०५८ रामशोकः

वाचनम्
ಭಾಗಸೂಚನಾ

ದಾರಿಯಲ್ಲಿ ಅನೇಕ ಪ್ರಕಾರ ಸಂಶಯಪಡುತ್ತಾ ಲಕ್ಷ್ಮಣ ಸಹಿತ ಶ್ರೀರಾಮನು ಆಶ್ರಮಕ್ಕೆ ಬಂದು ಸೀತೆಯನ್ನು ನೋಡದೆ ವ್ಯಥಿತನಾದುದು

ಮೂಲಮ್ - 1

ಸ ದೃಷ್ಟ್ವಾ ಲಕ್ಷ್ಮಣಂ ದೀನಂ ಶೂನ್ಯಂ ದಶರಥಾತ್ಮಜಃ ।
ಪರ್ಯಪೃಚ್ಛತ ಧರ್ಮಾತ್ಮಾ ವೈದೇಹೀಮಾಗತಂ ವಿನಾ ॥

ಅನುವಾದ

ಧರ್ಮಾತ್ಮನಾದ ದಾಶರಥಿಯು ಸೀತೆಯನ್ನು ಬಿಟ್ಟು ಏಕಾಕಿಯಾಗಿ ಬರುತ್ತಿರುವ, ದೀನನಾಗಿಯೂ, ಸಂತೋಷಶೂನ್ಯನೂ ಆಗಿದ್ದ ಲಕ್ಷ್ಮಣನಲ್ಲಿ ಕೇಳಿದನು .॥1॥

ಮೂಲಮ್ - 2

ಪ್ರಸ್ಥಿತಂ ದಂಡಕಾರಣ್ಯಂ ಯಾ ಮಾಮನುಜಗಾಮ ಹ ।
ಕ್ವ ಸಾ ಲಕ್ಷ್ಮಣ ವೈದೇಹೀ ಯಾಂ ಹಿತ್ವಾ ತ್ವಮಿಹಾಗತಃ ॥

ಅನುವಾದ

ಲಕ್ಷ್ಮಣನೇ! ನನ್ನನ್ನು ಅನುಸರಿಸಿ ದಂಡಕಾರಣ್ಯಕ್ಕೆ ಬಂದಿರುವ ನೀನು ಒಬ್ಬಳನ್ನೇ ಬಿಟ್ಟು ಬಂದಿರುವ ಆ ವೈದೇಹಿಯು ಈಗ ಎಲ್ಲಿರುವಳು.॥2॥

ಮೂಲಮ್ - 3

ರಾಜ್ಯಭ್ರಷ್ಟಸ್ಯ ದೀನಸ್ಯ ದಂಡಕಾನ್ ಪರಿಧಾವತಃ ।
ಕ್ವ ಸಾ ದುಃಖಸಹಾಯಾ ಮೇ ವೈದೇಹೀ ತನುಮಧ್ಯಮಾ ॥

ಅನುವಾದ

ನಾನು ರಾಜ್ಯಭ್ರಷ್ಟನಾಗಿ, ದೀನನಾಗಿ ದಂಡಕಾರಣ್ಯದಲ್ಲಿ ಅಲೆಯುತ್ತಿದೇನೆ. ಈ ದುಃಖದಲ್ಲಿ ನನಗೆ ಸಹಾಯಕಳಾದ ಸುಂದರೀ ವಿದೇಹಕುಮಾರಿ ಎಲ್ಲಿರುವಳು.॥3॥

ಮೂಲಮ್ - 4

ಯಾಂ ವಿನಾ ನೋತ್ಸಹೇ ವೀರ ಮುಹೂರ್ತಮಪಿ ಜೀವಿತುಮ್ ।
ಕ್ವ ಸಾ ಪ್ರಾಣಸಹಾಯಾ ಮೇ ಸೀತಾ ಸುರಸುತೋಪಮಾ ॥

ಅನುವಾದ

ವೀರನೇ! ಯಾರನ್ನು ಬಿಟ್ಟು ನಾನು ಎರಡು ಗಳಿಗೆಯೂ ಬದುಕಿರಲಾರೆನೋ, ಯಾರು ನನ್ನ ಪ್ರಾಣಗಳ ಸಹಚರಿಯಾಗಿರುವಳೋ ಆ ದೇವಕನ್ಯೆಯಂತಿದ್ದ ಸುಂದರೀ ಸೀತೆಯು ಈಗ ಎಲ್ಲಿರುವಳು.॥4॥

