वाचनम्
ಭಾಗಸೂಚನಾ
ಸುಗ್ರೀವನು ಶ್ರೀರಾಮನನ್ನು ಸಮಾಧಾನಗೊಳಿಸುವುದು, ಸುಗ್ರೀವನ ಕಾರ್ಯವು ಸಿದ್ಧಿಸುವುದೆಂದು ಶ್ರೀರಾಮನು ಆಶ್ವಾಸನೆಯನ್ನಿತ್ತುದು
ಮೂಲಮ್ - 1
ಏವಮುಕ್ತಸ್ತು ಸುಗ್ರೀವೋ ರಾಮೇಣಾರ್ತೇನ ವಾನರಃ ।
ಅಬ್ರವೀತ್ ಪ್ರಾಂಲಿರ್ವಾಕ್ಯಂ ಸಬಾಷ್ಪಂ ಭಾಷ್ಪಗದ್ಗದಃ ॥
ಅನುವಾದ
ಶೋಕಪೀಡಿತನಾದ ಶ್ರೀರಾಮನು ಹೀಗೆ ಹೇಳಿದಾಗ ವಾನರರಾಜ ಸುಗ್ರೀವನ ಕಣ್ಣುಗಳಲ್ಲಿ ನೀರು ತುಂಬಿ ಅವನು ಕೈಮುಗಿದುಕೊಂಡು ಅಶ್ರುಗದ್ಗದನಾಗಿ ಈ ಪ್ರಕಾರ ನುಡಿದನು.॥1॥
ಮೂಲಮ್ - 2
ನ ಜಾನೇ ನಿಲಯಂ ತಸ್ಯ ಸರ್ವಥಾ ಪಾಪರಕ್ಷಸಃ ।
ಸಾಮರ್ಥ್ಯಂ ವಿಕ್ರಮಂ ವಾಪಿ ದೌಷ್ಕುಲೇಯಸ್ಯ ವಾ ಕುಲಮ್ ॥
ಅನುವಾದ
ಪ್ರಭೋ! ನೀಚ ಕುಲದಲ್ಲಿ ಹುಟ್ಟಿದ ಆ ಪಾಪಾತ್ಮಾ ರಾಕ್ಷಸನ ಗುಪ್ತ ನಿವಾಸವು ಎಲ್ಲಿದೆ, ಅವನಲ್ಲಿ ಎಷ್ಟು ಶಕ್ತಿ ಇದೆ, ಅವನ ಪರಾಕ್ರಮ ಎಂತಹುದು? ಅಥವಾ ಅವನು ಯಾವ ವಂಶದವನು? ಇದೆಲ್ಲವನ್ನು ನಾನು ಸರ್ವಥಾ ತಿಳಿದಿಲ್ಲ.॥2॥
ಮೂಲಮ್ - 3
ಸತ್ಯಂತು ಪ್ರತಿಜಾನಾಮಿ ತ್ಯಜ ಶೋಕಮರಿಂದಮ ।
ಕರಿಷ್ಯಾಮಿ ತಥಾ ಯತ್ನಂ ಯಥಾ ಪ್ರಾಪ್ಸ್ಯಸಿ ಮೈಥಿಲೀಮ್ ॥
ಅನುವಾದ
ಆದರೆ ನಿನ್ನ ಮುಂದೆ ಸತ್ಯಪ್ರತಿಜ್ಞೆ ಮಾಡಿ-‘ಮಿಥಿಲೇಶ ಕುಮಾರೀ ಸೀತೆಯು ನಿನಗೆ ದೊರಕುವಂತೆ ನಾನು ಪ್ರಯತ್ನ ಮಾಡುವೆನು’ ಎಂದು ಹೇಳುತ್ತೇನೆ. ಅದಕ್ಕಾಗಿ ಶತ್ರುದಮನ ವೀರನೇ! ನೀನು ಶೋಕವನ್ನು ತ್ಯಜಿಸು.॥3॥
