०५९ लक्ष्मणनिन्दा

वाचनम्
ಭಾಗಸೂಚನಾ

ಶ್ರೀರಾಮ - ಲಕ್ಷ್ಮಣರ ಮಾತುಕತೆ

ಮೂಲಮ್ - 1

ಅಥಾಶ್ರಮಾದುಪಾವೃತ್ತಮಂತರಾ ರಘುನಂದನಃ ।
ಪರಿಪಪ್ರಚ್ಛ ಸೌಮಿತ್ರಿಂ ರಾಮೋ ದುಃಖಾದಿದಂ ವಚಃ ॥

ಅನುವಾದ

(ಆಶ್ರಮಕ್ಕೆ ಬರುವ ಮೊದಲು ದಾರಿಯಲ್ಲಿ ಶ್ರೀರಾಮ ಮತ್ತು ಲಕ್ಷ್ಮಣರಲ್ಲಿ ನಡೆದ ಪರಸ್ಪರ ಮಾತನ್ನು ಪುನಃ ವಿಸ್ತಾರದಿಂದ ತಿಳಿಸುತ್ತಾ ಇದ್ದಾರೆ.) ಸೀತೆಯ ಮಾತಿನಂತೆ ಆಶ್ರಮದಿಂದ ಹೊರಟು ತನ್ನ ಬಳಿಗೆ ಬಂದಿರುವ ಸುಮಿತ್ರಾಕುಮಾರ ಲಕ್ಷ್ಮಣನಲ್ಲಿ ರಘುಕುಲನಂದನ ಶ್ರೀರಾಮನು ಬಹಳ ದುಃಖದಿಂದ ಕೇಳಿದನು.॥1॥

ಮೂಲಮ್ - 2

ತಮುವಾಚ ಕಿಮರ್ಥಂ ತ್ವಮಾಗತೋಽಪಾಸ್ಯ ಮೈಥಿಲೀಮ್ ।
ಯದಾ ಸಾ ತವ ವಿಶ್ವಾಸಾದ್ವನೇ ವಿರಹಿತಾ ಮಯಾ ॥

ಅನುವಾದ

ಲಕ್ಷ್ಮಣ! ನಾನು ನಿನ್ನ ವಿಶ್ವಾಸದಮೇಲೆ ವನದಲ್ಲಿ ಸೀತೆಯನ್ನು ಬಿಟ್ಟು ಬಂದಿದ್ದಾಗ ನೀನು ಆಕೆಯನ್ನು ಒಬ್ಬಳನ್ನಾಗಿ ಬಿಟ್ಟು ಏಕೆ ಬಂದೆ.॥2॥

ಮೂಲಮ್ - 3

ದೃಷ್ಟ್ವೈವಾಭ್ಯಾಗತಂ ತ್ವಾಂ ಮೇ ಮೈಥಿಲೀಂ ತ್ಯಜ್ಯ ಲಕ್ಷ್ಮಣ ।
ಶಂಕಮಾನಂ ಮಹತ್ಪಾಪಂ ಯತ್ಸತ್ಯಂ ವ್ಯಥಿತಂ ಮನಃ ॥

ಅನುವಾದ

ಲಕ್ಷ್ಮಣ! ಮಿಥಿಲೇಶ ಕುಮಾರಿಯನ್ನು ಬಿಟ್ಟು ನೀನು ನನ್ನ ಬಳಿಗೆ ಬಂದಿರುವುದನ್ನು ನೋಡಿದರೆ ಯಾವ ಅನಿಷ್ಟದ ಆಶಂಕೆಯಿಂದ ನನ್ನ ಮನಸ್ಸು ದುಃಖಿತವಾಗಿದೆಯೋ ಅದು ನಿಜವಾದುದೆಂದೇ ಅನಿಸುತ್ತಿದೆ.॥3॥

