वाचनम्
ಭಾಗಸೂಚನಾ
ವಾಲಿವಧೆಯ ಬಗ್ಗೆ ಶ್ರೀರಾಮನ ಆಶ್ವಾಸನೆ ಪಡೆದು ಸುಗ್ರೀವನು ವಿಕಟವಾಗಿ ಗರ್ಜಿಸಿದುದು
ಮೂಲಮ್ - 1
ಸರ್ವೇ ತೇ ತ್ವರಿತಂ ಗತ್ವಾ ಕಿಷ್ಕಿಂಧಾಂ ವಾಲಿನಃ ಪುರೀಮ್ ।
ವೃಕ್ಷೈರಾತ್ಮಾನಮಾವೃತ್ಯ ವ್ಯತಿಷ್ಠನ್ ಗಹನೇ ವನೇ ॥
ಅನುವಾದ
ಅವರೆಲ್ಲರೂ ಶೀಘ್ರವಾಗಿ ವಾಲಿಯ ಕಿಷ್ಕಿಂಧೆಗೆ ತಲುಪಿ ಒಂದು ಗಹನವನದಲ್ಲಿ ಮರಗಳ ಮರೆಯಲ್ಲಿ ತಮ್ಮನ್ನು ಬಚ್ಚಿಟ್ಟುಕೊಂಡು ನಿಂತುಕೊಂಡರು.॥1॥
ಮೂಲಮ್ - 2
ವಿಸಾರ್ಯ ಸರ್ವತೋ ದೃಷ್ಟಿಂ ಕಾನನೇ ಕಾನನಪ್ರಿಯಃ ।
ಸುಗ್ರೀವೋ ವಿಪುಲಗ್ರೀವಃ ಕ್ರೋಧಮಾಹಾರಯದ್ ಭೃಶಮ್ ॥
ಅನುವಾದ
ವನದ ಪ್ರೇಮಿ ವಿಶಾಲ ಕೊರಳುಳ್ಳ ಸುಗ್ರೀವನು ಆ ವನದಲ್ಲಿ ಎಲ್ಲೆಡೆ ದೃಷ್ಟಿಹರಿಸಿ, ತನ್ನ ಮನಸ್ಸಿನಲ್ಲಿ ಕ್ರೋಧವನ್ನು ಸಂಚಯಿಸಿಕೊಂಡನು.॥2॥
ಮೂಲಮ್ - 3
ತತಸ್ತು ನಿನದಂ ಘೋರಂ ಕೃತ್ವಾ ಯುದ್ಧಾಯ ಚಾಹ್ವಯತ್ ।
ಪರಿವಾರೈಃ ಪರಿವೃತೋ ನಾದೈರ್ಭಿಂದನ್ನಿವಾಂಬರಮ್ ॥
ಅನುವಾದ
ಅನಂತರ ಸಹಾಯಕರಿಂದ ಸುತ್ತುವರೆದ ಅವನು ಸಿಂಹನಾದದಿಂದ ಆಕಾಶವನ್ನೇ ಹರಿಯುವಂತೆ ಘೋರವಾಗಿ ಗರ್ಜಿಸಿ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದನು.॥3॥
ಮೂಲಮ್ - 4
ಗರ್ಜನ್ನಿವ ಮಹಾಮೇಘೋ ವಾಯುವೇಗಪುರಃಸರಃ ।
ಅಥ ಬಾಲಾರ್ಕಸದೃಶೋ ದೃಪ್ತಸಿಂಹಗತಿಸ್ತತಃ ॥
ಅನುವಾದ
ಆಗ ಸುಗ್ರೀವನು ವಾಯುವೇಗದೊಂದಿಗೆ ಗರ್ಜಿಸುತ್ತಿದ್ದ ಮಹಾಮೇಘದಂತೆ ಕಂಡುಬರುತ್ತಿದ್ದನು. ತನ್ನ ಅಂಗಕಾಂತಿ ಮತ್ತು ಪ್ರತಾಪದಿಂದ ಪ್ರಾತಃಕಾಲದ ಸೂರ್ಯನಂತೆ ಪ್ರಕಾಶಿಸುತ್ತಿದ್ದನು. ಅವನ ನಡೆ ದರ್ಪಭರಿತ ಸಿಂಹದಂತೆ ಕಂಡುಬರುತ್ತಿತ್ತು.॥4॥
