०५७ रामेण दुर्निमित्तदर्शनम्

वाचनम्
ಭಾಗಸೂಚನಾ

ಶ್ರೀರಾಮನು ಮಾರೀಚನನ್ನು ಕೊಂದು ಹಿಂದಿರುಗಿ ಬರುವಾಗ ಆಗುತ್ತಿದ್ದ ಅಪಶಕುನಗಳನ್ನು ನೋಡಿ ಚಿಂತಿಸಿದುದು, ಸೀತೆಯು ಸಂಕಟದಲ್ಲಿ ಸಿಕ್ಕಿರುವಳೆಂದು ಶಂಕಿಸಿದುದು

ಮೂಲಮ್ - 1

ರಾಕ್ಷಸಂ ಮೃಗರೂಪೇಣ ಚರಂತ ಕಾಮರೂಪಿಣಮ್ ।
ನಿಹತ್ಯ ರಾಮೋ ಮಾರೀಚಂ ತೂರ್ಣಂ ಪಥಿ ನಿವರ್ತತ ॥

ಅನುವಾದ

ಇತ್ತ ಮೃಗರೂಪದಿಂದ ಸಂಚರಿಸುವ ಕಾಮರೂಪೀ ರಾಕ್ಷಸ ಮಾರೀಚನನ್ನು ವಧಿಸಿ ಶ್ರೀರಾಮಚಂದ್ರನು ಕೂಡಲೇ ಆಶ್ರಮದ ಕಡೆಗೆ ಹಿಂದಿರುಗಿದನು.॥1॥

ಮೂಲಮ್ - 2

ತಸ್ಯ ಸಂತ್ವರಮಾಣಸ್ಯ ದ್ರಷ್ಟುಕಾಮಸ್ಯ ಮೈಥಿಲೀಮ್ ।
ಕ್ರೂರಸ್ವನೋಽಥ ಗೋಮಾಯುರ್ವಿನನಾದಾಸ್ಯ ಪೃಷ್ಠತಃ ॥

ಅನುವಾದ

ಅವನು ಸೀತೆಯನ್ನು ನೋಡಲು ಬೇಗ ಬೇಗನೇ ಬರುತ್ತಿದ್ದನು. ಅಷ್ಟರಲ್ಲಿ ಹಿಂದಿನಿಂದ ಒಂದು ಹೆಣ್ಣು ನರಿಯು ತುಂಬಾ ಕರ್ಕಶವಾಗಿ ಕೂಗಿಕೊಂಡಿತು.॥2॥

ಮೂಲಮ್ - 3

ಸ ತಸ್ಯ ಸ್ವರಮಾಜ್ಞಾಯ ದಾರುಣಂ ರೋಮಹರ್ಷಣಮ್ ।
ಚಿಂತಯಾಮಾಸ ಗೋಮಾಯೋಃ ಸ್ವರೇಣ ಪರಿಶಂಕಿತಃ ॥

ಅನುವಾದ

ಆ ನರಿಯ ಕೂಗಿನಿಂದ ಶ್ರೀರಾಮನು ಮನಸ್ಸಿನಲ್ಲೇ ಸ್ವಲ್ಪ ಶಂಕಿತನಾದನು. ಅದರ ಧ್ವನಿಯು ತುಂಬಾ ಭಯಂಕರವಾಗಿದ್ದು, ರೋಮಾಂಚಕರವಾಗಿತ್ತು. ಇದನ್ನು ಅನುಭವಿಸುತ್ತಾ ಅವನು ಬಹಳ ಚಿಂತೆಗೊಳಗಾದನು.॥3॥

ಮೂಲಮ್ - 4

ಅಶುಭಂ ಬತ ಮನ್ಯೇಽಹಂ ಗೋಮಾಯುರ್ವಾಶ್ಯತೇ ಯಥಾ ।
ಸ್ವಸ್ತಿ ಸ್ಯಾದಪಿ ವೈದೇಹ್ಯಾ ರಾಕ್ಷಸೈರ್ಭಕ್ಷಣಂ ವಿನಾ ॥

