००२ भिक्षुरूपेण हनुमदागमनम्

वाचनम्
ಭಾಗಸೂಚನಾ

ಸುಗ್ರೀವಾದಿಗಳ ಸಂದೇಹ, ಹನುಮಂತನಿಂದ ಅದರ ನಿವಾರಣೆ, ರಾಮ-ಲಕ್ಷ್ಮಣರ ಬಳಿಗೆ ಹನುಮಂತನ ಆಗಮನ

ಮೂಲಮ್ - 1

ತೌ ತು ದೃಷ್ಟ್ವಾ ಮಹಾತ್ಮಾನೌ ಭ್ರಾತರೌ ರಾಮಲಕ್ಷ್ಮಣೌ ।
ವರಾಯುಧಧರೌ ವೀರೌ ಸುಗ್ರೀವಃ ಶಂಕಿತೋಽಭವತ್ ॥

ಅನುವಾದ

ಶ್ರೇಷ್ಠವಾದ ಆಯುಧಗಳನ್ನು ಧರಿಸಿದ್ದ, ಮಹಾತ್ಮರಾದ, ವೀರರಾದ ರಾಮ-ಲಕ್ಷ್ಮಣರನ್ನು ನೋಡಿ ಋಷ್ಯಮೂಕ ಪರ್ವತದ ಮೇಲೆ ಕುಳಿತಿದ್ದ ಸುಗ್ರೀವನ ಮನಸ್ಸಿನಲ್ಲಿ ಸಂದೇಹವುಂಟಾಯಿತು.॥1॥

ಮೂಲಮ್ - 2

ಉದ್ವಿಗ್ನಹೃದಯಃ ಸರ್ವಾ ದಿಶಃ ಸಮವಲೋಕಯನ್ ।
ನ ವ್ಯತಿಷ್ಠಿತ ಕಸ್ಮಿಂಶ್ಚಿದ್ ದೇಶೇ ವಾನರಪುಂಗವಃ ॥

ಅನುವಾದ

ಅವನು ಉದ್ವಿಗ್ನನಾಗಿ ನಾಲ್ಕೂ ಕಡೆಗೆ ನೋಡತೊಡಗಿದನು. ಆಗ ವಾನರಶ್ರೇಷ್ಠ ಸುಗ್ರೀವನು ಯಾವುದೇ ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರದಾದನು.॥2॥

ಮೂಲಮ್ - 3

ನೈವ ಚಕ್ರೇ ಮನಃ ಸ್ಥಾತು ವೀಕ್ಷಮಾಣೋ ಮಹಾಬಲೌ ।
ಕಪೇಃ ಪರಮಭೀತಸ್ಯ ಚಿತ್ತಂ ವ್ಯವಸಸಾದ ಹ ॥

ಅನುವಾದ

ಮಹಾಬಲಿ ಶ್ರೀರಾಮ ಮತ್ತು ಲಕ್ಷ್ಮಣರನ್ನು ನೋಡುತ್ತಲೇ ಸುಗ್ರೀವನು ತನ್ನ ಮನಸ್ಸನ್ನು ಸ್ಥಿರಗೊಳಿಸಿದನು. ಆಗ ಅತ್ಯಂತ ಭಯಭೀತನಾದ ಆ ವಾನರರಾಜನ ಚಿತ್ತ ಬಹಳ ದುಃಖಿತವಾಯಿತು.॥3॥

ಮೂಲಮ್ - 4

ಚಿಂತಯಿತ್ವಾ ಸ ಧರ್ಮಾತ್ಮಾ ವಿಮೃಶ್ಯಗುರುಲಾಘವಮ್ ।
ಸುಗ್ರೀವಃ ಪರಮೋದ್ವಿಗ್ನಃ ಸರ್ವೈಸ್ತೈರ್ವಾನರೈಃ ಸಹ ॥