ಮೂಲಮ್ - 5

ಪತಿತ್ವಮಮರಾಣಾಂ ಹಿ ಪೃಥಿವ್ಯಾಶ್ಚಾಪಿ ಲಕ್ಷ್ಮಣ ।
ವಿನಾ ತಾಂ ತಪನೀಯಾಭಾಂ ನೇಚ್ಛೇಯಂ ಜನಕಾತ್ಮಜಾಮ್ ॥

ಅನುವಾದ

ಲಕ್ಷ್ಮಣ! ಪುಟಕ್ಕಿಟ್ಟ ಚಿನ್ನದಂತೆ ಕಾಂತಿಯುಳ್ಳ ಜನಕನಂದಿನೀ ಸೀತೆಯ ಹೊರತು ನಾನು ಪೃಥಿವಿಯ ರಾಜ್ಯ ಹಾಗೂ ದೇವತೆಗಳ ಒಡೆತನವನ್ನು ಬಯಸುವುದಿಲ್ಲ.॥5॥

ಮೂಲಮ್ - 6

ಕಚ್ಚಿಜ್ಜೀವತಿವೈದೇಹೀ ಪ್ರಾಣೈಃ ಪ್ರಿಯತರಾ ಮಮ ।
ಕಚ್ಚಿತ್ಪ್ರವ್ರಾಜನಂ ವೀರ ನ ಮೇ ಮಿಥ್ಯಾ ಭವಿಷ್ಯತಿ ॥

ಅನುವಾದ

ವೀರನೇ! ನನಗೆ ಪ್ರಾಣಕ್ಕಿಂತಲೂ ಪ್ರಿಯಳಾದ ವಿದೇಹಕುಮಾರಿ ಸೀತೆಯು ಈಗ ಬದುಕಿರಬಲ್ಲಳೇ? ನಾನು ಕಾಡಿಗೆ ಬಂದುದು, ಸೀತೆಯನ್ನು ಕಳೆದುಕೊಂಡಿದ್ದರಿಂದ ವ್ಯರ್ಥವಾಗಲಿಕ್ಕಿಲ್ಲವಲ್ಲ.॥6॥

ಮೂಲಮ್ - 7

ಸೀತಾನಿಮಿತ್ತಂ ಸೌಮಿತ್ರೇ ಮೃತೇ ಮಯಿ ಗತೇ ತ್ವಯಿ ।
ಕಚ್ಚಿತ್ಸಕಾಮಾ ಕೈಕೇಯೀ ಸುಖಿತಾ ಸಾ ಭವಿಷ್ಯತಿ ॥

ಅನುವಾದ

ಸುಮಿತ್ರಾನಂದನ! ಸೀತೆಯನ್ನು ಕಳೆದುಕೊಂಡಿದ್ದರಿಂದ ನಾನು ಸತ್ತುಹೋಗಿ, ನೀನೊಬ್ಬನೇ ಅಯೋಧ್ಯೆಗೆ ಮರಳಿ ಹೋದಾಗ ತಾಯಿ ಕೌಸಲ್ಯೆಯು ಸಫಲ ಮನೋರಥಳಾಗಿ ಸುಖಿಯಾಗುವಳೇ.॥7॥

ಮೂಲಮ್ - 8

ಸಪುತ್ರರಾಜ್ಯಾಂ ಸಿದ್ಧಾರ್ಥಾಂ ಮೃತಪುತ್ರಾ ತಪಸ್ವಿನೀ ।
ಉಪಸ್ಥಾಸ್ಯತಿ ಕೌಸಲ್ಯಾ ಕಚ್ಚಿತ್ ಸೌಮ್ಯೇನ ಕೇಕಯೀಮ್ ॥

ಅನುವಾದ

ಪುತ್ರನಿಂದಲೂ, ನಿಷ್ಕಂಟಕ ರಾಜ್ಯದಿಂದಲೂ ಕೃತಕೃತ್ಯಳಾದ ಕೈಕೇಯಿಯನ್ನು ದಯನೀಯಳಾದ, ಮಗನನ್ನು ಕಳೆದುಕೊಂಡ ಕೌಸಲ್ಯೆಯು ವಿನೀತಭಾವದಿಂದ ಉಪಚರಿಸುತ್ತಾ ಇರಬಲ್ಲಳೇ.॥8॥

