वाचनम्
ಟಿಪ್ಪನೀ
*ಈ ಸರ್ಗವು ಪ್ರಸಂಗಕ್ಕೆ ಅನುಕೂಲ ಮತ್ತು ಉತ್ತಮವಾಗಿದೆ. ಕೆಲವು ಪ್ರತಿಗಳಲ್ಲಿ ಇದು ಅನುವಾದ ಸಹಿತ ಪ್ರಕಾಶಿತವೂ ಆಗಿದೆ. ಆದರೆ ಇದರ ಮೇಲೆ ತಿಲಕಾದಿ ಸಂಸ್ಕೃತ ಟೀಕೆಗಳು ಉಪಲಬ್ಧವಿಲ್ಲ. ಅದಕ್ಕಾಗಿ ಕೆಲವರು ಇದನ್ನು ಪ್ರಕ್ಷಿಪ್ತವೆಂದು ತಿಳಿದಿರುವರು. ಉಪಯೋಗಿಯಾದ್ದರಿಂದ ಇದನ್ನು ಇಲ್ಲಿ ಅನುವಾದ ಸಹಿತ ಪ್ರಕಾಶಿಸಲಾಗಿದೆ.
ಭಾಗಸೂಚನಾ
ಬ್ರಹ್ಮದೇವರ ಆಜ್ಞೆಯಂತೆ ಇಂದ್ರನು ನಿದ್ರಾದೇವಿಯೊಂದಿಗೆ ಆಶೋಕವನಕ್ಕೆ ಹೋಗಿ ಸೀತಾದೇವಿಗೆ ದಿವ್ಯಪಾಯಸವನ್ನು ಕೊಟ್ಟು ಆಕೆಯಿಂದ ಬೀಳ್ಕೊಂಡು ಹಿಂದಿರುಗಿದುದು
ಮೂಲಮ್ - 1
ಪ್ರವೇಶಿತಾಯಾಂ ಸೀತಾಯಾಂ ಲಂಕಾಂ ಪ್ರತಿ ಪಿತಾಮಹಃ ।
ತದಾ ಪ್ರೋವಾಚ ದೇವೇಂದ್ರಂ ಪರಿತುಷ್ಟಂ ಶತಕ್ರತುಮ್ ॥
ಅನುವಾದ
ಸೀತೆಯು ಲಂಕೆಯನ್ನು ಪ್ರವೇಶಿಸಿದಾಗ ಪಿತಾಮಹ ಬ್ರಹ್ಮದೇವರಿಗೆ ಸಂತೋಷವಾಗಿ ದೇವೇಂದ್ರನಲ್ಲಿ ಹೀಗೆ ಹೇಳಿದರು.॥1॥
ಮೂಲಮ್ - 2
ತ್ರೈಲೋಕ್ಯಸ್ಯ ಹಿತಾರ್ಥಾಯ ರಕ್ಷಸಾಮಹಿತಾಯ ಚ ।
ಲಂಕಾಂ ಪ್ರವೇಶಿತಾ ಸೀತಾ ರಾವಣೇನ ದುರಾತ್ಮನಾ ॥
ಅನುವಾದ
ದೇವೇಂದ್ರನೇ! ಮೂರು ಲೋಕಗಳ ಹಿತ ಮತ್ತು ರಾಕ್ಷಸರ ವಿನಾಶಕ್ಕಾಗಿ ದುರಾತ್ಮನಾದ ರಾವಣನು ಸೀತೆಯನ್ನು ಲಂಕೆಗೆ ಕೊಂಡು ಹೋದನು.॥2॥
ಮೂಲಮ್ - 3½
ಪತಿವ್ರತಾ ಮಹಾಭಾಗಾ ನಿತ್ಯಂ ಚೈವ ಸುಖೈಧಿತಾ ।
ಅಪಶ್ಯಂತೀ ಚ ಭರ್ತಾರಂ ಪಶ್ಯಂತೀ ರಾಕ್ಷಸೀಜನಮ್ ॥
ರಾಕ್ಷಸೀಭಿಃ ಪರಿವೃತಾ ಭರ್ತೃದರ್ಶನಲಾಲಸಾ ।
ಅನುವಾದ
