वाचनम्
ಭಾಗಸೂಚನಾ
ವಾಲಿಯು ತಾರೆಯನ್ನು ಗದರಿಸಿ ಹಿಂದಕ್ಕೆ ಕಳಿಸುವುದು, ಸುಗ್ರೀವನೊಂದಿಗೆ ಹೋರಾಟ ಹಾಗೂ ಶ್ರೀರಾಮನ ಬಾಣದಿಂದ ಗಾಯಗೊಂಡು ನೆಲಕ್ಕೊರಗಿದುದು
ಮೂಲಮ್ - 1
ತಾಮೇವಂ ಬ್ರುವತೀಂ ತಾರಾಂ ತಾರಾಧಿಪನಿಭಾನನಾಮ್ ।
ವಾಲೀ ನಿರ್ಭರ್ತ್ಸಯಾಮಾಸ ವಚನಂ ಚೇದಮಬ್ರವೀತ್ ॥
ಅನುವಾದ
ತಾರಾಪತಿ ಚಂದ್ರನಂತೆಮುಖವುಳ್ಳ ತಾರೆಯು ಹೀಗೆ ಮಾತನಾಡುತ್ತಿರುವುದನ್ನು ನೋಡಿ ವಾಲಿಯು ಆಕೆಯನ್ನು ಗದರಿಸುತ್ತಾ ಇಂತೆಂದನು.॥1॥
ಮೂಲಮ್ - 2
ಗರ್ಜತೋಽಸ್ಯ ಸುಸಂರಂಬ್ಧಂ ಭ್ರಾತುಃ ಶತ್ರೋರ್ವಿಶೇಷತಃ ।
ಮರ್ಷಯಿಷ್ಯಾಮಿ ಕೇನಾಪಿ ಕಾರಣೇನ ವರಾನನೇ ॥
ಅನುವಾದ
ವರಾನನೇ! ನನ್ನ ಶತ್ರುವಾದ ಈ ತಮ್ಮನ ಗರ್ಜನೆ ಮತ್ತು ಉತ್ತೇಜಿತ ಚೇಷ್ಟೆಯನ್ನು ನಾನು ಯಾವ ಕಾರಣದಿಂದಲೂ ಸಹಿಸಲಾರೆನು.॥2॥
ಮೂಲಮ್ - 3
ಅಧರ್ಷಿತಾನಾಂ ಶೂರಾಣಾಂ ಸಮರೇಷ್ವ ನಿವರ್ತಿನಾಮ್ ।
ಧರ್ಷಣಾಮರ್ಷಣಂ ಭೀರು ಮರಣಾದತಿರಿಚ್ಯತೇ ॥
ಅನುವಾದ
ಭೀರು! ಎಂದೂ ಸೋಲದಿರುವ ಹಾಗೂ ಯುದ್ಧದಲ್ಲಿ ಎಂದಿಗೂ ಬೆನ್ನು ತೋರದಿರುವ ಶೂರವೀರರಿಗೆ ಶತ್ರುವಿನ ಆಹ್ವಾನವನ್ನು ಸಹಿಸುವುದು ಸಾವಿಗಿಂತಲೂ ಹೆಚ್ಚಿನ ದುಃಖದಾಯಕವಾಗಿದೆ.॥3॥
ಮೂಲಮ್ - 4
ಸೋಢುಂ ನ ಚ ಸಮರ್ಥೋಽಹಂ ಯುದ್ಧಕಾಮಸ್ಯ ಸಂಯುಗೇ ।
ಸುಗ್ರೀವಸ್ಯ ಚ ಸಂರಂಭಂ ಹೀನಗ್ರೀವಸ್ಯ ಗರ್ಜಿತಮ್ ॥
ಅನುವಾದ
ಈ ಹೀನಗ್ರೀವ ಸುಗ್ರೀವನು ಸಂಗ್ರಾಮ ಭೂಮಿಯಲ್ಲಿ ನನ್ನೊಂದಿಗೆ ಯುದ್ಧಮಾಡಲು ಇಚ್ಛಿಸುತ್ತಿರುವನು. ನಾನು ಇವನ ರೋಷಾವೇಶ ಮತ್ತು ಗರ್ಜನೆ-ತಿರಸ್ಕಾರವನ್ನು ಸಹಿಸಲು ಅಸಮರ್ಥನಾಗಿದ್ದೇನೆ.॥4॥
ಮೂಲಮ್ - 5
ನ ಚ ಕಾರ್ಯೋ ವಿಷಾದಸ್ತೇ ರಾಘವಂ ಪ್ರತಿ ಮತ್ಕೃತೇ ।
ಧರ್ಮಜ್ಞಶ್ಚ ಕೃತಜ್ಞಶ್ಚ ಕಥಂ ಪಾಪಂ ಕರಿಷ್ಯತಿ ॥
ಅನುವಾದ
ಶ್ರೀರಾಮನ ಕುರಿತು ಯೋಚಿಸಿಯೂ ನೀನು ನನಗಾಗಿ ವಿಷಾದಿಸಬಾರದು, ಏಕೆಂದರೆ ಅವನು ಧರ್ಮದ ಜ್ಞಾನವುಳ್ಳವನೂ, ಕರ್ತವ್ಯಾಕರ್ತವ್ಯವನ್ನು ತಿಳಿಯುವವನಾಗಿದ್ದಾನೆ, ಹೀಗಿರುವಾಗ ಪಾಪವನ್ನು ಹೇಗೆ ಮಾಡಬಲ್ಲನು.॥5॥
