वाचनम्
ಭಾಗಸೂಚನಾ
ಲಕ್ಷ್ಮಣನು ಶ್ರೀರಾಮನನ್ನು ಸಮಜಾಯಿಸುವುದು
ಮೂಲಮ್ - 1
ತಂ ತಥಾ ಶೋಕಸಂತಪ್ತಂ ವಿಲಪಂತಮನಾಥವತ್ ।
ಮೋಹೇನ ಮಹತಾಯುಕ್ತಂ ಪರಿದ್ಯೂನಮಚೇತನಮ್ ॥
ಮೂಲಮ್ - 2
ತತಃ ಸೌಮಿತ್ರಿರಾಶ್ವಸ್ಯ ಮುಹೂರ್ತಾದಿವ ಲಕ್ಷ್ಮಣಃ ।
ರಾಮಂ ಸಂಬೋಧಯಾಮಾಸ ಚರಣೌ ಚಾಭಿಪೀಡಯನ್ ॥
ಅನುವಾದ
ಶ್ರೀರಾಮಚಂದ್ರನು ಶೋಕದಿಂದ ಸಂತಪ್ತನಾಗಿ ಅನಾಥನಂತೆ ವಿಲಾಪ ಮಾಡತೊಡಗಿದನು. ಅವನು ಮಹಾ ಮೋಹದಿಂದ ಕೂಡಿ, ಅತ್ಯಂತ ದುರ್ಬಲನಾದನು. ಅವನಿಗೆ ಚಿತ್ತಸ್ವಾಸ್ತ್ಯ ಇರಲಿಲ್ಲ. ಈ ಸ್ಥಿತಿಯಲ್ಲಿ ಅವನನ್ನು ನೋಡಿ ಸುಮಿತ್ರಾಕುಮಾರ ಲಕ್ಷ್ಮಣನು ಎರಡುಗಳಿಗೆ ಆಶ್ವಾಸನೆ ಕೊಟ್ಟು ಮತ್ತೆ ಅವನ ಕಾಲನ್ನು ಒತ್ತುತ್ತಾ ಸಮಜಾಯಿಸತೊಡಗಿದನು.॥1-2॥
ಮೂಲಮ್ - 3
ಮಹತಾ ತಪಸಾ ಚಾಪಿ ಮಹತಾ ಚಾಪಿ ಕರ್ಮಣಾ ।
ರಾಜ್ಞಾ ದಶರಥೇನಾಸಿಲ್ಲಬ್ಧೋಽಮೃತಮಿವಾಮರೈಃ ॥
ಅನುವಾದ
ಅಣ್ಣ! ನಮ್ಮ ತಂದೆ ದಶರಥ ಮಹಾರಾಜರು ದೊಡ್ಡ ತಪಸ್ಸು ಮತ್ತು ಮಹಾಕರ್ಮದ ಅನುಷ್ಠಾನ ಮಾಡಿ ದೇವತೆಗಳು ಮಹಾನ್ ಪ್ರಯತ್ನದಿಂದ ಅಮೃತಪಡೆದಂತೆ ನಿನ್ನನ್ನು ಪುತ್ರರೂಪದಿಂದ ಪಡೆದನು.॥3॥
ಮೂಲಮ್ - 4
ತವ ಚೈವ ಗುಣೈರ್ಬದ್ಧಸ್ತ್ವದ್ವಿಯೋಗಾನ್ಮಹೀಪತಿಃ ।
ರಾಜಾ ದೇವತ್ವಮಾಪನ್ನೋ ಭರತಸ್ಯ ಯಥಾ ಶ್ರುತಮ್ ॥
ಅನುವಾದ
ಭರತನ ಬಾಯಿಯಿಂದ ಕೇಳಿದ ನಿನ್ನ ಗುಣಗಳಲ್ಲಿ ಭೂಪಾಲ ದಶರಥ ಮಹಾರಾಜರು ಬಂಧಿತರಾಗಿ ನಿನ್ನ ವಿಯೋಗದಿಂದಲೇ ದಿವಂಗತರಾದರು.॥4॥
ಮೂಲಮ್ - 5
ಯದಿ ದುಃಖಮಿದಂ ಪ್ರಾಪ್ತಂ ಕಾಕುತ್ಸ್ಥ ನ ಸಹಿಷ್ಯಸೇ ।
ಪ್ರಾಕೃತಶ್ಚಾಲ್ಪಸತ್ತ್ವಶ್ಚ ಇತರಃ ಕಃ ಸಹಿಷ್ಯತಿ ॥
ಅನುವಾದ
