०७१ कबन्धेन स्ववृत्तान्तकथनम्

वाचनम्
ಭಾಗಸೂಚನಾ

ಕಬಂಧನ ಆತ್ಮಕಥೆ, ತನ್ನ ಶರೀರವನ್ನು ಸುಟ್ಟಬಳಿಕ ಸೀತೆಯ ವಿಷಯ ತಿಳಿಸುವುದಾಗಿ ಕಬಂಧನು ಆಶ್ವಾಸನೆಯನ್ನಿತ್ತದು

ಮೂಲಮ್ - 1

ಪುರಾ ರಾಮ ಮಹಾಬಾಹೋ ಮಹಾಬಲಪರಾಕ್ರಮಮ್ ।
ರೂಪಮಾಸೀನ್ಮಮಾಚಿಂತ್ಯಂ ತ್ರಿಷು ಲೋಕೇಷು ವಿಶ್ರುತಮ್ ॥

ಅನುವಾದ

ಮಹಾಬಾಹು ಶ್ರೀರಾಮನೇ! ಹಿಂದೆ ನನ್ನ ರೂಪವು ಮಹಾಬಲಪರಾಕ್ರಮದಿಂದ ಸಂಪನ್ನವಾಗಿದ್ದು, ಮೂರು ಲೋಕಗಳಲ್ಲಿಯೂ ವಿಖ್ಯಾತವಾಗಿತ್ತು.॥1॥

ಮೂಲಮ್ - 2½

ಯಥಾ ಸೂರ್ಯಸ್ಯ ಸೋಮಸ್ಯ ಶಕ್ರಸ್ಯ ಚ ಯಥಾ ವಪುಃ ।
ಸೋಽಹಂ ರೂಪಮಿದಂ ಕೃತ್ವಾ ಲೋಕವಿತ್ರಾಸನಂ ಮಹತ್ ॥
ಋಷೀನ್ವನಗತಾನ್ ರಾಮ ತ್ರಾಸಯಾಮಿ ತತಸ್ತತಃ ।

ಅನುವಾದ

ಸೂರ್ಯ-ಚಂದ್ರ-ಇಂದ್ರನಂತೆ ನನ್ನ ಶರೀರ ತೇಜಸ್ವಿಯಾಗಿತ್ತು ಇಷ್ಟಾದರೂ ನಾನು ಜನರನ್ನು ಹೆದರಿಸುತ್ತಿರುವ ಈ ಅತ್ಯಂತ ಭಯಂಕರ ರಾಕ್ಷಸ ರೂಪವನ್ನು ಧರಿಸಿ ಅಲ್ಲಿ-ಇಲ್ಲಿ ತಿರುಗಾಡುತ್ತಾ ವನದಲ್ಲಿ ಇರುವ ಋಷಿಗಳನ್ನು ಭಯಭೀತರನ್ನಾಗಿಸುತ್ತಿದ್ದೆ.॥2॥

ಮೂಲಮ್ - 3

ತತಃ ಸ್ಥೂಲಶಿರಾ ನಾಮ ಮಹರ್ಷಿಃ ಕೋಪಿತೋ ಮಯಾ ॥

ಮೂಲಮ್ - 4

ಸಚಿನ್ವನ್ವಿವಿಧಂ ವನ್ಯಂ ರೂಪೇಣಾನೇನ ಧರ್ಷಿತಃ ।
ತೇನಾಹಮುಕ್ತಃ ಪ್ರೇಕ್ಷ್ಯೈವಂ ಘೋರಶಾಪಾಭಿಧಾಯಿನಾ ॥

ಅನುವಾದ

ನನ್ನ ಈ ವರ್ತನೆಯಿಂದ ಒಂದು ದಿನ ನಾನು ಸ್ಥೂಲ ಶಿರಾ ಎಂಬ ಮಹರ್ಷಿಯನ್ನು ಸಿಟ್ಟಿಗೇಳಿಸಿದೆ. ಅವರು ನಾನಾ ಪ್ರಕಾರದ ಕಾಡಿನ ಫಲ-ಮೂಲಗಳನ್ನು ಸಂಗ್ರಹಿಸುತ್ತಿದ್ದರು, ಅಗಲೇ ನಾನು ಇದೇ ರಾಕ್ಷಸ ರೂಪದಿಂದ ಹೆದರಿಸಿದೆ. ಇಂತಹ ವಿಕಟರೂಪನೋಡಿ ಅವರು ನನಗೆ ಶಪಿಸುತ್ತಾ ಹೇಳಿದರು.॥3-4॥

