वाचनम्
ಭಾಗಸೂಚನಾ
ಶ್ರೀರಾಮ ಮತ್ತು ಸುಗ್ರೀವನ ಮೈತ್ರಿ, ಶ್ರೀರಾಮನು ವಾಲಿಯನ್ನು ವಧಿಸುವುದಾಗಿ ಪ್ರತಿಜ್ಞೆ ಮಾಡಿದುದು
ಮೂಲಮ್ - 1
ಋಷ್ಯಮೂಕಾತ್ತು ಹನುಮಾನ್ ಗತ್ವಾ ತಂ ಮಲಯಂ ಗಿರಿಮ್ ।
ಆಚಚಕ್ಷೇ ತದಾ ವೀರೌ ಕಪಿರಾಜಾಯ ರಾಘವೌ ॥
ಅನುವಾದ
ಶ್ರೀರಾಮ-ಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಸುಗ್ರೀವನ ವಾಸಸ್ಥಾನದಲ್ಲಿ ಕುಳ್ಳಿರಿಸಿ, ಹನುಮಂತನು ಅಲ್ಲಿಂದ ಮಲಯ ಪರ್ವತಕ್ಕೆ (ಅದು ಋಷ್ಯಮೂಕದ ಒಂದು ಶಿಖರವಾಗಿತ್ತು) ಹೋಗಿ ವಾನರರಾಜ ಸುಗ್ರೀವನಿಗೆ ಆ ಇಬ್ಬರು ರಘುವಂಶೀ ವೀರರನ್ನು ಪರಿಚಯಿಸುತ್ತಾ ಹೀಗೆ ಹೇಳಿದನು.॥1॥
ಮೂಲಮ್ - 2
ಅಯಂ ರಾಮೋ ಮಹಾಪ್ರಾಜ್ಞಃ ಸಂಪ್ರಾಪ್ತೋ ದೃಢವಿಕ್ರಮಃ ।
ಲಕ್ಷ್ಮಣೇನ ಸಹ ಭ್ರಾತ್ರಾ ರಾಮೋಽಯಂ ಸತ್ಯವಿಕ್ರಮಃ ॥
ಅನುವಾದ
ಮಹಾಪ್ರಾಜ್ಞನೇ! ಅಮೋಘ ಹಾಗೂ ಅತ್ಯಂತ ದೃಢ ಪರಾಕ್ರಮಿಯಾದ ಶ್ರೀರಾಮಚಂದ್ರನು ತನ್ನ ತಮ್ಮನಾದ ಲಕ್ಷ್ಮಣನೊಂದಿಗೆ ಆಗಮಿಸಿರುವನು.॥2॥
ಮೂಲಮ್ - 3
ಇಕ್ಷ್ವಾಕೂಣಾಂ ಕುಲೇ ಜಾತೋ ರಾಮೋ ದಶರಥಾತ್ಮಜಃ ।
ಧರ್ಮೇ ನಿಗದಿತಶ್ಚೈವ ಪಿತುರ್ನಿರ್ದೇಶಕಾರಕಃ ॥
ಅನುವಾದ
ಈ ಶ್ರೀರಾಮನು ಇಕ್ಷ್ವಾಕುವಂಶದಲ್ಲಿ ಆವಿರ್ಭವಿಸಿರುವನು. ದಶರಥ ಮಹಾರಾಜರ ಪುತ್ರನು ಮತ್ತು ಸ್ವಧರ್ಮಪಾಲನೆಗಾಗಿ ಜಗತ್ತಿನಲ್ಲಿ ವಿಖ್ಯಾತನಾಗಿರುವನು. ಪಿತೃವಾಕ್ಯ ಪರಿಪಾಲನೆಗಾಗಿ ಈ ವನಕ್ಕೆ ಆಗಮಿಸಿರುವನು.॥3॥
ಮೂಲಮ್ - 4
ರಾಜಸೂಯಾಶ್ವಮೇಧೈಶ್ಚ ವಹ್ನಿರ್ಯೇನಾಭಿತರ್ಪಿತಃ ।
ದಕ್ಷಿಣಾಶ್ಚ ತಥೋತ್ಸೃಷ್ಟಾ ಗಾವಃ ಶತಸಹಸ್ರಶಃ ॥
ಮೂಲಮ್ - 5
