०६५ लक्ष्मणक्रोधोपशमनम्

वाचनम्
ಭಾಗಸೂಚನಾ

ಲಕ್ಷ್ಮಣನು ಶ್ರೀರಾಮನನ್ನು ತಿಳಿಯಹೇಳಿ ಶಾಂತಗೊಳಿಸಿದುದು

ಮೂಲಮ್ - 1

ತಪ್ಯಮಾನಂ ತದಾ ರಾಮಂ ಸೀತಾಹರಣಕರ್ಷಿತಮ್ ।
ಲೋಕಾನಾಮಭವೇ ಯುಕ್ತಂಸಾಂವರ್ತಕಮಿವಾನಲಮ್ ॥

ಮೂಲಮ್ - 2

ವೀಕ್ಷಮಾಣಂ ಧನುಃ ಸಜ್ಯಂನಿಃಶ್ವಸಂತಂ ಪುನಃ ಪುನಃ ।
ದಗ್ಧುಕಾಮಂ ಜಗತ್ಸರ್ವಂ ಯುಗಾಂತೇ ಚ ಯಥಾ ಹರಮ್ ॥

ಮೂಲಮ್ - 3

ಅದೃಷ್ಟಪೂರ್ವಂ ಸಂಕ್ರುದ್ಧಂ ದೃಷ್ಟ್ವಾರಾಮಂ ಸ ಲಕ್ಷ್ಮಣಃ ।
ಅಬ್ರವೀತ್ ಪ್ರಾಂಜಲಿರ್ವಾಕ್ಯಂ ಮುಖೇನ ಪರಿಶುಷ್ಯತಾ ॥

ಅನುವಾದ

ಸೀತಾಪಹರಣದ ಶೋಕದಿಂದ ಪೀಡಿತನಾದ ಶ್ರೀರಾಮನು ಆಗ ಸಂತಪ್ತನಾಗಿ ಪ್ರಳಯಕಾಲದ ಅಗ್ನಿಯಂತೆ ಸಮಸ್ತ ಲೋಕಗಳನ್ನು ಸಂಹರಿಸಲು ಮುಂದಾಗಿ ಧನುಸ್ಸಿಗೆ ನಾಣನ್ನೇರಿಸಿ ಪದೇ-ಪದೇ ಅದನ್ನು ನೋಡುತ್ತಾ, ದೀರ್ಘವಾಗಿ ನಿಟ್ಟುಸಿರುಬಿಡುತ್ತಾ, ಕಲ್ಪಾಂತ್ಯದಲ್ಲಿ ರುದ್ರದೇವರಂತೆ ಸಮಸ್ತ ಜಗತ್ತನ್ನು ಸುಟ್ಟುಬಿಡಲು ಇಚ್ಛಿಸಿದಾಗ, ಅತ್ಯಂತ ಕುಪಿತನಾದ ಶ್ರೀರಾಮನ ಇಂತಹ ರೂಪವನ್ನು ಹಿಂದೆ ಎಂದೂ ನೋಡದ ಲಕ್ಷ್ಮಣನು ಕೈಮುಗಿದುಕೊಂಡು ಬಾಡಿದ ಮುಖದಿಂದ ಈ ಪ್ರಕಾರ ಹೇಳಿದನು.॥1-3॥

ಮೂಲಮ್ - 4

ಪುರಾ ಭೂತ್ವಾ ಮೃದುರ್ದಾಂತಃಸರ್ವಭೂತಹಿತೇ ರತಃ ।
ನ ಕ್ರೋಧವಶಮಾಪನ್ನಃ ಪ್ರಕೃತಿಂ ಹಾತುಮರ್ಹಸಿ ॥

ಅನುವಾದ

ಆರ್ಯ! ನೀನು ಮೊದಲು ಕೋಮಲ ಸ್ವಭಾದಿಂದ ಕೂಡಿದ, ಜಿತೇಂದ್ರಿಯ ಮತ್ತು ಸಮಸ್ತ ಪ್ರಾಣಿಗಳ ಹಿತದಲ್ಲಿ ತತ್ಪರನಾಗಿದ್ದೀಯೆ, ಈಗ ಕ್ರೋಧಕ್ಕೆ ವಶನಾಗಿ ತನ್ನ ಸ್ವಭಾವವನ್ನು ಪರಿತ್ಯಜಿಸಬೇಡ.॥4॥