ಅನುವಾದ

ಅವನು ಮನಸ್ಸಿನಲ್ಲೇ ಅಂದುಕೊಂಡನು - ಈ ನರಿಯ ಕೂಗಿನಿಂದ ಯಾವುದೋ ಅಶುಭ ಘಟನೆ ಘಟಿಸಿದಂತೆ ನನಗೆ ಅನಿಸುತ್ತಿದೆ. ವಿದೇಹನಂದಿನಿ ಸೀತೆಯು ಕ್ಷೇಮದಿಂದ ಇರುವವಳು ತಾನೇ! ಆಕೆಯನ್ನು ರಾಕ್ಷಸರು ತಿಂದುಹಾಕಿಲ್ಲವಲ್ಲ.॥4॥

ಮೂಲಮ್ - 5

ಮಾರೀಚೇನ ತು ವಿಜ್ಞಾಯ ಸ್ವರಮಾಲಕ್ಷ್ಯ ಮಾಮಕಮ್ ।
ವಿಕ್ರುಷ್ಟಂ ಮೃಗರೂಪೇಣ ಲಕ್ಷ್ಮಣಃ ಶೃಣುಯಾದ್ಯದಿ ॥

ಅನುವಾದ

ಮೃಗರೂಪಧಾರೀ ಮಾರೀಚನು ತಿಳಿದು-ತಿಳಿದು ನನ್ನ ಸ್ವರವನ್ನು ಅನುಕರಣಮಾಡಿ ಆರ್ತನಾದ ಮಾಡಿದುದು, ಲಕ್ಷ್ಮಣನು ಕೇಳಬೇಕೆಂದೇ ಕೂಗಿದುದಾಗಿದೆ.॥5॥

ಮೂಲಮ್ - 6

ಸ ಸೌಮಿತ್ರಿಃ ಸ್ವರಂ ಶ್ರುತ್ವಾ ತಾಂ ಚ ಹಿತ್ವಾಥ ಮೈಥಿಲೀಮ್ ।
ತಯೈವ ಪ್ರಹಿತಃ ಕ್ಷಿಪ್ರಂ ಮತ್ಸಕಾಶಮಿಹೈಷ್ಯತಿ ॥

ಅನುವಾದ

ಸುಮಿತ್ರಾನಂದನ ಲಕ್ಷ್ಮಣನು ಆ ದನಿಯನ್ನು ಕೇಳುತ್ತಲೇ, ಸೀತೆಯು ಕಳಿಸಿದಾಗ ಆಕೆಯನ್ನು ಒಬ್ಬೊಂಟಿಗಳಾಗಿ ಬಿಟ್ಟು ಕೂಡಲೇ ನನ್ನ ಬಳಿಗೆ ಬರಲು ಹೊರಟಿರಬಹುದು.॥6॥

ಮೂಲಮ್ - 7

ರಾಕ್ಷಸೈಃ ಸಹಿತೈರ್ನೂನಂ ಸೀತಾಯಾ ಈಪ್ಸಿತೋ ವಧಃ ।
ಕಾಂಚನಶ್ಚ ಮೃಗೋ ಭೂತ್ವಾ ವ್ಯಪನೀಯಾಶ್ರಮಾತ್ತು ಮಾಮ್ ॥

ಮೂಲಮ್ - 8

ದೂರಂ ನೀತ್ವಾ ಥ ಮಾರೀಚೋ ರಾಕ್ಷಸೋಽಭೂಚ್ಛರಾಹತಃ ।
ಹಾ ಲಕ್ಷ್ಮಣ ಹತೋಽಸ್ಮೀತಿ ಯದ್ವಾಕ್ಯಂ ವ್ಯಾಜಹಾರ ಹ ॥

ಅನುವಾದ

ರಾಕ್ಷಸರೆಲ್ಲರೂ ಸೇರಿ ಸೀತೆಯನ್ನು ವಧಿಸಲು ಅವಶ್ಯವಾಗಿ ಬಯಸುತ್ತಿರುವರು. ಇದೇ ಉದ್ದೇಶದಿಂದ ಈ ಮಾರೀಚನು ಮೃಗವಾಗಿ ನನ್ನನ್ನು ಆಶ್ರಮದಿಂದ ದೂರಕ್ಕೆ ಕರೆದುಕೊಂಡು ಬಂದಿದ್ದನು. ನನ್ನ ಬಾಣದಿಂದ ಗಾಯಗೊಂಡಾಗ ‘ಹಾ! ಲಕ್ಷ್ಮಣಾ! ನಾನು ಸತ್ತೆ’ ಎಂದು ಮಾಡಿದ ಆರ್ತನಾದದಲ್ಲಿಯೂ ಇದೇ ಉದ್ದೇಶ ಆಡಗಿದೆ.॥7-8॥

