०६१ सीता-अन्वेषणम्

वाचनम्
ಭಾಗಸೂಚನಾ

ಶ್ರೀರಾಮ ಲಕ್ಷ್ಮಣರಿಂದ ಪುನಃ ಸೀತೆಯ ಅನ್ವೇಷಣೆ, ಶ್ರೀರಾಮನ ವಿಲಾಪ

ಮೂಲಮ್ - 1

ದೃಷ್ಟ್ವಾಽಽಶ್ರಮಪದಂ ಶೂನ್ಯಂ ರಾಮೋ ದಶರಥಾತ್ಮಜಃ ।
ರಹಿತಾಂ ಪರ್ಣಶಾಲಾಂ ಚ ಪ್ರವಿದ್ಧಾನ್ಯಾಸನಾನಿ ಚ ॥

ಮೂಲಮ್ - 2

ಅದೃಷ್ಟ್ವಾ ತತ್ರ ವೈದೇಹೀಂ ಸಂನಿರೀಕ್ಷ್ಯ ಚ ಸರ್ವಶಃ ।
ಉವಾಚ ರಾಮಃ ಪ್ರಾಕ್ರುಶ್ಯ ಪ್ರಗೃಹ್ಯ ರುಚಿರೌ ಭುಜೌ ॥

ಅನುವಾದ

ಎಲ್ಲೆಡೆ ಹುಡುಕಿ ಶ್ರೀರಾಮನು ಲಕ್ಷ್ಮಣನೊಡನೆ ಪುನಃ ಆಶ್ರಮಕ್ಕೆ ಬಂದಾಗಲೂ ಪರ್ಣಶಾಲೆಯು ಶೂನ್ಯವಾಗಿತ್ತು. ಸೀತೆಯು ಇರಲಿಲ್ಲ. ಆಸನಗಳೆಲ್ಲ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಆಶ್ರಮದ ಎಲ್ಲಕಡೆ ದಿಟ್ಟಿಸಿನೋಡಿದರೂ ವೈದೇಹಿಯು ಕಾಣದಿದ್ದಾಗ ಶ್ರೀರಾಮನು ತನ್ನ ಸುಂದರ ಭುಜಗಳನ್ನೆತ್ತಿ ಸೀತಾ-ಸೀತಾ ಎಂದು ಜೋರಾಗಿ ಕರೆಯುತ್ತಾ ಲಕ್ಷ್ಮಣನಲ್ಲಿ ಹೇಳಿದನು.॥1-2॥

ಮೂಲಮ್ - 3

ಕ್ವ ನು ಲಕ್ಷ್ಮಣ ವೈದೇಹೀ ಕಂ ವಾ ದೇಶಮಿತೋ ಗತಾ ।
ಕೇನಾಹೃತಾ ವಾ ಸೌಮಿತ್ರೇ ಭಕ್ಷಿತಾ ಕೇನ ವಾ ಪ್ರಿಯಾ ॥

ಅನುವಾದ

ತಮ್ಮ ಲಕ್ಷ್ಮಣ! ವೈದೇಹಿ ಎಲ್ಲಿರುವಳು? ಇಲ್ಲಿಂದ ಯಾವ ದೇಶಕ್ಕೆ ಹೋದಳು? ಸುಮಿತ್ರಾನಂದನ! ನನ್ನ ಪ್ರಿಯೆ ಸೀತೆಯನ್ನು ಯಾರು ಕದ್ದುಕೊಂಡು ಹೋದರು? ಅಥವಾ ಯಾವ ರಾಕ್ಷಸನು ತಿಂದುಹಾಕಿದನು.॥3॥

ಮೂಲಮ್ - 4

ವೃಕ್ಷೇಣಾವಾರ್ಯ ಯದಿ ಮಾಂ ಸೀತೇ ಹಸಿತುಮಿಚ್ಛಸಿ ।
ಅಲಂ ತೇ ಹಸಿತೇನಾದ್ಯ ಮಾಂ ಭಜಸ್ವ ಸುದುಃಖಿತಮ್ ॥

