००८ रामेण वालिवधनिश्चयः

वाचनम्
ಭಾಗಸೂಚನಾ

ಸುಗ್ರೀವನು ಶ್ರೀರಾಮನಲ್ಲಿ ತನ್ನ ದುಃಖವನ್ನು ನಿವೇದಿಸಿಕೊಂಡುದು, ಶ್ರೀರಾಮನು ಅವನಿಗೆ ಆಶ್ವಾಸನೆಯಿನ್ನಿತ್ತು ನಿನಗೆ ಅಣ್ಣನೊಡನೆ ವೈರ ಹೇಗೆ ಉಂಟಾಯಿತು ಎಂದು ಕೇಳಿದುದು

ಮೂಲಮ್ - 1

ಪರಿತುಷ್ಟಸ್ತು ಸುಗ್ರೀವಸ್ತೇನ ವಾಕ್ಯೇನ ಹರ್ಷಿತಃ ।
ಲಕ್ಷ್ಮಣಸ್ಯಾಗ್ರಜಂ ಶೂರಮಿದಂ ವಚನಮಬ್ರವೀತ್ ॥

ಅನುವಾದ

ಶ್ರೀರಾಮಚಂದ್ರನ ಆ ಮಾತಿನಿಂದ ಸುಗ್ರೀವನಿಗೆ ಬಹಳ ಸಂತೋಷವಾಯಿತು. ಅವನು ಹರ್ಷಗೊಂಡು ಲಕ್ಷ್ಮಣಾಗ್ರಜ ಶೂರ-ವೀರ ಶ್ರೀರಾಮನಲ್ಲಿ ಹೀಗೆ ಹೇಳಿದನು.॥1॥

ಮೂಲಮ್ - 2

ಸರ್ವಥಾಹಮನುಗ್ರಾಹ್ಯೋ ದೇವತಾನಾಂ ನ ಸಂಶಯಃ ।
ಉಪಪನ್ನೋಗುಣೋಪೇತಃ ಸಖಾ ಯಸ್ಯಭವಾನ್ಮಮ ॥

ಅನುವಾದ

ಭಗವಂತಾ! ದೇವತೆಗಳ ಕೃಪೆ ನನ್ನ ಮೇಲೆ ಇರುವುದರಲ್ಲಿ ಸಂದೇಹವೇ ಇಲ್ಲ, ನಾನು ಸರ್ವಥಾ ಅವರ ಅನುಗ್ರಹಕ್ಕೆ ಪಾತ್ರನಾಗಿದ್ದೇನೆ; ಏಕೆಂದರೆ ನಿನ್ನಂತಹ ಗುಣವಂತ ಮಹಾಪುರುಷ ನನಗೆ ಸ್ನೇಹಿತನಾದನು.॥2॥

ಮೂಲಮ್ - 3

ಶಕ್ಯಂ ಖಲು ಭವೇದ್ ರಾಮ ಸಹಾಯೇನ ತ್ವಯಾನಘ ।
ಸುರರಾಜ್ಯಮಪಿ ಪ್ರಾಪ್ತುಂ ಸ್ವರಾಜ್ಯಂ ಕಿಮುತ ಪ್ರಭೋ ॥

ಅನುವಾದ

ಪ್ರಭೋ! ನಿಷ್ಪಾಪ ಶ್ರೀರಾಮಾ! ನಿನ್ನಂತಹ ಸಹಾಯಕನ ಸಹಯೋಗದಿಂದ ದೇವತೆಗಳ ರಾಜ್ಯವನ್ನು ಪಡೆದುಕೊಳ್ಳಲಾಗುವುದು. ಹಾಗಿರುವಾಗ ನನ್ನ ಕಳೆದುಹೋದ ರಾಜ್ಯವನ್ನು ಪಡೆಯುವುದರಲ್ಲಿ ಏನು ದೊಡ್ಡದಿದೆ.॥3॥

ಮೂಲಮ್ - 4

ಸೋಽಹಂ ಸಭಾಜ್ಯೋ ಬಂಧೂನಾಂ ಸುಹೃದಾಂ ಚೈವ ರಾಘವ ।
ಯಸ್ಯಾಗ್ನಿಸಾಕ್ಷಿಕಂ ಮಿತ್ರಂ ಲಬ್ಧಂ ರಾಘವ ವಂಶಜಮ್ ॥

ಅನುವಾದ

ರಘುನಂದನ! ಈಗ ನಾನು ನನ್ನ ಬಂಧುಗಳಿಗೆ ಸುಹೃದರಿಗೆ ವಿಶೇಷ ಸಮ್ಮಾನಕ್ಕೆ ಪಾತ್ರನಾದೆನು, ಏಕೆಂದರೆ ಇಂದು ರಘುವಂಶದ ರಾಜಕುಮಾರನಾದ ನೀನು ಅಗ್ನಿಸಾಕ್ಷಿಯಾಗಿ ನನಗೆ ಮಿತ್ರನಾಗಿ ದೊರಕಿರುವೆ.॥4॥

ಮೂಲಮ್ - 5

ಅಹಮಪ್ಯನುರೂಪಸ್ತೇ ವಯಸ್ಯೋ ಜ್ಞಾಸ್ಯಸೇ ಶನೈಃ ।
ನ ತು ವಕ್ತುಂ ಸಮರ್ಥೋಽಹಂ ತ್ವಯಿ ಆತ್ಮಗತಾನ್ ಗುಣಾನ್ ॥

ಅನುವಾದ

ನಾನೂ ನಿನಗೆ ಯೋಗ್ಯಮಿತ್ರನಾಗಿದ್ದೇನೆ. ಇದರ ಅರಿವು ನಿನಗೆ ನಿಧಾನವಾಗಿ ಆಗುವುದು. ಈಗ ನಿನ್ನ ಮುಂದೆ ನಾನು ನನ್ನ ಗುಣಗಳನ್ನು ವರ್ಣಿಸಲು ಅಸಮರ್ಥನಾಗಿದ್ದೇನೆ.॥5॥

