वाचनम्
ಭಾಗಸೂಚನಾ
ಪಂಪಾ ಸರೋವರದ ದರ್ಶನದಿಂದ ಶ್ರೀರಾಮನ ವ್ಯಾಕುಲತೆ, ಲಕ್ಷ್ಮಣನು ಶ್ರೀರಾಮನನ್ನು ಸಮಾಧಾನಗೊಳಿಸಿದುದು, ರಾಮ-ಲಕ್ಷ್ಮಣರು ಋಷ್ಯಮೂಕ ಪರ್ವತದ ಕಡೆಗೆ ಬರುತ್ತಿರುವುದನ್ನು ಕಂಡು ಸುಗ್ರೀವನೇ ಮೊದಲಾದ ವಾನರರು ಭಯಗ್ರಸ್ತರಾದುದು
ಮೂಲಮ್ - 1
ಸ ತಾಂ ಪುಷ್ಕರಿಣೀಂ ಗತ್ವಾ ಪದ್ಮೋತ್ಪಲಝುಷಾಕುಲಮ್ ।
ರಾಮಃ ಸೌಮಿತ್ರಿಸಹಿತೋ ವಿಲಲಾಪಾಕುಲೇನ್ದ್ರಿಯಃ ॥
ಅನುವಾದ
ಕಮಲ, ಉತ್ಪಲ ಪುಷ್ಪಗಳಿಂದ ಹಾಗೂ ಮೀನುಗಳಿಂದ ತುಂಬಿರುವ ಆ ಪಂಪಾ ಪುಷ್ಕರಿಣಿಯ ಬಳಿಗೆ ಹೋಗಿ ಸೀತೆಯ ನೆನಪು ಬಂದದ್ದರಿಂದ ಶ್ರೀರಾಮನ ಇಂದ್ರಿಯಗಳು ಶೋಕದಿಂದ ವ್ಯಾಕುಲವಾದವು. ಅವನು ವಿಲಾಪ ಮಾಡ ತೊಡಗಿದನು. ಆಗ ಸುಮಿತ್ರಾಕುಮಾರ ಲಕ್ಷ್ಮಣನು ಅವನೊಂದಿಗೇ ಇದ್ದನು.॥1॥
ಮೂಲಮ್ - 2
ತಸ್ಯ ದೃಷ್ಟ್ವೈವ ತಾಂ ಹರ್ಷಾದಿಂದ್ರಿಯಾಣಿ ಚಕಂಪಿರೇ ।
ಸ ಕಾಮವಶಮಾಪನ್ನಃ ಸೌಮಿತ್ರಿಮಿದಮಬ್ರವೀತ್ ॥
ಅನುವಾದ
ಅಲ್ಲಿ ಪಂಪೆಯ ಕಡೆಗೆ ದೃಷ್ಟಿಬೀಳುತ್ತಲೇ (ಕಮಲ ಪುಷ್ಪಗಳಲ್ಲಿ ಸೀತೆಯ ನೇತ್ರಮುಖಾದಿಗಳ ಕೊಂಚ ಸಾದೃಶ್ಯ ಕಂಡು) ಹರ್ಷೋಲ್ಲಾಸದಿಂದ ಶ್ರೀರಾಮನ ಎಲ್ಲ ಇಂದ್ರಿಯಗಳು ಚಂಚಲಗೊಂಡವು. ಅವನ ಮನಸ್ಸಿನಲ್ಲಿ ಸೀತೆಯ ದರ್ಶನದ ಪ್ರಬಲ ಇಚ್ಛೆ ಉಂಟಾಯಿತು. ಈ ಇಚ್ಛೆಗೆ ಅಧೀನನಾಗಿ ಅವನು ಲಕ್ಷ್ಮಣನಲ್ಲಿ ಇಂತೆಂದನು.॥2॥
ಮೂಲಮ್ - 3
ಸೌಮಿತ್ರೇ ಶೋಭತೇ ಪಂಪಾ ವೈಢೂರ್ಯವಿಮಲೋದಕಾ ।
ಫುಲ್ಲಪದ್ಮೋತ್ಪಲವತೀ ಶೋಭಿತಾ ವಿವಿಧೈರ್ದ್ರುಮೈಃ ॥
ಅನುವಾದ
ಸುಮಿತ್ರಾನಂದನ! ಈ ಸರೋವರವು ಎಷ್ಟು ಶೋಭಿಸುತ್ತಿದೆ? ಇದರ ನೀರು ವೈಡೂರ್ಯದಂತೆ ಸ್ವಚ್ಛ ಹಾಗೂ ಶ್ಯಾಮಲವಾಗಿದೆ. ಇದರಲ್ಲಿ ಅನೇಕ ಪದ್ಮಗಳು, ಉತ್ಪಲಗಳು ಅರಳಿವೆ. ತೀರದಲ್ಲಿ ಇರುವ ನಾನಾ ಪ್ರಕಾರದ ವೃಕ್ಷಗಳಿಂದ ಇದರ ಶೋಭೆ ಇನ್ನೂ ಹೆಚ್ಚಾಗಿದೆ.॥3॥
ಮೂಲಮ್ - 4
ಸೌಮಿತ್ರೇ ಪಶ್ಯ ಪಂಪಾಯಾಃ ಕಾನನಂ ಶುಭದರ್ಶನಮ್ ।
ಯತ್ರ ರಾಜಂತಿ ಶೈಲಾ ವಾ ದ್ರುಮಾಃ ಸಶಿಖರಾ ಇವ ॥
ಅನುವಾದ
ಸುಮಿತ್ರಾಕುಮಾರ! ನೋಡಲ್ಲಿ! ಪಂಪೆಯ ತೀರದ ವನವು ಎಷ್ಟು ಸುಂದರವಾಗಿ ಕಾಣುತ್ತಿದೆ. ಇಲ್ಲಿಯ ಎತ್ತರವಾದ ವೃಕ್ಷಗಳ ಹರಡಿಕೊಂಡ ರೆಂಬೆಗಳಿಂದ ಅನೇಕ ಶಿಖರಗಳಿಂದ ಕೂಡಿದ ಪರ್ವತಗಳಂತೆ ಶೋಭಿಸುತ್ತಿವೆ.॥4॥
ಮೂಲಮ್ - 5
ಮಾಂ ತು ಶೋಕಾಭಿಸಂತಪ್ತಮಾಧಯಃ ಪೀಡಯಂತಿ ವೈ ।
ಭರತಸ್ಯ ಚ ದುಃಖೇನ ವೈದೇಹ್ಯಾ ಹರಣೇನ ಚ ॥
ಅನುವಾದ
ಆದರೆ ನಾನು ಈಗ ಭರತನ ದುಃಖದಿಂದ ಮತ್ತು ಸೀತಾಪಹರಣದ ಚಿಂತೆಯಿಂದ ಸಂತಪ್ತನಾಗಿದ್ದೇನೆ. ಮಾನಸಿಕ ವೇದನೆಗಳು ನನಗೆ ಬಹಳ ಕಷ್ಟಕೊಡುತ್ತಿವೆ.॥5॥
ಮೂಲಮ್ - 6
ಶೋಕಾರ್ತಸ್ಯಾಪಿ ಮೇ ಪಂಪಾ ಶೋಭತೇ ಚಿತ್ರಕಾನನಾ ।
ವ್ಯವಕೀರ್ಣಾ ಬಹುವಿಧೈಃ ಪುಷ್ಪೈಃ ಶೀತೋದಕಾ ಶಿವಾ ॥
ಅನುವಾದ
ನಾನು ಶೋಕದಿಂದ ಪೀಡಿತನಾಗಿದ್ದರೂ ನನಗೆ ಈ ಪಂಪಾ ಸರೋವರವು ಶೋಭಾಯಮಾನವಾಗಿ ಅನಿಸುತ್ತಿದೆ. ಇದರ ಸನಿಹದ ವನವು ಬಹಳ ವಿಚಿತ್ರವಾಗಿ ಕಂಡುಬರುತ್ತಿದೆ. ಇದು ನಾನಾ ಪ್ರಕಾರದ ಹೂವುಗಳಿಂದ ವ್ಯಾಪ್ತವಾಗಿದೆ. ಇದರ ಜಲವು ಬಹಳ ಶೀತಲವಾಗಿದ್ದು, ಬಹಳ ಸುಖದಾಯಕವಾಗಿ ಕಾಣುತ್ತದೆ.॥6॥
ಮೂಲಮ್ - 7
ನಲಿನೈರಪಿ ಸಂಛನ್ನಾ ಹ್ಯತ್ಯರ್ಥಶುಭದರ್ಶನಾ ।
ಸರ್ಪವ್ಯಾಲಾನುಚರಿತಾ ಮೃಗದ್ವಿಜಸಮಾಕುಲಾ ॥
ಅನುವಾದ
ಕಮಲಗಳಿಂದ ಈ ಪುಷ್ಕರಿಣಿಯು ಮುಚ್ಚಿಹೋಗಿದೆ. ಅದರಿಂದ ಬಹಳ ಸುಂದರವಾಗಿ ಕಾಣುತ್ತಿದೆ. ಇದರ ಅಕ್ಕಪಕ್ಕಗಳಲ್ಲಿ ಸರ್ಪಗಳು ಹಾಗೂ ಹಿಂಸಕ ಪ್ರಾಣಿಗಳು ವಿಹರಿಸುತ್ತಿವೆ. ಜಿಂಕೆಯೇ ಮೊದಲಾದ ಮೃಗ-ಪಕ್ಷಿಗಳು ಎಲ್ಲೆಡೆ ಹರಡಿಕೊಂಡಿವೆ.॥7॥
ಮೂಲಮ್ - 8
ಅಧಿಕಂ ಪ್ರವಿಭಾತ್ಯೇತನ್ನೀಲಪೀತಂ ತು ಶಾದ್ವಲಮ್ ।
ದ್ರುಮಾಣಾಂ ವಿವಿಧೈಃ ಪುಷ್ಪೈಃ ಪರಿಸ್ತೋಮೈರಿವಾರ್ಪಿತಮ್ ॥
ಅನುವಾದ
ಹೊಸ ಎಳೆಯ ಹುಲ್ಲಿನಿಂದ ಮುಚ್ಚಿರುವ ಈ ಸ್ಥಾನವು ತನ್ನ ಹಸಿರು, ಹಳದಿ ಪ್ರಭೆಯಿಂದ ಹೆಚ್ಚು ಶೋಭಿಸುತ್ತಿದೆ. ಇಲ್ಲಿ ನಾನಾ ಪ್ರಕಾರ ವೃಕ್ಷಗಳ ಹೂವುಗಳು ಚೆಲ್ಲಿಹೋಗಿ ಅನೇಕ ರತ್ನಗಂಬಳಿಗಳನ್ನು ಹಾಸಿದಂತೆ ಅನಿಸುತ್ತದೆ.॥8॥
ಮೂಲಮ್ - 9
ಪುಷ್ಪಭಾರಸಮೃದ್ಧಾನಿ ಶಿಖರಾಣಿ ಸಮನ್ತತಃ ।
ಲತಾಭಿಃ ಪುಷ್ಟಿತಾಗ್ರಾಭಿರುಪಗೂಢಾನಿ ಸರ್ವತಃ ॥
ಅನುವಾದ
ಮರಗಳ ತುದಿಗಳು ಹೂವುಗಳ ಭಾರದಿಂದ ಬಾಗಿರುವುದರಿಂದ ಎಲ್ಲೆಡೆ ಸಮೃದ್ಧಶಾಲಿಯಾಗಿ ಕಂಡುಬರುತ್ತಿದೆ. ಮರಗಳಿಗೆ ಸುತ್ತಿಕೊಂಡ ಲತೆಗಳು ಹೂವುಗಳಿಂದ ತುಂಬಿಕೊಂಡಿವೆ.॥9॥
ಮೂಲಮ್ - 10
ಸುಖಾನಿಲೋಽಯಂ ಸೌಮಿತ್ರೇ ಕಾಲಃ ಪ್ರಚುರಮನ್ಮಥಃ ।
ಗಂಧವಾನ್ಸುರಭಿರ್ಮಾಸೋ ಜಾತಪುಷ್ಪಫಲದ್ರುಮಃ ॥
ಅನುವಾದ
ಸುಮಿತ್ರಾನಂದನ! ಈಗ ಸುಖಾವಹ ಮಂದಾನಿಲ ಬೀಸುತ್ತಾ ಇದೆ, ಅದರಿಂದ ಕಾಮೋದ್ದೀಪನಗೊಳ್ಳಿತ್ತಿದೆ. (ಸೀತೆಯನ್ನು ನೋಡುವ ತವಕ ಹೆಚ್ಚಾಗಿದೆ.) ಇದು ಚೈತ್ರಮಾಸ, ಮರಗಳಲ್ಲಿ ಹೂವು-ಹಣ್ಣುಗಳು ಬಿಟ್ಟಿವೆ, ಎಲ್ಲೆಡೆ ಮನೋಹರ ಸುಗಂಧ ಪಸರಿಸಿದೆ.॥10॥
ಮೂಲಮ್ - 11
ಪಶ್ಯ ರೂಪಾಣಿ ಸೌಮಿತ್ರೇ ವನಾನಾಂ ಪುಷ್ಪಶಾಲಿನಾಮ್ ।
ಸೃಜತಾಂ ಪುಷ್ಪವರ್ಷಾಣಿ ವರ್ಷಂ ತೋಯಮುಚಾಮಿವ ॥
ಅನುವಾದ
ಲಕ್ಷ್ಮಣ! ಹೂವುಗಳಿಂದ ಶೋಭಿತವಾದ ಈ ವನಗಳ ಅಂದವನ್ನು ನೋಡು. ಮೋಡಗಳು ಮಳೆಗರೆಯುವಂತೆ ಇವು ಹೂಮಳೆಯನ್ನು ಸುರಿಸುತ್ತಿರುವವು.॥11॥
ಮೂಲಮ್ - 12
ಪ್ರಸ್ತರೇಷು ಚ ರಮ್ಯೇಷು ವಿವಿಧಾಃ ಕಾನನದ್ರುಮಾಃ ।
ವಾಯುವೇಗಪ್ರಚಲಿತಾಃ ಪುಷ್ಪೈರವಕಿರಂತಿ ಗಾಮ್ ॥
ಅನುವಾದ
ವನದ ಈ ವಿವಿಧ ವೃಕ್ಷಗಳು ವಾಯುವೇಗದಿಂದ ತೂಗಾಡುತ್ತಾ ರಮಣೀಯ ಶಿಲೆಗಳ ಮೇಲೆ ಹೂವುಗಳನ್ನು ಮಳೆಗರೆದು ಇಲ್ಲಿನ ನೆಲವನ್ನು ಮುಚ್ಚಿಬಿಟ್ಟಿವೆ.॥12॥
ಮೂಲಮ್ - 13
ಪತಿತೈಃ ಪತಮಾನೈಶ್ಚ ಪಾದಪಸ್ಥೈಶ್ಚ ಮಾರುತಃ ।
ಕುಸುಮೈಃ ಪಶ್ಯ ಸೌಮಿತ್ರೇ ಕ್ರೀಡತೀವ ಸಮಂತತಃ ॥
ಅನುವಾದ
ಸುಮಿತ್ರಾಕುಮಾರ! ಅದೋ ಅಲ್ಲಿ ನೋಡು, ಮರಗಳಿಂದ ಉದುರಿದ, ಉದುರುತ್ತಿರುವ, ಉದುರದೆ ಕೊಂಬೆಗಳಲ್ಲೇ ಇರುವ ಎಲ್ಲ ಹೂವುಗಳೊಂದಿಗೆ ವಾಯುದೇವರು ಆಟವಾಡುವಂತೆ ಅನಿಸುತ್ತದೆ.॥13॥
ಮೂಲಮ್ - 14
ವಿಕ್ಷಿಪನ್ವಿವಿಧಾಃ ಶಾಖಾಂ ನಗಾನಾಂ ಕುಸುಮೋತ್ಕಟಾಃ ।
ಮಾರುತಶ್ಚಲಿತಸ್ಥಾನೈಃ ಷಟ್ಪದೈರನುಗೀಯತೇ ॥
ಅನುವಾದ
ಹೂವುಗಳಿಂದ ತುಂಬಿದ ಬೇರೆ-ಬೇರೆ ಕೊಂಬೆಗಳನ್ನು ಅಲ್ಲಾಡಿಸುತ್ತಾ ವಾಯು ಬೀಸುತ್ತಿರುವಾಗ ತಮ್ಮ-ತಮ್ಮ ಸ್ಥಾನದಿಂದ ಎದ್ದು ಹಾರುತ್ತಿರುವ ದುಂಬಿಗಳು ಅದರ ಯಶೋಗಾನ ಮಾಡುತ್ತಾ ಅದರ ಹಿಂದೆಯೇ ಓಡುತ್ತಿವೆ.॥14॥
ಮೂಲಮ್ - 15
ಮತ್ತಕೋಕಿಲಸಂನಾದೈರ್ನರ್ತಯನ್ನಿವ ಪಾದಪಾನ್ ।
ಶೈಲಕಂದರ ನಿಷ್ಕ್ರಾಂತಃ ಪ್ರಗೀತ ಇವ ಚಾನಿಲಃ ॥
ಅನುವಾದ
ಪರ್ವತಗಳ ಕಂದರಗಳಿಂದ ಹೊರಟ ವಾಯು ವಿಶೇಷ ಧ್ವನಿಯೊಂದಿಗೆ ಗಟ್ಟಿಯಾಗಿ ಹಾಡುತ್ತಿದೆಯೋ ಎಂಬಂತಿದೆ. ಮತ್ತ ಕೋಗಿಲೆಗಳ ಕೂಜನವು ವಾದ್ಯಗಳಂತೆ ನಿನಾದಿಸುತ್ತದೆ, ಆ ವಾದ್ಯಗಳ ಧ್ವನಿಗಳೊಂದಿಗೆ ವಾಯುನಿಂದ ತೂಗುತ್ತಿರುವ ವೃಕ್ಷಗಳು ನೃತ್ಯಾಭ್ಯಾಸ ಮಾಡಿದಂತೆ ಇದೆ.॥15॥
ಮೂಲಮ್ - 16
ತೇನ ವಿಕ್ಷಿಪತಾತ್ಯರ್ಥಂ ಪನನೇನ ಸಮಂತತಃ ।
ಅಮೀ ಸಂಸಕ್ತಶಾಖಾಗ್ರ ಗ್ರಥಿತಾ ಇವ ಪಾದಪಾಃ ॥
ಅನುವಾದ
