वाचनम्
ಭಾಗಸೂಚನಾ
ಶ್ರೀರಾಮನೇ ಮೊದಲಾದವರು ಮಾರ್ಗದಲ್ಲಿ ಸುಂದರ ದೃಶ್ಯಗಳನ್ನು ನೋಡುತ್ತಾ ಸಪ್ತಜನಾಶ್ರಮವನ್ನು ದೂರದಿಂದ ದರ್ಶಿಸಿ ಕಿಷ್ಕಿಂಧೆಗೆ ತೆರಳಿದುದು
ಮೂಲಮ್ - 1
ಋಷ್ಯಮೂಕಾತ್ ಸ ಧರ್ಮಾತ್ಮಾ ಕಿಷ್ಕಿಂಧಾಂ ಲಕ್ಷ್ಮಣಾಗ್ರಜಃ ।
ಜಗಾಮ ಸಹ ಸುಗ್ರೀವೋ ವಾಲಿವಿಕ್ರಮ ಪಾಲಿತಾಮ್ ॥
ಅನುವಾದ
ಲಕ್ಷ್ಮಣಾಗ್ರಜ ಧರ್ಮಾತ್ಮಾ ಶ್ರೀರಾಮ ಸುಗ್ರೀವನನ್ನು ಜೊತೆಗೆ ಕರೆದುಕೊಂಡು ಪುನಃ ಋಷ್ಯಮೂಕದಿಂದ ವಾಲಿಯ ಪರಾಕ್ರಮದಿಂದ ಸುರಕ್ಷಿತವಾದ ಆ ಕಿಷ್ಕಿಂಧಾಪುರಿಗೆ ಹೊರಟರು.॥1॥
ಮೂಲಮ್ - 2
ಸಮುದ್ಯಮ್ಯ ಮಹಚ್ಚಾಪಂ ರಾಮಃ ಕಾಂಚನಭೂಷಿತಮ್ ।
ಶರಾಂಶ್ಚಾದಿತ್ಯಸಂಕಾಶಾನ್ ಗೃಹೀತ್ವಾ ರಣಸಾಧಕಾನ್ ॥
ಅನುವಾದ
ತನ್ನ ಸುವರ್ಣಭೂಷಿತ ವಿಶಾಲ ಧನುಸ್ಸನ್ನು ಎತ್ತಿಕೊಂಡು, ಯುದ್ದದಲ್ಲಿ ಸಫಲತೆ ಕೊಡುವ ಸೂರ್ಯನಂತಿರುವ ತೇಜಸ್ವೀ ಬಾಣಗಳನ್ನು ಧರಿಸಿ ಶ್ರೀರಾಮನು ಅಲ್ಲಿಂದ ಪ್ರಸ್ಥಾನಗೈದನು.॥2॥
ಮೂಲಮ್ - 3
ಅಗ್ರತಸ್ತು ಯಯೌ ತಸ್ಯ ರಾಘವಸ್ಯ ಮಹಾತ್ಮನಃ ।
ಸುಗ್ರೀವಃ ಸಂಹತಗ್ರೀವೋ ಲಕ್ಷ್ಮಣಶ್ಚ ಮಹಾಬಲಃ ॥
ಅನುವಾದ
ಮಹಾತ್ಮಾ ರಘುನಾಥನ ಮುಂದುಗಡೆ ಸುಸಂಘಟಿತವಾದ ಸುಗ್ರೀವ ಮತ್ತು ಮಹಾಬಲೀ ಲಕ್ಷ್ಮಣನೂ ನಡೆಯುತ್ತಿದ್ದರು.॥3॥
ಮೂಲಮ್ - 4
ಪೃಷ್ಠತೋ ಹನುಮಾನ್ ವೀರೋ ನಲೋ ನೀಲಶ್ಚ ವೀರ್ಯವಾನ್ ।
ತಾರಶ್ಚೈವ ಮಹಾತೇಜಾ ಹರಿಯೂಥಪಯೂಥಪಃ ॥
ಅನುವಾದ
