०११ वालिपराक्रमवर्णनम्

वाचनम्
ಭಾಗಸೂಚನಾ

ಸುಗ್ರೀವನು ವಾಲಿಯ ಪರಾಕ್ರಮವನ್ನು ವರ್ಣಿಸಿದುದು, ವಾಲಿಯು ದುಂದುಭಿ ದೈತ್ಯನನ್ನು ಕೊಂದು ಮತಂಗವನಕ್ಕೆ ಎಸೆದುದು, ವಾಲಿಗೆ ಮತಂಗ ಮುನಿಯ ಶಾಪ, ಶ್ರೀರಾಮನು ದುಂದುಭಿಯ ಅಸ್ತಿಸಮೂಹವನ್ನು ದೂರಕ್ಕೆ ಎಸೆದುದು, ಸುಗ್ರೀವನು ಶ್ರೀರಾಮನಲ್ಲಿ ಸಾಲವೃಕ್ಷಗಳನ್ನು ಭೇದಿಸಲು ಹೇಳಿದುದು

ಮೂಲಮ್ - 1

ರಾಮಸ್ಯ ವಚನಂ ಶ್ರುತ್ವಾ ಹರ್ಷಪೌರುಷ ವರ್ಧನಮ್ ।
ಸುಗ್ರೀವಃ ಪೂಜಯಾಂ ಚಕ್ರೇ ರಾಘವಂ ಪ್ರಶಶಂಸ ಚ ॥

ಅನುವಾದ

ಉತ್ಸಾಹ ಮತ್ತು ಪೌರುಷವನ್ನು ಹೆಚ್ಚಿಸುವ ಶ್ರೀರಾಮನ ಮಾತನ್ನು ಕೇಳಿ ಸುಗ್ರೀವನು ಅವನ ಕುರಿತು ಆದರ ಪ್ರಕಟಿಸಿ, ಶ್ರೀರಘುನಾಥನನ್ನು ಹೀಗೆ ಪ್ರಶಂಸಿಸಿದನು.॥1॥

ಮೂಲಮ್ - 2

ಅಸಂಶಯಂ ಪ್ರಜ್ವಲಿತೈಸ್ತೀಕ್ಷ್ಣೈರ್ಮರ್ಮಾತಿಗೈಃ ಶರೈಃ ।
ತ್ವಂ ದಹೇಃ ಕುಪಿತೋ ಲೋಕಾನ್ ಯುಗಾಂತ ಇವ ಭಾಸ್ಕರಃ ॥

ಅನುವಾದ

ಪ್ರಭೋ! ನಿನ್ನ ಬಾಣಗಳು ಪ್ರಜ್ವಲಿತ, ತೀಕ್ಷ್ಣ ಹಾಗೂ ಮರ್ಮಭೇದಿಯಾಗಿವೆ. ನೀನು ಕುಪಿತನಾದರೆ ಇವುಗಳಿಂದ ಪ್ರಳಕಾಲದ ಸೂರ್ಯನಂತೆ ಸಮಸ್ತಲೋಕಗಳನ್ನು ಭಸ್ಮವಾಗಿಸಬಲ್ಲೆ ಇದರಲ್ಲಿ ಸಂಶಯವೇ ಇಲ್ಲ.॥2॥

ಮೂಲಮ್ - 3

ವಾಲಿನಃ ಪೌರುಷಂ ಯತ್ತದ್ ಯಚ್ಚ ವೀರ್ಯಂ ಧೃತಿಶ್ಚ ಯಾ ।
ತನ್ಮಮೈಕಮನಾಃ ಶ್ರುತ್ವಾ ವಿಧತ್ಸ್ವ ಯದನಂತರಮ್ ॥

ಅನುವಾದ

ಆದರೆ ವಾಲಿಯಲ್ಲಿರುವ ಪುರುಷಾರ್ಥ, ಬಲ, ಧೈರ್ಯ ಎಲ್ಲವನ್ನು ಗಮನದಲ್ಲಿಟ್ಟು ಕೇಳು. ಬಳಿಕ ಉಚಿತವೆನಿಸಿದಂತೆ ಮಾಡು.॥3॥

ಮೂಲಮ್ - 4

ಸಮುದ್ರಾತ್ ಪಶ್ಚಿಮಾತ್ ಪೂರ್ವಂ ದಕ್ಷಿಣಾದಪಿ ಚೋತ್ತರಮ್ ।
ಕ್ರಾಮತ್ಯನುದಿತೇ ಸೂರ್ಯೇ ವಾಲೀ ವ್ಯಪಗತಕ್ಲಮಃ ॥

ಅನುವಾದ

ವಾಲಿಯು ಸೂರ್ಯೋದಯಕ್ಕೆ ಮೊದಲೇ ಪಶ್ಚಿಮ ಸಮುದ್ರದಿಂದ ಪೂರ್ವ ಸಮುದ್ರದವರೆಗೆ, ದಕ್ಷಿಣ ಸಾಗರದ ಉತ್ತರದವರೆಗೆ ತಿರುಗಾಡಿ ಬಂದರೂ ಅವನು ಬಳಲುವುದಿಲ್ಲ.॥4॥

ಮೂಲಮ್ - 5

ಅಗ್ರಾಣ್ಯಾರುಹ್ಯ ಶೈಲಾನಾಂ ಶಿಖರಾಣಿ ಮಹಾಂತ್ಯಪಿ ।
ಊರ್ಧ್ವಮುತ್ಪಾತ್ಯ ತರಸಾ ಪ್ರತಿಗೃಹ್ಣಾತಿ ವೀರ್ಯವಾನ್ ॥

ಅನುವಾದ

ಪರಾಕ್ರಮಿ ವಾಲಿಯು ಪರ್ವತಗಳ ಶಿಖರಗಳನ್ನು ಹತ್ತಿ ದೊಡ್ಡ-ದೊಡ್ಡ ಶಿಖರಗಳನ್ನು ಬಲವಂತವಾಗಿ ಎತ್ತಿ ಮೇಲಕ್ಕೆ ಹಾರಿಸಿ, ಅವನ್ನು ಕೈಯಿಂದ ಹಿಡಿದುಕೊಳ್ಳುತ್ತಾನೆ.॥5॥

ಮೂಲಮ್ - 6

ಬಹವಃ ಸಾರವಂತಶ್ಚ ವನೇಷು ವಿವಿಧಾ ದ್ರುಮಾಃ ।
ವಾಲಿನಾ ತರಸಾಭಗ್ನಾ ಬಲಂ ಪ್ರಥಯತಾಽಽತ್ಮನಃ ॥

ಅನುವಾದ

ವನದಲ್ಲಿರುವ ನಾನಾ ಪ್ರಕಾರದ ಅನೇಕ ಸಮೃದ್ಧ ವೃಕ್ಷಗಳನ್ನು ತನ್ನ ಬಲವನ್ನು ಪ್ರಕಟಿಸುತ್ತಾ ವಾಲಿಯು ವೇಗವಾಗಿ ಮುರಿದು ಹಾಕುತ್ತಾನೆ.॥6॥

ಮೂಲಮ್ - 7

ಮಹಿಷೋ ದುಂದುಭಿರ್ನಾಮ ಕೈಲಾಸಶಿಖರಪ್ರಭಃ ।
ಬಲಂ ನಾಗಸಹಸ್ರಸ್ಯ ಧಾರಯಾಮಾಸ ವೀರ್ಯವಾನ್ ॥

ಅನುವಾದ

ಹಿಂದೊಮ್ಮೆ ಇಲ್ಲಿ ದುಂದುಭಿ ಎಂಬ ಒಬ್ಬ ಅಸುರ ಇರುತ್ತಿದ್ದನು, ಅವನು ಕೋಣನಂತೆ ಕಾಣಿಸಿಕೊಳ್ಳುತ್ತಿದ್ದನು. ಅವನು ಎತ್ತರದಲ್ಲಿ ಕೈಲಾಸದಂತೆ ಅನಿಸುತ್ತಿದ್ದನು. ಪರಾಕ್ರಮಿ ದುಂದುಭಿಯ ಶರೀರದಲ್ಲಿ ಸಾವಿರ ಆನೆಗಳ ಬಲವಿತ್ತು.॥7॥

ಮೂಲಮ್ - 8

ಸ ವೀರ್ಯೋತ್ಸೇಕದುಷ್ಟಾತ್ಮಾ ವರದಾನೇನ ಮೋಹಿತಃ ।
ಜಗಾಮ ಸ ಮಹಾಕಾಯಃ ಸಮುದ್ರಂ ಸರಿತಾಂ ಪತಿಮ್ ॥

ಅನುವಾದ

ಬಲಗರ್ವಿತನಾದ ಆ ವಿಶಾಲಕಾಯ ದುಷ್ಟಾತ್ಮಾ ದಾನವನು ಒಮ್ಮೆ ತನಗೆ ದೊರೆತ ವರದಾನದಿಂದ ಮೋಹಿತನಾಗಿ ನದಿಗಳ ಸ್ವಾಮಿ ಸಮುದ್ರ ಬಳಿಗೆ ಹೋದನು.॥8॥

ಮೂಲಮ್ - 9

ಊರ್ಮಿಮಂತಮತಿಕ್ರಮ್ಯ ಸಾಗರಂ ರತ್ನಸಂಚಯಮ್ ।
ಮಹ್ಯಂ ಯುದ್ಧಂ ಪ್ರಯಚ್ಛೇತಿ ತಮುವಾಚ ಮಹಾರ್ಣವಮ್ ॥

ಅನುವಾದ

ಉತ್ತಾಲ ತರಂಗಗಳಿಂದ ಕೂಡಿದ, ರತ್ನಗಳ ನಿಧಿ ಮಹಾ ಸಾಗರವನ್ನು ದಾಟಿ, ಅದನ್ನು ಗಣನೆಗೆ ತರದೆ ದುಂದುಭಿಯು ಅದರ ಅಭಿಷ್ಠಾತೃ ದೇವತೆಯಲ್ಲಿ ನನಗೆ ನಿನ್ನೊಂದಿಗೆ ಯುದ್ಧ ಮಾಡುವ ಅವಕಾಶಕೊಡು ಎಂದು ಹೇಳಿದನು.॥9॥

ಮೂಲಮ್ - 10

ತತಃ ಸಮುದ್ರೋ ಧರ್ಮಾತ್ಮಾ ಸಮುತ್ಥಾಯ ಮಹಾಬಲಃ ।
ಅಬ್ರವೀದ್ವಚನಂ ರಾಜನ್ನಸುರಂ ಕಾಲಚೋದಿತಮ್ ॥

ಅನುವಾದ

ರಾಜನೇ! ಆಗ ಮಹಾನ್ ಬಲಶಾಲಿ ಧರ್ಮಾತ್ಮಾ ಸಮುದ್ರವು ಆ ಕಾಲ ಪ್ರೇರಿತ ಅಸುರನಲ್ಲಿ ಇಂತೆಂದನು.॥10॥

ಮೂಲಮ್ - 11

ಸಮರ್ಥೋ ನಾಸ್ಮಿ ತೇ ದಾತುಂ ಯುದ್ಧಂ ಯುದ್ಧವಿಶಾರದ ।
ಶ್ರೂಯತಾಂ ಚಾಭಿಧಾಸ್ಯಾಮಿ ಯಸ್ತೇ ಯುದ್ಧಂ ಪ್ರದಾಸ್ಯತಿ ॥

ಅನುವಾದ

ಯುದ್ಧವಿಶಾರದ ವೀರನೇ! ನಾನು ನಿನ್ನೊಂದಿಗೆ ಯುದ್ಧ ಮಾಡಲು ಅಸಮರ್ಥನಾಗಿದ್ದೇನೆ. ನಿನ್ನೊಡನೆ ಯುದ್ಧ ಮಾಡುವಂತಹವನ ಹೆಸರನ್ನು ನಿನಗೆ ತಿಳಿಸುವೆನು ಕೇಳು.॥11॥

