०६४ रामसन्तापः

वाचनम्
ಭಾಗಸೂಚನಾ

ಶ್ರೀರಾಮ-ಲಕ್ಷ್ಮಣರಿಂದ ಸೀತೆಯ ಅನ್ವೇಷಣೆ, ಶ್ರೀರಾಮನ ಶೋಕೋದ್ಗಾರ, ಮೃಗಗಳ ಸಂಕೇತದಂತೆ ದಕ್ಷಿಣ ದಿಕ್ಕಿನೆಡೆಗೆ ಪ್ರಯಾಣ, ಪರ್ವತ ಮತ್ತು ನದಿಗಳ ಮೇಲೆ ರಾಮನ ಕೋಪ, ಕೆಳಗೆ ಬಿದ್ದಿದ್ದ ಸೀತೆಯ ಹೂಗಳನ್ನೂ, ಆಭರಣಗಳನ್ನೂ ಕಂಡದು, ದೇವತೆಗಳ ಮೇಲೆ ಶ್ರೀರಾಮನ ಕೋಪ

ಮೂಲಮ್ - 1½

ಸ ದೀನೋ ದೀನಯಾ ವಾಚಾ ಲಕ್ಷ್ಮಣಂ ವಾಕ್ಯಮಬ್ರವೀತ್ ।
ಶೀಘ್ರಂ ಲಕ್ಷ್ಮಣ ಜಾನೀಹಿ ಗತ್ವಾ ಗೋದಾವರೀಂ ನದೀಮ್ ॥
ಅಪಿ ಗೋದಾವರೀಂ ಸೀತಾ ಪದ್ಮಾನ್ಯಾನಯಿತುಂ ಗತಾ ।

ಅನುವಾದ

ಅನಂತರ ದೀನನಾದ ಶ್ರೀರಾಮಚಂದ್ರನು ದೀನವಾಣಿಯಲ್ಲಿ ಲಕ್ಷ್ಮಣನಲ್ಲಿ ಹೇಳಿದನು. ಲಕ್ಷ್ಮಣ! ನೀನು ಬೇಗನೆ ಗೋದಾವರಿ ನದೀತೀರಕ್ಕೆ ಹೋಗಿ, ಸೀತೆಯು ಕಮಲಗಳನ್ನು ತರಲು ಅಲ್ಲಿಗೆ ಹೋಗಿರುವಳೇ ನೋಡಿ ಬಾ.॥1½॥

ಮೂಲಮ್ - 2½

ಏವಮುಕ್ತಸ್ತು ರಾಮೇಣ ಲಕ್ಷ್ಮಣಃ ಪುನರೇವ ಹಿ ॥
ನದೀಂ ಗೋದಾವರೀಂ ರಮ್ಯಾಂ ಜಗಾಮ ಲಘುವಿಕ್ರಮಃ ।

ಅನುವಾದ

ಶ್ರೀರಾಮನ ಅಪ್ಪಣೆ ಪಡೆದು ಲಕ್ಷ್ಮಣನು ಶೀಘ್ರವಾಗಿ ಪುನಃ ರಮಣೀಯ ಗೋದಾವರಿ ತೀರಕ್ಕೆ ಹೋದನು.॥2½॥

ಮೂಲಮ್ - 3½

ತಾಂ ಲಕ್ಷ್ಮಣಸ್ತೀರ್ಥವತೀಂ ವಿಚಿತ್ವಾ ರಾಮಮಬ್ರವೀತ್ ॥
ನೈನಾಂ ಪಶ್ಯಾಮಿ ತೀರ್ಥೇಷು ಕ್ರೋಶತೋ ನ ಶೃಣೋತಿ ಮೇ ।

ಅನುವಾದ

ಅನೇಕ ಬೆಟ್ಟಗಳಿಂದ ಕೂಡಿದ ಗೋದಾವರಿಯ ತೀರದಲ್ಲಿ ಸೀತೆಯನ್ನು ಹುಡುಕಿ ಮರಳಿ ಬಂದು ಶ್ರೀರಾಮನಲ್ಲಿ ಹೇಳಿದನು - ಅಣ್ಣಾ! ಗೋದಾವರಿ ತೀರದಲ್ಲಿ ನಾನು ಸೀತೆಯನ್ನು ಕಂಡಿಲ್ಲ. ಜೋರಾಗಿ ಕೂಗಿ ಕರೆದರೂ ಅವಳು ನನ್ನ ಮಾತು ಕೇಳಲಿಲ್ಲವೆಂದೇ ಕಾಣುತ್ತದೆ.॥3½॥

ಮೂಲಮ್ - 4½

ಕಂ ನು ಸಾ ದೇಶಮಾಪನ್ನಾ ವೈದೇಹೀ ಕ್ಲೇಶನಾಶಿನೀ ॥
ನಹಿ ತಂ ವೇದ್ಮಿ ವೈ ರಾಮ ಯತ್ರ ಸಾ ತನುಮಧ್ಯಮಾ ।

ಅನುವಾದ

ಶ್ರೀರಾಮಾ! ಕ್ಲೇಶಹಾರಿಣಿಯಾದ ವೈದೇಹಿಯು ಯಾವ ದೇಶಕ್ಕೆ ಹೋಗಿರುವಳೊ ತಿಳಿಯದು ಅಣ್ಣಾ! ಸುಂದರಿಯಾದ ಸೀತೆಯು ಹೋಗಿರುವ ಸ್ಥಾನವನ್ನು ನಾನು ತಿಳಿಯೆ.॥4½॥

ಮೂಲಮ್ - 5½

ಲಕ್ಷ್ಮಣಸ್ಯ ವಚಃ ಶ್ರುತ್ವಾ ದೀನಃ ಸಂತಾಪಮೋಹಿತಃ ॥
ರಾಮಃ ಸಮಭಿಚಕ್ರಾಮ ಸ್ವಯಂ ಗೋದಾವರೀಂ ನದೀಮ್ ।

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿ ದೀನನಾದ ಮತ್ತು ಸಂತಾಪದಿಂದ ಮೋಹಿತನಾದ ಶ್ರೀರಾಮಚಂದ್ರನು ಸ್ವತಃ ಗೋದಾವರೀ ತೀರಕ್ಕೆ ಹೋದನು.॥5½॥

ಮೂಲಮ್ - 6

ಸ ತಾಮುಪಸ್ಥಿತೋ ರಾಮಃ ಕ್ವ ಸೀತೇತ್ಯೇವಮಬ್ರವೀತ್ ॥

ಮೂಲಮ್ - 7

ಭೂತಾನಿ ರಾಕ್ಷಸೇಂದ್ರೇಣ ವಧಾರ್ಹೇಣ ಹೃತಾಮಿತಿ ।
ಸ ತಾಂ ಶಶಂಸೂ ರಾಮಾಯ ತಥಾ ಗೋದಾವರೀ ನದೀ ॥

ಅನುವಾದ

ಅಲ್ಲಿಗೆ ಹೋಗಿ ಶ್ರೀರಾಮನು ‘ಸೀತೆ ಎಲ್ಲಿರುವೆ?’ ಎಂದು ಕೇಳಿದನು. ಆದರೆ ವಧೆಗೆ ಯೋಗ್ಯನಾದ ರಾಕ್ಷಸೇಂದ್ರ ರಾವಣನಿಂದ ಕದ್ದೊಯ್ದ ಸೀತೆಯ ಕುರಿತು ಸಮಸ್ತ ಭೂತರಲ್ಲಿ ಯಾರೂ ಏನನ್ನೂ ಹೇಳಲಿಲ್ಲ. ಗೋದಾವರೀ ನದಿಯೂ ಕೂಡ ಶ್ರೀರಾಮನಿಗೆ ಯಾವುದೇ ಉತ್ತರ ಕೊಡಲಿಲ್ಲ.॥6-7॥

ಮೂಲಮ್ - 8

ತತಃ ಪ್ರಚೋದಿತಾ ಭೂತೈಃ ಶಂಸ ಚಾಸ್ಮೈ ಪ್ರಿಯಾಮಿತಿ ।
ನ ಚ ಸಾ ಹ್ಯವದತ್ಸೀತಾಂ ಪೃಷ್ಟಾ ರಾಮೇಣ ಶೋಚತಾ ॥

ಅನುವಾದ

ಅನಂತರ ವನದ ಸಮಸ್ತ ಪ್ರಾಣಿಗಳು ಅವಳನ್ನು ‘ನೀನು ಶ್ರೀರಾಮನಿಗೆ ಅವನ ಪ್ರಿಯೆಯು ಎಲ್ಲಿರುವಳೆಂದು ತಿಳಿಸಿಬಿಡು’ ಎಂದು ಪ್ರೇರೇಪಿಸಿದರು. ಆದರೆ ಶೋಕಮಗ್ನ ಶ್ರೀರಾಮನು ಕೇಳಿದರೂ ಗೋದಾವರಿಯು ಸೀತೆಯ ಸುಳಿವನ್ನು ತಿಳಿಸಲಿಲ್ಲ.॥8॥

ಮೂಲಮ್ - 9

ರಾವಣಸ್ಯ ಚ ತದ್ರೂಪಂ ಕರ್ಮಾಣಿ ಚ ದುರಾತ್ಮನಃ ।
ಧ್ಯಾತ್ವಾ ಭಯಾತ್ತು ವೈದೇಹೀಂ ಸಾ ನದೀ ನ ಶಶಂಸ ಹ ॥

ಅನುವಾದ

ದುರಾತ್ಮ ರಾವಣನ ಆ ರೂಪ ಮತ್ತು ಕರ್ಮವನ್ನು ನೆನೆದು ಭಯದಿಂದಾಗಿ ಗೋದಾವರಿ ನದಿಯು ವೈದೇಹಿಯ ಕುರಿತು ಶ್ರೀರಾಮನಲ್ಲಿ ಏನನ್ನೂ ಹೇಳಲಿಲ್ಲ.॥9॥