ಅನುವಾದ

(ಮತ್ತೆ ಅವನು ಸೀತೆಯನ್ನು ಸಂಬೋಧಿಸುತ್ತಾ) ಸೀತೇ! ನೀನು ಮರಗಳ ಮರೆಯಲ್ಲಿ ಅಡಗಿದ್ದು ನನ್ನೊಂದಿಗೆ ವಿನೋದ ಮಾಡುತ್ತಿದ್ದರೆ ಈ ಸಮಯ ಸರಿಯಲ್ಲ, ನಾನು ಬಹಳ ದುಃಖಿತನಾಗಿದ್ದನೆ. ನನ್ನ ಬಳಿಗೆ ಬಾ.॥4॥

ಮೂಲಮ್ - 5

ಯೈಃ ಪರಿಕ್ರೀಡಸೇ ಸೀತೇ ವಿಶ್ವಸ್ತೈರ್ಮೃಗಪೋತಕೈಃ ।
ಏತೇ ಹೀನಾಸ್ತ್ವಯಾ ಸೌಮ್ಯೇ ಧ್ಯಾಯಂತ್ಯಸ್ರಾವಿಲೇಕ್ಷಣಾಃ ॥

ಅನುವಾದ

ಸೌಮ್ಯಳಾದ ಸೀತೇ! ನೀನು ಅಪಾರ ವಿಶ್ವಾಸವನ್ನಿಟ್ಟಿದ್ದ ಈ ಜಿಂಕೆಮರಿಗಳೊಂದಿಗೆ ನೀನು ಆಟವಾಡುತ್ತಿದ್ದೆಯಲ್ಲ? ಅವು ಇಂದು ನೀನಿಲ್ಲದೆ ದುಃಖಿಯಾಗಿ ಕಣ್ಣೀರು ಸುರಿಸುತ್ತಾ ಚಿಂತಿತವಾಗಿವೆ.॥5॥

ಮೂಲಮ್ - 6½

ಸೀತಯಾ ರಹಿತೋಽಹಂ ವೈ ನ ಹಿ ಜೀವಾಮಿ ಲಕ್ಷ್ಮಣ ।
ವೃತಂ ಶೋಕೇನ ಮಹತಾ ಸೀತಾಹರಣಜೇನ ಮಾಮ್ ॥
ಪರಲೋಕೇ ಮಹಾರಾಜೋ ನೂನಂ ದ್ರಕ್ಷ್ಯತಿ ಮೇ ಪಿತಾ ।

ಅನುವಾದ

ಲಕ್ಷ್ಮಣ! ಸೀತೆಯಿಲ್ಲದೆ ನಾನು ಬದುಕಿರಲಾರೆ, ಸೀತಾಪಹಾರದ ಮಹಾಶೋಕವು ನನ್ನನ್ನು ಆವರಿಸಿಕೊಂಡಿದೆ. ನಿಶ್ಚಯವಾಗಿ ಈಗ ಪರಲೋಕದಲ್ಲಿ ಇರುವ ನನ್ನ ತಂದೆಯು ನನ್ನನ್ನು ನೋಡುವರು.॥6½॥

ಮೂಲಮ್ - 7½

ಕಥಂ ಪ್ರತಿಜ್ಞಾಂ ಸಂಶ್ರುತ್ಯ ಮಯಾ ತ್ವಮಭಿಯೋಜಿತಃ ॥
ಅಪೂರಯಿತ್ವಾ ತಂ ಕಾಲಂ ಮತ್ಸಕಾಶಮಿಹಾಗತಃ ।

ಅನುವಾದ

ಅವರು ನನ್ನನ್ನು ನಿಂದಿಸುತ್ತಾ ಹೇಳುವರು - ನಾನಾದರೋ ನಿನಗೆ ವನವಾಸಕ್ಕಾಗಿ ಆಜ್ಞಾಪಿಸಿದ್ದೆ. ನೀನೂ ಕೂಡ ಅಲ್ಲಿರಲು ಪ್ರತಿಜ್ಞೆಮಾಡಿದ್ದೆ. ಮತ್ತೆ ಅಷ್ಟು ಸಮಯ ಅಲ್ಲಿರದೆ ಪ್ರತಿಜ್ಞೆಯನ್ನು ಪೂರ್ಣಗೊಳಿಸದೆಯೇ ಇಲ್ಲಿಗೆ ಏಕೆ ಬಂದೆ.॥7½॥