ವೇಗವಾಗಿ ಬೀಸುವ ಗಾಳಿಯಿಂದ ಅಲ್ಲಾಡುತ್ತಿರುವ ಕೊಂಬೆಗಳ ತುದಿಗಳು ಎಲ್ಲೆಡೆ ಪರಸ್ಪರ ಅಪ್ಪಿಕೊಳ್ಳುತ್ತಿವೆ; ಆ ವೃಕ್ಷಗಳು ಒಂದು ಮತ್ತೊಂದರಲ್ಲಿ ಪೋಣಿಸಿದಂತೆ ಅನಿಸುತ್ತಿದೆ.॥16॥
ಮೂಲಮ್ - 17
ಸ ಏವ ಸುಖಸಂಸ್ಪರ್ಶೋ ವಾತಿ ಚಂದನಶೀತಲಃ ।
ಗಂಧಮಭ್ಯವಹನ್ಪುಣ್ಯಂ ಶ್ರಮಾಪನಯನೋಽನಿಲಃ ॥
ಅನುವಾದ
ಮಲಯಾಚಲದ ಚಂದನವನ್ನು ಸ್ಪರ್ಶಿಸಿ ಬೀಸುವ ಈ ಶೀತಲವಾಯು ಶರೀರವನ್ನು ಸವರುತ್ತಾ ಸುಖಮಯ ಅನುಭವ ನೀಡುತ್ತಿದೆ. ಇದು ಬಳಲಿಕೆಯನ್ನು ಕಳೆಯುತ್ತಾ, ಎಲ್ಲೆಡೆ ಪವಿತ್ರ ಸುಗಂಧವನ್ನು ಹರಡುತ್ತಿದೆ.॥17॥
ಮೂಲಮ್ - 18
ಅಮೀ ಪವನವಿಕ್ಷಿಪ್ತಾ ವಿನದಂತೀವ ಪಾದಪಾಃ ।
ಷಟ್ಪದೈರನುಕೂಜದ್ಭಿರ್ವನೇಷು ಮಧುಗಂಧಿಷು ॥
ಅನುವಾದ
ಮಧುರ ಮಕರಂದ ಮತ್ತು ಸುಗಂಧದಿಂದ ತುಂಬಿದ ಈ ವನಗಳಲ್ಲಿರುವ ವೃಕ್ಷಗಳು ಗುಂಜಾರವ ಮಾಡುವ ಭ್ರಮರಗಳ ನೆಪದಿಂದ ಗಾಳಿಯಿಂದ ಅಲ್ಲಾಡುತ್ತಾ ನೃತ್ಯದೊಂದಿಗೆ ಸಂಗೀತ ಹಾಡುತ್ತಿವೆಯೋ ಎಂಬಂತಿದೆ.॥18॥
ಮೂಲಮ್ - 19
ಗಿರಿಪ್ರಸ್ಥೇಷು ರಮ್ಯೇಷು ಪುಷ್ಪವದ್ಭಿರ್ಮನೋರಮೈಃ ।
ಸಂಸಕ್ತಶಿಖರಾಃ ಶೈಲಾ ವಿರಾಜಂತಿ ಮಹಾದ್ರುಮೈಃ ॥
ಅನುವಾದ
ತನ್ನ ರಮಣೀಯ ಬೆನ್ನಮೇಲೆ ಹುಟ್ಟಿಕೊಂಡಿರುವ ಹೂವುಗಳಿಂದ ತುಂಬಿದ, ಮನಸೂರೆಗೈಯುವ ವಿಶಾಲ ವೃಕ್ಷಗಳಿಂದ ಕೂಡಿದ ಶಿಖರಗಳುಳ್ಳ ಪರ್ವತಗಳು ಅದ್ಬುತವಾಗಿ ಶೋಭಿಸುತ್ತಿವೆ.॥19॥
ಮೂಲಮ್ - 20
ಪುಷ್ಪಸಂಛನ್ನಶಿಖರಾ ಮಾರುತೋತ್ ಕ್ಷೇಪಚಂಚಲಾಃ ।
ಅಮೀ ಮಧುಕರೋತ್ತಂಸಾಃ ಪ್ರಗೀತಾ ಇವ ಪಾದಪಾಃ ॥
ಅನುವಾದ
ತುದಿಗಳಲ್ಲಿ ಹೂವುಗಳಿಂದ ಮುಚ್ಚಿದ ರೆಂಬೆಗಳು ವಾಯುವಿನಿಂದ ತೂಗಾಡುತ್ತಾ, ಭ್ರಮರಗಳನ್ನು ಮುಂಡಾಸಿನ ರೂಪದಲ್ಲಿ ತಲೆಯಲ್ಲಿ ಧರಿಸಿಕೊಂಡಿರುವ ವೃಕ್ಷಗಳು ಗಾನ-ನರ್ತನ ಪ್ರಾರಂಭಿಸಿವೆಯೋ ಎಂಬಂತೆ ಅನಿಸುತ್ತದೆ.॥20॥
ಮೂಲಮ್ - 21
ಸುಪುಷ್ಪಿತಾಂಸ್ತು ಪಶ್ಯೈತಾನ್ ಕರ್ಣಿಕಾನಾನ್ ಸಮಂತತಃ ।
ಹಾಟಕಪ್ರತಿಸಂಛನ್ನಾನ್ ನರಾನ್ ಪೀತಾಂಬರಾನಿವ ॥
ಅನುವಾದ
ನೋಡು, ಎಲ್ಲೆಡೆ ಸುಂದರ ಹೂವುಗಳಿಂದ ಈ ಕಣಗಿಲೆಯು ಚಿನ್ನದ ಆಭೂಷಣಗಳಿಂದ ಅಲಂಕೃತ ಪೀತಾಂಬರಧಾರೀ ಮನುಷ್ಯರಂತೆ ಶೋಭಿಸುತ್ತಿವೆ.॥21॥
ಮೂಲಮ್ - 22
ಅಯಂ ವಸಂತಃ ಸೌಮಿತ್ರೇ ನಾನಾ ವಿಹಗನಾದಿತಃ ।
ಸೀತಯಾ ವಿಪ್ರಹೀಣಸ್ಯ ಶೋಕಸಂದೀಪನೋ ಮಮ ॥
ಅನುವಾದ
ಸುಮಿತ್ರಾನಂದನ! ನಾನಾ ಪ್ರಕಾರದ ವಿಹಂಗಮಗಳ ಕಲರವದಿಂದ ಪ್ರತಿಧ್ವನಿತವಾದ ಈ ವಸಂತಕಾಲವು ಸೀತೆಯಿಂದ ಅಗಲಿದ ನನಗೆ ಶೋಕವನ್ನು ಹೆಚ್ಚಿಸುವುದಾಗಿದೆ.॥22॥
ಮೂಲಮ್ - 23
ಮಾಂ ಹಿ ಶೋಕಸಮಾಕ್ರಾಂತಂ ಸಂತಾಪಯತಿ ಮನ್ಮಥಃ ।
ಹೃಷ್ಟಃ ಪ್ರವದಮಾನಶ್ಚ ಮಾಮಾಹ್ವಯತಿ ಕೋಕಿಲಃ ॥
ಅನುವಾದ
ವಿಯೋಗದ ಶೋಕದಿಂದ ನಾನಾದರೋ ಪೀಡಿತನಾಗಿದ್ದೇನೆ, ಈ ಕಾಮದೇವನು (ಸೀತಾ ವಿಷಯಕ ಅನುರಾಗ) ನನಗೆ ಇನ್ನೂ ಹೆಚ್ಚು ಸಂತಾ ಕೊಡುತ್ತಿದ್ದಾನೆ. ಕೋಗಿಲೆಯು ಹರ್ಷದಿಂದ ಕಲರವ ಮಾಡುತ್ತಾ ನನ್ನನ್ನು ಅಣಕಿಸುವಂತೆ ಇದೆ.॥23॥
ಮೂಲಮ್ - 24
ಏಷ ದಾತ್ಯೂಹಕೋ ಹೃಷ್ಟೋ ರಮ್ಯೇ ಮಾಂ ವನನಿರ್ಝರೇ ।
ಪ್ರಣದನ್ಮನ್ಮಥಾವಿಷ್ಟಂ ಶೋಚಯಿಷ್ಯತಿ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ವನದ ರಮಣೀಯ ಜಲಪಾತದ ಸನಿಹದಲ್ಲಿ ಬಹಳ ಹರ್ಷದಿಂದ ಕೂಗುವ ಈ ನೀರು ಕೋಳಿಯು ಸೀತೆಯನ್ನು ಸೇರುವ ಇಚ್ಛೆಯುಳ್ಳ ರಾಮನಾದ ನನ್ನನ್ನು ಶೋಕಮಗ್ನವಾಗಿಸುತ್ತಿದೆ.॥24॥
ಮೂಲಮ್ - 25
ಶ್ರುತ್ವೈತಸ್ಯ ಪುರಾ ಶಬ್ದಮಾಶ್ರಮಸ್ಥಾ ಮಮ ಪ್ರಿಯಾ ।
ಮಾಮಾಹೂಯ ಪ್ರಮುದಿತಾ ಪರಮಂ ಪ್ರತ್ಯನಂದತ॥
ಅನುವಾದ
ಮೊದಲು ನನ್ನ ಪ್ರಿಯೆಯು ಆಶ್ರಮದಲ್ಲಿದ್ದಾಗ ಇದರ ಶಬ್ದವನ್ನು ಕೇಳಿ ಆನಂದಮಗ್ನಳಾಗುತ್ತಿದ್ದಳು ಹಾಗೂ ನನಗೂ ಕೂಡ ಹತ್ತಿರ ಕರೆದು ಅತ್ಯಂತ ಆನಂದಗೊಳಿಸುತ್ತಿದ್ದಳು.॥25॥
ಮೂಲಮ್ - 26
ಏವಂ ವಿಚಿತ್ರಾಃ ಪತಗಾ ನಾನಾರಾವವಿರಾವಿಣಃ ।
ಋಕ್ಷಗುಲ್ಮಲತಾಃ ಪಶ್ಯ ಸಂಪತಂತಿ ಸಮಂತತಃ ॥
ಅನುವಾದ
ನೋಡು, ಈ ಪ್ರಕಾರ ಬಗೆ-ಬಗೆಯಾಗಿ ಕೂಗುತ್ತಿರುವ ವಿಚಿತ್ರ ಪಕ್ಷಿಗಳು ಎಲ್ಲೆಡೆ ವೃಕ್ಷಗಳ ಕಡೆಗೆ, ತೊರೆಗಳ ಕಡೆಗೆ ಲತೆಗಳ ಕಡೆಗೆ ಹಾರಿಹೋಗುತ್ತಿವೆ.॥26॥
ಮೂಲಮ್ - 27
ವಿಮಿಶ್ರಾ ವಿಹಗಾಃ ಪುಂಭಿರಾತ್ಮವ್ಯೆಹಾಭಿನಂದಿತಾಃ ।
ಭೃಂಗರಾಜಪ್ರಮುದಿತಾಃ ಸೌಮಿತ್ರೇ ಮಧುರಸ್ವರಾಃ ॥
ಅನುವಾದ
ಸುಮಿತ್ರಾನಂದನ! ನೋಡು, ಈ ಹೆಣ್ಣು ಪಕ್ಷಿಗಳು ಗಂಡು ಪಕ್ಷಿಗಳೊಂದಿಗೆ ಸೇರಿ ಗುಂಪಾಗಿ ಆನಂದವನ್ನು ಅನುಭವಿಸುತ್ತಾ ಇವೆ. ಭೃಂಗಗಳ ಗುಂಜಾರವ ಕೇಳಿ ಸಂತೋಷಗೊಳ್ಳುತ್ತಿವೆ ಹಾಗೂ ತಾವೂ ಮಧುರವಾಗಿ ಕೂಗುತ್ತಿವೆ.॥27॥
ಮೂಲಮ್ - 28½
ಅಸ್ಯಾಃ ಕೂಲೇ ಪ್ರಮುದಿತಾಃ ಸಂಘಶಃ ಶಕುನಾಸ್ತ್ವಿಹ ।
ದಾತ್ಯೂಹರುತವಿಕ್ರಂದೈಃ ಪುಂಸ್ಕೋಕಿಲರುತೈರಪಿ ॥
ಸ್ವನಂತಿ ಪಾದಪಾಶ್ಚೇಮೇ ಮಮಾನಂಗ ಪ್ರದೀಪಕಾಃ ॥
ಅನುವಾದ
ಈ ಪಂಪಾ ಸರೋವರದ ಬಳಿ ಗುಂಪು-ಗುಂಪಾಗಿ ಪಕ್ಷಿಗಳು ಆನಂದಮಗ್ನವಾಗಿ ವಿಹರಿಸುತ್ತಿವೆ. ನೀರುಕೋಳಿಯ ರತಿ ಸಂಬಂಧವಾದ ಕೂಗಿನಿಂದ ಹಾಗೂ ಕೋಗಿಲೆಯ ಕೂಜನದ ನೆಪದಿಂದ ಈ ವೃಕ್ಷಗಳು ಮಧುರವಾಗಿ ನುಡಿಯುತ್ತಾ ನನ್ನ ಅನಂಗ ವೇದನೆಯನ್ನು ಉದ್ದೀಪನಗೊಳಿಸುತ್ತಿವೆ.॥28½॥
ಮೂಲಮ್ - 29½
ಅಶೋಕಸ್ತಬಕಾಂಗಾರಃ ಷಟ್ಪದಸ್ವನನಿಃಸ್ವನಃ ॥
ಮಾಂ ಹಿ ಪಲ್ಲವತಾಮ್ರಾರ್ಚಿರ್ವಸಂತಾಗ್ನಿಃ ಪ್ರಧಕ್ಷತಿ ।
ಅನುವಾದ
ಈ ವಸಂತರೂಪೀ ಬೆಂಕಿಯು ನನ್ನನ್ನು ಸುಟ್ಟು ಬೂದಿಮಾಡಿ ಬಿಡುವುದೋ ಎಂದು ಅನಿಸುತ್ತದೆ. ಅಶೋಕ ಪುಷ್ಪಗಳ ಕೆಂಪಾದ ಗೊಂಚಲುಗಳೇ ಈ ಅಗ್ನಿಯ ಕೆಂಡಗಳಾಗಿವೆ, ಹೊಸ ಚಿಗುರುಗಳೇ ಇದರ ಕೆಂಪಾದ ಜ್ವಾಲೆಗಳಾಗಿವೆ ಹಾಗೂ ಭೃಂಗಗಳ ಗುಂಜಾರವವೇ ಉರಿಯುತ್ತಿರುವ ಬೆಂಕಿಯ ಚಟ-ಚಟ ಶಬ್ದವಾಗಿದೆ.॥29½॥
ಮೂಲಮ್ - 30½
ನಹಿ ತಾಂ ಸೂಕ್ಷ್ಮಪಕ್ಷ್ಮಾಕ್ಷೀಂ ಸುಕೇಶೀಂ ಮೃದುಭಾಷಿಣೀಮ್ ॥
ಅಪಶ್ಯತೋ ಮೇ ಸೌಮಿತ್ರೇ ಜೀವಿತೇಽಸ್ತಿ ಪ್ರಯೋಜನಮ್ ।
ಅನುವಾದ
ಸುಮಿತ್ರಾನಂದನ! ಸೂಕ್ಷ್ಮವಾದ ರೆಪ್ಪೆಗಳಿಂದ ಕೂಡಿದ ಕಣ್ಣುಗಳುಳ್ಳ, ಸುಂದರ ಕೇಶರಾಶಿಯುಳ್ಳ, ಮಧುರ ಭಾಷಿಣಿ ಸೀತೆಯನ್ನು ನೋಡದಿದ್ದರೆ ನನಗೆ ಈ ಜೀವನದಿಂದ ಯಾವುದೇ ಪ್ರಯೋಜನವಿಲ್ಲ.॥30½॥
ಮೂಲಮ್ - 31½
ಅಯಂ ಹಿ ರುಚಿಕರಸ್ತಸ್ಯಾಃ ಕಾಲೋ ರುಚಿರಕಾನನಃ ॥
ಕೋಕಿಲಾಕುಲಸೀಮಾಂತೋ ದಯಿತಾಯಾ ಮಮಾನಘ ।
ಅನುವಾದ
ನಿಷ್ಪಾದ ಲಕ್ಷ್ಮಣನೇ! ವಸಂತ ಋತುವಿನಲ್ಲಿ ವನದ ಶೋಭೆ ಬಹಳ ಮನೋಹರವಾಗುತ್ತದೆ. ಈ ಅವಧಿಯಲ್ಲಿ ಎಲ್ಲೆಡೆ ಕೋಗಿಲೆಯ ಮಧುರ ಕೂಜನ ಕೇಳಿ ಬರುತ್ತಿದೆ. ನನ್ನ ಪ್ರಿಯೆ ಸೀತೆಗೆ ಈ ಸಮಯವು ಬಹಳ ಪ್ರಿಯವಾಗುತ್ತಿತ್ತು.॥31½॥
ಮೂಲಮ್ - 32½
ಮನ್ಮಥಾಯಾಸ ಸಂಭೂತೋ ವಸಂತಗುಣವರ್ಧಿತಃ ॥
ಅಯಂ ಮಾಂ ಧಕ್ಷ್ಯತಿ ಕ್ಷಿಪ್ರಂ ಶೋಕಾಗ್ನಿರ್ನಚಿರಾದಿವ ।
ಅನುವಾದ
ಅನಂಗ ವೇದನೆಯಿಂದ ಉಂಟಾದ ಶೋಕಾಗ್ನಿಯು ವಸಂತ ಋತುವಿನ ಗುಣಗಳು* ಉರುವಲಾಗಿ ಹೆಚ್ಚುತ್ತದೆ. ಇದು ನನ್ನನ್ನು ತಡಮಾಡದೆ ಶೀಘ್ರವಾಗಿ ಸುಟ್ಟುಬಿಡುವುದು.॥32½॥
ಟಿಪ್ಪನೀ
- ಮಲಯಾಚಲದ ಮಂದಾನಿಲ, ವನದ ವೃಕ್ಷಗಳು ನವಪಲ್ಲವಗಳಿಂದ, ಪುಷ್ಪಗಳಿಂದ ಅಲಂಕೃತವಾಗುವುದು, ಕೋಗಿಲೆಗಳ ಕೂಜನ, ಕಮಲಗಳ ಅರಳುವಿಕೆ ಮತ್ತು ಮಧುರ ಸುಗಂಧ ಹರಡುವುದು ಮುಂತಾದವು ವಸಂತನ ಗುಣಗಳಾಗಿವೆ. ಅವು ವಿರಹದ ಶೋಕಾಗ್ನಿಯನ್ನು ಉದ್ದೀಪಿಸುತ್ತವೆ.
