वाचनम्
ಭಾಗಸೂಚನಾ
ಶ್ರೀರಾಮನು ಏಳು ಸಾಲ ವೃಕ್ಷಗಳನ್ನು ಭೇದಿಸಿದುದು, ಶ್ರೀರಾಮನ ಆಜ್ಞೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದುದು, ಯುದ್ಧದಲ್ಲಿ ಸುಗ್ರೀವನ ಪರಾಜಯ, ಸುಗ್ರೀವನಿಗೆ ಶ್ರೀರಾಮನ ಆಶ್ವಾಸನೆ, ಗುರುತಿಗಾಗಿ ಸುಗ್ರೀವನ ಕೊರಳಿಗೆ ಗಜಪುಷ್ಪಲತೆಯನ್ನು ತೊಡಿಸಿ ಪುನಃ ಯುದ್ಧಕ್ಕೆ ಕಳಿಸಿದುದು
ಮೂಲಮ್ - 1
ಏತಚ್ಚ ವಚನಂ ಶ್ರುತ್ವಾ ಸುಗ್ರೀವಸ್ಯ ಸುಭಾಷಿತಮ್ ।
ಪ್ರತ್ಯಯಾರ್ಥಂ ಮಹಾತೇಜಾ ರಾಮೋ ಜಗ್ರಾಹ ಕಾರ್ಮುಕಮ್ ॥
ಅನುವಾದ
ಸುಗ್ರೀವನು ಸುಂದರವಾಗಿ ನುಡಿದ ಮಾತನ್ನು ಕೇಳಿ ಮಹಾತೇಜಸ್ವೀ ಶ್ರೀರಾಮನು ಅವನಿಗೆ ವಿಶ್ವಾಸ ಉಂಟಾಗಲು ಧನುಸ್ಸನ್ನು ಕೈಗೆತ್ತಿಕೊಂಡನು.॥1॥
ಮೂಲಮ್ - 2
ಸ ಗೃಹೀತ್ವಾ ಧನುರ್ಘೋರಂ ಶರಮೇಕಂ ಚ ಮಾನದಃ ।
ಸಾಲಮುದ್ದಿಶ್ಯ ಚಿಕ್ಷೇಪ ಪೂರಯನ್ ಸ ರವೈರ್ದಿಶಃ ॥
ಅನುವಾದ
ಬೇರೆಯವರಿಗೆ ಮಾನವನ್ನೀಯುವ ಶ್ರೀರಾಮನು ಆ ಭಯಂಕರ ಧನುಸ್ಸನ್ನು ಮತ್ತು ಒಂದು ಬಾಣವನ್ನು ತೆಗೆದುಕೊಂಡನು. ಧನುಷ್ಟಂಕಾರದಿಂದ ಎಲ್ಲ ದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ಆ ಬಾಣವನ್ನು ಸಾಲವೃಕ್ಷಗಳ ಕಡೆಗೆ ಎಸೆದನು.॥2॥
ಮೂಲಮ್ - 3
ಸ ವಿಸೃಷ್ಟೋ ಬಲವತಾ ಬಾಣಃ ಸ್ವರ್ಣಪರಿಷ್ಕೃತಃ ।
ಭಿತ್ತ್ವಾ ಸಾಲಾನ್ಗಿರಿಪ್ರಸ್ಥಂ ಸಪ್ತ ಭೂಮಿಂ ವಿವೇಶ ಹ ॥
ಅನುವಾದ
ಆ ಬಲವಂತ ವೀರ ಶಿರೋಮಣಿಯು ಬಿಟ್ಟ ಆ ಸುವರ್ಣಭೂಷಿತ ಬಾಣವು ಏಳೂ ಸಾಲ ವೃಕ್ಷಗಳನ್ನು ಒಂದೇ ಬಾರಿಗೆ ಕತ್ತರಿಸಿ, ಪೃಥಿವಿ ಮತ್ತು ಪರ್ವತಗಳ ಏಳು ಲೋಕಗಳನ್ನು ಛೇದಿಸುತ್ತಾ ಪಾತಾಳಕ್ಕೆ ಹೊರಟುಹೋಯಿತು.॥3॥
ಮೂಲಮ್ - 4
ನಾಯಕಸ್ತು ಮುಹೂರ್ತೇನ ಸಾಲಾನ್ ಭಿತ್ವಾ ಮಹಾಜವಃ ।
ನಿಷ್ಪತ್ಯ ಚ ಪುನಸ್ತೂರ್ಣಂ ತಮೇವ ಪ್ರವಿವೇಶ ಹ ॥
ಅನುವಾದ
ಈ ಪ್ರಕಾರ ಒಂದೇ ಮುಹೂರ್ತದಲ್ಲಿ ಅವೆಲ್ಲವನ್ನು ಭೇದಿಸಿ ಆ ಮಹಾವೇಗಶಾಲಿ ಬಾಣವು ಪುನಃ ಅಲ್ಲಿಂದ ಹೊರಟು ರಾಮನ ಬತ್ತಳಿಕೆಯನ್ನು ಸೇರಿತು.॥4॥
ಮೂಲಮ್ - 5