ಮೂಲಮ್ - 5

ಚಂದ್ರೇ ಲಕ್ಷ್ಮೀಃ ಪ್ರಭಾ ಸೂರ್ಯೇ ಗತಿರ್ವಾಯೌ ಭುವಿ ಕ್ಷಮಾ ।
ಏತಚ್ಚ ನಿಯತಂ ನಿತ್ಯಂ ತ್ವಯಿ ಚಾನುತ್ತಮಂ ಯಶಃ ॥

ಅನುವಾದ

ಚಂದ್ರನಲ್ಲಿ ಶೋಭೆ, ಸೂರ್ಯನಲ್ಲಿ ಪ್ರಭೆ, ವಾಯುವಿನಲ್ಲಿ ಗತಿ, ಪಥ್ವಿಯಲ್ಲಿ ಕ್ಷಮೆ ನಿತ್ಯ ವಿರಾಜಿಸುವಂತೆ ನಿನ್ನಲ್ಲಿ ಸರ್ವೋತ್ತಮ ಯಶವು ಸದಾ ಪ್ರಕಾಶಿತವಾಗುತ್ತದೆ.॥5॥

ಮೂಲಮ್ - 6

ಏಕಸ್ಯ ನಾಪರಾಧೇನ ಲೋಕಾನ್ಹರ್ತುಂ ತ್ವಮರ್ಹಸಿ ।
ನನು ಜಾನಾಮಿ ಕಸ್ಯಾಯಂ ಭಗ್ನಃ ಸಾಂಗ್ರಾಮಿಕೋ ರಥಃ ॥

ಅನುವಾದ

ನೀನು ಯಾವನೋ ಒಬ್ಬನ ಅಪರಾಧದಿಂದ ಸಮಸ್ತ ಲೋಕಗಳನ್ನು ಸಂಹರಿಸಬೇಡ. ಈ ಮುರಿದು ಬಿದ್ದ ಯುದ್ಧೋಪಯೋಗಿ ರಥವು ಯಾರದೆಂದು ತಿಳಿಯಲು ನಾನು ಪ್ರಯತ್ನಿಸುತ್ತೇನೆ.॥6॥

ಮೂಲಮ್ - 7

ಕೇನ ವಾ ಕಸ್ಯ ವಾ ಹೇತೋಃ ಸಯುಗಃ ಸಪರಿಚ್ಛದಃ ।
ಖುರನೇಮಿಕ್ಷತಶ್ಚಾಯಂ ಸಿಕ್ತೋ ರುಧಿರಬಿಂದುಭಿಃ ॥

ಮೂಲಮ್ - 8

ದೇಶೋ ನಿವೃತ್ತಸಂಗ್ರಾಮಃ ಸುಘೋರಃ ಪಾರ್ಥಿವಾತ್ಮಜ ।
ಏಕಸ್ಯ ತು ವಿಮರ್ದೋಽಯಂ ನ ದ್ವಯೋರ್ವದತಾಂ ವರ ॥

ಮೂಲಮ್ - 9

ನಹಿ ವೃತ್ತಂ ಹಿ ಪಶ್ಯಾಮಿ ಬಲಸ್ಯ ಮಹತಃ ಪದಮ್ ।
ನೈಕಸ್ಯ ತು ಕೃತೇ ಲೋಕಾನ್ವಿನಾಶಯಿತುಮರ್ಹಸಿ ॥

ಅನುವಾದ

ಅಥವಾ ಯಾರು ಯಾವ ಉದ್ದೇಶದಿಂದ ನೊಗಸಹಿತ ರಥವನ್ನು ಮುರಿದಿರುವನು? ಇದನ್ನು ತಿಳಿಯುವುದಿದೆ. ರಾಜಕುಮಾರ! ಈ ಸ್ಥಾನವು ಕುದುರೆಗಳ ಗೊರಸುಗಳಿಂದ ಮತ್ತು ರಥ ಚಕ್ರಗಳಿಂದ ಅಗೆದಂತೆ ಇದೆ, ಜೊತೆಗೆ ರಕ್ತದ ತೊಟ್ಟುಗಳು ಚೆಲ್ಲಿಹೋಗಿವೆ. ಇದರಿಂದ ಇಲ್ಲಿ ದೊಡ್ಡ ಭಯಂಕರ ಕಾಳಗವೇ ನಡೆದಿದೆ ಎಂದು ಸಿದ್ಧವಾಗುತ್ತದೆ, ಆದರೆ ಈ ಸಂಗ್ರಾಮ ಚಿಹ್ನೆಯು ಯವುದೋ ಒಂದೇ ರಥದ್ದಾಗಿದೆ, ಎರಡಿಲ್ಲ. ಮಾತಿನಲ್ಲಿ ಶ್ರೇಷ್ಠನಾದ ಶ್ರೀರಾಮ! ಇಲ್ಲಿ ಯಾವುದೇ ವಿಶಾಲ ಸೈನ್ಯದ ಹೆಜ್ಜೆಗುರುತು ನಾನು ನೋಡುತ್ತಿಲ್ಲ. ಆದ್ದರಿಂದ ಯಾರೋ ಒಬ್ಬನ ಅಪರಾಧದಿಂದಲೇ ಲೋಕಗಳನ್ನು ವಿನಾಶ ಮಾಡಬಾರದು.॥7-9॥