ಮೂಲಮ್ - 6
ನಿವರ್ತಸ್ವ ಸಹ ಸ್ತ್ರೀಭಿಃ ಕಥಂ ಭೂಯೋಽನುಗಚ್ಛಸಿ ।
ಸೌಹೃದಂ ದರ್ಶಿತಂ ತಾವನ್ಮಯಿ ಭಕ್ತಿಸ್ತ್ವಯಾ ಕೃತಾ ॥
ಮೂಲಮ್ - 7
ಪ್ರತಿಯೋತ್ಸ್ಯಾಮ್ಯಹಂ ಗತ್ವಾ ಸುಗ್ರೀವಂ ಜಹಿ ಸಂಭ್ರಮಮ್ ।
ದರ್ಪಂ ಚಾಸ್ಯ ವಿನೇಷ್ಯಾಮಿ ನ ಚ ಪ್ರಾಣೈರ್ವಿಮೋಕ್ಷ್ಯತೇ ॥
ಅನುವಾದ
ನೀನು ಈ ಸ್ತ್ರೀಯರೊಂದಿಗೆ ಮರಳಿ ಹೋಗು. ಏಕೆ ನನ್ನ ಹಿಂದೆ ಪದೇ-ಪದೇ ಬರುತ್ತಿರುವೆ? ನೀನು ನನ್ನ ಕುರಿತು ಪ್ರೇಮವನ್ನು ಪ್ರಕಟಿಸಿದೆ. ಭಕ್ತಿಯ ಪರಿಚಯವನ್ನು ಮಾಡಿಸಿದೆ. ಈಗ ಹೋಗು, ಗಾಬರಿಯಾಗಬೇಡ. ನಾನು ಹೋಗಿ ಸುಗ್ರೀವನನ್ನು ಎದುರಿಸುವೆನು. ಅವನ ಉದ್ಧಟತನವನ್ನು ನುಚ್ಚು ನೂರಾಗಿಸುವೆನು. ಆದರೆ ಪ್ರಾಣ ತೆಗೆಯುವುದಿಲ್ಲ.॥6-7॥
ಮೂಲಮ್ - 8
ಅಹಂ ಹ್ಯಾಜಿಸ್ಥಿತಸ್ಯಾಸ್ಯ ಕರಿಷ್ಯಾಮಿ ಯಥೇಪ್ಸಿತಮ್ ।
ವೃಕ್ಷೈರ್ಮುಷ್ಟಿಪ್ರಹಾರೈಶ್ಚ ಪೀಡಿತಃ ಪ್ರತಿಯಾಸ್ಯತಿ ॥
ಅನುವಾದ
ಯುದ್ಧದಲ್ಲಿ ನಿಂತ ಸುಗ್ರೀವ ಎಲ್ಲ ಇಚ್ಛೆಗಳನ್ನು ನಾನು ಪೂರ್ಣಗೊಳಿಸುವೆನು. ವೃಕ್ಷಗಳ ಮತ್ತು ಮುಷ್ಠಿಗಳ ಏಟಿನಿಂದ ಪೀಡಿತನಾಗಿ ಅವನು ಸ್ವತಃ ಓಡಿಹೋಗುವನು.॥8॥
ಮೂಲಮ್ - 9
ನ ಮೇ ಗರ್ವಿತಮಾಯಸ್ತಂ ಸಹಿಷ್ಯತಿ ದುರಾತ್ಮವಾನ್ ।
ಕೃತಂ ತಾರೇ ಸಹಾಯತ್ವಂ ದರ್ಶಿತಂ ಸೌಹೃದಂ ಮಯಿ ॥
ಅನುವಾದ
ತಾರೆ! ದುರಾತ್ಮಾ ಸುಗ್ರೀವನು ನನ್ನ ಯುದ್ದ ವಿಷಯಕ ದರ್ಪ ಮತ್ತು ಉದ್ಯೋಗವನ್ನು ಸಹಿಸಲಾರನು. ನೀನು ಬೌದ್ಧಿಕ ಸಹಾಯಕತೆಯನ್ನು ಹಾಗೂ ನನ್ನ ಕುರಿತು ತನ್ನ ಸೌಹಾರ್ದವನ್ನು ಚೆನ್ನಾಗಿ ತೋರಿಸಿರುವೆ.॥9॥
ಮೂಲಮ್ - 10
ಶಾಪಿತಾಸಿ ಮಮ ಪ್ರಾಣೈರ್ನಿವರ್ತಸ್ವ ಜಯೇನ ಚ ।
ಅಹಂ ಜಿತ್ವಾ ನಿವರ್ತಿಷ್ಯೇ ತಮಹಂ ಭ್ರಾತರಂ ರಣೇ ॥
ಅನುವಾದ