ಮೂಲಮ್ - 5
ದೃಷ್ಟ್ವಾ ರಾಮಂ ಕ್ರಿಯಾದಕ್ಷಂ ಸುಗ್ರೀವೋ ವಾಕ್ಯಮಬ್ರವೀತ್ ।
ಹರಿವಾಗುರಯಾ ವ್ಯಾಪ್ತಾಂ ತಪ್ತಕಾಂಚನ ತೋರಣಾಮ್ ॥
ಮೂಲಮ್ - 6½
ಪ್ರಾಪ್ತಾಃ ಸ್ಮ ಧ್ವಜಯಂತ್ರಾಢ್ಯಾಂ ಕಿಷ್ಕಿಂಧಾ ವಾಲಿನಃ ಪುರೀಮ್ ।
ಪ್ರತಿಜ್ಞಾ ಯಾ ಕೃತಾ ವೀರ ತ್ವಯಾ ವಾಲಿವಧೇ ಪುರಾ ॥
ಸಲಾಂ ಕುರು ತಾಂ ಕ್ಷಿಪ್ರಂ ಲತಾಂ ಕಾಲ ಇವಾಗತಃ ।
ಅನುವಾದ
ಕಾರ್ಯಕುಶಲ ಶ್ರೀರಾಮಚಂದ್ರನ ಕಡೆಗೆ ನೋಡಿ ಸುಗ್ರೀವನು ಹೇಳಿದನು - ಭಗವಂತಾ! ವಾಲಿಯ ಈ ಕಿಷ್ಕಿಂಧಾಪುರಿಯು ಕಾದ ಚಿನ್ನದಿಂದ ನಿರ್ಮಿತ ನಗರದ್ವಾರದಿಂದ ಸುಶೋಭಿತವಾಗಿದೆ. ಇದರಲ್ಲಿ ಎಲ್ಲೆಡೆ ವಾನರರ ಜಾಲವೇ ಹರಡಿಕೊಂಡಿದೆ ಹಾಗೂ ಇದು ಧ್ವಜಗಳಿಂದ ಮತ್ತು ಯಂತ್ರಗಳಿಂದ ಸಂಪನ್ನವಾಗಿವೆ. ನಾವೆಲ್ಲರೂ ಈ ಪುರಿಗೆ ಬಂದು ತಲುಪಿದ್ದೇವೆ. ವೀರನೇ! ನೀನು ಮೊದಲು ವಾಲಿವಧೆಗಾಗಿ ಪ್ರತಿಜ್ಞೆ ಮಾಡಿದ್ದೀಯೆ, ಅದನ್ನು ಈಗ ಅನುಕೂಲ ಸಮಯ ಬಂದಾಗ ಲತೆಯು ಫಲ-ಪುಷ್ಪಗಳಿಂದ ಸಂಪನ್ನವಾಗುವಂತೆ ಬೇಗನೇ ಸಫಲಗೊಳಿಸು.॥5-6½॥
ಮೂಲಮ್ - 7½
ಏವಮುಕ್ತಸ್ತು ಧರ್ಮಾತ್ಮಾ ಸುಗ್ರೀವೇಣ ಸ ರಾಘವಃ ॥
ಮೇವೋವಾಚ ವಚನಂ ಸುಗ್ರೀವಂ ಶತ್ರುಸೂದನಃ ।
ಅನುವಾದ
ಸುಗ್ರೀವನು ಹೀಗೆ ಹೇಳಿದಾಗ ಶತ್ರುಸೂದನ ಧರ್ಮಾತ್ಮಾ ಶ್ರೀ ರಘುನಾಥನು ಪುನಃ ತನ್ನ ಹಿಂದಿನ ಪ್ರತಿಜ್ಞೆಯನ್ನು ಇನ್ನೊಮ್ಮೆ ಉಚ್ಚರಿಸುತ್ತಾ ಸುಗ್ರೀವನಲ್ಲಿ ಹೇಳಿದನು.॥7½॥
ಮೂಲಮ್ - 8
ಕೃತಾಭಿಜ್ಞಾನಚಿಹ್ನಸ್ತ್ವಮನಯಾ ಗಜಸಾಹ್ವಯಾ ॥
ಮೂಲಮ್ - 9½
