वाचनम्
ಭಾಗಸೂಚನಾ
ಸುಗ್ರೀವನು ಶ್ರೀರಾಮನಿಗೆ ಸೀತೆಯ ಒಡವೆಗಳನ್ನು ತೋರಿಸಿದುದು, ಶ್ರೀರಾಮನ ಶೋಕ ಹಾಗೂ ರೋಷಪೂರ್ಣ ವಚನ
ಮೂಲಮ್ - 1½
ಪುನರೇವಾಬ್ರವೀತ್ ಪ್ರೀತೋ ರಾಘವಂ ರಘುನಂದನಮ್ ।
ಅಯಮಾಖ್ಯಾತಿ ತೇ ರಾಮ ಸಚಿವೋ ಮಂತ್ರಿಸತ್ತಮಃ ॥
ಹನೂಮಾನ್ಯನ್ನಿಮಿತ್ತಂ ತ್ವಂ ನಿರ್ಜನಂ ವನಮಾಗತಃ ।
ಅನುವಾದ
ಸುಗ್ರೀವನು ಪುನಃ ಪ್ರಸನ್ನತೆಯಿಂದ ರಘುಕುಲನಂದನ ಶ್ರೀರಾಮಚಂದ್ರನಲ್ಲಿ ಹೇಳಿದನು-ಶ್ರೀರಾಮಾ! ನನ್ನ ಮಂತ್ರಿಗಳಲ್ಲಿ ಶ್ರೇಷ್ಠ ಸಚಿವ ಈ ಹನುಮಂತನು ನಿಮ್ಮ ವಿಷಯದಲ್ಲಿ ನೀವು ಈ ನಿರ್ಜನ ಕಾಡಿಗೆ ಬಂದ ಎಲ್ಲ ವೃತ್ತಾಂತವನ್ನು ಹೇಳಿರುವನು.॥1½॥
ಮೂಲಮ್ - 2
ಲಕ್ಷ್ಮಣೇನ ಸಹ ಭ್ರಾತ್ರಾ ವಸತಶ್ಚ ವನೇ ತವ ॥
ಮೂಲಮ್ - 3
ರಕ್ಷಸಾಪಹೃತಾ ಭಾರ್ಯಾ ಮೈಥಿಲೀ ಜನಕಾತ್ಮಜಾ ।
ತ್ವಯಾ ವಿಯುಕ್ತಾ ರುದತೀ ಲಕ್ಷ್ಮಣೇನ ಚ ಧೀಮತಾ ॥
ಮೂಲಮ್ - 4
ಅಂತರಪ್ರೇಪ್ಸುನಾ ತೇನ ಹತ್ವಾ ಗೃಧ್ರಂ ಜಟಾಯುಷಮ್ ।
ಭಾರ್ಯಾವಿಯೋಗಜಂ ದುಃಖಂ ಪ್ರಾಪಿತಸ್ತೇನ ರಕ್ಷಸಾ ॥
ಅನುವಾದ
ನೀನು ಲಕ್ಷ್ಮಣನೊಂದಿಗೆ ವನದಲ್ಲಿ ವಾಸಿಸುತ್ತಿದ್ದಾಗ ರಾಕ್ಷಸ ರಾವಣನು ನಿನ್ನ ಪತ್ನೀ ಮಿಥಿಲೇಶ ಕುಮಾರಿ ಜನಕನಂದಿನೀ ಸೀತೆಯನ್ನು ಕದ್ದುಕೊಂಡು ಹೋದನು. ಆ ಸಮಯದಲ್ಲಿ ನೀನು ಆಕೆಯಿಂದ ಅಗಲಿದ್ದೆ ಮತ್ತು ಲಕ್ಷ್ಮಣನೂ ಆಕೆಯೊಬ್ಬಳನ್ನೇ ಬಿಟ್ಟು ಹೊರಟುಹೋಗಿದ್ದನು. ರಾಕ್ಷಸನು ಇದೇ ಸಂದರ್ಭದ ನಿರೀಕ್ಷೆಯಲ್ಲಿದ್ದನು. ಅವನು ಗೃಧ್ರ ಜಟಾಯುವನ್ನು ಕೊಂದು, ಅಳುತ್ತಿರುವ ಸೀತೆಯನ್ನು ಅಪಹರಿಸಿದನು. ಹೀಗೆ ಆ ರಾಕ್ಷಸನು ನಿನ್ನನ್ನು ಪತ್ನೀ ವಿಯೋಗದಲ್ಲಿ ಕೆಡಹಿದನು.॥2-4॥
ಮೂಲಮ್ - 5
ಭಾರ್ಯಾವಿಯೋಗಜಂ ದುಃಖಮಚಿರಾತ್ತ್ತಂ ವಿಮೋಕ್ಷ್ಯಸೇ ।
ಅಹಂ ತಾಮಾನಯಿಷ್ಯಾಮಿ ನಷ್ಟಾಂ ವೇದಶ್ರುತೀಮಿವ ॥
ಅನುವಾದ
ಆದರೆ ಈ ಪತ್ನೀ ವಿಯೋಗದ ದುಃಖದಿಂದ ನೀನು ಬೇಗನೇ ಮುಕ್ತನಾಗುವೆ. ರಾಕ್ಷಸನು ಅಪಹರಿಸಿದ ವೇದವಾಣಿಯಂತಿರುವ ನಿನ್ನ ಪತ್ನಿಯನ್ನು ಹಿಂದಕ್ಕೆ ತಂದುಕೊಡುವೆನು.॥5॥
ಮೂಲಮ್ - 6
ರಸಾತಲೇ ವಾ ವರ್ತಂತಿಂ ವರ್ತಂತೀಂ ವಾ ನಭಸ್ತಲೇ ।
ಅಹಮಾನೀಯ ದಾಸ್ಯಾಮಿ ತವ ಭಾರ್ಯಾಮರಿಂದಮ ॥
ಅನುವಾದ
ಶತ್ರುದಮನ ಶ್ರೀರಾಮಾ! ನಿನ್ನ ಪತ್ನೀ ಸೀತೆಯು ಪಾತಾಳದಲ್ಲಿರಲಿ, ಆಕಾಶದಲ್ಲಿರಲೀ, ನಾನು ಆಕೆಯನ್ನು ಹುಡುಕಿ ತಂದು ನಿನ್ನ ಸೇವೆಯಲ್ಲಿ ಅರ್ಪಿಸುವೆನು.॥6॥
ಮೂಲಮ್ - 7
ಇದಂ ತಥ್ಯಂ ಮಮ ವಚಸ್ತ್ವಮವೇಹಿ ಚ ರಾಘವ ।
ನ ಶಕ್ಯಾ ಸಾ ಜರಯಿತುಮಪಿ ಸೇಂದ್ರೈಃ ಸುರಾಸುರೈಃ ॥
ಮೂಲಮ್ - 8
ತವ ಭಾರ್ಯಾ ಮಹಾಬಾಹೋ ಭಕ್ಷ್ಯಂ ವಿಷಕೃತಂ ಯಥಾ ।
ತ್ಯಜ ಶೋಕಂ ಮಹಾಬಾಹೋ ತಾಂ ಕಾಂತಾಮಾನಯಾಮಿ ತೇ ॥
ಅನುವಾದ
ರಘುನಂದನ! ನೀನು ನನ್ನ ಮಾತನ್ನು ನಿಜವೆಂದೇ ತಿಳಿ. ಮಹಾಬಾಹೋ! ನಿನ್ನ ಪತ್ನಿಯು ವಿಷಮಿಶ್ರಿತ ಊಟದಂತೆ ಬೇರೆಯವರಿಗೆ ಅಗ್ರಾಹ್ಯಳಾಗಿದ್ದಾಳೆ. ಇಂದ್ರಸಹಿತ ಸಮಸ್ತ ದೇವತೆಗಳು ಮತ್ತು ಅಸುರರೂ ಆಕೆಯನ್ನು ಜೀರ್ಣಿಸಿಕೊಳ್ಳಲಾರರು. ನೀನು ಶೋಕವನ್ನು ತ್ಯಜಿಸು. ನಾನು ನಿನ್ನ ಪ್ರಾಣವಲ್ಲಭೆಯನ್ನು ಅವಶ್ಯವಾಗಿ ತಂದುಕೊಡುವೆನು.॥7-8॥
