०७२ सीताप्राप्त्युपायकथनम्

वाचनम्
ಭಾಗಸೂಚನಾ

ಶ್ರೀರಾಮ-ಲಕ್ಷ್ಮಣರಿಂದ ಕಬಂಧನ ದಹನ, ದಿವ್ಯರೂಪವನ್ನು ಪಡೆದ ದನುಪುತ್ರನಿಂದ ಸುಗ್ರೀವನೊಡನೆ ಮೈತ್ರಿಯನ್ನು ಬೆಳೆಸುವಂತೆ ಶ್ರೀರಾಮನಿಗೆ ಸಲಹೆ

ಮೂಲಮ್ - 1

ಏವಮುಕ್ತೌ ತು ತೌ ವೀರೌ ಕಬಂಧೇನ ನರೇಶ್ವರೌ ।
ಗಿರಿಪ್ರದರಮಾಸಾದ್ಯ ಪಾವಕಂ ವಿಸಸರ್ಜತುಃ ॥

ಅನುವಾದ

ಕಬಂಧನು ಹೀಗೆ ಹೇಳಿದಾಗ ಆ ಇಬ್ಬರೂ ವೀರ ನರೇಶ್ವರ ಶ್ರೀರಾಮ-ಲಕ್ಷ್ಮಣರು ಅವನ ಶರೀರವನ್ನು ಒಂದು ಪರ್ವತದ ಹೊಂಡದಲ್ಲಿ ಹಾಕಿ ಅದಕ್ಕೆ ಬೆಂಕಿಯಿಟ್ಟರು.॥1॥

ಮೂಲಮ್ - 2

ಲಕ್ಷ್ಮಣಸ್ತು ಮಹೋಲ್ಕಾಭಿರ್ಜ್ವಲಿತಾಭಿಃ ಸಮಂತತಃ ।
ಚಿತಾಮಾದೀಪಯಾಮಾಸ ಸಾ ಪ್ರಜಜ್ವಾಲ ಸರ್ವತಃ ॥

ಅನುವಾದ

ಲಕ್ಷ್ಮಣನು ಉರಿಯುತ್ತಿರುವ ಕೊಳ್ಳಿಗಳಿಂದ ಚಿತೆಯ ಸುತ್ತಲೂ ಬೆಂಕಿಯನ್ನು ಹೊತ್ತಿಸಿದನು. ಮತ್ತೆ ಅದು ಎಲ್ಲ ಕಡೆಯಿಂದ ಧಗ-ಧಗನೆ ಉರಿಯಹತ್ತಿತು.॥2॥

ಮೂಲಮ್ - 3

ತಚ್ಛರೀರಂ ಕಬಂಧಸ್ಯ ಘೃತಪಿಂಡೋಪಮಂ ಮಹತ್ ।
ಮೇದಸಾಪಚ್ಯಮಾನಸ್ಯ ಮಂದಂ ದಹತಿ ಪಾವಕಃ ॥

ಅನುವಾದ

ಚಿತೆಯಲ್ಲಿ ಸುಡುತ್ತಿರುವ ಕಬಂಧನ ವಿಶಾಲ ಶರೀರವು ಚರ್ಬಿಗಳಿಂದ ತುಂಬಿದ ತುಪ್ಪದ ಗಡಿಗೆಯಂತೆ ಕಾಣುತ್ತಿತ್ತು. ಚಿತೆಯ ಬೆಂಕಿಯು ನಿಧಾನವಾಗಿ ಉರಿಯತೊಡಗಿತು.॥3॥

ಮೂಲಮ್ - 4

ಸವಿಧೂಯ ಚಿತಾಮಾಶು ವಿಧೂಮೋಽಗ್ನಿರಿವೋತ್ಥಿತಃ ।
ಅರಜೇ ವಾಸಸೀ ಬಿಭ್ರನ್ಮಾಲ್ಯಂ ದಿವ್ಯಂ ಮಹಾಬಲಃ ॥

ಅನುವಾದ

ಅನಂತರ ಆ ಮಹಾಬಲಿ ಕಬಂಧನು ಕೂಡಲೇ ಚಿತೆಯಿಂದ ಎರಡು ನಿರ್ಮಲ ವಸ್ತ್ರ, ದಿವ್ಯಪುಷ್ಪಗಳ ಮಾಲೆ ಧರಿಸಿ, ಹೊಗೆಯಿಲ್ಲದ ಅಗ್ನಿಯಂತೆ ಎದ್ದು ನಿಂತುಕೊಂಡನು.॥4॥

