०६३ लक्ष्मणेन रामसान्त्वनम्

वाचनम्
ಭಾಗಸೂಚನಾ

ಶ್ರೀ ರಾಮನ ವಿಲಾಪ

ಮೂಲಮ್ - 1

ಸ ರಾಜಪುತ್ರಃ ಪ್ರಿಯಯಾ ವಿಹೀನಃ
ಶೋಕೇನ ಮೋಹೇನ ಚ ಪೀಡ್ಯಮಾನಃ ।
ವಿಷಾದಯನ್ಭ್ರಾತರಮಾರ್ತರೂಪೋ
ಭೂಯೋ ವಿಷಾದಂ ಪ್ರವಿವೇಶ ತೀವ್ರಮ್ ॥

ಅನುವಾದ

ತನ್ನ ಪ್ರಿಯೆ ಸೀತೆಯ ರಹಿತನಾದ ರಾಜಕುಮಾರ ಶ್ರೀರಾಮನು ಶೋಕ, ಮೋಹದಿಂದ ಪೀಡಿತನಾದನು. ಅವನು ಸ್ವತಃ ಪೀಡಿತನಾಗಿಯೇ ಇದ್ದನು, ತನ್ನ ತಮ್ಮ ಲಕ್ಷ್ಮಣನನ್ನು ವಿಷಾದದಲ್ಲಿ ಕೆಡಹಿ ಪುನಃ ತೀವ್ರಶೋಕ ಮಗ್ನನಾದನು.॥1॥

ಮೂಲಮ್ - 2

ಸ ಲಕ್ಷ್ಮಣಂ ಶೋಕವಶಾಭಿಪನ್ನಂ
ಶೋಕೇ ನಿಮಗ್ನೋ ವಿಪುಲೇ ತು ರಾಮಃ ।
ಉವಾಚ ವಾಕ್ಯಂವ್ಯಸನಾನುರೂಪ-
ಮುಷ್ಣಂ ವಿನಿಃಶ್ವಸ್ಯ ರುದನ್ ಸಶೋಕಮ್ ॥

ಅನುವಾದ

ಲಕ್ಷ್ಮಣನೂ ಶೋಕಕ್ಕೆ ಅಧೀನನಾಗಿದ್ದನು. ಮಹಾಶೋಕದಲ್ಲಿ ಮುಳುಗಿದ್ದ ಶ್ರೀರಾಮನು ದುಃಖದಿಂದ ಅಳುತ್ತಾ ಬಿಸಿಯಾದ ನಿಟ್ಟುಸಿರುಬಿಡುತ್ತಾ, ತನ್ನ ಮೇಲೆ ಬಿದ್ದ ಸಂಕಟಕ್ಕನುಸಾರ ಅವನಲ್ಲಿ ಹೇಳಿದನು .॥2॥

ಮೂಲಮ್ - 3

ನ ಮದ್ವಿಧೋ ದುಷ್ಕೃತಕರ್ಮಕಾರೀ
ಮನ್ಯೇ ದ್ವಿತೀಯೋಽಸ್ತಿ ವಸುಂಧರಾಯಾಮ್ ।
ಶೋಕಾನುಶೋಕೋ ಹಿ ಪರಂಪರಾಯಾ
ಮಾಮೇತಿ ಭಿಂದನ್ಹೃದಯಂ ಮನಶ್ಚ ॥

ಅನುವಾದ

ಸುಮಿತ್ರಾನಂದನನೇ! ನನ್ನಂತಹ ಪಾಪಕರ್ಮ ಮಾಡಿದ ಮನುಷ್ಯನು ಈ ಪೃಥ್ವಿಯಲ್ಲಿ ಬೇರೆ ಯಾರೂ ಇರಲಾರನೆಂದೇ ಅನಿಸುತ್ತದೆ. ಏಕೆಂದರೆ, ಒಂದರ ಮೇಲೆ ಮತ್ತೊಂದು ಶೋಕವು ನನ್ನ ಹೃದಯ ಮತ್ತು ಮನಸ್ಸನ್ನು ವಿದೀರ್ಣಗೊಳಿಸುತ್ತಾ ಒಂದೇ ಸಮನೆ ನನ್ನ ಮೇಲೆ ಬಂದು ಬೀಳುತ್ತಾ ಇದೆ.॥3॥