ಮೂಲಮ್ - 6

ಮಹಾತ್ಮನಾಂ ತು ಭೂಯಿಷ್ಠಂ ತ್ವದ್ವಿಧಾನಾಂ ಕೃತಾತ್ಮನಾಮ್ ।
ನಿಶ್ಚಲಾ ಭವತಿ ಪ್ರೀತಿಧೈರ್ಯಮಾತ್ಮವತಾಂ ವರ ॥

ಅನುವಾದ

ಆತ್ಮಜ್ಞಾನಿಗಳಲ್ಲಿ ಶ್ರೇಷ್ಠನಾದ ಶ್ರೀರಾಮಾ! ನಿನ್ನಂತಹ ಪುಣ್ಯಾತ್ಮಾ ಮಹಾತ್ಮರ ಪ್ರೇಮ ಮತ್ತು ಧೈರ್ಯ ಹೆಚ್ಚು ಬೆಳೆಯುತ್ತಾ ಇದ್ದು, ಅವಿಚಲವಾಗಿರುತ್ತದೆ.॥6॥

ಮೂಲಮ್ - 7

ರಜತಂ ವಾ ಸುವರ್ಣಂ ವಾ ವಸ್ತ್ರಾಭರಣಾನಿ ಚ ।
ಅವಿಭಕ್ತಾನಿ ಸಾಧೂನಾಮವಗಚ್ಛಂತಿ ಸಾಧವಃ ॥

ಅನುವಾದ

ಒಳ್ಳೆಯ ಸ್ವಭಾವವುಳ್ಳ ಮಿತ್ರನು ತನ್ನ ಮನೆಯ ಚಿನ್ನ-ಬೆಳ್ಳಿ ಅಥವಾ ಉತ್ತಮ ಆಭೂಷಣಗಳನ್ನು ತನ್ನ ಒಳ್ಳೆಯ ಮಿತ್ರರಿಗಾಗಿ ಬೇರೆಯಾಗಿ ತಿಳಿಯುವುದಿಲ್ಲ. ಆ ಮಿತ್ರರ ಮನೆಯ ಮೇಲೆ ತನ್ನದೆಂದೇ ಅಧಿಕಾರ ತಿಳಿಯುತ್ತಾನೆ.॥7॥

ಮೂಲಮ್ - 8

ಆಢ್ಯೋವಾಪಿ ದರಿದ್ರೋ ವಾ ದುಃಖಿತಃ ಸುಖಿತೋಪಿವಾ ।
ನಿರ್ದೋಷಶ್ಚ ಸದೋಷಶ್ಚ ವಯಸ್ಯಃ ಪರಮಾ ಗತಿಃ ॥

ಅನುವಾದ

ಆದ್ದರಿಂದ ಮಿತ್ರನು ಶ್ರೀಮಂತ ಅಥವಾ ದರಿದ್ರ, ಸುಖೀ ಇಲ್ಲವೇ ದುಃಖಿ, ನಿರ್ದೋಷಿ ಅಥವಾ ಸದೋಷಿಯಾಗಿರಲಿ ಅವನು ಮಿತ್ರನಿಗಾಗಿ ಎಲ್ಲರಿಗಿಂತ ಹೆಚ್ಚು ಸಹಾಯಕನಾಗಿರುತ್ತಾನೆ.॥8॥

ಮೂಲಮ್ - 9

ಧನತ್ಯಾಗಃ ಸುಖತ್ಯಾಗೋ ದೇಹತ್ಯಾಗೋಽಪಿ ವಾನಘ ।
ವಯಸ್ಯಾರ್ಥೇ ಪ್ರವರ್ತಂತೇ ಸ್ನೇಹಂ ದೃಷ್ಟ್ವಾ ತಥಾವಿಧಮ್ ॥

ಅನುವಾದ

ಪುಣ್ಯಾತ್ಮ! ಸಾಧುಗಳು ತನ್ನ ಮಿತ್ರನ ಅತ್ಯಂತ ಉತ್ಕೃಷ್ಟ ಪ್ರೇಮವನ್ನು ನೋಡಿ ಆವಶ್ಯಕತೆ ಬಿದ್ದಾಗ ಅವನಿಗಾಗಿ ಧನ, ಸುಖ ಮತ್ತು ದೇಶವನ್ನು ತ್ಯಾಗಮಾಡಿಬಿಡುತ್ತಾರೆ.॥9॥

ಮೂಲಮ್ - 10

ತತ್ತಥೇತ್ಯಬ್ರವೀದ್ ರಾಮಃ ಸುಗ್ರೀವಂ ಪ್ರಿಯವಾದಿನಮ್ ।
ಲಕ್ಷ್ಮಣಸ್ಯಾಗ್ರತೋಲಕ್ಷ್ಮ್ಯಾ ವಾಸವಸ್ಯೇವ ಧೀಮತಃ ॥

ಅನುವಾದ

ಇದನ್ನು ಕೇಳಿ ದಿವ್ಯ ಕಾಂತಿಯುಳ್ಳ ಶ್ರೀರಾಮಚಂದ್ರನು ಇಂದ್ರನಂತಹ ತೇಜಸ್ವೀ ಬುದ್ದಿವಂತ ಲಕ್ಷ್ಮಣನ ಮುಂದೆಯೇ ಪ್ರಿಯವಾಗಿ ಮಾತನಾಡುವ ಸುಗ್ರೀವನಲ್ಲಿ ಹೇಳಿದನು - ಪ್ರಿಯ ಸಖನೇ! ನಿನ್ನ ಮಾತು ಖಂಡಿತವಾಗಿ ಸತ್ಯವಾಗಿದೆ.॥10॥

ಮೂಲಮ್ - 11

ತತೋ ರಾಮಂ ಸ್ಥಿತಂ ದೃಷ್ಟ್ವಾ ಲಕ್ಷ್ಮಣಂ ಚ ಮಹಾಬಲಮ್ ।
ಸುಗ್ರೀವಃ ಸರ್ವತಶ್ಚಕ್ಷುರ್ವನೇ ಲೋಲಮಪಾತಯತ್ ॥

ಅನುವಾದ

ಅನಂತರ ಮರುದಿನ ಮಹಾಬಲಿ ಶ್ರೀರಾಮ-ಲಕ್ಷ್ಮಣರನ್ನು ನೋಡಿ ಸುಗ್ರೀವನು ಕಾಡಿನಕಡೆಗೆ ಸುತ್ತಲೂ ತನ್ನ ದೃಷ್ಟಿ ಬೀರಿದನು.॥11॥