ಮೂಲಮ್ - 9
ಅನುಮಾನಾತ್ತು ಜಾನಾಮಿ ಮೈಥಿಲೀ ಸಾ ನ ಸಂಶಯಃ ।
ಹ್ರಿಯಮಾಣಾ ಮಯಾ ದೃಷ್ಟಾ ರಕ್ಷಸಾ ರೌದ್ರಕರ್ಮಣಾ ॥
ಮೂಲಮ್ - 10
ಕ್ರೋಶಂತೀ ರಾಮ ರಾಮೇತಿ ಲಕ್ಷ್ಮಣೇತಿ ಚ ವಿಸ್ವರಮ್ ।
ಸ್ಫುರಂತೀ ರಾವಣಸ್ಯಾಂಕೇ ಪನ್ನಗೇಂದ್ರವಧೂರ್ಯಥಾ ॥
ಅನುವಾದ
ಭಯಂಕರ ಕರ್ಮಮಾಡುವ ಯಾರೋ ರಾಕ್ಷಸನು ಯಾವುದೋ ಸ್ತ್ರೀಯನ್ನು ಎತ್ತಿಕೊಂಡು ಹೋಗುವುದನ್ನು ಒಂದು ದಿನ ನಾನು ನೋಡಿದ್ದೆ. ನಾನು ಅನುಮಾನದಿಂದ ಅವಳೇ, ಮಿಥಿಲೇಶಕುಮಾರಿ ಸೀತೆ ಎಂದು ತಿಳಿಯುತ್ತೇನೆ, ಇದರಲ್ಲಿ ಸಂಶಯವೇ ಇಲ್ಲ; ಏಕೆಂದರೆ ಅವಳು ಗದ್ಗದ ಸ್ವರದಲ್ಲಿ ‘ಹಾ ರಾಮಾ! ಹಾ ರಾಮಾ! ಹಾ ಲಕ್ಷ್ಮಣಾ! ಎಂದು ಕೂಗುತ್ತಿದ್ದಳು ಹಾಗೂ ರಾವಣನ ಕೈಯಲ್ಲಿ ನಾಗರಾಜ ವಧೂ (ನಾಗಿಣಿ)ವಿನಂತೆ ಒದ್ದಾಡುತ್ತಾ ಪ್ರಕಾಶಿತವಾಗಿದ್ದಳು.॥9-10॥
ಮೂಲಮ್ - 11
ಆತ್ಮನಾ ಪಂಚಮಂ ಮಾಂ ಹಿ ದೃಷ್ಟ್ವಾ ಶೈಲತಲೇ ಸ್ಥಿತಮ್ ।
ಉತ್ತರೀಯಂ ತಯಾ ತ್ಯಕ್ತಂ ಶುಭಾನ್ಯಾಭರಣಾನಿ ಚ ॥
ಅನುವಾದ
ನಾಲ್ಕು ಮಂತ್ರಿಗಳೊಂದಿಗೆ ಐದನೆಯವನಾದ ನಾನು ಈ ಪರ್ವತದಲ್ಲಿ ಕುಳಿತಿದ್ದೆ. ನನ್ನನ್ನು ನೋಡುತ್ತಲೇ ದೇವೀ ಸೀತೆಯು ಮೇಲ್ಹೊದಿಕೆ ಮತ್ತು ಕೆಲವು ಸುಂದರ ಒಡವೆಗಳನ್ನು ಮೇಲಿನಿಂದ ಬೀಳಿಸಿದಳು.॥11॥
ಮೂಲಮ್ - 12
ತಾನ್ಯಸ್ಮಾಭಿರ್ಗೃಹೀತಾನಿ ನಿಹಿತಾನಿ ಚ ರಾಘವ ।
