०१९ तारागमनम्

वाचनम्
ಭಾಗಸೂಚನಾ

ಅಂಗದ ಸಹಿತ ತಾರೆಯು ಓಡುತ್ತಿರುವ ವಾನರರಲ್ಲಿ ಮಾತುಕತೆಯಾಡಿ, ವಾಲಿಯ ಬಳಿಗೆ ಬಂದು ಪ್ರಲಾಪಿಸಿದುದು

ಮೂಲಮ್ - 1

ಸ ವಾನರಮಹಾರಾಜಃ ಶಯಾನಃ ಶರಪೀಡಿತಃ ।
ಪ್ರತ್ಯುಕ್ತೋ ಹೇತುಮದ್ವಾಕ್ಯೈರ್ನೋತ್ತರಂ ಪ್ರತ್ಯಪದ್ಯತ ॥

ಅನುವಾದ

ವಾನರ ರಾಜನಾದ ವಾಲಿಯು ಬಾಣದಿಂದ ಪೀಡಿತನಾಗಿ ಭೂಮಿಯಲ್ಲಿ ಬಿದ್ದಿದ್ದನು. ಶ್ರೀರಾಮನ ಯುಕ್ತಿ-ಯುಕ್ತ ಮಾತಿನಿಂದ ತನ್ನ ಮಾತಿಗೆ ಉತ್ತರ ಪಡೆದು ಮತ್ತೆ ಬೇರೆ ಯಾವ ಮಾತು ತೋಚಲಿಲ್ಲ.॥1॥

ಮೂಲಮ್ - 2

ಅಶ್ಮಭಿಃ ಪರಿಭಿನ್ನಾಂಗಃ ಪಾದಪೈರಾಹತೋ ಭೃಶಮ್ ।
ರಾಮಬಾಣೇನ ಚಾಕ್ರಾಂತೋ ಜೀವಿತಾಂತೇ ಮುಮೋಹ ಸಃ ॥

ಅನುವಾದ

ಕಲ್ಲುಬಂಡೆಗಳ ಏಟಿನಿಂದ ಅವನ ಶರೀರವೆಲ್ಲ ಛಿನ್ನಭಿನ್ನವಾಗಿತ್ತು. ಮರಗಳ ಆಘಾತದಿಂದಲೂ ಬಹಳ ಗಾಯಗೊಂಡಿದ್ದನು. ಶ್ರೀರಾಮನ ಬಾಣದಿಂದ ಆಕ್ರಾಂತನಾಗಿ ಅಂತ್ಯ ಕಾಲಕ್ಕೆ ತಲುಪಿದ್ದನು. ಆಗ ಅವನು ಮೂರ್ಛಿತನಾದನು.॥2॥

ಮೂಲಮ್ - 3

ತಂ ಭಾರ್ಯಾ ಬಾಣಮೋಕ್ಷೇಣ ರಾಮದತ್ತೇನ ಸಂಯುಗೇ ।
ಹತಂ ಪ್ಲವಗ ಶಾರ್ದೂಲಂ ತಾರಾ ಶುಶ್ರಾವವಾಲಿನಮ್ ॥

ಅನುವಾದ

ಯುದ್ಧರಂಗದಲ್ಲಿ ವಾನರಶ್ರೇಷ್ಠ ವಾಲಿಯು ಶ್ರೀರಾಮನು ಬಿಟ್ಟ ಬಾಣದಿಂದ ಸತ್ತುಹೋದನು ಎಂದು ಅವನ ಪತ್ನೀ ತಾರೆಯು ಕೇಳಿದಳು.॥3॥

ಮೂಲಮ್ - 4

ಸಾ ಸಪುತ್ರಾಪ್ರಿಯಂ ಶ್ರುತ್ವಾ ವಧಂ ಭರ್ತುಃ ಸುದಾರುಣಮ್ ।
ನಿಷ್ಪಪಾತ ಭೃಶಂ ತಸ್ಮಾದುದ್ವಿಗ್ನಾ ಗಿರಿಕಂದರಾತ್ ॥

