮತ್ತು ಅರ್ಥದ ಸರಿಯಾದ ಪ್ರಯೋಗದಿಂದ ಸಿಗುವ ಪವಿತ್ರ ಕರ್ಮವೆಲ್ಲವೂ ಅವನಿಗೆ ಪ್ರಾಪ್ತವಾಯಿತು.॥9॥

ಮೂಲಮ್ - 10

ಸ್ವಧರ್ಮಸ್ಯ ಚ ಸಂಯೋಗಾಜ್ಜಿತಸ್ತೇನ ಮಹಾತ್ಮನಾ ।
ಸ್ವರ್ಗಃ ಪರಿಗೃಹೀತಶ್ಚ ಪ್ರಾಣಾನಪರಿರಕ್ಷತಾ ॥

ಅನುವಾದ

ಮಹಾತ್ಮಾ ವಾಲಿಯು ಮೊದಲು ತನ್ನ ಧರ್ಮದ ಸಂಯೋಗದಿಂದ ವಿಜಯ ಪಡೆದಿದ್ದ ಸ್ವರ್ಗವನ್ನೇ ಈಗ ಯುದ್ಧದಲ್ಲಿ ಪ್ರಾಣಗಳನ್ನು ರಕ್ಷಿಸಿಕೊಳ್ಳಲಾರದೆ ಅವನು ಅದನ್ನು ಕೈವಶಪಡಿಸಿಕೊಂಡಿರುವನು.॥10॥

ಮೂಲಮ್ - 11

ಏಷಾ ವೈ ನಿಯತಿಃ ಶ್ರೇಷ್ಠಾ ಯಾಂ ಗತೋ ಹರಿಯೂಥಪಃ ।
ತದಲಂ ಪರಿತಾಪೇನ ಪ್ರಾಪ್ತಕಾಲಮುಪಾಸ್ಯತಾಮ್ ॥

ಅನುವಾದ

ಸರ್ವಶ್ರೇಷ್ಠ ಗತಿಯನ್ನೇ ವಾನರರ ಯೂಥಪತಿ ವಾಲಿಯು ಪಡೆದುಕೊಂಡಿರುವನು. ಆದ್ದರಿಂದ ಈಗ ಅವನಿಗಾಗಿ ಶೋಕ ಮಾಡುವುದು ವ್ಯರ್ಥವಾಗಿದೆ. ಈಗ ನಿನ್ನ ಎದುರಿಗೆ ಉಪಸ್ಥಿತವಾದ ಕರ್ತವ್ಯವನ್ನು ಪೂರ್ಣಗೊಳಿಸು.॥11॥

ಮೂಲಮ್ - 12

ವಚನಾಂತೇ ತು ರಾಮಸ್ಯ ಲಕ್ಷ್ಮಣಃ ಪರವೀರಹಾ ।
ಅವದತ್ಪ್ರಶ್ರಿತಂ ವಾಕ್ಯಂ ಸುಗ್ರೀವಂ ಗತಚೇತಸಮ್ ॥

ಅನುವಾದ

ಶ್ರೀರಾಮಚಂದ್ರನು ಮಾತನ್ನು ಮುಗಿಸಿದಾಗ ಶತ್ರುವೀರರ ಸಂಹಾರ ಮಾಡುವ ಲಕ್ಷ್ಮಣನು ವಿವೇಕಶಕ್ತಿ ನಾಶವಾಗಿದ್ದ ಸುಗ್ರೀವನಲ್ಲಿ ನಮ್ರತೆಯಿಂದ ಈ ಪ್ರಕಾರ ಹೇಳಿದನು.॥12॥

ಮೂಲಮ್ - 13

ಕುರು ತ್ವಮಸ್ಯ ಸುಗ್ರೀವ ಪ್ರೇತಕಾರ್ಯಮನಂತರಮ್ ।
ತಾರಾಂಗದಾಭ್ಯಾಂ ಸಹಿತೋ ವಾಲಿನೋ ದಹನಂ ಪ್ರತಿ ॥

ಅನುವಾದ

ಸುಗ್ರೀವನೇ! ಈಗ ನೀನು ಅಂಗದ ಮತ್ತು ತಾರೆಯೊಂದಿಗೆ ಇದ್ದು ವಾಲಿಯ ದಹನ ಸಂಸ್ಕಾರ ಸಂಬಂಧೀ ಪ್ರೇತಕರ್ಮವನ್ನು ಮಾಡು.॥13॥

ಮೂಲಮ್ - 14

ಸಮಾಜ್ಞಾಪಯ ಕಾಷ್ಠಾನಿ ಶುಷ್ಕಾಣಿ ಚ ಬಹೂನಿ ಚ ।
ಚಂದನಾನಿ ಚ ದಿವ್ಯಾನಿ ವಾಲಿಸಂಸ್ಕಾರ ಕಾರಣಾತ್ ॥

ಅನುವಾದ

ಸೇವಕರು ವಾಲಿಯ ದಹನ ಸಂಸ್ಕಾರಕ್ಕಾಗಿ ಸಾಕಷ್ಟು ಒಣಗಿದ ಕಟ್ಟಿಗೆಗಳನ್ನು ಮತ್ತು ದಿವ್ಯ ಚಂದನವನ್ನು ತರಲು ಅವರಿಗೆ ಆಜ್ಞಾಪಿಸು.॥14॥

ಮೂಲಮ್ - 15

ಸಮಾಶ್ವಾಸಯ ದೀನಂ ತ್ವಮಂಗದಂ ದೀನಚೇತಸಮ್ ।
ಮಾ ಭೂರ್ಬಾಲಿಶಬುದ್ಧಿಸ್ತ್ವಂ ತ್ವದಧೀನಮಿದಂ ಪುರಮ್ ॥

ಅನುವಾದ

ಅಂಗದನ ಚಿತ್ತ ಬಹಳ ದುಃಖಿತವಾಗಿದೆ. ಅವನಿಗೆ ಧೈರ್ಯ ತುಂಬು. ನೀನು ಮನಸ್ಸಿನಲ್ಲಿ ಮೂಢತೆಯಿಂದ ಕಿಂಕರ್ತವ್ಯ ಮೂಢನಾಗಬೇಡ; ಏಕೆಂದರೆ ಈ ನಗರವೆಲ್ಲ ನಿನ್ನ ಅಧೀನದಲ್ಲೇ ಇದೆ.॥15॥