ಈಗ ನೀನು ಈ ಸ್ತ್ರೀಯರೊಂದಿಗೆ ಮರಳಿ ಹೋಗು, ಈಗ ಹೆಚ್ಚು ಹೇಳುವ ಆವಶ್ಯಕತೆ ಇಲ್ಲ; ನಾನು ಯುದ್ಧದಲ್ಲಿ ಆ ತಮ್ಮನನ್ನು ಗೆದ್ದು ಮರಳುವೆನು ಎಂದು ನನ್ನ ಪ್ರಾಣಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ.॥10॥
ಮೂಲಮ್ - 11
ತಂ ತು ತಾರಾ ಪರಿಷ್ವಜ್ಯ ವಾಲಿನಂ ಪ್ರಿಯವಾದಿನೀ ।
ಚಕಾರ ರುದತೀ ಮಂದಂ ದಕ್ಷಿಣಾ ಸಾ ಪ್ರದಕ್ಷಿಣಮ್ ॥
ಅನುವಾದ
ಇದನ್ನು ಕೇಳಿ ಅತ್ಯಂತ ಉದಾರ ಸ್ವಭಾವವುಳ್ಳ ತಾರೆಯು ವಾಲಿಯನ್ನು ಆಲಿಂಗಿಸಿ ಮೆಲ್ಲಗೆ ಅಳುತ್ತಾ ಅವನ ಪ್ರದಕ್ಷಿಣೆ ಮಾಡಿದಳು.॥11॥
ಮೂಲಮ್ - 12
ತತಃ ಸ್ವಸ್ತ್ತ್ಯಯನಂ ಕೃತ್ವಾ ಮಂತ್ರವಿದ್ ವಿಜಯೈಷಿಣೀ ।
ಅಂತಃಪುರಂ ಸಹ ಸ್ತ್ರೀಭಿಃ ಪ್ರವಿಷ್ಟಾ ಶೋಕಮೋಹಿತಾ ॥
ಅನುವಾದ
ಅವಳು ಪತಿಯ ವಿಜಯವನ್ನು ಬಯಸುತ್ತಿದ್ದಳು ಮತ್ತು ಮಂತ್ರಗಳನ್ನು ಬಲ್ಲವಳಾಗಿದ್ದಳು. ಅದಕ್ಕಾಗಿ ಆಕೆಯು ವಾಲಿಯ ಮಂಗಲ ಕಾಮನೆಯಿಂದ ಸ್ವಸ್ತಿವಾಚನ ಮಾಡಿ, ಶೋಕದಿಂದ ಮೋಹಗೊಂಡು ಇತರ ಸ್ತ್ರೀಯರಿಂದೊಡಗೂಡಿ ಅಂತಃಪುರಕ್ಕೆ ಹೊರಟುಹೋದಳು.॥12॥
ಮೂಲಮ್ - 13
ಪ್ರವಿಷ್ಟಾಯಾಂ ತು ತಾರಾಯಾಂ ಸಹ ಸ್ತ್ರೀಭಿಃ ಸ್ವಮಾಲಯಮ್ ।
ನಗರ್ಯಾನಿರ್ಯಯೌ ಕ್ರುದ್ಧೋ ಮಹಾಸರ್ಪ ಇವ ಶ್ವಸನ್ ॥
ಅನುವಾದ
ಸ್ತ್ರೀಯರಸಹಿತ ತಾರೆಯು ಅಂತಃಪುರಕ್ಕೆ ಹೊರಟುಹೋದ ಬಳಿಕ ವಾಲಿಯು ಕ್ರೋಧಗೊಂಡು ಮಹಾಸರ್ಪದಂತೆ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ನಗರದಿಂದ ಹೊರಬಿದ್ದನು.॥13॥
ಮೂಲಮ್ - 14
ಸ ನಿಃಶ್ವಸ್ಯ ಮಹಾರೋಷೋ ವಾಲೀ ಪರಮವೇಗವಾನ್ ।
ಸರ್ವತಶ್ಚಾರಯನ್ ದೃಷ್ಟಿಂ ಶತ್ರುದರ್ಶನಕಾಂಕ್ಷಯಾ ॥
ಅನುವಾದ
ಮಹಾರೋಷದಿಂದ ಕೂಡಿ, ಅತ್ಯಂತ ವೇಗವಾಗಿ ದೀರ್ಘವಾಗಿ ನಿಟ್ಟುಸಿರು ಬಿಟ್ಟು ಶತ್ರುವನ್ನು ನೋಡುವ ಇಚ್ಛೆಯಿಂದ ಸುತ್ತಲೂ ಕಣ್ಣುಹಾಯಿಸಿದನು.॥14॥
ಮೂಲಮ್ - 15
ಸ ದದರ್ಶ ತತಃ ಶ್ರೀಮಾನ್ ಸುಗ್ರೀವಂ ಹೇಮಪಿಂಗಲಮ್ ।
ಸುಸಂವೀತಮವಷ್ಟಬ್ಧಂ ದೀಪ್ಯಮಾನಮಿವಾನಲಮ್ ॥
ಅನುವಾದ
