वाचनम्
ಭಾಗಸೂಚನಾ
ಹನುಮಂತನು ರಾಮ-ಲಕ್ಷ್ಮಣರ ಬಳಿಗೆ ಹೋಗಿ ಅವರಲ್ಲಿ ಅರಣ್ಯಕ್ಕೆ ಆಗಮಿಸಿದ ಕಾರಣ ಕೇಳಿದುದು, ತನ್ನನ್ನು ಮತ್ತು ಸುಗ್ರೀವನನ್ನು ಪರಿಚಯಿಸಿಕೊಂಡುದು, ಶ್ರೀರಾಮನು ಹನುಮಂತನ ಮಾತನ್ನು ಪ್ರಶಂಸಿದುದು, ಲಕ್ಷ್ಮಣನಿಗೆ ಹನುಮಂತನೊಡನೆ ಮಾತನಾಡಲು ಹೇಳಿದುದು, ಲಕ್ಷ್ಮಣನು ತನ್ನ ಪ್ರಾರ್ಥನೆಯನ್ನು ಅಂಗೀಕರಿಸಲು ಹನುಮಂತನು ಪ್ರಸನ್ನನಾದುದು
ಮೂಲಮ್ - 1
ವಚೋ ವಿಜ್ಞಾಯ ಹನುಮಾನ್ ಸುಗ್ರೀವಸ್ಯ ಮಹಾತ್ಮನಃ ।
ಪರ್ವತಾದೃಷ್ಯಮೂಕಾತ್ತು ಪುಪ್ಲುವೇ ಯತ್ರ ರಾಘವೌ ॥
ಅನುವಾದ
ಮಹಾತ್ಮಾ ಸುಗ್ರೀವನ ಮಾತಿನ ತಾತ್ಪರ್ಯವನ್ನು ತಿಳಿದು ಹನುಮಂತನು ಋಷ್ಯಮೂಕ ಪರ್ವತದಿಂದ ಆ ಇಬ್ಬರೂ ರಘುವಂಶಿಯರು ವಿರಾಜಿಸುತ್ತಿದ್ದಲ್ಲಿಗೆ ನೆಗೆಯುತ್ತಾ ನಡೆದನು.॥1॥
ಮೂಲಮ್ - 2
ಕಪಿರೂಪಂ ಪರಿತ್ಯಜ್ಯ ಹನುಮಾನ್ ಮರುತಾತ್ಮಜಃ ।
ಭಿಕ್ಷುರೂಪಂ ತತೋ ಭೇಜೇ ಶಠಬುದ್ಧಿತಯಾ ಕಪಿಃ ॥
ಅನುವಾದ
ಪವನ ಕುಮಾರ ವಾನರವೀರ ಹನುಮಂತನು ತನ್ನ ಈ ಕಪಿರೂಪದಲ್ಲಿ ಯಾರಿಗೂ ವಿಶ್ವಾಸ ಉಂಟಾಗಲಾರದೆಂದು ಯೋಚಿಸಿ, ತನ್ನ ಆ ರೂಪವನ್ನು ತ್ಯಜಿಸಿ ಭಿಕ್ಷು (ಸಾಮಾನ್ಯ ತಪಸ್ವೀ)ವಿನ ರೂಪವನ್ನು ಧರಿಸಿದನು.॥2॥
ಮೂಲಮ್ - 3
ತತಶ್ಚ ಹನುಮಾನ್ವಾಚಾ ಶ್ಲಕ್ಷ್ಣಯಾ ಸುಮನೋಜ್ಞಯಾ ।
ವಿನೀತವದುಪಾಗಮ್ಯ ರಾಘವೌ ಪ್ರಣಿಪತ್ಯ ಚ ॥
ಮೂಲಮ್ - 4
ಆಬಭಾಷೇ ಚ ತೌ ವೀರೌ ಯಥಾವತ್ ಪ್ರಶಶಂಸ ಚ ।
ಸಂಪೂಜ್ಯ ವಿಧಿವದ್ವೀರೌ ಹಮಿಮಾನ್ ವಾನರೋತ್ತಮಃ ॥
ಮೂಲಮ್ - 5
ಉವಾಚ ಕಾಮತೋ ವಾಕ್ಯಂ ಮೃದು ಸತ್ಯಪರಾಕ್ರಮೌ ।
ರಾಜರ್ಷಿದೇವಪ್ರತಿಮೌ ತಾಪಸೌ ಸಂಶಿತವ್ರತೌ ॥
ಅನುವಾದ
ಅನಂತರ ಹನುಮಂತನು ವಿನೀತನಾಗಿ ಆ ಇಬ್ಬರು ರಘುವಂಶೀ ವೀರರ ಬಳಿಗೆ ಹೋಗಿ ಅವರಿಗೆ ಪ್ರಣಾಮ ಮಾಡಿ, ಮನಸ್ಸಿಗೆ ಅತ್ಯಂತ ಪ್ರಿಯವಾಗುವಂತೆ ಮಧುರವಾಣಿಯಲ್ಲಿ ಮಾತನಾಡಲು ಪ್ರಾರಂಭಿಸಿದನು. ವಾನರಶ್ರೇಷ್ಠ ಹನುಮಂತನು ಮೊದಲಿಗೆ ಆ ಇಬ್ಬರೂ ವೀರರನ್ನು ಯಥೋಚಿತ ಪ್ರಶಂಸಿಸಿದನು. ಮತ್ತೆ ವಿಧಿವತ್ತಾಗಿ ಪೂಜಿಸಿ, ಸ್ವಚ್ಛಂದವಾಗಿ ಮಧುರವಾಣಿಯಲ್ಲಿ ಹೇಳಿದನು - ವೀರರೇ! ನೀವಿಬ್ಬರೂ ಸತ್ಯಪರಾಕ್ರಮಿಗಳೂ, ರಾಜರ್ಷಿಗಳಂತೆ ಮತ್ತು ದೇವತೆಗಳಂತೆ ಪ್ರಭಾವಶಾಲಿಗಳೂ, ತಪಸ್ವಿಗಳೂ, ಕಠೋರ ವ್ರತವನ್ನು ಪಾಲಿಸುವವರೂ ಎಂದು ಗೊತ್ತಾಗುವುದು.॥3-5॥