ಅವರ ಹಿಂದೆ ವೀರ ಹನುಮಂತ, ನಳ, ಪರಾಕ್ರಮಿ ನೀಳ, ವಾನರ ಯೂಥಗಳ ಯೂಥಪತಿ ಮಹಾತೇಜಸ್ವೀ ತಾರನು ನಡೆಯುತ್ತಿದ್ದರು.॥4॥
ಮೂಲಮ್ - 5
ತೇ ವೀಕ್ಷಮಾಣಾ ವೃಕ್ಷಾಂಶ್ಚ ಪುಷ್ಪಭಾರಾವಲಂಬಿನಃ ।
ಪ್ರಸನ್ನಾಂಬುವಹಾಶ್ಚೈವ ಸರಿತಃ ಸಾಗರಂಗಮಾಃ ॥
ಮೂಲಮ್ - 6
ಕಂದರಾಣಿ ಚ ಶೈಲಾಂಶ್ಚ ನಿರ್ದರಾಣಿ ಗುಹಾಸ್ತಥಾ ।
ಶಿಖರಾಣಿ ಚ ಮುಖ್ಯಾನಿ ದರೀಶ್ಚ ಪ್ರಿಯದರ್ಶನಾಃ ॥
ಅನುವಾದ
ಅವರೆಲ್ಲರೂ ಹೂವುಗಳ ಭಾರದಿಂದ ಬಾಗಿರುವ ವೃಕ್ಷಗಳನ್ನು, ಸ್ವಚ್ಛ ಜಲವುಳ್ಳ ಸಮುದ್ರಗಾಮಿನೀ ನದಿಗಳನ್ನೂ, ಕಂದರಗಳನ್ನೂ, ಪರ್ವತಗಳನ್ನೂ, ಕಲ್ಲಿನ ಗುಹೆಗಳನ್ನೂ, ಮುಖ್ಯ-ಮುಖ್ಯ ಶಿಖರಗಳನ್ನು, ಸುಂದರವಾಗಿ ಕಾಣುವ ಗಹನ ಗುಹೆಗಳನ್ನು ನೋಡುತ್ತಾ ಮುಂದುವರಿದರು.॥5-6॥
ಮೂಲಮ್ - 7
ವೈದೂರ್ಯವಿಮಲೈಸ್ತೋಯೈಃ ಪದ್ಮೈಶ್ಚಾಕೋಶಕುಡ್ಮಲೈಃ ।
ಶೋಭಿತಾನ್ ಸಜಲಾನ್ಮಾರ್ಗೇ ತಟಾಕಾಂಶ್ಚಾವಲೋಕಯನ್ ॥
ಅನುವಾದ
ಅವರು ದಾರಿಯಲ್ಲಿ ವೈಡೂರ್ಯಮಣಿಯಂತೆ ಬಣ್ಣದ ನಿರ್ಮಲ ನೀರಿನಿಂದ ಕೂಡಿದ ಸ್ವಲ್ಪ ಅರಳಿದ ಕಮಲಗಳಿಂದ ಶೋಭಿಸುತ್ತಿದ್ದ ಸರೋವರಗಳನ್ನು ನೋಡಿದರು.॥7॥
ಮೂಲಮ್ - 8
ಕಾರಂಡೈಃ ಸಾರಸೈರ್ಹಂಸೈರ್ವಂಜುಲೈರ್ಜಲಕುಕ್ಕುಟೈಃ ।
ಚಕ್ರವಾಕೈಸ್ಥಥಾಚಾನ್ಯೈಃ ಶಕುನೈಃ ಪ್ರತಿಪನಾದಿತಾನ್ ॥
ಅನುವಾದ
ಕಾರಂಡವ, ಸಾರಸ, ಹಂಸ, ವಂಜುಲ, ನೀರುಕೋಳಿ, ಚಕ್ರವಾಕ ಹಾಗೂ ಇತರ ಜಲಪಕ್ಷಿಗಳು ಆ ಸರೋವರ ಗಳಲ್ಲಿ ಕಲರವಮಾಡುತ್ತಿದ್ದವು. ಅವುಗಳೆಲ್ಲವುಗಳ ಧ್ವನಿ ಅಲ್ಲಿ ಪ್ರತಿಧ್ವನಿಸುತ್ತಿತ್ತು.॥8॥