ಲಕ್ಷ್ಮಣೇನ ಸಮುತ್ಪಾಟ್ಯ ಯೈಷಾ ಕಂಠೇ ಕೃತಾ ತವ ।
ಶೋಭಸೇಽಪ್ಯಧಿಕಂ ವೀರ ಲತಯಾ ಕಂಠಸಕ್ತಯಾ ॥
ವಿಪರೀತ ಇವಾಕಾಶೇ ಸೂರ್ಯೋ ನಕ್ಷತ್ರಮಾಲಯಾ ।
ಅನುವಾದ
ವೀರನೇ! ಈಗಲಾದರೋ ಈ ಗಜಪುಷ್ಪ ಲತೆಯಿಂದ ನೀನು ನಿನ್ನ ಪರಿಚಯಕ್ಕಾಗಿ ಚಿಹ್ನೆಯನ್ನು ಧರಿಸಿದ್ದೀಯೆ. ಲಕ್ಷ್ಮಣನು ಇದನ್ನು ಕಿತ್ತು ನಿನ್ನ ಕೊರಳಿಗೆ ತೊಡಿಸಿರುವನು. ನೀನು ಕೊರಳಲ್ಲಿ ಧರಿಸಿದ ಈ ಲತೆಯಿಂದಾಗಿ ಬಹಳ ಶೋಭಿಸುತ್ತಿರುವೆ. ಆಕಾಶದಲ್ಲಿ ಸೂರ್ಯಮಂಡಲವನ್ನು ನಕ್ಷತ್ರಗಳ ಮಾಲೆಯಿಂದ ಅವರಿಸಿದ ಈ ವಿಪರೀತ ಘಟನೆ ನಡೆದರೆ, ಆಗ ಈ ಕೊರಳು ಲತೆಯಿಂದ ಶೋಭಿತವಾಗುವ ನಿನ್ನ ತುಲನೆ ಸೂರ್ಯನೊಂದಿಗೆ ಆಗಬಹುದು.॥8-9½॥
ಮೂಲಮ್ - 10½
ಅದ್ಯ ವಾಲಿಸಮುತ್ಥಂ ತೇ ಭಯಂ ವೈರಂ ಚ ವಾನರ ॥
ಏಕೇನಾಹಂ ಪ್ರಮೋಕ್ಷ್ಯಾಮಿ ಬಾಣಮೋಕ್ಷೇಣ ಸಂಯುಗೇ ।
ಅನುವಾದ
ವಾನರ ರಾಜನೇ! ಇಂದು ವಾಲಿಯಿಂದ ಉತ್ಪನ್ನವಾದ ನಿನ್ನ ಭಯ ಮತ್ತು ವೈರ ಎರಡನ್ನೂ ಯುದ್ಧಸ್ಥಳದಲ್ಲಿ ನಾನು ಒಂದೇ ಬಾಣವನ್ನು ಬಿಟ್ಟು ಅಳಿಸಿ ಬಿಡುವೆನು.॥10½॥
ಮೂಲಮ್ - 11½
ಮಮ ದರ್ಶಯ ಸುಗ್ರೀವ ವೈರಿಣಂ ಭ್ರಾತೃರೂಪಿಣಮ್ ॥
ವಾಲೀ ವಿನಿಹತೋ ಯಾವದ್ವನೇ ಪಾಂಸುಷು ಚೇಷ್ಟತೇ ।
ಅನುವಾದ
ಸುಗ್ರೀವನೇ! ನೀನು ನನಗೆ ನಿನ್ನ ಭ್ರಾತೃರೂಪೀ ಶತ್ರುವನ್ನು ತೋರಿಸಿಬಿಡು. ಮತ್ತೆ ವಾಲಿಯು ಸತ್ತುಹೋಗಿ ವನದೊಳಗೆ ಧೂಳಿಯಲ್ಲಿ ಮಲಗಿರುವುದನ್ನು ನೋಡುವೆ.॥11½॥
ಮೂಲಮ್ - 12½
ಯದಿ ದೃಷ್ಟಿಪಥಂ ಪ್ರಪ್ತೋ ಜೀವನ್ ಸ ವಿನಿವರ್ತತೇ ॥
ತತೋ ದೋಷೇಣ ಮಾಗಚ್ಛೇತ್ಸದ್ಯೋ ಗರ್ಹೇಚ್ಚ ಮಾಂ ಭವಾನ್ ।
