वाचनम्
ಭಾಗಸೂಚನಾ
ತಾರೆಯ ವಿಲಾಪ
ಮೂಲಮ್ - 1
ತತಃ ಸಮುಪಜಿಘ್ರಂತೀ ಕಪಿರಾಜಸ್ಯ ತನ್ಮುಖಮ್ ।
ಪತಿಂ ಲೋಕಶ್ರುತಾಂ ತಾರಾ ಮೃತಂ ವಚನಮಬ್ರವೀತ್ ॥
ಅನುವಾದ
ಆಗ ವಾನರರಾಜನ ಮುಖವನ್ನು ಆಘ್ರಾಣಿಸುತ್ತಾ ಲೋಕವಿಖ್ಯಾತ ತಾರೆಯು ಅಳುತ್ತಾ ತನ್ನ ಪತಿಯಲ್ಲಿ ಈ ಪ್ರಕಾರ ಹೇಳಿದಳು.॥1॥
ಮೂಲಮ್ - 2
ಶೇಷೇ ತ್ವಂ ವಿಷಮೇ ದುಃಖಮ ಕೃತ್ವಾ ವಚನಂ ಮಮ ।
ಉಪಲೋಪಚಿತೇ ವೀರ ಸುದುಃಖೇ ವಸುಧಾತಲೇ ॥
ಅನುವಾದ
ವೀರ! ನೀವು ನನ್ನ ಮಾತನ್ನು ಕೇಳಲಿಲ್ಲ. ಈಗ ಕಲ್ಲುಗಳು ತುಂಬಿದ, ಹಳ್ಳ-ತಿಟ್ಟುಗಳಿರುವ ಅತ್ಯಂತ ದುಃಖಕರವಾದ ಕಠಿಣವಾದ ನೆಲದ ಮೇಲೆ ಮಲಗಿರುವುದು ದುಃಖದಾಯಕ ಮಾತಾಗಿದೆ.॥2॥
ಮೂಲಮ್ - 3
ಮತ್ತಃ ಪ್ರಿಯತರಾ ನೂನಂ ವಾನರೇಂದ್ರ ಮಹೀ ತವ ।
ಶೇಷೇ ಹಿ ತಾಂ ಪರಿಷ್ವಜ್ಯ ಮಾಂ ಚ ನ ಪ್ರತಿಭಾಷಸೇ ॥
ಅನುವಾದ
ವಾನರರಾಜ! ನಿಶ್ಚಯವಾಗಿ ಈ ಪೃಥಿವಿಯು ನಿಮಗೆ ನನಗಿಂತಲೂ ಮಿಗಿಲಾಗಿ ಪ್ರಿಯವಾಗಿದೆ; ಅದರಿಂದಲೇ ನೀವು ಇದನ್ನು ಆಲಿಂಗಿಸಿ ಮಲಗಿರುವಿರಿ ಮತ್ತು ನನ್ನೊಡನೆ ಮಾತನ್ನೂ ಆಡುವುದಿಲ್ಲ.॥3॥
ಮೂಲಮ್ - 4
ಸುಗ್ರೀವಸ್ಯ ವಶಂ ಪ್ರಾಪ್ತೋ ವಿಧಿರೇಷ ಭವತ್ಯಹೋ ।
ಸುಗ್ರೀವ ಏವ ವಿಕ್ರಾಂತೋ ವೀರ ಸಾಹಸಿಕಪ್ರಿಯ ॥
ಅನುವಾದ
ವೀರ! ಸಾಹಸಪೂರ್ಣ ಕಾರ್ಯಗಳಲ್ಲಿ ಪ್ರೇಮವುಳ್ಳ ವಾನರರಾಜನೇ! ಈ ರಾಮರೂಪೀ ವಿಧಿಯು ಸುಗ್ರೀವನ ವಶವಾಗಿರುವುದು ಆಶ್ಚರ್ಯದ ಮಾತಾಗಿದೆ. ಆದ್ದರಿಂದ ಇನ್ನು ಈ ರಾಜ್ಯದಲ್ಲಿ ಸುಗ್ರೀವನೇ ಪರಾಕ್ರಮಿ ರಾಜನಾಗಿ ವಿರಾಜಿಸುವನು.॥4॥