ಮೂಲಮ್ - 10

ನಿರಾಶಸ್ತು ತಯಾ ನದ್ಯಾ ಸೀತಾಯಾ ದರ್ಶನೇ ಕೃತಃ ।
ಉವಾಚ ರಾಮಃ ಸೌಮಿತ್ರಿಂ ಸೀತಾದರ್ಶನಕರ್ಶಿತಃ ॥

ಅನುವಾದ

ಸೀತೆಯ ದರ್ಶನದ ವಿಷಯದಲ್ಲಿ ನದಿಯು ಪೂರ್ಣನಿರಾಶನನ್ನಾಗಿಸಿದಾಗ, ಸೀತೆಯನ್ನು ನೋಡದೆ ಕಷ್ಟದಲ್ಲಿ ಬಿದ್ದಿರುವ ಶ್ರೀರಾಮನು ಸುಮಿತ್ರಾಕುಮಾರನಲ್ಲಿ ಈ ಪ್ರಕಾರ ಹೇಳಿದನು.॥10॥

ಮೂಲಮ್ - 11½

ಏಷಾ ಗೋದಾವರೀ ಸೌಮ್ಯ ಕಿಂಚಿನ್ನ ಪ್ರತಿಭಾಷತೇ ।
ಕಿಂ ನು ಲಕ್ಷ್ಮಣ ವಕ್ಷ್ಯಾಮಿ ಸಮೇತ್ಯ ಜನಕಂ ವಚಃ ॥
ಮಾತರಂ ಚೈವ ವೈದೇಹ್ಯಾ ವಿನಾ ತಾಮಹಮಪ್ರಿಯಮ್ ।

ಅನುವಾದ

ಸೌಮ್ಯಲಕ್ಷ್ಮಣ! ಈ ಗೋದಾವರೀ ನದಿಯು ನನಗೆ ಯಾವುದೇ ಉತ್ತರ ಕೊಡುತ್ತಿಲ್ಲ. ಈಗ ನಾನು ಜನಕನನ್ನು ಭೆಟ್ಟಿಯಾಗಿ ಅವರಲ್ಲಿ ಏನು ಉತ್ತರಿಸಲಿ? ಜಾನಕಿಯಿಲ್ಲದೆ ಅವಳ ತಾಯಿಯಲ್ಲಿ ನಾನು ಇಂತಹ ಅಪ್ರಿಯ ಮಾತನ್ನು ಹೇಗೆ ಹೇಳಲಿ.॥11½॥

ಮೂಲಮ್ - 12½

ಯಾ ಮೇ ರಾಜ್ಯವಿಹೀನಸ್ಯ ವನೇ ವನ್ಯೇನ ಜೀವತಃ ॥
ಸರ್ವಂ ವೃಪನಯೇಚ್ಛೋಕಂ ವೈದೇಹೀ ಕ್ವ ನು ಸಾ ಗತಾ ।

ಅನುವಾದ

ರಾಜ್ಯ ಹೀನನಾಗಿ ವನದಲ್ಲಿ ಕಾಡಿನ ಫಲ-ಮೂಲಗಳಿಂದ ಜೀವನ ನಿರ್ವಹಣೆ ಮಾಡುತ್ತಿರುವಾಗಲೂ ನನ್ನ ಜೊತೆಗೆ ಇದ್ದು ನನ್ನ ಎಲ್ಲ ದುಃಖಗಳನ್ನು ದೂರ ಮಾಡುತ್ತಿದ್ದ ಆ ವೈದೇಹಿ ಎಲ್ಲಿ ಹೊರಟುಹೋದಳು.॥12½॥

ಮೂಲಮ್ - 13½

ಜ್ಞಾತಿವರ್ಗವಿಹೀನಸ್ಯ ವೈದೇಹೀಮಪ್ಯಪಶ್ಯತಃ ॥
ಮನ್ಯೇ ದೀರ್ಘಾ ಭವಿಷ್ಯಂತಿ ರಾತ್ರಯೋ ಮಮ ಜಾಗೃತಃ ।

ಅನುವಾದ

ಬಂಧು-ಬಾಂಧವರಿಂದ ಮೊದಲೇ ನನ್ನ ವಿಯೋಗವಾಗಿತ್ತು. ಈಗ ಸೀತೆಯ ದರ್ಶನದಿಂದಲೂ ನಾನು ವಂಚಿತನಾದೆ. ಆಕೆಯ ಚಿಂತೆಯಲ್ಲಿ ನಿರಂತರ ಎಚ್ಚರವಾಗಿರುವುದರಿಂದ ಈಗ ನನ್ನ ಎಲ್ಲ ರಾತ್ರಿಗಳು ಬಹಳ ದೀರ್ಘವಾಗುವುವು.॥13½॥

ಮೂಲಮ್ - 14½

ಮಂದಾಕಿನೀಂ ಜನಸ್ಥಾನಮಿಮಂ ಪ್ರಸ್ರವಣಂ ಗಿರಿಮ್ ॥
ಸರ್ವಾಣ್ಯನುಚರಿಷ್ಯಾಮಿ ಯದಿ ಸೀತಾ ಹಿ ದೃಶ್ಯತೇ ।

ಅನುವಾದ

ಮಂದಾಕಿನೀ ನದೀ, ಜನಸ್ಥಾನ ಹಾಗೂ ಪ್ರಸ್ರವಣ ಪರ್ವತ ಇವೆಲ್ಲ ಸ್ಥಾನಗಳಲ್ಲಿ ನಾನು ಪದೇ ಪದೇ ಸುತ್ತಾಡುವೆನು. ಅಲ್ಲಿ ಸೀತೆಯ ಇರವನ್ನು ತಿಳಿಯಬಹುದೋ ಏನೋ.॥14½॥

ಮೂಲಮ್ - 15½

ಏತೇ ಮಹಾಮೃಗಾ ವೀರ ಮಾಮೀಕ್ಷಂತೇ ಪುನಃ ಪುನಃ ॥
ವಕ್ತುಕಾಮಾ ಇವ ಹಿ ಮೇ ಇಂಗಿತಾನ್ಯುಪಲಕ್ಷಯೇ ।

ಅನುವಾದ

ವೀರ ಲಕ್ಷ್ಮಣ! ಈ ವಿಶಾಲ ಮೃಗವು ನನ್ನ ಕಡೆಗೆ ಆಗಾಗ ನೋಡುತ್ತಿದೆ, ಅದು ಏನೋ ಹೇಳಬೇಕೆಂದು ಬಯಸುತ್ತಿರುವಂತಿದೆ. ನಾನು ಇದರ ಚೇಷ್ಟೆಗಳನ್ನು ತಿಳಿಯುತ್ತಿದ್ದೇನೆ.॥15½॥

ಮೂಲಮ್ - 16

ತಾಂಸ್ತು ದೃಷ್ಟ್ವಾ ನರವ್ಯಾಘ್ರೋ ರಾಘವಃ ಪ್ರತ್ಯುವಾಚ ಹ ॥

ಮೂಲಮ್ - 17½

ಕ್ವ ಸೀತೇತಿ ನಿರೀಕ್ಷನ್ ವೈ ಭಾಷ್ಪಸಂರುದ್ಧಯಾ ದೃಶಾ ।
ಏವಮುಕ್ತಾ ನರೇಂದ್ರೇಣ ತೇ ಮೃಗಾಃ ಸಹಸೋತ್ಥಿತಾಃ ॥
ದಕ್ಷಿಣಾಭಿಮುಖಾಃ ಸರ್ವೇ ದರ್ಶಯಂತೋ ನಭಃಸ್ಥಲಮ್ ।

ಅನುವಾದ

ಅನಂತರ ಅವುಗಳೆಲ್ಲದರ ಕಡೆಗೆ ನೋಡಿ ಪುರುಷ ಸಿಂಹ ಶ್ರೀರಾಮಚಂದ್ರನು ಅವುಗಳಲ್ಲಿ ಹೇಳಿದನು. ಸೀತೆ ಎಲ್ಲಿರುವಳೆಂದು ತಿಳಿಸಿರಿ. ಆ ಮೃಗಗಳ ಕಡೆಗೆ ನೋಡುತ್ತಾ ರಾಜಾ ಶ್ರೀರಾಮನು ಆಶ್ರುಗದ್ಗದ ವಾಣಿಯಲ್ಲಿ ಹೀಗೆ ಕೇಳಿದಾಗ ಆ ಮೃಗಗಳು ತತ್ಕ್ಷಣ ಎದ್ದು ನಿಂತು, ಆಕಾಶದ, ಕಡೆಗೆ ನೋಡುತ್ತಾ ಎಲ್ಲವೂ ದಕ್ಷಿಣ ದಿಕ್ಕಿನತ್ತ ಮುಖಮಾಡಿ ಪಲಾಯನ ಮಾಡಿದವು.॥16-17½॥

ಮೂಲಮ್ - 18½

ಮೈಥಿಲೀ ಹ್ರಿಯಮಾಣಾ ಸಾ ದಿಶಂ ಯಾಮಭ್ಯಪದ್ಯತ ॥
ತೇನ ಮಾರ್ಗೇಣ ಗಚ್ಛಂತೋ ನಿರೀಕ್ಷಂತೇ ನರಾಧಿಪಮ್ ।

ಅನುವಾದ

ಮೈಥಿಲಿಯನ್ನು ಕದ್ದುಕೊಂಡು ಹೋದ ದಿಕ್ಕಿನ ಕಡೆಗಿನ ಮಾರ್ಗದಿಂದ ಹೋಗುತ್ತಾ ಆ ಮೃಗಗಳು ರಾಜಾ ಶ್ರೀರಾಮನ ಕಡೆಗೆ ಹೊರಳಿ ಹೊರಳಿ ನೋಡುತ್ತಿದ್ದವು.॥18½॥

