०६८ राम-जटायुसंवादः

वाचनम्
ಭಾಗಸೂಚನಾ

ಜಟಾಯುವಿನ ಪ್ರಾಣ ತ್ಯಾಗ ಮತ್ತು ಶ್ರೀರಾಮನಿಂದ ಅವನ ದಹನ ಸಂಸ್ಕಾರ

ಮೂಲಮ್ - 1

ರಾಮಃ ಪ್ರೇಕ್ಷ್ಯ ತು ತಂ ಗೃಧ್ರಂ ಭುವಿ ರೌದ್ರೇಣ ಪಾತಿತಮ್ ।
ಸೌಮಿತ್ರಿಂ ಮಿತ್ರಸಂಪನ್ನಮಿದಂ ವಚನಮಬ್ರವೀತ್ ॥

ಅನುವಾದ

ಭಯಂಕರ ರಾಕ್ಷಸ ರಾವಣನು ಹೊಡೆದು ಕೆಡಹಿದ ಆ ಗೃಧ್ರರಾಜ ಜಟಾಯುವಿನ ಕಡೆಗೆ ನೋಡಿ ಭಗವಾನ್ ಶ್ರೀರಾಮನು ಮಿತ್ರೋಚಿತ ಗುಣದಿಂದ ಸಂಪನ್ನ ಸೌಮಿತ್ರಿಯಲ್ಲಿ ಹೀಗೆ ನುಡಿದನು.॥1॥

ಮೂಲಮ್ - 2

ಮಮಾಯಂ ನೂನಮರ್ಥೇಷು ಯತಮಾನೋ ವಿಹಂಗಮಃ ।
ರಾಕ್ಷಸೇನ ಹತಃ ಸಂಖ್ಯೇ ಪ್ರಾಣಾಂಸ್ತ್ಯಜತಿ ಮತ್ಕೃತೇ ॥

ಅನುವಾದ

ತಮ್ಮಾ! ಈ ಪಕ್ಷಿಯು ಖಂಡಿತವಾಗಿ ನನ್ನ ಕಾರ್ಯವನ್ನೇ ಸಿದ್ಧಗೊಳಿಸಲು ಪ್ರಯತ್ನಶೀಲವಾಗಿತ್ತು, ಆದರೆ ಆ ರಾಕ್ಷಸನಿಂದ ಯುದ್ಧದಲ್ಲಿ ಮಡಿದು ಹೋದ. ಇವನು ನನಗಾಗಿಯೇ ತನ್ನ ಪ್ರಾಣವನ್ನು ತ್ಯಜಿಸಿದ್ದಾನೆ.॥2॥

ಮೂಲಮ್ - 3

ಅತಿಖಿನ್ನಃ ಶರೀರೇಽಸ್ಮಿನ್ಪ್ರಾಣೋ ಲಕ್ಷ್ಮಣ ವಿದ್ಯತೇ ।
ತಥಾ ಸ್ವರವಿಹೀನೋಽಯಂ ವಿಕ್ಲವಂ ಸಮುದೀಕ್ಷತೇ ॥

ಅನುವಾದ

ಲಕ್ಷ್ಮಣ! ಶರೀರದೊಳಗೆ ಇವನ ಪ್ರಾಣಕ್ಕೆ ಭಾರಿ ವೇದನೆಯಾಗುತ್ತಾ ಇದೆ. ಅದಕ್ಕಾಗಿ ಇವನ ಮಾತು ನಿಂತು ಹೋಗುತ್ತಾ ಇದೆ. ಹಾಗೂ ಅತ್ಯಂತ ವ್ಯಾಕುಲನಾಗಿ ನೋಡುತ್ತಿದ್ದಾನೆ.॥3॥

ಮೂಲಮ್ - 4

ಜಟಾಯೋ ಯದಿ ಶಕ್ನೋಷಿ ವಾಕ್ಯಂ ವ್ಯಾಹರಿತುಂ ಪುನಃ ।
ಸೀತಾಮಾಖ್ಯಾಹಿ ಭದ್ರಂ ತೇ ವಧಮಾಖ್ಯಾಹಿ ಚಾತ್ಮನಃ ॥

ಅನುವಾದ

(ಲಕ್ಷ್ಮಣನಲ್ಲಿ ಹೀಗೆ ಹೇಳಿ ಶ್ರೀರಾಮನು ಆ ಪಕ್ಷಿಯಲ್ಲಿ ಹೇಳಿದನು-) ಜಟಾಯುವೇ! ನೀನು ಪುನಃ ಮಾತನಾಡ ಬಲ್ಲೆಯಾದರೆ ನಿನಗೆ ಮಂಗಳವಾಗಲಿ, ಸೀತೆಯ ಅವಸ್ಥೆ ಏನಾಗಿದೆ? ತಿಳಿಸು, ನಿನ್ನ ವಧೆ ಹೇಗಾಯಿತು.॥4॥

ಮೂಲಮ್ - 5

ಕಿಂನಿಮಿತ್ತೋ ಜಹಾರಾರ್ಯಾಂ ರಾವಣಸ್ತಸ್ಯ ಕಿಂ ಮಯಾ ।
ಅಪರಾಧಂ ತು ಯಂ ದೃಷ್ಟ್ವಾ ರಾವಣೇನ ಹೃತಾ ಪ್ರಿಯಾ ॥

