वाचनम्
ಭಾಗಸೂಚನಾ
ಸುಗ್ರೀವನ ಗರ್ಜನೆ ಕೇಳಿ ವಾಲಿಯು ಯುದ್ಧಕ್ಕಾಗಿ ಹೊರಟಿದ್ದು, ತಾರೆಯು ಅವನನ್ನು ತಡೆದು ಸುಗ್ರೀವನು ಶ್ರೀರಾಮನೊಂದಿಗೆ ಮೈತ್ರಿಮಾಡಿಕೊಂಡಿದ್ದನ್ನು ತಿಳಿಸಿದುದು
ಮೂಲಮ್ - 1
ಅಥ ತಸ್ಯ ನಿನಾದಂ ತು ಸುಗ್ರೀವಸ್ಯ ಮಹಾತ್ಮನಃ ।
ಶುಶ್ರಾವಾಂತಃಪುರಗತೋ ವಾಲೀ ಭ್ರಾತುರಮರ್ಷಣಃ ॥
ಅನುವಾದ
ಆಗ ಕ್ರೋಧಿಯಾದ ವಾಲಿಯು ತನ್ನ ಅಂತಃಪುರದಲ್ಲಿದ್ದನು. ಅವನು ತಮ್ಮನಾದ ಮಹಾಮನಾ ಸುಗ್ರೀವನ ಆ ಸಿಂಹನಾದವನ್ನು ಅಲ್ಲಿಂದಲೇ ಕೇಳಿದನು.॥1॥
ಮೂಲಮ್ - 2
ಶ್ರುತ್ವಾ ತು ತಸ್ಯ ನಿನದಂ ಸರ್ವಭೂತಪ್ರಕಂಪನಮ್ ।
ಮದಶ್ಚೈಕಪದೇ ನಷ್ಟಃ ಕ್ರೋಧಶ್ಚಾಪಾದಿತೋ ಮಹಾನ್ ॥
ಅನುವಾದ
ಸಮಸ್ತ ಪ್ರಾಣಿಗಳನ್ನು ನಡುಗಿಸುತ್ತಿದ್ದ ಅವನ ಆ ಗರ್ಜನೆಯನ್ನು ಕೇಳಿ ಅವನ ಎಲ್ಲ ಮದವು ಇಳಿದುಹೋಯಿತು ಹಾಗೂ ಅವನಿಗೆ ಮಹಾನ್ ಕ್ರೋಧ ಉಂಟಾಯಿತು.॥2॥
ಮೂಲಮ್ - 3
ತತೋ ರೋಷಪರೀತಾಂಗೋ ವಾಲೀ ಸ ಕನಕಪ್ರಭಃ ।
ಉಪರಕ್ತ ಇವಾದಿತ್ಯಃ ಸದ್ಯೋ ನಿಷ್ಪ್ರಭತಾಂ ಗತಃ ॥
ಅನುವಾದ
ಮತ್ತೆ ಸುವರ್ಣದಂತೆ ಹಳದಿ ಬಣ್ಣವುಳ್ಳ ವಾಲಿಯ ಶರೀರವೆಲ್ಲ ಕ್ರೋಧದಿಂದ ಉರಿದೆದ್ದಿತು. ಅವನು ರಾಹುಗ್ರಸ್ತ ಸೂರ್ಯನಂತೆ ತತ್ಕ್ಷಣ ಕಲಾಹೀನನಂತೆ ಕಾಣಿಸತೊಡಗಿದನು.॥3॥
ಮೂಲಮ್ - 4
ವಾಲೀ ದಂಷ್ಟ್ರಾಕರಾಲಸ್ತು ಕ್ರೋಧಾದ್ದೀಪ್ತಾಗ್ನಿಲೋಚನಃ ।
ಭಾತ್ಯುತ್ಪತಿತಪದ್ಮಾಭಃ ಸಮೃಣಾಲ ಇವ ಹ್ರದಃ ॥
ಅನುವಾದ
ವಾಲಿಯ ಕೊರೆದಾಡೆ ವಿಕಟವಾಗಿದ್ದವು, ಕ್ರೋಧದಿಂದ ಕಣ್ಣುಗಳು ಪ್ರಜ್ವಲಿತ ಅಗ್ನಿಯಂತೆ ಉರಿಯುತ್ತಿದ್ದವು. ಕಮಲ ಪುಷ್ಪಗಳು ನಾಶವಾಗಿ ಕೇವಲ ಪಾಚಿಯೇ ತುಂಬಿದ್ದ ಸರೋವರದಂತೆ ಅವನು ಶ್ರೀಹೀನನಂತೆ ಕಾಣಿಸುತ್ತಿದ್ದನು.॥4॥