ಮೂಲಮ್ - 5½
ಋಕ್ಷವಾನರಮುಖ್ಯಾಸ್ತ್ವಾಂ ಬಲಿನಂ ಪರ್ಯುಪಾಸತೇ ।
ಏಷಾಂ ವಿಲಪಿತಂ ಕೃಚ್ಛ್ರಮಂಗದಸ್ಯ ಚ ಶೋಚತಃ ॥
ಮಮ ಚೇಮಾ ಗಿರಃ ಶ್ರುತ್ವಾ ಕಿಂ ತ್ವಂ ನ ಪ್ರತಿಬುಧ್ಯಸೇ ।
ಅನುವಾದ
ಪ್ರಾಣನಾಥ! ಪ್ರಧಾನ-ಪ್ರಧಾನ ಕರಡಿ ಮತ್ತು ವಾನರರು ಮಹಾವೀರನಾದ ನಿನ್ನ ಸೇವೆಯಲ್ಲಿ ಇರುವವರು ಈಗ ಬಹಳ ದುಃಖದಿಂದ ವಿಲಪಿಸುತ್ತಿರುವರು. ಮಗು ಅಂಗದನೂ ಶೋಕದಲ್ಲಿ ಮುಳುಗಿರುವನು. ಆ ವಾನರರ ದುಃಖಮಯ ವಿಲಾಪ, ಅಂಗದನ ಶೋಕೋದ್ಗಾರ ಹಾಗೂ ನನ್ನ ಈ ವಿನಯ ತುಂಬಿದ ವಾಣಿಯನ್ನು ಕೇಳಿಯೂ ನೀವು ಏಕೆ ಎಚ್ಚರಗೊಳ್ಳುವುದಿಲ್ಲ.॥5½॥
ಮೂಲಮ್ - 6½
ಇದಂ ತದ್ವೀರಶಯನಂ ತತ್ರ ಶೇಷೇ ಹತೋ ಯುಧಿ ॥
ಶಾಯಿತಾ ನಿಹತಾ ಯತ್ರ ತ್ವಯೈವ ರಿಪವಃ ಪುರಾ ।
ಅನುವಾದ
ಹಿಂದೆ ನೀವು ಅನೇಕ ಶತ್ರುಗಳನ್ನು ಕೊಂದು ಮಲಗಿಸಿದ ವೀರಶಯ್ಯೆಯು ಇದೇ ಆಗಿದೆ, ಆದರೆ ಇಂದು ನೀವೇ ಸ್ವತಃ ಯುದ್ಧದಲ್ಲಿ ಸತ್ತು ಇದರ ಮೇಲೆ ಮಲಗಿರುವಿರಿ.॥6½॥
ಮೂಲಮ್ - 7½
ವಿಶುದ್ಧಸತ್ತ್ವಾಭಿಜನ ಪ್ರಿಯಯುದ್ಧ ಮಮ ಪ್ರಿಯ ॥
ಮಾಮನಾಥಾಂ ವಿಹಾಯೈಕಾಂ ಗತಸ್ತ್ವಮಸಿ ಮಾನದ ।
ಅನುವಾದ
ವಿಶುದ್ಧ ಬಲಶಾಲಿ ಕುಲದಲ್ಲಿ ಹುಟ್ಟಿದ, ಯುದ್ಧಪ್ರಿಯ ಮತ್ತು ಬೇರೆಯವರಿಗೆ ಮಾನ ಕೊಡುವ ನನ್ನ ಪ್ರಿಯತಮನೇ! ನೀನು ಅನಾಥಳಾದ ನನ್ನೊಬ್ಬಳನ್ನೇ ಬಿಟ್ಟು ಎಲ್ಲಿಗೆ ಹೊರಟು ಹೋಗಿರುವಿರಿ.॥7½॥
ಮೂಲಮ್ - 8½
