००४ राम-लक्ष्मणयोः सुग्रीवान्तिके नयनम्

वाचनम्
ಭಾಗಸೂಚನಾ

ತಾವು ಕಾಡಿಗೆ ಬಂದುದರ ಕಾರಣವನ್ನು ಮತ್ತು ಅರಣ್ಯದಲ್ಲಿ ಸೀತೆಯು ಅಪಹೃತಳಾದುದನ್ನು ಲಕ್ಷ್ಮಣನು ಹನುಮಂತನಿಗೆ ಹೇಳಿದುದು, ಸೀತೆಯನ್ನು ಹುಡುಕಲು ಸುಗ್ರೀವನ ಸಹಕಾರವನ್ನು ಅಪೇಕ್ಷಿಸಿದುದು, ಹನುಮಂತನು ಅವರಿಗೆ ಆಶ್ವಾಸನೆಯನ್ನಿತ್ತು ಅವರಿಬ್ಬರನ್ನು ಜೊತೆಗೆ ಕರೆದುಕೊಂಡು ಹೋದುದು

ಮೂಲಮ್ - 1

ತತಃ ಪ್ರಹೃಷ್ಟೋ ಹನುಮಾನ್ ಕೃತ್ಯವಾನಿತಿ ತದ್ವಚಃ ।
ಶ್ರುತ್ವಾ ಮಧುರಭಾವಂಚ ಸುಗ್ರೀವಂ ಮನಸಾ ಗತಃ ॥

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿ ಸುಗ್ರೀವನ ವಿಷಯದಲ್ಲಿ ಅವರ ಸೌಮ್ಯಭಾವವನ್ನು ತಿಳಿದು, ಇವರಿಗೂ ಸುಗ್ರೀವನಿಂದ ಯಾವುದೋ ಅವಶ್ಯಕ ಕಾರ್ಯವಿದೆ ಎಂದು ತಿಳಿದು ಹನುಮಂತನಿಗೆ ಬಹಳ ಸಂತೋಷವಾಯಿತು. ಅವನು ಮನಸ್ಸಿನಲ್ಲೇ ಸುಗ್ರೀವನನ್ನು ಸ್ಮರಿಸಿದನು.॥1॥

ಮೂಲಮ್ - 2

ಭಾವ್ಯೋ ರಾಜ್ಯಾಗಮಸ್ತಸ್ಯ ಸುಗ್ರೀವಸ್ಯ ಮಹಾತ್ಮನಃ ।
ಯದಯಂ ಕೃತ್ಯವಾನ್ ಪ್ರಾಪ್ತಃ ಕೃತ್ಯಂ ಚೈತದುಪಾಗತಮ್ ॥

ಅನುವಾದ

ಇನ್ನು ಖಂಡಿತವಾಗಿ ಮಹಾಮನಾ ಸುಗ್ರೀವನಿಗೆ ರಾಜ್ಯದ ಪ್ರಾಪ್ತಿಯಾಗುವುದು; ಏಕೆಂದರೆ ಈ ಮಹಾನುಭಾವರು ಯಾವುದೇ ಕಾರ್ಯದಿಂದ ಅಥವಾ ಪ್ರಯೋಜನದಿಂದ ಇಲ್ಲಿಗೆ ಬಂದಿರುವರು ಹಾಗೂ ಈ ಕಾರ್ಯವು ಸುಗ್ರೀವನಿಂದಲೇ ಸಿದ್ಧವಾಗುವುದಿದೆ.॥2॥

ಮೂಲಮ್ - 3

ತತಃ ಪರಮಸಂಹೃಷ್ಟೋ ಹನೂಮಾನ್ ಪ್ಲವಗೋತ್ತಮಃ ।
ಪ್ರತ್ಯುವಾಚ ತತೋ ವಾಕ್ಯಂ ರಾಮಂ ವಾಕ್ಯವಿಶಾರದಃ ॥

ಅನುವಾದ

ಅನಂತರ ವಾಕ್ಯವಿಶಾರದ ವಾನರಶ್ರೇಷ್ಠ ಹನುಮಂತನು ಅತ್ಯಂತ ಹರ್ಷಗೊಂಡು ಶ್ರೀರಾಮನಲ್ಲಿ ನುಡಿದನು.॥3॥

ಮೂಲಮ್ - 4

ಕಿಮರ್ಥಂ ತ್ವಂ ವನಂ ಘೋರಂ ಪಂಪಾಕಾನನಮಂಡಿತಮ್ ।
ಆಗತಃ ಸಾನುಜೋ ದುರ್ಗಂ ನಾನಾವ್ಯಾಲಮೃಗಾಯುತಮ್ ॥

ಅನುವಾದ

ಪಂಪಾತೀರದಲ್ಲಿ, ಶೋಭಿಸುವ ಈ ಕಾನನವು ಭಯಂಕರ, ದುರ್ಗಮವಾಗಿದೆ. ಇದರಲ್ಲಿ ನಾನಾ ಪ್ರಕಾರದ ಹಿಂಸಕ ಪ್ರಾಣಿಗಳು ವಾಸಿಸುತ್ತಿವೆ. ತಾವು ನಿಮ್ಮ ತಮ್ಮನೊಡನೆ ಇಲ್ಲಿಗೆ ಯಾವುದಕ್ಕಾಗಿ ಬಂದಿರುವಿರಿ.॥4॥