ಇಷ್ಟರಲ್ಲಿ ಶ್ರೀಮಾನ್ ವಾಲಿಯು ಸುವರ್ಣದಂತಹ ಪಿಂಗಳ ವರ್ಣದ ಸುಗ್ರೀವನನ್ನು ನೋಡಿದನು. ಅವನು ಸೊಂಟಕಟ್ಟಿ ಯುದ್ಧಕ್ಕಾಗಿ ಸಿದ್ಧನಾಗಿದ್ದು, ಪ್ರಜ್ವಿಲಿತ ಅಗ್ನಿಯಂತೆ ಪ್ರಕಾಶಿಸುತ್ತಿದ್ದನು.॥15॥
ಮೂಲಮ್ - 16
ತಂ ಸ ದೃಷ್ಟ್ವಾ ಮಹಾಬಾಹುಃ ಸುಗ್ರೀವಂ ಪರ್ಯವಸ್ಥಿತಮ್ ।
ಗಾಢಂ ಪರಿದಧೇ ವಾಸೋ ವಾಲೀ ಪರಮಕೋಪನಃ ॥
ಅನುವಾದ
ಸುಗ್ರೀವನು ನಿಂತಿರುವುದನ್ನು ನೋಡಿ ವಾಲಿಯು ಅತ್ಯಂತ ಕುಪಿತನಾದನು. ಅವನು ಸೊಂಟವನ್ನು ಬಿಗಿಯಾಗಿ ಕಟ್ಟಿಕೊಂಡನು.॥16॥
ಮೂಲಮ್ - 17
ಸ ವಾಲೀ ಗಾಢಸಂವಿತೋ ಮುಷ್ಟಿಮುದ್ಯಮ್ಯ ವೀರ್ಯವಾನ್ ।
ಸುಗ್ರೀವಮೇವಾಭಿಮುಖೋ ಯಯೌ ಯೋದ್ಧುಂ ಕೃತಕ್ಷಣಃ ॥
ಅನುವಾದ
ಸೊಂಟವನ್ನು ಗಟ್ಟಿಯಾಗಿ ಬಿಗಿದು ಪರಾಕ್ರಮಿ ವಾಲಿಯು ಪ್ರಹಾರದ ಅವಕಾಶವನ್ನು ನೋಡುತ್ತಾ ಮುಷ್ಠಿಬಿಗಿದು ಕೊಂಡು ಸುಗ್ರೀವನ ಕಡೆಗೆ ಹೊರಟನು.॥17॥
ಮೂಲಮ್ - 18
ಶ್ಲಿಷ್ಟಂ ಮುಷ್ಟಿಂ ತಮುದ್ಯಮ ಸಂರಬ್ಧತರಮಾಗತಃ ।
ಸುಗ್ರೀವೋಽಪಿ ತಮುದ್ದಿಶ್ಯ ವಾಲಿನಂ ಹೇಮಮಾಲಿನಮ್ ॥
ಅನುವಾದ
ಸುಗ್ರೀವನೂ ಕೂಡ ಸುವರ್ಣ ಮಾಲಾಧಾರೀ ವಾಲಿಯನ್ನು ಉದ್ದೇಶಿಸಿ ಮುಷ್ಠಿಯನ್ನು ಬಿಗಿದುಕೊಂಡು ಬಹಳ ಆವೇಶದೊಂದಿಗೆ ಅವನ ಕಡೆಗೆ ನಡೆದನು.॥18॥
ಮೂಲಮ್ - 19
ತಂ ವಾಲೀ ಕ್ರೋಧತಾಮ್ರಾಕ್ಷಃ ಸುಗ್ರೀವಂ ರಣಕೋವಿದಮ್ ।
ಆಪತಂತಂ ಮಹಾವೇಗಮಿದಂ ವಚನಮಬ್ರವೀತ್ ॥
ಅನುವಾದ
ರಣಕೋವಿದ ಮಹಾ ವೇಗಶಾಲಿ ಸುಗ್ರೀವನು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ವಾಲಿಯು ಕ್ರೋಧದಿಂದ ಕಣ್ಣುಗಳನ್ನು ಕೆಂಪಾಗಿಸಿಕೊಂಡು ಹೇಳಿದನು.॥19॥
ಮೂಲಮ್ - 20
ಏಷ ಮುಷ್ಟಿರ್ಮಹಾನ್ ಬದ್ಧೋ ಗಾಢಃ ಸುನಿಹಿತಾಂಗುಲಿಃ ।
ಮಯಾ ವೇಗವಿಮುಕ್ತಸ್ತೇ ಪ್ರಾಣಾನಾದಾಯ ಯಾಸ್ಯತಿ ॥
ಅನುವಾದ
ಸುಗ್ರೀವನೇ! ನೋಡು, ಬಿಗಿಯಾಗಿ ಎಲ್ಲ ಬೆರಳುಗಳು ಜೊತೆ ಸೇರಿದ ಈ ಭಾರೀ ಮುಷ್ಠಿಯನ್ನು ನೋಡು. ನಾನು ಹೊಡೆಯುವ ಈ ಮುಷ್ಠಿಯಿಂದ ನಿನ್ನ ಪ್ರಾಣಗಳು ಹಾರಿಹೋಗುವವು.॥20॥
