०२४ सुग्रीवविलापः-तारासान्त्वनं च

वाचनम्
ಭಾಗಸೂಚನಾ

ಶೋಕಮಗ್ನನಾದ ಸುಗ್ರೀವನು ಪ್ರಾಣತ್ಯಾಗಕ್ಕೆ ನಿರ್ಧರಿಸಿದುದು, ತನ್ನನ್ನೂ ವಧಿಸುವಂತೆ ಶ್ರೀರಾಮನಲ್ಲಿ ತಾರೆಯ ಪ್ರಾರ್ಥನೆ, ಶ್ರೀರಾಮನ ಸಮಾಧಾನ ವಚನ

ಮೂಲಮ್ - 1

ತಾಮಾಶುವೇಗೇನ ದುರಾಸದೇನ
ತ್ವಭಿಪ್ಲುತಾಂ ಶೋಕಮಹಾರ್ಣವೇನ ।
ಪಶ್ಯಂಸ್ತದಾ ವಾಲ್ಯನುಜಸ್ತರಸ್ವೀ
ಭ್ರಾತುರ್ವಧೇನಾಪ್ರತಿಮೇನ ತೇಪೇ ॥

ಅನುವಾದ

ಅತ್ಯಂತ ವೇಗಶಾಲಿ ಮತ್ತು ದುಃಸಹ ಶೋಕ ಸಮುದ್ರದಲ್ಲಿ ಮುಳುಗಿದ ತಾರೆಯ ಕಡೆಗೆ ನೋಡಿ ವಾಲಿಯ ತಮ್ಮ ಸುಗ್ರೀವನಿಗೆ ಅಣ್ಣನ ವಧೆಯಿಂದ ಬಹಳ ದುಃಖವಾಯಿತು.॥1॥

ಮೂಲಮ್ - 2

ಸ ಭಾಷ್ಪಪೂರ್ಣೇನ ಮುಖೇನ ಪಶ್ಯನ್
ಕ್ಷಣೇನ ನಿರ್ವಿಣ್ಣಮನಾ ಮನಸ್ವೀ ।
ಜಗಾಮ ರಾಮಸ್ಯ ಶನೈಃ ಸಮೀಪಂ
ಭೃತ್ಯೈರ್ವೃತಃ ಸಂಪರಿದೂಯಮಾನಃ ॥

ಅನುವಾದ

ಅವನ ಮುಖದಲ್ಲಿ ಕಂಬನಿ ಹರಿಯತೊಡಗಿತು, ಅವನು ಮನಸ್ಸಿನಲ್ಲಿ ಖಿನ್ನನಾಗಿ, ಒಳಗೊಳಗೆ ಕಷ್ಟವನ್ನು ಅನುಭವಿಸುತ್ತಾ ತನ್ನ ಭೃತ್ಯರೊಂದಿಗೆ ನಿಧಾನವಾಗಿ ಶ್ರೀರಾಮ ಚಂದ್ರನ ಬಳಿಗೆ ಹೋದನು.॥2॥

ಮೂಲಮ್ - 3

ಸ ತಂ ಸಮಾಸಾದ್ಯ ಗೃಹೀತಚಾಪ-
ಮುದಾತ್ತಮಾಶೀವಿಷತುಲ್ಯಬಾಣಮ್ ।
ಯಶಸ್ವಿನಂ ಲಕ್ಷಣಲಕ್ಷಿತಾಂಗ-
ಮವಸ್ಥಿತಂ ರಾಘವಮಿತ್ಯುವಾಚ ॥

ಅನುವಾದ

ಧನುಸ್ಸನ್ನು ಧರಿಸಿದ್ದ, ಧೀರೋದಾತ್ತ ನಾಯಕನ ಸ್ವಭಾವವಿದ್ದ, ವಿಷಧರ ಸರ್ಪಗಳಂತೆ ಭಯಂಕರ ಬಾಣಗಳಿದ್ದ, ಪ್ರತಿಯೊಂದು ಅವಯವವೂ ಸಾಮುದ್ರಿಕ ಶಾಸ್ತ್ರಕ್ಕನುಸಾರ ಉತ್ತಮ ಲಕ್ಷಣಗಳಿಂದ ಕೂಡಿದ ಹಾಗೂ ಪರಮ ಯಶಸ್ವೀಯಾಗಿ ನಿಂತಿರುವ ಶ್ರೀರಾಮನ ಬಳಿಗೆ ಹೋಗಿ ಸುಗ್ರೀವನು ಈ ಪ್ರಕಾರ ನುಡಿದನು.॥3॥

ಮೂಲಮ್ - 4

ಯಥಾ ಪ್ರತಿಜ್ಞಾತಮಿಂದ ನರೇಂದ್ರ
ಕೃತಂ ತ್ವಯಾ ದೃಷ್ಟಫಲಂ ಚ ಕರ್ಮ ।
ಮಮಾದ್ಯ ಭೋಗೇಷು ನರೇಂದ್ರಸೂನೋ
ಮನೋ ನಿವೃತ್ತಂ ಸಹ ಜೀವಿತೇನ ॥

ಅನುವಾದ

ನರೇಂದ್ರನೇ! ನೀನು ಮಾಡಿದ ಪ್ರತಿಜ್ಞೆಯಂತೆ ಕಾರ್ಯವನ್ನು ಮಾಡಿ ತೋರಿಸಿದೆ. ಈ ಕರ್ಮದ ರಾಜ್ಯ ಲಾಭವೆಂಬ ಪ್ರತ್ಯಕ್ಷ ಫಲವೂ ಎದುರಿಗಿದೆ. ಆದರೆ ರಾಜಕುಮಾರ! ಇದರಿಂದ ನನ್ನ ಜೀವನ ನಿಂದನೀಯವಾಯಿತು. ಆದ್ದರಿಂದ ಈಗ ನನ್ನ ಮನಸ್ಸು ಎಲ್ಲ ಭೋಗಗಳಿಂದ ನಿವೃತ್ತವಾಗಿದೆ.॥4॥

ಮೂಲಮ್ - 5

ಅಸ್ಯಾಂ ಮಹಿಷ್ಯಾಂ ತು ಭೃಶಂ ರುದತ್ಯಾಂ
ಪುರೇಽತಿವಿಕ್ರೋಶತಿ ದುಃಖತಪ್ತೇ ।
ಹತೇನೃಪೇ ಸಂಶಯಿತೇಂಽಗದೇ ಚ
ನ ರಾಮ ರಾಜ್ಯೇ ರಮತೇ ಮನೋ ಮೇ ॥

ಅನುವಾದ

ಶ್ರೀರಾಮ! ರಾಜಾ ವಾಲಿಯು ಹತನಾದ್ದರಿಂದ ಈ ಮಹಾರಾಣಿ ತಾರೆಯು ಅತ್ಯಂತ ವಿಲಾಪಮಾಡುತ್ತಿದ್ದಾಳೆ. ಇಡೀ ನಗರವು ದುಃಖದಿಂದ ಸಂತಪ್ತವಾಗಿ ಚೀರುತ್ತಿದೆ ಹಾಗೂ ಕುಮಾರ ಅಂಗದನ ಜೀವನವೂ ಸಂಶಯದಲ್ಲಿ ಬಿದ್ದಿದೆ. ಇದೆಲ್ಲ ಕಾರಣಗಳಿಂದ ಈಗ ರಾಜ್ಯದಲ್ಲಿ ಮನಸ್ಸೇ ರಮಿಸುವುದಿಲ್ಲ.॥5॥

ಮೂಲಮ್ - 6

ಕ್ರೋಧಾದಮರ್ಷಾದತಿವಿಪ್ರಧರ್ಷಾದ್
ಭ್ರಾತುರ್ವಧೋ ಮೇಽನುಮತಃ ಪುರಸ್ತಾತ್ ।
ಹತೇ ತ್ವಿದಾನೀಂ ಹರಿಯೂಥಪೇಽಸ್ಮಿನ್
ಸುತೀಕ್ಷ್ಣಮಿಕ್ಷ್ವಾಕುವರ ಪ್ರತಪ್ಸ್ಯೇ ॥