ಮೂಲಮ್ - 4
ರಾವಣಂ ಸಗಣಂ ಹತ್ವಾ ಪರಿತೋಷ್ಯಾತ್ಮ ಪೌರುಷಮ್ ।
ತಥಾಸ್ಮಿ ಕರ್ತಾ ನಚಿರಾದ್ ಯಥಾ ಪ್ರೀತೋ ಭವಿಷ್ಯಸಿ ॥
ಅನುವಾದ
ನಾನು ನಿನ್ನ ಸಂತೋಷಕ್ಕಾಗಿ ಸೈನಿಕರ ಸಹಿತ ರಾವಣನ ವಧೆ ಮಾಡಿ ನನ್ನ ಪುರುಷಾರ್ಥವನ್ನು ಪ್ರಕಟಿಸುವೆನು, ಅದರಿಂದ ನೀನು ಬೇಗನೇ ಪ್ರಸನ್ನನಾಗುವೆ.॥4॥
ಮೂಲಮ್ - 5
ಅಲಂ ವೈಕ್ಲವ್ಯಮಾಲಂಬ್ಯ ಧೈರ್ಯಮಾತ್ಮಗತಂ ಸ್ಮರ ।
ತ್ವದ್ವಿಧಾನಾಂ ನ ಸದೃಶಮೀದೃಶಂ ಬುದ್ಧಿಲಾಘವಮ್ ॥
ಅನುವಾದ
ಇಂತಹ ವ್ಯಾಕುಲತೆ ಮನಸ್ಸಿಗೆ ತರುವುದು ವ್ಯರ್ಥವಾಗಿದೆ. ನಿನ್ನ ಹೃದಯದಲ್ಲಿ ಸ್ವಾಭಾವಿಕವಾಗಿ ಇರುವ ಧೈರ್ಯವನ್ನು ಸ್ಮರಿಸಿಕೋ. ಈ ರೀತಿಯ ಬುದ್ಧಿ ಮತ್ತು ವಿಚಾರವನ್ನು ಹಗುರಾಗಿಸುವುದು-ಅದರ ಸಹಜ ಗಂಭೀರತೆಯನ್ನು ಕಳೆದುಕೊಳ್ಳುವುದು ನಿನ್ನಂತಹ ಮಹಾಪುರುಷನಿಗೆ ಉಚಿತವಾಗಿಲ್ಲ.॥5॥
ಮೂಲಮ್ - 6
ಮಯಾಪಿ ವ್ಯಸನಂ ಪ್ರಾಪ್ತಂ ಭಾರ್ಯಾಹರಣಜಂ ಮಹತ್ ।
ನಾಹಮೇವಂ ಹಿ ಶೋಚಾಮಿ ಧೈರ್ಯಂ ನ ಚ ಪರಿತ್ಯಜೇ ॥
ಅನುವಾದ
ನನಗೂ ಕೂಡ ಪತ್ನಿಯ ವಿರಹದ ಮಹಾಕಷ್ಟ ಪ್ರಾಪ್ತವಾಗಿದೆ, ಆದರೆ ನಾನು ಈ ಪ್ರಕಾರ ಶೋಕಿಸುವುದಿಲ್ಲ; ಧೈರ್ಯವನ್ನು ಬಿಡುವುದಿಲ್ಲ.॥6॥
ಮೂಲಮ್ - 7
ನಾಹಂ ತಾಮನುಶೋಚಾಮಿ ಪ್ರಾಕೃತೋ ವಾನರೋಽಪಿ ಸನ್ ।
ಮಹಾತ್ಮಾ ಚ ವಿನೀತಶ್ಚ ಕಿಂ ಪುನರ್ಧೃತಿಮಾನ್ ಮಹಾನ್ ॥
ಅನುವಾದ
