वाचनम्
ಭಾಗಸೂಚನಾ
ಶ್ರೀರಾಮ-ಲಕ್ಷ್ಮಣರು ಸಂಭಾಷಿಸುತ್ತಾ ಪಂಪಾಸರೋವರದ ತೀರಕ್ಕೆ ಹೋದುದು
ಮೂಲಮ್ - 1
ದಿವಂ ತು ತಸ್ಯಾಂ ಯಾತಾಯಾಂ ಶಬರ್ಯಾಂ ಸ್ವೇನ ತೇಜಸಾ ।
ಲಕ್ಷ್ಮಣೇನ ಸಹ ಭ್ರಾತ್ರಾ ಚಿಂತಯಾಮಾಸ ರಾಘವಃ ॥
ಮೂಲಮ್ - 2
ಚಿಂತಯಿತ್ವಾ ತು ಧರ್ಮಾತ್ಮಾ ಪ್ರಭಾವಂ ತಂ ಮಹಾತ್ಮನಾಮ್ ।
ಹಿತಕಾರಿಣಮೇಕಾಗ್ರಂ ಲಕ್ಷ್ಮಣಂ ರಾಘವೋಽಬ್ರವೀತ್ ॥
ಅನುವಾದ
ತನ್ನ ತೇಜದಿಂದ ಪ್ರಕಾಶಿತಳಾದ ಶಬರಿಯು ದಿವ್ಯಲೋಕಕ್ಕೆ ತೆರಳಿದ ಬಳಿಕ ಲಕ್ಷ್ಮಣ ಸಹಿತ ಧರ್ಮಾತ್ಮಾ ಶ್ರೀರಘುನಾಥನು ಆ ಮಹಾತ್ಮಾ ಮಹರ್ಷಿಯ ಪ್ರಭಾವವನ್ನು ಚಿಂತಿಸುತ್ತಾ ತನ್ನ ಹಿತದಲ್ಲೇ ಸಂಲಗ್ನನಾಗಿದ್ದ ಏಕಾಗ್ರಚಿತ್ತ ಲಕ್ಷ್ಮಣನಲ್ಲಿ ಹೀಗೆ ಹೇಳಿದನು.॥1-2॥
ಮೂಲಮ್ - 3
ದೃಷ್ಟೋಮಯಾಽಽಶ್ರಮಃ ಸೌಮ್ಯ ಬಹ್ವಾಶ್ಚರ್ಯಃ ಕೃತಾತ್ಮನಾಮ್ ।
ವಿಶ್ವಸ್ತಮೃಗಶಾರ್ದೂಲೋ ನಾನಾ ವಿಹಗಸೇವಿತಃ ॥
ಅನುವಾದ
ಸೌಮ್ಯ! ನಾನು ಆ ಪುಣ್ಯಾತ್ಮ ಮಹರ್ಷಿಗಳ ಈ ಪವಿತ್ರ ಆಶ್ರಮವನ್ನು ನೋಡಿದೆ. ಇಲ್ಲಿ ಅನೇಕ ಆಶ್ಚರ್ಯಜನಕ ವಿಷಯಗಳಿವೆ. ಜಿಂಕೆ ಮತ್ತು ಹುಲಿ ಪರಸ್ಪರ ವಿಶ್ವಾಸದಿಂದ ಇವೆ. ನಾನಾ ರೀತಿಯ ಪಕ್ಷಿಗಳು ಈ ಆಶ್ರಮವನ್ನು ಸೇರಿ ವಾಸಿಸುತ್ತಿವೆ.॥3॥
ಮೂಲಮ್ - 4
ಸಪ್ತಾನಾಂ ಚ ಸಮುದ್ರಾಣಾಂ ತೇಷಾಂ ತೀರ್ಥೇಷು ಲಕ್ಷ್ಮಣ ।
ಉಪಸ್ಪೃಷ್ಟಂ ಚ ವಿಧಿವತ್ ಪಿತರಶ್ಚಾಪಿ ತರ್ಪಿತಾಃ ॥
ಮೂಲಮ್ - 5
ಪ್ರಣಷ್ಟಮಶುಭಂ ತನ್ನಃ ಕಲ್ಯಾಣಂ ಸಮುಪಸ್ಥಿತಮ್ ।