ಅನುವಾದ

ಸುಗ್ರೀವನು ಧರ್ಮಾತ್ಮನಾಗಿದ್ದನು. ಅವನಿಗೆ ರಾಜಧರ್ಮದ ಜ್ಞಾನವಿತ್ತು. ಅವನು ಮಂತ್ರಿಗಳೊಂದಿಗೆ ಸಮಾಲೋಚಿಸಿ ತನ್ನ ದುರ್ಬಲತೆಯನ್ನು, ಶತ್ರುಪಕ್ಷದ ಪ್ರಬಲತೆಯನ್ನು ನಿಶ್ಚಯಿಸಿದನು. ಅನಂತರ ಅವನು ಸಮಸ್ತ ವಾನರರೊಂದಿಗೆ ಉದ್ವಿಗ್ನನಾದನು.॥4॥

ಮೂಲಮ್ - 5

ತತಃ ಸ ಸಚಿವೇಭ್ಯಸ್ತು ಸುಗ್ರೀವಃ ಪ್ಲವಗಾಧಿಪಃ ।
ಶಶಂಸ ಪರಮೋದ್ವಿಗ್ನಃ ಪಶ್ಯಂಸ್ತೌ ರಾಮಲಕ್ಷ್ಮಣೌ ॥

ಅನುವಾದ

ವಾನರರಾಜ ಸುಗ್ರೀವನ ಹೃದಯದಲ್ಲಿ ಬಹಳ ಉದ್ವೇಗ ಉಂಟಾಗಿತ್ತು. ಅವನು ಶ್ರೀರಾಮ-ಲಕ್ಷ್ಮಣರ ಕಡೆಗೆ ನೋಡುತ್ತಾ ಮಂತ್ರಿಗಳಲ್ಲಿ ಈ ಪ್ರಕಾರ ಹೇಳಿದನು.॥5॥

ಮೂಲಮ್ - 6

ಏತೌ ವನಮಿದಂ ದುರ್ಗಂ ವಾಲಿಪ್ರಣಿಹಿತೌ ಧ್ರುವಮ್ ।
ಛದ್ಮನಾ ಚೀರವಸನೌ ಪ್ರಚರಂತಾ ವಿಹಾಗತೌ ॥

ಅನುವಾದ

ಇವರಿಬ್ಬರು ವೀರರನ್ನು ಖಂಡಿತವಾಗಿ ವಾಲಿಯೇ ಕಳಿಸಿರಬೇಕು, ಅದಕ್ಕಾಗಿ ಈ ದುರ್ಗಮವನದಲ್ಲಿ ತಿರುಗತ್ತಾ ಇದ್ದಾರೆ. ಯಾರೂ ಗುರುತಿಸಬಾರದೆಂದು ಇವರು ನಾರುಮಡಿ ವಸ್ತ್ರವನ್ನು ಧರಿಸಿರುವರು.॥6॥

ಮೂಲಮ್ - 7

ತತಃ ಸುಗ್ರೀವಸಚಿವಾ ದೃಷ್ಟ್ವಾಪರಮಧನ್ವಿನೌ ।
ಜಗ್ಮುರ್ಗಿರಿತಟಾತ್ ತಸ್ಮಾದನ್ಯಚ್ಛಿಖರಮುತ್ತಮಮ್ ॥

ಅನುವಾದ

ಅತ್ತ ಸುಗ್ರೀವನ ಸಹಾಯಕ ಇತರ ವಾನರರೂ ಆ ಮಹಾಧನುರ್ಧರ ಶ್ರೀರಾಮ-ಲಕ್ಷ್ಮಣರನ್ನು ನೋಡಿದಾಗ ಆ ಪರ್ವತದಿಂದ ಓಡಿ ಇನ್ನೊಂದು ಉತ್ತಮ ಪರ್ವತಕ್ಕೆ ಹೋದರು.॥7॥