ಮೂಲಮ್ - 5½

ಏತದೇವ ನೃಶಂಸಂ ತೇ ರೂಪಮಸ್ತು ವಿಗರ್ಹಿತಮ್ ।
ಸ ಮಯಾ ಯಾಚಿತಃ ಕ್ರುದ್ಧಃ ಶಾಪಸ್ಯಾಂತೋ ಭವೇದಿತಿ ॥
ಅಭಿಶಾಪಕೃತಸ್ಯೇತಿ ತೇನೇದಂ ಭಾಷಿತಂ ವಚಃ ।

ಅನುವಾದ

ದುರಾತ್ಮನೇ! ಇಂದಿನಿಂದ ಎಂದೆಂದಿಗೂ ನಿನಗೆ ಇದೇ ಕ್ರೂರ, ನಿಂದಿತರೂಪ ಇರಲಿ, ಇದನ್ನು ಕೇಳಿ ನಾನು ಕುಪಿತರಾದ ಮಹರ್ಷಿಯಲ್ಲಿ ಪ್ರಾರ್ಥಿಸಿದೆ - ಪೂಜ್ಯರೇ! ಈ ತಿರಸ್ಕಾರ ಜನಿತ ಶಾಪದ ಅಂತ್ಯ ಯಾವಾಗ ಆಗಬಹುದು? ಆಗ ಅವರು ಹೀಗೆ ಹೇಳಿದರು.॥5½॥

ಮೂಲಮ್ - 6

ಯದಾ ಛಿತ್ತ್ವಾ ಭುಜೌ ರಾಮಸ್ತ್ವಾಂ ದಹೇದ್ವಿಜನೇ ವನೇ ॥

ಮೂಲಮ್ - 7

ತದಾ ತ್ವಂ ಪ್ರಾಪ್ಸ್ಯಸೇ ರೂಪಂ ಸ್ವಮೇವ ವಿಪುಲಂ ಶುಭಮ್ ।
ಶ್ರಿಯಾ ವಿರಾಜಿತಂ ಪುತ್ರಂ ದನೋಸ್ತ್ವಂ ವಿದ್ಧಿ ಲಕ್ಷ್ಮಣ ॥

ಅನುವಾದ

ಶ್ರೀರಾಮ-ಲಕ್ಷ್ಮಣರು ನಿನ್ನ ಎರಡೂ ಭುಜಗಳನ್ನು ತುಂಡರಿಸಿ ನಿನ್ನನ್ನು ನಿರ್ಜನ ವನದಲ್ಲಿ ಸುಟ್ಟುಹಾಕಿದಾಗ ನೀನು ಪುನಃ ಅದೇ ಪರಮೋತ್ತಮ, ಸುಂದರ, ಶೋಭಾ ಸಂಪನ್ನ ರೂಪವು ಪ್ರಾಪ್ತವಾಗುವುದು. ಲಕ್ಷ್ಮಣ! ಈ ಪ್ರಕಾರ ನೀವು ನನ್ನನ್ನು ಒಬ್ಬ ದುರಾಚಾರಿ ದಾನವನೆಂದು ತಿಳಿಯಿರಿ.॥6-7॥

ಮೂಲಮ್ - 8

ಇಂದ್ರಕೋಪಾದಿದಂ ರೂಪಂ ಪ್ರಾಪ್ತಮೇವ ರಣಾಜಿರೇ ।
ಅಹಂ ಹಿ ತಪಸೋಗ್ರೇಣ ಪಿತಾಮಹಮತೋಷಯಮ್ ॥

ಮೂಲಮ್ - 9

ದೀರ್ಘಮಾಯುಃ ಸ ಮೇ ಪ್ರಾದಾತ್ತತೋ ಮಾಂ ವಿಭ್ರಮೋಽಸ್ಪೃಶತ್ ।
ದೀರ್ಘಮಾಯುರ್ಮಯಾ ಪ್ರಾಪ್ತಂ ಕಿಂ ಮೇ ಶಕ್ರಃ ಕರಿಷ್ಯತಿ ॥

