०७३ सुग्रीवास्थानमार्गदर्शनम्

वाचनम्
ಭಾಗಸೂಚನಾ

ದಿವ್ಯರೂಪವನ್ನು ಧರಿಸಿದ ಕಬಂಧನು ಶ್ರೀರಾಮ-ಲಕ್ಷ್ಮಣರಿಗೆ ಋಷ್ಯಮೂಕ ಪರ್ವತದ ಮಾರ್ಗವನ್ನು ತೋರಿಸಿ, ಮತಂಗಮುನಿಯ ವನವನ್ನೂ ಮತ್ತು ಆಶ್ರಮವನ್ನು ಪರಿಚಯಿಸಿ ತನ್ನ ಧಾಮಕ್ಕೆ ತೆರಳಿದುದು

ಮೂಲಮ್ - 1

ದರ್ಶಯಿತ್ವಾ ತು ರಾಮಾಯ ಸೀತಾಯಾಃ ಪರಿಮಾರ್ಗಣೇ ।
ವಾಕ್ಯಮನ್ವರ್ಥಮರ್ಥಜ್ಞಃ ಕಬಂಧಃ ಪುನರಬ್ರವೀತ್ ॥

ಅನುವಾದ

ಶ್ರೀರಾಮನಿಗೆ ಸೀತೆಯನ್ನು ಹುಡುಕುವ ಉಪಾಯವನ್ನು ತಿಳಿಸಿ, ಅರ್ಥವೆತ್ತಾ ಕಬಂಧನು ಪುನಃ ಅವನಲ್ಲಿ ಹೀಗೆ ಪ್ರಯೋಜನಯುಕ್ತ ಮಾತನ್ನು ಹೇಳಿದನು.॥1॥

ಮೂಲಮ್ - 2

ಏಷ ರಾಮ ಶಿವಃ ಪಂಥಾ ಯತ್ರೈತೇ ಪುಷ್ಟಿತಾ ದ್ರುಮಾಃ ।
ಪ್ರತೀಚೀಂ ದಿಶಮಾಶ್ರಿತ್ಯ ಪ್ರಕಾಶಂತೇ ಮನೋರಮಾಃ ॥

ಅನುವಾದ

ಶ್ರೀರಾಮ! ಇಲ್ಲಿಂದ ಪಶ್ಚಿಮ ದಿಕ್ಕನ್ನು ಆಶ್ರಯಿಸಿ ಈ ಹೂವುಗಳಿಂದ ತುಂಬಿರುವ ಮನೋಹರ ವೃಕ್ಷಗಳು ಶೋಭಿಸುತ್ತಿರುವಲ್ಲಿಯೇ ನಿಮಗೆ ಹೋಗಲು ಒಳ್ಳೆಯ ಸುಖಕರ ಮಾರ್ಗವಾಗಿದೆ.॥2॥

ಮೂಲಮ್ - 3

ಜಂಬೂಪ್ರಿಯಾಲಪನಸಾ ನ್ಯಗ್ರೋಧಪ್ಲಕ್ಷತಿಂದುಕಾಃ ।
ಅಶ್ವತ್ಥಾಃ ಕರ್ಣಿಕಾರಾಶ್ಚ ಚೂತಾಶ್ಚಾನ್ಯೇ ಚ ಪಾದಪಾಃ ॥

ಮೂಲಮ್ - 4

ಧನ್ವನಾ ನಾಗವೃಕ್ಷಾಶ್ಚ ತಿಲಕಾ ನಕ್ತಮಾಲಕಾಃ ।
ನೀಲಾಶೋಕಾಃ ಕದಂಬಾಶ್ಚ ಕರವೀರಾಶ್ಚ ಪುಷ್ಟಿತಾಃ ॥

ಮೂಲಮ್ - 5½

ಅಗ್ನಿಮುಖ್ಯಾ ಅಶೋಕಾಶ್ಚ ಸುರಕ್ತಾಃ ಪಾರಿಭದ್ರಕಾಃ ।
ತಾನಾರುಹ್ಯಾಥವಾ ಭೂಮೌ ಪಾತಯಿತ್ವಾ ಚ ತಾನ್ಬಲಾತ್ ॥
ಫಲಾನ್ಯಮೃತಕಲ್ಪಾನಿ ಭಕ್ಷಯಿತ್ವಾ ಗಮಿಷ್ಯಥಃ ।

ಅನುವಾದ

ಜಂಬೂಲ, ಪ್ರಿಯಾಳ, ಹಲಸು, ಆಲ, ಅರಳಿ, ತಿಂದುಕ, ಬೆಟ್ಟದ ಕಣಗಿಲೆ, ಧನ್ವನ, ನಾಗಕೇಸರ, ತಿಲಕ, ನಕ್ತಮಾಲಿಕಾ, ನೀಲಾಶೋಕ, ಕದಂಬ ಕರವೀರ, ಗೇರು, ಅಶೋಕ, ರಕ್ತಚಂದನ, ಮಂದಾರ ಮುಂತಾದ ವೃಕ್ಷಗಳು ದಾರಿಯಲ್ಲಿ ಸಿಗುವವು. ನೀವಿಬ್ಬರೂ ಇವುಗಳ ರೆಂಬೆಗಳನ್ನು ಬಗ್ಗಿಸಿ ಅಥವಾ ಮರಹತ್ತಿ ಇವುಗಳ ಅಮೃತದಂತಹ ಮಧುರ ಫಲಗಳನ್ನು ಭಕ್ಷಿಸುತ್ತಾ ಪ್ರಯಾಣ ಮಾಡಿರಿ.॥3-5½॥