ಮೂಲಮ್ - 5
ಶಬ್ದಂ ದುರ್ಮರ್ಷಣಂ ಶ್ರುತ್ವಾ ನಿಷ್ಪಪಾತ ತತೋ ಹರಿಃ ।
ವೇಗೇನ ಚ ಪದನ್ಯಾಸೈರ್ದಾರಯನ್ನಿವ ಮೇದಿನೀಮ್ ॥
ಅನುವಾದ
ಆ ದುಃಸಹವಾದ ಶಬ್ದವನ್ನು ಕೇಳಿದ ವಾಲಿಯು ಕಾಲುಗಳನ್ನು ಅಪ್ಪಳಿಸುತ್ತ ಅತಿ ವೇಗವಾಗಿ ಹೊರಟನು.॥5॥
ಮೂಲಮ್ - 6
ತಂ ತು ತಾರಾ ಪರಿಷ್ವಜ್ಯ ಸ್ನೇಹಾದ್ದರ್ಶಿತ ಸೌಹೃದಾ ।
ಉವಾಚ ತ್ರಸ್ತ ಸಂಭ್ರಾಂತಾ ಹಿತೋದರ್ಕಮಿದಂ ವಚಃ ॥
ಅನುವಾದ
ಆಗ ವಾಲಿಯ ಪತ್ನೀ ತಾರೆಯು ಭಯಗೊಂಡು ಗಾಬರಿಗೊಂಡಳು. ಅವಳು ವಾಲಿಯನ್ನು ಎರಡೂ ಕೈಗಳಿಂದ ಅಪ್ಪಿಕೊಂಡು, ಸ್ನೇಹದಿಂದ ಸೌಹಾರ್ದವನ್ನು ತೋರುತ್ತಾ, ಪರಿಣಾಮದಲ್ಲಿ ಹಿತವಾಗುವ ಮಾತನ್ನು ಹೇಳಿದಳು.॥6॥
ಮೂಲಮ್ - 7
ಸಾಧುಃ ಕ್ರೋಧಮಿಮಂ ವೀರ ನದೀವೇಗಮಿವಾಗತಮ್ ।
ಶಯನಾದುತ್ಥಿತಃ ಕಾಲ್ಯಂ ತ್ಯಜ ಭುಕ್ತಾಮಿವ ಸ್ರಜಮ್ ॥
ಅನುವಾದ
ವೀರನೇ! ನನ್ನ ಹಿತಕರ ಮಾತನ್ನು ಕೇಳಿರಿ. ಒಮ್ಮೆಲೆ ಬಂದ ನದಿಯ ಮಹಾಪೂರದಂತಹ ಈ ಹೆಚ್ಚಾದ ಕ್ರೋಧವನ್ನು ತ್ಯಜಿಸಿರಿ. ಬೆಳಿಗ್ಗೆ ಹಾಸಿಗೆಯಿಂದ ಎದ್ದ ಪುರುಷನು ರಾತ್ರೆಯ ಉಪಭೋಗಿಸಿದ ಹೂವಿನ ಮಾಲೆಯನ್ನು ತ್ಯಜಿಸುವಂತೆ ಈ ಕ್ರೋಧವನ್ನು ಬಿಟ್ಟುಬಿಡಿರಿ.॥7॥
ಮೂಲಮ್ - 8
ಕಾಲ್ಯಮೇತೇನ ಸಂಗ್ರಾಮಂ ಕರಿಷ್ಯಸಿ ಚ ವಾನರ ।
ವೀರ ತೇ ಶತ್ರುಬಾಹುಲ್ಯಂ ಫಲ್ಗುತಾ ವಾ ನ ವಿದ್ಯತೇ ॥
ಮೂಲಮ್ - 9
ಸಹಸಾ ತವ ನಿಷ್ಕ್ರಾಮೋ ಮಮತಾವನ್ನ ರೋಚತೇ ।
ಶ್ರೂಯತಾಮಭಿಧಾಸ್ಯಾಮಿ ಯನ್ನಿಮಿತ್ತಂ ನಿವಾರ್ಯತೇ ॥
ಅನುವಾದ