ಅನುವಾದ

ನನ್ನ ಇಂತಹ ರೂಪವು ಸಮರಾಂಗಣದಲ್ಲಿ ಇಂದ್ರನ ಕೋಪದಿಂದ ಉಂಟಾಯಿತು. ನಾನು ಹಿಂದೆ ರಾಕ್ಷಸನಾದ ಬಳಿಕ ಘೋರ ತಪಸ್ಸು ಮಾಡಿ ಪಿತಾಮಹ ಬ್ರಹ್ಮದೇವರನ್ನು ಸಂತುಷ್ಟ ಗೊಳಿಸಿದೆ. ದೀರ್ಜೀವಿಯಾಗುವ ವರವನ್ನು ಪಡೆದೆ. ಇದರಿಂದ ನನ್ನ ಬುದ್ಧಿಯಲ್ಲಿ-ನನಗಾದರೋ ದೀರ್ಕಾಲದ ಆಯುಸ್ಸು ದೊರಕಿದೆ, ಮತ್ತೆ ಇಂದ್ರನು ನನಗೇನು ಮಾಡಬಲ್ಲನು? ಎಂಬ ಭ್ರಮೆ ಅಥವಾ ಅಹಂಕಾರ ಉಂಟಾಯಿತು.॥8-9॥

ಮೂಲಮ್ - 10½

ಇತ್ಯೇವಂ ಬುದ್ಧಿಮಾಸ್ಥಾಯ ರಣೇಶಕ್ರಮಧರ್ಷಯಮ್ ।
ತಸ್ಯ ಬಾಹುಪ್ರಮುಕ್ತೇನ ವಜ್ರೇಣ ಶತಪರ್ವಣಾ ॥
ಸಕ್ಥಿನೀ ಚೈವ ಮೂರ್ಧಾ ಚ ಶರೀರೇ ಸಂಪ್ರವೇಶಿತಮ್ ।

ಅನುವಾದ

ಇಂತಹ ವಿಚಾರವನ್ನು ಆಶ್ರಯಿಸಿ ಒಂದು ದಿನ ನಾನು ದೇವೇಂದ್ರನ ಮೇಲೆ ಆಕ್ರಮಣ ಮಾಡಿದೆ. ಆಗ ಇಂದ್ರನು ನನ್ನ ಮೇಲೆ ನೂರು ಅರೆಗಳುಳ್ಳ ವಜ್ರದಿಂದ ಪ್ರಹಾರ ಮಾಡಿದನು. ಅವನು ಬಿಟ್ಟಿರುವ ವಜ್ರದಿಂದ ನನ್ನ ತೊಡೆ ಮತ್ತು ಮಸ್ತಕ ನನ್ನ ಶರೀರದೊಳಗೆ ಸೇರಿಕೊಂಡಿತು.॥10½॥

ಮೂಲಮ್ - 11½

ಸ ಮಯಾ ಯಾಚ್ಯಮಾನಃ ಸನ್ನಾನಯದ್ಯಮಸಾದನಮ್ ॥
ಪಿತಾಮಹವಚಃ ಸತ್ಯಂ ತದಸ್ತ್ವಿತಿ ಮಮಾಬ್ರವೀತ್ ।

ಅನುವಾದ

ನಾನು ಬಹಳ ಪ್ರಾರ್ಥಿಸಿದ್ದರಿಂದ ಅವನು ನನ್ನನ್ನು ಯಮ ಲೋಕಕ್ಕೆ ಕಳಿಸಲಿಲ್ಲ. ಮತ್ತು ಹೇಳಿದನು - ಪಿತಾಮಹ ಬ್ರಹ್ಮದೇವರು ನಿನಗೆ ದೀರ್ಘ ಜೀವಿಯಾಗಲು ಕೊಟ್ಟ ವರ ಸತ್ಯವಾಗಲಿ.॥11½॥

ಮೂಲಮ್ - 12½

ಅನಾಹಾರಃ ಕಥಂ ಶಕ್ತೋ ಭಗ್ನಸಕ್ಥಿಶಿರೋಮುಖಃ ॥
ವಜ್ರೇಣಾಭಿಹತಃ ಕಾಲಂ ಸುದೀರ್ಘಮಪಿ ಜೀವಿತುಮ್ ।

ಅನುವಾದ

ಆಗ ನಾನು ಕೇಳಿದೆ - ದೇವರಾಜನೇ! ನೀನು ನಿನ್ನ ವಜ್ರದಿಂದ ನನ್ನ ತೊಡೆ, ಮಸ್ತಕ, ಮುಖ ಎಲ್ಲವನ್ನು ಭಗ್ನಗೊಳಿಸಿದೆ. ಈಗ ನಾನು ಆಹಾರವನ್ನು ಹೇಗೆ ಗ್ರಹಣ ಮಾಡಲಿ? ನಿರಾಹಾರಿಯಾಗಿ ದೀರ್ಘ ಕಾಲದವರೆಗೆ ಹೇಗೆ ಬದುಕಿರಲಿ.॥12½॥

