०१७ वालिकृतरामनिन्दा

वाचनम्
ಭಾಗಸೂಚನಾ

ವಾಲಿಯು ಶ್ರೀರಾಮಚಂದ್ರನನ್ನು ನಿಂದಿಸಿದುದು

ಮೂಲಮ್ - 1

ತತಃ ಶರೇಣಾಭಿಹತೋ ರಾಮೇಣ ರಣಕರ್ಕಶಃ ।
ಪಪಾತ ಸಹಸಾ ವಾಲೀ ನಿಕೃತ್ತ ಇವ ಪಾದಪಃ ॥

ಅನುವಾದ

ಯುದ್ಧದಲ್ಲಿ ಕಾಠಿಣ್ಯವನ್ನು ತೋರುವ ವಾಲಿಯು ಶ್ರೀರಾಮನ ಬಾಣದಿಂದ ಗಾಯಗೊಂಡು ತುಂಡಾದ ಮರದಂತೆ ಒಮ್ಮೆಲೆ ಪೃಥಿವಿಯಲ್ಲಿ ಬಿದ್ದನು.॥1॥

ಮೂಲಮ್ - 2

ಸ ಭೂಮೌ ನ್ಯಸ್ತಸರ್ವಾಂಗಸ್ತಪ್ತಕಾಂಚನಭೂಷಣಃ ।
ಅಪತದ್ದೇವರಾಜಸ್ಯ ಮುಕ್ತರಶ್ಮಿರಿವ ಧ್ವಜಃ ॥

ಅನುವಾದ

ಅವನ ದೇಹ ಪೃಥಿವಿಯಲ್ಲಿ ಬಿದ್ದಿತ್ತು. ಕಾಯಿಸಿದ ಚಿನ್ನದ ಆಭೂಷಣಗಳು ಇನ್ನೂ ಅವನ ಶೋಭೆಯನ್ನು ಹೆಚ್ಚಿಸುತ್ತಿದ್ದವು. ಅವನು ದೇವೇಂದ್ರನ ಬಂಧನರಹಿತ ಧ್ವಜದಂತೆ ಭೂಮಿಯಲ್ಲಿ ಬಿದ್ದಿದ್ದನು.॥2॥

ಮೂಲಮ್ - 3

ಅಸ್ಮನ್ನಿಪತಿತೇ ಭೂಮೌ ಹರ್ಯೃಕ್ಷಾಣಾಂ ಗಣೇಶ್ವರೇ ।
ನಷ್ಟಚಂದ್ರಮಿವ ವ್ಯೋಮ ನ ವ್ಯರಾಜತ ಮೇದಿನೀ ॥

ಅನುವಾದ

ವಾನರರ ಮತ್ತು ಕರಡಿಗಳ ಯೂಥಪತಿ ವಾಲಿಯು ಧರಾಶಾಯಿಯಾದಾಗ ಈ ಪೃಥಿವಿಯು ಚಂದ್ರರಹಿತ ಆಕಾಶದಂತೆ ಶೋಭಾಹೀನವಾಯಿತು.॥3॥

ಮೂಲಮ್ - 4

ಭೂಮೌ ನಿಪತಿತಸ್ಯಾಪಿ ತಸ್ಯ ದೇಹಂ ಮಹಾತ್ಮನಃ ।
ನ ಶ್ರೀರ್ಜಹಾತಿ ನ ಪ್ರಾಣಾ ನ ತೇಜೋ ನ ಪರಾಕ್ರಮಃ ॥

ಅನುವಾದ

ಪೃಥಿವಿಯಲ್ಲಿ ಬಿದ್ದಿದ್ದರೂ ಮಹಾಮನಾ ವಾಲಿಯ ಶರೀರದಿಂದ ಶೋಭೆ, ಪ್ರಾಣ, ತೇಜ ಮತ್ತು ಪರಾಕ್ರಮ ಇವು ಬಿಟ್ಟುಹೋಗಿರಲಿಲ್ಲ.॥4॥

ಮೂಲಮ್ - 5

ಶಕ್ರದತ್ತಾ ವರಾ ಮಾಲಾ ಕಾಂಚನೀ ರತ್ನಭೂಷಿತಾ ।
ದಧಾರ ಹರಿಮುಖ್ಯಸ್ಥ ಪ್ರಾಣಾಂಸ್ತೇಜಃ ಶ್ರಿಯಂ ಚ ಸಾ ॥

ಅನುವಾದ

ಇಂದ್ರನು ಕೊಟ್ಟಿರುವ ರತ್ನಜಟಿತ ಶ್ರೇಷ್ಠ ಸುವರ್ಣಮಾಲೆಯು ಆ ವಾನರರಾಜನ ಪ್ರಾಣ, ತೇಜ ಮತ್ತು ಶೋಭೆಯನ್ನು ಧರಿಸಿಕೊಂಡಿತ್ತು.॥5॥

ಮೂಲಮ್ - 6

ಸ ತಯಾ ಮಾಲಯಾ ವೀರೋ ಹೈಮಯಾ ಹರಿಯೂಥಪಃ ।
ಸಂಧ್ಯಾನುಗತ್ತಪರ್ಯಂತಃ ಪಯೋಧರ ಇವಾಭವತ್ ॥

ಅನುವಾದ

ಆ ಸುವರ್ಣಮಾಲೆಯಿಂದ ವಿಭೂಷಿತನಾದ ವಾನರ ಯೂಥಪತಿ ವೀರ ವಾಲಿಯು ಸಂಧ್ಯಾಕಾಲದ ಪಶ್ಚಿಮದ ಕೆಂಪಾದ ಮೇಘದಂತೆ ಶೋಭಿಸುತ್ತಿದ್ದನು.॥6॥

ಮೂಲಮ್ - 7

ತಸ್ಯ ಮಾಲಾ ಚ ದೇಹಶ್ಚ ಮರ್ಮಘಾತೀ ಚ ಯಃ ಶರಃ ।
ತ್ರಿಧೇವ ರಚಿತಾ ಲಕ್ಷ್ಮೀಃ ಪತಿತಸ್ಯಾಪಿ ಶೋಭತೇ ॥

ಅನುವಾದ

ಪೃಥಿವಿಯಲ್ಲಿ ಬಿದ್ದಿದ್ದರೂ ವಾಲಿಯ ಆ ಸುವರ್ಣಮಾಲೆ, ಅವನ ಶರೀರ ಹಾಗೂ ಮರ್ಮಸ್ಥಳವನ್ನು ವಿದೀರ್ಣಗೊಳಿಸುವ ಆ ಬಾಣ - ಇವು ಬೇರೆ-ಬೇರೆಯಾಗಿ ಮೂರು ವಿಭಾಗದಲ್ಲಿ ವಿಭಾಗಿಸಲ್ಪಟ್ಟ ಅಂಗಲಕ್ಷ್ಮಿಯಂತೆ ಶೋಭಿಸುತ್ತಿದ್ದವು.॥7॥

ಮೂಲಮ್ - 8

ತದಸ್ತ್ರಂ ತಸ್ಯ ವೀರಸ್ಯ ಸ್ವರ್ಗಮಾರ್ಗ ಪ್ರಭಾವನಮ್ ।
ರಾಮಬಾಣಾಸನ ಕ್ಷಿಪ್ತಮಾವಹತ್ ಪರಮಾಂ ಗತಿಮ್ ॥