ಅನುವಾದ

ತನ್ನ ಸ್ವಾಮಿಯ ವಧೆಯ ಅತ್ಯಂತ ಭಯಂಕರ ಮತ್ತು ಅಪ್ರಿಯ ಸಮಾಚಾರ ಕೇಳಿ ಅವಳು ಬಹಳ ಉದ್ವಿಗ್ನಳಾಗಿ ತನ್ನ ಮಗ ಅಂಗದನನ್ನು ಜೊತೆಗೆ ಕರೆದುಕೊಂಡು ಆ ಪರ್ವತದ ಕಂದಕಗಳಿಂದ ಹೊರಗೆ ಬಂದಳು.॥4॥

ಮೂಲಮ್ - 5

ಯೇ ತ್ವಂಗದಪರೀವಾರಾ ವಾನರಾ ಹಿ ಮಹಾಬಲಃ ।
ತೇ ಸಕಾರ್ಮುಕಮಾಲೋಕ್ಯ ರಾಮಂ ತ್ರಸ್ತಾಃ ಪ್ರದುದ್ರುವುಃ ॥

ಅನುವಾದ

ಅಂಗದನ ಸುತ್ತಲೂ ಅವನನ್ನು ರಕ್ಷಿಸುತ್ತಿರುವ ಮಹಾಬಲಿ ವಾನರರು ಧನುಸ್ಸನ್ನು ಹಿಡಿದು ನಿಂತಿರುವ ಶ್ರೀರಾಮನನ್ನು ನೋಡಿ ಭಯಗೊಂಡು ಓಡಿಹೋದರು.॥5॥

ಮೂಲಮ್ - 6

ಸಾ ದದರ್ಶ ತತಸಸ್ತಾನ್ ಹರೀನಾಪತತೋ ದ್ರುತಮ್ ।
ಯೂಥಾದೇವ ಪರಿಭ್ರಷ್ಟಾನ್ ಮೃಗಾನ್ನಿಹತಯೂಥಪಾನ್ ॥

ಅನುವಾದ

ವೇಗವಾಗಿ ಓಡುತ್ತಾ ಬರುತ್ತಿದ್ದ ಆ ಭಯಗೊಂಡ ವಾನರರನ್ನು ತಾರೆಯು ನೋಡಿದಳು. ಯೂಥಪತಿಯು ಸತ್ತುಹೋದಾಗ ಯೂಥಭ್ರಷ್ಟ ಮೃಗಗಳಂತೆ ಅವರು ಕಂಡುಬರುತ್ತಿದ್ದರು.॥6॥

ಮೂಲಮ್ - 7

ತಾನುವಾಚ ಸಮಾಸಾದ್ಯ ದುಃಖಿತಾನ್ ದುಃಖಿತಾ ಸತೀ ।
ರಾಮವಿತ್ರಾಸಿತಾನ್ ಸರ್ವಾನನುಬದ್ಧಾನಿವೇಷುಭಿಃ ॥

ಅನುವಾದ

ಆ ವಾನರರು ಶ್ರೀರಾಮನ ಬಾಣಗಳು ತಮ್ಮ ಹಿಂದೆಯೇ ಬರುತ್ತಿರುವಂತೆ ಹೆದರಿದ್ದರು. ಆ ದುಃಖಿತ ವಾನರರ ಬಳಿಗೆ ಹೋಗಿ ಸತೀಸಾಧ್ವೀ ಇನ್ನು ಹೆಚ್ಚು ದುಃಖಿತಳಾಗಿ ಅವರಲ್ಲಿ ಕೇಳಿದಳು.॥7॥

ಮೂಲಮ್ - 8

ವಾನರಾ ರಾಜಸಿಂಹಸ್ಯ ಯಸ್ಯ ಯೂಯಂ ಪುರಃಸರಾಃ ।
ತಂ ವಿಹಾಯ ಸುವಿತ್ರಸ್ತಾಃ ಕಸ್ಮಾದ್ದ್ರವತ ದುರ್ಗತಾಃ ॥

