००९ सुग्रीवेण वैरकारणकथनम्

वाचनम्
ಭಾಗಸೂಚನಾ

ಸುಗ್ರೀವನು ವಾಲಿಯೊಂದಿಗೆ ಉಂಟಾದ ವೈರದ ಕಾರಣವನ್ನು ಶ್ರೀರಾಮಚಂದ್ರನಿಗೆ ತಿಳಿಸಿದುದು

ಮೂಲಮ್ - 1

ವಾಲೀ ನಾಮ ಮಮ ಭ್ರಾತಾ ಜ್ಯೇಷ್ಠಃ ಶತ್ರುನಿಷೂದನಃ ।
ಪಿತುರ್ಬಹುಮತೋ ನಿತ್ಯಂ ಮಮ ಚಾಪಿ ತಥಾ ಪುರಾ ॥

ಅನುವಾದ

ರಘುನಂದನ! ವಾಲಿಯು ನನಗೆ ಅಣ್ಣನಾಗಿದ್ದಾನೆ. ಅವನಲ್ಲಿ ಶತ್ರುಗಳನ್ನು ಸಂಹರಿಸುವ ಶಕ್ತಿಯಿದೆ. ನನ್ನ ತಂದೆ ಋಕ್ಷರಾಜರೂ ಅವನನ್ನು ಬಹಳ ಪ್ರೀತಿಸುತ್ತಿದ್ದರು. ವೈರಕ್ಕಿಂತ ಮೊದಲು ನನ್ನ ಮನಸ್ಸಿನಲ್ಲಿಯೂ ಅವನ ಕುರಿತು ಆದರವಿತ್ತು.॥1॥

ಮೂಲಮ್ - 2

ಪಿತುರ್ಯುಪರತೇ ತಸ್ಮಿನ್ ಜ್ಯೇಷ್ಠೋಽಯಮಿತಿ ಮಂತ್ರಿಭಿಃ ।
ಕಪೀನಾಮೀಶ್ವರೋ ರಾಜ್ಯೇ ಕೃತಃ ಪರಮಸಮ್ಮತಃ ॥

ಅನುವಾದ

ತಂದೆಯವರು ಗತಿಸಿದ ಬಳಿಕ ಮಂತ್ರಿಗಳು ಅವನು ಹಿರಿಯವನೆಂದು ತಿಳಿದು ವಾನರರಿಗೆ ರಾಜನಾಗಿಸಿದರು. ಅವನು ಎಲ್ಲರಿಗೆ ತುಂಬಾ ಪ್ರಿಯನಾಗಿದ್ದನು. ಅದಕ್ಕಾಗಿ ಕಿಷ್ಕಿಂಧೆಯ ರಾಜ್ಯದಲ್ಲಿ ಪ್ರತಿಷ್ಠಾಪಿತನಾಗಿದ್ದನು.॥2॥

ಮೂಲಮ್ - 3

ರಾಜ್ಯಂ ಪ್ರಶಾಸತಸ್ತಸ್ಯ ಪಿತೃಪೈತಾಮಹಂ ಮಹತ್ ।
ಅಹಂ ಸರ್ವೇಷು ಕಾಲೇಷು ಪ್ರಣತಃ ಪ್ರೇಷ್ಯವತ್ಸ್ಥಿತಃ ॥

ಅನುವಾದ

ಅವನು ತಂದೆ-ತಾತಂದಿರ ವಿಶಾಲ ರಾಜ್ಯವನ್ನು ಆಳತೊಡಗಿದನು ಮತ್ತು ನಾನು ಎಲ್ಲ ಸಮಯದಲ್ಲಿ ವಿನೀತ ಭಾವದಿಂದ ದಾಸನಂತೆ ಅವನ ಸೇವೆಯಲ್ಲಿ ಇರತೊಡಗಿದೆ.॥3॥