ಕಕುತ್ಸ್ಥ ಕುಲಭೂಷಣ! ನಮ್ಮ ಮೇಲೆ ಬಂದ ಈ ದುಃಖವನ್ನು ನೀನೇ ಧೈರ್ಯದಿಂದ ಸಹಿಸದಿದ್ದರೆ ಬೇರೆ ಯಾವ ಅಲ್ಪ ಶಕ್ತಿಯುಳ್ಳ ಸಾಧಾರಣ ಪುರುಷನು ಹೇಗೆ ಸಹಿಸಬಲ್ಲನು.॥5॥
ಮೂಲಮ್ - 6
ಆಶ್ವಸಿಹಿ ನರಶ್ರೇಷ್ಠ ಪ್ರಾಣಿನಃ ಕಸ್ಯ ನಾಪದಃ ।
ಸಂಸ್ಪೃಶಂತ್ಯಾಗ್ನಿವದ್ರಾಜನ್ ಕ್ಷಣೇನ ವ್ಯಪಯಾಂತಿ ಚ ॥
ಅನುವಾದ
ನರಶ್ರೇಷ್ಠನೇ! ನೀನು ಧೈರ್ಯ ಧರಿಸು. ಜಗತ್ತಿನಲ್ಲಿ ಆಪತ್ತು ಯಾರ ಮೇಲೆ ಬರುವುದಿಲ್ಲ? ರಾಜನೇ! ಆಪತ್ತುಗಳು ಅಗ್ನಿಯಂತೆ ಒಂದು ಕ್ಷಣ ಸ್ಪರ್ಷಿಸಿ ಮತ್ತೊಂದು ಕ್ಷಣದಲ್ಲಿ ದೂರವಾಗುತ್ತವೆ.॥6॥
ಮೂಲಮ್ - 7
ದುಃಖಿತೋ ಹಿ ಭವಾನ್ಲ್ಲೋಕಾಂಸ್ತೇಜಸಾ ಯದಿ ಧಕ್ಷ್ಯತೇ ।
ಆರ್ತಾಃ ಪ್ರಜಾ ನರವ್ಯಾಘ್ರ ಕ್ವ ನು ಯಾಸ್ಯಂತಿ ನಿರ್ವೃತಿಮ್ ॥
ಅನುವಾದ
ಪುರುಷಸಿಂಹನೇ! ನೀನು ದುಃಖೀತನಾಗಿ ತನ್ನ ತೇಜದಿಂದ ಸಮಸ್ತ ಲೋಕಗಳನ್ನು ಸುಟ್ಟುಬಿಟ್ಟರೆ, ಪೀಡಿತವಾದ ಪ್ರಜೆಯು ಯಾರಲ್ಲಿ ಶರಣು ಹೋಗಿ ಸುಖ ಶಾಂತಿ ಪಡೆಯುವುದು.॥7॥
ಮೂಲಮ್ - 8
ಲೋಕಸ್ವಭಾವ ಏವೈಷ ಯಯಾತಿರ್ನಹುಷಾತ್ಮಜಃ ।
ಗತಃ ಶಕ್ರೇಣ ಸಾಲೋಕ್ಯಮನಯಸ್ತಂ ಸಮಸ್ಪೃಶತ್ ॥
ಅನುವಾದ
ಇಲ್ಲಿ ಎಲ್ಲರ ಮೇಲೆ ದುಃಖ-ಶೋಕಗಳು ಬಂದು ಹೋಗುವುದು ಈ ಲೋಕದ ಸ್ವಭಾವವೇ ಆಗಿದೆ. ನಹುಷಪುತ್ರ ಯಯಾತಿಗೆ ಇಂದ್ರನಂತೆ ಲೋಕ (ದೇವೇಂದ್ರ ಪದವಿ) ದೊರಕಿತ್ತು. ಆದರೆ ಅಲ್ಲಿಯೂ ಅನ್ಯಾಯದ ಮೂಲಕ ದುಃಖವು ಅವನನ್ನು ಸ್ಪರ್ಶಿಸದೆ ಬಿಡಲಿಲ್ಲ.॥8॥
ಮೂಲಮ್ - 9
ಮಹರ್ಷಿರ್ಯೋ ವಸಿಷ್ಠಸ್ತು ಯಃ ಪಿತುರ್ನಃ ಪುರೋಹಿತಃ ।
ಅಹ್ನಾ ಪುತ್ರಶತಂ ಜಜ್ಞೇ ತಥೈವಾಸ್ಯ ಪುನರ್ಹತಮ್ ॥
ಅನುವಾದ