ಮೂಲಮ್ - 9
ಮೃದುಶಷ್ಪಾಂಕುರಾಹಾರಾನ್ನಿರ್ಭಯಾನ್ ವನಗೋಚರಾನ್ ।
ಚರತಃ ಸರ್ವತೋಽಪಶ್ಯನ್ ಸ್ಥಲೀಷು ಹರಿಣಾನ್ ಸ್ಥಿತಾನ್ ॥
ಅನುವಾದ
ಬಯಲಲ್ಲಿ ಎಲ್ಲೆಡೆ ಹಸುರಾದ ಹುಲ್ಲನ್ನು ಮೇಯುತ್ತಿದ್ದ ಕಾಡಿನ ಜಿಂಕೆಗಳು ನಿರ್ಭಯವಾಗಿ ಸಂಚರಿಸುತ್ತಿದ್ದವು; ಕೆಲವೆಡೆ ನಿಂತು ನೋಡುತ್ತಿದ್ದವು. (ಇವು ಗಳನ್ನು ನೋಡುತ್ತಾ ಶ್ರೀರಾಮಾದಿಗಳು ಕಿಷ್ಕಿಂಧೆಯ ಕಡೆಗೆ ಹೋಗುತ್ತಿದ್ದರು.॥9॥
ಮೂಲಮ್ - 10
ತಟಾಕವೈರಿಣಶ್ಚಾಪಿ ಶುಕ್ಲದಂತ ವಿಭೂಷಿತಾನ್ ।
ಘೋರಾನೇಕಚರಾನ್ ವನ್ಯಾನ್ ದ್ವಿರದಾನ್ಕೂಲಘಾತಿನಃ ॥
ಮೂಲಮ್ - 11
ಮತ್ತಾನ್ಗಿರಿತಟೋತ್ಕೃಷ್ಟಾನ್ ಪರ್ವತಾನಿವ ಜಂಗಮಾನ್ ।
ವಾ ವರಾನ್ ದ್ವಿರದಪ್ರಖ್ಯಾನ್ಮಹೀರೇಣುಸಮುಕ್ಷಿತಾನ್ ॥
ಮೂಲಮ್ - 12
ವನೇ ವನಚರಾಂಶ್ಚಾನ್ಯಾನ್ ಖೇಚರಾಂಶ್ಚ ವಿಹಂಗಮಾನ್ ।
ಪಶ್ಯಂತಸ್ತ್ವರಿತಾ ಜಗ್ಮುಃ ಸುಗ್ರೀವವಶವರ್ತಿನಃ ॥
ಅನುವಾದ
ಬೆಳ್ಳಗಿನ ದಂತಗಳಿಂದ ಸುಶೋಭಿತವಾದ, ನೋಡಲು ಭಯಂಕರರಾದ, ಒಂಟಿಯಾಗಿ ಸಂಚರಿಸುತ್ತಾ ದಡಗಳನ್ನು ಅಗೆದು ಹಾಕುವ ಸರೋವರಗಳ ಶತ್ರುಗಳಾದ ಎರಡು ದಂತಗಳುಳ್ಳ ಮದಮತ್ತ ಕಾಡಾನೆಗಳು ಚಲಿಸುವ ಪರ್ವತಗಳಂತೆ ಕಂಡುಬರುತ್ತಿದ್ದವು. ಅವುಗಳು ಪರ್ವತ ತಪ್ಪಲನ್ನು ದಂತಗಳಿಂದ ವಿದೀರ್ಣಗೊಳಿಸಿದ್ದವು. ಕೆಲವೆಡೆ ಆನೆಯಂತಹ ವಿಶಾಲಕಾಯ ಧೂಳಿನಿಂದ ಸ್ನಾನ ಮಾಡಿದಂತೆ ಇರುವ ವಾನರರು ಕಣ್ಣಿಗೆ ಬೀಳುತ್ತಿದ್ದವು. ಇವುಗಳಲ್ಲದೆ ಆ ವನದಲ್ಲಿ ಇನ್ನೂ ಅನೇಕ ಕಾಡು ಮೃಗಗಳು, ಹಾರಾಡುತ್ತಿದ್ದ ಪಕ್ಷಿಗಳು ಕಂಡುಬರುತ್ತಿದ್ದವು. ಇವೆಲ್ಲವನ್ನು ನೋಡುತ್ತಾ ಶ್ರೀರಾಮಾದಿ ಎಲ್ಲ ಜನರು ಸುಗ್ರೀವನಿಗೆ ವಶವರ್ತಿಗಳಾಗಿ ವೇಗವಾಗಿ ಮುಂದುವರಿಯುತ್ತಿದ್ದರು.॥10-12॥
ಮೂಲಮ್ - 13
ತೇಷಾಂ ತು ಗಚ್ಛತಾಂ ತತ್ರ ತ್ವರಿತಂ ರಘುನಂದನಃ ।
ದ್ರುಮಷಂಡವನಂ ದೃಷ್ಟ್ವಾ ರಾಮಃ ಸುಗ್ರೀವಮಬ್ರವೀತ್ ॥
ಅನುವಾದ
ಪ್ರಯಾಣ ಮಾಡುತ್ತಿದ್ದವರಲ್ಲಿ ರಘುಕುಲನಂದನ ಶ್ರೀರಾಮನು ವೃಕ್ಷ ಸಮೂಹಗಳಿಂದ ದಟ್ಟವಾದ ವನವನ್ನು ನೋಡಿ ಸುಗ್ರೀವನಲ್ಲಿ ಕೇಳಿದನು.॥13॥
ಮೂಲಮ್ - 14
ಏಷ ಮೇಘ ಇವಾಕಾಶೇ ವೃಕ್ಷಷಂಡಃ ಪ್ರಕಾಶತೇ ।
ಮೇಘಸಂಘಾತವಿಪುಲಃ ಪರ್ಯಂತಕದಲೀವೃತಃ ॥
ಅನುವಾದ
ವಾನರರಾಜನೇ! ಆಕಾಶದಲ್ಲಿನ ಮೇಘಗಳಂತೆ ಈ ವೃಕ್ಷಸಮೂಹ ಪ್ರಕಾಶಿಸುತ್ತಿದೆ, ಏನಿದು? ಮೇಘಗಳಂತೆ ಇವು ವಿಸ್ತಾರವಾಗಿ ಹರಡಿಕೊಂಡಿವೆ. ಇದರ ಅಂಚಿನಲ್ಲಿ ಬಾಳೆ ಗಿಡಗಳನ್ನು ನೆಟ್ಟಿರುವರು. ಅದರಿಂದ ಈ ಎಲ್ಲ ಸಮೂಹ ಆವರಿಸಿ ಕೊಂಡಿದೆ.॥14॥
ಮೂಲಮ್ - 15
ಕಿಮೇತಜ್ಜ್ಞಾತುಮಿಚ್ಛಾಮಿ ಸಖೇ ಕೌತೂಹಲಂ ಮಮ ।
ಕೌತೂಹಲಾಪನಯನಂ ಕರ್ತುಮಿಚ್ಛಾಮ್ಯಹಂ ತ್ವಯಾ ॥
ಅನುವಾದ
ಸಖನೇ ಇದು ಯಾವ ವನವಾಗಿದೆ? ಇದನ್ನು ನಾನು ತಿಳಿಯಲು ಬಯಸುತ್ತೇನೆ, ಇದಕ್ಕಾಗಿ ನನ್ನ ಮನಸ್ಸಿನಲ್ಲಿ ಬಹಳ ಕುತೂಹಲವಿದೆ. ನೀನು ನನ್ನ ಈ ಕುತೂಹಲವನ್ನು ನಿವಾರಿಸಬೇಕೆಂದು ನಾನು ಬಯಸುತ್ತೇನೆ.॥15॥