ಮೂಲಮ್ - 4

ಪೂರ್ವಂ ಮಯಾ ನೂನಮಭೀಪ್ಸಿತಾನಿ
ಪಾಪಾನಿ ಕರ್ಮಾಣ್ಯ ಸಕೃತ್ಕೃತಾನಿ ।
ತತ್ರಾಯಮದ್ಯಾಪತಿತೋ ವಿಪಾಕೋ
ದುಃಖೇನ ದುಃಖಂ ಯದಹಂ ವಿಶಾಮಿ ॥

ಅನುವಾದ

ಖಂಡಿತವಾಗಿ ನಾನು ಹಿಂದಿನ ಜನ್ಮದಲ್ಲಿ ಸ್ವಇಚ್ಛೆಯಿಂದ ಪದೇ-ಪದೇ ಅನೇಕ ಪಾಪಗಳನ್ನು ಮಾಡಿರುವೆ, ಅವುಗಳಲ್ಲೇ ಕೆಲವು ಕರ್ಮಗಳ ಪರಿಣಾಮ ಇಂದು ಪ್ರಾಪ್ತವಾಗಿದೆ. ಅದರಿಂದ ನಾನು ಒಂದು ದುಃಖದಿಂದ ಇನ್ನೊಂದು ದುಃಖದಲ್ಲಿ ಬೀಳುತ್ತಾ ಇದ್ದೇನೆ.॥4॥

ಮೂಲಮ್ - 5

ರಾಜ್ಯಪ್ರಣಾಶಃ ಸ್ವಜನೈರ್ವಿಯೋಗಃ
ಪಿತುರ್ವಿನಾಶೋ ಜನನೀವಿಯೋಗಃ ।
ಸರ್ವಾಣಿ ಮೇ ಲಕ್ಷ್ಮಣ ಶೋಕವೇಗ-
ಮಾಪೂರಯಂತಿ ಪ್ರವಿಚಿಂತಿತಾನಿ ॥

ಅನುವಾದ

ಮೊದಲಿಗೆ ರಾಜ್ಯದಿಂದ ವಂಚಿತನಾದೆ ಮತ್ತು ಸ್ವಜನರಿಂದ ನನ್ನ ವಿಯೊಗವಾಯಿತು. ಅನಂತರ ತಂದೆಯವರು ಪರಲೋಕಕ್ಕೆ ತೆರಳಿದರು, ಮತ್ತೆ ತಾಯಿಯಿಂದಲೂ ಅಗಲಬೇಕಾಯಿತು. ಲಕ್ಷ್ಮಣ! ಇವೆಲ್ಲ ಘಟನೆಗಳು ನೆನಪಾದಾಗ ನನ್ನ ಶೋಕದ ವೇಗ ಹೆಚ್ಚುತ್ತದೆ.॥5॥

ಮೂಲಮ್ - 6

ಸರ್ವಂ ತು ದುಃಖಂ ಮಮ ಲಕ್ಷ್ಮಣೇದಂ
ಶಾಂತಂ ಶರೀರೇ ವನಮೇತ್ಯ ಕ್ಲೇಶಮ್ ।
ಸೀತಾವಿಯೋಗಾತ್ಪುನರಪ್ಯುದೀರ್ಣಂ
ಕಾಷ್ಠೈರಿವಾಗ್ನಿಃ ಸಹಸೋಪದೀಪ್ತಃ ॥

