०६७ जटायुषा सीतावृत्तान्तकथनम्

वाचनम्
ಭಾಗಸೂಚನಾ

ಶ್ರೀರಾಮ-ಲಕ್ಷ್ಮಣರು ಜಟಾಯುವನ್ನು ಸಂಧಿಸಿದುದು, ಶ್ರೀರಾಮನು ಜಟಾಯುವನ್ನು ಬಾಚಿ ತಬ್ಬಿಕೊಂಡು ಅತ್ತುದು

ಮೂಲಮ್ - 1

ಪೂರ್ವಜೋಽಪ್ಯುಕ್ತಮಾತ್ರಸ್ತು ಲಕ್ಷ್ಮಣೇನ ಸುಭಾಷಿತಮ್ ।
ಸಾರಗ್ರಾಹೀ ಮಹಾಸಾರಂ ಪ್ರತಿಜಗ್ರಾಹ ರಾಘವಃ ॥

ಅನುವಾದ

ಭಗವಾನ್ ಶ್ರೀರಾಮಚಂದ್ರನು ಎಲ್ಲ ವಸ್ತುಗಳ ಸಾರವನ್ನು ಗ್ರಹಿಸುವಂತಹವನು. ವಯಸ್ಸಿನಲ್ಲಿ ಹಿರಿಯವನಾಗಿದ್ದರೂ ಅವನು ಲಕ್ಷ್ಮಣನು ಹೇಳಿದ ಅತ್ಯಂತ ಸಾರಗರ್ಭಿತ ಉತ್ತಮ ವಚನಗಳನ್ನು ಕೇಳಿ ಅವನ್ನು ಸ್ವೀಕರಿಸಿದನು.॥1॥

ಮೂಲಮ್ - 2

ಸ ನಿಗ್ರಹ್ಯ ಮಹಾಬಾಹುಃ ಪ್ರವೃದ್ಧಂ ರೋಷಮಾತ್ಮನಃ ।
ಅವಷ್ಟಭ್ಯ ಧನುಶ್ಚಿತ್ರಂ ರಾಮೋ ಲಕ್ಷ್ಮಣಮಬ್ರವೀತ್ ॥

ಅನುವಾದ

ಅನಂತರ ಮಹಾಬಾಹು ಶ್ರೀರಾಮನು ಹೆಚ್ಚಿದ್ದ ತನ್ನ ರೋಷವನ್ನು ತಡೆದು ವಿಚಿತ್ರಧನುಸ್ಸನ್ನು ಇಳಿಸಿ ಲಕ್ಷ್ಮಣನಲ್ಲಿ ಹೇಳಿದನು.॥2॥

ಮೂಲಮ್ - 3

ಕಿಂ ಕರಿಷ್ಯಾವಹೇ ವತ್ಸ ಕ್ವ ವಾ ಗಚ್ಛಾವ ಲಕ್ಷ್ಮಣ ।
ಕೇನೋಪಾಯೇನ ಪಶ್ಯಾವಃ ಸೀತಾಮಿಹ ವಿಚಿಂತಯ ॥

ಅನುವಾದ

ವತ್ಸ! ಈಗ ನಾವು ಏನು ಮಾಡೋಣ? ಎಲ್ಲಿಗೆ ಹೋಗೋಣ? ಲಕ್ಷ್ಮಣಾ! ಯಾವ ಉಪಾಯದಿಂದ ಸೀತೆಯು ಇರುವ ಠಾವು ನಮಗೆ ತಿಳಿಯಬಹುದು? ಈಗ ಇದರ ಕುರಿತು ವಿಚಾರ ಮಾಡು.॥3॥

ಮೂಲಮ್ - 4

ತಂ ತಥಾ ಪರಿತಾಪಾರ್ತಂ ಲಕ್ಷ್ಮಣೋ ರಾಮಮಬ್ರವೀತ್ ।
ಇದಮೇವ ಜನಸ್ಥಾನಂ ತ್ವಮನ್ವೇಷಿತುಮರ್ಹಸಿ ॥

ಅನುವಾದ

ಆಗ ಲಕ್ಷ್ಮಣನು ಸಂತಾಪದಿಂದ ಪೀಡಿತನಾದ ಶ್ರೀರಾಮನಲ್ಲಿ ಹೇಳಿದನು - ಅಣ್ಣ! ನೀನು ಈ ಜನಸ್ಥಾನದಲ್ಲೇ ಸೀತೆಯನ್ನು ಹುಡುಕಬೇಕು.॥4॥