ಮೂಲಮ್ - 19

ಯೇನ ಮಾರ್ಗಂ ಚ ಭೂಮಿಂ ಚ ನಿರೀಕ್ಷಂತೇ ಸ್ಮ ತೇ ಮೃಗಾಃ॥

ಮೂಲಮ್ - 20

ಪುನರ್ನದಂತೋ ಗಚ್ಛಂತಿ ಲಕ್ಷ್ಮಣೇನೋಪಲಕ್ಷಿತಾಃ ।
ತೇಷಾಂ ವಚನಸರ್ವಸ್ವಂ ಲಕ್ಷಯಾಮಾಸ ಚೇಂಗಿತಮ್ ॥

ಅನುವಾದ

ಆ ಮೃಗಗಳು ಆಕಾಶ ಮಾರ್ಗ ಮತ್ತು ಭೂಮಿ ಎರಡರ ಕಡೆಗೂ ನೋಡುತ್ತಾ, ಗರ್ಜಿಸುತ್ತಾ ಮುಂದಕ್ಕೆ ಹೋಗುತ್ತಿದ್ದವು. ಲಕ್ಷ್ಮಣನು ಅವುಗಳ ಈ ಚೇಷ್ಟೆಗಳನ್ನು ಗಮನಿಸಿದನು. ಆವುಗಳು ಹೇಳಲು ಇಚ್ಚಿಸುವುದನ್ನು ಸಾರಸರ್ವಸ್ವವಾಗಿ ಅವರ ಚೇಷ್ಟೆಗಳಿಂದ ಅವನು ಚೆನ್ನಾಗಿ ಅರಿತುಕೊಂಡನು.॥19-20॥

ಮೂಲಮ್ - 21

ಉವಾಚ ಲಕ್ಷ್ಮಣೋ ಧೀಮಾನ್ ಜ್ಯೇಷ್ಠಂ ಭ್ರಾತರಮಾರ್ತವತ್ ।
ಕ್ವ ಸೀತೇತಿ ತ್ವಯಾ ಪೃಷ್ಟಾ ಯಥೇಮೇ ಸಹಸೋತ್ಥಿತಾಃ ॥

ಮೂಲಮ್ - 22½

ದರ್ಶಯಂತಿ ಕ್ಷಿತಿಂ ಚೈವ ದಕ್ಷಿಣಾಂ ಚ ದಿಶಂ ಮೃಗಾಃ ।
ಸಾಧು ಗಚ್ಛಾವಹೇ ದೇವ ದಿಶಮೇತಾಂ ಚ ನೈರ್ಋತೀಮ್ ॥
ಯದಿ ತಸ್ಯಾಗಮಃ ಕಶ್ಚಿದಾರ್ಯಾ ವಾ ಸಾಥ ಲಕ್ಷ್ಯತೇ ।

ಅನುವಾದ

ಅನಂತರ ಧೀಮಂತ ಲಕ್ಷ್ಮಣನು ಆರ್ತನಾಗಿ ತನ್ನಣ್ಣನಲ್ಲಿ ಹೀಗೆ ಹೇಳಿದನು. ಆರ್ಯ! ಸೀತೆಯು ಎಲ್ಲಿರುವಳೆಂದು ನೀನು ಕೇಳಿದಾಗ ಈ ಮೃಗಗಳು ಸಟ್ಟನೆ ಎದ್ದು ನಿಂತು ಭೂಮಿಯನ್ನು ಮತ್ತು ದಕ್ಷಿಣದ ಕಡೆಗೆ ನಮ್ಮ ಗಮನವನ್ನು ಸೆಳೆದವು. ಆದ್ದರಿಂದ ದೇವ! ನಾವು ಈ ನೈರುತ್ಯ ದಿಕ್ಕಿನತ್ತ ಹೋದರೆ ಚೆನ್ನಾಗಿರಬಹುದು. ಈಕಡೆ ಹೋಗುವುದರಿಂದ ಸೀತೆಯ ಯಾವುದಾದರೂ ಸಮಾಚಾರ ಸಿಗಲೂಬಹುದು, ಅಥವಾ ಸ್ವತಃ ಸೀತೆಯೇ ಕಂಡುಬರುವಳು.॥21-22½॥

ಮೂಲಮ್ - 23½

ಬಾಢಮಿತ್ಯೇವ ಕಾಕುತ್ಸ್ಥಃ ಪ್ರಸ್ಥಿತೋ ದಕ್ಷಿಣಾಂ ದಿಶಮ್ ॥
ಲಕ್ಷ್ಮಣಾನುಗತಃ ಶ್ರೀಮಾನ್ವೀಕ್ಷಮಾಣೋ ವಸುಂಧರಾಮ್ ।

ಅನುವಾದ

ಆಗ ‘ಹಾಗೆಯೇ ಆಗಲಿ’ ಎಂದು ಹೇಳಿ ಶ್ರೀಮಾನ್ ರಾಮಚಂದ್ರನು ಲಕ್ಷ್ಮಣನೊಂದಿಗೆ ಭೂಮಿಯನ್ನು ಚೆನ್ನಾಗಿ ಗಮನಿಸುತ್ತಾ ದಕ್ಷಿಣ ದಿಕ್ಕಿನ ಕಡೆಗೆ ಹೊರಟರು.॥23½॥

ಮೂಲಮ್ - 24½

ಏವಂ ಸಂಭಾಷಮಾಣೌ ತಾವನ್ಯೋನ್ಯಂ ಭ್ರಾತರಾವುಭೌ ॥
ವಸುಂಧರಾಯಾಂ ಪತಿತಪುಷ್ಪಮಾರ್ಗಮಪಶ್ಯತಾಮ್ ।

ಅನುವಾದ

ಅವರಿಬ್ಬರೂ ಸಹೋದರರು ಹೀಗೆ ಮಾತುಕತೆಯಾಡುತ್ತಾ ಮುಂದಕ್ಕೆ ಹೋಗುತ್ತಿರುವಾಗ ನೆಲದಲ್ಲಿ ಕೆಲವು ಹೂವುಗಳು ಬಿದ್ದಿರುವುದನ್ನು ನೋಡಿದರು.॥24½॥

ಮೂಲಮ್ - 25½

ಪುಷ್ಪವೃಷ್ಟಿಂ ನಿಪತಿತಾಂ ದೃಷ್ಟ್ವಾ ರಾಮೋ ಮಹೀತಲೇ ॥
ಉವಾಚ ಲಕ್ಷ್ಮಣಂ ವೀರೋ ದುಃಖಿತೋ ದುಃಖಿತಂ ವಚಃ ।

ಅನುವಾದ

ನೆಲದ ಮೇಲೆ ಬಿದ್ದಿರುವ ಆ ಪುಷ್ಪವೃಷ್ಟಿಯನ್ನು ನೋಡಿ ವೀರರಾಮನು ದುಃಖಿತನಾಗಿ ಲಕ್ಷ್ಮಣನಲ್ಲಿ ಹೀಗೆ ದುಃಖ ತುಂಬಿದ ಮಾತನ್ನು ಹೇಳಿದನು.॥25½॥

ಮೂಲಮ್ - 26½

ಅಭಿಜಾನಾಮಿ ಪುಷ್ಪಾಣಿ ತಾನೀಮಾನೀಹ ಲಕ್ಷ್ಮಣ ॥
ಅಪಿನದ್ಧಾನಿ ವೈದೇಹ್ಯಾ ಮಯಾ ದತ್ತಾನೀ ಕಾನನೇ ।

ಅನುವಾದ

ಲಕ್ಷ್ಮಣ ನಾನು ಈ ಹೂವುಗಳನ್ನು ಗುರುತಿಸುತ್ತೇನೆ. ಕಾಡಿನಲ್ಲಿ ನಾನೇ ವಿದೇಹನಂದಿನಿಗೆ ಕೊಟ್ಟಿದ್ದ ಮತ್ತು ಆಕೆಯು ಮುಡಿದುಕೊಂಡ ಹೂವುಗಳೇ ಇಲ್ಲಿ ಬಿದ್ದಿವೆ.॥26½॥

ಮೂಲಮ್ - 27½

ಮನ್ಯೇ ಸೂರ್ಯಶ್ಚ ವಾಯುಶ್ಚ ಮೇದಿನೀ ಚ ಯಶಸ್ವಿನೀ ॥
ಅಭಿರಕ್ಷಂತಿ ಪುಷ್ಪಾಣಿ ಪ್ರಕುರ್ವಂತೋ ಮಮ ಪ್ರಿಯಮ್ ।

ಅನುವಾದ

ಸೂರ್ಯ, ವಾಯು ಮತ್ತು ಯಶಸ್ವಿನೀ ಪಥ್ವಿಯು ನನಗೆ ಪ್ರಿಯವನ್ನುಂಟುಮಾಡಲೆಂದೇ ಈ ಹೂವುಗಳನ್ನು ಸುರಕ್ಷಿತವಾಗಿ ಇರಿಸಿವೆ ಎಂದೇ ನಾನು ತಿಳಿಯುತ್ತೇನೆ.॥27½॥

ಮೂಲಮ್ - 28½

ಏವಮುಕ್ತ್ವಾ ಮಹಾಬಾಹುರ್ಲಕ್ಷ್ಮಣಂ ಪುರುಷರ್ಷಭಮ್ ॥
ಉವಾಚ ರಾಮೋ ಧರ್ಮಾತ್ಮಾ ಗಿರಿಂ ಪ್ರಸ್ರವಣಾಕುಲಮ್ ।

ಅನುವಾದ

ಪುರುಷಪ್ರವರ ಲಕ್ಷ್ಮಣನಲ್ಲಿ ಹೀಗೆ ಹೇಳಿ ಧರ್ಮಾತ್ಮಾ ಮಹಾಬಾಹು ಶ್ರೀರಾಮನು ಜಲಪಾತಗಳಿಂದ ತುಂಬಿದ ಪ್ರಸ್ರವಣ ಗಿರಿಯಲ್ಲಿ ಹೇಳುತ್ತಾನೆ.॥28½॥

ಮೂಲಮ್ - 29½

ಕಚ್ಚಿತ್ಕ್ಷಿತಿಭೃತಾಂ ನಾಥ ದೃಷ್ಟಾ ಸರ್ವಾಂಗಸುಂದರೀ ॥
ರಾಮಾ ರಮ್ಯೇ ವನೋದ್ದೇಶೇ ಮಯಾ ವಿರಹಿತಾ ತ್ವಯಾ ।

ಅನುವಾದ

ಪರ್ವತರಾಜನೇ! ಈ ವನದ ರಮಣೀಯ ಪ್ರದೇಶದಲ್ಲಿ ನನ್ನಿಂದ ಅಗಲಿದ ಸರ್ವಾಂಗ ಸುಂದರೀ ರಮಣೀ ಸೀತೆಯನ್ನು ನೀನು ನೋಡಿರುವೆಯಾ.॥29½॥