ತಪಸಾ ಸತ್ಯವಾಕ್ಯೇನ ವಸುಧಾ ಯೇನ ಪಾಲಿತಾ ।
ಸ್ತ್ರೀಹೇತೋಸ್ತಸ್ಯ ಪುತ್ರೋಽಯಂ ರಾಮೋಽರಣ್ಯಂಸಮಾಗತಃ ॥
ಅನುವಾದ
ಯಾರು ರಾಜಸೂಯ ಮತ್ತು ಅಶ್ವಮೇಧ ಯಜ್ಞಗಳ ಅನುಷ್ಠಾನ ಮಾಡಿ ಯಜ್ಞನಾರಾಯಣನನ್ನು ತೃಪ್ತಿಪಡಿಸಿದ್ದನೋ, ಬ್ರಾಹ್ಮಣರಿಗೆ ಹೇರಳ ದಕ್ಷಿಣೆ ಕೊಟ್ಟಿದ್ದನೋ, ಲಕ್ಷ ಗೋವುಗಳನ್ನು ದಾನ ಮಾಡಿದ್ದನೋ, ಯಾರು ಸತ್ಯಭಾಷಣ ಪೂರ್ವಕ ತಪಸ್ಸಿನಿಂದ ವಸುಂಧರೆಯನ್ನು ಪಾಲಿಸಿದ್ದನೋ, ಆ ದಶರಥ ಮಹಾರಾಜರ ಪುತ್ರನಾದ ಈ ಶ್ರೀರಾಮನು, ತಂದೆಯವರು ತನ್ನ ಪತ್ನೀ ಕೈಕೇಯಿಗೆ ಕೊಟ್ಟ ವರವನ್ನು ಪಾಲಿಸುವ ನಿಮಿತ್ತದಿಂದ ಈ ವನಕ್ಕೆ ಬಂದಿರುವನು.॥4-5॥
ಮೂಲಮ್ - 6
ತಸ್ಯಾಸ್ಯ ವಸತೋಽರಣ್ಯೇ ನಿಯತಸ್ಯ ಮಹಾತ್ಮನಃ ।
ರಾವಣೇನ ಹೃತಾ ಭಾರ್ಯಾ ಸ ತ್ವಾಂ ಶರಣಮಾಗತಃ ॥
ಅನುವಾದ
ಮಹಾತ್ಮಾ ಶ್ರೀರಾಮನು ಮುನಿಗಳಂತೆ ನಿಯಮಗಳನ್ನು ಪಾಲಿಸುತ್ತಾ ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದನು. ಒಂದು ದಿನ ರಾವಣನು ಬಂದು ಬರಿದಾದ ಆಶ್ರಮದಿಂದ ಇವನ ಪತ್ನೀ ಸೀತೆಯನ್ನು ಅಪಹರಿಸಿದನು. ಆಕೆಯನ್ನು ಹುಡುಕುತ್ತಾ ಇವನು ನಿಮ್ಮ ಆಶ್ರಯಕ್ಕೆ ಬಂದಿರುವನು.॥6॥
ಮೂಲಮ್ - 7
ಭವತಾ ಸಖ್ಯಕಾಮೌ ತೌ ಭ್ರಾತರೌ ರಾಮಲಕ್ಷ್ಮಣೌ ।
ಪ್ರಗೃಹ್ಯ ಚಾರ್ಚಯಸ್ವೈತೌ ಪೂಜನೀಯ ತಮಾವುಭೌ ॥
ಅನುವಾದ
ಈ ರಾಮ-ಲಕ್ಷ್ಮಣರು ನಿನ್ನೊಂದಿಗೆ ಮೈತ್ರಿ ಮಾಡಲು ಬಯಸುವರು. ನೀವು ಹೋಗಿ ಇವರನ್ನು ತನ್ನವರಾಗಿಸಿಕೊಂಡು ಇವರನ್ನು ಯಥೋಚಿತವಾಗಿ ಸತ್ಕರಿಸಿರಿ; ಏಕೆಂದರೆ ಇವರಿಬ್ಬರೂ ವೀರರ ನಮಗೆ ಪರಮ ಪೂಜನೀಯರಾಗಿದ್ದಾರೆ.॥7॥
ಮೂಲಮ್ - 8