ಅನುವಾದ

ವೀರವರ ಶ್ರೀರಾಮನು ಬಿಟ್ಟ ಆ ಅಸ್ತ್ರವು ವಾಲಿಗೆ ಸ್ವರ್ಗದ ಮಾರ್ಗವನ್ನು ಪ್ರಕಾಶಿತಗೊಳಿಸುವ ಮತ್ತು ಅವನನ್ನು ಪರಮಪದಕ್ಕೆ ತಲುಪಿಸಿತು.॥8॥

ಮೂಲಮ್ - 9

ತಂ ತಥಾ ಪತಿತಂ ಸಂಖ್ಯೇ ಗತಾರ್ಚಿಷಮಿವಾನಲಮ್ ।
ಯಯಾತಿಮಿವ ಪುಣ್ಯಾಂತೇ ದೇವಲೋಕಾದಿಹಚ್ಯುತಮ್ ॥

ಮೂಲಮ್ - 10

ಆದಿತ್ಯಮಿವ ಕಾಲೇನ ಯುಗಾಂತೇ ಭುವಿ ಪಾತಿತಮ್ ।
ಮಹೇಂದ್ರಮಿವ ದುರ್ಧರ್ಷಮುಪೇಂದ್ರಮಿವ ದುಃಸಹಮ್ ॥

ಮೂಲಮ್ - 11

ಮಹೇಂದ್ರಪುತ್ರಂ ಪತಿತಂ ವಾಲಿನಂ ಹೇಮಮಾಲಿನಮ್ ।
ವ್ಯೂಡೋರಸ್ಕಂ ಮಹಾಬಾಹುಂ ದೀಪ್ತಾಸ್ಯಂ ಹರಿಲೋಚನಮ್ ॥

ಅನುವಾದ

ಹೀಗೆ ಯುದ್ಧರಂಗದಲ್ಲಿ ಬಿದ್ದಿರುವ ಇಂದ್ರಪುತ್ರ ವಾಲಿಯು ಜ್ವಾಲೆರಹಿತ ಅಗ್ನಿಯಂತೆ, ಪುಣ್ಯಕ್ಷೀಣವಾದಾಗ ಪುಣ್ಯಲೋಕದಿಂದ ಭೂಲೋಕಕ್ಕೆ ಬಿದ್ದ ಯಯಾತಿ ರಾಜನಂತೆ ಹಾಗೂ ಪ್ರಳಯಕಾಲದಲ್ಲಿ ಕಾಲನಿಂದ ಕೆಡಹಲ್ಪಟ್ಟ ಸೂರ್ಯನಂತೆ ಕಂಡುಬರುತ್ತಿದ್ದನು. ಅವನ ಕತ್ತಿನಲ್ಲಿ ಸ್ವರ್ಣಮಾಲೆಯು ಶೋಭಿಸುತ್ತಿತ್ತು. ಅವನು ಮಹೇಂದ್ರನಂತೆ ದುರ್ಜಯ ಮತ್ತು ಭಗವಾನ್ ವಿಷ್ಣುವಿನಂತೆ ದುಸ್ಸಹನಾಗಿದ್ದನು. ಅವನ ಎದೆ ಅಗಲವಾಗಿದ್ದು, ಭುಜಗಳು ದೊಡ್ಡದಾಗಿದ್ದವು, ಮುಖ ಪ್ರಕಾಶಮಾನವಾಗಿ, ನೇತ್ರಗಳು ಕಪಿಲವರ್ಣದ್ದಾಗಿದ್ದವು.॥9-11॥

ಮೂಲಮ್ - 12

ಲಕ್ಷ್ಮಣಾನುಚರೋ ರಾಮೋ ದದರ್ಶೋಪಸಸರ್ಪ ಚ ।
ತಂ ತಥಾ ಪತಿತಂ ವೀರಂ ಗತಾರ್ಚಿಷಮಿವಾನಲಮ್ ॥

ಮೂಲಮ್ - 13

ಬಹುಮಾನ್ಯ ಚ ತಂ ವೀರಂ ವೀಕ್ಷಮಾಣಂ ಸನೈರಿವ ।
ಉಪಯಾತೌ ಮಹಾವೀರ್ಯೌ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಲಕ್ಷ್ಮಣನೊಂದಿಗೆ ಶ್ರೀರಾಮನು ವಾಲಿಯನ್ನು ಈ ಸ್ಥಿತಿಯಲ್ಲಿ ನೋಡಿ, ಅವನ ಸಮೀಪಕ್ಕೆ ಹೋದನು. ಹೀಗೆ ಜ್ವಾಲೆರಹಿತ ಅಗ್ನಿಯಂತೆ ಅಲ್ಲಿ ಬಿದ್ದಿರುವ ಆ ವೀರನು ನಿಧಾನವಾಗಿ ನೋಡುತ್ತಿದ್ದನು. ಮಹಾಪರಾಕ್ರಮಿ ಶ್ರೀರಾಮ-ಲಕ್ಷ್ಮಣರು ಆ ವೀರನನ್ನು ವಿಶೇಷವಾಗಿ ಸಮ್ಮಾನಿಸುತ್ತಾ ಅವನ ಬಳಿಗೆ ಸಾಗಿದರು.॥12-13॥

ಮೂಲಮ್ - 14

ತಂ ದೃಷ್ಟ್ವಾ ರಾಘವಂ ವಾಲೀ ಲಕ್ಷ್ಮಣಂ ಚ ಮಹಾಬಲಮ್ ।
ಅಬ್ರವೀತ್ಪರುಷಂ ವಾಕ್ಯಂ ಪ್ರಶ್ರಿತಂ ಧರ್ಮಸಂಹಿತಮ್ ॥

ಅನುವಾದ

ಆ ಶ್ರೀರಾಮ ಮತ್ತು ಮಹಾಬಲಿ ಲಕ್ಷ್ಮಣ ನನ್ನು ನೋಡಿ ವಾಲಿಯು ಧರ್ಮ ಮತ್ತು ವಿನಯದಿಂದ ಕೂಡಿದ ಕಠೋರವಾಣಿಯಿಂದ ನುಡಿದನು.॥14॥

ಮೂಲಮ್ - 15

ಸ ಭೂಮಾವಲ್ಪತೇಜೋಽಸುರ್ನಿಹತೋ ನಷ್ಟಚೇತನಃ ।
ಅರ್ಥಸಂಹಿತಯಾ ವಾಚಾ ಗರ್ವಿತಂ ರಣಗರ್ವಿತಮ್ ॥

ಅನುವಾದ

ಈಗ ಅವನಲ್ಲಿ ತೇಜ ಹಾಗೂ ಪ್ರಾಣ ಸ್ವಲ್ಪ ಮಾತ್ರ ಉಳಿದಿತ್ತು. ಅವನು ಬಾಣದಿಂದ ಗಾಯಗೊಂಡು ನೆಲದಲ್ಲಿ ಬಿದ್ದಿದ್ದನು, ಅವನ ಚೇಷ್ಟೆಗಳು ನಿಧಾನವಾಗಿ ಲುಪ್ತವಾಗುತ್ತಾ ಇದ್ದವು. ಅವನು ಯುದ್ಧದಲ್ಲಿ ಗರ್ವಯುಕ್ತ ಪರಾಕ್ರಮ ಪ್ರಕಟಿಸುವ ಗರ್ವಿಷ್ಟ ನಾದ ಶ್ರೀರಾಮನಲ್ಲಿ ಕಠೋರವಾಣಿಯಿಂದ ಹೀಗೆ ಹೇಳಲು ಪ್ರಾರಂಭಿಸಿದನು.॥15॥