ಮೂಲಮ್ - 5

ರಾಕ್ಷಸೈರ್ಬಹುಭಿಃ ಕೀರ್ಣಂ ನಾನಾದ್ರುಮಲತಾಯುತಮ್ ।
ಸಂತೀಹ ಗಿರಿದುರ್ಗಾಣಿ ನಿರ್ದರಾಃ ಕಂದರಾಣಿ ಚ ॥

ಅನುವಾದ

ನಾನಾ ಪ್ರಕಾರದ ವೃಕ್ಷ-ಲತೆಗಳಿಂದ ಕೂಡಿದ ಈ ಘನ ವನವು ಅನೇಕ ರಾಕ್ಷಸರಿಂದ ತುಂಬಿದೆ. ಇದರಲ್ಲಿ ಪರ್ವತಗಳ ಮೇಲೆ ಅನೇಕ ದುರ್ಗಮ ಸ್ಥಾನ, ಒಡೆದ ಬಂಡೆಗಳು ಮತ್ತು ಕಂದಕಗಳಿವೆ.॥5॥

ಮೂಲಮ್ - 6

ಗುಹಾಶ್ಚ ವಿವಿಧಾ ಘೋರಾ ನಾನಾಮೃಗಗಣಾಕುಲಾಃ ।
ಆವಾಸಾಃ ಕಿನ್ನರಾಣಾಂ ಚ ಗಂಧರ್ವಭವನಾನಿ ಚ ॥

ಅನುವಾದ

ಅಲ್ಲಿ ಬಗೆ-ಬಗೆ ಭಯಂಕರ ಗುಹೆಗಳಿವೆ, ಅವು ನಾನಾ ರೀತಿಯ ಮೃಗಗಳಿಂದ ತುಂಬಿವೆ. ಇಲ್ಲಿಯ ಪರ್ವತಗಳ ಮೇಲೆ ಕಿನ್ನರರ ಆವಾಸ ಸ್ಥಾನಗಳು ಮತ್ತು ಗಂಧರ್ವರ ಭವನಗಳೂ ಇವೆ.॥6॥

ಮೂಲಮ್ - 7½

ತಾನಿ ಯುಕ್ತೋ ಮಯಾ ಸಾರ್ಧಂ ತ್ವಮನ್ವೇಷಿತುಮರ್ಹಸಿ ।
ತ್ವದ್ವಿಧಾ ಬುದ್ಧಿಸಂಪನ್ನಾ ಮಹಾತ್ಮಾನೋ ನರರ್ಷಭಾಃ ॥
ಆಪತ್ಸು ನ ಪ್ರಕಂಪಂತೇ ವಾಯುವೇಗೈರಿವಾಚಲಾಃ ।

ಅನುವಾದ

ನನ್ನೊಂದಿಗೆ ನೀನು ಆ ಎಲ್ಲ ಸ್ಥಾನಗಳಲ್ಲಿ ಸೀತೆಯನ್ನು ಹುಡುಕು. ವಾಯುವಿನ ವೇಗದಿಂದ ಪರ್ವತಗಳು ಕಂಪಿಸುವುದಿಲ್ಲವೋ, ಹಾಗೆಯೇ ನಿನ್ನಂತಹ ಬುದ್ಧಿವಂತ ಮಹಾತ್ಮಾ ನರಶ್ರೇಷ್ಠರು ಆಪತ್ತಿನಲ್ಲೂ ವಿಚಲಿತರಾಗುವುದಿಲ್ಲ.॥7½॥

ಮೂಲಮ್ - 8½

ಇತ್ಯುಕ್ತಸ್ತದ್ವನಂ ಸರ್ವಂ ವಿಚಚಾರ ಸಲಕ್ಷ್ಮಣಃ ॥
ಕ್ರುದ್ಧೋ ರಾಮಃ ಶರಂ ಘೋರಂ ಸಂಧಾಯ ಧನುಷಿ ಕ್ಷುರಮ್ ।

ಅನುವಾದ

ಅವನು ಹೀಗೆ ಹೇಳಿದಾಗ ಲಕ್ಷ್ಮಣ ಸಹಿತ ಶ್ರೀರಾಮಚಂದ್ರನು ರೋಷಪೂರ್ವಕ ತನ್ನ ಧನುಸ್ಸಿಗೆ ಕ್ಷುರ ಎಂಬ ಭಯಂಕರ ಬಾಣವನ್ನು ಹೂಡಿ ಎಲ್ಲ ವನಗಳಲ್ಲಿ ಸಂಚರಿಸತೊಡಗಿದನು.॥8½॥