ಮೂಲಮ್ - 9

ಅಪಿ ಸ್ವಸ್ತಿ ಭವೇದ್ದ್ವಾಭ್ಯಾಂ ರಹಿತಾಭ್ಯಾಂ ಮಯಾ ವನೇ ।
ಜನಸ್ಥಾನನಿಮಿತ್ತಂ ಹಿ ಕೃತವೈರೋಽಸ್ಮಿ ರಾಕ್ಷಸೈಃ ॥

ಅನುವಾದ

ಅರಣ್ಯದಲ್ಲಿ ನಾವಿಬ್ಬರೂ ಆಶ್ರಮದಿಂದ ಹೊರಗುಳಿಯುವಾಗ ಸೀತೆಯು ಕ್ಷೇಮದಿಂದ ಅಲ್ಲಿರಲು ಸಾಧ್ಯವಿದೆಯೇ? ಜನಸ್ಥಾನದಲ್ಲಿ ಆದ ರಾಕ್ಷಸರ ವಧೆಯಿಂದ ರಾಕ್ಷಸರು ನನ್ನೊಂದಿಗೆ ವೈರಕಟ್ಟಿಕೊಂಡಿರುವರು.॥9॥

ಮೂಲಮ್ - 10½

ನಿಮಿತ್ತಾನಿ ಚ ಘೋರಾಣಿ ದೃಶ್ಯಂತೇಽದ್ಯ ಬಹೂನಿ ಚ ।
ಇತ್ಯೇವಂ ಚಿನ್ತಯನ್ ರಾಮಃ ಶ್ರುತ್ವಾ ಗೋಮಾಯುನಿಃಸ್ವನಮ್ ॥
ನಿವರ್ತಮಾನಸ್ತ್ವರಿತೋ ಜಗಾಮಾಶ್ರಮಮಾತ್ಮವಾನ್ ।

ಅನುವಾದ

ಇಂದು ಅನೇಕ ಭಯಂಕರ ಅಪಶಕುನಗಳು ಕಂಡುಬರುತ್ತಿವೆ. ನರಿಯ ಕೂಗನ್ನು ಕೇಳಿ ಈ ಪ್ರಕಾರ ಚಿಂತಿಸುತ್ತಿದ್ದ ಮನಸ್ಸನ್ನು ವಶದಲ್ಲಿರಿಸಿಕೊಂಡ ಶ್ರೀರಾಮನು ಕೂಡಲೇ ಮರಳಿ ಆಶ್ರಮದ ಕಡೆಗೆ ನಡೆದನು.॥10½॥

ಮೂಲಮ್ - 11½

ಆತ್ಮನಶ್ಚಾಪನಯನಂ ಮೃಗರೂಪೇಣ ರಕ್ಷಸಾ ॥
ಆಜಗಾಮ ಜನಸ್ಥಾನಂ ರಾಘವಃ ಪರಿಶಂಕಿತಃ ।

ಅನುವಾದ

ಮೃಗರೂಪಧಾರೀ ರಾಕ್ಷಸನಿಂದ ತನ್ನನ್ನು ಆಶ್ರಮದಿಂದ ದೂರ ಒಯ್ಯುವ ಘಟನೆಯ ಕುರಿತು ವಿಚಾರಮಾಡುತ್ತಾ ಶ್ರೀರಾಮನು ಶಂಕಿತ ಹೃದಯದಿಂದ ಜನಸ್ಥಾನಕ್ಕೆ ಬಂದನು.॥11½॥

ಮೂಲಮ್ - 12½

ತಂ ದೀನಮನಸಂ ದೀನಮಾಸೇದುರ್ಮೃಗಪಕ್ಷಿಣಃ ॥
ಸವ್ಯಂ ಕೃತ್ವಾ ಮಹಾತ್ಮಾನಂ ಘೋರಾಂಶ್ಚ ಸಸೃಜುಃ ಸ್ವರಾನ್ ।