ತಾನ್ದೃಷ್ಟ್ವಾ ಸಪ್ತ ನಿರ್ಭಿನ್ನಾನ್ ಸಾಲಾನ್ ವಾನರಪುಂಗವಃ ।
ರಾಮಸ್ಯ ಶರವೇಗೇನ ವಿಸ್ಮಯಂ ಪರಮಂ ಗತಃ ॥
ಅನುವಾದ
ಶ್ರೀರಾಮನ ಬಾಣದ ವೇಗದಿಂದ ಆ ಏಳೂ ಸಾಲ ವೃಕ್ಷಗಳು ವಿದೀರ್ಣವಾಗಿರುವುದನ್ನು ಕಂಡು ವಾನರಶ್ರೇಷ್ಠ ಸುಗ್ರೀವನಿಗೆ ಬಹಳ ವಿಸ್ಮಯವಾಯಿತು.॥5॥
ಮೂಲಮ್ - 6
ಸ ಮೂರ್ಧ್ನಾ ನೃಪತದ್ಭೂವೌ ಪ್ರಲಂಬೀಕೃತಭೂಷಣಃ ।
ಸುಗ್ರೀವಃ ಪರಮಪ್ರೀತೋ ರಾಘವಾಯ ಕೃತಾಂಜಲಿಃ ॥
ಅನುವಾದ
ಜೊತೆಗೆ ಮನಸ್ಸಿನಲ್ಲಿ ಸಂತೋಷವೂ ಆಯಿತು. ಸುಗ್ರೀವನು ಕೈಮುಗಿದು, ನೆಲಕ್ಕೆ ಮಸ್ತಕವನ್ನು ಚಾಚಿ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ನಮಸ್ಕಾರಕ್ಕಾಗಿ ಬಾಗಿದಾಗ ಅವನ ಕಂಠಹಾರಾದಿ ಭೂಷಣಗಳು ತೂಗುತ್ತಿರುವುದು ಕಾಣುತ್ತಿತ್ತು.॥6॥
ಮೂಲಮ್ - 7
ಇದಂ ಚೋವಾಚ ಧರ್ಮಜ್ಞಂ ಕರ್ಮಣಾ ತೇನ ಹರ್ಷಿತಃ ।
ರಾಮಂ ಸರ್ವಾಸ್ತ್ರವಿದುಷಾಂ ಶ್ರೇಷ್ಠಂ ಶೂರಮವಸ್ಥಿತಮ್ ॥
ಅನುವಾದ
ಶ್ರೀರಾಮನ ಆ ಮಹಾನ್ ಕರ್ಮದಿಂದ ಅತ್ಯಂತ ಪ್ರಸನ್ನನಾಗಿ ಸುಗ್ರೀವನು ಎದುರಿಗೆ ನಿಂತಿದ್ದ ಸಮಸ್ತ ಅಸ್ತ್ರವೇತ್ತರಲ್ಲಿ ಶ್ರೇಷ್ಠ ಧರ್ಮಜ್ಞ, ಶೂರ-ವೀರ ಶ್ರೀರಾಮಚಂದ್ರನಲ್ಲಿ ಹೀಗೆ ಹೇಳಿದನು.॥7॥
ಮೂಲಮ್ - 8
ಸೇಂದ್ರಾನಪಿ ಸುರಾನ್ ಸರ್ವಾ ಸ್ತ್ವಂ ಬಾಣೈಃ ಪುರುಷರ್ಷಭ ।
ಸಮರ್ಥಃ ಸಮರೇ ಹಂತುಂ ಕಿಂ ಪುನರ್ವಾಲಿನಂ ಪ್ರಭೋ ॥
ಅನುವಾದ
ಪುರುಷಶ್ರೇಷ್ಠನೇ! ಭಗವಂತಾ! ನೀನು ತನ್ನ ಬಾಣಗಳಿಂದ ಸಮರಾಂಗಣದಲ್ಲಿ ಇಂದ್ರನಸಹಿತ ಸಮಸ್ತ ದೇವತೆಗಳನ್ನು ವಧಿಸಲು ಸಮರ್ಥನಾಗಿರುವೆ ಮತ್ತೆ ವಾಲಿಯನ್ನು ಕೊಲ್ಲುವುದು ಏನು ಮಹಾ.॥8॥
ಮೂಲಮ್ - 9
ಯೇನ ಸಪ್ತ ಮಹಾಸಾಲಾ ಗಿರಿರ್ಭೂಮಿಶ್ಚ ದಾರಿತಾಃ ।
ಬಾಣೇನೈಕೇನ ಕಾಕುಸ್ಸ್ಥ ಸ್ಥಾತಾ ತೇ ಕೋ ರಣಾಗ್ರತಃ ॥
ಅನುವಾದ
ಕಾಕುತ್ಸ್ಥನೇ! ನೀನು ಏಳು ದೊಡ್ಡ-ದೊಡ್ಡ ಸಾಲ ವೃಕ್ಷಗಳನ್ನು, ಪರ್ವತ, ಪೃಥಿವಿಯನ್ನು ಒಂದೇ ಬಾಣದಿಂದ ವಿದೀರ್ಣಗೊಳಿಸಿದೆ. ನಿನ್ನ ಎದುರಿಗೆ ಯುದ್ಧದಲ್ಲಿ ಯಾರು ನಿಲ್ಲಬಲ್ಲನು.॥9॥
ಮೂಲಮ್ - 10