ಮೂಲಮ್ - 9

ತತಃ ಪರ್ವತಕೂಟಾಭಂ ಮಹಾಭಾಗಂ ದ್ವಿಜೋತ್ತಮಮ್ ॥

ಮೂಲಮ್ - 10

ದದಶ ಪತಿತಂ ಭೂಮೌ ಕ್ಷತಜಾರ್ದ್ರಂ ಜಟಾಯುಷಮ್ ।
ತಂ ದೃಷ್ಟ್ವಾ ಗಿರಿಶೃಂಗಾಭಂ ರಾಮೋ ಲಕ್ಷ್ಮಣಮಬ್ರವೀತ್ ॥

ಅನುವಾದ

ಸ್ಪಲ್ಪದೂರ ಹೋದಾಗ ಅವರಿಗೆ ಪರ್ವತದಂತೆ ವಿಶಾಲ ಶರೀರವುಳ್ಳ ಪಕ್ಷಿರಾಜ ಮಹಾಭಾಗ ಜಟಾಯು ಕಂಡು ಬಂದನು, ಅವನು ರಕ್ತಸಿಕ್ತನಾಗಿ ನೆಲದಲ್ಲಿ ಬಿದ್ದಿದ್ದನು. ಪರ್ವತ ಶಿಖರದಂತೆ ಕಾಣುವ ಆ ಗೃಧ್ರರಾಜನನ್ನು ನೋಡಿ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು.॥9-10॥

ಮೂಲಮ್ - 11

ಅನೇನ ಸೀತಾ ವೈದೇಹೀ ಭಕ್ಷಿತಾ ನಾತ್ರ ಸಂಶಯಃ ।
ಗೃಧ್ರರೂಪಮಿದಂ ವ್ಯಕ್ತೋ ರಕ್ಷೋ ಭ್ರಮತಿ ಕಾನನಮ್ ॥

ಅನುವಾದ

ಲಕ್ಷ್ಮಣಾ! ಈ ಗೃಧ್ರರೂಪದಲ್ಲಿ ಖಂಡಿತವಾಗಿ ಯಾವನೋ ರಾಕ್ಷಸನೆಂದು ಅನಿಸುತ್ತದೆ. ಇವನು ಈ ವನದಲ್ಲಿ ಸುತ್ತಾಡುತ್ತಾ ಇರುತ್ತಾನೆ. ನಿಸ್ಸಂಶಯವಾಗಿ ಇವನೇ ವಿದೇಹನಂದಿನಿ ಸೀತೆಯನ್ನು ತಿಂದು ಹಾಕಿರಬಹುದು.॥11॥

ಮೂಲಮ್ - 12

ಭಕ್ಷಯಿತ್ವಾ ವಿಶಾಲಾಕ್ಷೀಮಾಸ್ತೇಸೀತಾಂ ಯಥಾಸುಖಮ್ ।
ಏನಂ ವಧಿಷ್ಯೇ ದೀಪ್ತಾಗ್ರೈಃ ಶರೈರ್ಘೋರೈರಜಿಹ್ಮಗೈಃ ॥

ಅನುವಾದ

ವಿಶಾಲಲೋಚನೆ ಸೀತೆಯನ್ನು ತಿಂದು ಇವನು ಇಲ್ಲಿ ಸುಖವಾಗಿ ಕುಳಿತಿದ್ದಾನೆ. ಪ್ರಜ್ವಲಿತವಾದ ತುದಿಯುಳ್ಳ ಭಯಂಕರ ನನ್ನ ಬಾಣದಿಂದ ನಾನು ಇವನ ವಧೆ ಮಾಡುವೆನು.॥12॥

ಮೂಲಮ್ - 13

ಇತ್ಯುಕ್ತ್ವಾಭ್ಯಪತದ್ ದ್ರಷ್ಟುಂ ಸಂಧಾಯ ಧನುಷಿ ಕ್ಷುರಮ್ ।
ಕ್ರುದ್ಧೋ ರಾಮಃ ಸಮುದ್ರಾಂತಾ ಚಾಲಯನ್ನಿವ ಮೇದಿನೀಮ್ ॥