ಶ್ರುತ್ವಾ ಹನೂಮತೋ ವಾಕ್ಯಂ ಸುಗ್ರೀವೋ ವಾನರಾಧಿಪಃ ।
ದರ್ಶನೀಯತಮೋ ಭೂತ್ವಾ ಪ್ರೀತ್ಯೋವಾಚ ಚ ರಾಘವಮ್ ॥
ಅನುವಾದ
ಹನುಮಂತನ ಮಾತನ್ನು ಕೇಳಿ ವಾನರರಾಜ ಸುಗ್ರೀವನು ಸ್ವೇಚ್ಛೆಯಿಂದ ಅತ್ಯಂತ ದರ್ಶನೀಯ ರೂಪಧರಿಸಿಕೊಂಡು ಶ್ರೀರಘುನಾಥನ ಬಳಿಗೆ ಬಂದು ತುಂಬಾ ಪ್ರೇಮದಿಂದ ಹೇಳಿದನು.॥8॥
ಮೂಲಮ್ - 9
ಭವಾನ್ಧರ್ಮವನೀತಶ್ಚ ಸುತಪಾಃ ಸರ್ವವತ್ಸಲಃ ।
ಆಖ್ಯಾತಾ ವಾಯುಪುತ್ರೇಣ ತತ್ತ್ವತೋ ಮೇ ಭವದ್ಗುಣಾಃ ॥
ಅನುವಾದ
ಪ್ರಭೋ! ನೀನು ಧರ್ಮದ ವಿಷಯದಲ್ಲಿ ಚೆನ್ನಾಗಿ ಸುಶಿಕ್ಷಿತನೂ, ಪರಮ ತೇಜಸ್ವಿಗಳೂ, ಎಲ್ಲರ ಮೇಲೆ ದಯೆ ಮಾಡುವವನೂ, ಆಗಿರುವೆ. ಪವನಕುಮಾರ ಹನುಮಂತನು ನನ್ನಲ್ಲಿ ನಿನ್ನ ಯಥಾರ್ಥ ಗುಣಗಳನ್ನು ವರ್ಣಿಸಿರುವನು.॥9॥
ಮೂಲಮ್ - 10
ತನ್ಮಮೈವೈಷ ಸತ್ಕಾರೋ ಲಾಭಶ್ಚೈವೋತ್ತಮಃ ಪ್ರಭೋ ।
ಯತ್ತ್ವಮಿಚ್ಛಸಿ ಸೌಹಾರ್ದಂ ವಾನರೇಣ ಮಯಾ ಸಹ ॥
ಅನುವಾದ
ಭಗವಂತನೇ! ನಾನು ವಾನರನಾಗಿದ್ದೇನೆ, ನೀನು ನರನಾಗಿರುವೆ, ನನ್ನೊಂದಿಗೆ ಮೈತ್ರಿ ಮಾಡಲು ನೀನು ಬಯಸುವುದೇ ನನ್ನ ಸತ್ಕಾರವಾದಂತಾಯಿತು ನನಗೂ ಕೂಡ ಉತ್ತಮ ಲಾಭ ಪ್ರಾಪ್ತವಾಗುವುದು.॥10॥
ಮೂಲಮ್ - 11
ರೋಚತೇ ಯದಿ ಮೇ ಸಖ್ಯಂ ಬಾಹುರೇಷ ಪ್ರಸಾರಿತಃ ।
ಗೃಹ್ಯತಾಂ ಪಾಣಿನಾ ಪಾಣಿರ್ಮರ್ಯಾದಾ ಬಧ್ಯತಾಂ ಧ್ರುವಾ ॥
ಅನುವಾದ
ನನ್ನ ಮಿತ್ರತೆಯು ನಿಮಗೆ ಸರಿ ಕಂಡರೆ ನನ್ನ ಈ ಕೈಯನ್ನು ಚಾಚಿರುವೆನು. ನೀನು ಇದನ್ನು ಹಿಡಿದುಕೊಳ್ಳಿರಿ ಹಾಗೂ ಪರಸ್ಪರ ಮೈತ್ರಿಯು ಕಡಿಯದ ಸಂಬಂಧವು ಶಾಶ್ವತವಾಗಿ ಇರಲಿ.॥11॥
ಮೂಲಮ್ - 12½
ಏತತ್ತು ವಚನಂ ಶ್ರುತ್ವಾ ಸುಗ್ರೀವಸ್ಯ ಸುಭಾಷಿತಮ್ ।