ಮೂಲಮ್ - 4

ಮಾಯಾವೀ ನಾಮ ತೇಜಸ್ವೀ ಪೂರ್ವಜೋ ದುಂದುಭೇಃ ಸುತಃ ।
ತೇನ ತಸ್ಯ ಮಹದ್ವೈರಂ ವಾಲಿನಃ ಸ್ತ್ರೀಕೃತಂ ಪುರಾ ॥

ಅನುವಾದ

ಆ ದಿನಗಳಲ್ಲಿ ಮಾಯಾವೀ ಎಂಬ ಒಬ್ಬ ತೇಜಸ್ವೀ ದಾನವನಿದ್ದನು. ಅವನು ಮಯನೆಂಬ ದಾನವನ ಪುತ್ರನೂ, ದುಂದುಭಿಯ ಅಣ್ಣನೂ ಆಗಿದ್ದನು. ಅವನೊಂದಿಗೆ ವಾಲಿಗೆ ಸ್ತ್ರೀಯ ಕಾರಣದಿಂದ ಭಾರಿ ವೈರ ಉಂಟಾಗಿತ್ತು.॥4॥

ಮೂಲಮ್ - 5

ಸ ತು ಸುಪ್ತೇಜನೇ ರಾತ್ರೌ ಕಿಷ್ಕಿಂಧಾದ್ವಾರಮಾಗತಃ ।
ನರ್ದತಿ ಸ್ಮ ಸುಸಂರಬ್ಧೋ ವಾಲಿನಂ ಚಾಹ್ವಯದ್ರಣೇ ॥

ಅನುವಾದ

ಒಂದು ದಿನ ಅರ್ಧರಾತ್ರೆಯಲ್ಲಿ ಎಲ್ಲರೂ ಮಲಗಿದ್ದಾಗ ಮಾಯಾವಿಯು ಕಿಷ್ಕಿಂಧೆಯ ಬಾಗಿಲಿಗೆ ಬಂದು, ಕ್ರೋಧಗೊಂಡು ಗರ್ಜಿಸಿ, ವಾಲಿಯನ್ನು ಯುದ್ಧಕ್ಕಾಗಿ ಆಹ್ವಾನಿಸಿದನು.॥5॥

ಮೂಲಮ್ - 6

ಪ್ರಸುಪ್ತಸ್ತು ಮಮ ಭ್ರಾತಾ ನರ್ದಿತೋ ಭೈರವಸ್ವನಮ್ ।
ಶ್ರುತ್ವಾ ನ ಮಮೃಷೇವಾಲೀ ನಿಷ್ಪಪಾತ ಜವಾತ್ತದಾ ॥

ಅನುವಾದ

ಆಗ ನನ್ನ ಅಣ್ಣ ಮಲಗಿದ್ದನು. ದಾನವನ ಭೈರವನಾದ ಕೇಳಿ ನಿದ್ದೆಯಿಂದ ಎಚ್ಚರಗೊಂಡನು. ಆ ರಾಕ್ಷಸನ ಆಹ್ವಾನ ಅವನಿಂದ ಸಹಿಸಲಾಗಲಿಲ್ಲ; ಆದ್ದರಿಂದ ಅವನು ತತ್ಕ್ಷಣ ವೇಗವಾಗಿ ಅರಮನೆಯಿಂದ ಹೊರಟನು.॥6॥

ಮೂಲಮ್ - 7

ಸ ತು ವೈ ನಿಃಸೃತಃ ಕ್ರೋಧಾತ್ತಂ ಹಂತುಮಸುರೋತ್ತಮಮ್ ।
ವಾರ್ಯಮಾಣಸ್ತತಃ ಸ್ತ್ರೀಭಿರ್ಮಯಾ ಚ ಪ್ರಣತಾತ್ಮನಾ ॥