ಶೂರಾಯ ನ ಪ್ರದಾತವ್ಯಾ ಕನ್ಯಾ ಖಲು ವಿಪಶ್ಚಿತಾ ॥
ಶೂರಭಾರ್ಯಾಂ ಹತಾಂ ಪಶ್ಯ ಸದ್ಯೋ ಮಾಂ ವಿಧವಾಂ ಕೃತಾಮ್ ।
ಅನುವಾದ
ಬುದ್ಧಿವಂತ ಪುರುಷನು ತನ್ನ ಕನ್ಯೆಯನ್ನು ಯಾವುದೇ ಶೂರವೀರನ ಕೈಗೆ ಖಂಡಿತವಾಗಿ ಕೊಡಬಾರದು. ನೋಡು, ನಾನು ಶೂರ-ವೀರ ಪತ್ನಿಯಾದ್ದರಿಂದ ತತ್ಕಾಲ ವಿಧವೆಯಾದೆ ಮತ್ತು ಈ ಪ್ರಕಾರ ಸರ್ವಥಾ ಹತಳಾದೆ.॥8½॥
ಮೂಲಮ್ - 9½
ಅವಭಗ್ನಶ್ಚ ಮೇ ಮಾನೋ ಭಗ್ನಾ ಮೇ ಶಾಶ್ವತೀ ಗತಿಃ ॥
ಅಗಾಧೇ ಚ ನಿಮಗ್ನಾಸ್ಮಿ ವಿಪುಲೇ ಶೋಕಸಾಗರೇ ।
ಅನುವಾದ
ರಾಜನ ರಾಣಿಯಾಗಿದ್ದ ನನ್ನ ಅಭಿಮಾನವು ಭಂಗವಾಯಿತು. ನಿತ್ಯ-ನಿರಂತರ ಸುಖಪಡೆಯುವ ನನ್ನ ಆಸೆಯು ನಾಶವಾಯಿತು. ನಾನು ಅಗಾಧ ವಿಶಾಲ ಶೋಕ ಸಮುದ್ರದಲ್ಲಿ ಮುಳುಗಿಹೋದೆ.॥9½॥
ಮೂಲಮ್ - 10½
ಅಶ್ಮಸಾರಮಯಂ ನೂನಮಿದಂ ಮೇ ಹೃದಯಂ ದೃಢಮ್ ॥
ಭರ್ತಾರಂ ನಿಹತಂ ದೃಷ್ಟ್ವಾ ಯನ್ನಾದ್ಯ ಶತಧಾ ಕೃತಮ್ ।
ಅನುವಾದ
ನಿಶ್ಚಯವಾಗಿಯೂ ಈ ನನ್ನ ಹೃದಯ ಉಕ್ಕಿನದಾಗಿದೆ, ಅದರಿಂದಲೇ ನನ್ನ ಸ್ವಾಮಿಯು ಸತ್ತುಹೋಗಿರುವುದನ್ನು ನೋಡಿಯೂ ಇದು ನೂರಾರು ತುಂಡುಗಳಾಗುವುದಿಲ್ಲವಲ್ಲ.॥10½॥
ಮೂಲಮ್ - 11½
ಸುಹೃಚ್ಚೈವ ಚ ಭರ್ತಾ ಚ ಪ್ರಕೃತ್ಯಾ ಚ ಮಮ ಪ್ರಿಯಃ ॥
ಪ್ರಹಾರೇ ಚ ಪರಾಕ್ರಾಂತಃ ಶೂರಃ ಪಂಚತ್ವಮಾಗತಃ ।
ಅನುವಾದ
ಅಯ್ಯೋ! ನನ್ನ ಸುಹೃದ್, ಸ್ವಾಮಿ, ಸ್ವಭಾವದಿಂದಲೇ ಪ್ರಿಯರಾಗಿದ್ದ, ಸಂಗ್ರಾಮದಲ್ಲಿ ಮಹಾ ಪರಾಕ್ರಮ ಪ್ರಕಟಪಡಿಸುವ ಶೂರವೀರನಾದವನು ಜಗತ್ತನ್ನು ಬಿಟ್ಟುಹೋದನಲ್ಲ.॥11½॥