ಅನುವಾದ

ಲಕ್ಷ್ಮಣ! ಕಾಡಿಗೆ ಬಂದು ಕ್ಲೇಶವನ್ನು ಅನುಭವಿಸಿದರೂ ಇದೆಲ್ಲ ದುಃಖಗಳು ಸೀತೆಯು ಸಮೀಪದಲ್ಲಿದ್ದಾಗ ನನ್ನ ಶರೀರದಲ್ಲೇ ಶಾಂತವಾಗಿ ಹೋಗಿದ್ದವು, ಆದರೆ ಸೀತೆಯ ವಿಯೋಗದಿಂದ ಒಣಗಿದ ಕಟ್ಟಿಗೆಯ ಸಂಯೋಗದಿಂದ ಬೆಂಕಿಯು ಉರಿದೇಳುವಂತೆ ಅವು ಪುನಃ ಮೇಲಕೆದ್ದು ಬಾಧಿಸುತ್ತವೆ.॥6॥

ಮೂಲಮ್ - 7

ಸಾ ನೂನಮಾರ್ಯಾ ಮಮ ರಾಕ್ಷಸೇನ
ಹ್ಯಭ್ಯಾಹೃತಾ ಖಂ ಸಮುಪೇತ್ಯ ಭೀರುಃ ।
ಅಪಸ್ವರಂ ಸುಸ್ವರವಿಪ್ರಲಾಪಾ
ಭಯೇನ ವಿಕ್ರಂದಿತವತ್ಯಭೀಕ್ಷ್ಣಮ್ ॥

ಅನುವಾದ

ಅಯ್ಯೋ! ಶ್ರೇಷ್ಠ ಸ್ವಭಾವವುಳ್ಳ ಭೀರು ಪತ್ನಿಯನ್ನು ಅವಶ್ಯವಾಗಿ ರಾಕ್ಷಸನು ಆಕಾಶಮಾರ್ಗದಿಂದ ಕದ್ದುಕೊಂಡು ಹೋಗಿರಬಹುದು. ಆಗ ಸುಮಧುರ ಸ್ವರದಲ್ಲಿ ವಿಲಾಪ ಮಾಡುವ ಸೀತೆಯು ಭಯದಿಂದ ಪದೇ-ಪದೇ ವಿಕತ ಸ್ವರದಲ್ಲಿ ಅಳುತ್ತಿರಬಹುದು.॥7॥

ಮೂಲಮ್ - 8

ತೌ ಲೋಹಿತಸ್ಯ ಪ್ರಿಯದರ್ಶನಸ್ಯ
ಸದೋಚಿತಾವುತ್ತಮಚಂದನಸ್ಯ ।
ವೃತ್ತೌ ಸ್ತನೌ ಶೋಣಿತಪಂಕದಿಗ್ಧೌ
ನೂನಂ ಪ್ರಿಯಾಯಾ ಮಮ ನಾಭಿಪಾತಃ ॥

ಅನುವಾದ

ನನ್ನ ಪ್ರಿಯೆಯ ಚಂದನ ಚರ್ಚಿತ ಗುಂಡು-ಗುಂಡಾಗಿರುವ ಎರಡೂ ಸ್ತನಗಳು ನಿಶ್ಚಿತವಾಗಿ ರಕ್ತದಿಂದ ನೆನೆದು ಹೋಗಿರಬಹುದು. ಇಷ್ಟಾದರೂ ನನ್ನ ಶರೀರದ ಪತನವಾಗುವುದಿಲ್ಲವಲ್ಲ.॥8॥

ಮೂಲಮ್ - 9

ತತ್ ಛಲಕ್ಷ್ಣಸುವ್ಯಕ್ತಮೃದುಪ್ರಲಾಪಂ
ತಸ್ಯಾ ಮುಖಂ ಕುಂಜಿತಕೇಶಭಾರಮ್ ।
ರಕ್ಷೋವಶಂ ನೂನಮುಪಾಗತಾಯಾ
ನ ಭ್ರಾಜತೇ ರಾಹುಮುಖೇ ಯಥೇಂದುಃ ॥

