ಭಾಗಸೂಚನಾ
ಸೀತೆಯು ರಾಮನ ಪರಾಕ್ರಮವನ್ನು ಅವನಲ್ಲಿ ತನಗಿರುವ ಅನನ್ಯವಾದ ಅನುರಾಗವನ್ನೂ ವಿವರಿಸುತ್ತಾ ರಾವಣನನ್ನು ಧಿಕ್ಕರಿಸಿದುದು, ರಾವಣನ ಆಜ್ಞೆಯಂತೆ ರಾಕ್ಷಸಿಯರು ಸೀತೆಯನ್ನು ಅಶೋಕವನಕ್ಕೊಯ್ದು ಭಯಪಡಿಸಿದುದು
ಮೂಲಮ್ - 1
ಸಾ ತಥೋಕ್ತಾ ತು ವೈದೇಹೀ ನಿರ್ಭಯಾಶೋಕಕರ್ಶಿತಾ ।
ತೃಣಮಂತರತಃ ಕೃತ್ವಾ ರಾವಣಂ ಪ್ರತ್ಯಭಾಷತ ॥
ಅನುವಾದ
ರಾವಣನು ಹೀಗೆ ಹೇಳಿದಾಗ ಶೋಕದಿಂದ ಕಷ್ಟಪಡುತ್ತಾ ಸೀತೆಯು ನಡುವಿನಲ್ಲಿ ಹುಲ್ಲಿನ ಕಡ್ಡಿ ಇಟ್ಟು ಆ ನಿಶಾಚರನಲ್ಲಿ ನಿರ್ಭಯಳಾಗಿ ಹೇಳಿದಳು.॥1॥
ಮೂಲಮ್ - 2
ರಾಜಾ ದಶರಥೋ ನಾಮ ಧರ್ಮಸೇತುರಿವಾಚಲಃ ।
ಸತ್ಯಸಂಧಃ ಪರಿಜ್ಞಾತೋ ಯಸ್ಯ ಪುತ್ರಃ ಸ ರಾಘವಃ ॥
ಮೂಲಮ್ - 3
ರಾಮೋ ನಾಮ ಸ ಧರ್ಮಾತ್ಮಾ ತ್ರಿಷು ಲೋಕೇಷು ವಿಶ್ರುತಃ ।
ದೀರ್ಘಬಾಹುರ್ವಿಶಾಲಾಕ್ಷೋ ದೈವತಂ ಸ ಪತಿರ್ಮಮ ॥
ಅನುವಾದ
ದಶರಥ ಮಹಾರಾಜರು ಧರ್ಮದ ಅಚಲ ಸೇತುವಿನಂತೆ ಇದ್ದರು. ಅವರು ತನ್ನ ಸತ್ಯಪ್ರತಿಜ್ಞೆಗಾಗಿ ಎಲ್ಲೆಡೆ ವಿಖ್ಯಾತರಾಗಿದ್ದರು. ಅವರ ಪುತ್ರ ರಘುಕುಲ ಭೂಷಣ ಶ್ರೀರಾಮಚಂದ್ರನೂ ತನ್ನ ಧರ್ಮ ಪರಾಯಣತೆಗಾಗಿ ಮೂರು ಲೋಕಗಳಲ್ಲಿ ಪ್ರಸಿದ್ಧವಾಗಿದ್ದಾನೆ. ಅವನು ದೀರ್ಘಬಾಹುವಾಗಿದ್ದಾನೆ, ನೇತ್ರಗಳು ವಿಶಾಲವಾಗಿದೆ. ಅವರೇ ನನ್ನ ಪತಿ ಮತ್ತು ಆರಾಧ್ಯ ದೇವರಾಗಿದ್ದಾರೆ.॥2-3॥
ಮೂಲಮ್ - 4
ಇಕ್ಷ್ವಾಕೂಣಾಂ ಕುಲೇ ಜಾತಃ ಸಿಂಹಸ್ಕಂಧೋ ಮಹಾದ್ಯುತಿಃ ।
ಲಕ್ಷ್ಮಣೇನ ಸಹ ಭ್ರಾತ್ರಾ ಯಸ್ತೇ ಪ್ರಾಣಾನ್ ವಧಿಷ್ಯತಿ ॥
ಅನುವಾದ