ಮೂಲಮ್ - 8

ತೇ ಕ್ಷಿಪ್ರಮಭಿಗಮ್ಯಾಥ ಯೂಥಪಾಯೂಥಪರ್ಷಭಮ್ ।
ಹರಯೋ ವಾನರಶ್ರೇಷ್ಠಂ ಪರಿವಾರ್ಯೋಪತಸ್ಥಿರೇ ॥

ಅನುವಾದ

ಆ ಯೂಧಪತಿ ವಾನರರು ಬೇಗನೇ ಹೋಗಿ ಯೂಧಪತಿಗಳ ಮುಖಂಡ ವಾನರ ಶಿರೋಮಣಿ ಸುಗ್ರೀವನನ್ನು ಸುತ್ತುವರಿದು ಅವನ ಬಳಿ ನಿಂತುಕೊಂಡರು.॥8॥

ಮೂಲಮ್ - 9

ಏವಮೇಕಾಯನಗತಾಃ ಪ್ಲವಮಾನಾ ಗಿರೇರ್ಗಿರಿಮ್ ।
ಪ್ರಕಂಪಯಂತೋ ವೇಗೇನ ಗಿರೀಣಾಂ ಶಿಖರಾಣಿ ಚ ॥

ಮೂಲಮ್ - 10

ತತಃ ಶಾಖಾಮೃಗಾಃ ಸರ್ವೇ ಪ್ಲವಮಾನಾ ಮಹಾಬಲಾಃ ।
ಬಭಂಜುಶ್ಚ ನಗಾಂಸ್ತತ್ರ ಪುಷ್ಟಿತಾನ್ ದುರ್ಗಸಮಾಶ್ರಿತಾನ್ ॥

ಅನುವಾದ

ಹೀಗೆ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ನೆಗೆಯುತ್ತಾ ಕುಪ್ಪಳಿಸುತ್ತಾ ತಮ್ಮ ವೇಗದಿಂದ ಪರ್ವತ ಶಿಖರಗಳನ್ನು ನಡುಗಿಸುತ್ತಾ ಆ ಎಲ್ಲ ಮಹಾಬಲಿ ವಾನರರು ಒಂದೆಡೆ ಸೇರಿದರು. ಅವರೆಲ್ಲರೂ ನೆಗೆಯುತ್ತಾ ಪುಷ್ಪಶೋಭಿತ ಅಸಂಖ್ಯ ವೃಕ್ಷಗಳನ್ನು ಮುರಿದುಹಾಕಿದ್ದರು.॥9-10॥

ಮೂಲಮ್ - 11

ಆಪ್ಲವಂತೋ ಹರಿವರಾಃ ಸರ್ವತಸ್ತಂ ಮಹಾಗಿರಿಮ್ ।
ಮೃಗಮಾರ್ಜಾರಶಾರ್ದೂಲಾಂಸಾಸಯಂತೋ ಯಯುಸ್ತದಾ ॥

ಅನುವಾದ

ಆ ಸಮಯದಲ್ಲಿ ನಾಲ್ಕೂ ಕಡೆಗಳಿಂದ ಆ ಮಹಾಪರ್ವತಕ್ಕೆ ಹಾರುತ್ತಾ ಬರುವಾಗ ಶ್ರೇಷ್ಠ ವಾನರರು ಅಲ್ಲಿರುವ ಮೃಗಗಳನ್ನು, ಕಾಡುಬೆಕ್ಕುಗಳನ್ನು, ಹುಲಿಗಳನ್ನು ಭಯಗೊಳಿಸುತ್ತಾ ಬರುತ್ತಿದ್ದರು.॥11॥

ಮೂಲಮ್ - 12

ತತಃ ಸುಗ್ರೀವಸಚಿವಾಃ ಪರ್ವತೇಂದ್ರೇ ಸಮಾಹ್ರಿತಾಃ ।
ಸಂಗಮ್ಯ ಕಪಿಮುಖ್ಯೇನ ಸರ್ವೇ ಪ್ರಾಂಜಲಯಃ ಸ್ಥಿತಾಃ ॥