ಮೂಲಮ್ - 4

ಸ್ಫುರತೇ ನಯನಂ ಸವ್ಯಂ ಬಾಹುಶ್ಚ ಹೃದಯಂ ಚ ಮೇ ।
ದೃಷ್ಟ್ವಾ ಲಕ್ಷ್ಮಣ ದೂರೇ ತ್ವಾಂ ಸೀತಾವಿರಹಿತಂ ಪಥಿ ॥

ಅನುವಾದ

ಲಕ್ಷ್ಮಣಾ! ನನ್ನ ಎಡ ಭುಜ ಮತ್ತು ಎಡಗಣ್ಣು ಹಾರುತ್ತಿವೆ. ನೀನು ಆಶ್ರಮದಿಂದ ದೂರ ಸೀತೆಯನ್ನು ಬಿಟ್ಟು ಬರುವುದನ್ನು ನೋಡಿ ನನ್ನ ಎದೆ ನಡುಗುತ್ತಿದೆ.॥4॥

ಮೂಲಮ್ - 5

ಏವಮುಕ್ತಸ್ತು ಸೌಮಿತ್ರಿರ್ಲಕ್ಷ್ಮಣಃ ಶುಭಲಕ್ಷಣಃ ।
ಭೂಯೋ ದುಃಖಸಮಾವಿಷ್ಟೋ ದುಃಖಿತಂ ರಾಮಮಬ್ರವೀತ್ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಉತ್ತಮ ಲಕ್ಷಣ-ಸಂಪನ್ನ ಸುಮಿತ್ರಾಕುಮಾರ ಲಕ್ಷ್ಮಣನು ಅತ್ಯಂತ ದುಃಖಿತನಾಗಿ ಶೋಕಗ್ರಸ್ತ ಅಣ್ಣನಲ್ಲಿ ಹೇಳಿದನು .॥5॥

ಮೂಲಮ್ - 6

ನ ಸ್ವಯಂ ಕಾಮಕಾರೇಣ ತಾಂ ತ್ಯಕ್ತ್ವಾಹಮಿಹಾಗತಃ ।
ಪ್ರಚೋದಿತಸ್ತಯೈವೋಗ್ರೈಸ್ತ್ವತ್ಸಕಾಶಮಿಹಾಗತಃ ॥

ಅನುವಾದ

ಅಣ್ಣಾ! ನಾನು ಸ್ವತಃ ನನ್ನ ಇಚ್ಛೆಯಿಂದ ಆಕೆಯನ್ನು ಬಿಟ್ಟು ಬಂದಿಲ್ಲ. ಅವಳ ಕಠೋರ ವಚನಗಳಿಂದ ಪ್ರೇರಿತನಾಗಿ ನನಗೆ ನಿನ್ನ ಬಳಿಗೆ ಬರಬೇಕಾಯಿತು.॥6॥

ಮೂಲಮ್ - 7

ಆರ್ಯೇಣೇವ ಪರಾಕ್ರುಷ್ಟಂ ಲಕ್ಷ್ಮಣೇತಿ ಸುವಿಸ್ವರಮ್ ।
ಪರಿತ್ರಾಹೀತಿ ಯದ್ವಾಕ್ಯಂ ಮೈಥಿಲ್ಯಾಸ್ತಚ್ಛ್ರುತಿ ಗತಮ್ ॥

ಅನುವಾದ

ನಿನ್ನ ಸ್ವರದಂತೆ ಯಾರೋ ಜೋರಾಗಿ ‘ಲಕ್ಷ್ಮಣ! ನನ್ನನ್ನು ಕಾಪಾಡು!’ ಎಂದು ಕೂಗಿದ ವಾಕ್ಯವು ಮೈಥಿಲಿಯ ಕಿವಿಗೆ ಬಿತ್ತು.॥7॥

ಮೂಲಮ್ - 8

ಸಾ ತಮಾರ್ತಸ್ವರಂ ಶ್ರುತ್ವಾ ತವ ಸ್ನೇಹೇನ ಮೈಥಿಲೀ ।
ಗಚ್ಛ ಗಚ್ಛೇತಿ ಮಾಮಾಶು ರುದತೀ ಭಯವಿಕ್ಲವಾ ॥