ಅವರು ಇಕ್ಷಾಕು ವಂಶದಲ್ಲಿ ಹುಟ್ಟಿದವರು. ಅವರ ಹೆಗಲು ಸಿಂಹದಂತೆ ಇದ್ದು, ತೇಜಸ್ವಿಗಳಾಗಿದ್ದಾರೆ. ಅವರು ತನ್ನ ಸಹೋದರ ಲಕ್ಷ್ಮಣನೊಂದಿಗೆ ಬಂದು ನಿನ್ನ ಪ್ರಾಣವನ್ನು ಕಳೆಯುವರು.॥4॥
ಮೂಲಮ್ - 5
ಪ್ರತ್ಯಕ್ಷಂ ಯದ್ಯಹಂ ತಸ್ಯ ತ್ವಯಾ ವೈ ಧರ್ಷಿತಾ ಬಲಾತ್ ।
ಶಯಿತಾ ತ್ವಂ ಹತಃ ಸಂಖ್ಯೇ ಜನಸ್ಥಾನೇ ಯಥಾ ಖರಃ ॥
ಅನುವಾದ
ನೀನು ಅವರ ಎದುರಿಗೆ ಬಲಾತ್ಕಾರವಾಗಿ ನನ್ನನ್ನು ಅಪಹರಿಸಿದ್ದರೆ ನಿನ್ನ ತಮ್ಮ ಖರನಂತೆಯೇ ಜನಸ್ಥಾನದಲ್ಲೇ ಯುದ್ಧದಲ್ಲಿ ಸತ್ತು ಎಂದೆಂದಿಗೂ ಮಲಗಿಬಿಡುತ್ತಿದ್ದೆ.॥5॥
ಮೂಲಮ್ - 6
ಯ ಏತೇ ರಾಕ್ಷಸಾಃ ಪ್ರೋಕ್ತಾ ಘೋರರೂಪಾ ಮಹಾಬಲಾಃ ।
ರಾಘವೇ ನಿರ್ವಿಷಾಃ ಸರ್ವೇ ಸುಪರ್ಣೇ ಪನ್ನಗಾ ಯಥಾ ॥
ಅನುವಾದ
ನೀನು ಯಾವ ಘೋರರೂಪೀ ಮಹಾಬಲಿ ರಾಕ್ಷಸರ ಕುರಿತು ಹೇಳಿರುವೆಯೋ, ಅವರೆಲ್ಲರೂ ಶ್ರೀರಾಮನ ಬಳಿಗೆ ಹೋಗುತ್ತಲೇ ಗರುಡನ ಹತ್ತಿರ ಎಲ್ಲ ಸರ್ಪಗಳು ವಿಷರಹಿತವಾಗುವಂತೆ ಪರಾಕ್ರಮರಹಿತರಾಗುವರು.॥6॥
ಮೂಲಮ್ - 7
ತಸ್ಯ ಜ್ಯಾವಿಪ್ರಮುಕ್ತಾಸ್ತೇ ಶರಾಃ ಕಾಂಚನಭೂಷಣಾಃ ।
ಶರೀರಂ ವಿಧಮಿಷ್ಯಂತಿ ಗಂಗಾಕೂಲಮಿವೋರ್ಮಯಃ ॥
ಅನುವಾದ
ಗಂಗೆಯ ಮಹಾ ಪ್ರವಾಹದಿಂದ ದಡಗಳು ಕೊಚ್ಚಿಕೊಂಡು ಹೋಗುವಂತೆ ಶ್ರೀರಾಮನ ಧನುಸ್ಸಿನಿಂದ ಹೊರಟ ಸುವರ್ಣ ಭೂಷಿತವಾದ ಬಾಣಗಳು ನಿನ್ನ ಶರೀರವನ್ನು ಛಿನ್ನ-ಭಿನ್ನವಾಗಿಸುವವು.॥7॥
ಮೂಲಮ್ - 8
ಅಸುರೈರ್ವಾ ಸುರೈರ್ವಾ ತ್ವಂ ಯದ್ಯವಧ್ಯೋಽಸಿ ರಾವಣ ।
ಉತ್ಪಾದ್ಯ ಸುಮಹದ್ವೈರಂ ಜೀವಂಸ್ತಸ್ಯ ನ ಮೋಕ್ಷ್ಯಸೇ ॥
ಅನುವಾದ