ಮೂಲಮ್ - 6

ತದತಿಕ್ರಮ್ಯ ಕಾಕುತ್ಸ್ಥ ವನಂ ಪುಷ್ಟಿತಪಾದಪಮ್ ॥

ಮೂಲಮ್ - 7

ನಂದನಪ್ರತಿಮಂ ತ್ವಾನ್ಯತ್ ಕುರವಸ್ತೂತ್ತರಾ ಇವ ।
ಸರ್ವಕಾಮಫಲಾ ಯತ್ರ ಪಾದಪಾ ಮಧುಸ್ರವಾಃ ॥

ಅನುವಾದ

ಕಾಕುತ್ಸ್ಥ! ಅರಳಿದ ವೃಕ್ಷಗಳಿಂದ ಸುಶೋಭಿತ ಆ ವನವನ್ನು ದಾಟಿ ನೀವು ಇನ್ನೊಂದು ನಂದನವನದಂತಿರುವ ಮನೋಹರವಾದ ವನವನ್ನು ಪ್ರವೇಶಿಸುವಿರಿ. ಆ ವನದ ವೃಕ್ಷಗಳು ಉತ್ತರ ಕುರುವರ್ಷದ ವೃಕ್ಷಗಳಂತೆ ಜೇನಿನ ಧಾರೆಯನ್ನು ಹರಿಸುವಂತಹುಗಳಾಗಿವೆ. ಅವುಗಳು ಎಲ್ಲ ಋತುಗಳಲ್ಲಿಯೂ ಫಲ ಬಿಡುವುವು.॥6-7॥

ಮೂಲಮ್ - 8

ಸರ್ವೇ ಚ ಋತವಸ್ತತ್ರ ವನೇ ಚೈತ್ರರಥೇ ಯಥಾ ।
ಫಲಭಾರಾನತಾಸ್ತತ್ರ ಮಹಾವಿಟಪಧಾರಿಣಃ ॥

ಅನುವಾದ

ಚೈತ್ರರಥ ವನದಂತೆ ಆ ಮನೋಹರ ಕಾನನದಲ್ಲಿ ಎಲ್ಲ ಋತುಗಳು ವಾಸಿಸುತ್ತವೆ. ಅಲ್ಲಿಯ ವೃಕ್ಷಗಳು ದೊಡ್ಡ-ದೊಡ್ಡ ರೆಂಬೆಯ-ಕೊಂಬೆಗಳಿಂದ ಕೂಡಿದ್ದು ಫಲಭಾರದಿಂದ ಬಾಗಿಕೊಂಡಿವೆ.॥8॥

ಮೂಲಮ್ - 9½

ಶೋಭಂತೇ ಸರ್ವತಸ್ತತ್ರ ಮೇಘಪರ್ವತಸಂನಿಭಾಃ ।
ತಾನಾರುಹ್ಯಾಥವಾ ಭೂಮೌ ಪಾತಯಿತ್ವಾಥವಾ ಸುಖಮ್ ॥
ಫಲಾನ್ಯಮೃತಕಲ್ಪಾನಿ ಲಕ್ಷ್ಮಣಸ್ತೇ ಪ್ರದಾಸ್ಯತಿ ।

ಅನುವಾದ

ಅವೆಲ್ಲವುಗಳು ಎಲ್ಲೆಡೆ ಮೇಘ ಮತ್ತು ಪರ್ವತಗಳಂತೆ ಶೋಭಿಸುತ್ತವೆ. ಆ ಮರಗಳನ್ನು ಹತ್ತಿ ಅಥವಾ ಸುಲಭವಾಗಿ ಬಾಗಿಸಿ ಅವುಗಳ ಅಮೃತದಂತಹ ಮಧುರ ಫಲಗಳನ್ನು ಲಕ್ಷ್ಮಣನು ನಿನಗೆ ತಂದುಕೊಡುವನು.॥9½॥

ಮೂಲಮ್ - 10½

ಚಂಕಮಂತೌ ವರಾನ್ ಶೈಲಾನ್ ಶೈಲಾಚ್ಛೈಲಂ ವನಾದ್ ವನಮ್ ॥
ತತಃ ಪುಷ್ಕರಿಣೀಂ ವೀರೌ ಪಂಪಾಂ ನಾಮ ಗಮಿಷ್ಯಥಃ ।

ಅನುವಾದ

ಈ ಪ್ರಕಾರ ಸುಂದರ ಪರ್ವತಗಳಲ್ಲಿ ಭ್ರಮಣ ಮಾಡುತ್ತಾ ನೀವಿಬ್ಬರೂ ಸೋದರರು ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಬಂದು ವನದಿಂದ ಇನ್ನೊಂದು ವನಕ್ಕೆ ಹೀಗೆ ಅನೇಕ ಪರ್ವತ, ವನಗಳನ್ನು ದಾಟಿ ನೀವಿಬ್ಬರೂ ವೀರರು ಪಂಪಾ ಎಂಬ ಪುಷ್ಕರಿಣಿಯ ಬಳಿಗೆ ತಲುಪುವಿರಿ.॥10½॥

ಮೂಲಮ್ - 11½

ಅಶರ್ಕರಾಮವಿಭ್ರಂಶಾಂ ಸಮತೀರ್ಥಾಮಶೈವಲಾಮ್ ॥
ರಾಮ ಸಂಜಾತವಾಲೂಕಾಂ ಕಮಲೋತ್ಪಲಶೋಭಿತಾಮ್ ।

ಅನುವಾದ

ಶ್ರೀರಾಮಾ! ಅಲ್ಲಿ ನೊರಜು ಕಲ್ಲುಗಳಿಲ್ಲ, ಅದರ ದಡದಲ್ಲಿ ಕಾಲು ಜಾರುವ ಕೆಸರೂ ಇಲ್ಲ, ಅದರ ತೀರದ ಭೂಮಿ ಎತ್ತರ ತಗ್ಗಿಲ್ಲದೆ ಸಮತ್ತಟ್ಟಾಗಿದೆ, ಆ ಪುಷ್ಕರಿಣಿಯಲ್ಲಿ ಪಾಚಿಯು ಇಲ್ಲವೇ ಇಲ್ಲ. ಅದರೊಳಗೆ ಮರಳದಿಣ್ಣೆಗಳಿವೆ. ಕಮಲ ಮತ್ತು ನೈದಿಲೆಗಳು ಆ ಸರೋವರದ ಶೋಭೆ ಹೆಚ್ಚಿಸುತ್ತವೆ.॥11½॥