ತೇನ ತತ್ತ್ವೇನ ಹೃಷ್ಟಂ ಮೇ ಮನೋ ಲಕ್ಷ್ಮಣ ಸಂಪ್ರತಿ ॥
ಅನುವಾದ
ಲಕ್ಷ್ಮಣ! ಏಳು ಸಮುದ್ರಗಳ ಜಲದಿಂದ ತುಂಬಿದ ಇಲ್ಲಿನ ತೀರ್ಥದಲ್ಲಿ ನಾವು ವಿಧಿವತ್ತಾಗಿ ಸ್ನಾನ ಹಾಗೂ ಪಿತೃತರ್ಪಣ ಮಾಡಿದೆವು. ಇದರಿಂದ ನಮ್ಮ ಎಲ್ಲ ಅನಿಷ್ಟವು ನಾಶವಾಯಿತು. ಈಗ ನಮ್ಮ ಶ್ರೇಯಸ್ಸಿನ ಸಮಯ ಬಂದಿದೆ. ಸುಮಿತ್ರಾಕುಮಾರ! ಇದರಿಂದ ಈಗ ನನ್ನ ಮನಸ್ಸಿನಲ್ಲಿ ಹೆಚ್ಚಿದ ಪ್ರಸನ್ನತೆ ಉಂಟಾಗಿದೆ.॥4-5॥
ಮೂಲಮ್ - 6
ಹೃದಯೇ ಹಿ ನರವ್ಯಾಘ್ರ ಶುಭಮಾವಿರ್ಭವಿಷ್ಯತಿ ।
ತದಾಗಚ್ಛ ಗಮಿಷ್ಯಾವಃ ಪಂಪಾಂ ತಾಂ ಪ್ರಿಯದರ್ಶನಾಮ್ ॥
ಅನುವಾದ
ನರಶ್ರೇಷ್ಠನೇ! ಈಗ ನನ್ನ ಹೃದಯದಲ್ಲಿ ಯಾವುದೋ ಶುಭ ಸಂಕಲ್ಪ ಏಳುತ್ತಿದೆ. ಅದಕ್ಕಾಗಿ ನಡೆ, ಈಗ ನಾವಿಬ್ಬರೂ ಪರಮ ಸುಂದರ ಪಂಪಾಸರೋವರದ ತೀರಕ್ಕೆ ಹೋಗುವಾ.॥6॥
ಮೂಲಮ್ - 7
ಋಶ್ಯಮೂಕೋ ಗಿರಿರ್ಯತ್ರ ನಾತಿದೂರೇ ಪ್ರಕಾಶತೇ ।
ಯಸ್ಮಿನ್ವಸತಿ ಧರ್ಮಾತ್ಮಾ ಸುಗ್ರೀವೋಽಂಶುಮತಃ ಸುತಃ ॥
ಅನುವಾದ
ಅಲ್ಲಿಂದ ಸ್ವಲ್ಪ ದೂರದಲ್ಲೇ ಸೂರ್ಯಪುತ್ರ ಸುಗ್ರೀವನು ವಾಸಿಸುವ ಋಷ್ಯಮೂಕ ಪರ್ವತವು ಶೋಭಿಸುತ್ತಿದೆ.॥7॥
ಮೂಲಮ್ - 8½
ನಿತ್ಯಂ ವಾಲಿಭಯಾತ್ ತ್ರಸ್ತಶ್ಚತುರ್ಭಿಃ ಸಹ ವಾನರೈಃ ।
ಅಹಂತ್ವರೇ ಚ ತಂ ದ್ರಷ್ಟುಂ ಸುಗ್ರೀವಂ ವಾನರರ್ಷಭಮ್ ॥
ತದಧೀನಂ ಹಿ ಮೇಕಾರ್ಯಂ ಸೀತಾಯಾಃ ಪರಿಮಾರ್ಗಣಮ್ ।
ಅನುವಾದ