ಮೂಲಮ್ - 16

ತ್ವಂ ನರಾಧಿಪತೇಃ ಪುತ್ರಃ ಪ್ರಥಿತಃ ಪ್ರಿಯದರ್ಶನಃ ।
ಪರಾಙ್ಮುಖವಧಂ ಕೃತ್ವಾ ಕೋಽತ್ರ ಪ್ರಾಪ್ತಸ್ತ್ವಯಾ ಗುಣಃ ।
ಯದಹಂ ಯುದ್ಧಸಂರಬ್ಧಸ್ತ್ವತ್ಕೃತೇ ನಿಧನಂ ಗತಃ ॥

ಅನುವಾದ

ರಘುನಂದನ! ನೀನು ದಶರಥ ಮಹಾರಾಜನ ಸುವಿಖ್ಯಾತ ಪುತ್ರನಾಗಿರುವೆ. ನಿನ್ನ ದರ್ಶನ ಎಲ್ಲರಿಗೆ ಪ್ರಿಯವಾಗಿದೆ. ನಾನು ನಿನ್ನೊಂದಿಗೆ ಯುದ್ಧ ಮಾಡಲು ಬಂದಿರಲಿಲ್ಲ. ನಾನಾದರೋ ಬೇರೊಬ್ಬನೊಡನೆ ಯುದ್ಧದಲ್ಲಿ ವ್ಯಸ್ತನಾಗಿದ್ದೆ. ಆ ಸ್ಥಿತಿಯಲ್ಲಿ ನನ್ನನ್ನು ವಧಿಸಿ ಯಾವ ಗುಣವನ್ನು ಪಡೆದೆ ಯಾವ ಮಹಾಯಶವನ್ನು ಸಂಪಾದಿಸಿದೆ? ಏಕೆಂದರೆ ನಾನು ಯುದ್ಧಕ್ಕಾಗಿ ಬೇರೆಯವನ ಕುರಿತು ರೋಷ ಪ್ರಕಟಿಸುತ್ತಿದ್ದೆ, ಆದರೆ ನಿನ್ನಂದಾಗಿ ನಡುವೆಯೇ ಸತ್ತುಹೋದೆ.॥16॥

ಮೂಲಮ್ - 17

ಕುಲೀನಃ ಸತ್ತ್ವಸಂಪನ್ನಸ್ತೇಜಸ್ವೀ ಚರಿತವ್ರತಃ ।
ರಾಮಃ ಕರುಣವೇದೀಚ ಪ್ರಜಾನಾಂ ಚ ಹಿತೇ ರತಃ ॥

ಮೂಲಮ್ - 18

ಸಾನುಕ್ರೋಶೋ ಮಹೋತ್ಸಾಹಃ ಸಮಯಜ್ಞೋ ದೃಢವ್ರತಃ ।
ಇತ್ಯೇತತ್ ಸರ್ವಭೂತಾನಿ ಕಥಯಂತಿ ಯಶೋ ಭುವಿ ॥

ಅನುವಾದ

ಈ ಭೂಮಂಡಲದಲ್ಲಿ ಎಲ್ಲ ಪ್ರಾಣಿಗಳು ನಿನ್ನ ಯಶವನ್ನು ವರ್ಣಿಸುತ್ತಾ- ಶ್ರೀರಾಮಚಂದ್ರನು ಕುಲೀನ, ಸತ್ತ್ವಗುಣ ಸಂಪನ್ನ, ತೇಜಸ್ವೀ, ಉತ್ತಮ ವ್ರತವನ್ನು ಆಚರಿಸುವವನು, ಕರುಣೆಯನ್ನು ಅನುಭವಿಸುವವನು, ಪ್ರಜೆಯ ಹಿತೈಷಿ, ದಯಾಳು, ಮಹಾ ಉತ್ಸಾಹೀ, ಸಮಯೋಚಿತ ಕಾರ್ಯ ಹಾಗೂ ಸದಾಚಾರದ ಜ್ಞಾನೀ ಮತ್ತು ದೃಢ ಪ್ರತಿಜ್ಞ ಎಂದು ಹೇಳುತ್ತಾರೆ.॥17-18॥

ಮೂಲಮ್ - 19

ದಮಃ ಶಮಃ ಕ್ಷಮಾ ಧರ್ಮೋ ಧೃತಿಃ ಸತ್ಯಂ ಪರಾಕ್ರಮಃ ।
ಪಾರ್ಥಿವಾನಾಂ ಗುಣಾ ರಾಜನ್ ದಂಡಶ್ಚಾಪ್ಯಪಕಾರಿಧಿಷು ॥

ಅನುವಾದ

ರಾಜನೇ! ಇಂದ್ರಿಯ ನಿಗ್ರಹ, ಮನಸ್ಸಿನ ಸಂಯಮ, ಕ್ಷಮೆ, ಧರ್ಮ, ಧೈರ್ಯ, ಸತ್ಯ, ಪರಾಕ್ರಮ ಹಾಗೂ ಅಪರಾಧಿಗಳನ್ನು ದಂಡಿಸುವುದು - ಇವು ರಾಜನ ಗುಣಗಳಾಗಿವೆ.॥19॥

ಮೂಲಮ್ - 20

ತಾನ್ ಗುಣಾನ್ಸಂಪ್ರಧಾರ್ಯಾಹಮಗ್ರ್ಯಂ ಚಾಭಿಜನಂ ತವ ।
ತಾರಯಾ ಪ್ರತಿಷಿದ್ಧಃ ಸನ್ ಸುಗ್ರೀವೇಣ ಸಮಾಗತಃ ॥

ಅನುವಾದ

ನಾನು ನಿನ್ನಲ್ಲಿ ಇವೆಲ್ಲ ಗುಣಗಳ ಕುರಿತು ವಿಶ್ವಾಸವಿಟ್ಟು, ನಿನ್ನ ಉತ್ತಮ ಕುಲವನ್ನು ನೆನೆದು ತಾರೆಯು ತಡೆದರೂ ಸುಗ್ರೀವನೊಂದಿಗೆ ಕಾದಲು ಬಂದುಬಿಟ್ಟೆ.॥20॥

ಮೂಲಮ್ - 21

ನ ಮಾಮನ್ಯೇನ ಸಂರಭ್ದಂ ಪ್ರಮತ್ತಂ ವೇದ್ಧುಮರ್ಹತಿ ।
ಇತಿ ಮೇ ಬುದ್ಧಿರುತ್ಪನ್ನಾ ಬಭೂವಾದರ್ಶನೇ ತವ ॥

ಅನುವಾದ

ನಾನು ನಿನ್ನನ್ನು ನೋಡದಿರುವ ತನಕ ಬೇರೆಯವನೊಡನೆ ರೋಷದಿಂದ ಕಾದಾಡುತ್ತಿರುವ ನನ್ನನ್ನು ಸಾವಧಾನವಿಲ್ಲದ ಸ್ಥಿತಿಯಲ್ಲಿ ನೀನು ಬಾಣದಿಂದ ಹೊಡೆಯುವುದು ಉಚಿತವೆಂದು ತಿಳಿಯಲಾರೆ ಎಂದೇ ನನ್ನ ಮನಸ್ಸಿನಲ್ಲಿ ವಿಚಾರವಿತ್ತು.॥21॥