ನಾನೊಬ್ಬ ಸಾಧಾರಣ ವಾನರನಾಗಿದ್ದರೂ ನನ್ನ ಪತ್ನಿಗಾಗಿ ನಿರಂತರ ಶೋಕಿಸುವುದಿಲ್ಲ ಮತ್ತೆ ನಿನ್ನಂತಹ ಮಹಾತ್ಮಾ, ಸುಶಿಕ್ಷಿತ, ಧೈರ್ಯವಂತ ಮಹಾಪುರುಷನು ಶೋಕಿಸಿದರೆ ಇದಕ್ಕೇನು ಹೇಳುವುದು.॥7॥
ಮೂಲಮ್ - 8
ಬಾಷ್ಪಮಾಪತಿತಂ ಧೈರ್ಯಾನ್ನಿಗ್ರಹೀತುಂ ತ್ವಮರ್ಹಸಿ ।
ಮರ್ಯಾದಾಂ ಸತ್ತ್ವಯುಕ್ತಾನಾಂ ಧೃತಿಂ ನೋತ್ಸ್ರಷ್ಟುಮರ್ಹಸಿ ॥
ಅನುವಾದ
ನೀನು ಧೈರ್ಯಧರಿಸಿ ಈ ಉದುರುತ್ತಿರುವ ಕಂಬನಿಯನ್ನು ತಡೆಯಬೇಕು. ಸಾತ್ತ್ವಿಕ ಪುರುಷರ ಮರ್ಯಾದೆ ಮತ್ತು ಧೈರ್ಯವನ್ನು ತ್ಯಜಿಸಬೇಡ.॥8॥
ಮೂಲಮ್ - 9
ವ್ಯಸನೇ ವಾರ್ಥಕೃಚ್ಛ್ರೇ ವಾ ಭಯೇ ವಾ ಜೀವಿತಾಂತಗೇ ।
ವಿಮೃಶಂಶ್ಚ ಸ್ವಯಾಬುದ್ಧ್ಯಾ ಧೃತಿಮಾನ್ನಾವಸೀದತಿ ॥
ಅನುವಾದ
(ಆತ್ಮೀಯ ಜನರ ವಿಯೋಗಾದಿಗಳಿಂದ ಆಗುವ) ಶೋಕದಲ್ಲಿ, ಆರ್ಥಿಕ ಸಂಕಟದಲ್ಲಿ ಅಥವಾ ಪ್ರಾಣಾಂತಕಾರಿ ಭಯ ಉಂಟಾದರೂ, ತನ್ನ ಬುದ್ಧಿಯಿಂದ ದುಃಖದ ನಿವಾರಣೆಯ ಉಪಾಯದ ವಿಚಾರ ಮಾಡುತ್ತಾ ಧೈರ್ಯಧರಿಸುವವನು ಕಷ್ಟ ಅನುಭವಿಸುವುದಿಲ್ಲ.॥9॥
ಮೂಲಮ್ - 10
ಬಾಲಿಶಸ್ತು ನರೋ ನಿತ್ಯಂ ವೈಕ್ಲವ್ಯಂ ಯೋಽನುವರ್ತತೇ ।
ಸ ಮಜ್ಜತ್ಯವಶಃ ಶೋಕೇ ಭಾರಾಕ್ರಾಂತೇವ ನೌರ್ಜಲೇ ॥
ಅನುವಾದ
ಸದಾ ಗಾಬರಿಗೊಂಡ ಮೂಢ ಮಾನವನು ಭಾರದಿಂದ ನೀರಿನಲ್ಲಿ ಮುಳುಗಿದ ನೌಕೆಯಂತೆ ಶೋಕದಲ್ಲಿ ವಿವಶನಾಗಿ ಮುಳುಗಿಹೋಗುತ್ತಾನೆ.॥10॥
ಮೂಲಮ್ - 11
ಏಷೋಂಽಜಲಿರ್ಮಯಾ ಬದ್ಧಃ ಪ್ರಣಯಾತ್ ತ್ವಾಂ ಪ್ರಸಾದಯೇ ।