ಮೂಲಮ್ - 30

ಕ್ರುದ್ಧೋಽಬ್ರವೀದ್ಗಿರಿಂ ತತ್ರ ಸಿಂಹಃ ಕ್ಷುದ್ರಮೃಗಂ ಯಥಾ ॥

ಮೂಲಮ್ - 31

ತಾಂ ಹೇಮವರ್ಣಾಂ ಹೇಮಾಂಗೀಂ ಸೀತಾಂ ದರ್ಶಯ ಪರ್ವತ ।
ಯಾವತ್ಸೂನೂನಿ ಸರ್ವಾಣಿ ನ ತೇ ವಿಧ್ವಂಸಯಾಮ್ಯಹಮ್ ॥

ಅನುವಾದ

ಅನಂತರ ಸಿಂಹವು ಸಣ್ಣ ಮೃಗವನ್ನು ನೋಡಿ ಅದರತ್ತ ಓಡುವಂತೆ ರಾಮನು ಕುಪಿತನಾಗಿ ಆ ಪರ್ವತದ ಬಳಿಗೆ ಹೋಗಿ ಎಲೈ ಪರ್ವತವೇ! ನಿನ್ನ ಎಲ್ಲ ಶಿಖರಗಳನ್ನು ನಾನು ವಿದ್ವಂಸಮಾಡಿ ಬಿಡುವ ಮೊದಲೇ ನೀನು ಆ ಕಾಂಚನನಂತೆ ಶರೀರವುಳ್ಳ ಸೀತೆಯನ್ನು ನನಗೆ ತೋರಿಸ.॥30-31॥

ಮೂಲಮ್ - 32

ಏವಮುಕ್ತಸ್ತು ರಾಮೇಣ ಪರ್ವತೋ ಮೈಥಿಲೀಂ ಪ್ರತಿ ।
ದರ್ಶಯನ್ನಿವ ತಾಂ ಸೀತಾಂ ನಾದರ್ಶಯತ ರಾಘವೇ ॥

ಅನುವಾದ

ಶ್ರೀರಾಮನು ಮೈಥಿಲಿಯ ಕುರಿತು ಹೀಗೆ ಹೇಳಿದಾಗ ಪರ್ವತವು ಸೀತೆಯನ್ನು ತೋರಿಸುವಂತೆ ಕೆಲವು ಚಿಹ್ನೆಗಳನ್ನು ಪ್ರಕಟಪಡಿಸಿದನು. ಶ್ರೀರಘುನಾಥನ ಎದುರಿಗೆ ಸೀತೆಯನ್ನು ತಂದು ನಿಲ್ಲಿಸಲು ಅವನಿಂದ ಆಗಲಿಲ್ಲ.॥32॥

ಮೂಲಮ್ - 33½

ತತೋ ದಾಶರಥೀ ರಾಮ ಉವಾಚ ಚ ಶಿಲೋಚ್ಚಯಮ್ ।
ಮಮ ಬಾಣಾಗ್ನಿನಿರ್ದಗ್ಧೋ ಭಸ್ಮೀಭೂತೋ ಭವಿಷ್ಯಸಿ ॥
ಅಸೇವ್ಯಃ ಸರ್ವತಚೈವ ನಿಸ್ತೃಣದ್ರುಮಪಲ್ಲವಃ ।

ಅನುವಾದ

ಆಗ ದಶರಥನಂದನ ಶ್ರೀರಾಮನು ಆ ಪರ್ವತದ ಬಳಿ - ಎಲವೋ! ನೀನು ನನ್ನ ಬಾಣಗಳ ಬೆಂಕಿಯಿಂದ ಉರಿದು ಬೂದಿಯಾಗಿ ಹೋಗುವೆ. ಯಾವ ರೀತಿಯಲ್ಲಿಯೂ ಸೇವಿಸಲು ಅಯೋಗ್ಯನಾಗುವೆ. ನಿನ್ನ ಹುಲ್ಲು, ತಳಿರು, ವೃಕ್ಷಗಳು ನಾಶವಾಗಿ ಹೋಗುವವು ಎಂದು ಹೇಳಿದನು.॥33½॥

ಮೂಲಮ್ - 34½

ಇಮಾಂ ವಾ ಸರಿತಂ ಚಾದ್ಯ ಶೋಷಯಿಷ್ಯಾಮಿಲಕ್ಷ್ಮಣ ॥
ಯದಿ ನಾಖ್ಯಾತಿ ಮೇ ಸೀತಾಮಾದ್ಯ ಚಂದ್ರನಿಭಾನನಾಮ್ ।

ಅನುವಾದ

(ಬಳಿಕ ಅವನು ಸೌಮಿತ್ರಿಯಲ್ಲಿ ಹೇಳಿದನು-) ಲಕ್ಷ್ಮಣ! ಈ ನದಿಯು ಚಂದ್ರಮುಖಿ ಸೀತೆಯ ಇರವನ್ನು ಇಂದು ನನಗೆ ತಿಳಿಸದಿದ್ದರೆ ನಾನು ಈಗಲೇ ಇದನ್ನು ಒಣಗಿಸಿಬಿಡುವೆನು.॥34½॥

ಮೂಲಮ್ - 35½

ಏವಂ ಪ್ರರುಷಿತೋ ರಾಮೋ ದಿಧಕ್ಷನ್ನಿವ ಚಕ್ಷುಷಾ ॥
ದದರ್ಶ ಭೂವೌ ನಿಷ್ಕ್ರಾಂತಂ ರಾಕ್ಷಸಸ್ಯ ಪದಂ ಮಹತ್ ।

ಅನುವಾದ

ಹೀಗೆ ಹೇಳಿ ರೋಷಗೊಂಡು ಶ್ರೀರಾಮಚಂದ್ರನು ತನ್ನ ದೃಷ್ಟಿಯಿಂದಲೇ ಸುಟ್ಟು ಬೂದಿ ಮಾಡಿಬಿಡುವಂತೆ ಅದರ ಕಡೆಗೆ ನೋಡಿದನು. ಅಷ್ಟರಲ್ಲಿ ಆ ಪರ್ವತ ಮತ್ತು ಗೋದಾವರಿಯ ಸಮೀಪದ ಭೂಮಿಯಲ್ಲಿ ರಾಕ್ಷಸನ ವಿಶಾಲಪಾದ ಚಿಹ್ನೆ ಮೂಡಿದುದು ಕಂಡು ಬಂತು.॥35½॥

ಮೂಲಮ್ - 36½

ತ್ರಸ್ತಾಯಾ ರಾಮಕಾಂಕ್ಷಿಣ್ಯಾಃ ಪ್ರಧಾವಂತ್ಯಾ ಇತಸ್ತತಃ ॥
ರಾಕ್ಷಸೇನಾನುಸೃಪ್ತಾಯಾ ವೈದೇಹ್ಯಾಶ್ಚ ಪದಾನಿ ತು ।

ಅನುವಾದ

ಜೊತೆಗೆ ರಾಕ್ಷಸನು ಯಾರನ್ನು ಬೆನ್ನಟ್ಟಿದ್ದನೋ, ಯಾರು ಶ್ರೀರಾಮನ ಅಭಿಲಾಷೆಯನ್ನು ಇರಿಸಿಕೊಂಡು ರಾವಣನ ಭಯದಿಂದ ಸಂತ್ರಸ್ತಳಾಗಿ ಆ ಕಡೆ - ಈ ಕಡೆ ಓಡಿದ ಆ ವಿದೇಹಕುಮಾರಿ ಸೀತೆಯ ಚರಣಚಿಹ್ನೆಗಳು ಅಲ್ಲಿ ಗೋಚರಿಸಿದವು.॥36½॥

ಮೂಲಮ್ - 37

ಸ ಸಮೀಕ್ಷ್ಯಪರಿಕ್ರಾಂತಂ ಸೀತಾಯಾ ರಾಕ್ಷಸಸ್ಯ ಚ ॥

ಮೂಲಮ್ - 38

ಭಗ್ನಂ ಧನುಶ್ಚ ತೂಣೀ ಚ ವಿಕೀರ್ಣಂ ಬಹುಧಾ ರಥಮ್ ।
ಸಂಭ್ರಾಂತಹೃದಯೋ ರಾಮಃ ಶಶಂಸ ಭ್ರಾತರಂ ಪ್ರಿಯಮ್ ॥

ಅನುವಾದ

ಸೀತೆ ಮತ್ತು ರಾಕ್ಷಸನ ಹೆಜ್ಜೆಗಳ ಗುರುತು, ಮುರಿದ ಧನುಸ್ಸು, ಬತ್ತಳಿಕೆ ಮತ್ತು ನುಚ್ಚುನೂರಾಗಿ ಚೆಲ್ಲಿಹೊದ ರಥವನ್ನು ನೋಡಿ ಶ್ರೀರಾಮನ ಮನಸ್ಸು ಗಾಬರಿಗೊಂಡಿತು. ಅವನು ಪ್ರಿಯ ತಮ್ಮನಾದ ಸೌಮಿತ್ರಿಯಲ್ಲಿ ನುಡಿದನು.॥37-38॥

ಮೂಲಮ್ - 39

ಪಶ್ಯ ಲಕ್ಷ್ಮಣ ವೈದೇಹ್ಯಾ ಕೀರ್ಣಾಃ ಕನಕಬಿಂದವಃ ।
ಭೂಷಣಾನಾಂ ಹಿ ಸೌಮಿತ್ರೇ ಮಾಲ್ಯಾನಿ ವಿವಿಧಾನಿ ಚ ॥

ಅನುವಾದ

ಲಕ್ಷ್ಮಣ! ನೋಡು ನೋಡು! ಸೀತೆಯ ಆಭರಣಗಳಲ್ಲಿದ್ದ ಚಿನ್ನದ ಈ ಗೆಜ್ಜೆಗಳು ಚೆಲ್ಲಿಹೋಗಿ ಇಲ್ಲಿ ಬಿದ್ದಿವೆ. ಸೌಮಿತ್ರಿಯೇ! ಆಕೆಯ ನಾನಾ ಪ್ರಕಾರದ ಹಾರಗಳೂ ಕಡಿದುಬಿದ್ದಿವೆ.॥39॥