ಮೂಲಮ್ - 13½

ಸಏವಮುಕ್ತಃ ಶಕ್ರೋ ಮೇ ಬಾಹೂ ಯೋಜನಮಾಯತೌ ॥
ತದಾ ಚಾಸ್ಯಂ ಚ ಮೇ ಕುಕ್ಷೌ ತೀಕ್ಷ್ಣದಂಷ್ಟ್ರಮಕಲ್ಪಯತ್ ।

ಅನುವಾದ

ನಾನು ಹೀಗೆ ಹೇಳಿದಾಗ ಇಂದ್ರನು ನನ್ನ ಭುಜಗಳನ್ನು ಒಂದೊಂದು ಯೋಜನ ಉದ್ದವಾಗಿಸಿದನು. ಹಾಗೂ ಕೂಡಲೇ ನನ್ನ ಹೊಟ್ಟೆಯಲ್ಲಿ ತೀಕ್ಷ್ಣ ಕೊರೆದಾಡಿಗಳುಳ್ಳ ಒಂದು ಮುಖವನ್ನು ಮಾಡಿದನು.॥13½॥

ಮೂಲಮ್ - 14½

ಸೋಽಹಂ ಭುಜಾಭ್ಯಾಂ ದೀರ್ಘಾಭ್ಯಾಂ ಸಂಕ್ಷಿಷ್ಯಾಸ್ಮಿನ್ವನೇಚರಾನ್ ॥
ಸಿಂಹದ್ವಿಪಿಮೃಗವ್ಯಾಘ್ರಾನ್ ಭಕ್ಷಯಾಮಿ ಸಮಂತತಃ ।

ಅನುವಾದ

ಈ ಪ್ರಕಾರ ನಾನು ವಿಶಾಲ ಭುಜಗಳಿಂದ ಕಾಡಿನಲ್ಲಿರುವ ಸಿಂಹ, ಜಿಂಕೆ, ಚಿರತೆ, ಹುಲಿ ಮುಂತಾದ ಪ್ರಾಣಿಗಳನ್ನು ಎಲ್ಲೆಡೆಗಳಿಂದ ಬಾಚಿಕೊಂಡು ತಿನ್ನುತ್ತಿದ್ದೆ.॥14½॥

ಮೂಲಮ್ - 15½

ಸ ತು ಮಾಮಬ್ರವೀದಿಂದ್ರೋ ಯದಾ ರಾಮಃ ಸಲಕ್ಷ್ಮಣಃ ॥
ಛೇತ್ಸ್ಯತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯಸಿ ।

ಅನುವಾದ

ಲಕ್ಷ್ಮಣ ಸಹಿತ ಶ್ರೀರಾಮನು ನಿನ್ನ ಭುಜಗಳನ್ನು ಕತ್ತರಿಸಿದಾಗ ನೀನು ಸ್ವರ್ಗಕ್ಕೆ ಹೋಗುವೆ ಎಂದು ಇಂದ್ರನು ಹೇಳಿದ್ದನು.॥15½॥

ಮೂಲಮ್ - 16½

ಅನೇನ ವಪುಷಾ ತಾತ ವನೇಽಸ್ಮಿನ್ರಾಜಸತ್ತಮ ॥
ಯದ್ಯತ್ಪಶ್ಯಾಮಿ ಸರ್ವಸ್ಯ ಗ್ರಹಣಂ ಸಾಧು ರೋಚಯೇ ।

ಅನುವಾದ

ಅಯ್ಯಾ! ರಾಜಶಿರೋಮಣಿಯೇ! ಈ ಶರೀರದಿಂದ ಈ ವನದೊಳಗೆ ನಾನು ಯಾವ - ಯಾವ ವಸ್ತುಗಳನ್ನು ನೋಡುತ್ತೇನೆಯೋ ಅದೆಲ್ಲವನ್ನು ಗ್ರಹಿಸುವುದು ನನಗೆ ಒಳ್ಳೆದೆನಿಸುತ್ತದೆ.॥16½॥