ವಾಲಿಯ ಭಯದಿಂದ ಸದಾ ಹೆದರಿರುವುದರಿಂದ ಅವನು ನಾಲ್ಕು ವಾನರರೊಂದಿಗೆ ಆ ಪರ್ವತದಲ್ಲಿ ಇರುವನು. ವಾನರ ಶ್ರೇಷ್ಠ ಸುಗ್ರೀವನನ್ನು ಭೆಟ್ಟಿಯಾಗಲು ಆತುರವಾಗಿದ್ದೇನೆ. ಏಕೆಂದರೆ ಸೀತಾನ್ವೇಷಣ ಕಾರ್ಯವು ಅವನ ಅಧೀನವೇ ಆಗಿದೆ.॥8½॥
ಮೂಲಮ್ - 9½
ಇತಿ ಬ್ರುವಾಣಂ ತಂ ವೀರಂ ಸೌಮಿತ್ರಿರಿದಮಬ್ರವೀತ್ ॥
ಗಚ್ಛಾವಸ್ತ್ವರಿತಂ ತತ್ರ ಮಮಾಪಿ ತ್ವರತೇ ಮನಃ ।
ಅನುವಾದ
ಹೀಗೆ ಮಾತನಾಡುತ್ತಾ ವೀರ ಶ್ರೀರಾಮನಲ್ಲಿ ಲಕ್ಷ್ಮಣನು ಹೀಗೆ ಹೇಳಿದನು - ಅಣ್ಣಾ! ನಾವಿಬ್ಬರೂ ಶೀಘ್ರವಾಗಿ ಅಲ್ಲಿಗೆ ಹೋಗಬೇಕು. ನನ್ನ ಮನಸ್ಸೂ, ಆತುರವಾಗಿದೆ.॥9½॥
ಮೂಲಮ್ - 10
ಆಶ್ರಮಾತ್ತು ತತಸ್ತಸ್ಮಾನ್ನಿಷ್ಕ್ರಮ್ಯ ಸ ವಿಶಾಂಪತಿಃ ॥
ಮೂಲಮ್ - 11
ಆಜಗಾಮ ತತಃಪಂಪಾಂ ಲಕ್ಷ್ಮಣೇನ ಸಹ ಪ್ರಭುಃ ।
ಸಮೀಕ್ಷಮಾಣಃ ಪುಷ್ಪಾಢ್ಯಂ ಸರ್ವತೋ ವಿಪುಲದ್ರುಮಮ್ ॥
ಅನುವಾದ
ಅನಂತರ ಪ್ರಜಾಪಾಲಕ ಶ್ರೀರಾಮನು ಲಕ್ಷ್ಮಣನೊಂದಿಗೆ ಆ ಆಶ್ರಮದಿಂದ ಹೊರಟು ಎಲ್ಲೆಡೆ ಹೂವುಗಳಿಂದ ತುಂಬಿದ ನಾನಾ ಪ್ರಕಾರದ ವೃಕ್ಷಗಳ ಶೋಭೆಯನ್ನು ನೋಡುತ್ತಾ ಪಂಪಾ ಸರೊವರದ ತೀರಕ್ಕೆ ಬಂದನು.॥10-11॥
ಮೂಲಮ್ - 12
ಕೋಯಷ್ಟಿಭಿಶ್ಚಾರ್ಜುನಕೈಃ ಶತಪತ್ರೈಶ್ಚ ಕೀರಕೈಃ ।
ಏತೈಶ್ಚಾನ್ಮೈಶ್ಚ ಬಹುಭಿರ್ನಾದಿತಂ ತದ್ವನಂ ಮಹತ್ ॥
ಅನುವಾದ
ಆ ವಿಶಾಲ ವನವು ಟಿಟ್ಟಿಭ, ನವಿಲು, ಮರಕುಟಕ, ಗಿಳಿ ಹಾಗೂ ಇತರ ಅನೇಕ ಪಕ್ಷಿಗಳ ಕಲರವದಿಂದ ಪ್ರತಿಧ್ವನಿಸುತ್ತಿತ್ತು.॥12॥
ಮೂಲಮ್ - 13
ಸ ರಾಮೋ ವಿವಿಧಾನ್ ವೃಕ್ಷಾನ್ ಸರಾಂಸಿ ವಿವಿಧಾನಿ ಚ ।