ಅನುವಾದ

ವಾನರರಿರಾ! ನೀವಾದರೋ ಆ ರಾಜಸಿಂಹ ವಾಲಿಯ ಮುಂದೆ-ಮುಂದೆ ನಡೆಯುವವರು. ಈಗ ಅವರನ್ನು ಬಿಟ್ಟು ಅತ್ಯಂತ ಭಯಗೊಂಡು ದುರ್ಗತಿಯಲ್ಲಿ ಬಿದ್ದು ಏಕೆ ಓಡಿಹೋಗುತ್ತಿರುವಿರಿ.॥8॥

ಮೂಲಮ್ - 9

ರಾಜ್ಯಹೇತೋಃ ಸ ಚೇದ್ ಭ್ರಾತಾ ಭ್ರಾತ್ರಾ ಕ್ರೂರೇಣ ಪಾತಿತಃ ।
ರಾಮೇಣ ಪ್ರಹಿತೈರ್ದೂರಾನ್ಮಾರ್ಗಣೈರ್ದೂರಪಾತಿಭಿಃ ॥

ಅನುವಾದ

ರಾಜ್ಯದ ಲೋಭದಿಂದ ಆ ಕ್ರೂರ ಸುಗ್ರೀವನು ಶ್ರೀರಾಮನನ್ನು ಪ್ರೇರೇಪಿಸಿ, ಅವನು ದೂರದಿಂದ ಬಿಟ್ಟ, ದೂರದವರೆಗೆ ಹೋಗುವ ಬಾಣಗಳಿಂದ ತನ್ನ ಅಣ್ಣನನ್ನು ಕೊಲ್ಲಿಸಿದರೆ ನೀವು ಏಕೆ ಓಡಿಹೋಗುತ್ತಿರುವಿರಿ.॥9॥

ಮೂಲಮ್ - 10

ಕಪಿಪತ್ನ್ಯಾ ವಚಃ ಶ್ರುತ್ವಾ ಕಪಯಃ ಕಾಮರೂಪಿಣಃ ।
ಪ್ರಾಪ್ತಕಾಲಮವಿಶ್ಲ್ಲಿಷ್ಟಮೂಚುರ್ವಚನಮಂಗನಾಮ್ ॥

ಅನುವಾದ

ವಾಲಿ ಪತ್ನಿಯ ಆ ಮಾತನ್ನು ಕೇಳಿ ಕಾಮರೂಪಿಗಳಾದ ಆ ವಾನರರು ಕಲ್ಯಾಣಮಯಿ ತಾರಾದೇವಿಯನ್ನು ಸಂಬೋಧಿಸುತ್ತಾ ಸರ್ವಸಮ್ಮತ ಶಬ್ದಗಳಿಂದ ಹೀಗೆ ಸಮಯೋಚಿತವಾದ ಮಾತನ್ನು ಹೇಳಿದರು.॥10॥

ಮೂಲಮ್ - 11

ಜೀವಪುತ್ರೇ ನಿವರ್ತಸ್ವ ಪುತ್ರಂ ರಕ್ಷಸ್ವ ಚಾಂಗದಮ್ ।
ಅಂತಕೋ ರಾಮರೂಪೇಣ ಹತ್ವಾ ನಯತಿ ವಾಲಿನಮ್ ॥

ಅನುವಾದ

ದೇವಿ! ಇನ್ನು ನಿನ್ನ ಪುತ್ರ ಜೀವಂತನಾಗಿದ್ದಾನೆ. ನೀನು ಮರಳಿ ಹೋಗಿ ಪುತ್ರನಾದ ಅಂಗದನನ್ನು ರಕ್ಷಿಸು. ಶ್ರೀರಾಮನ ರೂಪವನ್ನು ಧರಿಸಿ ಸಾಕ್ಷಾತ್ ಯಮರಾಜನೇ ಬಂದಿರುವನು. ಅವನು ವಾಲಿಯನ್ನು ಕೊಂದು ತನ್ನೊಂದಿಗೆ ಕೊಂಡು ಹೋಗುತ್ತಿದ್ದಾನೆ.॥11॥