ಅನುವಾದ

ಇಕ್ಷ್ವಾಕು ಕುಲಶ್ರೇಷ್ಠ ಶ್ರೀ ರಘುನಾಥನೇ! ಅಣ್ಣನು ನನಗೆ ಬಹಳ ಹೆಚ್ಚು ತಿರಸ್ಕಾರ ಮಾಡಿದ್ದನು, ಇದರಿಂದ ಕ್ರೋಧದಿಂದ ಮೊದಲು ನಾನು ಅವನ ವಧೆಗಾಗಿ ಅನುಮತಿ ಕೊಟ್ಟಿದ್ದೆ, ಆದರೆ ಈಗ ವಾನರ ಯೂಥಪತಿ ವಾಲಿಯು ಸತ್ತು ಹೋದಾಗ ನನಗೆ ಬಹಳ ದುಃಖವಾಗುತ್ತಿದೆ. ಸಾಮಾನ್ಯವಾಗಿ ಈ ದುಃಖವು ಜೀವನವಿಡೀ ಇರುವುದು.॥6॥

ಮೂಲಮ್ - 7

ಶ್ರೇಯೋಽದ್ಯ ಮನ್ಯೇ ಮಮ ಶೈಲಮುಖ್ಯೇ
ತಸ್ಮಿನ್ ಹಿ ವಾಸಶ್ಚಿರಮೃಶ್ಯಮೂಕೇ ।
ಯಥಾ ತಥಾ ವರ್ಯಯತಃ ಸ್ವವೃತ್ಯಾ
ನೇಮಂ ನಿಹತ್ಯ ತ್ರಿದಿವಸ್ಯ ಲಾಭಃ ॥

ಅನುವಾದ

ನಮ್ಮ ಜಾತಿಯ ವೃತ್ತಿಗನುಗುಣವಾಗಿ ಹೇಗೋ ಜೀವನ ನಿರ್ವಹಣೆ ಮಾಡುತ್ತಾ ಆ ಶ್ರೇಷ್ಠಪರ್ವತ ಋಷ್ಯಮೂಕದ ಮೇಲೆ ಚಿರಕಾಲ ಇರುವುದೇ ಇಂದು ನನಗೆ ಶ್ರೇಯಸ್ಕರವೆಂದು ತಿಳಿಯುತ್ತೇನೆ. ಆದರೆ ನಾನು ಅಣ್ಣನ ವಧೆಮಾಡಿಸಿ ಈಗ ನನಗೆ ಸ್ವರ್ಗದ ರಾಜ್ಯ ಸಿಕ್ಕಿದರೂ ಅದು ಶ್ರೇಯಸ್ಕರವೆಂದು ನಾನು ತಿಳಿಯುವುದಿಲ್ಲ.॥7॥

ಮೂಲಮ್ - 8

ನ ತ್ವಾ ಜಿಘಾಂಸಾಮಿ ಚರೇತಿ ಯನ್ಮಾ-
ಮಯಂ ಮಹಾತ್ಮಾ ಮತಿಮಾನುವಾಚ ।
ತಸ್ಯೈವ ತದ್ರಾಮ ವಚೋಽನುರೂಪ-
ಮಿದಂ ವಚಃ ಕರ್ಮ ಚಮೇಽನುರೂಪಮ್ ॥

ಅನುವಾದ

ಬುದ್ಧಿವಂತ ಮಹಾತ್ಮಾ ವಾಲಿಯು ಯುದ್ಧಮಾಡುವಾಗ - ‘ನೀನು ಹೊರಟುಹೋಗು, ನಾನು ನಿನ್ನ ಪ್ರಾಣ ತೆಗೆಯಲು ಬಯಸುವುದಿಲ್ಲ’ ಎಂದು ಹೇಳಿದ್ದನು. ಶ್ರೀರಾಮ! ಅವನ ಆ ಮಾತು ಅವನಿಗೆ ಯೋಗ್ಯವೇ ಆಗಿತ್ತು. ನಾನು ನಿನ್ನಲ್ಲಿ ಹೇಳಿ ಅವನ ವಧೆ ಮಾಡಿಸಿದುದು, ಕ್ರೂರತಾಪೂರ್ಣ ವಚನ ಮತ್ತು ಕರ್ಮ ನನಗೇ ಅನುರೂಪವಾಗಿತ್ತು.॥8॥

ಮೂಲಮ್ - 9

ಭ್ರಾತಾ ಕಥಂ ನಾಮ ಮಹಾಗುಣಸ್ಯ
ಭ್ರಾತುರ್ವಧಂ ರಾಮ ವಿರೋಚಯೇತ ।
ರಾಜ್ಯಸ್ಯ ದುಃಖಸ್ಯ ಚ ವೀರ ಸಾರಂ
ವಿಚಿಂತಯನ್ಕಾಮಪುರಸ್ಕೃತೋಽಪಿ ॥

ಅನುವಾದ

ವೀರ ರಘುನಂದನ! ಯಾರು ಎಷ್ಟೇ ಸ್ವಾರ್ಥಿಯಾಗಿರಲೇನು? ರಾಜ್ಯದ ಸುಖ ಹಾಗೂ ಭ್ರಾತೃವಧೆಯಿಂದ ಆಗುವ ದುಃಖದ ಪ್ರಬಲತೆಯನ್ನು ವಿಚಾರಮಾಡಿದರೆ, ತಮ್ಮನಾಗಿದ್ದು ತನ್ನ ಮಹಾಗುಣವಂತನಾದ ಅಣ್ಣನ ವಧೆ ಒಳ್ಳೆಯದೆಂದು ಅವನು ಹೇಗೆ ತಿಳಿಯುವನು.॥9॥

ಮೂಲಮ್ - 10

ವಧೋ ಹಿ ಮೇ ಮತೋನಾಸೀತ್ ಸ್ವಮಾಹಾತ್ಮ್ಯವ್ಯತಿಕ್ರಮಾತ್ ।
ಮಮಾಸೀದ್ಬುದ್ಧಿದೌರಾತ್ಮ್ಯಾತ್ ಪ್ರಾಣಹಾರೀ ವ್ಯತಿಕ್ರಮಃ ॥

ಅನುವಾದ

ವಾಲಿಯ ಮನಸ್ಸಿನಲ್ಲಿ ನನ್ನ ವಧೆಯ ವಿಚಾರವಿರಲಿಲ್ಲ; ಏಕೆಂದರೆ ಇದರಿಂದ ಅವನಿಗೆ ತನ್ನ ಮಾನ-ಪ್ರತಿಷ್ಠೆಯಲ್ಲಿ ಕಳಂಕ ತಗಲುವ ಭಯವಿತ್ತು. ನನ್ನ ಬುದ್ಧಿಯಲ್ಲೇ ದುಷ್ಟತೆ ಇತ್ತು, ಅದರಿಂದಾಗಿ ನಾನು ನನ್ನ ಅಣ್ಣನ ಕುರಿತು ಇಂತಹ ಅಪರಾಧ ಮಾಡಿಬಿಟ್ಟೆ, ಅದು ಅವನಿಗೆ ಘಾತಕವಾಯಿತು.॥10॥

ಮೂಲಮ್ - 11

ದ್ರುಮಶಾಖಾವಭಗ್ನೋಽಹಂ ಮುಹೂರ್ತಂ ಪರಿನಿಷ್ಟನನ್ ।
ಸಾಂತ್ವಯಿತ್ವಾ ತ್ವನೇನೋಕ್ತೋ ನ ಪುನಃ ಕರ್ತುಮರ್ಹಸಿ ॥