ಪಶ್ಯನ್ಕಾಮಾಭಿಸಂತಪ್ತೋ ಜಗಾಮ ಪರಮಂ ಹ್ರದಮ್ ॥
ಅನುವಾದ
ಶ್ರೀರಾಮನ ಮನಸ್ಸಿನಲ್ಲಿ ಸೀತೆಯನ್ನು ಸಂದರ್ಶಿಸುವ ಲಾಲಸೆ ಉಂಟಾಗಿತ್ತು, ಇದರಿಂದ ಸಂತಪ್ತನಾಗಿ ಅವನು ನಾನಾ ಪ್ರಕಾರದ ವೃಕ್ಷಗಳ, ಬಗೆ-ಬಗೆಯ ಸರೋವರಗಳ ಶೋಭೆಯನ್ನು ನೋಡುತ್ತಾ ಆ ಉತ್ತಮ ಜಲಾಶಯದ ಬಳಿಗೆ ಬಂದನು.॥13॥
ಮೂಲಮ್ - 14
ಸ ತಾಮಾಸಾದ್ಯ ವೈ ರಾಮೋ ದೂರಾತ್ ಪಾನೀಯವಾಹೀನೀಮ್ ।
ಮತಂಗಸರಸಂ ನಾಮ ಹ್ರದಂ ಸಮವಗಾಹತ ॥
ಅನುವಾದ
ಪಂಪಾ ಎಂದು ಪ್ರಸಿದ್ಧವಾದ ಆ ಸರೋವರವು ಕುಡಿಯಲು ಯೋಗ್ಯವಾದ ನೀರಿನಿಂದ ತುಂಬಿತ್ತು. ಶ್ರೀರಾಮನು ದೂರದಿಂದ ನಡೆದು ಅದರ ತೀರಕ್ಕೆ ಬಂದಿದ್ದನು. ಬಂದು ಅವನು ಮತಂಗಸರಸ್ಸು ಎಂಬ ಕುಂಡದಲ್ಲಿ ಸ್ನಾನಮಾಡಿದನು.॥14॥
ಮೂಲಮ್ - 15½
ತತ್ರ ಜಗ್ಮತುರವ್ಯಗ್ರೌ ರಾಘವೌ ಹಿ ಸಮಾಹಿತೌ ।
ಸ ತು ಶೋಕಸಮಾವಿಷ್ಟೋ ರಾಮೋ ದಶರಥಾತ್ಮಜಃ ॥
ವಿವೇಶ ನಲಿನೀಂ ರಮ್ಯಾಂ ಪಂಕಜೈಶ್ಚ ಸಮಾವೃತಾಮ್ ।
ಅನುವಾದ
ಅವರಿಬ್ಬರೂ ರಘುವಂಶೀ ವೀರರು ಶಾಂತ, ಏಕಾಗ್ರಚಿತ್ತರಾಗಿ ತಲುಪಿದ್ದರು. ಸೀತೆಯ ಶೋಕದಿಂದ ವ್ಯಾಕುಲನಾದ ದಶರಥನಂದನ ಶ್ರೀರಾಮನು ಆ ರಮಣೀಯವಾದ ಕಮಲಗಳಿಂದ ವ್ಯಾಪ್ತವಾದ ಪಂಪಾಪುಷ್ಕರಿಣಿಯ ಪ್ರದೇಶವನ್ನು ಪ್ರವೇಶಿಸಿದನು.॥15½॥
ಮೂಲಮ್ - 16
ತಿಲಕಾಶೋಕಪುನ್ನಾಗಬಕುಲೋದ್ದಾಲಕಾಶಿನೀಮ್ ॥
ಮೂಲಮ್ - 17
ರಮ್ಯೋಪವನಸಂಬಾಧಾಂ ಪದ್ಮಸಂಪೀಡಿತೋದಕಾಮ್ ।
ಸ್ಫಟಿಕೋಪಮತೋಯಾಂ ತಾಂ ಶ್ಲಕ್ಷ್ಣವಾಲುಕಸಂತತಾಮ್ ॥