ಸಂಪ್ರಹೃಷ್ಟಮನಾ ಹಸ್ತಂ ಪೀಡಯಾಮಾಸ ಪಾಣಿನಾ ॥
ಹೃಷ್ಟಃ ಸೌಹೃದಮಾಲಂಬ್ಯ ಪರ್ಯಷ್ವಜತ ಪೀಡಿತಮ್ ।
ಅನುವಾದ
ಸುಗ್ರೀವನ ಈ ಸುಂದರ ಮಾತನ್ನು ಕೇಳಿ ಭಗವಾನ್ ಶ್ರೀರಾಮನ ಮನಸ್ಸು ಪ್ರಸನ್ನವಾಯಿತು. ಅವನು ತನ್ನ ಕೈಯಿಂದ ಅವನ ಕೈಹಿಡಿದು, ಸೌಹಾರ್ದವನ್ನು ಆಶ್ರಯಿಸಿ ಬಹಳ ಹರ್ಷದಿಂದ ಶೋಕಪೀಡಿತ ಸುಗ್ರೀವನನ್ನು ಬಿಗಿದಪ್ಪಿಕೊಂಡನು.॥12½॥
ಮೂಲಮ್ - 13½
ತತೋ ಹನೂಮಾನ್ ಸಂತ್ಯಜ್ಯ ಭಿಕ್ಷುರೂಪಮರಿಂದಮಃ ॥
ಕಾಷ್ಠಯೋಃ ಸ್ವೇನ ರೂಪೇಣ ಜನಯಾಮಾಸ ಪಾವಕಮ್ ।
ಅನುವಾದ
(ಸುಗ್ರೀವನ ಬಳಿಗೆ ಹೋಗುವ ಮೊದಲು ಹನುಮಂತನು ಪುನಃ ಭಿಕ್ಷುರೂಪವನ್ನು ಧರಿಸಿದ್ದನು.) ಶ್ರೀರಾಮ ಮತ್ತು ಸುಗ್ರೀವನ ಮೈತ್ರಿಯ ಸಮಯ ಶತ್ರುಸೂದನ ಹನುಮಂತನು ಭಿಕ್ಷುರೂಪವನ್ನು ತ್ಯಜಿಸಿ, ತನ್ನ ಸಹಜರೂಪವನ್ನು ಧರಿಸಿ, ಎರಡು ಕಟ್ಟಿಗೆಗಳನ್ನು ತಿಕ್ಕಿ ಬೆಂಕಿಯನ್ನು ಉಂಟುಮಾಡಿದನು.॥13½॥
ಮೂಲಮ್ - 14½
ದೀಪ್ಯಮಾನಂ ತತೋ ವಹ್ನಿಂ ಪುಷ್ಪೈರಭ್ಯರ್ಚ್ಯ ಸತ್ಕೃತಮ್ ॥
ತಯೋರ್ಮಧ್ಯೇ ತು ಸುಪ್ರೀತೋ ನಿದಧೌ ಸುಸಮಾಹಿತಃ ।
ಅನುವಾದ
ಅನಂತರ ಆ ಅಗ್ನಿಯನ್ನು ಪ್ರಜ್ವಲಿಸಿ, ಹೂವುಗಳಿಂದ ಅಗ್ನಿನಾರಾಯಣನನ್ನು ಆದರದಿಂದ ಪೂಜಿಸಿ, ಮತ್ತೆ ಏಕಾಗ್ರಚಿತ್ತನಾಗಿ ಶ್ರೀರಾಮ ಮತ್ತು ಸುಗ್ರೀವರ ನಡುವೆ ಸಾಕ್ಷಿಯಾಗಿ ಅಗ್ನಿಯನ್ನು ಸ್ಥಾಪಿಸಿದನು.॥14½॥
ಮೂಲಮ್ - 15½
ತತೋಽಗ್ನಿಂ ದೀಪ್ಯಮಾನಂ ತೌ ಚಕ್ರತುಶ್ಯ ಪ್ರದಕ್ಷಿಣಮ್ ॥
ಸುಗ್ರೀವೋ ರಾಘವಶ್ಚೈವ ವಯಸ್ಯತ್ವಮುಪಾಗತೌ ।
ಅನುವಾದ