ಅನುವಾದ

ವಾಲಿಯು ಒಂದು ಮರದ ಕೊಂಬೆಯಿಂದ ನನ್ನನ್ನು ಗಾಯಗೊಳಿಸಿದಾಗ, ನಾನು ಎರಡು ಗಳಿಗೆ ನರಳುತ್ತಾ ಇರುವಾಗ, ನನ್ನನ್ನು ಸಾಂತ್ವನಪಡಿಸುತ್ತಾ- ‘ಹೋಗು, ಪುನಃ ನನ್ನೊಡನೆ ಯುದ್ಧಮಾಡಲು ಬಯಸಬೇಡ’ ಎಂದು ಹೇಳಿದ್ದನು.॥11॥

ಮೂಲಮ್ - 12

ಭ್ರಾತೃತ್ವಮಾರ್ಯಭಾವಶ್ಚ ಧರ್ಮಶ್ಚಾನೇನ ರಕ್ಷಿತಃ ।
ಮಯಾ ಕ್ರೋಧಶ್ಚ ಕಾಮಶ್ಚ ಕಪಿತ್ವಂ ಚ ಪ್ರದರ್ಶಿತಮ್ ॥

ಅನುವಾದ

ಅವನು ಭ್ರಾತೃಭಾವ, ಆರ್ಯಭಾವ ಮತ್ತು ಧರ್ಮವನ್ನು ರಕ್ಷಿಸಿರುವನು, ಆದರೆ ನಾನು ಕೇವಲ ಕಾಮ, ಕ್ರೋಧ ಮತ್ತು ವಾನರೋಚಿತ ಚಪಲತೆಯನ್ನೇ ಪ್ರದರ್ಶಿಸಿದೆ.॥12॥

ಮೂಲಮ್ - 13

ಅಚಿಂತನೀಯಂ ಪರಿವರ್ಜನೀಯ-
ಮನೀಪ್ಸನೀಯಂಸ್ವನವೇಕ್ಷಣೀಯಮ್ ।
ಪ್ರಾಪ್ತೋಽಸ್ಮಿ ಪಾಪ್ಮಾನಮಿಮಂ ವಯಸ್ಯ
ಭ್ರಾತುರ್ವಧಾತ್ ತ್ವಾಷ್ಟ್ರವಧಾದಿವೇಂದ್ರಃ ॥

ಅನುವಾದ

ಮಿತ್ರನೇ! ವೃತ್ರಾಸುರನನ್ನು ವಧಿಸಿ ಇಂದ್ರನು ಪಾಪಕ್ಕೆ ಭಾಗಿಯಾದಂತೆ, ನಾನು ಅಣ್ಣನ ವಧೆ ಮಾಡಿಸಿ, ಮಾಡುವುದು ದೂರ ಉಳಿಯಿತು, ಯೋಚಿಸುವುದೂ ಅನುಚಿತವಾದ ಪಾಪಕ್ಕೆ ಭಾಗಿಯಾದೆ. ಇದು ಶ್ರೇಷ್ಠಪುರುಷರಿಗೆ ಸರ್ವಥಾ ತ್ಯಾಜ್ಯ, ಅವಾಂಛನೀಯ ಹಾಗೂ ನೋಡಲೂ ಕೂಡ ಅಯೋಗ್ಯವಾಗಿದೆ.॥13॥

ಮೂಲಮ್ - 14

ಪಾಪ್ಮಾನಮಿಂದ್ರಸ್ಯ ಮಹೀ ಜಲಂ ಚ
ವೃಕ್ಷಾಶ್ಚ ಕಾಮಂ ಜಗೃಹುಃ ಸ್ತ್ರಿಯಶ್ಚ ।
ಕೋ ನಾಮ ಪಾಪ್ಮಾನಮಿಮಂ ಸಹೇತ
ಶಾಖಾಮೃಗಸ್ಯ ಪ್ರತಿಪತ್ತುಮಿಚ್ಛೇತ್ ॥

ಅನುವಾದ

ಇಂದ್ರನ ಪಾಪವಾದರೋ ಪೃಥಿವಿ, ಜಲ, ವೃಕ್ಷ ಮತ್ತು ಸ್ತ್ರೀಯರು ಸ್ವೆಚ್ಛೆಯಿಂದ ಸ್ವೀಕರಿಸಿದ್ದರು; ಆದರೆ ನನ್ನಂತಹ ವಾನರನ ಈ ಪಾಪವನ್ನು ಯಾರು ಪಡೆಯಲು ಬಯಸುವರು? ಅಥವಾ ಯಾರು ಪಡೆಯಬಲ್ಲರು.॥14॥

ಮೂಲಮ್ - 15

ನಾರ್ಹಾಮಿ ಸಮ್ಮಾನಮಿಮಂ ಪ್ರಜಾನಾಂ
ನ ಯೌವರಾಜ್ಯಂ ಕುತ ಏವ ರಾಜ್ಯಮ್ ।
ಅಧರ್ಮಯುಕ್ತಂ ಕುಲನಾಶಯುಕ್ತ-
ಮೇವಂವಿಧಂ ರಾಘವ ಕರ್ಮ ಕೃತ್ವಾ ॥

ಅನುವಾದ

ರಘುನಾಥನೇ! ತನ್ನ ಕುಲವನ್ನು ನಾಶ ಮಾಡುವಂತಹ ಪಾಪಪೂರ್ಣ ಕರ್ಮ ಮಾಡಿ ನಾನು ಪ್ರಜೆಯ ಸಮ್ಮಾನಕ್ಕೆ ಪಾತ್ರನಾಗಿರುವುದಿಲ್ಲ. ರಾಜ್ಯವನ್ನು ಪಡೆಯುವ ಮಾತು ದೂರವುಳಿಯಿತು, ನನಗೆ ಯುವರಾಜನಾಗಲೂ ಕೂಡ ಯೋಗ್ಯತೆ ಇಲ್ಲ.॥15॥

ಮೂಲಮ್ - 16

ಪಾಪಸ್ಯ ಕರ್ತಾಸ್ಮಿ ವಿಗರ್ಹಿತಸ್ಯ
ಕ್ಷುದ್ರಸ್ಯ ಲೋಕಾಪಕೃತಸ್ಯ ಲೋಕೇ ।
ಶೋಕೋ ಮಹಾನ್ ಮಾಮಭಿವರ್ತತೇಽಯಂ
ವೃಷ್ಟೇರ್ಯಥಾ ನಿಮ್ನಮಿವಾಂಬುವೇಗಃ ॥

ಅನುವಾದ

ನೀಚನಾದ ಪುರುಷನಿಗೆ ಯೋಗ್ಯ ಹಾಗೂ ಸಮಸ್ತ ಜಗತ್ತಿಗೆ ಹಾನಿಯನ್ನುಂಟುಮಾಡುವ ಲೋಕನಿಂದಿತ ಪಾಪಕರ್ಮವನ್ನು ನಾನು ಮಾಡಿಬಿಟ್ಟೆ. ಮಳೆಯ ನೀರು ವೇಗವಾಗಿ ತಗ್ಗಾದ ನೆಲಕ್ಕೆ ಹರಿಯುವಂತೆ ಈ ಭ್ರಾತೃ-ವಧೆಯಿಂದ ಉಂಟಾದ ಮಹಾಶೋಕವು ಎಲ್ಲಕಡೆಗಳಿಂದ ನನ್ನ ಮೇಲೆ ಆಕ್ರಮಣ ಮಾಡುತ್ತಿದೆ.॥16॥

ಮೂಲಮ್ - 17

ಸೋದರ್ಯಘಾತಾಪರಗಾತ್ರವಾಲಃ
ಸಂತಾಪಹಸ್ತಾಕ್ಷಿಶಿರೋವಿಷಾಣಃ ।
ಏನೋಮಯೋ ಮಾಮಭಿಹಂತಿ ಹಸ್ತೀ
ದೃಪ್ತೋ ನದೀಕೂಲಮಿವ ಪ್ರವೃದ್ಧಃ ॥