ಮೂಲಮ್ - 16
ತಸ್ಯ ತದ್ವಚನಂ ಶ್ರುತ್ವಾ ರಾಘವಸ್ಯ ಮಹಾತ್ಮನಃ ।
ಗಚ್ಛನ್ನೇವಾಚಚಕ್ಷೇಽಥ ಸುಗ್ರೀವಸ್ತನ್ಮಹದ್ವನಮ್ ॥
ಅನುವಾದ
ಮಹಾತ್ಮಾ ರಘುನಾಥನ ಈ ಮಾತನ್ನು ಕೇಳಿ ಸುಗ್ರೀವನು ನಡೆಯುತ್ತಾ-ನಡೆಯುತ್ತಾ ಆ ವಿಶಾಲ ವನದ ಕುರಿತು ತಿಳಿಸಲು ಪ್ರಾರಂಭಿಸಿದನು.॥16॥
ಮೂಲಮ್ - 17
ಏತದ್ ರಾಘವ ವಿಸ್ತೀರ್ಣಮಾಶ್ರಮಂ ಶ್ರಮನಾಶನಮ್ ।
ಉದ್ಯಾನವನಸಂಪನ್ನಂ ಸ್ವಾದುಮೂಲಫಲೋದಕಮ್ ॥
ಅನುವಾದ
ರಘುನಂದನ! ಇದೊಂದು ವಿಸ್ತೃತ ಆಶ್ರಮವಾಗಿದೆ. ಅದು ಎಲ್ಲರ ಶ್ರಮವನ್ನು ನಿವಾರಿಸುವಂತಹುದು. ಇದು ಉದ್ಯಾನವನಗಳಿಂದ, ಉಪವನಗಳಿಂದ ಕೂಡಿದೆ. ಇಲ್ಲಿ ಸ್ವಾದಿಷ್ಟ ಫಲ-ಮೂಲ ಮತ್ತು ಜಲ ಧಾರಾಳವಾಗಿದೆ.॥17॥
ಮೂಲಮ್ - 18
ಅತ್ರ ಸಪ್ತಜನಾ ನಾಮ ಮುನಯಃ ಸಂಶಿತವ್ರತಾಃ ।
ಸತ್ತೈವಾಸನ್ನಧಃಶೀರ್ಷಾ ನಿಯತಂ ಜಲಶಾಯಿನಃ ॥
ಅನುವಾದ
ಈ ಆಶ್ರಮದಲ್ಲಿ ಸಪ್ತಜನ ಎಂಬ ಪ್ರಸಿದ್ಧ ಏಳೇ ಮುನಿಗಳು ಇರುತ್ತಿದ್ದರು, ಅವರು ಕಠೋರ ವ್ರತಪಾಲನೆಯಲ್ಲಿ ತತ್ಪರರಾಗಿದ್ದರು. ಅವರು ತಲೆಕೆಳಕಾಗಿಸಿ ತಪಸ್ಸು ಮಾಡುತ್ತಿದ್ದರು. ನಿಯಮಪೂರ್ವಕ ಇದ್ದು ನೀರಿನಲ್ಲಿ ಮಲಗುವವರಾಗಿದ್ದರು.॥18॥
ಮೂಲಮ್ - 19
ಸಪ್ತರಾತ್ರೇಕೃತಾಹಾರಾ ವಾಯುನಾವನವಾಸಿನಃ ।
ದಿವಂ ವರ್ಷಶತೈರ್ಯಾತಾಃ ಸಪ್ತಭಿಃ ಸಕಲೇವರಾಃ ॥
ಅನುವಾದ