ಅನುವಾದ

ಅವನು ಕ್ರೋಧಗೊಂಡು ಆ ಶ್ರೇಷ್ಠ ಅಸುರನನ್ನು ಕೊಲ್ಲಲು ಹೊರಟಾಗ ನಾನು ಹಾಗೂ ಅಂತಃಪುರದ ಸ್ತ್ರೀಯರು ಕಾಲುಹಿಡಿದು ಹೋಗದಿರಲು ತಡೆದೆವು.॥7॥

ಮೂಲಮ್ - 8

ಸ ತು ನಿರ್ಧೂಯ ಸರ್ವಾನ್ನೋ ನಿರ್ಜಗಾಮ ಮಹಾಬಲಃ ।
ತತೋಽಹಮಪಿ ಸೌಹಾರ್ದಾನ್ನಿಃಸೃತೋ ವಾಲಿನಾ ಸಹ ॥

ಅನುವಾದ

ಆದರೆ ಮಹಾಬಲಿ ವಾಲಿಯು ನಮ್ಮೆಲ್ಲರನ್ನು ತಳ್ಳಿ ಹೊರಟುಬಿಟ್ಟನು, ಆಗ ನಾನೂ ಸ್ನೇಹವಶ ವಾಲಿಯೊಂದಿಗೇ ಹೊರಗೆ ಹೊರಟೆ.॥8॥

ಮೂಲಮ್ - 9

ಸ ತು ಮೇ ಭ್ರಾತರಂ ದೃಷ್ಟ್ವಾ ಮಾಂ ಚ ದೂರಾದವಸ್ಥಿತಮ್ ।
ಅಸುರೋ ಜಾತಸಂತ್ರಾಸಃ ಪ್ರದುದ್ರಾವ ತತೋ ಭೃಶಮ್ ॥

ಅನುವಾದ

ಆ ಅಸುರನು ನನ್ನ ಅಣ್ಣನನ್ನು ನೋಡಿದನು ಮತ್ತು ಸ್ವಲ್ಪ ದೂರದಲ್ಲಿದ್ದ ನನ್ನ ಮೇಲೆಯೂ ಅವನ ದೃಷ್ಟಿಬಿತ್ತು. ಮತ್ತೆ ಅವನು ಭಯದಿಂದ ನಡುಗಿ ಜೋರಾಗಿ ಓಡಿದನು.॥9॥

ಮೂಲಮ್ - 10

ತಸ್ಮಿನ್ ದ್ರವತಿ ಸಂತ್ರಸ್ತೇ ಹ್ಯಾವಾಂ ದ್ರುತತರಂ ಗತೌ ।
ಪ್ರಕಾಶೋಽಪಿ ಕೃತೋ ಮಾರ್ಗಶ್ಚಂದ್ರೇಣೋದ್ಗಚ್ಛತಾ ತದಾ ॥

ಅನುವಾದ

ಅವನು ಭಯಗೊಂಡು ಓಡಿದಾಗ ನಾವಿಬ್ಬರೂ ವೇಗವಾಗಿ ಅವನನ್ನು ಹಿಂಬಾಲಿಸಿದೆವು. ಆಗ ಉದಯಿಸಿದ ಚಂದ್ರನೂ ನಮ್ಮ ಮಾರ್ಗವನ್ನು ಪ್ರಕಾಶಿಸುತ್ತಿದ್ದನು.॥10॥

ಮೂಲಮ್ - 11

ಸ ತೃಣೈರಾವೃತಂ ದುರ್ಗಂ ಧರಣ್ಯಾ ವಿವರಂ ಮಹತ್ ।
ಪ್ರವಿವೇಶಾಸುರೋ ವೇಗಾದಾವಾಮಾಸಾದ್ಯವಿಷ್ಠಿತೌ ॥

ಅನುವಾದ

ಮುಂದೆ ಹೋದಾಗ ಅಲ್ಲಿ ಒಂದು ದೊಡ್ಡ ಗುಹೆ ಇತ್ತು. ಅದು ಗಿಡ-ಹುಲ್ಲಿನಿಂದ ಮುಚ್ಚಿಹೋಗಿತ್ತು. ಪ್ರವೇಶಿಸಲು ಅತ್ಯಂತ ಕಠಿಣವಾದ ಆ ಗುಹೆಯನ್ನು ಅಸುರನು ಹೊಕ್ಕನು. ಅಲ್ಲಿಗೆ ತಲುಪಿ ನಾವಿಬ್ಬರೂ ನಿಂತುಬಿಟ್ಟೆವು.॥11॥