ಮೂಲಮ್ - 12

ಶೈಲರಾಜೋ ಮಹಾರಣ್ಯೇ ತಪಸ್ವಿಶರಣಂ ಪರಮ್ ।
ಶಂಕರಶ್ವಶುರೋ ನಾಮ್ನಾ ಹಿಮಾವಾನಿತಿ ವಿಶ್ರುತಃ ॥

ಮೂಲಮ್ - 13

ಮಹಾಪ್ರಸ್ರವಣೋಪೇತೋ ಬಹುಕಂದರನಿರ್ಝರಃ ।
ಸ ಸಮರ್ಥಸ್ತವ ಪ್ರೀತಿಮತುಲಾಂ ಕರ್ತುಮರ್ಹತಿ ॥

ಅನುವಾದ

ಪರ್ವತಗಳ ರಾಜನೂ, ಭಗವಾನ್ ಶಂಕರನ ಮಾವನೂ, ತಪಸ್ವೀ ಜನರ ದೊಡ್ಡ ಆಶ್ರಯನೂ, ಜಗತ್ತಿನಲ್ಲಿ ಹಿಮವಂತನೆಂದು ವಿಖ್ಯಾತವಾದ, ಅನೇಕ ಕಂದರಗಳೂ, ಜಲಪಾತಗಳಿರುವ, ಗಿರಿರಾಜ ಹಿಮಾಚಲನೇ ನಿನ್ನೊಂದಿಗೆ ಯುದ್ದ ಮಾಡಲು ಸಮರ್ಥನಾಗಿದ್ದಾನೆ. ಅವನು ನಿನಗೆ ಅನುಪಮ ಪ್ರೀತಿ ಕೊಡಬಲ್ಲನು.॥12-13॥

ಮೂಲಮ್ - 14

ತಂ ಭೀತಮಿತಿ ವಿಜ್ಞಾಯ ಸಮುದ್ರಮಸುರೋತ್ತಮಃ ।
ಹಿಮವದ್ವನಮಾಗಮ್ಯಶರಶ್ಚಾಪಾದಿವ ಚ್ಯುತಃ ॥

ಮೂಲಮ್ - 15

ತತಸ್ತಸ್ಯ ಗಿರೇಃ ಶ್ವೇತಾ ಗಜೇಂದ್ರಪ್ರತಿಮಾಃ ಶಿಲಾಃ ।
ಚಿಕ್ಷೇಪ ಬಹುಧಾ ಭೂಮೌ ದುಂದುಭಿರ್ವಿನನಾದ ಚ ॥

ಅನುವಾದ

ಇದನ್ನು ಕೇಳಿ ಅಸುರಶ್ರೇಷ್ಠ ದುಂದುಭಿಯು ಸಮುದ್ರವು ಹೆದರಿರುವನು ಎಂದು ತಿಳಿದು ಧನುಸ್ಸಿನಿಂದ ಬಿಟ್ಟ ಬಾಣದಂತೆ ಕೂಡಲೇ ಹಿಮಾಲಯದ ವನಕ್ಕೆ ಹೋಗಿ ಗಜರಾಜನಂತೆ ಪರ್ವತದ ವಿಶಾಲ ಬೆಳ್ಳಗಿನ ಶಿಲೆಗಳನ್ನು ಕಿತ್ತು ಕಿತ್ತು ಭೂಮಿಗೆ ಎಸೆಯುತ್ತಾ ಗರ್ಜಿಸತೊಡಗಿದನು.॥14-15॥

ಮೂಲಮ್ - 16

ತತಃ ಶ್ವೇತಾಂಬುದಾಕಾರಃ ಸೌಮ್ಯಃ ಪ್ರೀತಿಕರಾಕೃತಿಃ ।
ಹಿಮವಾನಬ್ರವೀದ್ವಾಕ್ಯಂ ಸ್ವ ಏವ ಶಿಖರೇ ಸ್ಥಿತಃ ॥

ಅನುವಾದ

ಆಗ ಬೆಳ್ಳಿಮೋಡದಂತೆ ಆಕಾರ ಧರಿಸಿದ ಸೌಮ್ಯ ಸ್ವಭಾವದ ಹಿಮವಂತನು ಅಲ್ಲಿ ಪ್ರಕಟನಾದನು. ಅವನ ಆಕೃತಿ ಸಂತೋಷವನ್ನು ಉಕ್ಕಿಸುವಂತಿತ್ತು. ಅವನು ತನ್ನ ಶಿಖರದಲ್ಲಿ ನಿಂತು ಹೇಳಿದನು.॥16॥

ಮೂಲಮ್ - 17

ಕ್ಲೇಷ್ಟುಮರ್ಹಸಿ ಮಾಂ ನ ತ್ವಂ ದುಂದುಭೇ ಧರ್ಮವತ್ಸಲ ।
ರಣಕರ್ಮಸ್ವಕುಶಲಸ್ತಪಸ್ವಿಶರಣೋ ಹ್ಯಹಮ್ ॥

ಅನುವಾದ

ಧರ್ಮವತ್ಸಲ ದುಂದುಭಿಯೇ! ನೀನು ನನಗೆ ತೊಂದರೆ ಕೊಡಬೇಡ. ನಾನು ಯುದ್ಧ ಕಲೆಯಲ್ಲಿ ಕುಶಲನಲ್ಲ. ನಾನಾದರೋ ತಪಸ್ವಿಗಳ ನಿವಾಸಸ್ಥಾನ ನಾಗಿದ್ದೇನೆ.॥17॥

ಮೂಲಮ್ - 18

ತಸ್ಯ ತದ್ವಚನಂ ಶ್ರುತ್ವಾ ಗಿರಿರಾಜಸ್ಯ ಧೀಮತಃ ।
ಉವಾಚ ದುಂದುಭಿರ್ವಾಕ್ಯಂ ಕ್ರೋಧಾಸ್ತಂರಕ್ತಲೋಚನಃ ॥

ಅನುವಾದ

ಧೀಮಂತ ಗಿರಿರಾಜ ಹಿಮವಂತನ ಈ ಮಾತನ್ನು ಕೇಳಿ ದುಂದುಭಿಯ ಕಣ್ಣುಗಳು ಕ್ರೋಧದಿಂದ ಕೆಂಪಾದವು ಮತ್ತು ಹೀಗೆ ನುಡಿದನು.॥18॥

ಮೂಲಮ್ - 19

ಯದಿ ಯುದ್ಧೇಽಸಮರ್ಥಸ್ತ್ವಂ ಮದ್ಭಯಾದ್ ವಾ ನಿರುದ್ಯಮಃ ।
ತಮಾಚಕ್ಷ್ವ ಪ್ರದದ್ಯಾನ್ಮೇ ಯೋಽದ್ಯ ಯುದ್ಧಂ ಯುಯುತ್ಸತಃ ॥

ಅನುವಾದ

ನೀನು ಯುದ್ಧ ಮಾಡಲು ಅಸಮರ್ಥನಾದರೆ ಅಥವಾ ನನ್ನ ಭಯದಿಂದ ಯುದ್ಧದಿಂದ ಹಿಂದೆಗೆಯುವಿಯಾದರೆ ಯುದ್ಧದ ಇಚ್ಚೆಯುಳ್ಳ ನನ್ನೊಂದಿಗೆ ಯುದ್ಧಮಾಡುವಂತಹ ವೀರನ ಹೆಸರನ್ನು ತಿಳಿಸು.॥19॥

ಮೂಲಮ್ - 20

ಹಿಮವಾನಬ್ರವೀದ್ವಾಕ್ಯಂ ಶ್ರುತ್ವಾ ವಾಕ್ಯವಿಶಾರದಃ ।
ಅನುಕ್ತಪೂರ್ವಂ ಧರ್ಮಾತ್ಮಾ ಕ್ರೋಧಾತ್ತಮಸುರೋತ್ತಮಮ್ ॥

ಅನುವಾದ

ಅವನ ಈ ಮಾತನ್ನು ಕೇಳಿ, ಶ್ರೇಷ್ಠ ಅಸುರರಲ್ಲಿ ಮೊದಲು ಯಾವುದೇ ಪ್ರತಿದ್ವಂದೀ ಯೋಧನ ಹೆಸರನ್ನು ಯಾರೂ ತಿಳಿಸಿರಲಿಲ್ಲ, ಅದನ್ನು ವಾಕ್ಯವಿಶಾರದ ಧರ್ಮಾತ್ಮಾ ಹಿಮವಂತನು ಕ್ರೋಧದಿಂದ ಹೇಳಿದನು.॥20॥

ಮೂಲಮ್ - 21

ವಾಲೀ ನಾಮ ಮಹಾಪ್ರಾಜ್ಞಃ ಶಕ್ರಪುತ್ರಃ ಪ್ರತಾಪವಾನ್ ।
ಅಧ್ಯಾಸ್ತೇ ವಾನರಃ ಶ್ರೀಮಾನ್ ಕಿಷ್ಕಿಂಧಾಮತುಲಪ್ರಭಾಮ್ ॥

ಅನುವಾದ

ಮಹಾಪ್ರಾಜ್ಞ ದಾನವರಾಜನೇ! ವಾಲಿ ಎಂಬ ಪ್ರಸಿದ್ಧ ಓರ್ವ ಪರಮ ತೇಜಸ್ವೀ, ಪ್ರತಾಪೀ ವಾನರನಿದ್ದಾನೆ. ಅವನು ದೇವರಾಜ ಇಂದ್ರನ ಮಗನು, ಅನುಪಮ ಶೋಭಾಪೂರ್ಣ ಕಿಷ್ಕಿಂಧೆಯಲ್ಲಿ ವಾಸಿಸುತ್ತಿದ್ದಾನೆ.॥21॥

ಮೂಲಮ್ - 22

ಸ ಸಮರ್ಥೋ ಮಹಾಪ್ರಾಜ್ಞಸ್ತವ ಯುದ್ಧವಿಶಾರದಃ ।
ದ್ವಂದ್ವಯುದ್ಧಂ ಸ ದಾತುಂ ತೇ ನಮುಚೇರಿವ ವಾಸವಃ ॥

ಅನುವಾದ

ಅವನು ಬಹಳ ಬುದ್ಧಿವಂತ ಮತ್ತು ಯುದ್ಧ ಕಲೆಯಲ್ಲಿ ನಿಪುಣನಾಗಿದ್ದಾನೆ. ಅವನೇ ನಿನ್ನೊಡನೆ ಕಾದಾಡಲು ಸಮರ್ಥನಾಗಿದ್ದಾನೆ. ಇಂದ್ರನು ನಮೂಚಿಗೆ ಯುದ್ಧದ ಅವಕಾಶ ಕೊಟ್ಟಂತೆ ಅವನು ನಿನಗೆ ದ್ವಂದ್ವಯುದ್ಧ ಕೊಡಬಲ್ಲನು.॥22॥

ಮೂಲಮ್ - 23

ತಂ ಶೀಘ್ರಮಭಿಗಚ್ಛ ತ್ವಂ ಯದಿ ಯುದ್ಧಮಿಹೇಚ್ಛಸಿ ।
ಸ ಹಿ ದುರ್ಧರ್ಷಣೋ ನಿತ್ಯಂ ಶೂರಃ ಸಮರಕರ್ಮಣಿ ॥

ಅನುವಾದ

ನೀನು ಯುದ್ಧವನ್ನು ಬಯಸುವೆಯಾದರೆ ಶೀಘ್ರವಾಗಿ ಅಲ್ಲಿಗೆ ಹೋಗು; ಏಕೆಂದರೆ ವಾಲಿಯು ಯಾರದೇ ಯುದ್ಧಾಹ್ವಾನವನ್ನು ಸಹಿಸುವುದಿಲ್ಲ. ಅವನು ಯುದ್ಧದಲ್ಲಿ ಸದಾ ಶೂರತ್ವವನ್ನು ಪ್ರಕಟಿಸುವಂತಹವನು.॥23॥