ಏಳು ಹಗಲು-ರಾತ್ರೆಗಳನ್ನು ಕಳೆದು ಕೇವಲ ವಾಯು ಭಕ್ಷಣಮಾಡುತ್ತಿದ್ದರು ಹಾಗೂ ಒಂದೇ ಸ್ಥಾನದಲ್ಲಿ ನಿಶ್ಚಲವಾಗಿ ಇರುತ್ತಿದ್ದರು. ಹೀಗೆ ಏಳುನೂರು ವರ್ಷ ತಪಸ್ಸು ಮಾಡಿ ಅವರು ಸಶರೀರರಾಗಿ ಸ್ವರ್ಗಕ್ಕೆ ತೆರಳಿದರು.॥19॥
ಮೂಲಮ್ - 20
ತೇಷಾಮೇತ್ ಪ್ರಭಾವೇಣ ದ್ರುಮಪ್ರಾಕಾರಸಂವೃತಮ್ ।
ಆಶ್ರಮಂ ಸುದುರಾಧರ್ಷಮಪಿ ಸೇಂದ್ರೈಃ ಸುರಾಸುರೈಃ ॥
ಅನುವಾದ
ಅವರ ಪ್ರಭಾವದಿಂದಲೇ ದಟ್ಟ ವೃಕ್ಷಗಳು ಕೊಡೆಯಂತೆ ಸುತ್ತುವರಿದ ಈ ಆಶ್ರಮವು ಇಂದ್ರಾದಿದೇವತೆಗಳಿಗೆ ಮತ್ತು ಅಸುರರಿಗೂ ಕೂಡ ಅತ್ಯಂತ ದುರ್ಧರ್ಷವಾಗಿದೆ.॥20॥
ಮೂಲಮ್ - 21
ಪಕ್ಷಿಣೋ ವರ್ಜಯಂತ್ಯೇತತ್ತಥಾನ್ಯೇ ವನಚಾರಿಣಃ ।
ವಿಶಂತಿ ಮೋಹಾದ್ ಯೇಽಪ್ಯತ್ರ ನ ನಿವರ್ತಂತೇ ತೇ ಪುನಃ ॥
ಅನುವಾದ
ಪಕ್ಷಿಗಳು ಹಾಗೂ ಇತರ ಕಾಡು ಪ್ರಾಣಿಗಳು ದೂರದಿಂದಲೇ ತ್ಯಜಿಸುತ್ತಾರೆ. ಮೋಹವಶದಿಂದ ಇದರೊಳಗೆ ಪ್ರವೇಶಿಸಿದರೆ ಮತ್ತೆ ಎಂದಿಗೂ ಮರಳುವುದಿಲ್ಲ.॥21॥
ಮೂಲಮ್ - 22
ವಿಭೂಷಣರವಾಶ್ಚಾತ್ರ ಶ್ರೂಯಂತೇ ಸಕಲಾಕ್ಷರಾಃ ।
ತೂರ್ಯಗೀತಸ್ವನಶ್ಚಾಪಿ ಗಂಧೋ ದಿವ್ಯಶ್ಚ ರಾಘವ ॥
ಅನುವಾದ
ರಘುನಂದನ! ಇಲ್ಲಿ ಮಧುರಾಕ್ಷರ ವಾಣಿಯೊಂದಿಗೆ ಆಭೂಷಣಗಳ ಝಣತ್ಕಾರವೂ ಕೇಳಿ ಬರುತ್ತದೆ. ವಾದ್ಯ ಮತ್ತು ಸಂಗೀತದ ಮಧುರ ಧ್ವನಿಯೂ ಕಿವಿಗೆ ಬೀಳುತ್ತದೆ ಮತ್ತು ದಿವ್ಯ ಸುಗಂಧವೂ ಅನುಭವಕ್ಕೆ ಬರುತ್ತದೆ.॥22॥
ಮೂಲಮ್ - 23
ತ್ರೇತಾಗ್ನಯೋಽಪಿ ದೀಪ್ಯಂತೇ ಧೂಮೋ ಹ್ಯೇಷ ಪ್ರದೃಶ್ಯತೇ ।
ವೇಷ್ಟಯನ್ನಿವ ವೃಕ್ಷಾಗ್ರಾನ್ ಕಪೋತಾಂಗಾರುಣೋ ಘನಃ ॥