ಮೂಲಮ್ - 9

ಯದಿ ಜೀವತಿ ವೈದೇಹೀ ಗಮಿಷ್ಯಾಮ್ಯಾಶ್ರಮಂ ಪುನಃ ।
ಸುವೃತ್ತಾ ಯದಿ ವೃತ್ತಾ ಸಾ ಪ್ರಾಣಾಂಸ್ತ್ಯಕ್ಷ್ಯಾಮಿ ಲಕ್ಷ್ಮಣ ॥

ಅನುವಾದ

ಲಕ್ಷ್ಮಣ! ವಿದೇಹನಂದಿನೀ ಸೀತೆಯು ಜೀವಂತವಾಗಿದ್ದರೆ ನಾನು ಮತ್ತೆ ಆಶ್ರಮದಲ್ಲಿ ಕಾಲಿರಿಸುವೆನು. ಸದಾಚಾರ ಪರಾಯಣ ಮೈಥಿಲಿಯು ಸತ್ತುಹೋದರೆ ನಾನು ಪ್ರಾಣತ್ಯಾಗ ಮಾಡುವೆನು.॥9॥

ಮೂಲಮ್ - 10

ಯದಿ ಮಾಮಾಶ್ರಮಗತಂ ವೈದೇಹೀ ನಾಭಿಭಾಷತೇ ।
ಪುನಃ ಪ್ರಹಸಿತಾ ಸೀತಾ ವಿನಶಿಷ್ಯಾಮಿ ಲಕ್ಷ್ಮಣ ॥

ಅನುವಾದ

ಲಕ್ಷ್ಮಣ! ಆಶ್ರಮಕ್ಕೆ ಹೋದಾಗ ವಿದೇಹಕುಮಾರಿ ಸೀತೆಯು ನಗುಮುಖದಿಂದ ಎದುರಿಗೆ ಬಂದು ನನ್ನೊಂದಿಗೆ ಮಾತನಾಡದಿದ್ದರೆ ನಾನು ಬದುಕಿ ಉಳಿಯಲಾರೆನು.॥10॥

ಮೂಲಮ್ - 11

ಬ್ರೂಹಿ ಲಕ್ಷ್ಮಣ ವೈದೇಹೀ ಯದಿ ಜೀವತಿ ವಾ ನ ವಾ ।
ತ್ವಯಿ ಪ್ರಮತ್ತೇ ರಕ್ಷೋಭಿರ್ಭಕ್ಷಿತಾ ವಾ ತಪಸ್ವಿನೀ ॥

ಅನುವಾದ

ಲಕ್ಷ್ಮಣ! ನೀನೇಕೆ ಮಾತನಾಡುತ್ತಿಲ್ಲ, ವೈದೇಹಿಯು ಜೀವಿಸಿರುವಳೇ? ನೀನು ಎಚ್ಚರ ತಪ್ಪಿದ್ದರಿಂದ ರಾಕ್ಷಸರು ಆ ತಪಸ್ವಿನಿಯನ್ನು ತಿಂದುಹಾಕಿಲ್ಲವಲ್ಲ.॥11॥

ಮೂಲಮ್ - 12

ಸುಕುಮಾರೀ ಚ ಬಾಲಾ ಚ ನಿತ್ಯಂ ಚಾದುಃಖಭಾಗಿನೀ ।
ಮದ್ವಿಯೋಗೇನ ವೈದೇಹೀ ವ್ಯಕ್ತಂ ಶೋಚತಿ ದುರ್ಮನಾಃ ॥

ಅನುವಾದ

ಸುಕುಮಾರಿಯಾದ, ಮುಗ್ಧಳಾದ, ವನವಾಸದ ದುಃಖವನ್ನು ಮೊದಲು ಅನುಭವಿಸದಿರುವ, ವೈದೇಹಿಯು ಇಂದು ನನ್ನ ವಿಯೋಗದಿಂದ ವ್ಯಥಿತಳಾಗಿ ಅವಶ್ಯವಾಗಿ ಶೋಕಪಡುತ್ತಿರಬಹುದು.॥12॥

ಮೂಲಮ್ - 13

ಸರ್ವಥಾ ರಕ್ಷಸಾ ತೇನ ಜಿಹ್ಮೇನ ಸುದುರಾತ್ಮನಾ ।
ವದತಾ ಲಕ್ಷ್ಮಣೇತ್ಯುಚ್ಚೈಸ್ತವಾಪಿ ಜನಿತಂ ಭಯಮ್ ॥

