वाचनम्
ಭಾಗಸೂಚನಾ
ವಾಲಿಯೊಡನೆ ವೈರಕ್ಕೆ ಕಾರಣವನ್ನು ಸುಗ್ರೀವನು ಶ್ರೀರಾಮನಿಗೆ ಹೇಳಿದುದು
ಮೂಲಮ್ - 1
ತತಃ ಕ್ರೋಧಸಮಾವಿಷ್ಟಂ ಸಂರಬ್ಧಂ ತಮುಪಾಗತಮ್ ।
ಅಹಂ ಪ್ರಸಾದಯಾಂಚಕ್ರೇ ಭ್ರಾತರಂ ಹಿತಕಾಮ್ಯಯಾ ॥
ಅನುವಾದ
(ಸುಗ್ರೀವ ಹೇಳುತ್ತಾನೆ) ರಾಘವ! ನಗರಕ್ಕೆ ಆಗಮಿಸಿದ ಕ್ರುದ್ಧನಾಗಿದ್ದ ಮತ್ತು ಉದ್ವಿಗ್ನನಾಗಿದ್ದ ನನ್ನಣ್ಣನಿಗೆ ಹಿತವನ್ನುಂಟು ಮಾಡುವ ಇಚ್ಛೆಯಿಂದ ಪುನಃ ಅವನನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದೆ.॥1॥
ಮೂಲಮ್ - 2
ದಿಷ್ಟ್ಯಾಸಿ ಕುಶಲೀ ಪ್ರಾಪ್ತೋ ನಿಹತಶ್ಚ ತ್ವಯಾ ರಿಪುಃ ।
ಅನಾಥಸ್ಯ ಹಿ ಮೇ ನಾಥಸ್ತ್ವಮೇಕೋಽನಾಥನಂದನ ॥
ಅನುವಾದ
ಅನಾಥನಂದನ! ನೀನು ಶತ್ರುವನ್ನು ಕೊಂದು ಕ್ಷೇಮವಾಗಿ ಮರಳಿದುದು ಸೌಭಾಗ್ಯದ ಮಾತಾಗಿದೆ. ನಾನು ನೀನಿಲ್ಲದೆ ಅನಾಥನಂತಾಗಿದ್ದೇನೆ. ಈಗ ಏಕಮಾತ್ರ ನೀನೇ ನನಗೆ ನಾಥನಾಗಿರುವೆ.॥2॥
ಮೂಲಮ್ - 3
ಇದಂ ಬಹುಶಲಾಕಂ ತೇ ಪೂರ್ಣಚಂದ್ರಮಿವೋದಿತಮ್ ।
ಛತ್ರಂ ಸವಾಲವ್ಯಜನಂಪ್ರತೀಚ್ಛಸ್ವ ಮಯಾ ಧೃತಮ್ ॥
ಅನುವಾದ
ಹಲವಾರು ಕಡ್ಡಿಗಳಿಂದ ಕೂಡಿದ, ಉದಯಿಸಿದ ಪೂರ್ಣ ಚಂದ್ರನಂತಿರುವ ಈ ಶ್ವೇತಚ್ಛತ್ರ ನಿನ್ನ ತಲೆಯ ಮೇಲೆ ಹಿಡಿಯುತ್ತೇನೆ, ಚಾಮರಗಳಿಂದ ಬೀಸುತ್ತೇನೆ. ನೀನು ಇದನ್ನು ಸ್ವೀಕರಿಸು.॥3॥
ಮೂಲಮ್ - 4½
ಆರ್ತಸ್ತತ್ರ ಬಿಲದ್ವಾರಿ ಸ್ಥಿತಃ ಸಂವತ್ಸರಂ ನೃಪ ।
ದೃಷ್ಟ್ವಾಚ ಶೋಣಿತಂ ದ್ವಾರಿ ಬಿಲಾಚ್ಚಾಪಿ ಸಮುತ್ಥಿತಮ್ ॥
ಶೋಕಸಂವಿಗ್ನಹೃದಯೋ ಭೃಶಂ ವ್ಯಾಕುಲಿತೇಂದ್ರಿಯಃ ।
ಅನುವಾದ