ಮೂಲಮ್ - 17½

ಅವಶ್ಯಂ ಗ್ರಹಣಂ ರಾಮೋ ಮನ್ಯೇಽಹಂ ಸಮುಪೈಷ್ಯತಿ ॥
ಇಮಾಂ ಬುದ್ಧಿಂ ಪುರಸ್ಕೃತ್ಯ ದೇಹನ್ಯಾಸಕೃತಶ್ರಮಃ ।

ಅನುವಾದ

ಇಂದ್ರ ಮತ್ತು ಮುನಿಯು ಹೇಳಿದಂತೆ ಒಂದಲ್ಲ, ಒಂದು ದಿನ ಶ್ರೀರಾಮನು ನನ್ನ ಹಿಡಿತದಲ್ಲಿ ಸಿಗಬಹುದು ಎಂಬ ವಿಶ್ವಾಸ ನನಗಿತ್ತು. ಇದೇ ವಿಚಾರದಿಂದ ನಾನು ಈ ಶರೀರವನ್ನು ತ್ಯಜಿಸಲು ಪ್ರಯತ್ನಶೀಲನಾಗಿದ್ದೆ.॥17½॥

ಮೂಲಮ್ - 18½

ಸ ತ್ವಂ ರಾಮೋಽಸಿ ಭದ್ರಂ ತೇ ನಾಹಮನ್ಯೇನ ರಾಘವ ॥
ಶಕ್ಯೋ ಹಂತುಂ ಯಥಾ ತತ್ತ್ವಮೇವಮುಕ್ತಂ ಮಹರ್ಷಿಣಾ ।

ಅನುವಾದ

ರಘುನಂದನ! ಅವಶ್ಯವಾಗಿ ನೀನೇ ರಾಮನಾಗಿರುವೆ. ನಿನಗೆ ಮಂಗಳವಾಗಲಿ, ನಾನು ನಿನ್ನನ್ನಲ್ಲದೆ ಬೇರೆ ಯಾರಿಂದಲೂ ಸಾಯಲು ಸಾಧ್ಯವಿರಲಿಲ್ಲ. ಈ ಮಾತನ್ನು ಋಷಿಗಳು ಸರಿಯಾಗಿ ಹೇಳಿದ್ದರು.॥18½॥

ಮೂಲಮ್ - 19½

ಅಹಂ ಹಿ ಮತಿಸಾಚಿವ್ಯಂ ಕರಿಷ್ಯಾಮಿ ನರರ್ಷಭ ॥
ಮಿತ್ರಂ ಚೈವೋಪದೇಕ್ಷ್ಯಾಮಿ ಯುವಾಭ್ಯಾಂ ಸಂಸ್ಕೃತೋಽಗ್ನಿನಾ ।

ಅನುವಾದ

ನರಶ್ರೇಷ್ಠನೇ! ನೀವಿಬ್ಬರೂ ಅಗ್ನಿಯಿಂದ ನನ್ನನ್ನು ಸುಟ್ಟುಬಿಟ್ಟಾಗ ನಾನು ನಿಮಗೆ ಬೌದ್ಧಿಕ ಸಹಾಯ ಮಾಡುವೆನು. ನಿಮ್ಮಬ್ಬರಿಗೆ ಓರ್ವ ಒಳ್ಳೆಯ ಮಿತ್ರನ ಇರವನ್ನು ತಿಳಿಸುವೆನು.॥19½॥

ಮೂಲಮ್ - 20½

ಏವಮುಕ್ತಸ್ತು ಧರ್ಮಾತ್ಮಾ ದನುನಾ ತೇನ ರಾಘವಃ ॥
ಇದಂ ಜಗಾದ ವಚನಂ ಲಕ್ಷ್ಮಣಸ್ಯ ಚ ಪಶ್ಯತಃ ।

ಅನುವಾದ

ಆ ದಾನವನು ಹೀಗೆ ಹೇಳಿದಾಗ ಧರ್ಮಾತ್ಮಾ ಶ್ರೀರಾಮಚಂದ್ರನು ಲಕ್ಷ್ಮಣನ ಮುಂದೆ ಹೀಗೆ ನುಡಿದನು.॥20½॥

ಮೂಲಮ್ - 21

ರಾವಣೇನ ಹೃತಾ ಭಾರ್ಯಾ ಮಮ ಸೀತಾ ಯಶಸ್ವಿನೀ ॥

ಮೂಲಮ್ - 22

ನಿಷ್ಕ್ರಾಂತಸ್ಯ ಜನಸ್ಥಾನಾತ್ಸಹ ಭ್ರಾತ್ರಾ ಯಥಾಸುಖಮ್ ।
ನಾಮಮಾತ್ರಂ ತು ಜಾನಾಮಿ ನ ರೂಪಂತಸ್ಯ ರಕ್ಷಸಃ ॥

