वाचनम्
ಭಾಗಸೂಚನಾ
ವಾಲಿಯು ಸುಗ್ರೀವ ಮತ್ತು ಅಂಗದರಲ್ಲಿ ತನ್ನ ಮನಸ್ಸಿನ ಮಾತನ್ನು ತಿಳಿಸಿ ಪ್ರಾಣತ್ಯಾಗಮಾಡಿದುದು
ಮೂಲಮ್ - 1
ವೀಕ್ಷಮಾಣಸ್ತು ಮಂದಾಸುಃ ಸರ್ವತೋ ಮಂದಮುಚ್ಛ್ವಸನ್ ।
ಆದಾವೇವ ತು ಸುಗ್ರೀವಂ ದದರ್ಶಾನುಜಮಗ್ರತಃ ॥
ಅನುವಾದ
ವಾಲಿಯ ಪ್ರಾಣಗಳ ಗತಿಯು ಶಿಥಿಲವಾಗಿತ್ತು. ಅವನು ನಿಧಾನವಾಗಿ ಊರ್ಧ್ವಶ್ವಾಸ ತೆಗೆದುಕೊಳ್ಳುತ್ತಾ ಎಲ್ಲೆಡೆ ನೋಡ ತೊಡಗಿದನು. ಮೊಟ್ಟ ಮೊದಲಿಗೆ ಎದುರಿಗೆ ನಿಂತ ತಮ್ಮನಾದ ಸುಗ್ರೀವನನ್ನು ನೋಡಿದನು.॥1॥
ಮೂಲಮ್ - 2
ತಂ ಪ್ರಾಪ್ತವಿಜಯಂ ವಾಲೀ ಸುಗ್ರೀವಂ ಪ್ಲವಗೇಶ್ವರಮ್ ।
ಆಭಾಷ್ಯ ವ್ಯಕ್ತಯಾ ವಾಚಾ ಸಸ್ನೇಹಮಿದಮಬ್ರವೀತ್ ॥
ಅನುವಾದ
ಯುದ್ಧದಲ್ಲಿ ವಿಜಯ ಪಡೆದ ಆ ವಾನರರಾಜ ಸುಗ್ರೀವನನ್ನು ಸಂಬೋಧಿಸುತ್ತಾ ವಾಲಿಯು ಬಹಳ ಸ್ನೇಹದಿಂದ ಸ್ಪಷ್ಟವಾಗಿ ಇಂತು ನುಡಿದನು.॥2॥
ಮೂಲಮ್ - 3
ಸುಗ್ರೀವ ದೋಷೇಣ ನ ಮಾಂ ಗಂತುಮರ್ಹಸಿ ಕಿಲ್ಬಿಷಾತ್ ।
ಕೃಷ್ಯಮಾಣಂ ಭವಿಷ್ಯೇಣ ಬುದ್ಧಿಮೋಹೇನ ಮಾಂ ಬಲಾತ್ ॥
ಅನುವಾದ
ಸುಗ್ರೀವನೇ! ಹಿಂದಿನ ಜನ್ಮದ ಯಾವುದೋ ಪಾಪದಿಂದ ಅವಶ್ಯವಾಗಿ ಬುದ್ಧಿಯಲ್ಲಿ ಮೋಹ ಉಂಟಾಗಿ ನನ್ನನ್ನು ಬಲವಂತವಾಗಿ ಸೆಳೆದುಕೊಂಡಿತ್ತು, ಅದರಿಂದ ನಾನು ನಿನ್ನನ್ನು ಶತ್ರು ಎಂದು ತಿಳಿದಿದ್ದೆ, ಇದರಿಂದಾಗಿ ನನ್ನಿಂದ ನಿನಗೂ ಅಪರಾಧವಾಯಿತು. ಅದಕ್ಕಾಗಿ ನೀನು ನನ್ನ ಕುರಿತು ದೋಷದೃಷ್ಟಿ ಇರಿಸಬಾರದು.॥3॥
ಮೂಲಮ್ - 4
ಯುಗಪದ್ವಿಹಿತಂ ತಾತ ನ ಮನ್ಯೇ ಸುಖಮಾವಯೋಃ ।
ಸೌಹಾರ್ದಂ ಭ್ರಾತೃಯುಕ್ತಂ ಹಿ ತದಿದಂ ಜಾತನಾನ್ಯಥಾ ॥