ವಾನರರಾಜನೇ! ನಾನು ಬಹಳ ದುಃಖಿತನಾಗಿ ಒಂದು ವರ್ಷದವರೆಗೆ ಆ ಬಿಲದ ಬಾಗಿಲಲ್ಲಿ ನಿಂತಿದ್ದೆ. ಬಳಿಕ ಬಿಲದೊಳಗಿನಿಂದ ರಕ್ತದ ಧಾರೆಯು ಹರಿದುಬಂತು. ದ್ವಾರದಲ್ಲಿ ಆ ರಕ್ತಧಾರೆಯನ್ನು ನೋಡಿ ನನ್ನ ಮನಸ್ಸು ಶೋಕದಿಂದ ಉದ್ವಿಗ್ನವಾಯಿತು, ನನ್ನ ಇಂದ್ರಿಯಗಳೆಲ್ಲ ವ್ಯಾಕುಲವಾದವು.॥4॥
ಮೂಲಮ್ - 5½
ಅಪಿಧಾಯ ಬಿಲದ್ವಾರಂ ಶೈಲಶೃಂಗೀಣ ತತ್ತದಾ ॥
ತಸ್ಮಾದ್ ದೇಶಾದಪಾಕ್ರಮ್ಯ ಕಿಷ್ಕಿಂಧಾಂ ಪ್ರಾವಿಶಂ ಪುನಃ ।
ಅನುವಾದ
ಆಗ ಆ ಗುಹೆಯ ಬಾಗಿಲಿಗೆ ಒಂದು ಪರ್ವತದಂತಹ ಬಂಡೆಯನ್ನು ಮುಚ್ಚಿ ನಾನು ಅಲ್ಲಿಂದ ಹೊರಟು ಕಿಷ್ಕಿಂಧೆಗೆ ಮರಳಿ ಬಂದೆ.॥5½॥
ಮೂಲಮ್ - 6½
ವಿಷಾದಾತ್ತ್ವಿಹ ಮಾಂ ದೃಷ್ಟ್ವಾ ಪೌರೈರ್ಮಂತ್ರಿಭಿರೇವ ಚ ॥
ಅಭಿಷಿಕ್ತೋ ನ ಕಾಮೇನ ತನ್ಮೇ ಕ್ಷಂತುಂ ತ್ವಮರ್ಹಸಿ ।
ಅನುವಾದ
ವಿಷಾದಪೂರ್ವಕ ಒಬ್ಬನೇ ಬಂದಿರುವುದನ್ನು ನೋಡಿ ನನ್ನ ಪುರವಾಸಿಗಳು, ಮಂತ್ರಿಗಳು ಸೇರಿ ಈ ರಾಜ್ಯಕ್ಕೆ ಪಟ್ಟಾಭಿಷೇಕಮಾಡಿದರು. ನಾನು ಸ್ವೇಚ್ಛೆಯಿಂದ ಈ ರಾಜ್ಯವನ್ನು ಸ್ವೀಕರಿಸಲಿಲ್ಲ. ಆದ್ದರಿಂದ ತಿಳಿಯದೆ ಆದ ನನ್ನ ಅಪರಾಧವನ್ನು ನೀನು ಕ್ಷಮಿಸಿಬಿಡು.॥6½॥
ಮೂಲಮ್ - 7½
ತ್ವಮೇವ ರಾಜಾ ಮಾನಾರ್ಹಃ ಸದಾ ಚಾಹಂ ಯಥಾ ಪುರಾ ॥
ರಾಜಭಾವೇನಿಯೋಗೋಽಯಂ ಮಯಾ ತ್ವದ್ವಿರಹಾತ್ಕೃತಃ ।
ಅನುವಾದ
ನೀನೇ ಇಲ್ಲಿಯ ಸನ್ಮಾನ್ಯ ರಾಜನಾಗಿರುವೆ, ನಾನು ಸದಾ ಹಿಂದಿನಂತೆ ನಿನ್ನ ಸೇವಕನಾಗಿದ್ದೇನೆ. ನಿನ್ನ ವಿಯೋಗದಿಂದಲೇ ರಾಜನಾಗಿ ನನ್ನ ನಿಯುಕ್ತಿ ಆಯಿತು.॥7½॥
ಮೂಲಮ್ - 8½
ಸಾಮಾತ್ಯಪೌರನಗರಂ ಸ್ಥಿತಂ ನಿಹತಕಂಟಕಮ್ ॥
ನ್ಯಾಸಭೂತಮಿದಂ ರಾಜ್ಯಂ ತವ ನಿರ್ಯಾತಯಾಮ್ಯಹಮ್ ।
ಅನುವಾದ