ಮೂಲಮ್ - 24

ಶ್ರುತ್ವಾ ಹಿಮವತೋ ವಾಕ್ಯಂ ಕೋಪಾವಿಷ್ಟಃ ಸ ದುಂದುಭಿಃ ।
ಜಗಾಮ ತಾಂ ಪುರೀಂ ತಸ್ಯ ಕಿಷ್ಕಿಂಧಾಂ ವಾಲಿನಸ್ತದಾ ॥

ಅನುವಾದ

ಹಿಮವಂತನ ಮಾತನ್ನು ಕೇಳಿ ಕ್ರೋಧದಿಂದ ತುಂಬಿದ ದುಂದುಭಿಯು ಕೂಡಲೇ ವಾಲಿಯ ಕಿಷ್ಕಿಂಧೆಗೆ ಹೋದನು.॥24॥

ಮೂಲಮ್ - 25

ಧಾರಯನ್ಮಾಹಿಷಂ ರೂಪಂ ತೀಕ್ಷ್ಣಶೃಂಗೋ ಭಯಾವಹಃ ।
ಪ್ರಾವೃಷೀವ ಮಹಾಮೇಘ ಸ್ತೋಯಪೂರ್ಣೋ ನಭಸ್ತಲೇ ॥

ಅನುವಾದ

ಅವನು ಕೋಣನಂತೆ ರೂಪವನ್ನು ಧರಿಸಿದ್ದನು. ಅವನ ಕೊಂಬುಗಳು ಬಹಳ ಚೂಪಾಗಿದ್ದವು. ಭಾರೀ ಭಯಂಕರನಾದ ದುಂದುಭಿಯು ವರ್ಷಾಕಾಲದ ನೀರು ತುಂಬಿದ ಮಹಾಮೇಘದಂತೆ ಕಂಡು ಬರುತ್ತಿದ್ದನು.॥25॥

ಮೂಲಮ್ - 26

ತತಸ್ತು ದ್ವಾರಮಾಗಮ್ಯ ಕಿಷ್ಕಿಂಧಾಯಾ ಮಹಾಬಲಃ ।
ನನರ್ದ ಕಂಪಯನ್ಭೂಮಿಂ ದುಂದುಭಿರ್ದುಂದುಭಿರ್ಯಥಾ ॥

ಅನುವಾದ

ಆ ಮಹಾಬಲಿ ದುಂದುಭಿಯು ಕಿಷ್ಕಿಂಧೆಯ ದ್ವಾರಕ್ಕೆ ಬಂದು ಭೂಮಿಯನ್ನು ನಡುಗಿಸುತ್ತಾ ಜೋರಾಗಿ ದುಂದುಭಿಯ ಗಂಭೀರ ನಾದದಂತೆ ಗರ್ಜಿಸತೊಡಗಿದನು.॥26॥

ಮೂಲಮ್ - 27

ಸಮೀಜಾನ್ ದ್ರುಮಾನ್ ಭಂಜನ್ ವಸುಧಾಂ ದಾರಯನ್ಖುರೈಃ ।
ವಿಷಾಣೇನೋಲ್ಲಿಖನ್ ದರ್ಪಾತ್ತದ್ದ್ವಾರಂ ದ್ವಿರದೋ ಯಥಾ ॥

ಅನುವಾದ

ಅವನು ಸುತ್ತಲಿನ ಮರಗಳನ್ನು ಮುರಿಯುತ್ತಾ, ನೆಲವನ್ನು ಗೊರಸುಗಳಿಂದ ಅಗೆಯುತ್ತಾ, ದರ್ಪದಿಂದ ಬಂದು ಪುರಿಯ ಮಹಾದ್ವಾರವನ್ನು ಕೊಂಬುಗಳಿಂದ ತಿವಿಯುತ್ತಾ ಯುದ್ಧಕ್ಕಾಗಿ ಸಿದ್ಧನಾಗಿದ್ದನು.॥27॥

ಮೂಲಮ್ - 28

ಅಂತಃಪುರಗತೋ ವಾಲೀ ಶ್ರುತ್ವಾ ಶಬ್ದಮಮರ್ಷಣಃ ।
ನಿಷ್ಪಪಾತ ಸಹ ಸ್ತ್ರೀಭಿಸ್ತಾರಾಭಿರಿವ ಚಂದ್ರಮಾಃ ॥

ಅನುವಾದ

ನಕ್ಷತ್ರಗಳಿಂದ ಸುತ್ತುವರಿದ ಚಂದ್ರನಂತೆ ಸ್ತ್ರೀಯರಿಂದ ಸುತ್ತುವರಿದಿದ್ದ ಅಂತಃಪುರದಲ್ಲಿದ್ದ ವಾಲಿಯು ಆ ದಾನವನ ಗರ್ಜನೆ ಕೇಳಿ ಕ್ರೋಧಗೊಡು, ನಗರದ ಹೊರಗೆ ಬಂದನು.॥28॥

ಮೂಲಮ್ - 29

ಮಿತಂ ವ್ಯಕ್ತಾಕ್ಷರಪದಂ ತಮುವಾಚ ಸ ದುಂದುಭಿಮ್ ।
ಹರೀಣಾಮೀಶ್ವರೋ ವಾಲೀ ಸರ್ವೇಷಾಂ ವನಚಾರಿಣಾಮ್ ॥

ಅನುವಾದ

ಸಮಸ್ತ ವನಚರ ವಾನರರ ರಾಜಾ ವಾಲಿಯು ಸ್ಪಷ್ಟವಾಗಿ ಪರಿಮಿತ ವಾಣಿಯಲ್ಲಿ ಅವನು ದುಂದುಭಿಯಲ್ಲಿ ನುಡಿದನು.॥29॥

ಮೂಲಮ್ - 30

ಕಿಮರ್ಥಂ ನಗರದ್ವಾರಮಿದಂ ರುದ್ಧ್ವಾ ವಿನರ್ದಸೇ ।
ದುಂದುಭೇ ವಿದಿತೋ ಮೇಽಸಿ ರಕ್ಷ ಪ್ರಾಣಾನ್ಮಹಾಬಲ ॥

ಅನುವಾದ

ಮಹಾಬಲೀ ದುಂದುಭಿಯೇ! ನಾನು ನಿನ್ನನ್ನು ಚೆನ್ನಾಗಿ ತಿಳಿದಿದ್ದೇನೆ. ನೀನು ಈ ನಗರದ್ವಾರವನ್ನು ತಡೆದು ಏಕೆ ಗರ್ಜಿಸುತ್ತಿರುವೆ? ನಿನ್ನ ಪ್ರಾಣಗಳನ್ನು ರಕ್ಷಿಸಿಕೋ.॥30॥

ಮೂಲಮ್ - 31

ತಸ್ಯ ತದ್ವಚನಂ ಶ್ರುತ್ವಾ ವಾನರೇಂದ್ರಸ್ಯ ಧೀಮತಃ ।
ಉವಾಚ ದುಂದುಭಿರ್ವಾಕ್ಯಂ ಕ್ರೋಧಾತ್ಸಂ ರಕ್ತಲೋಚನಃ ॥

ಅನುವಾದ

ಧೀಮಂತ ವಾನರೇಂದ್ರನ ಈ ಮಾತನ್ನು ಕೇಳಿ ದುಂದುಭಿಯ ಕಣ್ಣುಗಳು ಕೆಂಪಾದವು. ಅವನು ಅವನಲ್ಲಿ ಇಂತೆಂದನು.॥31॥

ಮೂಲಮ್ - 32

ನ ತ್ವಂ ಸ್ತ್ರೀಸಂನಿಧೌ ವೀರ ವಚನಂ ವಕ್ತುಮರ್ಹಸಿ ।
ಮಮ ಯುದ್ಧಂ ಪ್ರಯಚ್ಛಾದ್ಯ ತತೋ ಜ್ಞಾಸ್ಯಾಮಿ ತೇ ಬಲಮ್ ॥

ಅನುವಾದ

ವೀರನೇ! ನೀನು ಸ್ತ್ರೀಯರ ಸಮೀಪ ಇಂತಹ ಮಾತುಗಳನ್ನಾಡಬಾರದು. ನನಗೆ ಯುದ್ಧದ ಅವಕಾಶ ಕೊಡು. ಆಗ ನಾನು ನಿನ್ನ ಬಲವನ್ನು ತಿಳಿಯುವೆನು.॥32॥

ಮೂಲಮ್ - 33

ಅಥವಾ ಧಾರಯಿಷ್ಯಾಮಿ ಕ್ರೋಧಮದ್ಯ ನಿಶಾಮಿಮಾಮ್ ।
ಗೃಹ್ಯತಾಮುದಯಃ ಸ್ವೈರಂ ಕಾಮಭೋಗೇಷು ವಾನರ ॥

ಅನುವಾದ

ಅಥವಾ ವಾನರನೇ! ನಾನು ಇಂದಿನ ರಾತ್ರಿಯಲ್ಲಿ ನನ್ನ ಕ್ರೋಧವನ್ನು ತಡೆದಿಡುವೆ. ನಿನಗೆ ಸ್ವೇಚ್ಛಾನುಸಾರ ಕಾಮ ಭೋಗಕ್ಕಾಗಿ ಸೂರ್ಯೋದಯದವರೆಗೆ ಸಮಯವನ್ನು ನನ್ನಿಂದ ಪಡೆದುಕೋ.॥33॥

ಮೂಲಮ್ - 34

ದೀಯತಾಂ ಸಂಪ್ರದಾನಂ ಚ ಪರಿಷ್ವಜ್ಯ ಚ ವಾನರಾನ್ ।
ಸರ್ವಶಾಖಾಮೃಗೇಂದ್ರಸ್ತ್ವಂ ಸಂಸಾದಯ ಸುಹೃಜ್ಜವಮ್ ॥

ಅನುವಾದ

ವಾನರರನ್ನು ಅಪ್ಪಿಕೊಂಡು ಯಾರಿಗೆ ಏನು ಕೊಡುವುದಿದೆಯೋ ಅದನ್ನು ಕೊಟ್ಟುಬಿಡು, ನೀನು ಸಮಸ್ತ ಕಪಿಗಳ ರಾಜನಾಗಿರುವೆ. ನಿನ್ನ ಸುಹೃದರನ್ನು ಭೆಟ್ಟಿಯಾಗಿ ಸಲಹೆ ಪಡೆ.॥34॥

ಮೂಲಮ್ - 35

ಸುದೃಷ್ಟಾಂ ಕುರು ಕಿಷ್ಕಿಂಧಾಂ ಕುರುಷ್ವಾತ್ಮಸಮಂ ಪುರೇ ।
ಕ್ರೀಡಸ್ವ ಚ ಸಹ ಸ್ತ್ರೀಭಿರಹಂ ತೇ ದರ್ಪಶಾಸನಃ ॥

ಅನುವಾದ

ಕಿಷ್ಕಿಂಧೆಯನ್ನು ಚೆನ್ನಾಗಿ ನೋಡಿಕೊಂಡು ತನ್ನಂತೆ ಇರುವ ಪುತ್ರನಿಗೆ ರಾಜ್ಯ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತನನ್ನಾಗಿಸು. ಇಂದು ಸ್ತ್ರೀಯರೊಂದಿಗೆ ಮನಸೋಕ್ತ ಕ್ರೀಡಿಸು. ಅನಂತರ ನಿನ್ನ ಗರ್ವವನ್ನು ನುಚ್ಚುನೂರಾಗಿಸುವೆನು.॥35॥

ಮೂಲಮ್ - 36

ಯೋ ಹಿ ಮತ್ತಂ ಪ್ರಮತ್ತಂ ವಾ ಭಗ್ನಂ ವಾ ರಹಿತಂ ಕೃಶಮ್ ।
ಹನ್ಯಾತ್ಸ ಭ್ರೂಣಹಾ ಲೋಕೇ ತ್ವದ್ವಿಧಂ ಮದಮೋಹಿತಮ್ ॥

