वाचनम्
ಭಾಗಸೂಚನಾ
ಶ್ರೀರಾಮ-ಲಕ್ಷ್ಮಣರು ಪರಸ್ಪರ ವಿಚಾರಮಾಡಿ ಕಬಂಧನ ಎರಡೂ ಭುಜಗಳನ್ನು ಕತ್ತರಿಸಿಬಿಡುವುದು, ಕಬಂಧನು ಅವರನ್ನು ಸ್ವಾಗತಿಸಿದುದು
ಮೂಲಮ್
(ಶ್ಲೋಕ - 1)
ತೌ ತು ತತ್ರ ಸ್ಥಿತೌ ದೃಷ್ಟ್ವಾ ಭ್ರಾತರೌ ರಾಮಲಕ್ಷ್ಮಣೌ ।
ಬಾಹುಪಾಶಪರಿಕ್ಷಿಪ್ತೌ ಕಬಂಧೋ ವಾಕ್ಯಮಬ್ರವೀತ್ ॥
ಅನುವಾದ
ತನ್ನ ಬಾಹುಪಾಶದಲ್ಲಿ ಸಿಲುಕಿ ಅಲ್ಲಿ ನಿಂತಿರುವ ಶ್ರೀರಾಮ-ಲಕ್ಷ್ಮಣರ ಕಡೆಗೆ ನೋಡಿ ಕಬಂಧನು ಹೇಳಿದನ.॥1॥
ಮೂಲಮ್ - 2
ತಿಷ್ಠತಃ ಕಿಂ ನು ಮಾಂ ದೃಷ್ಟ್ವಾ ಕ್ಷುಧಾರ್ತಂ ಕ್ಷತ್ರಿಯರ್ಷಭೌ ।
ಆಹಾರಾರ್ಥಂ ತು ಸಂದಿಷ್ಟೌ ದೈವೇನ ಹತಚೇತನೌ ॥
ಅನುವಾದ
ಕ್ಷತ್ರಿಯಶ್ರೇಷ್ಠ ರಾಜಕುಮಾರರೇ! ಹಸಿವಿನಿಂದ ಪೀಡಿತನಾದ ನನ್ನನ್ನು ನೋಡಿಯೂ ಏಕೆ ನಿಂತಿರುವಿರಿ? (ನನ್ನ ಬಾಯೊಳಗೆ ಬನ್ನಿರಿ) ಏಕೆಂದರೆ ದೈವವೇ ನನ್ನ ಭೋಜನಕ್ಕಾಗಿ ನಿಮ್ಮನ್ನು ಕಳಿಸಿಕೊಟ್ಟಿದೆ. ಆದ್ದರಿಂದ ನಿಮ್ಮಿಬ್ಬರ ಬುದ್ಧಿ ನಷ್ಟವಾಗಿದೆ.॥2॥
ಮೂಲಮ್ - 3
ತಚ್ಛ್ರುತ್ವಾ ಲಕ್ಷ್ಮಣೋ ವಾಕ್ಯಂ ಪ್ರಾಪ್ತಕಾಲಂ ಹಿತಂ ತದಾ ।
ಉವಾಚಾರ್ತಿಸಮಾಪನ್ನೋ ವಿಕ್ರಮೇ ಕೃತನಿಶ್ಚಯಃ ॥
ಅನುವಾದ
ಇದನ್ನು ಕೇಳಿ ಖೇದಗೊಂಡ ಲಕ್ಷ್ಮಣನು ಆಗ ಪರಾಕ್ರಮವನ್ನೇ ನಿಶ್ಚಯಿಸಿ, ಸಮಯೋಚಿತ ಈ ಹಿತಕರ ಮಾತನ್ನು ಹೇಳಿದನು .॥3॥
ಮೂಲಮ್ - 4
ತ್ವಾಂ ಚ ಮಾಂ ಚ ಪುರಾ ತೂರ್ಣಮಾದತ್ತೇ ರಾಕ್ಷಸಾಧಮಃ ।
ತಸ್ಮಾದಸಿಭ್ಯಾಮಸ್ಯಾಶು ಬಾಹೂ ಛಿಂದಾವಹೈ ಗುರೂ ॥
ಅನುವಾದ