ನಮ್ಮ ತಂದೆಯ ಪುರೋಹಿತ ಮಹರ್ಷಿ ವಸಿಷ್ಠರಿಗೂ ಒಂದೇ ದಿನದಲ್ಲಿ ನೂರು ಪುತ್ರರು ಪ್ರಾಪ್ತರಾದರು ಹಾಗೂ ಒಂದೇ ದಿನ ಅವರೆಲ್ಲರೂ ವಿಶ್ವಾಮಿತ್ರನ ಕೈಯಿಂದ ಹತರಾದರು.॥9॥
ಮೂಲಮ್ - 10
ಯಾ ಚೇಯಂ ಜಗತೋ ಮಾತಾ ಸರ್ವಲೋಕನಮಸ್ಕೃತಾ ।
ಅಸ್ಯಾಶ್ಚ ಚಲನಂ ಭೂಮೇರ್ದೃಶ್ಯತೇ ಕೋಸಲೇಶ್ವರ ॥
ಅನುವಾದ
ಕೋಸಲೇಶ್ವರನೇ! ವಿಶ್ವವಂದಿತಾ ಜಗನ್ಮಾತಾ ಪಥ್ವಿಯು ನಡುಗುತ್ತಿರುವುದನ್ನು ನೋಡಲಾಗುತ್ತದೆ.॥10॥
ಮೂಲಮ್ - 11
ಯೌ ಧರ್ಮೌ ಜಗತೋ ನೇತ್ರೌ ಯತ್ರ ಸರ್ವಂ ಪ್ರತಿಷ್ಠಿತಮ್ ।
ಆದಿತ್ಯಚಂದ್ರೌ ಗ್ರಹಣಮಭ್ಯುಪೇತೌ ಮಹಾಬಲೌ ॥
ಅನುವಾದ
ಧರ್ಮಪ್ರವರ್ತಕ, ಜಗಚ್ಛಕ್ಷು ಮಹಾಬಲಿ ಸೂರ್ಯನ ಮೇಲೆಯೇ ಇಡೀ ಜಗತ್ತು ನಿಂತಿದೆ. ಅಂತಹ ಸೂರ್ಯ ಮತ್ತು ಚಂದ್ರರೂ ರಾಹುವಿನಿಂದ ಗ್ರಹಣಕ್ಕೆ ಒಳಗಾಗುತ್ತಾರೆ.॥11॥
ಮೂಲಮ್ - 12
ಸು ಮಹಾಂತ್ಯಪಿ ಭೂತಾನಿ ದೇವಾಶ್ಚ ಪುರುಷರ್ಷಭ ।
ನ ದೈವಸ್ಯ ಪ್ರಮುಂಚಂತಿ ಸರ್ವಭೂತಾನಿ ದೇಹಿನಃ ॥
ಅನುವಾದ
ಪುರುಷ ಪ್ರವರ! ದೊಡ್ಡ-ದೊಡ್ಡ ಭೂತ ಮತ್ತು ದೇವತೆಯೂ ಕೂಡ ದೈವ (ಪ್ರಾರಬ್ಧ)ದ ಅಧೀನತೆಯಿಂದ ಮುಕ್ತರಾಗಲಾರರು. ಹೀಗಿರುವಾಗ ಸಮಸ್ತ ದೇಹಧಾರಿಗಳ ಕುರಿತು ಹೇಳುವುದೇನಿದೆ.॥12॥
ಮೂಲಮ್ - 13
ಶಕ್ರಾದಿಷ್ವಪಿ ದೇವೇಷು ವರ್ತಮಾನೌ ನಯಾನಯೌ ।
ಶ್ರೂಯೇತೇ ನರಶಾರ್ದೂಲ ನ ತ್ವಂ ಶೋಚಿತುಮರ್ಹಸಿ ॥
ಅನುವಾದ
ನರಶ್ರೇಷ್ಠನೇ! ಇಂದ್ರಾದಿ ದೇವತೆಗಳಿಗೂ ಕೂಡ ನೀತಿ ಮತ್ತು ಅನೀತಿಯಿಂದ ಸುಖ ಹಾಗೂ ದುಃಖಗಳ ಪ್ರಾಪ್ತಿ ಯಾಗುವುದನ್ನು ಕೇಳುತ್ತೇವೆ. ಆದ್ದರಿಂದ ನೀನು ಶೋಕಿಸಬಾರದು.॥13॥
ಮೂಲಮ್ - 14
ಮೃತಾಯಾಮಪಿ ವೈದೇಹ್ಯಾಂ ನಷ್ಟಾಯಾಮಪಿ ರಾಘವ ।