ಅನುವಾದ

ಮಧುಪಾನದಿಂದ ಮತ್ತನಾದ, ಪ್ರಮತ್ತ (ಜಾಗರೂಕನಲ್ಲದ)ನಾದ, ಯುದ್ಧದಿಂದ ಓಡುತ್ತಿರುವ, ಅಸ್ತ್ರರಹಿತ, ದುರ್ಬಲನಾದ, ನಿನ್ನಂತಹ ಸ್ತ್ರೀಯರಿಂದ ಸುತ್ತುವರಿದ ಮದಮೋಹಿತನಾದ ಪುರುಷನ ವಧೆಮಾಡುವವನನ್ನು ಜಗತ್ತಿನಲ್ಲಿ ಭ್ರೂಣಹತ್ಯೆ ಮಾಡಿದವನೆಂದು ಹೇಳುತ್ತಾರೆ.॥36॥

ಮೂಲಮ್ - 37

ಸ ಪ್ರಹಸ್ಯಾಬ್ರವೀನ್ಮಂದ ಕ್ರೋಧಾತ್ತಮಸುರೇಶ್ವರಮ್ ।
ವಿಸೃಜ್ಯ ತಾಃ ಸ್ತ್ರಿಯಃ ಸರ್ವಾಸ್ತಾರಾಪ್ರಭೃತಿಕಾಸ್ತದಾ ॥

ಅನುವಾದ

ಇದನ್ನು ಕೇಳಿ ಮುಗುಳ್ನಕ್ಕು ವಾಲಿಯು ತಾರೆಯೇ ಆದಿ ಸ್ತ್ರೀಯರನ್ನು ದೂರಸರಿಸಿ ಆ ಅಸುರನಲ್ಲಿ ಕ್ರೋಧದಿಂದ ಹೇಳಿದನು.॥37॥

ಮೂಲಮ್ - 38

ಮತ್ತೋಽಯಮಿತಿ ಮಾ ಮಂಸ್ಥಾ ಯದ್ಯಭೀತೋಽಸಿ ಸಂಯುಗೇ ।
ಮದೋಽಯಂ ಸಂಪ್ರಹಾರೇಽಸ್ಮಿನ್ ವೀರಪಾನಂ ಸಮರ್ಥ್ಯತಾಮ್ ॥

ಅನುವಾದ

ನೀನು ಯುದ್ಧಕ್ಕಾಗಿ ನಿರ್ಭಯವಾಗಿ ನಿಂತಿದ್ದರೆ ಈ ವಾಲಿಯು ಮಧು ಕುಡಿದು ಉನ್ಮತ್ತನಾಗಿದ್ದಾನೆ ಎಂದು ತಿಳಿಯಬೇಡ. ನನ್ನ ಈ ಮದವನ್ನು ನೀನು ಯುದ್ಧದಲ್ಲಿ ಉತ್ಸಾಹ ವೃದ್ಧಿಗಾಗಿ ವೀರರು ಸೇವಿಸುವ ಔಷಧಿ ವಿಶೇಷವೆಂದು ತಿಳಿ.॥38॥

ಮೂಲಮ್ - 39

ತಮೇವಮುಕ್ತ್ವಾ ಸಂಕ್ರುದ್ಧೋ ಮಾಲಾಮುತ್ಕ್ಷಿಪ್ಯ ಕಾಂಚನೀಮ್ ।
ಪಿತ್ರಾ ದತ್ತಾಂ ಮಹೇಂದ್ರೇಣ ಯುದ್ಧಾಯ ವ್ಯವತಿಷ್ಠತ॥

ಅನುವಾದ

ಅವನಲ್ಲಿ ಹೀಗೆ ಹೇಳಿ ತಂದೆ ಇಂದ್ರನು ಕೊಟ್ಟಿದ್ದ ವಿಜಯದಾಯಿನೀ ಸುವರ್ಣ ಮಾಲೆಯನ್ನು ಕತ್ತಿನಲ್ಲಿ ಧರಿಸಿ ವಾಲಿಯು ಕುಪಿತನಾಗಿ ಯುದ್ಧಕ್ಕಾಗಿ ಸಿದ್ಧನಾಗಿ ನಿಂತನು.॥39॥

ಮೂಲಮ್ - 40

ವಿಷಾಣಯೋರ್ಗೃಹೀತ್ವಾ ತಂ ದುಂದುಭಿಂ ಗಿರಿಸಂನಿಭಮ್ ।
ಆವಿಧ್ಯತ ತದಾ ವಾಲೀ ವಿನದನ್ ಕಪಿಕುಂಜರಃ ॥

ಅನುವಾದ

ಕಪಿಶ್ರೇಷ್ಠ ವಾಲಿಯು ಪರ್ವತಾಕಾರ ದುಂದುಭಿಯ ಎರಡು ಕೊಂಬುಗಳನ್ನು ಹಿಡಿದು ಗರ್ಜಿಸುತ್ತಾ ಅವನನ್ನು ಪದೆ-ಪದೇ ತಿರುಗಿಸಿದನು.॥40॥

ಮೂಲಮ್ - 41

ಬಲಾತ್ ವ್ಯಾಪಾದಯಾಂಚಕ್ರೇ ನನರ್ದ ಚ ಮಹಾಸ್ವನಮ್ ।
ಶ್ರೋತ್ರಾಭ್ಯಾಮಥ ರಕ್ತಂ ತು ತಸ್ಯ ಸುಸ್ರಾವ ಪಾತ್ಯತಃ ॥

ಅನುವಾದ

ಮತ್ತೆ ಜೋರಾಗಿ ಅವನನ್ನು ನೆಲಕ್ಕೆ ಅಪ್ಪಳಿಸಿ ಜೋರಾಗಿ ಸಿಂಹನಾದ ಮಾಡಿದನು. ನೆಲಕ್ಕೆ ಅಪ್ಪಳಿಸಿದಾಗ ಅವನ ಎರಡೂ ಕಿವಿಗಳಿಂದ ರಕ್ತದ ಧಾರೆಗಳು ಹರಿಯತೊಡಗಿದವು.॥41॥

ಮೂಲಮ್ - 42

ತಯೋಸ್ತು ಕ್ರೋಧಸಂರಂಭಾತ್ ಪರಸ್ಪರಜಯೈಷಿಣೋಃ ।
ಯುದ್ಧಂ ಸಮಭವದ್ ಘೋರಂ ದುಂದುಭೇರ್ವಾಲಿನಸ್ತಥಾ ॥

ಅನುವಾದ

ಕ್ರೋಧಾವೇಶದಿಂದ ಕೂಡಿ ಒಬ್ಬರು ಮತ್ತೊಬ್ಬರನ್ನು ಗೆಲ್ಲಲು ಇಚ್ಛಿಸುವ ದುಂದುಭಿ ಮತ್ತು ವಾಲಿ ಇವರಲ್ಲಿ ಘೋರ ಯುದ್ಧ ನಡೆಯಿತು.॥42॥

ಮೂಲಮ್ - 43

ಅಯುಧ್ಯತ ತದಾ ವಾಲೀ ಶಕ್ರತುಲ್ಯಪರಾಕ್ರಮಃ ।
ಮುಷ್ಟಿಭಿರ್ಜಾನುಭಿಃ ಪದ್ಭಿಃ ಶಿಲಾಭಿಃ ಪಾದಪೈಸ್ತಥಾ ॥

ಅನುವಾದ

ಆಗ ಇಂದ್ರತುಲ್ಯ ಪರಾಕ್ರಮಿ ವಾಲಿಯು ದುಂದುಭಿಗೆ ಮುಷ್ಟಿಗಳಿಂದ, ಒದೆಗಳಿಂದ, ವೃಕ್ಷಗಳಿಂದ, ಶಿಲೆಗಳಿಂದ ಪ್ರಹರಿಸತೊಡಗಿದನು.॥43॥

ಮೂಲಮ್ - 44

ಪರಸ್ಪರಂ ಘ್ನತೋಸ್ತತ್ರ ವಾನರಾಸುರಯೋಸ್ತದಾ ।
ಆಸೀದ್ಧೀನೋಽಸುರೋ ಯುದ್ಧೇ ಶಕ್ರಸೂನುರ್ವ್ಯವರ್ಧತ ॥

ಅನುವಾದ

ಆ ಯುದ್ಧದಲ್ಲಿ ಪರಸ್ಪರ ಪ್ರಹಾರ ಮಾಡುತ್ತಾ ವಾನರ ಮತ್ತು ಅಸುರ ಇಬ್ಬರೂ ಯೋಧರಲ್ಲಿ ಅಸುರನ ಶಕ್ತಿ ಕ್ಷಿಣಿಸತೊಡಗಿತು, ಇಂದ್ರಕುಮಾರ ವಾಲಿಯ ಬಲ ಹೆಚ್ಚತೊಡಗಿತು.॥44॥

ಮೂಲಮ್ - 45

ತಂ ತು ದುಂದುಭಿಮುದ್ಯಮ್ಯ ಧರಣ್ಯಾಮಭ್ಯಪಾತಯತ್ ।
ಯುದ್ಧೇ ಪ್ರಾಣಹರೇ ತಸ್ಮಿನ್ನಿಷ್ಪಿಷ್ಟೋ ದುಂದುಭಿಸ್ತದಾ ॥

ಅನುವಾದ

ಅವರಿಬ್ಬರಲ್ಲಿ ಅಲ್ಲಿ ಪ್ರಾಣಾಂತಕಾರೀ ಯುದ್ಧ ಹತ್ತಿಕೊಂಡಿತು. ಆಗ ವಾಲಿಯು ದುಂದುಭಿಯನ್ನು ಎತ್ತಿ ನೆಲಕ್ಕೆ ಒಗೆದು, ಜೊತೆಗೆ ತನ್ನ ಶರೀರದಿಂದ ಅವನನ್ನು ಒತ್ತಿಬಿಟ್ಟಾಗ ದುಂದುಭಿಯು ನುಚ್ಚುನೂರಾದನು.॥45॥

ಮೂಲಮ್ - 46

ಸ್ರೋತೇಭ್ಯೋ ಬಹುರಕ್ತಂ ತು ತಸ್ಯ ಸುಸ್ರಾವ ಪಾತ್ಯತಃ ।
ಪಪಾತ ಚ ಮಹಾಬಾಹುಃ ಕ್ಷಿತೌ ಪಂಚತ್ವಮಾಗತಃ ॥

ಅನುವಾದ

ಬೀಳುವಾಗ ಅವನ ಶರೀರದ ಎಲ್ಲ ದ್ವಾರಗಳಿಂದ ಹೆಚ್ಚಾಗಿ ರಕ್ತ ಹರಿಯತೊಡಗಿತು. ಆ ಮಹಾಬಾಹು ಅಸುರನು ಭೂಮಿಗೆ ಬಿದ್ದು ಸತ್ತುಹೋದನು.॥46॥

ಮೂಲಮ್ - 47

ತಂ ತೋಲಯಿತ್ವಾ ಬಾಹುಭ್ಯಾಂ ಗತಸತ್ತ್ವಮಚೇತನಮ್ ।
ಚಿಕ್ಷೇಪ ಬಲವಾನ್ವಾಲೀ ವೇಗೇನೈಕೇನ ಯೋಜನಮ್ ॥

ಅನುವಾದ

ವನ ಪ್ರಾಣಗಳು ಹೊರಟು ಹೋದಾಗ ಚೈತನ್ಯ ಉಡುಗಿ ಹೋಯಿತು. ಆಗ ವೇಗವಂತ ವಾಲಿಯು ಅವನನ್ನು ಎರಡು ಕೈಗಳಿಂದ ಎತ್ತಿ ಸಾಮಾನ್ಯ ವೇಗದಿಂದ ಒಂದು ಯೋಜನ ದೂರಕ್ಕೆ ಎಸೆದುಬಿಟ್ಟನು.॥47॥