ಮೂಲಮ್ - 5

ತಸ್ಯ ತದ್ವಚನಂ ಶ್ರುತ್ವಾ ಲಕ್ಷ್ಮಣೋ ರಾಮಚೋದಿತಃ ।
ಆಚಚಕ್ಷೇಮಹಾತ್ಮಾನಂ ರಾಮಂ ದಶರಥಾತ್ಮಜಮ್ ॥

ಅನುವಾದ

ಹನುಮಂತನ ಈ ಮಾತನ್ನು ಕೇಳಿ ಶ್ರೀರಾಮನ ಅಪ್ಪಣೆಯಂತೆ ಲಕ್ಷ್ಮಣನು ದಶರಥನಂದನ ಮಹಾತ್ಮಾ ಶ್ರೀರಾಮನ ಪರಿಚಯವನ್ನು ತಿಳಿಸಲು ಈ ಪ್ರಕಾರ ಪ್ರಾರಂಭಿಸಿದನು.॥5॥

ಮೂಲಮ್ - 6

ರಾಜಾ ದಶರಥೋ ನಾಮ ದ್ಯುತಿಮಾನ್ ಧರ್ಮವತ್ಸಲಃ ।
ಚಾತುರ್ವರ್ಣ್ಯಂ ಸ್ವಧರ್ಮೇಣ ನಿತ್ಯಮೇವಾಭಿಪಾಲಯನ್ ॥

ಅನುವಾದ

ವಿದ್ವಾಂಸನೇ! ಈ ಪೃಥಿವಿಯಲ್ಲಿ ದಶರಥ ಎಂಬ ಪ್ರಸಿದ್ಧ, ಧರ್ಮಾನುರಾಗಿ ತೇಜಸ್ವೀ ರಾಜರಿದ್ದರು. ಅವರು ಸದಾ ತನ್ನ ಧರ್ಮಕ್ಕನುಸಾರ ನಾಲ್ಕು ವರ್ಣದ ಪ್ರಜೆಗಳನ್ನು ಪಾಲಿಸುತ್ತಿದ್ದರು.॥6॥

ಮೂಲಮ್ - 7

ನ ದ್ವೇಷ್ಟಾ ವಿದ್ಯತೇ ತಸ್ಯ ಸ ತು ದ್ವೇಷ್ಟಿ ನ ಕಂಚನ ।
ಸ ತು ಸರ್ವೇಷು ಭೂತೇಷು ಪಿತಾಮಹ ಇವಾಪರಃ ॥

ಅನುವಾದ

ಈ ಭೂತಲದಲ್ಲಿ ಅವರಲ್ಲಿ ದ್ವೇಷವಿರಿಸುವವರು ಯಾರೂ ಇರಲಿಲ್ಲ ಮತ್ತು ಅವರೂ ಕೂಡ ಯಾರನ್ನು ದ್ವೇಷಿಸುತ್ತಿರಲಿಲ್ಲ. ಅವರು ಇನ್ನೊಂದು ಬ್ರಹ್ಮದೇವರಂತೆ ಸಮಸ್ತ ಪ್ರಾಣಿಗಳ ಮೇಲೆ ಸ್ನೇಹವಿಟ್ಟಿದ್ದರು.॥7॥

ಮೂಲಮ್ - 8

ಅಗ್ನಿಷ್ಟೋಮಾದಿಭಿರ್ಯಜ್ಞೈರಿಷ್ಟವಾನಾಪ್ತದಕ್ಷಿಣೈಃ ।
ತಸ್ಯಾಯಂ ಪೂರ್ವಜಃ ಪುತ್ರೋ ರಾಮೋ ನಾಮ ಜನೈಃ ಶ್ರುತಃ ॥

ಅನುವಾದ

ಅವರು ಹೇರಳ ದಕ್ಷಿಣೆಯುಳ್ಳ ಅಗ್ನಿಷ್ಟೋಮಾದಿ ಅನುಷ್ಠಾನ ಮಾಡಿದ್ದರು. ಇವರು ಅದೇ ಮಹಾರಾಜರ ಜೇಷ್ಠ ಪುತ್ರರಾಗಿದ್ದಾರೆ. ಇವರನ್ನು ಜನರು ಶ್ರೀರಾಮನೆಂದು ಹೇಳುತ್ತಾರೆ.॥8॥