ಪತಿವ್ರತೆ ಮಹಾಭಾಗಾ ಜಾನಕಿಯು ಸದಾ ಸುಖದಲ್ಲೇ ಬೆಳೆದವಳು. ಈಗ ಅವಳು ತನ್ನ ಪತಿಯ ದರ್ಶನದಿಂದ ವಂಚಿತಳಾಗಿರುವಳು. ರಾಕ್ಷಸಿಯರಿಂದ ಸುತ್ತುವರಿದು ಇರುವುದರಿಂದ ಸದಾ ಅವರನ್ನೇ ಎದುರಿಗೆ ನೋಡುತ್ತಾ ಇರುವಳು. ಆಕೆಯ ಹೃದಯದಲ್ಲಿ ಪತಿದರ್ಶನಕ್ಕಾಗಿ ತೀವ್ರಲಾಲಸೆ ಇದೆ.॥3½॥
ಮೂಲಮ್ - 4½
ನಿವಿಷ್ಟಾ ಹಿ ಪುರೀ ಲಂಕಾ ತೀರೇ ನದನದೀಪತೇಃ ॥
ಕಥಂ ಜ್ಞಾಸ್ಯತಿ ತಾಂ ರಾಮಸ್ತತ್ರಸ್ಥಾಂ ತಾಮನಿಂದಿತಾಮ್ ।
ಅನುವಾದ
ಲಂಕಾಪುರಿಯು ಸಮುದ್ರತೀರದಲ್ಲಿ ನೆಲೆಸಿದೆ. ಅಲ್ಲಿರುವ ಸತೀ-ಸಾಧ್ವೀ ಸೀತೆಯ ಸುಳಿವು ಶ್ರೀರಾಮಚಂದ್ರನಿಗೆ ಹೇಗೆ ತಿಳಿಯುವುದು.॥4½॥
ಮೂಲಮ್ - 5
ದುಃಖಂ ಸಂಚಿಂತಯಂತೀ ಸಾ ಬಹುಶಃ ಪರಿದುರ್ಲಭಾ ॥
ಮೂಲಮ್ - 6
ಪ್ರಾಣಯಾತ್ರಾಮಕುರ್ವಾಣಾ ಪ್ರಾಣಾಂಸ್ತ್ಯಕ್ಷ್ಯತ್ಯ ಸಂಶಯಮ್ ।
ಸ ಭೂಯಃ ಸಂಶಯೋ ಜಾತಃ ಸೀತಾಯಾಃ ಪ್ರಾಣಸಂಕ್ಷಯೇ ॥
ಅನುವಾದ
ಸೀತೆಯು ದುಃಖದೊಂದಿಗೆ ನಾನಾ ಪ್ರಕಾರದ ಚಿಂತೆಗಳಲ್ಲಿ ಮುಳುಗಿರುವಳು. ಪತಿಗಾಗಿ ಈಗ ಅವಳು ಅತ್ಯಂತ ದುರ್ಲಭವಾಗಿರುವಳು. ಭೋಜನವನ್ನು ಮಾಡುವುದಿಲ್ಲ. ಆದ್ದರಿಂದ ಇಂತಹ ಸ್ಥಿತಿಯಲ್ಲಿ ಖಂಡಿತವಾಗಿ ಅವಳು ಪ್ರಾಣವನ್ನು ತ್ಯಜಿಸುವಳು. ಸೀತೆಯ ಪ್ರಾಣಕ್ಷಯವಾದರೆ ನಮ್ಮ ಉದ್ದೇಶದ ಸಿದ್ಧಿಯಲ್ಲಿ ಪುನಃ ಹಿಂದಿನಂತೆ ಸಂದೇಹ ಉಪಸ್ಥಿತವಾದೀತು.॥5-6॥
ಮೂಲಮ್ - 7
ಸ ತ್ವಂ ಶೀಘ್ರಮಿತೋ ಗತ್ವಾ ಸೀತಾಂ ಪಶ್ಯ ಶುಭಾನನಾಮ್ ।
ಪ್ರವಿಶ್ಯ ನಗರೀಂ ಲಂಕಾಂ ಪ್ರಯಚ್ಛ ಹವಿರುತ್ತಮಮ್ ॥