ಮೂಲಮ್ - 48

ತಸ್ಯ ವೇಗಪ್ರವಿದ್ಧಸ್ಯ ವಕ್ತ್ರಾತ್ ಕ್ಷತಜಬಿಂದವಃ ।
ಪ್ರಪೇತುರ್ಮಾರುತೋತ್ಕ್ಷಿಪ್ತಾ ಮತಂಗಸ್ಯಾಶ್ರಮಂ ಪ್ರತಿ ॥

ಅನುವಾದ

ವೇಗವಾಗಿ ಎಸೆದ ಆ ಅಸುರನ ಬಾಯಿಯಿಂದ ಹೊರಟ ರಕ್ತದ ಅನೇಕ ಬಿಂದುಗಳು ಗಾಳಿಯಲ್ಲಿ ಹಾರಿ ಮತಂಗ ಮುನಿಯ ಆಶ್ರಮದಲ್ಲಿ ಬಿದ್ದವು.॥48॥

ಮೂಲಮ್ - 49

ತಾನ್ ದೃಷ್ಟ್ವಾ ಪತಿತಾಂಸ್ತತ್ರ ಮುನಿಃ ಶೋಣಿತವಿಪ್ರುಷಃ ।
ಕ್ರುದ್ಧಸ್ತತ್ರ ಮಹಾಭಾಗ ಚಿಂತಯಾಮಾಸ ಕೋ ನ್ವಯಮ್ ॥

ಅನುವಾದ

ಮಹಾಭಾಗನೇ! ಅಲ್ಲಿ ಬಿದ್ದಿರುವ ರಕ್ತದ ಬಿಂದುಗಳನ್ನು ನೋಡಿ ಮತಂಗ ಮುನಿಯು ಕುಪಿತರಾಗಿ ‘ಇಲ್ಲಿ ರಕ್ತದ ಬಿಂದುಗಳನ್ನು ಚೆಲ್ಲಿದವನು ಯಾರು?’ ಎಂಬ ವಿಚಾರದಲ್ಲಿ ಬಿದ್ದರು.॥49॥

ಮೂಲಮ್ - 50

ಯೇನಾಹಂ ಸಹಸಾ ಸ್ಪೃಷ್ಟಃ ಶೋಣಿತೇನ ದುರಾತ್ಮನಾ ।
ಕೋಽಯಂ ದುರಾತ್ಮಾ ದುರ್ಬುದ್ಧಿರಕೃತಾತ್ಮಾ ಚ ಬಾಲಿಶಃ ।।

ಅನುವಾದ

ಯಾವ ದುಷ್ಟನು ನನ್ನ ಶರೀರಕ್ಕೆ ರಕ್ತವನ್ನು ಸ್ಪರ್ಶಿಸಿದನೋ, ಆ ದುರಾತ್ಮಾ, ದುರ್ಬುದ್ಧಿ, ಅಜಿತಾತ್ಮಾ, ಮೂರ್ಖಯಾರಾಗಿದ್ದಾನೆ.॥50॥

ಮೂಲಮ್ - 51

ಇತ್ಯುಕ್ತ್ವಾ ಸ ವಿನಿಷ್ಕ್ರಮ್ಯ ದದೃಶೇ ಮುನಿಸತ್ತಮಃ ।
ಮಹಿಷಂ ಪರ್ವತಾಕಾರಂ ಗತಾಸುಂ ಪತಿತಂ ಭುವಿ ॥

ಅನುವಾದ

ಹೀಗೆ ಹೇಳಿ ಮುನಿವರ ಮತಂಗರು ಹೊರಗೆ ಬಂದು ನೋಡಿದರೆ ಅವರಿಗೆ ಒಂದು ಪರ್ವತದಂತಹ ಕೋಣನು ಪ್ರಾಣಹೀನನಾಗಿ ನೆಲದಲ್ಲಿ ಬಿದ್ದಿರುವುದನ್ನು ನೋಡಿದರು.॥51॥

ಮೂಲಮ್ - 52

ಸ ತು ವಿಜ್ಞಾಯ ತಪಸಾ ವಾನರೇಣ ಕೃತಂ ಹಿ ತತ್ ।
ಉತ್ಸಸರ್ಜ ಮಹಾಶಾಪಂ ಕ್ಷೇಪ್ತಾರಂ ವಾಲಿನಂ ಪ್ರತಿ ॥

ಅನುವಾದ

ಅವರು ತಮ್ಮ ತಪೋ ಬಲದಿಂದ ಇದೊಂದು ವಾನರನ ಕೃತ್ಯವಾಗಿದೆ ಎಂದು ತಿಳಿದು ಕೊಂಡರು. ಆದ್ದರಿಂದ ಆ ಹೆಣವನ್ನು ಎಸೆದಿರುವ ವಾನರನ ಕುರಿತು ಅವರು ಭಾರೀ ಶಾಪವನ್ನು ಕೊಟ್ಟರು.॥52॥

ಮೂಲಮ್ - 53

ಇಹ ತೇನಾಪ್ರವೇಷ್ಟವ್ಯಂ ಪ್ರಿವಿಷ್ಟಸ್ಯ ವಧೋ ಭವೇತ್ ।
ವನಂ ಮತ್ಸಂಶ್ರಯಂ ಯೇನ ದೂಷಿತಂ ರುಧಿರಸ್ರವೈಃ ॥

ಅನುವಾದ

ಯಾವನು ರಕ್ತದ ಬಿಂದುಗಳನ್ನು ಹಾಕಿ ನನ್ನ ಆಶ್ರಮ ವನ್ನು, ಈ ವನವನ್ನು ಅಪವಿತ್ರನಾಗಿಸಿದನೋ, ಅವನು ಇಂದಿನಿಂದ ಈ ವನದಲ್ಲಿ ಪ್ರವೇಶಿಸದಿರಲಿ. ಇದರಲ್ಲಿ ಪ್ರವೇಶಿಸಿದರೆ ಅವನು ಸತ್ತು ಹೋಗುವನು.॥53॥

ಮೂಲಮ್ - 54½

ಕ್ಷಿಪತಾ ಪಾದಪಾಶ್ಚೇಮೇ ಸಂಭಗ್ನಾಶ್ಚಾಸುರೀಂ ತನುಮ್ ।
ಸಮಂತಾದಾಶ್ರಮಂ ಪೂರ್ಣಂ ಯೋಜನ ಮಾಮಕಂ ಯದಿ ॥
ಆಗಮಿಷ್ಯತಿ ದುರ್ಬುದ್ಧಿರ್ವ್ಯಕ್ತಂ ಸ ನ ಭವಿಷ್ಯತಿ ।

ಅನುವಾದ

ಈ ಅಸುರನ ಶರೀರವನ್ನು ಇತ್ತ ಎಸೆದು ಯಾವನು ಈ ವೃಕ್ಷಗಳನ್ನು ಮುರಿದುಹಾಕಿರುವನೋ, ಆ ದುರ್ಬುದ್ಧಿಯು ನನ್ನ ಆಶ್ರಮದ ಸುತ್ತಲು ಒಂದು ಯೋಜನದವರೆಗಿನ ಭೂಮಿಯಲ್ಲಿ ಕಾಲಿಟ್ಟರೆ ಅವಶ್ಯವಾಗಿ ಪ್ರಾಣಗಳನ್ನು ಕಳೆದುಕೊಳ್ಳುವನು.॥54½॥

ಮೂಲಮ್ - 55

ಯೇ ಚಾಸ್ಯ ಸಚಿವಾಃ ಕೇಚಿತ್ ಸಂಶ್ರಿತಾ ಮಾಮಕಂ ವನಮ್ ॥

ಮೂಲಮ್ - 56

ನ ಚ ತೈರಿಹ ವಸ್ತವ್ಯಂ ಶ್ರುತ್ವಾ ಯಾಂತು ಯಥಾಸುಖಮ್ ।
ತೇಽಪಿ ವಾ ಯದಿ ತಿಷ್ಠಂತಿ ಶಪಿಷ್ಯೇ ತಾನಪಿ ಧ್ರುವಮ್ ॥

ಅನುವಾದ

ಆ ವಾಲಿಯ ಯಾವನೇ ಸಚಿವನೂ ಕೂಡ ನನ್ನ ಈ ವನದಲ್ಲಿದ್ದರೆ, ಅವನೂ ಇಲ್ಲಿಂದ ಹೊರಟುಹೋಗಬೇಕು. ಅವರು ನನ್ನ ಆಜ್ಞೆಯನ್ನು ಕೇಳಿ ಸುಖವಾಗಿ ಇಲ್ಲಿಂದ ಹೊರಟು ಹೋಗಲಿ. ಅವರು ಇಲ್ಲಿಯೇ ಇದ್ದರೆ ನಿಶ್ಚಯವಾಗಿ ಅವರಿಗೆ ಶಾಪಕೊಡುವೆನು.॥55-56॥

ಮೂಲಮ್ - 57

ವನೇಽಸ್ಮಿನ್ಮಾಮಕೇ ನಿತ್ಯಂ ಪುತ್ರವತ್ ಪರಿರಕ್ಷಿತೇ ।
ಪತ್ರಾಂಕುರವಿನಾಶಾಯ ಫಲಮೂಲಾಭವಾಯ ಚ ॥

ಅನುವಾದ

ನಾನು ನನ್ನ ಈ ವನವನ್ನು ಸದಾ ಮಕ್ಕಳಂತೆ ರಕ್ಷಿಸಿರುವೆನು. ಯಾವನು ಇದರ ಎಲೆ, ಚಿಗುರು ಕಿತ್ತು, ಫಲ-ಮೂಲಗಳನ್ನು ಅಭಾವಗೊಳಿಸಿ ಇಲ್ಲೇ ಇದ್ದರೆ ಅವನೂ ಅವಶ್ಯವಾಗಿ ಶಾಪಕ್ಕೆ ಗುರಿಯಾಗುವನು.॥57॥

ಮೂಲಮ್ - 58

ದಿವಸಶ್ಚಾದ್ಯ ಮರ್ಯಾದಾ ಯಂ ದ್ರಷ್ಟಾ ಶ್ವೋಽಸ್ಮಿ ವಾನರಮ್ ॥
ಬಹುವರ್ಷಸಹಸ್ರಾಣಿ ಸ ವೈ ಶೈಲೋ ಭವಿಷ್ಯತಿ ॥

ಅನುವಾದ

ಇಂದಿನ ದಿವಸ ಅವರೆಲ್ಲರಿಗೆ ಬಂದು-ಹೋಗುವ ಅಥವಾ ಇರುವ ಕೊನೆಯ ಅವಧಿಯಾಗಿದೆ. ಇಂದಿನ ಒಂದು ದಿನ ಅವರಿಗೆ ಸವಲತ್ತು ಕೊಡುತ್ತೇನೆ. ನಾಳೆಯಿಂದ ಯಾವನೇ ವಾನರನು ನನ್ನ ಕಣ್ಣಿಗೆ ಬಿದ್ದರೆ, ಅವನು ಅನೇಕ ಸಾವಿರ ವರ್ಷ ಕಲ್ಲಾಗುವನು.॥58॥

ಮೂಲಮ್ - 59

ತತಸ್ತೇ ವಾನರಾಃ ಶ್ರುತ್ವಾ ಗಿರಂ ಮುನಿಸಮೀರಿತಾಮ್ ।
ನಿಶ್ಚಕ್ರಮುರ್ವನಾತ್ತಸ್ಮಾತ್ ತಾನ್ ದೃಷ್ಟ್ವಾವಾಲಿರಬ್ರವೀತ್ ॥

ಅನುವಾದ

ಮುನಿಯ ಈ ಮಾತನ್ನು ಕೇಳಿ ಆ ಎಲ್ಲ ವಾನರರು ಮತಂಗವನದಿಂದ ಹೊರಟುಹೋದರು. ಅವರನ್ನು ಕಂಡು ವಾಲಿಯು ಕೇಳಿದನು.॥59॥