ಮೂಲಮ್ - 33½
ಅಪಶ್ಯತಸ್ತಾಂ ವನಿತಾಂ ಪಶ್ಯತೋ ರುಚಿರಾನ್ ದ್ರುಮಾನ್ ॥
ಮಮಾಯಮಾತ್ಮಪ್ರಭವೋ ಭೂಯಸ್ತ್ವಮುಪಯಾಸ್ಯತಿ ।
ಅನುವಾದ
ನನ್ನ ಪ್ರಿಯತಮೆ ಪತ್ನಿಯು ನನಗೆ ಕಾಣುತ್ತಿಲ್ಲ, ಈ ಮನೋಹರ ವೃಕ್ಷಗಳೇ ಕಾಣುತ್ತಿವೆ, ಇದರಿಂದ ನನ್ನ ಈ ಅನಂಗ ಜ್ವರವು ಇನ್ನೂ ಹೆಚ್ಚಾದೀತು.॥33½॥
ಮೂಲಮ್ - 34½
ಅದೃಶ್ಯಮಾನಾ ವೈದೇಹೀ ಶೋಕಂ ವರ್ಧಯತೀಹ ಮೇ ॥
ದೃಶ್ಯಮಾನೋ ವಸಂತಶ್ಚ ಸ್ವೇದ ಸಂಸರ್ಗದೂಷಕಃ ।
ಅನುವಾದ
ವಿದೇಹ ನಂದಿನಿ ಸೀತೆಯು ಇಲ್ಲಿ ನನಗೆ ಕಂಡುಬರುವುದಿಲ್ಲ, ಅದರಿಂದ ನನ್ನ ಶೋಕವು ಬೆಳೆಯುತ್ತಾ ಇದೆ. ಮಂದ ಮಲಯಾನಿಲದಿಂದ ಬೆವರನ್ನು ಒಣಗಿಸಿಬಿಡುವ ವಸಂತನೂ ನನ್ನ ಶೋಕವನ್ನು ವೃದ್ಧಿಪಡಿಸುತ್ತಿದ್ದಾನೆ.॥34½॥
ಮೂಲಮ್ - 35½
ಮಾಂ ಹಿಸಾ ಮೃಗಶಾಬಾಕ್ಷೀ ಚಿಂತಾಶೋಕ ಬಲಾತ್ಕೃತಮ್ ॥
ಸಂತಾಪಯತಿ ಸೌಮಿತ್ರೇ ಕ್ರೂರಶ್ಚೈತ್ರವನಾನಿಲಃ ।
ಅನುವಾದ
ಸುಮಿತ್ರಾಕುಮಾರ! ಮೃಗನಯನೀ ಸೀತೆಯು ಚಿಂತೆ, ಶೋಕಗಳಿಂದ ಬಲವಂತವಾಗಿ ಪೀಡಿತ ರಾಮನಾದ ನನ್ನನ್ನು ಇನ್ನೂ ಸಂತಾಪಕೊಡುತ್ತಿದ್ದಾಳೆ. ಜೊತೆಗೆ ಈ ವನದಲ್ಲಿ ಬೀಸುವ ಚೈತ್ರ ಮಾಸದ ಗಾಳಿಯೂ ನನ್ನನ್ನು ಪೀಡಿಸುತ್ತಿದೆ.॥35½॥
ಮೂಲಮ್ - 36½
ಅಮೀ ಮಯೂರಾಃ ಶೋಭಂತೇ ಪ್ರನೃತ್ಯಂತಸ್ತತಸ್ತತಃ ॥
ಸ್ವೈಃ ಪಕ್ಷೈಃ ಪವನೋದ್ಧೂತೈರ್ಗವಾಕ್ಷೈಃ ಸ್ಫಾಟಿಕೈರಿವ ।
ಅನುವಾದ
ಸ್ಫಟಿಕ ಗವಾಕ್ಷಿಗಳಂತೆ ಕಂಡುಬರುವ ನವಿಲುಗಳು ಗರಿಗೆದರಿ ಜಾಗರ ಮಾಡುತ್ತಾ ಗಾಳಿಯಿಂದ ಕಂಪಿತವಾಗಿ ಅತ್ತ-ಇತ್ತ ಕುಣಿಯುತ್ತಾ ಇರುವುದು ಶೋಭಿಸುತ್ತಿವೆ.॥36½॥
ಮೂಲಮ್ - 37½
ಶಿಖಿನೀಭಿಃ ಪರಿವೃತಾಸ್ತ ಏತೇ ಮದಮೂರ್ಛಿತಾಃ ॥
ಮನ್ಮಥಾಭಿಪರೀತಸ್ಯ ಮಮ ಮನ್ಮಥವರ್ಧನಾಃ ।
ಅನುವಾದ
ಹೆಣ್ಣು ನವಿಲುಗಳಿಂದ ಸುತ್ತುವರಿದ ಈ ಮದಮತ್ತ ಮಯೂರಗಳು ಅನಂಗ ವೇದನೆಯಿಂದ ಸಂತಪ್ತವಾಗಿ ನನ್ನ ಈ ಕಾಮಪೀಡೆಯನ್ನು ಇನ್ನೂ ಹೆಚ್ಚಿಸುತ್ತಿವೆ.॥37½॥
ಮೂಲಮ್ - 38½
ಪಶ್ಯ ಲಕ್ಷ್ಮಣ ನೃತ್ಯಂತಂ ಮಯೂರಮುಪನೃತ್ಯತಿ ॥
ಶಿಖಿನೀ ಮನ್ಮಥಾರ್ತೈಷಾ ಭರ್ತಾರಂ ಗಿರಿಸಾನುನಿ ।
ಅನುವಾದ
ಲಕ್ಷ್ಮಣ! ನೋಡು, ಅಲ್ಲಿ ನೋಡು! ಪರ್ವತ ಶಿಖರದಲ್ಲಿ ಕುಣಿಯುತ್ತಿರುವ ತನ್ನ ಸ್ವಾಮಿ ಮಯೂರಗಳ ಜೊತೆಗೆ ಹೆಣ್ಣು ನವಿಲುಗಳು ಕಾಮಪೀಡಿತರಾಗಿ ಕುಣಿಯುತ್ತಿವೆ.॥38½॥
ಮೂಲಮ್ - 39½
ತಾಮೇವ ಮನಸಾ ರಾಮಾಂ ಮಯೂರೋಽಪ್ಯನುಧಾವತಿ ॥
ವಿತತ್ಯ ರುಚಿರೌ ಪಕ್ಷೌ ರುತೈರುಪಹಸನ್ನಿವ ।
ಅನುವಾದ
ಮಯೂರವು ತನ್ನ ಗರಿಗಳನ್ನು ಕೆದರಿ ಮನಸ್ಸಿನಲ್ಲೇ ತನ್ನ ಪ್ರಿಯೆಯನ್ನು ಅನುಸರಿಸುತ್ತಿರುವವು ಹಾಗೂ ಮಧುರ ಸ್ವರಗಳಿಂದ ನನ್ನನ್ನು ಅಣಕಿಸುವಂತೆ ಅನಿಸುತ್ತದೆ.॥39½॥
ಮೂಲಮ್ - 40½
ಮಯೂರಸ್ಯ ವನೇ ನೂನಂ ರಕ್ಷಸಾ ನ ಹೃತಾ ಪ್ರಿಯಾ ॥
ತಸ್ಮಾನ್ನೃತ್ಯತಿ ರಮ್ಯೇಷು ವನೇಷು ಸಹ ಕಾಂತಯಾ ।
ಅನುವಾದ
ನಿಶ್ಚಯವಾಗಿಯೂ ವನದಲ್ಲಿ ಯಾವುದೋ ರಾಕ್ಷಸನು ನವಿಲಿನ ಪ್ರಿಯೆಯನ್ನು ಅಪಹರಣ ಮಾಡಲಿಲ್ಲ, ಇದಕ್ಕಾಗಿ ಈ ರಮಣೀಯ ವನದಲ್ಲಿ ತನ್ನ ವಲ್ಲಭೆಯೊಂದಿಗೆ ನೃತ್ಯಮಾಡುತ್ತಿವೆ.॥40½॥
ಮೂಲಮ್ - 41
ಮಮ ತ್ವಯಂ ವಿನಾ ವಾಸಃ ಪುಷ್ಪಮಾಸೇ ಸುದುಃಸಹಃ ॥
ಮೂಲಮ್ - 42
ಪಶ್ಯ ಲಕ್ಷ್ಮಣ ಸಂರಾಗಸ್ತಿರ್ಯಗ್ಯೋನಿಗತೇಷ್ವಪಿ ।
ಯದೇಷಾ ಶಿಖಿನೀ ಕಾಮಾದ್ ಭರ್ತಾರಮಭಿವರ್ತತೇ ॥
ಅನುವಾದ
ಹೂವುಗಳಿಂದ ತುಂಬಿರುವ ಈ ಚೈತ್ರಮಾಸದಲ್ಲಿ ಸೀತೆಯಿಲ್ಲದೆ ಇಲ್ಲಿ ವಾಸಿಸುವುದು ನನಗೆ ಅತ್ಯಂತ ದುಃಸಹವಾಗಿದೆ. ಲಕ್ಷ್ಮಣ! ನೋಡಲ್ಲ! ತಿರ್ಯಕ್ ಯೋನಿಯಲ್ಲಿರುವ ಪ್ರಾಣಿಗಳಲ್ಲಿಯೂ ಪರಸ್ಪರ ಎಷ್ಟು ಹೆಚ್ಚು ಅನುರಾಗವಿದೆ. ಈಗ ಈ ಹೆಣ್ಣು ನವಿಲು ಕಾಮಭಾವದಿಂದ ತನ್ನ ಸ್ವಾಮಿಯ ಎದುರಿಗೆ ಉಪಸ್ಥಿತವಾಗಿದೆ.॥41-42॥
ಮೂಲಮ್ - 43
ಮಮಾಪ್ಯೇದಂ ವಿಶಾಲಾಕ್ಷೀ ಜಾನಕೀ ಜಾತಸಂಭ್ರಮಾ ।
ಮದನೇನಾಭಿವರ್ತೇತ ಯದಿ ನಾಪಹೃತಾ ಭವೇತ್ ॥
ಅನುವಾದ
ವಿಶಾಲಾಕ್ಷಿಯಾದ ಸೀತೆಯ ಅಪಹರಣವಾಗದಿದ್ದರೆ ಅವಳೂ ಕೂಡ ಇದೇ ರೀತಿ ತುಂಬಾ ಪ್ರೇಮದಿಂದ ವೇಗವಾಗಿ ನನ್ನ ಬಳಿಗೆ ಬರುತ್ತಿದ್ದಳು.॥43॥
ಮೂಲಮ್ - 44
ಪಶ್ಯ ಲಕ್ಷ್ಮಣ ಪುಷ್ಪಾಣಿ ವಿಷ್ಫಲಾನಿ ಭವಂತಿ ಮೇ ।
ಪುಷ್ಪಭಾರಸಮೃದ್ಧಾನಾಂ ವನಾನಾಂ ಶಿಶಿರಾತ್ಯಯೇ ॥
ಅನುವಾದ
ಲಕ್ಷ್ಮಣ! ಈ ವಸಂತ ಋತುವಿನಲ್ಲಿ ಹೂವುಗಳ ಭಾರದಿಂದ ಸಂಪನ್ನ ಈ ವನಗಳ ಎಲ್ಲ ಹೂವುಗಳು ನನಗಾಗಿ ನಿಷ್ಪಲವಾಗಿವೆ. ಪ್ರಿಯೆ ಸೀತೆಯು ಇಲ್ಲಿ ಇಲ್ಲದಿರುವುದರಿಂದ ನನಗೆ ಯಾವುದೇ ಪ್ರಯೋಜನವಿಲ್ಲ.॥44॥
ಮೂಲಮ್ - 45
ರುಚಿರಾಣ್ಯಪಿ ಪುಷ್ಪಾಣಿ ಪಾದಪಾನಾಮತಿಶ್ರಿಯಾ ।
ನಿಷ್ಫಲಾನಿ ಮಹೀಂ ಯಾಂತಿ ಸಮಂ ಮಧುಕರೋತ್ಕರೈಃ ॥
ಅನುವಾದ
ಅತ್ಯಂತ ಶೋಭೆಯಿಂದ ಮನೋಹರವಾಗಿ ಕಾಣುವ ಈ ವೃಕ್ಷಗಳ ಹೂವುಗಳೂ ಕೂಡ ನಿಷ್ಪಲವಾಗಿ ಭ್ರಮರ ಸಮೂಹಗಳೊಂದಿಗೆ ನೆಲಕ್ಕೆ ಬಿದ್ದು ಹೋಗುತ್ತವೆ.॥45॥
ಮೂಲಮ್ - 46
ನದಂತಿ ಕಾಮಂ ಶಕುನಾ ಮುದಿತಾಃ ಸಂಘಶಃ ಕಲಮ್ ।
ಆಹ್ವಯಂತ ಇವಾನ್ಯೋನ್ಯಂ ಕಾಮೋನ್ಮಾದಕರಾ ಮಮ ॥
ಅನುವಾದ
ಹರ್ಷಗೊಂಡ ಈ ಗುಂಪು-ಗುಂಪಾದ ಪಕ್ಷಿಗಳು ಒಂದು-ಮತ್ತೊಂದನ್ನು ಕರೆಯುತ್ತಾ ಸ್ವೆಚ್ಛೆಯಾಗಿ ಕಲರವ ಮಾಡುತ್ತಾ ಇವೆ. ಹಾಗೂ ನನ್ನ ಮನಸ್ಸಿನಲ್ಲೇ ಪ್ರೇಮೋನ್ಮಾದ ಉಂಟುಮಾಡುತ್ತಿವೆ.॥46॥
ಮೂಲಮ್ - 47
ವಸಂತೋ ಯದಿ ತತ್ರಾಪಿ ಯತ್ರ ಮೇ ವಸತಿ ಪ್ರಿಯಾ ।
ನೂನಂ ಪರವಶಾ ಸೀತಾ ಸಾಪಿ ಶೋಚತ್ಯಹಂ ಯಥಾ ॥
ಅನುವಾದ
ನನ್ನ ಪ್ರಿಯೆ ಸೀತೆಯು ವಾಸಿಸುವಲ್ಲಿಯೂ ಇದೇ ರೀತಿಯ ವಸಂತನು ಆವರಿಸಿಕೊಂಡಿದ್ದರೆ ಆಕೆಯ ಸ್ಥಿತಿ ಏನಾಗಬಹುದು? ನಿಶ್ಚಯವಾಗಿ ಪರಾಧೀನಳಾದ ಸೀತೆಯು ನನ್ನಂತೆ ಶೋಕಿಸುತ್ತಾ ಇರಬಹುದು.॥47॥
ಮೂಲಮ್ - 48
ನೂನಂ ನ ತು ವಸಂತಸ್ತಂ ದೇಶಂ ಸ್ಪೃಶತಿ ಯತ್ರ ಸಾ ।
ಕಥಂ ಹ್ಯಸಿತಪದ್ಮಾಕ್ಷೀ ವರ್ತಯೇತ್ ಸಾ ಮಯಾ ವಿನಾ ॥
ಅನುವಾದ
ಸೀತೆ ಇರುವ ಏಕಾಂತ ಸ್ಥಾನದಲ್ಲಿ ವಸಂತನು ಪ್ರವೇಶಿಸದಿದ್ದರೂ ನಿಶ್ಚಯವಾಗಿ ನಾನಿಲ್ಲದೆ ಆ ಕಾಡಿಗೆ ಕಣ್ಣಿನ ಕಮಲ ನಯನೀ ಸೀತೆಯು ಹೇಗೆ ಬದುಕಿಕೊಂಡಿರಬಹುದು.॥48॥
ಮೂಲಮ್ - 49
ಅಥ ವಾ ವರ್ತತೇ ತತ್ರ ವಸಂತೋ ಯತ್ರ ಮೇ ಪ್ರಿಯಾ ।
ಕಿಂ ಕರಿಷ್ಯತಿ ಸುಶ್ರೋಣೀ ಸಾ ತು ನಿರ್ಭರ್ತ್ಸಿತಾ ಪರೈಃ ॥
ಅನುವಾದ
ನನ್ನ ಪ್ರಿಯೆ ಇರುವಲ್ಲಿಯೂ ಇದೇ ರೀತಿ ವಸಂತನು ಆವರಿಸಿ ಕೊಂಡಿದ್ದರೂ ಶತ್ರುಗಳ ಬೆದರಿಕೆಯನ್ನು ಕೇಳಬೇಕಾದೀತು; ಆದ್ದರಿಂದ ಆ ಹತಭಾಗ್ಯ ಸೀತೆಯು ಏನು ತಾನೇ ಮಾಡ ಬಲ್ಲಳು.॥49॥
ಮೂಲಮ್ - 50
ಶ್ಯಾಮಾ ಪದ್ಮಪಲಾಶಾಕ್ಷೀ ಮೃದುಭಾಷಾಚ ಮೇ ಪ್ರಿಯಾ ।
ನೂನಂ ವಸಂತಮಾಸಾದ್ಯ ಪರಿತ್ಯಕ್ಷ್ಯತಿ ಜೀವಿತಮ್ ॥
ಅನುವಾದ