ಅನುವಾದ

ಹೀಗೆ ಹೇಳಿ ಕ್ರೋಧಗೊಂಡ ಶ್ರೀರಾಮನು ಧನುಸ್ಸಿಗೆ ಬಾಣವನ್ನು ಅನುಸಂಧಾನ ಮಾಡಿ ಸಮುದ್ರದಾದ್ಯಂತ ಪೃಥ್ವಿಯನ್ನು ನಡುಗಿಸುತ್ತಾ ಅವನನ್ನು ನೋಡಲು ಮುಂದುವರಿದನು.॥13॥

ಮೂಲಮ್ - 14

ತಂ ದೀನದೀನಯಾ ವಾಚಾ ಸೇನಂ ರುಧಿರಂ ವಮನ್ ।
ಅಭ್ಯಭಾಷತ ಪಕ್ಷೀ ಸ ರಾಮಂ ದಶರಥಾತ್ಮಜಮ್ ॥

ಅನುವಾದ

ಆಗಲೇ ಪಕ್ಷಿ ಜಟಾಯು ಬಾಯಿಯಿಂದ ನೊರೆಯಿಂದ ಕೂಡಿದ ರಕ್ತವನ್ನು ಸುರಿಸುತ್ತಾ ಅತ್ಯಂತ ದೀನವಾಣಿಯಲ್ಲಿ ದಶರಥನಂದನ ಶ್ರೀರಾಮನಲ್ಲಿ ಹೇಳಿದನು .॥14॥

ಮೂಲಮ್ - 15

ಯಾಮೋಷಧಿಮಿವಾಯುಷ್ಮನ್ನನ್ವೇಷಸಿ ಮಹಾವನೇ ।
ಸಾ ದೇನೀ ಮಮ ಚ ಪ್ರಾಣಾ ರಾವಣೇನೋಭಯಂ ಹೃತಮ್ ॥

ಅನುವಾದ

ಆಯುಷ್ಮಂತನೇ! ಈ ಮಹಾವನದಲ್ಲಿ ಔಷಧಿಯಂತೆ ನೀನು ಹುಡುಕುತ್ತಿರುವ ಸೀತಾದೇವಿಯನ್ನು ಹಾಗೂ ನನ್ನ ಪ್ರಾಣವನ್ನೂ ರಾವಣನು ಹರಣ ಮಾಡಿರುವನು.॥15॥

ಮೂಲಮ್ - 16

ತ್ವಯಾ ವಿರಹಿತಾ ದೇವೀ ಲಕ್ಷ್ಮಣೇನ ಚ ರಾಘವ ।
ಹ್ರಿಯಮಾಣಾ ಮಯಾ ದೃಷ್ಟಾ ರಾವಣೇನ ಬಲೀಯಸಾ ॥

ಅನುವಾದ

ರಘುನಂದನ! ನೀನು ಮತ್ತು ಲಕ್ಷ್ಮಣನು ಇಲ್ಲದಿದ್ದಾಗ ಮಹಾಬಲಿ ರಾವಣನು ಬಂದು ಸೀತಾದೇವಿಯನ್ನು ಕದ್ದುಕೊಂಡು ಹೋಗಲು ತೊಡಗಿದನು. ಆಗ ಸೀತೆಯು ನನ್ನ ಕಣ್ಣಿಗೆ ಬಿದ್ದಳು.॥16॥

ಮೂಲಮ್ - 17

ಸೀತಾಮಭ್ಯವಪನ್ನೋಽಹಂ ರಾವಣಶ್ಚ ರಣೇ ಪ್ರಭೋ ।
ವಿಧ್ವಂಸಿತರಥಚ್ಛತ್ರಃ ಪಾತಿತೋ ಧರಣೀತಲೇ ॥

ಅನುವಾದ

ಪ್ರಭೋ! ನನ್ನ ಕಣ್ಣಿಗೆ ಬೀಳುತ್ತಲೇ ನಾನು ಸೀತೆಯ ಸಹಾಯಕ್ಕಾಗಿ ಓಡಿದೆ. ರಾವಣನೊಂದಿಗೆ ನನ್ನ ಯುದ್ಧವಾಯಿತು. ನಾನು ಆ ಯುದ್ಧದಲ್ಲಿ ರಾವಣನ ರಥ, ಛತ್ರ ಮೊದಲಾದ ಎಲ್ಲ ಸಾಧನಗಳನ್ನು ನಾಶಮಾಡಿದೆ ಮತ್ತು ಅವನೂ ಕೂಡ ಗಾಯಗೊಂಡು ನೆಲಕ್ಕೆ ಬಿದ್ದುಬಿಟ್ಟನು.॥17॥