ಮೂಲಮ್ - 12

ಕ್ಷಿಪ್ತಾನ್ ವೃಕ್ಷಾನ್ಸಮಾವಿಧ್ಯ ವಿಪುಲಾಶ್ವ ತಥಾ ಶಿಲಾಃ ।
ವಾಲೀ ವಜ್ರಸಮೈರ್ಬಾಣೈರ್ವಜ್ರೇಣೆವ ನಿಪಾತಿತಃ ॥

ಅನುವಾದ

ವಾಲಿಯು ಎಸೆದಿರುವ ವೃಕ್ಷಗಳನ್ನು, ದೊಡ್ಡ-ದೊಡ್ಡ ಬಂಡೆಗಳನ್ನು ತನ್ನ ವಜ್ರದಂತಹ ಬಾಣಗಳಿಂದ ಪುಡಿ-ಪುಡಿಯಾಗಿಸಿ, ವಜ್ರಧಾರೀ ಇಂದ್ರನು ತನ್ನ ವಜ್ರದಿಂದ ಮಹಾಪರ್ವತವನ್ನು ಧರಾಶಾಯಿಯಾಗಿರುವಂತೆ ಶ್ರೀರಾಮನು ವಾಲಿಯನ್ನು ಕೊಂದುಹಾಕಿದನು.॥12॥

ಮೂಲಮ್ - 13

ಅಭಿಭೂತಮಿದಂ ಸರ್ವಂ ವಿದ್ರುತಂ ವಾನರಂ ಬಲಮ್ ।
ತಸ್ಮಿನ್ ಪ್ಲವಗಶಾರ್ದೂಲೇ ಹತೇ ಶಕ್ರಸಮಪ್ರಭೇ ॥

ಅನುವಾದ

ಇಂದ್ರನಂತಹ ತೇಜಸ್ವೀ ವಾನರ ಶ್ರೇಷ್ಠ ವಾಲಿಯು ಸತ್ತುಹೋದಾಗ ಈ ವಾನರ ಸೇನೆಯಲ್ಲಿ ಶ್ರೀರಾಮನಿಂದ ಸೋತುಹೋದಂತೆ ಕಾಲಿಗೆ ಬುದ್ಧಿಹೇಳುತ್ತಿದ್ದಾರೆ.॥13॥

ಮೂಲಮ್ - 14

ರಕ್ಷ್ಯತಾಂ ನಗರೀ ಶೂರೈರಂಗದಶ್ಚಾಭಿಷಿಚ್ಯತಾಮ್ ।
ಪದಸ್ಥಂ ವಾಲಿನಃ ಪುತ್ರಂ ಭಜಿಷ್ಯಂತಿ ಪ್ಲವಂಗಮಾಃ ॥

ಅನುವಾದ

ನೀನು ಶೂರವೀರರಿಂದ ಈ ನಗರವನ್ನು ರಕ್ಷಿಸು. ಅಂಗದ ಕುಮಾರನಿಗೆ ಕಿಷ್ಕಿಂಧೆಯ ಪಟ್ಟಕಟ್ಟು. ರಾಜಸಿಂಹಾಸನದಲ್ಲಿ ಕುಳಿತಿರುವ ವಾಲಿಕುಮಾರ ಅಂಗದನನ್ನು ಎಲ್ಲ ವಾನರರು ಸೇವೆ ಮಾಡುವರು.॥14॥