ಮೂಲಮ್ - 12

ತಂ ಪ್ರವಿಷ್ಟಂ ರಿಪುಂ ದೃಷ್ಟ್ವಾ ಬಿಲಂ ರೋಷವಶಂ ಗತಃ ।
ಮಾಮುವಾಚ ತದಾ ವಾಲೀ ವಚನಂ ಕ್ಷುಭಿತೇಂದ್ರಿಯಃ ॥

ಅನುವಾದ

ಶತ್ರುವು ಬಿಲದೊಳಗೆ ನುಗ್ಗಿರುವುದನ್ನು ನೋಡಿ ವಾಲಿಗೆ ಅಸೀಮ ಕ್ರೋಧ ಉಂಟಾಯಿತು. ಅವನ ಎಲ್ಲ ಇಂದ್ರಿಯಗಳು ಕ್ಷುಬ್ಧವಾಗಿ ನನ್ನಲ್ಲಿ ಹೀಗೆ ಹೇಳಿದನು.॥12॥

ಮೂಲಮ್ - 13

ಇಹ ತಿಷ್ಠಾದ್ಯ ಸುಗ್ರೀವ ಬಿಲದ್ವಾರಿ ಸಮಾಹಿತಃ ।
ಯಾವದತ್ರ ಪ್ರವಿಶ್ಯಾಹಂ ನಿಹನ್ಮಿ ಸಮರೇ ರಿಪುಮ್ ॥

ಅನುವಾದ

ಸುಗ್ರೀವ! ನಾನು ಈ ಬಿಲದೊಳಗೆ ಪ್ರವೇಶಿಸಿ ಯುದ್ಧದಲ್ಲಿ ಶತ್ರುವನ್ನು ಕೊಲ್ಲುವವರೆಗೆ ನೀನು ಇಲ್ಲೇ ಬಾಗಿಲಲ್ಲಿ ಎಚ್ಚರವಾಗಿ ನಿಂತಿರು.॥13॥

ಮೂಲಮ್ - 14

ಮಯಾ ತ್ವೇತದ್ವಚಃ ಶ್ರುತ್ವಾ ಯಾಚಿತಃ ಸ ಪರಂತಪಃ ।
ಶಾಪಯಿತ್ವಾ ಚ ಮಾಂ ಪದ್ಭ್ಯಾಂ ಪ್ರವಿವೇಶ ಬಿಲಂ ತತಃ ॥

ಅನುವಾದ

ಈ ಮಾತನ್ನು ಕೇಳಿ ನಾನು ಪರಂತಪ ವಾಲಿಯಲ್ಲಿ ನಾನು ಜೊತೆಗೆ ಬರುವುದಾಗಿ ಪ್ರಾರ್ಥಿಸಿದೆ, ಆದರೆ ಅವನು ತನ್ನ ಚರಣಗಳ ಆಣೆಯಿಟ್ಟು ಒಬ್ಬಂಟಿಗನಾಗಿ ಬಿಲದಲ್ಲಿ ನುಗ್ಗಿದನು.॥14॥

ಮೂಲಮ್ - 15

ತಸ್ಯ ಪ್ರವಿಷ್ಟಸ್ಯ ಬಿಲಂ ಸಾಗ್ರಃ ಸಂವತ್ಸರೋ ಗತಃ ।
ಸ್ಥಿತಸ್ಯ ಚ ಬಿಲ ದ್ವಾರಿ ಸ ಕಾಲೋ ವ್ಯತ್ಯವರ್ತತ ॥