ಅನುವಾದ
ನನ್ನ ದೃಷ್ಟಿಗೆ ಬಿದ್ದ ಮೇಲೆಯೂ ಅವನು ಜೀವಂತವಾಗಿ ಮರಳಿ ಹೋದರೆ ನೀನು ನನ್ನನ್ನು ದೋಷಿ ಎಂದು ತಿಳಿ ಮತ್ತು ಕೂಡಲೇ ಮನಃಪೂರ್ವಕ ನನ್ನನ್ನು ನಿಂದಿಸಬಹುದು.॥12½॥
ಮೂಲಮ್ - 13½
ಪ್ರತ್ಯಕ್ಷಂ ಸಪ್ತ ತೇ ಸಾಲಾ ಮಯಾ ಬಾಣೇನ ದಾರಿತಾಃ ॥
ತೇನಾವೇಹಿ ಬಲೇನಾದ್ಯ ವಾಲಿನಂ ನಿಹತಂ ರಣೇ ।
ಅನುವಾದ
ನಿನ್ನ ಕಣ್ಣು ಎದುರಿಗೆ ನಾನು ನನ್ನ ಒಂದೇ ಬಾಣದಿಂದ ಏಳು ಸಾಲವೃಕ್ಷಗಳನ್ನು ವಿದೀರ್ಣಗೊಳಿಸಿದ್ದೆ, ಸಮರಾಂಗಣದಲ್ಲಿ ನನ್ನ ಅದೇ ಒಂದು ಬಾಣದಿಂದ ನೀನು ವಾಲಿಯು ಸತ್ತನೆಂದೇ ತಿಳಿ.॥13½॥
ಮೂಲಮ್ - 14
ಅನೃತಂ ನೋಕ್ತಪೂರ್ವಂ ಮೇ ಚಿರಂ ಕೃಚ್ಛ್ರೇಪಿ ತಿಷ್ಠತಾ ॥
ಮೂಲಮ್ - 15
ಧರ್ಮಲೋಭಪರೀತೇನ ನ ಚ ವಕ್ಷ್ಯೇ ಕಥಂಚನ ।
ಸಲಾಂ ಚ ಕರಿಷ್ಯಾಮಿ ಪ್ರತಿಜ್ಞಾಂ ಜಹಿ ಸಂಭ್ರಮಮ್ ॥
ಅನುವಾದ
ಬಹಳ ಸಮಯದಿಂದ ಸಂಕಟವನ್ನು ಅನುಭವಿಸುತ್ತಿದ್ದರೂ ನಾನು ಎಂದೂ ಸುಳ್ಳು ಹೇಳಲಿಲ್ಲ. ನನ್ನ ಮನಸ್ಸಿನಲ್ಲಿ ಧರ್ಮದ ಲೋಭವಿದೆ. ಅದಕ್ಕಾಗಿ ಯಾವುದೇ ರೀತಿಯಿಂದ ನಾನು ಸುಳ್ಳು ಹೇಳಲಾರೆ. ಜೊತೆಗೆ ತನ್ನ ಪ್ರತಿಜ್ಞೆಯನ್ನು ಅವಶ್ಯವಾಗಿ ಸಫಲಗೊಳಿಸುವೆನು. ಆದ್ದರಿಂದ ನೀನು ಭಯ ಮತ್ತು ಗಾಬರಿಯನ್ನು ನಿನ್ನ ಮನಸ್ಸಿನಿಂದ ತೆಗೆದು ಹಾಕು.॥14-15॥
ಮೂಲಮ್ - 16½
ಪ್ರಸೂತಂ ಕಲಮಕ್ಷೇತ್ರಂ ವರ್ಷೇಣೇವ ಶತಕ್ರತುಃ ।
ತದಾಹ್ವಾನಮಿತ್ತಂ ಚ ವಾಲಿನೋ ಹೇಮಮಾಲಿನಃ ॥
ಸುಗ್ರೀವ ಕುರು ತಂ ಶಬ್ದಂ ನಷ್ಪತೇದ್ಯೇನ ವಾನರಃ ।
ಅನುವಾದ