ಈಗ ತಾನೇ ಯೌವನಸ್ಥಳಾದ, ಅರಳಿದ ಕಮಲದಂತೆ ಮನೋಹರ ನೇತ್ರಗಳುಳ್ಳ, ಮಧುರವಾಗಿ ನುಡಿಯುವ, ನನ್ನ ಪ್ರಾಣವಲ್ಲಭೆ ಜಾನಕಿಯು ಖಂಡಿತವಾಗಿ ಈ ವಸಂತ ಋತುವನ್ನು ಪಡೆದು ತನ್ನ ಪ್ರಾಣತ್ಯಾಗ ಮಾಡುವಳು.॥50॥
ಮೂಲಮ್ - 51
ದೃಢಂ ಹಿ ಹೃದಯೇ ಬುದ್ಧಿರ್ಮಮ ಸಂಪರಿವರ್ತತೇ ।
ನಾಲಂ ವರ್ತಯಿತುಂ ಸೀತಾ ಸಾಧ್ವೀ ಮದ್ವಿರಹಂ ಗತಾ ॥
ಅನುವಾದ
ಸಾಧ್ವೀ ಸೀತೆಯು ನನ್ನಿಂದ ಅಗಲಿ ಹೆಚ್ಚು ಕಾಲ ಬದುಕಿರಲಾರಳು ಎಂಬ ವಿಚಾರ ನನ್ನ ಹೃದಯದಲ್ಲಿ ದೃಢವಾಗುತ್ತಾ ಇದೆ.॥51॥
ಮೂಲಮ್ - 52
ಮಯಿ ಭಾವೋ ಹಿ ವೈದೇಹ್ಯಾಸ್ತತ್ತ್ವತೋ ವಿನಿವೇಶಿತಃ ।
ಮಮಾಪಿ ಭಾವಃ ಸೀತಾಯಾಂ ಸರ್ವಥಾ ವಿನಿವೇಶಿತಃ ॥
ಅನುವಾದ
ವಾಸ್ತವವಾಗಿ ವಿದೇಹ ಕುಮಾರಿಯ ಹಾರ್ದಿಕ ಅನುರಾಗವು ನನ್ನಲ್ಲಿ ಮತ್ತು ನನ್ನ ಸಂಪೂರ್ಣ ಪ್ರೇಮ ಸರ್ವಥಾ ವಿದೇಹನಂದಿನೀ ಸೀತೆಯಲ್ಲೇ ಪ್ರತಿಷ್ಠಿತವಾಗಿದೆ.॥52॥
ಮೂಲಮ್ - 53
ಏಷ ಪುಷ್ಪವಹೋ ವಾಯುಃ ಸುಖಸ್ಪರ್ಶೋ ಹಿಮಾವಹಃ ।
ತಾಂ ವಿಚಿಂತಯತಃ ಕಾಂತಾಂ ಪಾವಕ ಪ್ರತಿಮೋ ಮಮ ॥
ಅನುವಾದ
ಹೂವಿನ ಪರಿಮಳವನ್ನು ಹೊತ್ತು ತರುವ ಸುಖಕರ ಸ್ಪರ್ಶವಾದ ಈ ತಂಗಾಳಿಯು, ಪ್ರಾಣವಲ್ಲಭೆ ಸೀತೆಯ ನೆನಪು ಆದಾಗ ನನಗೆ ಬೆಂಕಿಯಂತೆ ಸುಡುತ್ತಿದೆ.॥53॥
ಮೂಲಮ್ - 54
ಸದಾ ಸುಖಮಹಂ ಮನ್ಯೇ ಯಂ ಪುರಾ ಸಹ ಸೀತಯಾ ।
ಮಾರುತಃ ಸ ವಿನಾ ಸೀತಾಂ ಶೋಕ ಸಂಜನನೋ ಮಮ ॥
ಅನುವಾದ
ಹಿಂದೆ ಸೀತೆಯೊಂದಿಗೆ ಇರುವಾಗ ಸದಾ ಸುಖಮಯವಾಗಿ ತೋರುತ್ತಿದ್ದ ವಾಯುವೇ ಇಂದು ಸೀತೆಯ ವಿರಹದಲ್ಲಿ ನನಗೆ ಶೋಕಜನಕವಾಗಿದೆ.॥54॥
ಮೂಲಮ್ - 55
ತಾಂ ವಿನಾಥ ವಿಹಂಗೋಽಸೌ ಪಕ್ಷೀ ಪ್ರಣದಿತಸ್ತದಾ ।
ವಾಯಸಃ ಪಾದಪಗತಃ ಪ್ರಹೃಷ್ಟಮಭಿಕೂಜತಿ ॥
ಅನುವಾದ
ಸೀತೆಯು ನನ್ನೊಂದಿಗೆ ಇರುವಾಗ ಕಾಗೆಯೊಂದು ಹಾರಾಡುತ್ತಾ ಕಾವ್-ಕಾವ್ ಮಾಡುತ್ತಿತ್ತು, ಅದು ಸೀತೆಯ ಭಾವೀ ವಿಯೋಗವನ್ನು ಸೂಚಿಸುತ್ತಿತ್ತು. ಈಗ ಸೀತೆಯ ವಿಯೋಗದಲ್ಲಿ ಅದೇ ಕಾಗೆ ಮರದಲ್ಲಿ ಕುಳಿತು ಬಹಳ ಹರ್ಷದೊಂದಿಗೆ ಕೂಗುತ್ತಿದೆ. ಇದರಿಂದ ಸೀತೆಯ ಸಂಯೋಗ ಶೀಘ್ರವೇ ಸುಲಭವಾದೀತು ಎಂದು ಸೂಚಿತವಾಗುತ್ತಿದೆ.॥55॥
ಮೂಲಮ್ - 56
ಏಷ ವೈ ತತ್ರ ವೈದೇಹ್ಯಾ ವಿಹಗಃ ಪ್ರತಿಹಾರಕಃ ।
ಪಕ್ಷೀ ಮಾಂ ತು ವಿಶಾಲಾಕ್ಷಾಃ ಸಮೀಪಮುಪನೇಷ್ಯತಿ ॥
ಅನುವಾದ
ಈ ಪಕ್ಷಿಯು ಆಕಾಶದಲ್ಲಿ ಕೂಗಿದಾಗ ವೈದೇಹಿಯ ಅಪಹರಣವಾಗಿತ್ತು. ಆದರೆ ಅದೇ ಇಂದು ಕೂಗುತ್ತಿರುವುದರಿಂದ ಅದು ನನಗೆ ವಿಶಾಲಾಕ್ಷಿ ಸೀತೆಯ ಬಳಿಗೆ ಕೊಂಡು ಹೋದೀತು ಎಂದು ಅನಿಸುತ್ತಿದೆ.॥56॥
ಮೂಲಮ್ - 57
ಶೃಣು ಲಕ್ಷ್ಮಣಸಂನಾದಂ ವನೇ ಮದವಿವರ್ಧನಮ್ ।
ಪುಷ್ಟಿತಾಗ್ರೇಷು ವೃಕ್ಷೇಷು ದ್ವಿಜಾನಾಮವಕೂಜತಾಮ್ ॥
ಅನುವಾದ
ಲಕ್ಷ್ಮಣ! ನೋಡು, ವನದಲ್ಲಿ ತುದಿಯ ರೆಂಬೆಗಳು ಹೂವುಗಳಿಂದ ತುಂಬಿರುವ ವೃಕ್ಷಗಳ ಮೇಲೆ ಕಲರವ ಮಾಡುವ ಪಕ್ಷಿಗಳ ಈ ಮಧುರ ಶಬ್ದವು ವಿರಹೀ ಜನರ ಮದೋನ್ಮತ್ತವನ್ನು ಹೆಚ್ಚಿಸುವುದಾಗಿದೆ.॥57॥
ಮೂಲಮ್ - 58
ವಿಕ್ಷಿಪ್ತಾಂ ಪವನೇನೈತಾಮಸೌ ತಿಲಕಮಂಜರೀಮ್ ।
ಷಟ್ಪದಃ ಸಹಸಾಭ್ಯೇತಿ ಮದೋದ್ಧೂತಾಮಿವ ಪ್ರಿಯಾಮ್ ॥
ಅನುವಾದ
ಗಾಳಿಯಿಂದ ಅಲುಗಾಡುತ್ತಿರುವ ತಿಲಕ ವೃಕ್ಷದ ಹೂವುಗಳ ಗೊಂಚಲುಗಳ ಮೇಲೆ ಭ್ರಮರಗಳು ಬಂದು ಕುಳಿತುಕೊಳ್ಳುವವು. ಇದು ಯಾವುದಾದರೂ ಪ್ರೇಮಿ ಕಾಮ ಮದದಿಂದ ಕಂಪಿತವಾದ ಪ್ರೇಯಸಿಯೊಂದಿಗೆ ಸಂಧಿಸುವಂತಿದೆ.॥58॥
ಮೂಲಮ್ - 59
ಕಾಮಿನಾಮಯಮತ್ಯಂತಮಶೋಕಃ ಶೋಕವರ್ಧನಃ ।
ಸ್ತಬಕೈಃ ಪವನೋತ್ಕ್ಷಿಪ್ತೈಸ್ತರ್ಜಯನ್ನಿವ ಮಾಂ ಸ್ಥಿತಃ ॥
ಅನುವಾದ
ಈ ಅಶೋಕವು ಪ್ರಿಯಾವಿರಹೀ ಕಾಮೀ ಪುರುಷರಿಗಾಗಿ ಅತ್ಯಂತ ಶೋಕ ಹೆಚ್ಚಿಸುವುದಾಗಿದೆ. ಇದು ಗಾಳಿಯ ಹೊಡೆತಕ್ಕೆ ಕಂಪಿಸುವ ಪುಷ್ಪಗುಚ್ಛಗಳು ನನ್ನನ್ನು ಗದರಿಸುವಂತೆ ನಿಂತುಕೊಂಡಿದೆ.॥59॥
ಮೂಲಮ್ - 60
ಅಮೀ ಲಕ್ಷ್ಮಣ ದೃಶ್ಯಂತೇ ಚೂತಾಃ ಕುಸುಮಶಾಲಿನಃ ।
ವಿಭ್ರಮೋತ್ಸಿಕ್ತಮನಸಃ ಸಾಂಗರಾಗಾ ನರಾ ಇವ ॥
ಅನುವಾದ
ಲಕ್ಷ್ಮಣ! ಹೂವುಗಳಿಂದ ಸುಶೋಭಿತವಾದ ಈ ಮಾವಿನ ಮರವು ಶೃಂಗಾರ ವಿಲಾಸದಿಂದ ಮದಮತ್ತ ಹೃದಯನಾಗಿ ಚಂದನಾದಿ ಅಂಗರಾಗಗಳನ್ನು ಹಚ್ಚಿಕೊಳ್ಳುವ ಮನುಷ್ಯರಂತೆ ಕಾಣುತ್ತಿದೆ.॥60॥
ಮೂಲಮ್ - 61
ಸೌಮಿತ್ರೇಪಶ್ಯ ಪಂಪಾಯಾಶ್ಚಿತ್ರಾಸು ವನರಾಜಿಷು ।
ಕಿನ್ನರಾ ನರಶಾರ್ದೂಲ ವಿಚರಂತಿ ತತಸ್ತತಃ ॥
ಅನುವಾದ
ನರಶ್ರೇಷ್ಠ ಸುಮಿತ್ರಾ ಕುಮಾರ! ನೋಡು, ಪಂಪಾ ಸರೋವರ ವಿಚಿತ್ರ ವನಶ್ರೇಣಿಗಳಲ್ಲಿ ಕಿನ್ನರರು ಅತ್ತ-ಇತ್ತ ವಿಚರಿಸುತ್ತಿದ್ದಾರೆ.॥61॥
ಮೂಲಮ್ - 62
ಇಮಾನಿ ಶುಭಗಂಧೀನಿ ಪಶ್ಯ ಲಕ್ಷ್ಮಣ ಸರ್ವಶಃ ।
ನಲಿನಾನಿ ಪ್ರಕಾಶಂತೇ ಜಲೇ ತರುಣಸೂರ್ಯವತ್ ॥
ಅನುವಾದ
ಲಕ್ಷ್ಮಣ! ನೋಡು, ಪಂಪಾ ಸರೋವರದ ಜಲದಲ್ಲಿ ಎಲ್ಲೆಡೆ ಅರಳಿದ ಸುಗಂಧಿತ ಕಮಲಗಳು ಪ್ರಾತಃಕಾಲದ ಸೂರ್ಯನಂತೆ ಪ್ರಕಾಶಿತವಾಗುತ್ತಿವೆ.॥62॥
ಮೂಲಮ್ - 63
ಏಷಾ ಪ್ರಸನ್ನಸಲಿಲಾ ಪದ್ಮನೀಲೋತ್ಪಲಾಯುತಾ ।
ಹಂಸಕಾರಂಡವಾಕೀರ್ಣಾ ಪಂಪಾ ಸೌಗಂಧಿಕಾಯುತಾ ॥
ಅನುವಾದ
ಈ ಸರೋವರದ ನೀರು ಬಹಳ ಸ್ವಚ್ಛವಾಗಿದೆ. ಇದರಲ್ಲಿ ಕೆಂಪಾದ ಮತ್ತು ನೀಲಿ ಕಮಲಗಳು ಅರಳಿವೆ. ಹಂಸ ಮತ್ತು ಕಾರಂಡವ ಮೊದಲಾದ ಪಕ್ಷಿಗಳು ಎಲ್ಲೆಡೆ ತುಂಬಿಕೊಂಡಿವೆ ಹಾಗೂ ಸೌಗಂಧಿಕ ಕಮಲಗಳು ಇದರ ಶೋಭೆಯನ್ನು ಹೆಚ್ಚಿಸುತ್ತಿವೆ.॥63॥
ಮೂಲಮ್ - 64
ಜಲೇ ತರುಣಸೂರ್ಯಾಭೈಃ ಷಟ್ಪದಾಹತ ಕೇಸರೈಃ ।
ಪಂಕಜೈಃ ಶೋಭತೇ ಪಂಪಾ ಸಮಂತಾದಭಿಸಂವೃತಾ ॥
ಅನುವಾದ
ಪ್ರಾತಃಕಾಲದ ಸೂರ್ಯನಂತೆ ಪ್ರಕಾಶಿತವಾಗುವ ಕಮಲಗಳಿಂದ ಈ ಪಂಪಾಸರೋವರವು ಬಹಳ ಶೋಭಿಸುತ್ತಿದೆ. ಆ ಕಮಲಗಳ ಕೇಸರಗಳ ಮಧುವನ್ನು ಭ್ರಮರಗಳು ಕುಡಿದು ಬಿಟ್ಟಿವೆ.॥64॥
ಮೂಲಮ್ - 65
ಚಕ್ರವಾಕಯುತಾ ನಿತ್ಯಂ ಚಿತ್ರಪ್ರಸ್ಥವನಾಂತರಾ ।
ಮಾತಂಗಮೃಗಯೂಥೈಶ್ಚಶೋಭತೇ ಸಲಿಲಾರ್ಥಿಭಿಃ ॥
ಅನುವಾದ
ಇದರಲ್ಲಿ ಚಕ್ರವಾಕಗಳು ಸದಾ ವಾಸಿಸುತ್ತಿವೆ. ಇಲ್ಲಿಯ ವನಗಳಲ್ಲಿ ಚಿತ್ರ-ವಿಚಿತ್ರ ಸ್ಥಾನಗಳಿಗೆ ಹಾಗೂ ನೀರು ಕುಡಿಯಲು ಬಂದಿರುವ ಆನೆಗಳ ಮತ್ತು ಜಿಂಕೆಗಳ ಸಮೂಹಗಳಿಂದ ಪಂಪೆಯ ಶೋಭೆ ಇನ್ನೂ ಹೆಚ್ಚಾಗಿದೆ.॥65॥
ಮೂಲಮ್ - 66
ಪವನಾಹಿತವೇಗಾಭಿರೂರ್ಮಿಭಿರ್ವಿಮಲೇಂಽಭಸಿ ।
ಪಂಕಜಾನಿ ವಿರಾಜಂತೇ ತಾಡ್ಯಮಾನಾನಿ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ಗಾಳಿಯ ಹೊಡೆತದಿಂದ ಎದ್ದಿರುವ ತರಂಗಗಳಿಂದ ತಾಡಿತವಾದ ಕಮಲಗಳು ಪಂಪೆಯ ನಿರ್ಮಲ ಜಲದಲ್ಲಿ ಬಹಳ ಶೋಭಿಸುತ್ತಿವೆ.॥66॥
ಮೂಲಮ್ - 67
ಪದ್ಮಪತ್ರವಿಶಾಲಾಕ್ಷೀಂ ಸತತಂ ಪ್ರಿಯಪಂಕಜಾಮ್ ।
ಅಪಶ್ಯತೋ ಮೇ ವೈದೇಹೀಂ ಜೀವಿತಂ ನಾಭಿರೋಚತೇ ॥