ಮೂಲಮ್ - 6
ದೇಶಂ ಕಥಮಿಮಂ ಪ್ರಾಪ್ತೌ ಭವಂತೌ ವರವರ್ಣಿನೌ ।
ತ್ರಾಸಯಂತೌ ಮೃಗಗಣಾನನ್ಯಾಂಶ್ಚ ವನಚಾರಿಣಃ ॥
ಮೂಲಮ್ - 7
ಪಂಪಾತೀರರುಹಾನ್ವೃಕ್ಷಾನ್ ವೀಕ್ಷಮಾಣೌ ಸಮಂತತಃ ।
ಇಮಾಂ ನದೀಂ ಶುಭಜಲಾಂ ಶೋಭಯಂತೌ ತಪಸ್ವಿನೌ ॥
ಮೂಲಮ್ - 8
ಧೈರ್ಯವಂತೌ ಸುವರ್ಣಾಭೌ ಕೌ ಯುವಾಂ ಚೀರವಾಸಸೌ ।
ನಿಃಶ್ವಸಂತೌ ವರಭುಜೌ ಪೀಡಯಂತಾ ವಿಮಾಃ ಪ್ರಜಾಃ ॥
ಅನುವಾದ
ನಿಮ್ಮಶರೀರದ ಕಾಂತಿಯು ಬಹಳ ಸುಂದರವಾಗಿದೆ. ನೀವಿಬ್ಬರೂ ಈ ವನ ಪ್ರದೇಶಕ್ಕೆ ಏತಕ್ಕಾಗಿ ಬಂದಿರುವಿರಿ? ವನದಲ್ಲಿ ಸಂಚರಿಸುತ್ತಾ ಮೃಗಸಮೂಹಗಳಿಗೂ ಹಾಗೂ ಇತರ ಪ್ರಾಣಿಗಳಿಗೂ ಕಷ್ಟ ಕೊಡುತ್ತಾ, ಪಂಪಾಸರೋವರದ ತೀರದ ವೃಕ್ಷಗಳನ್ನು ಎಲ್ಲೆಡೆ ನೋಡುತ್ತಾ, ಈ ಸುಂದರ ನೀರುಳ್ಳ ನದಿಯಂತೆ ಇರುವ ಪಂಪೆಯನ್ನು ಸುಶೋಭಿತಮಾಡುತ್ತಾ, ವೇಗಶಾಲಿ ವೀರರಾದ ನೀವಿಬ್ಬರೂ ಯಾರು? ನಿಮ್ಮ ಶರೀರ ಕಾಂತಿಯು ಸುವರ್ಣದಂತೆ ಪ್ರಕಾಶಿಸುತ್ತಿದೆ. ನೀವಿಬ್ಬರೂ ಬಹಳ ಧೈರ್ಯಶಾಲಿಗಳೆಂದು ತಿಳಿಯುತ್ತದೆ. ನಿಮ್ಮಬ್ಬರ ಶರೀರದಲ್ಲಿ ನಾರುಮಡಿ ಶೋಭಿಸುತ್ತಿದೆ. ನೀವು ದೀರ್ಘವಾಗಿ ನಿಟ್ಟುಸಿರುಬಿಡುತ್ತಿದ್ದೀರಿ. ನಿಮ್ಮ ಭುಜಗಳು ವಿಶಾಲವಾಗಿವೆ. ನೀವು ನಿಮ್ಮ ಪ್ರಭಾವದಿಂದ ಈ ವನದಲ್ಲಿನ ಪ್ರಾಣಿಗಳನ್ನು ಪೀಡಿಸುತ್ತಿರುವಿರಿ. ತಮ್ಮ ಪರಿಚಯವನ್ನು ತಿಳಿಸಿರಿ.॥6-8॥
ಮೂಲಮ್ - 9
ಸಿಂಹವಿಪ್ರೇಕ್ಷಿತೌ ವೀರೌ ಮಹಾಬಲಪರಾಕ್ರಮೌ ।
ಶಕ್ರಚಾಪನಿಭೇ ಚಾಪೇ ಗೃಹೀತ್ವಾ ಶತ್ರುನಾಶನೌ ॥
ಅನುವಾದ
ನಿಮ್ಮಿಬ್ಬರೂ ವೀರರ ದೃಷ್ಟಿಯು ಸಿಂಹದಂತೆ ಇದೆ. ನಿಮ್ಮ ಬಲ ಮತ್ತು ಪರಾಕ್ರಮವು ಮಹತ್ತಾಗಿದೆ. ಇಂದ್ರ ಧನುಸ್ಸಿನಂತೆ ಮಹಾನ್ ಶರಾಸನ ಧರಿಸಿಕೊಂಡು ನೀವು ಶತ್ರುಗಳನ್ನು ನಾಶಮಾಡುವ ಶಕ್ತಿಹೊಂದಿರುವಿರಿ.॥9॥
ಮೂಲಮ್ - 10
ಶ್ರೀಮಂತೌ ರೂಪಸಂಪನ್ನೌ ವೃಷಭಶ್ರೇಷ್ಠ ವಿಕ್ರಮೌ ।
ಹಸ್ತಿಹಸ್ತೋಪಮಭುಜೌ ದ್ಯುತಿಮಂತೌ ನರರ್ಷಭೌ ॥