ಮೂಲಮ್ - 12

ತತ್ರ ಹಂಸಾಃ ಪ್ಲವಾಃ ಕ್ರೌಂಚಾಃ ಕುರರಾಶ್ಚೈವ ರಾಘವ ॥

ಮೂಲಮ್ - 13

ವಲ್ಗುಸ್ವರಾ ನಿಕೂಜಂತಿ ಪಂಪಾಸಲಿಲಗೋಚರಾಃ ।
ನೋದ್ವಿಜಂತೇ ನರಾನ್ದೃಷ್ಟ್ವಾ ವಧಸ್ಯಾಕೋವಿದಾಃ ಶುಭಾಃ ॥

ಅನುವಾದ

ರಘುನಂದನ! ಅಲ್ಲಿ ಪಂಪಾ ಸರೋವರದ ನೀರಿನಲ್ಲಿ ವಿಹರಿಸುವ ಹಂಸ, ಕಾರಂಡವ, ಕ್ರೌಂಚ, ಕುಕರ ಜಲಪಕ್ಷಿಗಳು ಸದಾ ಮಧುರವಾಗಿ ಕೂಜನ ಮಾಡುತ್ತಿರುವವು. ಅವು ಮನುಷ್ಯರನ್ನು ನೋಡಿ ಉದ್ವಿಗ್ನರಾಗುವುದಿಲ್ಲ, ಏಕೆಂದರೆ ಯಾರೇ ಮನುಷ್ಯನಿಂದ ಯಾವುದೇ ಪಕ್ಷಿಯ ವಧೆಯಾದೀತೆಂಬ ಭಯವೇ ಅವುಗಳಲ್ಲಿಲ್ಲ. ಇವೆಲ್ಲ ಬಹಳ ಸುಂದರವಾಗಿದೆ.॥12-13॥

ಮೂಲಮ್ - 14

ಘೃತಪಿಂಡೋಪಮಾನ್ ಸ್ಥೂಲಾಂಸ್ತಾನ್ದ್ವಿಜಾನ್ಭಕ್ಷಯಿಷ್ಯಥಃ ।
ರೋಹಿತಾನ್ವಕ್ರತುಂಡಾಂಶ್ಚ ನಲಮೀನಾಂಶ್ಚ ರಾಘವ ॥

ಮೂಲಮ್ - 15½

ಪಂಪಾಯಾಮಿಷುಭಿರ್ಮತ್ಸ್ಯಾಂಸ್ತತ್ರ ರಾಮ ವರಾನ್ಹತಾನ್ ।
ನಿಸ್ತ್ವಕ್ಪಕ್ಷಾನಯಸ್ತಪ್ತಾನಕೃಶಾನೈಕಕಂಟಕಾನ್ ॥
ತವ ಭಕ್ತ್ಯಾ ಸಮಾಯುಕ್ತೋ ಲಕ್ಷ್ಮಣಃ ಸಂಪ್ರದಾಸ್ಯತಿ ।

ಅನುವಾದ

ಬಾಣಗಳ ತುದಿಯಿಂದ ಸಿಪ್ಪೆ ತೆಗೆದ, ಒಂದು ಮುಳ್ಳು ಇಲ್ಲದಿರುವ, ಬೆಣ್ಣೆಯಂತೆ ತಿರುಳು ಉಳ್ಳ ಸ್ನಿಗ್ಧವಾದ, ಹಸಿಯಾಗಿರುವುದನ್ನು ಬಾಣಗಳಿಗೆ ಪೋಣಿಸಿ ಬೆಂಕಿಯಲ್ಲಿ ಬೇಯಿಸಿದ ಫಲ-ಮೂಲಗಳ ಭಕ್ಷ ಪದಾರ್ಥರಾಶಿ ರಾಶಿಯಾಗಿ ಅಲ್ಲಿ ನಿಮಗೆ ಸಿಗುವುದು. ನಿನ್ನ ಕುರಿತು ಭಕ್ತಿಭಾವದಿಂದ ಸಂಪನ್ನ ಲಕ್ಷ್ಮಣನು ನಿನಗೆ ಆ ಭಕ್ಷ್ಯಗಳನ್ನು ಅರ್ಪಿಸುವನು. ನೀವಿಬ್ಬರೂ ಆ ಪದಾರ್ಥಗಳನ್ನು ಎತ್ತಿಕೊಂಡು ಆ ಸರೋವರದ ದಪ್ಪ ದಪ್ಪವಾದ ಪ್ರಸಿದ್ಧ ಜಲಚರ ಪಕ್ಷಿಗಳನ್ನು ಹಾಗೂ ಶ್ರೇಷ್ಠ ರೋಹಿತ, ವಕ್ರತುಂಡ, ನಲಮೀನ ಮುಂತಾದ ಮೀನುಗಳಿಗೆ ಸ್ವಲ್ಪ-ಸ್ವಲ್ಪ ತಿನ್ನಿಸಿರಿ. ಅದರಿಂದ ನಿಮಗೆ ಮನೋರಂಜನವಾದೀತು.॥14-15½॥

ಮೂಲಮ್ - 16

ಭೃಶಂ ತಾನ್ ಖಾದತೋ ಮತ್ಸ್ಯಾನ್ಪಂಪಾಯಾಃ ಪುಷ್ಪಸಂಚಯೇ ॥

ಮೂಲಮ್ - 17½

ಪದ್ಮಗಂಧಿ ಶಿವಂ ವಾರಿ ಸುಖಶೀತಮನಾಮಯಮ್ ।
ಉದ್ಧೃತ್ಯ ಸ ತದಾಕ್ಲಿಷ್ಟಂ ರೌಪ್ಯಸ್ಫಾಟಿಕಸಂನಿಭಮ್ ॥
ಅಥ ಪುಷ್ಕರಪರ್ಣೇಣ ಲಕ್ಷ್ಮಣಃ ಪಾಯಯಿಷ್ಯತಿ ।

ಅನುವಾದ

ನೀವು ಪಂಪಾಸರೋವರದ ಸಮೀಪ ಮೀನುಗಳಿಗೆ ತಿಂಡಿ ತಿನ್ನಿಸುವ ಕ್ರಿಡೆಯಲ್ಲಿ ಮುಳುಗಿದಾಗ ಲಕ್ಷ್ಮಣನು ಆ ಸರೋವರದ ಕಮಲಗಂಧದಿಂದ ಸುವಾಸಿತ, ಕಲ್ಯಾಣಕಾರಿ, ಸುಖದ, ಶೀತಲ, ರೋಗನಾಶಕ, ಕ್ಲೇಶಹಾರಿ ಹಾಗೂ ಬೆಳ್ಳಿ, ಸ್ಫಟಿಕದಂತೆ ಸ್ವಚ್ಛ ನೀರನ್ನು ಕಮಲದ ಎಲೆಯಲ್ಲಿ ಎತ್ತಿಕೊಂಡು ತಂದು ನಿನಗೆ ಕುಡಿಸುವನು.॥16-17½॥