ಮೂಲಮ್ - 60

ಕಿಂ ಭವಂತಃ ಸಮಸ್ತಾಶ್ಚ ಮತಂಗವನವಾಸಿನಃ ।
ಮತ್ಸಮೀಪಮನುಪ್ರಾಪ್ತಾ ಅಪಿ ಸ್ವಸ್ತಿ ವನೌಕಸಾಮ್ ॥

ಅನುವಾದ

ಮತಂಗ ವನದಲ್ಲಿ ಇರುವ ನೀವೆಲ್ಲ ವಾನರರು ನನ್ನ ಬಳಿಗೆ ಏಕೆ ಬಂದಿರುವಿರಿ? ವನವಾಸಿಗಳೆಲ್ಲರೂ ಕ್ಷೇಮ ತಾನೇ.॥60॥

ಮೂಲಮ್ - 61

ತತಸ್ತೇ ಕಾರಣಂ ಸರ್ವಂ ತಥಾ ಶಾಪಂ ಚ ವಾಲಿನಃ ।
ಶಶಂಸುರ್ವಾನರಾಃ ಸರ್ವೇ ವಾಲಿನೇ ಹೇಮಮಾಲಿನೇ ॥

ಅನುವಾದ

ಆ ಎಲ್ಲ ವಾನರರು ಸುವರ್ಣ ಮಾಲಾಧಾರೀ ವಾಲಿಯಲ್ಲಿ ತಾವು ಬಂದ ಕಾರಣವನ್ನು ತಿಳಿದರು. ವಾಲಿಗೆ ಉಂಟಾದ ಶಾಪವನ್ನು ತಿಳಿಸಿದರು.॥61॥

ಮೂಲಮ್ - 62

ಏತಚ್ವ್ರುತ್ವಾ ತದಾ ವಾಲೀ ವಚನಂ ವಾನರೇರಿತಮ್ ।
ಸ ಮಹರ್ಷಿಂ ಸಮಾಸಾದ್ಯ ಯಾಚತೇ ಸ್ಮ ಕೃತಾಂಜಲಿಃ ॥

ಅನುವಾದ

ವಾನರು ಹೇಳಿದ ಈ ಮಾತನ್ನು ಕೇಳಿ ವಾಲಿಯು ಮಹರ್ಷಿ ಮತಂಗರ ಬಳಿಗೆ ಹೋಗಿ ಕೈಮುಗಿದು ಕ್ಷಮೆಯಾಚಿಸತೊಡಗಿದನು.॥62॥

ಮೂಲಮ್ - 63

ಮಹರ್ಷಿಸ್ತಮನಾದೃತ್ಯ ಪ್ರವಿವೇಶಾಶ್ರಮಂ ಪ್ರತಿ ।
ಶಾಪಧಾರಣಭೀತಸ್ತು ವಾಲೀ ವಿಹ್ವಲತಾಂ ಗತಃ ॥

ಅನುವಾದ

ಆದರೆ ಮಹರ್ಷಿಯು ಅವನನ್ನು ಆದರಿಸಲಿಲ್ಲ. ಅವರು ಮೌನವಾಗಿ ತಮ್ಮ ಆಶ್ರಮದೊಳಗೆ ಹೊರಟುಹೋದರು. ಇತ್ತ ವಾಲಿಯು ಶಾಪಗ್ರಸ್ತನಾದುದರಿಂದ ಭಯಗೊಂಡು ಬಹಳ ವ್ಯಾಕುಲನಾದನು.॥63॥

ಮೂಲಮ್ - 64

ತತಃ ಶಾಪಭಯಾದ್ ಭೀತೋ ಋಷ್ಯಮೂಕಂ ಮಹಾಗಿರಿಮ್ ।
ಪ್ರವೇಷ್ಟುಂ ನೇಚ್ಛತಿ ಹರಿರ್ದ್ರಷ್ಟುಂ ವಾಪಿ ನರೇಶ್ವರ ॥

ಅನುವಾದ

ನರೇಶ್ವರನೇ! ಅಂದಿನಿಂದ ಆ ಶಾಪದ ಭಯದಿಂದ ಹೆದರಿದ ವಾಲಿಯು ಈ ಮಹಾನ್ ಋಷ್ಯಮೂಕವನ್ನು ಎಂದೂ ಪ್ರವೇಶಿಸಲು ಬಯಸಿಲ್ಲ, ನೋಡಲೂ ಕೂಡಾ ಬಯಸುವುದಿಲ್ಲ.॥64॥

ಮೂಲಮ್ - 65

ತಸ್ಯಾಪ್ರವೇಶಂ ಜ್ಞಾತ್ವಾಹಮಿದಂ ರಾಮ ಮಹಾವನಮ್ ।
ವಿಚರಾಮಿ ಸಹಾಮಾತ್ಯೋ ವಿಷಾದೇನ ವಿನರ್ಜಿತಃ ॥

ಅನುವಾದ

ಶ್ರೀರಾಮಾ! ಇಲ್ಲಿ ಅವನು ಪ್ರವೇಶಿಸುವುದು ಅಸಂಭವವಾಗಿದೆ. ಇದನ್ನು ತಿಳಿದು ನಾನು ನನ್ನ ಮಂತ್ರಿಗಳೊಂದಿಗೆ ಈ ಮಹಾವನದಲ್ಲಿ ವಿಷಾದ ಶೂನ್ಯನಾಗಿ ಸಂಚರಿಸುತ್ತಿದ್ದೇನೆ.॥65॥

ಮೂಲಮ್ - 66

ಏಷೋಽಸ್ಥಿನಿಚಯಸ್ತಸ್ಯ ದುಂದುಭೇಃ ಸಂಪ್ರಕಾಶತೇ ।
ವೀರ್ಯೋತ್ಸೇಕಾನ್ನಿರಸ್ತಸ್ಯ ಗಿರಿಕೂಟನಿಭೋ ಮಹಾನ್ ॥

ಅನುವಾದ

ಇದು ನೋಡು, ದುಂದುಭಿಯ ಎಲುಬಿನ ರಾಶಿ, ಅದೊಂದು ಮಹಾಪರ್ವತ ದಂತೆ ಕಾಣುತ್ತಿದೆ. ವಾಲಿಯು ತನ್ನ ಉದ್ಧಟತನದಿಂದ ದುಂದುಭಿಯ ಶರೀರವನ್ನು ಇಷ್ಟು ದೂರ ಎಸಿದಿದ್ದನು.॥66॥

ಮೂಲಮ್ - 67

ಇಮೇ ಚ ವಿಪುಲಾಃ ಸಾಲಾಃ ಸಪ್ತ ಶಾಖಾವಲಂಬಿನಃ ।
ಯತ್ರೈಕಂಘಟತೇ ವಾಲೀ ನಿಷ್ಪತ್ರಯಿತುಮೋಜಸಾ ॥

ಅನುವಾದ

ಇವು ಏಳು ವಿಶಾಲವಾದ, ದಪ್ಪವಾದ ಸಾಲವೃಕ್ಷಗಳಿವೆ, ಅವು ಉತ್ತಮ ರೆಂಬೆಗಳಿಂದ ಸುಶೋಭಿತವಾಗಿವೆ. ವಾಲಿಯು ಇವುಗಳಲ್ಲಿ ಒಂದೊಂದನ್ನು ಬಲವಾಗಿ ಅಲ್ಲಾಡಿಸಿ ಎಲೆಗಳಿಲ್ಲದಂತೆ ಮಾಡುತ್ತಿದ್ದನು.॥67॥

ಮೂಲಮ್ - 68

ಏತದಸ್ಯಾಸಮಂ ವೀರ್ಯಂ ಮಯಾ ರಾಮ ಪ್ರಕಾಶಿತಮ್ ।
ಕಥಂ ತಂ ವಾಲಿನಂ ಹಂತುಂ ಸಮರೇ ಶಕ್ಷ್ಯಸೇ ನೃಪ ॥

ಅನುವಾದ

ಶ್ರೀರಾಮಾ! ಈ ವಾಲಿಯ ಅನುಪಮ ಪರಾಕ್ರಮವನ್ನು ನಾನು ವರ್ಣಿಸಿರುವೆನು. ನರೇಶ್ವರನೇ! ನೀನು ಆ ವಾಲಿಯನ್ನು ಸಮರಾಂಗಣದಲ್ಲಿ ಹೇಗೆ ಕೊಲ್ಲಬಲ್ಲೆ.॥68॥

ಮೂಲಮ್ - 69

ತಥಾ ಬ್ರುವಾಣಂ ಸುಗ್ರೀವಂ ಪ್ರಹಸಲ್ಲಕ್ಷ್ಮಣೋಽಬ್ರವೀತ್ ।
ಕಸ್ಮಿನ್ಕರ್ಮಣಿ ನಿರ್ವೃತ್ತೇ ಶ್ರದ್ದಧ್ಯಾ ವಾಲಿನೋ ವಧಮ್ ॥

ಅನುವಾದ

ಸುಗ್ರೀವನು ಹೀಗೆ ಹೇಳಿದಾಗ ಲಕ್ಷ್ಮಣಾಗ್ರಜನಿಗೆ ನಗುಬಂತು. ಯಾವ ಕಾರ್ಯ ಮಾಡಿಬಿಟ್ಟಾಗ ಶ್ರೀರಾಮಚಂದ್ರನು ವಾಲಿಯನ್ನು ವಧಿಸಬಲ್ಲ ಎಂಬ ವಿಶ್ವಾಸ ಉಂಟಾದೀತು; ಎಂದು ಮುಗುಳ್ನಗುತ್ತಾ ಕೇಳಿದನು.॥69॥

ಮೂಲಮ್ - 70

ತಮುವಾಚಾಥ ಸುಗ್ರೀವಃ ಸಪ್ತ ಸಾಲಾನಿಮಾನ್ಪುರಾ ।
ಏವಮೇಕೈಕಶೋ ವಾಲೀವಿವ್ಯಾಥಾಥ ಸ ಚಾಸಕೃತ್ ॥

ಮೂಲಮ್ - 71

ರಾಮೋಽಪಿ ನಿರ್ದಾರಯೇದೇಷಾಂ ಬಾಣೇನೈಕೇನ ಚ ದ್ರುಮಮ್ ।
ವಾಲಿನಂ ನಿಹತಂ ಮನ್ಯೇ ದೃಷ್ಟ್ವಾ ರಾಮಸ್ಯ ವಿಕ್ರಮಮ್ ॥

ಅನುವಾದ

ಆಗ ಸುಗ್ರೀವನು - ‘ಹಿಂದೆ ವಾಲಿಯು ಈ ಏಳು ಸಾಲ ವೃಕ್ಷಗಳನ್ನು ಒಂದೊಂದಾಗಿ ಅನೇಕ ಬಾರಿ ಸೀಳಿ ಹಾಕಿರುವನು. ಆದ್ದರಿಂದ ಶ್ರೀರಾಮನೇ ಇದರಲ್ಲಿ ಯಾವುದಾದರೂ ಒಂದು ವೃಕ್ಷವನ್ನು ಒಂದೇ ಬಾಣದಿಂದ ಕತ್ತರಿಸಿಬಿಟ್ಟರೆ, ನಿನ್ನ ಪರಾಕ್ರಮ ನೋಡಿ ನನಗೆ ವಾಲಿಯನ್ನು ಕೊಲ್ಲುವಿ ಎಂಬ ವಿಶ್ವಾಸ ಉಂಟಾದೀತು’ ಎಂದು ಹೇಳಿದನು.॥70-71॥

ಮೂಲಮ್ - 72

ಹತಸ್ಯ ಮಹಿಷಸ್ಯಾಸ್ಥಿ ಪಾದೇನೈಕೇನ ಲಕ್ಷ್ಮಣ ।
ಉದ್ಯಮ್ಯ ಪ್ರಕ್ಷಿಪೇಚ್ಚಾಪಿ ತರಸಾ ದ್ವೇ ಧನುಃಶತೇ ॥