ಅನುವಾದ
ನೀವು ಕಾಂತಿಯುಕ್ತ, ರೂಪವಂತರಾಗಿರುವಿರಿ. ನೀವು ವಿಶಾಲ ಕಾಯಗೂಳಿಗಳಂತೆ ಮಂದಗತಿಯಿಂದ ನಡೆಯುತ್ತಿರುವಿರಿ. ನಿಮ್ಮಿಬ್ಬರ ಭುಜಗಳು ಆನೆಯ ಸೊಂಡಿಲಿನಂತೆ ಕಂಡುಬರುತ್ತಿವೆ. ನೀವು ಮನುಷ್ಯರಲ್ಲಿ ಶ್ರೇಷ್ಠರೂ, ತೇಜಸ್ವಿಗಳೂ ಆಗಿರುವಿರಿ.॥10॥
ಮೂಲಮ್ - 11
ಪ್ರಭಯಾ ಪರ್ವತೇಂದ್ರೋಽಸೌ ಯುವಯೋರವಭಾಸಿತಃ ।
ರಾಜ್ಯಾರ್ಹಾವಮರಪ್ರಖ್ಯೌ ಕಥಂ ದೇಶಮಿಹಾಗತೌ ॥
ಅನುವಾದ
ನಿಮ್ಮಿಬ್ಬರ ಪ್ರಭೆಯಿಂದ ಗಿರಿರಾಜ ಋಷ್ಯಮೂಕವು ಬೆಳಗುತ್ತಿದೆ. ನೀವು ದೇವತೆಗಳಂತೆ ಪರಾಕ್ರಮಿಗಳೂ ಹಾಗೂ ರಾಜ್ಯವನ್ನು ಅನುಭವಿಸಲು ಯೋಗ್ಯರಾಗಿದ್ದೀರಿ. ಈ ದುರ್ಗಮ ವನದಲ್ಲಿ ನಿಮ್ಮ ಆಗಮನ ಹೇಗೆ ಸಂಭವಿಸಿತು.॥11॥
ಮೂಲಮ್ - 12
ಪದ್ಮಪತ್ರೇಕ್ಷಣೌ ವೀರೌ ಜಟಾಮಂಡಲಧಾರಿಣೌ ।
ಅನ್ಯೋನ್ಯಸದೃಶಾ ವೀರೌ ದೇವಲೋಕಾದಿಹಾಗತೌ ॥
ಅನುವಾದ
ನಿಮ್ಮ ನೇತ್ರಗಳು ಅರಳಿದ ಕಮಲದಳಗಳಂತೆ ಶೋಭಿಸುತ್ತಿವೆ. ನಿಮ್ಮಲ್ಲಿ ಶೌರ್ಯ ತುಂಬಿದೆ. ನೀವಿಬ್ಬರು ತಮ್ಮ ಮಸ್ತಕದ ಮೇಲೆ ಜಟೆಗಳನ್ನು ಧರಿಸಿರುವಿರಿ. ನೀವಿಬ್ಬರೂ ಒಂದೇ ರೀತಿಯಿಂದ ಇರುವಿರಿ. ವೀರರೇ! ನೀವು ದೇವಲೋಕದಿಂದ ಇಲ್ಲಿಗೆ ಆಗಮಿಸಿರುವಿರಾ.॥12॥
ಮೂಲಮ್ - 13
ಯದೃಚ್ಛಯೇವ ಸಂಪ್ರಾಪ್ತೌ ಚಂದ್ರಸೂರ್ಯೌ ವಸುಂಧರಾಮ್ ।
ವಿಶಾಲವಕ್ಷಸೌ ವೀರೌ ಮಾನುಷೌ ದೇವರೂಪಿಣೌ ॥
ಅನುವಾದ
ನಿಮ್ಮಿಬ್ಬರನ್ನು ನೋಡಿದರೆ, ಚಂದ್ರ ಮತ್ತು ಸೂರ್ಯರು ಸ್ವೇಚ್ಛೆಯಿಂದಲೇ ಈ ಭೂತಲದಲ್ಲಿ ಇಳಿದಿರುವಂತೆ ಅನಿಸುತ್ತದೆ. ನಿಮ್ಮ ವಕ್ಷಸ್ಥಳವು ವಿಶಾಲವಾಗಿದೆ. ಮನುಷ್ಯರಾಗಿದ್ದರೂ ನಿಮ್ಮ ರೂಪ ದೇವತೆಗಳಂತೇ ಇದೆ.॥13॥
ಮೂಲಮ್ - 14
ಸಿಂಹಸ್ಕಂದೌ ಮಹೋತ್ಸಾಹೌ ಸಮದಾವಿವ ಗೋವೃಷೌ ।
ಆಯತಾಶ್ಚ ಸುವೃತಾಶ್ಚ ಬಾಹವಃ ಪರಿಘೋಪಮಾಃ ॥
ಮೂಲಮ್ - 15½
ಸರ್ವಭೂಷಣಭೂಷಾರ್ಹಾಃ ಕಿಮರ್ಥಂ ನ ವಿಭೂಷಿತಾಃ ।
ಉಭೌ ಯೋಗ್ಯಾವಹಂ ಮನ್ಯೇ ರಕ್ಷಿತುಂ ಪೃಥಿವೀಮಿಮಾಮ್ ॥
ಸಸಾಗರವನಾಂ ಕೃತ್ಸ್ನಾಂ ವಿಂಧ್ಯಮೇರು ವಿಭೂಷಿತಾಮ್ ।
ಅನುವಾದ