ಅನುವಾದ

ಈ ಪ್ರಕಾರ ಸುಗ್ರೀವನ ಎಲ್ಲ ಸಚಿವರು ಪರ್ವತರಾಜ ಋಷ್ಯಮೂಕದ ಮೇಲೆ ಬಂದು ಸೇರಿದರು ಹಾಗೂ ಏಕಾಗ್ರಚಿತ್ತರಾಗಿ ವಾನರ ರಾಜನನ್ನು ಸಂಧಿಸಿ ಅವನ ಮುಂದೆ ಕೈಮುಗಿದುಕೊಂಡು ನಿಂತುಕೊಂಡರು.॥12॥

ಮೂಲಮ್ - 13

ತತಸ್ತಂ ಭಯಸಂತ್ರಸ್ತಂ ವಾಲಿಕಿಲ್ಬಿಷ ಶಂಕಿತಮ್ ।
ಉವಾಚ ಹನುಮಾನ್ವಾಕ್ಯಂ ಸುಗ್ರೀವಂ ವಾಕ್ಯಕೋವಿದಃ ॥

ಅನುವಾದ

ಅನಂತರ ವಾಲಿಯ ಕುಟೀಲತೆಯ ಕುರಿತು ಸಂಶಯ ಪಟ್ಟು ಭಯಭೀತನಾದ ಸುಗ್ರೀವನನ್ನು ನೋಡಿ ವಾಕ್ಯಕೋವಿದನಾದ ಹನುಮಂತನು ಹೀಗೆ ಹೇಳಿದನು.॥13॥

ಮೂಲಮ್ - 14

ಸಂಭ್ರಮಸ್ತ್ಯಜ್ಯತಾಮೇಷ ಸರ್ವೈರ್ವಾಲಿಕೃತೇ ಮಹಾನ್ ।
ಮಲಯೋಽಯಂ ಗಿರಿವರೋ ಭಯಂ ನೇಹಾಸ್ತಿ ವಾಲಿನಃ ॥

ಅನುವಾದ

ನೀವೆಲ್ಲರೂ ವಾಲಿಯಿಂದಾದ ಈ ಭಾರೀ ಗಾಬರಿಯನ್ನು ಬಿಟ್ಟುಬಿಡಿರಿ. ಈ ಮಲಯ ಎಂಬ ಶ್ರೇಷ್ಠ ಪರ್ವತದಲ್ಲಿ ವಾಲಿಯಿಂದ ಯಾವುದೇ ಭಯವಿಲ್ಲ.॥14॥

ಮೂಲಮ್ - 15

ಯಸ್ಮಾದುದ್ವಿಗ್ನಚೇತಾಸ್ತ್ವಂ ವಿದ್ರುತೋ ಹರಿಪುಂಗವ ।
ತಂ ಕ್ರೂರದರ್ಶನಂ ಕ್ರೂರಂ ನೇಹ ಪಶ್ಯಾಮಿ ವಾಲಿನಮ್ ॥

ಅನುವಾದ

ವಾನರಶ್ರೇಷ್ಠನೇ! ಯಾರಿಂದ ಉದ್ವಿಗ್ನರಾಗಿ ನೀವು ಓಡುತ್ತಿರುವಿರೋ ಆ ಕ್ರೂರವಾಗಿ ಕಾಣುವ ನಿರ್ದಯೀ ವಾಲಿಯನ್ನು ನಾನು ಇಲ್ಲಿ ನೋಡುತ್ತಿಲ್ಲ.॥15॥

ಮೂಲಮ್ - 16

ಯಸ್ಮಾತ್ತವ ಭಯಂ ಸೌಮ್ಯಪೂರ್ವಜಾತ್ ಪಾಪಕರ್ಮಣಃ ।
ಸ ನೇಹ ವಾಲೀ ದುಷ್ಟಾತ್ಮಾ ನ ತೇ ಪಶ್ಯಾಮ್ಯಹಂ ಭಯಮ್ ॥