ಮೂಲಮ್ - 22

ಸ ತ್ವಾಂ ವಿನಿಹತಾತ್ಮಾನಂ ಧರ್ಮಧ್ವಜಮಧಾರ್ಮಿಕಮ್ ।
ಜಾನೇ ಪಾಪಸಮಾಚಾರಂ ತೃಣೈಃ ಕೂಪಮಿವಾವೃತಮ್ ॥

ಅನುವಾದ

ಆದರೆ ಇಂದು ನಿನ್ನ ಬುದ್ಧಿ ನಾಶವಾಗಿದೆ ಎಂದು ನನಗೆ ತಿಳಿಯಿತು. ನೀನು ಧರ್ಮಧ್ವಜಿಯಾಗಿರುವೆ. ತೋರಿಕೆಗೆ ಧರ್ಮದ ಮುಸುಕು ಧರಿಸಿರುವೆ. ವಾಸ್ತವವಾಗಿ ಅಧರ್ಮಿಯೇ ಆಗಿರುವೆ. ನಿನ್ನ ಆಚಾರ ವ್ಯವಹಾರ ಪಾಪಪೂರ್ಣವಾಗಿದೆ. ನೀನು ಹುಲ್ಲು ಮುಚ್ಚಿದ ಬಾವಿಯಂತೆ ಮೋಸ ಮಾಡುವವನಾಗಿರುವೆ.॥22॥

ಮೂಲಮ್ - 23

ಸತಾಂ ವೇಷಧರಂ ಪಾಪಂ ಪ್ರಚ್ಛನ್ನಮಿವ ಪಾವಕಮ್ ।
ನಾಹಂ ತ್ವಾಮಭಿಜಾನಾಮಿ ಧರ್ಮಚ್ಛದ್ಮಾಭಿಸಂವೃತಮ್ ॥

ಅನುವಾದ

ನೀನು ಸಾಧು ಪುರುಷರಂತೆ ವೇಷ ತೊಟ್ಟಿರುವೆ; ಆದರೆ ಪಾಪಿಯಾಗಿರುವೆ. ಬೂದಿ ಮುಚ್ಚಿದ ಕೆಂಡದಂತೆ ನಿನ್ನ ನಿಜವಾದ ರೂಪ ಸಾಧುವೇಷದಲ್ಲಿ ಅಡಗಿಕೊಂಡಿದೆ. ನೀನು ಜನರನ್ನು ಮೋಸಗೊಳಿಸಲೆಂದೇ ಧರ್ಮವನ್ನು ಮುಂದು ಮಾಡಿರುವೆ ಎಂದು ನಾನು ತಿಳಿದಿರಲಿಲ್ಲ.॥23॥

ಮೂಲಮ್ - 24

ವಿಷಯೇ ವಾ ಪುರೇ ವಾ ತೇ ಯದಾ ಪಾಪಂ ಕರೋಮ್ಯಹಮ್ ।
ನ ಚ ತ್ವಾಮವಜಾನೇಽಹಂ ಕಸ್ಮಾತ್ತ್ವಂ ಹಂಸ್ಯಕಿಲ್ಬಿಷಮ್ ॥

ಅನುವಾದ

ನಾನು ನಿನ್ನ ರಾಜ್ಯದಲ್ಲಿ, ನಗರದಲ್ಲಿ ಯಾವುದೇ ಉಪದ್ರವ ಮಾಡದಿದ್ದಾಗ, ನಿನ್ನನ್ನು ತಿರಸ್ಕರಿಸದಿದ್ದಾಗಲೂ ನೀನು ನಿರಪರಾಧಿಯಾದ ನನ್ನನ್ನು ಏಕೆ ಕೊಂದೆ.॥24॥

ಮೂಲಮ್ - 25

ಫಲಮೂಲಾಶನಂ ನಿತ್ಯಂ ವಾನರಂ ವನಗೋಚರಮ್ ।
ಮಾಮಿಹಾಪ್ರತಿಯುಧ್ಯಂತಮನ್ಯೇನ ಚ ಸಮಾಗತಮ್ ॥

ಅನುವಾದ

ನಾನು ಸದಾ ಫಲ-ಮೂಲವನ್ನು ಭುಂಜಿಸುತ್ತಾ, ಕಾಡಿನಲ್ಲೇ ಸಂಚರಿಸುವ ವಾನರನಾಗಿದ್ದೇನೆ, ನಾನು ಇಲ್ಲಿ ನಿನ್ನೊಂದಿಗೆ ಯುದ್ಧಮಾಡುತ್ತಿರಲಿಲ್ಲ, ಬೇರೆಯವನೊಡನೆ ಕಾಳಗ ನಡೆಯುತ್ತಿತ್ತು. ಹೀಗಿದ್ದರೂ ಅಪರಾಧವಿಲ್ಲದೆ ನನ್ನನ್ನು ಏಕೆ ವಧಿಸಿದೆ.॥25॥

ಮೂಲಮ್ - 26

ತ್ವಂ ನರಾಧಿಪತೇಃ ಪುತ್ರಃ ಪ್ರತೀತಃ ಪ್ರಿಯದರ್ಶನಃ ।
ಲಿಂಗಮಪ್ಯಸ್ತಿ ತೇ ರಾಜನ್ ದೃಶ್ಯತೇ ಧರ್ಮಸಂಹಿತಮ್ ॥

ಅನುವಾದ

ರಾಜನೇ! ನೀನು ಒಬ್ಬ ಸಮ್ಮಾನನೀಯ ನರೇಶನ ಪುತ್ರನಾಗಿರುವೆ. ವಿಶ್ವಾಸಕ್ಕೆ ಯೋಗ್ಯನಾಗಿದ್ದು, ಪ್ರಿಯದರ್ಶನನಾಗಿರುವೆ. ನಿನ್ನಲ್ಲಿ ಧರ್ಮದ ಸಾಧನಭೂತ ಚಿಹ್ನೆಯಾದ ಜಟಾ-ವಲ್ಕಲಗಳೂ ಕಂಡುಬರುತ್ತಿವೆ.॥26॥

ಮೂಲಮ್ - 27

ಕಃ ಕ್ಷತ್ರಿಯಕುಲೇ ಜಾತಃ ಶ್ರುತವಾನ್ ನಷ್ಟಸಂಶಯಃ ।
ಧರ್ಮಲಿಂಗಪ್ರತಿಚ್ಛನ್ನಃ ಕ್ರೂರಂಕರ್ಮ ಸಮಾಚರೇತ್ ॥

ಅನುವಾದ

ಕ್ಷತ್ರಿಯ ಕುಲದಲ್ಲಿ ಹುಟ್ಟಿದ, ಶಾಸ್ತ್ರಜ್ಞಾನಿಯಾದ, ಸಂಶಯರಹಿತ ಹಾಗೂ ಧಾರ್ಮಿಕ ವೇಷ ಭೂಷಣಗಳಿಂದ ಒಡಗೂಡಿದ್ದರೂ ಯಾವ ಪುರುಷನು ತಾನೆ ಇಂತಹ ಕ್ರೂರಕರ್ಮವನ್ನು ಮಾಡಬಲ್ಲನು.॥27॥

ಮೂಲಮ್ - 28

ತ್ವಂ ರಾಘವಕುಲೇ ಜಾತೋ ಧರ್ಮವಾನಿತಿ ವಿಶ್ರುತಃ ।
ಅಭವ್ಯೋ ಭವ್ಯರೂಪೇಣ ಕಿಮರ್ಥಂ ಪರಿಧಾವಸೇ ॥

ಅನುವಾದ

ಮಹಾರಾಜಾ! ರಘುಕುಲದಲ್ಲಿ ನೀನು ಆವಿರ್ಭವಿಸಿರುವೆ. ನೀನು ಧರ್ಮಾತ್ಮನೆಂದು ಪ್ರಸಿದ್ಧನಾಗಿದ್ದರೂ ಇಂತಹ ಕ್ರೂರತೆ ಹೊರಟಿದೆ. ಇದೇ ನಿನ್ನ ನಿಜವಾದ ರೂಪವಾಗಿದ್ದರೆ, ಯಾತಕ್ಕಾಗಿ ಮೇಲಿನಿಂದ ಈ ಭವ್ಯ ಸಾಧು ಪುರುಷರಂತೆ ರೂಪ ಧರಿಸಿ ಎಲ್ಲೆಡೆ ಓಡಾಡುತ್ತಿರುವೆ.॥28॥