ಮಂತ್ರಿಗಳು, ಪುರವಾಸಿಗಳು ಸಹಿತ ಇಡೀ ಅಕಂಟಕ ರಾಜ್ಯವು ನನ್ನ ಬಳಿ ಒತ್ತೆಯಾಗಿ ಇಡಲ್ಪಟ್ಟಿತ್ತು. ಈಗ ಇದನ್ನು ನಾನು ನಿನ್ನ ಸೇವೆಯಲ್ಲಿ ಮರಳಿಸುತ್ತಿದ್ದೇನೆ.॥8½॥
ಮೂಲಮ್ - 9½
ಮಾ ಚ ರೋಷಂ ಕೃಥಾಃ ಸೌಮ್ಯ ಮಯಿ ಶತ್ರುನಿಷೂದನ ॥
ಯಾಚೇ ತ್ವಾಂ ಶಿರಸಾ ರಾಜನ್ಮಯಾ ಬದ್ಧೋಽಯಮಂಜಲಿಃ ।
ಅನುವಾದ
ಸೌಮ್ಯ! ಶತ್ರುಸೂದನ! ನೀನು ನನ್ನ ಮೇಲೆ ಸಿಟ್ಟು ಮಾಡಬೇಡ. ರಾಜನೇ! ನಾನು ಇದಕ್ಕಾಗಿ ತಲೆಬಾಗಿ ಕೈಮುಗಿದು ಪ್ರಾರ್ಥಿಸುತ್ತೇನೆ.॥9½॥
ಮೂಲಮ್ - 10½
ಬಲಾದಸ್ಮಿನ್ ಸಮಾಗಮ್ಯ ಮಂತ್ರಿಭಿಃ ಪುರವಾಸಿಭಿಃ ॥
ರಾಜಭಾವೇ ನಿಯುಕ್ತೋಽಹಂ ಶೂನ್ಯದೇಶಜಿಗೀಷಯಾ ।
ಅನುವಾದ
ಮಂತ್ರಿಗಳು ಮತ್ತು ಪ್ರಜೆಗಳು ಸೇರಿ ಒತ್ತಾಯದಿಂದ ನನ್ನನ್ನು ರಾಜನನ್ನಾಗಿಸಿದರು. ಅದೂ ಕೂಡ ರಾಜರಹಿತವಾದ ರಾಜ್ಯವನ್ನು ನೋಡಿ ಯಾರಾದರೂ ಶತ್ರುಗಳು ಇದನ್ನು ಗೆದ್ದುಕೊಳ್ಳಲು ಆಕ್ರಮಿಸಬಾರದೆಂಬುದೊಂದೇ ಕಾರಣವಾಗಿತ್ತು.॥10½॥
ಮೂಲಮ್ - 11½
ಸ್ನಿಗ್ಧಮೇವಂ ಬ್ರುವಾಣಂ ಮಾಂ ಸ ವಿನಿರ್ಭರ್ತ್ಸ್ಯ ವಾನರಃ ॥
ಧಿಕ್ತ್ವಾಮಿತಿ ಚ ಮಾಮುಕ್ತ್ವಾ ಬಹು ತತ್ತದುವಾಚ ಹ ।
ಅನುವಾದ
ನಾನು ಇವೆಲ್ಲವನ್ನೂ ತುಂಬಾ ಪ್ರೇಮದಿಂದ ಹೇಳಿದ್ದೆ, ಆದರೆ ಆ ವಾನರನು ನನ್ನನ್ನು - ‘ನಿನಗೆ ಧಿಕ್ಕಾರವಿರಲಿ’ ಎಂದು ಗದರಿಸಿ ನುಡಿದನು. ಹೀಗೆ ಹೇಳಿ ಅವನು ಇನ್ನೂ ಅನೇಕ ಕಠೋರ ಮಾತುಗಳನ್ನು ಹೇಳಿದನು.॥11½॥
ಮೂಲಮ್ - 12½
ಪ್ರಕೃತೀಶ್ಚ ಸಮಾನೀಯ ಮಂತ್ರಿಣಶ್ಚೈವ ಸಮ್ಮತಾನ್ ॥
ಮಾಮಾಹ ಸುಹೃದಾಂ ಮಧ್ಯೇ ವಾಕ್ಯಂ ಪರಮಗರ್ಹಿತಮ್ ।
ಅನುವಾದ
ಅನಂತರ ಅವನು ಪ್ರಜೆಗಳನ್ನೂ, ಸನ್ಮಾನ್ಯ ಮಂತ್ರಿಗಳನ್ನೂ ಕರೆಸಿ, ಸುಹೃದರ ನಡುವೆ ನನ್ನ ಕುರಿತು ಅತ್ಯಂತ ನಿಂದಿತವಾದ ಮಾತುಗಳನ್ನಾಡಿದನು.॥12½॥