ರಾವಣನೇ! ಅಸುರರಿಗೆ, ದೇವತೆಗಳಿಗೆ ಅವಧ್ಯವಾಗಿದ್ದ ನಿನ್ನನ್ನು ಕೊಲ್ಲಲು ಸಂಭವ ಇಲ್ಲದಿದ್ದರೂ ಶ್ರೀರಾಮನೊಡನೆ ವೈರ ಕಟ್ಟಿಕೊಂಡು ನೀನು ಹೇಗೆ ಜೀವಂತವಾಗಿ ಉಳಿಯುವೆ.॥8॥
ಮೂಲಮ್ - 9
ಸ ತೇ ಜೀವಿತಶೇಷಸ್ಯ ರಾಘವೋಽಂತಕರೋ ಬಲೀ ।
ಪಶೋರ್ಯೂಪಗತಸ್ಯೇವ ಜೀವಿತಂ ತವ ದುರ್ಲಭಮ್ ॥
ಅನುವಾದ
ರಘುನಾಥನು ಮಹಾಬಲಶಾಲಿಯಾಗಿದ್ದಾನೆ. ಅವರು ನಿನ್ನ ಉಳಿದ ಜೀವನವನ್ನು ಕೊನೆಗೊಳಿಸುವರು. ಕಟ್ಟಿಹಾಕಿದ ಪಶುವಿನಂತೆ ನಿನ್ನ ಜೀವನ ದುರ್ಲಭವಾದೀತು.॥9॥
ಮೂಲಮ್ - 10
ಯದಿ ಪಶ್ಯೇತ್ ಸ ರಾಮಸ್ತ್ವಾಂ ರೋಷದೀಪ್ತೇನ ಚಕ್ಷುಷಾ ।
ರಕ್ಷಸ್ತ್ವಮದ್ಯ ನಿರ್ದಗ್ಧೋ ಯಥಾ ರುದ್ರೇಣ ವನ್ಮಥಃ ॥
ಅನುವಾದ
ರಾಕ್ಷಸನೇ! ಶ್ರೀರಾಮಚಂದ್ರನು ತನ್ನ ರೋಷತುಂಬಿದ ದೃಷ್ಟಿಯಿಂದ ನಿನ್ನನ್ನು ನೋಡುತ್ತಲೇ ಭಗವಾನ್ ಶಂಕರನ ಉರಿಗಣ್ಣಿನಿಂದ ಮನ್ಮಥನು ಭಸ್ಮವಾದಂತೆ ನೀನು ಸುಟ್ಟು ಬೂದಿಯಾಗಿ ಹೋಗುವೆ.॥10॥
ಮೂಲಮ್ - 11
ಯಶ್ಚಂದ್ರಂ ನಭಸೋ ಭೂಮೌ ಪಾತಯೇನ್ನಾಶಯೇತ ವಾ ।
ಸಾಗರಂ ಶೋಷಯೇದ್ವಾಪಿ ಸ ಸೀತಾಂ ಮೋಚಯೇದಿಹ ॥
ಅನುವಾದ
ಚಂದ್ರನನ್ನು ಆಕಾಶದಿಂದ ಕೆಡಹಿ ನಾಶಮಾಡಬಲ್ಲ, ಸಮುದ್ರವನ್ನೂ ಒಣಗಿಸಿಬಿಡಬಲ್ಲ ಭಗವಾನ್ ಶ್ರೀರಾಮನು ಇಲ್ಲಿಗೆ ಬಂದು ನನ್ನನ್ನು ಬಿಡಿಸಲಾರನೇ.॥11॥
ಮೂಲಮ್ - 12
ಗತಾಸುಸ್ತ್ವಂ ಗತಶ್ರೀಕೋ ಗತಸತ್ತ್ವೊ ಗತೇಂದ್ರಿಯಃ ।
ಲಂಕಾ ವೈಧವ್ಯಸಂಯುಕ್ತಾ ತ್ವತ್ಕೃತೇನ ಭವಿಷ್ಯತಿ ॥
ಅನುವಾದ