ಮೂಲಮ್ - 29

ಸಾಮ ದಾನಂ ಕ್ಷಮಾ ಧರ್ಮಃ ಸತ್ಯಂ ಧೃತಿಪರಾಕ್ರಮೌ ।
ಪಾರ್ಥಿವಾನಾಂ ಗುಣಾ ರಾಜನ್ ದಂಡಶ್ಚಾಪ್ಯಪರಾಧಿಷು ॥

ಅನುವಾದ

ರಾಜನೇ! ಸಾಮ, ದಾನ, ಕ್ಷಮೆ, ಧರ್ಮ, ಸತ್ಯ, ಧೃತಿ, ಪರಾಕ್ರಮ ಮತ್ತು ಅಪರಾಧಿಗಳನ್ನು ದಂಡಿಸುವುದು - ಇವು ಭೂಮಿಪಾಲರ ಗುಣಗಳಾಗಿವೆ.॥29॥

ಮೂಲಮ್ - 30

ವಯಂ ವನಚರಾ ರಾಮ ಮೃಗಾ ಮೂಲಫಲಾಶಿನಃ ।
ಏಷಾ ಪ್ರಕೃತಿರಸ್ಮಾಕಂ ಪುರುಷಸ್ತ್ವಂ ನರೇಶ್ವರಃ ॥

ಅನುವಾದ

ನರೇಶ್ವರ ರಾಮಾ! ನಾವು ಫಲ-ಮೂಲ ತಿನ್ನುವ ವನಚಾರೀ ಮೃಗವಾಗಿದ್ದೇವೆ. ಇದೇ ನಮ್ಮ ಪ್ರಕೃತಿಯಾಗಿದೆ. ಆದರೆ ನೀವಾದರೋ ಮನುಷ್ಯರಾಗಿದ್ದೀರಿ. (ಆದ್ದರಿಂದ ನಮ್ಮೊಂದಿಗೆ ನಿಮಗೆ ವೈರದ ಯಾವ ಕಾರಣವೂ ಇಲ್ಲ..॥30॥

ಮೂಲಮ್ - 31

ಭೂಮಿರ್ಹಿರಣ್ಯಂ ರೂಪಂ ಚ ವಿಗ್ರಹೇ ಕಾರಣಾನಿ ಚ ।
ತತ್ರ ಕಸ್ತೇ ವನೇ ಲೋಭೋ ಮದೀಯೇಷು ಫಲೇಷು ವಾ ॥

ಅನುವಾದ

ಭೂಮಿ, ಚಿನ್ನ, ಬೆಳ್ಳಿ - ಇವೇ ವಸ್ತುಗಳಿಗಾಗಿ ರಾಜರಲ್ಲಿ ಪರಸ್ಪರ ಯುದ್ಧಗಳಾಗುತ್ತವೆ. ಇವೇ ಮೂರು ಕಲಹದ ಮೂಲ ಕಾರಣಗಳಾಗಿವೆ. ಆದರೆ ಇಲ್ಲಿ ಅದ್ಯಾವುದೂ ಇಲ್ಲ. ಈ ದಿಕ್ಕಿನಲ್ಲಿ, ಈ ವನದಲ್ಲಿ ಅಥವಾ ನಮ್ಮ ಫಲಗಳಲ್ಲಿ ನಿನಗೆ ಏಕೆ ಲೋಭ ಉಂಟಾಗಬಲ್ಲದು.॥31॥

ಮೂಲಮ್ - 32

ನಯಶ್ಚ ವಿನಯಶ್ಚೋಭೌ ವಿಗ್ರಹಾನುಗ್ರಹಾವಪಿ ।
ರಾಜ್ಯಾವೃತ್ತಿರಸಂಕೀರ್ಣಾ ನ ನೃಪಾಃ ಕಾಮವೃತ್ತಯಃ ॥

ಅನುವಾದ

ನೀತಿ ಮತ್ತು ವಿನಯ, ದಂಡ ಮತ್ತು ಅನುಗ್ರಹ - ಇವು ರಾಜಧರ್ಮಗಳಾಗಿವೆ, ಆದರೆ ಇವುಗಳ ಉಪಯೋಗ ಬೇರೆ-ಬೇರೆ ಸಂದರ್ಭಗಳಲ್ಲಿ ಇದೆ. (ಇವನ್ನು ಅವಿವೇಕದಿಂದ ಉಪಯೋಗಿಸುವುದು ಉಚಿತವಲ್ಲ) ರಾಜರು ಸ್ವೇಚ್ಛಾಚಾರಿಗಳಾಗಬಾರದು.॥32॥

ಮೂಲಮ್ - 33

ತ್ವಂ ತು ಕಾಮಪ್ರಧಾನಶ್ಚ ಕೋಪನಶ್ಚಾನವಸ್ಥಿತಃ ।
ರಾಜ್ಯವೃತ್ತೈಶ್ಚ ಸಂಕೀರ್ಣಃ ಶರಾಸನಪರಾಯಣಃ ॥

ಅನುವಾದ

ಆದರೆ ನೀನಾದರೋ ಕಾಮಕ್ಕೆ ಗುಲಾಮ, ಕ್ರೋಧೀ ಮತ್ತು ಮೇರೆ ಮೀರಿದ ಚಂಚಲನಾಗಿರುವೆ. ನಯ-ವಿನಯಾದಿ ರಾಜರ ಧರ್ಮಗಳನ್ನು ಅವಕಾಶದ ವಿಚಾರ ಮಾಡದೆಯೇ ಎಲ್ಲೆಂದರಲ್ಲಿ ಬಾಣಗಳನ್ನು ಬಿಡುತ್ತಾ, ಎಲ್ಲೆಂದರಲ್ಲಿ ತಿರುಗುತ್ತಾ ಇರುವೆ.॥33॥

ಮೂಲಮ್ - 34

ನ ತೇಽಸ್ತ್ಯಪಚಿತಿರ್ಧರ್ಮೇ ನಾರ್ಥೇ ಬುದ್ಧಿರವಸ್ಥಿತಾ ।
ಇಂದ್ರಿಯೈಃ ಕಾಮವೃತ್ತಃ ಸನ್ ಕೃಷ್ಯಸೇ ಮನುಜೇಶ್ವರ ॥

ಅನುವಾದ

ನಿನಗೆ ಧರ್ಮದ ವಿಷಯದಲ್ಲಿ ಆದರವಿಲ್ಲ ಹಾಗೂ ಅರ್ಥಸಾಧನೆಯಲ್ಲಿ ನಿನ್ನ ಬುದ್ಧಿಯು ಸ್ಥಿರವಾಗಿಲ್ಲ. ನರೇಶ್ವರನೇ! ನೀನು ಸ್ವೇಚ್ಛಾಚಾರಿಯಾಗಿರುವೆ. ಅದಕ್ಕಾಗಿ ನಿನ್ನ ಇಂದ್ರಿಯಗಳು ನಿನ್ನನ್ನು ಎಲ್ಲಿಗೆ ಬೇಕಾದರೂ ಎಳೆದುಕೊಂಡು ಹೋಗುತ್ತವೆ.॥34॥