ಪೌರುಷಂ ಶ್ರಯ ಶೋಕಸ್ಯ ನಾಂತರಂ ದಾತುಮರ್ಹಸಿ ॥
ಅನುವಾದ
ನಾನು ಕೈಮುಗಿಯುತ್ತೇನೆ. ನೀನು ಪ್ರಸನ್ನನಾಗು, ಪುರುಷಾರ್ಥವನ್ನು ಆಶ್ರಯಿಸು, ಶೋಕವು ತನ್ನ ಮೇಲೆ ಪ್ರಭಾವ ಬೀರಲು ಅವಕಾಶ ಕೊಡಬೇಡ ಎಂದು ಪ್ರೇಮಪೂರ್ವಕ ಪ್ರಾರ್ಥಿಸುತ್ತಿದ್ದೇನೆ.॥11॥
ಮೂಲಮ್ - 12
ಯೇ ಶೋಕಮನುವರ್ತಂತೇ ನ ತೇಷಾಂ ವಿದ್ಯತೇ ಸುಖಮ್ ।
ತೇಜಶ್ಚ ಕ್ಷೀಯತೇ ತೇಷಾಂ ನ ತ್ವಂ ಶೋಚಿತುಮರ್ಹಸಿ ॥
ಅನುವಾದ
ಶೋಕವನ್ನು ಅನುಸರಿಸುವವನಿಗೆ ಸುಖ ಸಿಗುವುದಿಲ್ಲ ಹಾಗೂ ಅವನ ತೇಜವು ಕ್ಷೀಣವಾಗುತ್ತದೆ; ಆದ್ದರಿಂದ ನೀನು ಶೋಕಮಾಡಬೇಡ.॥12॥
ಮೂಲಮ್ - 13
ಶೋಕೇನಾಭಿಪ್ರಪನ್ನಸ್ಯ ಜೀವಿತೇ ಚಾಪಿ ಸಂಶಯಃ ।
ಸ ಶೋಕಂ ತ್ಯಜ ರಾಜೇಂದ್ರ ಧೈರ್ಯಮಾಶ್ರಯ ಕೇವಲಮ್ ॥
ಅನುವಾದ
ರಾಜೇಂದ್ರನೇ! ಶೋಕದಿಂದ ಆಕ್ರಾಂತನಾದ ಮನುಷ್ಯನ ಜೀವನದಲ್ಲಿ ಅವನ ಪ್ರಾಣ ರಕ್ಷಣೆಯಲ್ಲಿಯೂ ಕೂಡ ಸಂಶಯ ಉಂಟಾಗುತ್ತದೆ. ಅದಕ್ಕಾಗಿ ನೀನು ಶೋಕವನ್ನು ತ್ಯಜಿಸು ಮತ್ತು ಧೈರ್ಯವನ್ನು ಆಶ್ರಯಿಸು.॥13॥
ಮೂಲಮ್ - 14
ಹಿತಂ ವಯಸ್ಯಭಾವೇನ ಬ್ರೂಹಿ ನೋಪದಿಶಾಮಿ ತೇ ।
ವಯಸ್ಯತಾಂ ಪೂಜಯನ್ಮೇ ನ ತ್ವಂಶೋಚಿತುಮರ್ಹಸಿ ॥
ಅನುವಾದ
ನಾನು ಮಿತ್ರತೆಯಿಂದಾಗಿ ಹಿತದ ಸಲಹೆ ಕೊಡುತ್ತೇನೆ; ನಿನಗೆ ಉಪದೇಶ ಕೊಡುತ್ತಿಲ್ಲ. ನೀನು ನನ್ನ ಮೈತ್ರಿಯನ್ನು ಆದರಿಸುತ್ತಾ ಎಂದಿಗೂ ಶೋಕ ಮಾಡಬೇಡ.॥14॥
ಮೂಲಮ್ - 15