ಮೂಲಮ್ - 9

ಶರಣ್ಯಃ ಸರ್ವಭೂತಾನಾಂ ಪಿತುರ್ನಿರ್ದೇಶಪಾರಗಃ ।
ಜೇಷ್ಠೋ ದಶರಥಸ್ಯಾಯಂ ಪುತ್ರಾಣಾಂ ಗುಣವತ್ತರಃ ॥

ಅನುವಾದ

ಇವರು ಎಲ್ಲ ಪ್ರಾಣಿಗಳಿಗೆ ಆಶ್ರಯಕೊಡುವವರೂ, ತಂದೆಯ ಆಜ್ಞೆಯನ್ನು ಪಾಲಿಸುವವರೂ ಆಗಿದ್ದಾರೆ. ಮಹಾರಾಜ ದಶರಥನ ನಾಲ್ಕು ಪುತ್ರರಲ್ಲಿ ಇವರು ಎಲ್ಲರಿಗಿಂತ ಹೆಚ್ಚು ಗುಣವಂತರಾಗಿದ್ದಾರೆ.॥9॥

ಮೂಲಮ್ - 10

ರಾಜಲಕ್ಷಣಸಂಯುಕ್ತಃ ಸಂಯುಕ್ತೋ ರಾಜ್ಯಸಂಪದಾ ।
ರಾಜ್ಯಾದ್ಭ್ರಷ್ಟೋ ಮಯಾ ವಸ್ತುಂ ನೇ ಸಾರ್ಧಮಿಹಾಗತಃ ॥

ಅನುವಾದ

ಇವರು ರಾಜರ ಉತ್ತಮ ಲಕ್ಷಣಗಳಿಂದ ಸಂಪನ್ನರಾಗಿದ್ದಾರೆ. ಇವರಿಗೆ ರಾಜಸಂಪತ್ತಿನಿಂದ ಸಂಯುಕ್ತ ಮಾಡುತ್ತಿದ್ದಾಗ ಯಾವುದೋ ಕಾರಣದಿಂದ ಇವರು ರಾಜ್ಯದಿಂದ ವಂಚಿತರಾಗಿ ವನವಾಸಕ್ಕಾಗಿ ನನ್ನೊಂದಿಗೆ ಇಲ್ಲಿಗೆ ಬಂದಿರುವರು.॥10॥

ಮೂಲಮ್ - 11

ಭಾರ್ಯಯಾ ಚ ಮಹಾಭಾಗ ಸೀತಯಾನುಗತೋ ವಶೀ ।
ದಿನಕ್ಷಯೇ ಮಹಾತೇಜಾಃ ಪ್ರಭಯೇವ ದಿವಾಕರಃ ॥

ಅನುವಾದ

ಮಹಾಭಾಗನೇ! ಹಗಲು ಮುಗಿದು ಸಾಯಂಕಾಲವಾದಾಗ ತೇಜಸ್ವೀ ಸೂರ್ಯನು ತನ್ನ ಪ್ರಭಾವದೊಂದಿಗೆ ಅಸ್ತಾಚಲಕ್ಕೆ ಹೋಗುವಂತೆ, ಇವರು ಜಿತೇಂದ್ರಿಯ ಶ್ರೀರಾಮನು ತನ್ನ ಪತ್ನೀ ಸೀತೆಯೊಂದಿಗೆ ಕಾಡಿಗೆ ಬಂದಿದ್ದರು.॥11॥

ಮೂಲಮ್ - 12

ಅಹಮಸ್ಯಾವರೋ ಭ್ರಾತಾ ಗುಣೈರ್ದಾಸ್ಯಮುಪಾಗತಃ ।
ಕೃತಜ್ಞಸ್ಯ ಬಹುಜ್ಞಸ್ಯ ಲಕ್ಷ್ಮಣೋ ನಾಮ ನಾಮತಃ ॥

ಅನುವಾದ

ನಾನು ಇವರ ತಮ್ಮನಾಗಿರುವೆನು. ನನ್ನ ಹೆಸರು ಲಕ್ಷ್ಮಣನೆಂದು. ನಾನು ಕೃತಜ್ಞ ಮತ್ತು ಬಹುಜ್ಞ, ನನ್ನ ಅಣ್ಣನ ಗುಣಗಳಿಂದ ಆಕೃಷ್ಟನಾಗಿ ಇವರ ದಾಸನಾಗಿರುವೆನು.॥12॥