ಅನುವಾದ

ಅಣ್ಣನ ವಧೆಯೇ ಶರೀರ ಬಾಲವಾಗಿದ್ದು, ಅದರಿಂದ ಉಂಟಾಗುವ ಸಂತಾಪವೇ ಸೊಂಡಿಲು, ಕಣ್ಣು, ಮಸ್ತಕ ಮತ್ತು ದಂತಗಳಾಗಿವೆಯೋ ಅಂತಹ ಪಾಪರೂಪೀ ಮತ್ತಗಜವು ನದಿಯ ದಡವನ್ನು ಕೆಡಹುವಂತೆ ನನ್ನ ಮೇಲೆ ಆಘಾತ ಮಾಡುತ್ತಿದೆ.॥17॥

ಮೂಲಮ್ - 18

ಅಂಹೋ ಬತೇದಂ ನೃವರಾವಿಷಹ್ಯಂ
ನಿವರ್ತತೇ ಮೇ ಹೃದಿ ಸಾಧು ವೃತ್ತಮ್ ।
ಅಗ್ನೌ ವಿವರ್ಣ ಪರಿತಪ್ಯಮಾನಂ
ಕಿಟ್ಟಂ ಯಥಾ ರಾಘವ ಜಾತರೂಪಮ್ ॥

ಅನುವಾದ

ನರೇಶ್ವರ! ರಘುನಂದನ! ಬೆಂಕಿಯಲ್ಲಿ ಕಾಯಿಸಿದ ಮಲಿನ ಸುವರ್ಣವು ತನ್ನೊಳಗಿನ ಮಲವನ್ನು ನಾಶಮಾಡುವಂತೆಯೇ, ನಾನು ಮಾಡಿದ ದುಃಸಹ ಪಾಪವು ನನ್ನ ಹೃದಯದಲ್ಲಿದ್ದ ಸದಾಚಾರವನ್ನು ನಾಶಮಾಡುತ್ತಿದೆ.॥18॥

ಮೂಲಮ್ - 19

ಮಹಾಬಲಾನಾಂ ಹರಿಯೂಥಪಾನಾ-
ಮಿದಂ ಕುಲಂ ರಾಘವ ಮನ್ನಿಮಿತ್ತಮ್ ।
ಅಸ್ಯಾಂಗದಸ್ಯಾಪಿ ಚ ಶೋಕತಾಪಾ-
ದರ್ಧಸ್ಥಿತಪ್ರಾಣಮಿತೀವ ಮನ್ಯೇ ॥

ಅನುವಾದ

ರಘುನಾಥನೇ! ನನ್ನ ಕಾರಣದಿಂದಲೇ ವಾಲಿಯ ವಧೆಯಾಯಿತು, ಅದರಿಂದಲೇ ಈ ಅಂಗದನ ಶೋಕವೂ ಹೆಚ್ಚಿದೆ ಮತ್ತು ಮಹಾಬಲಿ ವಾನರ ಯೂಥಪತಿಗಳ ಸಮುದಾಯವು ಅರ್ಧಸತ್ತಂತೆ ಕಾಣುತ್ತಿದೆ.॥19॥

ಮೂಲಮ್ - 20

ಸುತಃ ಸುಲಭ್ಯಃ ಸುಜನಃ ಸುವಶ್ಯಃ
ಕುತಃ ಸ್ತುಪುತ್ರಃ ಸದೃಶೋಂಽಗದೇನ ।
ನ ಚಾಪಿ ವಿದ್ಯೇತ ಸ ವೀರ ದೇಶೋ
ಯಸ್ಮಿನ್ ಭವೇತ್ ಸೋದರಸನ್ನಿಕರ್ಷಃ ॥

ಅನುವಾದ

ವೀರವರನೇ! ಒಳ್ಳೆಯವನಾದ, ವಿಧೇಯನಾದ ಪುತ್ರನನ್ನು ಪಡೆದುಕೊಳ್ಳಬಹುದು, ಆದರೆ ಅಂಗದನಂತಹ ಪುತ್ರ ಎಲ್ಲಿ ಸಿಗುವನು? ವಾಲಿಯಂತಹ ಸೋದರನ ಸಾನ್ನಿಧ್ಯವಿರುವ ದೇಶವು ಎಲ್ಲಿ ತಾನೇ ಸಿಗುವುದು.॥20॥

ಮೂಲಮ್ - 21

ಯದ್ಯಾಂಗದೋ ವೀರವರಾರ್ಹ ಜೀವೇ-
ಜ್ಜೀವೇಚ್ಚ ಮಾತಾ ಪರಿಪಾಲನಾರ್ಥಮ್ ।
ವಿನಾ ತು ಪುತ್ರಂ ಪರಿತಾಪದೀನಾ
ಸಾ ನೈವ ಜೀವೇದಿತಿ ನಿಶ್ಚಿತಂ ಮೇ ॥

ಅನುವಾದ

ಅಂಗದನೇನಾದರೂ ಬದುಕಿದ್ದರೆ ತಾಯಿಯಾದ ತಾರೆಯು ಮಗನ ಸಂರಕ್ಷಣೆಗಾಗಿ ಜೀವಿಸಿರಬಹುದು. ಪತಿ ವಿಯೋಗದಿಂದ ದೀನಳಾದ ತಾರೆಯು ಮಗನಿಲ್ಲದೆ ಖಂಡಿತವಾಗಿಯೂ ಜೀವಿಸಿರಲಾರಳು; ಅದು ನಿಶ್ಚಯವಾಗಿದೆ.॥21॥

ಮೂಲಮ್ - 22

ಸೋಽಹಂ ಪ್ರವೇಕ್ಷ್ಯಾಮ್ಯತಿದೀಪ್ತಮಗ್ನಿಂ
ಭ್ರಾತ್ರಾ ಚ ಪುತ್ರೇಣ ಚ ಸಖ್ಯಮಿಚ್ಛನ್ ।
ಇಮೇ ವಿಚೇಷ್ಯಂತಿ ಹರಿಪ್ರವೀರಾಃ
ಸೀತಾಂ ನಿದೇಶೇ ತವ ವರ್ತಮಾನಾಃ ॥

ಅನುವಾದ

ಆದ್ದರಿಂದ ನಾನು ನನ್ನ ಅಣ್ಣ ಮತ್ತು ಪುತ್ರರಿಗೆ ಜೊತೆ ಸೇರಲು ಪ್ರಜ್ವಲಿತ ಅಗ್ನಿಯನ್ನು ಪ್ರವೇಶಿಸುವೆನು. ಈ ವಾನರವೀರರು ನಿನ್ನ ಅಪ್ಪಣೆಯಂತೆ ಸೀತೆಯನ್ನು ಹುಡುಕಲಿ.॥22॥

ಮೂಲಮ್ - 23

ಕೃತ್ಸ್ನಂ ತು ತೇ ಸೇತ್ಸ್ಯತಿ ಕಾರ್ಯಮೇತ-
ನ್ಮಯ್ಯಪ್ಯತೀತೇ ಮನಜೇಂದ್ರಪುತ್ರ ।
ಕುಲಸ್ಯ ಹನ್ತಾರಮಜೀವನಾರ್ಹಂ
ರಾಮಾನುಜಾನೀಹಿ ಕೃತಾಗಸಂ ಮಾಮ್ ॥

ಅನುವಾದ

ರಾಜಕುಮಾರ! ನಾನು ಸತ್ತು ಹೋದರೂ ನಿನ್ನ ಎಲ್ಲ ಕಾರ್ಯಸಿದ್ಧವಾಗುವುದು. ನಾನು ಕುಲದ ಹತ್ಯೆಮಾಡುವವ ಮತ್ತು ಅಪರಾಧಿಯಾಗಿದ್ದೇನೆ. ಆದ್ದರಿಂದ ಜಗತ್ತಿನಲ್ಲಿ ಬದುಕಿರಲು ಯೋಗ್ಯನಲ್ಲ ಅದಕ್ಕಾಗಿ ರಾಮ! ನನಗೆ ಪ್ರಾಣ ತ್ಯಾಗ ಮಾಡಲು ಆಜ್ಞೆ ಕೊಡು.॥23॥