ಅನುವಾದ
ಆದ್ದರಿಂದ ನೀನು ಶೀಘ್ರವಾಗಿ ಇಲ್ಲಿಂದ ಹೋಗಿ ಲಂಕೆಯನ್ನು ಪ್ರವೇಶಿಸಿ, ಸುಮುಖಿ ಸೀತೆಯನ್ನು ಕಂಡು ಆಕೆಗೆ ಉತ್ತಮ ಹವಿಸ್ಸನ್ನು ಪ್ರಧಾನ ಮಾಡು.॥7॥
ಮೂಲಮ್ - 8
ಏವಮುಕ್ತೋಽಥ ದೇವೇಂದ್ರಃ ಪುರೀಂ ರಾವಣಪಾಲಿತಾಮ್ ।
ಆಗಚ್ಛನ್ನಿದ್ರಯಾ ಸಾರ್ಧಂ ಭಗವಾನ್ ಪಾಕಶಾಸನಃ ॥
ಅನುವಾದ
ಬ್ರಹ್ಮದೇವರು ಹೀಗೆ ಹೇಳಿದಾಗ ಪಾಕಶಾಸನ ಭಗವಾನ್ ಇಂದ್ರನು ನಿದ್ರಾದೇವಿಯನ್ನು ಜೊತೆಗೆ ಕರೆದುಕೊಂಡು ರಾವಣಪಾಲಿತ ಲಂಕೆಗೆ ಬಂದನು.॥8॥
ಮೂಲಮ್ - 9½
ನಿದ್ರಾಂ ಚೋವಾಚ ಗಚ್ಛ ತ್ವಂ ರಾಕ್ಷಸಾನ್ ಸಂಪ್ರಮೋಹಯ ।
ಸಾ ತಥೋಕ್ತಾ ಮಘವತಾದೇವೀ ಪರಮಹರ್ಷಿತಾ ॥
ದೇವಕಾರ್ಯಾರ್ಥಸಿಧ್ಯರ್ಥಂ ಪ್ರಾಮೋಹಯತ ರಾಕ್ಷಸಾನ್ ।
ಅನುವಾದ
ಅಲ್ಲಿಗೆ ಬಂದು ನಿದ್ರಾದೇವಿಗೆ - ‘ನೀನು ರಾಕ್ಷಸರನ್ನು ಮೋಹಿತಗೊಳಿಸು’ ಎಂದು ಇಂದ್ರನಿಂದ ಆಜ್ಞಪ್ತಳಾಗಿ ನಿದ್ರಾದೇವಿಗೆ ಬಹಳ ಸಂತೋಷವಾಯಿತು. ದೇವತೆಗಳ ಕಾರ್ಯವನ್ನು ಸಿದ್ಧಿ ಗೊಳಿಸಲು ಆಕೆಯು ರಾಕ್ಷಸರನ್ನು ಮೋಹ (ನಿದ್ದೆ)ಯಲ್ಲಿ ಕೆಡವಿದಳು.॥9½॥
ಮೂಲಮ್ - 10½
ಏತಸ್ಮಿನ್ನಂತರೇ ದೇವಃ ಸಹಸ್ರಾಕ್ಷಃ ಶಚೀಪತಿಃ ॥
ಆಸಸಾದ ವನಸ್ಥಾಂ ತಾಂ ವಚನಂ ಚೇದಮಬ್ರವೀತ್ ।
ಅನುವಾದ
ಇಷ್ಟರಲ್ಲಿ ಸಹಸ್ರಾಕ್ಷ ಶಚೀಪತಿ ದೇವೇಂದ್ರನು ಅಶೋಕವನದಲ್ಲಿ ಕುಳಿತಿರುವ ಸಿತೆಯ ಬಳಿಗೆ ಹೋಗಿ ಈ ಪ್ರಕಾರ ಹೇಳಿದನು.॥10½॥
ಮೂಲಮ್ - 11
ದೇವರಾಜೋಽಸ್ಮಿ ಭದ್ರಂ ತೇ ಇಹ ಚಾಸ್ಮಿ ಶುಚಿಸ್ಮಿತೇ ॥