ನಿನ್ನ ಪ್ರಾಣ ಈಗ ಹೊರಟುಹೋಗಿದೆ; ನಿನ್ನ ರಾಜ್ಯ ಲಕ್ಷ್ಮಿಯು ನಾಶವಾಯಿತು. ನಿನ್ನ ಬಲ ಮತ್ತು ಇಂದ್ರಿಯಗಳೂ ನಾಶವಾಗಿದೆ. ನಿನ್ನ ಪಾಪದಿಂದಾಗಿಯೇ ನಿನ್ನ ಲಂಕೆಯೂ ಈಗ ವಿಧವೆಯಾಗಿರುವಳು.॥12॥
ಮೂಲಮ್ - 13
ನ ತೇ ಪಾಪಮಿದಂ ಕರ್ಮ ಸುಖೋದರ್ಕಂ ಭವಿಷ್ಯತಿ ।
ಯಾಹಂ ನೀತಾ ವಿನಾಭಾವಂ ಪತಿಪಾರ್ಶ್ವಾತ್ತ್ವಯಾ ಬಲಾತ್ ॥
ಅನುವಾದ
ನೀನು ನನ್ನನ್ನು ಬಲಾತ್ಕಾರವಾಗಿ ಪತಿಯಿಂದ ಬೇರ್ಪಡಿಸಿದ ಈ ಪಾಪಕರ್ಮವು ನಿನಗೆ ಸುಖವನ್ನು ಅನುಭವಿಸಲು ಬಿಡಲಾರದು.॥13॥
ಮೂಲಮ್ - 14
ಸ ಹಿ ದೇವರಸಂಯುಕ್ತೋ ಮಮ ಭರ್ತಾಮಹಾದ್ಯುತಿಃ ।
ನಿರ್ಭಯೋ ವೀರ್ಯಮಾಶ್ರಿತ್ಯ ಶೂನ್ಯೇ ವಸತಿ ದಂಡಕೇ ॥
ಅನುವಾದ
ನನ್ನ ಸ್ವಾಮಿ ಮಹಾತೇಜಸ್ವಿಯಾಗಿದ್ದು, ನನ್ನ ಮೈದುನನೊಂದಿಗೆ ತಮ್ಮ ಪರಾಕ್ರಮದ ಭರವಸೆಯಿಂದಲೇ ಶೂನ್ಯವಾದ ದಂಡಕಾರಣ್ಯದಲ್ಲಿ ನಿರ್ಭಯವಾಗಿ ವಾಸಿಸುತ್ತಿದ್ದಾರೆ.॥14॥
ಮೂಲಮ್ - 15
ಸ ತೇ ವೀರ್ಯಂ ಬಲಂದರ್ಪಮುತ್ಸೇಕಂ ಚ ತಥಾವಿಧಮ್ ।
ಅಪನೇಷ್ಯತಿ ಗಾತ್ರೇಭ್ಯಃ ಶರವರ್ಷೇಣ ಸಂಯುಗೇ ॥
ಅನುವಾದ
ಅವರು ಯುದ್ಧದಲ್ಲಿ ಬಾಣಗಳ ಮಳೆಗರೆದು ನಿನ್ನ ಶರೀರದಿಂದ ಬಲ, ಪರಾಕ್ರಮ, ದರ್ಪ ಹಾಗೂ ಇಂತಹ ಉಚ್ಛೃಂಖಲ ಆಚರಣವನ್ನು ಹೊರೆಗೆ ಹಾಕುವರು.॥15॥
ಮೂಲಮ್ - 16
ಯದಾ ವಿನಾಶೋ ಭೂತಾನಾಂ ದೃಶ್ಯತೇ ಕಾಲಚೋದಿತಃ ।
ತದಾ ಕಾರ್ಯೇ ಪ್ರಮಾದ್ಯಂತಿ ನರಾಃ ಕಾಲವಶಂ ಗತಾಃ ॥
ಅನುವಾದ
ಕಾಲನ ಪ್ರೇರಣೆಯಿಂದ ಪ್ರಾಣಿಗಳ ವಿನಾಶ ಹತ್ತಿರವಾದಾಗ, ಮೃತ್ಯುವಿಗೆ ಅಧೀನನಾದ ಜೀವಿಯು ಪ್ರತಿಯೊಂದು ಕಾರ್ಯದಲ್ಲಿಯೂ ಪ್ರಮಾದವನ್ನೇ ಮಾಡುತ್ತಾ ಇರುತ್ತಾನೆ.॥16॥
ಮೂಲಮ್ - 17