ಮೂಲಮ್ - 24

ಇತ್ಯೇವಮಾರ್ತಸ್ಯ ರಘುಪ್ರವೀರಃ
ಶ್ರುತ್ವಾ ವಚೋ ವಾಲಿಜಘನ್ಯಜಸ್ಯ ।
ಸಂಜಾತಬಾಷ್ಪಃ ಪರವೀರಹಂತಾ
ರಾಮೋ ಮುಹೂರ್ತಂ ವಿಮನಾ ಬಭೂವ ॥

ಅನುವಾದ

ವಾಲಿಯ ತಮ್ಮ ಸುಗ್ರೀವನು ದುಃಖಾತುರನಾಗಿ ಹೇಳಿದ ಮಾತನ್ನು ಕೇಳಿ ಶತ್ರುಗಳನ್ನು ಸಂಹರಿಸುವುದರಲ್ಲಿ ಸಮರ್ಥನಾದ ರಘುಕುಲ ವೀರ ಶ್ರೀರಾಮನ ಕಣ್ಣುಗಳಿಂದ ಕಂಬನಿಹರಿದವು. ಅವನು ಮುಹೂರ್ತಕಾಲ ಮನಸ್ಸಿನಲ್ಲೇ ದುಃಖವನ್ನು ಅನುಭವಿಸಿದನು.॥24॥

ಮೂಲಮ್ - 25

ತಸ್ಮಿನ್ ಕ್ಷಣೇಽಭೀಕ್ಷ್ಣಮವೇಕ್ಷ್ಯಮಾಣಃ
ಕ್ಷಿತಿಕ್ಷಮಾವಾನ್ಭುವನಸ್ಯ ಗೋಪ್ತಾ ।
ರಾಮೋ ರುದಂತೀಂ ವ್ಯಸನೇ ನಿಮಗ್ನಾಂ
ಸಮುತ್ಸುಕಃ ಸೋಽಥ ದದರ್ಶ ತಾರಾಮ್ ॥

ಅನುವಾದ

ಶ್ರೀರಘುನಾಥನು ಪೃಥಿವಿಯಂತೆ ಕ್ಷಮಾಶೀಲ ನಾಗಿದ್ದು, ಸಮಸ್ತ ಜಗತ್ತನ್ನು ರಕ್ಷಿಸುವವನಾಗಿದ್ದಾನೆ. ಆಗ ಅವನು ಹೆಚ್ಚು ಉತ್ಸುಕನಾಗಿ ಸುತ್ತಲೂ ದೃಷ್ಟಿಹಾಯಿಸಿದಾಗ ತನ್ನ ಸ್ವಾಮಿಗಾಗಿ ಅಳುತ್ತಿರುವ ಶೋಕಮಗ್ನ ತಾರೆಯು ಕಣ್ಣಿಗೆ ಬಿದ್ದಳು.॥25॥

ಮೂಲಮ್ - 26

ತಾಂ ಚಾರುನೇತ್ರಾಂ ಕಪಿಸಿಂಹನಾಥಾಂ
ಪತಿಂ ಸಮಾಶ್ಲಿಷ್ಯ ತದಾ ಶಯಾನಾಮ್ ।
ಉತ್ಥಾಪಯಾಮಾಸುರದೀನಸತ್ತ್ವಾಂ
ಮಂತ್ರಿಪ್ರಧಾನಾಃ ಕಪಿರಾಜಪತ್ನೀಮ್ ॥

ಅನುವಾದ

ಕಪಿಗಳಲ್ಲಿ ಸಿಂಹದಂತೆ ವೀರ ವಾಲಿಯು ಸ್ವಾಮಿ ಮತ್ತು ಸಂರಕ್ಷಕನಾಗಿದ್ದ ತಾರೆಯು ಆ ವಾನರ ರಾಜನ ಪತ್ನಿಯಾಗಿದ್ದಳು. ಉದಾರ ಹೃದಯಿ, ವಿಶಾಲನೇತ್ರೆಯಾದ ತಾರೆಯು ಆಗ ಮೃತಪತಿಯನ್ನು ಆಲಿಂಗಿಸಿ ಬಿದ್ದುಕೊಂಡಿದ್ದಳು. ಶ್ರೀರಾಮನು ಬರುವುದನ್ನು ನೋಡಿ ಮುಖ್ಯ-ಮುಖ್ಯ ಸಚಿವರು ತಾರೆಯನ್ನು ಅಲ್ಲಿಂದ ಎಬ್ಬಿಸಿದರು.॥26॥

ಮೂಲಮ್ - 27

ಸಾ ವಿಸ್ಫುರಂತೀ ಪರಿರಭ್ಯಮಾಣಾ
ಭರ್ತುಃ ಸಮೀಪಾದಪನೀಯಮಾನಾ ।
ದದರ್ಶ ರಾಮಂ ಶರಚಾಪಪಾಣಿಂ
ಸ್ವತೇಜಸಾ ಸೂರ್ಯಮಿವ ಜ್ವಲಂತಮ್ ॥

ಅನುವಾದ

ತಾರೆಯನ್ನು ಪತಿಯಿಂದ ಬೇರ್ಪಡಿಸಿದಾಗ ಪದೇ ಪದೇ ಅವನನ್ನು ಆಲಿಂಗಿಸುತ್ತಾ ಒದ್ದಾಡತೊಡಗಿದಳು. ಅಷ್ಟರಲ್ಲಿ ಸೂರ್ಯನಂತೆ ಪ್ರಕಾಶಿತನಾಗುತ್ತಿದ್ದ, ಧನುರ್ಬಾಣಗಳನ್ನು ಹಿಡಿದಿದ್ದ ಶ್ರೀರಾಮನು ತನ್ನ ಎದುರಿಗೆ ನಿಂತಿರುವುದನ್ನು ನೋಡಿದಳು.॥27॥

ಮೂಲಮ್ - 28

ಸುಸಂವೃತಂ ಪಾರ್ಥಿವಲಕ್ಷಣೈಶ್ಚ
ತಂ ಚಾರುನೇತ್ರಂ ಮೃಗಶಾಬನೇತ್ರಾ ।
ಅದೃಷ್ಟಪೂರ್ವಂ ಪುರುಷಪ್ರಧಾನ-
ಮಯಂ ಸ ಕಾಕುತ್ಸ್ಥ ಇತಿ ಪ್ರಜಜ್ಞೇ ॥

ಅನುವಾದ

ಮೊದಲು ಎಂದೂ ನೋಡದ ಅವನು ರಾಜೋಚಿತ ಶುಭಲಕ್ಷಣಗಳಿಂದ ಸಂಪನ್ನನಾಗಿದ್ದು, ಮನೋಹರ ವಿಶಾಲ ನೇತ್ರನಾಗಿದ್ದು, ಪುರುಷಪ್ರವರ ಶ್ರೀರಾಮನನ್ನು ನೋಡಿ ಮೃಗನಯನೀ ತಾರೆಯು ಇವನೇ ಕುಕುತ್ಸ್ಥಕುಲಭೂಷಣ ಶ್ರೀರಾಮನಾಗಿದ್ದಾನೆ ಎಂದು ತಿಳಿದಳು.॥28॥

ಮೂಲಮ್ - 29

ತಸ್ಯೇಂದ್ರಕಲ್ಪಸ್ಯ ದುರಾಸದಸ್ಯ
ಮಹಾನುಭಾವಸ್ಯ ಸಮೀಪಮಾರ್ಯಾ ।
ಆರ್ತಾತಿತೂರ್ಣಂ ವ್ಯಸನಂ ಪ್ರಪನ್ನಾ
ಜಗಾಮ ತಾರಾ ಪರಿವಿಹ್ವಲಂತೀ ॥