ಅಣ್ಣಾ! ಈ ನೀಚ ರಾಕ್ಷಸನು ನನ್ನನ್ನು ಮತ್ತು ನಿನ್ನನ್ನು ಬಾಯೊಳಗೆ ಹಾಕಿಕೊಳ್ಳುವ ಮೊದಲೇ ನಾವು ನಮ್ಮ ಖಡ್ಗಗಳಿಂದ ಇವನ ಉದ್ದುದ್ದವಾದ ಬಾಹುಗಳನ್ನು ಬೇಗನೇ ಕತ್ತರಿಸಿ ಹಾಕುವಾ.॥4॥
ಮೂಲಮ್ - 5
ಭೀಷಣೋಽಯಂ ಮಹಾಕಾಯೋ ರಾಕ್ಷಸೋ ಭುಜವಿಕ್ರಮಃ ।
ಲೋಕಂ ಹ್ಯತಿಜಿತಂ ಕೃತ್ವಾ ಹ್ಯಾವಾಂ ಹಂತುಮಿಹೇಚ್ಛತಿ ॥
ಅನುವಾದ
ಈ ಮಹಾಕಾಯ ರಾಕ್ಷಸನು ಬಹಳ ಭೀಷಣನಾಗಿದ್ದಾನೆ. ಇವನ ಭುಜಗಳಲ್ಲೇ ಇವನ ಎಲ್ಲ ಬಲವಿದೆ ಮತ್ತು ಪರಾಕ್ರಮ ತುಂಬಿದೆ. ಇವನು ಸಮಸ್ತ ಜಗತ್ತನ್ನು ಸೋಲಿಸಿ ಈಗ ನಮ್ಮನ್ನೂ ಕೊಲ್ಲಲೂ ಬಯಸುತ್ತಿದ್ದಾನೆ.॥5॥
ಮೂಲಮ್ - 6
ನಿಶ್ಚೇಷ್ಪಾನಾಂ ವಧೋ ರಾಜನ್ಕುತ್ಸಿತೋ ಜಗತೀಪತೇಃ ।
ಕ್ರತುಮಧ್ಯೋಪನೀತಾನಾಂ ಪಶೂನಾಮಿವ ರಾಘವ ॥
ಅನುವಾದ
ರಾಜಾ! ರಘುನಂದನ! ಯಜ್ಞದಲ್ಲಿ ತಂದಿರುವ ಪಶುಗಳಂತೆ, ನಿಶ್ಚೇಷ್ಟ ಪ್ರಾಣಿಗಳ ವಧೆಯು ರಾಜರಿಗೆ ನಿಂದಿತವೆಂದು ತಿಳಿಸಲಾಗಿದೆ. (ಆದ್ದರಿಂದ ನಾವು ಇವನ ಪ್ರಾಣ ತೆಗೆಯಬಾರದು, ಕೇವಲ ಭುಜಗಳನ್ನೇ ಕತ್ತರಿಸಿಬಿಡಬೇಕು..॥6॥
ಮೂಲಮ್ - 7
ಏತತ್ಸಂಜಲ್ಪಿತಂ ಶ್ರುತ್ವಾ ತಯೋಃ ಕ್ರುದ್ಧಸ್ತು ರಾಕ್ಷಸಃ ।
ವಿದಾರ್ಯಾಸ್ಯಂ ತದಾ ರೌದ್ರಂ ತೌಭಕ್ಷಯಿತುಮಾರಭತ್ ॥
ಅನುವಾದ
ಅವರಿಬ್ಬರ ಈ ಮಾತುಕತೆ ಕೇಳಿ ಆ ರಾಕ್ಷಸನಿಗೆ ಕ್ರೋಧ ಉಂಟಾಯಿತು. ಅವನು ಭಯಂಕರ ಬಾಯಿ ತೆರೆದು ಅವರನ್ನು ತಿನ್ನಲು ಮುಂದಾದನು.॥7॥
ಮೂಲಮ್ - 8
ತತಸ್ತೌ ದೇಶಕಾಲಜ್ಞೌ ಖಡ್ಗಾಭ್ಯಾಮೇವ ರಾಘವೌ ।
ಅಚ್ಛಿಂದತಾಂ ಸುಸಂಹೃಷ್ಟೌ ಬಾಹೂ ತಸ್ಯಾಂಸದೇಶತಃ ॥
ಅನುವಾದ