ಆನಯಿಷ್ಯಮ್ಯಹಂ ತಾನಿ ಪ್ರತ್ಯಭಿಜ್ಞಾತುಮರ್ಹಸಿ ॥
ಅನುವಾದ
ರಘುನಂದನ! ಅವೆಲ್ಲ ವಸ್ತುಗಳು ನಾವು ಇಟ್ಟುಕೊಂಡೆವು. ನಾನು ಈಗಲೇ ಅವನ್ನು ತರುತ್ತೇನೆ, ನೀನು ಅವನ್ನು ಗುರುತಿಸಬಲ್ಲೆ.॥12॥
ಮೂಲಮ್ - 13
ತಮಬ್ರವೀತ್ತತೋ ರಾಮಃ ಸುಗ್ರೀವಂ ಪ್ರಿಯವಾದಿನಮ್ ।
ಆನಯಸ್ವ ಸಖೇ ಶೀಘ್ರಂ ಕಿಮರ್ಥಂ ಪ್ರವಿಲಂಬಸೇ ॥
ಅನುವಾದ
ಆಗ ಶ್ರೀರಾಮನು ಈ ಪ್ರಿಯ ಸಂವಾದ ಹೇಳಿದ ಸುಗ್ರೀವನಲ್ಲಿ ಹೇಳಿದನು - ಸಖನೇ! ಬೇಗ ತೆಗೆದುಕೊಂಡು ಬಾ, ಏಕೆ ತಡ ಮಾಡುತ್ತಿರುವೆ.॥13॥
ಮೂಲಮ್ - 14
ಏವಮುಕ್ತಸ್ತು ಸುಗ್ರೀವಃ ಶೈಲಸ್ಯ ಗಹನಾಂ ಗುಹಾಮ್ ।
ಪ್ರವಿವೇಶ ತತಃ ಶೀಘ್ರಂ ರಾಘವಪ್ರಿಯಕಾಮ್ಯಯಾ ॥
ಮೂಲಮ್ - 15
ಉತ್ತರೀಯಂ ಗೃಹೀತ್ವಾ ತು ಸ ತಾನ್ಯಾಭರಣಾನಿ ಚ ।
ಇದಂ ಪಶ್ಯೇತಿ ರಾಮಾಯ ದರ್ಶಯಾಮಾಸ ವಾನರಃ ॥
ಅನುವಾದ
ಅವನು ಹೀಗೆ ಹೇಳಿದಾಗ ಸುಗ್ರೀವನು ಕೂಡಲೇ ಶ್ರೀರಾಮಚಂದ್ರನಿಗೆ ಪ್ರಿಯವನ್ನು ಮಾಡಲು ಪರ್ವತದ ಒಂದು ಗಹನ ಗುಹೆಗೆ ಹೋಗಿ ಮೇಲ್ಹೊದಿಕೆ ಮತ್ತು ಆ ಆಭೂಷಣಗಳನ್ನು ತೆಗೆದುಕೊಂಡು ಬಂದು-‘ತೆಗೆದುಕೋ ಇದನ್ನು ನೋಡು’ ಎಂದು ಹೇಳಿ ಶ್ರೀರಾಮನಿಗೆ ಎಲ್ಲ ಆಭೂಷಣಗಳನ್ನು ತೋರಿಸಿದನು.॥14-15॥
ಮೂಲಮ್ - 16
ತತೋ ಗೃಹೀತ್ವಾ ವಾಸಸ್ತು ಶುಭಾನ್ಯಭರಣಾನಿ ಚ ।
ಅಭವದ್ಬಾಷ್ಪಸಂರುದ್ಧೋ ನೀಹಾರೇಣೇವ ಚಂದ್ರಮಾಃ ॥
ಅನುವಾದ