ಅನುವಾದ
ಪದ್ಮಪತ್ರ ವಿಶಾಲಾಕ್ಷೀ ವಿದೇಹ ರಾಜಕುಮಾರೀ ಸೀತೆಗೆ ಕಮಲಗಳು ಸದಾ ಪ್ರಿಯವಾಗಿತ್ತು. ಅವಳನ್ನು ನೋಡದಿರುವುದರಿಂದ ನನಗೆ ಬದುಕಿರುವುದೂ ಒಳ್ಳೆಯದೆನಿಸುವುದಿಲ್ಲ.॥67॥
ಮೂಲಮ್ - 68
ಅಹೋ ಕಾಮಸ್ಯ ವಾಮತ್ವಂ ಯೋ ಗತಾಮಪಿ ದುರ್ಲಭಾಮ್ ।
ಸ್ಮಾರಯಿಷ್ಯತಿ ಕಲ್ಯಾಣೀಂ ಕಲ್ಯಾಣತರವಾದಿನೀಮ್ ॥
ಅನುವಾದ
ಅಯ್ಯೋ! ಕಾಮವು ಎಷ್ಟು ಕುಟಿಲವಾಗಿದೆ. ಬೇರೆ ಕಡೆಗೆ ಹೋಗಿರುವ, ಪರಮ ದುರ್ಲಭವಾಗಿದ್ದರೂ ಕಲ್ಯಾಣ ಮಯ ವಚನ ನುಡಿಯುವ ಆ ಮಂಗಳಮಯಿ ಸೀತೆಯ ನೆನಪು ಪದೇ-ಪದೇ ತಂದುಕೊಡುತ್ತಿದೆ.॥68॥
ಮೂಲಮ್ - 69
ಶಕ್ಯೋ ಧಾರಯಿತುಂ ಕಾಮೋಭವೇದಭ್ಯಾಗತೋ ಮಯಾ ।
ಯದಿ ಭೂಯೋ ವಸಂತೋ ಮಾಂ ನ ಹನ್ಯಾತ್ ಪುಷ್ಟಿತದ್ರುಮಃ ॥
ಅನುವಾದ
ಅರಳಿದ ವೃಕ್ಷಗಳುಳ್ಳ ಈ ವಸಂತನು ನನ್ನ ಮೇಲೆ ಪುನಃ ಪ್ರಹರಿಸದಿದ್ದರೆ ಪ್ರಾಪ್ತವಾದ ಕಾಮವೇದನೆಯನ್ನು ನಾನು ಹೇಗಾದರೂ ಮನಸ್ಸಿನಲ್ಲೇ ತಡೆ ಹಿಡಿದಿಡಬಲ್ಲೆ.॥69॥
ಮೂಲಮ್ - 70
ಯಾನಿ ಸ್ಮ ರಮಣೀಯಾನಿ ತಯಾ ಸಹ ಭವಂತಿ ಮೇ ।
ತಾನ್ಯೇವಾರಮಣೀಯಾನೀ ಜಾಯಂತೇ ಮೇ ತಯಾ ವಿನಾ ॥
ಅನುವಾದ
ಸೀತೆಯ ಜೊತೆಗೆ ಇರುವಾಗ ನನಗೆ ರಮಣೀಯವಾಗಿ ಅನಿಸುತ್ತಿದ್ದ ವಸ್ತುಗಳೇ ಇಂದು ಅವಳು ಇಲ್ಲದ್ದರಿಂದ ಕೆಟ್ಟದಾಗಿ ಕಾಣುತ್ತಿವೆ.॥70॥
ಮೂಲಮ್ - 71
ಪದ್ಮಕೋಶಪಲಾಶಾನಿ ದೃಷ್ಟಂ ದೃಷ್ಟಿರ್ಹಿ ಮನ್ಯತೇ ।
ಸೀತಾಯಾ ನೇತ್ರಕೋಶಾಭ್ಯಾಂ ಸದೃಶಾನೀತಿ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ಈ ಕಮಲಕೋಶದ ಎಸಳುಗಳು ಸೀತೆಯ ನೇತ್ರಕೋಶದಂತೆ ಇವೆ. ಅದಕ್ಕಾಗಿ ನನ್ನ ಕಣ್ಣುಗಳು ಇವನ್ನೇ ನೋಡಬಯಸುತ್ತಿವೆ.॥71॥
ಮೂಲಮ್ - 72
ಪದ್ಮಕೇಸರಸಂಸೃಷ್ಟೋ ವೃಕ್ಷಾಂತರ ವಿನಿಃಸೃತಃ ।
ನಿಃಶ್ವಾಸ ಇವ ಸೀತಾಯಾ ವಾತಿ ವಾಯುರ್ಮನೋಹರಃ ॥
ಅನುವಾದ
ಕಮಲಕೇಸರಗಳನ್ನು ಸ್ಪರ್ಶಿಸಿ ಇತರ ವೃಕ್ಷಗಳ ನಡುವೆ ನುಸುಳಿದ ಈ ಸುಗಂಧಯುಕ್ತ ಮನೋಹರ ವಾಯುವು ಸೀತೆಯ ನಿಃಶ್ವಾಸದಂತೆ ಬೀಸುತ್ತಿದೆ.॥72॥
ಮೂಲಮ್ - 73
ಸೌಮಿತ್ರೇ ಪಶ್ಯ ಪಂಪಾಯಾ ದಕ್ಷಿಣೇ ಗಿರಿಸಾನುಷು ।
ಪುಷ್ಟಿತಾಂ ಕರ್ಣಿಕಾರಸ್ಯ ಯಷ್ಟಿಂ ಪರಮಶೋಭಿತಾಮ್ ॥
ಅನುವಾದ
ಸುಮಿತ್ರಾನಂದನ! ಅಲ್ಲಿ ನೋಡು, ಪಂಪೆಯ ದಕ್ಷಿಣಭಾಗದಲ್ಲಿ ಪರ್ವತ ಶಿಖರದಲ್ಲಿ ಅರಳಿದ ಕಣಗಲೆಯ ರೆಂಬೆ ಎಷ್ಟು ಶೋಭಿಸುತ್ತಿದೆ.॥73॥
ಮೂಲಮ್ - 74
ಅಧಿಕಂ ಶೈಲರಾಜೋಽಯಂ ಧಾತುಭಿಸ್ತುವಿಭೂಷಿತಃ ।
ವಿಚಿತ್ರಂ ಸೃಜತೇರೇಣುಂ ವಾಯುವೇಗ ವಿಘಟ್ಟಿತಮ್ ॥
ಅನುವಾದ
ಭಿನ್ನ-ಭಿನ್ನ ಧಾತುಗಳಿಂದ ವಿಭೂಷಿತವಾದ ಈ ಪರ್ವತರಾಜ ಋಷ್ಯಮೂಕವು ವಾಯುವೇಗದಿಂದ ತಂದಿರುವ ವಿಚಿತ್ರ ಧೂಳನ್ನು ಸೃಷ್ಟಿಸುತ್ತಿದೆ.॥74॥
ಮೂಲಮ್ - 75
ಗಿರಿಪ್ರಸ್ಥಾಸ್ತು ಸೌಮಿತ್ರೇ ಸರ್ವತಃ ಸಂಪ್ರಪುಷ್ಟಿತೈಃ ।
ನಿಷ್ಪತ್ರೈಃ ಸರ್ವತೋ ರಮ್ಯೈಃ ಪ್ರದೀಪ್ತಾ ಇವ ಕಿಂಶುಕೈಃ ॥
ಅನುವಾದ
ಸುಮಿತ್ರಾಕುಮಾರ! ಸುತ್ತಲೂ ಅರಳಿದ ಮತ್ತು ಎಲ್ಲೆಡೆಗಳಿಂದ ಮನೋಹರವಾಗಿ ಕಂಡುಬರುವ ಎಲೆಗಳಿಲ್ಲದ ಮುತ್ತುಗದ ವೃಕ್ಷಗಳಿಂದ ಈ ಪರ್ವತದ ತಪ್ಪಲುಗಳು ಬೆಂಕಿಯಲ್ಲಿ ಉರಿಯುತ್ತಿರುವಂತೆ ಕಾಣುತ್ತದೆ.॥75॥
ಮೂಲಮ್ - 76
ಪಂಪಾತೀರರುಹಾಶ್ಚೇಮೇ ಸಂಸಿಕ್ತಾ ಮಧುಗಂಧಿನಃ ।
ಮಾಲತೀಮಲ್ಲಿಕಾ ಪದ್ಮಕರವೀರಾಶ್ಚ ಪುಷ್ಟಿತಾಃ ॥
ಅನುವಾದ
ಪಂಪಾತೀರದಲ್ಲಿ ಹುಟ್ಟಿದ ಮಾಲತೀ, ಮಲ್ಲಿಕಾ, ಪದ್ಮ, ಕರವೀರ ಮುಂತಾದ ಈ ವೃಕ್ಷಗಳು ಇದರ ನೀರಿನಿಂದ ಮಿಂದು ಬೆಳಿದಿವೆ ಹಾಗೂ ಮಧುರ ಮಕರಂದ, ಸುಗಂಧದಿಂದ ಸಂಪನ್ನವಾಗಿವೆ. ಇವೆಲ್ಲವೂ ಹೂವುಗಳಿಂದ ಸುಶೋಭಿತವಾಗಿವೆ.॥76॥
ಮೂಲಮ್ - 77
ಕೇತಕ್ಯಃ ಸಿಂಧುವಾರಾಶ್ಚ ವಾಸಂತ್ಯಶ್ಚ ಸುಪುಷ್ಟಿತಾಃ ।
ಮಾಧವ್ಯೋ ಗಂಧಪೂರ್ಣಾಶ್ಚ ಕುಂದಗುಲ್ಮಾಶ್ಚ ಸರ್ವಶಃ ॥
ಅನುವಾದ
ಕೇದಗೆ, ಸಿಂದುವಾರ, ವಾಸಂತಿ ಲತೆಗಳೂ ಸುಂದರ ಹೂವುಗಳಿಂದ ತುಂಬಿಕೊಂಡಿವೆ. ಸುಗಂಧಿತ ಮಲ್ಲಿಗೆಯ ಬಳ್ಳಿಗಳು ಹಾಗೂ ಕುಂದ-ಕುಸುಮಗಳ ಗಿಡಗಳು ಎಲ್ಲೆಡೆ ಶೋಭಿಸುತ್ತಿವೆ.॥77॥
ಮೂಲಮ್ - 78
ಚಿರಿಬಿಲ್ವಾ ಮಧೂಕಾಶ್ಚ ವಂಜುಲಾ ಬಕುಲಾಸ್ತಥಾ ।
ಚಂಪಕಾಸ್ತಿಲಕಾಶ್ಚೈವ ನಾಗವೃಕ್ಷಾಶ್ಚ ಪುಷ್ಟಿತಾಃ ॥
ಅನುವಾದ
ಹಿಪ್ಪೆ, ಅಶೋಕ, ಹವಳ, ಸಂಪಿಗೆ, ತಿಲಕ, ನಾಗ ಕೇಸರಗಳೂ ಅರಳಿ ನಿಂತಿವೆ.॥78॥
ಮೂಲಮ್ - 79
ಪದ್ಮಕಾಶ್ಚೈವ ಶೋಭಂತೇ ನೀಲಾಶೋಕಾಶ್ಚ ಪುಷ್ಟಿತಾಃ ।
ಲೋಧ್ರಾಶ್ಚ ಗಿರಿಪೃಷ್ಠೇಷು ಸಿಂಹಕೇಸರಪಿಂಜರಾಃ ॥
ಅನುವಾದ
ಬೆಟ್ಟದ ತಪ್ಪಲಿನಲ್ಲಿ ಪದ್ಮಕ ಮತ್ತು ಅರಳಿದ ನೀಲ ಅಶೋಕವೂ ಶೋಭಿಸುತ್ತಿವೆ. ಅಲ್ಲಿಯೇ ಸಿಂಹದ ಕೂದಲಿನ ಬಣ್ಣದ ಲೋಧ್ರವೂ ಸುಶೋಭಿತವಾಗಿದೆ.॥79॥
ಮೂಲಮ್ - 80½
ಅಂಕೋಲಾಶ್ಚ ಕುರಂಟಾಶ್ಚ ಚೂರ್ಣಕಾಃ ಪಾರಿಭದ್ರಕಾಃ ।
ಚೂತಾಃ ಪಾಟಲಯಶ್ಚಾಪಿ ಕೋವಿದಾರಾಶ್ಚಪುಷ್ಟಿತಾಃ॥
ಮುಚುಕುಂದಾರ್ಜುನಾಶ್ಚೈವ ದೃಶ್ಯಂತೇ ಗಿರಿಸಾನುಷು ।
ಅನುವಾದ
ಅಂಕೋಲ, ಹಳದಿ ಹೂವಿನ ಗೋರಂಟಿಗಿಡ, ಚೂರ್ಣಕ, ಪಾರಿಭದ್ರಕ, ಮಾವು, ಪಾದರೀ, ತೆಂಗಾಂಚಲ, ಮುಚುಕುಂದ (ನಾರಂಗ) ಮತ್ತು ಅರ್ಜುನ ಎಂಬ ವೃಕ್ಷಗಳೂ ಪರ್ವತದ ಶಿಖರಗಳಲ್ಲಿ ಹೂವುಗಳಿಂದ ತುಂಬಿ ಕಂಡುಬರುತ್ತಿವೆ.॥80॥
ಮೂಲಮ್ - 81
ಕೇತಕೋದ್ದಾಲಕಾಶ್ಚೈವ ಶಿರೀಷಾಃ ಶಿಂಶಪಾ ಧವಾಃ ॥
ಮೂಲಮ್ - 82½
ಶಾಲ್ಮಲ್ಯಃ ಕಿಂಶುಕಾಶ್ಚೈವ ರಕ್ತಾಃ ಕುರವಕಾಸ್ತಥಾ ।
ತಿನಿಶಾ ನಕ್ತಮಾಲಾಶ್ಚ ಚಂದನಾಃ ಸ್ಯಂದನಾಸ್ತಥಾ ॥
ಹಿಂತಾಲಾಸ್ತಿಲಕಾಶ್ಚೈವ ನಾಗವೃಕ್ಷಾಶ್ಚ ಪುಷ್ಟಿತಾಃ ।
ಅನುವಾದ
ಕೇದಗೆ, ಚಳ್ಳೆಗಿಡ, ಜಾಗೇಮರ, ಅಸುಗೆ ಮರ, ಧವ, ಕೆಂಪು ಬುರೂಗ, ಮುತ್ತುಗ, ಕೆಂಪುಮುಳ್ಳು ಗೋರಂಟಿ ಗಿಡ, ನೆಮ್ಮಿಗಿಡ, ಹೊಂಗೆ ಮರ, ಗಂಧದ ಮರ, ಸ್ಯಂದನ ವೃಕ್ಷ, ಕಿರುತಾರೆ, ತಿಲಕ, ನಾಗಕೇಸರಿ ಮುಂತಾದ ಗಿಡ ಮರಗಳೆಲ್ಲ ಹೂವುಗಳಿಂದ ಕಂಗೊಳಿಸುತ್ತಿದೆ.॥81-82½॥
ಮೂಲಮ್ - 83½
ಪುಷ್ಚಿತಾನ್ ಪುಷ್ಟಿತಾಗ್ರಾಭಿರ್ಲತಾಭಿಃ ಪರಿವೇಷ್ಟಿತಾನ್ ॥
ದ್ರುಮಾನ್ಪಶ್ಯೇಹ ಸೌಮಿತ್ರೇ ಪಂಪಾಯಾರುಚಿರಾನ್ ಬಹೂನ್ ।
ಅನುವಾದ
ಸುಮಿತ್ರಾನಂದನ! ಲತೆಗಳಿಂದ ಸುತ್ತುವರಿದ, ತುದಿಗಳಲ್ಲಿ ಹೂವುಗಳು ತುಂಬಿರುವ ಪಂಪೆಯ ಈ ಮನೋಹರ ಅಸಂಖ್ಯ ವೃಕ್ಷಗಳನ್ನಾದರೂ ನೋಡು, ಇವೆಲ್ಲವೂ ಪುಷ್ಪಭಾರದಿಂದ ಬಾಗಿಕೊಂಡಿವೆ.॥83½॥
ಮೂಲಮ್ - 84½
ವಾತವಿಕ್ಷಿಪ್ತ ವಿಟಪಾನ್ ಯಥಾಸನ್ನಾನ್ ದ್ರುಮಾನಿಮಾನ್ ॥
ಲತಾಃ ಸಮನುವರ್ತಂತೇ ಮತ್ತಾ ಇವ ವರಸ್ತ್ರಿಯಃ ।
ಅನುವಾದ
ಗಾಳಿಯ ಹೊಡೆತದಿಂದ ಅಲುಗಾಡುತ್ತಿರುವ ರೆಂಬೆಗಳುಳ್ಳ ಈ ವೃಕ್ಷಗಳ ಕೊಂಬೆಗಳು ಕೈಗೆಟುಕುವಷ್ಟು ಬಾಗಿ ಬಳಿಗೆ ಬರುತ್ತಿವೆ. ಪ್ರೇಮಿಲತೆಗಳು ಮದಮತ್ತ ಸುಂದರಿಯರಂತೆ ಅವನ್ನು ಅನುಸರಿಸುತ್ತಿವೆ.॥84½॥