ಮೂಲಮ್ - 18½

ಸ್ಥೂಲಾನ್ಗಿರಿಗುಹಾಶಯ್ಯಾನ್ ವಾನರಾನ್ವನಚಾರಿಣಃ ॥
ಸಾಯಾಹ್ನೇ ವಿಚರನ್ ರಾಮ ದರ್ಶಯಿಷ್ಯತಿ ಲಕ್ಷ್ಮಣಃ ।

ಅನುವಾದ

ಶ್ರೀರಾಮ! ಸಾಯಂಕಾಲದಲ್ಲಿ ನಿನ್ನೊಂದಿಗೆ ವಿಹರಿಸುವ ಲಕ್ಷ್ಮಣನು ನಿನಗೆ ಸ್ಥೂಲಕಾಯರಾದ ವನಚರ ವಾನರನ್ನು ತೊರಿಸುವನು, ಅವು ಪರ್ವತಗಳ ಗುಹೆಗಳಲ್ಲಿ ಮಲಗುತ್ತಾ ಇರುತ್ತವೆ.॥18½॥

ಮೂಲಮ್ - 19½

ಅಪಾಂ ಲೋಭಾದುಪಾವೃತ್ತಾನ್ವೃಷಭಾನಿವ ನರ್ದತಃ ॥
ಸ್ಥೂಲಾನ್ಪೀತಾಂಶ್ಚ ಪಂಪಾಯಾಂ ದ್ರಕ್ಷ್ಯಸಿ ತ್ವಂ ನರೋತ್ತಮ ।

ಅನುವಾದ

ನರಶ್ರೇಷ್ಠ! ಆ ವಾನರರು ನೀರು ಕುಡಿಯಲು ಪಂಪಾತೀರಕ್ಕೆ ಬಂದು ಗೂಳಿಗಳಂತೆ ಗರ್ಜಿಸುತ್ತವೆ. ಅವುಗಳ ಶರೀರ ದಪ್ಪವಾಗಿದ್ದು, ಬಣ್ಣ ಹಳದಿಯಾಗಿರುತ್ತದೆ. ನೀನು ಅವೆಲ್ಲವನ್ನು ಅಲ್ಲಿ ನೋಡುವಿ.॥19½॥

ಮೂಲಮ್ - 20½

ಸಾಯಾಹ್ನೇ ವಿಚರನ್ ರಾಮ ವಿಟಪೀ ಮಾಲ್ಯಧಾರಿಣಃ ॥
ಶೀತೋದಕಂ ಚ ಪಂಪಾಯಾ ದಷ್ಟ್ವಾಶೋಕಂ ವಿಹಾಸ್ಯಸಿ ।

ಅನುವಾದ

ಶ್ರೀರಾಮ! ಸಾಯಂಕಾಲದಲ್ಲಿ ನಡೆಯುತ್ತಾ ನೀನು ದೊಡ್ಡ-ದೊಡ್ಡ ರೆಂಬೆಗಳುಳ್ಳ, ಪುಷ್ಪಧಾರೀ ವೃಕ್ಷಗಳನ್ನು ಹಾಗೂ ಪಂಪಾಸರೋವರದ ಶೀತಲ ಜಲವನ್ನು ದರ್ಶಿಸುತ್ತಾ ನಿನ್ನ ಶೋಕ ದೂರವಾಗುವುದು.॥20½॥

ಮೂಲಮ್ - 21½

ಸುಮನೋಭಿಶ್ಚಿತಾಸ್ತತ್ರ ತಿಲಕಾ ನಕ್ತಮಾಲಕಾಃ ॥
ಉತ್ಪಲಾನಿ ಚ ಫುಲ್ಲಾನಿ ಪಂಕಜಾನಿ ಚ ರಾಘವ ।

ಅನುವಾದ

ರಘುನಂದನ! ಅಲ್ಲಿ ಹೂವುಗಳಿಂದ ತುಂಬಿದ ತಿಲಕ ಮತ್ತು ನಕ್ತಮಾಲೆಯ ವೃಕ್ಷಗಳು ಶೋಭಿಸುತ್ತವೆ. ನೀರಿನೊಳಗೆ ಉತ್ಪಲ, ಕಮಲ ಪುಷ್ಪಗಳು ಕಂಡುಬರುತ್ತವೆ.॥21½॥

ಮೂಲಮ್ - 22½

ನ ತಾನಿ ಕಶ್ಚಿನ್ಮಾಲ್ಯಾನಿ ತತ್ರಾರೋಪಯಿತಾ ನರಃ ॥
ನ ಚ ವೈ ಮ್ಲಾನತಾಂ ಯಾಂತಿ ನ ಚ ಶೀರ್ಯಂತಿ ರಾಘವ ।

ಅನುವಾದ

ರಘುನಂದನ! ಯಾವನೇ ಮನುಷ್ಯನು ಅಲ್ಲಿ ಹೂವುಗಳನ್ನು ಕಿತ್ತು ಮುಡಿದುಕೊಳ್ಳುವುದಿಲ್ಲ (ಏಕೆಂದರೆ ಅಲ್ಲಿಯವರೆಗೆ ಯಾರೂ ತಲುಪುವುದೇ ಇಲ್ಲ) ಪಂಪಾಸರೋವರದ ಹೂವುಗಳು ಬಾಡುವುದಿಲ್ಲ, ಉದುರುವುದಿಲ್ಲ.॥22½॥

ಮೂಲಮ್ - 23

ಮತಂಗಶಿಷ್ಯಾಸ್ತತ್ರಾಸನ್ನೃಷಯಃ ಸುಸಮಾಹಿತಃ ॥

ಮೂಲಮ್ - 24

ತೇಷಾಂ ಭಾರಾಭಿತಪ್ತಾನಾಂ ವನ್ಯಮಾಹರತಾಂ ಗುರೋಃ ।
ಯೇ ಪ್ರಪೇತುರ್ಮಹೀಂ ತೂರ್ಣಂ ಶರೀರಾತ್ ಸ್ವೇದಬಿಂದವಃ ॥