ಮೂಲಮ್ - 35

ಹತ್ವಾ ಬಾಣೇನ ಕಾಕುತ್ಸ್ಥ ಮಾಮಿಹಾನಪರಾಧಿನಮ್ ।
ಕಿಂ ವಕ್ಷ್ಯಸಿ ಸತಾಂ ಮಧ್ಯೇ ಕರ್ಮ ಕೃತ್ವಾ ಜುಗುಪ್ಸಿತಮ್ ॥

ಅನುವಾದ

ಕಾಕುತ್ಸ್ಥನೇ! ನಾನು ಸರ್ವಥಾ ನಿರಪರಾಧಿಯಾಗಿದ್ದೆ, ಆದರೂ ಕೂಡ ಇಲ್ಲಿ ನನ್ನನ್ನು ಬಾಣದಿಂದ ಹೊಡೆಯುವ ನಿಂದಿತ ಕರ್ಮಮಾಡಿದ ನೀನು ಸತ್ಪುರುಷರ ನಡುವೆ ಏನು ಹೇಳುವೆ.॥35॥

ಮೂಲಮ್ - 36

ರಾಜಹಾ ಬ್ರಹ್ಮಹಾ ಗೋಘ್ನಶ್ಚೋರಃ ಪ್ರಾಣಿವಧೇ ರತಃ ।
ನಾಸ್ತಿಕಃ ಪರಿವೇತ್ತಾ ಚ ಸರ್ವೇ ನಿರಯಗಾಮಿನಃ ॥

ಅನುವಾದ

ರಾಜನನ್ನು ವಧಿಸುವವನು, ಬ್ರಹ್ಮಘಾತಿ, ಗೋಘಾತಿ, ಕಳ್ಳ, ಪ್ರಾಣಿಗಳ ಹಿಂಸೆಯಲ್ಲಿ ತತ್ಪರನಾದವನು, ನಾಸ್ತಿಕ ಮತ್ತು ಪರಿವೇತ್ತಾ (ಅಣ್ಣನು ಅವಿವಾಹಿತನಾಗಿದ್ದಾಗ ತಮ್ಮನು ಮದುವೆ ಮಾಡಿಕೊಂಡಿರುವ) ಇವರೆಲ್ಲರೂ ನರಕವಾಸಿಗಳಾಗುತ್ತಾರೆ.॥36॥

ಮೂಲಮ್ - 37

ಸೂಚಕಶ್ಚ ಕದರ್ಯಶ್ಚ ಮಿತ್ರಘ್ನೋ ಗುರುತಲ್ಪಗಃ ।
ಲೋಕಂ ಪಾಪಾತ್ಮನಾಮೇತೇ ಗಚ್ಛಂತೇ ನಾತ್ರ ಸಂಶಯಃ ॥

ಅನುವಾದ

ಚಾಡಿ ಹೇಳುವವ, ಲೋಭಿ, ಮಿತ್ರಘಾತಿ, ಗುರುತಲ್ಪಗಾಮಿ - ಇವರು ಪಾಪಾತ್ಮರ ಲೋಕಕ್ಕೆ ಹೋಗುತ್ತಾರೆ. ಇದರಲ್ಲಿ ಸಂಶಯವೇ ಇಲ್ಲ.॥37॥

ಮೂಲಮ್ - 38

ಅಧಾರ್ಯಂ ಚರ್ಮ ಮೇ ಸದ್ಭೀ ರೋಮಾಣ್ಯಸ್ಥಿ ಚ ವರ್ಜಿತಮ್ ।
ಅಭಕ್ಷ್ಯಾಣಿ ಚ ಮಾಂಸಾನಿ ತ್ವದ್ವಿಧೈರ್ಧರ್ಮಚಾರಿಭಿಃ ॥

ಅನುವಾದ

ವಾನರರಾದ ನಮ್ಮ ಚರ್ಮವೂ ಕೂಡ ಸತ್ಪುರುಷರು ಧರಿಸುವುದಕ್ಕೆ ಯೋಗ್ಯವಲ್ಲ. ನಮ್ಮ ರೋಮ, ಅಸ್ತಿಗಳೂ ವರ್ಜಿತವಾಗಿವೆ (ಮುಟ್ಟಲು ಯೋಗ್ಯವಲ್ಲ) ನಿನ್ನಂತಹ ಧರ್ಮಚಾರೀ ಪುರುಷರಿಗೆ ಮಾಂಸವು ಸದಾ-ಅಭಕ್ಷವಾಗಿದೆ, ಹೀಗಿದ್ದರೂ ಯಾವ ಲೋಭದಿಂದ ವಾನರನಾದ ನನ್ನನ್ನು ನೀನು ಬಾಣಕ್ಕೆ ಗುರಿಯಾಗಿಸಿದೆ.॥38॥

ಮೂಲಮ್ - 39

ಪಂಚಪಂಚನಖಾ ಭಕ್ಷ್ಯಾ ಬ್ರಹ್ಮಕ್ಷತ್ರೇಣ ರಾಘವ ।
ಶಲ್ಯಕಃ ಶ್ವಾವಿಧೋ ಗೋಧಾ ಶಶಃ ಕೂರ್ಮಶ್ಚ ಪಂಚಮಃ ॥

ಅನುವಾದ

ರಘುನಂದನ! ತ್ರಿವರ್ಣಿಯರಲ್ಲಿ ಯಾರಿಗಾದರೂ ಯಾವುದೇ ಕಾರಣದಿಂದ ಮಾಂಸಾಹಾರದಲ್ಲಿ ಪ್ರವೃತ್ತಿ ಉಂಟಾದರೆ, ಅವರಿಗೂ ಕೂಡ ಐದು ಉಗುರುಳ್ಳವುಗಳಲ್ಲಿ - ಖಡ್ಗಮೃಗ, ಮುಳ್ಳುಹಂದಿ, ಉಡ, ಮೊಲ ಮತ್ತು ಆಮೆ ಈ ಐದು ಪ್ರಾಣಿಗಳೇ ಭಕ್ಷಿಸಲು ಯೋಗ್ಯವಾಗಿವೆ.॥39॥

ಮೂಲಮ್ - 40

ಚರ್ಮಚಾಸ್ಥಿ ಚ ಮೇ ರಾಮನಸ್ಪೃಶಂತಿ ಮನೀಷಿಣಃ ।
ಅಭಕ್ಷ್ಯಾಣಿ ಚ ಮಾಂಸಾನಿ ಸೋಽಹಂ ಪಂಚನಖೋ ಹತಃ ॥

ಅನುವಾದ

ಶ್ರೀರಾಮ! ಶ್ರೇಷ್ಠ ಪುರುಷರು ನನ್ನ (ವಾನರ) ಚರ್ಮ, ಎಲುಬನ್ನು ಸ್ಪರ್ಶಿಸುವುದಿಲ್ಲ. ಎಲ್ಲರಿಗೂ ನಿಷಿದ್ಧವಾಗಿದೆ. ಹೀಗೆ ಎಲ್ಲವೂ ನಿಷಿದ್ಧನಾದ ಐದು ನಖಗಳುಳ್ಳ ನಾನು ಇಂದು ನಿನ್ನ ಕೈಯಲ್ಲಿ ಸತ್ತುಹೋದೆ.॥40॥