ಆ ವಸ್ತ್ರ ಹಾಗೂ ಸುಂದರ ಆಭೂಷಣಗಳನ್ನು ಪಡೆದು ಶ್ರೀರಾಮನು ಮಂಜಿನಿಂದ ಮುಚ್ಚಿದ ಚಂದ್ರನಂತೆ ಕಂಬನಿಗಳಿಂದ ಕೂಡಿದನು. 116॥
ಮೂಲಮ್ - 17
ಸೀತಾಸ್ನೇಹಪ್ರವೃತ್ತೇನ ಸ ತು ಬಾಷ್ಪೇಣ ದೂಷಿತಃ ।
ಹಾ ಪ್ರಿಯೇತಿ ರುದನ್ಧೈರ್ಯಮುತ್ಸೃಜ್ಯ ನ್ಯಪತತ್ಕ್ಷಿತೌ ॥
ಅನುವಾದ
ಸೀತೆಯ ಸ್ನೇಹದಿಂದ ಹರಿಯುತ್ತಿರುವ ಕಂಬನಿಗಳಿಂದ ಅವನ ಮುಖ ಮತ್ತು ವಕ್ಷಃ ಸ್ಥಳವು ಒದ್ದೆಯಾಯಿತು. ಅವನು ‘ಹಾ ಪ್ರಿಯೇ!’ ಎಂದು ಹೇಳಿ ಅಳತೊಡಗಿ, ಧೈರ್ಯವಡಗಿ ನೆಲಕ್ಕೆ ಕುಸಿದನು.॥17॥
ಮೂಲಮ್ - 18
ಹೃದಿ ಕೃತ್ವಾ ಸ ಬಹುಶಸ್ತಮಲಂಕಾರಮುತ್ತಮಮ್ ।
ನಿಶಶ್ವಾಸ ಭೃಶಂ ಸರ್ಪೋ ಬಿಲಸ್ಥ ಇವ ರೋಷಿತಃ ॥
ಅನುವಾದ
ಆ ಉತ್ತಮ ಆಭೂಷಣಗಳನ್ನು ಪದೇ-ಪದೇ ಎದೆಗೊತ್ತಿಕೊಂಡು ಅವನು ಹುತ್ತದಲ್ಲಿ ಕುಳಿತ ರೋಷಗೊಂಡ ಸರ್ಪದಂತೆ ಜೋರು-ಜೋರಾಗಿ ನಿಟ್ಟುಸಿರುಬಿಡತೊಡಗಿದನು.॥18॥
ಮೂಲಮ್ - 19
ಅವಿಚ್ಛಿನ್ನಾಶ್ರುವೇಗಸ್ತು ಸೌಮಿತ್ರಿಂ ವೀಕ್ಷ್ಯಪಾರ್ಶ್ವತಃ ।
ಪರಿದೇವಯಿತುಂ ದೀನಂ ರಾಮಃ ಸಮುಪಚಕ್ರಮೇ ॥
ಅನುವಾದ
ಅವನ ಕಂಬನಿಗಳು ಬೇಗ ನಿಲ್ಲುತ್ತಿರಲಿಲ್ಲ. ತನ್ನ ಬಳಿ ನಿಂತಿರುವ ಲಕ್ಷ್ಮಣನ ಕಡೆಗೆ ನೋಡಿ ಶ್ರೀರಾಮನು ದೀನಭಾವದಿಂದ ವಿಲಾಪಿಸುತ್ತಾ ಹೇಳಿದನು.॥19॥
ಮೂಲಮ್ - 20
ಪಶ್ಯ ಲಕ್ಷ್ಮಣ ವೈದೇಹ್ಯಾ ಸಂತ್ಯಕ್ತಂ ಹ್ರಿಯಮಾಣಯಾ ।
ಉತ್ತರೀಯಮಿದಂ ಭೂಮೌ ಶರೀರಾದ್ ಭೂಷಣಾನಿ ಚ ॥
ಅನುವಾದ
ಲಕ್ಷ್ಮಣ! ನೋಡು, ರಾಕ್ಷಸನು ಕದ್ದುಕೊಂಡು ಹೋಗುವಾಗ ವಿದೇಹನಂದಿನೀ ಸೀತೆಯು ಈ ವಸ್ತ್ರ ಮತ್ತು ಈ ಒಡವೆಗಳನ್ನು ಶರೀರದಿಂದ ತೆಗೆದು ಪೃಥಿವಿಗೆ ಎಸೆದಿರುವಳು.॥20॥