ಮೂಲಮ್ - 8½

ಕಾಮವೃತ್ತಮನಾರ್ಯಂ ವಾ ಮೃಷಾವಾದಿನಮೇವ ಚ ॥
ಧಿಕ್ತ್ವಾಮಿತಿ ಪರೇ ಲೋಕೇ ವ್ಯಕ್ತಂ ವಕ್ಷ್ಯತಿ ಮೇ ಪಿತಾ ।

ಅನುವಾದ

ನಿನ್ನಂತಹ ಸ್ವೇಚ್ಛಾಚಾರೀ, ಅನಾರ್ಯ, ಮಿಥ್ಯಾವಾದಿಗೆ ಧಿಕ್ಕಾರವಿರಲಿ. ಹೀಗೆ ಪರಲೋಕದಲ್ಲಿ ತಂದೆಯವರು ನನ್ನನ್ನು ಖಂಡಿತವಾಗಿ ಕೇಳುವರು.॥8½॥

ಮೂಲಮ್ - 9

ವಿವಶಂ ಶೋಕಸಂತಪ್ತಂ ದೀನಂ ಭಗ್ನಮನೋರಥಮ್ ॥

ಮೂಲಮ್ - 10

ಮಾಮಿಹೋತ್ಸೃಜ್ಯ ಕರುಣಂ ಕೀರ್ತಿರ್ನರಮಿವಾನೃಜುಮ್ ।
ಕ್ವ ಗಚ್ಛಸಿ ವರಾರೋಹೇ ಮಾ ಮೋತ್ಸೃಜ ಸುಮಧ್ಯಮೇ ॥

ಅನುವಾದ

ವರಾರೋಹೆ! ಸೀತೇ! ನಾನು ವಿವಶ, ಶೋಕಸಂತಪ್ತ, ದೀನ, ಭಗ್ನಮನೋರಥನಾಗಿ ಕರುಣಾಜನಕ ಅವಸ್ಥೆಯಲ್ಲಿ ಬಿದ್ದಿರುವೆನು. ಕುಟಿಲ ಮನುಷ್ಯನನ್ನು ಕೀರ್ತಿಯು ತ್ಯಜಿಸುವಂತೆಯೇ ನೀನು ಇಲ್ಲಿ ನನ್ನನ್ನು ಬಿಟ್ಟು ಎಲ್ಲಿಗೆ ಹೊರಟು ಹೋಗಿರುವೆ? ನನ್ನನ್ನು ಬಿಟ್ಟು ಹೋಗಬೇಡ, ಬಿಟ್ಟು ಹೋಗಬೇಡ.॥9-10॥

ಮೂಲಮ್ - 11½

ತ್ವಯಾ ವಿರಹಿತಶ್ಚಾಹಂ ತ್ಯಕ್ಷ್ಯೇ ಜೀವಿತಮಾತ್ಮನಃ ।
ಇತೀವ ವಿಲಪನ್ರಾಮಃ ಸೀತಾದರ್ಶನಲಾಲಸಃ ॥
ನ ದದರ್ಶ ಸುದುಃಖಾರ್ತೋ ರಾಘವೋ ಜನಕಾತ್ಮಜಾಮ್ ।