ಮೂಲಮ್ - 13½
ವಿದಿತಂ ವೋ ಯಥಾ ರಾತ್ರೌ ಮಾಯಾವೀ ಚ ಮಹಾಸುರಃ ॥
ಮಾಂ ಸಮಾಹ್ವಯತ ಕ್ರುದ್ಧೋ ಯುದ್ಧಾಕಾಂಕ್ಷೀ ತದಾ ಪುರಾ ।
ಅನುವಾದ
ಅವನು ಹೇಳಿದನು - ಒಂದು ದಿನ ರಾತ್ರೆ ನನ್ನೊಂದಿಗೆ ಯುದ್ಧಮಾಡಲು ಮಾಯಾವಿ ಎಂಬ ಮಹಾ ಅಸುರನು ಇಲ್ಲಿಗೆ ಬಂದಿದ್ದ. ಅವನು ಕ್ರೋಧಗೊಂಡು ಮೊದಲಿಗೆ ನನ್ನನ್ನು ಯುದ್ಧಕ್ಕಾಗಿ ಆಹ್ವಾನಿಸಿದನು.॥13½॥
ಮೂಲಮ್ - 14½
ತಸ್ಯ ತದ್ ಭಾಷಿತಂ ಶ್ರುತ್ವಾ ನಿಃಸೃತೋಽಹಂ ನೃಪಾಲಯಾತ್ ॥
ಅನುಯಾತಶ್ಚ ಮಾಂ ತೂರ್ಣಮಯಂ ಭ್ರಾತಾ ಸುದಾರುಣಃ ।
ಅನುವಾದ
ಅವನ ಆ ಆಹ್ವಾನವನ್ನು ಕೇಳಿ ನಾನು ಅರಮನೆಯಿಂದ ಹೊರಟಾಗ ಈ ಕ್ರೂರ ಸ್ವಭಾವವುಳ್ಳ ನನ್ನ ತಮ್ಮನೂ ಕೂಡಲೇ ನನ್ನ ಹಿಂದೆಯೇ ಬಂದನು.॥14½॥
ಮೂಲಮ್ - 15
ಸ ತು ದೃಷ್ಟ್ವೈವ ಮಾಂ ರಾತ್ರೌ ಸದ್ವಿತೀಯಂ ಮಹಾಬಲಃ ॥
ಮೂಲಮ್ - 16
ಪ್ರಾದ್ರವದ್ಭಯಸಂತ್ರಸ್ತೋ ವೀಕ್ಷ್ಯಾವಾಂ ಸಮುಪಾಗತೌ ।
ಅಭಿದ್ರುತಶ್ಚ ವೇಗೇನ ವಿವೇಶ ಸ ಮಹಾಬಿಲಮ್ ॥
ಅನುವಾದ
ಆ ಅಸುರನು ಭಾರೀ ಬಲಿಷ್ಟನಾಗಿದ್ದರೂ ನಮ್ಮಿಬ್ಬರನ್ನು ನೋಡುತ್ತಲೇ ಭಯಗೊಂಡು ರಾತ್ರಿಯೇ ಓಡಿಹೋದನು. ನಾವಿಬ್ಬರೂ ಬೆನ್ನಟ್ಟುತ್ತಿರುವುದನ್ನು ನೋಡಿ ಅವನು ವೇಗವಾಗಿ ಓಡಿಹೋಗಿ ಒಂದು ವಿಶಾಲ ಗುಹೆಯಲ್ಲಿ ನುಗ್ಗಿದನು.॥15-16॥
ಮೂಲಮ್ - 17
ತಂ ಪ್ರವಿಷ್ಟಂ ವಿದಿತ್ವಾ ತು ಸುಘೋರಂ ಸುಮಹದ್ಬಿಲಮ್ ।
ಅಯಮುಕ್ತೋಽಥ ಮೇಭ್ರಾತಾ ಮಯಾ ತು ಕ್ರೂರದರ್ಶನಃ ॥
ಅನುವಾದ
ಆ ಅತ್ಯಂತ ಭಯಂಕರ ವಿಶಾಲ ಗುಹೆಯಲ್ಲಿ ಆ ಅಸುರನು ನುಗ್ಗಿರುವುದನ್ನು ನೋಡಿ ನಾನು ನನ್ನ ಈ ಕ್ರೂರದರ್ಶಿ ತಮ್ಮನಲ್ಲಿ ಹೇಳಿದೆ .॥17॥
ಮೂಲಮ್ - 18