ಮೂಲಮ್ - 40

ತಪ್ತಬಿಂದುನಿಕಾಶೈಶ್ಚ ಚಿತ್ರೈಃ ಕ್ಷತಜಬಿಂದುಭಿಃ ।
ಆವೃತಂ ಪಶ್ಯ ಸೌಮಿತ್ರೇ ಸರ್ವತೋ ಧರಣೀತಲಮ್ ॥

ಅನುವಾದ

ಸುಮಿತ್ರಾಕುಮಾರಾ! ನೋಡು! ಇಲ್ಲಿಯ ಭೂಮಿಯು ಎಲ್ಲೆಡೆ ಸುವರ್ಣ ಬಿಂದುಗಳಂತೆ ರಕ್ತಬಿಂದುಗಳಿಂದ ಚಿತ್ರಿತವಾದಂತೆ ಕಾಣುತ್ತದೆ.॥40॥

ಮೂಲಮ್ - 41

ಮನ್ಯೇ ಲಕ್ಷ್ಮಣ ವೈದೇಹೀ ರಾಕ್ಷಸೈಃ ಕಾಮರೂಪಿಭಿಃ ।
ಭಿತ್ತ್ವಾ ಭಿತ್ತ್ವಾ ವಿಭಕ್ತಾ ವಾ ಭಕ್ಷಿತಾ ವಾ ಭವಿಷ್ಯತಿ ॥

ಅನುವಾದ

ಲಕ್ಷ್ಮಣ! ಕಾಮರೂಪಿಗಳಾದ ರಾಕ್ಷಸರು ಇಲ್ಲಿ ಸೀತೆಯನ್ನು ತುಂಡು-ತುಂಡು ಮಾಡಿ ಆಕೆಯನ್ನು ಪರಸ್ಪರ ಹಂಚಿಕೊಂಡು ತಿಂದಿರಬಹುದು ಎಂದು ನನಗೆ ಅನಿಸುತ್ತದೆ.॥41॥

ಮೂಲಮ್ - 42

ತಸ್ಯಾ ನಿಮಿತ್ತಂ ಸೀತಾಯಾ ದ್ವಯೊರ್ವಿವದಮಾನಯೋಃ ।
ಬಭೂವ ಯುದ್ಧಂ ಸೌಮಿತ್ರೇ ಘೋರಂ ರಾಕ್ಷಸಯೋರಿಹ ॥

ಅನುವಾದ

ಸುಮಿತ್ರಾನಂದನ! ಸೀತೆಗಾಗಿ ಪರಸ್ಪರ ವಿವಾದ ಮಾಡುವ ಇಬ್ಬರು ರಾಕ್ಷಸರಲ್ಲಿ ಇಲ್ಲಿ ಘೋರ ಯುದ್ಧವೂ ನಡೆದಿದೆ.॥42॥

ಮೂಲಮ್ - 43

ಮುಕ್ತಾಮಣಿಚಿತಂ ಚೇದಂ ರಮಣೀಯಂ ವಿಭೂಷಿತಮ್ ।
ಧರಣ್ಯಾಂ ಪತಿತಂ ಸೌಮ್ಯ ಕಸ್ಯ ಭಗ್ನಂ ಮಹದ್ಧನುಃ ॥

ಅನುವಾದ

ಸೌಮ್ಯ ಆದ್ದರಿಂದಲೇ ಇಲ್ಲಿ ಈ ಮುತ್ತುಗಳು ಹಾಗೂ ನವರತ್ನ ಖಚಿತ ಯಾರದೋ ಅತ್ಯಂತ ಸುಂದರ ಮತ್ತು ವಿಶಾಲ ಧನುಸ್ಸು ತುಂಡಾಗಿ ನೆಲದಲ್ಲಿ ಬಿದ್ದಿದೆ. ಇದು ಯಾರ ಧನುಸ್ಸು ಆಗಿರಬಹುದು.॥43॥

ಮೂಲಮ್ - 44

ರಾಕ್ಷಸಾನಾಮಿದಂ ವತ್ಸ ಸುರಾಣಾಮಥವಾಪಿ ವಾ ।
ತರುಣಾದಿತ್ಯಸಂಕಾಶಂ ವೈದೂರ್ಯಗುಲಿಕಾಚಿತಮ್ ॥

ಅನುವಾದ

ವತ್ಸ! ಇದು ರಾಕ್ಷಸರದೋ ಅಥವಾ ದೇವತೆಗಳದೋ ತಿಳಿಯದು, ಇದು ಪ್ರಭಾತ ಸೂರ್ಯನಂತೆ ಪ್ರಕಾಶಿಸುತ್ತಿದೆ. ಇದರಲ್ಲಿ ವೈಡೂರ್ಯಮಣಿಗಳ ತುಂಡುಗಳನ್ನು ಜೋಡಿಸಲಾಗಿದೆ.॥44॥

ಮೂಲಮ್ - 45½

ವಿದೀರ್ಣಂ ಪತಿತಂ ಭೂಮೌ ಕವಚಂ ಕಸ್ಯಕಾಂಚನಮ್ ।
ಛತ್ರಂ ಶತಶಲಾಕಂ ಚ ದಿವ್ಯಮಾಲ್ಯೋಪಶೋಭಿತಮ್ ॥
ಭಗ್ನದಂಡಮಿದಂ ಸೌಮ್ಯ ಭೂಮೌ ಕಸ್ಯ ನಿಪಾತಿತಮ್ ।

ಅನುವಾದ

ಸೌಮ್ಯ! ಈ ಕಡೆ ಒಂದು ಚಿನ್ನದ ಕವಚ ತುಂಡಾಗಿ ಬಿದ್ದಿದೆ, ಯಾರದಿರಬಹುದೋ ತಿಳಿಯದು. ದಿವ್ಯಮಾಲೆಗಳಿಂದ ಸುಶೋಭಿತ, ನೂರು ಕಡ್ಡಿಗಳುಳ್ಳ ಈ ಛತ್ರ ಯಾರದಾಗಿದೆ? ಇದರ ದಂಡ ಮುರಿದುಹೋಗಿ ನೆಲದಲ್ಲಿ ಬಿದ್ದಿದೆ.॥45॥

ಮೂಲಮ್ - 46½

ಕಾಂಚನೋರಶ್ಚದಾಶ್ಚೇಮೇಪಿಶಾಚವದನಾಃ ಖರಾಃ ॥
ಭೀಮರೂಪಾ ಮಹಾಕಾಯಾಃ ಕಸ್ಯ ವಾ ನಿಹತಾ ರಣೇ ।

ಅನುವಾದ

ಇನ್ನೊಂದೆಡೆ ಪಿಶಾಚಿಗಳ ಮುಖದಂತೆ ಇರುವ ಭಯಂಕರ ರೂಪಧಾರೀ ಕತ್ತೆಗಳು ಸತ್ತುಬಿದ್ದಿವೆ. ಇವುಗಳ ಶರೀರ ವಿಶಾಲವಾಗಿದ್ದು ಇವುಗಳೆಲ್ಲವುಗಳ ಎದೆಗೆ ಚಿನ್ನದ ಕವಚಗಳನ್ನು ಕಟ್ಟಿರುವರು; ಇವು ಯುದ್ಧದಲ್ಲಿ ಸತ್ತು ಬಿದ್ದಿರುವಂತೆ ಅನಿಸುತ್ತಿದೆ. ಯಾರದಾಗಿತ್ತೋ ಇದು ತಿಳಿಯದು.॥46½॥

ಮೂಲಮ್ - 47½

ದೀಪ್ತಪಾವಕಸಂಕಾಶೋ ದ್ಯುತಿಮಾನ್ಸಮರಧ್ವಜಃ ॥
ಅಪವಿದ್ಧಶ್ಚ ಭಗ್ನಶ್ಚ ಕಸ್ಯ ಸಂಗ್ರಾಮಿಕೋ ರಥಃ ।

ಅನುವಾದ

ಸಂಗ್ರಾಮದಲ್ಲಿ ಉಪಯೋಗಿಸುವ ಈ ರಥ ಯಾರದಾಗಿದೆ? ಇದನ್ನು ಯಾರೊ ತಲೆಕೆಳಗಾಗಿ ಬೀಳಿಸಿ ಮುರಿದುಬಿಟ್ಟಿರುವರು. ಸಮರಾಂಗಣದಲ್ಲಿ ಒಡೆಯನನ್ನು ಸೂಚಿಸುವ ಧ್ವಜವೂ ಇದರಲ್ಲಿತ್ತು. ಈ ತೇಜಸ್ವೀ ರಥವು ಉರಿಯುವ ಬೆಂಕಿಯಂತೆ ಹೊಳೆಯುತ್ತಾ ಇದೆ.॥47½॥

ಮೂಲಮ್ - 48½

ರಥಾಕ್ಷಮಾತ್ರಾ ವಿಶಿಖಾಸ್ತಪನೀಯವಿಭೂಷಣಾಃ ॥
ಕಸ್ಯೇಮೇ ನಿಹತಾ ಬಾಣಾಃ ಪ್ರಕೀರ್ಣಾ ಘೋರದರ್ಶನಾಃ ।

ಅನುವಾದ

ಈ ಭಯಂಕರ ಬಾಣಗಳು ತುಂಡು-ತುಂಡಾಗಿ ಇಲ್ಲಿ ಚೆಲ್ಲಿಹೋಗಿವೆ. ಇವುಗಳ ಉದ್ದ-ದಪ್ಪ ರಥದ ನೊಗದಂತೆ ಕಂಡುಬರುತ್ತಿವೆ. ಸುವರ್ಣಭೂಷಿತವಾದ ಇವುಗಳ ತುದಿಗಳು ಮುರಿದು ಹೋಗಿದೆ. ಇವು ಯಾರದಿರಬಹುದು.॥48½॥