ಅನುವಾದ
ಅಯ್ಯಾ! ನಾವಿಬ್ಬರೂ ಜೊತೆಯಾಗಿ ಸುಖ ಭೋಗಿಸುವುದು ವಿಧಿಗೆ ಸಮ್ಮತವಿರಲಿಲ್ಲ, ಆದ್ದರಿಂದ ಇಬ್ಬರು ಸೋದರರಲ್ಲಿ ಇರಬೇಕಾದ ಪ್ರೇಮವು ಇರದೆ ವಿಪರೀತ ವೈರಭಾವವೇ ಉಂಟಾಯಿತು.॥4॥
ಮೂಲಮ್ - 5
ಪ್ರತಿಪದ್ಯ ತ್ವಮದ್ಯೈವ ರಾಜ್ಯಮೇಷಾಂ ವನೌಕಸಾಮ್ ।
ಮಾಮಪ್ಯದ್ಯೈವ ಗಚ್ಛನ್ತಂ ವಿದ್ಧಿ ವೈವಸ್ವತಕ್ಷಯಮ್ ॥
ಅನುವಾದ
ತಮ್ಮ! ನೀನು ಇಂದೇ ಈ ವಾನರರ ರಾಜ್ಯವನ್ನು ಸ್ವೀಕರಿಸು. ನಾನು ಈಗಲೇ ಯಮನ ಮನೆಗೆ ಹೋಗಲು ಸಿದ್ಧನಾಗಿರುವೆ ಎಂದು ತಿಳಿ.॥5॥
ಮೂಲಮ್ - 6
ಜೀವಿತಂ ಚ ಹಿ ರಾಜ್ಯಂ ಚ ಶ್ರಿಯಂ ಚ ವಿಪುಲಾಂ ತಥಾ ।
ಪ್ರಜಹಾಮ್ಯೇಷ ವೈ ತೂರ್ಣಮಹಂ ಚಾಗರ್ಹಿತಂ ಯಶಃ ॥
ಅನುವಾದ
ನಾನು ನನ್ನ ಜೀವನ, ರಾಜ್ಯ, ವಿಪುಲ ಸಂಪತ್ತು, ಪ್ರಶಂಸಿತ ಯಶವನ್ನು ಕೂಡಲೇ ತ್ಯಜಿಸುತ್ತಿದ್ದೇನೆ.॥6॥
ಮೂಲಮ್ - 7
ಅಸ್ಯಾಂ ತ್ವಹಮನಸ್ಥಾಯಾಂ ವೀರ ವಕ್ಷ್ಯಾಮಿ ಯದ್ವಚಃ ।
ಯದ್ಯಪ್ಯಸುಕರಂ ರಾಜನ್ ಕರ್ತುಮೇವ ತ್ವಮರ್ಹಸಿ ॥
ಅನುವಾದ
ವೀರ ರಾಜನೇ! ಈ ಅವಸ್ಥೆಯಲ್ಲಿ ನಾನು ಹೇಳುವುದು ಮಾಡುವುದರಲ್ಲಿ ಕಠಿಣವಾಗಿದ್ದರೂ ನೀನು ಅದನ್ನು ಅವಶ್ಯವಾಗಿ ಮಾಡಬೇಕು.॥7॥
ಮೂಲಮ್ - 8
ಸುಖಾರ್ಹಂ ಸುಖ ಸಂವೃದ್ಧಂ ಬಾಲಮೇನಮಬಾಲಿಶಮ್ ।
ಭಾಷ್ಪಪೂರ್ಣಮುಖಂ ಪಶ್ಯ ಭೂಮೌ ಪತಿತಮಂಗದಮ್ ॥
ಅನುವಾದ
ನೋಡು, ನನ್ನ ಮಗ ಅಂಗದ ನೆಲದಲ್ಲಿ ಬಿದ್ದಿರುವನು. ಅವನ ಮುಖ ಕಂಬನಿಗಳಿಂದ ತುಂಬಿದೆ. ಇವನು ಸುಖದಲ್ಲಿ ಬೆಳೆದಿರುವವನು ಮತ್ತು ಸುಖ ಭೋಗಿಸಲು ಯೋಗ್ಯನಾಗಿದ್ದಾನೆ. ಬಾಲಕನಾಗಿದ್ದರೂ ಮೂರ್ಖನಾಗಿಲ್ಲ.॥8॥