ವಾನರವೀರ! ನಾಳೆ ಬೆಳಿಗ್ಗೆ ಸುಗ್ರೀವನೊಂದಿಗೆ ಯುದ್ಧಮಾಡಿರಿ. (ಈಗ ಹೋಗ ಬೇಡಿ) ಯುದ್ಧದಲ್ಲಿ ಯಾವುದೇ ಶತ್ರು ನಿಮಗಿಂತ ಮಿಗಿಲಾದವನಿಲ್ಲ ಹಾಗೂ ನೀವು ಯಾರಿಗಿಂತಲೂ ಕಡಿಮೆಯಲ್ಲದಿದ್ದರೂ ಈಗ ಒಮ್ಮೆಲೆ ನೀವು ಹೊರಗೆ ಹೋಗುವುದು ನನಗೆ ಒಳ್ಳೆಯದೆನಿಸುವುದಿಲ್ಲ. ನಿಮ್ಮನ್ನು ತಡೆಯುವ ಒಂದು ವಿಶೇಷ ಕಾರಣವೂ ಇದೆ. ಅದನ್ನು ಹೇಳುತ್ತೇನೆ ಕೇಳಿರಿ.॥8-9॥
ಮೂಲಮ್ - 10
ಪೂರ್ವಮಾಪತಿತಃ ಕ್ರೋಧಾತ್ ಸ ತ್ವಾಮಾಹ್ವಯತೇ ಯುಧಿ ।
ನಿಷ್ಪತ್ಯಚ ನಿರಸ್ತಸ್ತೇ ಹನ್ಯಮಾನೋ ದಿಶೋ ಗತಃ ॥
ಅನುವಾದ
ಸುಗ್ರೀವನು ಮೊದಲೂ ಇಲ್ಲಿಗೆ ಬಂದಿದ್ದನು ಹಾಗೂ ಕ್ರೋಧದಿಂದ ನಿಮ್ಮನ್ನು ಯುದ್ಧಕ್ಕಾಗಿ ಆಹ್ವಾನಿಸಿದ್ದನು. ಆಗ ನೀವು ಅವನನ್ನು ಸೋಲಿಸಿಯೂ ಬಿಟ್ಟಿದ್ದೀರಿ. ಅವನು ನಿಮ್ಮಿಂದ ಏಟುತಿಂದು ಓಡಿಹೋಗಿ ಮತಂಗ ವನವನ್ನು ಹೊಕ್ಕಿದ್ದನು.॥10॥
ಮೂಲಮ್ - 11
ತ್ವಯಾ ತಸ್ಯ ನಿರಸ್ತಸ್ಯ ಪೀಡಿತಸ್ಯ ವಿಶೇಷತಃ ।
ಇಹೈತ್ಯ ಪುನರಾಹ್ವಾನಂ ಶಂಕಾಂ ಜನಯತೀವ ಮೇ ॥
ಅನುವಾದ
ಹೀಗೆ ನಿಮ್ಮಿಂದ ಪರಾಜಿತನಾಗಿ, ವಿಶೇಷ ಪೀಡಿತನಾಗಿದ್ದರೂ ಪುನಃ ಇಲ್ಲಿಗೆ ಬಂದು ನಿಮ್ಮನ್ನು ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದಾನೆ. ಅವನ ಈ ಪುನರಾಗಮನವು ನನ್ನ ಮನಸ್ಸಿನಲ್ಲಿ ಸಂಶಯ ಉಂಟುಮಾಡಿದೆ.॥11॥
ಮೂಲಮ್ - 12
ದರ್ಪಶ್ಚ ವ್ಯವಸಾಯಶ್ಚ ಯಾದೃಶಸ್ತಸ್ಯ ನರ್ದತಃ ।
ನಿನಾದಸ್ಯ ಚ ಸಂರಂಭೋ ನೈತದಲ್ಪಂ ಹಿ ಕಾರಣಮ್ ॥
ಅನುವಾದ
ಈಗ ಗರ್ಜಿಸುತ್ತಿರುವ ಸುಗ್ರೀವನ ದರ್ಪ ಮತ್ತು ಉದ್ಯೋಗವನ್ನು ನೋಡಿದರೆ ಅವನ ಗರ್ಜನೆಯಿಂದ, ಉತ್ತೇಜನದಿಂದ ಇದಕ್ಕೆ ಯಾವುದೋ ದೊಡ್ಡ ಕಾರಣ ಇರಲೇಬೇಕು.॥12॥