ಮೂಲಮ್ - 15

ಅಥವಾರುಚಿತಂ ಸ್ಥಾನಮಿಹ ತೇ ರುಚಿರಾನನೇ ।
ಆವಿಶಂತಿ ಚ ದುರ್ಗಾಣಿ ಕ್ಷಿಪ್ರಮದ್ಯೈವ ವಾನರಾಃ ॥

ಮೂಲಮ್ - 16

ಅಭಾರ್ಯಾಃ ಸಹಭಾರ್ಯಾಶ್ಚ ಸಂತ್ಯತ್ರ ವನಚಾರಿಣಃ ।
ಲುಬ್ಧೇಭ್ಯೋ ವಿಪ್ರಲಬ್ದೇಭ್ಯಸ್ತೇಭ್ಯೋ ನಃ ಸುಮಹದ್ಭಯಮ್ ॥

ಅನುವಾದ

ಅಥವಾ ಸುಮುಖಿಯೇ! ಈಗ ಈ ನಗರದಲ್ಲಿ ನೀನು ಇರುವುದು ನಮಗೆ ಒಳ್ಳೆಯದೆನಿಸುವುದಿಲ್ಲ; ಏಕೆಂದರೆ ಕಿಷ್ಕಿಂಧೆಯ ದುರ್ಗಮ ಸ್ಥಾನಗಳಲ್ಲಿ ಈಗ ಸುಗ್ರೀವ ಪಕ್ಷದ ವಾನರರು ಶೀಘ್ರವಾಗಿ ಪ್ರವೇಶಿಸುವರು. ಇಲ್ಲಿ ಬಹಳಷ್ಟು ಭಾರೀ ವಾನರರು ಇದ್ದಾರೆ, ಅವರಲ್ಲಿ ಕೆಲವರು ತಮ್ಮ ಪತ್ನಿಯರೊಂದಿಗೆ ಇದ್ದರೆ, ಕೆಲವರು ಪತ್ನಿಯರಿಂದ ಅಗಲಿದವರು. ಅವರಿಗೆ ರಾಜ್ಯದ ಕುರಿತು ಲೋಭ ಉಂಟಾಗಿದೆ. ಅವರು ಮೊದಲು ನಮ್ಮಿಂದಾಗಿ ರಾಜ್ಯಸುಖದಿಂದ ವಂಚಿತರಾಗಿದ್ದರು. ಆದ್ದರಿಂದ ಈಗ ಅವರೆಲ್ಲರಿಂದ ನಮಗೆ ಮಹಾಭಯ ಪ್ರಾಪ್ತವಾಗಬಲ್ಲದು.॥15-16॥

ಮೂಲಮ್ - 17

ಅಲ್ಪಾಂತರಗತಾನಾಂ ತು ಶ್ರುತ್ವಾ ವಚನಮಂಗನಾ ।
ಆತ್ಮನಃ ಪ್ರತಿರೂಪಂ ಸಾ ಬಭಾಷೇ ಚಾರುಹಾಸಿನೀ ॥

ಅನುವಾದ

ಈಗ ಸ್ವಲ್ಪ ದೂರ ಬಂದ ಆ ವಾನರರ ಮಾತನ್ನು ಕೇಳಿ ಚಾರುಹಾಸಿನಿ ಕಲ್ಯಾಣೀ ತಾರೆಯು ಅವರಿಗೆ ಯೋಗ್ಯವಾಗಿ ಹೀಗೆ ಉತ್ತರಿಸಿದಳು.॥17॥

ಮೂಲಮ್ - 18

ಪುತ್ರೇಣ ಮಮ ಕಿಂ ಕಾರ್ಯಂ ರಾಜ್ಯೇನಾಪಿ ಕಿಮಾತ್ಮನಾ ।
ಕಪಿಸಿಂಹೇ ಮಹಾಭಾಗೇ ತಸ್ಮಿನ್ಭರ್ತರಿ ನಶ್ಯತಿ ॥

ಅನುವಾದ

ವಾನರರೇ! ಮಹಾಭಾಗರಾದ ಕಪಿಸಿಂಹ ನನ್ನ ಪತಿದೇವರೇ ನಷ್ಟರಾಗಿರುವಾಗ ನನಗೆ ಪುತ್ರನಿಂದ, ರಾಜ್ಯದಿಂದ ಹಾಗೂ ಈ ಜೀವನದಿಂದ ಏನು ಪ್ರಯೋಜನವಿದೆ.॥18॥