ಮಾಂ ಪ್ರಧೃಷ್ಯ ಸ ತೇ ಕಾಲಃಪ್ರಾತೊಽಯಂ ರಾಕ್ಷಸಾಧಮ ।
ಆತ್ಮನೋರಾಕ್ಷಸಾನಾಂ ಚ ವಧಾಯಾಂತಃಪುರಸ್ಯ ಚ॥
ಅನುವಾದ
ಅಧಮ ನಿಶಾಚರನೇ! ನನ್ನನ್ನು ಅಪಹರಿಸಿದ್ದರಿಂದ ನಿನಗೂ ಆ ಕಾಲವು ಬಳಿ ಬಂದಿದೆ. ನಿನಗೆ, ಎಲ್ಲ ರಾಕ್ಷಸರಿಗೆ ಹಾಗೂ ಅಂತಃಪುರಕ್ಕಾಗಿಯೂ ವಿನಾಶದ ಗಳಿಗೆ ಹತ್ತಿರ ಬಂದಿದೆ.॥17॥
ಮೂಲಮ್ - 18
ನ ಶಕ್ಯಾ ಯಜ್ಞಮಧ್ಯಸ್ಥಾ ವೇದಿಃ ಸ್ರುಗ್ಭಾಂಡಮಂಡಿತ ।
ದ್ವಿಜಾತಿಮಂತ್ರಸಂಪೂತಾ ಚಂಡಾಲೇನಾವಮರ್ದಿತುಮ್ ॥
ಅನುವಾದ
ದ್ವಿಜಾತಿಯರು ಮಂತ್ರದಿಂದ ಪವಿತ್ರಗೊಳಿಸಿದ, ಸ್ರುಕ್, ಸ್ರುವಾದಿ ಯಜ್ಞಪಾತ್ರಗಳಿಂದ ಸುಶೋಭಿತವಾದ ಯಜ್ಞಶಾಲೆಯ ವೇದಿಯಲ್ಲಿ ಚಾಂಡಾಲನು ತನ್ನ ಕಾಲನ್ನು ಇರಿಸಲಾರನು.॥18॥
ಮೂಲಮ್ - 19
ತಥಾಹಂ ಧರ್ಮನಿತ್ಯಸ್ಯ ಧರ್ಮಪತ್ನೀ ದೃಢವ್ರತಾ ।
ತ್ವಯಾ ಸ್ಪ್ರಷ್ಟುಂ ನ ಶಕ್ಯಾಹಂ ರಾಕ್ಷಸಾಧಮ ಪಾಪಿನಾ ॥
ಅನುವಾದ
ಅದರಂತೆಯೇ ನಾನು ನಿತ್ಯ ಧರ್ಮಪರಾಯಣ ಭಗವಾನ್ ಶ್ರೀರಾಮನ ಧರ್ಮಪತ್ನಿಯಾಗಿದ್ದೇನೆ ಹಾಗೂ ದೃಢವಾಗಿ ಪಾತಿವ್ರತ್ಯಧರ್ಮವನ್ನು ಪಾಲಿಸುತ್ತಿದ್ದೇನೆ. (ಆದ್ದರಿಂದ ಯಜ್ಞವೇದಿಯಂತೆ ಇದ್ದೇನೆ) ರಾಕ್ಷಸಾಧಮನೇ! ನೀನು ಮಹಾ ಪಾಪಿಯಾಗಿರುವೆ (ಆದ್ದರಿಂದ ಚಾಂಡಲನಂತೆ ಇರುವೆ), ಅದಕ್ಕಾಗಿ ನನ್ನನ್ನು ಸ್ಪರ್ಶಿಸಲಾರೆ.॥19॥
ಮೂಲಮ್ - 20
ಕ್ರೀಡಂತೀ ರಾಜಹಂಸೇನ ಪದ್ಮಷಂಡೇಷು ನಿತ್ಯಶಃ ।
ಹಂಸೀ ಸಾ ತೃಣಮಧ್ಯಸ್ಥಂ ಕಥಂ ಪಶ್ಯೇತ ಮದ್ಗುಕಮ್ ॥
ಅನುವಾದ
ಸದಾ ಕಮಲಗಳ ಸಮೂಹಗಳಲ್ಲಿ ರಾಜಹಂಸನೊಡನೆ ಕ್ರೀಡಿಸುತ್ತಿರುವ ಹೆಣ್ಣು ಹಂಸವು ಹುಲ್ಲಿನಲ್ಲಿ ಇರುವ ನೀರುಕೋಳಿಯ ಕಡೆಗೆ ಕಣ್ಣೆತ್ತಿಯೂ ನೋಡಲಾರದು.॥20॥