ಅದ್ಯ ಮೇ ವಿಗತಃ ಶೋಕಃ ಪ್ರೀತಿರದ್ಯ ಪರಾ ಮಮ ।
ಸುಹೃದಂ ತ್ವಾಂ ಸಮಾಸಾದ್ಯ ಮಹೇಂದ್ರವರುಣೋಪಮಮ್ ॥
ಅನುವಾದ
ಮಹೇಂದ್ರ, ವರುಣನಂತಹ ಪರಾಕ್ರಮಿ ನೀನು ಸುಹೃದನಾಗಿ ಪಡೆದು ಈಗ ನನ್ನ ಎಲ್ಲ ಶೋಕವೂ ದೂರವಾಯಿತು. ಇಂದು ನಾನು ಬಹಳ ಪ್ರಸನ್ನನಾಗಿದ್ದೇನೆ.॥10॥
ಮೂಲಮ್ - 11
ತಮದ್ಯೈವ ಪ್ರಿಯಾರ್ಥಂ ಮೇ ವೈರಿಣಂ ಭ್ರಾತೃರೂಪಿಣಮ್ ।
ವಾಲಿನಂ ಜಹಿ ಕಾಕುತ್ಸ್ಥ ಮಯಾ ಬದ್ಧೋಽಯಮಂಜಲಿಃ ॥
ಅನುವಾದ
ಕಕುತ್ಸ್ಥ ಕುಲಭೂಷಣನೇ! ನಾನು ಕೈ ಮುಗಿಯುತ್ತೇನೆ, ನೀನು ಇಂದೇ ನನ್ನ ಪ್ರಿಯವನ್ನು ಮಾಡಲು ಅಣ್ಣನ ರೂಪದಲ್ಲಿ ನನ್ನ ಶತ್ರು ವಾಲಿಯನ್ನು ವಧಿಸಿ ಬಿಡು.॥11॥
ಮೂಲಮ್ - 12
ತತೋ ರಾಮಃ ಪರಿಷ್ವಜ್ಯ ಸುಗ್ರೀವಂ ಪ್ರಿಯದರ್ಶನಮ್ ।
ಪ್ರತ್ಯುವಾಚ ಮಹಾಪ್ರಾಜ್ಞೋ ಲಕ್ಷ್ಮಣಾನುಗತಂ ವಚಃ ॥
ಅನುವಾದ
ಸುಗ್ರೀವನು ಶ್ರೀರಾಮನಿಗೆ ಲಕ್ಷ್ಮಣನಂತೆ ಪ್ರಿಯನಾಗಿದ್ದನು. ಅವನ ಮಾತನ್ನು ಕೇಳಿ ಮಹಾಪ್ರಾಜ್ಞ ಶ್ರೀರಾಮನು ತನ್ನ ಆ ಪ್ರಿಯ ಸುಹೃದನನ್ನು ಅಪ್ಪಿಕೊಂಡು ಹೀಗೆ ಉತ್ತರಿಸಿದನು.॥12॥
ಮೂಲಮ್ - 13
ಅಸ್ಮಾದ್ ಗಚ್ಛಾಮ ಕಿಷ್ಕಿಂಧಾಂ ಕ್ಷಿಪ್ರಂ ಗಚ್ಛ ತ್ವಮಗ್ರತಃ ।
ಗತ್ವಾ ಚಾಹ್ವಯ ಸುಗ್ರೀವ ವಾಲಿನಂ ಭ್ರಾತೃಗಂಧಿನಮ್ ॥
ಅನುವಾದ
ಸುಗ್ರೀವನೇ! ನಾವು ಇಲ್ಲಿಂದ ಬೇಗನೇ ಕಿಷ್ಕಿಂಧೆಗೆ ಹೋಗುವಾ, ನೀನು ಮುಂದೆ ಹೋಗು, ಸುಮ್ಮನೇ ಅಣ್ಣನೆಂದು ಹೇಳಿಸಿಕೊಳ್ಳುವ ವಾಲಿಯನ್ನು ಯುದ್ಧಕ್ಕಾಗಿ ಆಹ್ವಾನಿಸು.॥13॥
ಮೂಲಮ್ - 14
ಸರ್ವೇ ತೇ ತ್ವರಿತಂ ಗತ್ವಾ ಕಿಷ್ಕಿಂಧಾಂ ವಾಲಿನಃ ಪುರೀಮ್ ।
ವೃಕ್ಷೈರಾತ್ಮಾನಮಾವೃತ್ಯ ಹ್ಯತಿಷ್ಠನ್ ಗಹನೇ ವನೇ ॥
ಅನುವಾದ
ಅನಂತರ ಅವರೆಲ್ಲರೂ ವಾಲಿಯ ರಾಜಧಾನಿ ಕಿಷ್ಕಿಂಧೆಗೆ ಹೋದರು ಮತ್ತು ಅಲ್ಲಿ ಗಹನ ವನದೊಳಗೆ ಮರಗಳ ಮರೆಯಲ್ಲಿ ತಮ್ಮನ್ನು ಅಡಗಿಸಿಕೊಂಡು ನಿಂತುಕೊಂಡರು.॥14॥
ಮೂಲಮ್ - 15
ಸುಗ್ರೀವೋಽಪ್ಯನದದ್ಘೋರಂ ವಾಲಿನೋಹ್ವಾನಕಾರಣಾತ್ ।
ಗಾಢಂ ಪರಿಹಿತೋ ವೇಗಾನ್ನಾದೈರ್ಭಿಂದನ್ನಿವಾಂಬರಮ್ ॥
ಅನುವಾದ