ಅನುವಾದ

ಯಾವ ಅಪರಾಧವನ್ನು ನೋಡಿ ರಾವಣನು ನನ್ನ ಪ್ರಿಯ ಭಾರ್ಯೆಯನ್ನು ಅಪಹರಿಸಿದನು? ಆಕೆಯ ಅಪರಾಧವಾದರೂ ಏನು? ನಾನಾದರೂ ಅವನಿಗೆ ಮಾಡಿದ ಅಪರಾಧವಾದರೂ ಏನು? ಯಾವ ನಿಮಿತ್ತದಿಂದ ರಾವಣನು ಆರ್ಯೆ ಸೀತೆಯನ್ನು ಕದ್ದುಕೊಂಡು ಹೋದನು.॥5॥

ಮೂಲಮ್ - 6

ಕತಂ ತಚ್ಚಂದ್ರಸಂಕಾಶಂ ಮುಖಮಾಸೀನ್ಮನೋಹರಮ್ ।
ಸೀತಯಾ ಕಾನಿ ಚೋಕ್ತಾನಿ ತಸ್ಮಿನ್ಕಾಲೇ ದ್ವಿಜೋತ್ತಮ ॥

ಅನುವಾದ

ಪಕ್ಷಿಶ್ರೇಷ್ಠನೇ! ಸೀತೆಯ ಚಂದ್ರನಂತಹ ಮನೋಹರ ಮುಖ ಹೇಗಾಗಿ ಹೋಗಿತ್ತು? ಆಗ ಸೀತೆಯು ಏನೇನು ಮಾತುಗಳನ್ನು ಹೇಳಿದಳು.॥6॥

ಮೂಲಮ್ - 7

ಕಥಂ ವೀರ್ಯಃ ಕಥಂರೂಪಃ ಕಿಂಕರ್ಮಾ ಸ ಚ ರಾಕ್ಷಸಃ ।
ಕ್ವ ಚಾಸ್ಯ ಭವನಂ ತಾತ ಬ್ರೂಹಿ ಮೇ ಪರಿಪೃಚ್ಛತಃ ॥

ಅನುವಾದ

ಅಯ್ಯಾ! ಆ ರಾಕ್ಷಸನ ಬಲ-ಪರಾಕ್ರಮ, ರೂಪ ಹೇಗಿದೆ? ಅವನೇನು ಮಾಡುತ್ತಾನೆ? ಅವನ ಮನೆ ಎಲ್ಲಿದೆ? ನಾನು ಕೇಳಿದುದನ್ನು ಎಲ್ಲವೂ ತಿಳಿಸು.॥7॥

ಮೂಲಮ್ - 8

ತಮುದ್ವೀಕ್ಷ್ಯ ಸ ಧರ್ಮಾತ್ಮಾ ವಿಪಂತಮನಾಥವತ್ ।
ವಾಚಾವಿಕ್ಲವಯಾ ರಾಮಮಿದಂ ವಚನಮಬ್ರವೀತ್ ॥

ಅನುವಾದ

ಈ ರೀತಿ ಅನಾಥನಂತೆ ವಿಲಾಪಮಾಡುತ್ತಿರುವ ಶ್ರೀರಾಮನ ಕಡೆಗೆ ನೋಡಿ ಧರ್ಮಾತ್ಮ ಜಟಾಯುವು ತೊದಲುತ್ತಾ ಹೀಗೆ ಹೇಳಲು ಪ್ರಾರಂಭಿಸಿದನು.॥8॥

ಮೂಲಮ್ - 9

ಸಾ ಹೃತಾ ರಾಕ್ಷಸೇಂದ್ರೇಣ ರಾವಣೇನ ದುರಾತ್ಮನಾ ।
ಮಾಯಾಮಾಸ್ಥಾಯ ವಿಪುಲಾಂ ವಾತದುರ್ದಿನಸಂಕುಲಾಮ್ ॥

ಅನುವಾದ

ರಘುನಂದನ! ದುರಾತ್ಮಾ ರಾಕ್ಷಸರಾಜ ರಾವಣನು ವಿಪುಲ ಮಾಯೆಯನ್ನು ಆಶ್ರಯಿಸಿ ಚಂಡಮಾರುತ, ನೀರನ್ನು ಸೃಷ್ಟಿಸಿ (ಗಾಬರಿಗೊಳ್ಳುವಂತೆ ಮಾಡಿ) ಸೀತೆಯನ್ನು ಅಪಹರಣ ಮಾಡಿದನು.॥9॥

ಮೂಲಮ್ - 10

ಪರಿಕ್ಲಾಂತಸ್ಯ ಮೇ ತಾತ ಪಕ್ಷೌ ಚ್ಛಿತ್ವಾ ನಿಶಾಚರಃ ।
ಸೀತಾಮಾದಾಯ ವೈದೇಹೀಂ ಪ್ರಯಾತೋ ದಕ್ಷಿಣಾಮುಖಃ ॥