ಮೂಲಮ್ - 9
ಮಮ ಪ್ರಾಣೈಃ ಪ್ರಿಯತರಂ ಪುತ್ರಂ ಪುತ್ರಮಿವೌರಸಮ್ ।
ಮಯಾ ಹೀನಮಹೀನಾರ್ಥಂ ಸರ್ವತಃ ಪರಿಪಾಲಯ ॥
ಅನುವಾದ
ಇವನು ನನಗೆ ಪ್ರಾಣಗಳಿಗಿಂತ ಹೆಚ್ಚು ಪ್ರಿಯನಾಗಿದ್ದಾನೆ. ನಾನಿಲ್ಲದಿದ್ದರೂ ನೀನು ಇವನನ್ನು ತನ್ನ ಮಗನಂತೇ ತಿಳಿಯಬೇಕು. ಇವನಿಗೆ ಯಾವುದೇ ಸುಖ-ಸೌಲಭ್ಯವೂ ಕೊರತೆಯಾಗದಂತೆ, ಸದಾ ಇವನನ್ನು ಎಲ್ಲೆಡೆ ರಕ್ಷಿಸಬೇಕು.॥9॥
ಮೂಲಮ್ - 10
ತ್ವಮಪ್ಯಸ್ಯ ಪಿತಾ ದಾತಾ ಪರಿತ್ರಾತಾ ಚ ಸರ್ವಶಃ ।
ಭಯೇಷ್ವಭಯದಶ್ಚೈವ ಯಥಾಹಂ ಪ್ಲವಗೇಶ್ವರ ॥
ಅನುವಾದ
ವಾನರರಾಜನೇ! ನನ್ನಂತೆಯೇ ನೀನೂ ಇವನಿಗೆ ತಂದೆ, ದಾತಾ, ಎಲ್ಲ ರೀತಿಯ ರಕ್ಷಕ ಮತ್ತು ಭಯದ ಸಂದರ್ಭದಲ್ಲಿ ಅಭಯ ಕೊಡುವವನಾಗಿರುವೆ.॥10॥
ಮೂಲಮ್ - 11
ಏಷ ತಾರಾತ್ಮಜಃ ಶ್ರೀಮಾಂಸ್ತ್ವಯಾ ತುಲ್ಯಪರಾಕ್ರಮಃ ।
ರಕ್ಷಸಾಂ ತು ವಧೇ ತೇಷಾಮಗ್ರತಸ್ತೇ ಭವಿಷ್ಯತಿ ॥
ಅನುವಾದ
ತಾರೆಯ ಈ ತೇಜಸ್ವೀ ಪುತ್ರನು ನಿನ್ನಂತೆಯೇ ಪರಾಕ್ರಮಿಯಾಗಿದ್ದಾನೆ. ಆ ರಾಕ್ಷಸರ ವಧೆಯ ಸಮಯ ಇವನು ಸದಾ ನಿನ್ನ ಮುಂದೆಯೇ ಇರುವನು.॥11॥
ಮೂಲಮ್ - 12
ಅನುರೂಪಾಣಿ ಕರ್ಮಾಣಿ ವಿಕ್ರಮ್ಯ ಬಲವಾನ್ರಣೇ ।
ಕರಿಷ್ಯತ್ಯೇಷ ತಾರೇಯಸ್ತೇಜಸ್ವೀ ತರುಣೋಂಽಗದಃ ॥
ಅನುವಾದ
ಈ ಬಲವಂತ ತೇಜಸ್ವೀ ತರುಣ ತಾರಾ ಕುಮಾರ ಅಂಗದನು ರಣಭೂಮಿಯಲ್ಲಿ ಪರಾಕ್ರಮವನ್ನು ಪ್ರಕಟಿಸುತ್ತಾ ತನಗೆ ಯೋಗ್ಯವಾದ ಕರ್ಮವನ್ನೇ ಮಾಡುವನು.॥12॥
ಮೂಲಮ್ - 13
ಸುಷೇಣದುಹಿತಾ ಚೇಯಮರ್ಥಸೂಕ್ಷ್ಮವಿನಿಶ್ಚಯೇ ।
ಔತ್ಪಾತ್ತಿಕೇ ಚ ವಿವಿಧೇ ಸರ್ವತಃ ಪರಿನಿಷ್ಠಿತಾ ॥