ಮೂಲಮ್ - 85½
ಪಾದಪಾತ್ಪಾದಪಂ ಗಚ್ಛನ್ ಶೈಲಾಚ್ಛೈಲಂ ವನಾದ್ವನಮ್ ॥
ವಾತಿ ನೈಕರಸಾಸ್ವಾದ ಸಮ್ಮೋದಿತ ಇವಾನಿಲಃ ।
ಅನುವಾದ
ಒಂದು ವೃಕ್ಷದಿಂದ ಮತ್ತೊಂದಕ್ಕೆ, ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ, ಒಂದು ವನದಿಂದ ಬೇರೆ ವನಕ್ಕೆ ಹೋಗುವ ಗಾಳಿಯು ಅನೇಕ ರಸಗಳ ಆಸ್ವಾದದಿಂದ ಆನಂದಿತವಾಗಿ ಬೀಸುತ್ತಿದೆ.॥85½॥
ಮೂಲಮ್ - 86½
ಕೇಚಿತ್ಪರ್ಯಾಪ್ತಕುಸುಮಾಃ ಪಾದಪಾ ಮಧುಗಂಧಿನಃ ॥
ಕೇಚಿನ್ಮುಕುಲಸಂವೀತಾಃ ಶ್ಯಾಮವರ್ಣಾ ಇವಾಬಭುಃ ।
ಅನುವಾದ
ಕೆಲವು ವೃಕ್ಷಗಳು ಸಾಕಷ್ಟು ಪುಷ್ಪಗಳಿಂದ ತುಂಬಿದ್ದು, ಮಧು ಹಾಗೂ ಸುಗಂಧದಿಂದ ಸಂಪನ್ನವಾಗಿವೆ. ಕೆಲವು ವೃಕ್ಷಗಳು ಮೊಗ್ಗುಗಳಿಂದ ಶ್ಯಾಮಲವಾಗಿ ಕಂಡುಬರುತ್ತಿವೆ.॥86½॥
ಮೂಲಮ್ - 87½
ಇದಂ ಮೃಷ್ಟಮಿದಂ ಸ್ವಾದು ಪ್ರಫುಲ್ಲಮಿದಮಿತ್ಯಪಿ ॥
ರಾಗರಕ್ತೋ ಮಧುಕರಃ ಕುಸುಮೇಷ್ವವ ಲೀಯತೇ ।
ಅನುವಾದ
ಆ ಭ್ರಮರವು ಅನುರಾಗದಿಂದ ಯುಕ್ತವಾಗಿ ‘ಇದು ಮಧುರವಾಗಿದೆ, ಇದು ರುಚಿಕರವಾಗಿದೆ, ಇದು ಹೆಚ್ಚು ಅರಳಿದೆ’ ಮುಂತಾದ ಮಾತನ್ನು ಯೋಚಿಸುತ್ತಾ ಹೂವುಗಳಲ್ಲೇ ಲೀನವಾಗಿದೆ.॥87½॥
ಮೂಲಮ್ - 88
ನಿಲೀಯ ಪುನರುತ್ಪತ್ಯ ಸಹಸಾನ್ಯತ್ರ ಗಚ್ಛತಿ ।
ಮಧುಲುಬ್ಧೋ ಮಧುಕರಃ ಪಂಪಾತೀರ ದ್ರುಮೇಷ್ವಸೌ ॥
ಅನುವಾದ
ಪುಷ್ಪಗಳಲ್ಲಿ ಅಡಗಿದ್ದು ಮತ್ತೆ ಮೇಲಕ್ಕೆದ್ದು ಸಟ್ಟನೆ ಬೇರೆಡೆಗೆ ಹೊರಟುಹೋಗುತ್ತವೆ. ಈ ಪ್ರಕಾರ ಮಧುಲೋಭಿ ಭ್ರಮರಗಳು ಪಂಪಾತೀರದ ವೃಕ್ಷಗಳಲ್ಲಿ ವಿಚರಿಸುತ್ತಿವೆ.॥88॥
ಮೂಲಮ್ - 89
ಇಯಂ ಕುಸುಮಸಂಘಾತೈರುಪಸ್ತೀರ್ಣಾ ಸುಖಾಕೃತಾ ।
ಸ್ವಯಂ ನಿಪತಿತೈರ್ಭೂಮಿಃ ಶಯನಪ್ರಸ್ತರೈರಿವ ॥
ಅನುವಾದ
ತಾನಾಗಿ ಉದುರಿದ ಪುಷ್ಪಸಮೂಹದಿಂದ ಮುಚ್ಚಿಹೋದ ಈ ಭೂಮಿಯು ಇದರ ಮೇಲೆ ಮಲಗಲು ಮೃದುವಾದ ಹಾಸಿಗೆಯನ್ನು ಹಾಸಿರುವಂತೆ ಸುಖಕರವಾಗಿದೆ.॥89॥
ಮೂಲಮ್ - 90
ವಿವಿಧಾ ವಿವಿಧೈಃ ಪುಷ್ಪೈಸ್ತೈರೇವ ನಗಸಾನುಷು ।
ವಿಕೀರ್ಣೈಃ ಪೀತರಕ್ತಾಭಾಃ ಸೌಮಿತ್ರೇ ಪ್ರಸ್ತರಾಃ ಕೃತಾಃ ॥
ಅನುವಾದ
ಸುಮಿತ್ರಾನಂದನ! ಪರ್ವತ ಶಿಖರಗಳ ಮೇಲೆ ಇರುವ ನಾನಾ ಪ್ರಕಾರದ ವಿಶಾಲ ಶಿಲೆಗಳ ಮೇಲೆ ಉದುರಿದ ಬಗೆ-ಬಗೆಯ ಹೂವುಗಳು ಅವನ್ನು ಕೆಂಪು-ಹಳದಿ ಬಣ್ಣದ ಶಯ್ಯೆಗಳಂತೆ ಮಾಡಿಬಿಟ್ಟಿವೆ.॥90॥
ಮೂಲಮ್ - 91
ಹಿಮಾಂತೇ ಪಶ್ಯ ಸೌಮಿತ್ರೇ ವೃಕ್ಷಾಣಾಂ ಪುಷ್ಪಸಂಭವಮ್ ।
ಪುಷ್ಪಮಾಸೇಹಿ ತರವಃ ಸಂಘರ್ಷಾದಿವ ಪುಷ್ಟಿತಾಃ ॥
ಅನುವಾದ
ಸುಮಿತ್ರಾಕುಮಾರ! ವಸಂತ ಋತುವಿನ ವೃಕ್ಷಗಳ ಹೂವುಗಳ ಈ ವೈಭವವನ್ನು ನೋಡು. ಈ ಚೈತ್ರಮಾಸದ ಈ ವೃಕ್ಷಗಳು ಪರಸ್ಪರ ಸ್ಪರ್ಧೆಯಿಂದ ಅರಳಿಕೊಂಡಿವೆ.॥91॥
ಮೂಲಮ್ - 92
ಆಹ್ವಯಂತ ಇವಾನ್ಯೋನ್ಯಂ ನಗಾಃ ಷಟ್ಪದನಾದಿತಾಃ ।
ಕುಸುಮೋತ್ತಂಸವಿಟಪಾಃ ಶೋಭಂತೇ ಬಹುಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ವೃಕ್ಷಗಳು ತಲೆಯಲ್ಲಿ ಹೂವಿನ ಕಿರೀಟ ಧರಿಸಿಕೊಂಡು ಬಹಳ ಶೋಭಿಸುತ್ತಿವೆ ಹಾಗೂ ಅವು ಭೃಂಗಗಳ ಗುಂಜಾರವದಿಂದ ಒಂದು ಮತ್ತೊಂದನ್ನು ಆಹ್ವಾನಿಸಿದಂತೆ ಕೋಲಾಹಲಪೂರ್ಣವಾಗಿವೆ.॥92॥
ಮೂಲಮ್ - 93
ಏಷ ಕಾರಂಡವಃ ಪಕ್ಷೀ ವಿಗಾಹ್ಯ ಸಲಿಲಂ ಶುಭಮ್ ।
ರಮತೇ ಕಾಂತಯಾ ಸಾರ್ಧಂ ಕಾಮಮುದ್ದೀಪಯನ್ನಿವ ॥
ಅನುವಾದ
ಈ ಕಾರಂಡವ ಪಕ್ಷಿಯು ಪಂಪೆಯ ಸ್ವಚ್ಛ ಜಲದಲ್ಲಿ ಪ್ರವೇಶಿಸಿ ತನ್ನ ಪ್ರಿಯತಮೆಯೊಂದಿಗೆ ರಮಿಸುತ್ತಾ ಕಾಮವನ್ನು ಉದ್ದೀಪನಗೊಳಿಸಿದಂತೆ ಇದೆ.॥93॥
ಮೂಲಮ್ - 94
ಮಂದಾಕಿನ್ಯಾಸ್ತು ಯದಿದಂ ರೂಪಮೇತನ್ಮನೋರಮಮ್ ।
ಸ್ಥಾನೇ ಜಗತಿ ವಿಖ್ಯಾತಾ ಗುಣಾಸ್ತಸ್ಯಾ ಮನೋರಮಾಃ ॥
ಅನುವಾದ
ಮಂದಾಕಿನಿಯಂತೆ ಕಂಡುಬರುವ ಈ ಪಂಪಾ ಸರೋವರವು ಇಂತಹ ಮನೋಹರ ರೂಪವಿರುವಾಗ ಜಗತ್ತಿನಲ್ಲಿ ಅದರ ಮನೋರಮ ಗುಣಗಳು ವಿಖ್ಯಾತವಾಗಿರುವುದು ಉಚಿತವೇ ಆಗಿದೆ.॥94॥
ಮೂಲಮ್ - 95
ಯದಿ ದೃಶ್ಯೇತ ಸಾ ಸಾಧ್ವೀ ಯದಿ ಚೇಹ ವಸೇಮಹಿ ।
ಸ್ಪೃಹಯೇಯಂ ನ ಶಕ್ರಾಯ ನಾಯೋಧ್ಯಾಯೈ ರಘೂತ್ತಮ ॥
ಅನುವಾದ
ರಘುಶ್ರೇಷ್ಠ ಲಕ್ಷ್ಮಣ! ಸಾಧ್ವೀ ಸೀತೆಯು ಕಂಡುಬಂದರೆ,ಆಕೆಯೊಡನೆ ನಾವು ಇಲ್ಲಿ ವಾಸಿಸಿದರೆ ನಮಗೆ ಇಂದ್ರಲೋಕಕ್ಕೆ ಮತ್ತು ಅಯೋಧ್ಯೆಗೂ ಮರಳುವ ಇಚ್ಛೆ ಉಂಟಾಗದು.॥95॥
ಮೂಲಮ್ - 96
ನ ಹ್ಯೇವಂ ರಮಣೀಯೇಷು ಶಾದ್ವಲೇಷು ತಯಾ ಸಹ ।
ರಮತೋ ಮೇ ಭವೇಚ್ಚಿಂತಾ ನ ಸ್ಪೃಹಾನ್ಯೇಷು ವಾ ಭವೇತ್ ॥
ಅನುವಾದ
ಹಸುರು-ಹಸುರಾದ ಹುಲ್ಲಿನಿಂದ ಶೋಭಿತ ಇಂತಹ ರಮಣೀಯ ಪ್ರದೇಶಗಳಲ್ಲಿ ಸೀತೆಯೊಂದಿಗೆ ಆನಂದವಾಗಿ ವಿಹರಿಸುವ ಅವಕಾಶ ಸಿಕ್ಕಿದರೆ ನನಗೆ (ಅಯೋಧ್ಯೆಯ ರಾಜ್ಯ ಸಿಗದಿರುವ) ಯಾವುದೇ ಚಿಂತೆ ಆಗದು ಹಾಗೂ ಬೇರೆ ದಿವ್ಯಭೋಗಗಳ ಅಭಿಲಾಷೆಯೂ ಉಂಟಾಗಲಾರದು.॥96॥
ಮೂಲಮ್ - 97
ಅಮೀ ಹಿ ವಿವಿಧೈಃ ಪುಷ್ರೈಸ್ತರವೋ ರುಚಿರಚ್ಛದಾಃ ।
ಕಾನನೇಽಸ್ಮಿನ್ವಿನಾ ಕಾಂತಾಂ ಚಿಂತಾಮುತ್ಪಾದಯಂತಿ ಮೇ ॥
ಅನುವಾದ
ಈ ವನದ ಬಗೆ-ಬಗೆಯ ತಳಿರುಗಳಿಂದ ಸುಶೋಭಿತ ನಾನಾ ಪ್ರಕಾರದ ಹೂವುಗಳಿಂದ ಕೂಡಿದ ಈ ವೃಕ್ಷಗಳು ಪ್ರಾಣವಲ್ಲಭೆ ಸೀತೆಯು ಇಲ್ಲದೆ ನನ್ನ ಮನಸ್ಸಿನಲ್ಲಿ ಚಿಂತೆ ಉಂಟುಮಾಡುತ್ತಿದೆ.॥97॥
ಮೂಲಮ್ - 98½
ಪಶ್ಯ ಶೀತಜಲಾಂ ಚೇಮಾಂ ಸೌಮಿತ್ರೇ ಪುಷ್ಕರಾಯುತಾಮ್ ।
ಚಕ್ರವಾಕಾನುಚರಿತಾಂ ಕಾರಂಡವನಿಷೇವಿತಾಮ್ ॥
ಪ್ಲವೈಃ ಕ್ರೌಂಚೈಶ್ಚ ಸಂಪೂರ್ಣಾಂ ಮಹಾಮೃಗನಿಷೇವಿತಾಮ್ ।
ಅನುವಾದ
ಸುಮಿತ್ರಾಕುಮಾರ! ನೋಡು, ಈ ಪಂಪೆಯ ನೀರು ಎಷ್ಟು ಶೀತಲವಾಗಿದೆ, ಇದರಲ್ಲಿ ಅಸಂಖ್ಯ ಕಮಲಗಳು ಅರಳಿವೆ, ಚಕ್ರವಾಕಗಳು, ಕಾರಂಡವ, ನೀರುಕೋಳಿ, ಕ್ರೌಂಚ ತುಂಬಿಕೊಂಡಿವೆ; ದೊಡ್ಡ-ದೊಡ್ಡ ಮೃಗಗಳು ಇದನ್ನು ಸೇವಿಸುತ್ತವೆ.॥98½॥
ಮೂಲಮ್ - 99
ಅಧಿಕಂ ಶೋಭತೇ ಪಂಪಾ ವಿಕೂಜದ್ಭಿರ್ವಿಹಂಗಮೈಃ ॥
ಮೂಲಮ್ - 100
ದೀಪಯಂತೀವ ಮೇ ಕಾಮಂ ವಿವಿಧಾ ಮುದಿತಾ ದ್ವಿಜಾಃ ।
ಶ್ಯಾಮಾಂ ಚಂದ್ರಮುಖೀಂ ಸ್ಮೃತ್ವಾ ಪ್ರಿಯಾಂ ಪದ್ಮನಿಭೇಕ್ಷಣಾಮ್ ॥
ಅನುವಾದ
ಕೂಜನ ಮಾಡುತ್ತಿರುವ ಪಕ್ಷಿಗಳಿಂದ ಈ ಪಂಪೆಯು ಬಹಳ ಶೋಭಿಸುತ್ತಾ ಇದೆ. ಆನಂದ ಮಗ್ನರಾದ ಈ ನಾನಾ ಪ್ರಕಾರದ ಪಕ್ಷಿಗಳು ನನ್ನ ಸೀತೆಯ ವಿಷಯಕ ಅನುರಾಗವನ್ನು ಉದ್ದೀಪಿಸುತ್ತಿವೆ; ಏಕೆಂದರೆ ಇವುಗಳ ಕೂಗು ಕೇಳಿ ನನಗೆ ಕಮಲನಯನೀ, ಚಂದ್ರಮುಖೀ, ಪ್ರಿಯತಮೆ ಸೀತೆಯ ಸ್ಮರಣೆ ಬರುತ್ತಾ ಇದೆ.॥99-100॥
ಮೂಲಮ್ - 101
ಪಶ್ಯ ಸಾನುಷು ಚಿತ್ರೇಷು ಮೃಗೀಭಿಃ ಸಹಿತಾನ್ಮೃಗಾನ್ ।
ಮಾಂ ಪುನರ್ಮೃಗಶಾವಾಕ್ಷ್ಯಾವೈದೇಹ್ಯಾವಿರಹೀಕೃತಮ್ ।
ವ್ಯಥಯಂತೀವ ಮೇ ಚಿತ್ತಂ ಸಂಚರಂತಸ್ತತಸ್ತತಃ ॥