ಅಹತ್ವಾ ನಾಸ್ತಿ ಮೇ ಶಕ್ತಿಃ ಪ್ರತಿಗಂತುಮಿತಃ ಪುರೀಮ್ ।
ಬಿಲದ್ವಾರಿ ಪ್ರತೀಕ್ಷ ತ್ವಂ ಯಾವದೇನಂ ನಿಹನ್ಮ್ಯಹಮ್ ॥
ಅನುವಾದ
ಸುಗ್ರೀವನೇ! ಈ ಶತ್ರುವನ್ನು ಕೊಲ್ಲದೆ ನಾನು ಇಲ್ಲಿಂದ ಕಿಷ್ಕಿಂಧೆಗೆ ಹೋಗಲಾರೆ; ಆದ್ದರಿಂದ ನಾನು ಈ ಅಸುರನನ್ನು ಕೊಂದು ಮರಳುವತನಕ ನೀನು ಈ ಗುಹೆಯ ಬಾಗಿಲಲ್ಲಿ ನಿಂತು ನನ್ನನ್ನು ಪ್ರತೀಕ್ಷಿಸುತ್ತಿರು.॥18॥
ಮೂಲಮ್ - 19
ಸ್ಥಿತೋಽಯಮಿತಿ ಮತ್ವಾಹಂ ಪ್ರವಿಷ್ಟಸ್ತು ದುರಾಸದಮ್ ।
ತಂ ಮೇ ಮಾರ್ಗಯತಸ್ತತ್ರ ಗತಃ ಸಂವತ್ಸರಸ್ತದಾ ॥
ಅನುವಾದ
ಹೀಗೆ ಹೇಳಿ ‘ಇವನು ಇಲ್ಲಿ ನಿಂತಿರುವನು’ ಎಂದು ವಿಶ್ವಾಸವಿಟ್ಟು ಆ ಅತ್ಯಂತ ದುರ್ಗಮ ಗುಹೆಯ ಒಳಗೆ ಹೋದೆ. ಒಳಹೊಕ್ಕ ಆ ದಾನವನನ್ನು ಹುಡುಕುತ್ತಿರುವಾಗ ಒಂದು ವರ್ಷ ಕಳೆದು ಹೋಯಿತು.॥19॥
ಮೂಲಮ್ - 20
ಸ ತು ದೃಷ್ಟೋ ಮಯಾ ಶತ್ರುರನಿರ್ವೇದಾದ್ ಭಯಾವಹಃ ।
ನಿಹತಶ್ಚ ಮಯಾ ಸದ್ಯಃ ಸ ಸರ್ವೈಃ ಸಹ ಬಂಧುಭಿಃ ॥
ಅನುವಾದ
ಬಳಿಕ ನಾನು ಆ ಭಯಂಕರ ಶತ್ರುವನ್ನು ನೋಡಿದೆ. ಇಷ್ಟುದಿನ ಅವನು ಸಿಗದಿರುವುದರಿಂದ ನನ್ನ ಮನಸ್ಸಿನಲ್ಲಿ ಯಾವುದೇ ಕ್ಲೇಶ, ಉದಾಸೀನತೆ ಉಂಟಾಗಲಿಲ್ಲ. ನಾನು ಅವನನ್ನು ಬಂಧುಗಳ ಸಹಿತ ಕೂಡಲೇ ಯಮಸದನಕ್ಕೆ ಅಟ್ಟಿದೆ.॥20॥
ಮೂಲಮ್ - 21
ತಸ್ಯಾಸ್ಯಾತ್ತು ಪ್ರವೃತ್ತೇನ ರುಧಿರೌಘೇಣ ತದ್ ಬಿಲಮ್ ।
ಪೂರ್ಣಮಾಸೀದ್ದುರಾಕ್ರಾಮಂ ಸ್ತನತಸ್ತಸ್ಯ ಭೂತಲೇ ॥
ಅನುವಾದ
ಅವನ ಬಾಯಿಯಿಂದ, ಎದೆಯಿಂದ ಹರಿದ ರಕ್ತದಿಂದ ಆ ಇಡೀ ದುರ್ಗಮ ಗುಹೆ ತುಂಬಿಹೋಯಿತು.॥21॥
ಮೂಲಮ್ - 22
ಸೂದಯಿತ್ವಾ ತು ತಂ ಶತ್ರುಂ ವಿಕ್ರಾಂತಂ ತಮಹಂ ಸುಖಮ್ ।
ನಿಷ್ಕ್ರಾಮಂನೈವ ಪಶ್ಯಾಮಿ ಬಿಲಸ್ಯ ಪಿಹಿತಂ ಮುಖಮ್ ॥