ಅನುವಾದ

ಆ ಆರ್ತನಾದವನ್ನು ಕೇಳಿ ಮೈಥಿಲಿಯು ನಿನ್ನ ಕುರಿತು ಇರುವ ಸ್ನೇಹದಿಂದಾಗಿ ಭಯದಿಂದ ವ್ಯಾಕುಲಳಾಗಿ ಅಳುತ್ತಾ ನನ್ನಲ್ಲಿ ಕೂಡಲೇ ‘ಹೋಗು, ಹೋಗು!’ ಎಂದು ಹೇಳಿದಳು.॥8॥

ಮೂಲಮ್ - 9

ಪ್ರಚೋದ್ಯಮಾನೇನ ಮಯಾ ಗಚ್ಛೇತಿ ಬಹುಶಸ್ತಯಾ ।
ಪ್ರತ್ಯುಕ್ತಾ ಮೈಥಿಲೀ ವಾಕ್ಯಮಿದಂ ತತ್ಪ್ರತ್ಯಯಾನ್ವಿತಮ್ ॥

ಅನುವಾದ

ಅವಳು ಪದೇ ಪದೇ ಹೀಗೆ ಹೇಳಿ ನನ್ನನ್ನು ಪ್ರೇರೇಪಿಸಿದಾಗ ಆಕೆಗೆ ವಿಶ್ವಾಸ ಉಂಟಾಗುವಂತೆ ನಾನು ಹೀಗೆ ಹೇಳಿದೆ.॥9॥

ಮೂಲಮ್ - 10

ನ ತತ್ಪಶ್ಯಾಮ್ಯಹಂ ರಕ್ಷೋಯದಸ್ಯ ಭಯಮಾವಹೇತ್ ।
ನಿರ್ವೃತಾ ಭವ ನಾಸ್ತ್ಯೇತತ್ಕೇನಾಪ್ಯೇತದುದಾಹೃತಮ್ ॥

ಅನುವಾದ

ದೇವಿ! ಭಗವಾನ್ ಶ್ರೀರಾಮನನ್ನು ಭಯಪಡಿಸುವಂತಹ ಯಾವುದೇ ರಾಕ್ಷಸನನ್ನು ನಾನು ನೋಡಿಲ್ಲ. ನೀವು ಶಾಂತವಾಗಿರಿ, ಇದು ಅಣ್ಣನ ಕೂಗು ಅಲ್ಲ. ಬೇರೆ ಯಾರೋ ಈ ರೀತಿಯಾಗಿ ಕೂಗಿರುವನು.॥10॥

ಮೂಲಮ್ - 11

ವಿಗರ್ಹಿತಂ ಚ ನೀಚಂ ಚ ಕಥಮಾರ್ಯೋಽಭಿಧಾಸ್ಯತಿ ।
ತ್ರಾಹೀತಿ ವಚನಂ ಸೀತೇ ಯಸ್ತ್ರಾಯೇತ್ತ್ರಿದಶಾನಪಿ ॥

ಅನುವಾದ

ಸೀತೆ! ದೇವತೆಗಳನ್ನು ರಕ್ಷಿಸುತ್ತಿರುವ ನನ್ನ ಅಣ್ಣ ‘ನನ್ನನ್ನು ಕಾಪಾಡು’ ಎಂದು ಇಂತಹ ನಿಂದಿತ (ಹೇಡಿತನದ) ಮಾತನ್ನು ಹೇಗೆ ಹೇಳುವನು.॥11॥

ಮೂಲಮ್ - 12

ಕಿನಿಮಿತ್ತಂ ತು ಕೇನಾಪಿ ಭ್ರಾತುರಾಲಂಬ್ಯ ಮೇ ಸ್ವರಮ್ ।
ವಿಸ್ವರಂ ವ್ಯಾಹೃತಂ ವಾಕ್ಯಂ ಲಕ್ಷ್ಮತ್ರಾಹಿ ಮಾಮಿತಿ ॥