ಅನುವಾದ

ಸೌಮ್ಯ! ನಿಮಗೆ ನಿಮ್ಮ ಯಾವ ಪಾಪಾಚಾರಿ ಅಣ್ಣನಿಂದ ಭಯ ಉಂಟಾಗಿದೆಯೋ, ಆ ದುಷ್ಟಾತ್ಮಾ ವಾಲಿಯು ಇಲ್ಲಿಗೆ ಬರಲಾರನು. ಆದ್ದರಿಂದ ನಿಮ್ಮ ಭಯದ ಯಾವುದೇ ಕಾರಣ ನನಗೆ ಕಂಡು ಬರುತ್ತಿಲ್ಲ.॥16॥

ಮೂಲಮ್ - 17

ಅಹೋಶಾಖಾಗೃಗತ್ವಂ ತೇ ವ್ಯಕ್ತಮೇವ ಪ್ಲವಂಗಮ ।
ಲಘುಚಿತ್ತತಯಾಽಽತ್ಮಾನಂ ನ ಸ್ಥಾಪಯಸಿ ಯೋ ಮತೌ ॥

ಅನುವಾದ

ಈಗ ನೀವು ತನ್ನ ವಾನರೋಚಿತ ಚಪಲತೆಯನ್ನೇ ಪ್ರಕಟಿಸಿದಿರಿ ಇದು ಆಶ್ಚರ್ಯವಾಗಿದೆ. ವಾನರ ಶ್ರೇಷ್ಠನೇ! ನಿನ್ನ ಚಿತ್ತ ಚಂಚಲವಾಗಿದೆ. ಅದಕ್ಕಾಗಿ ನೀನು ತನ್ನನ್ನು ವಿಚಾರ ಮಾರ್ಗದಲ್ಲಿ ಸ್ಥಿರವಾಗಿಸಿಕೊಂಡಿರುವುದಿಲ್ಲ.॥17॥

ಮೂಲಮ್ - 18

ಬುದ್ಧಿವಿಜ್ಞಾನಸಂಪನ್ನ ಇಂಗಿತೈಃ ಸರ್ವಮಾಚರ ।
ನಹ್ಯಬುದ್ಧಿಂ ಗತೋ ರಾಜಾ ಸರ್ವಭೂತಾನಿ ಶಾಸ್ತಿ ಹಿ ॥

ಅನುವಾದ

ಬುದ್ಧಿ ಮತ್ತು ವಿಜ್ಞಾನದಿಂದ ಸಂಪನ್ನನಾಗಿ ನೀನು ಬೇರೆಯವರ ಚೇಷ್ಟೆಗಳಿಂದ ಅವರ ಮನೋಭಾವ ತಿಳಿದುಕೋ ಹಾಗೂ ಅದರಂತೆ ಎಲ್ಲ ಆವಶ್ಯಕ ಕಾರ್ಯ ಮಾಡು. ಏಕೆಂದರೆ ಯಾವ ರಾಜನು ಬುದ್ಧಿ-ಬಲವನ್ನು ಆಶ್ರಯಿಸುವುದಿಲ್ಲವೋ, ಅವನು ಸಮಸ್ತ ಪ್ರಜೆಯ ಮೇಲೆ ಶಾಸನ ಮಾಡಲಾರನು.॥18॥

ಮೂಲಮ್ - 19

ಸುಗ್ರೀವಸ್ತು ಶುಭಂ ವಾಕ್ಯಂ ಶ್ರುತ್ವಾ ಸರ್ವಂ ಹನೂಮತಃ ।
ತತಃ ಶುಭತರಂ ವಾಕ್ಯಂ ಹನೂಮಂತಮುವಾಚ ಹ ॥

ಅನುವಾದ

ಹನುಮಂತನು ನುಡಿದ ಈ ಶ್ರೇಷ್ಠ ಮಾತುಗಳನ್ನು ಕೇಳಿ ಸುಗ್ರೀವನು ಅವನಲ್ಲಿ ಬಹಳ ಉತ್ತಮ ಮಾತನ್ನು ಹೇಳಿದನು.॥19॥

