०७४ शबरीकथा

वाचनम्
ಭಾಗಸೂಚನಾ

ಮತಂಗವನದಲ್ಲಿದ್ದ ಶಬರಿಯ ಆಶ್ರಮಕ್ಕೆ ಶ್ರೀರಾಮ-ಲಕ್ಷ್ಮಣರು ಹೋದುದು, ಶಬರಿಯಿಂದ ಸತ್ಕಾರ, ಮತಂಗವನ ದರ್ಶನ, ಶಬರಿಯು ತನ್ನ ಶರೀರವನ್ನು ಅಗ್ನಿಗೆ ಅರ್ಪಿಸಿ ದಿವ್ಯಧಾಮಕ್ಕೆ ತೆರಳಿದುದು

ಮೂಲಮ್ - 1

ತೌ ಕಬಂಧೇನ ತಂ ಮಾರ್ಗಂ ಪಂಪಾಯಾ ದರ್ಶಿತಂ ವನೇ ।
ಪ್ರತಸ್ಥತುರ್ದಿಶಂ ಗೃಹ್ಯ ಪ್ರತೀಚೀಂ ನೃವರಾತ್ಮಜೌ ॥

ಅನುವಾದ

ಅನಂತರ ರಾಜಕುಮಾರ ಶ್ರೀರಾಮ-ಲಕ್ಷ್ಮಣರು ಕಬಂಧನು ತಿಳಿಸಿದ ಪಂಪಾ ಸರೋವರದ ಮಾರ್ಗವನ್ನು ಹಿಡಿದು ಪಶ್ಚಿಮದ ದಿಕ್ಕಿನೆಡೆಗೆ ಹೊರಟರು.॥1॥

ಮೂಲಮ್ - 2

ತೌ ಶೈಲೇಷ್ವಾಚಿತಾನೇಕಾನ್ ಕ್ಷೌದ್ರಪುಷ್ಪಫಲದ್ರುಮಾನ್ ।
ವೀಕ್ಷಂತೌ ಜಗ್ಮತುರ್ದ್ರಷ್ಟುಂ ಸುಗ್ರೀವಂ ರಾಮಲಕ್ಷ್ಮಣೌ ॥

ಅನುವಾದ

ಶ್ರೀರಾಮ-ಲಕ್ಷ್ಮಣ ಸೋದರರಿಬ್ಬರೂ ಪರ್ವತಗಳ ಮೇಲೆ ಇರುವ ಫಲ-ಪುಷ್ಪ, ಜೇನಿನಿಂದ ಸಂಪನ್ನವಾದ ವೃಕ್ಷಗಳನ್ನು ನೋಡುತ್ತಾ ಸುಗ್ರೀವನನ್ನು ಸಂಧಿಸಲು ಮುಂದುವರಿದರು.॥2॥

ಮೂಲಮ್ - 3

ಕೃತ್ವಾ ತು ಶೈಲಪೃಷ್ಠೇ ತು ತೌ ವಾಸಂ ರಘುನಂದನೌ ।
ಪಂಪಾಯಾಃ ಪಶ್ಚಿಮಂ ತೀರಂ ರಾಘವಾವುಪತಸ್ಥತುಃ ॥

ಅನುವಾದ

ರಾತ್ರೆಯಲ್ಲಿ ಒಂದು ಪರ್ವತ ಶಿಖರದಲ್ಲಿ ತಂಗಿದ್ದು ರಘುಕುಲದ ಆನಂದವನ್ನು ಹೆಚ್ಚಿಸುವ ಆ ಇಬ್ಬರೂ ರಘುವಂಶೀ ಸೋದರರು ಪಂಪಾ ಸರೋವರದ ಪಶ್ಚಿಮ ತೀರಕ್ಕೆ ತಲುಪಿದರು.॥3॥

ಮೂಲಮ್ - 4

ತೌ ಪುಷ್ಕರಿಣ್ಯಾಃ ಪಂಪಾಯಾಸ್ತೀರಮಾಸಾದ್ಯ ಪಶ್ಚಿಮಮ್ ।
ಅಪಶ್ಯತಾಂ ತತಸ್ತತ್ರ ಶಬರ್ಯಾ ರಮ್ಯಮಾಶ್ರಮಮ್ ॥

ಅನುವಾದ

ಪಂಪಾ ಪುಷ್ಕರಿಣಿಯ ಪಶ್ಚಿಮ ತೀರಕ್ಕೆ ಹೋಗಿ ಅವರಿಬ್ಬರೂ ಸೋದರರು ಅಲ್ಲಿ ಶಬರಿಯ ಆಶ್ರಮವನ್ನು ನೋಡಿದರು.॥4॥