ಅನುವಾದ

ನಿನ್ನ ವಿಯೋಗದಲ್ಲಿ ನಾನು ಪ್ರಾಣ ತ್ಯಾಗ ಮಾಡುವೆನು. ಹೀಗೆ ಅತ್ಯಂತ ದುಃಖಿತನಾಗಿ ವಿಲಾಪಿಸುತ್ತಿರುವ ರಘುಕುಲನಂದನ ಶ್ರೀರಾಮನು ಸೀತೆಯ ದರ್ಶನಕ್ಕಾಗಿ ಅತ್ಯಂತ ಉತ್ಕಂಠಿತನಾದವನು, ಆದರೂ ಅವನಿಗೆ ಜಾನಕಿಯು ಕಂಡುಬಂದಿಲ್ಲ.॥11½॥

ಮೂಲಮ್ - 12

ಅನಾಸಾದಯಮಾನಂ ತಂ ಸೀತಾಂ ಶೋಕಪರಾಯಣಮ್ ॥

ಮೂಲಮ್ - 13

ಪಂಕಮಾಸಾದ್ಯ ವಿಪುಲಂ ಸೀದಂತಮಿವ ಕುಂಜರಮ್ ।
ಲಕ್ಷ್ಮಣೋ ರಾಮಮತ್ಯರ್ಥಮುವಾಚ ಹಿತಕಾಮ್ಯಯಾ ॥

ಅನುವಾದ

ಭಾರೀ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಕಷ್ಟಪಡುತ್ತಿರುವ ಆನೆಯಂತೆ ಸೀತೆಯನ್ನು ಪಡೆಯದೆ ಅತ್ಯಂತ ಶೋಕದಲ್ಲಿ ಮುಳುಗಿದ ಶ್ರೀರಾಮನ ಹಿತದ ಕಾಮನೆಯಿಂದ ಲಕ್ಷ್ಮಣನು ಅವನಲ್ಲಿ ಹೀಗೆ ಹೇಳಿದನು.॥12-13॥

ಮೂಲಮ್ - 14

ಮಾ ವಿಷಾದಂ ಮಹಾಬುದ್ಧೇ ಕುರು ಯತ್ನಂ ಮಯಾ ಸಹ ।
ಇದಂ ಗಿರಿವರಂ ವೀರ ಬಹುಕಂದರಶೋಭಿತಮ್ ॥

ಮೂಲಮ್ - 15

ಪ್ರಿಯಕಾನನ ಸಂಚಾರಾ ವನೋನ್ಮತ್ತಾ ಚ ಮೈಥಿಲೀ ।
ಸಾ ವನಂ ವಾ ಪ್ರವಿಷ್ಟಾ ಸ್ಯಾನ್ನಲಿನೀಂ ವಾ ಸುಪುಷ್ಟಿತಾಮ್ ॥

ಮೂಲಮ್ - 16½

ಸರಿತಂ ವಾಪಿ ಸಂಪ್ರಾಪ್ತಾ ಮೀನವಂಜುಲಸೇವಿತಾಮ್ ।
ವಿತ್ರಾಸಯಿತುಕಾಮಾ ವಾ ಲೀನಾ ಸ್ಯಾತ್ಕಾನನೇ ಕ್ವಚಿತ್ ॥
ಜಿಜ್ಞಾಸಮಾನಾ ವೈದೇಹೀ ತ್ವಾಂ ಮಾಂ ಚ ಪುರುಷರ್ಷಭ ।