ಅನುವಾದ

ಘೋರ ಸಂಕಟದಲ್ಲಿ ಬಿದ್ದ ಶೋಕಪೀಡಿತ ಆರ್ಯೆ ತಾರೆಯು ಅತ್ಯಂತ ವಿಹ್ವಲಳಾಗಿ ಎದ್ದು-ಬಿದ್ದು ಮಹೇಂದ್ರತುಲ್ಯ ದುರ್ಜಯ ವೀರ ಮಹಾನುಭಾವ ಭಗವಾನ್ ಶ್ರೀರಾಮನ ಸಮೀಪಕ್ಕೆ ಸಾಗಿದಳು.॥29॥

ಮೂಲಮ್ - 30

ತಂ ಸಾ ಸಮಾಸಾದ್ಯ ವಿಶುದ್ಧಸತ್ತ್ವಂ
ಶೋಕೇನ ಸಂಭ್ರಾಂತಶರೀರಭಾವಾ ।
ಮನಸ್ವಿನೀ ವಾಕ್ಯಮುವಾಚ ತಾರಾ
ರಾಮಂ ರಣೋತ್ಕರ್ಷಣಲಬ್ಧಲಕ್ಷ್ಯಮ್ ॥

ಅನುವಾದ

ವಿಶುದ್ಧ ಅಂತಃಕರಣವುಳ್ಳ, ಯುದ್ಧದಲ್ಲಿ ಹೆಚ್ಚು ನಿಪುಣನಾದ ತಪ್ಪದ ಗುರಿಯುಳ್ಳ ಭಗವಾನ್ ಶ್ರೀರಾಮನ ಬಳಿಗೆ ಶೋಕದಿಂದಾಗಿ ಶರೀರದ ಎಚ್ಚರವೂ ಇಲ್ಲದ ಮನಸ್ವಿನೀ ತಾರೆಯು ಇಂತೆಂದಳು.॥30॥

ಮೂಲಮ್ - 31

ತ್ವಮಪ್ರಮೇಯಶ್ಚ ದುರಾಸದಶ್ಚ
ಜಿತೇಂದ್ರಿಯಶ್ಚೋತ್ತಮಧರ್ಮಕಶ್ಚ ।
ಅಕ್ಷೀಣಕೀತಿಶ್ಚ ವಿಚಕ್ಷಣಶ್ಚ
ಕ್ಷಿತಿಕ್ಷಮಾವಾನ್ ಕ್ಷತಜೋಪಮಾಕ್ಷಃ ॥

ಅನುವಾದ

ರಘುನಂದನ! ನೀನು ಅಪ್ರಮೇಯ (ದೇಶ, ಕಾಲ, ವಸ್ತುಗಳ ಸೀಮೆ ರಹಿತ) ನಾಗಿರುವೆ. ನಿನ್ನನ್ನು ಪಡೆಯುವುದು ಬಹಳ ಕಠಿಣವಾಗಿದೆ. ನೀನು ಜಿತೇಂದ್ರಿಯನೂ, ಉತ್ತಮ ಧರ್ಮದ ಪಾಲನೆ ಮಾಡುವವನಾಗಿರುವೆ. ನಿನ್ನ ಕೀರ್ತಿ ಎಂದೂ ನಾಶವಾಗುವುದಿಲ್ಲ. ನೀನು ದೂರದರ್ಶಿ ಹಾಗೂ ಪೃಥಿವಿಯಂತೆ ಕ್ಷಮಾಶೀಲನಾಗಿರುವೆ. ನಿನ್ನ ಕಣ್ಣುಗಳು ಸ್ವಲ್ಪ ಕೆಂಪಾಗಿವೆ.॥31॥

ಮೂಲಮ್ - 32

ತ್ವಮಾತ್ತಬಾಣಾಸನಬಾಣಪಾಣಿ-
ರ್ಮಹಾಬಲಃ ಸಂಹನನೋಪಪನ್ನಃ ।
ಮನುಷ್ಯದೇಹಾಭ್ಯುದಯಂ ವಿಹಾಯ
ದಿವ್ಯೇನ ದೇಹಾಭ್ಯುದಯೇನ ಯುಕ್ತಃ ॥

ಅನುವಾದ

ನಿನ್ನ ಕೈಯಲ್ಲಿ ಧನುರ್ಬಾಣಗಳು ಶೋಭಿಸುತ್ತಿವೆ. ನಿನ್ನ ಬಲವು ಮಹತ್ತರವಾಗಿದೆ. ನೀನು ಸುದೃಢಶರೀರದಿಂದ ಸಂಪನ್ನನಾಗಿದ್ದು, ಮನುಷ್ಯ ಶರೀರದಿಂದ ದೊರೆಯುವ ಲೌಕಿಕ ಸುಖವನ್ನು ಪರಿತ್ಯಜಿಸಿದರೂ ದಿವ್ಯ ಶರೀರದ ಐಶ್ವರ್ಯದಿಂದ ಕೂಡಿರುವೆ.॥32॥

ಮೂಲಮ್ - 33

ಯೇನೈವ ಬಾಣೇನ ಹತಃ ಪ್ರಿಯೋ ಮೇ
ತೇನೈವ ಬಾಣೇನ ಹಿ ಮಾಂ ಜಹೀಹಿ ।
ಹತಾ ಗಮಿಷ್ಯಾಮಿ ಸಮೀಪಮಸ್ಯ
ನ ಮಾಂ ವಿನಾ ವೀರ ರಮೇತ ವಾಲೀ ॥

ಅನುವಾದ

(ಆದ್ದರಿಂದ ನಾನು ಪ್ರಾರ್ಥಿಸುತ್ತೇನೆ) ನೀನು ಯಾವ ಬಾಣದಿಂದ ನನ್ನ ಪ್ರಿಯತಮ ಪತಿಯನ್ನು ವಧಿಸಿರುವೆಯೋ, ಅದೇ ಬಾಣದಿಂದ ನನ್ನನ್ನೂ ಕೂಡ ಕೊಂದುಬಿಡು. ನಾನೂ ಸತ್ತು ಅವನ ಬಳಿಗೆ ಹೋಗುವೆನು. ವೀರನೇ! ನಾನಿಲ್ಲದೆ ನನ್ನ ಸ್ವಾಮಿಯು ಎಲ್ಲಿಯೂ ಸುಖಿಯಾಗಿ ಇರಲಾರನು.॥33॥

ಮೂಲಮ್ - 34

ಸ್ವರ್ಗೇಽಪಿ ಪದ್ಮಾಮಲಪತ್ರನೇತ್ರ
ಸಮೇತ್ಯ ಸಂಪ್ರೇಕ್ಷ್ಯ ಚ ಮಾಮಪಶ್ಯನ್ ।
ನ ಹ್ಯೇಷ ಉಚ್ಚಾವಚತಾಮ್ರಚೂಡಾ
ವಿಚಿತ್ರವೇಷಾಪ್ಸರಸೋಽಭಜಿಷ್ಯತ್ ॥

ಅನುವಾದ

ತಾವರೆಯ ದಳಗಳಂತೆ ಕಣ್ಣುಗಳುಳ್ಳ ರಾಮಾ! ನನ್ನ ಪತಿಯು ಸ್ವರ್ಗದಲ್ಲಿ ಅಪ್ಸರೆಯರೊಡನೆ ಕಲೆತಾಗ ಸುತ್ತಲೂ ಕಣ್ಣು ಹಾಯಿಸಿದಾಗ ಅಲ್ಲಿ ನಾನಿಲ್ಲದಿರುವುದನ್ನು ನೋಡಿ, ಮುಡಿಯಲ್ಲಿ ನಾನಾ ವಿಧವಾದ ಕೆಂಪು ಪುಷ್ಪಗಳನ್ನು ಮುಡಿದಿರುವ ವಿಚಿತ್ರತರವಾದ ವೇಷ-ಭೂಷಣಗಳಿಂದ ಅಲಂಕೃತರಾದ ಅವರಾರನ್ನೂ ಕಾಮಿಸಲಾರನು.॥34॥