ಮಧುರಂ ಸಾಂತ್ವಿತಸ್ತೇನ ಸುಗ್ರೀವೇಣ ಸ ರಾಘವಃ ।
ಮುಖಮಶ್ರುಪರಿಕ್ಲಿನ್ನಂ ವಸ್ತ್ರಾಂತನ ಪ್ರಮಾರ್ಜಯತ್ ॥
ಅನುವಾದ
ಸುಗ್ರೀವನು ಮಧುರವಾಣಿಯಿಂದ ಈ ಪ್ರಕಾರ ಸಾಂತ್ವನಪಡಿಸಿದಾಗ ಶ್ರೀರಘುನಾಥನು ಕಂಬನಿಯಿಂದ ಒದ್ದೆಯಾದ ತನ್ನ ಮುಖವನ್ನು ವಸ್ತ್ರದ ತುದಿಯಿಂದ ಒರೆಸಿಕೊಂಡನು.॥15॥
ಮೂಲಮ್ - 16
ಪ್ರಕೃತಿಸ್ಥಸ್ತು ಕಾಕುತ್ಸ್ಥಃ ಸುಗ್ರೀವವಚನಾತ್ಪ್ರಭುಃ ।
ಸಂಪರಿಷ್ವಜ್ಯ ಸುಗ್ರೀವಮಿದಂ ವಚನಮಬ್ರವೀತ್ ॥
ಅನುವಾದ
ಸುಗ್ರೀವನ ಮಾತಿನಿಂದ ಶೋಕವನ್ನು ತ್ಯಜಿಸಿ ಸ್ವಸ್ಥಚಿತ್ತನಾಗಿ ಕಕುತ್ಥ್ಸಕುಲಭೂಷಣ ಭಗವಾನ್ ಶ್ರೀರಾಮನು ಮಿತ್ರವರ ಸುಗ್ರೀವನನ್ನು ಎದೆಗಪ್ಪಿಕೊಂಡು, ಹೀಗೆ ಹೇಳಿದನು.॥16॥
ಮೂಲಮ್ - 17
ಕರ್ತವ್ಯಂ ಯದ್ವಯಸ್ಯೇನ ಸ್ನಿಗ್ಧೇನ ಚ ಹಿತೇನ ಚ ।
ಅನುರೂಪಂ ಚ ಯುಕ್ತಂ ಚ ಕೃತಂ ಸುಗ್ರೀವ ತತ್ತ್ವಯಾ ॥
ಅನುವಾದ
ಸುಗ್ರೀವನೇ! ಒಬ್ಬ ಸ್ನೇಹಿತ, ಹಿತೈಷಿಯು ಮಾಡಬೇಕಾದುದನ್ನು ನೀನು ಮಾಡಿರುವೆ. ನಿನ್ನ ಕಾರ್ಯವು ಸರ್ವಥಾ ಉಚಿತವಾಗಿದೆ, ನಿನಗೆ ಯೋಗ್ಯವಾಗಿದೆ.॥17॥
ಮೂಲಮ್ - 18
ಏಷ ಚ ಪ್ರಕೃತಿಸ್ಥೋಽಹಮನುನೀತಸ್ತ್ವಯಾ ಸಖೇ ।
ದುರ್ಲಭೋ ಹೀದೃಶೋ ಬಂಧುರಸ್ಮಿನ್ಕಾಲೇ ವಿಶೇಷತಃ ॥
ಅನುವಾದ
ಸಖನೇ! ನಿನ್ನ ಆಶ್ವಾಸನೆಯಿಂದ ನನ್ನ ಎಲ್ಲ ಚಿಂತೆಗಳು ಹೊರಟುಹೋಗಿವೆ. ಈಗ ನಾನು ಪೂರ್ಣಸ್ವಸ್ಥನಾಗಿದ್ದೇನೆ. ನಿನ್ನಂತಹ ಬಂಧುವು ವಿಶೇಷವಾಗಿ ಇಂತಹ ಸಂಕಟ ಸಮಯದಲ್ಲಿ ಸಿಗುವುದು ಕಠಿಣವಾಗಿದೆ.॥18॥