ಅನುವಾದ

ಯಾರೋ ಬೇರೆಯವರು ಯಾವುದೋ ಉದ್ದೇಶದಿಂದ ನನ್ನ ಅಣ್ಣನ ಸ್ವರವನ್ನು ಅಣಕಮಾಡಿ ‘ಲಕ್ಷ್ಮಣ! ನನ್ನನ್ನು ಕಾಪಾಡು’ ಎಂದು ಜೋರಾಗಿ ಹೇಳಿರಬೇಕು.॥12॥

ಮೂಲಮ್ - 13

ರಾಕ್ಷಸೇನೇರಿತಂ ವಾಕ್ಯಂ ತ್ರಾಸಾತ್ ತ್ರಾಹೀತಿ ಶೋಭನೇ ।
ನ ಭವತ್ಯಾ ವ್ಯಥಾ ಕಾರ್ಯಾ ಕುನಾರೀಜನಸೇವಿತಾ ॥

ಅನುವಾದ

ಶೋಭನೇ! ಆ ರಾಕ್ಷಸನು ಭಯದಿಂದಾಗಿಯೇ (ನನ್ನನ್ನು ಕಾಪಾಡು) ಎಂಬ ಮಾತನ್ನು ಹೇಳಿರುವನು. ನೀವು ದುಃಖಿಗಳಾಗಬಾರದು. ಇಂತಹ ವ್ಯಥೆಯನ್ನು ನೀಚ ಸ್ತ್ರೀಯರೇ ತನ್ನ ಮನಸ್ಸಿಗೆ ತರುತ್ತಾರೆ.॥13॥

ಮೂಲಮ್ - 14

ಅಲಂ ವಿಕ್ಲವತಾಂ ಗಂತುಂ ಸ್ವಸ್ಥಾ ಭವ ನಿರುತ್ಸುಕಾ ।
ನ ಚಾಸ್ತಿ ತ್ರಿಷು ಲೋಕೇಷು ಪುಮಾನ್ಯೋ ರಾಘವಂ ರಣೇ ॥

ಮೂಲಮ್ - 15

ಜಾತೋ ವಾ ಜಾಯಮಾನೋ ವಾ ಸಂಯುಗೇ ಯಃ ಪರಾಜಯೇತ್ ।
ಅಜೇಯೋ ರಾಘವೋ ಯುದ್ಧೇ ದೇವೈಃ ಶಕ್ರಪುರೋಗಮೈಃ ॥

ಅನುವಾದ

ನೀವು ವ್ಯಾಕುಲರಾಗಬೇಡಿ, ಸ್ವಸ್ಥರಾಗಿರಿ, ಚಿಂತೆಯನ್ನು ಬಿಡಿರಿ. ಯುದ್ಧದಲ್ಲಿ ಶ್ರೀರಾಮನನ್ನು ಸೋಲಿಸುವಂತಹ ಯಾರೇ ಪುರುಷನು ಮೂರು ಲೋಕದಲ್ಲಿ ಹುಟ್ಟಿಲ್ಲ, ಮುಂದೆಯೂ ಹುಟ್ಟಲಾರನು. ಸಂಗ್ರಾಮದಲ್ಲಿ ಇಂದ್ರಾದಿ ದೇವತೆಗಳೂ ಕೂಡ ಶ್ರೀರಾಮನನ್ನು ಗೆಲ್ಲಲಾರರು.॥14-15॥