ಶೋಚಿತುಂ ನಾರ್ಹಸೇ ವೀರ ಯಥಾನ್ಯಃ ಪ್ರಾಕೃತಸ್ತಥಾ ॥
ಅನುವಾದ
ವೀರ ರಘುನಂದನ! ವೈದೇಹಿ ಒಂದೊಮ್ಮೆ ಸತ್ತುಹೋದರೂ, ನಾಶವಾದರೂ ನೀನು ಸಾಮಾನ್ಯ ಬೇರೆಯವರಂತೆ ಶೋಕ ಚಿಂತೆ ಮಾಡಬಾರದು.॥14॥
ಮೂಲಮ್ - 15
ತ್ವದ್ವಿಧಾ ನಹಿ ಶೋಚಂತಿ ಸತತಂ ಸರ್ವದರ್ಶಿನಃ ।
ಸುಮಹತ್ಸ್ವಪಿ ಕೃಚ್ಛ್ರೇಷು ರಾಮಾನಿರ್ವಿಣ್ಣದರ್ಶನಾಃ ॥
ಅನುವಾದ
ಶ್ರೀರಾಮಾ! ನಿನ್ನಂತಹ ಸರ್ವಜ್ಞ ಪುರುಷರು ಭಾರೀ ವಿಪತ್ತು ಬಂದಾಗಲೂ ಶೋಕಿಸುವುದಿಲ್ಲ. ಅವರು ಖೇದರಹಿತರಾಗಿ ತಮ್ಮ ಶಕ್ತಿಯನ್ನು ನಾಶಗೊಳಿಸಲು ಬಿಡುವುದಿಲ್ಲ.॥15॥
ಮೂಲಮ್ - 16
ತತ್ತ್ವತೋ ಹಿ ನರಶ್ರೇಷ್ಠ ಬುದ್ಧ್ಯಾ ಸಮನುಚಿಂತಯ ।
ಬುದ್ಧ್ಯಾ ಯುಕ್ತಾ ಮಹಾಪ್ರಾಜ್ಞಾ ವಿಜಾನಂತಿ ಶುಭಾಶುಭೇ ॥
ಅನುವಾದ
ನರಶ್ರೇಷ್ಠನೇ! ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಉಚಿತವೇನು, ಅನುಚಿತವೇನು? ಎಂಬುದನ್ನು ನೀನು ಬುದ್ದಿಯಿಂದ ತಾತ್ವಿಕ ವಿಚಾರ ಮಾಡಿ ನಿಶ್ಚಯಿಸು, ಏಕೆಂದರೆ ಬುದ್ಧಿಯುಕ್ತ ಮಹಾ ಜ್ಞಾನಿಗಳು ಕರ್ತವ್ಯ ಅಕರ್ತವ್ಯ, ಉಚಿತ-ಅನುಚಿತ ಇವನ್ನು ಚೆನ್ನಾಗಿ ತಿಳಿದಿರುತ್ತಾರೆ.॥16॥
ಮೂಲಮ್ - 17
ಅದೃಷ್ಟಗುಣದೋಷಾಣಾಮಧ್ರುವಾಣಾಂ ತು ಕರ್ಮಣಾಮ್ ।
ನಾಂತರೇಣ ಕ್ರಿಯಾಂ ತೇಷಾಂ ಫಲಮಿಷ್ಟಂ ಪ್ರವರ್ತತೇ ॥
ಅನುವಾದ
ಯಾವುದರ ಗುಣ-ದೋಷ ತಿಳಿಯದೇ, ನೋಡದೆ ಹಾಗೂ ನಶ್ವರ ಫಲವನ್ನು ಕೊಟ್ಟು ನಾಶವಾಗುವಂತಹ ಕರ್ಮಗಳ ಶುಭಾಶುಭ ಫಲವನ್ನು ಆಚರಣೆಯಲ್ಲಿ ತರದೆ ಪ್ರಾಪ್ತವಾಗುವುದಿಲ್ಲ.॥17॥
ಮೂಲಮ್ - 18
ತ್ವಮೇವಂ ಹಿ ಪುರಾ ವೀರ ತ್ವಮೇವ ಬಹುಶೋಕ್ತವಾನ್ ।