ಅನುವಾದ
ಸುಷೇಣನ ಪುತ್ರಿಯಾದ ಈ ತಾರೆಯು ಸೂಕ್ಷ್ಮ ವಿಷಯಗಳ ನಿರ್ಣಯದಲ್ಲಿ ಹಾಗೂ ನಾನಾ ಪ್ರಕಾರದ ಉತ್ಪಾತಗಳ ಚಿಹ್ನೆಗಳನ್ನು ಅರಿಯಲು ಸರ್ವಥಾ ನಿಪುಣಳಾಗಿದ್ದಾಳೆ.॥13॥
ಮೂಲಮ್ - 14
ಯದೇಷಾ ಸಾಧ್ವಿತಿ ಬ್ರೂಯಾತ್ಕಾರ್ಯಂ ತನ್ಮುಕ್ತಸಂಶಯಮ್ ।
ನಹಿ ತಾರಾಮತಂ ಕಿಂಚಿದನ್ಯಥಾ ಪರಿವರ್ತತೇ ॥
ಅನುವಾದ
ಯಾವ ಕಾರ್ಯವನ್ನು ಒಳ್ಳೆಯದೆಂದು ತಿಳಿಸುವಳೋ, ಅದನ್ನು ಸಂದೇಹರಹಿತನಾಗಿ ಮಾಡು. ತಾರೆಯ ಯಾವುದೇ ಸಮ್ಮತಿಯ ಪರಿಣಾಮ ವಿಪರೀತವಾಗಲಾರದು.॥14॥
ಮೂಲಮ್ - 15
ರಾಘವಸ್ಯ ಚ ತೇ ಕಾರ್ಯಂ ಕರ್ತವ್ಯಮವಿಶಂಕಯಾ ।
ಸ್ಯಾದಧರ್ಮೋ ಹ್ಯಕರಣೇ ತ್ವಾಂ ಚ ಹಿಂಸ್ಯಾದಮಾನಿತಃ ॥
ಅನುವಾದ
ಶ್ರೀರಾಮಚಂದ್ರನ ಕಾರ್ಯವನ್ನು ನೀನು ನಿಶ್ಶಂಕನಾಗಿ ಮಾಡಬೇಕು. ಅದನ್ನು ಮಾಡದಿದ್ದರೆ ನಿನಗೆ ಪಾಪ ತಟ್ಟೀತು ಮತ್ತು ಅಪಮಾನಿತನಾಗಿ ಶ್ರೀರಾಮನು ನಿನ್ನನ್ನು ಕೊಂದುಹಾಕಬಹುದು.॥15॥
ಮೂಲಮ್ - 16
ಇಮಾಂ ಚ ಮಾಲಾಮಾಧತ್ಸ್ವ ದಿವ್ಯಾಂ ಸುಗ್ರೀವ ಕಾಂಚನೀಮ್ ।
ಉದಾರಾ ಶ್ರೀಃ ಸ್ಥಿತಾ ಹ್ಯಸ್ಯಾಂ ಸಂಪ್ರಜಹ್ಯಾನ್ಮೃತೇ ಮಯಿ ॥
ಅನುವಾದ
ಸುಗ್ರೀವನೇ! ನನ್ನ ಈ ಸ್ವರ್ಣಮಾಲೆಯನ್ನು ನೀನು ಧರಿಸು. ಇದರಲ್ಲಿ ಉದಾರ ಲಕ್ಷ್ಮಿಯು ವಾಸಿಸುವಳು. ನಾನು ಸತ್ತು ಹೋದ ಮೇಲೆ ಇದರ ಶ್ರೀಯು ನಾಶವಾದೀತು. ಆದ್ದರಿಂದ ಈಗಿನಿಂದಲೇ ಧರಿಸು.॥16॥
ಮೂಲಮ್ - 17
ಇತ್ಯೇವಮುಕ್ತಃ ಸುಗ್ರೀವೋ ವಾಲಿನಾ ಭ್ರಾತೃಸೌಹೃದಾತ್ ।
ಹರ್ಷಂ ತ್ಯಕ್ತ್ವಾ ಪುನರ್ದೀನೋ ಗ್ರಹಗ್ರಸ್ತ ಇವೋಡುರಾಟ್ ॥
ಅನುವಾದ