ಮೂಲಮ್ - 18
ಮತ್ಸ್ಯಕಚ್ಛಪಸಂಬಾಧಾಂ ತೀರಸ್ಥದ್ರುಮಶೋಭಿತಾಮ್ ।
ಸಖೀಭಿರಿವ ಸಂಯುಕ್ತಾಂ ಲತಾಭಿರನುವೇಷ್ಟಿತಾಮ್ ॥
ಮೂಲಮ್ - 19
ಕಿಂನರೋರಗಂಧರ್ವಯಕ್ಷರಾಕ್ಷಸಸೇವಿತಾಮ್ ।
ನಾನಾದ್ರುಮಲತಾಕೀರ್ಣಾಂ ಶೀತವಾರಿನಿಧಿಂ ಶುಭಾಮ್ ॥
ಅನುವಾದ
ಅದರ ತೀರದಲ್ಲಿ ತಿಲಕ, ಅಶೋಕ, ನಾಗಕೇಸರ, ಬಕುಳ, ಪುನ್ನಾಗ, ಮುಂತಾದ ವೃಕ್ಷಗಳು ಶೋಭಿಸುತ್ತಿದ್ದವು. ಬಗೆ ಬಗೆಯ ರಮಣೀಯ ಉಪವನಗಳಿಂದ ಆವೃತವಾಗಿತ್ತು. ಅದರ ನೀರು ಕಮಲ ಪುಷ್ಪಗಳಿಂದ ಮುಚ್ಚಿಹೋಗಿತ್ತು ಹಾಗೂ ಸ್ಫಟಿಕ ಮಣಿಯಂತೆ ಸ್ವಚ್ಛವಾಗಿ ಕಾಣುತ್ತಿತ್ತು. ನೀರಿನ ತಳದಲ್ಲಿ ಸ್ವಚ್ಛವಾದ ಮರಳು ತುಂಬಿತ್ತು. ಮೀನು, ಆಮೆಗಳು ಅದರಲ್ಲಿ ತುಂಬಿದ್ದವು. ತೀರದ ವೃಕ್ಷಗಳು ಅದರ ಶೋಭೆಯನ್ನು ಹೆಚ್ಚಿಸಿವೆ. ಸುತ್ತಲು ಲತೆಗಳಿಂದ ಸುತ್ತಿಕೊಂಡಿದ್ದರಿಂದ ಅವು ಸಖಿಯರಿಂದ ಕೂಡಿರುವಂತೆ ಕಂಡುಬರುತ್ತಿದ್ದವು. ಕಿನ್ನರರು, ನಾಗರು, ಗಂಧರ್ವರು, ಯಕ್ಷರು, ರಾಕ್ಷಸರು, ಅದನ್ನು ಸೇವಿಸುತ್ತಿದ್ದರು. ಬಗೆ ಬಗೆಯ ವೃಕ್ಷಗಳಿಂದ ಮತ್ತು ಲತೆಗಳಿಂದ ಆವೃತವಾದ ಪಂಪೆಯು ಶೀತಲ ಜಲದ ಸುಂದರ ನಿಧಿಯಂತೆ ಕಂಗೊಳಿಸುತ್ತಿತ್ತು.॥16-19॥
ಮೂಲಮ್ - 20
ಪದ್ಮಸೌಗಂಧಿಕೈಸ್ತಾಮ್ರಾಂ ಶುಕ್ಲಾಂ ಕುಮುದಮಂಡಲೈಃ ।
ನೀಲಾಂ ಕುವಲಯೋದ್ಘಾಟೈರ್ಬಹುವರ್ಣಾಂ ಕುಥಾಮಿವ ॥
ಅನುವಾದ