ಮೂಲಮ್ - 16

ಅಂಗದಸ್ತ್ವಾನಯೇನ್ಮಾಲ್ಯಂ ವಸ್ತ್ರಾಣಿ ವಿವಿಧಾನಿ ಚ ।
ಘೃತಂ ತೈಲಮಥೋ ಗಂಧಾನ್ ಯಚ್ಚಾತ್ರ ಸಮನಂತರಮ್ ॥

ಅನುವಾದ

ಈಗ ಆವಶ್ಯಕತೆ ಇರುವ ಪುಷ್ಪಮಾಲೆ, ನಾನಾ ಪ್ರಕಾರದ ವಸ್ತ್ರಗಳು, ತುಪ್ಪ, ಎಣ್ಣೆ, ಸುಗಂಧಿತ ಪದಾರ್ಥಗಳು ಹಾಗೂ ಇತರ ಸಾಮಾನುಗಳು ಅಂಗದನು ಸ್ವತಃ ತರಲಿ.॥16॥

ಮೂಲಮ್ - 17

ತ್ವಂ ತಾರ ಶಿಬಿಕಾಂ ಶೀಘ್ರಮಾದಾಯಾಗಚ್ಛ ಸಂಭ್ರಮಾತ್ ।
ತ್ವರಾ ಗುಣವತೀ ಯುಕ್ತಾ ಹ್ಯಸ್ಮಿನ್ಕಾಲೇ ವಿಶೇಷತಃ ॥

ಅನುವಾದ

ತಾರನೇ! ನೀನು ಬೇಗನೇ ಹೋಗಿ ಕೂಡಲೇ ಒಂದು ಪಲ್ಲಕ್ಕಿಯನ್ನು ತೆಗೆದುಕೊಂಡು ಬಾ; ಏಕೆಂದರೆ ಈಗ ಹೆಚ್ಚು ಸ್ಫೂರ್ತಿ ತೋರಿಸಬೇಕು, ಇಂತಹ ಸಂದರ್ಭದಲ್ಲಿ ಅದೇ ಲಾಭದಾಯಕವಾಗುತ್ತದೆ.॥17॥

ಮೂಲಮ್ - 18

ಸಜ್ಜೀಭವಂತು ಪ್ಲವಗಾಃ ಶಿಬಿಕಾವಹನೋಚಿತಾಃ ।
ಸಮರ್ಥಾ ಬಲಿನಶ್ಚೈವ ನಿರ್ಹರಿಷ್ಯಂತಿ ವಾಲಿನಮ್ ॥

ಅನುವಾದ

ಪಲ್ಲಕ್ಕಿಯನ್ನು ಹೊರಲು ಯೋಗ್ಯವಾದ ಬಲಿಷ್ಠ, ಸಮರ್ಥ ವಾನರರನ್ನು ಸಿದ್ಧಗೊಳಿಸು. ಅವರೇ ಇಲ್ಲಿಂದ ವಾಲಿಯನ್ನು ಶ್ಮಶಾನಭೂಮಿಗೆ ಕೊಂಡು ಹೋಗಲಿ.॥18॥

ಮೂಲಮ್ - 19

ಏವಮುಕ್ತ್ವಾತು ಸುಗ್ರೀವಂ ಸುಮಿತ್ರಾನಂದವರ್ಧನಃ ।
ತಸ್ಥೌ ಭ್ರಾತೃಸಮೀಪಸ್ಥೋ ಲಕ್ಷ್ಮಣಃ ಪರವೀರಹಾ ॥

ಅನುವಾದ

ಸುಗ್ರೀವನಲ್ಲಿ ಹೀಗೆ ಹೇಳಿ ಶತ್ರುವೀರರನ್ನು ಸಂಹರಿಸುವ ಸುಮಿತ್ರಾನಂದನ ಲಕ್ಷ್ಮಣನು ತನ್ನ ಅಣ್ಣನ ಬಳಿಗೆ ಹೋಗಿ ನಿಂತನು.॥19॥

ಮೂಲಮ್ - 20

ಲಕ್ಷ್ಮಣಸ್ಯ ವಚಃ ಶೃತ್ವಾ ತಾರಃ ಸಂಭ್ರಾಂತಮಾನಸಃ ।
ಪ್ರವಿವೇಶ ಗುಹಾಂ ಶೀಘ್ರಂ ಶಿಬಿಕಾಸಕ್ತಮಾನಸಃ ॥

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿ ತಾರನು ಮನಸ್ಸಿನಲ್ಲಿ ಗಲಿಬಿಲಿಗೊಂಡು, ಅವನು ಪಲ್ಲಕ್ಕಿಯನ್ನು ತರಲು ಶೀಘ್ರವಾಗಿ ಕಿಷ್ಕಿಂಧೆ ಎಂಬ ಗುಹೆಗೆ ಹೋದನು.॥20॥

ಮೂಲಮ್ - 21

ಆದಾಯ ಶಿಬಿಕಾಂ ತಾರಃ ಸ ತು ಪರ್ಯಾಪತತ್ ಪುನಃ ।
ವಾನರೈರುಹ್ಯಮಾನಾಂ ತಾಂ ಶೂರೈರುದ್ವಹನೋಚಿತೈಃ ॥

ಅನುವಾದ

ಅಲ್ಲಿಂದ ಪಲ್ಲಕ್ಕಿಯನ್ನು ಹೊರುವ ಯೋಗ್ಯ ಶೂರ ವಾನರರ ಹೆಗಲಿಲ್ಲಿ ಪಲ್ಲಕ್ಕಿಯನ್ನು ಹೊರಿಸಿಕೊಂಡು ತಾರನು ಕೂಡಲೇ ಹಿಂದಿರುಗಿ ಬಂದನು.॥21॥