ಮೂಲಮ್ - 5

ತತಶ್ಚಿತಾಯಾ ವೇಗೇನ ಭಾಸ್ವರೋ ವಿರಜಾಂಬರಃ ।
ಉತ್ಪಪಾತಾಶು ಸಂಹೃಷ್ಟಃ ಸರ್ವಪ್ರತ್ಯಂಗಭೂಷಣಃ ॥

ಮೂಲಮ್ - 6½

ವಿಮಾನೇ ಭಾಸ್ವರೇ ತಿಷ್ಠನ್ ಹಂಸಯುಕ್ತೇ ಯಶಸ್ಕರೇ ।
ಪ್ರಭಯಾ ಚ ಮಹಾತೇಜಾ ದಿಶೋ ದಶ ವಿರಾಜಯನ್ ॥
ಸೊಂತರಿಕ್ಷಗತೋ ವಾಕ್ಯಂ ಕಬಂಧೋ ರಾಮಬ್ರವೀತ್ ।

ಅನುವಾದ

ಮತ್ತೆ ವೇಗವಾಗಿ ಚಿತೆಯಿಂದ ಮೇಲಕ್ಕೆ ಎದ್ದು ಶೀಘ್ರವಾಗಿ ಒಂದು ತೇಜಸ್ವೀ ವಿಮಾನದಲ್ಲಿ ಕುಳಿತುಕೊಂಡನು. ನಿರ್ಮಲ ವಸ್ತ್ರಗಳಿಂದ ವಿಭೂಷಿತನಾದ ಅವನು ಬಹಳ ತೇಜಸ್ವಿಯಾಗಿ ಕಾಣುತ್ತಿದ್ದನು. ಅವನ ಮನಸ್ಸಿನಲ್ಲಿ ಹರ್ಷ ತುಂಬಿತ್ತು, ಶರೀರದಲ್ಲೆಲ್ಲ ದಿವ್ಯ ಆಭೂಷಣಗಳು ಶೋಭಿಸುತ್ತಿದ್ದವು. ಹಂಸಗಳನ್ನು ಹೂಡಿದ್ದ ಆ ಯಶಸ್ವೀ ವಿಮಾನದಲ್ಲಿ ಕುಳಿತಿರುವ ತೇಜಸ್ವೀ ಕಬಂಧನು ತನ್ನ ಪ್ರಭೆಯಿಂದ ಹತ್ತು ದಿಕ್ಕುಗಳನ್ನು ಬೆಳಗಿಸುತ್ತಾ, ಅಂತರಿಕ್ಷದಲ್ಲಿ ನಿಂತು ಶ್ರೀರಾಮನಲ್ಲಿ ಈ ಪ್ರಕಾರ ಹೇಳಿದನು.॥5-6½॥

ಮೂಲಮ್ - 7

ಶೃಣು ರಾಘವತತ್ತ್ವೇನ ಯಥಾ ಸೀತಾಮವಾಪ್ಸ್ಯಸಿ ॥

ಮೂಲಮ್ - 8

ರಾಮ ಷಡ್ಯುಕ್ತಯೋ ಲೋಕೇ ಯಾಭಿಃ ಸರ್ವಂ ವಿಮೃಶ್ಯತೇ ।
ಪರಿಮೃಷ್ಟೋ ದಶಾಂತೇನ ದಶಾಭಾಗೇನ ಸೇವ್ಯತೇ ॥

ಅನುವಾದ

ರಘುನಂದನ! ನೀನು ಸೀತೆಯನ್ನು ಹೇಗೆ ಪಡೆಯಬಲ್ಲೆ ಎಂಬುದನ್ನು ಸರಿಯಾಗಿ ತಿಳಿಸುತ್ತಿದ್ದೇನೆ, ಕೇಳು. ಶ್ರೀರಾಮ! ಲೋಕದಲ್ಲಿ ಆರು ಯುಕ್ತಿಗಳಿವೆ, ಅವುಗಳಿಂದ ರಾಜರು ಎಲ್ಲವನ್ನು ಪಡೆದುಕೊಳ್ಳುವರು. (ಅವು ಇಂತಿವೆ - ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ ಮತ್ತು ಸಮಾಶ್ರಯ) ದುರ್ದಶೆಯಿಂದ ಗ್ರಸ್ತನಾದ ಮನುಷ್ಯನು ಬೇರೆ ಯಾರೋ ದುರ್ದೆಶೆಗೊಳಗಾದ ಪುರುಷನಿಂದಲೇ ಸೇವೆ ಅಥವಾ ಸಹಾಯ ಪಡೆಯಬಲ್ಲನು. (ಇದು ನೀತಿಯಾಗಿದೆ.॥7-8॥