ಇಂದ್ರನು ಮಳೆಗರೆದು ಮೊಳೆತ ಬತ್ತದ ಪೈರನ್ನು ಫಲಭರಿತವಾಗಿಸುವಂತೆಯೇ ನಾನೂ ಬಾಣವನ್ನು ಪ್ರಯೋಗಿಸಿ ವಾಲಿಯ ವಧೆಯಿಂದ ನಿನ್ನ ಮನೋರಥ ಪೂರ್ಣಗೊಳಿಸುವೆನು. ಅದಕ್ಕಾಗಿ ಸುಗ್ರೀವನೇ! ನೀನು ಸುವರ್ಣ ಮಾಲಾಧಾರೀ ವಾಲಿಯನ್ನು ಕರೆಯಲು ಈಗ ಗರ್ಜಿಸು; ಅದರಿಂದ ನಿನ್ನನ್ನು ಎದುರಿಸಲು ಆ ವಾನರನು ನಗರದಿಂದ ಹೊರಗೆ ಬರಲಿ.॥16½॥
ಮೂಲಮ್ - 17½
ಜಿತಕಾಶೀ ಬಲಶ್ಲಾಘೀ ತ್ವಯಾ ಚಾಧರ್ಷಿತಃ ಪುರಾತ್ ॥
ನಿಷ್ಪತಿಷ್ಯತ್ಯಸಂಗೇನ ವಾಲೀ ಸ ಪ್ರಿಯಸಂಯುಗಃ ।
ಅನುವಾದ
ಅವನು ಅನೇಕ ಯುದ್ಧಗಳಲ್ಲಿ ವಿಜಯಪಡೆದು ವಿಜಯಶ್ರೀಯಿಂದ ಸುಶೋಭಿತನಾದನು. ಎಲ್ಲರನ್ನೂ ಗೆಲ್ಲಬೇಕೆಂದು ಇಚ್ಛಿಸುತ್ತಿದ್ದಾನೆ, ಅವನು ಎಂದೂ ನಿನ್ನಿಂದ ಸೋಲಲಿಲ್ಲ. ಅವನಿಗೆ ಯುದ್ಧದಲ್ಲಿ ತುಂಬಾ ಪ್ರೇಮವಿದೆ. ಆದ್ದರಿಂದ ವಾಲಿಯು ಎಲ್ಲಿಯೂ ಆಸಕ್ತನಾಗದೆ ನಗರದಿಂದ ಹೊರಗೆ ಖಂಡಿತವಾಗಿ ಬರುವನು.॥17½॥
ಮೂಲಮ್ - 18½
ರಿಪೂಣಾಂ ಧರ್ಷಿತಂ ಶ್ರುತ್ವಾ ಮರ್ಷಯಂತಿ ನ ಸಂಯುಗೇ ॥
ಜಾನಂತಸ್ತು ಸ್ವಕಂ ವೀರ್ಯಂ ಸ್ತ್ರೀಸಮಕ್ಷಂ ವಿಶೇಷತಃ ।
ಅನುವಾದ
ಏಕೆಂದರೆ ತನ್ನ ಪರಾಕ್ರಮವನ್ನು ಬಲ್ಲ ವೀರ ಪುರುಷನು ವಿಶೇಷವಾಗಿ ಸ್ತ್ರೀಯರ ಎದುರಿಗೆ ಯುದ್ಧಕ್ಕಾಗಿ ಶತ್ರುಗಳ ತಿರಸ್ಕಾರ ಪೂರ್ಣ ಶಬ್ದವನ್ನು ಕೇಳಿ ಎಂದಿಗೂ ಸಹಿಸುವುದಿಲ್ಲ.॥18½॥
ಮೂಲಮ್ - 19½
ಸ ತು ರಾಮವಚಃ ಶ್ರುತ್ವಾ ಸುಗ್ರೀವೋ ಹೇಮಪಿಂಗಲಃ ॥
ನನರ್ದ ಕ್ರೂರನಾದೇನ ವಿನಿರ್ಭಿಂದನ್ನಿವಾಂಬರಮ್ ।
ಅನುವಾದ
ಶ್ರೀರಾಮಚಂದ್ರನ ಈ ಮಾತನ್ನು ಕೇಳಿ ಸುವರ್ಣದಂತಹ ಪಿಂಗಳವರ್ಣವುಳ್ಳ ಸುಗ್ರೀವನು ಆಕಾಶವು ಹರಿಯುವಂತೆ ಕಠೋರ ಸ್ವರದಲ್ಲಿ ಭಾರೀ ಗರ್ಜನೆ ಮಾಡಿದನು.॥19½॥