ನಿಮ್ಮ ಹೆಗಲು ಸಿಂಹದಂತೆ ಇವೆ. ನಿಮ್ಮಲ್ಲಿ ಮಹಾನ್ ಉತ್ಸಾಹ ತುಂಬಿದೆ. ನೀವಿಬ್ಬರೂ ಮದಮತ್ತ ಗೂಳಿಯಂತೆ ಕಂಡುಬರುತ್ತೀರಿ. ನಿಮ್ಮ ಭುಜಗಳು ವಿಶಾಲ, ಸುಂದರ, ದುಂಡು-ದುಂಡಾಗಿ ಪರಿಘಗಳಂತೆ ಸುದೃಢವಾಗಿವೆ. ಇವು ಸಮಸ್ತ ಆ ಭೂಷಣಗಳನ್ನು ಧರಿಸಲು ಯೋಗ್ಯವಾಗಿದ್ದರೂ ನೀವು ಇವನ್ನು ಏಕೆ ಅಲಂಕರಿಸಿಕೊಂಡಿಲ್ಲ? ನೀವಿಬ್ಬರೂ ಸಮುದ್ರ, ವನಗಳಿಂದ ಕೂಡಿದ ಹಾಗೂ ವಿಂಧ್ಯ, ಮೇರು ಮೊದಲಾದ ಪರ್ವತಗಳಿಂದ ವಿಭೂಷಿತ ಈ ಇಡೀ ಪೃಥಿವಿಯನ್ನು ರಕ್ಷಿಸಲು ಯೋಗ್ಯರಾಗಿದ್ದೀರಿ ಎಂದು ನಾನು ತಿಳಿಯುತ್ತೇನೆ.॥14-15½॥
ಮೂಲಮ್ - 16½
ಇಮೇ ಚ ಧನುಷೀಚಿತ್ರೇ ಶ್ಲಕ್ಷ್ಣೇ ಚಿತ್ರಾನುಲೇಪನೇ ॥
ಪ್ರಕಾಶೇತೇ ಯಥೇಂದ್ರಸ್ಯ ವಜ್ರೇ ಹೇಮವಿಭೂಷಿತೇ ।
ಅನುವಾದ
ನಿಮ್ಮ ಈ ಎರಡೂ ಧನುಸ್ಸು ವಿಚಿತ್ರ, ನುಣುಪಾಗಿ ಹಾಗೂ ಅದ್ಭುತ ಅನುಲೇಪನದಿಂದ ಚಿತ್ರತವಾಗಿದೆ. ಇವನ್ನು ಸುವರ್ಣದಿಂದ ವಿಭೂಷಿತಗೊಳಿಸಲಾಗಿದೆ. ಆದ್ದರಿಂದ ಇವು ಇಂದ್ರನ ವಜ್ರದಂತೆ ಪ್ರಕಾಶಿಸುತ್ತಿವೆ.॥16½॥
ಮೂಲಮ್ - 17½
ಸಂಪೂರ್ಣಾಶ್ಚ ಶಿತೈರ್ಬಾಣೈಸ್ತೂಣಾಶ್ಚ ಶುಭದರ್ಶನಾಃ ॥
ಜೀವಿತಾಂತಕರೈರ್ಘೋರೈರ್ಜ್ವಲದ್ಭಿರಿವ ಪನ್ನಗೈಃ ।
ಅನುವಾದ
ಪ್ರಾಣಾಂತಕಾರಿಯಾದ ಸರ್ಪಗಳಂತೆ ಭಯಂಕರ ಹಾಗೂ ಪ್ರಕಾಶಮಯ ಹರಿತ ಬಾಣಗಳಿಂದ ತುಂಬಿರುವ ನಿಮ್ಮಬ್ಬರ ಬತ್ತಳಿಕೆಗಳು ಬಹಳ ಶೋಭಿಸುತ್ತಿವೆ.॥17½॥
ಮೂಲಮ್ - 18½
ಮಹಾಪ್ರಮಾಣೌ ವಿಫುಲೌ ತಪ್ತಹಾಟಕಭೂಷಣೌ ॥
ಖಡ್ಗಾವೇತೌ ವಿರಾಜೇತೇ ನಿರ್ಮುಕ್ತಭುಜಗಾವಿವೆ ।
ಅನುವಾದ
ನಿಮ್ಮ ಈ ಎರಡು ಖಡ್ಗಗಳು ಬಹಳ ದೊಡ್ಡದಾಗಿದ್ದು, ವಿಸ್ತೃತವಾಗಿವೆ. ಇವನ್ನು ಪುಟಕ್ಕಿಟ್ಟ ಚಿನ್ನದಿಂದ ವಿಭೂಷಿತಗೊಳಿಸಲಾಗಿದೆ. ಇವೆರಡೂ ಪೊರೆಬಿಟ್ಟ ಹಾವುಗಳಂತೆ ಶೋಭಿಸುತ್ತಿವೆ.॥18½॥
ಮೂಲಮ್ - 19
ಏವಂ ಮಾಂ ಪರಿಭಾಷಂತಂ ಕಸ್ಮಾದ್ವೈ ನಾಭಿಭಾಷತಃ ॥
ಮೂಲಮ್ - 20
ಸುಗ್ರೀವೋ ನಾಮ ಧರ್ಮಾತ್ಮಾ ಕಶ್ಚಿದ್ವಾನರಪುಂಗವಃ ।
ವೀರೋ ವಿನಿಕೃತೋ ಭಾತ್ರಾ ಜಗದ್ಭ್ರಮತಿ ದುಃಖಿತಃ ॥
ಅನುವಾದ