ಮೂಲಮ್ - 9

ದಶಾಭಾಗಗತೋ ಹೀನಸ್ತ್ವಂ ಹಿ ರಾಮ ಸಲಕ್ಷ್ಮಣಃ ।
ಯತ್ಕೃತೇ ವ್ಯಸನಂ ಪ್ರಾಪ್ತಂ ತ್ವಯಾ ದಾರಪ್ರಧರ್ಷಣಮ್ ॥

ಅನುವಾದ

ಶ್ರೀರಾಮ! ಲಕ್ಷ್ಮಣ ಸಹಿತ ನೀನು ಕೆಟ್ಟದೆಸೆಗೆ ತುತ್ತಾಗಿದ್ದಿಯೇ, ಆದ್ದರಿಂದ ನೀವು ರಾಜ್ಯದಿಂದ ವಂಚಿತರಾಗಿರುವಿರಿ. ಆ ಕೆಟ್ಟದೆಸೆಯಿಂದಲೇ ನಿನಗೆ ನಿನ್ನ ಭಾರ್ಯೆಯ ಅಪಹರಣದ ಮಹಾದುಃಖವು ಪ್ರಾಪ್ತವಾಗಿದೆ.॥9॥

ಮೂಲಮ್ - 10

ತದವಶ್ಯಂ ತ್ವಯಾ ಕಾರ್ಯಃ ಸ ಸುಹೃತ್ ಸುಹೃದಾಂ ವರ ।
ಅಕೃತ್ವಾ ನಹಿ ತೇಸಿದ್ಧಿಮಹಂ ಪಶ್ಯಾಮಿ ಚಿಂತಯನ್ ॥

ಅನುವಾದ

ಆದ್ದರಿಂದ ಸುಹೃದರಲ್ಲಿ ಶ್ರೇಷ್ಠ ರಘುನಂದನ! ನೀನು ಅವಶ್ಯವಾಗಿ ನಿನ್ನಂತಹ ದುರ್ದೆಶೆಯಲ್ಲಿ ಬಿದ್ದಿರುವ ಪುರುಷನನ್ನು ತನ್ನ ಸುಹೃದನನ್ನಾಗಿಸಿಕೋ. (ಹೀಗೆ ನೀನು ಸುಹೃದನನ್ನು ಆಶ್ರಯಿಸಿ ಸಮಾಶ್ರಯ ನೀತಿಯನ್ನು ತನ್ನದಾಗಿಸಿಕೋ.) ನಾನು ಬಹಳ ವಿಚಾರಮಾಡಿ ಹೀಗೆ ಮಾಡದೆ ನಿನಗೆ ಸಫಲತೆ ಸಿಗದು ಎಂದು ತಿಳಿದುಕೊಂಡಿರುವೆನು.॥10॥

ಮೂಲಮ್ - 11

ಶ್ರೂಯತಾಂ ರಾಮ ವಕ್ಷ್ಯಾಮಿ ಸುಗ್ರೀವೋ ನಾಮ ವಾನರಃ ।
ಭ್ರಾತ್ರಾ ನಿರಸ್ತಃ ಕ್ರುದ್ಧೇನ ವಾಲಿನಾ ಶಕ್ರಸೂನುನಾ ॥

ಅನುವಾದ

ಶ್ರೀರಾಮ! ಕೇಳು, ನಾನು ಪರಿಚಯಿಸುವ ಪುರುಷನ ಹೆಸರು ಸುಗ್ರೀವ ಎಂದಾಗಿದೆ. ಜಾತಿಯಲ್ಲಿ ವಾನರನಾಗಿದ್ದಾನೆ. ಅವನನ್ನು ಅವನ ಅಣ್ಣ ಇಂದ್ರಕುಮಾರ ವಾಲಿಯು ಸಿಟ್ಟುಗೊಂಡು ಮನೆಯಿಂದ ಹೊರಗೆ ಹಾಕಿದ್ದಾನೆ.॥11॥