ಮೂಲಮ್ - 13
ನಾಸಹಾಯಮಹಂ ಮನ್ಯೇ ಸುಗ್ರೀವಂ ತಮಿಹಾಗತಮ್ ।
ಅವಷ್ಟಬ್ಧಸಹಾಯಶ್ಚ ಯಮಾಶ್ರಿತ್ಯೈಷ ಗರ್ಜತಿ ॥
ಅನುವಾದ
ಸುಗ್ರೀವನು ಯಾರೋ ಪ್ರಬಲ ಸಹಾಯಕನಿಲ್ಲದೇ ಈ ಸಲ ಇಲ್ಲಿಗೆ ಬರಲಾರನು ಎಂದೇ ನಾನು ತಿಳಿಯುತ್ತೇನೆ. ಯಾರೋ ಬಲಿಷ್ಠ ಸಹಾಯಕನನ್ನು ಜೊತೆಗೆ ಕರೆದುಕೊಂಡೇ ಬಂದಿರುವನು. ಅವನ ಬಲದಿಂದ ಹೀಗೆ ಗರ್ಜಸುತ್ತಿದ್ದಾನೆ.॥13॥
ಮೂಲಮ್ - 14
ಪ್ರಕೃತ್ಯಾ ನಿಪುಣಶ್ಚೈವ ಬುದ್ಧಿಮಾಂಶ್ಚೈವ ವಾನರಃ ।
ಅಪರೀಕ್ಷಿತವೀರ್ಯೇಣ ಸುಗ್ರೀವಃ ಸಖ್ಯಮೇಷ್ಯತಿ ॥
ಅನುವಾದ
ವಾನರ ಸುಗ್ರೀವನು ಸ್ವಭಾವದಿಂದಲೇ ಕಾರ್ಯ ಕುಶಲ ಮತ್ತು ಬುದ್ಧಿವಂತನಾಗಿದ್ದಾನೆ. ಸರಿಯಾಗಿ ಬಲ ಮತ್ತು ಪರಾಕ್ರಮವನ್ನು ಪರೀಕ್ಷಿಸದೆ ಯಾವುದೇ ಪುರುಷನೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳಲಾರ.॥14॥
ಮೂಲಮ್ - 15
ಪೂರ್ವಮೇವ ಮಯಾ ವೀರ ಶ್ರುತಂ ಕಥಯತೋ ವಚಃ ।
ಅಂಗದಸ್ಯ ಕುಮಾರಸ್ಯ ವಕ್ಷಾಮ್ಯದ್ಯ ಹಿತಂ ವಚಃ ॥
ಅನುವಾದ
ವೀರನೇ! ನಾನು ಮೊದಲೇ ಕುಮಾರ ಅಂಗದನಿಂದ ಈ ಮಾತನ್ನು ಕೇಳಿರುವೆನು. ಅದಕ್ಕಾಗಿ ಇಂದು ನಾನು ನಿಮ್ಮ ಹಿತದ ಮಾತನ್ನು ಹೇಳುತ್ತಿದ್ದೇನೆ.॥15॥
ಮೂಲಮ್ - 16
ಅಂಗದಸ್ತು ಕುಮಾರೋಽಯಂ ವನಾಂತಮುಪನಿರ್ಗತಃ ।
ಪ್ರವೃತ್ತಿಸ್ತೇನ ಕಥಿತಾ ಚಾರೈರಾಸೀನ್ನಿವೇದಿತಾ ॥
ಅನುವಾದ
ಒಂದು ದಿನ ಅಂಗದನು ವನಕ್ಕೆ ಹೋಗಿದ್ದಾಗ ಅಲ್ಲಿ ಗುಪ್ತಚರರು ಅವನಿಗೆ ಈ ಸಮಾಚಾರ ತಿಳಿಸಿದ್ದರು. ಅದನ್ನು ಅವನು ಇಲ್ಲಿಗೆ ಬಂದು ನನಗೆ ಹೇಳಿದ್ದನು.॥16॥
ಮೂಲಮ್ - 17