ಬಳಿಕ ಸುಗ್ರೀವ ಹಾಗೂ ಶ್ರೀರಾಮಚಂದ್ರನು ಆ ಪ್ರಜ್ವಲಿತ ಅಗ್ನಿಗೆ ಪ್ರದಕ್ಷಿಣೆ ಮಾಡಿ ಇಬ್ಬರೂ ಪರಸ್ಪರ ಮಿತ್ರರಾದರು.॥15½॥
ಮೂಲಮ್ - 16½
ತತಃ ಸುಪ್ರೀತಮನಸೌ ತಾವುಭೌ ಹರಿರಾಘವೌ ॥
ಅನ್ಯೋನ್ಯಮಭಿವೀಕ್ಷಂತೌ ನ ತೃಪ್ತಿಮುಪಜಗ್ಮತುಃ ।
ಅನುವಾದ
ಇದರಿಂದ ವಾನರರಾಜನಿಗೆ ಮತ್ತು ಶ್ರೀರಘುನಾಥನಿಗೆ ಹೃದಯದಲ್ಲಿ ಬಹಳ ಪ್ರಸನ್ನತೆ ಉಂಟಾಯಿತು. ಅವರು ಪರಸ್ಪರ ನೋಡುತ್ತಾ ತೃಪ್ತರಾಗುತ್ತಿರಲಿಲ್ಲ.॥16½॥
ಮೂಲಮ್ - 17½
ತ್ವ ವಯಸ್ಯೋಽಸಿ ಹೃದ್ಯೋ ಮೇ ಹ್ಯೇಕಂ ದುಃಖಂ ಸುಖಂ ಚ ನೌ ॥
ಸುಗ್ರೀವೋ ರಾಘವಂ ವಾಕ್ಯಮಿತ್ಯುವಾಚ ಪ್ರಹೃಷ್ಟವತ್ ।
ಅನುವಾದ
ಆಗ ಸುಗ್ರೀವನು ಶ್ರೀರಾಮನಲ್ಲಿ ಪ್ರಸನ್ನತೆಯಿಂದ ಹೇಳಿದನು - ‘ನೀನು ನನ್ನ ಪ್ರಿಯಮಿತ್ರನಾಗಿರುವೆ’. ಇಂದಿನಿಂದ ನಮ್ಮಿಬ್ಬರ ಸುಖ-ದುಃಖಗಳು ಸಮಾನವಾಗಿವೆ.॥17½॥
ಮೂಲಮ್ - 18½
ತತಃ ಸುಪರ್ಣಬಹುಲಾಂ ಭಂತ್ತ್ವಾಶಾಖಾಂ ಸುಪುಷ್ಟಿತಾಮ್ ॥
ಸಾಲಸ್ಯಾಸ್ತೀರ್ಯ ಸುಗ್ರೀವೋ ನಿಷಸಾದ ಸರಾಘವಃ ।
ಅನುವಾದ
ಹೀಗೆ ಹೇಳಿ ಸುಗ್ರೀವನು ಹೆಚ್ಚು ಎಲೆ-ಪುಷ್ಪಗಳಿರುವ ಸಾಲವೃಕ್ಷದ ಒಂದು ರೆಂಬೆಯನ್ನು ಮುರಿದು ಹಾಸಿ ಶ್ರೀರಾಮಚಂದ್ರನನೊಂದಿಗೆ ಅದರ ಮೇಲೆ ಕುಳಿತುಕೊಂಡನು.॥18½॥
ಮೂಲಮ್ - 19½
ಲಕ್ಷ್ಮಣಾಯಾಥ ಸಂಹೃಷ್ಟೋ ಹನುಮಾನ್ಮಾರುತಾತ್ಮಜಃ ॥
ಶಾಖಾಂ ಚಂದನವೃಕ್ಷಸ್ಯ ದದೌ ಪರಮಪುಷ್ಟಿತಾಮ್ ।
ಅನುವಾದ
ಬಳಿಕ ಪವನಪುತ್ರ ಹನುಮಂತನು ಅತ್ಯಂತ ಪ್ರಸನ್ನನಾಗಿ ಗಂಧದ ಮರದ ಅನೇಕ ಹೂವುಗಳಿದ್ದ ಒಂದು ರೆಂಬೆಯನ್ನು ಕಿತ್ತು ಲಕ್ಷ್ಮಣನಿಗೆ ಕುಳಿತುಕೊಳ್ಳಲು ನೀಡಿದನು.॥19½॥
ಮೂಲಮ್ - 20½
ತತಃ ಪ್ರಹೃಷ್ಟಃ ಸುಗ್ರೀವಃ ಶ್ಲಕ್ಷ್ಣಂ ಮಧುರಯಾ ಗಿರಾ ॥