ಮೂಲಮ್ - 12½
ಪತಿಹೀನಾ ತು ಯಾ ನಾರೀ ಕಾಮಂ ಭವತು ಪುತ್ರಿಣೀ ॥
ಧನಧಾನ್ಯಸಮದ್ಧಾಪಿ ವಿಧವೇತ್ಯುಚ್ಯತೇ ಜನೈಃ ।
ಅನುವಾದ
ಪತಿ ಹೀನಳಾದ ನಾರಿಯು ಪುತ್ರವತಿಯಾಗಿದ್ದರೂ, ಧನ-ಧಾನ್ಯಗಳಿಂದ ಸಂಪನ್ನಳಾಗಿದ್ದರೂ, ಜನರು ಆಕೆಯನ್ನು ವಿಧವೆ ಎಂದೇ ಹೇಳುತ್ತಾರೆ.॥12½॥
ಮೂಲಮ್ - 13½
ಸ್ವಗಾತ್ರಪ್ರಭವೇ ವೀರ ಶೇಷೇ ರುಧಿರಮಂಡಲೇ ॥
ಕೃಮಿರಾಗಪರಿಸ್ತೋಮೇ ಸ್ವಕೀಯೇ ಶಯನೇ ಯಥಾ ।
ಅನುವಾದ
ವೀರ! ಮೊದಲು ಇಂದ್ರಗೋಪ ಎಂಬ ಕೀಟದ ಬಣ್ಣದಿಂದ ಚಿತ್ರತವಾದ ಶಯ್ಯೆಯಲ್ಲಿ ಮಲಗುತ್ತಿದ್ದ ನೀವು ಇಂದು ತನ್ನ ಶರೀರದಿಂದಲೇ ಹರಿದ ರಕ್ತರಾಶಿಯಲ್ಲಿ ಶಯನ ಮಾಡುತ್ತಿರುವಿರಿ.॥13½॥
ಮೂಲಮ್ - 14½
ರೇಣುಶೋಣಿತಸಂವೀತಂ ಗಾತ್ರಂ ತವ ಸಮಂತತಃ ।
ಪರಿರಬ್ಧುಂ ನ ಶಕ್ನೋಮಿ ಭುಜಾಭ್ಯಾಂ ಪ್ಲವಗರ್ಷಭ ॥
ಅನುವಾದ
ವಾನರ ಶ್ರೇಷ್ಠ! ನಿಮ್ಮ ಶರೀರ ವೆಲ್ಲ ಧೂಳು-ರಕ್ತದಿಂದ ತೊಯ್ದು ಹೋಗಿದೆ; ಅದರಿಂದ ನಾನು ನನ್ನ ಎರಡೂ ಭುಜಗಳಿಂದ ನಿಮ್ಮನ್ನು ಆಲಿಂಗಿಸಿಕೊಳ್ಳದಾಗಿದ್ದೇನೆ.॥14½॥
ಮೂಲಮ್ - 15½
ಕೃತಕೃತ್ಯೋಽದ್ಯ ಸುಗ್ರೀವೋ ವೈರೇಽಸ್ಮಿನ್ನತಿದಾರುಣೇ ॥
ಯಸ್ಯ ರಾಮವಿಮುಕ್ತೇನ ಹೃತಮೇಕೇಷುಣಾ ಭಯಮ್ ।
ಅನುವಾದ
ಈ ಅತ್ಯಂತ ಭಯಂಕರ ವೈರದಲ್ಲಿ ಇಂದು ಸುಗ್ರೀವನು ಕೃತಕೃತ್ಯನಾದನು. ಶ್ರೀರಾಮನು ಬಿಟ್ಟ ಒಂದೇ ಬಾಣದಿಂದ ಅವನ ಭಯವೆಲ್ಲ ಹೊರಟುಹೋಯಿತು.॥15½॥
ಮೂಲಮ್ - 16½
ಶರೇಣ ಹೃದಿ ಲಗ್ನೇನ ಗಾತ್ರಸಂಸ್ಪರ್ಶನೇ ತವ ॥