ಮೂಲಮ್ - 25

ತಾನಿ ಮಾಲ್ಯಾನಿ ಜಾತಾನಿ ಮುನೀನಾಂ ತಪಸಾ ತದಾ ।
ಸ್ವೇದಬಿಂದುಸಮುತ್ಥಾನಿ ನ ವಿನಶ್ಯಂತಿ ರಾಘವ ॥

ಅನುವಾದ

ಅಲ್ಲಿ ಹಿಂದೆ ಮತಂಗ ಮುನಿಯ ಶಿಷ್ಯ ಋಷಿಗಳು ವಾಸಿಸುತ್ತಿದ್ದರು ಎಂದು ಹೇಳುತ್ತಾರೆ. ಅವರ ಚಿತ್ತ ಸದಾಏಕಾಗ್ರ, ಶಾಂತವಾಗಿರುತ್ತಿತ್ತು. ಅವರು ತಮ್ಮ ಗುರು ಮತಂಗಮುನಿಗಳಿಗೆ ಕಾಡಿನ ಫಲ-ಮೂಲಗಳನ್ನು ತಂದು ತಂದು ಬಳಲಿ ಹೋಗುತ್ತಿದ್ದರು. ಆಗ ಅವರ ಶರೀರದಿಂದ ನೆಲಕ್ಕೆ ಬಿದ್ದ ಬೆವರಿನ ಬಿಂದುಗಳು ಆ ಮುನಿಯ ತಪಸ್ಸಿನ ಪ್ರಭಾವದಿಂದ ಹೂವುಗಳಾಗಿ ಪರಿಣತವಾಗುತ್ತಿದ್ದವು. ರಾವ! ಬೆವರಿನ ಬಿಂದುಗಳಿಂದ ಉಂಟಾದ ಕಾರಣ ಆ ಹೂವುಗಳು ನಾಶವಾಗುತ್ತಿರಲಿಲ್ಲ.॥23-25॥

ಮೂಲಮ್ - 26

ತೇಷಾಂ ಗತಾನಾಮದ್ಯಾಪಿ ದೃಶ್ಯತೇ ಪರಿಚಾರಿಣೀ ।
ಶ್ರಮಣೀ ಶಬರೀ ನಾಮ ಕಾಕುತ್ಸ್ಥ ಚಿರಜೀವಿನೀ ॥

ಮೂಲಮ್ - 27

ತ್ವಾಂ ತು ಧರ್ಮೇ ಸ್ಥಿತಾ ನಿತ್ಯಂ ಸರ್ವಭೂತನಮಸ್ಕೃತಮ್ ।
ದೃಷ್ಟ್ವಾ ದೇವೋಪಮಂ ರಾಮ ಸ್ವರ್ಗಲೋಕಂ ಗಮಿಷ್ಯತಿ ॥

ಅನುವಾದ

ಆ ಎಲ್ಲ ಋಷಿಗಳಾದರೋ ಈಗ ಹೊರಟುಹೋಗಿರುವರು, ಆದರೆ ಅವರ ಸೇವೆಯಲ್ಲಿ ಇದ್ದ ತಪಸ್ವಿನೀ ಶಬರಿಯು ಇಂದೂ ಕೂಡ ಅಲ್ಲಿ ಕಂಡುಬರುತ್ತಾಳೆ. ಕಾಕುತ್ಸ್ಥ! ಶಬರಿಯು ಚಿರಾಯುವಾಗಿ ಸದಾ ಧರ್ಮಾನುಷ್ಠಾನದಲ್ಲಿ ತೊಡಗಿರುತ್ತಿದ್ದಾಳೆ. ಶ್ರೀರಾಮಾ! ನೀನು ಸಮಸ್ತ ಪ್ರಾಣಿಗಳಿಗೆ ನಿತ್ಯ ವಂದನೀಯ ಮತ್ತು ದೇವತುಲ್ಯನಾಗಿರುವೆ. ನಿನ್ನ ದರ್ಶನ ಪಡೆದು ಶಬರಿಯು ಸ್ವರ್ಗಲೋಕಕ್ಕೆ ಹೊರಟುಹೋಗುವಳು.॥26-27॥

ಮೂಲಮ್ - 28

ತತಸ್ತದ್ರಾಮ ಪಂಪಾಯಾಸ್ತೀರಮಾಶ್ರಿತ್ಯ ಪಶ್ಚಿಮಮ್ ।
ಆಶ್ರಮಸ್ಥಾನಮತುಲಂ ಗುಹ್ಯಂ ಕಾಕುತ್ಸ್ಥ ಪಶ್ಯಸಿ ॥

ಅನುವಾದ

ಕಕುತ್ಸ್ಥಕುಲಭೂಷಣ ಶ್ರೀರಾಮಾ! ಅನಂತರ ನೀನು ಪಂಪಾ ಸರೋವರದ ಪಶ್ಚಿಮ ತೀರದಲ್ಲಿ ಒಂದು ಅನುಪಮ ಆಶ್ರಮವನ್ನು ನೋಡುವೆ. ಅದು ಸಾಮಾನ್ಯರು ತಲುಪಲಾರದಂತಹದ್ದಾದ್ದರಿಂದ ಗುಪ್ತವಾಗಿದೆ.॥28॥

ಮೂಲಮ್ - 29

ನ ತತ್ರಾಕ್ರಮಿತುಂ ನಾಗಾಃ ಶಕ್ನುವಂತಿ ತದಾಶ್ರಮೇ ।
ಋಷೇಸ್ತತ್ರ ಮತಂಗಸ್ಯ ವಿಧಾನಾತ್ ತಚ್ಚ ಕಾನನಮ್ ॥

ಅನುವಾದ

ಆ ಆಶ್ರಮದಲ್ಲಿ ಹಾಗೂ ಆ ವನದಲ್ಲಿ ಮತಂಗಮುನಿಯ ಪ್ರಭಾವದಿಂದ ಆನೆಗಳು ಎಂದೂ ಆಕ್ರಮಣಮಾಡುವುದಿಲ್ಲ.॥29॥