ಅನುವಾದ

ಅಯ್ಯಾ! ನಾನು ಅವನೊಂದಿಗೆ ಕಾದಾಡುತ್ತಾ ಬಳಲಿದ ಅವಸ್ಥೆಯಲ್ಲೇ ನನ್ನ ಎರಡೂ ರೆಕ್ಕೆಗಳನ್ನು ಕತ್ತರಿಸಿ ಆ ನಿಶಾಚರನು ವೈದೇಹಿಯನ್ನು ಜೊತೆಗೆ ಕರೆದುಕೊಂಡು ಇಲ್ಲಿಂದ ದಕ್ಷಿಣ ದಿಕ್ಕಿಗೆ ಹೊರಟುಹೋದನು.॥10॥

ಮೂಲಮ್ - 11

ಉಪರುಧ್ಯಂತಿ ಮೇ ಪ್ರಾಣಾ ದೃಷ್ಟಿರ್ಭ್ರಮತಿ ರಾಘವ ।
ಪಶ್ಯಾಮಿ ವೃಕ್ಷಾನ್ ಸೌವರ್ಣಾನುಶೀರಕೃತಮೂರ್ಧಜಾನ್ ॥

ಅನುವಾದ

ರಘುನಂದನ! ಈಗ ನನ್ನ ಪ್ರಾಣಗಳ ಗತಿ ನಿಂತುಹೋಗಿದೆ, ಕಣ್ಣು ಸುತ್ತುತ್ತಾ ಇದೆ, ನನಗೆ ಎಲ್ಲ ವೃಕ್ಷಗಳು ಚಿನ್ನದ ಬಣ್ಣದಂತೆ ಕಂಡುಬರುತ್ತವೆ. ಆ ವೃಕ್ಷಗಳ ಕೊಂಬೆಗಳಲ್ಲಿ ಲಾವಂಚದ ಕೂದಲು ತುಂಬಿಕೊಂಡಿದೆ.॥11॥

ಮೂಲಮ್ - 12

ಯೇನ ಯಾತಿ ಮುಹೂರ್ತೇನ ಸೀತಾಮಾದಾಯ ರಾವಣಃ ।
ವಿಪ್ರಣಷ್ಟಂ ಧನಂ ಕ್ಷಿಪ್ರಂ ತತ್ಸ್ವಾಮೀ ಪ್ರತಿಪದ್ಯತೇ ॥

ಮೂಲಮ್ - 13

ವಿಂದೋ ನಾಮ ಮುಹೂರ್ತೋಽಸೌ ನ ಚ ಕಾಕುತ್ಸ್ಥಸೋಽಽಬುಧತ್ ।
ತ್ವತ್ಪ್ರಿಯಾಂ ಜಾನಕೀಂ ಹೃತ್ವಾ ರಾವಣೋರಾಕ್ಷಸೇಶ್ವರಃ ।
ಝಷವದ್ ಬಡಿಶಂ ಗೃಹ್ಯ ಕ್ಷ್ರಿಪ್ರಮೇವ ವಿನಶ್ಯತಿ ॥

ಅನುವಾದ

ರಾವಣನು ಸೀತೆಯನ್ನು ಕೊಂಡು ಹೋದ ಮುಹೂರ್ತದಲ್ಲಿ, ಕಳೆದುಹೋದ ಧನವು ಬೇಗನೆ ಅದರ ಒಡೆಯನಿಗೆ ಸಿಗುತ್ತದೆ. ಕಾಕುತ್ಸ್ಥ! ಅದು ‘ವಿಂದ’ ಎಂಬ ಮುಹೂರ್ತವಾಗಿತ್ತು, ಆದರೆ ರಾಕ್ಷಸನಿಗೆ ಇದು ತಿಳಿದಿರಲಿಲ್ಲ. ಮೀನು ಸಾಯಲಿಕ್ಕಾಗಿಯೇ ಗಾಳವನ್ನು ನುಂಗುವಂತೆಯೇ ಅವನೂ ಕೂಡ ಸೀತೆಯನ್ನು ಕೊಂಡು ಹೋಗಿ ಶೀಘ್ರವಾಗಿ ನಾಶವಾಗಿ ಹೋಗುವನು.॥12-13॥

ಮೂಲಮ್ - 14

ನ ಚ ತ್ವಯಾ ವ್ಯಥಾ ಕಾರ್ಯಾ ಜನಕಸ್ಯ ಸುತಾಂ ಪ್ರತಿ ।
ವೈದೇಹ್ಯಾ ರಂಸ್ಯಸೇ ಕ್ಷಿಪ್ರಂ ಹತ್ವಾ ತಂ ರಣಮೂರ್ಧನಿ ॥

ಅನುವಾದ

ಅದ್ದರಿಂದ ಈಗ ನೀನು ಜನಕನಂದಿನಿಗಾಗಿ ಮನಸ್ಸಿನಲ್ಲಿ ಖೇದಪಡಬೇಡ. ಸಂಗ್ರಾಮ ಮುಖದಲ್ಲಿ ಆ ನಿಶಾಚರನನ್ನು ವಧಿಸಿ ನೀನು ಬೇಗನೆ ಪುನಃ ವೈದೇಹಿಯೊಂದಿಗೆ ವಿಹರಿಸುವೆ.॥14॥