ವಾರ್ಯಾಮಿ ತ್ವಾಂ ನಿರೀಕ್ಷಂತೀ ತ್ವಯಿ ಪಂಚತ್ವಮಾಗತೇ ।
ಅನುವಾದ
ನಿಮ್ಮ ಎದೆಯಲ್ಲಿ ನಾಟಿದ ಬಾಣವು ನನಗೆ ನಿಮ್ಮ ಶರೀರವನ್ನು ಆಲಿಂಗಿಸಲು ತಡೆಯುತ್ತಿದೆ. ಇದರಿಂದ ನಿಮ್ಮ ಮೃತ್ಯುವಾದ ಬಳಿಕವೂ ನಾನು ಸುಮ್ಮನೇ ನೋಡುತ್ತಾ ಇದ್ದೇನೆ. (ನಿಮ್ಮನ್ನು ಅಪ್ಪಿಕೊಳ್ಳಲಾಗುವುದಿಲ್ಲ.॥16½॥
ಮೂಲಮ್ - 17½
ಉದ್ಬಬರ್ಹ ಶರಂ ನೀಲಸ್ತಸ್ಯ ಗಾತ್ರಗತಂ ತದಾ ॥
ಗಿರಿಗಹ್ವರಸಂಲೀನಂ ದೀಪ್ತಮಾಶೀವಿಷಂ ಯಥಾ ।
ಅನುವಾದ
ಆಗ ನೀಲನು ಪರ್ವತದ ಕಂದಕದಲ್ಲಿ ಅಡಗಿರುವ ಪ್ರಜ್ವಲಿತ ಮುಖವುಳ್ಳ ವಿಷಧರ ಸರ್ಪವನ್ನು ಅಲ್ಲಿಂದ ತೆಗೆದಂತೆ ವಾಲಿಯ ಶರೀರದಲ್ಲಿ ನೆಟ್ಟ ಬಾಣವನ್ನು ಕಿತ್ತುಹಾಕಿದನು.॥17½॥
ಮೂಲಮ್ - 18½
ತಸ್ಯ ನಿಷ್ಕೃಷ್ಯಮಾಣಸ್ಯ ಬಾಣಸ್ಯಾಪಿ ಬಭೌ ದ್ಯುತಿಃ ॥
ಅಸ್ತಮಸ್ತಕಸಂರುದ್ಧರಶ್ಮೇರ್ದಿನಕರಾದಿವ ।
ಅನುವಾದ
ವಾಲಿಯ ಶರೀರದಿಂದ ಕಿತ್ತ ಆ ಬಾಣದ ಕಾಂತಿಯು ಆಸ್ತಾಚಲದ ಶಿಖರದಲ್ಲಿ ತಡೆದ ಸೂರ್ಯನ ಪ್ರಭೆಯಂತೆ ಕಂಡುಬರುತ್ತಿತ್ತು.॥18½॥
ಮೂಲಮ್ - 19½
ಪೇತುಃ ಕ್ಷತಜಧಾರಾಸ್ತು ವ್ರಣೇಭ್ಯಸ್ತಸ್ಯ ಸರ್ವಶಃ ॥
ತಾಮ್ರಗೈರಿಕಸಂಪೃಕ್ತಾ ಧಾರಾ ಇವ ಧರಾಧರಾತ್ ।
ಅನುವಾದ
ಬಾಣವನ್ನು ಕಿತ್ತು ಬಿಡುತ್ತಲೇ ಪರ್ವತದಿಂದ ಹರಿಯುವ ಕೆಂಪಾದ ಗೈರಿಕಾದಿ ಧಾತುಗಳ ಧಾರೆಗಳು ಹರಿಯುತ್ತಿರುವಂತೆಯೇ ರಕ್ತದ ಧಾರೆಗಳು ಹರಿಯತೊಡಗಿದವು.॥19½॥
ಮೂಲಮ್ - 20½
ಅವಕೀರ್ಣಂ ವಿಮಾರ್ಜಂತೀ ಭರ್ತಾರಂ ರಣರೇಣುನಾ ॥