ಮೂಲಮ್ - 49½

ಶರಾವರೌ ಶರೈಃ ಪೂರ್ಣೌ ವಿಧ್ವಸ್ತೌ ಪಶ್ಯ ಲಕ್ಷ್ಮಣ ॥
ಪ್ರತೋದಾಭೀಷುಹಸ್ತೋಽಯಂ ಕಸ್ಯ ವಾ ಸಾರಥಿರ್ಹತಃ ।

ಅನುವಾದ

ಲಕ್ಷ್ಮಣ! ಅಲ್ಲಿ ನೋಡು! ಬಾಣಗಳಿಂದ ತುಂಬಿದ ಎರಡು ಬತ್ತಳಿಕೆಗಳು ನಾಶವಾಗಿ ಬಿದ್ದುಕೊಂಡಿವೆ. ಕೈಯಲ್ಲಿ ಚಮ್ಮಟಿಕೆ ಮತ್ತು ಲಗಾಮು ಹಿಡಿದಿರುವ ಸತ್ತುಬಿದ್ದ ಈ ಸಾರಥಿಯು ಯಾರದ್ದಾಗಿರಬಹುದು.॥49½॥

ಮೂಲಮ್ - 50

ಪದವೀ ಪುರುಷಸ್ಯೈಷಾ ವ್ಯಕ್ತಂ ಕಸ್ಯಾಪಿ ರಕ್ಷಸಃ ॥

ಮೂಲಮ್ - 51

ವೈರಂ ಶತಗುಣಂ ಪಶ್ಯ ಮಮತೈರ್ಜಿವಿತಾಂತಕಮ್ ।
ಸುಘೋರಹೃದಯೈಃ ಸೌಮ್ಯ ರಾಕ್ಷಸೈಃ ಕಾಮರೂಪಿಭಿಃ ॥

ಅನುವಾದ

ಸೌಮ್ಯ! ಇದು ಖಂಡಿತವಾಗಿ ಯಾವನೋ ರಾಕ್ಷಸನ ಹೆಜ್ಜೆಯ ಗುರುತು ಕಾಣುತ್ತಿದೆ. ಈ ಅತ್ಯಂತ ಕ್ರೂರ ಹೃದಯವುಳ್ಳ ಕಾಮರೂಪೀ ರಾಕ್ಷಸರೊಂದಿಗೆ ನನ್ನ ವೈರ ನೂರುಪಟ್ಟು ಹೆಚ್ಚಾಗಿದೆ. ನೋಡು ಈ ವೈರವು ಅವನ ಅಂತ್ಯವಾದಾಗಲೇ ಶಾಂತವಾಗಬಹುದು.॥50-51॥

ಮೂಲಮ್ - 52

ಹೃತಾ ಮೃತಾ ವಾ ವೈದೇಹೀಭಕ್ಷಿತಾ ವಾ ತಪಸ್ವಿನೀ ।
ನ ಧರ್ಮಸ್ತ್ರಾಯತೇ ಸೀತಾಂ ಹ್ರಿಯಮಾಣಾಂ ಮಹಾವನೇ ॥

ಅನುವಾದ

ಖಂಡಿತವಾಗಿಯೇ ತಪಸ್ವಿನೀ ವೈದೇಹಿಯನ್ನು ಕದ್ದುಕೊಂಡು ಹೋಗಿರುವರು, ಸಾವು ಆಗಿರಬಹುದು; ಅಥವಾ ರಾಕ್ಷಸರು ತಿಂದಿರಬಹುದು. ಈ ವಿಶಾಲ ವನದಲ್ಲಿ ಕದ್ದು ಕೊಂಡುಹೋಗುವ ಸೀತೆಯನ್ನು ಧರ್ಮವೂ ರಕ್ಷಿಸಿಲ್ಲ.॥52॥

ಮೂಲಮ್ - 53

ಭಕ್ಷಿತಾಯಾಂ ಹಿ ವೈದೇಹ್ಯಾಂ ಹೃತಾಯಾಮಪಿ ಲಕ್ಷ್ಮಣ ।
ಕೇ ಹಿ ಲೋಕೇ ಪ್ರಿಯಂ ಕರ್ತುಂ ಶಕ್ತಾಃ ಸೌಮ್ಯ ಮಮೇಶ್ವರಾಃ ॥

ಅನುವಾದ

ಸೌಮ್ಯ ಲಕ್ಷ್ಮಣ! ವಿದೇಹನಂದಿನಿಯು ರಾಕ್ಷಸರಿಗೆ ತುತ್ತಾದಳು ಅಥವಾ ಅಪಹೃತಳಾದಳು ಹಾಗೂ ಯಾರೂ ಸಹಾಯಕರಾಗಲಿಲ್ಲ ಎಂದಾಗ ಈ ಜಗತ್ತಿನಲ್ಲಿ ನನ್ನ ಪ್ರಿಯ ಕರ್ಮ ಮಾಡಲು ಸಮರ್ಥನಾದ ಪುರುಷನು ಯಾರಿದ್ದಾನೆ.॥53॥

ಮೂಲಮ್ - 54

ಕರ್ತಾರಮಪಿ ಲೋಕಾನಾಂ ಶೂರಂ ಕರುಣವೇದಿನಮ್ ।
ಅಜ್ಞಾನಾದವಮನ್ಯೇರನ್ ಸರ್ವಭೂತಾನಿ ಲಕ್ಷ್ಮಣ ॥

ಅನುವಾದ

ಲಕ್ಷ್ಮಣ! ಸಮಸ್ತ ಲೋಕಗಳ ಸೃಷ್ಟಿ, ಸ್ಥಿತಿ, ಸಂಹಾರ ಮಾಡುವ ತ್ರಿಪುರ ವಿಜಯ ಮೊದಲಾದ ಶೌರ್ಯ ಸಂಪನ್ನನಾದ ಮಹೇಶ್ವರನೂ ಕೂಡ ತನ್ನ ಕರುಣಾಮಯ ಸ್ವಭಾದ ಕಾರಣ ಸುಮ್ಮನೆ ಕುಳಿತಿರುವಾಗ ಎಲ್ಲ ಪ್ರಾಣಿಗಳು ಅವನ ಐಶ್ವರ್ಯವನ್ನು ತಿಳಿಯದೇ ಅವನನ್ನು ತಿರಸ್ಕರಿಸತೊಡಗುವರು.॥54॥

ಮೂಲಮ್ - 55

ಮೃದುಂ ಲೋಕಹಿತೇ ಯುಕ್ತಂ ದಾಂತಂ ಕರುಣವೇದಿನಮ್ ।
ನಿರ್ವೀರ್ಯ ಇತಿ ಮನ್ಯಂತೇ ನೂನಂ ಮಾಂ ತ್ರಿದಶೇಶ್ವರಾಃ ॥

ಅನುವಾದ

ನಾನು ಲೋಕಹಿತದಲ್ಲಿ ತತ್ಪರ, ಯುಕ್ತಚಿತ್ತ, ಜಿತೇಂದ್ರಿಯ ಹಾಗೂ ಜೀವಿಗಳ ಮೇಲೆ ಕರುಣೆ ತೋರುವವನಾಗಿದ್ದೇನೆ, ಅದಕ್ಕಾಗಿ ಈ ಇಂದ್ರಾದಿ ದೇವೇಶ್ವರರು ನಿಶ್ಚಯವಾಗಿ ನನ್ನನ್ನು ನಿರ್ಬಲನೆಂದು ತಿಳಿದಿದ್ದಾರೆ. (ಆದ್ದರಿಂದಲೇ ಇವರು ಸೀತೆಯನ್ನು ರಕ್ಷಿಸಲಿಲ್ಲ.॥55॥

ಮೂಲಮ್ - 56

ಮಾಂ ಪ್ರಾಪ್ಯ ಹಿ ಗುಣೋ ದೋಷಃ ಸಂವೃತ್ತಃ ಪಶ್ಯ ಲಕ್ಷ್ಮಣ ।
ಅದ್ಯೈವ ಸರ್ವಭೂತಾನಾಂ ರಕ್ಷಸಾಮಭವಾಯ ಚ ॥

ಮೂಲಮ್ - 57

ಸಂಹೃತ್ಯೈವ ಶಶಿಜ್ಯೋತ್ಸ್ನಾಂ ಮಹಾನ್ ಸೂರ್ಯ ಇವೋದಿತಃ ।
ಸಂಹೃತ್ಯೈವ ಗುಣಾನ್ ಸರ್ವಾನ್ಮಮ ತೇಜಃ ಪ್ರಕಾಶತೇ ॥

ಅನುವಾದ

ಲಕ್ಷ್ಮಣ! ನೋಡಲ್ಲ! ಈ ದಯಾಳುತ್ವ ಮುಂತಾದ ಗುಣಗಳು ನನ್ನ ಬಳಿಗೆ ಬಂದು ದೋಷಿಯಾಗಿವೆ. (ಅದಕ್ಕಾಗಿಯೇ ನನ್ನನ್ನು ನಿರ್ಬಲವೆಂದು ತಿಳಿದು ನನ್ನ ಪತ್ನಿಯು ಅಪಹೃತಳಾದಳು. ಆದ್ದರಿಂದ ಈಗ ನಾನು ಪುರುಷಾರ್ಥವನ್ನು ಪ್ರಕಟ ಪಡಿಸಬೇಕಾದೀತು.) ಪ್ರಳಯ ಕಾಲದಲ್ಲಿ ಉದಯಿಸಿದ ಸೂರ್ಯನು ಚಂದ್ರನ ಬೆಳದಿಂಗಳನ್ನು ಸಂಹರಿಸಿ ಪ್ರಚಂಡ ತೇಜದಿಂದ ಪ್ರಕಾಶಿತನಾಗುವಂತೆಯೇ, ಈಗ ನನ್ನ ತೇಜವು ಇಂದೇ ಸಮಸ್ತ ಪ್ರಾಣಿಗಳನ್ನು ಮತ್ತು ರಾಕ್ಷಸರನ್ನು ಅಂತ್ಯಗೊಳಿಸಲು ನನ್ನ ಆ ಕೋಮಲ ಸ್ವಭಾವದ ಗುಣಗಳನ್ನು ಮರೆಮಾಡಿ, ಪ್ರಚಂಡ ರೂಪದಲ್ಲಿ ಪ್ರಕಾಶಿತವಾದೀತು, ಇದನ್ನು ನೀನು ನೋಡ.॥56-57॥