ಮೂಲಮ್ - 12

ಸ ದದರ್ಶ ತತಃ ಸಾಲಮವಿದೂರೇ ಹರೀಶ್ವರಃ ।
ಸುಪುಷ್ಪಮೀಷತ್ಪತ್ರಾಢ್ಯಂ ಭ್ರಮರೈರುಪಶೋಭಿತಮ್ ॥

ಅನುವಾದ

ಆಗ ವಾನರರಾಜನು ಬಳಿಯಲ್ಲೇ ಒಂದು ಸಾಲವೃಕ್ಷವನ್ನು ನೋಡಿದನು. ಅದರಲ್ಲಿ ಹೂವುಗಳು ಸ್ವಲ್ಪವೇ ಇದ್ದರೂ ಅದರಲ್ಲಿ ಎಲೆಗಳು ಸಾಕಷ್ಟಿದ್ದವು ಭೃಂಗಗಳು ಆ ವೃಕ್ಷದ ಶೋಭೆಯನ್ನು ಹೆಚ್ಚಿಸಿದ್ದವು.॥12॥

ಮೂಲಮ್ - 13

ತಸ್ಯೈಕಾಂ ಪರ್ಣಬಹುಲಾಂ ಶಾಖಾಂ ಭಂಕ್ಷ್ವಾಸುಶೋಭಿತಾಮ್ ।
ಸಾಲಸ್ಯಾಸ್ತೀರ್ಯ ಸುಗ್ರೀವೋ ನಿಷಸಾದ ಸರಾಘವಃ ॥

ಅನುವಾದ

ಅದರಲ್ಲಿ ಹೆಚ್ಚು ಎಲೆಗಳುಳ್ಳ, ಪುಷ್ಪಗಳಿಂದ ಸುಶೋಭಿತವಾದ ಒಂದು ರೆಂಬೆಯನ್ನು ಮುರಿದು ಅವನ್ನು ಶ್ರೀರಾಮನಿಗಾಗಿ ಕುಳಿತುಕೊಳ್ಳಲು ಹಾಸಿ, ಸ್ವತಃ ಅವನೊಂದಿಗೆ ಕುಳಿತುಕೊಂಡನು.॥13॥

ಮೂಲಮ್ - 14

ತಾವಾಸೀನೌ ತತೋ ದೃಷ್ಟ್ವಾ ಹನೂಮಾನಪಿ ಲಕ್ಷ್ಮಣಮ್ ।
ಸಾಲಶಾಖಾಂ ಸಮುತ್ಪಾಟ್ಯ ವಿನೀತಮುಪವೇಶಯತ್ ॥

ಅನುವಾದ

ಅವರಿಬ್ಬರೂ ಆಸನದಲ್ಲಿ ವಿರಾಜಿಸುವುದನ್ನು ನೋಡಿ ಹನುಮಂತನೂ ಸಾಲವೃಕ್ಷದ ಒಂದು ಕೊಂಬೆಯನ್ನು ಮುರಿದು ಅದರ ಮೇಲೆ ವಿನಯಶೀಲ ಲಕ್ಷ್ಮಣನನ್ನು ಕುಳ್ಳಿರಿಸಿದನು.॥14॥

ಮೂಲಮ್ - 15

ಸುಖೋಪವಿಷ್ಟಂ ರಾಮಂ ತು ಪ್ರಸನ್ನಮುದಧಿಂ ಯಥಾ ।
ಫಲಪುಷ್ಪಸಮಾಕೀರ್ಣೇ ತಸ್ಮಿನ್ ಗಿರಿವರೋತ್ತಮೇ ॥

ಮೂಲಮ್ - 16

ತತಃ ಪ್ರಹೃಷ್ಟಃ ಸುಗ್ರೀವಃ ಶ್ಲಕ್ಷ್ಣಯಾ ಶುಭಯಾ ಗಿರಾ ।
ಉವಾಚ ಪ್ರಣಯಾದ್ರಾಮಂ ಹರ್ಷವ್ಯಾಕುಲಿತಾಕ್ಷರಮ್ ॥

ಅನುವಾದ

ಎಲ್ಲೆಡೆ ಸಾಲವೃಕ್ಷದ ಹೂವುಗಳು ಚೆಲ್ಲಿದ್ದ ಆ ಪರ್ವತದ ಮೇಲೆ ಸುಖವಾಗಿ ಕುಳಿತಿರುವ ಶ್ರೀರಾಮನು ಶಾಂತ ಸಮುದ್ರದಂತೆ ಕಂಡುಬರುತ್ತಿದ್ದನು. ಅವನನ್ನು ನೋಡಿ ಅತ್ಯಂತ ಹರ್ಷಗೊಂಡ ಸುಗ್ರೀವನು ಶ್ರೀರಾಮನಲ್ಲಿ ಸ್ನಿಗ್ಧ, ಸುಂದರವಾಣಿಯಿಂದ ಮಾತಿಗಾರಂಭಿಸಿದನು. ಆಗ ಆನಂದಾತಿರೇಕದಿಂದ ಅವನ ನುಡಿ ತೊದಲುತ್ತಿತ್ತು - ಅಕ್ಷರಗಳ ಉಚ್ಚಾರ ಸ್ಪಷ್ಟವಾಗಿ ಆಗುತ್ತಿರಲಿಲ್ಲ.॥15-16॥

ಮೂಲಮ್ - 17

ಅಹಂ ವಿನಿಕೃತೋ ಭ್ರಾತ್ರಾ ಚರಾಮ್ಯೇಷ ಭಯಾರ್ದಿತಃ ।
ಋಷ್ಯಮೂಕಂ ಗಿರಿವರಂ ಹೃತಭಾರ್ಯಃ ಸುದುಃಖಿತಃ ॥