ಮೂಲಮ್ - 5

ತೌ ತಮಾಶ್ರಮಮಾಸಾದ್ಯ ದ್ರುಮೈರ್ಬಹುಭಿರಾವೃತಮ್ ।
ಸುರಮ್ಯಮಭಿವೀಕ್ಷಂತೌ ಶಬರೀಮಭ್ಯುಪೇಯತುಃ ॥

ಅನುವಾದ

ಅದರ ಶೋಭೆಯನ್ನು ನಿರೀಕ್ಷಿಸುತ್ತಾ ಆ ಇಬ್ಬರೂ ಸೋದರರು ಅನೇಕ ರೀತಿಯ ವೃಕ್ಷಗಳಿಂದ ಸುತ್ತುವರಿದ ಆ ಸುರಮ್ಯ ಆಶ್ರಮಕ್ಕೆ ಹೋಗಿ ಶಬರಿಯನ್ನು ಸಂದರ್ಶಿಸಿದರು.॥5॥

ಮೂಲಮ್ - 6

ತೌ ದೃಷ್ಟ್ವಾ ತು ತದಾ ಸಿದ್ಧಾ ಸಮುತ್ಥಾಯ ಕೃತಾಂಜಲಿಃ ।
ಪಾದೌ ಜಗ್ರಾಹ ರಾಮಸ್ಯ ಲಕ್ಷ್ಮಣಸ್ಯ ಚ ಧೀಮತಃ ॥

ಅನುವಾದ

ಶಬರಿಯು ಸಿದ್ಧ ತಪಸ್ವಿನಿಯಾಗಿದ್ದಳು. ಆ ಇಬ್ಬರು ಸೋದರರು ಆಶ್ರಮಕ್ಕೆ ಬಂದಿರುವುದನ್ನು ನೋಡಿ ಅವಳು ಕೈಮುಗಿದುಕೊಂಡು ನಿಂತುಕೊಂಡಳು. ಮತ್ತು ಶ್ರೀರಾಮ-ಲಕ್ಷ್ಮಣರ ಚರಣಗಳಿಗೆ ನಮಸ್ಕರಿಸಿದಳು.॥6॥

ಮೂಲಮ್ - 7

ಪಾದ್ಯಮಾಚಮನೀಯಂ ಚ ಸರ್ವಂ ಪ್ರಾದಾದ್ಯಥಾವಿಧಿ ।
ತಾಮುವಾಚ ತತೋ ರಾಮಃ ಶ್ರಮಣೀಂ ಶಂಸಿತವ್ರತಾಮ್ ॥

ಅನುವಾದ

ಮತ್ತೆ ಪಾದ್ಯ, ಅರ್ಘ್ಯ, ಆಚಮನಾದಿ ಎಲ್ಲ ಸಾಮಗ್ರಿಗಳನ್ನು ಸಮರ್ಪಿಸಿ ವಿಧಿವತ್ತಾಗಿ ಅವರನ್ನು ಸತ್ಕರಿಸಿದಳು. ಅನಂತರ ಶ್ರೀರಾಮಚಂದ್ರನು ಆ ಧರ್ಮಾತ್ಮಳಾದ ತಪಸ್ವಿನಿಯ ಬಳಿಯಲ್ಲಿ ಇಂತೆಂದನು.॥7॥

ಮೂಲಮ್ - 8

ಕಚ್ಚಿತ್ತೇ ನಿರ್ಜಿತಾ ವಿಘ್ನಾಃ ಕಚ್ಚಿತ್ತೇ ವರ್ಧತೇ ತಪಃ ।
ಕಚ್ಚಿತ್ತೇ ನಿಯತಃ ಕೋಪ ಆಹಾರಶ್ಚ ತಪೋಧನೇ ॥

ಅನುವಾದ

ತಪೋಧನಳೇ! ನೀನು ನಿನ್ನ ಎಲ್ಲ ವಿಘ್ನಗಳನ್ನು ಜಯಿಸಿರುವೆಯಾ? ನಿನ್ನ ತಪಸ್ಸು ಬೆಳೆಯುತ್ತಿದೆಯಲ್ಲ? ನೀನು ಕ್ರೋಧ ಮತ್ತು ಆಹಾರವನ್ನು ಹತೋಟಿಯಲ್ಲಿರಿಸಿ ಕೊಂಡಿರುವೆಯಲ್ಲ.॥8॥

ಮೂಲಮ್ - 9

ಕಚ್ಚಿತ್ತೇ ನಿಯಮಾಃ ಪ್ರಾಪ್ತಾಃ ಕಚ್ಚಿತ್ತೇ ಮನಸಃ ಸುಖಮ್ ।
ಕಚ್ಚಿತ್ತೇ ಗುರುಶುಶ್ರೂಷಾ ಸಫಲಾ ಚಾರುಭಾಷಿಣಿ ॥