ವಾಲಿಯು ಭ್ರಾತೃಸ್ನೇಹದ ಕಾರಣ ಹೀಗೆ ಹೇಳಿದಾಗ ಅವನ ವಧೆಯ ಕಾರಣದಿಂದ ಆದ ಹರ್ಷವನ್ನು ತ್ಯಜಿಸಿ ಚಂದ್ರನಿಗೆ ಗ್ರಹಣ ಹಿಡಿದಂತೆ ಸುಗ್ರೀವನು ಪುನಃ ದುಃಖಿತನಾದನು.॥17॥
ಮೂಲಮ್ - 18
ತದ್ವಾಲಿವಚನಾಚ್ಛಾಂತಃ ಕುರ್ವನ್ ಯುಕ್ತಮತಂದ್ರಿತಃ ।
ಜಗ್ರಾಹ ಸೋಽಭ್ಯನುಜ್ಞಾತೋ ಮಾಲಾಂ ತಾಂ ಚೈವ ಕಾಂಚನೀಮ್ ॥
ಅನುವಾದ
ವಾಲಿಯ ಆ ಮಾತಿನಿಂದ ಸುಗ್ರೀವನ ವೈರಭಾವ ಶಾಂತವಾಯಿತು. ಅವನು ಎಚ್ಚರಗೊಂಡು ವರ್ತಿಸತೊಡಗಿದನು. ಅವನು ಅಣ್ಣನ ಆಜ್ಞೆಯಂತೆ ಆ ಸ್ವರ್ಣಮಾಲೆಯನ್ನು ಸ್ವೀಕರಿಸಿದನು.॥18॥
ಮೂಲಮ್ - 19
ತಾಂ ಮಾಲಾಂ ಕಾಂಚನೀಂ ದತ್ತ್ವಾ ಚೈವಾತ್ಮಜ ಸ್ಥಿತಮ್ ।
ಸಂಸಿದ್ಧಃ ಪ್ರೇತ್ಯಭಾವಾಯ ಸ್ನೇಹಾದಂಗದಮಬ್ರವೀತ್ ॥
ಅನುವಾದ
ಸುಗ್ರೀವನಿಗೆ ಆ ಸ್ವರ್ಣಮಯಿ ಮಾಲೆಯನ್ನು ಕೊಟ್ಟ ಬಳಿಕ ವಾಲಿಯು ಸಾಯಲು ನಿಶ್ಚಯಿಸಿದನು ಮತ್ತೆ ತನ್ನ ಎದುರಿಗೆ ನಿಂತಿರುವ ಅಂಗದನ ಕಡೆಗೆ ನೋಡಿ ಸ್ನೇಹದಿಂದ ಹೇಳಿದನು.॥19॥
ಮೂಲಮ್ - 20
ದೇಶಕಾಲೌ ಭಜಸ್ವಾದ್ಯ ಕ್ಷಮಮಾಣಃ ಪ್ರಿಯಾಪ್ರಿಯೇ ।
ಸುಖದುಃಖಸಹಃ ಕಾಲೇ ಸುಗ್ರೀವವಶಗೋ ಭವ ॥
ಅನುವಾದ
ಮಗನೇ! ಈಗ ದೇಶ ಕಾಲವನ್ನು ತಿಳಿ-ಯಾವಾಗ ಎಲ್ಲಿ ಹೇಗೆ ವರ್ತಿಸಬೇಕೆಂದು ನಿಶ್ಚಯಿಸಿ ಅದರಂತೆ ಆಚರಣೆ ಮಾಡು. ಸಮಯಾನುಸಾರ ಪ್ರಿಯ-ಅಪ್ರಿಯ, ಸುಖ-ದುಃಖ ಎದುರಾದರೂ ಅದನ್ನು ಸಹಿಸು. ತನ್ನ ಹೃದಯದಲ್ಲಿ ಕ್ಷಮಾಭಾವ ಧರಿಸು ಹಾಗೂ ಸದಾ ಸುಗ್ರೀವನ ಆಜ್ಞೆಯಲ್ಲೇ ಇರು.॥20॥
ಮೂಲಮ್ - 21
ಯಥಾ ಹಿ ತ್ವಂ ಮಹಾಬಾಹೋ ಲಾಲಿತಃ ಸತತಂ ಮಯಾ ।
ನ ತಥಾ ವರ್ತಮಾನಂ ತ್ವಾಂ ಸುಗ್ರೀವೋ ಬಹು ಮನ್ಯತೇ ॥