ಮೂಲಮ್ - 15

ಅಸಂಮೂಢಸ್ಯ ಗೃಧ್ರಸ್ಯ ರಾಮಂ ಪ್ರತ್ಯನುಭಾಷತಃ ।
ಆಸ್ಯಾತ್ಸುಸ್ರಾವ ರುಧಿರಂ ಮ್ರಿಯಮಾಣಸ್ಯ ಸಾಮಿಷಮ್ ॥

ಅನುವಾದ

ಗೃಧ್ರರಾಜ ಜಟಾಯು ಸಾಯುತ್ತಿದ್ದರೂ ಅವನ ಮನಸ್ಸಿನ ಮೇಲೆ ಮೋಹ, ಭ್ರಮೆ ಆವರಿಸಿರಲಿಲ್ಲ. (ಅವನು ಚಿತ್ತ ಸ್ವಾಸ್ಥವನ್ನು ಕಳೆದಕೊಂಡಿರಲಿಲ್ಲ) ಅವನು ಶ್ರೀರಾಮಚಂದ್ರನಲ್ಲಿ ಅವನ ಮಾತಿಗೆ ಉತ್ತರಿಸುತ್ತಿದ್ದಾಗ ಅವನ ಬಾಯಿಂದ ಮಾಂಸಯುಕ್ತ ರಕ್ತವು ಹರಿಯತೊಡಗಿತು.॥15॥

ಮೂಲಮ್ - 16

ಪುತ್ರೋ ವಿಶ್ರವಸಃ ಸಾಕ್ಷಾದ್ ಭ್ರಾತಾ ವೈಶ್ರವಣಸ್ಯ ಚ ।
ಇತ್ಯುಕ್ತ್ವಾ ದುರ್ಲಭಾನ್ಪ್ರಾಣಾನ್ಮುಮೋಚ ಪತಗೇಶ್ವರಃ ॥

ಅನುವಾದ

ಅವನು ಹೇಳುತ್ತಾನೆ - ರಾವಣನು ವಿಶ್ರವಸ್ಸುವಿನ ಪುತ್ರ ಮತ್ತು ಕುಬೇರನ ತಮ್ಮನಾಗಿದ್ದಾನೆ. ಇಷ್ಟು ಹೇಳಿ ಆ ಪಕ್ಷಿರಾಜನು ದುರ್ಲಭ ಪ್ರಾಣವನ್ನು ಪರಿತ್ಯಾಗ ಮಾಡಿದನು.॥16॥

ಮೂಲಮ್ - 17

ಬ್ರೂಹಿ ಬ್ರೂಹೀತಿ ರಾಮಸ್ಯ ಬ್ರುವಾಣಸ್ಯ ಕೃತಾಂಜಲೇಃ ।
ತ್ಯಕ್ತ್ವಾ ಶರೀರಂ ಗೃಧ್ರಸ್ಯ ಪ್ರಾಣಾ ಜಗ್ಮುರ್ವಿಹಾಯಸಮ್ ॥

ಅನುವಾದ

ಶ್ರೀರಾಮಚಂದ್ರನು ಹೇಳು ಹೇಳು ಇನ್ನೂ ಹೇಳು! ಎಂದು ನುಡಿಯುತ್ತಿರುವಾಗಲೇ ಗೃಧ್ರರಾಜನ ಪ್ರಾಣ ಅವನ ಶರೀರದಿಂದ ಅಗಲಿ ಆಕಾಶಕ್ಕೆ ಹೊರಟುಹೋಯಿತು.॥17॥

ಮೂಲಮ್ - 18

ಸ ನಿಕ್ಷಿಪ್ಯ ಶಿರೌ ಭೂಮೌ ಪ್ರಸಾರ್ಯ ಚರಣೌ ತಥಾ ।
ವಿಕ್ಷಿಪ್ಯ ಚ ಶರೀರಂ ಸ್ವಂ ಪಪಾತ ಧರಣೀತಲೇ ॥

ಅನುವಾದ

ಅವನು ತನ್ನ ತಲೆಯನ್ನು ನೆಲಕ್ಕೆ ಚೆಲ್ಲಿದನು, ಎರಡೂ ಕಾಲುಗಳನ್ನು ಚಾಚಿದನು, ಹಾಗೂ ಧರಾಶಾಯಿಯಾದನು.॥18॥

ಮೂಲಮ್ - 19

ತಂ ಗೃಧ್ರಂ ಪ್ರೇಕ್ಷ್ಯ ತಾಮ್ರಾಕ್ಷಂ ಗತಾಸುಮಚಲೋಪಮಮ್ ।
ರಾಮಃ ಸುಬಹುಭಿರ್ದುಃಖೈರ್ದೀನಃ ಸೌಮಿತ್ರಿಮಬ್ರವೀತ್ ॥