ಅನುವಾದ

ನೀನು ಸ್ವೀಕರಿಸಿದ ನಿಯಮಗಳನ್ನು ನಿಭಾಯಿಸುತ್ತಿರುವೆಯಲ್ಲ? ನಿನ್ನ ಮನಸ್ಸಿನಲ್ಲಿ ಸುಖ-ಶಾಂತಿ ನೆಲೆಸಿದೆ ತಾನೆ? ಚಾರುಭಾಷಿಣಿ! ನೀನು ಮಾಡಿದ ಗುರುಗಳ ಸೇವೆ ಪೂರ್ಣವಾಗಿ ಸಫಲವಾಗಿದೆ ತಾನೆ.॥9॥

ಮೂಲಮ್ - 10

ರಾಮೇಣ ತಾಪಸೀ ಪೃಷ್ಟಾ ಸಾ ಸಿದ್ಧಾ ಸಿದ್ಧಸಮ್ಮತಾ ।
ಶಶಂಸ ಶಬರೀ ವೃದ್ಧಾ ರಾಮಾಯ ಪ್ರತ್ಯುಪಸ್ಥಿತಾ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಕೇಳಿದಾಗ ಸಿದ್ದರಿಂದ ಸವ್ಮಾನಿತಳಾದ ಆ ಸಿದ್ದ, ವೃದ್ಧೆ ತಪಸ್ವಿನಿ ಶಬರಿಯು ಅವರ ಮುಂದೆ ನಿಂತುಕೊಂಡು ಹೇಳಿದಳು.॥10॥

ಮೂಲಮ್ - 11

ಅದ್ಯ ಪ್ರಾಪ್ತಾ ತಪಃಸಿದ್ಧಿಸ್ತವ ಸಂದರ್ಶನಾನ್ಮಯಾ ।
ಅದ್ಯ ಮೇ ಸಫಲಂ ಜನ್ಮ ಗುರವಶ್ಚ ಸುಪೂಜಿತಾಃ ॥

ಅನುವಾದ

ರಘುನಂದನ! ಇಂದು ನಿನ್ನ ದರ್ಶನದಿಂದಲೇ ನನಗೆ ನನ್ನ ತಪಸ್ಸಿನಲ್ಲಿ ಸಿದ್ಧಿ ಪ್ರಾಪ್ತವಾಯಿತು. ಇಂದು ನನ್ನ ಜನ್ಮ ಸಫಲವಾಗಿ, ಗುರುಗಳ ಉತ್ತಮ ಪೂಜೆಯೂ ಸಾರ್ಥಕವಾಯಿತು.॥11॥

ಮೂಲಮ್ - 12

ಅದ್ಯ ಮೇ ಸಫಲಂ ತಪ್ತಂ ಸ್ವರ್ಗಶ್ಚೈವ ಭವಿಷ್ಯತಿ ।
ತ್ವಯಿ ದೇವವರೇ ರಾಮ ಪೂಜಿತೇ ಪುರುಷರ್ಷಭ ॥

ಅನುವಾದ

ಪುರುಷ ಶ್ರೇಷ್ಠ ಶ್ರೀರಾಮಾ! ದೇವೇಶ್ವರನಾದ ನಿನ್ನ ಸತ್ಕಾರ ಇಲ್ಲಿ ಆಯಿತು, ಆದ್ದರಿಂದ ನನ್ನ ತಪಸ್ಸು ಸಫಲವಾಯಿತು. ಇನ್ನು ನನಗೆ ನಿನ್ನ ದಿವ್ಯಧಾಮದ ಪ್ರಾಪ್ತಿಯೂ ಆಗಬಹುದು.॥12॥

ಮೂಲಮ್ - 13

ಚಕ್ಷುಷಾ ತವಾಹಂ ಸೌಮ್ಯ ಪೂತಾಸೌಮ್ಯೇನ ಮಾನದ ।
ಗಮಿಷ್ಯಾಮ್ಯಕ್ಷಯಾಲ್ಲೋಕಾಂಸ್ತ್ವತ್ಪ್ರಸಾದಾದರಿಂದಮ ॥

ಅನುವಾದ

ವಾನದ! ಸೌಮ್ಯ! ನಿನ್ನ ಸೌಮ್ಯ ದೃಷ್ಟಿ ಬಿದ್ದಿದ್ದರಿಂದ ನಾನು ಪರಮಪವಿತ್ರಳಾದೆನು. ಶತ್ರುಸೂದನ! ನಿನ್ನ ಪ್ರಸಾದದಿಂದಲೇ ಈಗ ನಾನು ಅಕ್ಷಯ ಲೋಕಕ್ಕೆ ಹೋಗುವೆನು.॥13॥