ಮೂಲಮ್ - 13

ಸುಖಾರ್ಹಸ್ಯ ಮಹಾರ್ಹಸ್ಯ ಸರ್ವಭೂತಹಿತಾತ್ಮನಃ ।
ಐಶ್ವರ್ಯೇಣ ವಿಹೀನಸ್ಯ ವನವಾಸೇರತಸ್ಯ ಚ ॥

ಮೂಲಮ್ - 14

ರಕ್ಷಸಾಪಹೃತಾಭಾರ್ಯಾ ರಹಿತೇ ಕಾಮರೂಪಿಣಾ ।
ತಚ್ಚ ನ ಜ್ಞಾಯತೇ ರಕ್ಷಃ ಪತ್ನೀ ಯೇನಾಸ್ಯ ವಾ ಹೃತಾ ॥

ಅನುವಾದ

ಸಮಸ್ತ ಪ್ರಾಣಿಗಳ ಹಿತದಲ್ಲಿ ಮನಸ್ಸು ತೊಡಗಿಸಿರುವ, ಸುಖ, ಭೋಗಕ್ಕೆ ಯೋಗ್ಯನಾದ, ಮಹಾಪುರುಷರಿಂದ ಪೂಜಿತನಾದ, ಐಶ್ವರ್ಯದಿಂದ ಹೀನ ಹಾಗೂ ವನವಾಸದಲ್ಲಿ ತತ್ಪರನಾದ ನನ್ನ ಅಣ್ಣನ ಪತ್ನಿಯನ್ನು ಕಾಮರೂಪಿಯಾದ ರಾಕ್ಷಸನೊಬ್ಬನು ಬರಿದಾದ ಆಶ್ರಮದಿಂದ ಕದ್ದುಕೊಂಡು ಹೋದನು. ಯಾವನು ಇವರ ಪತ್ನಿಯನ್ನು ಹರಣ ಮಾಡಿರುವನೋ ಆ ರಾಕ್ಷಸನು ಯಾರು, ಎಲ್ಲಿರುತ್ತಾನೆ? ಮುಂತಾದ ವಿಷಯಗಳು ಸರಿಯಾಗಿ ತಿಳಿದಿಲ್ಲ.॥13-14॥

ಮೂಲಮ್ - 15

ದನುರ್ನಾಮ ದಿತೇಃ ಪುತ್ರಃ ಶಾಪಾದ್ ರಾಕ್ಷಸತಾಂ ಗತಃ ।
ಆಖ್ಯಾತಸ್ತೇನ ಸುಗ್ರೀವಃ ಸಮರ್ಥೋ ವಾನರಾಧಿಪಃ ॥

ಮೂಲಮ್ - 16

ಸ ಜ್ಞಾಸ್ಯತಿ ಮಹಾವೀರ್ಯಸ್ತವ ಭಾರ್ಯಾಪಹಾರಿಣಮ್ ।
ಏವಮುಕ್ತ್ವಾ ದನುಃ ಸ್ವರ್ಗಂ ಭ್ರಾಜಮಾನೋ ದಿವಂ ಗತಃ ॥

ಅನುವಾದ

ದನು ಎಂಬ ಒಬ್ಬ ದೈತ್ಯನಿದ್ದನು, ಅವನು ಶಾಪದಿಂದ ರಾಕ್ಷಸ ಭಾವವನ್ನು ಹೊಂದಿದ್ದನು. ಅವನು ಸುಗ್ರೀವನ ಹೆಸರನ್ನು ತಿಳಿಸಿದನು ಹಾಗೂ ಇಂತೆಂದನು - ‘ವಾನರರಾಜ ಸುಗ್ರೀವನು ಸಾಮರ್ಥ್ಯಶಾಲೀ ಮತ್ತು ಮಹಾಪರಾಕ್ರಮಿಯಾಗಿದ್ದಾನೆ. ಅವನು ನಿನ್ನ ಪತ್ನಿಯನ್ನು ಅಪಹರಿಸಿದ ರಾಕ್ಷಸನ ಠಾವನ್ನು ತಿಳಿಸುವನು.’ ಹೀಗೆ ಹೇಳಿ ತೇಜಸ್ಸಿನಿಂದ ಪ್ರಕಾಶಿತವಾಗುತ್ತಾ ದನು ಸ್ವರ್ಗಲೋಕಕ್ಕೆ ಹೋಗಲು ಆಕಾಶಕ್ಕೆ ಹಾರಿಹೋದನು.॥15-16॥

ಮೂಲಮ್ - 17

ಏತತ್ತೇಸರ್ವಮಾಖ್ಯಾತಂ ಯಾಥಾತಥ್ಯೇನ ಪೃಚ್ಛತಃ ।
ಅಹಂ ಚೈವ ಹಿ ರಾಮಶ್ಚ ಸುಗ್ರೀವಂ ಶರಣಂ ಗತೌ ॥

ಅನುವಾದ

ನಿನ್ನ ಪ್ರಶ್ನೆಗೆ ನಾನು ಎಲ್ಲ ಮಾತುಗಳನ್ನು ಸರಿಯಾಗಿ ತಿಳಿಸಿದೆ. ನಾನು ಮತ್ತು ಶ್ರೀರಾಮ ಇಬ್ಬರೂ ಸುಗ್ರೀವನ ಆಶ್ರಯಕ್ಕೆ ಬಂದಿರುವೆವು.॥17॥