ಪ್ರತ್ಯುವಾಚ ತದಾ ರಾಮಂ ಹರ್ಷವ್ಯಾಕುಲಲೋಚನಃ ।
ಅನುವಾದ
ಅನಂತರ ಹರ್ಷಗೊಂಡು ಅರಳಿದ ನೇತ್ರಗಳಿಂದ ಸುಗ್ರೀವನು ಭಗವಾನ್ ಶ್ರೀರಾಮನಲ್ಲಿ ಸ್ನಿಗ್ಧ ಮಧುರ ವಾಣಿಯಲ್ಲಿ ಹೇಳಿದನು.॥20½॥
ಮೂಲಮ್ - 21½
ಅಹಂ ವಿನಿಕೃತೋ ರಾಮ ಚರಾಮೀಹ ಭಯಾರ್ದಿತಃ ॥
ಹೃತಭಾರ್ಯೋ ವನೇ ತ್ರಸ್ಥೋ ದುರ್ಗಮೇತದುಪಾಶ್ರಿತಃ ।
ಅನುವಾದ
ಶ್ರೀರಾಮ! ನಾನು ಮನೆಯಿಂದ ಹೊರ ಹಾಕಲ್ಪಟ್ಟಿರುವೆನು ಮತ್ತು ಭಯದಿಂದ ಪೀಡಿತನಾಗಿ ಇಲ್ಲಿ ಸಂಚರಿಸುತ್ತಿದ್ದೇನೆ. ನನ್ನ ಪತ್ನಿಯನ್ನು ನನ್ನಿಂದ ಕಿತ್ತುಕೊಂಡಿರುವನು. ನಾನು ಆತಂಕಿತನಾಗಿ ವನದಲ್ಲಿ ಈ ದುರ್ಗಮ ಪರ್ವತವನ್ನು ಆಶ್ರಯಿಸಿರುವೆನು.॥21½॥
ಮೂಲಮ್ - 22½
ಸೋಽಹಂ ತ್ರಸ್ತೋ ವನೇ ಭೀತೋ ವಸಾಮ್ಯುದ್ ಭ್ರಾಂತಚೇತನಃ ॥
ವಾಲಿನಾ ನಿಕೃತೋ ಭ್ರಾತ್ರಾ ಕತವೈರಶ್ಚ ರಾಘವ ।
ಅನುವಾದ
ರಘುನಂದನ! ನನ್ನ ಅಣ್ಣ ವಾಲಿಯು ನನ್ನನ್ನು ಮನೆಯಿಂದ ಹೊರಹಾಕಿ ನನ್ನೊಂದಿಗೆ ವೈರ ಕಟ್ಟಿಕೊಂಡಿರುವನು. ಅವನ ಭಯದಿಂದ ಉದ್ಭ್ರಾಂತಚಿತ್ತನಾಗಿ ನಾನು ಈ ಕಾಡಿನಲ್ಲಿ ವಾಸಿಸುತ್ತಿದ್ದೇನೆ.॥22½॥
ಮೂಲಮ್ - 23½
ವಾಲಿನೋ ಮೇ ಮಹಾಭಾಗ ಭಯಾರ್ತಸ್ಯಾಭಯಂ ಕುರು ॥
ಕರ್ತುಮರ್ಹಸಿ ಕಾಕುತ್ಸ್ಥ ಭಯಂ ಮೇ ನ ಭವೇದ್ಯಥಾ ।
ಅನುವಾದ
ಮಹಾಭಾಗ! ವಾಲಿಯ ಭಯದಿಂದ ಪೀಡಿತನಾದ ಸೇವಕನಾದ ನನಗೆ ನೀನು ಅಭಯ ದಾನಕೊಡು. ಕಾಕುತ್ಸ್ಥನೇ! ನನಗೆ ಯಾವುದೇ ಭಯವು ಇರದಂತೆ ನೀನು ಮಾಡಬೇಕು.॥23½॥
ಮೂಲಮ್ - 24½
ಏವಮುಕ್ತಸ್ತು ತೇಜಸ್ವೀ ಧರ್ಮಜ್ಞೋ ಧರ್ಮವತ್ಸಲಃ ॥
ಪ್ರತ್ಯಭಾಷತ ಕಾಕುತ್ಸ್ಥಃ ಸುಗ್ರೀವಂ ಪ್ರಹಸನ್ನಿವ ।