ಮೂಲಮ್ - 14

ಚಿತ್ರಕೂಟಂ ತ್ವಯಿ ಪ್ರಾಪ್ತೇ ವಿಮಾನೈರತುಲಪ್ರಭೈಃ ।
ಇತಸ್ತೇ ದಿವಮಾರೂಢಾ ಯಾನಹಂ ಪರ್ಯಚಾರಿಷಮ್ ॥

ಅನುವಾದ

ನೀನು ಚಿತ್ರಕೂಟಕ್ಕೆ ಆಗಮಿಸಿದಾಗ ನಾನು ಸದಾ ಸೇವಿಸುತ್ತಿದ್ದ ನನ್ನ ಗುರುಗಳು ಅತುಲ ಕಾಂತಿಯುಕ್ತ ವಿಮಾನದಲ್ಲಿ ಕುಳಿತು ಇಲ್ಲಿಂದ ದಿವ್ಯಲೋಕಕ್ಕೆ ತೆರಳಿದರು.॥14॥

ಮೂಲಮ್ - 15

ತೈಶ್ಚಾಹಮುಕ್ತಾ ಧರ್ಮಜ್ಞೈರ್ಮಹಾಭಾಗೈರ್ಮಹರ್ಷಿಭಿಃ ।
ಆಗಮಿಷ್ಯತಿ ತೇ ರಾಮಃ ಸುಪುಣ್ಯಮಿಮಮಾಶ್ರಮಮ್ ॥

ಮೂಲಮ್ - 16

ಸ ತೇ ಪ್ರತಿಗ್ರಹೀತವ್ಯಃ ಸೌಮಿತ್ರಿಸಹಿತೋಽತಿಥಿಃ ।
ತಂ ಚ ದೃಷ್ಟ್ವಾ ವರಾನ್ಲ್ಲೋಕಾನಕ್ಷಯಾಂಸ್ತ್ವಂ ಗಮಿಷ್ಯಸಿ ॥

ಅನುವಾದ

ಆ ಧರ್ಮಜ್ಞ ಮಹಾಭಾಗ ಮಹರ್ಷಿಗಳು ಹೋಗುವಾಗ ನನ್ನಲ್ಲಿ ‘ನಿನ್ನ ಈ ಪವಿತ್ರ ಆಶ್ರಮಕ್ಕೆ ಶ್ರೀರಾಮನು ಲಕ್ಷ್ಮಣನೊಂದಿಗೆ ಆಗಮಿಸುವನು ನೀನು ಅವರನ್ನು ಯಥಾವತ್ ಸತ್ಕರಿಸು. ಅವರನ್ನು ದರ್ಶಿಸಿದ ಮೇಲೆ ನೀನು ಶ್ರೇಷ್ಠ ಹಾಗೂ ಅಕ್ಷಯ ಲೋಕಗಳಿಗೆ ಹೋಗುವೆ’ ಎಂದು ಹೇಳಿದ್ದರು.॥15-16॥

ಮೂಲಮ್ - 17½

ಏವಮುಕ್ತಾ ಮಹಾಭಾಗೈಸ್ತದಾಹಂ ಪುರುಷರ್ಷಭ ।
ಮಯಾ ತು ಸಂಚಿತಂ ವನ್ಯಂ ವಿವಿಧಂ ಪುರುಷರ್ಷಭ ॥
ತವಾರ್ಥೇ ಪುರುಷವ್ಯಾಘ್ರ ಪಂಪಾಯಾಸ್ತೀರಸಂಭವಮ್ ।

ಅನುವಾದ

ಪುರುಷ ಪ್ರವರನೇ! ಆ ಮಹಾಭಾಗ ಮಹಾತ್ಮರು ನನ್ನಲ್ಲಿ ಆಗ ಹೀಗೆ ಹೇಳಿದ್ದರು. ಆದ್ದರಿಂದ ಪುರುಷಸಿಂಹನೇ! ನಾನು ನಿನಗಾಗಿ ಪಂಪಾತೀರದಲ್ಲಿ ಬೆಳೆದ ನಾನಾ ಪ್ರಕಾರದ ಕಾಡಿನ ಫಲ-ಮೂಲಗಳನ್ನು ಸಂಗ್ರಹಿಸಿಟ್ಟಿರುವೆನು.॥17½॥

ಮೂಲಮ್ - 18½

ಏವಮುಕ್ತಃ ಸ ಧರ್ಮಾತ್ಮಾ ಶಬರ್ಯಾ ಶಬರೀಮಿದಮ್ ॥
ರಾಘವಃ ಪ್ರಾಹ ವಿಜ್ಞಾನೇ ತಾಂ ನಿತ್ಯಮಬಹಿಷ್ಕೃತಾಮ್ ।

