०६० राम-लक्ष्मणयोः पर्णशाला-आगमनम्

वाचनम्
ಭಾಗಸೂಚನಾ

ಶ್ರೀರಾಮನ ವಿಲಾಪ, ಸೀತೆಯ ವಿಷಯವಾಗಿ ಮರ-ಗಿಡ-ಬಳ್ಳಿ-ಪಶುಗಳನ್ನು ಪ್ರಶ್ನಿಸುತ್ತಾ, ಎಲ್ಲೆಡೆಗಳಲ್ಲೂ ಹುಡುಕಿದುದು

ಮೂಲಮ್ - 1

ಭೃಶಮಾವ್ರಜಮಾನಸ್ಯ ತಸ್ಯಾಧೋ ವಾಮಲೋಚನಮ್ ।
ಪ್ರಾಸ್ಫುರಚ್ಚಾಸ್ಖಲದ್ರಾಮೋ ವೇಪಥುಶ್ಚಾಸ್ಯಜಾಯತೇ ।

ಅನುವಾದ

ಆಶ್ರಮದ ಕಡೆಗೆ ಬರುವಾಗ ಶ್ರೀರಾಮನ ಎಡಕಣ್ಣಿನ ಕೆಳರೆಪ್ಪೆ ಜೋರಾಗಿ ಅದುರತೊಡಗಿತು. ಶ್ರೀರಾಮನು ನಡೆಯುತ್ತಾ ಎಡವಿದನು ಹಾಗೂ ಅವನ ಶರೀರದಲ್ಲಿ ನಡುಕ ಉಂಟಾಯಿತು.॥1॥

ಮೂಲಮ್ - 2

ಉಪಾಲಕ್ಷ್ಯ ನಿಮಿತ್ತಾನಿ ಸೋಽಶುಭಾನಿ ಮುಹುರ್ಮುಹುಃ ।
ಅಪಿ ಕ್ಷೇಮಂ ತು ಸೀತಾಯಾ ಇತಿ ವೈ ವ್ಯಾಜಹಾರ ಹ ॥

ಅನುವಾದ

ಪದೇ-ಪದೇ ಈ ಅಪಶಕುನಗಳನ್ನು ನೋಡಿ ಅವನು ಹೇಳತೊಡಗಿದನು. ಏನು ಸೀತೆ ಕ್ಷೇಮದಿಂದ ಇರುವಳಲ್ಲ.॥2॥

ಮೂಲಮ್ - 3

ತ್ವರಮಾಣೋ ಜಗಾಮಾಥ ಸೀತಾದರ್ಶನಲಾಲಸಃ ।
ಶೂನ್ಯಮಾವಸಥಂ ದೃಷ್ಟ್ವಾ ಬಭೂವೋದ್ವಿಗ್ನಮಾನಸಃ ॥

ಅನುವಾದ

ಸೀತೆಯನ್ನು ನೋಡಲು ಉತ್ಕಂಠಿತನಾಗಿ ಅವನು ಲಗುಬಗೆಯಿಂದ ಆಶ್ರಮದೊಳಗೆ ಹೋದನು. ಅಲ್ಲಿ ಪರ್ಣಶಾಲೆಯು ಬರಿದಾಗಿರುವುದನ್ನು ನೋಡಿ ಅವನ ಮನಸ್ಸು ಅತ್ಯಂತ ಉದ್ವಿಗ್ನವಾಯಿತು.॥3॥

ಮೂಲಮ್ - 4

ಉದ್ಭ್ರಮನ್ನಿವ ವೇಗೇನ ವಿಕ್ಷಿಪನ್ರಘುನಂದನಃ ।
ತತ್ರ ತತ್ರೋಟಜಸ್ಥಾನಮಭಿವೀಕ್ಷ್ಯ ಸಮಂತತಃ ॥

ಮೂಲಮ್ - 5

ದದರ್ಶ ಪರ್ಣಶಾಲಾಂ ಚ ಸೀತಯಾ ರಹಿತಾಂ ತದಾ ।
ಶ್ರಿಯಾ ವಿರಹಿತಾಂ ಧ್ವಸ್ತಾಂ ಹೇಮಂತೇ ಪದ್ಮಿನೀಮಿವ ॥

ಅನುವಾದ

ರಘುನಂದನನು ವೇಗವಾಗಿ ಅತ್ತಿತ್ತ ಓಡಾಡಿದನು. ಅಲ್ಲಿದ್ದ ಪರ್ಣಶಾಲೆಗಳನ್ನು ಸುತ್ತಲೂ ಹುಡುಕಿದನು, ಆದರೆ ಆಗ ಸೀತೆಯು ಕಂಡುಬರಲಿಲ್ಲ. ಹೇಮಂತ ಋತುವಿನಲ್ಲಿ ಹಿಮದಿಂದ ಕಮಲಗಳು ಧ್ವಸ್ಥವಾಗಿ ಅಂದಗೆಟ್ಟಂತೆ ಪ್ರತಿಯೊಂದು ಪರ್ಣಶಾಲೆಯೂ ಶೋಭಾಶೂನ್ಯವಾಗಿತ್ತು.॥4-5॥

ಮೂಲಮ್ - 6

ರುದಂತಮಿವ ವೃಕ್ಷೈಶ್ಚ ಮ್ಲಾನಪುಷ್ಪಮೃಗದ್ವಿಜಮ್ ।
ಶ್ರಿಯಾ ವಿಹೀನಂ ವಿಧ್ವಸ್ತಂ ಸಂತ್ಯಕ್ತಂ ವನದೈವತೈಃ ॥