ಅನುವಾದ
ಸುಗ್ರೀವನು ಹೀಗೆ ಹೇಳಿದಾಗ ಧರ್ಮದ ಜ್ಞಾತಾ, ಧರ್ಮವತ್ಸಲ, ಕಕುತ್ಸ್ಥ ಕುಲಭೂಷಣ ತೇಜಸ್ವೀ ಶ್ರೀರಾಮನು ನಗುತ್ತಾ ಸುಗ್ರೀವನಲ್ಲಿ ಹೀಗೆ ಉತ್ತರಿಸಿದನು.॥24½॥
ಮೂಲಮ್ - 25½
ಉಪಕಾರಫಲಂ ಮಿತ್ರಂ ವಿದಿತಂ ಮೇ ಮಹಾಕಪೇ ॥
ವಾಲಿನಂ ತಂ ವಧಿಷ್ಯಾಮಿ ತವ ಭಾರ್ಯಾಪಹಾರಿಣಮ್ ।
ಅನುವಾದ
ಮಹಾಕಪಿಯೇ! ಮಿತ್ರನು ಉಪಕಾರರೂಪೀ ಫಲವನ್ನು ಕೊಡುವವನು ಎಂಬುದು ನನಗೆ ತಿಳಿದಿದೆ. ನಾನು ನಿನ್ನ ಪತ್ನಿಯನ್ನು ಅಪಹರಿಸಿದ ವಾಲಿಯ ವಧೆಮಾಡುವೆನು.॥25½॥
ಮೂಲಮ್ - 26
ಅಮೋಘಾಃ ಸೂರ್ಯಸಂಕಾಶಾ ಮೇಮೇ ನಿಶಿತಾಃ ಶರಾಃ ॥
ಮೂಲಮ್ - 27½
ತಸ್ಮಿನ್ವಾಲಿನಿ ದುರ್ವೃತ್ತೇ ನಿಪತಿಷ್ಯಂತಿ ವೇಗತಾಃ ।
ಕಂಕಪತ್ರಪ್ರತಿಚ್ಛನ್ನಾ ಮಹೇಂದ್ರಾಶನಿಸಂನಿಭಾಃ ॥
ತೀಕ್ಷ್ಣಾಗ್ರಾ ಋಜುಪರ್ವಾಣಃ ಸರೋಷಾ ಭುಜಗಾ ಇವ ।
ಅನುವಾದ
ಸೂರ್ಯತುಲ್ಯ ತೇಜಸ್ವೀ ಅಮೋಘ ವೇಗಶಾಲೀ, ಬಾಣಗಳ ಸಂಗ್ರಹ ನನ್ನ ಬತ್ತಳಿಕೆಯಲ್ಲಿ ಇವೆ. ಅವುಗಳು ಎಂದೂ ನಿಷ್ಪಲವಾಗುವುದಿಲ್ಲ. ಇವುಗಳಲ್ಲಿ ಕಂಕಪಕ್ಷಿಯ ಗರಿಕಟ್ಟಲಾಗಿದೆ, ಅದರಿಂದ ಅವು ಆಚ್ಛಾದಿತವಾಗಿವೆ. ಇವುಗಳ ಅಗ್ರಭಾಗ ತೀಕ್ಷ್ಣವಾಗಿದ್ದು, ಗಂಟುಗಳು ನೇರವಾಗಿವೆ. ಇವು ರೋಷಗೊಂಡ ಸರ್ಪಗಳಂತೆ ಹೊರಟು, ಇಂದ್ರನ ವಜ್ರದಂತೆ ಭಯಂಕರ ಏಟು ಕೊಡುತ್ತವೆ. ಆ ದುರಾಚಾರೀ ವಾಲಿಯ ಮೇಲೆ ನನ್ನ ಈ ಬಾಣಗಳು ಅವಶ್ಯವಾಗಿ ಬೀಳುವವು.॥26-27॥
ಮೂಲಮ್ - 28½
ತಮದ್ಯ ವಾಲಿನಂ ಪಶ್ಯ ತೀಕ್ಷ್ಣೈರಾಶೀ ವಿಷೋಪಮೈಃ ॥
ಶರೈರ್ವಿನಿಹತಂ ಭೂಮೌ ಪ್ರಕೀರ್ಣಮಿವ ಪರ್ವತಮ್ ।
ಅನುವಾದ