ಮೂಲಮ್ - 21
ಏವಮುಕ್ತಸ್ತು ಸುಗ್ರೀವಃ ಕ್ರುದ್ಧೋ ವಾಲಿನಮಬ್ರವೀತ್ ।
ತವ ಚೈಷ ಹರನ್ ಪ್ರಾಣಾನ್ ಮುಷ್ಟಿಃ ಪತತು ಮೂರ್ಧನಿ ॥
ಅನುವಾದ
ವಾಲಿಯು ಹೀಗೆ ಹೇಳಿದಾಗ ಸುಗ್ರೀವನು ಕ್ರೋಧದಿಂದ ಅವನಲ್ಲಿ ಹೇಳಿದನು - ‘ನನ್ನ ಈ ಮುಷ್ಠಿಯೂ ನಿನ್ನ ಪ್ರಾಣ ತೆಗೆಯಲು ನಿನ್ನ ಮಸ್ತಕದಲ್ಲಿ ಬೀಳುವುದು.॥21॥
ಮೂಲಮ್ - 22
ತಾಡಿತಸ್ತೇನ ತಂ ಕ್ರುದ್ಧಃ ಸಮಭಿಕ್ರಮ್ಯ ವೇಗತಃ ।
ಅಭವಚ್ಛೋಣಿತೋದ್ಗಾರೀ ಸಾಪೀಡ ಇವ ಪರ್ವತಃ ॥
ಅನುವಾದ
ಅಷ್ಟರಲ್ಲಿ ವಾಲಿಯು ವೇಗವಾಗಿ ಆಕ್ರಮಣ ಮಾಡಿ ಸುಗ್ರೀವನಿಗೆ ಗುದ್ದಿದನು. ಆ ಏಟಿನಿಂದ ಗಾಯಗೊಂಡು ಕುಪಿತನಾದ ಸುಗ್ರೀವನ ಬಾಯಿಂದ ಝರಿಗಳಿಂದ ಕೂಡಿದ ಪರ್ವತದಂತೆ ರಕ್ತ ಹರಿಯತೊಡಗಿತು.॥22॥
ಮೂಲಮ್ - 23
ಸುಗ್ರೀವೇಣ ತು ನಿಃಶಂಕಂ ಸಾಲಮುತ್ಪಾಟ್ಯ ತೇಜಸಾ ।
ಗಾತ್ರೇಷ್ವಭಿಹತೋ ವಾಲೀ ವಜ್ರೇಣೇವ ಮಹಾಗಿರಿಃ ॥
ಅನುವಾದ
ಅನಂತರ ಸುಗ್ರೀವನೂ ನಿಃಶಂಕನಾಗಿ ಬಲವಾಗಿ ಒಂದು ಸಾಲವೃಕ್ಷವನ್ನು ಕಿತ್ತು, ಅದರಿಂದ ಇಂದ್ರನು ವಿಶಾಲ ಪರ್ವತವನ್ನು ವಜ್ರದಿಂದ ಪ್ರಹರಿಸುವಂತೆ ವಾಲಿಯ ಮೇಲೆ ಪ್ರಹರಿಸಿದನು.॥23॥
ಮೂಲಮ್ - 24
ಸ ತು ವೃಕ್ಷೇಣ ನಿರ್ಭಗ್ನಃ ಸಾಲತಾಡನವಿಹ್ವಲಃ ।
ಗುರುಭಾರಭರಾಕ್ರಾಂತಾ ನೌಃ ಸಸಾರ್ಥೇವ ಸಾಗರೇ ॥
ಅನುವಾದ
ಆ ವೃಕ್ಷದ ಏಟಿನಿಂದ ವಾಲಿಯು ಗಾಯಗೊಂಡು ವಿಹ್ವಲನಾಗಿ ವ್ಯಾಪಾರಿಗಳು ಹತ್ತಿದ ನಾವೆಯು ಭಾರೀ ಭಾರದಿಂದ ಸಾಗರ ದಲ್ಲಿ ತೂಗಾಡುವಂತೆ ವಾಲಿಯು ನಡುಗತೊಡಗಿದನು.॥24॥
ಮೂಲಮ್ - 25
ತೌ ಭೀಮಬಲ ವಿಕ್ರಾಂತೌ ಸುಪರ್ಣ ಸಮವೇಗಿತೌ ।
ಪ್ರವೃದ್ಧೌ ಘೋರವಪುಕ್ಷೌ ಚಂದ್ರಸೂರ್ಯಾವಿವಾಂಬರೇ ॥
ಅನುವಾದ
ಆ ಇಬ್ಬರೂ ಸೋದರರ ಬಲ, ಪರಾಕ್ರಮ ಭಯಂಕರವಾಗಿತ್ತು. ಇಬ್ಬರ ವೇಗಗಳು ಗರುಡನಂತಿತ್ತು. ಅವರಿಬ್ಬರೂ ಭಯಂಕರ ರೂಪಧರಿಸಿ ಜೋರಾಗಿ ಕಾದಾಡುತ್ತಿದ್ದರು. ಪೂರ್ಣಿಮೆಯ ಆಕಾಶದಲ್ಲಿ ಸೂರ್ಯ-ಚಂದ್ರರಂತೆ ಕಾಣುತ್ತಿದ್ದರು.॥25॥