ಅನುವಾದ

ಮಹಾಬಾಹೋ! ನೀನು ವಿಷಾದಪಡಬೇಡ, ನನ್ನೊಂದಿಗೆ ಸೀತೆಯನ್ನು ಹುಡುಕಲು ಪ್ರಯತ್ನಿಸು. ವೀರವರನೇ! ಎದುರಿಗೆ ಅನೇಕ ಗುಹೆಗಳಿಂದ ಕೂಡಿದ ಎತ್ತರವಾದ ಪರ್ವತವು ಕಂಡು ಬರುತ್ತಿದೆಯಲ್ಲ, ಮಿಥಿಲೇಶಕುಮಾರಿಗೆ ವನದಲ್ಲಿ ತಿರುಗಾಡುವುದು ಪ್ರಿಯವಾಗಿತ್ತು. ಆದ್ದರಿಂದ ವನಕ್ಕೆ ಹೋಗಿರಬಹುದು, ಅಥವಾ ಸುಂದರ ಕಮಲಪುಷ್ಪಗಳಿಂದ ತುಂಬಿದ ಈ ಸರೋವರದ ಬಳಿಗೆ ಅಥವಾ ಬೆಟ್ಟಗಳಿಂದ ಸುಶೋಭಿತ ನದಿಯ ತೀರಕ್ಕೆ ಹೋಗಿರಬಹುದು. ಪುರುಷ ಪ್ರವರ! ನಮ್ಮನ್ನು ಹೆದರಿಸಲು ಅಥವಾ ನಾವಿಬ್ಬರು ಹೆದರುತ್ತೇವೊ ಇಲ್ಲವೋ ಎಂಬುದನ್ನು ನೋಡಲು ಕಾಡಿನಲ್ಲಿ ಎಲ್ಲಾದರೂ ಅಡಗಿರಬಹುದು.॥14-16½॥

ಮೂಲಮ್ - 17½

ತಸ್ಯಾ ಹ್ಯನ್ವೇಷಣೇ ಶ್ರೀಮನ್ ಕ್ಷಿಪ್ರಮೇವ ಯತಾವಹೇ ॥
ವನಂ ಸರ್ವಂ ವಿಚಿನುವೋ ಯತ್ರ ಸಾ ಜನಕಾತ್ಮಜಾ ।

ಅನುವಾದ

ಆದ್ದರಿಂದ ಶ್ರೀಮಾನ್ ರಾಮ! ವನದಲ್ಲಿ ಇಲ್ಲೇ ಎಲ್ಲಾದರೂ ಜಾನಕಿಯು ಇರುವ ಸಂಭವವಿದೆ. ಆ ಎಲ್ಲ ಸ್ಥಾನಗಳನ್ನು ನಾವಿಬ್ಬರೂ ಬೇಗನೇ ಆಕೆಯನ್ನು ಹುಡುಕಲು ಪ್ರಯತ್ನಿಸೋಣ.॥17½॥

ಮೂಲಮ್ - 18

ಮನ್ಯಸೇ ಯದಿ ಕಾಕುತ್ಸ್ಥ ಮಾ ಸ್ಮ ಶೋಕೇ ಮನಃ ಕೃಥಾಃ ॥

ಮೂಲಮ್ - 19

ಏವಮುಕ್ತಃ ಸೌಹಾರ್ದಾಲ್ಲಕ್ಷ್ಮಣೇನ ಸಮಾಹಿತಃ ।
ಸಹ ಸೌಮಿತ್ರಿಣಾ ರಾಮೋ ವಿಚೇತುಮುಪಚಕ್ರಮೇ ॥

ಅನುವಾದ

ರಘುನಂದನ! ನನ್ನ ಮಾತು ನಿನಗೆ ಸರಿಕಂಡರೆ ನೀನು ಶೋಕವನ್ನು ಬಿಡು. ಲಕ್ಷ್ಮಣನು ಈ ಪ್ರಕಾರ ಸೌಹಾರ್ದತೆಯಿಂದ ಸಮಜಾಯಿಸಿದಾಗ ಶ್ರೀರಾಮದಂದ್ರನು ಎಚ್ಚರಗೊಂಡು, ಅವನು ಸುಮಿತ್ರಾನಂದನನ ಜೊತೆಗೆ ಸೀತೆಯನ್ನು ಹುಡುಕಲು ಪ್ರಾರಂಭಿಸಿದನು.॥18-19॥