ಆಸ್ರೈರ್ನಯನಜೈಃ ಶೂರಂ ಸಿಷೇಚಾಸ್ತ್ರಸಮಾಹತಮ್ ।
ಅನುವಾದ
ವಾಲಿಯ ಶರೀರವು ರಣಭೂಮಿಯ ಧೂಳಿನಿಂದ ತುಂಬಿಹೋಗಿತ್ತು. ಆಗ ತಾರೆಯು ಬಾಣದಿಂದ ಹತನಾದ ತನ್ನ ಶೂರ ವೀರ ಸ್ವಾಮಿಯ ಆ ಶರೀರವನ್ನು ಒರೆಸುತ್ತಾ ಕಣ್ಣೀರ ಧಾರೆಯಿಂದ ತೊಳೆಯತೊಡಗಿದಳು.॥20½॥
ಮೂಲಮ್ - 21½
ರುಧಿರೋಕ್ಷಿತಸರ್ವಾಂಗಂ ದೃಷ್ಟ್ವಾ ವಿನಿಹತಂ ಪತಿಮ್ ॥
ಉವಾಚ ತಾರಾ ಪಿಂಗಾಕ್ಷಂ ಪುತ್ರಮಂಗದಮಂಗನಾ ।
ಅನುವಾದ
ಸತ್ತಿರುವ ತನ್ನ ಪತಿಯ ಇಡೀ ಶರೀರವು ರಕ್ತದಿಂದ ತೊಯ್ದು ಹೋಗಿದ್ದುದನ್ನು ನೋಡಿ, ಪಿಂಗಳ ಕಣ್ಣಿನ ವಾಲಿ ಪತ್ನೀ ತಾರೆಯು ತನ್ನ ಪುತ್ರ ಅಂಗದನಲ್ಲಿ ಹೇಳಿದಳು.॥21½॥
ಮೂಲಮ್ - 22½
ಅವಸ್ಥಾಂ ಪಶ್ಚಿಮಾಂ ಪಶ್ಯ ಪಿತುಃ ಪುತ್ರ ಸುದಾರುಣಾಮ್ ॥
ಸಂಪ್ರಸಕ್ತಸ್ಯ ವೈರಸ್ಯ ಗತೋಂಽತಃ ಪಾಪಕರ್ಮಣಾ ।
ಅನುವಾದ
ಮಗು! ನೋಡು, ನಿನ್ನ ತಂದೆಯ ಅಂತಿಮ ಸ್ಥಿತಿ ಎಷ್ಟು ಭಯಂಕರವಾಗಿದೆ. ಇವರು ಈಗ ಹಿಂದಿನ ಪಾಪದಿಂದಾಗಿ ಪ್ರಾಪ್ತವಾದ ವೈರದಿಂದ ದಾಟಿಹೋಗಿದ್ದಾರೆ.॥22½॥
ಮೂಲಮ್ - 23½
ಬಾಲಸೂರ್ಯೋಜ್ವಲತನುಂ ಪ್ರಯಾತಂ ಯಮಸಾದನಮ್ ॥
ಅಭಿವಾದಯ ರಾಜಾನಂ ಪಿತರಂ ಪುತ್ರ ಮಾನದಮ್ ।
ಅನುವಾದ
ವತ್ಸ! ಪ್ರಾತಃಕಾಲದ ಸೂರ್ಯನಂತೆ ಅರುಣಗೌರ ಶರೀರವುಳ್ಳ ನಿನ್ನ ತಂದೆ ರಾಜಾ ವಾಲಿಯು ಈಗ ಯಮಲೋಕಕ್ಕೆ ತೆರಳಿರುವರು. ಇವರು ನಿನ್ನನ್ನು ತುಂಬಾ ಆದರಿಸುತ್ತಿದ್ದರು. ನೀನು ಇವರ ಚರಣಗಳಿಗೆ ನಮಸ್ಕರಿಸು.॥23½॥
ಮೂಲಮ್ - 24½