ಸುಗ್ರೀವನು ನಡುಕಟ್ಟನ್ನು ಬಿಗಿದು ವಾಲಿಯನ್ನು ಕರೆಯಲು ಭಯಂಕರ ಗರ್ಜನೆ ಮಾಡಿದನು. ಆ ಸಿಂಹನಾದವು ಆಕಾಶವೇ ಹರಿದು ಹೋಗುವಂತಿತ್ತು.॥15॥
ಮೂಲಮ್ - 16
ತಂ ಶ್ರುತ್ವಾ ನಿನದಂ ಭ್ರಾತುಃ ಕ್ರುದ್ಧೋ ವಾಲೀ ಮಹಾಬಲಲಃ ।
ನಿಷ್ಪಪಾತ ಸುಸಂರಭ್ಧೋ ಭಾಸ್ಕರೋಽಸ್ತತಟಾದಿವ ॥
ಅನುವಾದ
ತಮ್ಮನ ಸಿಂಹನಾದವನ್ನು ಕೇಳಿ ಮಹಾಬಲಿ ವಾಲಿಗೆ ಭಾರೀ ಕ್ರೋಧ ಉಂಟಾಯಿತು. ಅವನು ಸಿಟ್ಟುಗೊಂಡು ಅಸ್ತಾಚಲಕ್ಕೆ ಹೋಗುವ ಸೂರ್ಯನಂತೆ ವೇಗವಾಗಿ ಅರಮನೆಯಿಂದ ಹೊರಟನು.॥16॥
ಮೂಲಮ್ - 17
ತತಃ ಸುತುಮುಲಂ ಯುದ್ಧಂ ವಾಲಿಸುಗ್ರೀವಯೋರಭೂತ್ ।
ಗಗನೇ ಗ್ರಹಯೋರ್ಘೋರಂ ಬುಧಾಂಗಾರಕಯೋರಿವ ॥
ಅನುವಾದ
ಮತ್ತೆ ಆಕಾಶದಲ್ಲಿ ಬುಧ ಮತ್ತು ಮಂಗಳ ಗ್ರಹಗಳಲ್ಲಿ ಘೋರ ಸಂಗ್ರಾಮ ನಡೆಯುವಂತೆ ವಾಲೀ ಮತ್ತು ಸುಗ್ರೀವರಲ್ಲಿ ಭಾರೀ ಭಯಂಕರ ಯುದ್ಧ ಹತ್ತಿಕೊಂಡಿತು.॥17॥
ಮೂಲಮ್ - 18
ತಲೈರಶನಿಕಲ್ಪೈಶ್ಚ ವಜ್ರಕಲ್ಪೈಶ್ಚ ಮುಷ್ಟಿಭಿಃ ।
ಜಘ್ನತುಃ ಸಮರೇಽನ್ಯೋನ್ಯಂ ಭ್ರಾತರೌ ಕ್ರೋಧಮೂರ್ಛಿತೌ ॥
ಅನುವಾದ
ಅವರಿಬ್ಬರೂ ಸೋದರರು ಕ್ರೋಧಮೂರ್ಛಿತರಾಗಿ ಒಬ್ಬರು ಮತ್ತೊಬ್ಬರ ಮೇಲೆ ಸಿಡಿಲಿನಂತೆ ಕೈಯಿಂದ ಏಟು ಕೊಡುತ್ತಾ ವಜ್ರಾಘಾತದಂತೆ ಗುದ್ದುತ್ತಾ ಪ್ರಹರಿಸತೊಡಗಿದರು.॥18॥
ಮೂಲಮ್ - 19
ತತೋ ರಾಮೋ ಧನುಷ್ಪಾಣಿಸ್ತಾವುಭೌ ಸಮುದೈಕ್ಷತ ।
ಅನ್ಯೋನ್ಯಸದೃಶೌ ವೀರಾವುಭೌ ದೇವಾವಿವಾಶ್ವಿನೌ ॥
ಅನುವಾದ
ಅದೇ ಸಮಯದಲ್ಲಿ ಶ್ರೀರಾಮನು ಧನಸ್ಸನ್ನು ಕೈಗೆತ್ತಿಕೊಂಡು ಅವರಿಬ್ಬರ ಕಡೆಗೆ ನೋಡಿದನು. ಆ ವೀರರಿಬ್ಬರು ಅಶ್ವಿನೀ ಕುಮಾರರಂತೆ ಒಂದೇ ರೀತಿಯಾಗಿದ್ದರು.॥19॥
ಮೂಲಮ್ - 20
ಯನ್ನಾವಗಚ್ಛತ್ ಸುಗ್ರೀವಂ ವಾಲಿನಂ ವಾಪಿ ರಾಘವಃ ।
ತತೋ ನ ಕೃತವಾನ್ಬುದ್ಧಿಂ ಮೋಕ್ತುಮಂತಕರಂ ಶರಮ್ ॥
ಅನುವಾದ
ಇವರಲ್ಲಿ ಯಾರು ವಾಲಿ, ಯಾರು ಸುಗ್ರೀವ ಎಂಬುದೇ ಶ್ರೀರಾಮ ಚಂದ್ರನಿಗೆ ತಿಳಿಯಲಿಲ್ಲ, ಅದಕ್ಕಾಗಿ ಅವನು ಪ್ರಾಣಾಂತಕಾರೀ ಬಾಣವನ್ನು ಬಿಡುವುದನ್ನು ಸ್ಥಗಿತಗೊಳಿಸಿದನು.॥20॥
ಮೂಲಮ್ - 21