ಮೂಲಮ್ - 18

ಏಷ ದತ್ತ್ವಾ ಚ ವಿತ್ತಾನಿ ಪ್ರಾಪ್ಯ ಚಾನುತ್ತಮಂ ಯಶಃ ।
ಲೋಕನಾಥಃ ಪುರಾ ಭೂತ್ವಾ ಸುಗ್ರೀವಂ ನಾಥಮಿಚ್ಛತಿ ॥

ಅನುವಾದ

ಇವರು ಮೊದಲು ಬಹಳ ಧನ, ವೈಭವವನ್ನು ದಾನಮಾಡಿ ಪರಮೋತ್ತಮ ಯಶವನ್ನು ಪಡೆದುಕೊಂಡಿದ್ದರು. ಹಿಂದೆ ಸಮಸ್ತ ಜಗತ್ತಿನ ನಾಥ (ಸಂರಕ್ಷಕ)ನಾಗಿದ್ದವರು ಇಂದು ಸುಗ್ರೀವನನ್ನು ತನ್ನ ರಕ್ಷಕನಾಗಿಸಿಕೊಳ್ಳಲು ಬಯಸುತ್ತಿರುವರು.॥18॥

ಮೂಲಮ್ - 19

ಸೀತಾ ಯಸ್ಯ ಸ್ನುಷಾ ಚಾಸೀಚ್ಛರಣ್ಯೋ ಧರ್ಮವತ್ಸಲಃ ।
ತಸ್ಯ ಪುತ್ರಃ ಶರಣಸ್ಯ ಸುಗ್ರೀವಂ ಶರಣಂ ಗತಃ ॥

ಅನುವಾದ

ಸೀತೆಯು ಯಾರ ಸೊಸೆಯೋ, ಶರಣಾಗತಪಾಲಕ, ಧರ್ಮವತ್ಸಲರಾಗಿದ್ದಾರೋ ಆ ದಶರಥ ಮಹಾರಾಜರ ಪುತ್ರ ಶರಣದಾತೃ ಶ್ರೀರಾಮನು ಸುಗ್ರೀವನ ಆಶ್ರಯಕ್ಕೆ ಬಂದಿರುವನು.॥19॥

ಮೂಲಮ್ - 20

ಸರ್ವಲೋಕಸ್ಯ ಧರ್ಮಾತ್ಮಾ ಶರಣ್ಯಃ ಶರಣಂ ಪುರಾ ।
ಗುರುರ್ಮೇ ರಾಘವಃ ಸೋಽಯಂ ಸುಗ್ರೀವಂ ಶರಣಂ ಗತಃ ॥

ಅನುವಾದ

ಧರ್ಮಾತ್ಮನಾದ ನನ್ನ ಅಣ್ಣ ಶ್ರೀರಘುನಾಥನು ಮೊದಲು ಸಂಪೂರ್ಣ ಜಗತ್ತಿಗೆ ಶರಣು ಕೊಡುವಂತಹ ಶರಣಾಗತ ವತ್ಸಲರಾಗಿದ್ದವನೇ ಈಗ ಸುಗ್ರೀವನಲ್ಲಿ ಶರಣಾಗಿದ್ದಾನೆ.॥20॥

ಮೂಲಮ್ - 21

ಯಸ್ಯ ಪ್ರಸಾದೇ ಸತತಂ ಪ್ರಸೀದೇಯುರಿಮಾಃ ಪ್ರಜಾಃ ।
ಸ ರಾಮೋ ವಾನರೇಂದ್ರಸ್ಯ ಪ್ರಸಾದಮಭಿಕಾಂಕ್ಷತೇ ॥

ಅನುವಾದ

ಅವನು ಪ್ರಸನ್ನನಾದಾಗ ಸದಾ ಈ ಎಲ್ಲ ಪ್ರಜೆ ಸಂತೋಷಗೊಳ್ಳುತ್ತಿತ್ತು, ಆ ಶ್ರೀರಾಮನೇ ಇಂದು ವಾನರರಾಜ ಸುಗ್ರೀವನ ಪ್ರಸನ್ನತೆಯನ್ನು ಬಯಸುತ್ತಿದ್ದಾನೆ.॥21॥