ಅನುವಾದ
ಆಹವನೀಯ ಆದಿ ತ್ರಿವಿಧ ಅಗ್ನಿಗಳೂ ಇಲ್ಲಿ ಪ್ರಜ್ವಲಿಸುತ್ತಿವೆ. ಇವು ಪಾರಿವಾಳದ ಬಣ್ಣದಂತೆ ದಟ್ಟವಾದ ಧೂಮವು ಏಳುವುದು ಕಂಡುಬರುತ್ತದೆ. ಅದು ವೃಕ್ಷಾಗ್ರಗಳನ್ನು ಆವರಿಸಿಕೊಂಡಿರುತ್ತದೆ.॥23॥
ಮೂಲಮ್ - 24
ಏತೇ ವೃಕ್ಷಾಃ ಪ್ರಕಾಶಂತೇ ಧೂಮಸಂಸಕ್ತಮಸ್ತಕಾಃ ।
ಮೇಘಜಾಲಪ್ರತಿಚ್ಛನ್ನಾ ವೈದೂರ್ಯಗಿರಯೋ ಯಥಾ ॥
ಅನುವಾದ
ತುದಿಯಲ್ಲಿ ಹೋಮ ಧೂಮ ಆವರಿಸಿದ ವೃಕ್ಷಗಳು ಮೇಘ ಸಮೂಹಗಳಿಂದ ಆಚ್ಛಾದಿತ ನೀಲಕಮಲಗಳ ಪರ್ವತದಂತೆ ಪ್ರಕಾಶಿತವಾಗುತ್ತದೆ.॥24॥
ಮೂಲಮ್ - 25
ಕುರು ಪ್ರಣಾಮಂ ಧರ್ಮಾತ್ಮಂ ಸ್ತೇಷಾಮುದ್ದಿಶ್ಯ ರಾಘವ ।
ಲಕ್ಷ್ಮಣೇನ ಸಹ ಭ್ರಾತ್ರಾ ಪ್ರಯತಃ ಸಂಹತಾಂಜಲಿಃ ॥
ಅನುವಾದ
ಧರ್ಮಾತ್ಮ ರಘುನಂದನ! ನೀನು ಮನಸ್ಸನ್ನು ಏಕಾಗ್ರಗೊಳಿಸಿ ಕೈಗಳನ್ನು ಮುಗಿದು ಲಕ್ಷ್ಮಣನೊಂದಿಗೆ ಆ ಮುನಿಗಳನ್ನು ಉದ್ದೇಶಿಸಿ ಪ್ರಣಾಮ ಮಾಡು.॥25॥
ಮೂಲಮ್ - 26
ಪ್ರಣಮಂತಿ ಹಿ ಯೇ ತೇಷಾಮೃಷೀಣಾಂ ಭಾವಿತಾತ್ಮನಾಮ್ ।
ನ ತೇಷಾಮಶುಭಂ ಕಿಂಚಿಚ್ಛರೀರೇ ರಾಮ ದೃಶ್ಯತೇ ॥
ಅನುವಾದ
ಶ್ರೀರಾಮಾ! ಆ ಪವಿತ್ರ ಅಂತಃಕರಣವುಳ್ಳ ಋಷಿಗಳಿಗೆ ನಮಸ್ಕರಿಸಿದವನ ಶರೀರದಲ್ಲಿ ಕಿಂಚಿತ್ತೂ ಅಶುಭ ಉಳಿಯುವುದಿಲ್ಲ.॥26॥
ಮೂಲಮ್ - 27
ತತೋ ರಾಮಃ ಸಹ ಭ್ರಾತ್ರಾ ಲಕ್ಷ್ಮಣೇನ ಕೃತಾಂಜಲಿಃ ।
ಸಮುದ್ದಿಶ್ಯ ಮಹಾತ್ಮಾನಸ್ತಾನೃಷೀನಭ್ಯವಾದಯತ್ ॥
ಅನುವಾದ