ಮೂಲಮ್ - 20

ದೀರ್ಘಬಾಹೂ ವಿಶಾಲಾಕ್ಷೌ ಶರಚಾಪಾಸಿಧಾರಿಣೌ ।
ಕಸ್ಯ ನ ಸ್ಯಾದ್ ಭಯಂ ದೃಷ್ಟ್ವಾ ಹ್ಯೇತೌ ಸುರಸುತೋಪಮೌ ॥

ಅನುವಾದ

ಇವರಿಬ್ಬರೂ ವೀರರ ಭುಜಗಳು ದೀರ್ಘವಾಗಿದ್ದು, ನೇತ್ರಗಳು ವಿಶಾಲವಾಗಿವೆ. ಧನುಸ್ಸು, ಬಾಣ, ಖಡ್ಗ ಧರಿಸಿರುವ ಇವರು ದೇವಕುಮಾರರಂತೆ ಶೋಭಿಸುತ್ತಿದ್ದಾರೆ. ಅವರಿಬ್ಬರನ್ನು ನೋಡಿದರೆ ಯಾರಿಗೆ ತಾನೇ ಭಯವಾಗದು.॥20॥

ಮೂಲಮ್ - 21

ವಾಲಿಪ್ರಣಿಹಿತಾವೇವ ಶಂಕೇಽಹಂ ಪುರುಷೋತ್ತಮೌ ।
ರಾಜಾನೋ ಬಹುಮಿತ್ರಾಶ್ಚ ವಿಶ್ವಾಸೋ ನಾತ್ರ ಹಿ ಕ್ಷಮಃ ॥

ಅನುವಾದ

ಈ ಶ್ರೇಷ್ಠ ಪುರುಷರಿಬ್ಬರನ್ನು ವಾಲಿಯೇ ಕಳಿಸಿರಬೇಕೆಂದು ನನ್ನ ಮನಸ್ಸಿನಲ್ಲಿ ಸಂದೇಹವಿದೆ; ಏಕೆಂದರೆ ರಾಜರಿಗೆ ಅನೇಕ ಮಿತ್ರರಿರುತ್ತಾರೆ. ಆದ್ದರಿಂದ ಅವರಲ್ಲಿ ವಿಶ್ವಾಸವಿಡುವುದು ಉಚಿತವಲ್ಲ.॥21॥

ಮೂಲಮ್ - 22

ಅರಯಶ್ಚ ಮನುಷ್ಯೇಣ ವಿಜ್ಞೇಯಾಶ್ಛದ್ಮಚಾರಿಣಃ ।
ವಿಶ್ವಸ್ತಾನಾಮವಿಶ್ವಸ್ತಾಶ್ಛಿದ್ರೇಷು ಪ್ರಹರಂತ್ಯಪಿ ॥

ಅನುವಾದ

ಪ್ರತಿಯೊಬ್ಬನು ಛದ್ಮವೇಶದಲ್ಲಿ ಸಂಚರಿಸುವ ಶತ್ರುಗಳನ್ನು ವಿಶೇಷವಾಗಿ ಗುರುತಿಸುವ ಪ್ರಯತ್ನಮಾಡಬೇಕು; ಏಕೆಂದರೆ ಅವರು ಬೇರೆಯವರನ್ನು ವಿಶ್ವಾಸಕ್ಕೆ ಮಾಡಿಕೊಳ್ಳುತ್ತಾರೆ, ಆದರೆ ಸ್ವತಃ ಯಾರಲ್ಲಿಯೂ ವಿಶ್ವಾಸವಿಡುವುದಿಲ್ಲ. ಸಂದರ್ಭ ಒದಗಿದಾಗ ಆ ವಿಶ್ವಾಸೀ ಪುರುಷರ ಮೇಲೆ ಪ್ರಹಾರ ಮಾಡಿಬಿಡುತ್ತಾರೆ.॥22॥

ಮೂಲಮ್ - 23

ಕೃತ್ಯೇಷು ವಾಲೀ ಮೇಧಾವೀ ರಾಜಾನೋ ಬಹುದರ್ಶನಃ ।
ಭವಂತಿ ಪರಹಂತಾರಸ್ತೇ ಜ್ಞೇಯಾಃ ಪ್ರಾಕೃತೈರ್ನರೈಃ ॥