ಅನುವಾದ

ಆ ಕುಟಿಲ ಹಾಗೂ ದುರಾತ್ಮ ರಾಕ್ಷಸನು ಗಟ್ಟಿಯಾಗಿ ‘ಹಾ ಲಕ್ಷ್ಮಣ!’ ಎಂದು ಕೂಗಿ ನಿನ್ನ ಮನಸ್ಸಿನಲ್ಲೂ ಸರ್ವಥಾ ಭಯವನ್ನುಂಟುಮಾಡಿದನು.॥13॥

ಮೂಲಮ್ - 14

ಶ್ರುತಸ್ತು ಮನ್ಯೇ ವೈದೇಹ್ಯಾ ಸ ಸ್ವರಃ ಸದೃಶೋ ಮಮ ।
ತ್ರಸ್ತಯಾ ಪ್ರೇಷಿತಸ್ತ್ವಂ ಚ ದ್ರಷ್ಟುಂ ಮಾಂ ಶೀರ್ಘಮಾಗತಃ ॥

ಅನುವಾದ

ವೈದೇಹಿಯೂ ನನ್ನ ಧ್ವನಿಯಂತಿರುವ ರಾಕ್ಷಸನ ಸ್ವರವನ್ನು ಕೇಳಿ ಭಯಗೊಂಡು ನಿನ್ನನ್ನು ಕಳಿಸಿದಳೆಂದು ನೀನೂ ಕೂಡಲೇ ನನ್ನನ್ನು ನೋಡಲು ಬಂದುಬಿಟ್ಟಿರುವೆ.॥14॥

ಮೂಲಮ್ - 15

ಸರ್ವಥಾ ತು ಕೃತಂ ಕಷ್ಟಂ ಸೀತಾಮುತ್ಸೃಜತಾ ವನೇ ।
ಪ್ರತಿಕರ್ತುಂ ನೃಶಂಸಾನಾಂ ರಕ್ಷಸಾಂ ದತ್ತಮಂತರಮ್ ॥

ಅನುವಾದ

ಏನೇ ಆದರೂ ನೀನು ವನದಲ್ಲಿ ಸೀತೆಯನ್ನು ಒಬ್ಬಂಟಿಗಳಾಗಿ ಬಿಟ್ಟುಬಂದುದು ಸರ್ವಥಾ ದುಃಖಕರ ಕಾರ್ಯಮಾಡಿದೆ. ಕ್ರೂರಕರ್ಮ ಮಾಡುವ ರಾಕ್ಷಸರಿಗೆ ಸೇಡು ತೀರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟೆ.॥15॥

ಮೂಲಮ್ - 16

ದುಃಖಿತಾಃ ಖರಘಾತೇನ ರಾಕ್ಷಸಾಃ ಪಿಶಿತಾಶನಾಃ ।
ತೈಃ ಸೀತಾ ನಿಹತಾ ಘೋರೈರ್ಭವಿಷ್ಯತಿ ನ ಸಂಶಯಃ ॥

ಅನುವಾದ

ನನ್ನ ಕೈಯಿಂದ ಖರನು ಸತ್ತು ಹೋದದ್ದರಿಂದ ಮಾಂಸಭಕ್ಷಿ ನಿಶಾಚರರು ಬಹಳ ದುಃಖಿತರಾಗಿದ್ದಾರೆ. ಆ ಘೋರ ರಾಕ್ಷಸರು ಸೀತೆಯನ್ನು ಕೊಂದುಹಾಕಿರಬಹುದು. ಇದರಲ್ಲಿ ಸಂಶಯವೇ ಇಲ್ಲ.॥16॥

ಮೂಲಮ್ - 17

ಅಹೋಽಸ್ಮಿವ್ಯಸನೇ ಮಗ್ನಃ ಸರ್ವಥಾ ರಿಪುನಾಶನ ।
ಕಿಂ ನ್ವಿದಾನೀಂ ಕರಿಷ್ಯಾಮಿ ಶಂಕೇ ಪ್ರಾಪ್ತವ್ಯಮೀದೃಶೀಮ್ ॥