ಅನುವಾದ

ಆ ಸ್ಥಾನವು ವೃಕ್ಷಗಳ ಮೂಲಕ ಅಳುತ್ತಿರುವಂತೆ ಅನಿಸುತ್ತಿತ್ತು. ಹೂವುಗಳು ಬಾಡಿಹೋಗಿದ್ದವು. ಮೃಗ-ಪಕ್ಷಿಗಳು ಗ್ಲಾನಿಗೊಂಡು ಸುಮ್ಮನೆ ಕುಳಿತಿದ್ದವು. ಅಲ್ಲಿಯ ಎಲ್ಲ ಶೋಭೆಯೂ ನಾಶವಾಗಿ ಹೋಗಿತ್ತು. ಆಶ್ರಮವು ಪಾಳುಬಿದ್ದಂತೆ ಕಾಣುತ್ತಿತ್ತು. ವನದೇವತೆಗಳೂ ಆ ಸ್ಥಳವನ್ನು ಬಿಟ್ಟುಹೋಗಿದ್ದರು.॥6॥

ಮೂಲಮ್ - 7

ವಿಪ್ರಕೀರ್ಣಾಜಿನಕುಶಂ ವಿಪ್ರವಿದ್ಧಬೃಸೀಕಟಮ್ ।
ದೃಷ್ಟ್ವಾ ಶೂನ್ಯೋಟಜಸ್ಥಾನಂವಿಲಲಾಪ ಪುನಃ ಪುನಃ ॥

ಅನುವಾದ

ಎಲ್ಲೆಡೆ ಮೃಗಚರ್ಮ, ದರ್ಭೆಗಳು ಚೆಲ್ಲಿಹೋಗಿದ್ದವು. ಚಾಪೆಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು. ಬರಿದಾದ ಪರ್ಣಶಾಲೆಯನ್ನು ನೋಡಿ ಭಗವಾನ್ ಶ್ರೀರಾಮನು ಪದೇ-ಪದೇ ವಿಲಾಪಿಸತೊಡಗಿದನು.॥7॥

ಮೂಲಮ್ - 8

ಹೃತಾ ಮೃತಾ ವಾ ನಷ್ಟಾ ವಾ ಭಕ್ಷಿತಾ ವಾ ಭವಿಷ್ಯತಿ ।
ನಿಲೀನಾಪ್ಯಥವಾ ಭೀರುರಥವಾ ವನಮಾಶ್ರಿತಾ ॥

ಅನುವಾದ

ಅಯ್ಯೋ! ಸೀತೆಯನ್ನು ಯಾರಾದರೂ ಕದ್ದುಕೊಂಡು ಹೋಗಿಲ್ಲವಲ್ಲ? ಆಕೆಯ ಮೃತ್ಯುವಾಗಲಿಲ್ಲವಲ್ಲ? ಅವಳು ಎಲ್ಲಿ ಕಳೆದುಹೋದಳು ಅಥವಾ ಯಾವನಾದರೂ ರಾಕ್ಷಸನು ತಿಂದು ಹಾಕಿರಲಿಕ್ಕಿಲ್ಲವಲ್ಲ! ಆ ಭೀರು ಎಲ್ಲಾದರೂ ಅಡಗಿ ಕೊಂಡಿಲ್ಲವಲ್ಲ! ಹೂವು-ಹಣ್ಣು ತರಲು ಕಾಡೊಳಗೆ ಹೋಗಿಲ್ಲವಲ್ಲ.॥8॥

ಮೂಲಮ್ - 9

ಗತಾ ವಿಚೇತುಂ ಪುಷ್ಪಾಣಿ ಫಲಾನ್ಯಪಿ ಚ ವಾ ಪುನಃ ।
ಅಥವಾ ಪದ್ಮಿನೀಂ ಯಾತಾ ಜಲಾರ್ಥಂ ವಾ ನದೀಂ ಗತಾ ॥

ಅನುವಾದ

ಫಲ-ಮೂಲ ತರಲೆಂದೇ ಹೋಗಿರಬಹುದು ಅಥವಾ ನೀರು ತರಲು ಯಾವುದಾದರೂ ಪುಷ್ಕರಿಣಿಗೆ ಅಥವಾ ನದಿಗೆ ಹೋಗಿರುವಳೋ.॥9॥

ಮೂಲಮ್ - 10

ಯತ್ನಾನ್ಮೃಗಯಮಾಣಸ್ತು ನಾಸಸಾದ ವನೇ ಪ್ರಿಯಾಮ್ ।
ಶೋಕರಕ್ತೇಕ್ಷಣಃ ಶ್ರೀಮಾನುನ್ಮತ್ತ ಇವ ಲಕ್ಷ್ಯತೇ ॥

ಅನುವಾದ

ಶ್ರೀರಾಮಚಂದ್ರನು ಪ್ರಯತ್ನಪೂರ್ವಕ ತನ್ನ ಪ್ರಿಯಪತ್ನಿ ಸೀತೆಯನ್ನು ಕಾಡಿನಲ್ಲಿ ಎಲ್ಲೆಡೆ ಹುಡುಕಿದನು. ಆದರೆ ಎಲ್ಲಿಯೂ ಸಿಗಲಿಲ್ಲ. ಶೋಕದಿಂದಾಗಿ ಶ್ರೀರಾಮನ ಕಣ್ಣುಗಳು ಕೆಂಪಾದವು. ಅವನು ಉನ್ಮತ್ತನಂತೆ ಕಾಣುತ್ತಿದ್ದನು.॥10॥