ಅನುವಾದ

ಬಿಲದೊಳಗೆ ಹೋದ ಅವನಿಗೆ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದುಹೋಯಿತು. ಬಿಲದ ಬಾಗಿಲಲ್ಲಿ ನಿಂತ ನನಗೂ ಅಷ್ಟೇ ಸಮಯ ಕಳೆಯಿತು.॥15॥

ಮೂಲಮ್ - 16

ಅಹಂ ತು ನಷ್ಟಂ ತಂ ಜ್ಞಾತ್ವಾ ಸ್ನೇಹಾದಾಗತ ಸಂಭ್ರಮಃ ।
ಭ್ರಾತರಂ ನ ಪ್ರಪಶ್ಯಾಮಿ ಪಾಪಾಶಂಕೀ ಚ ಮೇ ಮನಃ ॥

ಅನುವಾದ

ಇಷ್ಟು ದಿನಗಳವರೆಗೆ ನನಗೆಅಣ್ಣನು ಕಾಣಿಸದಿದ್ದಾಗ ನನ್ನ ಅಣ್ಣನು ಗುಹೆಯಲ್ಲೇ ಎಲ್ಲೋ ಕಳೆದುಹೋದ ಎಂದು ತಿಳಿದು, ಆಗ ಭ್ರಾತೃಸ್ನೇಹದಿಂದಾಗಿ ನನ್ನ ಹೃದಯ ವ್ಯಾಕುಲಗೊಂಡಿತು. ನನ್ನ ಮನಸ್ಸಿನಲ್ಲೇ ಅವನು ಸತ್ತುಹೋಗಿರಬಹುದೆಂಬ ಆಶಂಕೆ ಉಂಟಾಗತೊಡಗಿತು.॥16॥

ಮೂಲಮ್ - 17

ಅಥ ದೀರ್ಘಸ್ಯ ಕಾಲಸ್ಯ ಬಿಲಾತ್ತಸ್ಮಾದ್ವಿನಿಃಸೃತಮ್ ।
ಸಫೇನಂ ರುಧಿರಂ ದೃಷ್ಟ್ವಾ ತತೋಽಹಂ ಭೃಶದುಃಖಿತಃ ॥

ಅನುವಾದ

ಅನಂತರ ಬಹಳ ಸಮಯದ ಬಳಿಕ ಆ ಬಿಲದಿಂದ ನೊರೆಸಹಿತ ರಕ್ತದ ಪ್ರವಾಹವೇ ಹೊರಟಿತು. ಅದನ್ನು ನೋಡಿ ನಾನು ಬಹಳ ದುಃಖಿತನಾದೆನು.॥17॥

ಮೂಲಮ್ - 18

ನರ್ದತಾಮಸುರಾಣಾಂ ಚ ಧ್ವನಿರ್ಮೇ ಶ್ರೋತ್ರಮಾಗತಃ ।
ನ ರತಸ್ಯ ಚ ಸಂಗ್ರಾಮೇ ಕ್ರೋಶತೋಽಪಿ ಸ್ವನೋ ಗುರೋಃ ॥

ಅನುವಾದ

ಇಷ್ಟರಲ್ಲಿ, ಗರ್ಜಿಸುವ ಅಸುರರ ಶಬ್ದವೂ ನನ್ನ ಕಿವಿಗೆ ಬಿತ್ತು. ಯುದ್ಧದಲ್ಲಿ ತೊಡಗಿದ ನನ್ನ ಅಣ್ಣನೂ ಗರ್ಜಿಸುತ್ತಿದ್ದನು, ಆದರೆ ಅವನ ದನಿ ನಾನು ಕೇಳಲಿಲ್ಲ.॥18॥