ಮೂಲಮ್ - 22

ದಿವ್ಯಾಂ ಭದ್ರಾಸನಯುತಾಂ ಶಿಬಿಕಾಂ ಸ್ಯಂದನೋಪಮಾಮ್ ।
ಪಕ್ಷಿಕರ್ಮಭಿರಾಚಿತ್ರಾಂ ದ್ರುಮಕರ್ಮ ವಿಭೂಷಿತಾಮ್ ॥

ಅನುವಾದ

ಆ ದಿವ್ಯ ಪಲ್ಲಕ್ಕಿಯು ರಥದಂತೆ ನಿರ್ಮಿಸಲಾಗಿತ್ತು. ಅದರಲ್ಲಿ ರಾಜನು ಕುಳಿತುಕೊಳ್ಳುವ ಯೋಗ್ಯ ಉತ್ತಮ ಆಸನವಿತ್ತು. ಅದರಲ್ಲಿ ಶಿಲ್ಪಿಗಳು ಕೃತ್ರಿಮ ಪಕ್ಷಿಗಳು, ಮರಗಳನ್ನು ಕೆತ್ತಿದ್ದರು. ಅವರು ಆ ಪಲ್ಲಕ್ಕಿಯನ್ನು ವಿಚಿತ್ರ ಶೋಭೆಯಿಂದ ಸಂಪನ್ನಗೊಳಿಸಿದ್ದರು.॥22॥

ಮೂಲಮ್ - 23

ಆಚಿತಾಂ ಚಿತ್ರಪತ್ತೀಭಿಃ ಸುನಿವಿಷ್ಟಾಂ ಸಮಂತತಃ ।
ವಿಮಾನಮಿವ ಸಿದ್ಧಾನಾಂ ಜಾಲವಾತಾಯನಾಯುತಾಮ್ ॥

ಅನುವಾದ

ಆ ಶಿಬಿಕೆಯು ಚಿತ್ರಿತವಾದ ಕಾಲಾಳು ಸೈನಿಕರಿಂದ ತುಂಬಿರುವಂತೆ ಕಂಡುಬರುತ್ತಿತ್ತು. ನೋಡಲು ಅದು ಸಿದ್ಧರ ವಿಮಾನದಂತೆ ಅನಿಸುತ್ತಿತ್ತು. ಅದರಲ್ಲಿ ಅನೇಕ ಕಿಟಕಿಗಳಿದ್ದು, ಪರದೆಗಳನ್ನು ಇಳಿ ಬಿಟ್ಟಿದ್ದರು.॥23॥

ಮೂಲಮ್ - 24

ಸುನಿಯುಕ್ತಾಂ ವಿಶಾಲಾಂ ಚ ಸುಕೃತಾಂ ಶಿಲ್ಪಿಭಿಃ ಕೃತಾಮ್ ।
ದಾರುಪರ್ವತಕೋಪೇತಾಂ ಚಾರುಕರ್ಮಪರಿಷ್ಕೃತಾಮ್ ॥

ಅನುವಾದ

ಶಿಲ್ಪಿಗಳು ಆ ಪಲ್ಲಕ್ಕಿಯನ್ನು ಬಹಳ ಸುಂದರವಾಗಿಸಲು ಪ್ರಯತ್ನಿಸಿದ್ದರು. ಅದರ ಪ್ರತಿಯೊಂದು ಭಾಗವನ್ನು ಅಂದವಾಗಿ ನಿರ್ಮಿಸಿದ್ದರು. ಬಹಳ ದೊಡ್ಡ ಆಕಾರವುಳ್ಳ ಅದರಲ್ಲಿ ಕಟ್ಟಿಗೆಯ ಕ್ರೀಡಾಪರ್ವತಗಳನ್ನು ರಚಿಸಿದ್ದರು. ಅದು ಮನೋಹರ ಶಿಲ್ಪದಿಂದ ಸುಶೋಭಿತವಾಗಿತ್ತು.॥24॥

ಮೂಲಮ್ - 25

ವಾರಾಭರಣಹಾರೈಶ್ಚ ಚಿತ್ರಮಾಲ್ಯೋಪಶೋಭಿತಾಮ್ ।
ಗುಹಾಗಹನಸಂಛನ್ನಾಂ ರಕ್ತಚಂದನಭೂಷಿತಾಮ್ ॥

ಅನುವಾದ

ಸುಂದರ ಒಡವೆಗಳಿಂದ, ಹಾರಗಳಿಂದ ಅದನ್ನು ಅಲಂಕರಿಸಲಾಗಿತ್ತು. ವಿಚಿತ್ರ ಹೂವುಗಳಿಂದ ಅದರ ಶೋಭೆಯನ್ನು ಹೆಚ್ಚಿಸಲಾಗಿತ್ತು. ಅದರಲ್ಲಿ ಶಿಲ್ಪಿಗಳು ಗುಹೆ, ವನಗಳನ್ನು ಕೆತ್ತಿದ್ದರು ಹಾಗೂ ಕೆಂಪು ಚಂದನದಿಂದ ಅದನ್ನು ಅಲಂಕರಿಸಲಾಗಿತ್ತು.॥25॥

ಮೂಲಮ್ - 26

ಪುಷ್ಪೋಘೈಃ ಸಮಭಿಚ್ಛನ್ನಾಂ ಪದ್ಮಮಾಲಾಭಿರೇವ ಚ ।
ತರುಣಾದಿತ್ಯವರ್ಣಾಭಿರ್ಭ್ರಾಜಮಾನಾಭಿರಾವೃತಾಮ್ ॥