ಮೂಲಮ್ - 12

ಋಷ್ಯಮೂಕೇ ಗಿರಿವರೇ ಪಂಪಾಪರ್ಯಂತಶೋಭಿತೇ ।
ನಿವಸತ್ಯಾತ್ಮವಾನ್ವೀರಶ್ಚತುರ್ಭಿಃ ಸಹ ವಾನರೈಃ ॥

ಅನುವಾದ

ಆ ಮನಸ್ವೀ ವೀರ ಸುಗ್ರೀವನು ಈಗ ನಾಲ್ಕು ಮಂದಿ ವಾನರರೊಂದಿಗೆ ಗಿರಿಶ್ರೇಷ್ಠ ಋಷ್ಯಮೂಕದಲ್ಲಿ ವಾಸಿಸುತ್ತಿದ್ದಾನೆ. ಆ ಪರ್ವತವು ಪಂಪಾ ಸರೋವರದವರೆಗೆ ಹರಡಿಕೊಂಡಿದೆ.॥12॥

ಮೂಲಮ್ - 13½

ವಾನರೇಂದ್ರೋ ಮಹಾವೀರ್ಯಸ್ತೇಜೋವಾನಮಿತಪ್ರಭಃ ।
ಸತ್ಯಸಂಧೋ ವಿನೀತಶ್ಚ ಧೃತಿಮಾನ್ಮತಿಮಾನ್ ಮಹಾನ್ ॥
ದಕ್ಷಃ ಪ್ರಗಲ್ಭೋ ದ್ಯುತಿಮಾನ್ ಮಹಾಬಲಪರಾಕ್ರಮಃ ।

ಅನುವಾದ

ಆ ವಾನರರ ರಾಜಾ ಮಹಾಪರಾಕ್ರಮಿ ಸುಗ್ರೀವನು ಅತ್ಯಂತ ತೇಜಸ್ವೀ, ಕಾಂತಿವುಳ್ಳವನು, ಸತ್ಯಪ್ರತಿಜ್ಞ, ವಿನಯಶೀಲ, ಧೈರ್ಯವಂತ, ಬುದ್ಧಿವಂತ, ಮಹಾಪುರುಷ, ಕಾರ್ಯದಕ್ಷ, ನಿರ್ಭೀತ, ದೀಪ್ತಿವಂತ, ಮಹಾಬಲ-ಪರಾಕ್ರಮದಿಂದ ಸಂಪನ್ನನಾಗಿದ್ದಾನೆ.॥13½॥

ಮೂಲಮ್ - 14

ಭ್ರಾತ್ರಾ ವಿವಿಸಿತೋ ವೀರ ರಾಜ್ಯಹೇತೋರ್ಮಹಾತ್ಮನಾ ॥

ಮೂಲಮ್ - 15

ಸ ತೇ ಸಹಾಯೋ ಮಿತ್ರಂ ಚ ಸೀತಾಯಾಃ ಪರಿಮಾರ್ಗಣೇ ।
ಭವಿಷ್ಯತಿ ಹಿ ತೇ ರಾಮ ಮಾ ಚ ಶೋಕೇ ಮನಃಕೃಥಾಃ ॥

ಅನುವಾದ

ವೀರರಾಮನೇ! ಮಹಾಮನಾ ಅವನ ಅಣ್ಣ ವಾಲಿಯು ಇಡೀ ರಾಜ್ಯವನ್ನು ತನ್ನ ಅಧಿಕಾರದಲ್ಲಿ ಪಡೆದುಕೊಳ್ಳಲು ಇವನನ್ನು ರಾಜ್ಯದಿಂದ ಹೊರ ಹಾಕಿದನು. ಆದ್ದರಿಂದ ಸೀತೆಯ ಅನ್ವೇಷಣೆಯಲ್ಲಿ ನಿನಗೆ ಸಹಾಯಕ ಮಿತ್ರನಾಗುವನು. ಅದಕ್ಕಾಗಿ ನೀನು ನಿನ್ನ ಮನಸ್ಸನ್ನು ಶೋಕದಲ್ಲಿ ಹಾಕದಿರು.॥14-15॥

ಮೂಲಮ್ - 16

ಭವಿತ್ಯವಂ ಹಿ ತಚ್ಚಾಪಿ ನ ತಚ್ಛಕ್ಯಮಿಹಾನ್ಯಥಾ ।
ಕರ್ತುಮಿಕ್ಷ್ವಾಕುಶಾರ್ದೂಲ ಕಾಲೋ ಹಿ ದುರತಿಕ್ರಮಃ ॥