ಮೂಲಮ್ - 10

ಯುಕ್ತದಂಡಾ ಹಿ ಮೃದವಃ ಪ್ರಶಾಂತಾ ವಸುಧಾಧಿಪಾಃ ।
ಸದಾ ತ್ವಂ ಸರ್ವಭೂತಾನಾಂ ಶರಣ್ಯಃ ಪರಮಾ ಗತಿಃ ॥

ಅನುವಾದ

ಏಕೆಂದರೆ ರಾಜರು ಅಪರಾಧಕ್ಕನುಸಾರವೇ ಉಚಿತ ದಂಡವನ್ನು ವಿಧಿಸುವ ಕೋಮಲ ಸ್ವಭಾವ ಮತ್ತು ಶಾಂತರಾಗಿರುತ್ತಾರೆ. ನೀನಾದರೋ ಸದಾ ಸಮಸ್ತ ಪ್ರಾಣಿಗಳಿಗೆ ಶರಣ್ಯನಾಗಿದ್ದು, ಅವರ ಪರಮಗತಿಯಾಗಿರುವೆ.॥10॥

ಮೂಲಮ್ - 11½

ಕೋ ನು ದಾರಪ್ರಣಾಶಂ ತೇ ಸಾಧು ಮನ್ಯೇತ ರಾಘವ ।
ಸರಿತಃ ಸಾಗರಾಃ ಶೈಲಾ ದೇವಗಂಧರ್ವದಾನವಾಃ ॥
ನಾಲಂ ತೇ ವಿಪ್ರಿಯಂ ಕರ್ತುಂ ದೀಕ್ಷಿತಸ್ಯೇವ ಸಾಧವಃ ।

ಅನುವಾದ

ರಘುನಂದನ! ನಿನ್ನ ಪತ್ನಿಯ ಅಪಹರಣ ಅಥವಾ ವಿನಾಶ ಯಾರಿಗೆ ಒಳ್ಳೆಯದೆನಿಸುವುದು? ಯಜ್ಞದಲ್ಲಿ ದೀಕ್ಷಿತನಾದವನ ಸಾಧು ಸ್ವಭಾವದ ಋತ್ವಿಜರು ಎಂದಿಗೂ ಅಪ್ರಿಯಮಾಡಲಾರರು, ಅದರಂತೆ ಸಮುದ್ರಗಳು, ನದಿಗಳು, ಪರ್ವತಗಳು, ದೇವತೆಗಳು, ಗಂಧರ್ವರು, ದಾನವರು ಯಾರೂ ಕೂಡ ನಿನಗೆ ಪ್ರತಿಕೂಲ ಆಚರಣೆ ಮಾಡಲಾರರು.॥11॥

ಮೂಲಮ್ - 12½

ಯೇನ ರಾಜನ್ ಹೃತಾ ಸೀತಾ ತಮನ್ವೇಷಿತುಮರ್ಹಸಿ ॥
ಮದ್ವತೀಯೋ ಧನುಷ್ಪಾಣಿಃ ಸಹಾಯೈಃ ಪರಮರ್ಷಿಭಿಃ ।

ಅನುವಾದ

ರಾಜನೇ! ಸೀತೆಯನ್ನು ಅಪಹರಿಸಿದವನನ್ನೇ ಹುಡುಕಬೇಕು. ನೀನು ನನ್ನೊಂದಿಗೆ ಧನುಸ್ಸನ್ನು ಧರಿಸಿ, ದೊಡ್ಡ-ದೊಡ್ಡ ಋಷಿಗಳ ಸಹಾಯದಿಂದ ಆಕೆಯು ಎಲ್ಲಿರುವಳೆಂದು ತಿಳಿಯಬೇಕು.॥12॥