ಇಷ್ಟರಲ್ಲೇ ದೇಶ-ಕಾಲದ ಜ್ಞಾನವುಳ್ಳ ಇಬ್ಬರೂ ರಘಪವಂಶೀ ರಾಜಕುಮಾರರು ಅತ್ಯಂತ ಹರ್ಷಗೊಂಡು ಖಡ್ಗಗಳಿಂದ ಅವನ ಎರಡೂ ಭುಜಗಳನ್ನು ತುಂಡರಿಸಿ ಬೇರ್ಪಡಿಸಿದರು.॥8॥
ಮೂಲಮ್ - 9
ದಕ್ಷಿಣೋ ದಕ್ಷಿಣಂ ಬಾಹುಮಸಕ್ತಮಸಿನಾ ತತಃ ।
ಚಿಚ್ಛೇದ ರಾಮೋ ವೇಗೇನ ಸವ್ಯಂ ವೀರಸ್ತು ಲಕ್ಷ್ಮಣಃ ॥
ಅನುವಾದ
ಭಗವಾನ್ ಶ್ರೀರಾಮನು ಅವನ ಬಲಭಾಗದಲ್ಲಿ ನಿಂತಿದ್ದನು. ಅವನು ತನ್ನ ಖಡ್ಗದಿಂದ ಅವನ ಬಲತೋಳನ್ನು ತಡವದೆ ವೇಗವಾಗಿ ತುಂಡರಿಸಿದನು. ಎಡಭಾಗದಲ್ಲಿ ನಿಂತಿರುವ ವೀರ ಲಕ್ಷ್ಮಣನು ಅವನ ಎಡ ಭುಜವನ್ನು ಖಡ್ಗದಿಂದ ಕತ್ತರಿಸಿಬಿಟ್ಟನು.॥9॥
ಮೂಲಮ್ - 10
ಸ ಪಪಾತ ಮಹಾಬಾಹುಶ್ಛಿನ್ನಬಾಹುರ್ಮಹಾಸ್ವನಃ ।
ಖಂ ಚ ಗಾಂ ಚ ದಿಶಶ್ಚೈವ ನಾದಯನ್ಜಲದೋ ಯಥಾ ॥
ಅನುವಾದ
ಭುಜಗಳು ತುಂಡಾದಾಗ ಆ ಮಹಾಬಾಹು ರಾಕ್ಷಸನು ದಶದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ಮೇಘ ಗಂಭೀರ ಗರ್ಜನೆ ಮಾಡಿ ಪೃಥಿವೀ, ಆಕಾಶ, ದಶದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ನೆಲಕ್ಕೊರಗಿದನು.॥10॥
ಮೂಲಮ್ - 11
ಸ ನಿಕೃತ್ತೌ ಭುಜೌ ದೃಷ್ಟ್ವಾಶೋಣಿತೌಪರಿಪ್ಲುತಃ ।
ದೀನಃ ಪಪ್ರಚ್ಛ ತೌ ವೀರೌ ಕೌ ಯುವಾಮಿತಿ ದಾನವಃ ॥
ಅನುವಾದ
ತನ್ನ ಭುಜಗಳು ತುಂಡಾದುದನ್ನು ನೋಡಿ, ರಕ್ತದಿಂದ ತೋಯ್ದುಹೋದ ಆ ದಾನವನು ದೀನವಾಣಿಯಲ್ಲಿ - ವೀರರೇ! ನೀವಿಬ್ಬರೂ ಯಾರು? ಎಂದು ಕೇಳಿದನು.॥11॥
ಮೂಲಮ್ - 12
ಇತಿ ತಸ್ಯ ಬ್ರುವಾಣಸ್ಯ ಲಕ್ಷ್ಮಣಃ ಶುಭಲಕ್ಷಣಃ ।