ಮೂಲಮ್ - 30½

ಮತಂಗವನಮಿತ್ಯೇವ ವಿಶ್ರುತಂ ರಘುನಂದನ ।
ತಸ್ಮಿನ್ನಂದನಸಂಕಾಶೇ ದೇವಾರಣ್ಯೋಪಮೇ ವನೇ ॥
ನಾನಾವಿಹಗಸಂಕೀರ್ಣೇ ರಂಸ್ಯಸೇ ರಾಮ ನಿರ್ವೃತಃ ।

ಅನುವಾದ

ರಘುನಂದನ! ಅಲ್ಲಿಯ ಕಾಡು ಮತಂಗವನ ಎಂದು ಪ್ರಸಿದ್ಧವಾಗಿದೆ. ಆ ನಂದನವನದಂತಹ ಮನೋಹರ ಮತ್ತು ದೇವವನದಂತೆ ಸುಂದರವನದಲ್ಲಿ ನಾನಾ ಪ್ರಕಾರದ ಪಕ್ಷಿಗಳು ತುಂಬಿಕೊಂಡಿದೆ. ಶ್ರೀರಾಮಾ! ನೀನು ಅಲ್ಲಿ ಬಹಳ ಸಂತೋಷದಿಂದ ವಿಚರಣಮಾಡುವೆ.॥30½॥

ಮೂಲಮ್ - 31

ಋಶ್ಯಮೂಕಸ್ತು ಪಂಪಾಯಾಃ ಪುರಸ್ತಾತ್ ಪುಷ್ಟಿತದ್ರುಮಃ ॥

ಮೂಲಮ್ - 32

ಸುದುಃಖಾರೋಹಣಶ್ಚೈವ ಶಿಶುನಾಗಾಭಿರಕ್ಷಿತಃ ।
ಉದಾರೋ ಬ್ರಹ್ಮಣಾ ಚೈವ ಪೂರ್ವಕಾಲೇಽಭಿನಿರ್ಮಿತಃ ॥

ಅನುವಾದ

ಪಂಪಾ ಸರೋವರದ ಪೂರ್ವಭಾಗದಲ್ಲಿ ಋಷ್ಯಮೂಕ ಪರ್ವತವಿದೆ. ಅಲ್ಲಿಯ ವೃಕ್ಷಗಳು ಹೂವುಗಳಿಂದ ಸುಶೋಭಿತವಾಗಿ ಕಾಣುತ್ತವೆ. ಅದರ ಮೇಲೆ ಹತ್ತಿ ಹೋಗಲು ಬಹಳ ಕಠಿಣವಾಗಿದೆ; ಏಕೆಂದರೆ ಅದು ಸಣ್ಣ-ಸಣ್ಣ ಸರ್ಪಗಳಿಂದ ಅಥವಾ ಆನೆಗಳ ಮರಿಗಳಿಂದ ಎಲ್ಲೆಡೆ ಸುರಕ್ಷಿತವಾಗಿದೆ. ಋಷ್ಯಮೂಕ ಪರ್ವತವು ಉದಾರ (ಅಭಿಷ್ಟ ಫಲವನ್ನು ಕೊಡುವ) ವಾಗಿದೆ. ಹಿಂದೆ ಸಾಕ್ಷಾತ್ ಬ್ರಹ್ಮದೇವರೇ ಅದನ್ನು ನಿರ್ಮಿಸಿದ್ದರು ಮತ್ತು ಔದಾರ್ಯ ಮೊದಲಾದ ಗುಣಗಳಿಂದ ಸಂಪನ್ನವಾಗಿಸಿದ್ದರು.॥31-32॥

ಮೂಲಮ್ - 33

ಶಯಾನಃ ಪುರುಷೋ ರಾಮ ತಸ್ಯ ಶೈಲಸ್ಯ ಮೂರ್ಧನಿ ।
ಯತ್ಸ್ವಪ್ನಂ ಲಭತೇ ವಿತ್ತಂ ತತ್ಪ್ರಬುದ್ಧೋಽಧಿಗಚ್ಛತಿ ॥

ಮೂಲಮ್ - 34

ಯಸ್ತ್ವೇನಂ ವಿಷಮಾಚಾರಃ ಪಾಪಕರ್ಮಾಧಿರೋಹಪತಿ ।
ತತ್ರೈವ ಪ್ರಹರಂತ್ಯೇನಂ ಸುಪ್ತಮಾದಾಯ ರಾಕ್ಷಸಾಃ ॥

ಅನುವಾದ

ಶ್ರೀರಾಮಾ! ಆ ಪರ್ವತದ ಶಿಖರದಲ್ಲಿ ಮಲಗಿದ ಮನುಷ್ಯನು ಸ್ವಪ್ನದಲ್ಲಿ ಪಡೆದ ಸಂಪತನ್ನು ಎಚ್ಚರಗೊಂಡಾಗ ಪ್ರಾಪ್ತಮಾಡಿಕೊಳ್ಳುವನು. ಪಾಪಕರ್ಮ ಹಾಗೂ ವಿಷಮ ವರ್ತನೆಯುಳ್ಳವನು ಆ ಪರ್ವತವನ್ನು ಹತ್ತಿದರೆ ಅವನನ್ನು ಈ ಪರ್ವತಶಿಖರದಲ್ಲಿ ಮಲಗಿದಾಗ ರಾಕ್ಷಸರು ಎತ್ತಿಕೊಂಡು ಅವನನ್ನು ಹೊಡೆಯುತ್ತಾರೆ.॥33-34॥

ಮೂಲಮ್ - 35

ತತ್ರಾಪಿ ಶಿಶುನಾಗಾನಾಮಾಕ್ರಂದಃ ಶ್ರೂಯತೇ ಮಹಾನ್ ।
ಕ್ರೀಡತಾಂ ರಾಮ ಪಂಪಾಯಾಂ ಮತಂಗಾಶ್ರಮವಾಸಿನಾಮ್ ॥