ಅನುಶಿಷ್ಯಾದ್ಧಿ ಕೋ ನು ತ್ವಾಮಪಿ ಸಾಕ್ಷಾದ್ಬೃಹಸ್ಪತಿಃ ॥
ಅನುವಾದ
ವೀರ! ಮೊದಲು ನೀನೇ ಅನೇಕ ಸಲ ಈ ರೀತಿಯ ಮಾತುಗಳನ್ನು ಹೇಳಿ ನನ್ನನ್ನು ಸಮಜಾಯಿಸಿದ್ದೆ. ನಿನಗೆ ಯಾರು ಕಲಿಸಬಲ್ಲರು? ಸಾಕ್ಷಾತ್ ಬೃಹಸ್ಪತಿಯೂ ನಿನಗೆ ಉಪದೇಶಮಾಡಲು ಶಕ್ತನಲ್ಲ.॥18॥
ಮೂಲಮ್ - 19
ಬುದ್ಧಿಶ್ಚ ತೇ ಮಹಾಪ್ರಾಜ್ಞ ದೇವೈರಪಿ ದುರನ್ವಯಾ ।
ಶೋಕೇನಾಭಿಪ್ರಸ್ತುಪ್ತಂ ತೇ ಜ್ಞಾನಂ ಸಂಬೋಧಯಾಮ್ಯಹಮ್ ॥
ಅನುವಾದ
ಮಹಾಪ್ರಜ್ಞನೇ! ನಿನ್ನ ಬುದ್ಧಿಯ ಆಳ ದೇವತೆಗಳಿಗೂ ತಿಳಿಯಲು ಕಠಿಣವಾಗಿದೆ. ಈಗ ಶೋಕದಿಂದಾಗಿ ನಿನ್ನ ಜ್ಞಾನ ಮಲಗಿದಂತೆ ಅನಿಸುತ್ತಿದೆ. ಅದಕ್ಕಾಗಿ ನಾನು ಅದನ್ನು ಎಚ್ಚರಿಸುತ್ತಿದ್ದೇನೆ.॥19॥
ಮೂಲಮ್ - 20
ದಿವ್ಯಂ ಚ ಮಾನುಷಂ ಚೈವಮಾತ್ಮನಶ್ಚ ಪರಾಕ್ರಮಮ್ ।
ಇಕ್ಷ್ವಾಕುವೃಷಭಾವೇಕ್ಷ್ಯ ಯತಸ್ವ ದ್ವಿಷತಾಂ ವಧೇ ॥
ಅನುವಾದ
ಇಕ್ವಾಕು ಕುಲ ಶ್ರೇಷ್ಠನೇ! ನೀನು ದೇವತೋಚಿತ ಹಾಗೂ ಮಾನವೋಚಿತ ಪರಾಕ್ರಮವನ್ನು ನೋಡಿ ಅದನ್ನು ಸಂದರ್ಭಕ್ಕನುರೂಪವಾಗಿ ಉಪಯೋಗಿಸುತ್ತ ಶತ್ರುಗಳನ್ನು ವಧಿಸಲು ಪ್ರಯತ್ನಿಸು.॥20॥
(ಶ್ಲೋಕ - 21)
ಮೂಲಮ್
ಕಿಂ ತೇ ಸರ್ವವಿನಾಶೇನ ಕೃತೇನ ಪುರುಷರ್ಷಭ ।
ತಮೇವ ತು ರಿಪುಂ ಪಾಪಂ ವಿಜ್ಞಾಯೋದ್ಧರ್ತುಮರ್ಹಸಿ ॥
ಅನುವಾದ
ಪುರುಷಪ್ರವರ! ಸಮಸ್ತ ಜಗತ್ತನ್ನೂ ನಾಶಮಾಡುವುದರಿಂದ ನಿನಗೆ ಏನು ಸಿಗಬಹುದು? ಆ ಪಾಪೀ ಶತ್ರುವನ್ನು ಹುಡುಕಿ, ಅವನನ್ನು ಕಿತ್ತು ಎಸೆಯುವ ಪ್ರಯತ್ನಮಾಡಬೇಕು.॥21॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅರವತ್ತಾರನೆಯ ಸರ್ಗ ಸಂಪೂರ್ಣವಾಯಿತು. ॥66॥