ಅನುವಾದ

ಗೃಧ್ರರಾಜ ಜಟಾಯುವಿನ ಕಣ್ಣುಗಳು ಕೆಂಪಾಗಿ ಕಾಣುತ್ತಿದ್ದವು. ಪ್ರಾಣ ಹೊರಟುಹೋದಾಗ ಅವನು ಪರ್ವತದಂತೆ ಅವಿಚಲನಾದನು. ಈ ಅವಸ್ಥೆಯಲ್ಲಿ ಅವನನ್ನು ನೋಡಿ ಅನೇಕ ದುಃಖಗಳಿಂದ ದುಃಖಿತನಾದ ಶ್ರೀರಾಮನು ಸುಮಿತ್ರಾ ಕುಮಾರನಲ್ಲಿ ಇಂತೆಂದನು.॥19॥

ಮೂಲಮ್ - 20

ಬಹೂನಿ ರಕ್ಷಸಾಂ ವಾಸೇ ವರ್ಷಾಣಿ ವಸತಾ ಸುಖಮ್ ।
ಅನೇನ ದಂಡಕಾರಣ್ಯೇ ವಿಶೀರ್ಣಮಿಹ ಪಕ್ಷಿಣಾ ॥

ಅನುವಾದ

ಲಕ್ಷ್ಮಣ! ರಾಕ್ಷಸರ ವಾಸಸ್ಥಾನವಾದ ಈ ದಂಡಕಾರಣ್ಯದಲ್ಲಿ ಅನೇಕ ವರ್ಷ ಸುಖವಾಗಿ ಇದ್ದು ಈ ಪಕ್ಷಿರಾಜನು ಇಲ್ಲೇ ತನ್ನ ಶರೀರವನ್ನು ತ್ಯಜಿಸಿದನು.॥20॥

ಮೂಲಮ್ - 21

ಅನೇಕವಾರ್ಷಿಕೋ ಯಸ್ತು ಚಿರಕಾಲಸಮುತ್ಥಿತಃ ।
ಸೋಽಯಮದ್ಯ ಹತಃ ಶೇತೇ ಕಾಲೋ ಹಿ ದುರತಿಕ್ರಮಃ ॥

ಅನುವಾದ

ಇವನಿಗೆ ಬಹಳ ವರ್ಷಗಳಾಗಿದ್ದವು. ಇವನು ದೀರ್ಘ ಕಾಲದವರೆಗೆ ತನ್ನ ಅಭ್ಯುದಯವನ್ನು ನೋಡಿರುವನು. ಆದರೆ ಇಂದು ಈ ವೃದ್ಧಾವಸ್ಥೆಯಲ್ಲಿ ಆ ರಾಕ್ಷಸನಿಂದ ಸತ್ತುಹೋಗಿ ನೆಲದಲ್ಲಿ ಮಲಗಿರುವನು, ಏಕೆಂದರೆ ಕಾಲವನ್ನು ಮೀರುವುದು ಎಲ್ಲರಿಗೂ ಕಠಿಣವಾಗಿದೆ.॥21॥

ಮೂಲಮ್ - 22

ಪಶ್ಯ ಲಕ್ಷ್ಮಣಗೃಧ್ರೋಽಯಮುಪಕಾರೀ ಹತಶ್ಚ ಮೇ ।
ಸೀತಾಮಭ್ಯವಪನ್ನೋ ಹಿ ರಾವಣೇನ ಬಲೀಯಸಾ ॥

ಅನುವಾದ

ಲಕ್ಷ್ಮಣ! ನೋಡು ಈ ಜಟಾಯು ನನಗೆ ಬಹಳ ಉಪಕಾರಿಯಾಗಿದ್ದನು, ಆದರೆ ಇಂದು ಸತ್ತುಹೋದನು. ಸೀತೆಯ ರಕ್ಷಣೆಗಾಗಿ ಯುದ್ಧಕ್ಕೆ ಪ್ರವೃತ್ತನಾಗಿ ಅತ್ಯಂತ ಬಲವಂತ ರಾವಣನ ಕೈಯಿಂದ ಇವನ ವಧೆ ಆಯಿತು.॥22॥

ಮೂಲಮ್ - 23

ಗೃಧ್ರರಾಜ್ಯಂ ಪರಿತ್ಯಜ್ಯ ಪಿತೃಪೈತಾಮಹಂ ಮಹತ್ ।
ಮಮ ಹೇತೋರಯಂ ಪ್ರಾಣಾನ್ಮುಮೋಚ ಪತಗೇಶ್ವರಃ ॥

ಅನುವಾದ

ತಂದೆ ತಾತಂದಿರಿಂದ ಪ್ರಾಪ್ತವಾದ ಹದ್ದುಗಳ ವಿಶಾಲ ರಾಜ್ಯವನ್ನು ತ್ಯಾಗ ಮಾಡಿ ಈ ಪಕ್ಷಿರಾಜನು ನನಗಾಗಿಯೇ ತನ್ನ ಪ್ರಾಣವನ್ನು ಅಹುತಿಕೊಟ್ಟಿರುವನು.॥23॥

ಮೂಲಮ್ - 24

ಸರ್ವತ್ರ ಖಲು ದೃಶ್ಯಂತೇ ಸಾಧವೋ ಧರ್ಮಚಾರಿಣಃ ।
ಶೂರಾಃ ಶರಣ್ಯಾಃ ಸೌಮಿತ್ರೇ ತಿರ್ಯಗ್ಯೋನಿಗತೇಷ್ವಪಿ ॥