ಅನುವಾದ
ಮಹಾಬಾಹುವೇ! ನಾನು ನಿನ್ನನ್ನು ಮುದ್ದಿನಿಂದ ಸಾಕುತ್ತಿದ್ದಾಗ ನೀನು ಹೇಗೆ ಇರುತ್ತಿದ್ದೆಯೋ, ಹಾಗೆಯೇ ಈಗಲೂ ವರ್ತಿಸಿದರೆ ಸುಗ್ರೀವನು ನಿನ್ನನ್ನು ವಿಶೇಷವಾಗಿ ಆದರಿಸಲಾರನು.॥21॥
ಮೂಲಮ್ - 22
ನಾಸ್ಯಾಮಿತ್ರೈರ್ಗತಂ ಗಚ್ಛೇರ್ಮಾ ಶತ್ರುಭಿರರಿಂದಮ ।
ಭರ್ತುರರ್ಥಪರೋ ದಾಂತಃ ಸುಗ್ರೀವವಶಗೋ ಭವ ॥
ಅನುವಾದ
ಶತ್ರುದಮನ ಅಂಗದ! ನೀನು ಅವನ ಶತ್ರುಗಳೊಂದಿಗೆ ಕೈಜೋಡಿಸಬೇಡ. ಅವನ ಮಿತ್ರರಲ್ಲದವರನ್ನು ಸೇರಬೇಡ. ತನ್ನ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಸದಾ ನಿನ್ನ ಸ್ವಾಮಿ ಸುಗ್ರೀವನ ಕಾರ್ಯಸಾಧನೆಯಲ್ಲಿ ತತ್ಪರನಾಗಿರು.॥22॥
ಮೂಲಮ್ - 23
ನ ಚಾತಿಪ್ರಣಯಃ ಕಾರ್ಯಃ ಕರ್ತವ್ಯೋಽಪ್ರಣಯಶ್ಚ ತೇ ।
ಉಭಯಂ ಹಿ ಮಹಾದೋಷಂ ತಸ್ಮಾದಂತರದೃಗ್ಭವ ॥
ಅನುವಾದ
ಯಾರೊಂದಿಗೂ ಅತ್ಯಂತ ಪ್ರೇಮವಿಡಬೇಡ ಹಾಗೂ ಪ್ರೇಮದ ಸರ್ವಥಾ ಅಭಾವವನ್ನು ಮಾಡಬೇಡ; ಏಕೆಂದರೆ ಇವೆರಡೂ ಮಹಾದೋಷವಾಗಿದೆ. ಆದ್ದರಿಂದ ಮಧ್ಯಮ ಸ್ಥಿತಿಯಲ್ಲೇ ದೃಷ್ಟಿ ಇರಲಿ.॥23॥
ಮೂಲಮ್ - 24
ಇತ್ಯುಕ್ತ್ವಾಥ ವಿವೃತ್ತಾಕ್ಷಃ ಶರಸಂಪೀಡಿತೋ ಭೃಶಮ್ ।
ವಿವೃತೈರ್ದಶನೈರ್ಭೀಮೈರ್ಬಭೂವೋತ್ಕ್ರಾಂತಜೀವಿತಃ ॥
ಅನುವಾದ
ಹೀಗೆ ಹೇಳಿ ಬಾಣದ ಆಘಾತದಿಂದ ಅತ್ಯಂತ ಗಾಯಗೊಂಡ ವಾಲಿಯ ಕಣ್ಣು ತಿರುಗತೊಡಗಿದವು. ಅವನ ಭಯಂಕರ ಹಲ್ಲುಗಳು ತೆರೆದು ಕೊಂಡವು ಹಾಗೂ ಪ್ರಾಣಪಕ್ಷಿ ಹಾರಿಹೋಯಿತು.॥24॥
ಮೂಲಮ್ - 25
ತತೋ ವಿಚುಕ್ರುಶುಸ್ತತ್ರ ವಾನರಾ ಹತಯೂಥಪಾಃ ।