ಅನುವಾದ
ಲಕ್ಷ್ಮಣ! ನೋಡು, ಪರ್ವತದ ವಿಚಿತ್ರ ಶಿಖರಗಳ ಮೇಲೆ ಈ ಜಿಂಕೆಗಳು ತಮ್ಮ ಹೆಣ್ಣು ಜಿಂಕೆಗಳೊಂದಿಗೆ ವಿಹರಿಸುತ್ತಿವೆ ಮತ್ತು ನಾನು ಮೃಗನಯನೀ ಸೀತೆಯಿಂದ ಅಗಲಿದ್ದೇನೆ. ಆಕಡೆ-ಈಕಡೆ ಸಂಚರಿಸುತ್ತಾ ಈ ಮೃಗಗಳು ನನ್ನ ಚಿತ್ತವನ್ನು ವ್ಯಥಿತವಾಗಿಸುತ್ತಿವೆ.॥101॥
ಮೂಲಮ್ - 102
ಅಸ್ಮಿನ್ಸಾನುನಿ ರಮ್ಯೇ ಹಿ ಮತ್ತದ್ವಿಜಗಣಾಕುಲೇ ।
ಪಶ್ಯೇಯಂ ಯದಿ ತಾಂ ಕಾಂತಾಂ ತತಃ ಸ್ವಸ್ತಿ ಭವೇನ್ಮಮ ॥
ಅನುವಾದ
ಮತ್ತೆ ಪಕ್ಷಿಗಳಿಂದ ತುಂಬಿದ ಈ ಪರ್ವತದ ರಮಣೀಯ ಶಿಖರದಲ್ಲಿ ಪ್ರಾಣವಲ್ಲಭೆ ಸೀತೆಯ ದರ್ಶನ ಪಡೆದರೆ ನನ್ನ ಶ್ರೇಯಸ್ಸು ಆಗುವುದು.॥102॥
ಮೂಲಮ್ - 103
ಜೀವೇಯಂ ಖಲು ಸೌಮಿತ್ರೇ ಮಯಾ ಸಹ ಸುಮಧ್ಯಮಾ ।
ಸೇವೇತ ಯದಿ ವೈದೇಹೀ ಪಂಪಾಯಾಃ ಪವನಂ ಸುಭಮ್ ॥
ಅನುವಾದ
ಸುಮಿತ್ರಾನಂದನ! ಸುಂದರೀ ಸೀತೆಯು ನನ್ನೊಂದಿಗೆ ಇದ್ದು ಈ ಪಂಪಾಸರೋವರದ ತೀರದಲ್ಲಿ ಸುಖಮಯ ಸಮೀರವನ್ನು ಸೇವಿಸಲು ಸಾಧ್ಯವಾದರೆ ನಾನು ನಿಶ್ಚಯವಾಗಿ ಜೀವಂತವಾಗಿ ಇರಬಲ್ಲೆನು.॥103॥
ಮೂಲಮ್ - 104
ಪದ್ಮಸೌಗಂಧಿಕವಹಂ ಶಿವಂ ಶೋಕ ವಿನಾಶನಮ್ ।
ಧನ್ಯಾ ಲಕ್ಷ್ಮಣ ಸೇವಂತೇ ಪಂಪಾಯಾ ವನಮಾರುತಮ್ ॥
ಅನುವಾದ
ಲಕ್ಷ್ಮಣ! ತನ್ನ ಪ್ರಿಯತಮೆಯೊಂದಿಗೆ ಇದ್ದು ಪದ್ಮ ಮತ್ತು ಸೌಗಂಧಿಕ ಕಮಲಗಳ ಪರಿಮಳವನ್ನು ಅನುಭವಿಸುತ್ತಾ, ಬೀಸುವ ಮಂದ ತಂಗಾಳಿ ಹಾಗೂ ಶೋಕಮಗ್ನ ಪಂಪಾವನದ ವಾಯುವನ್ನು ಸೇವಿಸುವ ಜನರೇ ಧನ್ಯರಾಗಿದ್ದಾರೆ.॥104॥
ಮೂಲಮ್ - 105
ಶ್ಯಾಮಾ ಪದ್ಮಪಲಾಶಾಕ್ಷೀ ಪ್ರಿಯಾ ವಿರಹಿತಾ ಮಯಾ ।
ಕಥಂ ಧಾರಯತಿ ಪ್ರಾಣಾನ್ ವಿವಶಾ ಜನಕಾತ್ಮಜಾ ॥
ಅನುವಾದ
ಅಯ್ಯೋ! ತರುಣಿಯಾದ ಕಮಲಲೋಚನೆ ಜನಕನಂದಿನೀ ಪ್ರಿಯೆ ಸೀತೆಯು ನನ್ನಿಂದ ಅಗಲಿ ವಿರಹಸ್ಥಿತಿಯಲ್ಲಿ ತನ್ನ ಪ್ರಾಣ ಗಳನ್ನು ಹೇಗೆ ಧರಿಸಿಕೊಂಡಿರುವಳೋ.॥105॥
ಮೂಲಮ್ - 106
ಕಿಂ ನು ವಕ್ಷ್ಯಾಮಿ ಧರ್ಮಜ್ಞಂ ರಾಜಾನಂ ಸತ್ಯವಾದಿನಮ್ ।
ಜನಕಂ ಪೃಷ್ಟ ಸೀತಂ ತಂ ಕುಶಲಂ ಜನಸಂಸದಿ ॥
ಅನುವಾದ
ಲಕ್ಷ್ಮಣ! ಧರ್ಮವನ್ನು ತಿಳಿದ ಸತ್ಯವಾದೀ ಜನಕರಾಜನು ಜನ ಸಮುದಾಯದಲ್ಲಿ ಕುಳಿತು ನನ್ನಲ್ಲಿ ಸೀತೆಯ ಕ್ಷೇಮ ಸಮಾಚಾರ ಕೇಳಿದಾಗ ನಾನು ಅವರಿಗೆ ಏನು ಉತ್ತರಿಸಲಿ.॥106॥
ಮೂಲಮ್ - 107
ಯಾ ಮಾಮನುಗತಾ ಮಂದ ಪಿತ್ರಾ ಪ್ರಸ್ಥಾಪಿತಂ ವನಮ್ ।
ಸೀತಾ ಧರ್ಮಂ ಸಮಾಸ್ಥಾಯ ಕ್ವ ನು ಸಾ ವರ್ತತೇ ಪ್ರಿಯಾ ॥
ಅನುವಾದ
ಅಯ್ಯೋ! ತಂದೆಯು ನನ್ನನ್ನು ಕಾಡಿಗೆ ಕಳಿಸಿದಾಗ ಧರ್ಮವನ್ನು ಆಶ್ರಯಿಸಿ ನನ್ನ ಹಿಂದೆ-ಹಿಂದೆ ಬಂದಿರುವ ಆ ನನ್ನ ಪ್ರಿಯೆ ಈಗ ಎಲ್ಲಿರುವಳೋ ಏನೋ.॥107॥
ಮೂಲಮ್ - 108
ತಯಾ ವಿಹೀನಃಕೃಪಣಃ ಕಥಂ ಲಕ್ಷ್ಮಣ ಧಾರಯೇ ।
ಯಾ ಮಾಮನುಗತಾ ರಾಜ್ಯಾದ್ ಭ್ರಷ್ಟಂ ವಿಗತಚೇತಸಮ್ ॥
ಅನುವಾದ
ಲಕ್ಷ್ಮಣ! ರಾಜ್ಯದಿಂದ ವಂಚಿತ ಮತ್ತು ಹತಾಶಗಳಾಗಿದ್ದರೂ ನನ್ನ ಜೊತೆಯನ್ನು ಬಿಡದೆ, ನನ್ನನ್ನೇ ಅನುಸರಿಸಿದ ಸೀತೆಯ ಹೊರತು ಅತ್ಯಂತ ದೀನನಾಗಿ ನಾನು ಹೇಗೆ ಜೀವಿಸಿ ಇರುವೆನು.॥108॥
ಮೂಲಮ್ - 109
ತಚ್ಚಾರ್ವಾಂಚಿತಪದ್ಮಾಕ್ಷಂ ಸುಗಂಧಿ ಶುಭಮವ್ರಣಮ್ ।
ಅಪಶ್ಯತೋ ಮುಖಂ ತಸ್ಯಾಃ ಸೀದತೀವ ಮತಿರ್ಮಮ ॥
ಅನುವಾದ
ಕಮಲದಳದಂತೆ ಸುಂದರ, ಮನೋಹರ ಹಾಗೂ ಪ್ರಶಂಸನೀಯ ನೇತ್ರಗಳಿಂದ ಸುಶೋಭಿತಳಾದ, ಮಧುರ ಸುಗಂಧವೇ ಸೂಸುತ್ತಿದ್ದ, ನಿರ್ಮಲ ಮತ್ತು ಶುಭಲಕ್ಷಣಗಳಿಂದ ಕೂಡಿದ, ಯಾವುದೇ ಕಲೆಗಳಿಲ್ಲದ ಜನಕ ಕಿಶೋರಿಯ ದರ್ಶನೀಯ ಮುಖವನ್ನು ನೋಡದೆ ನನ್ನ ಬುದ್ಧಿಯು ಮಸಳಿಸಿ ಹೋಗಿದೆ.॥109॥
ಮೂಲಮ್ - 110
ಸ್ಮಿತಹಾಸ್ಯಾಂತರಯುತಂ ಗುಣವನ್ಮಧುರಂ ಹಿತಮ್ ।
ವೈದೇಹ್ಯಾ ವಾಕ್ಯಮತುಲಂ ಕದಾ ಶ್ರೋಷ್ಯಾಮಿ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ವೈದೇಹಿಯು ಕೆಲವೊಮ್ಮೆ ನಗುತ್ತಾ, ಕೆಲವೊಮ್ಮೆ ಮುಗುಳ್ನಗೆಯಿಂದ ಹೇಳಿದ ಮಧುರ, ಹಿತಕರ, ಲಾಭದಾಯಕವಾದ, ತುಲನೆಯಿಲ್ಲದ ಮಾತುಗಳು ನನಗೆ ಈಗ ಯಾವಾಗ ಕೇಳಲು ಸಿಗಬಹುದು.॥110॥
ಮೂಲಮ್ - 111
ಪ್ರಾಪ್ಯ ದುಃಖಂ ವನೇ ಶ್ಯಾಮಾ ಮಾಂ ಮನ್ಮಥವಿಕರ್ಶಿತಮ್ ।
ನಷ್ಟದುಃಖೇವ ಹೃಷ್ಟೇವ ಸಾಧ್ವೀ ಸಾಧ್ವಭ್ಯಭಾಷತ ॥
ಅನುವಾದ
ಹದಿನಾರು ವಯಸ್ಸಿನಂತಿರುವ ಸಾಧ್ವೀ ಸೀತೆಯು ವನಕ್ಕೆ ಬಂದು ಕಷ್ಟಪಡುತ್ತಿದ್ದರೂ ನನ್ನನ್ನು ಅನಂಗವೇದನೆಯಿಂದ ಅಥವಾ ಮಾನಸಿಕ ಕಷ್ಟದಲ್ಲಿ ನೋಡಿದಾಗ, ಆಕೆಯ ಎಲ್ಲ ದುಃಖವು ನಾಶವಾಗಿ, ನನ್ನ ಸೀತೆಯು ನನ್ನ ದುಃಖವನ್ನು ದೂರಗೊಳಿಸಲು ಒಳ್ಳೊಳ್ಳೆಯ ಮಾತುಗಳನ್ನು ಆಡುವಷ್ಟು ಪ್ರಸನ್ನಳಾಗುತ್ತಿದ್ದಳು.॥111॥
ಮೂಲಮ್ - 112
ಕಿಂ ನು ವಕ್ಷ್ಯಾಮ್ಯಯೋಧ್ಯಾಯಾಂ ಕೌಸಲ್ಯಾಂ ಹಿ ನೃಪಾತ್ಮಜ ।
ಕ್ವ ಸಾ ಸ್ನುಷೇತಿ ಪೃಚ್ಛಂತೀಂ ಕಥಂ ಚಾಪಿ ಮನಸ್ವಿನೀಮ್ ॥
ಅನುವಾದ
ರಾಜಕುಮಾರ! ಅಯೋಧ್ಯೆಗೆ ಹೋದಾಗ ಮನಸ್ವಿನೀ ಮಾತೆ ಕೌಸಲ್ಯೆಯು ‘ನನ್ನ ಸೊಸೆ ಎಲ್ಲಿ?’ ಎಂದು ಕೇಳಿದರೆ ನಾನು ಏನು ಉತ್ತರಿಸಲಿ.॥112॥
ಮೂಲಮ್ - 113
ಗಚ್ಛ ಲಕ್ಷ್ಮಣ ಪಶ್ಯ ತ್ವಂ ಭರತಂ ಭ್ರಾತೃವತ್ಸಲಮ್ ।
ನ ಹ್ಯಹಂ ಜೀವಿತುಂ ಶಕ್ತಸ್ತಾಮೃತೇ ಜನಕಾತ್ಮಜಾಮ್ ॥
ಮೂಲಮ್ - 114
ಇತಿ ರಾಮಂ ಮಹಾತ್ಮಾನಂ ವಿಲಪಂತಮನಾಥವತ್ ।
ಉವಾಚ ಲಕ್ಷ್ಮಣೋ ಭ್ರಾತಾ ವಚನಂ ಯುಕ್ತಮವ್ಯಯಮ್ ॥
ಅನುವಾದ
ಲಕ್ಷ್ಮಣ! ನೀನು ಹೋಗಿ ಭ್ರಾತೃವತ್ಸಲ ಭರತನನ್ನು ಕಾಣು. ನಾನಾದರೋ ಜನಕನಂದಿನೀ ಸೀತೆಯ ಹೊರತು ಬದುಕಿರಲಾರೆ. ಹೀಗೆ ಮಹಾತ್ಮಾ ಶ್ರೀರಾಮನು ಅನಾಥನಂತೆ ವಿಲಾಪ ಮಾಡುವುದನ್ನು ನೋಡಿ ತಮ್ಮನಾದ ಲಕ್ಷ್ಮಣನು ಯುಕ್ತಿಯುಕ್ತ, ನಿರ್ದೋಷವಾದ ಮಾತುಗಳಲ್ಲಿ ಹೇಳುತ್ತಾನೆ.॥113-114॥
ಮೂಲಮ್ - 115
ಸಂಸ್ತಂಭ ರಾಮ ಭದ್ರಂ ತೇ ಮಾ ಶುಚಃ ಪುರುಷೋತ್ತಮ ।
ನೇದೃಶಾನಾಂ ಮತಿರ್ಮಂದಾ ಭವತ್ಯಕಲುಷಾತ್ಮನಾಮ್ ॥
ಅನುವಾದ
ಪುರುಷೋತ್ತಮ ರಾಮಾ! ನಿನಗೆ ಮಂಗಳವಾಗಲಿ. ನೀನು ನಿನ್ನನ್ನು ಸಾವರಿಸಿಕೋ, ಶೋಕಿಸಬೇಡ, ನಿನ್ನಂತಹ ಪುಣ್ಯಾತ್ಮ ಪುರುಷರ ಬುದ್ಧಿ ಉತ್ಸಾಹ ಶೂನ್ಯವಾಗುವುದಿಲ್ಲ.॥115॥
ಮೂಲಮ್ - 116
ಸ್ಮೃತ್ವಾ ವಿಯೋಗಜಂ ದುಃಖಂ ತ್ಯಜ ಸ್ನೇಹಂ ಪ್ರಿಯೇ ಜನೇ ।
ಅತಿಸ್ನೇಹಪರಿಷ್ವಂಗಾದ್ ವರ್ತಿರಾರ್ದ್ರಾಪಿ ದಹ್ಯತೇ ॥
ಅನುವಾದ
ಅನಿವಾರ್ಯವಾದ ಸ್ವಜನರ ವಿಯೋಗದ ದುಃಖವನ್ನು ಎಲ್ಲರೂ ಸಹಿಸಬೇಕಾಗುತ್ತದೆ, ಈ ಮಾತನ್ನು ಸ್ಮರಿಸಿ ತನ್ನ ಪ್ರಿಯಜನರ ಕುರಿತಾದ ಹೆಚ್ಚಿನ ಸ್ನೇಹ (ಆಸಕ್ತಿ)ವನ್ನು ತ್ಯಜಿಸು; ಏಕೆಂದರೆ ನೀರಿನಿಂದ ಒದ್ದೆಯಾದ ಬತ್ತಿಯೂ ಹೆಚ್ಚಿನ ಸ್ನೇಹ (ಎಣ್ಣೆ)ದಲ್ಲಿ ಮುಳುಗಿಸಿದಾಗ ಉರಿಯತೊಡಗುತ್ತದೆ.॥116॥
ಮೂಲಮ್ - 117