ಮೂಲಮ್ - 18

ಏತದಸ್ಯ ಧನುರ್ಭಗ್ನಮೇತೇಚಾಸ್ಯ ಶರಾಸ್ತಥಾ ।
ಅಯಮಸ್ಯ ರಣೇ ರಾಮ ಭಗ್ನಃ ಸಾಂಗ್ರಾಮಿಕೋ ರಥಃ ॥

ಅನುವಾದ

ಶ್ರೀರಾಮಾ! ಇದೋ ಅವನ ತುಂಡಾದ ಧನುಸ್ಸು, ಇವು ಅವನ ಮುರಿದ ಬಾಣಗಳು ಮತ್ತು ಇದು ಅವನ ಉಪಯೋಗಿ ರಥವನ್ನು ನಾನು ಮುರಿದು ಹಾಕಿರುವೆನು.॥18॥

ಮೂಲಮ್ - 19

ಅಯಂ ತು ಸಾರಥಿಸ್ತಸ್ಯ ಮತ್ಪಕ್ಷನಿಹತೋ ಭುವಿ ।
ಪರಿಶ್ರಾಂತಸ್ಯ ಮೇ ಪಕ್ಷೌ ಛಿತ್ತ್ವಾಖಡ್ಗೇನ ರಾವಣಃ ॥

ಮೂಲಮ್ - 20

ಸೀತಾಮಾದಾಯ ವೈದೇಹೀಮುತ್ಪಪಾತ ವಿಹಾಯಸಮ್ ।
ರಕ್ಷಸಾ ವಿಹತಂ ಪೂರ್ವಂ ಮಾಂ ನ ಹಂತುಂ ತ್ವಮರ್ಹಸಿ ॥

ಅನುವಾದ

ಇವನು ರಾವಣನ ಸಾರಥಿಯಾಗಿದ್ದಾನೆ, ಅವನನ್ನು ನಾನು ನನ್ನ ರೆಕ್ಕೆಗಳಿಂದ ಕೊಂದು ಹಾಕಿದೆ. ನಾನು ಯುದ್ಧ ಮಾಡುತ್ತಾ - ಮಾಡುತ್ತಾ ಬಳಲಿದಾಗ ರಾವಣನು ಖಡ್ಗದಿಂದ ನನ್ನ ಎರಡೂ ರೆಕ್ಕೆಗಳನ್ನು ತುಂಡರಿಸಿ, ಅವನು ವೈದೇಹಿಯನ್ನು ಎತ್ತಿಕೊಂಡು ಆಕಾಶ ಮಾರ್ಗದಿಂದ ಹಾರಿಹೋದನು. ನಾನು ಆ ರಾಕ್ಷಸನ ಕೈಯಿಂದ ಮೊದಲೇ ಸತ್ತಿರುವೆನು, ಈಗ ನೀನು ನನ್ನನ್ನು ಕೊಲ್ಲಬೇಡ.॥19-20॥

ಮೂಲಮ್ - 21

ರಾಮಸ್ತಸ್ಯ ತು ವಿಜ್ಞಾಯ ಸೀತಾಸಕ್ತಂ ಪ್ರಿಯಾಂ ಕಥಾಮ್ ।
ಗೃಧ್ರರಾಜಂ ಪರಿಷ್ವಜ್ಯ ಪರಿತ್ಯಜ್ಯ ಮಹದ್ಧನುಃ ॥