ಅಯೋಧ್ಯಾಧಿಪತೇಃ ಪುತ್ರೌ ಶೂರೌ ಸಮರದುರ್ಜಯೌ ।
ಇಕ್ಷ್ವಾಕೂಣಾಂ ಕುಲೇ ಜಾತೌ ಪ್ರಸ್ಥಿತೌ ರಾಮಲಕ್ಷ್ಮಣೌ ॥
ಅನುವಾದ
ಆ ಸಮಾಚಾರ ಇಂತಿದೆ - ಅಯೋಧ್ಯಾನರೇಶನ ಇಕ್ಷ್ವಾಕುವಂಶದಲ್ಲಿ ಹುಟ್ಟಿದ, ಯುದ್ಧದಲ್ಲಿ ಜಯಿಸಲು ಅತ್ಯಂತ ಕಠಿಣರಾದ ಇಬ್ಬರು ಶೂರ-ವೀರ ಪುತ್ರರು ಶ್ರೀರಾಮ-ಲಕ್ಷ್ಮಣರೆಂದು ಪ್ರಸಿದ್ಧರಾದವರು ಇಲ್ಲಿಗೆ ವನಕ್ಕೆ ಬಂದಿರುವರು.॥17॥
ಮೂಲಮ್ - 18
ಸುಗ್ರೀವಪ್ರಿಯಕಾಮಾರ್ಥಂ ಪ್ರಾಪ್ತೌ ತತ್ರ ದುರಾಸದೌ ।
ಸ ತೇ ಭ್ರಾತುರ್ಹಿ ವಿಖ್ಯಾತಃ ಸಹಾಯೋ ರಣಕರ್ಮಣಿ ॥
ಮೂಲಮ್ - 19
ರಾಮಃ ಪರಬಲಾಮರ್ದೀ ಯುಗಾಂತಾಗ್ನಿರಿವೋತ್ಥಿತಃ ।
ನಿವಾಸವೃಕ್ಷಃ ಸಾಧೂನಾಮಾಪನ್ನಾನಾಂ ಪರಾ ಗತಿಃ ॥
ಅನುವಾದ
ಆ ಇಬ್ಬರು ದುರ್ಜಯ ವೀರರು ಸುಗ್ರೀವನ ಪ್ರಿಯವನ್ನು ಮಾಡಲಿಕ್ಕಾಗಿ ಅವನ ಬಳಿಗೆ ಬಂದಿರುವರು. ಆ ಇಬ್ಬರಲ್ಲಿ ನಿಮ್ಮ ತಮ್ಮನ ಯುದ್ಧ ಕರ್ಮದಲ್ಲಿ ಸಹಾಯಕನಾದ ಶ್ರೀರಾಮನು ಶತ್ರುಗಳನ್ನು ಸಂಹರಿಸುವುದರಲ್ಲಿ ಪ್ರಳಯಕಾಲದ ಪ್ರಜ್ವಲಿತ ಅಗ್ನಿಯಂತೆ ತೇಜಸ್ವಿಯಾಗಿದ್ದಾನೆ. ಅವನು ಸಾಧು ಪುರುಷರ ಆಶ್ರಯ ದಾತಾ, ಕಲ್ಪವೃಕ್ಷನಾಗಿದ್ದಾನೆ ಹಾಗೂ ಸಂಕಟದಲ್ಲಿ ಬಿದ್ದ ಪ್ರಾಣಿಗಳಿಗೆ ದೊಡ್ಡ ಆಸರೆಯಾಗಿದ್ದಾನೆ.॥18-19॥
ಮೂಲಮ್ - 20
ಆರ್ತಾನಾಂ ಸಂಶ್ರಯಶ್ಚೈವ ಯಶಸಶ್ಚೈಕಭಾಜನಮ್ ।
ಜ್ಞಾನವಿಜ್ಞಾನಸಂಪನ್ನೋ ನಿದೇಶೇ ನಿರತಃ ಪಿತುಃ ॥
ಅನುವಾದ
ಆರ್ತ ಪುರುಷರ ಆಶ್ರಯನೂ, ಯಶದ ಏಕಮಾತ್ರ ಪಾತ್ರನು, ಜ್ಞಾನ-ವಿಜ್ಞಾನದಿಂದ ಸಂಪನ್ನನೂ, ಪಿತೃವಾಕ್ಯಪಾಲನೆಯಲ್ಲಿ ಸ್ಥಿತನಾಗಿರುವನು.॥20॥
ಮೂಲಮ್ - 21½