ಮೂಲಮ್ - 19

ಅಹಂ ತ್ವವಗತೋ ಬುದ್ಧ್ಯಾ ಚಿಹ್ನೈಸ್ತೈರ್ಭ್ರಾತರಂ ಹತಮ್ ।
ಪಿಧಾಯ ಚ ಬಿಲದ್ವಾರಂ ಶಿಲಯಾ ಗಿರಿಮಾತ್ರಯಾ ॥

ಮೂಲಮ್ - 20

ಶೋಕಾರ್ತಶ್ಚೋದಕಂ ಕೃತ್ವಾ ಕಿಷ್ಕಿಂಧಾಮಾಗತಃ ಸಖೇ ।
ಗೂಹಮಾನಸ್ಯ ಮೇ ತತ್ತ್ವಂ ಯತ್ನತೋ ಮಂತ್ರಿಭಿಃ ಶ್ರುತಮ್ ॥

ಅನುವಾದ

ಇದೆಲ್ಲ ಚಿಹ್ನೆಗಳನ್ನು ನೋಡಿ ಬುದ್ದಿಯಿಂದ ವಿಚಾರಮಾಡಿ, ನನ್ನ ಅಣ್ಣನು ಸತ್ತು ಹೋದನು ಎಂಬ ನಿಶ್ಚಯಕ್ಕೆ ಬಂದೆ. ಮತ್ತೆ ಆ ಗುಹೆಯ ಬಾಗಿಲಲ್ಲಿ ನಾನು ಪರ್ವತದಂತಹ ಒಂದು ಬಂಡೆಯನ್ನು ಇರಿಸಿ ಅದನ್ನು ಮುಚ್ಚಿ ಅಣ್ಣನಿಗೆ ಜಲಾಂಜಲಿಯನ್ನಿತ್ತು, ಶೋಕದಿಂದ ವ್ಯಾಕುಲನಾದ ನಾನು ಕಿಷ್ಕೆಂಧೆಗೆ ಮರಳಿ ಬಂದೆ. ಸಖನೇ! ನಾನು ಈ ಯಥಾರ್ಥವಾದ ಮಾತನ್ನು ಮರೆಮಾಡಿದ್ದರೂ ಮಂತ್ರಿಗಳು ಅದನ್ನು ಕೇಳಿಕೊಂಡರು.॥19-20॥

ಮೂಲಮ್ - 21

ತತೋಽಹಂ ತೈಃ ಸಮಾಗಮ್ಯ ಸಮೇತೈರಭಿಷೇಚಿತಃ ।
ರಾಜ್ಯಂ ಪ್ರಶಾಸತಸ್ತಸ್ಯ ನ್ಯಾಯತೋ ಮಮ ರಾಘವ ॥

ಮೂಲಮ್ - 22

ಆಜಗಾಮ ರಿಪುಂ ಹತ್ವಾ ದಾನವಂ ಸ ತು ವಾನರಃ ।
ಅಭಿಷಿಕ್ತಂ ತು ಮಾಂ ದೃಷ್ಟ್ವಾ ಕ್ರೋಧಾತ್ಸಂರಕ್ತಲೋಚನಃ ॥

ಅನುವಾದ

ಆಗ ಅವರೆಲ್ಲರೂ ಸೇರಿ ನನಗೆ ರಾಜ್ಯದ ಪಟ್ಟ ಕಟ್ಟಿದರು. ರಘುನಂದನ! ನಾನು ನ್ಯಾಯೋಚಿತ ರಾಜ್ಯವನ್ನು ಆಳತೊಡಗಿದೆ. ಇದೇ ಸಮಯದಲ್ಲಿ ತನ್ನ ಶತ್ರುವಾದ ದಾನವನನ್ನು ಕೊಂದು ವಾನರರಾಜ ವಾಲಿಯು ಮರಳಿದನು. ರಾಜನಾಗಿ ಪಟ್ಟಾಭಿಷಿಕ್ತನಾದ ನನ್ನನ್ನು ನೋಡಿ ಅವನ ಕಣ್ಣುಗಳು ಕೆಂಪಾದವು.॥21-22॥