ಇಂದು ನೋಡು, ನಾನು ನನ್ನ ವಿಷಧರ ಸರ್ಪಗಳಂತಿರುವ ಹರಿತವಾದ ಬಾಣಗಳನ್ನು ಪ್ರಯೋಗಿಸಿ ವಾಲಿಯನ್ನು ಧರಾಶಾಯಿಯಾಗಿಸುವೆನು. ಅವನು ಇಂದ್ರನ ವಜ್ರದಿಂದ ಪುಡಿಯಾದ ಪರ್ವತದಂತೆ ಕಂಡುಬಂದಾನು.॥28॥
ಮೂಲಮ್ - 29
ಸ ತು ತದ್ವಚನಂ ಶ್ರುತ್ವಾ ರಾಘವಸ್ಯಾತ್ಮನೋ ಹಿತಮ್ ।
ಸುಗ್ರೀವಃ ಪರಮಪ್ರೀತಃ ಪರಮಂ ವಾಕ್ಯಮಬ್ರವೀತ್ ॥
ಅನುವಾದ
ಶ್ರೀರಘುನಾಥನು ಆಡಿದ ತನ್ನ ಹಿತದ ಮಾತನ್ನು ಕೇಳಿ ಸುಗ್ರೀವನಿಗೆ ಬಹಳ ಸಂತೋಷವಾಯಿತು. ಅವನು ಉತ್ತಮ ವಾಣಿಯಿಂದ ಇಂತೆಂದನು.॥29॥
ಮೂಲಮ್ - 30
ತವ ಪ್ರಸಾದೇನ ನೃಸಿಂಹ ವೀರ
ಪ್ರಿಯಾಂ ಚ ರಾಜ್ಯಂ ಚ ಸಮಾಪ್ನುಯಾಮಹಮ್ ।
ತಥಾ ಕುರು ತ್ವಂ ನರದೇವ ವೈರಿಣಂ
ಯಥಾ ನ ಹಿಂಸ್ಯಾತ್ ಸ ಪುನರ್ಮಮಾಗ್ರಜಮ್ ॥
ಅನುವಾದ
ವೀರ ಪುರುಷಸಿಂಹನೇ! ನಾನು ನಿನ್ನ ಕೃಪೆಯಿಂದ ನನ್ನ ಪ್ರಿಯ ಪತ್ನಿಯನ್ನು, ರಾಜ್ಯವನ್ನೂ ಪಡೆದುಕೊಳ್ಳುವಂತಹ ಪ್ರಯತ್ನಮಾಡು. ನರದೇವ! ನನ್ನ ಅಣ್ಣ ವೈರಿಯಾಗಿದ್ದಾನೆ. ಅವನು ನನ್ನನ್ನು ಕೊಲ್ಲದಂತೆ ಅವನ ವ್ಯವಸ್ಥೆ ಮಾಡಿಬಿಡು.॥30॥
ಮೂಲಮ್ - 31
ಸೀತಾಕಪೀಂದ್ರಕ್ಷಣದಾಚರಾಣಾಂ
ರಾಜೀವಹೇಮಜ್ವಲನೋಪಮಾನಿ ।
ಸುಗ್ರೀವರಾಮಪ್ರಣಯಪ್ರಸಂಗೇ
ವಾಮಾನಿ ನೇತ್ರಾಣಿ ಸಮಂ ಸ್ಫುರಂತಿ ॥
ಅನುವಾದ
ಸುಗ್ರೀವ ಮತ್ತು ಶ್ರೀರಾಮನ ಈ ಪ್ರೇಮಪೂರ್ಣ ಮೈತ್ರಿಯ ಪ್ರಸಂಗದಲ್ಲಿ ಸೀತೆಯ ಅರಳಿದ ಕಮಲದಂತಹ, ಕಪಿರಾಜ ವಾಲಿಯ ಸುವರ್ಣದಂತಹ, ನಿಶಾಚರರ ಉರಿಯುವ ಬೆಂಕಿಯಂತಿರುವ ಎಡಕಣ್ಣುಗಳು ಒಮ್ಮೆಗೆ ಸ್ಫುರಿಸಿದವು.॥31॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐದನೆಯ ಸರ್ಗ ಸಂಪೂರ್ಣವಾಯಿತು.॥5॥