ಮೂಲಮ್ - 35

ಸ್ವರ್ಗೇಽಪಿ ಶೋಕಂ ಚ ವಿವರ್ಣತಾಂ ಚ
ಮಯಾ ವಿನಾ ಪ್ರಾಪ್ಸ್ಯತಿ ವೀರ ವಾಲೀ ।
ರಮ್ಯೇ ನಗೇಂದ್ರಸ್ಯ ತಟಾವಕಾಶೇ
ವಿದೇಹಕನ್ಯಾರಹಿತೋ ಯಥಾ ತ್ವಮ್ ॥

ಅನುವಾದ

ವೀರವರನೇ! ಸ್ವರ್ಗದಲ್ಲಿಯೂ ವಾಲಿಯು ನಾನಿಲ್ಲದಾಗ ಶೋಕವನ್ನು ಅನುಭವಿಸುವನು, ಅವನ ಶರೀರದ ಕಾಂತಿಯು ಮಂಕಾಗಿರಬಹುದು. ಗಿರಿರಾಜ ಋಷ್ಯಮೂಕದ ಸುರಮ್ಯ ತಪ್ಪಲುಗಳಲ್ಲಿ ವಿದೇಹ ನಂದಿನೀ ಸೀತೆಯಿಲ್ಲದೆ ನೀನು ಕಷ್ಟವನ್ನು ಅನುಭವಿಸುವಂತೆ, ಅವರು ಅಲ್ಲಿ ದುಃಖಿಯಾಗಿರುವರು.॥35॥

ಮೂಲಮ್ - 36

ತ್ವಂ ವೇತ್ಥ ಯಾವದ್ ವನಿತಾವಿಹೀನಃ
ಪ್ರಾಪ್ನೋತಿ ದುಃಖಂ ಪುರುಷಃ ಕುಮಾರಃ ।
ತತ್ತ್ವಂ ಪ್ರಜಾನಂಜಹಿ ಮಾಂ ನ ವಾಲೀ
ದುಃಖಂ ಮಮಾದರ್ಶನಜಂ ಭಜೇತ ॥

ಅನುವಾದ

ಪತ್ನಿಯಿಲ್ಲದೆ ಯುವಕನು ಹೇಗೆ ದುಃಖಿಸುವನೋ ಅದನ್ನು ನೀನು ಚೆನ್ನಾಗಿ ತಿಳಿದಿರುವೆ. ಈ ತತ್ತ್ವವನ್ನು ತಿಳಿದುಕೊಂಡು ನೀನು ನನ್ನನ್ನು ವಧಿಸಿಬಿಡು; ಅದರಿಂದ ವಾಲಿಗೆ ತನ್ನ ವಿರಹದ ದುಃಖ ಉಂಟಾಗಲಾರದು.॥36॥

ಮೂಲಮ್ - 37

ಯಚ್ಚಾಪಿ ಮನ್ಯೇತ ಭವಾನ್ಮಹಾತ್ಮಾ
ಸ್ತ್ರೀಘಾತದೋಷಸ್ತು ನ ಭವೇನ್ನ ಮಹ್ಯಮ್ ।
ಆತ್ಮೇಯಮಸ್ಯೇತಿ ಚ ಮಾಂ ಜಹಿ ತ್ವಂ
ನ ಸ್ತ್ರೀವಧಃ ಸ್ಯಾನ್ಮನುಜೇಂದ್ರಪುತ್ರ ॥

ಅನುವಾದ

ಮಹಾರಾಜಕುಮಾರ! ನೀನು ಮಹಾತ್ಮನಾಗಿರುವೆ. ನನಗೆ ಸ್ತ್ರೀಹತ್ಯೆಯ ಪಾಪತಟ್ಟೀತು ಎಂದು ನೀನು ಯೋಚಿಸುವುದಾದರೆ, ‘ಇದು ವಾಲಿಯ ಆತ್ಮಾ’ ಎಂದು ತಿಳಿದು ನನ್ನನ್ನು ವಧಿಸಿಬಿಡು. ಇದರಿಂದ ನಿನಗೆ ಸ್ತ್ರೀಹತ್ಯೆಯ ದೋಷ ಉಂಟಾಗಲಾರದು.॥37॥

ಮೂಲಮ್ - 38

ಶಾಸ್ತ್ರಪ್ರಯೋಗಾದ್ ವಿವಿಧಾಚ್ಚ ವೇದಾ-
ದನನ್ಯರೂಪಾಃ ಪುರುಷಸ್ಯ ದಾರಾಃ ।
ದಾರಪ್ರದಾನಾದ್ಧಿ ನ ದಾನಮನ್ಯತ್-
ಪ್ರದೃಶ್ಯತೇ ಜ್ಞಾನವತಾಂ ಹಿ ಲೋಕೇ ॥

ಅನುವಾದ

ಶಾಸ್ತ್ರೋಕ್ತ ಯಜ್ಞ-ಯಾಗಾದಿಗಳಲ್ಲಿ ಪತಿ ಪತ್ನಿಯರಿಬ್ಬರೂ ಕೂಡಿಯೇ ಅಧಿಕಾರವಿರುತ್ತದೆ. ಪತ್ನಿಯನ್ನು ಜೊತೆಯಲ್ಲಿ ಕರೆದುಕೊಳ್ಳದೆ ಪುರುಷನು ಯಜ್ಞದ ಅನುಷ್ಠಾನಮಾಡಲಾರನು. ಇದಲ್ಲದೆ ನಾನಾ ಪ್ರಕಾರದ ವೈದಿಕ ಶ್ರುತಿಗಳೂ ಪತ್ನಿಯನ್ನು ಪತಿಯ ಅರ್ಧಶರೀರ ಎಂದು ತಿಳಿಸುತ್ತದೆ, ಬೇರೆ ಸ್ತ್ರೀಯರು ಪತಿಯಿಂದ ಬೇರೆಯಾಗುವುದೂ ಸಿದ್ಧವಾಗುತ್ತದೆ. (ಆದ್ದರಿಂದ ನನ್ನನ್ನು ಕೊಲ್ಲುವುದರಿಂದ ನಿನಗೆ ಸ್ತ್ರೀವಧೆಯ ದೋಷ ತಟ್ಟಲಾರದು ಮತ್ತು ವಾಲಿಗೂ ಪತ್ನಿಯ ಪ್ರಾಪ್ತಿಯಾದೀತು; ಏಕೆಂದರೆ) ಜಗತ್ತಿನಲ್ಲಿ ಜ್ಞಾನಿಗಳ ದೃಷ್ಟಿಯಲ್ಲಿ ಪತ್ನೀದಾನಕ್ಕಿಂತ ಮಿಗಿಲಾದ ದಾನ ಬೇರೆ ಯಾವುದೂ ಇಲ್ಲ.॥38॥

ಮೂಲಮ್ - 39

ತ್ವಂ ಚಾಪಿ ಮಾಂ ತಸ್ಯ ಮಮ ಪ್ರಿಯಸ್ಯ
ಪ್ರದಾಸ್ಯಸೇ ಧರ್ಮಮವೇಕ್ಷ್ಯ ವೀರ ।
ಅನೇನ ದಾನೇನ ನ ಲಪ್ಸ್ಯಸೇ ತ್ವ-
ಮಧರ್ಮಯೋಗಂ ಮಮ ವೀರ ಘಾತಾತ್ ॥