ಮೂಲಮ್ - 19

ಪಾದಮೂಲಂ ಗಮಿಷ್ಯಾಮಿ ತಸ್ಯೈವಾಹಂ ಮಹಾತ್ಮನಃ ।
ಯೋಽಸೌ ರಾಮಪ್ರಯುಕ್ತೇನ ಶರೇಣ ವಿನಿಪಾತಿತಃ ॥

ಅನುವಾದ

ನಾನಾದರೋ ಶ್ರೀರಾಮನು ಬಿಟ್ಟ ಬಾಣದಿಂದ ಸತ್ತುಹೋದ ಮಹಾತ್ಮಾವಾಲಿಯ ಚರಣಗಳ ಬಳಿಗೆ ಹೋಗುವೆನು.॥19॥

ಮೂಲಮ್ - 20

ಏವಮುಕ್ತ್ವಾ ಪ್ರದುದ್ರಾವ ರುದತೀ ಶೋಕಮೂರ್ಛಿತಾ ।
ಶಿರಶ್ಚೋರಶ್ಚ ಬಾಹುಭ್ಯಾಂ ದುಃಖೇನ ಸಮಭಿಘ್ನತೀ ॥

ಅನುವಾದ

ಹೀಗೆ ಹೇಳಿ ಶೋಕದಿಂದ ವ್ಯಾಕುಲಳಾದ ತಾರೆಯು ಅಳುತ್ತಾ, ಎರಡೂ ಕೈಗಳಿಂದ ದುಃಖಪೂರ್ವಕವಾಗಿ ತಲೆಯನ್ನು ಎದೆಯನ್ನು ಬಡಿದುಕೊಳ್ಳುತ್ತಾ ಜೋರಾಗಿ ಓಡಿದಳು.॥20॥

ಮೂಲಮ್ - 21

ಸಾ ವ್ರಜಂತಿ ದದರ್ಶಾಥ ಪತಿಂ ನಿಪತಿತಂ ಭುವಿ ।
ಹಂತಾರಂ ದಾನವೇಂದ್ರಾಣಾಂ ಸಮರೇಷ್ವನಿವರ್ತಿನಾಮ್ ॥

ಅನುವಾದ

ಮುಂದಕ್ಕೆ ಹೋಗಿ ಯುದ್ಧದಲ್ಲಿ ಎಂದೂ ಬೆನ್ನು ತೋರದಿರುವ, ದಾನವರಾಜರನ್ನು ವಧಿಸಲು ಸಮರ್ಥನಾದ, ತನ್ನ ಪತಿ ವಾನರರಾಜ ವಾಲಿಯು ಭೂಮಿಯಲ್ಲಿ ಬಿದ್ದಿರುವುದನ್ನು ತಾರೆಯು ನೋಡಿದಳು.॥21॥

ಮೂಲಮ್ - 22

ಕ್ಷೇಪ್ತಾರಂ ಪರ್ವತೇಂದ್ರಾಣಾಂ ವಜ್ರಾಣಾಮಿವ ವಾಸವಮ್ ।
ಮಹಾವಾತಸಮಾವಿಷ್ಟಂ ಮಹಾಮೇಘೌಘ ನಿಃಸ್ವನಮ್ ॥

ಮೂಲಮ್ - 23

ಶಕ್ರತುಲ್ಯಪರಾಕ್ರಾಂತಂ ವೃಷ್ಟ್ವೇವೋಪರತಂ ಘನಮ್ ।
ನರ್ದಂತಂ ನರ್ದತಾಂ ಭೀಮಂ ಶೂರಂ ಶೂರೇಣ ಪಾತಿತಮ್ ।
ಶಾರ್ದೂಲೇನಾಮಿಷಸ್ಯಾರ್ಥೇ ಮೃಗರಾಜಮಿವಾಹತಮ್ ॥