ಅನುವಾದ

ನಾನಾ ವಿಧದ ಪುಷ್ಪ ಸಮೂಹಗಳಿಂದ ಅದನ್ನು ಮುಚ್ಚಿಬಿಟ್ಟಿದ್ದರು. ಪ್ರಾತಃಕಾಲದ ಸೂರ್ಯನಂತೆ ಅರುಣಕಾಂತಿಯುಳ್ಳ ದೀಪ್ತಿಮಂತಿ ತಾವರೆ ಮಾಲೆಗಳಿಂದ ಅಲಂಕೃತವಾಗಿತ್ತು.॥26॥

ಮೂಲಮ್ - 27

ಈದೃಶೀಂ ಶಿಬಿಕಾಂ ದೃಷ್ಟ್ವಾ ರಾಮೋ ಲಕ್ಷ್ಮಣಮಬ್ರವೀತ್ ।
ಕ್ಷಿಪ್ರಂ ವಿನೀಯತಾಂ ವಾಲೀ ಪ್ರೇತಕಾರ್ಯಂ ವಿಧೀಯತಾಮ್ ॥

ಅನುವಾದ

ಇಂತಹ ಪಲ್ಲಕ್ಕಿಯನ್ನು ನೋಡಿ ಶ್ರೀರಾಮಚಂದ್ರನು ಲಕ್ಷ್ಮಣನ ಕಡೆಗೆ ನೋಡುತ್ತಾ, ಈಗ ವಾಲಿಯನ್ನು ಶೀಘ್ರವಾಗಿ ಇಲ್ಲಿಂದ ಶ್ಮಶಾನ ಭೂಮಿಗೆ ಕೊಂಡುಹೋಗಿ, ಅವನ ಪ್ರೇತ ಕಾರ್ಯ ಮಾಡಲಾಗುವುದು ಎಂದು ಹೇಳಿದನು.॥27॥

ಮೂಲಮ್ - 28

ತತೋ ವಾಲಿನಮುದ್ಯಮ್ಯ ಸುಗ್ರೀವಃ ಶಿಬಿಕಾಂ ತದಾ ।
ಆರೋಪಯತ ವಿಕ್ರೋಶನ್ನಂಗದೇನ ಸಹೈವ ತು ॥

ಅನುವಾದ

ಆಗ ಅಂಗದನೊಂದಿಗೆ ಕರುಣಾಕ್ರಂದನ ಮಾಡುತ್ತಾ ಸುಗ್ರೀವನು ವಾಲಿಯ ಶವವನ್ನು ಎತ್ತಿ ಆ ಪಲ್ಲಕ್ಕಿಯಲ್ಲಿ ಇರಿಸಿದನು.॥28॥

ಮೂಲಮ್ - 29

ಆರೋಪ್ಯ ಶಿಬಿಕಾಂ ಚೈವ ವಾಲಿನಂ ಗತಜೀವಿತಮ್ ।
ಅಲಂಕಾರೈಶ್ಚ ವಿವಿಧೈರ್ಮಾಲ್ಯೈರ್ವಸ್ತ್ರೈಶ್ಚ ಭೂಷಿತಮ್ ॥

ಅನುವಾದ

ಮೃತ ವಾಲಿಯನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ, ಅವನನ್ನು ನಾನಾ ಪ್ರಕಾರದ ಅಲಂಕಾರಗಳಿಂದ, ಪುಷ್ಫಗುಚ್ಛಗಳಿಂದ ಬಗೆ-ಬಗೆಯ ವಸ್ತ್ರಗಳಿಂದ ಅಲಂಕರಿಸಿದರು.॥29॥

ಮೂಲಮ್ - 30

ಆಜ್ಞಾಪಯತ್ತದಾ ರಾಜಾ ಸುಗ್ರೀವಃ ಪ್ಲವಗೇಶ್ವರಃ ।
ಔರ್ಧ್ವದೈಹಿಕಮಾರ್ಯಸ್ಯ ಕ್ರಿಯತಾಮನುಕೂಲತಃ ॥

ಅನುವಾದ

ಅನಂತರ ವಾನರರ ಸ್ವಾಮಿ ರಾಜಾ ಸುಗ್ರೀವನು - ‘‘ನನ್ನ ಅಣ್ಣನ ಔರ್ಧ್ವದೇಹಿಕ ಸಂಸ್ಕಾರವು ಶಾಸ್ತ್ರಾನುಕೂಲ ವಿಧಿಯಿಂದ ನೆರವೇರಿಸಲಾಗುವುದು’’ ಎಂದು ಆಜ್ಞಾಪಿಸಿದನು.॥30॥

ಮೂಲಮ್ - 31

ವಿಶ್ರಾಣಯಂತೋ ರತ್ನಾನಿ ವಿವಿಧಾನಿ ಬಹೂನಿ ಚ ।
ಆಗ್ರತಃ ಪ್ಲವಗಾ ಯಾಂತು ಶಿಬಿಕಾ ತದನಂತರಮ್ ॥

ಅನುವಾದ

ಮುಂದೆ-ಮುಂದೆ ಅನೇಕ ವಾನರರು ನಾನಾ ಪ್ರಕಾರದ ಅಸಂಖ್ಯ ರತ್ನಗಳನ್ನು ಚೆಲ್ಲುತ್ತಾ ನಡೆಯಲಿ. ಅವರ ಹಿಂದೆ ಪಲ್ಲಕಿ ಹೊರಡಲಿ.॥31॥

ಮೂಲಮ್ - 32

ರಾಜ್ಞಾಮೃದ್ಧಿವಿಶೇಷಾ ಹಿ ದೃಶ್ಯಂತೇ ಭುವಿ ಯಾದೃಶಾಃ ।
ತಾದೃಶೈರಿಹ ಕುರ್ವಂತು ವಾನರಾ ಭರ್ತೃಸತ್ಕ್ರಿಯಾಮ್ ॥