ಧಾತೂನಾಮಿವ ಶೈಲೇಂದ್ರೋ ಗುಣಾನಾಮಾಕರೋ ಮಹಾನ್ ।
ತತ್ಕ್ಷಮೋ ನ ವಿರೋಧಸ್ತೇ ಸಹ ತೇನ ಮಹಾತ್ಮನಾ ॥
ದುರ್ಜಯೇನಾಪ್ರಮೇಯೇಣ ರಾಮೇಣ ರಣಕರ್ಮಸು ।
ಅನುವಾದ
ಗಿರಿರಾಜ ಹಿಮಾಲಯವು ನಾನಾ ಧಾತುಗಳ ಗಣಿಯಾಗಿರುವಂತೆಯೇ ಶ್ರೀರಾಮನು ಉತ್ತಮ ಗುಣಗಳ ದೊಡ್ಡ ಭಂಡಾರವಾಗಿದ್ದಾನೆ. ಆದ್ದರಿಂದ ಆ ಮಹಾತ್ಮಾ ರಾಮನೊಂದಿಗೆ ವಿರೋಧ ಮಾಡುವುದು ಎಂದಿಗೂ ಉಚಿತವಾಗಲಾರದು; ಏಕೆಂದರೆ ಅವನು ಯುದ್ಧಕಲೆಯಲ್ಲಿ ಪರಮ ನಿಷ್ಣಾತನಾಗಿದ್ದು, ಅವನನ್ನು ಗೆಲ್ಲುವುದು ಅತ್ಯಂತ ಕಠಿಣವಾಗಿದೆ.॥21½॥
ಮೂಲಮ್ - 22½
ಶೂರ ವಕ್ಷ್ಯಾಮಿ ತೇ ಕಿಚಿನ್ನ ಚೇಚ್ಛಾಮ್ಯಭ್ಯಸೂಯಿತುಮ್ ॥
ಶ್ರೂಯತಾಂ ಕ್ರಿಯತಾಂ ಚೈವ ತವ ವಕ್ಷ್ಯಾಮಿ ಯದ್ಧಿತಮ್ ।
ಅನುವಾದ
ಶೂರನೇ! ನಾನು ನಿಮ್ಮ ಗುಣಗಳಲ್ಲಿ ದೋಷವನ್ನು ನೋಡುವುದಿಲ್ಲ. ಆದ್ದರಿಂದ ನಿಮ್ಮಲ್ಲಿ ಏನೋ ಹೇಳುತ್ತಿದ್ದೇನೆ. ಹಿತಕರವಾದುದನ್ನೇ ನಿಮಗೆ ತಿಳಿಸುತ್ತಿದ್ದೇನೆ. ನೀವು ಅದನ್ನು ಕೇಳಿ ಹಾಗೆಯೇ ಮಾಡಿರಿ.॥22½॥
ಮೂಲಮ್ - 23½
ಯೌವರಾಜ್ಯೇನ ಸುಗ್ರೀವಂ ತೂರ್ಣಂ ಸಾಧ್ವಭಿಷೇಚಯ ॥
ವಿಗ್ರಹಂ ಮಾ ಕೃಥಾ ವೀರ ಭ್ರಾತ್ರಾ ರಾಜನ್ ಯವೀಯಸಾ ।
ಅನುವಾದ
ನೀವು ಸುಗ್ರೀವನಿಗೆ ಬೇಗನೇ ಯುವರಾಜನಾಗಿ ಪಟ್ಟಾಭಿಷೇಕ ಮಾಡಿರಿ, ಇದೇ ಒಳ್ಳೆಯದಾಗಬಹುದು. ವೀರ ವಾನರರಾಜ! ಸುಗ್ರೀವನು ನಿಮ್ಮ ತಮ್ಮನಾಗಿರುವನು, ಅವನೊಂದಿಗೆ ಯುದ್ಧ ಮಾಡಬೇಡಿರಿ.॥23½॥
ಮೂಲಮ್ - 24½
ಅಹಂ ಹಿ ತೇ ಕ್ಷಮಂ ಮನ್ಯೇ ತೇನ ರಾಮೇಣ ಸೌಹೃದಮ್ ॥
ಸುಗ್ರೀವೇಣ ಚ ಸಂಪ್ರೀತಿಂ ವೈರಮುತ್ಸೃಜ್ಯ ದೂರತಃ ।
ಅನುವಾದ