ಮೂಲಮ್ - 20½
ತಸ್ಯ ಶಬ್ದೇನ ವಿತ್ರಸ್ತಾಗಾವೋ ಯಾಂತಿ ಹತಪ್ರಭಾಃ ॥
ರಾಜದೋಷಪರಾಮೃಷ್ಟಾಃ ಕುಲಸ್ತ್ರಿಯ ಇವಾಕುಲಾಃ ।
ಅನುವಾದ
ಆ ಸಿಂಹನಾದದಿಂದ ಭಯಗೊಂಡ ದೊಡ್ಡ-ದೊಡ್ಡ ಗೂಳಿಗಳು ಶಕ್ತಿಹೀನರಾಗಿ ರಾಜನದೋಷದಿಂದ ಪರಪುರುಷರು ಆಕ್ರಮಿಸಿದ ಕುಲಾಂಗನೆಯರಂತೆ ವ್ಯಾಕುಲಚಿತ್ತರಾಗಿ ಎಲ್ಲೆಡೆಗೆ ಓಡಿ ಹೋದರು.॥20½॥
ಮೂಲಮ್ - 21
ದ್ರವಂತಿ ಚ ಮೃಗಾಃ ಶೀಘ್ರಂ ಭಗ್ನಾ ಇವ ರಣೇ ಹಯಾಃ ।
ಪತಂತಿ ಚ ಖಗಾ ಭೂಮೌ ಕ್ಷೀಣಪುಣ್ಯಾ ಇವ ಗ್ರಹಾಃ ॥
ಅನುವಾದ
ಯುದ್ಧದಲ್ಲಿ ಅಸ್ತ್ರ-ಶಸ್ತ್ರಗಳ ಏಟನ್ನು ತಿಂದು ಓಡಿ ಹೋಗುವ ಕುದುರೆಗಳಂತೆ ಜಿಂಕೆಗಳು ವೇಗವಾಗಿ ಓಡತೊಡಗಿದವು ಹಾಗೂ ಪುಣ್ಯಕ್ಷೀಣವಾದ ಗ್ರಹರಂತೆ ಪಕ್ಷಿಗಳು ಆಕಾಶದಿಂದ ಬೀಳತೊಡಗಿದವು.॥21॥
ಮೂಲಮ್ - 22
ತತಃ ಸ ಜೀಮೂತಕೃತಪ್ರಣಾದೋ
ನಾದಂ ಹ್ಯಮುಂಚತ್ ತ್ವರಯಾ ಪ್ರತೀತಃ ।
ಸೂರ್ಯಾತ್ಮಜಃ ಶೌರ್ಯವಿವೃದ್ಧತೇಜಾಃ
ಸರಿತ್ಪತಿರ್ವಾನಿಲಚಂಚಲೋರ್ಮಿಃ ॥
ಅನುವಾದ
ಅನಂತರ ಸುಗ್ರೀವನ ಸಿಂಹನಾದವು ಮೇಘಗರ್ಜನೆಯಂತೆ ಗಂಭೀರವಾಗಿತ್ತು ಹಾಗೂ ಶೌರ್ಯದಿಂದಾಗಿ ಅವನ ತೇಜ ಬಹಳ ಹೆಚ್ಚಾಗಿತ್ತು. ಸುವಿಖ್ಯಾತ ಸೂರ್ಯಕುಮಾರ ಸುಗ್ರೀವನು ಬಹಳ ಉದ್ರೇಕಗೊಂಡು ವಾಯುವೇಗದಿಂದ ಎದ್ದಿರುವ ತರಂಗ ಮಾಲೆಗಳಿಂದ ಶೋಭಿಸುವ ನದಿಗಳ ಸ್ವಾಮಿ ಸಮುದ್ರವು ಕೋಲಾಹಲ ಮಾಡುವಂತೆ, ಪದೇ- ಪದೇ ಗರ್ಜಿಸತೊಡಗಿದನು.॥22॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹದಿನಾಲ್ಕನೆಯ ಸರ್ಗ ಸಂಪೂರ್ಣವಾಯಿತು. ॥14॥