ಅನುವಾದ

ಈ ಭೂಮಂಡಲದಲ್ಲಿ ರಾಜರ ಔರ್ಧ್ವದೇಹಿಕ ಸಂಸ್ಕಾರವು ಅವರ ಸಮೃದ್ಧಿಗನುಸಾರ ವೈಭವದಿಂದ ಆಗುವುದನ್ನು ನೋಡಲಾಗುತ್ತದೆ. ಅದೇ ರೀತಿ ಹೆಚ್ಚಾದ ಧನವನ್ನು ವಿನಿಯೋಗಿಸಿ ವಾನರರೆಲ್ಲ ತಮ್ಮ ಸ್ವಾಮಿ ಮಹಾರಾಜ ವಾಲಿಯ ಅಂತ್ಯೇಷ್ಟಿ ಸಂಸ್ಕಾರ ನಡೆಸಲಿ.॥32॥

ಮೂಲಮ್ - 33½

ತಾದೃಶಂ ವಾಲಿನಃ ಕ್ಷಿಪ್ರಂ ಪ್ರಾಕುರ್ವನ್ನೌರ್ಧ್ವದೈಹಿಕಮ್ ।
ಅಂಗದಂ ಪರಿರಭ್ಯಾಶು ತಾರಪ್ರಭೃತಯಸ್ತಥಾ ॥
ಕ್ರೋಶಂತಃ ಪ್ರಯಯುಃ ಸರ್ವೇ ವಾನರಾ ಹತಬಾಂಧವಾಃ ।

ಅನುವಾದ

ಆಗ ತಾರನೇ ಆದಿ ವಾನರರು ವಾಲಿಯ ಔರ್ಧ್ವದೇಹಿಕ ಸಂಸ್ಕಾರವನ್ನು ಹಾಗೆಯೇ ಆಯೋಜಿಸಿದರು. ಮೃತನಾದ ವಾಲಿಯ ಬಂಧುಗಳೆಲ್ಲರೂ ಅಂಗದನನ್ನು ಅಪ್ಪಿಕೊಂಡು, ಶೀಘ್ರವಾಗಿ ಅಲ್ಲಿಂದ ಅಳುತ್ತಾ ಶವದೊಂದಿಗೆ ಹೊರಟರು.॥33½॥

ಮೂಲಮ್ - 34½

ತತಃ ಪ್ರಣಿಹಿತಾಃ ಸರ್ವಾ ವಾನರ್ಯೋಽಸ್ಯ ವಶಾನುಗಾಃ ॥
ಚುಕ್ರುಶುರ್ವೀರವೀರೇತಿ ಭೂಯಃ ಕ್ರೋಶಂತಿ ತಾಃ ಪ್ರಿಯಮ್ ।

ಅನುವಾದ

ಅವರ ಹಿಂದೆ ವಾಲಿಯ ಅಧೀನವಾಗಿದ್ದ ಎಲ್ಲ ವಾನರ ಪತ್ನಿಯರು ಹತ್ತಿರ ಬಂದು ‘ಹಾ ವೀರನೇ! ಹಾ ವೀರನೇ!’ ಎಂದು ಗೋಳಿಡುತ್ತಾ ತಮ್ಮ ಪ್ರಿಯತಮನನ್ನು ಕರೆಯುತ್ತಾ ಪದೆ-ಪದೇ ಕೂಗತೊಡಗಿದರು.॥34½॥

ಮೂಲಮ್ - 35½

ತಾರಾಪ್ರಭೃತಯಃ ಸರ್ವಾ ವಾನರ್ಯೋ ಹತಬಾಂಧವಾಃ ॥
ಅನುಜಗ್ಮುಶ್ಚ ಭರ್ತಾರಂ ಕ್ರೋಶಂತ್ಯಃ ಕರುಣಸ್ವನಾಃ ।

ಅನುವಾದ

ತಮ್ಮ ಜೀವನಧನವನ್ನೇ ವಧಿಸಲ್ಪಟ್ಟ ಆ ತಾರೆಯೇ ಮೊದಲಾದ ಎಲ್ಲ ವಾನರ ಸ್ತ್ರೀಯರು ಕರುಣಸ್ವರದಿಂದ ವಿಲಾಪಿಸುತ್ತಾ ತಮ್ಮ ಸ್ವಾಮಿಯ ಹಿಂದೆ-ಹಿಂದೆ ನಡೆಯತೊಡಗಿದರು.॥35½॥

ಮೂಲಮ್ - 36½

ತಾಸಾಂ ರುದಿತಶಬ್ದೇನ ವಾನರೀಣಾಂ ವನಾಂತರೇ ॥
ವನಾನಿ ಗಿರಯಶ್ಚೈವ ವಿಕ್ರೋಶಂತೀವ ಸರ್ವತಃ ।

ಅನುವಾದ

ವನದೊಳಗೆ ಅಳುತ್ತಿರುವ ಆ ವಾನರ ವಧುಗಳ ಅಳುವ ಶಬ್ದದಿಂದ ಪ್ರತಿಧ್ವನಿತವಾದ ವನ, ಪರ್ವತಗಳೆಲ್ಲ ಅಳುತ್ತಿರುವಂತೆ ಅನಿಸುತ್ತಿತ್ತು.॥36½॥

ಮೂಲಮ್ - 37½

ಪುಲಿನೇ ಗಿರಿನದ್ಯಾಸ್ತು ವಿವಿಕ್ತೇ ಜಲಸಂವೃತೇ ॥
ಚಿತಾಂ ಚಕ್ರುಃ ಸುಬಹವೋ ವಾನರಾ ವನಚಾರಿಣಃ ।

ಅನುವಾದ

ಬೆಟ್ಟದ ನದಿಯಾದ* ತುಂಗ ಭದ್ರೆಯ ನೀರಿನಿಂದ ಆವರಿಸಿದ ಏಕಾಂತ ತೀರಕ್ಕೆ ತಲುಪಿ ಅನೇಕ ವನಚರ ವಾನರರು ಒಂದು ಚಿತೆಯನ್ನು ನಿರ್ಮಿಸಿದರು.॥37½॥