ಮೂಲಮ್ - 16

ಏವಮುಕ್ತಾ ತು ವೈದೇಹೀ ಪರಿಮೋಹಿತಚೇತನಾ ।
ಉವಾಚಾಶ್ರೂಣಿ ಮುಂಚಂತೀ ದಾರುಣಂ ಮಾಮಿದಂ ವಚಃ ॥

ಅನುವಾದ

ನಾನು ಹೀಗೆ ಹೇಳಿ ವಿದೇಹ ಕುಮಾರಿಯನ್ನು ಸಮಾಧಾನಗೊಳಿಸಲು ಯತ್ನಿಸಿದರೂ ಕಲುಷಿತವಾದ ಬುದ್ಧಿಯಿಂದ ಕೂಡಿದ್ದ ಅವಳು ಕಣ್ಣೀರಿಡುತ್ತಾ ಅತಿದಾರುಣವಾದ ಎದೆಯೇ ಸೀಳಿ ಹೋಗುವ ಇಂತಹ ಮಾತುಗಳನ್ನು ಹೇಳಿದಳು.॥16॥

ಮೂಲಮ್ - 17

ಭಾವೋ ಮಯಿ ತವಾತ್ಯರ್ಥಪಾಪ ಏವ ನಿವೇಶಿತಃ ।
ವಿನಷ್ಟೇ ಭ್ರಾತರಿ ಪ್ರಾಪ್ತುಂ ನ ಚ ತ್ವಂ ಮಾಮವಾಪ್ಸ್ಯಸೇ ॥

ಅನುವಾದ

ಲಕ್ಷ್ಮಣ! ನಿನ್ನ ಮನಸ್ಸಿನಲ್ಲಿ ನನ್ನ ಕುರಿತು ಅತ್ಯಂತ ಪಾಪಪೂರ್ಣಭಾವ ತುಂಬಿದೆ. ನೀನು ನಿನ್ನ ಅಣ್ಣ ಸತ್ತ ಮೇಲೆ ನನ್ನನ್ನು ಪಡೆಯಲು ಬಯಸುತ್ತಿರುವೆ, ಆದರೆ ನನ್ನನ್ನು ಪಡೆಯಲಾರೆ.॥17॥

ಮೂಲಮ್ - 18

ಸಂಕೇತಾದ್ ಭರತೇನ ತ್ವಂ ರಾಮಂ ಸಮನುಗಚ್ಛಸಿ ।
ಕ್ರೋಶಂತಂ ಹಿ ಯಥಾತ್ಯರ್ಥಂ ನೈನಮಭ್ಯವಪದ್ಯಸೇ ॥

ಮೂಲಮ್ - 19

ರಿಪುಃ ಪ್ರಚ್ಛನ್ನಚಾರೀ ತ್ವಂ ಮದರ್ಥಮನುಗಚ್ಛಸಿ ।
ರಾಘವಸ್ಯಾಂತರಂ ಪ್ರೇಪ್ಸುಸ್ತಥೈನಂ ನಾಭಿಪದ್ಯಸೇ ॥

ಅನುವಾದ

ನೀನು ಭರತನ ಸೂಚನೆಯಂತೆ ತನ್ನ ಸ್ವಾರ್ಥಕ್ಕಾಗಿ ಶ್ರೀರಾಮಚಂದ್ರನ ಹಿಂದೆ ಹಿಂದೆ ಬಂದಿರುವೆ ಮತ್ತು ರಾಮನ ಛಿದ್ರವನ್ನು ಹುಡುಕುತ್ತಿರುವೆ. ಅದಕ್ಕಾಗಿಯೇ ಸಂಕಟ ಸಮಯದಲ್ಲೂ ಅವರ ಬಳಿಗೆ ಹೋಗುವ ಹೆಸರೆತ್ತುವುದಿಲ್ಲ.॥18-19॥

ಮೂಲಮ್ - 20

ಏವಮುಕ್ತಸ್ತುವೈದೇಹ್ಯಾ ಸಂರಬ್ಧೋ ರಕ್ತಲೋಚನಃ ।
ಕ್ರೋಧಾತ್ಪ್ರಸ್ಫುರಮಾಣೋಷ್ಠ ಆಶ್ರಮಾದಭಿನಿರ್ಗತಃ ॥