ಅರುಣ ಕಮಲಗಳಿಂದ ಕೆಂಪಾಗಿ, ಕುಮುದ ಕುಸುಮಗಳಿಂದ ಬಿಳಿಯಾಗಿ, ನೀಲ ಕಮಲಗಳಿಂದ ನೀಲಿಯಾಗಿ ಕಾಣುವುದರಿಂದ ಅದು ಬಣ್ಣ ಬಣ್ಣದ ರತ್ನಕಂಬಳಿ ಯಂತೆ ಶೋಭಿಸುತ್ತಿತ್ತು.॥20॥
ಮೂಲಮ್ - 21
ಅರವಿಂದೋತ್ಪಲವತೀಂ ಪದ್ಮಸೌಗಂಧಿಕಾಯುತಾಮ್ ।
ಪುಷ್ಟಿತಾಮ್ರವಣೋಪೇತಾಂ ಬರ್ಹಿಣೋದ್ಘುಷ್ಪನಾದಿತಾಮ್ ॥
ಅನುವಾದ
ಆ ಪುಷ್ಕರಿಣಿಯಲ್ಲಿ ಅರವಿಂದ, ಉತ್ಪಲ ಅರಳಿದ್ದವು, ಪದ್ಮ, ಸೌಗಂಧಿಕ ಜಾತಿಯ ಪುಷ್ಪಗಳು ಶೋಭಿಸುತ್ತಿದ್ದವು. ಹೂವು ಬಿಟ್ಟ ಮಾವಿನ ತೋಪಿನಿಂದ ಸುತ್ತುವರಿದಿತ್ತು, ನವಿಲುಗಳ ಕೇಕೆನಾದದಿಂದ ಪ್ರತಿಧ್ವನಿಸುತ್ತಿತ್ತು.॥21॥
ಮೂಲಮ್ - 22
ಸ ತಾಂ ದೃಷ್ಟ್ವಾ ತತಃ ಪಂಪಾಂ ರಾಮಃ ಸೌಮಿತ್ರಿಣಾ ಸಹ ।
ವಿಲಲಾಪ ಸ ತೇಜಸ್ವೀ ರಾಮೋ ದಶರಥಾತ್ಮಜಃ ॥
ಅನುವಾದ
ಲಕ್ಷ್ಮಣ ಸಹಿತ ಶ್ರೀರಾಮನು ಆ ಮನೋಹರವಾಗಿರುವ ಪಂಪಾ ಸರೋವರವನ್ನು ನೋಡಿದಾಗ ಅವನ ಹೃದಯದಲ್ಲಿ ಸೀತೆಯ ವಿಯೋಗ-ವ್ಯಥೆ ಉರಿದೆದ್ದಿತು. ಆದ್ದರಿಂದ ತೇಜಸ್ವೀ ಶ್ರೀರಾಮನು ಅಲ್ಲಿ ವಿಲಾಪಿಸತೊಡಗಿದನು.॥22॥
ಮೂಲಮ್ - 23
ತಿಲಕೈರ್ಬೀಜಪೂರೈಶ್ಚ ವಟೈಃ ಶುಕ್ಲದ್ರುಮೈಸ್ತಥಾ ।
ಪುಷ್ಟಿತೈಃ ಕರವೀರೈಶ್ಚ ಪುಂನಾಗೈಶ್ಚ ಸುಪುಷ್ಟಿತೈಃ ॥
ಮೂಲಮ್ - 24
ಮಾಲತೀಕುಂದಗುಲ್ಮೈಶ್ಚ ಭಾಂಡೀರೈರ್ನಿಚುಲೈಸ್ತಥಾ ।
ಅಶೋಕೈಃ ಸಪ್ತಪರ್ಣೈಶ್ಚ ಕತಕೈರತಿಮುಕ್ತಕೈಃ ॥
ಮೂಲಮ್ - 25½
ಅನ್ಯೈಶ್ಚ ವಿವಿಧೈರ್ವೃಕ್ಷೈಃ ಪ್ರಮದಾಮಿವ ಭೂಷಿತಾಮ್ ।
ಅಸ್ಯಾಸ್ತೀರೋ ತು ಪೂರ್ವೋಕ್ತಃ ಪರ್ವತೋ ಧಾತುಮಂಡಿತಃ ॥