ಮೂಲಮ್ - 21
ಶಾದ್ವಲಿನ್ಯಾಂ ಧ್ರುವಂ ಭೂಮ್ಯಾಂ ಸೀತಯಾ ಹ್ರಿಯಮಾಣಯಾ ।
ಉತ್ಸೃಷ್ಟಂ ಭೂಷಣಮಿದಂ ತಥಾರೂಪಂ ಹಿ ದೃಶ್ಯತೇ ॥
ಅನುವಾದ
ನಿಶಾಚರನು ಕದ್ದುಕೊಂಡು ಹೋದ ಸೀತೆಯು ಎಸೆದ ಈ ಆಭೂಷಣಗಳು ಖಂಡಿತವಾಗಿ ಹುಲ್ಲಿನ ನೆಲದ ಮೇಲೆ ಬಿದ್ದಿರಬೇಕು; ಏಕೆಂದರೆ ಇವುಗಳು ಒಡೆಯದೆ, ತುಂಡಾಗದೆ ಹೇಗಿದ್ದವೋ ಹಾಗೆಯೇ ಇವೆ.॥21॥
ಮೂಲಮ್ - 22½
ಏವಮುಕ್ತಸ್ತು ರಾಮೇಣ ಲಕ್ಷ್ಮಣೋ ವಾಕ್ಯಮಬ್ರವೀತ್ ।
ನಾಹಂ ಜಾನಾಮಿ ಕೇಯೂರೇ ನಾಹಂ ಜಾನಾಮಿ ಕುಂಡಲೇ ॥
ನೂಪುರೇತ್ಪಭಿಜಾನಾಮಿ ನಿತ್ಯಂ ಪಾದಾಭಿನಂದನಾತ್ ।
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಲಕ್ಷ್ಮಣನು ಹೇಳಿದನು - ಅಣ್ಣಾ! ನಾನು ಈ ಕೇಯೂರಗಳು, ಕರ್ಣಕುಂಡಲಗಳು ಯಾರದೆಂದು ನಾನು ತಿಳಿಯೆ; ಆದರೆ ಪ್ರತಿದಿನ ಅತ್ತಿಗೆಯ ಪಾದಗಳಿಗೆ ವಂದಿಸುತ್ತಿದ್ದುದರಿಂದ ನಾನು ಈ ಎರಡು ನೂಪುರಗಳನ್ನು ಗುರುತಿಸುತ್ತೇನೆ.॥22½॥
ಮೂಲಮ್ - 23
ತತಸ್ತು ರಾಘವೋ ವಾಕ್ಯಂ ಸುಗ್ರೀವಮಿದಮಬ್ರವೀತ್ ॥
ಮೂಲಮ್ - 24
ಬ್ರೂಹಿ ಸುಗ್ರೀವ ಕಂ ದೇಶಂ ಹ್ರಿಯಂತೀ ಲಕ್ಷಿತಾ ತ್ವಯಾ ।
ರಕ್ಷಸಾ ರೌದ್ರರೂಪೇಣ ಮಮ ಪ್ರಾಣೈಃ ಪ್ರಿಯಾ ಹೃತಾ ॥
ಅನುವಾದ
ಆಗ ಶ್ರೀರಘುನಾಥನು ಸುಗ್ರೀವನಲ್ಲಿ ಈ ಪ್ರಕಾರ ಹೇಳಿದನು - ಸುಗ್ರೀವ! ಆ ಭಯಂಕರರೂಪೀ ರಾಕ್ಷಸನು ನನ್ನ ಪ್ರಾಣಪ್ರಿಯೆ ಸೀತೆಯನ್ನು ಯಾವ ದಿಕ್ಕಿಗೆ ಕೊಂಡು ಹೋದನು? ನೀನಾದರೋ ನೋಡಿರುವೆ, ಅದನ್ನು ಹೇಳು.॥23-24॥