ಮೂಲಮ್ - 41

ತಾರಯಾ ವಾಕ್ಯಮುಕ್ತೋಽಹಂ ಸತ್ಯಂ ಸರ್ವಜ್ಞಯಾ ಹಿತಮ್ ।
ತದತಿಕ್ರಮ್ಯ ಮೋಹೇನ ಕಾಲಸ್ಯ ವಶಮಾಗತಃ ॥

ಅನುವಾದ

ನನ್ನ ಪತ್ನಿ ತಾರೆಯು ಸರ್ವಜ್ಞಳಾಗಿದ್ದಾಳೆ. ಅವಳು ನನಗೆ ಸತ್ಯವಾದ ಹಿತದ ಮಾತನ್ನು ಹೇಳಿದ್ದಳು. ಆದರೆ ನಾನು ಮೋಹ ವಶದಿಂದ ಅದನ್ನು ಉಲ್ಲಂಘಿಸಿ ಕಾಲಕ್ಕೆ ವಶನಾದೆನು.॥41॥

ಮೂಲಮ್ - 42

ತ್ವಯಾ ನಾಥೇನ ಕಾಕುತ್ಸ್ಥ ನ ಸನಾಥಾ ವಸುಂಧರಾ ।
ಪ್ರಮದಾ ಶೀಲ ಸಂಪೂರ್ಣಾ ಪತ್ಯೇವ ಚ ವಿಧರ್ಮಣಾ ॥

ಅನುವಾದ

ಕಾಕುತ್ಸ್ಥನೇ! ಸುಶೀಲಳಾದ ಯುವತಿ ಪಾಪಾತ್ಮನಿಂದ ಸುರಕ್ಷಿತಳಾಗಿ ರುವುದಿಲ್ಲ, ಅದರಂತೆ ನಿನ್ನಂತಹ ಸ್ವಾಮಿಯನ್ನು ಪಡೆದ ಈ ವಸುಂಧರೆ ಅನಾಥಳಾಗಿರುವಳು.॥42॥

ಮೂಲಮ್ - 43

ಶಠೋ ನೈಕೃತಿಕಃ ಕ್ಷುದ್ರೋ ಮಿಥ್ಯಾಪ್ರಶ್ರಿತಮಾನಸಃ ।
ಕಥಂ ದಶರಥೇನ ತ್ವಂ ಜಾತಃ ಪಾಪೋ ಮಹಾತ್ಮನಾ ॥

ಅನುವಾದ

ನೀನು ಶಠ (ಹಿಂದಿನಿಂದ ಇತರರ ಅಪ್ರಿಯ ಮಾಡುವವನು), ಅಪಕಾರಿ, ಕ್ಷುದ್ರ, ಸುಳ್ಳುಗಾರನಾದ ನಿನ್ನಂತಹ ಪಾಪಿಯನ್ನು ಮಗನಾಗಿ ಶಾಂತಚಿತ್ತನಾದ ಮಹಾತ್ಮಾ ದಶರಥನು ಹೇಗೆ ಪಡೆದನು.॥43॥

ಮೂಲಮ್ - 44

ಛಿನ್ನಚಾರಿತ್ರಕಕ್ಷ್ಯೇಣ ಸತಾಂ ಧರ್ಮಾತಿವರ್ತಿನಾ ।
ತ್ಯಕ್ತಧರ್ಮಾಂಕುಶೇನಾಹಂ ನಿಹತೋ ರಾಮಹಸ್ತಿನಾ ॥

ಅನುವಾದ

ಅಯ್ಯೋ! ಸದಾಚಾರದ ಹಗ್ಗವನ್ನು ಹರಿದ, ಸತ್ಪುರುಷರ ಧರ್ಮ ಹಾಗೂ ಮೇರೆಯನ್ನು ಮೀರಿದ, ಧರ್ಮರೂಪೀ ಅಂಕುಶವನ್ನು ಅವಹೇಳನ ಮಾಡಿದ ರಾಮರೂಪೀ ಆನೆಯ ಕೈಯಿಂದ ಇಂದು ನಾನು ಸತ್ತುಹೋದೆ.॥44॥

ಮೂಲಮ್ - 45

ಅಶುಭಂ ಚಾಪ್ಯಯುಕ್ತಂ ಚ ಸತಾಂ ಚೈವ ವಿಗರ್ಹಿತಮ್ ।
ವಕ್ಷ್ಯಸೇ ಚೇದೃಶಂ ಕೃತ್ವಾ ಸದ್ಭಿಃ ಸಹ ಸಮಾಗತಃ ॥

ಅನುವಾದ

ಇಂತಹ ಅಶುಭ, ಅನುಚಿತ ಮತ್ತು ಸತ್ಪುರುಷರಿಂದ ನಿಂದಿತವಾದ ಕರ್ಮಮಾಡಿ ನೀನು ಶ್ರೇಷ್ಠ ಪುರುಷರು ಸಿಕ್ಕಿದಾಗ ಅವರ ಮುಂದೆ ಏನು ಹೇಳುವೆ.॥45॥

ಮೂಲಮ್ - 46

ಉದಾಸೀನೇಷು ಯೋಽಸ್ಮಾಸು ವಿಕ್ರಮೋಽಯಂ ಪ್ರಕಾಶಿತಃ ।
ಅಪಕಾರಿಷು ತಂ ರಾಮ ನೈವಂ ಪಶ್ಯಾಮಿ ವಿಕ್ರಮಮ್ ॥

ಅನುವಾದ

ಶ್ರೀರಾಮ! ನಮ್ಮಂತಹ ಉದಾಸೀನ ಪ್ರಾಣಿಗಳ ಮೇಲೆ ನೀನು ಈ ಪರಾಕ್ರಮ ಪ್ರಕಟಿಸಿದೆ. ಇಂತಹ ಬಲ-ಪರಾಕ್ರಮ ನೀನು ನಿನ್ನ ಅಪಕಾರ ಮಾಡಿದವರ ಮೇಲೆ ಪ್ರಕಟಿಸುತ್ತಿರುವೆ ಎಂದು ನನಗೆ ಕಾಣಿಸುತ್ತಿಲ್ಲ.॥46॥

ಮೂಲಮ್ - 47

ದೃಶ್ಯಮಾನಸ್ತು ಯುಧ್ಯೇಥಾ ಮಯಾ ಯುಧಿ ನೃಪಾತ್ಮಜ ।
ಅದ್ಯ ವೈವಸ್ವತಂ ದೇವಂ ಪಶ್ಯೇಸ್ತ್ವಂ ನಿಹತೋ ಮಯಾ ॥

ಅನುವಾದ

ರಾಜಕುಮಾರ! ನೀನು ಯುದ್ಧರಂಗದಲ್ಲಿ ನನ್ನ ಎದುರಿಗೆ ಬಂದು ನನ್ನೊಡನೆ ಯುದ್ಧ ಮಾಡುತ್ತಿದ್ದರೆ ನನ್ನಿಂದ ಹತನಾಗಿ ಸೂರ್ಯಪುತ್ರ ಯಮದೇವತೆಯ ದರ್ಶನ ಮಾಡುತ್ತಿದ್ದೆ.॥47॥

ಮೂಲಮ್ - 48

ತ್ವಯಾದೃಶ್ಯೇನ ತು ರಣೇ ನಿಹತೋಽಹಂ ದುರಾಸದಃ ।
ಪ್ರಸುಪ್ತಃ ಪನ್ನಗೇನೈವ ನರಃ ಪಾಪವಶಂ ಗತಃ ॥

ಅನುವಾದ

ಮಲಗಿರುವ ಮನುಷ್ಯನಿಗೆ ಹಾವು ಬಂದು ಕಚ್ಚಿ, ಅವನ ಸತ್ತು ಹೋಗುವಂತೆ ರಣಭೂಮಿಯಲ್ಲಿ ದುರ್ಜಯ ವೀರನಾದ ನನ್ನನ್ನು ನೀನು ಅಡಗಿಕೊಂದಿರುವೆ. ಹೀಗೆ ಮಾಡುವುದರಿಂದ ನೀನು ಪಾಪಕ್ಕೆ ಭಾಗಿಯಾದೆ.॥48॥