ಮೂಲಮ್ - 12
ಅಹಂ ತ್ವಾಂ ಕಾರ್ಯಸಿಧ್ಯರ್ಥಂ ರಾಘವಸ್ಯ ಮಹಾತ್ಮನಃ ।
ಸಾಹಾಯ್ಯಂ ಕಲ್ಪಯಿಷ್ಯಾಮಿ ಮಾ ಶುಚೋ ಜನಕಾತ್ಮಜೇ ॥
ಅನುವಾದ
ಪವಿತ್ರಮುಗುಳ್ನಗೆಯುಳ್ಳ ದೇವಿ! ನಿನಗೆ ಮಂಗಳವಾಗಲಿ. ದೇವರಾಜನಾದ ಇಂದ್ರನಾದ ನಾನು ನಿಮ್ಮ ಬಳಿಗೆ ಬಂದಿರುವೆನು. ಜಾನಕಿ! ನಿಮ್ಮ ಉದ್ಧಾರದ ಕಾರ್ಯಕ್ಕಾಗಿ ಮಹಾತ್ಮಾ ಶ್ರೀರಘುನಾಥನಿಗೆ ಸಹಾಯ ಮಾಡುವೆನು. ಆದ್ದರಿಂದ ನೀವು ಶೋಕಿಸಬೇಡಿ.॥11-12॥
ಮೂಲಮ್ - 13
ಮತ್ಪ್ರಸಾದಾತ್ಸಮುದ್ರಂ ಸ ತರಿಷ್ಯತಿ ಬಲೈಃ ಸಹ ।
ಮಯೈವೇಹ ಚ ರಾಕ್ಷಸ್ಯೋ ಮಾಯಯಾ ಮೋಹಿತಾಃ ಶುಭೇ ॥
ಅನುವಾದ
ಅವನು ನನ್ನ ಪ್ರಸಾದದಿಂದ ದೊಡ್ಡ ಸೈನ್ಯದೊಂದಿಗೆ ಸಮುದ್ರವನ್ನು ದಾಟುವನು. ನಾನೇ ಇಲ್ಲಿ ಈ ರಾಕ್ಷಸಿಯರನ್ನು ಮೋಹಿತಗೊಳಿಸಿರುವೆನು.॥13॥
ಮೂಲಮ್ - 14
ತಸ್ಮಾದನ್ನಮಿದಂ ಸೀತೇ ಹವಿಷ್ಯಾನ್ನಮಹಂ ಸ್ವಯಮ್ ।
ಸ ತ್ವಾಂ ಸಂಗೃಹ್ಯ ವೈದೇಹಿ ಆಗತಃ ಸಹ ನಿದ್ರಯಾ ॥
ಅನುವಾದ
ವೈದೇಹಿ! ಅದಕ್ಕಾಗಿ ನಾನೇ ಸ್ವತಃ ಈ ಭೊಜನ-ಹವಿಷ್ಯಾನ್ನವನ್ನು ತೆಗೆದುಕೊಂಡು ನಿದ್ರಾದೇವಿಯೊಂದಿಗೆ ನಿಮ್ಮ ಬಳಿಗೆ ಬಂದಿರುವೆನು.॥14॥
ಮೂಲಮ್ - 15
ಏತದತ್ಸ್ಯಸಿ ಮದ್ಧಸ್ತಾನ್ನ ತ್ವಾಂ ಬಾಧಿಷ್ಯತೇ ಶುಭೇ ।
ಕ್ಷುಧಾ ತೃಷಾ ಚ ರಂಭೋರು ವರ್ಷಾಣಾಮಯುತೈರಪಿ ॥
ಅನುವಾದ
ಸುಂದರಿಯೇ! ನನ್ನ ಕೈಯಿಂದ ಈ ಹವಿಷ್ಯವನ್ನು ಸ್ವೀಕರಿಸಿ ಭಕ್ಷಿಸಿದರೆ ನಿಮಗೆ ಸಾವಿರಾರು ವರ್ಷಗಳವರೆಗೆ ಹಸಿವು-ಬಾಯಾರಿಕೆ ಸತಾಯಿಸಲಾರದು.॥15॥