ಮೂಲಮ್ - 13

ಸಮುದ್ರಂ ವಾ ವಿಚೇಷ್ಯಾಮಃ ಪರ್ವತಾಂಶ್ಚ ವನಾನಿ ಚ ॥

ಮೂಲಮ್ - 14

ಗುಹಾಶ್ಚ ವಿವಿಧಾ ಘೋರಾಃ ಪದ್ಮಿನ್ಯೋ ವಿವಿಧಾಸ್ತಥಾ ।
ದೇವಗಂಧರ್ವಲೋಕಾಂಶ್ಚ ವಿಚೇಷ್ಯಾಮಃ ಸಮಾಹಿತಾಃ ॥

ಮೂಲಮ್ - 15

ಯಾವನ್ನಾಧಿಗಮಿಷ್ಯಾಮಸ್ತವ ಭಾರ್ಯಾಪಹಾರಿಣಮ್ ।
ನ ಚೇತ್ಸಾಮ್ನಾ ಪ್ರದಾಸ್ಯಂತಿ ಪತ್ನೀಂ ತೇ ತ್ರಿದಶೇಶ್ವರಾಃ ।
ಕೋಸಲೇಂದ್ರ ತತಃ ಪಶ್ಚಾತ್ ಪ್ರಾಪ್ತಕಾಲಂ ಕರಿಷ್ಯಸಿ ॥

ಅನುವಾದ

ನಾವೆಲ್ಲರೂ ಏಕಾಗ್ರಚಿತ್ತರಾಗಿ ಸಮುದ್ರದಲ್ಲಿ, ಪರ್ವತಗಳಲ್ಲಿ, ವನಗಳಲ್ಲಿ ಹುಡುಕೋಣ, ನಾನಾ ಪ್ರಕಾರದ ಗುಹೆಗಳಲ್ಲಿ ಬಗೆ ಬಗೆಯ ಸರೋವರಗಳಲ್ಲಿ ಅನ್ವೇಷಣೆ ಮಾಡೋಣ. ದೇವತೆಗಳ, ಗಂಧರ್ವರ ಲೋಕಗಳಲ್ಲಿಯೂ ಅರಸೋಣ. ನಿನ್ನ ಪತ್ನಿಯನ್ನು ಅಪಹರಣ ಮಾಡಿದ ದುರಾತ್ಮನು ಸಿಗುವವರೆಗೆ ಪ್ರಯತ್ನಮಾಡುತ್ತಾ, ಇರುವಾ. ಕೋಸಲೇಶ್ವರನೇ! ನಮ್ಮ ಶಾಂತಿಪೂರ್ಣ ವರ್ತನೆಯಿಂದ ದೇವತೆಗಳು ನಿನ್ನ ಪತ್ನಿಯ ಸುಳಿವನ್ನು ಕೊಡದಿದ್ದರೆ ಆಗ ಅದಕ್ಕನುಗುಣವಾಗಿ ನೀನು ಕಾರ್ಯ ಮಾಡು.॥13-15॥

ಮೂಲಮ್ - 16

ಶೀಲೇನ ಸಾಮ್ನಾ ವಿನಯೇನ ಸೀತಾಂ
ನಯೇನ ನ ಪ್ರಾಪ್ಸ್ಯಸಿ ಚೇನ್ನರೇಂದ್ರ ।
ತತಃ ಸಮುತ್ಸಾದಯ ಹೇಮಪುಂಖೈ-
ರ್ಮಹೇಂದ್ರವಜ್ರಪ್ರತಿಮೈಃ ಶರೌಘೈಃ ॥

ಅನುವಾದ

ನರೇಂದ್ರನೇ! ಉತ್ತಮ ಶೀಲ-ಸ್ವಭಾವ, ಸಾಮನೀತಿ, ವಿನಯ ಮತ್ತು ನ್ಯಾಯಕ್ಕನುಸಾರ ಪ್ರಯತ್ನ ಮಾಡಿಯೂ ನಿನ್ನ ಸೀತೆಯ ಸುಳಿವು ಸಿಕ್ಕದಿದ್ದರೆ ಆಗ ನೀನು ಸುವರ್ಣಮಯ ಗರಿಗಳುಳ್ಳ ಮಹೇಂದ್ರನ ವಜ್ರದಂತೆ ಇರುವ ಬಾಣಗಳಿಂದ ಸಮಸ್ತ ಲೋಕಗಳನ್ನು ಸಂಹರಿಸಿ ಬಿಡು.॥16॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅವರತ್ತೈದನೆಯ ಸರ್ಗ ಸಂಪೂರ್ಣವಾಯಿತು. ॥65॥