ಅನುವಾದ

ಅವನ ಮನಸ್ಸು ಬಹಳ ದುಃಖಿತವಾಗಿತ್ತು. ದೀನಸ್ಥಿತಿಯ ಅವಸ್ಥೆಯಲ್ಲಿ ಕಾಡಿನ ಮೃಗಗಳು ಪಕ್ಷಿಗಳು ಶ್ರೀರಾಮನಿಗೆ ಅಪ್ರದಕ್ಷಿಣೆಯಾಗಿ ಬಳಸಿಕೊಂಡು ಭಯಂಕರವಾಗಿ ಕೂಗುತ್ತಾ ಹೋಗುತ್ತಿದ್ದವು.॥12½॥

ಮೂಲಮ್ - 13

ತಾನಿ ದೃಷ್ಟ್ವಾ ನಿಮಿತ್ತಾನಿ ಮಹಾಘೋರಾಣಿ ರಾಘವಃ ।
ನ್ಯವರ್ತತಾಥ ತ್ವರಿತೋ ಜವೇನಾಶ್ರಮಮಾತ್ಮನಃ ॥

ಅನುವಾದ

ಆ ಮಹಾ ಭಯಂಕರ ಅಪಶಕುನಗಳನ್ನು ನೋಡಿ ಶ್ರೀರಾಮನು ಕೂಡಲೇ ವೇಗವಾಗಿ ತನ್ನ ಆಶ್ರಮದ ಕಡೆಗೆ ಮರಳಿದನು.॥13॥

ಮೂಲಮ್ - 14

ತತೋ ಲಕ್ಷ್ಮಣಮಾಯಾಂತ ದದರ್ಶ ವಿಗತಪ್ರಭಮ್ ।
ತತೋಽವಿದೂರೇ ರಾಮೇಣ ಸಮೀಯಾಯ ಸ ಲಕ್ಷ್ಮಣಃ ॥

ಅನುವಾದ

ಅಷ್ಟರಲ್ಲಿ ಲಕ್ಷ್ಮಣನು ಬರುತ್ತಿರುವುದು ಕಾಣಿಸಿತು. ಅವನ ಮುಖವು ಬಾಡಿತ್ತು. ಕೂಡಲೇ ಹತ್ತಿರ ಬಂದ ಲಕ್ಷ್ಮಣನು ಶ್ರೀರಾಮಚಂದ್ರನಲ್ಲಿ ಹೇಳಿದನು .॥14॥

ಮೂಲಮ್ - 15½

ವಿಷಣ್ಣಃ ಸನ್ವಿಷಣ್ಣೇನ ದುಃಖಿತೋ ದುಃಖಭಾಗಿನಾ ।
ಸಜಗರ್ಹೇಽಥ ತಂ ಭ್ರಾತಾ ದೃಷ್ಟ್ವಾ ಲಕ್ಷ್ಮಣಮಾಗತಮ್ ॥
ವಿಹಾಯ ಸೀತಾಂ ವಿಜನೇ ವನೇ ರಾಕ್ಷಸಸೇವಿತೇ ।

ಅನುವಾದ

ದುಃಖ ಮತ್ತು ವಿಷಾದದಲ್ಲಿ ಮುಳುಗಿದ ಲಕ್ಷ್ಮಣನು ದುಃಖಿಯಾಗಿಯೇ ಶ್ರೀರಾಮನಿಗೆ ಭೆಟ್ಟಿಯಾದನು. ಆಗ ರಾಕ್ಷಸರಿಂದ ತುಂಬಿದ ನಿರ್ಜನವನದಲ್ಲಿ ಸೀತೆಯನ್ನು ಒಬ್ಬಂಟಿಗಳಾಗಿ ಬಿಟ್ಟು ಬಂದಿರುವ ಲಕ್ಷ್ಮಣನನ್ನು ನೋಡಿ ರಾಮನು ಅವನನ್ನು ನಿಂದಿಸಿದನು.॥15½॥

ಮೂಲಮ್ - 16½

ಗೃಹೀತ್ವಾ ಚ ಕರಂ ಸವ್ಯಂ ಲಕ್ಷ್ಮಣಂ ರಘುನಂದನಃ ॥
ಉವಾಚ ಮಧುರೋದರ್ಕಮಿದಂ ಪರುಷಮಾರ್ತವತ್ ।

ಅನುವಾದ

ಲಕ್ಷ್ಮಣನ ಬಲಕೈಯನ್ನು ಹಿಡಿದುಕೊಂಡು ರಘುನಂದನನು ಆರ್ತನಂತಾದನು ಹಾಗೂ ಮೊದಲಿಗೆ ಕಠೋರವಾಗಿ ಕೊನೆಗೆ ಮಧುರವಾಗಿ ಈ ಪ್ರಕಾರ ಹೇಳಿದನು.॥16½॥