ಅನುವಾದ

ರಾಕ್ಷಸನ ವಶದಲ್ಲಿ ಇರುವ ನನ್ನ ಪ್ರಿಯೆಯ ಸ್ನಿಗ್ಧ ಮತ್ತು ಸುಸ್ಪಷ್ಟ ಮಧುರವಾಗಿ ಮಾತನಾಡುವ ಹಾಗೂ ಕಪ್ಪಾದ ಗುಂಗುರು ಕೂದಲುಗಳುಳ್ಳ ಭಾರದಿಂದ ಸುಶೋಭಿತವಾಗಿದ್ದ ಮುಖವು ರಾಹುವು ನುಂಗಿದ ಚಂದ್ರನಂತೆ ಶೋಭಾಹೀನವಾಗಿರಬಹುದು.॥9॥

ಮೂಲಮ್ - 10

ತಾಂ ಹಾರಪಾಶಸ್ಯ ಸದೋಚಿತಾಂತಾಂ
ಗ್ರೀವಾಂ ಪ್ರಿಯಾಯಾ ಮಮ ಸುವ್ರತಾಯಾಃ ।
ರಕ್ಷಾಂಸಿ ನೂನಂ ಪರಿಪೀತವಂತಿ
ಶೂನ್ಯೇ ಹಿ ಭಿತ್ವಾ ರುಧಿರಾಶನಾನಿ ॥

ಅನುವಾದ

ಅಯ್ಯೋ! ಉತ್ತಮ ವ್ರತವನ್ನು ಪಾಲಿಸುವ ನನ್ನ ಪ್ರಿಯತಮೆಯ ಕಂಠವು ಎಲ್ಲಾ ಹೊತ್ತಿನಲ್ಲಿ ಹಾರಗಳಿಂದ ಸುಶೋಭಿತವಾಗಿರಲು ಯೋಗ್ಯವಾಗಿದೆ. ಆದರೆ ರಕ್ತಭೋಜೀ ರಾಕ್ಷಸನು ಬರಿದಾದ ವನದಲ್ಲಿ ಅವಶ್ಯವಾಗಿ ಅದನ್ನು ಹರಿದು ಅದರ ರಕ್ತ ಕುಡಿದಿರಬಹುದು.॥10॥

ಮೂಲಮ್ - 11

ಮಯಾ ವಿಹೀನಾ ವಿಜನೇ ವನೇ ಸಾ
ರಕ್ಷೋಭಿರಾಹೃತ್ಯವಿಕೃಷ್ಯಮಾಣಾ ।
ನೂನಂ ವಿನಾದಂ ಕುರರೀವ ದೀನಾ
ಸಾ ಮುಕ್ತವತ್ಯಾಯತಕಾಂತನೇತ್ರಾ॥

ಅನುವಾದ

ನಾನು ಇಲ್ಲದಿರುವಾಗ ನಿರ್ಜನ ವನದಲ್ಲಿ ರಾಕ್ಷಸರು ಆಕೆಯನ್ನು ಎಳೆದುಕೊಂಡು ಹೋಗಿರಬೇಕು. ವಿಶಾಲ ಹಾಗೂ ಮನೋಹರ ಕಣ್ಣುಗಳುಳ್ಳ ಜಾನಕಿಯು ಅತ್ಯಂತ ದೀನಳಾಗಿ ಕುಕರಪಕ್ಷಿಯಂತೆ ವಿಲಾಪಿಸುತ್ತಾ ಇದ್ದಿರಬಹುದು.॥11॥

ಮೂಲಮ್ - 12

ಅಸ್ಮಿನ್ಮಯಾ ಸಾರ್ಧಮುದಾರಶೀಲಾ
ಶಿಲಾತಲೇ ಪೂರ್ವಮುಪೋಪವಿಷ್ಟಾ ।
ಕಾಂತಸ್ಮಿತಾ ಲಕ್ಷ್ಮಣ ಜಾತಹಾಸಾ
ತ್ವಾಮಾಹ ಸೀತಾ ಬಹುವಾಕ್ಯಜಾತಮ್ ॥