ಮೂಲಮ್ - 11

ವೃಕ್ಷಾದ್ವೃಕ್ಷಂ ಪ್ರಧಾವನ್ಸ ಗಿರೀಂಶ್ಚಾಪಿ ನದೀನದಮ್ ।
ಬಭ್ರಾಮ ವಿಲಪನ್ರಾಮಃ ಶೋಕಪಂಕಾರ್ಣವಾಪ್ಲುತಃ ॥

ಅನುವಾದ

ಒಂದು ಮರದಿಂದ ಮತ್ತೊಂದು ಮರದ ಬಳಿ ಓಡುತ್ತಾ ಅವನು ಪರ್ವತ, ನದಿಗಳ ತೀರದಲ್ಲಿ ಅಲೆಯತೊಡಗಿದನು. ಶೋಕಸಮುದ್ರದಲ್ಲಿ ಮುಳುಗಿದ ಶ್ರೀರಾಮನು ವಿಲಪಿಸುತ್ತಾ ವೃಕ್ಷಗಳ ಬಳಿ ಕೇಳತೊಡಗಿದನು.॥11॥

ಮೂಲಮ್ - 12

ಅಸ್ತಿ ಕಚ್ಚಿತ್ತ್ವಯಾ ದೃಷ್ಟಾ ಸಾ ಕದಂಬಪ್ರಿಯಾ ಪ್ರಿಯಾ ।
ಕದಂಬ ಯದಿ ಜಾನೀಷೇ ಶಂಸ ಸೀತಾಂ ಶುಭಾನನಾಮ್ ॥

ಮೂಲಮ್ - 13

ಸ್ನಿಗ್ಧಪಲ್ಲವಸಂಕಾಶಾಂ ಪೀತಕೌಶೇಯವಾಸಿನೀಮ್ ।
ಶಂಸಸ್ವ ಯದಿ ವಾ ದೃಷ್ಟಾ ಬಿಲ್ವ ಬಿಲ್ವೋಪಮಸ್ತನೀ ॥

ಅನುವಾದ

ಕದಂಬವೇ! ನನ್ನ ಪ್ರಿಯೆ ಸೀತೆಯು ನಿನ್ನ ಪುಷ್ಪಗಳನ್ನು ಬಹಳ ಪ್ರೇಮಿಸುತ್ತಿದ್ದಳು, ಅವಳು ಇಲ್ಲಿರುವಳೇ? ನೀನು ಆಕೆಯನ್ನು ನೋಡಿರುವೆಯಾ? ತಿಳಿದಿದ್ದರೆ ಆ ಶುಭಾನನೆ ಸೀತೆಯ ಸುಳಿವನ್ನು ಹೇಳು. ಆಕೆಯ ಶರೀರವು ಸ್ನಿಗ್ಧ ಪಲ್ಲವಗಳಂತೆ ಕೋಮಲವಾಗಿದೆ. ಶರೀರದ ಮೇಲೆ ರೇಶ್ಮೆ ಪೀತಾಂಬರ ಶೋಭಿಸುತ್ತಿದೆ. ಬಿಲ್ವವೇ! ನನ್ನ ಪ್ರಿಯೆಯ ಸ್ತನಗಳು ನಿನ್ನ ಹಣ್ಣಿನಂತೆ ಇವೆ. ನೀನು ಆಕೆಯನ್ನು ನೋಡಿದ್ದರೆ ತಿಳಿಸು ಎಲ್ಲಿದ್ದಾಳೆ.॥12-13॥

ಮೂಲಮ್ - 14

ಅಥವಾರ್ಜುನ ಶಂಸ ತ್ವಂ ಪ್ರಿಯಾಂ ತಾಮರ್ಜುನಪ್ರಿಯಾಮ್ ।
ಜನಕಸ್ಯ ಸುತಾ ತನ್ವೀ ಯದಿ ಜೀವತಿ ವಾ ನ ವಾ ॥

ಅನುವಾದ

ಅರ್ಜುನ ವೃಕ್ಷವೇ! ನಿನ್ನ ಹೂವುಗಳಲ್ಲಿ ನನ್ನ ಪ್ರಿಯೆಗೆ ವಿಶೇಷ ಅನುರಾಗವಿತ್ತು. ಆದ್ದರಿಂದ ನೀನೇ ಆಕೆಯ ಏನಾದರೂ ಸವಾಚಾರ ತಿಳಿಸು. ಕೃಶಾಂಗಿಯಾದ ಜಾನಕಿ ಬದುಕಿರುವಳಲ್ಲ.॥14॥

ಮೂಲಮ್ - 15

ಕಕುಭಃ ಕಕುಭೋರುಂ ತಾಂ ವ್ಯಕ್ತಂ ಜಾನಾತಿ ಮೈಥಿಲೀಮ್ ।
ಲತಾ ಪಲ್ಲವಪುಷ್ಪಾಢ್ಯೋ ಭಾತಿ ಹ್ಯೇಷ ವನಸ್ಪತಿಃ ॥