ಮೂಲಮ್ - 22

ನಿಪಪಾತಾವಶೋ ಭೂಮೌ ರುರೋದ ಸಹಲಕ್ಷ್ಮಣಃ ।
ದ್ವಿಗುಣೀಕೃತತಾಪಾರ್ತೋ ರಾಮೋ ಧೀರತರೋಽಪಿ ಸನ್ ॥

ಅನುವಾದ

ಸೀತೆಗೆ ಸಂಬಂಧಿಸಿದ ಈ ಪ್ರಿಯ ವಾರ್ತೆಯನ್ನು ಕೇಳಿ ಶ್ರೀರಾಮಚಂದ್ರನು ತನ್ನ ಮಹಾ ಧನುಸ್ಸನ್ನು ಎಸೆದು, ಗೃಧ್ರರಾಜ ಜಟಾಯುವನ್ನು ಬಿಗಿದಪ್ಪಿಕೊಂಡು ಶೋಕದಿಂದ ವಿಹ್ವಲನಾಗಿ ಪೃಥ್ವಿಯಲ್ಲಿ ಬಿದ್ದು, ಲಕ್ಷ್ಮಣನೊಂದಿಗೆ ಅಳತೊಡಗಿದನು. ಅತ್ಯಂತ ಧೀರನಾಗಿದ್ದರೂ ಶ್ರೀರಾಮನು ಆಗ ಇಮ್ಮಡಿ ದುಃಖವನ್ನು ಅನುಭವಿಸಿದನು.॥21-22॥

ಮೂಲಮ್ - 23

ಏಕಮೇಕಾಯನೇ ಕೃಚ್ಛ್ರೇ ನಿಃಶ್ವಸಂತಂ ಮುಹುರ್ಮುಹುಃ ।
ಸಮೀಕ್ಷ್ಯ ದುಃಖಿತೋ ರಾಮಃ ಸೌಮಿತ್ರಿಮಿದಮಬ್ರವೀತ್ ॥

ಅನುವಾದ

ಅಸಹಾಯಕನಾದ ಏದುಸಿರು ಬಿಡುತ್ತಾ ಸಂಕಟಪಡುತ್ತಿದ್ದ ಸ್ಥಿತಿಯಲ್ಲಿ, ಪದೇ-ಪದೇ ದೀರ್ಘಶ್ವಾಸವನ್ನೆಳೆಯುತ್ತಾ ಇರುವ ಜಟಾಯುವನ್ನು ನೋಡಿ ಶ್ರೀರಾಮನಿಗೆ ಬಹಳ ದುಃಖವಾಯಿತು. ಅವನು ಸೌಮಿತ್ರಿಯಲ್ಲಿ ಹೇಳಿದನು.॥23॥

ಮೂಲಮ್ - 24

ರಾಜ್ಯಂ ಭ್ರಷ್ಟಂ ವನೇ ವಾಸಃ ಸೀತಾ ನಷ್ಟಾ ಮೃತೋ ದ್ವಿಜಃ ।
ಈದೃಶೀಯಂ ಮಮಾಲಕ್ಷ್ಮೀರ್ದಹೇದಪಿ ಹಿ ಪಾವಕಮ್ ॥

ಅನುವಾದ

ಲಕ್ಷ್ಮಣ! ನನ್ನ ರಾಜ್ಯ ಹೋಯಿತು, ನನಗೆ ವನವಾಸವಾಯಿತು. (ತಂದೆಯು ಮೃತ್ಯುವಾದನು.) ಸೀತೆಯ ಅಪಹರಣವಾಯಿತು ಮತ್ತು ನನ್ನ ಪರಮ ಸಹಾಯಕ ಈ ಪಕ್ಷಿರಾಜನೂ ಸತ್ತು ಹೋದನು. ಈ ನನ್ನ ದುರ್ಭಾಗ್ಯವು ಅಗ್ನಿಯನ್ನು ಸುಟ್ಟು ಬೂದಿ ಮಾಡಬಲ್ಲದು.॥24॥

ಮೂಲಮ್ - 25

ಸಂಪೂರ್ಣಮಪಿ ಚೇದದ್ಯ ಪ್ರತರೇಯಂ ಮಹೋದಧಿಮ್ ।
ಸೋಽಪಿ ನೂನಂ ಮಮಾಲಕ್ಷ್ಮ್ಯಾ ವಿಶುಷ್ಯೇತ್ಸರಿತಾಂ ಪತಿಃ ॥

ಅನುವಾದ

ಇಂದು ನಾನು ತುಂಬಿದ ಮಹಾ ಸಾಗರವನ್ನು ಈಜಲು ತೊಡಗಿದರೆ ನನ್ನ ದುರ್ಭಾಗ್ಯದ ಬೇಗೆಯಿಂದ ಆ ನದಿಗಳ ಸ್ವಾಮಿ ಸಮುದ್ರನೂ ನಿಶ್ಚಯವಾಗಿ ಒಣಗಿ ಹೋದೀತು.॥25॥

ಮೂಲಮ್ - 26

ನಾಸ್ತ್ಯಭಾಗ್ಯತರೋ ಲೋಕೇ ಮತ್ತೋಽಸ್ಮಿನ್ ಸ ಚರಾಚರೇ ।
ಯೇನೇಯಂ ಮಹತೀ ಪ್ರಾಪ್ತಾ ಮಯಾ ವ್ಯಸನವಾಗುರಾ ॥