ಪರಿದೇವಯಮಾನಾಸ್ತೇ ಸರ್ವೇ ಪ್ಲವಗಸತ್ತಮಾಃ ॥
ಅನುವಾದ
ಆಗ ತಮ್ಮ ಯೂಥಪತಿಯ ಮೃತ್ಯುವಾದಾಗ ಎಲ್ಲ ಶ್ರೇಷ್ಠ ವಾನರರು ಜೋರಾಗಿ ಅಳುತ್ತಾ ವಿಲಪಿಸತೊಡಗಿದರು.॥25॥
ಮೂಲಮ್ - 26
ಕಿಷ್ಕಿಂಧಾಹ್ಯದ್ಯ ಶೂನ್ಯಾ ಚ ಸ್ವರ್ಗತೇ ವಾನರೇಶ್ವರೇ ।
ಉದ್ಯಾನಾನಿ ಚ ಶೂನ್ಯಾನಿ ಪರ್ವತಾಃ ಕಾನನಾನಿ ಚ ॥
ಅನುವಾದ
ಅಯ್ಯೋ! ಇಂದು ವಾನರರಾಜ ವಾಲಿಯು ಸ್ವರ್ಗಸ್ಥನಾದ್ದರಿಂದ ಇಡೀ ಕಿಷ್ಕಿಂಧೆ ಬರಿದಾಯಿತು. ಉದ್ಯಾನ, ಪರ್ವತ, ವನಗಳೂ, ಪಾಳುಬಿದ್ದಂತಾದವು.॥26॥
ಮೂಲಮ್ - 27½
ಹತೇ ಪ್ಲವಗಶಾರ್ದೂಲೇ ನಿಷ್ಪ್ರಭಾ ವಾನರಾಃ ಕೃತಾಃ ।
ಯಸ್ಯ ವೇಗೇನ ಮಹತಾ ಕಾನನಾನಿ ವನಾನಿ ಚ ॥
ಪುಷ್ಪೌಘೇಣಾನುಬಧ್ಯಂತೇ ಕರಿಷ್ಯತಿ ತದದ್ಯ ಕಃ ।
ಅನುವಾದ
ವಾನರ ಶ್ರೇಷ್ಠ ವಾಲಿಯು ಸತ್ತುಹೋದದ್ದರಿಂದ ಎಲ್ಲ ವಾನರರು ಕಳಾಹೀನರಾದರೂ, ಯಾರ ಮಹಾ ಪ್ರತಾಪದಿಂದ ಸಮಸ್ತ ಕಾನನ, ವನಗಳು ಪುಷ್ಪಸಮೂಹಗಳಿಂದ ಸದಾ ಕೂಡಿದ್ದವೋ, ಇಂದು ಅವನು ಇಲ್ಲದಿರುವಾಗ ಯಾರು ಇಂತಹ ಚಮತ್ಕಾರ ಮಾಡಬಲ್ಲನು.॥27½॥
ಮೂಲಮ್ - 28
ಯೇನ ದತ್ತಂ ಮಹದ್ಯುದ್ಧಂಗಂಧರ್ವಸ್ಯ ಮಹಾತ್ಮನಃ ॥
ಮೂಲಮ್ - 29
ಗೋಲಭಸ್ಯ ಮಹಾಬಾಹೋರ್ದಶ ವರ್ಷಾಣಿ ಪಂಚ ಚ ।
ನೈವ ರಾತ್ರೌ ನ ದಿವಸೇ ತದ್ಯುದ್ಧಮುಪಶಾಮ್ಯತಿ ॥
ಅನುವಾದ
ಅವನು ಮಹಾಮನಾ ಮಹಾಬಾಹು ಗೋಲಭ ಎಂಬ ಗಂಧರ್ವನಿಗೆ ಮಹಾಯುದ್ಧದ ಅವಕಾಶ ಕೊಟ್ಟಿದ್ದನು. ಆ ಯುದ್ಧವು ಹದಿನೈದು ವರ್ಷ ಒಂದೇ ಸಮನೆ ಹಗಲು-ರಾತ್ರಿ ನಿಲ್ಲದೆ ನಡೆಯುತ್ತಲೇ ಇತ್ತು.॥28-29॥
ಮೂಲಮ್ - 30
ತತಸ್ತು ಷೋಡಶೇ ವರ್ಷೇ ಗೋಲಭೋ ವಿನಿಪಾತಿತಃ ।