ಏತಸ್ಮಿನ್ನಂತರೇ ಭಗ್ನಃ ಸುಗ್ರೀವಸ್ತೇನ ವಾಲಿನಾ ।
ಅಪಶ್ಯನ್ ರಾಘವಂ ನಾಥಮೃಶ್ಯಮೂಕಂ ಪ್ರದುದ್ರುವೇ ॥
ಅನುವಾದ
ಇಷ್ಟರಲ್ಲಿ ವಾಲಿಯ ಬಲವಾದ ಏಟಿನಿಂದ ಸುಗ್ರೀವನು ತನ್ನ ರಕ್ಷಕನಾದ ಶ್ರೀರಘುನಂದನ ಕಡೆಗೆ ನೋಡದೆ ಋಷ್ಯಮೂಕ ಪರ್ವತದ ಕಡೆಗೆ ಓಡಿದನು.॥21॥
ಮೂಲಮ್ - 22
ಕ್ಲಾಂತೋ ರುಧಿರಸಿಕ್ತಾಂಗಃ ಪ್ರಹಾರೈರ್ಜರ್ಜರೀಕೃತಃ ।
ವಾಲಿನಾಭಿದ್ರುತಃ ಕ್ರೋಧಾತ್ ಪ್ರವಿವೇಶ ಮಹಾವನಮ್ ॥
ಅನುವಾದ
ಅವನು ಬಹಳ ಬಳಲಿದ್ದನು. ಶರೀರವೆಲ್ಲ ರಕ್ತಸಿಕ್ತವಾಗಿ, ವಾಲಿಯ ಪ್ರಹಾರಗಳಿಂದ ಜರ್ಜರಿತನಾಗಿದ್ದನು. ಇಷ್ಟಾದರೂ ವಾಲಿಯು ಸಿಟ್ಟಿನಿಂದ ಅವನನ್ನು ಬೆನ್ನಟ್ಟಿದನು, ಆದರೆ ಅವನು ಮತಂಗವನವನ್ನು ಹೊಕ್ಕಿದ್ದನು.॥22॥
ಮೂಲಮ್ - 23
ತಂ ಪ್ರವಿಷ್ಟಂ ವನಂ ದೃಷ್ಟ್ವಾ ವಾಲೀಶಾಪಭಯಾತ್ ತತಃ ।
ಮುಕ್ತೋ ಹ್ಯಸಿ ತ್ವಮಿತ್ಯುಕ್ತ್ವಾ ಸ ನಿವೃತ್ತೋ ಮಹಾಬಲಃ ॥
ಅನುವಾದ
ಸುಗ್ರೀವನು ಆ ವನವನ್ನು ಹೊಕ್ಕಿದ್ದನ್ನು ನೋಡಿ ಮಹಾಬಲಿ ವಾಲಿಯು ಶಾಪ ಭಯದಿಂದ ಅಲ್ಲಿಗೆ ಹೋಗಲಿಲ್ಲ. ‘ಹೋಗು, ಈಗ ಬದುಕಿಕೊಂಡೆ’ ಎಂದು ಹೇಳಿ ಅಲ್ಲಿಂದ ಹಿಂದಿರುಗಿದನು.॥23॥
ಮೂಲಮ್ - 24
ರಾಘವೋಽಪಿ ಸಹ ಭ್ರಾತ್ರಾ ಸಹ ಚೈವ ಹನೂಮತಾ।
ತದೇವ ವನಮಾಗಚ್ಛತ್ ಸುಗ್ರೀವೋ ಯತ್ರ ವಾನರಃ ॥
ಅನುವಾದ
ಇತ್ತ ಶ್ರೀರಘುನಾಥನೂ ಕೂಡ ಲಕ್ಷ್ಮಣ ಮತ್ತು ಹನುಮಂತ ನೊಂದಿಗೆ ವಾನರ ಸುಗ್ರೀವನಿರುವ ವನಕ್ಕೆ ಆಗಮಿಸಿದನು.॥24॥
ಮೂಲಮ್ - 25
ತಂ ಸಮೀಕ್ಷ್ಯಾಗತಂ ರಾಮಂ ಸುಗ್ರೀವಃ ಸಹಲಕ್ಷ್ಮಣಮ್ ।
ಹ್ರೀಮಾನ್ದೀನಮುವಾಚೇದಂ ವಸುಧಾಮವಲೋಕಯನ್ ॥
ಅನುವಾದ
ಲಕ್ಷ್ಮಣ ಸಹಿತ ಶ್ರೀರಾಮನು ಬಂದಿರುವುದನ್ನು ನೋಡಿ ಸುಗ್ರೀವನಿಗೆ ತುಂಬಾ ನಾಚಿಕೆಯಾಯಿತು ಹಾಗೂ ನೆಲವನ್ನು ನೋಡುತ್ತಾ ದೀನವಾಣಿಯಲ್ಲಿ ಅವನಲ್ಲಿ ಹೇಳಿದನು.॥25॥
ಮೂಲಮ್ - 26
ಆಹ್ವಯಸ್ವೇತಿ ಮಾಮುಕ್ತ್ವಾ ದರ್ಶಯಿತ್ವಾ ಚ ವಿಕ್ರಮಮ್ ।
ವೈರಿಣಾ ಘಾತಯಿತ್ವಾ ಚ ಕಿಮಿದಾನೀಂ ತ್ವಯಾ ಕೃತಮ್ ॥
ಮೂಲಮ್ - 27
ತಾಮೇವ ವೇಲಾಂ ವಕ್ತವ್ಯಂ ತ್ವಯಾ ರಾಘವ ತತ್ತ್ವತಃ ।