ಅನುವಾದ

ಜಾತಿವರ್ಣದಿಂದ ಬಾಹ್ಯಳಾಗಿದ್ದರೂ ಶಬರಿಯು ವಿಜ್ಞಾನದಲ್ಲಿ ಬಹಿಷ್ಕೃತಳಾಗಿರಲಿಲ್ಲ. ಆಕೆಗೆ ಪರಮಾತ್ಮನ ತತ್ವದ ನಿತ್ಯ ಜ್ಞಾನ ಪ್ರಾಪ್ತವಾಗಿತ್ತು. ಹಿಂದಿನ ಆಕೆಯ ಮಾತು ಕೇಳಿ ಧರ್ಮಾತ್ಮಾ ಶ್ರೀರಾಮನು ಆಕೆಯಲ್ಲಿ ಹೇಳಿದನು-॥18½॥

ಮೂಲಮ್ - 19½

ದನೋಃ ಸಕಾಶಾತ್ತತ್ತ್ವೇನ ಪ್ರಭಾವಂ ತೇ ಮಹಾತ್ಮನಾಮ್ ॥
ಶ್ರುತಂ ಪ್ರತ್ಯಕ್ಷಮಿಚ್ಛಾಮಿ ಸಂದ್ರಷ್ಟುಂ ಯದಿ ಮನ್ಯಸೇ ।

ಅನುವಾದ

ತಪೋಧನೇ! ನಾನು ಕಬಂಧನಿಂದ ನಿನ್ನ ಮಹಾತ್ಮಾ ಗುರುಗಳ ಯಥಾರ್ಥ ಪ್ರಭಾವವನ್ನು ಕೇಳಿರುವೆ. ನೀನು ಒಪ್ಪುವುದಾದರೆ ನಾನು ಅವರ ಆ ಪ್ರಭಾವವನ್ನು ಪ್ರತ್ಯಕ್ಷ ನೋಡಲು ಬಯಸುತ್ತಿರುವೆನು.॥19½॥

ಮೂಲಮ್ - 20½

ಏತತ್ತು ವಚನಂ ಶ್ರುತ್ವಾ ರಾಮವಕ್ತ್ರಾದ್ವಿನಿಃಸೃತಮ್ ॥
ಶಬರೀ ದರ್ಶಯಾಮಾಸ ತಾವುಭೌ ತದ್ವನಂ ಮಹತ್ ।

ಅನುವಾದ

ಶ್ರೀರಾಮನು ನುಡಿದ ಮಾತನ್ನು ಕೇಳಿ ಶಬರಿಯು ಅವರಿಬ್ಬರೂ ಸಹೋದರರಿಗೆ ಆ ಮಹಾ ವನವನ್ನು ತೋರಿಸುತ್ತಾ ಹೇಳಿದಳು.॥20½॥

ಮೂಲಮ್ - 21½

ಪಶ್ಯ ಮೇಘಘನಪ್ರಖ್ಯಂ ಮೃಗಪಕ್ಷಿಸಮಾಕುಲಮ್ ॥
ಮತಂಗವನಮಿತ್ಯೇವ ವಿಶ್ರುತಂ ರಘುನಂದನ ।

ಅನುವಾದ

ರಘುನಂದನ! ದಟ್ಟವಾದ ಮೋಡಗಳಂತೆ ಶ್ಯಾಮಲ ಮತ್ತು ನಾನಾ ಪ್ರಕಾರದ ಪಶು-ಪಕ್ಷಿಗಳಿಂದ ತುಂಬಿರುವ ಈ ವನದ ಕಡೆಗೆ ದೃಷ್ಟಿ ಬೀರು. ಇದು ಮತಂಗವನ ಎಂದು ವಿಖ್ಯಾತವಾಗಿದೆ.॥21½॥

ಮೂಲಮ್ - 22

ಇಹ ತೇ ಭಾವಿತಾತ್ಮಾನೋ ಗುರವೋ ಮೇ ಮಹಾದ್ಯುತೇ ।
ಜುಹವಾಂಚಕ್ರಿರೇ ನೀಡಂ ಮಂತ್ರವನ್ ಮಂತ್ರಪೂಜಿತಮ್ ॥