ಋಷ್ಯಮೂಕ ಇತಿ ಖ್ಯಾತಶ್ಚಿತ್ರಪುಷ್ಟಿತಪಾದಪಃ ।
ಅನುವಾದ
ತಿಲಕ ವೃಕ್ಷಗಳಿಂದಲೂ, ಸೀಬೆಗಿಡಗಳಿಂದಲೂ, ವಟವೃಕ್ಷಗಳಿಂದಲೂ, ಶ್ವೇತವೃಕ್ಷಗಳಿಂದಲೂ, ಪುಷ್ಟಿತವಾದ ಮತ್ತಿಮರ ಗಳಿಂದಲೂ, ಸುರಗೀ ಮರಗಳಿಂದಲೂ, ಮಾಲತೀ ಕುಂದವೃಕ್ಷಗಳ ಪೊದೆಗಳಿಂದಲೂ, ನೀರು ಹಲಸಿನ ಮರಗಳಿಂದಲೂ, ಅಶೋಕ ವೃಕ್ಷಗಳಿಂದಲೂ, ಏಳೆಲೆ ಬಾಳೆಯ ಗಿಡಗಳಿಂದಲೂ, ಕೃತಕ ಗಿಡಗಳಿಂದಲೂ, ತಾಳೆ ಮರಗಳಿಂದಲೂ ಇನ್ನೂ ಆನೇಕವಾದ ವೃಕ್ಷ ವಿಶೇಷಗಳಿಂದಲೂ ಸುಶೋಭಿತವಾದ ಪಂಪಾಸರೋವರವು ಬಗೆ-ಬಗೆಯ ವಸ್ತ್ರಾಭೂಷಣಗಳಿಂದ ಅಲಂಕೃತವಾದ ಪ್ರಮದೆಯಂತೆ ಕಂಡು ಬರುತ್ತಿತ್ತು. ಅದರ ತೀರದಲ್ಲೇ ವಿವಿಧ ಪ್ರಾಣಿಗಳಿಂದ ತುಂಬಿ ಋಷ್ಯಮೂಕ ಎಂಬ ಪರ್ವತವು ಸುಶೋಭಿತವಾಗಿತ್ತು. ಅದರ ಮೇಲೆ ಹೂವುಗಳಿಂದ ತುಂಬಿದ ವಿಚಿತ್ರ ವೃಕ್ಷಗಳು ಶೋಭಿಸುತ್ತಿದ್ದವು.॥23-25॥
ಮೂಲಮ್ - 26½
ಹರಿರ್ಋಕ್ಷರಜೋನಾಮ್ನಃ ಪುತ್ರಸ್ತಸ್ಯ ಮಹಾತ್ಮನಃ ॥
ಅಧ್ಯಾಸ್ತೇ ತು ಮಹಾವೀರ್ಯ ಸುಗ್ರೀವ ಇತಿ ವಿಶ್ರುತಃ ।
ಅನುವಾದ
ಋಕ್ಷರಾಜ ಎಂಬ ಮಹಾತ್ಮಾ ವಾನರನ ಪುತ್ರ ಕಪಿಶ್ರೇಷ್ಠ ಮಹಾಪರಾಕ್ರಮಿ ಸುಗ್ರೀವನು ಅಲ್ಲಿ ವಾಸಿಸುತ್ತಿದ್ದನು.॥26½॥
ಮೂಲಮ್ - 27
ಸುಗ್ರೀವಮಭಿಗಚ್ಛ ತ್ವಂ ವಾನರೇಂದ್ರ ನರರ್ಷಭ ॥
ಮೂಲಮ್ - 28
ಇತ್ಯುವಾಚ ಪುನರ್ವಾಕ್ಯಂ ಲಕ್ಷ್ಮಣಂ ಸತ್ಯವಿಕ್ರಮಃ ।
ಕಥಂ ಮಯಾ ವಿನಾ ಸೀತಾಂ ಶಕ್ಯಂ ಲಕ್ಷ್ಮಣ ಜೀವಿತುಮ್ ॥
ಅನುವಾದ