ಮೂಲಮ್ - 49

ಸುಗ್ರೀವಪ್ರಿಯಕಾಮೇನ ಯದಹಂ ನಿಹತಸ್ತ್ವಯಾ ।
ಮಾಮೇವ ಯದಿ ಪೂರ್ವಂ ತ್ವಮೇತದರ್ಥಮಚೋದಯಃ ।
ಮೈಥಿಲೀಮಹಮೇಕಾಹ್ನಾ ತವ ಚಾನೀತವಾನ್ ಭವೇಃ ॥

ಅನುವಾದ

ಯಾವ ಉದ್ದೇಶದಿಂದ ಸುಗ್ರೀವನ ಪ್ರಿಯವನ್ನು ಮಾಡುವ ಇಚ್ಚೆಯಿಂದ ನೀನು ನನ್ನನ್ನು ವಧಿಸಿದೆಯೋ ಅದೇ ಉದ್ದೇಶದ ಸಿದ್ದಿಗಾಗಿ ನೀನು ಮೊದಲೇ ನನ್ನಲ್ಲಿ ಹೇಳಿದ್ದರೆ ನಾನು ಮಿಥಿಲೇಶ ಕುಮಾರಿ ಜಾನಕಿಯನ್ನು ಒಂದೇ ದಿನದಲ್ಲಿ ಹುಡುಕಿ ನಿನ್ನ ಬಳಿಗೆ ತಂದು ಕೊಡುತ್ತಿದ್ದೆ.॥49॥

ಮೂಲಮ್ - 50

ರಾಕ್ಷಸಂ ಚ ದುರಾತ್ಮಾನಂ ತವ ಭಾರ್ಯಾಪಹಾರಿಣಮ್ ।
ಕಂಠೇ ಬದ್ಧ್ವಾ ಪ್ರದದ್ಯಾಂ ತೇಽನಿಹತಂ ರಾವಣಂ ರಣೇ ॥

ಅನುವಾದ

ನಿನ್ನ ಪತ್ನಿಯನ್ನು ಅಪಹರಿಸಿದ ದುರಾತ್ಮಾ ರಾಕ್ಷಸ ರಾವಣನನ್ನು ನಾನು ಯುದ್ಧದಲ್ಲಿ ಕೊಲ್ಲದೆಯೇ ಅವನ ಕತ್ತಿಗೆ ಹಗ್ಗ ಕಟ್ಟಿ ಹಿಡಿದು ತಂದು ನಿನಗೆ ಒಪ್ಪಿಸುತ್ತಿದ್ದೆ.॥50॥

ಮೂಲಮ್ - 51

ನ್ಯಸ್ತಾಂ ಸಾಗರತೋಯೇ ವಾ ಪಾತಾಲೇವಾಪಿ ಮೈಥಿಲೀಮ್ ।
ಆನಯೇಯಂ ತವಾದೇಶಾಚ್ಛ್ವೇತಾಮಶ್ವತರೀಮಿವ ॥

ಅನುವಾದ

ಮಧುಕೈಟಭರು ಅಪಹರಿಸಿದ ಶ್ವೇತಾಶ್ವತರಿ ಶ್ರುತಿಯನ್ನು ಭಗವಾನ್ ಹಯಗ್ರೀವನು ಉದ್ಧಾರ ಮಾಡಿದಂತೆ ನಾನು ನಿನ್ನ ಆದೇಶದಂತೆ ಮಿಥಿಲೇಶಕುಮಾರಿ ಸೀತೆಯು ಸಮುದ್ರಜಲದಲ್ಲಿ ಅಥವಾ ಪಾತಾಳದಲ್ಲಿ ಇರಿಸಿದ್ದರೂ ಅಲ್ಲಿಂದ ತಂದುಕೊಡುತ್ತಿದ್ದೆ.॥51॥

ಮೂಲಮ್ - 52

ಯುಕ್ತಂ ಯತ್ಪ್ರಾಪ್ನುಯಾದ್ರಾಜ್ಯಂ ಸುಗ್ರೀವಃ ಸ್ವರ್ಗತೇ ಮಯಿ ।
ಅಯುಕ್ತಂ ಯದಧರ್ಮೇಣ ತ್ವಯಾಹಂ ನಿಹತೋ ರಣೇ ॥

ಅನುವಾದ

ನಾನು ಸ್ವರ್ಗವಾಸಿಯಾದ ಬಳಿಕ ಸುಗ್ರೀವನು ಈ ರಾಜ್ಯವನ್ನು ಪಡೆಯುವುದು ಉಚಿತವೇ ಆಗಿದೆ. ಆದರೆ ನೀನು ನನ್ನನ್ನು ರಣಭೂಮಿಯಲ್ಲಿ ಅಧರ್ಮದಿಂದ ಕೊಂದಿರುವುದು ಅನುಚಿತವಾಗಿದೆ.॥52॥

ಮೂಲಮ್ - 53

ಕಾಮಮೇವಂವಿಧೋ ಲೋಕಃ ಕಾಲೇನ ವಿನಿಯುಜ್ಯತೇ ।
ಕ್ಷಮಂ ಚೇದ್ಭವತಾ ಪ್ರಾಪ್ತಮುತ್ತರಂ ಸಾಧು ಚಿಂತ್ಯತಾಮ್ ॥

ಅನುವಾದ

ಈ ಜಗತ್ತು ಎಂದಾದರೂ ಕಾಲಕ್ಕೆ ಅಧೀನಾಗಿಯೇ ಆಗುವುದು, ಇದರ ಸ್ವಭಾವವೇ ಹೀಗಿದೆ. ಆದ್ದರಿಂದ ನನ್ನ ಸಾವು ಆಗಲಿ, ಇದರಲ್ಲಿ ನನಗೆ ಖೇದವಿಲ್ಲ. ಆದರೆ ನಾನು ಹೀಗೆ ಸಾಯುವುದು ನಿನಗೆ ಉಚಿತವೆನಿಸಿದರೆ ಚೆನ್ನಾಗಿ ವಿಚಾರ ಮಾಡಿ ಉತ್ತರಿಸು.॥53॥

ಮೂಲಮ್ - 54

ಇತ್ಯೇವಮುಕ್ತ್ವಾ ಪರಿಶುಷ್ಕವಕ್ತ್ರಃ
ಶರಾಭಿಘಾತಾದ್ ವ್ಯಥಿತೋ ಮಹಾತ್ಮಾ ।
ಸಮೀಕ್ಷ್ಯಂ ರಾಮಂ ರವಿಸಂನಿಕಾಶಂ
ತೂಷ್ಣೀಂ ಬಭೌವಾಮರರಾಜಸೂನುಃ ॥

ಅನುವಾದ

ಹೀಗೆ ಹೇಳಿ ಮಹಾಮನಸ್ವೀ ವಾನರರಾಜ ವಾಲಿಯು ಸೂರ್ಯನಂತೆ ತೇಜಸ್ವೀ ಶ್ರೀರಾಮಚಂದ್ರನ ಕಡೆಗೆ ನೋಡಿ ಸುಮ್ಮನಾದನು. ಅವನ ಬಾಯಿ ಒಣಗಿಹೋಗಿತ್ತು ಹಾಗೂ ಬಾಣಾಘಾತದಿಂದ ಅವನಿಗೆ ಬಹಳ ನೋವು ಆಗುತ್ತಿತ್ತು.॥54॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹದಿನೇಳನೆಯ ಸರ್ಗ ಸಂಪೂರ್ಣವಾಯಿತು.॥17॥