ಅನುವಾದ

ಇಕ್ವಾಕುವಂಶೀ ವೀರರಲ್ಲಿ ಶ್ರೇಷ್ಠ ಶ್ರೀರಾಮಾ! ಆಗಬೇಕಾದುದು ಆಗಿಯೇ ತೀರುತ್ತದೆ, ಅದನ್ನು ಯಾರೂ ಬದಲಾಯಿಸಲಾರರು. ಕಾಲದ ವಿಧಾನ ಎಲ್ಲರಿಗೂ ದಾಟಲಶಕ್ಯವಾಗಿದೆ. (ಅದ್ದರಿಂದ ನಿನ್ನ ಮೇಲೆ ಬಂದೆರಗಿದ ಇದನ್ನು ಕಾಲ ಅಥವಾ ಪ್ರಾರಬ್ಧದ ವಿಧಾನವೆಂದು ತಿಳಿದು ನೀನು ಧೈರ್ಯವಹಿಸಬೇಕು..॥16॥

ಮೂಲಮ್ - 17

ಗಚ್ಛ ಶೀಘ್ರಮಿತೋ ವೀರ ಸುಗ್ರೀವಂ ತಂ ಮಹಾಬಲಮ್ ।
ವಯಸ್ಯಂ ತಂ ಕುರು ಕ್ಷಿಪ್ರಮಿತೋ ಗತ್ವಾದ್ಯ ರಾಘವ ॥

ಅನುವಾದ

ವೀರ ರಘುನಾಥನೇ! ನೀವು ಶೀಘ್ರವಾಗಿ ಇಲ್ಲಿಂದ ಮಹಾಬಲಿ ಸುಗ್ರೀವನ ಬಳಿಗೆ ಹೋಗಿರಿ. ಹೋಗಿ ಕೂಡಲೇ ಅವನನ್ನು ತಮ್ಮ ಮಿತ್ರನನ್ನಾಗಿಸಿ ಕೊಳ್ಳಿರಿ.॥17॥

ಮೂಲಮ್ - 18

ಅದ್ರೋಹಾಯ ಸಮಾಗಮ್ಯ ದೀಪ್ಯಮಾನೇ ವಿಭಾವಸೌ ।
ನ ಚ ತೇ ಸೋಽವಮಂತವ್ಯಃ ಸುಗ್ರೀವೋ ವಾನರಾಧಿಪಃ ॥

ಅನುವಾದ

ಪ್ರಜ್ವಲಿತ ಅಗ್ನಿಯನ್ನು ಸಾಕ್ಷಿಯಾಗಿಸಿ ಪರಸ್ಪರ ದ್ರೋಹಮಾಡದಿರುವುದಕ್ಕೆ ಮೈತ್ರಿಯನ್ನು ಸ್ಥಾಪಿಸಿರಿ. ಹೀಗೆ ಮಾಡಿದ ಬಳಿಕ ನೀವು ಎಂದಿಗೂ ಆ ವಾನರರಾಜ ಸುಗ್ರೀವನ ಅಪಮಾನ ಮಾಡಬಾರದು.॥18॥

ಮೂಲಮ್ - 19

ಕೃತಜ್ಞಃ ಕಾಮರೂಪೀ ಚ ಸಹಾಯಾರ್ಥೀ ಚ ವೀರ್ಯವಾನ್ ।
ಶಕ್ತೌ ಹ್ಯದ್ಯ ಯುವಾಂ ಕರ್ತುಂ ಕಾರ್ಯಂ ತಸ್ಯ ಚಿಕೀರ್ಷಿತಮ್ ॥

ಅನುವಾದ

ಅವನು ಇಚ್ಛಾರೂಪ ಧರಿಸುವ ಪರಾಕ್ರಮಿ ಮತ್ತು ಕೃತಜ್ಞನಾಗಿದ್ದಾನೆ. ಈಗ ಅವನು ಸ್ವತಃ ತನಗೆ ಒಬ್ಬ ಸಹಾಯಕನನ್ನು ಹುಡುಕುತ್ತಿರುವನು. ಅವನ ಅಭೀಷ್ಟ ಕಾರ್ಯವನ್ನು ಸಿದ್ಧಗೊಳಿಸಲು ನೀವಿಬ್ಬರೂ ಸಮರ್ಥರಾಗಿದ್ದೀರಿ.॥19॥