ಮೂಲಮ್ - 20

ತೌ ವನಾನಿ ಗಿರೀಂಶ್ಚೈವ ಸರಿತಶ್ಚ ಸರಾಂಸಿ ಚ ।
ನಿಖಿಲೇನ ವಿಚಿನ್ವಂತೌ ಸೀತಾಂ ದಶರಥಾತ್ಮಜೌ ॥

ಮೂಲಮ್ - 21

ತಸ್ಯ ಶೈಲಸ್ಯ ಸಾನೂನಿ ಶಿಲಾಶ್ಚ ಶಿಖರಾಣಿ ಚ ।
ನಿಖಿಲೇನ ವಿಚಿನ್ವಂತೌ ನೈವ ತಾಮಭಿಜಗ್ಮತುಃ ॥

ಅನುವಾದ

ದಶರಥನ ಆ ಪುತ್ರರಿಬ್ಬರೂ ಸೀತೆಯನ್ನು ಹುಡುಕುತ್ತಾ ವನಗಳಲ್ಲಿ, ಪರ್ವತಗಳಲ್ಲಿ, ನದಿಗಳಲ್ಲಿ, ಸರೋವರದ ತೀರಗಳಲ್ಲಿ ಸುತ್ತುತ್ತಾ ಪೂರ್ಣ ಪ್ರಯತ್ನದೊಂದಿಗೆ ಅರಸಿದರು. ಆ ಪರ್ವತ ಶಿಖರಗಳಲ್ಲಿ, ಬಂಡೆಗಳ ನಡುವೆ ಚೆನ್ನಾಗಿ ಹುಡುಕಿದರು. ಆದರೆ ಎಲ್ಲಿಯೂ ಆಕೆಯ ಸುಳಿವು ಸಿಗಲಿಲ್ಲ.॥20-21॥

ಮೂಲಮ್ - 22

ವಿಚಿತ್ಯ ಸರ್ವತಃ ಶೈಲಂ ರಾಮೋ ಲಕ್ಷ್ಮಣಮಬ್ರವೀತ್ ।
ನೇಹ ಪಶ್ಯಾಮಿ ಸೌಮಿತ್ರೇ ವೈದೇಹೀಂ ಪರ್ವತೇ ಶುಭಾಮ್ ॥

ಅನುವಾದ

ಪರ್ವತದ ಎಲ್ಲೆಡೆ ಹುಡುಕಿ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು - ಸೌಮಿತ್ರಿಯೇ! ಈ ಪರ್ವತದಲ್ಲಾದರೋ ನಾನು ಸುಂದರ ವೈದೇಹಿಯನ್ನು ನೋಡಿಲ್ಲ.॥22॥

ಮೂಲಮ್ - 23

ತತೋ ದುಃಖಾಭಿಸಂತಪ್ತೋ ಲಕ್ಷ್ಮಣೋ ವಾಕ್ಯಮಬ್ರವೀತ್ ।
ವಿಚರನ್ದಂಡಕಾರಣ್ಯಂ ಭ್ರಾತರಂ ದೀಪ್ತತೇಜಸಮ್ ॥

ಅನುವಾದ

ದುಃಖದಿಂದ ಸಂತಪ್ತನಾದ ಲಕ್ಷ್ಮಣನು ದಂಡಕಾರಣ್ಯದಲ್ಲಿ ಅಲೆಯುತ್ತಾ ಉದ್ದೀಪ್ತ ತೇಜಸ್ವೀ ತನ್ನಣ್ಣನಲ್ಲಿ ಹೀಗೆಂದನು .॥23॥

ಮೂಲಮ್ - 24

ಪ್ರಾಪ್ಸ್ಯಸೇ ತ್ವಂ ಮಹಾಪ್ರಾಜ್ಞ ಮೈಥಿಲೀಂ ಜನಕಾತ್ಮಜಾಮ್ ।
ಯಥಾ ವಿಷ್ಣುರ್ಮಹಾಬಾಹುರ್ಬಲಿಂ ಬದ್ಧ್ವಾ ಮಹೀಮಿಮಾಮ್ ॥