ಅನುವಾದ

ಮಹಾತೇಜಸ್ವೀ ರಾಮಾ! ಇಲ್ಲೆ ನನ್ನ ಭಾವಿತಾತ್ಮಾ (ಶುದ್ಧ ಅಂತಃಕರಣವುಳ್ಳ ಪರಮಾತ್ಮ ಚಿಂತನ ಪರಾಯಣ) ಗುರುಗಳು ವಾಸಿಸುತ್ತಿದ್ದರು. ಇದೇ ಸ್ಥಾನದಲ್ಲಿ ಅವರು ಗಾಯತ್ರಿ ಮಂತ್ರದ ಜಪದಿಂದ ವಿಶುದ್ಧವಾದ ತನ್ನ ದೇಹರೂಪೀ ಗೂಡನ್ನು ಮಂತ್ರೋಚ್ಛಾರಪೂರ್ವಕ ಅಗ್ನಿಯಲ್ಲಿ ಹೋಮಮಾಡಿದರು.॥22॥

ಮೂಲಮ್ - 23

ಇಯಂ ಪ್ರತ್ಯಕ್ಸ್ಥಲೀ ವೇದೀ ಯತ್ರ ತೇ ಮೇ ಸುಸತ್ಕೃತಾಃ ।
ಪುಷ್ಪೋಪಹಾರಂ ಕುರ್ವಂತೀ ಶ್ರಮಾದುದ್ವೇಪಿಭಿಃ ಕರೈಃ ॥

ಅನುವಾದ

ಇದು ಪ್ರತ್ಯಕ್ ಸ್ಥಳೀ ಎಂಬ ವೇದಿಯಾಗಿದೆ, ಇಲ್ಲಿ ನನ್ನಿಂದ ಪೂಜಿತರಾದ ಆ ಮಹರ್ಷಿಗಳು ವೃದ್ಧಾಪ್ಯದ ಶ್ರಮದಿಂದ ನಡುಗುವ ಕೈಗಳಿಂದ ದೇವತೆಗಳ ಪೂಜೆ ಮಾಡುತ್ತಿದ್ದರು.॥23॥

ಮೂಲಮ್ - 24

ತೇಷಾಂ ತಪಃಪ್ರಭಾವೇಣ ಪಶ್ಯಾದ್ಯಾಪಿ ರಘೂತ್ತಮ ।
ದ್ಯೋತಯಂತಿ ದಿಶಃ ಸರ್ವಾಃ ಶ್ರಿಯಾ ವೇದ್ಯತುಲಪ್ರಭಾ ॥

ಅನುವಾದ

ರಘುವಂಶ ಶಿರೋಮಣಿಯೇ! ನೋಡು ಅವರ ತಪಸ್ಸಿನ ಪ್ರಭಾವದಿಂದ ಇಂದೂ ಕೂಡ ಈ ವೇದಿಯು ತನ್ನ ತೇಜದಿಂದ ಸಮಸ್ತ ದಿಕ್ಕುಗಳನ್ನು ಪ್ರಕಾಶಿಸುತ್ತಿದೆ. ಈಗಲೂ ಅದರ ಪ್ರಭೆ ಅತುಲನೀಯವಾಗಿದೆ.॥24॥

ಮೂಲಮ್ - 25

ಅಶಕ್ನುವದ್ ಭಿಸ್ತೈರ್ಗಂತುಮುಪವಾಸಶ್ರಮಾಲಸೈಃ ।
ಚಿಂತಿತೇನಾಗತಾನ್ಪಶ್ಯ ಸಮೇತಾನ್ ಸಪ್ತ ಸಾಗರಾನ್ ॥

ಅನುವಾದ

ಉಪವಾಸದಿಂದ ದುರ್ಬಲರಾಗಿ ಅವರು ನಡೆದಾಡಲು ಅಸಮರ್ಥರಾದಾಗ ಅವರ ಚಿಂತನ ಮಾತ್ರದಿಂದಲೇ ಅಲ್ಲಿ ಏಳು ಸಮುದ್ರಗಳ ಜಲ ಪ್ರಕಟವಾಯಿತು ಆ ಸಪ್ತಸಾಗರ ತೀರ್ಥವೂ ಇಂದೂ ಇಲ್ಲೇ ಇದೆ. ಅದರಲ್ಲಿ ಏಳು ಸಮುದ್ರಗಳ ನೀರು ಸೇರಿದೆ. ಅದನ್ನು ನೋಡಿರಿ.॥25॥

ಮೂಲಮ್ - 26

ಕೃತಾಭಿಷೇಕೈಸ್ತೈರ್ನ್ಯಸ್ತಾ ವಲ್ಕಲಾಃ ಪಾದಪೇಷ್ವಿಹ ।
ಅದ್ಯಾಪಿ ನವಿಶುಷ್ಯಂತಿ ಪ್ರದೇಶೇ ರಘುನಂದನ ॥