ಅನುವಾದ

ಶತ್ರುಸೂದನ! ನಾನು ಸರ್ವಥಾ ಸಂಕಟ ಸಮುದ್ರದಲ್ಲಿ ಮುಳುಗಿಹೋದೆ. ಇಂತಹ ದುಃಖವನ್ನು ಅವಶ್ಯವಾಗಿ ಅನುಭವಿಸಬೇಕಾದೀತು ಎಂಬ ಶಂಕೆ ಆಗುತ್ತಿದೆ. ಆದ್ದರಿಂದ ಈಗ ನಾನು ಏನು ಮಾಡಲಿ.॥17॥

ಮೂಲಮ್ - 18

ಇತಿ ಸೀತಾಂ ವರಾರೋಹಾಂ ಚಿಂತಯನ್ನೇವ ರಾಘವಃ ।
ಆಜಗಾಮ ಜನಸ್ಥಾನಂ ತ್ವರಯಾ ಸಹಲಕ್ಷ್ಮಣಃ ॥

ಅನುವಾದ

ಈ ಪ್ರಕಾರ ಸುಂದರೀ ಸೀತೆಯ ಕುರಿತು ಚಿಂತಿಸುತ್ತಾ ಲಕ್ಷ್ಮಣನೊಂದಿಗೆ ಶ್ರೀರಘುನಾಥನು ಕೂಡಲೇ ಜನಸ್ಥಾನಕ್ಕೆ ಬಂದನು.॥18॥

ಮೂಲಮ್ - 19

ವಿಗರ್ಹಮಾಣೋಽನುಜಮಾರ್ತರೂಪಂ
ಕ್ಷುಧಾ ಶ್ರಮೇಣೈವ ಪಿಪಾಸಯಾ ಚ ।
ವಿನಿಃಶ್ವಸನ್ ಶುಷ್ಕಮುಖೋ ವಿಷಣ್ಣಃ
ಪ್ರತಿಶ್ರಯಂ ಪ್ರಾಪ್ಯ ಸಮೀಕ್ಷ್ಯ ಶೂನ್ಯಮ್ ॥

ಅನುವಾದ

ದುಃಖಿತನಾದ ತಮ್ಮ ಲಕ್ಷ್ಮಣನನ್ನು ಜರೆಯುತ್ತಾ ಹಸಿವು - ಬಾಯಾರಿಕೆಯಿಂದ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಬಾಡಿದ ಮುಖವುಳ್ಳ ಶ್ರೀರಾಮಚಂದ್ರನು ಆಶ್ರಮದ ಬಳಿಗೆ ಬಂದು ಬರಿದಾದ ಅದನ್ನು ನೋಡಿ ವಿಷಾದದಲ್ಲಿ ಮುಳುಗಿದನು.॥19॥

ಮೂಲಮ್ - 20

ಸ್ವಮಾಶ್ರಮಂ ಸ ಪ್ರವಿಗಾಹ್ಯ ವೀರೋ
ವಿಹಾರದೇಶಾನನುಸೃತ್ಯ ಕಾಂಶ್ಚಿತ್ ।
ಏತತ್ತದಿತ್ಯೇವ ನಿವಾಸಭೂಮೌ
ಪ್ರಹೃಷ್ಟರೋಮಾ ವ್ಯಥಿತೋ ಬಭೂವ ॥

ಅನುವಾದ

ವೀರ ಶ್ರೀರಾಮನು ಆಶ್ರಮವನ್ನು ಪ್ರವೇಶಿಸಿ ಅಲ್ಲಿ ಸೀತೆಯು ಇಲ್ಲದಿರುವುದನ್ನು ನೋಡಿ, ಸೀತೆಯ ವಿಹಾರ ಸ್ಥಳಗಳಲ್ಲಿಯೂ ಹುಡುಕಿದನು. ಅದೂ ಕೂಡ ಬರಿದಾಗಿರುವುದನ್ನು ಕಂಡು ಇದು ಆಕೆಯ ಕ್ರೀಡಾಸ್ಥಳವಾಗಿದೆ. ಇಲ್ಲಿ ನಾವು ಕ್ರೀಡಿಸುತ್ತಿದ್ದೆವು ಎಂದು ಸ್ಮರಿಸಿ ರೋಮಾಂಚಿತನಾಗಿ ದುಃಖಿತನಾದನು.॥20॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತೆಂಟನೆಯ ಸರ್ಗ ಸಂಪೂರ್ಣವಾಯಿತು.॥58॥