ತಂ ಹತ್ವಾ ದುರ್ವಿನೀತಂ ತು ವಾಲೀ ದಂಷ್ಟ್ರಾಕರಾಲವಾನ್ ।
ಸರ್ವಾಭಯಂಕರೋಽಸ್ಮಾಕಂ ಕಥಮೇಷ ನಿಪಾತಿತಃ ॥
ಅನುವಾದ
ಅನಂತರ ಹದಿನಾರನೆಯ ವರ್ಷ ಪ್ರಾರಂಭವಾಗುತ್ತಲೇ ಗೋಲಭನು ವಾಲಿಯ ಕೈಯಿಂದ ಹತನಾದನು. ಆ ದುಷ್ಟ ಗಂಧರ್ವನನ್ನು ವಧಿಸಿದ ವಿಕರಾಳ ದಾಡೆಗಳುಳ್ಳ ವಾಲಿಯು ನಮಗೆಲ್ಲರಿಗೂ ಅಭಯದಾನ ಕೊಟ್ಟಿದ್ದನು. ಅದೇ ನಮ್ಮ ಸ್ವಾಮಿ ವಾನರರಾಜ ಸ್ವತಃ ಹೇಗೆ ಕೊಲ್ಲಲ್ಪಟ್ಟನು.॥30॥
ಮೂಲಮ್ - 31
ಹತೇ ತು ವೀರೇ ಪ್ಲವಗಾಧಿಪೇ ತದಾ
ಪ್ಲವಂಗಮಾಸ್ತತ್ರ ನ ಶರ್ಮ ಲೇಭಿರೇ ।
ವನೇಚರಾಃ ಸಿಂಹಯುತೇ ಮಹಾವನೇ
ಯಥಾ ಹಿ ಗಾವೋ ನಿಹತೇ ಗವಾಂ ಪತೌ ॥
ಅನುವಾದ
ಆಗ ವೀರ ವಾನರ ರಾಜ ವಾಲಿಯು ಸತ್ತುಹೋದಾಗ ಸಿಂಹದಿಂದ ವ್ಯಾಪ್ತವಾದ ಮಹಾರಣ್ಯದಲ್ಲಿ ಗೂಳಿಯನ್ನು ಸಿಂಹವು ಕೊಂದಬಿಟ್ಟರೆ ಗೋವುಗಳು ಭ್ರಾಂತರಾಗುವಂತೆ ವನಗಳಲ್ಲಿ ಸಂಚರಿಸುವ ವಾನರರು ಭ್ರಾಂತರಾದರು.॥31॥
ಮೂಲಮ್ - 32
ತತಸ್ತು ತಾರಾ ವ್ಯಸನಾರ್ಣವಾಪ್ಲುತಾ
ಮೃತಸ್ಯ ಭರ್ತುರ್ವದನಂ ಸಮೀಕ್ಷ್ಯ ಸಾ ।
ಜಗಾಮ ಭೂಮಿಂ ಪರಿರಭ್ಯ ವಾಲಿನಂ
ಮಹಾದ್ರುವಂ ಛಿನ್ನಮಿವಾಶ್ರಿತಾ ಲತಾ ॥
ಅನುವಾದ
ಅನಂತರ ಶೋಕಸಮುದ್ರದಲ್ಲಿ ಮುಳುಗಿದ ತಾರೆಯು ಸತ್ತುಹೋಗಿರುವ ತನ್ನ ಪತಿಯ ಕಡೆಗೆ ನೋಡಿದಾಗ ಅವಳು ವಾಲಿಯನ್ನು ಆಲಿಂಗಿಸಿಕೊಂಡು ಕಡಿದು ಹಾಕಿದ ಮರಕ್ಕೆ ಹಬ್ಬಿದ ಬಳ್ಳಿಯು ನೆಲಕ್ಕೆ ಬೀಳುವಂತೆ ಭೂಮಿಯಲ್ಲಿ ಬಿದ್ದುಬಿಟ್ಟಳು.॥32॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತೆರಡನೆಯ ಸರ್ಗ ಸಂಪೂರ್ಣವಾಯಿತು. ॥22॥