ಅನುವಾದ

ಮಹಾಮತೇ! ಮಹಾಬಾಹು ಭಗವಾನ್ ವಿಷ್ಣು ಬಲಿರಾಜನನ್ನು ಬಂಧಿಸಿ ಈ ಪೃಥಿವಿಯನ್ನು ಪಡೆದಂತೆಯೇ, ನೀವೂ ಕೂಡ ಮಿಥಿಲೇಶ ಕುಮಾರಿ ಜಾನಕಿಯನ್ನು ಪಡೆಯುವಿರಿ.॥24॥

ಮೂಲಮ್ - 25

ಏವಮುಕ್ತಸ್ತು ಸೌಹಾರ್ದಾಲಕ್ಷ್ಮಣೇನ ಸ ರಾಘವಃ ।
ಉವಾಚ ದೀನಯಾ ವಾಚಾ ದುಃಖಾಭಿಹತಚೇತನಃ ॥

ಅನುವಾದ

ವೀರ ಲಕ್ಷ್ಮಣನು ಹೀಗೆ ಹೇಳಿದಾಗ ದುಃಖದಿಂದ ವ್ಯಾಕುಲಚಿತ್ತನಾದ ಶ್ರೀರಾಮನು ದೀನವಾಣಿಯಿಂದ ಇಂತೆಂದನು.॥25॥

ಮೂಲಮ್ - 26

ವನಂ ಸುವಿಚಿತಂ ಸರ್ವಂ ಪದ್ಮಿನ್ಯಃ ಫುಲ್ಲಪಂಕಜಾಃ ।
ಗಿರಿಶ್ಚಾಯಂ ಮಹಾಪ್ರಾಜ್ಞ ಬಹುಕಂದರನಿರ್ಝರಃ ।
ನಹಿ ಪಶ್ಯಾಮಿ ವೈದೇಹೀಂ ಪ್ರಾಣೇಭ್ಯೋಽಪಿ ಗರೀಯಸೀಮ್ ॥

ಅನುವಾದ

ಮಹಾಪ್ರಾಜ್ಞ ಲಕ್ಷ್ಮಣ! ನಾನು ಇಡೀ ವನವನ್ನು ಹುಡುಕಿದೆ. ಅರಳಿದ ಕಮಲಗಳಿಂದ ತುಂಬಿದ ಸರೋವರಗಳನ್ನು ನೋಡಿ ಬಿಟ್ಟೆ. ಅನೇಕ ಗುಹೆಗಳಿಂದ, ಜಲಪಾತಗಳಿಂದ ಸುಶೋಭಿತ ಈ ಪರ್ವತವನ್ನೂ ಪೂರಾ ಹುಡುಕಿಬಿಟ್ಟೆ ಆದರೆ ನನಗೆ ನನ್ನ ಪ್ರಾಣಕ್ಕಿಂತಲೂ ಪ್ರಿಯಳಾದ ವೈದೇಹಿಯು ಎಲ್ಲಿಯೂ ಕಂಡುಬಂದಿಲ್ಲ.॥26॥

ಮೂಲಮ್ - 27

ಏವಂ ಸ ವಿಲಪನ್ ರಾಮಃ ಸೀತಾಹರಣಕರ್ಶಿತಃ ।
ದೀನಃ ಶೋಕಸಮಾವಿಷ್ಟೋ ಮುಹೂರ್ತಂ ವಿಹ್ವಲೋಽಭವತ್ ॥

ಅನುವಾದ

ಈ ಪ್ರಕಾರ ಸೀತಾಪಹರಣದ ಕಷ್ಟದಿಂದ ಪೀಡಿತನಾಗಿ, ವಿಲಾಪಿಸುತ್ತಿರುವ ಶ್ರೀರಾಮಚಂದ್ರನು ದೀನ ಮತ್ತು ಶೋಕಮಗ್ನನಾಗಿ ಎರಡುಗಳಿಗೆ ಅತ್ಯಂತ ದುಃಖಿತನಾಗಿದ್ದನು.॥27॥