ನಿಮಗೆ ಇದೇ ಉಚಿತವಾಗಿದೆ ಎಂದು ನಾನು ತಿಳಿಯುತ್ತೇನೆ. ನೀವು ವೈರವನ್ನು ಬಿಟ್ಟು ಶ್ರೀರಾಮನೊಂದಿಗೆ ಸೌಹಾರ್ದ ಮತ್ತು ಸುಗ್ರೀವನೊಂದಿಗೆ ಪ್ರೇಮದ ಸಂಬಂಧವನ್ನು ಸ್ಥಾಪಿಸಿರಿ.॥24½॥
ಮೂಲಮ್ - 25
ಲಾಲನೀಯೋ ಹಿ ತೇ ಭ್ರಾತಾ ಯವೀಯಾನೇಷ ವಾನರಃ ॥
ಮೂಲಮ್ - 26
ತತ್ರ ವಾ ಸನ್ನಿಹಸ್ಥೋ ವಾ ಸರ್ವಥಾ ಬಂಧುರೇವ ತೇ ।
ನ ಹಿ ತೇನ ಸಮಂ ಬಂಧುಂ ಭುವಿ ಪಶ್ಯಾಮಿ ಕಂಚನ ॥
ಅನುವಾದ
ವಾನರ ಸುಗ್ರೀವನು ನಿಮ್ಮ ತಮ್ಮನಾಗಿರುವನು, ಆದ್ದರಿಂದ ಪ್ರೀತಿಸಲು ಯೋಗ್ಯನಾಗಿದ್ದಾನೆ. ಅವನು ಋಷ್ಯಮೂಕದಲ್ಲಿರಲೀ ಅಥವಾ ಕಿಷ್ಕಿಂಧೆಯಲ್ಲಿರಲಿ, ಅವನು ಸರ್ವಥಾ ನಿಮ್ಮ ಬಂಧುವೇ ಆಗಿದ್ದಾನೆ. ನಾನು ಈ ಭೂತಳದಲ್ಲಿ ಅವನಂತೆ ಸರಿಯಾದ ಬಂಧು ಬೇರೆ ಯಾರನ್ನು ನೋಡುವುದಿಲ್ಲ.॥25-26॥
ಮೂಲಮ್ - 27
ದಾನಮಾನಾದಿಸತ್ಕಾರೈಃ ಕುರುಷ್ವ ಪ್ರತ್ಯನಂತರಮ್ ।
ವೈರಮೇತತ್ಸಮುತ್ಸೃಜ್ಯ ತನ ಪಾರ್ಶ್ವೇ ಸ ತಿಷ್ಠತು ॥
ಅನುವಾದ
ನೀವು ದಾನ-ಮಾನಾದಿಗಳ ಸತ್ಕಾರದಿಂದ ಅವನನ್ನು ಅತ್ಯಂತ ಅಂತರಂಗದವನನ್ನಾಗಿಸಿಕೊಳ್ಳಿ. ಇದರಿಂದ ಅವನು ಈ ವೈರಭಾವವನ್ನು ಬಿಟ್ಟು ನಿಮ್ಮ ಹತ್ತಿರವೇ ಇರುವನು.॥27॥
ಮೂಲಮ್ - 28
ಸುಗ್ರೀವೋ ವಿಪುಲಗ್ರೀವೋ ಮಹಾಬಂಧುರ್ಮತಸ್ತವ ।
ಭ್ರಾತೃ ಸೌಹೃದಮಾಲಂಬ್ಯ ನಾನ್ಯಾ ಗತಿರಿಹಾಸ್ತಿ ತೇ ॥
ಅನುವಾದ
ಪುಷ್ಟಗ್ರೀವನಾದ ಸುಗ್ರೀವನು ನಿಮಗೆ ಅತ್ಯಂತ ಪ್ರೇಮಿ ಬಂಧು ಆಗಿದ್ದಾನೆ ಎಂಬುದೇ ನನ್ನ ಮತವಾಗಿದೆ. ಈಗ ನೀವು ಭ್ರಾತೃಪ್ರೇಮದ ಆಸರೆಯನ್ನು ಪಡೆಯುವುದಲ್ಲದೆ ಇಲ್ಲಿ ಬೇರೆ ಗತಿಯೇ ಇಲ್ಲ.॥28॥
ಮೂಲಮ್ - 29