ಮೂಲಮ್ - 25
ಕ್ವ ವಾ ವಸತಿ ತದ್ರಕ್ಷೋ ಮಹದ್ವ್ಯಸನದಂ ಮಮ ।
ಯನ್ನಿಮಿತ್ತಮಹಂ ಸರ್ವಾನ್ ನಾಶಯಿಷ್ಯಾಮಿ ರಾಕ್ಷಸಾನ್ ॥
ಅನುವಾದ
ನನಗೆ ಮಹಾಸಂಕಟವನ್ನೀಯುವ ಆ ರಾಕ್ಷಸನು ಎಲ್ಲಿ ಇರುವನು? ನಾನು ಕೇವಲ ಅವನ ಅಪರಾಧದಿಂದಾಗಿ ಸಮಸ್ತ ರಾಕ್ಷಸರನ್ನು ವಿನಾಶಮಾಡಿಬಿಡುವೆ.॥25॥
ಮೂಲಮ್ - 26
ಹರತಾ ಮೈಥಿಲೀಂ ಯೇನ ಮಾಂ ಚ ರೋಷಯತಾ ಧ್ರುವಮ್ ।
ಆತ್ಮನೋ ಜೀವಿತಾಂತಾಯ ಮೃತ್ಯುದ್ವಾರಮಪಾವೃತಮ್ ॥
ಅನುವಾದ
ಆ ರಾಕ್ಷಸನು ಮೈಥಿಲಿಯನ್ನು ಅಪಹರಣ ಮಾಡಿ ನನ್ನ ರೋಷವನ್ನು ಹೆಚ್ಚಿಸಿ ನಿಶ್ಚಯವಾಗಿ ತನ್ನ ಜೀವನವನ್ನು ಕೊನೆಗೊಳಿಸಲು ಮೃತ್ಯುವಿನ ಬಾಗಿಲನ್ನು ತೆರೆದಿರುವನು.॥26॥
ಮೂಲಮ್ - 27
ಮಮ ದಯಿತತಮಾ ಹೃತಾ ವನಾದ್-
ರಜನಿಚರೇಣ ವಿಮಥ್ಯ ಯೇನ ಸಾ ।
ಕಥಯ ಮಮ ರಿಪುಂ ತಮದ್ಯ ವೈ
ಪ್ಲವಗಪತೇ ಯಮಸನ್ನಿಧಿಂ ನಯಾಮಿ ॥
ಅನುವಾದ
ವಾನರರಾಜನೇ! ಯಾವ ನಿಶಾಚರನು ನನಗೆ ಮೋಸಮಾಡಿ ನನಗೆ ಅಪಮಾನಮಾಡಿ ನನ್ನ ಪ್ರಿಯತಮೆಯನ್ನು ವನದಿಂದ ಅಪಹರಿಸಿರುವನೋ, ಅವನು ನನ್ನ ಘೋರ ಶತ್ರುವಾಗಿದ್ದಾನೆ. ನೀನು ಅವನು ಎಲ್ಲಿರುವನೆಂದು ತಿಳಿಸು ನಾನು ಈಗಲೇ ಅವನನ್ನು ಯಮನ ಬಳಿಗೆ ಕಳಿಸುತ್ತೇನೆ.॥27॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಆರನೆಯ ಸರ್ಗ ಸಂಪೂರ್ಣವಾಯಿತು.॥6॥