ಮೂಲಮ್ - 17½

ಅಹೋ ಲಕ್ಷ್ಮಣ ಗರ್ಹ್ಯಂ ತೇ ಕೃತಂ ಯತ್ವಂ ವಿಹಾಯತಾಮ್ ॥
ಸೀತಾಮಿಹಾಗತಃ ಸೌಮ್ಯ ಕಚ್ಚಿತ್ ಸ್ವಸ್ತಿ ಭವೇದಿತಿ ।

ಅನುವಾದ

ಎಲೈ! ಸೌಮ್ಯ ಲಕ್ಷ್ಮಣ! ಸೀತೆಯನ್ನು ಒಬ್ಬಂಟಿಗಳಾಗಿ ಬಿಟ್ಟು ಬಂದುದು ನೀನು ಮಾಡಿದ್ದು ಸರಿಯಲ್ಲ. ಏನು ಸೀತೆಯು ಅಲ್ಲಿ ಕ್ಷೇಮದಿಂದ ಇರುವಳೆ.॥17½॥

ಮೂಲಮ್ - 18½

ನ ಮೇಽಸ್ತಿ ಸಂಶಯೋ ವೀರ ಸರ್ವಥಾಜನಕಾತ್ಮಜಾ ॥
ವಿನಷ್ಟಾ ಭಕ್ಷಿತಾ ವಾಪಿ ರಾಕ್ಷಸೈರ್ವನಚಾರಿಭಿಃ ।

ಅನುವಾದ

ವೀರನೇ! ಕಾಡಿನಲ್ಲಿ ಸಂಚರಿಸುವ ರಾಕ್ಷಸರು ಜಾನಕಿಯನ್ನು ಒಂದೋ ಸರ್ವಥಾ ನಾಶಮಾಡಿಬಿಟ್ಟಿರಬಹುದು, ಇಲ್ಲವೇ ತಿಂದು ಹಾಕಿರಬಹುದು, ಇದರಲ್ಲಿ ನನಗೆ ಸಂದೇಹವೇ ಇಲ್ಲ.॥18½॥

ಮೂಲಮ್ - 19

ಅಶುಭಾನ್ಯೇವ ಭೂಯಿಷ್ಠಂ ಯಥಾ ಪ್ರಾದುರ್ಭವಂತಿ ಮೇ ॥

ಮೂಲಮ್ - 20

ಅಪಿ ಲಕ್ಷ್ಮಣ ಸೀತಾಯಾಃ ಸಾಮಗ್ರ್ಯಂ ಪ್ರಾಪ್ನುಯಾವಹೇ ।
ಜೀವಂತ್ಯಾಃ ಪುರುಷವ್ಯಾಘ್ರ ಸುತಾಯಾ ಜನಕಸ್ಯ ವೈ॥

ಅನುವಾದ

ಏಕೆಂದರೆ ನನ್ನ ಸುತ್ತಲೂ ಅನೇಕ ಅಪಶಕುನಗಳು ಆಗುತ್ತಿವೆ. ಪುರುಷಸಿಂಹ ಲಕ್ಷ್ಮಣ! ನಾವು ಜೀವಂತಳಾಗಿರುವ ಜನಕನಂದಿನೀ ಸೀತೆಯನ್ನು ಪೂರ್ಣಕ್ಷೇಮವಾಗಿ ಪಡೆಯಬಹುದೇ.॥19-20॥

ಮೂಲಮ್ - 21

ಯಥಾ ವೈ ಮೃಗಸಂಘಾಶ್ಚ ಗೋಮಾಯುಶ್ಚೈವ ಭೈರವಮ್ ।
ವಾಶ್ಯಂತೇ ಶಕುನಾಶ್ಚಾಪಿ ಪ್ರದೀಪ್ತಾಮಭಿತೋ ದಿಶಮ್ ॥
ಅಪಿ ಸ್ವಸ್ತಿ ಭವೇತ್ತಸ್ಯಾ ರಾಜಪುತ್ರ್ಯಾಮಹಾಬಲ ।