ಏವಮುಕ್ತಃ ಸಮುತ್ಥಾಯ ಜಗ್ರಾಹ ಚರಣೌ ಪಿತುಃ ॥
ಭುಜಾಭ್ಯಾಂ ಪೀನವೃತ್ತಾಭ್ಯಾಮಂಗದೋಽಹಮಿತಿ ಬ್ರುವನ್ ।
ಅನುವಾದ
ತಾಯಿಯು ಹೀಗೆ ಹೇಳಿದಾಗ ಅಂಗದನು ತನ್ನ ಪುಷ್ಟವಾದ ಭುಜಗಳಿಂದ ತಂದೆಯ ಎರಡೂ ಕಾಲುಗಳನ್ನು ಹಿಡಿದು- ‘ಅಪ್ಪಾ! ಅಂಗದನಾದ ನಾನು ವಂದಿಸುತ್ತಿದ್ದೇನೆ’ ಎಂದು ಹೇಳಿ ಪ್ರಣಾಮ ಮಾಡಿದನು.॥24½॥
ಮೂಲಮ್ - 25½
ಅಭಿವಾದಯಮಾನಂ ತ್ವಾಮಂಗದಂ ತ್ವಂ ಯಥಾ ಪುರಾ ॥
ದೀರ್ಘಾಯುರ್ಭವ ಪುತ್ರೇತಿ ಕಿಮರ್ಥಂ ನಾಭಿಭಾಷಸೇ ।
ಅನುವಾದ
ಆಗ ತಾರೆಯು ಪುನಃ ಹೇಳಿದಳು - ಪ್ರಾಣನಾಥ! ಕುಮಾರ ಅಂಗದನು ಮೊದಲಿನಂತೆ ಇಂದೂ ಕೂಡ ನಿಮ್ಮ ಚರಣಗಳಿಗೆ ನಮಸ್ಕರಿಸುತ್ತಿದ್ದಾನೆ. ಆದರೆ ನೀವು ‘ಚಿರಂಜೀವಿಯಾಗು’ ಎಂದು ಏಕೆ ಆಶೀರ್ವದಿಸುವುದಿಲ್ಲ.॥25½॥
ಮೂಲಮ್ - 26
ಅಹಂ ಪುತ್ರಸಹಾಯಾ ತ್ವಾಮುಪಾಸೇ ಗತಚೇತನಮ್ ।
ಸಿಂಹೇನ ನಿಹತಂ ಸದ್ಯೋ ಗೌಃ ಸವತ್ಸೇವ ಗೋವೃಷಮ್ ॥
ಅನುವಾದ
ಸಿಂಹವು ಆಗಲೇ ಕೊಂದಿರುವ ಗೂಳಿಯ ಬಳಿ ಕರುಸಹಿತ ನಿಂತಿರುವ ಹಸುವಿನಂತೆ ನಾನು ಪುತ್ರಸಹಿತ ಪ್ರಾಣಹೀನರಾದ ನಿಮ್ಮ ಸೇವೆಯಲ್ಲಿ ಕುಳಿತಿರುವೆನು.॥26॥
ಮೂಲಮ್ - 27
ಇಷ್ಟ್ವಾ ಸಂಗ್ರಾಮ ಯಜ್ಞೇನ ರಾಮಪ್ರಹರಣಾಂಭಸಾ ।
ಅಸ್ಮಿನ್ನವಭೃಥೇ ಸ್ನಾತಃ ಕಥಂ ಪತ್ನ್ಯಾಮಯಾ ವಿನಾ ॥
ಅನುವಾದ
ನೀವು ಯುದ್ಧರೂಪೀ ಯಜ್ಞದ ಅನುಷ್ಠಾನ ಮಾಡಿ ಶ್ರೀರಾಮನ ಬಾಣರೂಪೀ ಜಲದಲ್ಲಿ ಪತ್ನಿಯಾದ ನನ್ನನ್ನು ಬಿಟ್ಟು ಒಬ್ಬಂಟಿಗರಾಗಿ ಅವಭೃತ ಸ್ನಾನ ಹೇಗೆ ಮಾಡಿದಿರಿ.॥27॥