ಅನುವಾದ

ಲಕ್ಷ್ಮಣ! ಉದಾರ ಸ್ವಭಾವವುಳ್ಳ ಸೀತೆಯು ಮೊದಲು ಒಂದು ದಿನ ನನ್ನ ಜೊತೆಗೆ ಕುಳಿತಿದ್ದ ಶಿಲೆಯು ಇದೇ ಆಗಿದೆ. ಆಕೆಯ ಮುಗುಳ್ನಗೆ ಎಷ್ಟು ಮನೋಹರವಾಗಿತ್ತು. ಆಗ ಅವಳು ನಗು-ನಗುತ್ತಾ ನಿನ್ನೊಡನೆಯೂ ಅನೇಕ ಮಾತುಗಳನ್ನು ಆಡಿದ್ದಳು.॥12॥

ಮೂಲಮ್ - 13

ಗೋದಾವರೀಯಂ ಸರಿತಾಂ ವರಿಷ್ಠಾ
ಪ್ರಿಯಾ ಪ್ರಿಯಾಯಾ ಮಮ ನಿತ್ಯಕಾಲಮ್ ।
ಅಪ್ಯತ್ರ ಗಚ್ಛೇದಿತಿ ಚಿಂತಯಾಮಿ
ನೈಕಾಕಿನೀ ಯಾತಿ ಹಿ ಸಾ ಕದಾಚಿತ್ ॥

ಅನುವಾದ

ನದಿಗಳಲ್ಲಿ ಶ್ರೇಷ್ಠವಾದ ಈ ಗೋದಾವರಿಯು ನನ್ನ ಪ್ರಿಯತಮೆಗೆ ಸದಾ ಪ್ರಿಯವಾಗಿತ್ತು. ಅವಳು ಅದೇ ನದಿಯ ತೀರಕ್ಕೆ ಹೋಗಿರಬಹುದು ಎಂದು ಯೋಚಿಸುತ್ತೇನೆ. ಆದರೆ ಒಬ್ಬಳೇ ಆಕೆಯು ಎಂದೂ ಅಲ್ಲಿಗೆ ಹೋಗಿರಲಿಲ್ಲ.॥13॥

ಮೂಲಮ್ - 14

ಪದ್ಮಾನನಾ ಪದ್ಮಪಲಾಶನೇತ್ರಾ
ಪದ್ಮಾನಿ ವಾನೇತುಮಭಿಪ್ರಯಾತಾ ।
ತದಪ್ಯಯುಕ್ತಂ ನಹಿ ಸಾ ಕದಾಚಿ-
ನ್ಮಯಾ ವಿನಾ ಗಚ್ಛತಿ ಪಂಕಜಾನಿ ॥

ಅನುವಾದ

ಆಕೆಯ ಮುಖ ಮತ್ತು ವಿಶಾಲನೇತ್ರಗಳು ಅರಳಿದ ಕಮಲಗಳಂತೆ ಸುಂದರವಾಗಿದೆ. ಅವಳು ಕಮಲಪುಷ್ಪಗಳನ್ನು ತರಲು ಗೋದಾವರಿ ತೀರಕ್ಕೆ ಹೋಗಿರಬಹುದು, ಆದರೆ ಇದೂ ಸರಿಯಲ್ಲ, ಏಕೆಂದರೆ ಆಕೆಯು ನನ್ನನ್ನು ಜೊತೆಗೆ ಕರೆದುಕೊಂಡು ಹೋಗದೆ ಒಬ್ಬಳೇ ಎಂದೂ ಕಮಲಗಳ ಬಳಿಗೆ ಹೋಗಿಲ್ಲ.॥14॥

ಮೂಲಮ್ - 15

ಕಾಮಂ ತ್ವಿದಂ ಪುಷ್ಟಿತವೃಕ್ಷಷಂಡಂ
ನಾನಾವಿಧೈಃ ಪಕ್ಷಿಗಣೈರುಪೇತಮ್ ।
ವನಂ ಪ್ರಯಾತಾ ನು ತದಪ್ಯಯುಕ್ತ-
ಮೇಕಾಕಿನೀ ಸಾತಿಬಿಭೇತಿ ಭೀರುಃ ॥