ಮೂಲಮ್ - 23½

ಮದೀಯಾನ್ಮಂತ್ರಿಣೋ ಬದ್ಧ್ವಾ ಪರುಷಂ ವಾಕ್ಯಮಬ್ರವೀತ್ ।
ನಿಗ್ರಹೇಚ ಸಮರ್ಥಸ್ಯ ತಂ ಪಾಪಂ ಪ್ರತಿ ರಾಘವ ॥
ನ ಪ್ರಾವರ್ತತ ಮೇ ಬುದ್ಧಿರ್ಭ್ರಾತೃಗೌರವಯಂತ್ರಿತಾ ।

ಅನುವಾದ

ನನ್ನ ಮಂತ್ರಿಗಳು ಅವನನ್ನು ಬಂಧಿಸಿದರು ಹಾಗೂ ಅವನಿಗೆ ಕಠೋರ ಮಾತುಗಳನ್ನಾಡಿದರು. ರಘುವೀರ! ನಾನು ಸ್ವತಃ ಆ ಪಾಪಿಯನ್ನು ಬಂಧಿಸಲು ಸಮರ್ಥನಾಗಿದ್ದರೂ ಅಣ್ಣನ ಕುರಿತು ಗುರುಭಾವವಿದ್ದುದರಿಂದ ನನ್ನ ಬುದ್ಧಿಯಲ್ಲಿ ಅಂತಹ ವಿಚಾರ ಬಂದಿಲ್ಲ.॥23½॥

ಮೂಲಮ್ - 24

ಹತ್ವಾ ಶತ್ರುಂ ಸ ಮೇ ಭ್ರಾತಾ ಪ್ರವಿವೇಶ ಪುರಂ ತದಾ ॥

ಮೂಲಮ್ - 25

ಮಾನಯಂಸ್ತಂ ಮಹಾತ್ಮಾನಂ ಯಥಾವಚ್ಚಾಭಿವಾದಯಮ್ ।
ಉಕ್ತಾಶ್ಚ ನಾಶಿಷಸ್ತೇನ ಪ್ರಹೃಷ್ಟೇನಾಂತರಾತ್ಮನಾ ॥

ಅನುವಾದ

ಹೀಗೆ ಶತ್ರುವನ್ನು ವಧಿಸಿ ನನ್ನ ಅಣ್ಣನು ಆಗ ನಗರವನ್ನು ಪ್ರವೇಶಿಸಿದನು. ಆ ಮಹಾತ್ಮನನ್ನು ಸಮ್ಮಾನಿಸುತ್ತಾ ನಾನು ಯಥೋಚಿತವಾಗಿ ಅವನ ಚರಣಗಳಲ್ಲಿ ತಲೆ ಬಾಗಿದರೂ ಅವನು ಸಂತೋಷವಾಗಿ ನನ್ನನ್ನು ಆಶೀರ್ವದಿಸಲಿಲ್ಲ.॥24-25॥

ಮೂಲಮ್ - 26

ನತ್ವಾ ಪಾದಾವಹಂ ತಸ್ಯ ಮುಕುಟೇನಾಸ್ಪೃಶಂ ವಿಭೋ ॥
ಅಪಿ ವಾಲೀ ಮಮ ಕ್ರೋಧಾನ್ನ ಪ್ರಸಾದಂ ಚಕಾರ ಸಃ ॥

ಅನುವಾದ

ಪ್ರಭೋ! ನಾನು ಅಣ್ಣನ ಎದುರು ಬಾಗಿ ಮುಕುಟಸಹಿತ ಅವನ ಚರಣಗಳನ್ನು ಸ್ಪರ್ಶಿಸಿದರೂ ಕ್ರೋಧದಿಂದ ವಾಲಿಯು ನನ್ನ ಮೇಲೆ ಸಂತೋಷಗೊಳ್ಳಲಿಲ್ಲ.॥26॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಒಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥9॥