ಅನುವಾದ
ಈ ಪ್ರಕಾರ ಆ ಪರಾಕ್ರಮಿ ಶತ್ರುವನ್ನು ಸುಲಭವಾಗಿ ವಧಿಸಿ ನಾನು ಮರಳುವಾಗ ನನಗೆ ಹೊರಬರಲು ದಾರಿಯೇ ಕಾಣದಾಗಿತ್ತು; ಏಕೆಂದರೆ ಗುಹೆಯ ಬಾಗಿಲು ಮುಚ್ಚಿಹೋಗಿತ್ತು.॥22॥
ಮೂಲಮ್ - 23
ವಿಕ್ರೋಶಮಾನಸ್ಯ ತು ಮೇ ಸುಗ್ರೀವೇತಿ ಪುನಃ ಪುನಃ ।
ಯದಾ ಪ್ರತಿವಚೋ ನಾಸ್ತಿ ತತೋಽಹಂ ಭೃಶದುಃಖಿತಃ ॥
ಅನುವಾದ
ನಾನು ಸುಗ್ರೀವ! ಸುಗ್ರೀವಾ! ಎಂದು ಪದೇ ಪದೇ ಕರೆದೆ ಆದರೆ ಯಾವುದೇ ಉತ್ತರ ಬರಲಿಲ್ಲ. ಇದರಿಂದ ನನಗೆ ಬಹಳ ದುಃಖವಾಯಿತು.॥23॥
ಮೂಲಮ್ - 24
ಪಾದಪ್ರಹಾರೈಸ್ತು ಮಯಾ ಬಹುಭಿಃ ಪರಿಪಾತಿತಮ್ ।
ತತೋಽಹಂ ತೇನ ನಿಷ್ಕ್ರಮ್ಯ ಪಥಾ ಪುರಮುಪಾಗತಃ ॥
ಅನುವಾದ
ನಾನು ಮತ್ತೆ ಮತ್ತೆ ಕಾಲಿನಿಂದ ಒದ್ದು ಹೇಗೋ ಬಂಡೆಯನ್ನು ಹಿಂದಕ್ಕೆ ತಳ್ಳಿ, ಗುಹಾದ್ವಾರದಿಂದ ಹೊರಬಿದ್ದು ನಗರದ ದಾರಿ ಹಿಡಿದು ಇಲ್ಲಿಗೆ ಬಂದೆ.॥24॥
ಮೂಲಮ್ - 25
ಅತ್ರನೇನಾಸ್ಮಿ ಸಂರುದ್ಧೋ ರಾಜ್ಯಂ ಮೃಗಯತಾಽಽತ್ಮನಃ ।
ಸುಗ್ರೀವೇಣ ನೃಶಂಸೇನ ವಿಸ್ಮೃತ್ಯ ಭ್ರಾತೃಸೌಹೃದಮ್ ॥
ಅನುವಾದ
ಈ ಕ್ರೂರೀ, ನಿರ್ದಯೀ ಸುಗ್ರೀವನು ಭ್ರಾತೃಪ್ರೇಮ ಮರೆತುಬಿಟ್ಟನು. ಇಡೀ ರಾಜ್ಯವನ್ನು ಕೈವಶಪಡಿಸಲೆಂದೇ ನನ್ನನ್ನು ಗುಹೆಯೊಳಗೆ ಕೂಡಿಹಾಕಿದ್ದನು.॥25॥
ಮೂಲಮ್ - 26
ಏವಮುಕ್ತ್ವಾ ತು ಮಾಂ ತತ್ರ ವಸ್ತ್ರೇಣೈಕೇನ ವಾನರಃ ।
ತದಾ ನಿರ್ವಾಸಯಾಮಾಸ ವಾಲೀ ವಿಗತಸಾಧ್ವಸಃ ॥
ಅನುವಾದ
ಹೀಗೆ ಹೇಳಿ ವಾನರರಾಜ ವಾಲಿಯು ನಿರ್ಧಯವಾಗಿ ಏಕವಸ್ತ್ರನಾದ ನನ್ನನ್ನು ರಾಜ್ಯದಿಂದ ಹೊರಹಾಕಿದ್ದನು.॥26॥
ಮೂಲಮ್ - 27
ತೇನಾಹಮಪವಿದ್ಧಶ್ಚ ಹೃತದಾರಶ್ಚ ರಾಘವ ।
ತದ್ಭಯಾಚ್ಚ ಮಹೀಂ ಸರ್ವಾಂ ಕ್ರಾಂತವಾನ್ಸವನಾರ್ಣವಾಮ್ ॥