ಮೂಲಮ್ - 16
ಏವಮುಕ್ತಾ ತು ದೇವೇಂದ್ರಮುವಾಚ ಪರಿಶಂಕಿತಾ ।
ಕಥಂ ಜಾನಾಮಿ ದೇವೇಂದ್ರಂ ತ್ವಾಮಿಹಸ್ಥಂ ಶಚೀಪತಿಮ್ ॥
ಅನುವಾದ
ದೇವೇಂದ್ರನು ಹೀಗೆ ಹೇಳಿದಾಗ ಶಂಕಿತಳಾದ ಸೀತೆಯು ಅವನಲ್ಲಿ ಕೇಳಿದಳು- ನೀನು ಶಚೀಪತಿ ದೇವರಾಜ ಇಂದ್ರನೇ ಆಗಮಿಸಿರುವುದು ಎಂದು ನಾನು ಹೇಗೆ ವಿಶ್ವಾಸವಿಡಲಿ.॥16॥
ಮೂಲಮ್ - 17
ದೇವಲಿಂಗಾನಿ ದೃಷ್ಟಾನಿ ರಾಮಲಕ್ಷ್ಮಣಸಂನಿಧೌ ।
ತಾನಿ ದರ್ಶಯ ದೇವೇಂದ್ರ ಯದಿ ತ್ವಂ ದೇವರಾಟ್ ಸ್ವಯಮ್ ॥
ಅನುವಾದ
ದೇವೇಂದ್ರ! ನಾನು ಶ್ರೀರಾಮ-ಲಕ್ಷ್ಮಣರ ಸಮೀಪ ದೇವತೆಗಳ ಲಕ್ಷಣಗಳನ್ನು ಕಣ್ಣಾರೆ ಕಂಡಿರುವೆನು. ನೀನು ಸಾಕ್ಷಾತ್ ದೇವರಾಜ ನಾಗಿದ್ದರೆ ಆ ಲಕ್ಷಣಗಳನ್ನು ತೋರಿಸು.॥17॥
ಮೂಲಮ್ - 18
ಸೀತಾಯಾ ವಚನಂ ಶ್ರುತ್ವಾ ತಥಾ ಚಕ್ರೇ ಶಚೀಪತಿಃ ।
ಪೃಥಿವೀಂ ನಾಸ್ಪೃಶತ್ ಪದ್ಭಾಮನಿಮೇಷೇಕ್ಷಣಾನಿ ಚ ॥
ಮೂಲಮ್ - 19
ಅರಜೋಽಂಬರಧಾರೀ ಚ ನಮ್ಲಾನಕುಸುಮಸ್ತಥಾ ।
ತಂ ಜ್ಞಾತ್ವಾ ಲಕ್ಷಣೈಃ ಸೀತಾ ವಾಸವಂ ಪರಿಹರ್ಷಿತಾ ॥
ಅನುವಾದ
ಸೀತೆಯ ಈ ಮಾತನ್ನು ಕೇಳಿ ಇಂದ್ರನು ಹಾಗೆಯೇ ಮಾಡಿದನು. ಅವನು ಕಾಲುಗಳಿಂದ ಪೃಥ್ವಿಯನ್ನು ಸ್ಪರ್ಶಿಸಲಿಲ್ಲ. ಆಕಾಶದಲ್ಲೇ ನಿಂತುಕೊಂಡನು. ಕಣ್ಣುರೆಪ್ಪೆ ಮಿಟುಕಿಸುತ್ತಿರಲಿಲ್ಲ. ಧರಿಸಿದ ವಸ್ತ್ರದ ಮೇಲೆ ಧೂಳು ಮೆತ್ತಿಕೊಳ್ಳುತ್ತಿರಲಿಲ್ಲ. ಕೊರಳಲ್ಲಿ ಧರಿಸಿದ ಹೂವಿನ ಹಾರ ಬಾಡುತ್ತಿರಲಿಲ್ಲ. ದೇವೋಚಿತ ಲಕ್ಷಣಗಳಿಂದ ಇಂದ್ರನನ್ನು ಗುರುತಿಸಿ ಸೀತೆಯು ಬಹಳ ಸಂತಸಪಟ್ಟಳು.॥18-19॥