ಅನುವಾದ

ವಾಲಿಯು ಇದೆಲ್ಲ ಕಾರ್ಯಗಳಲ್ಲಿ ಬಹಳ ಕುಶಲನಾಗಿದ್ದಾನೆ. ರಾಜರು ಬಹುದರ್ಶಿಯಾಗಿರುತ್ತಾರೆ, ವಂಚನೆಯ ಅನೇಕ ಉಪಾಯ ತಿಳಿದಿರುತ್ತಾರೆ; ಅದರಿಂದ ಶತ್ರುಗಳನ್ನು ವಿಧ್ವಂಸಮಾಡಿ ಬಿಡುತ್ತಾರೆ. ಇಂತಹ ಶತ್ರುಗಳಾದ ರಾಜರನ್ನು ಪ್ರಾಕೃತ ವೇಶಭೂಷಣವುಳ್ಳ ಗುಪ್ತಚರರಿಂದ ಅರಿಯುವ ಪ್ರಯತ್ನ ಮಾಡಬೇಕು.॥23॥

ಮೂಲಮ್ - 24

ತೌ ತ್ವಯಾ ಪ್ರಾಕೃತೇನೇವ ಗತ್ವಾ ಜ್ಞೇಯೌ ಪ್ಲವಂಗಮ ।
ಇಂಗಿತಾನಾಂ ಪ್ರಕಾರೈಶ್ಚ ರೂಪವ್ಯಾಭಾಷಣೇನ ಚ ॥

ಅನುವಾದ

ಆದ್ದರಿಂದ ಕಪಿಶ್ರೇಷ್ಠ! ನೀನೂ ಕೂಡ ಒಬ್ಬ ಸಾಧಾರಣ ಪುರುಷರಂತೆ ಇಲ್ಲಿಂದ ಹೋಗಿ, ಅವರ ಚೇಷ್ಟೆಗಳನ್ನು ರೂಪದಿಂದ ಮತ್ತು ಮಾತಿನ ಧಾಟಿಯಿಂದ ಅವರಿಬ್ಬರ ಯಥಾರ್ಥ ಪರಿಚಯ ಮಾಡಿಕೊಂಡು ಬಾ.॥24॥

ಮೂಲಮ್ - 25

ಲಕ್ಷಯಸ್ವ ತಯೋರ್ಭಾವಂ ಪ್ರಹೃಷ್ಟಮನಸೌ ಯದಿ ।
ವಿಶ್ವಾಸಯನ್ ಪ್ರಶಂಸಾಭಿರಿಂಗಿತೈಶ್ಚ ಪುನಃ ಪುನಃ ॥

ಅನುವಾದ

ಅವರ ಮನೋಭಾವವನ್ನು ತಿಳಿದುಕೋ, ಅವರು ಪ್ರಸನ್ನಚಿತ್ತರಾಗಿ ಕಂಡುಬಂದರೆ ಪದೇ-ಪದೇ ನನ್ನನ್ನು ಪ್ರಸಂಸಿಸಿ, ನನ್ನ ಅಭಿಪ್ರಾಯವನ್ನು ಸೂಚಿಸುವ ಚೇಷ್ಟೆಗಳಿಂದ ನನ್ನ ಕುರಿತು ಅವರಲ್ಲಿ ವಿಶ್ವಾಸವನ್ನು ಉತ್ಪನ್ನಮಾಡು.॥25॥

ಮೂಲಮ್ - 26

ಮಮೈವಾಭಿಮುಖಂ ಸ್ಥಿತ್ವಾ ಪೃಚ್ಛ ತ್ವಂ ಹರಿಪುಂಗವ ।
ಪ್ರಯೋಜನಂ ಪ್ರವೇಶಸ್ಯ ವನಸ್ಯಾಸ್ಯ ಧನುರ್ಧರೌ ॥