ಮೂಲಮ್ - 28
ಋಶ್ಯಮೂಕಂ ಗಿರಿವರಂ ಭಾರ್ಯಾಹರಣದುಃಖಿತಃ ।
ಪ್ರವಿಷ್ಟೋಽಸ್ಮಿ ದುರಾಧರ್ಷಂ ವಾಲಿನಃ ಕಾರಣಾಂತರೇ॥
ಅನುವಾದ
ರಘುನಂದನಾ! ಅವನು ನನ್ನನ್ನು ಊರಿನಿಂದ ಒಡಿಸಿದನು ಹಾಗೂ ನನ್ನ ಪತ್ನಿಯನ್ನು ಕಸಿದುಕೊಂಡನು. ಅವನ ಭಯದಿಂದ ನಾನು ವನಗಳು, ಸಮುದ್ರ ಸಹಿತ ಇಡೀ ಭೂಮಂಡಲವನ್ನು ಸುತ್ತಿದೆ. ಅಂತೂ ನಾನು ಭಾರ್ಯಾಹರಣದಿಂದ ದುಃಖಿತನಾಗಿ, ಈ ಶ್ರೇಷ್ಠ ಋಷ್ಯಮೂಕ ಪರ್ವತಕ್ಕೆ ಬಂದೆ; ಏಕೆಂದರೆ ಒಂದು ವಿಶೇಷ ಕಾರಣದಿಂದ ವಾಲಿಗೆ ಈ ಸ್ಥಾನದಲ್ಲಿ ಆಕ್ರಮಿಸುವುದು ಬಹಳ ಕಠಿಣವಾಗಿತ್ತು.॥27-28॥
ಮೂಲಮ್ - 29
ಏತತ್ತೇ ಸರ್ವಮಾಖ್ಯಾತಂ ವೈರಾನುಕಥನಂ ಮಹತ್ ।
ಅನಾಗಸಾ ಮಯಾ ಪ್ರಾಪ್ತಂ ವ್ಯಸನಂ ಪಶ್ಯ ರಾಘವ ॥
ಅನುವಾದ
ರಘುನಾಥನೇ! ವಾಲಿಯೊಂದಿಗೆ ವೈರ ಉಂಟಾದ ವಿಸ್ತೃತ ಇದೇ ಕಥೆಯಾಗಿದೆ. ಇದೆಲ್ಲವನ್ನು ನಾನು ನಿನಗೆ ತಿಳಿಸಿರುವೆನು. ನೋಡು, ಅಪರಾಧವಿಲ್ಲದೆಯೇ ನನಗೆ ಈ ಸಂಕಟ ಅನುಭವಿಸಬೇಕಾಯಿತು.॥29॥
ಮೂಲಮ್ - 30
ವಾಲಿನಶ್ಚ ಭಯಾತ್ ತಸ್ಯ ಸರ್ವಲೋಕ ಭಯಾಪಹ ।
ಕರ್ತುಮರ್ಹಸಿ ಮೇ ವೀರ ಪ್ರಸಾದಂ ತಸ್ಯ ನಿಗ್ರಹಾತ್ ॥
ಅನುವಾದ
ವೀರವರನೇ! ನೀನು ಸಮಸ್ತ ಜಗತ್ತಿನ ಭಯವನ್ನು ದೂರಗೊಳಿಸುವವನಾಗಿರುವೆ. ನನ್ನ ಮೇಲೆ ಕೃಪೆಮಾಡಿ, ವಾಲಿಯನ್ನು ದಮನ ಮಾಡಿ ನನ್ನನ್ನು ಅವನ ಭಯದಿಂದ ಬಿಡಿಸು.॥30॥
ಮೂಲಮ್ - 31
ಏವಮುಕ್ತಃ ಸ ತೇಜಸ್ವೀ ಧರ್ಮಜ್ಞೋ ಧರ್ಮಸಂಹಿತಮ್ ।
ವಚನಂ ವಕ್ತುಮಾರೇಭೇ ಸುಗ್ರೀವಂ ಪ್ರಹಸನ್ನಿವ ॥
ಅನುವಾದ
ಸುಗ್ರೀವನು ಹೀಗೆ ಹೇಳಿದಾಗ ಧರ್ಮಜ್ಞ, ಪರಮತೇಜಸ್ವೀ ಶ್ರೀರಾಮಚಂದ್ರನು ನಗುತ್ತಾ ಅವನಲ್ಲಿ ಹೀಗೆ ಧರ್ಮಯುಕ್ತ ಮಾತನ್ನು ಹೇಳಲು ಪ್ರಾರಂಭಿಸಿದನು.॥31॥