ಮೂಲಮ್ - 20

ಕೃತಾರ್ಥೋ ವಾಕೃತಾರ್ಥೋ ವಾ ತವ ಕೃತ್ಯಂ ಕರಿಷ್ಯತಿ ।
ಸ ಋಕ್ಷರಜಸಃ ಪುತಃ ಪಂಪಾಮಟತಿ ಶಂಕಿತಃ ॥

ಅನುವಾದ

ಸುಗ್ರೀವನ ಮನೋರಥ ಪೂರ್ಣವಾಗಲೀ ಅಥವಾ ಆಗದಿರಲಿ, ಅವನು ನಿಮ್ಮ ಕಾರ್ಯವನ್ನು ಅವಶ್ಯವಾಗಿ ಸಿದ್ಧಗೊಳಿಸುವನು. ಅವನು ಋಕ್ಷರಾಜನ ಕ್ಷೇತ್ರಜನಾಗಿದ್ದಾನೆ. ವಾಲಿಯಿಂದ ಶಂಕಿತನಾಗಿ ಪಂಪಾ ಸರೋವರದ ತಟದಲ್ಲಿ ಅಲೆಯುತ್ತಿದ್ದಾನೆ.॥20॥

ಮೂಲಮ್ - 21½

ಭಾಸ್ಕರಸ್ಯೌರಸಃ ಪುತ್ರೋ ವಾಲಿನಾ ಕೃತಕಿಲ್ಬಿಷಃ ।
ಸಂನಿಧಾಯಾಯುಧಂ ಕ್ಷಿಪ್ರಮೃಷ್ಯಮೂಕಾಲಯಂ ಕಪಿಮ್ ॥
ಕುರು ರಾಘವ ಸತ್ಯೇನ ವಯಸ್ಯಂ ವನಚಾರಿಣಮ್ ।

ಅನುವಾದ

ಅವನನ್ನು ಸೂರ್ಯನ ಔರಸಪುತ್ರನೆಂದು ಹೇಳುತ್ತಾರೆ. ಅವನು ವಾಲಿಯ ಅಪರಾಧ ಮಾಡಿದ್ದರಿಂದ ಅವನಿಗೆ ಹೆದರುತ್ತಾನೆ. ರಘುನಂದನ! ಅಗ್ನಿಯ ಬಳಿ ಆಯುಧವಿಟ್ಟು ಸತ್ಯದ ಮೇಲೆ ಆಣೆಮಾಡಿ ಋಷ್ಯಮೂಕ ನಿವಾಸಿ ವನಚರ ವಾನರ ಸುಗ್ರೀವನನ್ನು ತನ್ನ ಮಿತ್ರನನ್ನಾಗಿಸಿಕೋ.॥2½1॥

ಮೂಲಮ್ - 22½

ಸ ಹಿ ಸ್ಥಾನಾನಿ ಕಾರ್ತ್ಸ್ನೇನ ಸರ್ವಾಣಿ ಕಪಿಕುಂಜರಃ ॥
ನರಮಾಂಸಾಶಿನಾಂ ಲೋಕೇ ನೈಪುಣ್ಯಾದಧಿಗಚ್ಛತಿ ।

ಅನುವಾದ

ಕಪಿಶ್ರೇಷ್ಠ ಸುಗ್ರೀವನು ಜಗತ್ತಿನಲ್ಲಿ ನರಮಾಂಸ ಭಕ್ಷಿ ರಾಕ್ಷಸರ ಎಲ್ಲ ಸ್ಥಾನಗಳನ್ನು ಪೂರ್ಣರೂಪದಿಂದ ನಿಪುಣತೆ ಯಿಂದ ಬಲ್ಲವನಾಗಿದ್ದಾನೆ.॥22½॥

ಮೂಲಮ್ - 23½

ನ ತಸ್ಯಾವಿದಿತಂ ಲೋಕೇ ಕಿಂಚಿದಸ್ತಿ ಹಿ ರಾಘವ ॥
ಯಾವತ್ ಸೂರ್ಯಃ ಪ್ರತಪತಿ ಸಹಸ್ರಾಂಶುಃ ಪರಂತಪ ।

ಅನುವಾದ

ರಘುನಂದನ! ಶತ್ರುದಮನ! ಸಹಸ್ರಕಿರಣಗಳುಳ್ಳ ಸೂರ್ಯನು ಬೆಳಗುತ್ತಿರುವವರೆಗಿನ ಜಗತ್ತಿನಲ್ಲಿ ಸುಗ್ರೀವನಿಗೆ ತಿಳಿಯದಿರುವ ಯಾವುದೇ ಸ್ಥಾನ ಅಥವಾ ವಸ್ತು ಇರುವುದಿಲ್ಲ.॥23½॥