ಟಿಪ್ಪನೀ
  • ಈ ನದಿಯು ಸಹ್ಯಾದ್ರಿಯಿಂದ ಹೊರಟು ಕಿಷ್ಕಿಂಧೆಯ ಪರ್ವತಪಂಕ್ತಿಗಳ ನಡುವಿನಿಂದ ಹರಿದು ಕೃಷ್ಣಾನದಿಗೆ ಹೋಗಿ ಸೇರುತ್ತದೆ.
ಮೂಲಮ್ - 38½

ಅವರೋಪ್ಯ ತತಃ ಸ್ಕಂಧಾಚ್ಛಿಬಿಕಾಂ ವಾನರೋತ್ತಮಾಃ ॥
ತಸ್ಥುರೇಕಾಂತಮಾಶ್ರಿತ್ಯ ಸರ್ವೇ ಶೋಕಪರಾಯಣಾಃ ।

ಅನುವಾದ

ಅನಂತರ ಪಲ್ಲಕಿಯನ್ನು ಹೊರುವ ಶ್ರೇಷ್ಠ ವಾನರರು ತಮ್ಮ ಹೆಗಲಿನಿಂದ ಶವವನ್ನು ಇಳಿಸಿ, ಅವರೆಲ್ಲರೂ ಶೋಕಮಗ್ನರಾಗಿ ಏಕಾಂತ ಸ್ಥಳಕ್ಕೆ ಹೋಗಿ ಕುಳಿತುಕೊಂಡರು.॥38½॥

ಮೂಲಮ್ - 39½

ತತಸ್ತಾರಾ ಪತಿಂ ದೃಷ್ಟ್ವಾಶಿಬಿಕಾತಲಶಾಯಿನಮ್ ॥
ಆರೋಪ್ಯಾಂಕೇ ಶಿರಸ್ತಸ್ಯ ವಿಲಲಾಪ ಸುದುಃಖಿತಾ ।

ಅನುವಾದ

ಬಳಿಕ ತಾರೆಯು ಪಲ್ಲಕಿಯಲ್ಲಿದ್ದ ತನ್ನ ಪತಿಯ ಶವವನ್ನು ನೋಡಿ ಅವನ ತಲೆಯನ್ನು ತನ್ನ ತೊಡೆಯಲ್ಲಿಟ್ಟುಕೊಂಡು, ಅತ್ಯಂತ ದುಃಖಿತಳಾಗಿ ಅವಳು ವಿಲಾಪಿಸತೊಡಗಿದಳು.॥39॥

ಮೂಲಮ್ - 40

ಹಾ ವಾನರ ಮಹಾರಾಜ ಹಾ ನಾಥ ಮಮ ವತ್ಸಲ ॥

ಮೂಲಮ್ - 41

ಹಾ ಮಹಾರ್ಹ ಮಹಾಬಾಹೋ ಹಾ ಮಮ ಪ್ರಿಯ ಪಶ್ಯ ಮಾಮ್ ।
ಜನಂ ನ ಪಶ್ಯಸೀಮಂ ತ್ವಂ ಕಸ್ಮಾಚ್ಛೋಕಾಭಿಪೀಡಿತಮ್ ॥

ಅನುವಾದ

ಹಾ ವಾನರ ರಾಜನೇ! ಹಾ ನನ್ನ ದಯಾಳು ಪ್ರಾಣನಾಥ! ಹಾ ಪರಮ ಪೂಜನೀಯ ಮಹಾಬಾಹು ವೀರನೇ! ಹಾ ನನ್ನ ಪ್ರಿಯತಮನೇ! ಒಮ್ಮೆಯಾದರೂ ನನ್ನ ಕಡೆಗೆ ನೋಡಲ್ಲ. ಈ ಶೋಕಪೀಡಿತ ದಾಸಿಯ ಕಡೆಗೆ ಏಕೆ ನೋಡುತ್ತಿಲ್ಲ.॥40-41॥

ಮೂಲಮ್ - 42

ಪ್ರಹೃಷ್ಟಮಿಹ ತೇ ವಕ್ತ್ರಂ ಗತಾಸೋರಪಿ ಮಾನದ ।
ಅಸ್ತಾರ್ಕಸಮವರ್ಣಂ ಚ ದೃಶ್ಯತೇ ಜೀವತೋ ಯಥಾ ॥

ಅನುವಾದ

ಬೇರೆಯವರಿಗೆ ಮಾನವನ್ನು ಕೊಡುವ ಪ್ರಾಣವಲ್ಲಭನೇ! ಪ್ರಾಣಗಳು ಹೊರಟು ಹೋದರೂ ನಿಮ್ಮ ಮುಖವು ಬದುಕಿರುವಾಗ ಇದ್ದಂತೆ ಅಸ್ತಾಚಲಕ್ಕೆ ಹೋದ ಸೂರ್ಯನಂತೆ ಅರುಣ ಪ್ರಭೆಯಿಂದ ಕೂಡಿಕೊಂಡಿರುವಂತೆ ಕಾಣುತ್ತದೆ.॥42॥

ಮೂಲಮ್ - 43

ಏಷ ತ್ವಾಂ ರಾಮರೂಪೇಣ ಕಾಲಃ ಕರ್ಷತಿ ವಾನರ ।
ಯೇನ ಸ್ಮ ವಿಧವಾಃ ಸರ್ವಾಃ ಕೃತಾ ಏಕೇಷುಣಾ ರಣೇ ॥

ಅನುವಾದ

ವಾನರರಾಜನೇ! ಶ್ರೀರಾಮರೂಪೀ ಈ ಕಾಲನೇ ನಿಮ್ಮನ್ನು ಸೆಳೆದುಕೊಂಡು ಹೋಗುತ್ತಿದೆ. ಅವನು ಯುದ್ಧದಲ್ಲಿ ಒಂದೇ ಬಾಣವನ್ನು ಹೂಡಿ ನಮ್ಮೆಲ್ಲರನ್ನು ವಿಧವೆಯರನ್ನಾಗಿಸಿತು.॥43॥