ಮೂಲಮ್ - 26½
ಪರಸ್ಪರಮಮಿತ್ರಘ್ನೌ ಛಿದ್ರಾನ್ವೇಷಣತತ್ಪರೌ ।
ತತೋಽವರ್ಧತ ವಾಲೀ ತು ಬಲವೀರ್ಯಸಮನ್ವಿತಃ ॥
ಸೂರ್ಯಪುತ್ರೋ ಮಹಾವೀರ್ಯಃ ಸುಗ್ರೀವಃ ಪರಿಹೀಯತ ।
ಅನುವಾದ
ಆ ಶತ್ರುಸೂದನ ವೀರರು ತಮ್ಮ ವಿಪಕ್ಷಿಯನ್ನು ಕೊಂದು ಹಾಕುವ ಇಚ್ಛೆಯಿಂದ ಒಬ್ಬರು ಮತ್ತೊಬ್ಬರ ದೌರ್ಬಲ್ಯವನ್ನು ಹುಡುಕುತ್ತಿದ್ದರು. ಆದರೆ ಆ ಯುದ್ಧದಲ್ಲಿ ಬಲ-ವಿಕ್ರಮ ಸಂಪನ್ನ ವಾಲಿಯ ಬಲ ಹೆಚ್ಚತೊಡಗಿದರೆ, ಮಹಾಪರಾಕ್ರಮಿ ಸೂರ್ಯಪುತ್ರ ಸುಗ್ರೀವನ ಶಕ್ತಿ ಕ್ಷೀಣವಾಗತೊಡಗಿತು.॥26½॥
ಮೂಲಮ್ - 27½
ವಾಲಿನಾ ಭಗ್ನದರ್ಪಸ್ತು ಸುಗ್ರೀವೋ ಮಂದವಿಕ್ರಮಃ ॥
ವಾಲಿನಂ ಪ್ರತಿ ಸಾಮರ್ಷೋ ದರ್ಶಯಾಮಾಸ ರಾಘವಮ್ ।
ಅನುವಾದ
ವಾಲಿಯು ಸುಗ್ರೀವನ ದರ್ಪವನ್ನು ಚೂರಾಗಿಸಿದನು. ಅವನ ಪರಾಕ್ರಮ ಮಂದವಾಗತೊಡಗಿತು. ಆಗ ವಾಲಿಯ ಕುರಿತು ಕ್ರೋಧಗೊಂಡ ಸುಗ್ರೀವನು ಶ್ರೀರಾಮನಿಗೆ ತನ್ನ ಸ್ಥಿತಿಯ ಕಡೆಗೆ ಗಮನ ಸೆಳೆದನು.॥27½॥
ಮೂಲಮ್ - 28
ವೃಕ್ಷೈಃ ಸಶಾಖೈಃ ಶಿಖರೈರ್ವಜ್ರಕೋಟಿನಿಭೈರ್ನಖೈಃ ॥
ಮೂಲಮ್ - 29
ಮುಷ್ಟಿಭಿರ್ಜಾನುಭಿಃ ಪದ್ಭಿರ್ಬಾಹುಭಿಶ್ಚ ಪುನಃ ಪುನಃ ।
ತಯೋರ್ಯುದ್ಧಮಭೂದ್ಘೋರಂ ವೃತ್ರವಾಸವಯೋರಿವ ॥
ಅನುವಾದ
ಬಳಿಕ ಕೊಂಬೆಗಳ ಸಹಿತ ವೃಕ್ಷಗಳಿಂದ, ಪರ್ವತಗಳಿಂದ, ವಜ್ರದಂತಹ ಭಯಂಕರ ಉಗುರುಗಳಿಂದ, ಮುಷ್ಟಿಗಳಿಂದ, ಮೊಣಕಾಲುಗಳಿಂದ, ಒದೆಗಳಿಂದ, ಮುಷ್ಟಿಗಳಿಂದ ಅವರಿಬ್ಬರಲ್ಲಿಯೂ ಇಂದ್ರ-ವೃತ್ರಾಸುರರಂತೆ ಭಯಂಕರ ಸಂಗ್ರಾಮ ನಡೆಯಿತು.॥28-29॥
ಮೂಲಮ್ - 30
ತೌ ಶೋಣಿತಾಕ್ತೌ ಯುಧ್ಯೇತಾಂ ವಾನರೌವನಚಾರಿಣೌ ।
ಮೇಘಾವಿವ ಮಹಾಶಬ್ದೈಸ್ತರ್ಜಮಾನೌ ಪರಸ್ಪರಮ್ ॥
ಅನುವಾದ
ಆ ಇಬ್ಬರೂ ವನಚರ ವಾನರರು ರಕ್ತದಿಂದ ತೊಯ್ದು ಕಾದಾಡುತ್ತಿದ್ದರು. ಎರಡು ಮೋಡಗಳಂತೆ ಅತ್ಯಂತ ಭಯಂಕರವಾಗಿ ಗರ್ಜಿಸುತ್ತಾ ಒಬ್ಬರು ಮತ್ತೊಬ್ಬರನ್ನು ಹಳಿಯುತ್ತಿದ್ದರು.॥30॥
ಮೂಲಮ್ - 31