ಅನುವಾದ

ಈ ಪುಷ್ಟಿತ ವೃಕ್ಷ ಸಮೂಹಗಳಿಂದ ಕೂಡಿದ ನಾನಾ ಪ್ರಕಾರದ ಪಕ್ಷಿಗಳಿಂದ ಸೇವಿತ ವನದಲ್ಲಿ ತಿರುಗಾಡಲು ಹೋಗಿರಬಹುದು. ಆದರೆ ಇದು ಸರಿ ಎಂದು ಅನಿಸುವುದಿಲ್ಲ, ಏಕೆಂದರೆ ಭೀರುವಾದ ಅವಳು ಒಬ್ಬಳೇ ಕಾಡಿಗೆ ಹೋಗಲು ಬಹಳ ಹೆದರುತ್ತಿದ್ದಳು.॥15॥

ಮೂಲಮ್ - 16

ಆದಿತ್ಯ ಭೋ ಲೋಕಕೃತಾಕೃತಜ್ಞ
ಲೋಕಸ್ಯ ಸತ್ಯಾನೃತಕರ್ಮಸಾಕ್ಷಿನ್ ।
ಮಮ ಪ್ರಿಯಾ ಸಾ ಕ್ವ ಗತಾ ಹೃತಾ ವಾ
ಶಂಸಸ್ವ ಮೇ ಶೋಕಹತಸ್ಯ ಸರ್ವಮ್ ॥

ಅನುವಾದ

ಸೂರ್ಯದೇವನೇ! ಜಗತ್ತಿನಲ್ಲಿ ಯಾರು ಏನೇನು ಮಾಡುವರೋ, ಏನೇನು ಮಾಡಿಲ್ಲವೋ ಅದೆಲ್ಲವನ್ನೂ ನೀನು ತಿಳಿದೇ ಇರುವೆ. ಜನರ ಸತ್ಯ-ಅಸತ್ಯ, ಪಾಪ-ಪುಣ್ಯ ಕರ್ಮಗಳ ಸಾಕ್ಷಿಯಾಗಿರುವೆ. ನನ್ನ ಪ್ರಿಯೆ ಸೀತೆಯು ಎಲ್ಲಿಗೆ ಹೋಗಿರುವಳು? ಅಥವಾ ಯಾರು ಕದ್ದುಕೊಂಡು ಹೋದರು? ಇದೆಲ್ಲವನ್ನೂ ನನಗೆ ತಿಳಿಸು, ಏಕೆಂದರೆ ನಾನು ಆಕೆಯ ಶೋಕದಿಂದ ಪೀಡಿತನಾಗಿದ್ದೇನೆ.॥16॥

ಮೂಲಮ್ - 17

ಲೋಕೇಷು ಸರ್ವೇಷು ಚ ನಾಸ್ತಿ ಕಿಂಚಿದ್
ಯತ್ ತೇ ನ ನಿತ್ಯಂ ವಿದಿತಂ ಭವೇತ್ತತ್ ।
ಶಂಸಸ್ವ ವಾಯೋ ಕುಲಪಾಲಿನೀಂ ತಾಂ
ಮೃತಾ ಹೃತಾ ವಾ ಪಥಿ ವರ್ತತೇ ವಾ ॥

ಅನುವಾದ

ವಾಯುದೇವನೇ! ಸಮಸ್ತ ವಿಶ್ವದಲ್ಲಿ ನಿನಗೆ ತಿಳಿಯದಿರುವ ಸಂಗತಿಯಾವುದೂ ಇಲ್ಲ. ನನ್ನ ಕುಲಪಾಲಿನೀ ಸೀತೆಯು ಈಗ ಎಲ್ಲಿರುವಳು? ಅವಳು ಸತ್ತುಹೋಗಿರುವಳೇ, ಕದ್ದುಕೊಂಡು ಹೋಗಿರುವರೋ ಅಥವಾ ದಾರಿಯಲ್ಲಿರುವಳೋ ಇದನ್ನು ಹೇಳಿಬಿಡು.॥17॥