ಅನುವಾದ

ಪ್ರಭೋ! ನನ್ನ ಅಣ್ಣನು ನನ್ನನ್ನು ಮನೆಯಿಂದ ಹೊರಹಾಕಿ, ನನ್ನ ಪತ್ನಿಯನ್ನೂ ಕಿತ್ತುಕೊಂಡನು. ನಾನು ಅವನ ಭಯದಿಂದಲೇ ಅತ್ಯಂತ ದುಃಖಿಯಾಗಿ, ಪೀಡಿತನಾಗಿ ಈ ಶ್ರೇಷ್ಠ ಋಷ್ಯಮೂಕ ಪರ್ವತದಲ್ಲಿ ಸಂಚರಿಸುತ್ತಿದ್ದೇನೆ.॥17॥

ಮೂಲಮ್ - 18

ಸೋಽಹಂ ತ್ರಸ್ತೋ ಭಯೇ ಮಗ್ನೋ ವನೇ ಸಂಭ್ರಾಂತಚೇತನಃ ।
ವಾಲಿನಾ ನಿಕೃತೋ ಭ್ರಾತ್ರಾ ಕೃತವೈರಶ್ಚ ರಾಘವ ॥

ಅನುವಾದ

ನನಗೆ ಯಾವಾಗಲೂ ಅವನು ತೊಂದರೆ ಕೊಡುತ್ತಾ ಇರುತ್ತಾನೆ. ನಾನು ಭಯದಲ್ಲಿ ಮುಳುಗಿ ಭ್ರಾಂತಚಿತ್ತನಾಗಿ ಈ ವನದಲ್ಲಿ ಅಲೆಯುತ್ತಾ ಇದ್ದೇನೆ. ರಘುನಂದನ! ನನ್ನಣ್ಣ ವಾಲಿಯು ನನ್ನನ್ನು ಮನೆಯಿಂದ ಹೊರಹಾಕಿದ ಮೇಲೆಯೂ ನನ್ನೊಂದಿಗೆ ವೈರವನ್ನು ಕಟ್ಟಿಕೊಂಡಿದ್ದಾನೆ.॥18॥

ಮೂಲಮ್ - 19

ವಾಲಿನೋ ಮೇ ಭಯಾರ್ತಸ್ಯ ಸರ್ವಲೋಕಾ ಭಯಂಕರ ।
ಮಮಾಪಿ ತ್ವಮನಾಥಸ್ಯ ಪ್ರಸಾದಂ ಕರ್ತುಮರ್ಹಸಿ ॥

ಅನುವಾದ

ಪ್ರಭೋ! ನೀನು ಸಮಸ್ತ ಲೋಕಗಳಿಗೆ ಅಭಯವನ್ನು ಕೊಡುವವನು. ನಾನು ವಾಲಿಯ ಭಯದಿಂದ ದುಃಖಿತ ಮತ್ತು ಅನಾಥನಾಗಿದ್ದೇನೆ. ಆದ್ದರಿಂದ ನೀನು ನನ್ನ ಮೇಲೆಯೂ ಕೃಪೆದೋರಬೇಕು.॥19॥

ಮೂಲಮ್ - 20

ಏವಮುಕ್ತಸ್ತು ತೇಜಸ್ವೀ ಧರ್ಮಜ್ಞೋ ಧರ್ಮವತ್ಸಲಃ ।
ಪ್ರತ್ಯುವಾಚ ಸ ಕಾಕುತ್ಸ್ಥಃ ಸುಗ್ರೀವಂ ಪ್ರಹಸನ್ನಿವ ॥

ಅನುವಾದ

ಸುಗ್ರೀವನು ಹೀಗೆ ಹೇಳಿದಾಗ ತೇಜಸ್ವೀ, ಧರ್ಮಜ್ಞ, ಧರ್ಮವತ್ಸಲ ಭಗವಾನ್ ಶ್ರೀರಾಮನು ನಗುತ್ತಾ ಅವನಲ್ಲಿ ಈ ಪ್ರಕಾರ ನುಡಿದನು.॥20॥

ಮೂಲಮ್ - 21

ಉಪಕಾರಫಲಂ ಮಿತ್ರಮಪಕಾರೋಽರಿಲಕ್ಷಣಮ್ ।
ಅದ್ಯೈವ ತಂ ವಧಿಷ್ಯಾಮಿ ತವ ಭಾರ್ಯಾಪಹಾರಿಣಮ್ ॥

ಅನುವಾದ

ಸಖನೇ! ಉಪಕಾರವೇ ಮಿತ್ರತೆಯ ಫಲವಾಗಿದೆ ಹಾಗೂ ಅಪಕಾರವೇ ಶತ್ರುತ್ವದ ಲಕ್ಷಣವಾಗಿದೆ. ಆದ್ದರಿಂದ ನಾನು ಇಂದೇ ನಿನ್ನ ಪತ್ನಿಯನ್ನು ಅಪಹರಿಸಿದ ಆ ವಾಲಿಯನ್ನು ವಧಿಸುವೆನು.॥21॥

ಮೂಲಮ್ - 22

ಇಮೇ ಹಿ ಮೇ ಮಹಾಭಾಗ ಪತ್ರಿಣಸ್ತಿಗ್ಮತೇಜಸಃ ।
ಕಾರ್ತಿಕೇಯವನೋದ್ಭೂತಾಃ ಶರಾ ಹೇಮವಿಭೂಷಿತಾಃ ॥

ಅನುವಾದ

ಮಹಾಭಾಗ! ನನ್ನ ಈ ಬಾಣಗಳ ತೇಜಸ್ಸು ಪ್ರಚಂಡವಾಗಿದೆ. ಸ್ವರ್ಣಭೂಷಿತ ಈ ಶರಗಳು ಕಾರ್ತಿಕೇಯನ ಉತ್ಪತ್ತಿಯ ಸ್ಥಾನದ ಶರಗಳ ವನದಲ್ಲಿ ಉತ್ಪನ್ನವಾಗಿದೆ. (ಅದರಿಂದ ಅಭೇದ್ಯವಾಗಿವೆ..॥22॥