ವೀರರೇ! ಹೀಗೆ ನಾನು ಪದೇ-ಪದೇ ನಿಮ್ಮ ಪರಿಚಯವನ್ನು ಕೇಳುತ್ತಿದ್ದೇನೆ, ಆದರೆ ನೀವು ಏಕೆ ಉತ್ತರಿಸುವುದಿಲ್ಲ? ಇಲ್ಲಿ ಸುಗ್ರೀವನೆಂಬ ಶ್ರೇಷ್ಠ ವಾನರನೊಬ್ಬನಿರುವನು, ಅವನು ಬಹಳ ಧರ್ಮಾತ್ಮಾ ಮತ್ತು ವೀರನಾಗಿದ್ದಾನೆ. ಅವನ ಅಣ್ಣ ವಾಲಿಯು ಅವನನ್ನು ರಾಜ್ಯದಿಂದ ಹೊರಹಾಕಿರುವನು. ಅದಕ್ಕಾಗಿ ಅವನು ಅತ್ಯಂತ ದುಃಖಿತನಾಗಿ ಇಡೀ ಜಗತ್ತಿನಲ್ಲಿ ಅಲೆಯುತ್ತಿದ್ದಾನೆ.॥19-20॥
ಮೂಲಮ್ - 21
ಪ್ರಾಪ್ತೋಹಂ ಪ್ರೇಷಿತಸ್ತೇನ ಸುಗ್ರೀವೇಣ ಮಹಾತ್ಮನಾ ।
ರಾಜ್ಞಾ ವಾನರಮುಖ್ಯಾನಾಂ ಹನೂಮಾನ್ನಾಮ ವಾನರಃ ॥
ಅನುವಾದ
ಆ ವಾನರ ಶಿರೋಮಣಿ ರಾಜಾ ಮಹಾತ್ಮಾ ಸುಗ್ರೀವನು ಕಳಿಸಿದ್ದರಿಂದ ನಾನು ಇಲ್ಲಿಗೆ ಬಂದಿರುವೆನು. ನನ್ನ ಹೆಸರು ಹನುಮಂತ, ನಾನೂ ವಾನರ ಜಾತಿಯವನಾಗಿದ್ದೇನೆ.॥21॥
ಮೂಲಮ್ - 22
ಯುವಾಭ್ಯಾಂ ಸಹಿ ಧರ್ಮಾತ್ಮಾ ಸುಗ್ರೀವಃ ಸಖ್ಯಮಿಚ್ಛತಿ ।
ತಸ್ಯ ಮಾಂ ಸಚಿವಂ ವಿತ್ತಂ ವಾನರಂ ಪವನಾತ್ಮಜಮ್ ॥
ಮೂಲಮ್ - 23
ಭಿಕ್ಷುರೂಪ ಪ್ರತಿಚ್ಛನ್ನಂ ಸುಗ್ರೀವ ಪ್ರಿಯಕಾರಣಾತ್ ।
ಋಷ್ಯಮೂಕಾದಿಹ ಪ್ರಾಪ್ತಂ ಕಾಮಗಂ ಕಾಮಚಾರಿಣಮ್ ॥
ಅನುವಾದ
ಧರ್ಮಾತ್ಮಾ ಸುಗ್ರೀವನು ನಿಮ್ಮಬ್ಬರೊಡನೆ ಮಿತ್ರತೆಯನ್ನು ಮಾಡಲು ಬಯಸುತ್ತಿದ್ದಾನೆ. ನೀವು ನನ್ನನ್ನು ಅವನ ಮಂತ್ರಿ ಎಂದು ತಿಳಿಯಿರಿ. ನಾನು ವಾಯುದೇವರ ವಾನರ ಜಾತಿಯ ಪುತ್ರನಾಗಿದ್ದೇನೆ. ನಾನು ಬಯಸಿದಲ್ಲಿಗೆ ಹೋಗಬಲ್ಲೆ, ಬಯಸಿದ ರೂಪವನ್ನು ಧರಿಸಬಲ್ಲೆ. ಈಗ ಸುಗ್ರೀವನ ಪ್ರಿಯವನ್ನುಂಟು ಮಾಡಲು ಭಿಕ್ಷುರೂಪದಿಂದ ನನ್ನನ್ನು ಮರೆಮಾಡಿಕೊಂಡು ನಾನು ಋಷ್ಯಮೂಕ ಪರ್ವತದಿಂದ ಬಂದಿರುವೆನು.॥22-23॥
ಮೂಲಮ್ - 24
ಏವಮುಕ್ತ್ವಾ ತು ಹನುಮಾಂಸ್ತೌ ವೀರೌ ರಾಮಲಕ್ಷ್ಮಣೌ ।
ವಾಕ್ಯಜ್ಞೋ ವಾಕ್ಯಕುಶಲಃ ಪುನರ್ನೋವಾಚ ಕಿಂಚನ ॥
ಅನುವಾದ
ವೀರವರ ಶ್ರೀರಾಮ-ಲಕ್ಷ್ಮಣರಲ್ಲಿ ಹೀಗೆ ಹೇಳಿ ವಾಕ್ಯಕುಶಲ ಹಾಗೂ ಮಾತಿನ ಮರ್ಮಜ್ಞನಾದ ಹನುಮಂತನು ಸುಮ್ಮನಾದನು; ಮತ್ತೆ ಏನನ್ನೂ ಮಾತನಾಡಲಿಲ್ಲ.॥24॥
ಮೂಲಮ್ - 25
ಏತಚ್ಛ್ರುತ್ವಾ ವಚಸ್ತಸ್ಯ ರಾಮೋ ಲಕ್ಷ್ಮಣಮಬ್ರವೀತ್ ।
ಪ್ರಹೃಷ್ಟವದನಃ ಶ್ರೀಮಾನ್ ಭ್ರಾತರಂ ಪಾರ್ಶ್ವತಃ ಸ್ಥಿತಮ್ ॥
ಅನುವಾದ