ಅನುವಾದ

ವಜ್ರಪ್ರಯೋಗಿಸುವ ಇಂದ್ರನಂತೆ ರಣರಂಗದಲ್ಲಿ ದೊಡ್ಡ-ದೊಡ್ಡ ಪರ್ವತಗಳನ್ನು ಎತ್ತಿ ಎಸೆಯುತ್ತಿದ್ದ, ಯಾರ ವೇಗವು ಪ್ರಚಂಡ ಚಂಡಮಾರುತದಂತೆ ಇತ್ತೋ, ಯಾರ ಸಿಂಹನಾದವು ಮಹಾಮೇಘ ಗಂಭೀರ ಗರ್ಜನೆಯನ್ನು ತಿರಸ್ಕರಿಸುತ್ತಿತ್ತೋ, ಇಂದ್ರನಂತೆ ಪರಾಕ್ರಮಿಯಾಗಿದ್ದನೋ, ಅವನೇ ಈಗ ಮಳೆಗರೆದು ತಣ್ಣಗಾದ ಮೋಡಗಳಂತೆ ನಿಶ್ಚೇಷ್ಟಿತನಾಗಿರುವನು. ತನ್ನ ಗರ್ಜನೆಯಿಂದ ಗರ್ಜಿಸುತ್ತಿದ್ದ ವೀರರ ಮನಸ್ಸಿನಲ್ಲಿ ಭಯವನ್ನುಂಟುಮಾಡುತ್ತಿದ್ದನೋ, ಆ ಶೂರ ವಾಲಿಯು ಒಬ್ಬ ವೀರನಿಂದ ಹತನಾಗಿ ಬಿದ್ದಿರುವನು. ಮಾಂಸಕ್ಕಾಗಿ ಒಂದು ಸಿಂಹವು ಇನ್ನೊಂದು ಸಿಂಹವನ್ನು ಕೊಂದುಹಾಕುವಂತೆ ರಾಜ್ಯಕ್ಕಾಗಿ ತನ್ನ ತಮ್ಮನ ಮೂಲಕವೇ ಇವರ ವಧೆ ಮಾಡಲಾಯಿತು.॥22-23॥

ಮೂಲಮ್ - 24

ಅರ್ಚಿತಂ ಸರ್ವಲೋಕಸ್ಯ ಸಪತಾಕಂ ಸವೇದಿಕಮ್ ।
ನಾಗಹೇತೋಃ ಸುಪರ್ಣೇನ ಚೈತ್ಯಮುನ್ಮಥಿತಂ ಯಥಾ ॥

ಅನುವಾದ

ಯಾರು ಎಲ್ಲ ಜನರಿಂದ ಪೂಜಿತನಾಗಿದ್ದು, ಎಲ್ಲಿ ಧ್ವಜ ಹಾರಾಡುತ್ತಿತ್ತೋ ಹಾಗೂ ಯಾರ ಬಳಿ ದೇವತೆಯ ವೇದಿ ಶೋಭಿಸುತ್ತಿದೆಯೋ, ಆ ಚೈತ್ಯ ವೃಕ್ಷ ಅಥವಾ ದೇವಾಲಯದಲ್ಲಿ ಅಡಗಿದ್ದ ನಾಗನನ್ನು ಗರುಡನು ನಷ್ಟ-ಭ್ರಷ್ಟವಾಗಿಸಿದ ಸ್ಥಿತಿಯಂತಹ ದುರವಸ್ಥೆ ವಾಲಿಯದಾಗಿದೆ. (ಇದೆಲ್ಲವನ್ನು ತಾರೆಯು ನೋಡಿದಳು).॥24॥