ಅನುವಾದ

ವಿದೇಹಕುಮಾರಿಯು ಹೀಗೆ ಹೇಳಿದಾಗ ನಾನು ರೋಷಗೊಂಡೆ ನನ್ನ ಕಣ್ಣು ಕೆಂಪಾದವು ಮತ್ತು ಸಿಟ್ಟಿನಿಂದ ತುಟಿಗಳು ಅದುರತೊಡಗಿದವು. ಈ ಸ್ಥಿತಿಯಲ್ಲಿ ನಾನು ಆಶ್ರಮದಿಂದ ಹೊರಟು ಬಂದೆ.॥20॥

ಮೂಲಮ್ - 21

ಏವಂ ಬ್ರುವಾಣಂ ಸೌಮಿತ್ರಿಂ ರಾಮಃ ಸಂತಾಪಮೋಹಿತಃ ।
ಅಬ್ರವೀದ್ದುಷ್ಕೃತಂ ಸೌಮ್ಯ ತಾಂ ವಿನಾ ತ್ವಮಿದಾಗತಃ ॥

ಅನುವಾದ

ಲಕ್ಷ್ಮಣನ ಇಂತಹ ಮಾತನ್ನು ಕೇಳಿ ಶ್ರೀರಾಮನು ಸಂತಾಪದಿಂದ ಮೋಹಿತನಾಗಿ ಅವನಲ್ಲಿ ಹೇಳಿದನು - ಸೌಮ್ಯ! ಸೀತೆಯೊಬ್ಬಳನ್ನೇ ಬಿಟ್ಟು ನೀನು ಇಲ್ಲಿಗೆ ಬಂದು ಬಹಳ ದೊಡ್ಡ ತಪ್ಪುಮಾಡಿದೆ.॥21॥

ಮೂಲಮ್ - 22

ಜಾನನ್ನಪಿ ಸಮರ್ಥಂ ಮಾಂ ರಕ್ಷಸಾಮಪವಾರಣೇ ।
ಅನೇನ ಕ್ರೋಧವಾಕ್ಯೇನ ಮೈಥಿಲ್ಯಾ ನಿರ್ಗತೋ ಭವಾನ್ ॥

ಅನುವಾದ

ನಾನು ರಾಕ್ಷಸರನ್ನು ನಿವಾರಣೆ ಮಾಡಲು ಸಮರ್ಥನಾಗಿದ್ದೇನೆ ಎಂದು ತಿಳಿದರೂ ನೀನು ಮೈಥಿಲಿಯ ಕ್ರೋಧಯುಕ್ತ ಮಾತುಗಳಿಂದ ಉತ್ತೇಜಿತನಾಗಿ ಹೊರಟು ಬಂದೆ.॥22॥

ಮೂಲಮ್ - 23

ನಹಿ ತೇ ಪರಿತುಷ್ಯಾಮಿ ತ್ವಕ್ತ್ವಾ ಯದಸಿ ಮೈಥಿಲೀಮ್ ।
ಕ್ರುದ್ಧಾಯಾಃ ಪರುಷಂ ಶ್ರುತ್ವಾ ಸ್ತ್ರಿಯಾ ಯತ್ತ್ವಮಿಹಾಗತಃ ॥

ಅನುವಾದ

ಕ್ರೋಧ ಗೊಂಡ ನಾರಿಯ ಮಾತನ್ನು ಕೇಳಿ ನೀನು ಮೈಥಿಲಿಯನ್ನು ಬಿಟ್ಟು ಇಲ್ಲಿಗೆ ಬಂದಿರುವುದರಿಂದ ನಾನು ನಿನ್ನ ಮೇಲೆ ಸಂತುಷ್ಟನಾಗಿಲ್ಲ.॥23॥

ಮೂಲಮ್ - 24

ಸರ್ವಥಾ ತ್ವಪನೀತಂ ತೇ ಸೀತಯಾ ಯತ್ಪ್ರಚೋದಿತಃ ।
ಕ್ರೋಧಸ್ಯ ವಶಮಾಗಮ್ಯ ನಾಕರೋಃ ಶಾಸನಂ ಮಮ ॥

ಅನುವಾದ

ಸೀತೆಯಿಂದ ಪ್ರೇರಿತನಾಗಿ ಕ್ರೋಧಕ್ಕೆ ವಶೀಭೂತನಾಗಿ ನೀನು ನನ್ನ ಅದೇಶವನ್ನು ಪಾಲಿಸದಿರುವುದು ಸರ್ವಥಾ ಅನ್ಯಾಯವಾಗಿದೆ.॥24॥