ಶಶಂಸ ತಸ್ಯ ಕಾಕುತ್ಸ್ಥಂ ಕಬಂಧಸ್ಯ ಮಹಾಬಲಃ ॥
ಅನುವಾದ
ಕಬಂಧನು ಹೀಗೆ ಕೇಳಿದಾಗ ಶುಭ ಲಕ್ಷಣಗಳುಳ್ಳ ಮಹಾಬಲಿ ಲಕ್ಷ್ಮಣನು ಅವನಿಗೆ ಶ್ರೀರಾಮನ ಪರಿಚಯ ಮಾಡಿ ಕೊಡಲು ಪ್ರಾರಂಭಿಸಿದನು.॥12॥
ಮೂಲಮ್ - 13
ಅಯಮಿಕ್ಷ್ವಾಕುದಾಯಾದೋ ರಾಮೋ ನಾಮ ಜನೈಃ ಶ್ರುತಃ ।
ತಸ್ಮೈವಾವರಜಂ ವಿದ್ಧಿ ಭ್ರಾತರಂ ಮಾಂ ಚ ಲಕ್ಷ್ಮಣಮ್ ॥
ಅನುವಾದ
ಇವರು ಇಕ್ವಾಕುವಂಶೀ ದಶರಥ ಮಹಾರಾಜರ ಪುತ್ರರು ಹಾಗೂ ಶ್ರೀರಾಮ ಎಂಬ ಹೆಸರಿನಿಂದ ವಿಖ್ಯಾತರಾಗಿದ್ದಾರೆ. ನಾನು ಇವರ ಸಹೋದರ ನನ್ನ ಹೆಸರು ಲಕ್ಷ್ಮಣ ನೆಂದು.॥13॥
ಮೂಲಮ್ - 14
ಮಾತ್ರಾ ಪ್ರತಿಹತೇ ರಾಜ್ಯೇ ರಾಮಃ ಪ್ರವ್ರಾಜಿತೋ ವನಮ್ ।
ಮಯಾ ಸಹ ಚರತ್ಯೇಷ ಭಾರ್ಯಯಾ ಚ ಮಹದ್ವನಮ್ ॥
ಮೂಲಮ್ - 15
ಅಸ್ಯ ದೇವಪ್ರಭಾವಸ್ಯ ವಸತೋ ವಿಜನೇ ವನೇ ।
ರಾಕ್ಷಸಾಪಹೃತಾ ಭಾರ್ಯಾ ಯಾಮಿಚ್ಛಂತಾ ವಿಹಾಗತೌ ॥
ಅನುವಾದ
ತಾಯಿ ಕೈಕೇಯಿಯಿಂದ ಇವರ ಪಟ್ಟಾಭಿಷೇಕ ತಡೆಯಲ್ಪಟ್ಟಾಗ ಇವರು ಪಿತೃವಾಕ್ಯದಂತೆ ಕಾಡಿಗೆ ಬಂದು, ನಾನು ಮತ್ತು ತನ್ನ ಪತ್ನಿಯೊಂದಿಗೆ ಈ ವಿಶಾಲ ವನದಲ್ಲಿ ಸಂಚರಿಸತೊಡಗಿದರು. ಈ ನಿರ್ಜನ ವನದಲ್ಲಿ ಇರವಾಗ ಈ ದೇವತುಲ್ಯ ಪ್ರಭಾವಶಾಲಿ ಶ್ರೀರಘುನಾಥನ ಪತ್ನಿಯನ್ನು ಯಾರೋ ರಾಕ್ಷಸನು ಕದ್ದುಕೊಂಡು ಹೋದನು. ಅವನನ್ನು ಹುಡುಕುತ್ತಾ ನಾವು ಇಲ್ಲಿ ಬಂದಿರುವೆವು.॥14-15॥
ಮೂಲಮ್ - 16
ತ್ವಂ ತು ಕೋ ವಾ ಕಿಮರ್ಥಂ ವಾ ಕಬಂಧಸದೃಶೋ ವನೇ ।
ಆಸ್ಯೇನೋರಸಿದೀಪ್ತೇನ ಭಗ್ನಜಂಘೋ ವಿಚೇಷ್ಟಸೇ ॥
ಅನುವಾದ