ಅನುವಾದ

ಮಹಾಬಲಿ ಲಕ್ಷ್ಮಣ! ಈ ಜಿಂಕೆಗಳ ಗುಂಪು ಅಪ್ರದಕ್ಷಿಣೆ ಬಂದು ಅಮಂಗಳವನ್ನು ಸೂಚಿಸುತ್ತಿದೆ. ಗೂಬೆಗಳು ಭೈರವನಾದ ಮಾಡುತ್ತಿವೆ. ಉರಿಯುತ್ತಿರುವಂತೆ ಇರುವ ಎಲ್ಲ ದಿಕ್ಕುಗಳಲ್ಲಿ ಪಕ್ಷಿಗಳು ಕರ್ಕಶವಾಗಿ ಕೂಗುತ್ತಿವೆ. ಇವೆಲ್ಲವುಗಳಿಂದ ರಾಜಕುಮಾರಿ ಸೀತೆಯು ಕ್ಷೇಮದಿಂದ ಇರುವ ಕುರಿತು ಅನುಮಾನವಾಗುತ್ತಿದೆ.॥21॥

ಮೂಲಮ್ - 22

ಇದಂ ಹಿ ರಕ್ಷೋ ಮೃಗಸಂನಿಕಾಶಂ
ಪ್ರಲೋಭ್ಯ ಮಾಂ ದೂರಮನುಪ್ರಯಾತಮ್ ।
ಹತಂ ಕಥಂಚಿನ್ಮಹತಾ ಶ್ರಮೇಣ
ಸ ರಾಕ್ಷಸೋಭೂನ್ಮ್ರಿಯಮಾಣ ಏವ ॥

ಅನುವಾದ

ಈ ರಾಕ್ಷಸನು ಮೃಗದಂತೆ ರೂಪಧರಿಸಿ ನನ್ನನ್ನು ಮರಳುಗೊಳಿಸಿ ದೂರಕ್ಕೆ ಕೊಂಡುಹೋಗಿದ್ದನು. ಮಹಾ ಪರಿಶ್ರಮ ಮಾಡಿ ನಾನು ಅವನನ್ನು ಹೇಗೋ ಕೊಂದಾಗ, ಸಾಯುವಾಗ ಅವನು ರಾಕ್ಷಸನಾದನು.॥22॥

ಮೂಲಮ್ - 23

ಮನಶ್ಚ ಮೇ ದೀನಮಿಹಾಪ್ರಹೃಷ್ಟಂ
ಚಕ್ಷುಶ್ಚ ಸವ್ಯಂ ಕುರುತೇ ವಿಕಾರಮ್ ।
ಅಸಂಶಯಂ ಲಕ್ಷ್ಮಣ ನಾಸ್ತಿ ಸೀತಾ
ಹೃತಾ ಮೃತಾ ವಾ ಪಥಿ ವರ್ತತೇ ವಾ ॥

ಅನುವಾದ

ಲಕ್ಷ್ಮಣ! ಆದ್ದರಿಂದ ನನ್ನ ಮನಸ್ಸು ಅತ್ಯಂತ ದೀನ ಮತ್ತು ಬೇಸರಗೊಂಡಿದೆ. ನನ್ನ ಎಡಕಣ್ಣು ಹಾರುತ್ತಾ ಇದೆ. ಇದರಿಂದ ಖಂಡಿತವಾಗಿ ಆಶ್ರಮದಲ್ಲಿ ಸೀತೆ ಇಲ್ಲ ಎಂಬುದು ಗೊತ್ತಾಗುತ್ತದೆ. ಆಕೆಯನ್ನು ಯಾರಾದರೂ ಕದ್ದುಕೊಂಡು ಹೋಗಿರುವನೋ, ಇಲ್ಲವೇ ಸತ್ತು ಹೋಗಿರುವಳೋ ಅಥವಾ ರಾಕ್ಷಸನೊಂದಿಗೆ ದಾರಿಯಲ್ಲಿ ಇರುವಳೋ.॥23॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತೇಳನೆಯ ಸರ್ಗ ಸಂಪೂರ್ಣವಾಯಿತು.॥57॥