ಯದಿ ತೇ ಮತ್ಪ್ರಿಯಂ ಕಾರ್ಯಂ ಯದಿ ಚಾವೈಷಿ ಮಾಂ ಹಿತಾಮ್ ।
ಯಾಚ್ಯಮಾನಃ ಪ್ರಿಯತ್ನೇನ ಸಾಧು ವಾಕ್ಯಂ ಕುರುಷ್ವ ಮೇ ॥
ಅನುವಾದ
ನಿಮಗೆ ನನ್ನ ಪ್ರಿಯವನ್ನು ಮಾಡಬೇಕೆಂದಿದ್ದರೆ, ನೀವು ನನ್ನನ್ನು ಹಿತಕಾರಿಣಿ ಎಂದು ತಿಳಿಯುತ್ತಿದ್ದರೆ, ನೀವು ನನ್ನ ಈ ಸರಿಯಾದ ಸಲಹೆಯನ್ನು ಒಪ್ಪಿಕೊಳ್ಳಬೇಕೆಂದು ನಾನು ಪ್ರೇಮದಿಂದ ಯಾಚಿಸುತ್ತಿದ್ದೇನೆ.॥29॥
ಮೂಲಮ್ - 30
ಪ್ರಸೀದ ಪಥ್ಯಂ ಶೃಣು ಜಲ್ಪಿತಂ ಹಿ ಮೇ
ನ ರೋಷಮೇವಾನುವಿಧಾತುಮರ್ಹಸಿ ।
ಕ್ಷಮೋ ಹಿ ತೇ ಕೋಸಲರಾಜಸೂನುನಾ
ನ ವಿಗ್ರಹಃ ಶಕ್ರಸಮಾನತೇಜಸಾ ॥
ಅನುವಾದ
ಸ್ವಾಮಿ! ನಾನು ನಿಮ್ಮ ಹಿತದ ಮಾತನ್ನು ಹೇಳುತ್ತೇನೆ. ನೀವು ಇದನ್ನು ಗಮನವಿಟ್ಟು ಕೇಳಿ ಪ್ರಸನ್ನರಾಗಿರಿ. ಕೇವಲ ರೋಷವನ್ನೇ ಅನುಸರಿಸಬೇಡಿ. ಕೋಸಲ ರಾಜಕುಮಾರ ಶ್ರೀರಾಮನು ಇಂದ್ರನಂತೆ ತೇಜಸ್ವಿಯಾಗಿದ್ದಾನೆ. ಅವನೊಡನೆ ವೈರ ಕಟ್ಟಿಕೊಳ್ಳುವುದು, ಅಥವಾ ಯುದ್ಧಸಾರುವುದು ನಿಮಗಾಗಿ ಎಂದಿಗೂ ಉಚಿತವಲ್ಲ.॥30॥
ಮೂಲಮ್ - 31
ತದಾ ಹಿ ತಾರಾ ಹಿತಮೇವ ವಾಕ್ಯಂ
ತಂ ವಾಲಿನಂ ಪಥ್ಯಮಿದಂ ಬಭಾಷೇ ।
ನ ರೋಚತೇ ತದ್ವಚನಂ ಹಿ ತಸ್ಯ
ಕಾಲಾಭಿಪನ್ನಸ್ಯ ವಿನಾಶಕಾಲೇ ॥
ಅನುವಾದ
ಆಗ ತಾರೆಯು ವಾಲಿಯಲ್ಲಿ ಅವನ ಹಿತದ ಮಾತನ್ನೇ ಹೇಳಿದ್ದಳು ಹಾಗೂ ಇದು ಲಾಭದಾಯಕವೂ ಆಗಿತ್ತು. ಆದರೆ ಆಕೆಯ ಮಾತು ಅವನಿಗೆ ರುಚಿಸಲಿಲ್ಲ; ಏಕೆಂದರೆ ಅವನ ವಿನಾಶದ ಸಮಯ ಸನ್ನಿಹಿತವಾಗಿತ್ತು ಹಾಗೂ ಕಾಲಪಾಶದಿಂದ ಬಂಧಿತನಾಗಿದ್ದನು.॥31॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹದಿನೈದನೆಯ ಸರ್ಗ ಸಂಪೂರ್ಣವಾಯಿತು. ॥15॥