ಮೂಲಮ್ - 58

ನೈವ ಯಕ್ಷಾ ನ ಗಂಧರ್ವಾ ನ ಪಿಶಾಚಾ ನ ರಾಕ್ಷಸಾಃ ।
ಕಿನ್ನರಾ ವಾ ಮನುಷ್ಯಾ ವಾ ಸುಖಂ ಪ್ರಾಪ್ಸ್ಯಂತಿ ಲಕ್ಷ್ಮಣ ॥

ಅನುವಾದ

ಲಕ್ಷ್ಮಣ! ಈಗ ಯಕ್ಷರು, ಗಂಧರ್ವರು, ಪಿಶಾಚಿಗಳು, ರಾಕ್ಷಸರು, ಕಿನ್ನರರು, ಮನುಷ್ಯರು ಇವರಾರೂ ನೆಮ್ಮದಿಯಾಗಿ ಇರಲಾರರು.॥58॥

ಮೂಲಮ್ - 59

ಮಮಾಸ್ತ್ರಬಾಣಸಂಪೂರ್ಣಮಾಕಾಶಂ ಪಶ್ಯ ಲಕ್ಷ್ಮಣ ।
ಅಸಂಪಾತಂ ಕರಿಷ್ಯಾಮಿ ಹ್ಯದ್ಯ ತ್ರೈಲೋಕ್ಯಚಾರಿಣಾಮ್ ॥

ಅನುವಾದ

ಸುಮಿತ್ರಾನಂದನ! ನೋಡುತ್ತಿರು, ಸ್ವಲ್ಪ ಹೊತ್ತಿನಲ್ಲೇ ನಾನು ಬಿಟ್ಟ ಬಾಣಗಳಿಂದ ಆಕಾಶವನ್ನು ತುಂಬಿ ಬಿಡುವೆನು ಮತ್ತು ಮೂರು ಲೋಕಗಳಲ್ಲಿ ಸಂಚರಿಸುವ ಪ್ರಾಣಿಗಳನ್ನು ಕದಲಲೂ ಬಿಡಲಾರೆನು.॥59॥

ಮೂಲಮ್ - 60

ಸಂನಿರುದ್ಧಗ್ರಹಗಣಮಾವಾರಿತನಿಶಾಕರಮ್ ।
ವಿಪ್ರಣಷ್ಟಾನಲಮರುದ್ಭಾಸ್ಕರದ್ಯುತಿಸಂವೃತಮ್ ॥

ಮೂಲಮ್ - 61½

ವಿನಿರ್ಮಥಿತ ಶೈಲಾಗ್ರಂ ಶುಷ್ಯಮಾಣಜಲಾಶಯಮ್ ।
ಧ್ವಸ್ತದ್ರುಮಲತಾಗುಲ್ಮಂ ವಿಪ್ರಣಾಶಿತಸಾಗರಮ್ ॥
ತ್ರೈಲೋಕ್ಯಂ ತು ಕರಿಷ್ಯಾಮಿ ಸಂಯುಕ್ತಂ ಕಾಲಧರ್ಮಣಾ ।

ಅನುವಾದ

ಗ್ರಹಗತಿ ನಿಂತುಹೋದೀತು, ಚಂದ್ರನು ಅಡಗಿಕೊಳ್ಳುವನು, ಅಗ್ನಿ, ಮರುದ್ಗಣ, ಸೂರ್ಯ ಇವರ ತೇಜ ನಾಶವಾಗಿ ಹೋದೀತು, ಎಲ್ಲೆಡೆ ಅಂಧಕಾರವೇ ಆವರಿಸಿ, ಪರ್ವತಗಳ ಶಿಖರಗಳು ಪುಡಿ-ಪುಡಿಯಾದಾವು, ನದೀ, ಸರೋವರಾದಿ ಎಲ್ಲ ಜಲಾಶಯಗಳು ಒಣಗಿ ಹೋಗುವುದು, ಗಿಡ, ಬಳ್ಳಿ, ಮರ ಎಲ್ಲವು ನಾಶವಾಗುವುದು, ಸಮುದ್ರವನ್ನು ನಾಶ ಮಾಡುವೆನು. ಈ ರೀತಿ ನಾನು ಮೂರುಲೋಕಗಳಲ್ಲಿ ಕಾಲನ ವಿನಾಶ ಲೀಲೆಯನ್ನು ಪ್ರಾರಂಭಿಸಿಬಿಡುವೆನು.॥60-61½॥

ಮೂಲಮ್ - 62½

ನ ತೇ ಕುಶಲಿನೀಂ ಸೀತಾಂ ಪ್ರದಾಸ್ಯಂತಿ ಮಮೇಶ್ವರಾಃ ॥
ಅಸ್ಮಿನ್ಮುಹೂರ್ತೇ ಸೌಮಿತ್ರೇ ಮಮ ದ್ರಕ್ಷ್ಯಂತಿ ವಿಕ್ರಮಮ್ ।

ಅನುವಾದ

ಸೌಮಿತ್ರಿಯೇ! ದೇವತೆಗಳು ಇದೇ ಮುಹೂರ್ತದಲ್ಲಿ ಸೀತಾದೇವಿಯನ್ನು ನನಗೆ ಕ್ಷೇಮವಾಗಿ ಮರಳಿಸದಿದ್ದರೆ ಅವರೂ ನನ್ನ ಪರಾಕ್ರಮವನ್ನು ನೋಡುವರು.॥62½॥

ಮೂಲಮ್ - 63½

ನಾಕಾಶಮುತ್ಪತಿಷ್ಯಂತಿ ಸರ್ವಭೂತಾನಿ ಲಕ್ಷ್ಮಣ ॥
ಮಮ ಚಾಪಗುಣೋನ್ಮುಕ್ತೈರ್ಬಾಣಜಾಲೈರ್ನಿರಂತರಮ್ ।

ಅನುವಾದ

ಲಕ್ಷ್ಮಣ! ನನ್ನ ಧನುಸ್ಸಿನಿಂದ ಬಿಟ್ಟ ಬಾಣ ಸಮೂಹಗಳಿಂದ ಆಕಾಶವು ತುಂಬಿಹೋಗುವುದರಿಂದ ಅದರಲ್ಲಿ ಯಾವುದೇ ಪ್ರಾಣಿಯು ಸಂಚರಿಸಲಾರವು.॥63½॥

ಮೂಲಮ್ - 64½

ಮರ್ದಿತಂ ಮಮ ನಾರಾಚೈರ್ಧ್ವಸ್ತಭ್ರಾಂತಮೃಗದ್ವಿಜಮ್ ॥
ಸಮಾಕುಲಮಮರ್ಯಾದಂ ಜಗತ್ಪಶ್ಯಾದ್ಯ ಲಕ್ಷ್ಮಣ ।

ಅನುವಾದ

ಸೌಮಿತ್ರಿಯೇ! ಇಂದು ನನ್ನ ನಾರಾಚಗಳಿಂದ ಹೊಸಕಿಹೋದ ಇಡೀ ಜಗತ್ತು ವ್ಯಾಕುಲ ಮತ್ತು ಮೇರೆ ಮೀರಿಹೋದೀತು. ಇಲ್ಲಿಯ ಮೃಗ ಪಕ್ಷಿಗಳು ಪ್ರಾಣಿಗಳು ನಷ್ಟವಾಗಿ ಭ್ರಾಂತವಾಗುವುದನ್ನು ನೀನು ನೋಡುತ್ತಿರು.॥64½॥

ಮೂಲಮ್ - 65½

ಆರ್ಕರ್ಣಪೂರ್ಣೈರಿಷುಭಿರ್ಜೀವಲೋಕದುರಾವರೈ ॥
ಕರಿಷ್ಯೇ ಮೈಥಿಲೀಹೇತೋರಪಿಶಾಚಮರಾಕ್ಷಸಮ್ ।

ಅನುವಾದ

ಧನುಸ್ಸನ್ನು ಆಕರ್ಣಾಂತವಾಗಿ ಸೆಳೆದು ಬಿಟ್ಟ ನನ್ನ ಬಾಣಗಳನ್ನು ತಡೆಯುವುದು ಜಗತ್ತಿಗೆ ಕಠಿಣವಾಗಬಹುದು. ನಾನು ಸೀತೆಗಾಗಿ ಬಾಣಗಳಿಂದ ಈ ಜಗತ್ತಿನ ಸಮಸ್ತ ಪಿಶಾಚ ಮತ್ತು ರಾಕ್ಷಸರನ್ನು ಸಂಹಾರಮಾಡಿಬಿಡುವೆ.॥65½॥

ಮೂಲಮ್ - 66½

ಮಮ ರೋಷಪ್ರಯುಕ್ತಾನಾಂ ವಿಶಿಖಾನಾಂ ಬಲಂ ಸುರಾಃ ॥
ದ್ರಕ್ಷಂತ್ಯದ್ಯ ವಿಮುಕ್ತಾನಾಮಮರ್ಷಾದ್ ದೂರಗಾಮಿನಾಮ್ ।

ಅನುವಾದ

ರೋಷ ಮತ್ತು ಅಮರ್ಷಪೂರ್ವಕ ಬಿಟ್ಟಿರುವ ನನ್ನ ತುದಿಗಳಿಲ್ಲದ ದೂರಗಾಮಿ ಬಾಣಗಳ ಬಲ ಇಂದು ದೇವತೆಗಳು ನೋಡುವರು.॥66½॥

ಮೂಲಮ್ - 67½

ನೈವ ದೇವಾ ನ ದೈತ್ಯೇಯಾ ನ ಪಿಶಾಚಾ ನ ರಾಕ್ಷಸಾಃ ॥
ಭವಿಷ್ಯಂತಿ ಮಮ ಕ್ರೋಧಾತ್ತ್ರೈಲೋಕ್ಯೇ ವಿಪ್ರಣಾಶಿತೇ ।