ಮೂಲಮ್ - 23

ಕಂಕಪತ್ರಪರಿಚ್ಛನ್ನಾ ಮಹೇಂದ್ರಾಶನಿಸಂನಿಭಾಃ ।
ಸುಪರ್ವಾಣಃ ಸುತೀಕ್ಷ್ಣಾಗ್ರಾಃ ಸರೋಷಾಭುಜಗಾ ಇವ ॥

ಅನುವಾದ

ಇವು ಕಂಕಪಕ್ಷಿಯ ಗರಿಗಳಿಂದ ಕೂಡಿದ್ದು, ಇಂದ್ರನ ವಜ್ರದಂತೆ ಅಮೋಘವಾಗಿವೆ. ಇವುಗಳ ಗಂಟುಗಳು ಸುಂದರವಾಗಿದ್ದು, ತುದಿಗಳು ತೀಕ್ಷ್ಣವಾಗಿವೆ. ಇವು ರೋಷಗೊಂಡ ಭುಜಂಗದಂತೆ ಭಯಂಕರವಾಗಿವೆ.॥23॥

ಮೂಲಮ್ - 24

ವಾಲಿಸಂಜ್ಞಮಮಿತ್ರಂ ತೇ ವಾಲಿನಂ ಕೃತಕಿಲ್ಬಿಷಮ್ ।
ಶರೈರ್ವಿನಿಹತಂ ಪಶ್ಯ ವಿಕೀರ್ಣಮಿವ ಪರ್ವತಮ್ ॥

ಅನುವಾದ

ನಿನ್ನ ಅಣ್ಣನಾಗಿಯೂ ನಿನ್ನ ಕೆಟ್ಟದಾಗಿಸುವ ವಾಲಿ ಎಂಬ ನಿನ್ನ ಶತ್ರುವು, ಈ ಬಾಣಗಳಿಂದ ಪುಡಿಯಾದ ಪರ್ವತದಂತೆ ಸತ್ತು ನೆಲಕ್ಕುರುಳುವುದನ್ನು ನೋಡುವೆ.॥24॥

ಮೂಲಮ್ - 25

ರಾಘವಸ್ಯ ವಚಃ ಶ್ರುತ್ವಾಸುಗ್ರೀವೋ ವಾಹಿನೀಪತಿಃ ।
ಪ್ರಹರ್ಷಮತುಲಂ ಲೇಭೇ ಸಾಧು ಸಾಧ್ವಿತಿ ಚಾಬ್ರವೀತ್ ॥

ಅನುವಾದ

ಶ್ರೀರಘುನಾಥನ ಈ ಮಾತನ್ನು ಕೇಳಿ ವಾನರರ ಒಡೆಯ ಸುಗ್ರೀವನಿಗೆ ಅನುಪಮ ಸಂತೋಷವಾಯಿತು. ಅವನು ಪದೇ ಪದೇ ಅವನಿಗೆ ಧನ್ಯವಾದವನ್ನು ಕೊಡುತ್ತಾ ಹೇಳಿದನು.॥25॥

ಮೂಲಮ್ - 26

ರಾಮ ಶೋಕಾಭಿಭೂತೋಽಹಂ ಶೋಕಾರ್ತಾನಾಂ ಭವಾನ್ಗತಿಃ ।
ವಯಸ್ಯ ಇತಿ ಕೃತ್ವಾ ಹಿ ತ್ವಯ್ಯಹಂ ಪರಿದೇವಯೇ ॥

ಅನುವಾದ

ಶ್ರೀರಾಮಾ! ನಾನು ಶೋಕದಿಂದ ಪೀಡಿತನಾಗಿದ್ದೇನೆ ಹಾಗೂ ನೀನು ಶೋಕಾಕುಲ ಪ್ರಾಣಿಗಳಿಗೆ ಪರಮಗತಿಯಾಗಿರುವೆ. ಮಿತ್ರನೆಂದು ತಿಳಿದು ನಾನು ನನ್ನ ದುಃಖವನ್ನು ನಿವೇದಿಸಿಕೊಳ್ಳುವೆನು.॥26॥

ಮೂಲಮ್ - 27

ತ್ವಂ ಹಿ ಪಾಣಿಪ್ರದಾನೇನ ವಯಸ್ಯೋ ಮೇಽಗ್ನಿಸಾಕ್ಷಿಕಮ್ ।
ಕೃತಃ ಪ್ರಾಣೈರ್ಬಹುಮತಃ ಸತ್ಯೇನ ಚ ಶಪಾಮ್ಯಹಮ್ ॥

ಅನುವಾದ

ನಾನು ನಿನ್ನ ಕೈಯಲ್ಲಿ ಕೈಯಿಟ್ಟು ಅಗ್ನಿಸಾಕ್ಷಿಯಾಗಿ ನಿನ್ನನ್ನು ಮಿತ್ರನಾಗಿಸಿಕೊಂಡೆನು. ಅದರಿಂದ ನೀನು ನನಗೆ ನನ್ನ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯನಾಗಿರುವೆ. ಇದನ್ನು ನಾನು ಸತ್ಯದ ಮೇಲೆ ಆಣೆಮಾಡಿ ಹೇಳುತ್ತಿದ್ದೇನೆ.॥27॥

ಮೂಲಮ್ - 28

ವಯಸ್ಯ ಇತಿ ಕೃತ್ವಾ ಚ ವಿಸ್ರಬ್ಧಃ ಪ್ರವದಾಮ್ಯಹಮ್ ।
ದುಃಖಮಂತರ್ಗತಂತನ್ಮೇ ಮನೋ ಹರತಿ ನಿತ್ಯಶಃ ॥

ಅನುವಾದ

ನೀನು ನನ್ನ ಮಿತ್ರನಾಗಿರುವೆ, ಅದಕ್ಕಾಗಿ ನಿನ್ನ ಮೇಲೆ ಪೂರ್ಣವಿಶ್ವಾಸವಿಟ್ಟು ಸದಾ ನನ್ನ ಮನಸ್ಸನ್ನು ವ್ಯಾಕುಲಗೊಳಿಸುತ್ತಿರುವ ನನ್ನೊಳಗಿರುವ ದುಃಖವನ್ನು ನಿನಗೆ ಹೇಳುತ್ತಿದ್ದೇನೆ.॥28॥