ಮೂಲಮ್ - 25

ಅಸೌ ಹಿ ರಾಕ್ಷಸಃ ಶೇತೇ ಶರೇಣಾಭಿಹತೋ ಮಯಾ ।
ಮೃಗರೂಪೇಣ ಯೇನಾಹಮಾಶ್ರಮಾದಪವಾಹಿತಃ ॥

ಅನುವಾದ

ಮೃಗರೂಪಧರಿಸಿ ನನ್ನನ್ನು ಆಶ್ರಮದಿಂದ ದೂರಕ್ಕೆ ಒಯ್ದಿರುವ ರಾಕ್ಷಸನು ನನ್ನ ಬಾಣದಿಂದ ಗಾಯಗೊಂಡು ಎಂದೆಂದಿಗೂ ಒರಗಿಕೊಂಡಿರುವನು.॥25॥

ಮೂಲಮ್ - 26

ವಿಕೃಷ್ಯ ಚಾಪಂ ಪರಿಧಾಯ ಸಾಯಕಂ
ಸಲೀಲಬಾಣೇನ ಚ ತಾಡಿತೋ ಮಯಾ ।
ಮಾರ್ಗೀಂ ತನುಂ ತ್ಯಜ್ಯ ಚ ವಿಕ್ಲವಸ್ವರೋ
ಬಭೂವ ಕೇಯೂರಧರಃ ಸ ರಾಕ್ಷಸಃ ॥

ಅನುವಾದ

ಧನುಸ್ಸಿಗೆ ಬಾಣವನ್ನು ಅನುಸಂಧಾನ ಮಾಡಿ ಲೀಲಾಜಾಲವಾಗಿ ಪ್ರಯೋಗಿಸಿದ ಬಾಣದಿಂದ ಆ ಮೃಗವನ್ನು ಹೊಡೆದಾಗಲೇ ಅವನು ಮೃಗದ ಶರೀರವನ್ನು ತ್ಯಜಿಸಿ, ಬಾಹುಗಳಲ್ಲಿ ಭುಜ ಕೀರ್ತಿಯನ್ನು ಧರಿಸಿದ ರಾಕ್ಷಸನಾದನು. ಅವನ ಸ್ವರದಲ್ಲಿ ಬಹಳ ವ್ಯಾಕುಲತೆ ಇತ್ತು.॥26॥

ಮೂಲಮ್ - 27

ಶರಾಹತೇನೈವ ತದಾರ್ತಯಾ ಗಿರಾ
ಸ್ವರಂ ಮಮಾಲಂಬ್ಯ ಸುದೂರಸುಶ್ರವಮ್ ।
ಉದಾಹೃತಂ ತದ್ವಚನಂ ಸುದಾರುಣಂ
ತ್ವಮಾಗತೋ ಯೇನ ವಿಹಾಯ ಮೈಥಿಲೀಮ್ ॥

ಅನುವಾದ

ಬಾಣದಿಂದ ಗಾಯಗೊಂಡಾಗ ಅವನು ನನ್ನ ದನಿಯನ್ನು ಅನುಕರಣಮಾಡಿ ಆರ್ತ ಸ್ವರದಿಂದ ದೂರಕ್ಕೆ ಕೇಳುವಂತೆ ಆ ಅತ್ಯಂತ ದಾರುಣ ವಚನವನ್ನು ಹೇಳಿದ್ದನು. ಅದರಿಂದ ನೀನು ಮೈಥಿಲಿಯನ್ನು ಬಿಟ್ಟು ಇಲ್ಲಿಗೆ ಬಂದಿರುವೆ.॥27॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥59॥