ಮೂಲಮ್ - 16

ಭ್ರಮರೈರುಪಗೀತಶ್ಚ ಯಥಾ ದ್ರುಮವರೋ ಹ್ಯಸಿ ।
ಏಷ ವ್ಯಕ್ತಂ ವಿಜಾನಾತಿ ತಿಲಕಸ್ತಿಲಕಪ್ರಿಯಾಮ್ ॥

ಅನುವಾದ

ಈ ಕಕುಭಕುಟಜ ವೃಕ್ಷವೇ! ನಿನ್ನಂತೆ ಊರುಗಳಿರುವ ಮೈಥಿಲಿಯನ್ನು ನೀನು ಅವಶ್ಯವಾಗಿ ತಿಳಿದಿರಬಹುದು. ಏಕೆಂದರೆ ಇದು ವನಸ್ಪತಿ, ಲತೆ, ಚಿಗುರು ಹೂವುಗಳಿಂದ ಸಂಪನ್ನವಾಗಿ ಬಹಳ ಶೋಭಿಸುತ್ತಿದೆ. ಕಕುಭವೇ! ನೀನು ಎಲ್ಲ ವೃಕ್ಷಗಳಲ್ಲಿ ಶ್ರೇಷ್ಠನಾಗಿರುವೆ. ಏಕೆಂದರೆ ಈ ಭ್ರಮರಗಳು ನಿನ್ನ ಹತ್ತಿರ ಬಂದು ಗುಂಜಾರವ ಮಾಡುತ್ತಾ ನಿನ್ನ ಯಶೋಗಾನ ಮಾಡುತ್ತಿವೆ. (ನೀನಾದರೂ ಸೀತೆಯು ಎಲ್ಲಿರುವಳೆಂದು ಹೇಳು. ಅಯ್ಯೋ! ಇದೂ ಕೂಡ ಉತ್ತರಿಸುವುದಿಲ್ಲವಲ್ಲ?) ಈ ತಿಲಕವೃಕ್ಷವು ಸೀತೆಯ ಕುರಿತು ಅವಶ್ಯವಾಗಿ ತಿಳಿದಿರಬಹುದು. ಏಕೆಂದರೆ ನನ್ನ ಪ್ರಿಯೆ ಸೀತೆಗೆ ತಿಲಕದಲ್ಲಿ ಪ್ರೇಮವಿತ್ತು.॥15-16॥

ಮೂಲಮ್ - 17

ಅಶೋಕ ಶೋಕಾಪನುದ ಶೋಕೋಪಹತಚೇತನಮ್ ।
ತ್ವನ್ನಾಮಾನಂ ಕುರು ಕ್ಷಿಪ್ರಂ ಪ್ರಿಯಾಸಂದರ್ಶನೇನ ಮಾಮ್ ॥

ಅನುವಾದ

ಅಶೋಕವೇ! ನೀನು ಶೋಕವನ್ನು ದೂರಗೊಳಿಸುವಂತಹವನು, ನಾನು ಶೋಕದಿಂದ ಚೈತನ್ಯಶೂನ್ಯವಾಗುತ್ತಿದ್ದೇನೆ. ನನಗೆ ನನ್ನ ಪ್ರಿಯೆಯ ದರ್ಶನ ಮಾಡಿಸಿ ಶೀಘ್ರವಾಗಿ ನಿನ್ನ ಹೆಸರಿನಂತೆ ಮಾಡು - ನನ್ನನ್ನು ಅಶೋಕ (ಶೋಕ ರಹಿತ) ನನ್ನಾಗಿಸು.॥17॥

ಮೂಲಮ್ - 18

ಯದಿ ತಾಲತ್ವಯಾ ದೃಷ್ಟಾ ಪಕ್ವತಾಲೋಪಮಸ್ತನೀ ।
ಕಥಯಸ್ವ ವರಾರೋಹಾಂ ಕಾರುಣ್ಯಂ ಯದಿ ತೇ ಮಯಿ ॥

ಅನುವಾದ

ತಾಲ ವೃಕ್ಷವೇ! ನಿನ್ನ ಪಕ್ವ ಫಲಗಳಂತೆ ಸ್ತನವುಳ್ಳ ಸೀತೆಯನ್ನು ನೀನು ನೋಡಿರುವೆಯಾದರೆ ತಿಳಿಸು. ನನ್ನ ಮೇಲೆ ದಯೆ ಇದ್ದರೆ ಆ ಸುಂದರಿಯ ವಿಷಯದಲ್ಲಿ ಅವಶ್ಯವಾಗಿ ಏನಾದರೂ ಹೇಳು.॥18॥

ಮೂಲಮ್ - 19

ಯದಿ ದೃಷ್ಟಾ ತ್ವಯಾ ಜಂಬೋ ಜಾಂಬೂನದಸಮಪ್ರಭಾ ।
ಪ್ರಿಯಾಂ ಯದಿ ವಿಜಾನಾಸಿ ನಃಶಂಕಂ ಕಥಯಸ್ಯ ಮೇ ॥

ಅನುವಾದ

ಜಂಬೂವೃಕ್ಷವೇ! ಜಾಂಬೂನದ (ಚಿನ್ನ)ದಂತೆ ಕಾಂತಿಯುಳ್ಳ ನನ್ನ ಪ್ರಿಯೆ ನಿನ್ನ ಕಣ್ಣಿಗೆ ಬಿದ್ದಿದ್ದರೆ, ನೀನು ಆಕೆಯ ವಿಷಯದಲ್ಲಿ ಏನಾದರೂ ತಿಳಿದಿದ್ದರೆ ನಿಶ್ಶಂಕನಾಗಿ ನನಗೆ ತಿಳಿಸು.॥19॥