ಅವನ ಮಾತನ್ನು ಕೇಳಿ ಶ್ರೀರಾಮನು ಪ್ರಸನ್ನವದನನಾಗಿ, ಪಕ್ಕದಲ್ಲಿ ನಿಂತಿದ್ದ ತಮ್ಮನಾದ ಲಕ್ಷ್ಮಣನಲ್ಲಿ ಇಂತೆಂದನು.॥25॥
ಮೂಲಮ್ - 26
ಸಚಿವೋಽಯಂ ಕಪೀಂದ್ರಸ್ಯ ಸುಗ್ರೀವಸ್ಯ ಮಹಾತ್ಮನಃ ।
ತಮೇವ ಕಾಂಕ್ಷಮಾಣಸ್ಯ ಮಮಾಂತಿಕಮಿಹಾಗತಃ ॥
ಅನುವಾದ
ಸುಮಿತ್ರಾನಂದನ! ಇವನು ಮಹಾಮನಸ್ವೀ ಸುಗ್ರೀವನ ಸಚಿವನಾಗಿದ್ದಾನೆ. ಅವನ ಹಿತದ ಇಚ್ಛೆಯಿಂದಲೇ ಇಲ್ಲಿ ನಮ್ಮ ಬಳಿಗೆ ಬಂದಿರುವನು.॥26॥
ಮೂಲಮ್ - 27
ತಮಭ್ಯಭಾಷ ಸೌಮಿತ್ರೇ ಸುಗ್ರೀವಸಚಿವಂ ಕಪಿಮ್ ।
ವಾಕ್ಯಜ್ಞಂ ಮಧುರೈರ್ವಾಕ್ಯೈಃ ಸ್ನೇಹಯುಕ್ತಮರಿಂದಮ್ ॥
ಅನುವಾದ
ಲಕ್ಷ್ಮಣ! ಈ ಶತ್ರುದಮನ ಸುಗ್ರೀವ ಸಚಿವ ‘ಕಪಿವರ’ ಮಾತಿನ ಮರ್ಮತಿಳಿದಿರುವ ಹನುಮಂತನಲ್ಲಿ ನೀನು ಸ್ನೇಹಪೂರ್ವಕ ಮಧುರವಾಣಿಯಿಂದ ಮಾತನಾಡು.॥27॥
ಮೂಲಮ್ - 28
ನಾನೃಗ್ವೇದವಿನೀತಸ್ಯ ನಾಯಜುರ್ವೇದಧಾರಿಣಃ ।
ನಾಸಾಮವೇದವಿದುಷಃ ಶಕ್ಯಮೇವಂ ಪ್ರಭಾಷಿತುಮ್ ॥
ಅನುವಾದ
ಯಾರಿಗೆ ಋಗ್ವೇದ ಶಿಕ್ಷಣ ದೊರೆಯಲಿಲ್ಲವೋ, ಯಜುರ್ವೇದದ ಅಭ್ಯಾಸ ಮಾಡಿಲ್ಲವೋ, ಸಾಮವೇದದ ವಿದ್ವಾಂಸನಲ್ಲವೋ ಅವನು ಇಷ್ಟು ಸುಂದರ ಭಾಷೆಯಲ್ಲಿ ಮಾತನಾಡಲಾರನು.॥28॥
ಮೂಲಮ್ - 29
ನೂನಂ ವ್ಯಾಕರಣಂ ಕೃತ್ಸ್ನಮನೇನ ಬಹುಧಾ ಶ್ರುತಮ್ ।
ಬಹು ವ್ಯಾಹರತಾನೇನ ನ ಕಿಂಚಿದಪಶಬ್ದಿತಮ್ ॥
ಅನುವಾದ
ನಿಶ್ಚಯವಾಗಿ ಇವನು ಸಮಗ್ರ ವ್ಯಾಕರಣವನ್ನು ಅನೇಕ ಬಾರಿ ಅಧ್ಯಯನ ಮಾಡಿರುವನು; ಏಕೆಂದರೆ ತುಂಬಾ ಮಾತಾಡಿದರೂ ಇವನ ಬಾಯಿಯಿಂದ ಯಾವುದೇ ಅಶುದ್ಧಿ, ಅಪಶಬ್ದ ಬಂದಿಲ್ಲ.॥29॥
ಮೂಲಮ್ - 30
ನ ಮುಖೇ ನೇತ್ರಯೋಶ್ಚಾಪಿ ಲಲಾಟೇ ಚ ಭ್ರುವೋಸ್ತಥಾ ।
ಅನ್ಯೇಷ್ವಪಿ ಚ ಸರ್ವೇಷು ದೋಷಃ ಸಂವಿದಿತಃ ಕ್ವಚಿತ್ ॥
ಅನುವಾದ
ಸಂಭಾಷಿಸುತ್ತಿರುವಾಗ ಇವನ ಮುಖ, ನೇತ್ರ, ಲಲಾಟ, ಹುಬ್ಬು ಹಾಗೂ ಇತರ ಎಲ್ಲ ಅವಯವಗಳಲ್ಲಿ ಯಾವುದೇ ದೋಷ ಪ್ರಕಟವಾದಂತೆ ತಿಳಿಯಲಿಲ್ಲ.॥30॥
ಮೂಲಮ್ - 31
ಅವಿಸ್ತರಮಸಂದಿಗ್ಧಮವಿಲಂಬಿತಮವ್ಯಥಮ್ ।
ಉರಃಸ್ಥಂ ಕಂಠಗಂ ವಾಕ್ಯಂ ವರ್ತತೇ ಮಧ್ಯಮ ಸ್ವರಮ್ ॥
ಅನುವಾದ