ಮೂಲಮ್ - 44

ಇಮಾಸ್ತಾಸ್ತವ ರಾಜೇಂದ್ರ ವಾನರ್ಯೋಽಪ್ಲವಗಾಸ್ತವ ।
ಪಾದೈರ್ವಿಕೃಷ್ಟ ಮಧ್ವಾನಮಾಗತಾಃ ಕಿಂ ನ ಬುಧ್ಯಸೇ ॥

ಅನುವಾದ

ಮಹಾರಾಜ! ನಿನ್ನ ಪ್ರಿಯ ವಾನರಿಯರು ವಾನರರಂತೆ ನೆಗೆದು ನಡೆಯಲು ತಿಳಿದಿಲ್ಲ, ನಿನ್ನ ಹಿಂದೆ-ಹಿಂದೆ ಬಹಳ ದೂರ ಕಾಲುನಡಿಗೆಯಿಂದಲೇ ಬಂದಿರುವರು. ಇದನ್ನು ನೀನು ಏಕೆ ತಿಳಿಯುತ್ತಿಲ್ಲ.॥44॥

ಮೂಲಮ್ - 45

ತವೇಷ್ಟಾ ನನು ಚೈವೇಮಾ ಭಾರ್ಯಾಶ್ಚಂದ್ರನಿಭಾನನಾಃ ।
ಇದಾನೀಂ ನೇಕ್ಷಸೇ ಕಸ್ಮಾತ್ಸುಗ್ರೀವಂ ಪ್ಲವಗೇಶ್ವರ ॥

ಅನುವಾದ

ವಾನರರಾಜ! ನಿಮ್ಮ ಎಲ್ಲ ಪರಮಪ್ರಿಯ ಚಂದ್ರಮುಖಿಯರಾದ ಭಾರ್ಯೆಯರು ಇಲ್ಲಿ ಉಪಸ್ಥಿತರಾಗಿರುವರು. ನೀವು ಇವರೆಲ್ಲರನ್ನು ಹಾಗೂ ನಿಮ್ಮ ತಮ್ಮ ಸುಗ್ರೀವನನ್ನು ಈಗ ಏಕೆ ನೋಡುತ್ತಿಲ್ಲ.॥45॥

ಮೂಲಮ್ - 46

ಏತೇ ಹಿ ಸಚಿವಾ ರಾಜಂಸ್ತಾರಪ್ರಭೃತಯಸ್ತವ ।
ಪುರವಾಸೀ ಜನಶ್ಚಾಯಂ ಪರಿವಾರ್ಯ ವಿಷೀದತಿ ॥

ಅನುವಾದ

ರಾಜನೇ! ಈ ತಾರನೇ ಆದಿ ನಿಮ್ಮ ಸಚಿವರು ಹಾಗೂ ಈ ಪುರವಾಸಿಗಳೆಲ್ಲ ನಿಮ್ಮ ಸುತ್ತಲೂ ಸೇರಿ ದುಃಖಿತರಾಗಿದ್ದಾರೆ.॥46॥

ಮೂಲಮ್ - 47

ವಿಸರ್ಜಯೈನಾನ್ ಸಚಿವಾನ್ ಯಥಾಪುರಮರಿಂದಮ ।
ತತಃ ಕ್ರೀಡಾಮಹೇ ಸರ್ವಾ ವನೇಷು ಮದನೋತ್ಕಟಾಃ ॥

ಅನುವಾದ

ಶತ್ರುದಮನ! ನೀವು ಮೊದಲಿನಂತೆ ಈ ಮಂತ್ರಿಗಳನ್ನು ಬೀಳ್ಕೊಡಿರಿ. ಮತ್ತೆ ನಾವೆಲ್ಲರೂ ಪ್ರೇಮೋನ್ಮತ್ತರಾಗಿ ಈ ವನದಲ್ಲಿ ನಿಮ್ಮೊಂದಿಗೆ ಕ್ರೀಡಿಸುವೆವು.॥47॥

ಮೂಲಮ್ - 48

ಏವಂ ವಿಲಪತೀಂ ತಾರಾಂ ಪತಿಶೋಕ ಪರಿಪ್ಲುತಾಮ್ ।
ಉತ್ಥಾಪಯಂತಿ ಸ್ಮ ತದಾ ವಾನರ್ಯಃ ಶೋಕಕರ್ಶಿತಾಃ ॥

ಅನುವಾದ

ಪತಿಯ ಶೋಕದಲ್ಲಿ ಮುಳುಗಿ ಈ ಪ್ರಕಾರ ವಿಲಪಿಸುತ್ತಿರುವ ತಾರೆಯನ್ನು ನೋಡಿ ಆಗ ಶೋಕದಿಂದ ದುರ್ಬಲರಾದ ಇತರ ವಾನರ ಪತ್ನಿಯರು ಆಕೆಯನ್ನು ಎಬ್ಬಿಸಿದರು.॥48॥

ಮೂಲಮ್ - 49

ಸುಗ್ರೀವೇಣ ತತಃ ಸಾರ್ಧಂಸೋಂಽಗದಃ ಪಿತರಂ ರುದನ್ ।
ಚಿತಾಮಾರೋಪಯಾಮಾಸ ಶೋಕೇನಾಭಿಪ್ಲುತೇಂದ್ರಿಯಃ ॥

ಅನುವಾದ

ಅನಂತರ ಶೋಕಪೀಡಿತನಾದ ಅಂಗದನು ಅಳುತ್ತಳುತ್ತಾ ಸುಗ್ರೀವನ ಸಹಾಯದಿಂದ ಪಿತನ ಶವವನ್ನು ಚಿತೆಯ ಮೇಲೆ ಇರಿಸಿದನು.॥49॥