ಅನುವಾದ

ಲಕ್ಷ್ಮಣ! ಈ ಮಹಿಷರೂಪಧಾರೀ ದುಂದುಭಿಯ ಎಲುಬುಗಳನ್ನು ಒಂದು ಕಾಲಿನಿಂದ ಎತ್ತಿ ಇನ್ನೂರು ಧನುಸ್ಸು ದೂರಕ್ಕೆ ಬಲವಾಗಿ ಎಸೆಯಬಲ್ಲನಾದರೆ, ಇವನ ಕೈಯಿಂದ ವಾಲಿಯ ವಧೆಯಾಗಬಲ್ಲದು ಎಂದು ನಾನು ಒಪ್ಪಿಕೊಳ್ಳುವೆನು.॥72॥

ಮೂಲಮ್ - 73

ಏವಮುಕ್ತ್ವಾ ತು ಸುಗ್ರೀವೋ ರಾಮಂ ರಕ್ತಾಂತಲೋಚನಮ್ ।
ಧ್ಯಾತ್ವಾ ಮುಹೂರ್ತಂ ಕಾಕುತ್ಸ್ಥಂ ಪುನರೇವ ವಚೋಽಬ್ರವೀತ್ ॥

ಅನುವಾದ

ಸ್ವಲ್ಪ ಕೆಂಪಾದ ನೇತ್ರಗಳುಳ್ಳ ಶ್ರೀರಾಮನಲ್ಲಿ ಹೀಗೆ ಹೇಳಿ ಸುಗ್ರೀವನು ಎರಡು ಗಳಿಗೆ ಏನೋ ಯೋಚನೆಯಲ್ಲಿ ಮುಳುಗಿದನು. ಬಳಿಕ ಅವನು ಕಕುತ್ಸ್ಥಕುಲಭೂಷಣ ಶ್ರೀರಾಮನಲ್ಲಿ ಪುನಃ ಹೇಳಿದನು.॥73॥

ಮೂಲಮ್ - 74

ಶೂರಶ್ಚ ಶೂರಮಾನೀ ಚ ಪ್ರಖ್ಯಾತಬಲ ಪೌರುಷಃ ।
ಬಲವಾನ್ವಾನರೋ ವಾಲೀ ಸಂಯುಗೇಷ್ವಪರಾಜಿತಃ ॥

ಅನುವಾದ

ವಾಲಿಯು ಶೂರನಾಗಿದ್ದಾನೆ ಮತ್ತು ಸ್ವತಃ ತನ್ನ ಶೌರ್ಯದ ಮೇಲೆ ಅಭಿಮಾನಪಡುತ್ತಾನೆ. ಅವನ ಬಲ ಹಾಗೂ ಪೌರುಷ ವಿಖ್ಯಾತವಾಗಿದೆ. ಆ ಬಲವಂತ ವಾನರನು ಯುದ್ಧದಲ್ಲಿ ಎಂದೂ ಪರಾಜಿತನಾಗಲಿಲ್ಲ.॥74॥

ಮೂಲಮ್ - 75

ದೃಶ್ಯಂತೇ ಚಾಸ್ಯ ಕರ್ಮಾಣಿ ದುಷ್ಕರಾಣಿ ಸುರೈರಪಿ ।
ಯಾನಿ ಸಂಚಿಂತ್ಯ ಭೀತೋಽಹಮೃಶ್ಯಮೂಕಮುಪಾಶ್ರಿತಃ ॥

ಅನುವಾದ

ದೇವತೆಗಳಿಗೂ ದುಷ್ಕರವಾದ ಅವನ ಇಂತಹ ಕರ್ಮಗಳನ್ನು ನೋಡಿ, ಅವನ್ನು ಚಿಂತಿಸಿ ಭಯಭೀತನಾಗಿ ನಾನು ಈ ಋಷ್ಯಮೂಕ ಪರ್ವತವನ್ನು ಆಶ್ರಯಿಸಿರುವೆನು.॥75॥

ಮೂಲಮ್ - 76

ತಮಜಯ್ಯಮಧೃಷ್ಯಂ ಚ ವಾನರೇಂದ್ರಮಮರ್ಷಣಮ್ ।
ವಿಚಿಂತಯನ್ನ ಮುಂಚಾಮಿ ಋಷ್ಯಮೂಕಮಮುಂ ತ್ವಹಮ್ ॥

ಅನುವಾದ

ವಾನರರಾಜ ವಾಲಿಯನ್ನು ಬೇರೆಯವರಿಗೆ ಗೆಲ್ಲುವುದು ಅಸಂಭವವಾಗಿದೆ. ಅವನ ಮೇಲೆ ಆಕ್ರಮಣ ಅಥವಾ ಅವನ ತಿರಸ್ಕಾರವನ್ನು ಮಾಡಲಾಗುವುದಿಲ್ಲ. ಅವನು ಶತ್ರುವಿನ ಪಂಥಾಹ್ವಾನವನ್ನು ಸಹಿಸಲಾರನು. ನಾನು ಅವನ ಪ್ರಭಾವವನ್ನು ಚಿಂತಿಸಿದಾಗ ಈ ಋಷ್ಯಮೂಕ ಪರ್ವತವನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ.॥76॥

ಮೂಲಮ್ - 77

ಉದ್ವಿಗ್ನಃ ಶಂಕಿತಶ್ಚಾಹಂ ವಿಚರಾಮಿ ಮಹಾವನೇ ।
ಅನುರಕ್ತೈಃ ಸಹಾಮಾತ್ಯೈರ್ಹನುಮತ್ಪ್ರಮುಖೈರ್ವರೈಃ ॥

ಅನುವಾದ

ಈ ಹನುಮಂತನೇ ಮೊದಲಾದ ನನ್ನ ಶ್ರೇಷ್ಠ ಸಚಿವರು ನನ್ನಲ್ಲಿ ಅನುರಾಗವಿಟ್ಟವರಾಗಿದ್ದಾರೆ. ಇವರೊಂದಿಗೆ ಇದ್ದರೂ ನಾನು ಈ ವಿಶಾಲವನದಲ್ಲಿ ವಾಲಿಯಿಂದ ಉದ್ವಿಗ್ನನಾಗಿ, ಶಂಕಿತನಾಗಿಯೇ ಸಂಚರಿಸುತ್ತಿದ್ದೇನೆ.॥77॥

ಮೂಲಮ್ - 78

ಉಪಲಬ್ಧಂ ಚ ಮೇ ಶ್ಲಾಘ್ಯಂ ಸನ್ಮಿತ್ರಂ ಮಿತ್ರವತ್ಸಲ ।
ತ್ವಾಮಹಂ ಪುರುಷವ್ಯಾಘ್ರ ಹಿಮವಂತಮಿವಾಶ್ರಿತಃ ॥

ಅನುವಾದ

ಮಿತ್ರವತ್ಸಲನಾದ ನೀನು ನನಗೆ ಪರಮ ಗೌರವಾನ್ವಿತ ಶ್ರೇಷ್ಠ ಮಿತ್ರನಾಗಿ ದೊರೆತಿರುವೆ. ಪುರುಷಸಿಂಹನೇ! ನೀನು ನನಗೆ ಹಿಮಾಲಯದಂತೆ ಇರುವೆ. ನಾನು ನಿನ್ನ ಆಶ್ರಯಪಡೆದಿರುವೆನು. (ಆದ್ದರಿಂದ ಈಗ ನಾನು ನಿರ್ಭಯನಾಗಬೇಕು..॥78॥

ಮೂಲಮ್ - 79

ಕಿಂ ತು ತಸ್ಯ ಬಲಜ್ಞೋಽಹಂ ದುರ್ಭ್ರಾತುರ್ಬಲಶಾಲಿನಃ ।
ಅಪ್ರತ್ಯಕ್ಷಂ ತು ಮೇ ವೀರ್ಯಂ ಸಮರೇ ತವ ರಾಘವ ॥

ಅನುವಾದ

ಆದರೆ ರಘುನಂದನ! ನಾನು ಆ ಬಲಶಾಲಿ ದುಷ್ಟ ಅಣ್ಣನ ಬಲಪರಾಕ್ರಮವನ್ನು ತಿಳಿದಿದ್ದೇನೆ ಮತ್ತು ಸಮರಾಂಗಣದಲ್ಲಿ ನಿನ್ನ ಪರಾಕ್ರಮವನ್ನು ನಾನು ಪ್ರತ್ಯಕ್ಷವಾಗಿ ಕಂಡಿಲ್ಲ.॥79॥

ಮೂಲಮ್ - 80

ನ ಖಲ್ವಹಂ ತ್ವಾಂ ತುಲಯೇ ನಾವಮನ್ಯೇ ನ ಭೀಷಯೇ ।
ಕರ್ಮಭಿಸ್ತಸ್ಯ ಭೀಮೈಶ್ಚಕಾತರ್ಯಂ ಜನಿತಂ ಮಮ ॥

ಅನುವಾದ

ಪ್ರಭೋ! ನಾನು ವಾಲಿಯೊಂದಿಗೆ ಖಂಡಿತವಾಗಿ ನಿನ್ನ ತುಲನೆ ಮಾಡುತ್ತಿಲ್ಲ. ನಿನ್ನಿಂದ ಹೆದರುವುದೂ ಇಲ್ಲ, ನಿನ್ನನ್ನು ಅಪಮಾನವನ್ನು ಮಾಡುತ್ತಿಲ್ಲ. ವಾಲಿಯ ಭಯಾನಕ ಕರ್ಮಗಳೇ ನನ್ನ ಹೃದಯದಲ್ಲಿ ಹೇಡಿತನ ಉಂಟುಮಾಡಿದೆ.॥80॥

ಮೂಲಮ್ - 81

ಕಾಮಂ ರಾಘವ ತೇ ವಾಣೀ ಪ್ರಮಾಣಂ ಧೈರ್ಯಮಾಕೃತಿಃ ।
ಸೂಚಯಂತಿ ಪರಂ ತೇಜೋ ಭಸ್ಮಚ್ಛನ್ನಮಿವಾನಲಮ್ ॥

ಅನುವಾದ

ರಘುನಂದನ! ನಿಶ್ಚಯವಾಗಿ ನಿನ್ನ ವಾಣಿ ನನಗೆ ಪ್ರಮಾಣಭೂತವಾಗಿದೆ, ವಿಶ್ವಸನೀಯವಾಗಿದೆ; ಏಕೆಂದರೆ ನಿನ್ನ ಧೈರ್ಯ ಮತ್ತು ನಿನ್ನ ಈ ದಿವ್ಯ ಆಕೃತಿ ಮೊದಲಾದ ಗುಣಗಳು ಬೂದಿಮುಚ್ಚಿದ ಕೆಂಡದಂತೆ ನಿನ್ನ ಉತ್ಕೃಷ್ಟ ತೇಜವು ಸೂಚಿಸುತ್ತಿದೆ.॥81॥

ಮೂಲಮ್ - 82

ತಸ್ಯ ತದ್ವಚನಂ ಶ್ರುತ್ವಾ ಸುಗ್ರೀವಸ್ಯ ಮಹಾತ್ಮನಃ ।
ಸ್ಮಿತಪೂರ್ವಮಥೋ ರಾಮಃ ಪ್ರತ್ಯುವಾಚ ಹರಿಂ ಪ್ರತಿ ॥

ಅನುವಾದ

ಮಹಾತ್ಮಾ ಸುಗ್ರೀವನ ಈ ಮಾತನ್ನು ಕೇಳಿ ಭಗವಾನ್ ಶ್ರೀರಾಮನು ಮೊದಲಿಗೆ ಮುಗುಳ್ನಕ್ಕು ಮತ್ತೆ ಆ ವಾನರನ ಮಾತಿಗೆ ಉತ್ತರಿಸುತ್ತಾ ನುಡಿದನು.॥82॥