ಅನುವಾದ

ನನ್ನ ಕ್ರೋಧದಿಂದ ಮೂರು ಲೋಕಗಳು ವಿನಾಶವಾದಾಗ ದೇವತೆಗಳು, ದೈತ್ಯರು, ಪಿಶಾಚಿಗಳು, ರಾಕ್ಷಸರು ಹೀಗೆ ಯಾರು ಉಳಿಯಲಾರರು.॥67½॥

ಮೂಲಮ್ - 68½

ದೇವದಾನವ ಯಕ್ಷಾಣಾಂ ಲೋಕಾ ಯೇ ರಕ್ಷಸಾಮಪಿ ॥
ಬಹುಧಾ ನಿಪತಿಷ್ಯಂತಿ ಬಾಣೌಘೈಃ ಶಕಲೀಕೃತಾಃ ।

ಅನುವಾದ

ದೇವತೆಗಳ, ದಾನವರ ಯಕ್ಷರ, ರಾಕ್ಷಸರ ಎಲ್ಲ ಲೋಕಗಳು ನನ್ನ ಬಾಣಗಳಿಂದ ಪುಡಿ ಪುಡಿಯಾಗಿ ಪದೇ ಪದೇ ಬಿದ್ದುಹೋಗುವುವು.॥68½॥

ಮೂಲಮ್ - 69½

ನಿರ್ಮರ್ಯಾದಾನಿಮಾ ನ್ ಲ್ಲೋಕಾನ್ ಕರಿಷ್ಯಾಮ್ಯದ್ಯ ಸಾಯಕೈಃ ॥
ಹೃತಾಂ ಮೃತಾಂ ವಾ ಸೌಮಿತ್ರೇ ನ ದಾಸ್ಯಂತಿ ಮಮೇಶ್ವರಾಃ ।

ಅನುವಾದ

ಸುಮಿತ್ರಾನಂದನ! ದೇವತೆಗಳು ಕಳ್ಳತನವಾದ, ಅಥವಾ ಸತ್ತುಹೋದ ಸೀತೆಯನ್ನು ತಂದು ನನಗೆ ಕೊಡದಿದ್ದರೆ ಇಂದೇ ನಾನು ಬಾಣಗಳ ಏಟಿನಿಂದ ಈ ಮೂರು ಲೋಕಗಳ ಮೇರೆಯನ್ನು ನಾಶಮಾಡಿಬಿಡುವೆನು.॥69½॥

ಮೂಲಮ್ - 70

ತಥಾರೂಪಾಂ ಹಿ ವೈದೇಹೀಂ ನ ದಾಸ್ಯಂತಿ ಯದಿ ಪ್ರಿಯಾಮ್ ॥

ಮೂಲಮ್ - 71

ನಾಶಯಾಮಿ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ ।
ಯಾವದ್ದರ್ಶನಮಸ್ಯಾ ವೈ ತಾಪಯಾಮಿ ಚ ಸಾಯಕೈಃ ॥

ಅನುವಾದ

ಅವರು ನನ್ನ ಪ್ರಿಯ ವೈದೇಹಿಯನ್ನು ನನಗೆ ಅದೇ ರೂಪದಲ್ಲಿ ತಂದೊಪ್ಪಿಸದಿದ್ದರೆ ನಾನು ಚರಾಚರ ಪ್ರಾಣಿಗಳ ಸಹಿತ ಸಮಸ್ತ ಲೋಕಗಳನ್ನು ನಾಶಮಾಡಿಬಿಡುವೆನು. ಸೀತೆಯ ದರ್ಶನವಾಗುವವರೆಗೆ ನಾನು ನನ್ನ ಸಾಯಕಗಳಿಂದ ಸಮಸ್ತ ಜಗತ್ತನ್ನು ಸಂತಪ್ತ ಮಾಡುತ್ತಾ ಇರುವೆನು.॥70-71॥

ಮೂಲಮ್ - 72

ಇತ್ಯುಕ್ತ್ವಾ ಕ್ರೋಧತಾಮ್ರಾಕ್ಷಃ ಸ್ಫುರಮಾಣೋಷ್ಠಸಂಪುಟಃ ।
ವಲ್ಕಲಾಜಿನಮಾಬದ್ಧ್ಯ ಜಟಾಭಾರಮಬಂಧಯತ್ ॥

ಅನುವಾದ

ಹೀಗೆ ಹೇಳಿ ಶ್ರೀರಾಮನ ಕಣ್ಣುಗಳು ಕ್ರೋಧದಿಂದ ಕೆಂಪದಾದವು ತುಟಿಗಳು ನಡುಗಿದವು. ನಾರುಮಡಿಯನ್ನು ವಲ್ಕಲಗಳನ್ನು ಬಿಗಿಯಾಗಿಸಿ ಜಟೆಯನ್ನು ಎತ್ತಿ ಕಟ್ಟಿದನು.॥72॥

ಮೂಲಮ್ - 73

ತಸ್ಯ ಕ್ರುದ್ಧಸ್ಯ ರಾಮಸ್ಯ ತಥಾಭೂತಸ್ಯ ಧೀಮತಃ ।
ತ್ರಿಪುರಂ ಜಘ್ನುಷಃ ಪೂರ್ವಂ ರುದ್ರಸ್ಯೇವ ಬಭೌ ತನುಃ ॥

ಅನುವಾದ

ಆಗ ಸಿಟ್ಟುಗೊಂಡ ಈ ರೀತಿಯ ಸಂಹಾರ ಕಾರ್ಯಕ್ಕೆ ಮುಂದಾದ ಭಗವಾನ್ ಶ್ರೀರಾಮನ ಶರೀರವು ಹಿಂದೆ ತ್ರಿಪುರನ ಸಂಹಾರ ಮಾಡುವ ರುದ್ರನಂತೆ ಕಂಡು ಬರುತ್ತಿತ್ತು.॥73॥

ಮೂಲಮ್ - 74

ಲಕ್ಷ್ಮಣಾದಥ ಚಾದಾಯ ರಾಮೋ ನಿಷ್ಪೀಡ್ಯ ಕಾರ್ಮುಕಮ್ ।
ಶರಮಾದಾಯ ಸಂದೀಪ್ತಂ ಘೋರಮಾಶೀವಿಷೋಪಮಮ್ ॥

ಮೂಲಮ್ - 75

ಸಂದಧೇ ಧನುಷಿ ಶ್ರೀಮಾನ್ ರಾಮಃ ಪರಪುರಂಜಯಃ ।
ಯುಗಾಂತಾಗ್ನಿರಿವ ಕ್ರುದ್ಧ ಇದಂ ವಚನಮಬ್ರವೀತ್ ॥

ಅನುವಾದ

ಆಗ ಲಕ್ಷ್ಮಣನ ಕೈಯಿಂದ ಧನುಸ್ಸನ್ನೆತ್ತಿಕೊಂಡು ಶ್ರೀರಾಮಚಂದ್ರನು ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಒಂದು ವಿಷಧರ ಸರ್ಪದಂತಹ ಭಯಂಕರ, ಪ್ರಜ್ವಲಿತ ಬಾಣವನ್ನು ಧನುಸ್ಸಿಗೆ ಹೂಡಿದನು. ಅನಂತರ ಶತ್ರುನಗರದ ಮೇಲೆ ವಿಜಯಪಡೆಯುವ ಶ್ರೀರಾಮನು ಪ್ರಳಯಾಗ್ನಿಯಂತೆ ಕುಪಿತನಾಗಿ ಹೀಗೆ ಹೇಳಿದನು.॥74-75॥

ಮೂಲಮ್ - 76

ಯಥಾ ಜರಾ ಯಥಾ ಮೃತ್ಯುರ್ಯಥಾ ಕಾಲೋ ಯಥಾ ವಿಧಿಃ ।
ನಿತ್ಯಂ ನಪ್ರತಿಹನ್ಯಂತೇ ಸರ್ವಭೂತೇಷು ಲಕ್ಷ್ಮಣ ।
ತಥಾಹಂ ಕ್ರೋಧಸಂಯುಕ್ತೋ ನ ನಿವಾರ್ಯೋಽಸ್ಮ್ಯಸಂಶಯಮ್ ॥

ಅನುವಾದ

ಲಕ್ಷ್ಮಣ! ವೃದ್ಧಾಪ್ಯ, ಮೃತ್ಯು, ಕಾಲ ಮತ್ತು ವಿಧಾತನು ಸದಾ ಸಮಸ್ತ ಪ್ರಾಣಿಗಳ ಮೇಲೆ ಪ್ರಹಾರ ಮಾಡಿದರೂ ಅದನ್ನು ಯಾರಿಂದಲೂ ತಡೆಯಲಾಗುವುದಿಲ್ಲ. ಅದೇ ಪ್ರಕಾರ ಕ್ರೋಧಗೊಂಡ ನನ್ನನ್ನು ನಿಸ್ಸಂಶಯವಾಗಿ ಯಾರೂ ತಡೆಯಲಾರರು.॥76॥

ಮೂಲಮ್ - 77

ಪುರೇವ ಮೇ ಚಾರುದತೀಮನಿಂದಿತಾಂ
ದಿಶಂತಿ ಸೀತಾಂ ಯದಿ ನಾದ್ಯ ಮೈಥಿಲೀಮ್ ।
ಸದೇವಗಂಧರ್ವಮನುಷ್ಯಪನ್ನಗಂ
ಜಗತ್ಸಶೈಲಂ ಪರಿವರ್ತಯಾಮ್ಯಹಮ್ ॥

ಅನುವಾದ

ದೇವತೆಗಳು ಇಂದುಮೊದಲಿನಂತೆ ಮನೋಹರ ಹಲ್ಲುಗಳುಳ್ಳ ಅನಿಂದ್ಯ ಸುಂದರೀ ಮಿಥಿಲೇ ಕುಮಾರಿ ಸೀತೆಯನ್ನು ನನಗೆ ಮರಳಿ ತಂದುಕೊಡದಿದ್ದರೆ ನಾನು ದೇವತೆ, ಗಂಧರ್ವ, ಮನುಷ್ಯ, ನಾಗ, ಪರ್ವತಗಳ ಸಹಿತ ಇಡೀ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿಬಿಡುವೆನು.॥77॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅರವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು. ॥64॥