ಇವನು ಸ್ವಲ್ಪದರಲ್ಲಿ ಬಹಳ ಸ್ಪಷ್ಟವಾಗಿ ತನ್ನ ಅಭಿಪ್ರಾಯವನ್ನು ನಿವೇದಿಸಿರುವನು. ಅದನ್ನು ಅರಿಯಲು ಎಲ್ಲಿಯೂ ಯಾವುದೇ ಸಂದೇಹ ಉಂಟಾಗಲಿಲ್ಲ. ಕೇಳಲು ಕರ್ಣಕಟುವಾಗಿ ತಡೆದು-ತಡೆದು ಅಥವಾ ಶಬ್ದಗಳನ್ನು ಅಕ್ಷರಗಳನ್ನು ಮುರಿದು ಯಾವುದೇ ವಾಕ್ಯವನ್ನು ಉಚ್ಚರಿಸಲಿಲ್ಲ, ಇವನ ವಾಣಿ ಹೃದಯದಲ್ಲಿ ಮಧ್ಯಮಾರೂಪದಲ್ಲಿ, ಕಂಠದಿಂದ ವೈಖರೀರೂಪದಲ್ಲಿ ಪ್ರಕಟವಾಗುತ್ತಿದೆ. ಆದ್ದರಿಂದ ಮಾತನಾಡುವಾಗ ಇವನ ಧ್ವನಿ ಬಹಳ ಮೆಲ್ಲಗೆ, ಬಹಳ ಗಟ್ಟಿಯಾಗಿರಲಿಲ್ಲ. ಮಧ್ಯಮ ಸ್ವರದಲ್ಲೇ ಇವನು ಎಲ್ಲ ಮಾತುಗಳನ್ನು ನುಡಿದಿರುವನು.॥31॥
ಮೂಲಮ್ - 32
ಸಂಸ್ಕಾರಕ್ರಮಸಂಪನ್ನಾಮದ್ಭುತಾಮವಿಲಂಬಿತಾಮ್ ।
ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹರ್ಷಿಣೀಮ್ ॥
ಅನುವಾದ
ಇವನು ಸಂಸ್ಕಾರ1 ಮತ್ತು ಕ್ರಮದಿಂದ2 ಸಂಪನ್ನ, ಅದ್ಭುತ, ಅವಿಲಂಬಿತ3 ಹಾಗೂ ಹೃದಯಕ್ಕೆ ಆನಂದವನ್ನು ಉಂಟುಮಾಡುವ ಮಂಗಳಮಯ ವಾಣಿಯನ್ನು ಉಚ್ಛರಿಸಿರುವನು.॥32॥
ಟಿಪ್ಪನೀ
- ವ್ಯಾಕರಣದ ನಿಯಮಾನುಕೂಲ ಶುದ್ಧವಾಣಿಯನ್ನು ಸಂಸ್ಕಾರ ಸಂಪನ್ನ (ಸಂಸ್ಕೃತ)ವೆಂದು ಹೇಳುತ್ತಾರೆ.
- ಶಬ್ದೋಚ್ಚಾರದ ಶಾಸ್ತ್ರೀಯ ಸಂಪ್ರದಾಯದ ಹೆಸರು ಕ್ರಮವಾಗಿದೆ.
- ತಡವದೇ ಧಾರಾಪ್ರವಾಹ ರೂಪದಿಂದ ಮಾತನಾಡುವುದನ್ನು ಅವಿಲಂಬಿತ ಎಂದು ಹೇಳುತ್ತಾರೆ.
ಮೂಲಮ್ - 33
ಅನಯಾ ಚಿತ್ರಯಾ ವಾಚಾ ತ್ರಿಸ್ಥಾನವ್ಯಂಜನಸ್ಥಯಾ ।
ಕಸ್ಯ ನಾರಾಧ್ಯತೇ ಚಿತ್ತಮುದ್ಯತಾಸೇರರೇರಪಿ ॥
ಅನುವಾದ
ಹೃದಯ, ಕಂಠ ಮತ್ತು ಮೂರ್ಧ್ನಾ - ಈ ಮೂರೂ ಸ್ಥಾನಗಳಿಂದ ಸ್ಪಷ್ಟರೂಪದಿಂದ ಅಭಿವ್ಯಕ್ತವಾಗುವ ಇವನ ಈ ವಿಚಿತ್ರ ವಾಣಿಯನ್ನು ಕೇಳಿ ಯಾರ ಚಿತ್ತ ತಾನೇ ಪ್ರಸನ್ನವಾಗಲಾರದು? ವಧಿಸಲು ಖಡ್ಗ ವನ್ನೆತ್ತಿದ ಶತ್ರುವಿನ ಹೃದಯವೂ ಈ ಅದ್ಭುತವಾಣಿಯಿಂದ ಬದಲಾಗಬಲ್ಲದು.॥33॥
ಮೂಲಮ್ - 34
ಏವಂ ವಿಧೋ ಯಸ್ಯ ದೂತೋ ನ ಭವೇತ್ ಪಾರ್ಥಿವಸ್ಯ ತು ।
ಸಿಧ್ಯಂತಿ ಹಿ ಕಥಂ ತಸ್ಯ ಕಾರ್ಯಾಣಾಂ ಗತಯೋಽನಘ ॥
ಅನುವಾದ
ನಿಷ್ಪಾಪ ಲಕ್ಷ್ಮಣ! ಯಾವ ರಾಜನ ಬಳಿ ಇವನಂತಹ ದೂತನು ಇರುವುದಿಲ್ಲವೋ ಅವನ ಕಾರ್ಯಗಳ ಸಿದ್ಧಿ ಹೇಗಾಗಬಲ್ಲದು.॥34॥
ಮೂಲಮ್ - 35
ಏವಂ ಗುಣಗಣೈರ್ಯುಕ್ತಾ ಯಸ್ಯ ಸ್ಯುಃ ಕಾರ್ಯಸಾಧಕಾಃ ।