ಆಗ ಸತ್ಯ ಪರಾಕ್ರಮಿ ಶ್ರೀರಾಮನು ಪುನಃ ಲಕ್ಷ್ಮಣನಲ್ಲಿ ಹೇಳಿದನು - ನರಶ್ರೇಷ್ಠ ಲಕ್ಷ್ಮಣನೇ! ನೀನು ವಾನರರಾಜ ಸುಗ್ರೀವನ ಬಳಿಗೆ ಹೋಗು, ನಾನು ಸೀತೆಯಿಲ್ಲದೆ ಹೇಗೆ ಬದುಕಿರಲಿ.॥27-28॥
ಮೂಲಮ್ - 29
ಇತ್ಯೇವಮುಕ್ತ್ವಾ ಮದನಾಭಿಪೀಡಿತಃ
ಸ ಲಕ್ಷ್ಮಣಂ ವಾಕ್ಯಮನನ್ಯಚೇತನಃ ।
ವಿವೇಶ ಪಂಪಾಂ ನಲಿನೀಂ ಮನೋರಮಾಂ
ತಮುತ್ತಮಂ ಶೋಕಮುದೀರಯಾಣಃ ॥
ಅನುವಾದ
ಹೀಗೆ ಹೇಳಿ ಸೀತೆಯನ್ನು ಕಾಣುವ ಕಾಮನೆಯಿಂದ ಪೀಡಿತ ಹಾಗೂ ಆಕೆಯ ಕುರಿತು ಅನನ್ಯ ಅನುರಾಗವುಳ್ಳ ಶ್ರೀರಾಮನು ಮಹಾಶೋಕವನ್ನು ಪ್ರಕಟಿಸುತ್ತಾ ಆ ಮನೋರಮ ಪುಷ್ಕರಿಣಿ ಪಂಪೆಯಲ್ಲಿ ಇಳಿದನು.॥29॥
ಮೂಲಮ್ - 30
ಕ್ರಮೇಣ ಗತ್ವಾ ಪ್ರವಿಲೋಕಯನ್ವನಂ
ದದರ್ಶ ಪಂಪಾಂ ಶುಭದರ್ಶಕಾನನಾಮ್ ।
ಅನೇಕ ನಾನಾವಿಧಪಕ್ಷಿಸಂಕುಲಾಂ
ವಿವೇಶ ರಾಮಃ ಸಹ ಲಕ್ಷ್ಮಣೇನ ॥
ಅನುವಾದ
ವನದ ಶೋಭೆಯನ್ನು ನೋಡುತ್ತಾ ಅಲ್ಲಿಗೆ ಹೋಗಿ ಲಕ್ಷ್ಮಣ ಸಹಿತ ಶ್ರೀರಾಮನು ಪಂಪಾಸರೋವರವನ್ನು ನೋಡಿದನು. ಅದರ ದಡದ ಸುತ್ತಲೂ ಇರುವ ಕಾನನವು ಬಹಳ ಸುಂದರ, ದರ್ಶನಿಯಾಗಿತ್ತು. ಅನೇಕ ಪ್ರಕಾರದ ಗುಂಪು - ಗುಂಪಾದ ಪಕ್ಷಿಗಳು ಅಲ್ಲಿ ಎಲ್ಲ ಕಡೆ ತುಂಬಿಕೊಂಡಿದ್ದವು. ತಮ್ಮನೊಡನೆ ಶ್ರೀರಘುನಾಥನು ಪಂಪಾಸರೋವರದ ನೀರಿನಲ್ಲಿ ಪ್ರವೇಶಿಸಿದನು.॥30॥
ಮೂಲಮ್ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎಪ್ಪತ್ತೈದನೆಯ ಸರ್ಗ ಸಂಪೂರ್ಣವಾಯಿತು. ॥75॥
ಅರಣ್ಯಕಾಂಡವು ಸಂಪೂರ್ಣವಾಯಿತು.