ವಾಲಿನಂ ನ ನಿಹನ್ಮೀತಿ ತತೋ ನಾಹಮಿತೋ ವ್ರಜೇ ॥
ಅನುವಾದ
ರಘುನಂದನ! ನೀನು ನಿನ್ನ ಪರಾಕ್ರಮವನ್ನು ತೋರಿಸಿ, ನನಗೆ ವಾಲಿಯನ್ನು ಆಹ್ವಾನಿಸು ಎಂದು ಹೇಳಿ ಕಳಿಸಿಕೊಟ್ಟೆ; ಇದಾದ ಮೇಲೆ ಶತ್ರುವಿನಿಂದ ನನಗೆ ಹೊಡೆಸಿದೆ ಮತ್ತು ಸ್ವತಃ ಅಡಗಿಕೊಂಡೆ. ಈ ಸಮಯದಲ್ಲಿ ನೀನು ಹೀಗೇಕೆ ಮಾಡಿದೆ? ಹೇಳು, ನೀನು ಆಗಲೇ ನಾನು ವಾಲಿಯನ್ನು ಕೊಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕಾಗಿತ್ತು. ಅಂತಹ ಸ್ಥಿತಿಯಲ್ಲಿ ನಾನು ಇಲ್ಲಿಂದ ಅವನ ಬಳಿಗೆ ಹೋಗುತ್ತಿರಲಿಲ್ಲ.॥26-27॥
ಮೂಲಮ್ - 28
ತಸ್ಯ ಚೈವಂ ಬ್ರುವಾಣಸ್ಯ ಸುಗ್ರೀವಸ್ಯ ಮಹಾತ್ಮನಃ ।
ಕರುಣಂ ದೀನಯಾ ವಾಚಾ ರಾಘವಃ ಪುನರಬ್ರವೀತ್ ॥
ಅನುವಾದ
ಮಹಾಮನಾ ಸುಗ್ರೀವನು ದೀನವಾಣಿಯಿಂದ ಹೀಗೆ ಕರುಣಾಜನಕ ಮಾತನ್ನು ಹೇಳಿದಾಗ ಶ್ರೀರಾಮನು ಮತ್ತೆ ಅವನಲ್ಲಿ ನುಡಿದನು.॥28॥
ಮೂಲಮ್ - 29
ಸುಗ್ರೀವ ಶ್ರೂಯತಾಂ ತಾತ ಕ್ರೋಧಶ್ಚ ವ್ಯಪನೀಯತಾಮ್ ।
ಕಾರಣಂ ಯೇನ ಬಾಣೋಽಯಂ ಸ ಮಯಾ ನ ವಿಸರ್ಜಿತಃ ॥
ಅನುವಾದ
ಅಯ್ಯಾ, ಸುಗ್ರೀವ! ನನ್ನ ಮಾತನ್ನು ಕೇಳು, ಕ್ರೋಧವನ್ನು ಮನಸ್ಸಿನಿಂದ ತೆಗೆದುಹಾಕು. ನಾನು ಏಕೆ ಬಾಣ ಪ್ರಯೋಗಿಸಲಿಲ್ಲ ಎಂಬುದರ ಕಾರಣವನ್ನು ತಿಳಿಸುತ್ತೇನೆ.॥29॥
ಮೂಲಮ್ - 30
ಅಲಂಕಾರೇಣ ವೇಷೇಣ ಪ್ರಮಾಣೇನ ಗತೇನ ಚ ।
ತ್ವಂ ಚ ಸುಗ್ರೀವ ವಾಲೀ ಚ ಸದೃಶೌ ಸ್ಥಃ ಪರಸ್ಪರಮ್ ॥
ಅನುವಾದ
ಸುಗ್ರೀವನೇ! ವೇಷಭೂಷಣಗಳಿಂದ ನಡಿಗೆಯಿಂದ, ಎತ್ತರದಲ್ಲಿ, ಅಂಗಸೌಷ್ಠವದಲ್ಲಿ ನೀವಿಬ್ಬರೂ ಪರಸ್ಪರ ಒಂದೇ ರೀತಿಯಾಗಿರುವಿರಿ.॥30॥
ಮೂಲಮ್ - 31
ಸ್ವರೇಣ ವರ್ಚಸಾ ಚೈವ ಪ್ರೇಕ್ಷಿತೇನ ಚ ವಾನರ ।
ವಿಕ್ರಮೇಣ ಚ ವಾಕ್ಯೈಶ್ಚ ವ್ಯಕ್ತಿಂ ವಾಂ ನೋಪಲಕ್ಷಯೇ ॥
ಅನುವಾದ
ಸ್ವರ, ಕಾಂತಿ, ದೃಷ್ಟಿ, ಪರಾಕ್ರಮ, ನಡೆ-ನುಡಿಗಳಿಂದಲೂ ನಿಮ್ಮಿಬ್ಬರಲ್ಲಿ ಯಾವುದೇ ವ್ಯತ್ಯಾಸ ನನಗೆ ಕಂಡುಬಂದಿಲ್ಲ.॥31॥
ಮೂಲಮ್ - 32
ತತೋಽಹಂ ರೂಪಸಾದೃಶ್ಯಾನ್ಮೋಹಿತೋ ವಾನರೋತ್ತಮ ।