ಮೂಲಮ್ - 29

ಏತಾವದುಕ್ತ್ವಾ ವಚನಂ ಬಾಷ್ಪದೂಷಿತಲೋಚನಃ ।
ಬಾಷ್ಪದೂಷಿತಯಾ ವಾಚಾ ನೋಚ್ಚೈಃ ಶಕ್ನೋತಿ ಭಾಷಿತುಮ್ ॥

ಅನುವಾದ

ಇಷ್ಟು ಹೇಳುತ್ತಿರುವಾಗ ಸುಗ್ರೀವನ ಕಂಗಳಲ್ಲಿ ನೀರು ತುಂಬಿ ಬಂತು. ಅವನ ಮಾತು ಗದ್ಗದವಾಯಿತು. ಇದರಿಂದ ಅವನು ಗಟ್ಟಿಯಾಗಿ ಮಾತನಾಡಲೂ ಅಸಮರ್ಥನಾದನು.॥29॥

ಮೂಲಮ್ - 30

ಬಾಷ್ಪವೇಗಂ ತು ಸಹಸಾ ನದೀವೇಗಮಿವಾಗತಮ್ ।
ಧಾರಯಾಮಾಸ ಧೈರ್ಯೇಣ ಸುಗ್ರೀವೋ ರಾಮಸಂನಿಧೌ ॥

ಅನುವಾದ

ಅನಂತರ ಸುಗ್ರೀವನು ಒಮ್ಮೆಲೇ ಹೆಚ್ಚಿರುವ ನದಿಯ ವೇಗದಂತೆ ಚಿಮ್ಮಿದ ಕಂಬನಿಯ ವೇಗವನ್ನು ಶ್ರೀರಾಮನ ಬಳಿಯಲ್ಲೆ ಧೈರ್ಯದಿಂದ ತಡೆದುಕೊಂಡನು.॥30॥

ಮೂಲಮ್ - 31

ಸ ನಿಗೃಹ್ಯ ತು ತಂ ಬಾಷ್ಪಂ ಪ್ರಮೃಜ್ಯ ನಯನೇ ಶುಭೇ ।
ವಿನಿಃಶ್ವಸ್ಯ ಚ ತೇಜಸ್ವೀ ರಾಘವಂ ಪುನರೂಚಿವಾನ್ ॥

ಅನುವಾದ

ಕಂಬಿನಿಯನ್ನು ತಡೆದು ತನ್ನ ಎರಡೂ ಸುಂದರ ಕಣ್ಣುಗಳನ್ನು ಒರೆಸಿಕೊಂಡು, ತೇಜಸ್ವೀ ಸುಗ್ರೀವನು ಪುನಃ ದೀರ್ಘವಾದ ನಿಟ್ಟುಸಿರು ಬಿಟ್ಟು ಶ್ರೀರಘುನಾಥನಲ್ಲಿ ನುಡಿದನು.॥31॥

ಮೂಲಮ್ - 32

ಪುರಾಹಂ ವಾಲಿನಾ ರಾಮ ರಾಜ್ಯಾತ್ ಸ್ವಾದವರೋಪಿತಃ ।
ಪರುಷಾಣಿ ಚ ಸಂಶ್ರಾವ್ಯ ನಿರ್ಧೂತೋಽಸ್ಮಿ ಬಲೀಯಸಾ ॥

ಅನುವಾದ

ಶ್ರೀರಾಮಾ! ಹಿಂದೊಮ್ಮೆ ಬಲಿಷ್ಠ ವಾಲಿಯು ಕಟು ವಚನಗಳನ್ನಾಡಿ ಬಲವಂತವಾಗಿ ನನ್ನನ್ನು ತಿರಸ್ಕರಿಸಿ, ನನ್ನ ಯುವರಾಜ ಪದವಿಯನ್ನು ಕಿತ್ತುಕೊಂಡನು.॥32॥

ಮೂಲಮ್ - 33

ಹೃತಾ ಭಾರ್ಯಾ ಚ ಮೇ ತೇನ ಪ್ರಾಣೇಭ್ಯೋಽಪಿ ಗರೀಯಸೀ ।
ಸುಹೃದಶ್ಚ ಮದೀಯಾ ಯೇ ಸಂಯತಾ ಬಂಧನೇಷು ತೇ ॥

ಅನುವಾದ

ಇಷ್ಟೇ ಅಲ್ಲ, ಪ್ರಾಣಪ್ರಿಯಳಾದ ನನ್ನ ಪತ್ನಿಯನ್ನು ಕಸಿದುಕೊಂಡನು ಮತ್ತು ನನ್ನ ಎಲ್ಲ ಸುಹೃದರನ್ನು ಕಾರಾಗೃಹದಲ್ಲಿರಿಸಿದನು.॥33॥

ಮೂಲಮ್ - 34

ಯತ್ನವಾಂಶ್ಚ ಸ ದುಷ್ಟಾತ್ಮಾ ಮದ್ವಿನಾಶಾಯ ರಾಘವ ।
ಬಹುಶಸ್ತಪ್ರಯುುಕ್ತಾಶ್ಚ ವಾನರಾ ನಿಹತಾ ಮಯಾ ॥

ಅನುವಾದ

ರಘುನಂದನ! ಇದಾದ ಬಳಿಕವೂ ಆ ದುಷ್ಟಾತ್ಮಾ ವಾಲಿಯು ನನ್ನ ವಿನಾಶಕ್ಕಾಗಿ ಪ್ರಯತ್ನಿಸುತ್ತಾ ಇದ್ದನು. ಅವನು ಕಳಿಸಿದ ಅನೇಕ ವಾನರರನ್ನು ನಾನು ವಧಿಸಿದೆ.॥34॥

ಮೂಲಮ್ - 35

ಶಂಕಯಾ ತ್ವೇತಯಾಹಂ ಚ ದೃಷ್ಟ್ವಾತ್ವಾಮಪಿ ರಾಘವ ।
ನೋಪಸರ್ಪಾಮ್ಯಹಂ ಭೀತೋ ಭಯೇ ಸರ್ವೇ ಹಿ ಬಿಭ್ಯತಿ ॥