ಅನುವಾದ

ಕಬಂಧನೇ! ನನ್ನ ಯಶಸ್ವಿನೀ ಭಾರ್ಯೆ ಸೀತೆಯನ್ನು ರಾವಣನು ಕದ್ದುಕೊಂಡು ಹೋಗಿರುವನು. ಆಗ ನಾನು ನನ್ನ ತಮ್ಮ ಲಕ್ಷ್ಮಣನೊಂದಿಗೆ ಜನಸ್ಥಾನದಿಂದ ಹೊರಗೆ ಹೋಗಿದ್ದೆನು. ನಾನು ಆ ರಾಕ್ಷಸನ ಹೆಸರು ಮಾತ್ರ ತಿಳಿದಿದ್ದೇನೆ. ಅವನ ಬೇರೆ ಯಾವ ಪರಿಚಯವೂ ಇಲ್ಲ.॥21-22॥

ಮೂಲಮ್ - 23½

ನಿವಾಸಂ ವಾ ಪ್ರಭಾವಂ ವಾ ವಯಂ ತಸ್ಯ ನ ವಿದ್ಮಹೇ ।
ಶೋಕಾರ್ತಾನಾಮನಾಥಾನಾಮೇವಂ ವಿಪರಿಧಾವತಾಮ್ ॥
ಕಾರುಣ್ಯಂ ಸದೃಶಂ ಕರ್ತುಮುಪಕಾರೇ ಚ ವರ್ತತಾಮ್ ।

ಅನುವಾದ

ಅವನು ಎಲ್ಲಿ ಇರುತ್ತಾನೆ, ಅವನ ಪ್ರಭಾವ ಎಂತಹದು? ಇದ್ಯಾವುದೂ ನಮಗೆ ತಿಳಿಯದು. ಈಗ ಸೀತೆಯ ಶೋಕ ನಮಗೆ ತುಂಬಾ ಪೀಡಿಸುತ್ತಿದೆ. ನಾವು ಅಸಹಾಯಕರಾಗಿ ಈ ರೀತಿ ಎಲ್ಲೆಡೆ ಓಡುತ್ತಾ ಇರುತ್ತೇವೆ. ನೀನು ನಮ್ಮ ಮೇಲೆ ಕರುಣೆ ತೋರಿ ಈ ವಿಷಯದಲ್ಲಿ ನಮಗೆ ಏನಾದೂ ಉಪಕಾರ ಮಾಡು.॥23½॥

ಮೂಲಮ್ - 24½

ಕಾಷ್ಠಾನ್ಯಾನೀಯ ಭಗ್ನಾನಿ ಕಾಲೇ ಶುಷ್ಕಾಣಿ ಕುಂಜರೈಃ ॥
ಧಕ್ಷ್ಯಾಮಸ್ತ್ವಾಂ ವಯಂ ವೀರ ಶ್ವಭ್ರೇ ಮಹತಿ ಕಲ್ಪಿತೇ ।

ಅನುವಾದ

ವೀರನೇ! ಮತ್ತೆ ನಾವು ಆನೆಗಳು ಮುರಿದು ಹಾಕಿದ ಒಣ ಕಟ್ಟಿಗೆ ತಂದು ನಾವೇ ಒಂದು ದೊಡ್ಡ ಹೊಂಡ ಅಗೆದು ಅದರಲ್ಲಿ ನಿನ್ನ ಶರೀರವನ್ನು ಇಟ್ಟು ಸುಡುವೆವು.॥24½॥

ಮೂಲಮ್ - 25½

ಸ ತ್ವಂ ಸೀತಾ ಸಮಾಚಕ್ಷ್ವ ಯೇನ ವಾ ಯತ್ರ ವಾಹೃತಾ ॥
ಕುರು ಕಲ್ಯಾಣಮತ್ಯರ್ಥಂ ಯದಿ ಜಾನಾಸಿ ತತ್ತ್ವತಃ ।

ಅನುವಾದ

ಆದ್ದರಿಂದ ಈಗ ನೀನು ನಮಗೆ ಸೀತೆಯು ಎಲ್ಲಿರುವಳೆಂದು ತಿಳಿಸು. ಆಕೆಯನ್ನು ಯಾರು ಕದ್ದುಕೊಂಡು ಹೋದರು? ನೀನು ತಿಳಿದಂತೆ ಸರಿಯಾಗಿ ಸೀತೆಯ ಸಮಾಚಾರ ತಿಳಿಸಿ ನಮಗೆ ಅತ್ಯಂತ ಶ್ರೇಯಸ್ಸನ್ನುಂಟು ಮಾಡು.॥25½॥