ಹೀಯಮಾನಮಥಾಪಶ್ಯತ್ ಸುಗ್ರೀವಂ ವಾನರೇಶ್ವರಮ್ ।
ಪ್ರೇಕ್ಷಮಾಣಂ ದಿಶಶ್ಚೈವ ರಾಘವಃ ಸ ಮುಹುರ್ಮುಹುಃ ॥
ಅನುವಾದ
ವಾನರ ರಾಜ ಸುಗ್ರೀವನು ನಿರ್ಬಲನಾಗುತ್ತಿದ್ದಾನೆ ಹಾಗೂ ಪದೇ-ಪದೇ ಈಕಡೆ-ಆಕಡೆ ದೃಷ್ಟಿ ಹರಿಸುತ್ತಿರುವುದನ್ನು ಶ್ರೀ ರಘುನಾಥನು ನೋಡಿದನು.॥31॥
ಮೂಲಮ್ - 32
ತತೋರಾಮೋ ಮಹಾತೇಜಾ ಆರ್ತಂ ದೃಷ್ಟ್ವಾ ಹರೀಶ್ವರಮ್ ।
ಶರಂ ಸ ವೀಕ್ಷತೇ ವೀರೋ ವಾಲಿನೋ ವಧಕಾಂಕ್ಷಯಾ ॥
ಅನುವಾದ
ಪೀಡಿತನಾದ ವಾನರರಾಜನನ್ನು ನೋಡಿ ಮಹಾ ತೇಜಸ್ವೀ ಶ್ರೀರಾಮನು ವಾಲಿಯ ವಧೆಯ ಇಚ್ಛೆಯಿಂದ ತನ್ನ ಬಾಣದ ಕಡೆಗೆ ದೃಷ್ಟಿಪಾತ ಮಾಡಿದನು.॥32॥
ಮೂಲಮ್ - 33
ತತೋ ಧನುಷಿ ಸಂಧಾಯ ಶರಮಾಶೀವಿಷೋಪಮಮ್ ।
ಪೂರಯಾಮಾಸ ತಚ್ಚಾಪಂ ಕಾಲಚಕ್ರಮಿವಾಂತಕಃ ॥
ಅನುವಾದ
ಅವನು ತನ್ನ ಧನಸ್ಸಿಗೆ ವಿಷಧರ ಸರ್ಪದಂತೆ ಭಯಂಕರ ಬಾಣವನ್ನು ಹೂಡಿ ಯಮರಾಜನು ಕಾಲಚಕ್ರವನ್ನು ಎತ್ತಿದಂತೆ ಅದನ್ನು ಜೋರಾಗಿ ಸೆಳೆದನು.॥33॥
ಮೂಲಮ್ - 34
ತಸ್ಯ ಜ್ಯಾತಲಘೋಷೇಣ ತ್ರಸ್ತಾಃ ಪತ್ರರಥೇಶ್ವರಾ ।
ಪ್ರದುದ್ರುವುರ್ಮೃಗಾಶ್ಚೈವ ಯುಗಾಂತ ಇವ ಮೋಹಿತಾಃ ॥
ಅನುವಾದ
ಅವನ ಧನುಷ್ಟಂಕಾರದ ಧ್ವನಿಯಿಂದ ಭಯಭೀತವಾಗಿ ದೊಡ್ಡ-ದೊಡ್ಡ ಮೃಗ-ಪಕ್ಷಿಗಳು ಓಡಿ ಹೋದವು. ಅವು ಪ್ರಳಯ ಕಾಲದಲ್ಲಿ ಮೋಹಿತರಾದ ಜೀವರಂತೆ ಕಿಂಕರ್ತವ್ಯ ಮೂಢವಾದುವು.॥34॥
ಮೂಲಮ್ - 35
ಮುಕ್ತಸ್ತು ವಜ್ರನಿರ್ಷೋಷಃ ಪ್ರದೀಪ್ತಾಶನಿಸಂನಿಭಃ ।
ರಾಘವೇಣ ಮಹಾಬಾಣೋ ವಾಲಿವಕ್ಷಸಿ ಪಾತಿತಃ ॥
ಅನುವಾದ
ಶ್ರೀರಘುನಾಥನು ವಜ್ರದಂತೆ ಘೋಷಿಸುತ್ತ, ಪ್ರಜ್ವಲಿತ ಸಿಡಿಲಿನಂತೆ ಪ್ರಕಾಶಬೀರುವ ಆ ಮಹಾಬಾಣವನ್ನು ಪ್ರಯೋಗಿಸಿದನು; ಅದು ವಾಲಿಯ ವಕ್ಷಃಸ್ಥಳದಲ್ಲಿ ಹೋಗಿ ನಾಟಿತು.॥35॥
ಮೂಲಮ್ - 36
ತತಸ್ತೇನ ಮಹಾತೇಜಾ ವೀರ್ಯಯುಕ್ತಃ ಕಪೀಶ್ವರಃ ।
ವೇಗೇನಾಭಿಹತೋ ವಾಲೀ ನಿಪಪಾತ ಮಹೀತಲೇ ॥
ಅನುವಾದ
ಆ ವೇಗವಾದ ಬಾಣದಿಂದ ಆಹತನಾದ ಮಹಾತೇಜಸ್ವೀ ಪರಾಕ್ರಮಿ ವಾನರರಾಜ ವಾಲಿಯು ಕೂಡಲೇ ನೆಲಕ್ಕೆ ಬಿದ್ದುಬಿಟ್ಟನು.॥36॥