ಮೂಲಮ್ - 20

ಅಹೋ ತ್ವಂ ಕರ್ಣಿಕಾರಾದ್ಯ ಸುಷ್ಟಿತಃ ಶೋಭಸೇ ಭೃಶಮ್ ।
ಕರ್ಣಿಕಾರಪ್ರಿಯಾಂ ಸಾಧ್ವೀ ಶಂಸ ದೃಷ್ಟಾ ಯದಿ ಪ್ರಿಯಾ ॥

ಅನುವಾದ

ಕಣಗಿಲೆಯೇ! ಇಂದಾದರೋ ನಿನ್ನ ಹೂವುಗಳು ಅರಳಿ ನೀನು ತುಂಬಾ ಶೋಭಿಸುತ್ತಿರುವೆ. ಅಯ್ಯಾ! ನನ್ನ ಪ್ರಿಯೆ ಸಾಧ್ವೀ ಸೀತೆಗೆ ನಿನ್ನ ಈ ಹೂವು ಬಹಳ ಪ್ರಿಯವಾಗಿವೆ. ನೀನು ಆಕೆಯನ್ನು ನೋಡಿದ್ದರೆ ನನಗೆ ಹೇಳು.॥20॥

ಮೂಲಮ್ - 21

ಚೂತನೀಪಮಹಾಸಾಲಾನ್ ಪನಸಾನ್ಕುರವಾನ್ ಧವಾನ್ ।
ದಾಡಿಮಾನಪಿತಾನ್ ಗತ್ವಾ ದೃಷ್ಟ್ವಾರಾಮೋ ಮಹಾಯಶಾಃ ॥

ಮೂಲಮ್ - 22

ವಕುಲಾನಥ ಪುನ್ನಾಗಾಂಶ್ಚಂದನಾತ್ ಕೇತಕಾಂಸ್ತಥಾ ।
ಪೃಚ್ಛನ್ರಾಮೋ ವನೇ ಭ್ರಾಂತ ಉನ್ಮತ್ತ ಇವ ಲಕ್ಷ್ಯತೇ ॥

ಅನುವಾದ

ಹೀಗೆಯೇ ಮಾವು, ಕದಂಬ, ವಿಶಾಲ ಸಾಲ, ಹಲಸು, ಕುರವ, ಧವ ಮತ್ತು ದಾಳಿಂಬೆ ಮೊದಲಾದ ವೃಕ್ಷಗಳನ್ನು ನೋಡಿ ಮಹಾ ಯಶಸ್ವೀ ಶ್ರೀರಾಮಚಂದ್ರನು ಅವುಗಳ ಬಳಿಗೆ ಹೋಗಿ, ಬಕುಳ, ಪುನ್ನಾಗ, ಚಂದನ ಕೇದಗೆ ಆದಿ ವೃಕ್ಷಗಳನ್ನು ಕೇಳುತ್ತಾ ತಿರುಗಾಡುತ್ತಿದ್ದನು. ಆಗ ಅವನು ವನದಲ್ಲಿ ಉನ್ಮತ್ತನಂತೆ ಅತ್ತ-ಇತ್ತ ಅಲೆಯುತ್ತಿದ್ದನು.॥21-22॥

ಮೂಲಮ್ - 23

ಅಥವಾ ಮೃಗಶಾಬಾಕ್ಷೀಂ ಮೃಗ ಜಾನಾಸಿ ಮೈಥಿಲೀಮ್ ।
ಮೃಗವಿಪ್ರೇಕ್ಷಣೀ ಕಾಂತಾ ಮೃಗೀಭಿಃಸಹಿತಾ ಭವೇತ್ ॥

ಅನುವಾದ

ಎದುರಿಗೆ ಕಂಡುಬಂದ ಜಿಂಕೆಯನ್ನು ನೋಡಿ - ಎಲೈ ಜಿಂಕೆಯೇ! ನೀನಾದರೂ ಹೇಳು ಮೃಗನಯನೀ ಮೈಥಿಲಿಯನ್ನು ನೋಡಿರುವೆಯಾ? ನನ್ನ ಪ್ರಿಯೆಯ ದೃಷ್ಟಿಯೂ ಜಿಂಕೆಗಳಾದ ನಿಮ್ಮಂತೆಯೇ ಇದೆ. ಆದ್ದರಿಂದ ಅವಳು ಜಿಂಕೆಗಳೊಡನೆ ಇರುವ ಸಂಭವವಿದೆ.॥23॥

ಮೂಲಮ್ - 24

ಗಜ ಸಾ ಗಜನಾಸೋರುರ್ಯದಿ ದೃಷ್ಟಾ ತ್ವಯಾ ಭವೇತ್ ।
ತಾಂ ಮನ್ಯೇ ವಿದಿತಾಂ ತುಭ್ಯಮಾಖ್ಯಾಹಿ ವರವಾರಣ ॥

ಅನುವಾದ

ಗಜರಾಜ ಶ್ರೇಷ್ಠನೆ! ನಿನ್ನ ಸೊಂಡಿಲಿನಂತೆ ಸೀತೆಯ ತೊಡೆಗಳಿವೆ, ಆದ್ದರಿಂದ ನೀವು ಆಕೆಯನ್ನು ನೋಡಿರಬಹುದು ಅವಳೆಲ್ಲಿ ಇರುವಳೆಂದು ನಿಮಗೆ ತಿಳಿದಿದೆ, ಆದ್ದರಿಂದ ಅವಳೆಲ್ಲಿ ಇರುವಳು.॥24॥