ಅನುವಾದ

ಶೂರ, ಶರಣಾಗತ ರಕ್ಷಕ, ಧರ್ಮಪರಾಯಣ ಶ್ರೇಷ್ಠಪುರುಷರು ಎಲ್ಲೆಡೆ ಕಂಡು ಬರುವರು. ಪಶು-ಪಕ್ಷಿಯೋನಿಗಳಲ್ಲಿಯೂ ಅದರ ಅಭಾವವಿಲ್ಲ.॥24॥

ಮೂಲಮ್ - 25

ಸೀತಾಹರಣಜಂ ದುಃಖಂ ನ ಮೇ ಸೌಮ್ಯ ತಥಾಗತಮ್ ।
ಯಥಾ ವಿನಾಶೋ ಗೃಧ್ರಸ್ಯ ಮತ್ಕೃತೇ ಚ ಪರಂತಪ ॥

ಅನುವಾದ

ಸೌಮ್ಯ! ಪರಂತಪ ಲಕ್ಷ್ಮಣ! ಈಗ ನನಗಾಗಿ ಪ್ರಾಣ ತ್ಯಾಗ ಮಾಡಿದ ಜಟಾಯುವಿನ ಮೃತ್ಯುವಿನಿಂದ ಆದಷ್ಟು ದುಃಖ ನನಗೆ ಸೀತಾಪಹರಣದಿಂದಲೂ ಆಗಿಲ್ಲ.॥25॥

ಮೂಲಮ್ - 26

ರಾಜಾ ದಶರಥಃ ಶ್ರೀಮಾನ್ ಯಥಾ ಮಮ ಮಹಾಯಶಾಃ ।
ಪೂಜನೀಯಶ್ಚ ಮಾನ್ಯಶ್ಚ ತಥಾಯಂ ಪತಗೇಶ್ವರಃ ॥

ಅನುವಾದ

ಮಹಾಯಶಸ್ವೀ ಶ್ರೀಮಾನ್ ದಶರಥ ಮಹಾರಾಜರು ನನಗೆ ಪೂಜ್ಯರಾಗಿದ್ದಂತೆಯೇ ಈ ಪಕ್ಷಿರಾಜ ಜಟಾಯುವೂ ಆಗಿದ್ದಾನೆ.॥26॥

ಮೂಲಮ್ - 27

ಸೌಮಿತ್ರೇ ಹರ ಕಾಷ್ಠಾನಿ ನಿರ್ಮಥಿಷ್ಯಾಮಿ ಪಾವಕಮ್ ।
ಗೃಧ್ರರಾಜಂ ದಿಧಕ್ಷಾಮಿ ಮತ್ಕೃತೇ ನಿಧನಂ ಗತಮ್ ॥

ಅನುವಾದ

ಸುಮಿತ್ರಾನಂದನ! ನೀನು ಒಣಗಿದ ಕಟ್ಟಿಗೆಗಳನ್ನು ತೆಗೆದುಕೊಂಡು ಬಾ, ನಾನು ಮಂಥನ ಮಾಡಿ ಬೆಂಕಿಯನ್ನು ಉರಿಸಿ ನನಗಾಗಿ ಮೃತ್ಯುಮುಖನಾದ ಈ ಗೃಧ್ರರಾಜನ ದಹನ ಸಂಸ್ಕಾರಮಾಡುವೆನು.॥27॥

ಮೂಲಮ್ - 28

ನಾಥಂ ಪತಗಲೋಕಸ್ಯ ಚಿತಾಮಾರೋಪಯಾಮ್ಯಹಮ್ ।
ಇಮಂ ಧಕ್ಷ್ಯಾಮಿ ಸೌಮಿತ್ರೇ ಹತಂ ರೌದ್ರೇಣ ರಕ್ಷಸಾ ॥

ಅನುವಾದ

ಸೌಮಿತ್ರಿಯೇ! ಆ ಭಯಂಕರ ರಾಕ್ಷಸನಿಂದ ಹತನಾದ ಈ ಪಕ್ಷಿರಾಜನನ್ನು ನಾನು ಚಿತೆಯಲ್ಲಿಟ್ಟು ಇವನ ದಹನ ಸಂಸ್ಕಾರ ಮಾಡುವೆನ.॥28॥

ಮೂಲಮ್ - 29

ಯಾ ಗತಿರ್ಯಜ್ಞಶೀಲಾನಾಮಾಹಿತಾಗ್ನೇಶ್ಚ ಯಾ ಗತಿಃ ।
ಅಪರಾವರ್ತಿನಾಂ ಯಾ ಚ ಯಾ ಚ ಭೂಮಿಪ್ರದಾಯಿನಾಮ್ ॥

ಮೂಲಮ್ - 30

ಮಯಾ ತ್ವಂ ಸಮನುಜ್ಞಾತೋ ಗಚ್ಛ ಲೋಕಾನನುತ್ತಮಾನ್ ।
ಗೃಧ್ರರಾಜ ಮಹಾಸತ್ತ್ವ ಸಂಸ್ಕೃತಶ್ಚ ಮಯಾ ವ್ರಜ ॥