ಮೂಲಮ್ - 26½

ಏವಮುಕ್ತಸ್ತು ರಾಮೇಣ ವಾಕ್ಯಂ ದನುರನುತ್ತಮಮ್ ॥
ಪ್ರೋವಾಚ ಕುಶಲೋ ವಕ್ತುಂ ವಕ್ತಾರಮಪಿ ರಾಘವಮ್ ।

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಮಾತುಕತೆಯಲ್ಲಿ ಕುಶಲನಾದ ಆ ದಾನವನು ಪ್ರವಚನಪಟು ರಘುನಾಥನಲ್ಲಿ ಈ ಪರಮೋತ್ತಮ ಮಾತನ್ನು ಹೇಳಿದನು.॥26½॥

ಮೂಲಮ್ - 27

ದಿವ್ಯಮಸ್ತಿ ನ ಮೇ ಜ್ಞಾನಂ ನಾಭಿಜಾನಾಮಿ ಮೈಥಿಲೀಮ್ ॥

ಮೂಲಮ್ - 28

ಯಸ್ತಾಂ ವಕ್ಷತಿ ತಂ ವಕ್ಷ್ಯೇ ದಗ್ಧಃ ಸ್ವಂ ರೂಪಮಾಸ್ಥಿತಃ ।
ಯೋಭಿಜಾನಾತಿತದ್ರಕ್ಷಸ್ತದ್ವಕ್ಷ್ಯೇ ರಾಮ ತತ್ಪರಮ್ ॥

ಅನುವಾದ

ಶ್ರೀರಾಮ! ಈಗ ನನಗೆ ದಿವ್ಯಜ್ಞಾನವಿಲ್ಲ, ಆದ್ದರಿಂದ ಮೈಥಿಲಿಯ ಕುರಿತು ನಾನೂ ತಿಳಿದಿಲ್ಲ. ನನ್ನ ಈ ಶರೀರವು ಸುಟ್ಟು ಹೋದಾಗ ನಾನು ನನ್ನ ಹಿಂದಿನ ಸ್ವರೂಪವನ್ನು ಪಡೆದು, ಸೀತೆಯ ವಿಷಯದಲ್ಲಿ ನಿನಗೆ ಏನಾದರೂ ಹೇಳಬಲ್ಲೆ ಹಾಗೂ ಆ ರಾಕ್ಷಸೋತ್ತಮನನ್ನೂ ತಿಳಿದಂತಹ ಓರ್ವ ಪುರುಷನ ಪರಿಚಯ ಹೇಳುವೆನು.॥27-28॥

ಮೂಲಮ್ - 29

ಅದಗ್ಧಸ್ಯ ಹಿ ವಿಜ್ಞಾತುಂ ಶಕ್ತಿರಸ್ತಿ ನ ಮೇ ಪ್ರಭೋ ।
ರಾಕ್ಷಸಂ ತಂ ಮಹಾವೀರ್ಯಂ ಸೀತಾ ಯೇನ ಹೃತಾ ತವ ॥

ಅನುವಾದ

ಪ್ರಭೋ! ನನ್ನ ಈ ಶರೀರದ ದಹನವಾಗುವವರೆಗೆ ನಿನ್ನ ಸೀತೆಯನ್ನು ಅಪಹರಿಸಿರುವ ಆ ಮಹಾಪರಾಕ್ರಮಿ ರಾಕ್ಷಸನು ಯಾರು ಎಂಬುದನ್ನು ತಿಳಿಯುವ ಶಕ್ತಿಯು ನನ್ನನ್ನಲ್ಲಿ ಬರಲಾರದು.॥29॥

ಮೂಲಮ್ - 30

ವಿಜ್ಞಾನಂ ಹಿ ಮಮ ಭ್ರಷ್ಟಂ ಶಾಪದೋಷೇನ ರಾಘವ ।
ಸ್ವಕೃತೇನ ಮಹಾ ಪ್ರಾಪ್ತಂ ರೂಪಂ ಲೋಕವಿಗರ್ಹಿತಮ್ ॥