ಅನುವಾದ

ಶ್ರೀರಾಮ! ಮತಂಗ ಮುನಿಯ ಅಕ್ಕ-ಪಕ್ಕದ ವನದಲ್ಲಿ ಇರುವ, ಪಂಪಾ ಸರೋವರದಲ್ಲಿ ಕ್ರೀಡಿಸುವ ಸಣ್ಣ-ಸಣ್ಣ ಆನೆಗಳ ಘೀಂಕಾರ ಶಬ್ಧವು ಆ ಪರ್ವತದ ಮೇಲೆಯೂ ಕೇಳಿಬರುತ್ತಿರುತ್ತದೆ.॥35॥

ಮೂಲಮ್ - 36

ಸಕ್ತಾ ರುಧಿರಧಾರಾಭಿಃ ಸಂಹೃತ್ಯ ಪರಮದ್ವಿಪಾಃ ।
ಪ್ರಚರಂತಿ ಪೃಥಕ್ಕೀರ್ಣಾ ಮೇಘವರ್ಣಾಸ್ತರಸ್ವಿನಃ ॥

ಮೂಲಮ್ - 37½

ತೇ ತತ್ರ ಪೀತ್ವಾ ಪಾನೀಯಂ ವಿಮಲಂ ಚಾರು ಶೀತಲಮ್ ।
ಅತ್ಯಂತಸುಖಸಂಸ್ಪರ್ಶಂ ಸರ್ವಗಂಧಸಮನ್ವಿತಮ್ ॥
ನಿರ್ವೃತಾಃ ಸಂವಿಗಾಹಂತೇ ವನಾನಿ ವನಗೋಚರಾಃ ।

ಅನುವಾದ

ಗಂಡಸ್ಥಲಗಳಲ್ಲಿ ಸ್ವಲ್ಪ ಕೆಂಪಾದ ಮದೋದಕವನ್ನು ಸುರಿಸುತ್ತಾ, ವೇಗಶಾಲಿಗಳಾದ ಮೋಡದಂತೆ ಕಪ್ಪಾದ ದೊಡ್ಡ-ದೊಡ್ಡ ಗಜರಾಜಗಳು ಗುಂಪುಗುಂಪಾಗಿ ಬೇರೆ ಜಾತಿಯ ಆನೆಗಳಿಂದ ಬೇರೆಯಾಗಿ ಅಲ್ಲಿ ಸಂಚರಿಸುತ್ತವೆ. ಕಾಡಿನಲ್ಲಿ ವಿಚರಿಸುವ ಆ ಆನೆಗಳು ಪಂಪಾಸರೋವರದ ನಿರ್ಮಲ, ಮನೋಹರ, ಸುಂದರ, ಸ್ಪರ್ಶಿಸಲು ಸುಖಕರ, ಎಲ್ಲ ಪ್ರಕಾರದ ಸುಗಂಧಗಳಿಂದ ಕೂಡಿದ ನೀರನ್ನು ಕುಡಿದು ಮರಳಿದಾಗ ಆ ವನಗಳನ್ನು ಪ್ರವೇಶಿಸುವವು.॥36-37½॥

ಮೂಲಮ್ - 38½

ಋಕ್ಷಾಂಶ್ಚ ದ್ವೀಪಿನಶ್ಚೈವ ನೀಲಕೋಮಲಕಪ್ರಭಾನ್ ॥
ರುರೂನಪೇತಾನಜಯಾನ್ದೃಷ್ಟ್ವಾಶೋಕಂ ಪ್ರಹಾಸ್ಯಸಿ ।

ಅನುವಾದ

ರಘುನಂದನ! ಅಲ್ಲಿ ಕರಡಿ, ಹುಲಿ, ನೀಲವಾಗಿಯೂ, ಕೋಮಲವಾಗಿಯೂ, ಮನುಷ್ಯರನ್ನು ನೋಡಿ ಓಡುವ ಹಾಗೂ ಅಲ್ಲಿರುವ ಓಟದಲ್ಲಿ ಯಾರಿಂದಲೂ ಪರಾಜಿತವಾಗದ ರುರುಮೃಗಗಳನ್ನು ನೋಡಿದರೆ ನಿನ್ನ ಶೋಕವು ದೂರವಾಗುವುದು.॥38½॥

ಮೂಲಮ್ - 39½

ರಾಮ ತಸ್ಯ ತು ಶೈಲಸ್ಯ ಮಹತೀ ಶೋಭತೇ ಗುಹಾ ॥
ಶಿಲಾಪಿಧಾನಾ ಕಾಕುತ್ಸ್ಥ ದುಃಖಂ ಚಾಸ್ಯಾಃ ಪ್ರವೇಶನಮ್ ।

ಅನುವಾದ

ಶ್ರೀರಾಮ! ಆ ಪರ್ವತದ ಮೇಲೆ ಬಂಡೆಯಿಂದ ಬಾಗಿಲನ್ನು ಮುಚ್ಚಿದ್ದ ಒಂದು ದೊಡ್ಡದಾದ ಗುಹೆಯು ಶೋಭಿಸುತ್ತಿದೆ. ಅದರೊಳಗೆ ಪ್ರವೇಶಿಸುವುದು ಬಹಳ ಕಷ್ಟವಾಗುತ್ತದೆ.॥39½॥

ಮೂಲಮ್ - 40½

ತಸ್ಯಾ ಗುಹಾಯಾಃ ಪ್ರಾಗ್ದ್ವಾರೇ ಮಹಾನ್ ಶೀತೋದಕೋ ಹ್ರದಃ ॥
ಬಹುಮೂಲಫಲೋ ರಮ್ಯೋ ನಾನಾನಗ ಸಮಾಕುಲಃ ।

ಅನುವಾದ

ಆ ಗುಹೆಯ ಪೂರ್ವದ್ವಾರದಲ್ಲಿ ಶೀತಲಜಲದಿಂದ ತುಂಬಿದ ಒಂದು ಬಹುದೊಡ್ಡ ಕುಂಡವಿದೆ. ಅದರ ಸುತ್ತಲೂ ಫಲ-ಮೂಲಗಳು ಬಹಳ ಸುಲಭವಾಗಿದೆ. ಆ ರಮಣೀಯ ಕುಂಡ ನಾನಾ ಪ್ರಕಾರದ ವೃಕ್ಷಗಳಿಂದ ವ್ಯಾಪ್ತವಾಗಿದೆ.॥40½॥