ಮೂಲಮ್ - 22

ಯೇನ ಸರ್ವಗುಣೋಪೇತಾಃ ಪೃಥಿವ್ಯಾಂ ಸರ್ವಪಾರ್ಥಿವಾಃ ।
ಮಾನಿತಾಃ ಸತತಂ ರಾಜ್ಞಾ ಸದಾ ದಶರಥೇನ ವೈ ॥

ಮೂಲಮ್ - 23

ತಸ್ಯಾಯಂ ಪೂರ್ವಜಃ ಪುತ್ರಸಿಷು ಲೋಕೇಷು ವಿಶ್ರುತಃ ।
ಸುಗ್ರೀವಂ ವಾನರೇದ್ರಂ ತು ರಾಮಃ ಶರಣಮಾಗತಃ ॥

ಅನುವಾದ

ಯಾವ ದಶರಥರಾಜನು ಸದಾ ತನ್ನಲ್ಲಿಗೆ ಬಂದಿರುವ ಭೂಮಂಡಲದ ಸರ್ವಸದ್ಗುಣ ಸಂಪನ್ನ ಸಮಸ್ತ ರಾಜರನ್ನು ನಿರಂತರ ಸಮ್ಮಾನಿಸುತ್ತಿದ್ದನೋ, ಅವರ ಜ್ಯೇಷ್ಠ ಪುತ್ರ ತ್ರಿಭುವನ ವಿಖ್ಯಾತ ಶ್ರೀರಾಮನು ಇಂದು ವಾನರರಾಜ ಸುಗ್ರೀವನಲ್ಲಿ ಶರಣು ಬಂದಿರುವನು.॥22-23॥

ಮೂಲಮ್ - 24

ಶೋಕಾಭಿಭೂತೇ ರಾಮೇ ತು ಶೋಕಾರ್ತೇ ಶರಣಂ ಗತೇ ।
ಕರ್ತುಮರ್ಹತಿ ಸುಗ್ರೀವಃ ಪ್ರಸಾದಂ ಹರಿಯೂಥಪೈಃ ॥

ಅನುವಾದ

ಶ್ರೀರಾಮನು ಶೋಕಕ್ಕೆ ವಶೀಭೂತ ಮತ್ತು ಆರ್ತನಾಗಿ ಶರಣುಬಂದಿರುವನು. ಯೂಧಪತಿಗಳ ಸಹಿತ ಸುಗ್ರೀವನು ಇವನ ಮೇಲೆ ಕೃಪೆ ಮಾಡಬೇಕು.॥24॥

ಮೂಲಮ್ - 25

ಏವಂ ಬ್ರುವಾಣಂ ಸೌಮಿತ್ರಿಂ ಕರುಣಂ ಸಾಶ್ರುಪಾತನಮ್ ।
ಹನುಮಾನ್ ಪ್ರತ್ಯುವಾಚೇದಂ ವಾಕ್ಯಂ ವಾಕ್ಯವಿಶಾರದಃ ॥

ಅನುವಾದ

ಕಣ್ಣುಗಳಿಂದ ಕಂಬನಿ ಹರಿಸುತ್ತಾ ಕರುಣಾಜನಕ ದನಿಯಲ್ಲಿ ಹೀಗೆ ಹೇಳುತ್ತಿರುವ ಸುಮಿತ್ರಾಕುಮಾರ ಲಕ್ಷ್ಮಣನಲ್ಲಿ ವಾಕ್ಯವಿಶಾರದ ಹನುಮಂತನು ಈ ಪ್ರಕಾರ ಹೇಳಿದನು.॥25॥

ಮೂಲಮ್ - 26

ಈದೃಶಾ ಬುದ್ಧಿಸಂಪನ್ನಾ ಜಿತಕ್ರೋಧಾ ಜಿತೇಂದ್ರಿಯಾಃ ।
ದ್ರಷ್ಟವ್ಯಾ ವಾನರೇಂದ್ರೇಣ ದಿಷ್ಟ್ಯಾದರ್ಶನಮಾಗತಾಃ ॥

ಅನುವಾದ

ರಾಜಕುಮಾರರೇ! ವಾನರರಾಜ ಸುಗ್ರೀವನಿಗೆ ನಿಮ್ಮಂತಹ ಬುದ್ಧಿವಂತ, ಕ್ರೋಧ ವಿಜಯೀ, ಜಿತೇಂದ್ರಿಯ ಪುರುಷರೊಂದಿಗೆ ಸಂಧಿಸುವ ಆವಶ್ಯಕತೆ ಇತ್ತು. ನೀವು ಸ್ವತಃ ದರ್ಶನಕೊಟ್ಟುದು ಸೌಭಾಗ್ಯದ ಮಾತಾಗಿದೆ.॥26॥

ಮೂಲಮ್ - 27

ಸ ಹಿ ರಾಜ್ಯಾಶ್ಚ ವಿಭ್ರಷ್ಟಃ ಕೃತವೈರಶ್ಚ ವಾಲಿನಾ ।
ಹೃತದಾರೋ ವನೇ ತ್ರಸ್ತೋ ಭ್ರಾತ್ರಾ ವಿನಿಕೃತೋಭೃಶಮ್ ॥