ಮೂಲಮ್ - 25

ಶಾರ್ದೂಲ ಯದಿ ಸಾ ದೃಷ್ಟಾ ಪ್ರಿಯಾ ಚಂದ್ರನಿಭಾನನಾ ।
ಮೈಥಿಲೀ ಮಮ ವಿಸ್ರಬ್ಧಃ ಕಥಯಸ್ವ ನ ತೇ ಭಯಮ್ ॥

ಅನುವಾದ

ಹುಲಿಯೇ! ನೀನು ನನ್ನ ಪ್ರಿಯೆ ಚಂದ್ರಮುಖಿ ಮೈಥಿಲಿಯನ್ನು ನೋಡಿದ್ದರೆ ಹೆದರದೆ ತಿಳಿಸಿರಿ. ನಿಮಗೆ ನನ್ನಿಂದ ಯಾವ ಭಯವೂ ಇರಲಾರದ.॥25॥

ಮೂಲಮ್ - 26

ಕಿಂ ಧಾವಸಿ ಪ್ರಿಯೇ ನೂನಂ ದೃಷ್ಟಾಸಿ ಕಮಲೇಕ್ಷಣೇ ।
ವೃಕ್ಷೈರಾಚ್ಛಾದ್ಯ ಚಾತ್ಮಾನಂ ಕಿಂ ಮಾಂ ನ ಪ್ರತಿಭಾಷಸೇ ॥

ಅನುವಾದ

(ಅಷ್ಟರಲ್ಲಿ ಸೀತೆಯು ಆ ಕಡೆ ಓಡಿ ಅಡಗಿಕೊಂಡಿರುವಳು ಎಂಬ ಭ್ರಮೆ ಉಂಟಾಗಿ ಹೇಳಿದನು) ಪ್ರಿಯೆ! ಏಕೆ ಓಡುತ್ತಿರುವೆ? ಕಮಲನಯನೇ! ನಾನು ನಿನ್ನನ್ನು ನೋಡಿ ಬಿಟ್ಟೆ, ನೀನು ಮರಗಳ ಮರೆಯಲ್ಲಿ ಅಡಗಿದ್ದುಕೊಂಡು ಏಕೆ ಮಾತನಾಡುತ್ತಿಲ್ಲ.॥26॥

ಮೂಲಮ್ - 27

ತಿಷ್ಠ ತಿಷ್ಠ ವರಾರೋಹೇ ನ ತೇಽಸ್ತಿ ಕರುಣಾ ಮಯಿ ।
ನಾತ್ಯರ್ಥಂ ಹಾಸ್ಯಶೀಲಾಸಿ ಕಿಮರ್ಥಂ ಮಾಮುಪೇಕ್ಷಸೇ ॥

ಅನುವಾದ

ವರಾರೋಹೆ! ನಿಲ್ಲು! ನಿಲ್ಲು! ಏಕೆ ನನ್ನ ಮೇಲೆ ದಯೆ ಇಲ್ಲವೇ? ವಿನೋದಮಾಡುವ ಸ್ವಭಾವ ನಿನ್ನದಾಗಿರಲಿಲ್ಲ, ಹೀಗಿದ್ದರೂ ಏತಕ್ಕಾಗಿ ನನ್ನನ್ನು ಉಪೇಕ್ಷಿಸುತ್ತಿರುವೆ.॥27॥

ಮೂಲಮ್ - 28

ಪೀತಕೌಶೇಯಕೇನಾಸಿ ಸೂಚಿತಾ ವರವರ್ಣಿನಿ ।
ಧಾವಂತ್ಯಪಿ ಮಯಾ ದೃಷ್ಟಾ ತಿಷ್ಠ ಯದ್ಯಸ್ತಿ ಸೌಹೃದಮ್ ॥

ಅನುವಾದ

ಸುಂದರೀ! ಹಳದಿ ರೇಷ್ಮೆ ಸೀರೆಯನ್ನು ಉಟ್ಟಿದ್ದ ನೀನೆಲ್ಲಿರುವೆ? ಓಡುತ್ತಿರುವೆಯಾದರೂ ನಾನು ನಿನ್ನನ್ನು ನೋಡಿಬಿಟ್ಟೆ. ನನ್ನ ಕುರಿತು ಸ್ನೇಹ, ಸೌಹಾರ್ದ ಇದ್ದರೆ ನಿಂತುಕೋ.॥28॥

ಮೂಲಮ್ - 29

ನೈವ ಸಾ ನೂನಮಥವಾ ಹಿಂಸಿತಾ ಚಾರುಹಾಸಿನೀ ।
ಕೃಚ್ಛ್ರಂ ಪ್ರಾಪ್ತಂ ನ ಮಾಂ ನೂನಂ ಯಥೋಪೇಕ್ಷಿತುಮರ್ಹತಿ ॥

ಅನುವಾದ

(ಮತ್ತೆ ಭ್ರಮೆ ದೂರವಾದಾಗ) ಆ ಮನೋಹರ ಮುಗುಳ್ನಗೆಯುಳ್ಳ ಸೀತೆಯನ್ನು ರಾಕ್ಷಸರು ನಿಶ್ಚಯವಾಗಿ ಕೊಂದು ಹಾಕಿದ್ದಾರೆ, ಇಲ್ಲದಿದ್ದರೆ ಈ ಸಂಕಟದಲ್ಲಿ ಬಿದ್ದ ನನ್ನನ್ನು ಎಂದೂ ಉಪೇಕ್ಷಿಸುತ್ತಿರಲಿಲ್ಲ.॥29॥