ಮೂಲಮ್ - 41½

ತಸ್ಯಾಂ ವಸತಿ ಧರ್ಮಾತ್ಮಾಸುಗ್ರೀವಃ ಸಹ ವಾನರೈಃ ॥
ಕದಾಚಿಚ್ಛಿಖರೇ ತಸ್ಯ ಪರ್ವತಸ್ಯಾಪಿ ತಿಷ್ಠತಿ ।

ಅನುವಾದ

ಧರ್ಮಾತ್ಮಾ ಸುಗ್ರೀವನು ವಾನರರೊಂದಿಗೆ ಅದೇ ಗುಹೆಯಲ್ಲಿ ವಾಸಿಸುತ್ತಾರೆ. ಅವನು ಕೆಲವೊಮ್ಮೆ ಆ ಪರ್ವತದ ಶಿಖರದಲ್ಲಿಯೂ ಇರುತ್ತಾನೆ.॥41½॥

ಮೂಲಮ್ - 42½

ಕಬಂದಸ್ತ್ವನುಶಾಸ್ಯೈವಂ ತಾವುಭೌ ರಾಮಲಕ್ಷ್ಮಣೌ ॥
ಸ್ರಗ್ವೀ ಭಾಸ್ಕರವರ್ಣಾಭಃ ಖೇ ವ್ಯರೋಚತ ವೀರ್ಯವಾನ್ ।

ಅನುವಾದ

ಈ ಪ್ರಕಾರ ಶ್ರೀರಾಮ ಲಕ್ಷ್ಮಣರಿಗೆ ಎಲ್ಲವನ್ನೂ ತಿಳಿಸಿ ಸೂರ್ಯನಂತೆ ತೇಜಸ್ವೀ ಮತ್ತು ಪರಾಕ್ರಮಿ ಕಬಂಧನು ದಿವ್ಯಪುಷ್ಪವಾಲೆಗಳನ್ನು ಧರಿಸಿ ಆಕಾಶದಲ್ಲಿ ಪ್ರಕಾಶಿಸತೊಡಗಿದನು.॥42½॥

ಮೂಲಮ್ - 43½

ತಂ ತು ಖಸ್ಥಂ ಮಹಾಭಾಗಂ ತಾವುಭೌ ರಾಮಲಕ್ಷ್ಮಣೌ ॥
ಪ್ರಸ್ಥಿತೌ ತ್ವಂ ವ್ರಜಸ್ವೇತಿ ವಾಕ್ಯಮೂಚತುರಂತಿಕೇ ।

ಅನುವಾದ

ಆಗ ಅವರಿಬ್ಬರೂ ರಾಮ-ಲಕ್ಷ್ಮಣರು ಅಲ್ಲಿಂದ ಹೊರಡಲು ಮುಂದಾದಾಗ ಆಕಾಶದಲ್ಲಿ ನಿಂತ ಮಹಾಭಾಗ ಕಬಂಧನ ಬಳಿಯಲ್ಲಿ ನಿಂತು ‘ಈಗ ನೀನು ಪರಮಧಾಮಕ್ಕೆ ತೆರಳು ಎಂದು’ ಹೇಳಿದರು.॥43½॥

ಮೂಲಮ್ - 44

ಗಮ್ಯತಾಂ ಕಾರ್ಯಸಿದ್ಧ್ಯರ್ಥಮಿತಿ ತಾವಬ್ರವೀತ್ ಸ ಚ ॥

ಮೂಲಮ್ - 45

ಸುಪ್ರೀತೌ ತಾವನುಜ್ಞಾಪ್ಯ ಕಬನ್ಧಃ ಪ್ರಸ್ಥಿತಸ್ತದಾ ॥

ಅನುವಾದ

ಕಬಂಧನೂ ಅವರಿಬ್ಬರಲ್ಲಿ ಹೇಳಿದನು ನೀವೂ ಕೂಡ ತಮ್ಮ ಕಾರ್ಯಸಿದ್ಧಿಗಾಗಿ ಪ್ರಯಾಣ ಮಾಡಿರಿ. ಹೀಗೆ ಹೇಳಿ ಪರಮ ಪ್ರಸನ್ನನಾಗಿ ಅವರಿಬ್ಬರಿಂದ ಅಪ್ಪಣೆ ಪಡೆದು ಕಬಂಧನು ಕೂಡಲೇ ಪ್ರಸ್ಥಾನಮಾಡಿದನು.॥44-45॥

ಮೂಲಮ್ - 46

ಸ ತತ್ಕಬಂಧಃ ಪ್ರತಿಪದ್ಯ ರೂಪಂ
ವೃತಃ ಶ್ರಿಯಾ ಭಾಸ್ವರಸರ್ವತುದೇಹಃ ।
ನಿದರ್ಶಯನ್ರಾಮಮವೇಕ್ಷ್ಯ ಖಸ್ಥಃ
ಸಖ್ಯಂ ಕುರುಷ್ವೇತಿ ತದಾಭ್ಯುವಾಚ ॥

ಅನುವಾದ

ಕಬಂಧನು ತನ್ನ ಹಿಂದಿನ ರೂಪವನ್ನು ಪಡೆದು ಅದ್ಭುತ ಶೋಭೆಯಿಂದ ಸಂಪನ್ನವಾಗಿ, ಅವನ ಇಡೀ ಶರೀರ ಸೂರ್ಯನಂತೆ ಪ್ರಭೆಯಿಂದ ಪ್ರಕಾಶಿಸಿತು. ಅವನು ರಾಮನ ಕಡೆಗೆ ನೋಡುತ್ತಾ ಅವರಿಬ್ಬರಿಗೆ ಪಂಪಾ ಸರೋವರದ ಮಾರ್ಗವನ್ನು ತೋರಿಸುತ್ತಾ ಆಕಾಶದಲ್ಲೇ ಸ್ಥಿತನಾಗಿ ಹೇಳಿದನು - ನೀವು ಸುಗ್ರೀವನೊಂದಿಗೆ ಅವಶ್ಯವಾಗಿ ಮಿತ್ರತೆಯನ್ನು ಮಾಡಿಕೊಳ್ಳ.॥46॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎಪ್ಪತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥73॥