ಮೂಲಮ್ - 32
ಅಮೋಘಾಃ ಸೂರ್ಯಸಂಕಾಶಾ ನಿಶಿತಾ ಮೇ ಶರಾಃ ಇಮೇ ।
ತಸ್ಮಿನ್ ವಾಲಿನಿ ದುರ್ವೃತ್ತೇ ಪತಿಷ್ಯಂತಿ ಪುರುಷಾನ್ವಿತಾಃ ॥
ಅನುವಾದ
ಮಿತ್ರನೇ! ಈ ಸೂರ್ಯನಂತಿರುವ ತೇಜಸ್ವೀ ತೀಕ್ಷ್ಣಬಾಣಗಳು ಅಮೋಘವಾಗಿವೆ, ಅವು ದುರಾಚಾರೀ ವಾಲಿಯ ಮೇಲೆ ಎರಗುವವು.॥32॥
ಮೂಲಮ್ - 33
ಯಾವತ್ತಂ ನಹಿ ಪಶ್ಯೇಯಂ ತವ ಭಾರ್ಯಾಪಹಾರಿಣಮ್ ।
ತಾವತ್ ಸ ಜೀವೇತ್ ಪಾಪಾತ್ಮಾ ವಾಲೀ ಚಾರಿತ್ರದೂಷಕಃ ॥
ಅನುವಾದ
ನಿನ್ನ ಭಾರ್ಯೆಯನ್ನು ಅಪಹರಿಸಿದ ಆ ವಾನರನು ನನ್ನ ಎದುರಿಗೆ ಕಣ್ಮರೆಯಾಗುವ ತನಕ ಸದಾಚಾರವನ್ನು ಕಲಂಕಿತಗೊಳಿಸುವ ಆ ಪಾಪಾತ್ಮಾ ವಾಲಿಯು ಬದುಕಿರಲಿ.॥33॥
ಮೂಲಮ್ - 34
ಆತ್ಮಾನುಮಾನಾತ್ ಪಶ್ಯಾಮಿ ಮಗ್ನಸ್ತ್ವಂ ಶೋಕಸಾಗರೇ ।
ತ್ವಾಮಹಂ ತಾರಯಿಷ್ಯಾಮಿ ಬಾಢಂ ಪ್ರಾಪ್ಸ್ಯಸಿ ಪುಷ್ಕಲಮ್ ॥
ಅನುವಾದ
ನೀನು ಶೋಕಸಮುದ್ರದಲ್ಲಿ ಮುಳುಗಿರುವುದನ್ನು ನಾನು ಅನುಮಾನದಿಂದ ತಿಳಿಯುತ್ತೇನೆ. ನಾನು ನಿನ್ನ ಉದ್ಧಾರ ಮಾಡುವೆನು. ನೀನು ನಿನ್ನ ಪತ್ನಿ ಹಾಗೂ ವಿಶಾಲ ರಾಜ್ಯವನ್ನು ಪಡೆಯುವೆ.॥34॥
ಮೂಲಮ್ - 35
ತಸ್ಯ ತದ್ವಚನಂ ಶ್ರುತ್ವಾ ಹರ್ಷಪೌರುಷವರ್ಧನಮ್ ।
ಸುಗ್ರೀವಃ ಪರಮಪ್ರೀತಃ ಸುಮಹದ್ವಾಕ್ಯಮಬ್ರವೀತ್ ॥
ಅನುವಾದ
ಶ್ರೀರಾಮನ ವಚನವು ಹರ್ಷ ಮತ್ತು ಪುರುಷಾರ್ಥವನ್ನು ಹೆಚ್ಚಿಸುವಂತಿತ್ತು. ಅದನ್ನು ಕೇಳಿ ಸುಗ್ರೀವನಿಗೆ ತುಂಬಾ ಸಂತೋಷವಾಯಿತು. ಪುನಃ ಅವನು ಬಹಳ ಮಹತ್ವಪೂರ್ಣ ಮಾತನ್ನು ಹೇಳತೊಡಗಿದನು.॥35॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹತ್ತನೆಯ ಸರ್ಗ ಸಂಪೂರ್ಣವಾಯಿತು.॥10॥