ಅನುವಾದ

ರಘುನಾಥನೇ! ನಿಮ್ಮನ್ನು ನೋಡಿಯೂ ನನ್ನ ಮನಸ್ಸಿನಲ್ಲಿ ಹೀಗೆ ಸಂದೇಹ ಉಂಟಾಗಿತ್ತು, ಅದಕ್ಕಾಗಿ ಹೆದರಿದ್ದರಿಂದ ನಾನು ಮೊದಲು ನಿನ್ನ ಬಳಿಗೆ ಬಂದಿರಲಿಲ್ಲ; ಏಕೆಂದರೆ ಭಯದ ಅವಕಾಶ ಬಂದಾಗ ಸಾಮಾನ್ಯವಾಗಿ ಎಲ್ಲರೂ ಹೆದರಿಹೋಗುತ್ತಾರೆ.॥35॥

ಮೂಲಮ್ - 36

ಕೇವಲಂ ಹಿ ಸಹಾಯಾ ಮೇ ಹನೂಮತ್ಪ್ರಮುಖಾಸ್ತ್ವಿಮೇ ।
ಅತೋಽಹಂ ಧಾರಯಾಮ್ಯದ್ಯ ಪ್ರಾಣಾನ್ಕೃಚ್ಛ್ರಗತೋಽಪಿ ಸನ್ ॥

ಅನುವಾದ

ಕೇವಲ ಈ ಹನುಮಂತನೇ ಆದಿ ವಾನರರು ನನ್ನ ಸಹಾಯಕರಾಗಿದ್ದಾರೆ. ಆದ್ದರಿಂದ ಮಹಾಸಂಕಟದಲ್ಲಿ ಬಿದ್ದಿದ್ದರೂ ನಾನು ಇಷ್ಟರವರೆಗೆ ಪ್ರಾಣ ಧರಿಸಿಕೊಂಡಿರುವೆನು.॥36॥

ಮೂಲಮ್ - 37

ಏತೇ ಹಿಕಪಯಃ ಸ್ನಿಗ್ಧಾ ಮಾಂ ರಕ್ಷಂತಿ ಸಮಂತತಃ ।
ಸಹ ಗಚ್ಛಂತಿ ಗಂತವ್ಯೇ ನಿತ್ಯಂ ತಿಷ್ಠಂತಿ ಚಾಸ್ಥಿತೇ ॥

ಅನುವಾದ

ಇವರಿಗೆ ನನ್ನ ಮೇಲೆ ಸ್ನೇಹವಿದೆ, ಆದ್ದರಿಂದ ಇವರೆಲ್ಲ ವಾನರರೂ ಸದಾ ನನ್ನನ್ನು ರಕ್ಷಿಸುತ್ತಿದ್ದಾರೆ. ಎಲ್ಲಿಗಾದರೂ ಹೋಗುವುದಿದ್ದರೆ ಜೊತೆಗೆ ಬರುತ್ತಾರೆ. ಎಲ್ಲಿ ತಂಗುವೆನೋ ಅಲ್ಲೇ ಇವರು ನಿತ್ಯವೂ ನನ್ನೊಂದಿಗೇ ಇರುತ್ತಾರೆ.॥37॥

ಮೂಲಮ್ - 38

ಸಂಕ್ಷೇಪಸ್ತ್ವೇಷ ಮೇ ರಾಮ ಕಿಮುಕ್ತ್ವಾ ವಿಸ್ತರಂ ಹಿ ತೇ ।
ಸ ಮೇ ಜ್ಯೇಷ್ಠೋ ರಿಪುರ್ಭ್ರಾತಾ ವಾಲೀ ವಿಶ್ರುತಪೌರುಷಃ ॥

ಅನುವಾದ

ರಘುನಂದನ! ಇಲ್ಲಿ ನಾನು ಸಂಕ್ಷೇಪವಾಗಿ ನನ್ನ ಬವಣೆಯನ್ನು ಹೇಳಿರುವೆನು. ನಿನ್ನ ಮುಂದೆ ವಿಸ್ತಾರವಾಗಿ ಹೇಳುವುದರಿಂದ ಏನು ಲಾಭ? ವಾಲಿ ನನ್ನ ಅಣ್ಣನಾಗಿದ್ದರೂ ಈಗ ನನಗೆ ಶತ್ರುವಾಗಿದ್ದಾನೆ. ಅವನ ಪರಾಕ್ರಮ ಎಲ್ಲೆಡೆ ವಿಖ್ಯಾತವಾಗಿದೆ.॥38॥

ಮೂಲಮ್ - 39

ತದ್ವಿನಾಶೇಽಪಿಮೇ ದುಃಖಂ ಪ್ರಮೃಷ್ಟಂ ಸ್ಯಾದನಂತರಮ್ ।
ಸುಖಂ ಮೇ ಜೀವಿತಂ ಚೈವ ತದ್ವಿನಾಶನಿಬಂಧನಮ್ ॥

ಅನುವಾದ

(ಅಣ್ಣನ ನಾಶವು ದುಃಖಕ್ಕೆ ಕಾರಣವಾಗಿದ್ದರೂ) ಈಗ ನನ್ನ ದುಃಖವು ಅವನು ನಾಶವಾದಾಗಲೇ ಅಳಿಯಬಲ್ಲದು. ನನ್ನ ಸುಖ ಮತ್ತು ಬದುಕು ಅವನ ವಿನಾಶದಲ್ಲೇ ನಿರ್ಭರವಾಗಿದೆ.॥39॥

ಮೂಲಮ್ - 40

ಏಷ ಮೇ ರಾಮ ಶೋಕಾಂತಃ ಶೋಕಾರ್ತೇನ ನಿವೇದಿತಃ ।
ದುಃಖಿತಃ ಸುಖಿತೋ ವಾಪಿ ಸಖ್ಯುರ್ನಿತ್ಯಂ ಸಖಾ ಗತಿಃ ॥

ಅನುವಾದ

ಶ್ರೀರಾಮಾ! ಇದೇ ನನ್ನ ಶೋಕ ನಾಶದ ಉಪಾಯವಾಗಿದೆ. ನಾನು ಶೋಕದಿಂದ ಪೀಡಿತನಾದ್ದರಿಂದ ನಿನ್ನಲ್ಲಿ ಈ ಮಾತನ್ನು ನಿವೇದಿಸಿಕೊಂಡಿರುವೆನು; ಏಕೆಂದರೆ, ಮಿತ್ರನು ದುಃಖದಲ್ಲಿ ಅಥವಾ ಸುಖದಲ್ಲಿ ಸದಾ ತನ್ನ ಮಿತ್ರನ ಸಹಾಯ ಮಾಡುತ್ತಾನೆ.॥40॥