ಮೂಲಮ್ - 25

ಅವಷ್ಟಭ್ಯಾವತಿಷ್ಠಂತಂ ದದರ್ಶ ಧನುರೂರ್ಜಿತಮ್ ।
ರಾಮಂ ರಾಮಾನುಜಂ ಚೈವ ಭರ್ತುಶ್ಚೈವ ತಥಾನುಜಮ್ ॥

ಅನುವಾದ

ಮುಂದಕ್ಕೆ ಹೋಗಿ, ತನ್ನ ತೇಜಸ್ವೀ ಧನುಷ್ಯವನ್ನು ನೆಲಕ್ಕೆ ಊರಿಕೊಂಡು ಅದರ ಆಸರೆಯಿಂದ ಶ್ರೀರಾಮನು ನಿಂತಿರುವನು. ಜೊತೆಗೆ ತಮ್ಮ ಲಕ್ಷ್ಮಣನೂ ಇದ್ದಾನೆ ಹಾಗೂ ಅಲ್ಲಿಯೇ ಇದ್ದ ಸುಗ್ರೀವನನ್ನೂ ನೋಡಿದಳು.॥25॥

ಮೂಲಮ್ - 26

ತಾನತೀತ್ಯ ಸಮಾಸಾದ್ಯ ಭರ್ತಾರಂ ನಿಹತಂ ರಣೇ ।
ಸಮೀಕ್ಷ್ಯ ವ್ಯಥಿತಾ ಭೂಮೌ ಸಂಭ್ರಾಂತಾ ನಿಪಪಾತ ಹ ॥

ಅನುವಾದ

ಅವರೆಲ್ಲರನ್ನು ದಾಟಿ ಅವಳು ರಣಭೂಮಿಯಲ್ಲಿ ಗಾಯಗೊಂಡು ಬಿದ್ದಿರುವ ತನ್ನ ಪತಿಯ ಬಳಿಗೆ ಬಂದಳು. ಅವನನ್ನು ನೋಡಿ ಆಕೆಯು ಮನಸ್ಸಿನಲ್ಲಿ ಬಹಳ ವ್ಯಥಿತಳಾಗಿ ಅತ್ಯಂತ ವ್ಯಾಕುಲಳಾಗಿ ನೆಲದಲ್ಲಿ ಬಿದ್ದುಬಿಟ್ಟಳು.॥26॥

ಮೂಲಮ್ - 27

ಸುಪ್ತ್ವೇವ ಪುನರುತ್ಥಾಯ ಆರ್ಯಪುತ್ರೇತಿ ವಾದಿನೀ ।
ರುರೋದ ಸಾ ಪತಿಂ ದೃಷ್ಟ್ವಾ ಸಂವೀತಂ ಮೃತ್ಯುದಾಮಭಿಃ ॥

ಅನುವಾದ

ಮತ್ತೆ ಆಕೆಯು ನಿದ್ದೆಯಿಂದ ಎದ್ದಿರುವಂತೆ ಅಯ್ಯೋ ಆರ್ಯಪುತ್ರನೇ! ಎಂದು ಹೇಳುತ್ತಾ ಮೃತ್ಯುಪಾಶದಿಂದ ಬಂಧಿತನಾದ ಪತಿಯ ಕಡೆಗೆ ನೋಡುತ್ತಾ ಅಳತೊಡಗಿದಳು.॥27॥

ಮೂಲಮ್ - 28

ತಾಮವೇಕ್ಷ್ಯ ತು ಸುಗ್ರೀವಃ ಕ್ರೋಶಂತೀಂ ಕುರರೀಮಿವ ।
ವಿಷಾದಮಗಮತ್ ಕಷ್ಟಂ ದೃಷ್ಟ್ವಾ ಚಾಂಗದಮಾಗತಮ್ ॥

ಅನುವಾದ

ಆಗ ಕುಕರ ಪಕ್ಷಿಯಂತೆ ಕರುಣಾಕ್ರಂದನ ಮಾಡುತ್ತಿರುವ ತಾರೆ ಹಾಗೂ ಆಕೆಯೊಂದಿಗೆ ಬಂದ ಅಂಗದನನ್ನು ನೋಡಿ ಸುಗ್ರೀವನಿಗೆ ಬಹಳ ದುಃಖವಾಯಿತು. ಅವನು ವಿಷಾದದಲ್ಲಿ ಮುಳುಗಿದನು.॥28॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು. ॥19॥