ಅನುವಾದ

(ಮತ್ತೆ ಅವನು ಜಟಾಯುವನ್ನು ಸಂಬೋಧಿಸಿ ಹೇಳಿದನು.) ಮಹಾಬಲಶಾಲಿ ಗೃಧ್ರ ರಾಜನೇ! ಯಜ್ಞಮಾಡುವ, ಅಗ್ನಿಹೊತ್ರಿ, ಯುದ್ಧದಲ್ಲಿ ಬೆನ್ನು ತೋರಿಸದವ, ಭೂದಾನ ಮಾಡುವ ಪುರುಷರಿಗೆ ಯಾವ ಉತ್ತಮಗತಿ ಪ್ರಾಪ್ತವಾಗುತ್ತದೋ, ನನ್ನ ಆಜ್ಞೆಯಂತೆ ಅದೇ ಸರ್ವೋತ್ತಮ ಲೋಕಕ್ಕೆ ನೀನು ಹೋಗು, ನಾನು ದಹನ ಸಂಸ್ಕಾರ ಮಾಡಿದ್ದರಿಂದ ನಿನಗೆ ಸದ್ಗತಿ ಉಂಟಾಗಲಿ.॥29-30॥

ಮೂಲಮ್ - 31

ಏವಮುಕ್ತ್ವಾ ಚಿತಾಂ ದೀಪ್ತಾಮಾರೋಪ್ಯ ಪತಗೇಶ್ವರಮ್ ।
ದದಾಹ ರಾಮೋ ಧರ್ಮಾತ್ಮಾ ಸ್ವಬಂಧುಮಿವ ದುಃಖಿತಃ ॥

ಅನುವಾದ

ಹೀಗೆ ಹೇಳಿ ಧರ್ಮಾತ್ಮಾ ಶ್ರೀರಾಮನು ದುಃಖಿತನಾಗಿ ಪಕ್ಷಿರಾಜನ ಶರೀರವನ್ನು ಚಿತೆಯ ಮೇಲಿರಿಸಿ, ಅದಕ್ಕೆ ಅಗ್ನಿಸ್ಪರ್ಷ ಮಾಡಿ ತನ್ನ ಬಂಧುವಿನಂತೆ ಅವನ ದಹನ ಸಂಸ್ಕಾರ ಮಾಡಿದನು.॥31॥

ಮೂಲಮ್ - 32

ರಾಮೋಽಥ ಸಹಸೌಮಿತ್ರರ್ವನಂ ಗತ್ವಾ ಸ ವೀರ್ಯವಾನ್ ।
ಸ್ಥೂಲಾನ್ಹತ್ವಾ ಮಹಾರೋಹೀನನುತಸ್ತಾರ ತಂ ದ್ವಿಜಮ್ ॥

ಮೂಲಮ್ - 33

ರೋಹೀಮಾಂಸಾನಿ ಚೋದ್ಧೃತ್ಯ ಪೇಶೀಕೃತ್ವಾ ಮಹಾಯಶಾಃ ।
ಶಕುನಾಯ ದದೌ ರಾಮೋ ರಮ್ಯೇ ಹರಿತಶಾದ್ವಲೇ ॥

ಅನುವಾದ

ಅನಂತರ ಲಕ್ಷ್ಮಣ ಸಹಿತ ಪರಾಕ್ರಮಿ ಶ್ರೀರಾಮನು ಕಾಡಿಗೆ ಹೋಗಿ ರೋಹಿಯ ದೊಡ್ಡ ದೊಡ್ಡ ಗೆಡ್ಡೆಗಳನ್ನು ತಂದು ಕತ್ತರಿಸಿ ಅವನ್ನು ಜಟಾಯುವಿಗೆ ಅರ್ಪಿಸಲು ಅವನು ನೆಲದ ಮೇಲೆ ದರ್ಭೆ ಹಾಸಿದನು. ಮಹಾಯಶಸ್ವಿ ಶ್ರೀರಾಮನು ರೋಹಿಯ ತಿರುಳನ್ನು ತೆಗೆದು ಅದರ ಪಿಂಡಗಳನ್ನು ಮಾಡಿ ಆ ಸುಂದರ ಹಸಿರು ದರ್ಭೆಗಳ ಮೇಲೆ ಜಟಾಯುವಿಗೆ ಪಿಂಡದಾನ ಮಾಡಿದನು.॥32-33॥

ಮೂಲಮ್ - 34

ಯತ್ತತ್ಪ್ರೇತಸ್ಯ ಮರ್ತ್ಯಸ್ಯ ಕಥಯಂತಿ ದ್ವಿಜಾತಯಃ ।
ತತ್ಸ್ವರ್ಗಗಮನಂ ತಸ್ಯ ಪಿತ್ರ್ಯಂ ರಾಮೋ ಜಜಾಪ ಹ ॥

ಅನುವಾದ

ಪರಲೋಕವಾಸೀ ಮನುಷ್ಯನಿಗೆ ಸ್ವರ್ಗ ಪ್ರಾಪ್ತಿಯಾಗಿಸಲು ಬ್ರಾಹ್ಮಣರು ಪಠಿಸುವ ಪಿತೃ ಸಂಬಂಧಿ ಮಂತ್ರಗಳನ್ನು ಭಗವಾನ್ ಶ್ರೀರಾಮನು ಜಪಿಸಿದನು.॥34॥