ಮೂಲಮ್ - 18

ಇತೀವ ತಂ ಶೋಕವಿಧೇಯದೇಹಂ
ರಾಮಂ ವಿಸಂಜ್ಞಂ ವಿಲಪಂತಮೇವ ।
ಉವಾಚ ಸೌಮಿತ್ರಿರದೀನಸತ್ತ್ವೋ
ನ್ಯಾಯ್ಯೇ ಸ್ಥಿತಃ ಕಾಲಯುತಂ ಚ ವಾಕ್ಯಮ್ ॥

ಅನುವಾದ

ಈ ಪ್ರಕಾರ ಶೋಕಕ್ಕೆ ಅಧೀನನಾಗಿ ಶ್ರೀರಾಮಚಂದ್ರನು ಎಚ್ಚರವಿಲ್ಲದೆ ವಿಲಾಪಿಸುತ್ತಿರುವಾಗ, ಅವನ ಇಂತಹ ಸ್ಥಿತಿಯನ್ನು ನೋಡಿ ನ್ಯಾಯೋಚಿತ ಮಾರ್ಗದಲ್ಲಿ ಸ್ಥಿತನಾದ ಲಕ್ಷ್ಮಣನು ಅವನಲ್ಲಿ ಹೀಗೆ ಯಥೋಚಿತವಾಗಿ ಹೇಳಿದನು.॥18॥

ಮೂಲಮ್ - 19

ಶೋಕಂ ವಿಸೃಜ್ಯಾದ್ಯ ಧೃತಿಂ ಭಜಸ್ವ
ಸೋತ್ಸಾಹತಾ ಚಾಸ್ತು ವಿಮಾಗಣೇಽಸ್ಯಾಃ ।
ಉತ್ಸಾಹವಂತೋ ಹಿ ನರಾ ನ ಲೋಕೇ
ಸೀದಂತಿ ಕರ್ಮಸ್ವತಿದುಷ್ಕರೇಷು ॥

ಅನುವಾದ

ಆರ್ಯ! ನೀನು ಶೋಕವನ್ನು ಬಿಟ್ಟು ಧೈರ್ಯದಿಂದಿರು. ಸೀತೆಯನ್ನು ಹುಡುಕಲು ಮನಸ್ಸಿನಲ್ಲಿ ಉತ್ಸಾಹ ತಳೆ, ಏಕೆಂದರೆ ಉತ್ಸಾಹಿ ಮನುಷ್ಯನು ಜಗತ್ತಿನಲ್ಲಿ ಅತ್ಯಂತ ದುಷ್ಕರ ಕಾರ್ಯ ಎದುರಾದರೂ ಎಂದೂ ದುಃಖಿಸುವುದಿಲ್ಲ.॥19॥

ಮೂಲಮ್ - 20

ಇತೀವ ಸೌಮಿತ್ರಿಮುದಗ್ರಪೌರುಷಂ
ಬ್ರುವಂತಮಾರ್ತೋ ರಘುವಂಶವರ್ಧನಃ ।
ನ ಚಿಂತಯಾಮಾಸ ಧೃತಿಂ ವಿಮುಕ್ತವಾನ್
ಪುನಶ್ಚ ದುಃಖಂ ಮಹದಭ್ಯುಪಾಗಮತ್ ॥

ಅನುವಾದ

ಹೆಚ್ಚಾದ ಪುರುಷಾರ್ಥವುಳ್ಳ ಲಕ್ಷ್ಮಣನು ಹೀಗೆ ಹೇಳುತ್ತಿರುವಾಗ ರಘುಕುಲವರ್ಧನ ಶ್ರೀರಾಮನು ಆರ್ತನಾಗಿ ಅವನ ಮಾತಿನ ಔಚಿತ್ಯದ ಕಡೆಗೆ ಗಮನವೇ ಕೊಡಲಿಲ್ಲ. ಅವನು ಧೈರ್ಯವನ್ನು ತೊರೆದು ಪುನಃ ಮಹಾನ್ ದುಃಖದಲ್ಲಿ ಮುಳುಗಿಹೋದನು.॥20॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅರವತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥63॥