ಯದಿ ಗಚ್ಛತಿ ಪಾತಾಲಂ ತತೋಽಭ್ಯಧಿಕಮೇವ ವಾ ।
ಸರ್ವಥಾ ರಾವಣಸ್ತಾತ ನ ಭವಿಷ್ಯತಿ ರಾಘವ ॥
ಅನುವಾದ
ರಘುನಂದನ! ರಾವಣನು ಪಾತಾಳಕ್ಕೆ ಅಥವಾ ಅದಕ್ಕಿಂತಲೂ ದೂರ ಹೋಗಿದ್ದರೂ ಅವನು ಈಗ ಯಾವ ರೀತಿಯಿಂದಲೂ ಬದುಕಿ ಇರಲಾರನು.॥117॥
ಮೂಲಮ್ - 118
ಪ್ರವೃತ್ತಿರ್ಲಭ್ಯತಾಂ ತಾವತ್ತಸ್ಯ ಪಾಪಸ್ಯ ರಕ್ಷಸಃ ।
ತತೋ ಹಾಸ್ಯತಿ ವಾ ಸೀತಾಂ ನಿಧನಂ ವಾ ಗಮಿಷ್ಯತಿ ॥
ಅನುವಾದ
ಮೊದಲು ಆ ಪಾಪಿ ರಾಕ್ಷಸನು ಎಲ್ಲಿರುವನೆಂದು ತಿಳಿಯಿರಿ. ಮತ್ತೆ ಒಂದೋ ಸೀತೆಯನ್ನು ಹಿಂದಕ್ಕೆ ಕೊಡುವನು, ಇಲ್ಲವಾದರೆ ತನ್ನ ಪ್ರಾಣಗಳನ್ನು ಕಳೆದುಕೊಳ್ಳುವನು.॥118॥
ಮೂಲಮ್ - 119
ಯದಿ ಯಾತಿ ದಿತೇರ್ಗರ್ಭಂ ರಾವಣಃ ಸಹ ಸೀತಯಾ ।
ತತ್ರಾಪ್ಯೇನಂ ಹನಿಷ್ಯಾಮಿ ನ ಚೇದ್ಧಾಸ್ಯತಿ ಮೈಥಿಲೀಮ್ ॥
ಅನುವಾದ
ರಾವಣನು ಸೀತೆಯನ್ನು ಕರೆದುಕೊಂಡು ದಿತಿಯ ಗರ್ಭದಲ್ಲಿ ಅಡಗಿದರೂ, ಮಿಥಿಲೇಶ ಕುಮಾರಿಯನ್ನು ಮರಳಿಸದಿದ್ದರೆ, ನಾನು ಅಲ್ಲಿಯೂ ಅವನನ್ನು ಕೊಂದುಹಾಕುವೆನು.॥119॥
ಮೂಲಮ್ - 120
ಸ್ವಾಸ್ಥ್ಯಂ ಭದ್ರಂ ಭಜಸ್ವಾರ್ಯ ತ್ಯಜ್ಯತಾಂ ಕೃಪಣಾ ಮತಿಃ ।
ಅರ್ಥೋರಹಿ ನಷ್ಟಕಾರ್ಯಾರ್ಥೈ ಯತ್ನೇನಾಧಿಗಮ್ಯತೇ ॥
ಅನುವಾದ
ಆದ್ದರಿಂದ ಆರ್ಯನೇ! ನೀನು ಶುಭಕರ ಧೈರ್ಯವನ್ನು ಹೊಂದು, ದೀನತೆಯಿಂದ ಕೂಡಿದ ವಿಚಾರವನ್ನು ತ್ಯಜಿಸಿ ಬಿಡು. ಪ್ರಯತ್ನ ಮತ್ತು ಧನವು ನಾಶವಾದ ಪುರುಷನು ಉತ್ಸಾಹದಿಂದ ಉದ್ಯೋಗ ಮಾಡದಿದ್ದರೆ ಅವನಿಗೆ ಬೇಕಾದ ಅರ್ಥದ ಪ್ರಾಪ್ತಿಯಾಗಲಾರದು.॥120॥
ಮೂಲಮ್ - 121
ಉತ್ಸಾಹೋ ಬಲವಾನಾರ್ಯ ನಾಸ್ತ್ಯುತ್ಸಾಹಾತ್ಪರಂ ಬಲಮ್ ।
ಸೋತ್ಸಾಹಸ್ಯ ಹಿ ಲೋಕೇಽಷು ನ ಕಿಂಚಿದಪಿ ದುರ್ಲಭಮ್ ॥
ಅನುವಾದ
ಅಣ್ಣಾ! ಉತ್ಸಾಹವೇ ಬಲವಂತವಾಗಿದೆ. ಉತ್ಸಾಹಕ್ಕಿಂತ ಬೇರೆ ಯಾವುದೇ ಬಲವಿಲ್ಲ. ಉತ್ಸಾಹೀ ಪುರುಷನಿಗೆ ಜಗತ್ತಿನಲ್ಲಿ ದುರ್ಲಭವಾದ ವಸ್ತು ಯಾವುದೂ ಇಲ್ಲ.॥121॥
ಮೂಲಮ್ - 122
ಉತ್ಸಾಹವಂತಃ ಪುರುಷಾ ನಾವಸೀದಂತಿ ಕರ್ಮಸು ।
ಉತ್ಸಾಹಮಾತ್ರಮಾಶ್ರಿತ್ಯ ಪ್ರತಿಲಪ್ಸ್ಯಾಮ ಜಾನಕೀಮ್ ॥
ಅನುವಾದ
ಹೃದಯದಲ್ಲಿ ಉತ್ಸಾಹವಿರುವ ಪುರುಷನು ಅತಿಕಠಿಣವಾದ ಕಾರ್ಯ ಇದಿರಾದರೂ ಧೈರ್ಯಗೆಡುವುದಿಲ್ಲ. ನಾವು ಕೇವಲ ಉತ್ಸಾಹವನ್ನೇ ಆಶ್ರಯಿಸಿಯೇ ಜನಕನಂದಿನಿಯನ್ನು ಪಡೆದು ಕೊಳ್ಳುವೆವು.॥122॥
ಮೂಲಮ್ - 123
ತ್ಯಜತಾಂ ಕಾಮವೃತ್ತತ್ವಂ ಶೋಕಂ ಸಂನ್ಯಸ್ಯ ಪೃಷ್ಠತಃ ।
ಮಹಾತ್ಮಾನಂ ಕೃತಾತ್ಮಾನಮಾತ್ಮಾನಂ ನಾವಬುಧ್ಯಸೇ ॥
ಅನುವಾದ
ಶೋಕವನ್ನು ಹಿಂದಕ್ಕೆ ತಳ್ಳಿ ಸೀತೆಯ ಸ್ಮರಣೆಯಿಂದ ನಿನಗುಂಟಾದ ಕಾಮುಕತೆಯನ್ನು ತ್ಯಜಿಸು. ನೀನು ಮಹಾತ್ಮನೆಂಬುದನ್ನು, ಕೃತಾತ್ಮನೆಂಬುದನ್ನು ಮರೆತುಬಿಟ್ಟಿರುವೆ.॥123॥
ಮೂಲಮ್ - 124
ಏವಂ ಸಂಬೋಧಿತಸ್ತೇನ ಶೋಕೋಪಹತಚೇತನಃ ।
ತ್ಯಜ್ಯ ಶೋಕಂ ಚ ಮೋಹಂ ಚ ರಾಮೋ ಧೈರ್ಯಮುಪಾಗಮತ್ ॥
ಅನುವಾದ
ಲಕ್ಷ್ಮಣನು ಹೀಗೆ ಸಮಜಾಯಿಸಿದಾಗ ಶೋಕದಿಂದ ಸಂತಪ್ತಚಿತ್ತನಾದ ಶ್ರೀರಾಮನು ಶೋಕ ಮತ್ತು ಮೋಹವನ್ನು ತ್ಯಜಿಸಿ ಧೈರ್ಯತಂದುಕೊಂಡನು.॥124॥
ಮೂಲಮ್ - 125
ಸೋಽಭ್ಯತಿಕ್ರಾಮದವ್ಯಗ್ರಸ್ತಾಮಚಿಂತ್ಯಪರಾಕ್ರಮಃ ।
ರಾಮಃ ಪಂಪಾ ಸುರುಚಿರಾಂ ರಮ್ಯಾಂಪಾರಿಪ್ಲವದ್ರುಮಾಮ್ ॥
ಅನುವಾದ
ಅನಂತರ ಶಾಂತಸ್ವರೂಪ ಅಚಿಂತ್ಯ ಪರಾಕ್ರಮೀ ಶ್ರೀರಾಮಚಂದ್ರನು-ವಾಯುವಿನ ಹೊಡೆತಕ್ಕೆ ತೂಗುತ್ತಿದ್ದ ವೃಕ್ಷಗಳಿಂದ ಆವೃತವಾದ ಪಂಪಾಸರೋವರವನ್ನು ದಾಟಿ ಮುಂದಕ್ಕೆ ನಡೆದನು.॥125॥
ಮೂಲಮ್ - 126
ನಿರೀಕ್ಷಮಾಣಃ ಸಹಸಾ ಮಹಾತ್ಮಾ
ಸರ್ವಂ ವನಂ ನಿರ್ಝರಕಂದರಂ ಚ ।
ಉದ್ವಿಗ್ನಚೇತಾಃ ಸಹ ಲಕ್ಷ್ಮಣೇನ
ವಿಚಾರ್ಯ ದುಃಖೋಪಹತಃ ಪ್ರತಸ್ಥೇ ॥
ಅನುವಾದ
ಸೀತೆಯ ಸ್ಮರಣೆಯಿಂದ ಉದ್ವಿಗ್ನಚಿತ್ತನಾದ, ದುಃಖದಲ್ಲಿ ಮುಳುಗಿದ್ದ ಮಹಾತ್ಮಾ ಶ್ರೀರಾಮನು, ಲಕ್ಷ್ಮಣನು ನುಡಿದ ಮಾತುಗಳ ಕುರಿತು ವಿಚಾರಮಾಡಿ ತತ್ಕ್ಷಣ ಎಚ್ಚರಗೊಂಡು, ಜಲಪಾತಗಳಿಂದ, ಕಂದಕಗಳಿಂದ ಕೂಡಿದ ಆ ಸಂಪೂರ್ಣ ವನವನ್ನು ನಿರೀಕ್ಷಿಸುತ್ತಾ ಅಲ್ಲಿಂದ ಮುಂದಕ್ಕೆ ಪಯಣಿಸಿದನು.॥126॥
ಮೂಲಮ್ - 127
ತಂ ಮತ್ತಮಾತಂಗವಿಲಾಸಗಾಮೀ
ಗಚ್ಛಂತಮವ್ಯಗ್ರಮನಾ ಮಹಾತ್ಮಾ ।
ಸ ಲಕ್ಷ್ಮಣೋ ರಾಘವಮಿಷ್ಟಚೇಷ್ಟೋ
ರರಕ್ಷ ಧರ್ಮೇಣ ಬಲೇನಚೈವ ॥
ಅನುವಾದ
ಮತ್ತ ಗಜದಂತೆ ವಿಲಾಸಪೂರ್ಣ ಗತಿಯಿಂದ ನಡೆಯುವ ಶಾಂತಚಿತ್ತ ಮಹಾತ್ಮಾ ಲಕ್ಷ್ಮಣನು ಮುಂದೆ-ಮುಂದೆ ಹೋಗುತ್ತಿರುವಾಗ ಶ್ರೀರಘುನಾಥನು ಅವನಿಗೆ ಅನುಕೂಲ ಚೇಷ್ಟೆಗಳನ್ನು ಮಾಡುತ್ತಾ ಧರ್ಮ ಮತ್ತು ಬಲದಿಂದ ಅವನನ್ನು ರಕ್ಷಿಸತೊಡಗಿದನು.॥127॥
ಮೂಲಮ್ - 128
ತಾವೃಶ್ಯಮೂಕಸ್ಯ ಸಮೀಪಚಾರೀ
ಚರನ್ ದದರ್ಶಾದ್ಭುತದರ್ಶನೀಯೌ ।
ಶಾಖಾಮೃಗಾಣಾಮಧಿಪಸ್ತರಸ್ವೀ
ವಿತತ್ರಸೇ ನೈವ ವಿಚೇಷ್ಟ ಚೇಷ್ಟಾಮ್ ॥
ಅನುವಾದ
ಋಷ್ಯಮೂಕ ಪರ್ವತದ ಹತ್ತಿರ ಸಂಚರಿಸುವ ಬಲವಂತ ವಾನರರಾಜ ಸುಗ್ರೀವನು ಪಂಪಾ ಸರೋವರದ ಹತ್ತಿರ ತಿರುಗಾಡುತ್ತಿದ್ದನು. ಆಗಲೇ ಅವನು ಆ ಅದ್ಭುತ ದರ್ಶನೀಯ ವೀರ ಶ್ರೀರಾಮ-ಲಕ್ಷ್ಮಣರನ್ನು ನೋಡಿದನು. ನೋಡುತ್ತಲೇ ಎಲ್ಲಾದರೂ ಇವರನ್ನು ನನ್ನ ಶತ್ರು ವಾಲಿಯು ಕಳಿಸಿರಲಿಕ್ಕಿಲ್ಲವಲ್ಲ ಎಂದು ಅವನ ಮನಸ್ಸಿನಲ್ಲಿ ಭಯ ಉಂಟಾಯಿತು. ಮತ್ತೆ ಊಟ-ತಿಂಡಿಯನ್ನು ಮಾಡದಷ್ಟು ಅವನು ಹೆದರಿಹೋದನು.॥128॥
ಮೂಲಮ್ - 129
ಸ ತೌ ಮಹಾತ್ಮಾ ಗಜಮಂದಗಾಮೀ
ಶಾಖಾಮೃಗಸ್ತತ್ರ ಚರಂಶ್ಚರಂತೌ ।
ದೃಷ್ಟ್ವಾ ವಿಷಾದಂ ಪರಮಂ ಜಗಾಮ
ಚಿಂತಾಪರೀತೋ ಭಯಭಾರಭಗ್ನಃ ॥
ಅನುವಾದ
ಆನೆಯಂತೆ ಮಂದಗತಿಯಲ್ಲಿ ನಡೆಯುವ ಮಹಾತ್ಮಾ ವಾನರರಾಜ ಸುಗ್ರೀವ ಅಲ್ಲಿ ಅಲೆಯುತ್ತಿರುವಾಗ ಒಟ್ಟಿಗೆ ಮುಂದರಿಯುತ್ತಿದ್ದ ಆ ಇಬ್ಬರೂ ಸೋದರರನ್ನು ನೋಡಿ ಚಿಂತಿತನಾದನು. ಭಯದ ಭಾರೀ ಭಾರದಿಂದ ಅವನ ಉತ್ಸಾಹ ನಷ್ಟವಾಗಿ, ಮಹಾದುಃಖದಲ್ಲಿ ಮುಳುಗಿದನು.॥129॥
ಮೂಲಮ್ - 130
ತಮಾಶ್ರಮಂ ಪುಣ್ಯಸುಖಂ ಶರಣ್ಯಂ
ಸದೈವ ಶಾಖಾಮೃಗಸೇವಿತಾಂತಮ್ ।
ತ್ರಸ್ತಾಶ್ಚ ದೃಷ್ಟ್ವಾ ಹರಯೋಽಭಿಜಗ್ಮು-
ರ್ಮಹೌಜಸೌ ರಾಘವಲಕ್ಷ್ಮಣೌ ತೌ ॥
ಅನುವಾದ
ಮತಂಗ ಮುನಿಯ ಆ ಆಶ್ರಮವು ಪರಮ ಪವಿತ್ರ ಹಾಗೂ ಸುಖದಾಯಕವಾಗಿತ್ತು. ಮುನಿಯು ಶಾಪದಿಂದ ಅದರಲ್ಲಿ ಪ್ರವೇಶಿಸುವುದು ವಾಲಿಗೆ ಕಠಿಣವಾಗಿತ್ತು, ಅದರಿಂದ ಅದು ಇತರ ವಾನರರ ಆಶ್ರಯವಾಗಿತ್ತು. ಆ ಆಶ್ರಮ ಅಥವಾ ವನದೊಳಗೆ ಸದಾ ಅನೇಕಾನೇಕ ಶಾಖಾಮೃಗಗಳು ವಾಸಿಸುತ್ತಿದ್ದವು. ಆ ದಿನ ಮಹಾತೇಜಸ್ವೀ ಶ್ರೀರಾಮ ಮತ್ತು ಲಕ್ಷ್ಮಣರನ್ನು ನೋಡಿ ಬೇರೆ-ಬೇರೆ ವಾನರರೂ ಭಯಗೊಂಡು ಆಶ್ರಮದೊಳಗೆ ಸೇರಿಕೊಂಡವು.॥130॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗ ಸಂಪೂರ್ಣವಾಯಿತು.॥1॥