ನೀನು ಯಾರು? ಕಬಂಧದಂತಹ ರೂಪಧರಿಸಿ ಈ ವನದಲ್ಲಿ ಏಕೆ ಬಿದ್ದಿರುವೆ? ಎದೆಯಲ್ಲಿ ಹೊಳೆಯುವ ಮುಖ, ಮುರಿದ ತೊಡೆಗಳಿಂದ ನೀನು ಏಕೆ ಆ ಕಡೆ ಈಕಡೆ ಹೊರಳಾಡುತ್ತಾ ಇರುವೆ.॥16॥
ಮೂಲಮ್ - 17
ಏವಮುಕ್ತಃ ಕಬಂಧಸ್ತು ಲಕ್ಷ್ಮಣೇನೋತ್ತರಂ ವಚಃ ।
ಉವಾಚ ವಚನಂ ಪ್ರೀತಸ್ತದಿಂದ್ರವಚನಂ ಸ್ಮರನ್ ॥
ಅನುವಾದ
ಲಕ್ಷ್ಮಣನು ಹೀಗೆ ಕೇಳಿದಾಗ ಕಬಂಧನಿಗೆ ಇಂದ್ರನು ಹೇಳಿದ ಮಾತು ನೆನಪಾಯಿತು. ಆದ್ದರಿಂದ ಅವನು ಬಹಳ ಸಂತೋಷಗೊಂಡು ಲಕ್ಷ್ಮಣನಿಗೆ ಹೀಗೆ ಉತ್ತರಿಸಿದನು.॥17॥
ಮೂಲಮ್ - 18
ಸ್ವಾಗತಂ ವಾಂ ನರವ್ಯಾಘ್ರೌ ದಿಷ್ಟ್ಯಾ ಪಶ್ಯಾಮಿ ವಾಮಹಮ್ ।
ದಿಷ್ಟ್ಯಾ ಚೇವೌ ನಿಕೃತ್ತೌ ಮೇ ಯುವಾಭ್ಯಾಂ ಬಾಹುಬಂಧನೌ ॥
ಅನುವಾದ
ಪುರುಷಸಿಂಹ ವೀರರೇ! ನಿಮ್ಮಿಬ್ಬರಿಗೂ ಸ್ವಾಗತವು. ದೊಡ್ಡ ಭಾಗ್ಯದಿಂದ ನನಗೆ ನಿಮ್ಮ ದರ್ಶನ ಲಭಿಸಿತು. ಈ ನನ್ನ ಎರಡು ಭುಜಗಳೇ ನನಗೆ ಬಂಧನವಾಗಿತ್ತು. ನೀವು ಇವನ್ನು ತುಂಡರಿಸಿದುದು ಸೌಭಾಗ್ಯದ ಮಾತಾಗಿದೆ.॥18॥
ಮೂಲಮ್ - 19
ವಿರೂಪಂ ಯಚ್ಚ ಮೇ ರೂಪಂ ಪ್ರಾಪ್ತಂ ಹ್ಯವಿನಯಾದ್ಯಥಾ ।
ತನ್ಮೇ ಶೃಣು ನರವ್ಯಾಘ್ರ ತತ್ತ್ವತಃ ಶಂಸತಸ್ತವ ॥
ಅನುವಾದ
ನರಶ್ರೇಷ್ಠ ಶ್ರೀರಾಮ! ನನಗೆ ಉಂಟಾದ ಕುರೂಪದ ಕಾರಣ ನನ್ನ ಅವಿನಯದ ಫಲವಾಗಿದೆ. ಇದೆಲ್ಲ ಹೇಗಾಯಿತು? ಆ ಪ್ರಸಂಗವನ್ನು ನಿಮಗೆ ನಾನು ಸರಿಯಾಗಿ ತಿಳಿಸುತ್ತೇನೆ, ನನ್ನಿಂದ ಕೇಳಿರಿ.॥19॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎಪ್ಪತ್ತನೆಯ ಸರ್ಗ ಸಂಪೂರ್ಣವಾಯಿತು.॥70॥