ಮೂಲಮ್ - 19
ಕಿಂ ತು ಯತ್ನಸ್ತ್ವಯಾಕಾರ್ಯೋ ಮೈಥಿಲ್ಯಾಃ ಪರಿಮಾರ್ಗಣೇ ।
ರಾಕ್ಷಸಸ್ಯ ಚ ರೌದ್ರಸ್ಯ ರಾವಣಸ್ಯ ದುರಾತ್ಮನಃ ॥
ಅನುವಾದ
ಆದರೆ ನೀನು ಮಿಥಿಲೇಶಕುಮಾರಿ ಸೀತೆ ಮತ್ತು ರೌದ್ರರೂಪೀ ದುರಾತ್ಮಾ ರಾಕ್ಷಸ ರಾವಣನು ಎಲ್ಲಿರುವರು ಎಂಬುದನ್ನು ತಿಳಿಯಲು ಪ್ರಯತ್ನಿಸಬೇಕು.॥19॥
ಮೂಲಮ್ - 20
ಮಯಾ ಚ ಯದನುಷ್ಠೇಯಂ ವಿಸ್ರಬ್ಧೇನ ತದುಚ್ಯತಾಮ್ ।
ವರ್ಷಾಸ್ವಿವ ಚ ಸುಕ್ಷೇತ್ರೇ ಸರ್ವಂ ಸಂಪದ್ಯತೇ ತವ ॥
ಅನುವಾದ
ಜೊತೆಗೆ ಈಗ ನಿನಗಾಗಿ ನಾನೇನು ಮಾಡುವ ಆವಶ್ಯಕತೆ ಇದೆಯೋ ಅದನ್ನು ಸಂಕೋಚವಿಲ್ಲದೆ ತಿಳಿಸು. ಮಳೆಗಾಲದಲ್ಲಿ ಒಳ್ಳೆಯ ಹೊಲದಲ್ಲಿ ಬಿತ್ತಿದ ಬೀಜವು ಖಂಡಿತವಾಗಿ ಫಲಕೊಡುವಂತೆ, ನಿನ್ನ ಎಲ್ಲ ಮನೋರಥ ಸಫಲವಾಗುವುದು.॥20॥
ಮೂಲಮ್ - 21
ಮಯಾ ಚ ಯದಿದಂ ವಾಕ್ಯಮಭಿಮಾನಾತ್ ಸಮೀರಿತಮ್ ।
ತತ್ತ್ವಯಾ ಹರಿಶಾರ್ದೂಲ ತತ್ತ್ವಮಿತ್ಯುಪಧಾರ್ಯತಾಮ್ ॥
ಅನುವಾದ
ವಾನರ ಶ್ರೇಷ್ಠನೇ! ಅಭಿಮಾನಪೂರ್ವಕವಾಗಿ ನಾನು ಹೇಳಿದ ವಾಲಿಯ ವಧೆಯ ಮಾತನ್ನು ನೀನು ನಿಜವೆಂದು ತಿಳಿ.॥21॥
ಮೂಲಮ್ - 22
ಅನೃತಂ ನೋಕ್ತಪೂರ್ವಂ ಮೇ ನ ಚ ವಕ್ಷ್ಯೇ ಕದಾಚನ ।
ಏತತ್ತೇ ಪ್ರತಿಜಾನಾಮಿ ಸತ್ಯೇನೈವ ಶಪಾಮ್ಯಹಮ್ ॥
ಅನುವಾದ