ನೋತ್ಸೃಜಾಮಿ ಮಹಾವೇಗಂ ಶರಂ ಶತ್ರುನಿಬರ್ಹಣಮ್ ॥
ಅನುವಾದ
ವಾನರ ಶ್ರೇಷ್ಠನೇ! ನಿಮ್ಮಿಬ್ಬರ ರೂಪದ ಇಷ್ಟು ಸಮಾನತೆಯನ್ನು ಕಂಡು ನಾನು ಮೋಹಿತನಾದೆ, ನಿನ್ನನ್ನು ಗುರುತಿಸದಾದೆ. ಅದಕ್ಕಾಗಿ ನಾನು ನನ್ನ ಮಹಾವೇಗಶಾಲಿ ಶತ್ರುಸಂಹಾರಕ ಬಾಣವನ್ನು ಬಿಡಲಿಲ್ಲ.॥32॥
ಮೂಲಮ್ - 33
ಜೀವಿತಾಂತಕರಂ ಘೋರಂ ಸಾದೃಶ್ಯಾತ್ತು ವಿಶಂಕಿತಃ ।
ಮೂಲಘಾತೋ ನ ನೌ ಸ್ಯಾದ್ಧಿ ದ್ವಯೋರಪಿ ಕೃತೋ ಮಯಾ ॥
ಅನುವಾದ
ನನ್ನ ಆ ಭಯಂಕರ ಬಾಣವು ಶತ್ರುವಿನ ಪ್ರಾಣವನ್ನು ಕಳೆಯುವುದಾಗಿತ್ತು, ಅದಕ್ಕಾಗಿ ನಿಮ್ಮಿಬ್ಬರ ಸಮಾನತೆಯಿಂದಾಗಿ ಸಂದೇಹದಲ್ಲಿ ಬಿದ್ದು ಆ ಬಾಣವನ್ನು ಬಿಡಲಿಲ್ಲ. ನಮ್ಮಿಬ್ಬರ ಮೂಲ ಉದ್ದೇಶವೇ ವಿನಾಶವಾಗಬಾರದೆಂದು ಯೋಚಿಸಿದೆ.॥33॥
ಮೂಲಮ್ - 34
ತ್ವಯಿ ವೀರೇ ವಿಪನ್ನೇ ಹಿ ಅಜ್ಞಾನಾಲ್ಲಾಘವಾನ್ಮಯಾ ।
ಮೌಢ್ಯಂ ಚ ಮಮ ಬಾಲ್ಯಂ ಚ ಖ್ಯಾಪಿತಂ ಸ್ಯಾತ್ ಕಪೀಶ್ವರ ॥
ಅನುವಾದ
ವೀರ, ವಾನರರಾಜನೇ! ತಿಳಿಯದೆ ಅಥವಾ ಅವಸರದಲ್ಲಿ ನನ್ನ ಬಾಣದಿಂದ ನೀನು ಸತ್ತುಹೋದರೆ ನನ್ನ ಬಾಲಿಶ ಚಪಲತೆ ಹಾಗೂ ಮೂಢತೆಯೇ ಸಿದ್ಧವಾದೀತು.॥34॥
ಮೂಲಮ್ - 35
ದತ್ತಾಭಯವಧೋ ನಾಮ ಪಾತಕಂ ಮಹದದ್ಭುತಮ್ ।
ಅಹಂ ಚ ಲಕ್ಷ್ಮಣಶ್ಚೈವ ಸೀತಾ ಚ ವರವರ್ಣಿನೀ ॥
ಮೂಲಮ್ - 36
ತ್ವದಧೀನಾ ವಯಂ ಸರ್ವೇ ವನೇಽಸ್ಮಿನ್ ಶರಣಂ ಭವಾನ್ ।
ತಸ್ಮಾದ್ಯುಧ್ಯಸ್ಯ ಭೂಯಸ್ತ್ವಂ ಮಾ ಮಾಶಂಕೀಶ್ಚ ವಾನರ ॥
ಅನುವಾದ
ಅಭಯದಾನ ಕೊಟ್ಟವನನ್ನು ವಧಿಸುವುದರಿಂದ ಭಾರೀ ಪಾಪವಾಗುತ್ತದೆ; ಇದೊಂದು ಅದ್ಭುತ ಪಾತಕವಾಗಿದೆ. ಈಗ ನಾನು, ಲಕ್ಷ್ಮಣ ಮತ್ತು ಸುಂದರೀ ಸೀತೆ ಎಲ್ಲರೂ ನಿನ್ನ ಅಧೀನರಾಗಿದ್ದೇವೆ. ಈ ವನದಲ್ಲಿ ನೀನೇ ನಮಗೆ ಆಶ್ರಯನಾಗಿರುವೆ; ಅದಕ್ಕಾಗಿ ವಾನರ ರಾಜಾ ಶಂಕಿಸಬೇಡ, ಪುನಃ ಹೋಗಿ ಯುದ್ಧಮಾಡು.॥35-36॥
ಮೂಲಮ್ - 37
ಏತನ್ಮುಹೂರ್ತೇ ತು ಮಯಾ ಪಶ್ಯ ವಾಲಿನಮಾಹವೇ ।
ನಿರಸ್ತಮಿಷುಣೈಕೈನ ಚೇಷ್ಟಮಾನಂ ಮಹೀತಲೇ ॥
ಅನುವಾದ