ಮೂಲಮ್ - 20
ಉವಾಚ ವಾಕ್ಯಂ ರುದತೀ ಭಗವದ್ ರಾಘವಂ ಪ್ರತಿ ।
ಸಹ ಭ್ರಾತ್ರಾ ಮಹಾಬಾಹುರ್ದಿಷ್ಟ್ಯಾಮೇ ಶ್ರುತಿಮಾಗತಃ ॥
ಅನುವಾದ
ಅವಳು ಶ್ರೀರಾಮನಿಗಾಗಿ ಅಳುತ್ತಾ ಹೇಳಿದಳು. ಭಗವನ್! ಇಂದು ಸಹೋದರ ಸಹಿತ ಮಹಾಬಾಹು ಶ್ರೀರಾಮನ ಹೆಸರು ನನ್ನ ಕಿವಿಗೆ ಬಿತ್ತು. ಇದು ಸೌಭಾಗ್ಯದ ಮಾತಾಗಿದೆ.॥20॥
ಮೂಲಮ್ - 21
ಯಥಾ ಮೇ ಶ್ವಶುರೋ ರಾಜಾ ಯಥಾ ಚ ಮಿಥಿಲಾಧಿಪಃ ।
ತಥಾ ತ್ವಾಮದ್ಯ ಪಶ್ಯಾಮಿ ಸನಾಥೋ ಮೇ ಪತಿಸ್ತ್ವಯಾ ॥
ಅನುವಾದ
ನನ್ನ ಮಾವನವರಾದ ದಶರಥ ಮಹಾರಾಜರ ಮತ್ತು ತಂದೆ ಮಿಥಿಲಾಧಿಪ ಜನಕ ಇವರ ರೂಪದಲ್ಲೇ ನಾನು ಇಂದು ನಿನ್ನನ್ನು ನೋಡುತ್ತಿದ್ದೇನೆ. ನನ್ನ ಪತಿಯು ನಿನ್ನಿಂದ ಸನಾಥರಾದರು.॥21॥
ಮೂಲಮ್ - 22
ತವಾಜ್ಞಯಾ ಚ ದೇವೇಂದ್ರ ಪಯೋಭೂತಮಿದಂ ಹವಿಃ ।
ಅಶಿಷ್ಯಾಮಿ ತ್ವಯಾ ದತ್ತಂ ರಘೂಣಾಂ ಕುಲವರ್ಧನಮ್ ॥
ಅನುವಾದ
ದೇವೇಂದ್ರನೇ! ನಿನ್ನ ಆಜ್ಞೆಯಂತೆ ನೀನು ಕೊಡುತ್ತಿರುವ ಹಾಲಿನಿಂದ ಮಾಡಿದ ಪಾಯಸವನ್ನು ತಿನ್ನುವೆನು. ಇದು ರಘುಕುಲವನ್ನು ವೃದ್ಧಿಪಡಿಸುವಂತಾಗಲಿ.॥22॥
ಮೂಲಮ್ - 23
ಇಂದ್ರಹಸ್ತಾದ್ ಗೃಹೀತ್ವಾ ತತ್ ಪಾಯಸಂ ಸಾ ಶುಚಿಸ್ಮಿತಾ ।
ನ್ಯವೇದಯತ ಭರ್ತ್ರೇ ಸಾ ಲಕ್ಷ್ಮಣಾಯ ಚ ಮೈಥಿಲೀ॥
ಅನುವಾದ
ಇಂದ್ರನ ಕೈಯಿಂದ ಆ ಪಾಯಸವನ್ನು ತೆಗೆದುಕೊಂಡು ಶುಚಿಸ್ಮಿತೆಯಾದ ಮೈಥಿಲಿಯು ಮನಸ್ಸಿನಲ್ಲೇ ಮೊದಲಿಗೆ ತನ್ನ ಸ್ವಾಮಿ ಶ್ರೀರಾಮ ಮತ್ತು ಮೈದುನ ಲಕ್ಷ್ಮಣನಿಗೆ ನಿವೇದಿಸಿ, ಈ ಪ್ರಕಾರ ನುಡಿದಳು.॥23॥