ಮೂಲಮ್ - 24½

ಸ ನದೀರ್ವಿಪುಲಾನ್ ಶೈಲಾನ್ ಗಿರಿದುಗಾಣಿ ಕಂದರಾನ್ ॥
ಅನ್ವೀಷ್ಯ ವಾನರೈಃ ಸಾರ್ಧಂ ಪತ್ನೀಂ ತೇಽಧಿಗಮಿಷ್ಯತಿ ।

ಅನುವಾದ

ಅವನು ವಾನರರೊಂದಿಗೆ ಇದ್ದು ಸಮಸ್ತ ನದಿಗಳನ್ನು, ದೊಡ್ಡ ದೊಡ್ಡ ಪರ್ವತಗಳನ್ನು, ಪರ್ವತಿಯ ದುರ್ಗಮ ಸ್ಥಾನಗಳನ್ನು, ಕಂದರಗಳನ್ನು ಹುಡುಕಿಸಿ ನಿನ್ನ ಪತ್ನಿಯ ಸುಳಿವನ್ನು ತಿಳಿಯುವನು.॥24½॥

ಮೂಲಮ್ - 25

ವಾನರಾಂಶ್ಚ ಮಹಾಕಾಯಾನ್ಪ್ರೇಷಯಿಷ್ಯತಿ ರಾಘವ ॥

ಮೂಲಮ್ - 26

ದಿಶೋ ವಿಚೇತುಂ ತಾಂ ಸೀತಾಂ ತ್ವದ್ವಿಯೋಗೇನ ಶೋಚತೀಮ್ ।
ಅನ್ವೇಷ್ಯತಿ ವರಾರೋಹಾಂ ಮೈಥಿಲೀಂ ರಾವಣಾಲಯೇ ॥

ಅನುವಾದ

ರಾವ! ನಿನ್ನ ವಿಯೋಗದಿಂದ ಶೋಕಿಸುತ್ತಿರುವ ಸೀತಾದೇವಿಯನ್ನು ಹುಡುಕಲು ಅವನು ಸಮಸ್ತ ದಿಕ್ಕುಗಳಿಗೆ ವಿಶಾಲಕಾಯ ವಾನರರನ್ನು ಕಳಿಸುವನು ಹಾಗೂ ರಾವಣನ ಮನೆಯಲ್ಲಿಯೂ ಕೂಡ ಸುಂದರಾಂಗಿ ಮೈಥಿಲಿಯನ್ನು ಹುಡುಕಿಸುವನು.॥25-26॥

ಮೂಲಮ್ - 27

ಸ ಮೇರುಶೃಂಗಾಗ್ರಗತಾಮನಿಂದಿತಾಂ
ಪ್ರವಿಶ್ಯ ಪಾತಾಲತಲೇಽಪಿ ವಾಶ್ರಿತಾಮ್ ।
ಪ್ಲವಂಗಮಾನಾಮೃಷಭಸ್ತವ ಪ್ರಿಯಾಂ
ನಿಹತ್ಯ ರಕ್ಷಾಂಸಿ ಪುನಃ ಪ್ರದಾಸ್ಯತಿ ॥

ಅನುವಾದ

ನಿನ್ನ ಪ್ರಿಯೆ ಸತೀಸಾದ್ವೀ ಸೀತೆಯನ್ನು ಮೇರುಶಿಖರದ ತುದಿಯಲ್ಲಿ ಇರಿಸಿದ್ದರೂ, ಪಾತಾಳದಲ್ಲಿ ಇರಿಸಿದ್ದರೂ, ವಾನರ ಶ್ರೇಷ್ಠ ಸುಗ್ರೀವನು ಸಮಸ್ತ ರಾಕ್ಷಸರನ್ನು ವಧಿಸಿ, ಆಕೆಯನ್ನು ಪುನಃ ನಿನ್ನ ಬಳಿಗೆ ತಂದೊಪ್ಪಿಸುವನು.॥27॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎಪ್ಪತ್ತೆರಡನೆಯ ಸರ್ಗ ಸಂಪೂರ್ಣವಾಯಿತು. ॥72॥