ಮೂಲಮ್ - 50

ತತೋಽಗ್ನಿಂ ವಿಧಿವದ್ದತ್ತ್ವಾ ಸೋಽಪಸವ್ಯಂ ಚಕಾರ ಹ ।
ಪಿತರಂ ದೀರ್ಘಮಧ್ವಾನಂ ಪ್ರಸ್ಥಿತಂ ವ್ಯಾಕುಲೇಂದ್ರಿಯಃ ॥

ಅನುವಾದ

ಮತ್ತೆ ಶಾಸ್ತ್ರವಿಧಿಯಂತೆ ಅದಕ್ಕೆ ಬೆಂಕಿಹಚ್ಚಿ ಅವನು ಅದರ ಪ್ರದಕ್ಷಿಣೆ ಮಾಡಿದನು. ‘ನನ್ನ ತಂದೆ ದೀರ್ಘ ಯಾತ್ರೆಗಾಗಿ ತೆರಳಿದರು’ ಎಂದು ಯೋಚಿಸುತ್ತಾ ಅಂಗದನ ಇಂದ್ರಿಯಗಳೆಲ್ಲ ಶೋಕದಿಂದ ವ್ಯಾಕುಲವಾದುವು.॥50॥

ಮೂಲಮ್ - 51

ಸಂಸ್ಕೃತ್ಯ ವಾಲಿನಂ ತಂ ತು ವಿಧಿವತ್ ಪ್ಲವಗರ್ಷಭಾಃ ।
ಆಜಗ್ಮುರುದಕಂ ಕರ್ತುಂ ನದೀಂ ಶುಭಜಲಾಂ ಶಿವಾಮ್ ॥

ಅನುವಾದ

ಈ ಪ್ರಕಾರ ವಿಧಿವತ್ತಾಗಿ ವಾಲಿಯ ದಹನಸಂಸ್ಕಾರ ಮಾಡಿ ಎಲ್ಲ ವಾನರರು ಜಲಾಂಜಲಿಯನ್ನು ಕೊಡಲು ಪವಿತ್ರ ಜಲದಿಂದ ತುಂಬಿರುವ ಕಲ್ಯಾಣ ಮಯಿ ತುಂಗಭದ್ರಾನದಿಯ ತೀರಕ್ಕೆ ಹೋದರು.॥51॥

ಮೂಲಮ್ - 52

ತತಸ್ತೇ ಸಹಿತಾಸ್ತತ್ರ ಹ್ಯಂಗದಂ ಸ್ಥಾಪ್ಯ ಚಾಗ್ರತಃ ।
ಸುಗ್ರೀವತಾರಾ ಸಹಿತಾಃ ಸಿಷಿಚುರ್ವಾನರಾ ಜಲಮ್ ॥

ಅನುವಾದ

ಅಲ್ಲಿ ಅಂಗದನನ್ನು ಮುಂದಿರಿಸಿಕೊಂಡು ಸುಗ್ರೀವ ಮತ್ತು ತಾರೆಯ ಸಹಿತ ಎಲ್ಲ ವಾನರರು ವಾಲಿಗೆ ಒಟ್ಟಿಗೆ ಜಲಾಂಜಲಿಯನ್ನು ಕೊಟ್ಟರು.॥52॥

ಮೂಲಮ್ - 53

ಸುಗ್ರೀವೇಣೇವ ದೀನೇನ ದೀನೋ ಭೂತ್ವಾ ಮಹಾಬಲಃ ।
ಸಮಾನಶೋಕಃ ಕಾಕುತ್ಸ್ಥಃ ಪ್ರೇತಕಾರ್ಯಾಣ್ಯಕಾರಯತ್ ॥

ಅನುವಾದ

ದುಃಖಿಯಾದ ಸುಗ್ರೀವನೊಂದಿಗೆ ಅವನಂತೆ ಶೋಕಗ್ರಸ್ತ ಹಾಗೂ ದುಃಖಿಯಾದ ಮಹಾಬಲಿ ಶ್ರೀರಾಮನು ವಾಲಿಯ ಸಮಸ್ತ ಪ್ರೇತ ಕಾರ್ಯವನ್ನು ಮಾಡಿಸಿದನು.॥53॥

ಮೂಲಮ್ - 54

ತತೋಥ ತಂ ವಾಲೀನಮಗ್ರ್ಯಪೌರುಷಂ
ಪ್ರಕಾಶಮಿಕ್ಷ್ವಾಕುವರೇಷುಣಾ ಹತಮ್ ।
ಪ್ರದೀಪ್ಯ ದೀಪ್ತಾಗ್ನಿಸಮೌಜಸಂ ತದಾ
ಸಲಕ್ಷ್ಮಣಂ ರಾಮಮುಪೇಯಿವಾನ್ಹರಿಃ ॥

ಅನುವಾದ

ಈ ಪ್ರಕಾರ ಇಕ್ಷ್ವಾಕುವಂಶ ಶಿರೋಮಣಿ ಶ್ರೀರಾಮನ ಬಾಣದಿಂದ ಗತಿಸಿ ಹೋದ ಶ್ರೇಷ್ಠ ಪರಾಕ್ರಮಿ ಮತ್ತು ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ, ಸುವಿಖ್ಯಾತ ವಾಲಿಯ ದಹನ ಸಂಸ್ಕಾರ ಮಾಡಿ ಸುಗ್ರೀವನು ಲಕ್ಷ್ಮಣ ಸಹಿತ ಶ್ರೀರಾಮನ ಬಳಿಗೆ ಬಂದನು.॥54॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತೈದನೆಯ ಸರ್ಗ ಸಂಪೂರ್ಣವಾಯಿತು. ॥25॥