ನಾನು ಮೊದಲು ಎಂದೂ ಸುಳ್ಳು ಹೇಳಲಿಲ್ಲ. ಭವಿಷ್ಯದಲ್ಲಿಯೂ ಎಂದೂ ಅಸತ್ಯ ಮಾತನಾಡಲಾರೆ. ಈಗ ಹೇಳಿದುದನ್ನು ಪೂರ್ಣಗೊಳಿಸಲು ಪ್ರತಿಜ್ಞೆ ಮಾಡುತ್ತೇನೆ. ನಿನಗೆ ವಿಶ್ವಾಸ ಉಂಟಾಗಲು ಸತ್ಯದ ಮೇಲೆ ಆಣೆ ಮಾಡುತ್ತೇನೆ.॥22॥
ಮೂಲಮ್ - 23
ತತಃಪ್ರಹೃಷ್ಟಃ ಸುಗ್ರೀವೋ ವಾನರೈಃ ಸಚಿವೈಃ ಸಹ ।
ರಾಘವಸ್ಯ ವಚಃ ಶ್ರುತ್ವಾ ಪ್ರತಿಜ್ಞಾತಂ ವಿಶೇಷತಃ ॥
ಅನುವಾದ
ಶ್ರೀರಘುನಾಥನ ಮಾತನ್ನು, ವಿಶೇಷವಾಗಿ ಅವನ ಪ್ರತಿಜ್ಞೆಯನ್ನು ಕೇಳಿ ತನ್ನ ವಾನರ ಮಂತ್ರಿಗಳೊಂದಿಗೆ ಸುಗ್ರೀವನಿಗೆ ಬಹಳ ಸಂತೋಷವಾಯಿತು.॥23॥
ಮೂಲಮ್ - 24
ಏವಮೇಕಾಂತಸಂಪೃಕ್ತೌ ತತಸ್ತೌ ನರವಾನರೌ ।
ಉಭಾವನ್ಯೋನ್ಯಸದೃಶಂ ಸುಖಂ ದುಃಖಮಭಾಷತಾಮ್ ॥
ಅನುವಾದ
ಹೀಗೆ ಏಕಾಂತದಲ್ಲಿ ಪರಸ್ಪರ ಹತ್ತಿರ ಕುಳಿತ್ತಿದ್ದ ಇಬ್ಬರೂ ನರ-ವಾನರರು (ಶ್ರೀರಾಮ- ಸುಗ್ರೀವರು) ಒಬ್ಬೊಬ್ಬರು ತಮಗೆ ಅನುರೂಪವಾದ ಸುಖ ಮತ್ತು ದುಃಖದ ಮಾತನ್ನು ಅಡಿದ್ದರು.॥24॥
ಮೂಲಮ್ - 25
ಮಹಾನುಭಾವಸ್ಯ ವಚೋ ನಿಶಮ್ಯ
ಹರಿರ್ನೃಪಾಣಾಮಧಿಪಸ್ಯ ತಸ್ಯ ।
ಕೃತಂ ಸ ಮೇನೇ ಹರಿವೀರಮುಖ್ಯ-
ಸ್ತದಾ ಚ ಕಾರ್ಯಂ ಹೃದಯೇನ ವಿದ್ವಾನ್ ॥
ಅನುವಾದ
ರಾಜಾಧಿರಾಜ ಮಹಾರಾಜ ಶ್ರೀರಘುನಾಥನ ಮಾತನ್ನು ಕೇಳಿ ವಾನರ ವೀರರ ಪ್ರಧಾನ, ವಿದ್ವಾಂಸ ಸುಗ್ರೀವನು ಆಗ ಮನಸ್ಸಿನಲ್ಲೇ ತನ್ನ ಕಾರ್ಯವು ಸಿದ್ದಿಸಿತು ಎಂದು ಅಂದುಕೊಂಡನು.॥25॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಏಳನೆಯ ಸರ್ಗ ಸಂಪೂರ್ಣವಾಯಿತು.॥7॥