ಮೂಲಮ್ - 24
ಯದಿ ಜೀವತಿ ಮೇ ಭರ್ತಾ ಸಹ ಭ್ರಾತ್ರಾ ಮಹಾಬಲಃ ।
ಇದಮಸ್ತು ತಯೋರ್ಭಕ್ತ್ಯಾ ತದಾಶ್ನಾತ್ಪಾಯಸಂ ಸ್ವಯಮ್ ॥
ಅನುವಾದ
ಮಹಾಬಲಿ ನನ್ನ ಸ್ವಾಮಿ ಅನುಜನೊಡನೆ ಜೀವಂತರಾಗಿದ್ದರೆ ಇದು ಭಕ್ತಿಯಿಂದ ಅವರಿಬ್ಬರಿಗೆ ಅರ್ಪಿತವಾಗಿದೆ. ಇಷ್ಟು ಹೇಳಿದ ಬಳಿಕ ಅವಳು ಆ ಪಾಯಸವನ್ನು ಭುಂಜಿಸಿದಳು.॥24॥
ಮೂಲಮ್ - 25
ಇತೀವ ತತ್ಪ್ರಾಶ್ಯ ಹವಿರ್ವರಾನನಾ
ಜಹೌ ಕ್ಷುಧಾದುಃಖಸಮುದ್ಭವಂ ಚ ತಮ್ ।
ಇಂದ್ರಾತ್ ಪ್ರವೃತ್ತಿಮುಪಲಕ್ಷ್ಯ ಜಾನಕೀ
ಕಾಕುತ್ಸ್ಥಯೋಃ ಪ್ರೀತಮನಾ ಬಭೂವ ॥
ಅನುವಾದ
ಹೀಗೆ ಆ ಹವಿಷ್ಯಾನ್ನವನ್ನು ತಿಂದು ಸುಂದರೀ ಜಾನಕಿಯು ಹಸಿವು-ಬಾಯಾರಿಕೆಯ ಕಷ್ಟಗಳನ್ನು ತ್ಯಜಿಸಿದಳು. ಇಂದ್ರನ ಬಾಯಿಯಿಂದ ಶ್ರೀರಾಮ ಲಕ್ಷ್ಮಣರ ಸಮಾಚಾರ ಪಡೆದು ಆ ಜನಕನಂದಿನಿಯು ಮನಸ್ಸಿನಲ್ಲೇ ಬಹಳ ಪ್ರಸನ್ನಳಾದಳು.॥25॥
ಮೂಲಮ್ - 26
ಸ ಚಾಪಿ ಶಕ್ರಸ್ತ್ರಿದಿವಾಲಯಂ ತದಾ
ಪ್ರೀತೋ ಯಯೌ ರಾಘವಕಾರ್ಯಸಿದ್ಧಯೇ ।
ಆಮಂತ್ರ್ಯ ಸೀತಾಂ ಸ ತತೋ ಮಹಾತ್ಮಾ
ಜಗಾಮ ನಿದ್ರಾಸಹಿತಃ ಸ್ವಮಾಲಯಮ್ ॥
ಅನುವಾದ
ಆಗ ನಿದ್ರಾದೇವಿಯೊಂದಿಗೆ ಮಹಾತ್ಮಾ ಇಂದ್ರನೂ ಪ್ರಸನ್ನನಾಗಿ ಸೀತೆಯಿಂದ ಬೀಳ್ಕೊಂಡು ಶ್ರೀರಾಮಚಂದ್ರನ ಕಾರ್ಯದ ಸಿದ್ದಿಗಾಗಿ ತನ್ನ ನಿವಾಸಸ್ಥಾನಕ್ಕೆ ಹೊರಟುಹೋದನು.॥26॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಪ್ರಕ್ಷಿಪ್ತ ಸರ್ಗ ಸಂಪೂರ್ಣವಾಯಿತು. ॥56॥