ಮೂಲಮ್ - 30

ವ್ಯಕ್ತಂ ಸಾ ಭಕ್ಷಿತಾ ಬಾಲಾ ರಾಕ್ಷಸೈಃ ಪಿಶಿತಾಶನೈಃ ।
ವಿಭಜ್ಯಾಂಗಾನಿ ಸರ್ವಾಣಿ ಮಯಾ ವಿರಹಿತಾ ಪ್ರಿಯಾ ॥

ಅನುವಾದ

ಮಾಂಸಭಕ್ಷಿ ರಾಕ್ಷಸರು ನನ್ನಿಂದ ಅಗಲಿದ ಮುಗ್ಧ ಪ್ರಿಯೆ ಮೈಥಿಲಿಯ ಶರೀರವನ್ನು ತುಂಡು-ತುಂಡು ಮಾಡಿ ಹಂಚಿ ತಿಂದಿರಬೇಕೆಂದೇ ಸ್ಪಷ್ಟವಾಗಿ ತಿಳಿದುಬರುತ್ತಿದೆ.॥30॥

ಮೂಲಮ್ - 31

ನೂನಂ ತಚ್ಛುಭದಂತೋಷ್ಠಂ ಸುನಾಸಂ ಚಾರುಕುಂಡಲಮ್ ।
ಪೂರ್ಣಚಂದ್ರನಿಭಂ ಗ್ರಸ್ತಂ ಮುಖಂ ನಿಷ್ಪ್ರಭತಾಂ ಗತಮ್ ॥

ಅನುವಾದ

ಸುಂದರ ಹಲ್ಲುಗಳು, ಮನೋಹರ ತುಟಿಗಳು, ನೀಳವಾದ ಮೂಗು ಹಾಗೂ ಸುಂದರ ಕುಂಡಲಗಳಿಂದ ಅಲಂಕೃತಳಾದ ಪೂರ್ಣ ಚಂದ್ರನಂತೆ ಇದ್ದ ಮುಖವು ಖಂಡಿತವಾಗಿ ರಾಕ್ಷಸರ ತುತ್ತಾಗಿ ಕಳೆಗುಂದಿಹೋಗಿದೆ.॥31॥

ಮೂಲಮ್ - 32

ಸಾ ಹಿ ಚಂಪಕವರ್ಣಾಭಾ ಗ್ರೀವಾ ಗ್ರೈವೇಯಕೋಚಿತಾ ।
ಕೋಮಲಾ ವಿಲಪಂತ್ಯಾಸ್ತು ಕಾಂತಾಯಾ ಭಕ್ಷಿತಾ ಶುಭಾ ॥

ಅನುವಾದ

ಅಳುತ್ತಾ ಬಳಲಿದ್ದ ಪ್ರಿಯತಮೆ ಸೀತೆಯ, ಸಂಪಿಗೆಯಂತೆ ಬಣ್ಣವುಳ್ಳ ಕೋಮಲ ಸುಂದರ, ಹಾರಗಳನ್ನು ತೊಡಲು ಯೋಗ್ಯವಾದ ಕೊರಳು ರಾಕ್ಷಸರ ಆಹಾರವಾಗಿರಬೇಕು.॥32॥

ಮೂಲಮ್ - 33

ನೂನಂ ವಿಕ್ಷಿಪ್ಯಮಾಣೌ ತೌ ಬಾಹೂ ಪಲ್ಲವಕೋಮಲೌ ।
ಭಕ್ಷಿತೌ ವೇಪಮಾನಾಗ್ರೌ ಸಹಸ್ತಾಭರಣಾಂಗದೌ ॥

ಅನುವಾದ

ಆ ಎಳೆಯ ಚಿಗುರಿನಂತೆ ಕೋಮಲ ಭುಜಗಳು ಆಕಡೆ ಈಕಡೆ ಚೆಲ್ಲಿ ಹೋಗಿರಬಹುದು. ನಡುಗುತ್ತಿರುವ ಕೈಗಳು ಆಭೂಷಣ ಮತ್ತು ತೋಳ್ಬಂದಿ ಸಹಿತ ನಿಶ್ಚಯವಾಗಿ ರಾಕ್ಷಸರ ಹೊಟ್ಟೆ ಸೇರಿರಬಹುದು.॥33॥

ಮೂಲಮ್ - 34

ಮಯಾ ವಿರಹಿತಾ ಬಾಲಾ ರಕ್ಷಸಾಂ ಭಕ್ಷಣಾಯ ವೈ ।
ಸಾರ್ಥೇನೇವ ಪರಿತ್ಯಕ್ತಾ ಭಕ್ಷಿತಾ ಬಹುಬಾಂಧವಾ ॥

ಅನುವಾದ

ರಾಕ್ಷಸರ ಆಹಾರಕ್ಕಾಗಿಯೇ ನಾನು ಆ ಬಾಲೆಯನ್ನು ಒಬ್ಬಳನ್ನಾಗಿ ಬಿಟ್ಟೆ. ಬಂಧು-ಬಾಂಧವರು ಅನೇಕರಿದ್ದರೂ ಯಾತ್ರಿಗಳಿಂದ ಬೇರ್ಪಟ್ಟ ಒಬ್ಬಂಟಿಗಳಾದ ಸ್ತ್ರೀಯಂತೆ ಸೀತೆಯು ನಿಶಾಚರರ ತುತ್ತಾದಳು.॥34॥