ಅನುವಾದ

ವಾನರ ಶಿರೋಮಣಿಯೇ! ನೀನು ನನ್ನ ಕಡೆಗೆ ಮುಖ ಮಾಡಿ ನಿಂತಿರಬೇಕು ಮತ್ತು ಆ ಧನುರ್ಧರ ವೀರರಲ್ಲಿ ಈ ವನದಲ್ಲಿ ಪ್ರವೇಶಿಸುವ ಕಾರಣವನ್ನು ಕೇಳಬೇಕು.॥26॥

ಮೂಲಮ್ - 27

ಶುದ್ಧಾತ್ಮಾನೌ ಯದಿ ತ್ವೇತೌ ಜಾನೀಹಿ ತ್ವಂ ಪ್ಲವಂಗಮ ।
ವ್ಯಾಭಾಷಿತೈರ್ವಾ ರುಪೈರ್ವಾ ವಿಜ್ಞೇಯಾ ದುಷ್ಟತಾನಯೋಃ ॥

ಅನುವಾದ

ಅವರ ಹೃದಯ ಶುದ್ಧವೆಂದು ತಿಳಿದು ಬಂದರೂ ನಾನಾ ರೀತಿಯ ಮಾತುಗಳಿಂದ, ಆಕೃತಿಯಿಂದ ಅವರಿಬ್ಬರೂ ಯಾವುದಾದರೂ ದುರ್ಭಾವನೆಯಿಂದ ಬಂದಿಲ್ಲವಲ್ಲ ಎಂದು ತಿಳಿಯಲು ವಿಶೇಷವಾಗಿ ಪ್ರಯತ್ನಿಸಬೇಕು.॥27॥

ಮೂಲಮ್ - 28

ಇತ್ಯೇವಂ ಕಪಿರಾಜೇನ ಸಂದಿಷ್ಟೋ ಮಾರುತಾತ್ಮಜಃ ।
ಚಕಾರ ಗಮನೇ ಬುದ್ಧಿಂ ಯತ್ರ ತೌ ರಾಮಲಕ್ಷ್ಮಣೌ ॥

ಅನುವಾದ

ಕಪಿರಾಜ ಸುಗ್ರೀವನು ಈ ಪ್ರಕಾರ ಆದೇಶ ಕೊಟ್ಟಾಗ ಪವನಕುಮಾರ ಹನುಮಂತನು ಶ್ರೀರಾಮ-ಲಕ್ಷ್ಮಣರು ಇರುವ ಸ್ಥಾನಕ್ಕೆ ಹೋಗುವ ವಿಚಾರ ಮಾಡಿದನು.॥28॥

ಮೂಲಮ್ - 29

ತಥೇತಿ ಸಂಪೂಜ್ಯ ವಚಸ್ತು ತಸ್ಯ
ಕಪೇಃ ಸುಭೀತಸ್ಯ ದುರಾಸದಸ್ಯ ।
ಮಹಾನುಭಾವೋ ಹನುಮಾನ್ ಯಯೌ ತದಾ
ಸ ಯತ್ರ ರಾಮೋಽತಿಬಲೀ ಸ ಲಕ್ಷ್ಮಣಃ ॥

ಅನುವಾದ

ಅತ್ಯಂತ ಹೆದರಿದ ದುರ್ಜಯ ವಾನರ ಸುಗ್ರೀವನ ಆ ವಚನವನ್ನು ಆದರಿಸಿ ‘ಹಾಗೆಯೇ ಆಗಲಿ’ ಎಂದು ಹೇಳಿ ಮಹಾನುಭಾವ ಹನುಮಂತನು ಅತ್ಯಂತ ಬಲಶಾಲಿ ಶ್ರೀರಾಮ-ಲಕ್ಷ್ಮಣರು ಇರುವ ಸ್ಥಾನಕ್ಕೆ ತತ್ಕಾಲ ಹೊರಟನು.॥29॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಎರಡನೆಯ ಸರ್ಗ ಸಂಪೂರ್ಣವಾಯಿತು.॥2॥