ಮೂಲಮ್ - 83

ಯದಿ ನ ಪ್ರತ್ಯಯೋಽಸ್ಮಾಸು ವಿಕ್ರಮೇ ತವ ವಾನರ ।
ಪ್ರತ್ಯಯಂ ಸಮರೇ ಶ್ಲಾಘ್ಯಮಹಮುತ್ಪಾದಯಾಮಿ ತೇ ॥

ಅನುವಾದ

ವಾನರನೇ! ನಿನಗೆ ಈಗ ಪರಾಕ್ರಮದ ವಿಷಯದಲ್ಲಿ ನಮ್ಮಗಳ ಮೇಲೆ ವಿಶ್ವಾಸ ಉಂಟಾಗದಿದ್ದರೆ ಯುದ್ಧದ ಸಮಯದಲ್ಲಿ ನಾವು ನಿನಗೆ ಅದರ ಉತ್ತಮ ವಿಶ್ವಾಸ ಕೊಡಿಸುವೆವು.॥83॥

ಮೂಲಮ್ - 84

ಏವಮುಕ್ತ್ವಾ ತು ಸುಗ್ರೀವಂ ಸಾಂತ್ವಯನ್ ಲಕ್ಷ್ಮಣಾಗ್ರಜಃ ।
ರಾಘವೋ ದುಂದುಭೇಃ ಕಾಯಂ ಪಾದಾಂಗುಷ್ಠೇನ ಲೀಲಯಾ ॥

ಮೂಲಮ್ - 85

ತೋಲಯಿತ್ವಾ ಮಹಾಬಾಹುಶ್ಚಿಕ್ಷೇಪ ದಶಯೋಜನಮ್ ।
ಅಸುರಸ್ಯ ತನುಂ ಶುಷ್ಕಾಂ ಪಾದಾಂಗುಷ್ಠೇನ ವೀರ್ಯವಾನ್ ॥

ಅನುವಾದ

ಹೀಗೆ ಸುಗ್ರೀವನನ್ನು ಸಾಂತ್ವನಗೊಳಿಸುತ್ತಾ ಲಕ್ಷ್ಮಣಾಗ್ರಜ ಮಹಾಬಾಹು, ಬಲವಂತ ಶ್ರೀರಾಮನು ಲೀಲಾಜಾಲವಾಗಿ ದುಂದುಭಿಯ ಅಸ್ತಿಪಂಜರವನ್ನು ತನ್ನ ಕಾಲಿನ ಹೆಬ್ಬೆಟ್ಟಿನಿಂದಲೇ ಎತ್ತಿ ಹತ್ತು ಯೋಜನ ದೂರಕ್ಕೆ ಎಸೆದನು ಬಿಟ್ಟನು.॥84-85॥

ಮೂಲಮ್ - 86

ಕ್ಷಿಪ್ತಂ ದೃಷ್ಟ್ವಾ ತತಃ ಕಾಯಂ ಸುಗ್ರೀವಃ ಪುನರಬ್ರವೀತ್ ।
ಲಕ್ಷ್ಮಣಸ್ಯಾಗ್ರತೋ ರಾಮಂ ತಪಂತಮಿವ ಭಾಸ್ಕರಮ್ ।
ಹರೀಣಾಮಗ್ರತೋ ವೀರಮಿದಂ ವಚನಮರ್ಥವತ್ ॥

ಅನುವಾದ

ಆ ಅಸ್ತಿಪಂಜರವನ್ನು ಎಸೆದಿರುವುದನ್ನು ನೋಡಿ ಸುಗ್ರೀವನು ಲಕ್ಷ್ಮಣ ಮತ್ತು ವಾನರರ ಎದುರಿಗೇ ಉರಿಯುವ ಸೂರ್ಯನಂತೆ ತೇಜಸ್ವೀ ವೀರ ಶ್ರೀರಾಮಚಂದ್ರನಲ್ಲಿ ಪುನಃ ಅರ್ಥಗರ್ಭಿತ ಈ ಮಾತನ್ನು ಹೇಳಿದನು.॥86॥

ಮೂಲಮ್ - 87

ಆರ್ದ್ರಃ ಸಮಾಂಸಃ ಪ್ರತ್ಯಗ್ರಃ ಕ್ಷಿಪ್ತಃ ಕಾಯಃ ಪುರಾ ಸಖೇ ।
ಪರಿಶ್ರಾಂತೇನ ಮತ್ತೇನ ಭ್ರಾತ್ರಾ ಮೇ ವಾಲಿನಾ ತದಾ ॥

ಮೂಲಮ್ - 88

ಲಘುಃ ಸಂಪ್ರತಿ ನಿರ್ಮಾಂಸಸ್ತೃಣಭೂತಶ್ಚ ರಾಘವ ।
ಕ್ಷಿಪ್ತಏವಂ ಪ್ರಹರ್ಷೇಣ ಭವತಾ ರಘುನಂದನ ॥

ಅನುವಾದ

ಸಖನೇ! ನನ್ನ ಅಣ್ಣ ವಾಲಿಯು ಆಗ ಮದಮತ್ತ ಹಾಗೂ ಯುದ್ಧದಿಂದ ಬಳಲಿದ್ದನು. ದುಂದುಭಿಯ ಈ ಶರೀರ ರಕ್ತ-ಮಾಂಸಗಳಿಂದ ಕೂಡಿದ್ದು ತರುಣವಾಗಿತ್ತು. ಈ ಸ್ಥಿತಿಯಲ್ಲಿ ಅವನು ಈ ಶರೀರವನ್ನು ಹಿಂದೆ ದೂರಕ್ಕೆ ಎಸೆದಿದ್ದನು.॥87-88॥

ಮೂಲಮ್ - 89

ನಾತ್ರ ಶಕ್ಯಂ ಬಲಂ ಜ್ಞಾತುಂ ತವ ವಾ ತಸ್ಯ ವಾಧಿಕಮ್ ।
ಆರ್ದ್ರಂ ಶುಷ್ಕಮಿತಿ ಹ್ಯೇತತ್ಸುಮಹದ್ರಾಘವಾಂತರಮ್ ॥

ಅನುವಾದ

ಆದ್ದರಿಂದ ರಘುನಂದನ! ಈ ಹೆಣವನ್ನು ಎಸೆದರೂ ನಿನ್ನ ಬಲ ಹೆಚ್ಚಾಗಿದೆಯೇ, ಅವನ ಬಲ ಅಧಿಕವಾಗಿದೆಯೇ ತಿಳಿಯಲಾಗುವುದಿಲ್ಲ; ಏಕೆಂದರೆ ಅಗ ಇದು ಹಸಿಯಾಗಿತ್ತು, ಈಗ ಒಳಗಿ ಹೋಗಿದೆ. ಇದೇ ಎರಡೂ ಸ್ಥಿತಿಗಳಲ್ಲಿ ಅಂತರವಿದೆ.॥89॥

ಮೂಲಮ್ - 90

ಸ ಏವ ಸಂಶಯಸ್ತಾತ ತವ ತಸ್ಯ ಚ ಯದ್ಬಲಮ್ ।
ಸಾಲಮೇಕಂ ವಿನಿರ್ಭಿದ್ಯ ಭವೇದ್ ವ್ಯಕ್ತಿರ್ಬಲಾಬಲೇ ॥

ಅನುವಾದ

ಅಯ್ಯಾ! ನಿನ್ನ ಮತ್ತು ಅವನ ಬಲದಲ್ಲಿ ಅದೇ ಸಂಶಯ ಇನ್ನೂ ಉಳಿದಿದೆ. ಈಗ ಒಂದು ಸಾಲವೃಕ್ಷವನ್ನು ಕತ್ತರಿಸುವುದರಿಂದ ಇಬ್ಬರ ಬಲಾಬಲಗಳು ಸ್ಪಷ್ಟವಾಗಿ ಹೋದೀತು.॥90॥

ಮೂಲಮ್ - 91

ಕೃತ್ವೈತತ್ಕಾರ್ಮುಕಂ ಸಜ್ಯಂ ಹಸ್ತಿಹಸ್ತಮಿವಾತತಮ್ ।
ಆಕರ್ಣಪೂರ್ಣಮಾಯಮ್ಯ ವಿಸೃಜಸ್ವ ಮಹಾಶರಮ್ ॥

ಅನುವಾದ

ನಿನ್ನ ಈ ಧನುಸ್ಸು ಆನೆಯ ಚಾಚಿದ ಸೊಂಡಿಲಿನಂತೆ ವಿಶಾಲವಾಗಿದೆ. ನೀನು ಇದಕ್ಕೆ ಹೆದೆ ಏರಿಸು ಮತ್ತು ಇದನ್ನು ಕಿವಿಯವರೆಗೆ ಸೆಳೆದು ಸಾಲವೃಕ್ಷವನ್ನು ಗುರಿಯಿಟ್ಟು ಒಂದು ವಿಶಾಲ ಬಾಣವನ್ನು ಬಿಡು.॥91॥

ಮೂಲಮ್ - 92

ಇಮಂ ಹಿ ಸಾಲಂ ಪ್ರಹಿತಸ್ತ್ವಯಾ ಶರೋ
ನ ಸಂಶಯೋಽತ್ರಾಸ್ತಿ ವಿದಾರಯಿಷ್ಯತಿ ।
ಅಲಂ ವಿಮರ್ಶೇನ ಮಮ ಪ್ರಿಯಂ ಧ್ರುವಂ
ಕುರುಷ್ವ ರಾಜಾನ್ ಪ್ರತಿ ಶಾಪಿತೋ ಮಯಾ ॥

ಅನುವಾದ

ನೀನು ಬಿಟ್ಟ ಬಾಣವು ಈ ಸಾಲವೃಕ್ಷವನ್ನು ವಿದೀರ್ಣಗೊಳಿಸುವುದರಲ್ಲಿ ಸಂದೇಹವೇ ಇಲ್ಲ. ರಾಜನೇ! ಈಗ ವಿಚಾರ ಮಾಡುವ ಆವಶ್ಯಕತೆ ಇಲ್ಲ. ನಾನು ನನ್ನ ಆಣೆಯಿಟ್ಟು, ನೀನು ನನ್ನ ಈ ಪ್ರಿಯಕಾರ್ಯವನ್ನು ಅವಶ್ಯವಾಗಿ ಮಾಡು ಎಂದು ಹೇಳುತ್ತೇನೆ.॥92॥

ಮೂಲಮ್ - 93

ಯಥಾ ಹಿ ತೇಜಃಸು ವರಃ ಸದಾರವಿ-
ರ್ಯಥಾ ಹಿಶೈಲೋಹಿಮವಾನ್ಮಹಾದ್ರಿಷು ।
ಯಥಾ ಚತುಷ್ಪಾತ್ಸು ಚ ಕೇಸರೀ ವರ-
ಸ್ತಥಾ ನರಾಣಾಮಸಿ ವಿಕ್ರಮೇ ವರಃ ॥

ಅನುವಾದ

ಎಲ್ಲ ತೇಜಗಳಲ್ಲಿ ಸದಾ ಸೂರ್ಯನು ಶ್ರೇಷ್ಠನಾಗಿದ್ದಾನೆ, ದೊಡ್ಡ-ದೊಡ್ಡ ಪರ್ವತಗಳಲ್ಲಿ ಗಿರಿರಾಜ ಹಿಮವಂತನು ಶ್ರೇಷ್ಠನಿರುವಂತೆ, ಚತುಷ್ಪಾದಗಳಲ್ಲಿ ಸಿಂಹವು ಶ್ರೇಷ್ಠವಾಗಿದೆ, ಹಾಗೆಯೇ ಪರಾಕ್ರಮದ ವಿಷಯದಲ್ಲಿ ಎಲ್ಲ ಮನುಷ್ಯರಲ್ಲಿ ನೀನೇ ಶ್ರೇಷ್ಠನಾಗಿರುವೆ.॥93॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹನ್ನೊಂದನೆಯ ಸರ್ಗ ಸಂಪೂರ್ಣವಾಯಿತು. ॥11॥