ಆಗ ತಮ್ಮ ಲಕ್ಷ್ಮಣ ಸಹಿತ ಶ್ರೀರಾಮನು ಕೈಮುಗಿದು ಆ ಮಹಾತ್ಮಾ ಋಷಿಗಳನ್ನು ಉದ್ದೇಶಿಸಿ ವಂದಿಸಿದನು.॥27॥
ಮೂಲಮ್ - 28
ಅಭಿವಾದ್ಯ ಚ ಧರ್ಮಾತ್ಮಾ ರಾಮೋ ಭ್ರಾತಾ ಚ ಲಕ್ಷ್ಮಣಃ ।
ಸುಗ್ರೀವೋ ವಾನರೈಶ್ಚೈವ ಜಗ್ಮುಃ ಸಂಹೃಷ್ಟಮಾನಸಾಃ ॥
ಅನುವಾದ
ಧರ್ಮಾತ್ಮಾ ಶ್ರೀರಾಮ, ತಮ್ಮನಾದ ಲಕ್ಷ್ಮಣ, ಸುಗ್ರೀವ ಹಾಗೂ ಇತರ ಎಲ್ಲ ವಾನರರೂ ಆ ಋಷಿಗಳಿಗೆ ನಮಸ್ಕಾರ ಮಾಡಿ ಪ್ರಸನ್ನಚಿತ್ತರಾಗಿ ಮುಂದುವರಿದರು.॥28॥
ಮೂಲಮ್ - 29
ತೇ ಗತ್ವಾ ದೂರಮಧ್ವಾನಂ ತಸ್ಮಾತ್ ಸಪ್ತಜನಾಶ್ರಮಾತ್ ।
ದದೃಶುಸ್ತಾಂ ದುರಾಧರ್ಷಾಂ ಕಿಷ್ಕಿಂಧಾಂ ವಾಲಿಪಾಲಿತಾಮ್ ॥
ಅನುವಾದ
ಆ ಸಪ್ತಜನಾಶ್ರಮದಿಂದ ದೂರ ಸಾಗಿದಾಗ ಅವರೆಲ್ಲರೂ ವಾಲಿಯಿಂದ ಸುರಕ್ಷಿತವಾದ ಕಿಷ್ಕಿಂಧೆಯನ್ನು ನೋಡಿದರು.॥29॥
ಮೂಲಮ್ - 30
ತತಸ್ತು ರಾಮಾನುಜರಾಮವಾನರಾಃ
ಪ್ರಗೃಹ್ಯ ಶಸ್ತ್ರಾಣ್ಯುದಿತೋಗ್ರ ತೇಜಸಃ ।
ಪುರೀಂ ಸುರೇಶಾತ್ಮಜವೀರ್ಯಪಾಲಿತಾಂ
ವಧಾಯ ಶತ್ರೋಃ ಪುನರಾಗತಾಸ್ತ್ವಿಹ ॥
ಅನುವಾದ
ಅನಂತರ ಉಗ್ರ ತೇಜವು ಪ್ರಕಟವಾದಂತೆ ಶ್ರೀರಾಮ, ಲಕ್ಷ್ಮಣ ಮತ್ತು ವಾನರರು ಕೈಗಳಲ್ಲಿ ಅಸ್ತ್ರ-ಶಸ್ತ್ರಗಳನ್ನು ಹಿಡಿದುಕೊಂಡು ಇಂದ್ರಕುಮಾರ ವಾಲಿಯ ಪರಾಕ್ರಮದಿಂದ ಪಾಲಿತ ಕಿಷ್ಕಿಂಧಾ ಪುರಿಯನ್ನು ಶತ್ರುವಧೆಯ ನಿಮಿತ್ತದಿಂದ ಪುನಃ ಬಂದು ತಲುಪಿದರು.॥30॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹದಿಮೂರನೆಯ ಸರ್ಗ ಸಂಪೂರ್ಣವಾಯಿತು.॥13॥