ಅನುವಾದ

ಅವನೂ ರಾಜ್ಯ ಭ್ರಷ್ಟನಾಗಿದ್ದಾನೆ. ವಾಲಿಯೊಂದಿಗೆ ಅವನಿಗೆ ಶತ್ರುತ್ವ ಉಂಟಾಗಿದೆ. ಅವನ ಪತ್ನಿಯನ್ನೂ ಕೂಡ ವಾಲಿಯು ಅಪಹರಿಸಿರುವನು ಹಾಗೂ ಆ ದುಷ್ಟ ಅಣ್ಣನು ಇವನನ್ನು ಮನೆಯಿಂದ ಹೊರಹಾಕಿದನು. ಇದರಿಂದ ಅವನು ಅತ್ಯಂತ ಭಯಭೀತನಾಗಿ ವನದಲ್ಲಿ ವಾಸಿಸುತ್ತಿದ್ದಾನೆ.॥27॥

ಮೂಲಮ್ - 28

ಕರಿಷ್ಯತಿ ಸ ಸಾಹಾಯ್ಯಂ ಯುವಯೋರ್ಭಾಸ್ಕರಾತ್ಮಜಃ ।
ಸುಗ್ರೀವಃ ಸಹ ಚಾಸ್ಮಾಭಿಃ ಸೀತಾಯಾಃ ಪರಿಮಾರ್ಗಣೇ ॥

ಅನುವಾದ

ಸೂರ್ಯನಂದನ ಸುಗ್ರೀವನು ಸೀತಾನ್ವೇಷಣೆಯಲ್ಲಿ ನಮ್ಮೊಂದಿಗೆ ಇದ್ದು ನಿಮ್ಮಬ್ಬರಿಗೆ ಪೂರ್ಣ ಸಹಾಯ ಮಾಡುವನು.॥28॥

ಮೂಲಮ್ - 29

ಇತ್ಯೇವಮುಕ್ತ್ವಾ ಹನುಮಾನ್ ಶ್ಲಕ್ಷ್ಣಂ ಮಧುರಯಾ ಗಿರಾ ।
ಬಭಾಷೇ ಸಾಧು ಗಚ್ಛಾಮಃ ಸುಗ್ರೀವಮಿತಿ ರಾಘವಮ್ ॥

ಅನುವಾದ

ಹೀಗೆ ಹೇಳಿ ಹನುಮಂತನು ಶ್ರೀರಾಮನಲ್ಲಿ ಸ್ನಿಗ್ಧ ಮಧುರವಾಣಿಯಲ್ಲಿ ‘ಸರಿ, ಈಗ ನಾವು ಸುಗ್ರೀವನ ಬಳಿಗೆ ಹೋಗುವಾ’ ಎಂದು ಹೇಳಿದನು.॥29॥

ಮೂಲಮ್ - 30

ಏವಂ ಬ್ರುವತಂ ಧರ್ಮಾತ್ಮಾ ಹನೂಮಂತಂ ಸ ಲಕ್ಷ್ಮಣಃ ।
ಪ್ರತಿಪೂಜ್ಯ ಯಥಾನ್ಯಾಯಮಿದಂ ಪ್ರೋವಾಚರಾಘವಮ್ ॥

ಅನುವಾದ

ಆಗ ಧರ್ಮಾತ್ಮಾ ಲಕ್ಷ್ಮಣನು ಮೇಲಿನಂತೆ ಹೇಳಿದ ಹನುಮಂತನನ್ನು ಯಥೋಚಿತ ಸನ್ಮಾನಿಸಿ, ಶ್ರೀರಾಮಚಂದ್ರನಲ್ಲಿ ಹೇಳಿದನು.॥30॥

ಮೂಲಮ್ - 31

ಕಪಿಃ ಕಥಯತೇ ಹೃಷ್ಟೋ ಯಥಾಯಂ ಮಾರುತಾತ್ಮಜಃ ।
ಕೃತ್ಯವಾನ್ ಸೋಽಪಿ ಸಂಪ್ರಾಪ್ತಃ ಕೃತಕೃತ್ಯೋಽಸಿ ರಾಘವ ॥

ಅನುವಾದ

ಅಣ್ಣಾ, ರಘುನಂದನ! ಈ ವಾನರಶ್ರೇಷ್ಠ ಪವನಕುಮಾರ ಹನುಮಂತನು ಅತ್ಯಂತ ಹರ್ಷಗೊಂಡು ಹೇಳಿದ ಮಾತಿನಿಂದ ಸುಗ್ರೀವನಿಗೂ ನಿಮ್ಮಿಂದ ಏನೋ ಕೆಲಸವಿದೆ ಎಂದು ತಿಳಿಯುತ್ತದೆ. ಇಂತಹ ಸ್ಥಿತಿಯಲ್ಲಿ ನಿನ್ನ ಕಾರ್ಯಸಿದ್ಧಿ ಆಯಿತೆಂದೇ ತಿಳಿಯುವುದು.॥31॥