ಮೂಲಮ್ - 41

ಶ್ರುತ್ವೈತಚ್ಚ ವಚೋ ರಾಮಃ ಸುಗ್ರೀವಮಿದಮಬ್ರವೀತ್ ।
ಕಿನ್ನಿಮಿತ್ತಮಭೂದ್ವೈರಂ ಶ್ರೋತುಮಿಚ್ಛಾಮಿ ತತ್ತ್ವತಃ ॥

ಅನುವಾದ

ಇದನ್ನು ಕೇಳಿ ಶ್ರೀರಾಮನು ಸುಗ್ರೀವನಲ್ಲಿ ಹೇಳಿದನು - ನೀವಿಬ್ಬರು ಸಹೋದರರಲ್ಲಿ ವೈರ ಉಂಟಾಗಲು ಕಾರಣವೇನು? ಇದನ್ನು ನಾನು ಸರಿಯಾಗಿ ತಿಳಿಯಲು ಬಯಸುತ್ತೇನೆ.॥41॥

ಮೂಲಮ್ - 42

ಸುಖಂ ಹಿ ಕಾರಣಂ ಶ್ರುತ್ವಾ ವೈರಸ್ಯ ತವ ವಾನರ ।
ಅನಂತರ್ಯಾದ್ ವಿಧಾಸ್ಯಾಮಿ ಸಂಪ್ರಧಾರ್ಯ ಬಲಾಬಲಮ್ ॥

ಅನುವಾದ

ವಾನರರಾಜನೇ! ನಿಮ್ಮ ಶತ್ರುತ್ವದ ಕಾರಣವನ್ನು ಕೇಳಿ ನಿಮ್ಮಿಬ್ಬರ ಬಲಾಬಲವನ್ನು ನಿಶ್ಚಯಿಸಿ ಮತ್ತೆ ತತ್ಕಾಲ ನಿನ್ನನ್ನು ಸುಖಿಯಾಗಿಸುವಂತಹ ಉಪಾಯ ಮಾಡುವೆನು.॥42॥

ಮೂಲಮ್ - 43

ಬಲವಾನ್ ಹಿ ಮಮಾಮರ್ಷಃ ಶ್ರುತ್ವಾ ತ್ವಾಮವಮಾನಿತಮ್ ।
ವರ್ಧತೇ ಹೃದಯೋತ್ಕಂಪೀ ಪ್ರಾವೃಡ್ವೇಗ ಇವಾಂಭಸಃ ॥

ಅನುವಾದ

ಮಳೆಗಾಲದಲ್ಲಿ ನದಿಯ ವೇಗವು ಬಹಳ ಹೆಚ್ಚುವಂತೆಯೇ ನೀನು ಅಪಮಾನಿತವಾದ ಮಾತನ್ನು ಕೇಳಿ ನನ್ನ ರೋಷ ಪ್ರಬಲವಾಗುತ್ತಾ ಇದೆ ಹಾಗೂ ನನ್ನ ಹೃದಯವನ್ನು ನಡುಗಿಸಿ ಬಿಟ್ಟಿದೆ.॥43॥

ಮೂಲಮ್ - 44

ಹೃಷ್ಟಃ ಕಥಯ ವಿಸ್ರಬ್ಧೋ ಯಾವದಾರೋಪ್ಯತೇ ಧನುಃ ।
ಸೃಷ್ಟಶ್ಚ ಹಿ ಮಯಾ ಬಾಣೋ ನಿರಸ್ತಶ್ಚ ರಿಪುಸ್ತವ ॥

ಅನುವಾದ

ನಾನು ಧನುಸ್ಸಿಗೆ ಹಗ್ಗ ಬಿಗಿಯುವ ಮೊದಲೇ ನೀನು ನಿನ್ನ ಎಲ್ಲ ಮಾತುಗಳನ್ನು ಪ್ರಸನ್ನತೆಯಿಂದ ಹೇಳಿಬಿಡು; ಏಕೆಂದರೆ ನಾನು ಬಾಣ ಬಿಡುತ್ತಲೇ ನಿನ್ನ ಶತ್ರು ತತ್ಕಾಲ ಕಾಲನಿಗೆ ತುತ್ತಾಗುವನು.॥44॥

ಮೂಲಮ್ - 45

ಏವಮುಕ್ತಸ್ತು ಸುಗ್ರೀವಃ ಕಾಕುತ್ಸ್ಥೇನ ಮಹಾತ್ಮನಾ ।
ಪ್ರಹರ್ಷಮತುಲಂ ಲೇಭೇ ಚತುರ್ಭಿಃ ಸಹ ವಾನರೈಃ ॥

ಅನುವಾದ

ಮಹಾತ್ಮಾ ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಸುಗ್ರೀವನಿಗೆ ತನ್ನ ನಾಲ್ಕು ಮಂದಿ ವಾನರರೊಂದಿಗೆ ಅಪಾರ ಹರ್ಷ ಉಂಟಾಯಿತು.॥45॥

ಮೂಲಮ್ - 46

ತತಃ ಪ್ರಹೃಷ್ಟವದನಃ ಸುಗ್ರೀವೋ ಲಕ್ಷ್ಮಣಾಗ್ರಜೇ ।
ವೈರಸ್ಯ ಕಾರಣಂ ತತ್ತ್ವಮಾಖ್ಯಾತುಮುಪಚಕ್ರಮೇ ॥

ಅನುವಾದ

ಅನಂತರ ಸುಗ್ರೀವನ ಮುಖದಲ್ಲಿ ಪ್ರಸನ್ನತೆ ಆವರಿಸಿತು ಮತ್ತು ಅವನು ವಾಲಿಯೊಂದಿಗೆ ವೈರ ಉಂಟಾದ ಯಥಾರ್ಥ ಕಾರಣವನ್ನು ಶ್ರೀರಾಮನಲ್ಲಿ ಹೇಳಲು ಪ್ರಾರಂಭಿಸಿದನು.॥46॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಎಂಟನೆಯ ಸರ್ಗ ಸಂಪೂರ್ಣವಾಯಿತು.॥8॥