ನೀನು ಇದೇ ಮುಹೂರ್ತದಲ್ಲಿ ವಾಲಿಯು ನನ್ನ ಬಾಣಕ್ಕೆ ಗುರಿಯಾಗಿ ಧರಾಶಾಯಿಯಾಗುವುದನ್ನು ನೋಡುವೆ.॥37॥
ಮೂಲಮ್ - 38
ಅಭಿಜ್ಞಾನಂ ಕುರುಷ್ವ ತ್ವಮಾತ್ಮನೋ ವಾನರೇಶ್ವರ ।
ಯೇನ ತ್ವಾಮಭಿಜಾನೀಯಾಂ ದ್ವಂದ್ವಯುದ್ಧಮುಪಾಗತಮ್ ॥
ಅನುವಾದ
ವಾನರೇಶ್ವರನ! ತನ್ನ ಪರಿಚಯಕ್ಕಾಗಿ ನೀನು ಏನಾದರೂ ಚಿಹ್ನೆಯನ್ನು ಧರಿಸಿಕೋ. ಅದರಿಂದ ದ್ವಂದ್ವಯುದ್ಧದಲ್ಲಿ ಪ್ರವೃತ್ತನಾದರೂ ನಾನು ನಿನ್ನನ್ನು ಗುರುತಿಸಬಲ್ಲೆ.॥38॥
ಮೂಲಮ್ - 39
ಗಜಪುಷ್ಟೀಮಿಮಾಂ ಫುಲ್ಲಾಮುತ್ಪಾಟ್ಯ ಶುಭಲಕ್ಷಣಾಮ್ ।
ಕುರು ಲಕ್ಷ್ಮಣ ಕಂಠೇಽಸ್ಯ ಸುಗ್ರೀವಸ್ಯ ಮಹಾತ್ಮನಃ ॥
ಅನುವಾದ
(ಸುಗ್ರೀವನಲ್ಲಿ ಹೀಗೆ ಹೇಳಿ ಶ್ರೀರಾಮನು ಲಕ್ಷ್ಮಣನಲ್ಲಿ ಇಂತೆಂದನು) ಲಕ್ಷ್ಮಣ! ಈ ಉತ್ತಮ ಲಕ್ಷಣಗಳಿಂದ ಕೂಡಿದ ಗಜಪುಷ್ಪದ ಲತೆ ಅರಳಿನಿಂತಿದೆ. ಅದನ್ನು ಕಿತ್ತು ನೀನು ಮಹಾಮನಾ ಸುಗ್ರೀವನ ಕೊರಳಿಗೆ ತೊಡಿಸು.॥39॥
ಮೂಲಮ್ - 40
ತತೋ ಗಿರಿತಟೇ ಜಾತಾಮುತ್ಪಾಟ್ಯ ಕುಸುಮಾಯುತಾಮ್ ।
ಲಕ್ಷ್ಮಣೋ ಗಜಪುಷ್ಟೀಂ ತಾಂ ತಸ್ಯ ಕಂಠೇ ವ್ಯಸರ್ಜಯತ್ ॥
ಅನುವಾದ
ಹೀಗೆ ಆಜ್ಞೆ ಪಡೆದು ಲಕ್ಷ್ಮಣನು ಪರ್ವತದ ತಪ್ಪಲಿನಲ್ಲಿ ಹುಟ್ಟಿದ, ಹೂವುಗಳಿಂದ ತುಂಬಿದ ಆ ಗಜಪುಷ್ಪಲತೆಯನ್ನು ಕಿತ್ತು ಸುಗ್ರೀವನ ಕೊರಳಿಗೆ ಹಾಕಿದನು.॥40॥
ಮೂಲಮ್ - 41
ಸ ತಯಾ ಶುಶುಭೇ ಶ್ರೀಮಾಂಲ್ಲತಯಾ ಕಂಠಸಕ್ತಯಾ ।
ಮಾಲಯೇವ ಬಲಾಕಾನಾಂ ಸಸಂಧ್ಯ ಇವ ತೋಯದಃ ॥
ಅನುವಾದ
ಕೊರಳಿಗೆ ಬಿದ್ದ ಆ ಲತೆಯಿಂದ ಶ್ರೀಮಾನ್ ಸುಗ್ರೀವನು ಬಕಪಕ್ಷಿಗಳಿಂದ ಅಲಂಕೃತ ಸಂಜೆಯ ಮೋಡದಂತೆ ಶೋಭಿಸತೊಡಗಿದನು.॥41॥
ಮೂಲಮ್ - 42
ವಿಭ್ರಾಜಮಾನೋ ವಪುಷಾ ರಾಮವಾಕ್ಯಸಮಾಹಿತಃ ।
ಜಗಾಮ ಸಹ ರಾಮೇಣ ಕಿಷ್ಕಿಂಧಾಂ ಪುನರಾಪ ಸಃ ॥
ಅನುವಾದ
ಶ್ರೀರಾಮನ ಮಾತಿನಿಂದ ಆಶ್ವಾಸನೆ ಪಡೆದು ತನ್ನ ಸುಂದರ ಶರೀರದಿಂದ ಶೋಭಿಸುವ ಸುಗ್ರೀವನು ಶ್ರೀರಘುನಾಥನೊಂದಿಗೆ ಪುನಃ ಕಿಷ್ಕಿಂಧೆಗೆ ಹೊರಟನು.॥42॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹನ್ನೆರಡನೆಯ ಸರ್ಗ ಸಂಪೂರ್ಣವಾಯಿತು. ॥12॥