ಮೂಲಮ್ - 35

ಹಾ ಲಕ್ಷ್ಮಣ ಮಹಾಬಾಹೋ ಪಶ್ಯಸಿ ತ್ವಂ ಪ್ರಿಯಾಂ ಕ್ವಚಿತ್ ।
ಹಾ ಪ್ರಿಯೇ ಕ್ವ ಗತಾ ಭದ್ರೇ ಹಾ ಸೀತೇತಿ ಪುನಃ ಪುನಃ ॥

ಮೂಲಮ್ - 36

ಇತ್ಯೇವಂ ವಿಲಪನ್ರಾಮಃ ಪರಿಧಾವನ್ ವನಾದ್ವನಮ್ ।
ಕ್ವಚಿದುದ್ಭ್ರಮತೇ ವೇಗಾತ್ಕ್ವಚಿದ್ವಿಭ್ರಮತೇ ಬಲಾತ್ ॥

ಅನುವಾದ

ಅಯ್ಯೋ ಮಹಾಬಾಹು ಲಕ್ಷ್ಮಣ! ನೀನು ಎಲ್ಲಾದರೂ ನನ್ನ ಪ್ರಿಯತಮೆಯನ್ನು ನೋಡುತ್ತಿದ್ದಿಯಾ? ಹಾ ಪ್ರಿಯೇ! ಹಾ ಭದ್ರೆ! ಹಾ ಸೀತೆ! ನೀನು ಎಲ್ಲಿಗೆ ಹೋಗಿರುವೆ? ಹೀಗೆ ಪದೇ-ಪದೇ ವಿಲಾಪಮಾಡುತ್ತಾ ಶ್ರೀರಾಮಚಂದ್ರನು ಒಂದು ವನದಿಂದ ಇನ್ನೊಂದಕ್ಕೆ ಓಡತೊಡಗಿದನು. ಅವನು ಕೆಲವೆಡೆ ಸೀತೆಯ ಸಮಾನತೆ ಮಾಡುತ್ತಾ ಭ್ರಾಂತನಾಗುತ್ತಾನೆ ಮತ್ತು ಕೆಲವೆಡೆ ಶೋಕದ ಪ್ರಬಲತೆಯಿಂದ ಸುಂಟರಗಾಳಿಯಂತೆ ಸುತ್ತುತ್ತಿದ್ದನು.॥35-36॥

ಮೂಲಮ್ - 37

ಕ್ವಚಿನ್ಮತ್ತ ಇವಾಭಾತಿ ಕಾಂತಾನ್ವೇಷಣತತ್ಪರಃ ।
ಸ ವನಾದಿ ನದೀಃ ಶೈಲಾನ್ಗಿರಿಪ್ರಸ್ರವಣಾನಿ ಚ ।
ಕಾನನಾನಿ ಚ ವೇಗೇನ ಭ್ರಮತ್ಯಪರಿಸಂಸ್ಥಿತಃ ॥

ಅನುವಾದ

ತನ್ನ ಪ್ರಿಯತಮೆಯನ್ನು ಹುಡುಕುತ್ತಾ ಅವನು ಕೆಲವೊಮ್ಮೆ ಹುಚ್ಚರಂತೆ ಚೇಷ್ಟೆಮಾಡುತ್ತಿದ್ದನು. ಅವನು ಎಲ್ಲಿಯೂ ನಿಲ್ಲದೆ ಬಹಳವಾಗಿ ಓಡಾಡಿ ವನ, ನದೀ, ಪರ್ವತ, ಗುಡ್ಡ-ಬೆಟ್ಟ, ಜಲಪಾತ, ಹೀಗೆ ಬೇರೆ ಬೇರೆ ಕಾಡುಗಳಲ್ಲಿ ಅಲೆಯುತ್ತಾ ಸೀತೆಯನ್ನು ಹುಡುಕುತ್ತಿದ್ದನು.॥37॥

ಮೂಲಮ್ - 38

ತಥಾ ಸ ಗತ್ವಾ ವಿಪುಲಂ ಮಹದ್ವನಂ
ಪರೀತ್ಯ ಸರ್ವಂ ತ್ವಥ ಮೈಥಿಲೀಂ ಪ್ರತಿ ।
ಅನಿಷ್ಠಿತಾಶಃ ಸ ಚಕಾರ ಮಾರ್ಗಣೇ
ಪುನಃ ಪ್ರಿಯಾಯಾಃ ಪರಮಂ ಪರಿಶ್ರಮಮ್ ॥

ಅನುವಾದ

ಆಗ ಮೈಥಿಲಿಯನ್ನು ಹುಡುಕಲಿಕ್ಕಾಗಿ ಅವನು ಆ ವಿಶಾಲವಾದ ದೊಡ್ಡ-ದೊಡ್ಡ ಅರಣ್ಯಗಳಿಗೆ ಹೋಗಿ ಹುಡುಕುತ್ತಾ ಬಳಲಿದನು. ಆದರೂ ಬೇಸರಿಸದೆ ಪುನಃ ತನ್ನ ಪ್ರಿಯತಮೆಯನ್ನು ಹುಡುಕುವ ಪರಿಶ್ರಮದಲ್ಲಿ ತೊಡಗಿದನು.॥38॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅರವತ್ತನೆಯ ಸರ್ಗ ಸಂಪೂರ್ಣವಾಯಿತು.॥60॥