ಮೂಲಮ್ - 28
ಯಾ ದತ್ತಾ ದೇವರಾಜೇನ ತವ ತುಷ್ಟೇನ ಸಂಯುಗೇ ।
ಶಾತಕೌಂಭೀಪ್ರಿಯಾಂ ಮಾಲಾಂ ತಾಂ ತೇ ಪಶ್ಯಾಮಿ ನೇಹ ಕಿಮ್ ॥
ಅನುವಾದ
ಯುದ್ಧದಲ್ಲಿ ಸಂತುಷ್ಟನಾದ ದೇವೇಂದ್ರನು ನಿಮಗೆ ಕೊಟ್ಟಿರುವ ಸ್ವರ್ಣಮಾಲೆಯು ನಾನು ಈಗ ನಿಮ್ಮ ಕೊರಳಲ್ಲಿ ಏಕೆ ನೋಡುವುದಿಲ್ಲ.॥28॥
ಮೂಲಮ್ - 29
ರಾಜಶ್ರೀರ್ನ ಜಹಾತಿ ತ್ವಾಂ ಗತಾಸುಮಪಿ ಮಾನದ ।
ಸೂರ್ಯಸ್ಯಾವರ್ತಮಾನಸ್ಯ ಶೈಲರಾಜಮಿವ ಪ್ರಭಾ ॥
ಅನುವಾದ
ಬೇರೆಯವರಿಗೆ ಮಾನಕೊಡುವ ವಾನರರಾಜ! ಪ್ರಾಣಹೀನರಾದರೂ ಎಲ್ಲೆಡೆ ಸಂಚರಿಸುವ ಸೂರ್ಯನ ಪ್ರಭೆಯು ಗಿರಿರಾಜ ಮೇರುವು ಎಂದೂ ಬಿಡದಂತೆ, ರಾಜ್ಯಲಕ್ಷ್ಮಿಯು ನಿಮ್ಮನ್ನು ಅಗಲಿ ಹೋಗಿಲ್ಲ.॥29॥
ಮೂಲಮ್ - 30
ನ ಮೇ ವಚಃ ಪಥ್ಯಮಿದಂ ತ್ವಯಾ ಕೃತಂ
ನ ಚಾಸ್ಮಿ ಶಕ್ತಾ ಹಿ ನಿವಾರಣೇ ತವ।
ಹತಾ ಸಪುತ್ರಾಸ್ಮಿ ಹತೇನ ಸಂಯುಗೇ
ಸಹ ತ್ವಯಾ ಶ್ರೀರ್ವಿಜಹಾತಿ ಮಾಮಪಿ ॥
ಅನುವಾದ
ನಾನು ನಿಮಗೆ ಹಿತದ ಮಾತನ್ನು ಹೇಳಿದ್ದೆ, ಆದರೆ ನೀವು ಅದನ್ನು ಸ್ವೀಕರಿಸಲಿಲ್ಲ. ನಿಮ್ಮನ್ನು ತಡೆಯಲು ನಾನೂ ಸಮರ್ಥಳಾಗಲಿಲ್ಲ. ಇದರ ಫಲ ನೀವು ಯುದ್ಧದಲ್ಲಿ ಹತರಾದಿರಿ. ನೀವು ಸತ್ತುಹೋದಾಗ ನಾನೂ ಪುತ್ರಸಹಿತ ಸತ್ತುಹೋದೆ. ಈಗ ಲಕ್ಷ್ಮಿಯು ನಿಮ್ಮೊಂದಿಗೇ ನನ್ನನ್ನು ಮತ್ತು ನನ್ನ ಪುತ್ರನನ್ನೂ ಬಿಟ್ಟುಹೋಗುತ್ತಿದ್ದಾಳೆ.॥30॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತಮೂರನೆಯ ಸರ್ಗ ಸಂಪೂರ್ಣವಾಯಿತು. ॥23॥