ಮೂಲಮ್ - 28

ಸ ವಿಹ್ವಲಿತಸರ್ವಾಂಗೋ ಗತಬುದ್ಧಿರ್ವಿಚೇತನಃ ।
ವಿಷಸಾದಾತುರೋ ದೀನೋ ನಿಃಶ್ವಸ್ಯಾಶೀತಮಾಯತಮ್ ॥

ಅನುವಾದ

ಅವನ ಶರೀರವೆಲ್ಲ ಶಿಥಿಲವಾಯಿತು, ಬುದ್ಧಿಯು ಕೆಲಸ ಮಾಡದಾಯಿತು, ಚೈತನ್ಯ ಉಡುಗಿದಂತಾಯಿತು, ಅವನು ಬಿಗಿಯುಸಿರು ಬಿಡುತ್ತಾ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ವಿಷಾದದಲ್ಲಿ ಮುಳುಗಿದನು.॥28॥

ಮೂಲಮ್ - 29

ಬಹುಶಃ ಸ ತು ನೀಃಶ್ವಸ್ಯ ರಾಮೋ ರಾಜೀವಲೋಚನಃ ।
ಹಾ ಪ್ರಿಯೇತಿ ವಿಚುಕ್ರೋಶ ಬಹುಶೋ ಭಾಷ್ಪಗದ್ಗದಃ ॥

ಅನುವಾದ

ಪದೇ-ಪದೇ ನಿಟ್ಟುಸಿರು ಬಿಡುತ್ತಾ ಕಮಲನಯನ ಶ್ರೀರಾಮನು ಕಂಬನಿ ತುಂಬಿ ಗದ್ಗದ ವಾಣಿಯಿಂದ ಹಾ ಪ್ರಿಯೇ! ಎಂದು ಹೇಳುತ್ತಾ ಬಹಳವಾಗಿ ಅಳತೊಡಗಿದನು.॥29॥

ಮೂಲಮ್ - 30

ತಂ ಸಾಂತ್ವಯಾಮಾಸ ತತೋ ಲಕ್ಷ್ಮಣಃ ಪ್ರಿಯಬಾಂಧವಮ್ ।
ಬಹುಪ್ರಕಾರಂ ಶೋಕಾರ್ತಃ ಪ್ರಶ್ರಿತಃ ಪ್ರಶ್ರಿತಾಂಜಲಿಃ ॥

ಅನುವಾದ

ಆಗ ಶೋಕವಿಹ್ವಲನಾದ ಲಕ್ಷ್ಮಣನು ವಿನೀತಭಾವದಿಂದ ಕೈ ಮುಗಿದುಕೊಂಡು ತನ್ನ ಪ್ರೀತಿಯ ಅಣ್ಣನಿಗೆ ಅನೇಕ ವಿಧದಿಂದ ಸಾಂತ್ವನ ನೀಡಿದನು.॥30॥

ಮೂಲಮ್ - 31

ಅನಾದೃತ್ಯ ತು ತದ್ವಾಕ್ಯಂ ಲಕ್ಷ್ಮಣೋಷ್ಠಪುಟಚ್ಯುತಮ್ ।
ಅಪಶ್ಯಂಸ್ತಾಂ ಪ್ರಿಯಾಂ ಸೀತಾಂ ಪ್ರಾಕ್ರೋಶತ್ ಸ ಪುನಃ ಪುನಃ ॥

ಅನುವಾದ

ಲಕ್ಷ್ಮಣನು ಆಡಿದ ಮಾತನ್ನು ಆದರಿಸದೆ ಶ್ರೀರಾಮಚಂದ್ರನು ತನ್ನ ಪ್ರಿಯ ಪತ್ನೀ ಸೀತೆಯನ್ನು ನೋಡದಿದ್ದರಿಂದ ಆಕೆಯನ್ನು ಪದೇ-ಪದೇ ಕರೆಯತೊಡಗಿದನು.॥31॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯ ಕಾಂಡದಲ್ಲಿ ಅರವತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥61॥