ಅನುವಾದ

ವೀರ ಶಿರೋಮಣಿಯೇ! ಧರ್ಮದ ಮೇಲೆ ದೃಷ್ಟಿಯಿಟ್ಟು ನೀನು ನನ್ನನ್ನು ನನ್ನ ಪ್ರಿಯತಮ ವಾಲಿಗೆ ಸಮರ್ಪಿಸಿ ಬಿಟ್ಟರೆ, ಈ ದಾನದ ಪ್ರಭಾವದಿಂದ ನನ್ನನ್ನು ಕೊಂದರೂ ನಿನಗೆ ಪಾಪಬಾರದು.॥39॥

ಮೂಲಮ್ - 40

ಆರ್ತಾಮನಾಥಾಮಪನೀಯಮಾನಾ-
ಮೇವಂಗತಾಂ ನಾರ್ಹಸಿ ಮಾಮಹಂತುಮ್ ।
ಅಹಂ ಹಿ ಮಾತಂಗವಿಲಾಸಗಾಮಿನಾ
ಪ್ಲವಂಗಮಾನಾಮೃಷಭೇಣ ಧೀಮತಾ ।
ವಿನಾ ವರಾರ್ಹೋತ್ತಮ ಹೇಮಮಾಲಿನಾ
ಚಿರಂ ನ ಶಕ್ಷ್ಯಾಮಿ ನರೇಂದ್ರ ಜೀವಿತುಮ್ ॥

ಅನುವಾದ

ನಾನು ದುಃಖಿಯೂ, ಅನಾಥಳೂ ಆಗಿದ್ದೇನೆ. ಪತಿಯಿಂದ ಅಗಲಿದ್ದೇನೆ. ಇಂತಹ ಸ್ಥಿತಿಯಲ್ಲಿ ನನ್ನನ್ನು ಜೀವಂತವಾಗಿ ಬಿಡುವುದು ನಿನಗೆ ಉಚಿತವಲ್ಲ. ನರೇಂದ್ರನೇ! ಸುಂದರ ಹಾಗೂ ಅಮೂಲ್ಯಶ್ರೇಷ್ಠ ಸುವರ್ಣಮಾಲೆಯಿಂದ ಅಲಂಕೃತ, ಗಜರಾಜನಂತೆ ನಡಿಗೆಯುಳ್ಳ ಬುದ್ಧಿವಂತ ವಾನರಶ್ರೇಷ್ಠ ವಾಲಿಯ ಹೊರತು ನಾನು ಹೆಚ್ಚು ಕಾಲ ಬದುಕಿರಲಾರೆನು.॥40॥

ಮೂಲಮ್ - 41

ಇತ್ಯೇವಮುಕ್ತಸ್ತು ವಿಭುರ್ಮಹಾತ್ಮಾ
ತಾರಾಂ ಸಮಾಶ್ವಾಸ್ಯ ಹಿತಂ ಬಭಾಷೇ ।
ಮಾ ವೀರಭಾರ್ಯೇ ವಿಮತಿಂ ಕುರುಷ್ವ
ಲೋಕೋ ಹಿ ಸರ್ವೋವಿಹಿತೋ ವಿಧಾತ್ರಾ ॥

ಅನುವಾದ

ತಾರೆಯು ಹೀಗೆ ಹೇಳಿದಾಗ ಮಹಾತ್ಮಾ ಭಗವಾನ್ ಶ್ರೀರಾಮನು ಆಕೆಗೆ ಆಶ್ವಾಸನೆಯನ್ನು ಕೊಡುತ್ತಾ ಹಿತದ ಮಾತನ್ನು ಹೇಳಿದನು-ವೀರಪತ್ನಿಯೇ ನೀನು ಮೃತ್ಯುವಿನ ಕುರಿತಾದ ವಿಪರೀತ ವಿಚಾರವನ್ನು ತ್ಯಜಿಸು, ಏಕೆಂದರೆ ವಿಧಾತನು ಈ ಸಮಸ್ತ ಜಗತ್ತನ್ನು ಸೃಷ್ಟಿಸಿರುವನು.॥41॥

ಮೂಲಮ್ - 42

ತಂ ಚೈವ ಸರ್ವಂ ಸುಖದುಃಖಯೋಗಂ
ಲೋಕೋಽಬ್ರವೀತ್ತೇನ ಕೃತಂ ವಿಧಾತ್ರಾ ।
ತ್ರಯೋಽಲೋಕಾ ವಿಹಿತಂ ವಿಧಾನಂ
ನಾತಿಕ್ರಮಂತೇ ವಶಗಾ ಹಿ ತಸ್ಯ ॥

ಅನುವಾದ

ವಿಧಾತನು ಈ ಜಗತ್ತನ್ನು ಸುಖ-ದುಃಖಗಳನ್ನು ಕೂಡಿಯೇ ಸೃಷ್ಟಿಸಿರುವನು. ಈ ಮಾತನ್ನು ಸಾಮಾನ್ಯ ಜನರೂ ತಿಳಿಯುತ್ತಾರೆ, ಹೇಳುತ್ತಾರೆ. ಮೂರು ಲೋಕದ ಪ್ರಾಣಿಗಳು ವಿಧಾತನ ವಿಧಾನವನ್ನು ಉಲ್ಲಂಘಿಸಲಾರರು; ಏಕೆಂದರೆ ಎಲ್ಲರೂ ಅವನ ಅಧೀನರೇ ಆಗಿದ್ದಾರೆ.॥42॥

ಮೂಲಮ್ - 43

ಪ್ರೀತಿಂ ಪರಾಂ ಪ್ರಾಪ್ಸ್ಯಸಿ ತಾಂ ತಥೈವ
ಪುತ್ರಶ್ಚತೇ ಪ್ರಾಪ್ಸ್ಯತಿ ಯೌವರಾಜ್ಯಮ್ ।
ಧಾತ್ರಾ ವಿಧಾನಂ ವಿಹಿತಂ ತಥೈವ
ನ ಶೂರಪತ್ನ್ಯಃ ಪರಿದೇವಯಂತಿ ॥

ಅನುವಾದ

ನಿನಗೆ ಮೊದಲಿನಂತೆ ಅತ್ಯಂತ ಸುಖ ಹಾಗೂ ಆನಂದದ ಪ್ರಾಪ್ತಿಯಾಗುವುದು, ನಿನ್ನ ಪುತ್ರ ಅಂಗದನೂ ಯುವರಾಜ್ಯ ಪದವಿಯನ್ನು ಪಡೆಯುವನು. ವಿಧಾತನ ವಿಧಾನವೇ ಹೀಗಿದೆ. ಶೂರವೀರರ ಪತ್ನಿಯರು ಹೀಗೆ ವಿಲಾಪ ಮಾಡುವುದಿಲ್ಲ. (ಆದ್ದರಿಂದ ನೀನು ಶೋಕವನ್ನು ಬಿಟ್ಟು ಶಾಂತಳಾಗು.॥43॥

ಮೂಲಮ್ - 44

ಆಶ್ವಾಸಿತಾ ತೇನ ಮಹಾತ್ಮನಾ ತು
ಪ್ರಭಾವಯುಕ್ತೇನ ಪರಂತಪೇನ ।
ಸಾ ವೀರಪತ್ನೀ ಧ್ವನತಾ ಮುಖೇನ
ಸುವೇಷರೂಪಾ ವಿರರಾಮ ತಾರಾ ॥

ಅನುವಾದ

ಪರಂತಪ ಪರಮ ಪ್ರಭಾವಶಾಲೀ ಮಹಾತ್ಮಾ ಶ್ರೀರಾಮನು ಈ ಪ್ರಕಾರ ಸಾಂತ್ವನ ನೀಡಿದಾಗ ವಿಲಾಪಿಸುತ್ತಿದ್ದ, ಸುಂದರ ವೇಷ ಮತ್ತು ರೂಪವುಳ್ಳ ವೀರಪತ್ನೀ ತಾರೆಯು ಅಳುವನ್ನು ನಿಲ್ಲಿಸಿ ಸುಮ್ಮನಾದಳು.॥44॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥24॥