ಅನುವಾದ

ರಘುನಂದನ! ಶಾಪದೋಷದಿಂದಾಗಿ ನನ್ನ ಮಹಾವಿಜ್ಞಾನ ನಾಶವಾಗಿದೆ. ನನ್ನ ಕುಕತ್ಯದಿಂದಲೇ ನನಗೆ ಈ ಲೋಕನಿಂದಿತ ರೂಪ ಪ್ರಾಪ್ತವಾಗಿದೆ.॥30॥

ಮೂಲಮ್ - 31

ಕಿಂ ತು ಯಾವನ್ನ ಯಾತ್ಯಸ್ತಂ ಸವಿತಾ ಶ್ರಾಂತವಾಹನಃ ।
ತಾವನ್ಮಾಮವಟೇ ಕ್ಷಿಪ್ತ್ವಾ ದಹ ರಾಮ ಯಥಾವಿಧಿ ॥

ಅನುವಾದ

ಆದರೆ ಶ್ರೀರಾಮಾ! ಸೂರ್ಯನು ಅಸ್ತಾಚಲಕ್ಕೆ ಹೋಗುವ ಮೊದಲೇ ನನ್ನನ್ನು ಹೊಂಡದಲ್ಲಿ ಹಾಕಿ ಶಾಸ್ತ್ರೀಯ ವಿಧಿಯಿಂದ ನನ್ನ ದಹನ ಸಂಸ್ಕಾರ ಮಾಡಿಬಿಡು.॥31॥

ಮೂಲಮ್ - 32

ದಗ್ಧಸ್ತ್ವಯಾಹಮವಟೇ ನ್ಯಾಯೇನ ರಘುನಂದನ ।
ವಕ್ಷ್ಯಾಮಿ ತಂ ಮಹಾವೀರ ಯಸ್ತಂ ಜ್ಞಾಸ್ಯತಿ ರಾಕ್ಷಸಮ್ ॥

ಅನುವಾದ

ಮಹಾವೀರ ರಘುನಂದನ! ವಿಧಿವತ್ತಾಗಿ ನಿನ್ನಿಂದ ನನ್ನ ಶರೀರದ ದಹನವಾದಾಗ ಆ ರಾಕ್ಷಸನನ್ನು ಬಲ್ಲಂತಹ ಒಬ್ಬ ಮಹಾಪುರುಷನ ಪರಿಚಯ ನಿನಗೆ ಹೇಳುವೆನು.॥32॥

ಮೂಲಮ್ - 33

ತೇನ ಸಖ್ಯಂ ಚ ಕರ್ತವ್ಯಂ ನ್ಯಾಯ್ಯವೃತ್ತೇನ ರಾಘವ ।
ಕಲ್ಪಯಿಷ್ಯತಿ ತೇ ವೀರ ಸಾಹಾಯ್ಯಂ ಲಘುವಿಕ್ರಮ ॥

ಅನುವಾದ

ಶೀಘ್ರವಾಗಿ ಪರಾಕ್ರಮ ಪ್ರಕಟಿಸುವ ವೀರ ರಘುನಾಥನೇ! ನ್ಯಾಯೋಚಿತ ಆಚಾರವುಳ್ಳ ಆ ಮಹಾಪುರುಷನೊಂದಿಗೆ ನೀನು ಮಿತ್ರತೆಯನ್ನು ಮಾಡಿಕೊಳ್ಳಬೇಕು. ಅವನು ನಿನಗೆ ಸಹಾಯ ಮಾಡುವನು.॥33॥

ಮೂಲಮ್ - 34

ನಹಿ ತಸ್ಯಾಸ್ತ್ಯವಿಜ್ಞಾತಂ ತ್ರಿಷು ಲೋಕೇಷು ರಾಘವ ।
ಸರ್ವಾನ್ಪರಿವೃತೋ ಲೋಕಾನ್ ಪುರಾ ವೈ ಕಾರಣಾಂತರೇ ॥

ಅನುವಾದ

ರಘುನಂದನ! ಅವನಿಗೆ ಮೂರು ಲೋಕಗಳಲ್ಲಿ ತಿಳಿಯದಿರುವುದು ಯಾವುದೂ ಇಲ್ಲ; ಏಕೆಂದರೆ ಯಾವುದೋ ಕಾರಣದಿಂದ ಅವನು ಮೊದಲು ಎಲ್ಲ ಲೋಕಗಳಲ್ಲಿ ಸುತ್ತಾಡಿರುನು.॥34॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎಪ್ಪತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥71॥