ಅನುವಾದ

ರಘುನಂದನ! ಅವರಲ್ಲಿ ಸ್ನಾನಮಾಡಿ ಅವರು ಮರಗಳಲ್ಲಿ ವಲ್ಕಲಗಳು ಆರಲು ಒಣಹಾಕಿದ್ದರು; ಅವು ಈ ಪ್ರದೇಶದಲ್ಲಿ ಇನ್ನೂ ಒಣಗಲೇ ಇಲ್ಲ.॥26॥

ಮೂಲಮ್ - 27

ದೇವಕಾರ್ಯಾಣಿ ಕುರ್ವದ್ಭಿರ್ಯಾನೀಮಾನಿ ಕೃತಾನಿ ವೈ ।
ಪುಷ್ಪೈಃ ಕುವಲಯೈಃ ಸಾರ್ಧಂ ಮ್ಲಾನತ್ವಂ ನ ತು ಯಾಂತಿವೈ ॥

ಅನುವಾದ

ದೇವತೆಗಳ ಪೂಜೆ ಮಾಡುವಾಗ ನನ್ನ ಗುರುಗಳು ಕಮಲಗಳ ಜೊತೆಗೆ ಇತರ ಹೂವುಗಳಿಂದ ಮಾಡಿದ ಮಾಲೆಗಳು ಇಂದೂ ಬಾಡಲಿಲ್ಲ.॥27॥

ಮೂಲಮ್ - 28

ಕೃತ್ಸ್ನಂ ವನಮಿದಂ ದೃಷ್ಟಂ ಶ್ರೋತವ್ಯಂ ಚ ಶ್ರುತಂ ತ್ವಯಾ ।
ತದಿಚ್ಛಾಮ್ಯಭ್ಯನುಜ್ಞಾತಾ ತ್ಯಕ್ಷ್ಯಾಮ್ಯೇತತ್ಕಲೇವರಮ್ ॥

ಅನುವಾದ

ಭಗವಂತ! ನೀನು ಎಲ್ಲ ವನವನ್ನು ನೋಡಿಬಿಟ್ಟೆ ಮತ್ತು ಇಲ್ಲಿಗೆ ಸಂಬಂಧಿಸಿದ ಕೇಳಲು ಯೋಗ್ಯವಾದ ಮಾತುಗಳನ್ನು ಕೇಳಿದೆ. ಈಗ ನಿನ್ನ ಅಪ್ಪಣೆ ಪಡೆದು ಈ ದೇಹವನ್ನು ತ್ಯಾಗ ಮಾಡಲು ಬಯಸುತ್ತಿರುವೆನು.॥28॥

ಮೂಲಮ್ - 29

ತೇಷಾಮಿಚ್ಛಾಮ್ಯಹಂ ಗಂತುಂ ಸಮೀಪಂ ಭಾವಿತಾತ್ಮನಾಮ್ ।
ಮುನೀನಾಮಾಶ್ರಮೋ ಯೇಷಾಮಹಂ ಚ ಪರಿಚಾರಿಣೀ ॥

ಅನುವಾದ

ಈ ಆಶ್ರಮ ಯಾರದಾಗಿದೆಯೋ, ಯಾರ ಚರಣಗಳ ನಾನು ದಾಸಿಯಾಗಿದ್ದೇನೋ, ಆ ಪವಿತ್ರಾತ್ಮ ಮಹರ್ಷಿಗಳ ಬಳಿಗೆ ಈಗ ನಾನು ಹೋಗಲು ಬಯಸುವೆನು.॥29॥

ಮೂಲಮ್ - 30

ಧರ್ಮಿಷ್ಠಂ ತು ವಚಃ ಶ್ರುತ್ವಾ ರಾಘವಃ ಸಹಲಕ್ಷ್ಮಣಃ ।
ಪ್ರಹರ್ಷಮತುಲಂ ಲೇಭೇ ಆಶ್ಚರ್ಯಮಿತಿ ಚಾಬ್ರವೀತ್ ॥

ಅನುವಾದ

ಶಬರಿಯ ಧರ್ಮಯುಕ್ತ ಮಾತನ್ನು ಕೇಳಿ ಲಕ್ಷ್ಮಣ ಸಹಿತ ಶ್ರೀರಾಮನಿಗೆ ಅನುಪಮ ಸಂತೋಷವಾಯಿತು. ‘ಆಶ್ಚರ್ಯ! ಆಶ್ಚರ್ಯ!’ ಎಂದು ಉದ್ಗಾಗ ಅವನ ಬಾಯಿಂದ ಹೊರಟಿತು.॥30॥