ತಸ್ಯ ಸಿಧ್ಯಂತಿ ಸರ್ವೇಽರ್ಥಾ ದೂತವಾಕ್ಯಪ್ರಚೋದಿತಾಃ ॥
ಅನುವಾದ
ಇಂತಹ ಉತ್ತಮ ಗುಣಗಳಿಂದ ಕೂಡಿದ, ಕಾರ್ಯಸಾಧಕ ದೂತನಿರುವ ರಾಜನ ಎಲ್ಲ ಮನೋರಥಗಳು ದೂತನ ಮಾತಿನಿಂದಲೇ ಸಿದ್ಧವಾಗುತ್ತವೆ.॥35॥
ಮೂಲಮ್ - 36
ಏವಮುಕ್ತಸ್ತು ಸೌಮಿತ್ರಿಃ ಸುಗ್ರೀವಸಚಿವಂ ಕಪಿಮ್ ।
ಅಭ್ಯಭಾಷತ ವಾಕ್ಯಜ್ಞೋ ವಾಕ್ಯಜ್ಞಂ ಪವನಾತ್ಮಜಮ್ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಮಾತಿನ ಕಲೆಯನ್ನು ಬಲ್ಲ ಸುಮಿತ್ರಾನಂದನ ಲಕ್ಷ್ಮಣನು ಮಾತಿನ ಮರ್ಮ ತಿಳಿಯುವ ಪವನಕುಮಾರ ಸುಗ್ರೀವ ಸಚಿವ ಕಪಿವರ ಹನುಮಂತನಲ್ಲಿ ಈ ಪ್ರಕಾರ ಹೇಳಿದನು.॥36॥
ಮೂಲಮ್ - 37
ವಿದಿತಾ ನೌ ಗುಣಾ ವಿದ್ವನ್ ಸುಗ್ರೀವಸ್ಯ ಮಹಾತ್ಮನಃ ।
ತಮೇವ ಚಾವಾಂ ಮಾರ್ಗಾವಃ ಸುಗ್ರೀವಂ ಪ್ಲವಗೇಶ್ವರಮ್ ॥
ಅನುವಾದ
ವಿದ್ವಾಂಸನೇ! ಮಹಾಮನಾ ಸುಗ್ರೀವನ ಗುಣಗಳು ನಮಗೆ ತಿಳಿದಂತಾಯಿತು. ನಾವಿಬ್ಬರೂ ವಾನರರಾಜ ಸುಗ್ರೀವನನ್ನೇ ಹುಡುಕುತ್ತಾ ಇಲ್ಲಿಗೆ ಬಂದಿರುವೆವು.॥37॥
ಮೂಲಮ್ - 38
ಯಥಾ ಬ್ರವೀಷಿ ಹನುಮನ್ ಸುಗ್ರೀವವಚನಾದಿಹ ।
ತತ್ತಥಾ ಹಿ ಕರಿಷ್ಯಾವೋ ವಚನಾತ್ತವ ಸತ್ತಮ ॥
ಅನುವಾದ
ಸಾಧು ಶಿರೋಮಣಿ ಹನುಮಂತನೇ! ನೀನು ಸುಗ್ರೀವನ ಮಾತಿನಂತೆ ಇಲ್ಲಿಗೆ ಬಂದು ತಿಳಿಸಿದ ಮೈತ್ರಿಯ ಮಾತು ನಮಗೆ ಸ್ವೀಕಾರವಾಗಿದೆ. ನೀನು ಹೇಳಿದ್ದರಿಂದ ನಾವು ಹಾಗೆಯೇ ಮಾಡುವೆವು.॥38॥
ಮೂಲಮ್ - 39
ತತ್ತಸ್ಯ ವಾಕ್ಯಂ ನಿಪುಣಂ ನಿಶಮ್ಯ
ಪ್ರಹೃಷ್ಟರೂಪಃ ಪವನಾತ್ಮಜಃ ಕಪಿಃ ।
ಮನಃ ಸಮಾಧಾಯ ಜಯೋಪಪತ್ತೌ
ಸಖ್ಯಂ ತದಾ ಕರ್ತುಮಿಯೇಷ ತಾಭ್ಯಾಮ್ ॥
ಅನುವಾದ
ಲಕ್ಷ್ಮಣನ, ಸ್ವೀಕೃತಿ ಸೂಚಕ ಈ ನಿಪುಣತೆಯಿಂದ ಕೂಡಿದ ಮಾತನ್ನು ಕೇಳಿ ಪವನಕುಮಾರ ಕಪಿವರ ಹನುಮಂತನಿಗೆ ಬಹಳ ಸಂತೋಷವಾಯಿತು. ಅವನು ಸುಗ್ರೀವನ ವಿಜಯಸಿದ್ಧಿಯಲ್ಲಿ ಮನಸ್ಸನ್ನು ತೊಡಗಿಸಿ ಆಗ ಅವರಿಬ್ಬರೂ ಸೋದರರಲ್ಲಿ ಅವನ ಮಿತ್ರತೆಯನ್ನು ಮಾಡುವ ಇಚ್ಛೆಯನ್ನು ಪ್ರಕಟಿಸಿದನು.॥39॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂರನೆಯ ಸರ್ಗ ಸಂಪೂರ್ಣವಾಯಿತು.॥3॥