ಅನುವಾದ

ಈ ಚರಾಚರ ಜಗತ್ತಿನಲ್ಲಿ ನನಗಿಂತ ಮಿಗಿಲಾದ ಭಾಗ್ಯಹೀನನು ಬೇರೆ ಯಾರು ಇರಲಾರನು. ಈ ದೌರ್ಭಾಗ್ಯದಿಂದಲೇ ನನಗೆ ಈ ವಿಪತ್ತುಗಳ ದೊಡ್ಡ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಯಿತು.॥26॥

ಮೂಲಮ್ - 27

ಅಯಂ ಪಿತುರ್ವಯಸ್ಯೋ ಮೇ ಗೃಧ್ರರಾಜೋ ಮಹಾಬಲಃ ।
ಶೇತೇ ವಿನಿಹತೋ ಭೂಮೌ ಮಮ ಭಾಗ್ಯವಿಪರ್ಯಯಾತ್ ॥

ಅನುವಾದ

ಈ ಮಹಾಬಲಿ ಗೃಧ್ರರಾಜ ಜಟಾಯುವು ನಮ್ಮ ತಂದೆಯ ಮಿತ್ರನಾಗಿದ್ದನು. ಆದರೆ ಇಂದು ನನ್ನ ದುರ್ಭಾಗ್ಯದಿಂದ ಸತ್ತು ಈಗ ನೆಲದಲ್ಲಿ ಬಿದ್ದಿರುವನು.॥27॥

ಮೂಲಮ್ - 28

ಇತ್ಯೇವಮುಕ್ತ್ವಾ ಬಹುಶೋ ರಾಘವಃ ಸಹಲಕ್ಷ್ಮಣಃ ।
ಜಟಾಯುಷಂ ಚ ಪಸ್ಪರ್ಶ ಪಿತೃಸ್ನೇಹಂ ನಿದರ್ಶಯನ್ ॥

ಅನುವಾದ

ಹೀಗೆ ಅನೇಕ ಮಾತುಗಳನ್ನಾಡಿ ಲಕ್ಷ್ಮಣ ಸಹಿತ ಶ್ರೀರಾಮನು ಜಟಾಯುವಿನ ಶರೀರದ ಮೇಲೆ ಕೈಯಾಡಿಸಿದನು ಮತ್ತು ತಂದೆಯ ಕುರಿತು ಸ್ನೇಹವಿರುವಂತೆಯೇ ಅವನ ಕುರಿತೂ ಸ್ನೇಹವನ್ನು ಪ್ರದರ್ಶಿಸಿದನು.॥28॥

ಮೂಲಮ್ - 29

ನಿಕೃತ್ತಪಕ್ಷಂ ರುಧಿರಾವಸಿಕ್ತಂ
ತಂ ಗೃಧ್ರರಾಜಂ ಪರಿಗೃಹ್ಯ ರಾಘವಃ ।
ಕ್ವ ಮೈಥಿಲೀ ಪ್ರಾಣಸಮಾ ಗತೇತಿ
ವಿಮುಚ್ಯ ವಾಚಂ ನಿಪಪಾತ ಭೂಮೌ ॥

ಅನುವಾದ

ರೆಕ್ಕೆಗಳು ತುಂಡಾದ್ದರಿಂದ ಗೃಧ್ರರಾಜ ಜಟಾಯು ರಕ್ತಸಿಕ್ತನಾಗಿದ್ದನು. ಅದೇ ಸ್ಥಿತಿಯಲ್ಲಿ ಅವನನ್ನು ಬಿಗಿದಪ್ಪಿಕೊಂಡು ಶ್ರೀರಘುನಾಥನು ಕೇಳಿದನು- ಅಯ್ಯಾ! ನನ್ನ ಪ್ರಾಣಪ್ರಿಯೆ ಮೈಥಿಲಿ ಎಲ್ಲಿಗೆ ಹೋದಳು? ಎಂದು ಹೇಳುತ್ತಾ ಅವನು ನೆಲಕ್ಕೆ ಕೆಡುಹಿಬಿದ್ದನು.॥29॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅರವತ್ತೇಳನೆಯ ಸರ್ಗ ಸಂಪೂರ್ಣವಾಯಿತು. ॥67॥