ಮೂಲಮ್ - 37
ಇಂದ್ರಧ್ವಜ ಇವೋದ್ಧೂತಃ ಪೌರ್ಣಮಾಸ್ಯಾಂ ಮಹೀತಲೇ ।
ಆಶ್ವಯುಕ್ಸಮಯೇ ಮಾಸಿ ಗತಶ್ರೀಕೋ ವಿಚೇತನಃ ।
ಬಾಷ್ಪಸಂರುದ್ಧಕಂಠಸ್ತು ವಾಲೀ ಚಾರ್ತಸ್ವರಃ ಶನೈಃ ॥
ಅನುವಾದ
ಆಶ್ವಯುಜ ಪೌರ್ಣಮೆಯ ದಿನ ಇಂದ್ರಧ್ವಜೋತ್ಸವದ ಅಂತ್ಯದಲ್ಲಿ ಮೇಲಕ್ಕೆ ಹಾರಿಸಿದ ಇಂದ್ರಧ್ವಜವು ನೆಲಕ್ಕೆ ಬೀಳುವಂತೆ ವಾಲಿಯು ಗ್ರೀಷ್ಮಋತುವಿನ ಕೊನೆಯಲ್ಲಿ ಶ್ರೀಹೀನ, ನಿಶ್ಚೇಷ್ಟಿತನಾಗಿ, ಕಂಬನಿಯಿಂದ ಗದ್ಗದಿತನಾಗಿ ಧರಾಶಾಯಿಯಾದನು ಹಾಗೂ ಮೆಲ್ಲಗೆ ಆರ್ತನಾದ ಮಾಡತೊಡಗಿದನು.॥37॥
ಮೂಲಮ್ - 38
ನರೋತ್ತಮಃ ಕಾಲಯುಗಾಂತಕೋಪಮಂ
ಶರೋತ್ತಮಂ ಕಾಂಚನರೂಪ್ಯಭೂಷಿತಮ್ ।
ಸಸರ್ಜ ದೀಪ್ತಃ ತಮಮಿತ್ರಮರ್ದನಂ
ಸಧೂಮಮಗ್ನಿಂ ಮುಖತೋ ಯಥಾ ಹರಃ ॥
ಅನುವಾದ
ಶ್ರೀರಾಮನ ಆ ಉತ್ತಮ ಬಾಣವು ಯುಗಾಂತ್ಯಕಾಲದಂತೆ ಭಯಂಕರವಾಗಿದ್ದು ಚಿನ್ನ-ಬೆಳ್ಳಿಗಳಿಂದ ವಿಭೂಷಿತನಾಗಿತ್ತು. ಹಿಂದೆ ಮಹಾದೇವನು ಹಣೆಗಣ್ಣಿನಿಂದ ಶತ್ರುವಾದ ಕಾಮನನ್ನು ನಾಶಗೊಳಿಸಲು ಧೂಮಯುಕ್ತ ಅಗ್ನಿಯನ್ನು ಸೃಷ್ಟಿಸಿದಂತೆ ಪುರುಷೋತ್ತಮ ಶ್ರೀರಾಮನು ಸುಗ್ರೀವಶತ್ರು ವಾಲಿಯನ್ನು ಮರ್ದಿಸಲು ಆ ಪ್ರಜ್ವಲಿತ ಬಾಣವನ್ನು ಪ್ರಯೋಗಿಸಿದ್ದನು.॥38॥
ಮೂಲಮ್ - 39
ಅಥೋಕ್ಷಿತಃ ಶೋಣಿತತೋಯವಿಸ್ರವೈಃ
ಸುಪುಷ್ಟಿತಾಶೋಕ ಇವಾನಿಲೋದ್ಧತಃ ।
ವಿಚೇತನೋ ವಾಸವಸೂನುರಾಹವೇ
ಪ್ರಭ್ರಂಶಿತೇಂದ್ರಧ್ವಜವತ್ ಕ್ಷಿತಿಂ ಗತಃ ॥
ಅನುವಾದ
ಇಂದ್ರಕುಮಾರ ವಾಲಿಯ ಶರೀರದಿಂದ ನೀರಿನಂತೆ ರಕ್ತದ ಧಾರೆ ಹರಿಯತೊಡಗಿತು. ಅದರಿಂದ ಅವನು ಮಿಂದು ಹೋಗಿದ್ದನು. ಅಚೇತನನಾಗಿ ವಾಯುವು ಕಿತ್ತಿರುವ ಪುಷ್ಪಿತ ಅಶೋಕ ವೃಕ್ಷದಂತೆ, ಆಕಾಶದಿಂದ ಕೆಳಗೆ ಬಿದ್ದ ಇದ್ರ ಧ್ವಜದಂತೆ ವಾಲಿಯು ಸಮರಾಂಗಣದಲ್ಲಿ ಬಿದ್ದು ಬಿಟ್ಟನು.॥39॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹದಿನಾರನೆಯ ಸರ್ಗ ಸಂಪೂರ್ಣವಾಯಿತು.॥16॥