ಮೂಲಮ್ - 35

ತತೋ ಗೋದಾವರೀಂ ಗತ್ವಾ ನದೀಂ ನರವರಾತ್ಮಜೌ ।
ಉದಕಂ ಚಕ್ರತುಸ್ತಸ್ಮೈ ಗೃಧ್ರರಾಜಾಯ ತಾವುಭೌ ॥

ಅನುವಾದ

ಅನಂತರ ಆ ಇಬ್ಬರೂ ರಾಜಕುಮಾರರು ಗೋದಾವರಿ ನದಿಯ ತೀರಕ್ಕೆಹೋಗಿ ಆ ಗೃಧ್ರರಾಜನಿಗೆ ಜಲಾಂಜಲಿಯನ್ನು ಕೊಟ್ಟರು.॥35॥

ಮೂಲಮ್ - 36

ಶಾಸ್ತ್ರದೃಷ್ಟೇನ ವಿಧಿನಾ ಜಲೇ ಗೃಧ್ರಾಯ ರಾಘವೌ ।
ಸ್ನಾತ್ವಾ ತೌ ಗೃಧ್ರರಾಜಾಯ ಉದಕಂ ಚಕ್ರತುಸ್ತದಾ ॥

ಅನುವಾದ

ರಘುಕುಲದ ಆ ಇಬ್ಬರು ಮಹಾಪುರುಷರು ಗೊದಾವರಿಯಲ್ಲಿ ಸ್ನಾನ ಮಾಡಿ ಶಾಸ್ತ್ರೀಯ ವಿಧಿಯಿಂದ ಆ ಗೃಧ್ರರಾಜ ನಿನಗಾಗಿ ಆಗ ಜಲಾಂಜಲಿಯನ್ನು ಅರ್ಪಿಸಿದರು.॥36॥

ಮೂಲಮ್ - 37

ಸ ಗೃಧ್ರರಾಜಃ ಕೃತವಾನ್ಯಶಸ್ಕರಂ
ಸುದುಷ್ಕರಂ ಕರ್ಮ ರಣೇ ನಿಪಾತಿತಃ ।
ಮಹರ್ಷಿಕಲ್ಪೇನ ಚ ಸಂಸ್ಕೃತಸ್ತದಾ
ಜಗಾಮ ಪುಣ್ಯಾಂ ಗತಿಮಾತ್ಮನಃ ಶುಭಾಮ್ ॥

ಅನುವಾದ

ಮಹರ್ಷಿತುಲ್ಯ ಶ್ರೀರಾಮನಿಂದ ದಹನ ಸಂಸ್ಕಾರ ಆಗಿದ್ದರಿಂದ ಗೃಧ್ರರಾಜ ಜಟಾಯುವಿಗೆ ಆತ್ಮಕಲ್ಯಾಣ ಮಾಡುವಂತಹ ಪರಮಪವಿತ್ರ ಗತಿ ಪ್ರಾಪ್ತವಾಯಿತು. ಅವನು ರಣರಂಗದಲ್ಲಿ ಅತ್ಯಂತ ದುಷ್ಕರ ಮತ್ತು ಯಶೋವರ್ಧಕ ಪರಾಕ್ರಮಿಯಾಗಿದ್ದನು. ಆದರೆ ಕೊನೆಗೆ ರಾವಣನು ಅವನನ್ನು ಕೊಂದು ಹಾಕಿದನು.॥37॥

ಮೂಲಮ್ - 38

ಕೃತೋದಕೌ ತಾವಪಿ ಪಕ್ಷಿಸತ್ತಮೇ
ಸ್ಥಿರಾಂ ಚ ಬುದ್ಧಿಂ ಪ್ರಣಿಧಾಯ ಜಗ್ಮತುಃ ।
ಪ್ರವೇಶ್ಯ ಸೀತಾಧಿಗಮೇ ತತೋ ಮನೋ
ವನಂ ಸುರೇಂದ್ರಾವಿವ ವಿಷ್ಣುವಾಸವೌ ॥

ಅನುವಾದ

ತರ್ಪಣ ಮಾಡಿದ ಬಳಿಕ ಆ ಇಬ್ಬರೂ ಸಹೋದರರು ಪಕ್ಷಿರಾಜ ಜಟಾಯುವಿನಲ್ಲಿ ತಂದೆಯಂತೆ ಸುಸ್ಥಿರ ಭಾವವಿಟ್ಟು ಸೀತೆಯ ಹುಡುಕಾಟದಲ್ಲಿ ತೊಡಗಿದರು. ದೇವೇಶ್ವರ ವಿಷ್ಣು ಮತ್ತು ಇಂದ್ರನಂತೆ ವನದಲ್ಲಿ ಮುಂದುವರಿದರು.॥38॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅರವತ್ತೆಂಟನೆಯ ಸರ್ಗ ಸಂಪೂರ್ಣವಾಯಿತು. ॥68॥