ಮೂಲಮ್ - 32

ಪ್ರಸನ್ನಮುಖವರ್ಣಶ್ಚ ವ್ಯಕ್ತಂ ಹೃಷ್ಟಶ್ಚ ಭಾಷತೇ ।
ನಾನೃತಂ ವಕ್ಷ್ಯತೇ ಧೀರೋ ಹನುಮಾನ್ಮಾರುತಾತ್ಮಜಃ ॥

ಅನುವಾದ

ಇವನ ಮುಖದ ಕಾಂತಿಯು ಸ್ಪಷ್ಟವಾಗಿ ಪ್ರಸನ್ನದಂತೆ ಕಾಣುತ್ತಿದೆ, ಇವನು ಹರ್ಷೋತ್ಫುಲ್ಲನಾಗಿ ಮಾತನಾಡುತ್ತಿದ್ದಾನೆ. ಆದ್ದರಿಂದ ಪವನಪುತ್ರ ವೀರ ಹನುಮಂತನು ಸುಳ್ಳು ಹೇಳಲಾರನೆಂದೇ ನನಗೆ ವಿಶ್ವಾಸವಿದೆ.॥32॥

ಮೂಲಮ್ - 33

ತತಃ ಸ ಸುಮಹಾಪ್ರಾಜ್ಞೋ ಹನುಮಾನ್ಮಾರುತಾತ್ಮಜಃ ।
ಜಗಾಮಾದಾಯ ತೌ ವೀರೌಹರಿರಾಜಾಯ ರಾಘವೌ ॥

ಅನುವಾದ

ಅನಂತರ ಪರಮ ಬುದ್ಧಿವಂತ ಪವನಪುತ್ರ ಹನುಮಂತನು ಆ ಇಬ್ಬರೂ ರಘುವಂಶೀ ವೀರರನ್ನು ಜೊತೆಯಲ್ಲಿ ಕರೆದುಕೊಂಡು ಸುಗ್ರೀವನ ಭೆಟ್ಟಿಗಾಗಿ ಹೊರಟನು.॥33॥

ಮೂಲಮ್ - 34

ಭಿಕ್ಷುರೂಪಂ ಪರಿತ್ಯಜ್ಯ ವಾನರಂ ರೂಪಮಾಸ್ಥಿತಃ ।
ಪೃಷ್ಠಮಾರೋಪ್ಯ ತೌ ವೀರೌ ಜಗಾಮ ಕಪಿಕುಂಜರಃ ॥

ಅನುವಾದ

ಕಪಿವರ ಹನುಮಂತನು ಭಿಕ್ಷುರೂಪವನ್ನು ಬಿಟ್ಟು ವಾನರರೂಪ ಧರಿಸಿ, ಆ ಇಬ್ಬರೂ ವೀರರನ್ನು ಹೆಗಲಲ್ಲಿ ಕುಳ್ಳಿರಿಸಿಕೊಂಡು ಅಲ್ಲಿಂದ ಹೊರಟನು.॥34॥

ಮೂಲಮ್ - 35

ಸ ತು ವಿಪುಲಯಶಾಃ ಕಪಿಪ್ರವೀರಃ
ಪವನಸುತಃ ಕೃತಕೃತ್ಯವತ್ ಪ್ರಹೃಷ್ಟಃ ।
ಗಿರಿವರಮುರುವಿಕ್ರಮಃ ಪ್ರಯಾತಃ
ಸ ಶುಭಮತಿಃ ಸಹ ರಾಮಲಕ್ಷ್ಮಣಾಭ್ಯಾಮ್ ॥

ಅನುವಾದ

ಮಹಾನ್ ಯಶಸ್ವೀ ಮತ್ತು ಶುಭ ವಿಚಾರವುಳ್ಳ ಪರಾಕ್ರಮಿ ಆ ಕಪಿವೀರ ಪವನಕುಮಾರ ಕೃತಕೃತ್ಯನಂತಾಗಿ ಅತ್ಯಂತ ಹರ್ಷಗೊಂಡು ಶ್ರೀರಾಮ-ಲಕ್ಷ್ಮಣರೊಂದಿಗೆ ಗಿರಿವರ ಋಷ್ಯಮೂಕಕ್ಕೆ ಹೋದನು.॥35॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಾಲ್ಕನೆಯ ಸರ್ಗ ಸಂಪೂರ್ಣವಾಯಿತು. ॥4॥