ಮೂಲಮ್ - 31

ತಾಮುವಾಚ ತತೋ ರಾಮಃ ಶಬರೀಂ ಸಂಶಿತವ್ರತಾಮ್ ।
ಅರ್ಚಿತೋಽಹಂ ತ್ವಯಾ ಭದ್ರೇಗಚ್ಛ ಕಾಮಂ ಯಥಾಸುಖಮ್ ॥

ಅನುವಾದ

ಅನಂತರ ಶ್ರೀರಾಮನು ಕಠೋರ ವ್ರತವನ್ನು ಪಾಲಿಸುವ ಶಬರಿಯಲ್ಲಿ ಹೇಳಿದನು - ಭದ್ರೆ! ನೀನು ನನಗೆ ಬಹಳ ಸತ್ಕಾರ ಮಾಡಿದೆ. ಈಗ ನೀನು ನಿನ್ನ ಇಚ್ಛೆಯಂತೆ ಆನಂದವಾಗಿ ಅಭಿಷ್ಟ ಲೋಕದ ಯಾತ್ರೆ ಮಾಡು.॥31॥

ಮೂಲಮ್ - 32

ಇತ್ಯೇಮುಕ್ತಾ ಜಟಿಲಾ ಚೀರಕೃಷ್ಣಾಜಿನಾಂಬರಾ ।
ಅನುಜ್ಞಾತಾ ತು ರಾಮೇಣ ಹುತ್ವಾಽಽತ್ಮಾನಂ ಹುತಾಶನೇ ॥

ಮೂಲಮ್ - 33

ಜ್ವಲತ್ಪಾವಕಸಂಕಾಶಾ ಸ್ವರ್ಗಮೇವ ಜಗಾಮ ಹ ।
ದಿವ್ಯಾಭರಣಸಂಯುಕ್ತಾ ದಿವ್ಯಮಾಲ್ಯಾನುಲೇಪನಾ ॥

ಮೂಲಮ್ - 34

ದಿವ್ಯಾಂಬರಧರಾ ತತ್ರ ಬಭೂವ ಪ್ರಿಯದರ್ಶನಾ ।
ವಿರಾಜಯಂತೀ ತಂ ದೇಶಂ ವಿದ್ಯುತ್ಸೌದಾಮನೀ ಯಥಾ ॥

ಅನುವಾದ

ಶ್ರೀರಾಮ ಚಂದ್ರನು ಹೀಗೆ ಅಪ್ಪಣೆ ಕೊಟ್ಟಾಗ ತಲೆಯಲ್ಲಿ ಜಟೆ, ಶರೀರದಲ್ಲಿ ನಾರುಮಡಿ ಹಾಗೂ ಕೃಷ್ಣ ಮೃಗ ಚರ್ಮವನ್ನು ಧರಿಸಿದ ಶಬರಿಯು ತನ್ನನ್ನು ಅಗ್ನಿಗೆ ಅರ್ಪಿಸಿಕೊಂಡು ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ ಶರೀರವನ್ನು ಪಡೆದುಕೊಂಡಳು. ಅವಳು ದಿವ್ಯ ವಸ್ತ್ರಾಭರಣಗಳನ್ನು, ದಿವ್ಯ ಹೂಮಾಲೆಯನ್ನು, ದಿವ್ಯ ಅನುಲೇಪನ ಧರಿಸಿ ಬಹಳ ಮನೋಹರವಾಗಿ ಕಾಣಿಸ ತೊಡಗಿದಳು. ಸುದಾಮಾ ಪರ್ವತದಲ್ಲಿ ಪ್ರಕಟವಾಗುವ ವಿದ್ಯುಲ್ಲತೆಯಂತೆ ಆ ಪ್ರದೇಶವನ್ನು ಪ್ರಕಾಶಗೋಳಿಸುತ್ತಾ ಸ್ವರ್ಗಲೋಕಕ್ಕೆ ತೆರಳಿದಳು.॥32-34॥

ಮೂಲಮ್ - 35

ಯತ್ರ ತೇ ಸುಕೃತಾತ್ಮನೋ ವಿಹರಂತಿ ಮಹರ್ಷಯಃ ।
ತತ್ ಪುಣ್ಯಂ ಶಬರೀ ಸ್ಥಾನಂ ಜಗಾಮಾತ್ಮಸಮಾಧಿನಾ ॥

ಅನುವಾದ

ಆಕೆಯು ತನ್ನ ಚಿತ್ತವನ್ನು ಏಕಾಗ್ರಗೊಳಿಸಿ ಅವಳ ಗುರುಗಳಾದ ಪುಣ್ಯಾತ್ಮ ಮಹರ್ಷಿಗಳು ವಿಹರಿಸುತ್ತಿದ್ದ ಪುಣ್ಯಧಾಮಕ್ಕೆ ಯಾತ್ರೆ ಮಾಡಿದಳು.॥35॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎಪ್ಪತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥74॥