ಮೂಲಮ್ - 21
ಇದಂ ಶರೀರಂ ನಿಃಸಂಜ್ಞಂ ಬಂಧ ವಾ ಘಾತಯಸ್ವ ವಾ ।
ನೇದಂ ಶರೀರಂ ರಕ್ಷ್ಯಂ ಮೇ ಜೀವಿತಂ ವಾಪಿ ರಾಕ್ಷಸ ॥
ಅನುವಾದ
ರಾಕ್ಷಸನೇ! ನೀನು ಈ ಸಂಜ್ಞಾ ಶೂನ್ಯ ಜಡ ಶರೀರವನ್ನು ಕಟ್ಟಿಹಾಕು ಇಲ್ಲವೇ ತುಂಡರಿಸಿಬಿಡು. ನಾನು ಸ್ವತಃ ಈ ಶರೀರವನ್ನು ಜೀವಂತವಾಗಿಡಲು ಬಯಸುವುದಿಲ್ಲ.॥21॥
ಮೂಲಮ್ - 22½
ನ ತು ಶಕ್ಯಮಪಕ್ರೋಶಂ ಪೃಥಿವ್ಯಾಂ ದಾತುಮಾತ್ಮನಃ ।
ಏವಮುಕ್ತ್ವಾ ತು ವೈದೇಹೀ ಕ್ರೋಧಾತ್ ಸುಪರುಷಂ ವಚಃ ॥
ರಾವಣಂ ಜಾನಕೀ ತತ್ರ ಪುನರ್ನೋವಾಚ ಕಿಂಚನ ।
ಮೂಲಮ್ - 23½
ಸೀತಾಯಾ ವಚನಂ ಶ್ರುತ್ವಾ ಪರುಷಂ ರೋಮಹರ್ಷಣಮ್ ॥
ಪ್ರತ್ಯುವಾಚ ತತಃ ಸೀತಾಂ ಭಯಸಂದರ್ಶನಂ ವಚಃ ।
ಅನುವಾದ
ನಾನು ಈ ಭೂತಳದಲ್ಲಿ ತನಗಾಗಿ ನಿಂದಿತ ಅಥವಾ ಕಲಂಕ ಉಂಟಾಗುವಂತಹ ಯಾವುದೇ ಕಾರ್ಯವನ್ನು ಮಾಡಲಾರೆನು. ರಾವಣನಲ್ಲಿ ಹೀಗೆ ಅತ್ಯಂತ ಕಠೋರವಾದ ಮಾತುಗಳನ್ನು ಹೇಳಿ ಜಾನಕಿಯು ಸುಮ್ಮನಾದಳು. ಅವಳು ಅಲ್ಲಿ ಮತ್ತೆ ಏನನ್ನು ಮಾತನಾಡಲಿಲ್ಲ.॥22½-2½3॥
ಮೂಲಮ್ - 24
ಶೃಣು ಮೈಥಿಲಿ ಮದ್ವಾಕ್ಯಂ ಮಾಸಾನ್ ದ್ವಾದಶ ಭಾಮಿನಿ ॥
ಮೂಲಮ್ - 25
ಕಾಲೇನಾನೇನ ನಭ್ಯೇಷಿ ಯದಿ ಮಾಂ ಚಾರುಹಾಸಿನಿ।
ತತಸ್ತ್ವಾಂ ಪ್ರಾತರಾಶಾರ್ಥಂ ಸೂದಾಶ್ಛೇತ್ಸ್ಯಂತಿ ಲೇಶಶಃ ॥
ಅನುವಾದ
ಮನೋಹರ ಹಾಸ್ಯವುಳ್ಳ ಭಾಮಿನಿ! ಮಿಥಿಲೇಶಕುವಾರೀ! ನನ್ನ ಮಾತನ್ನು ಕೇಳು, ನಾನು ನಿನಗೆ ಹನ್ನೆರಡು ತಿಂಗಳು ಸಮಯ ಕೊಡುತ್ತೇನೆ. ಅಷ್ಟರಲ್ಲಿ ನೀನು ಸ್ವೇಚ್ಛೆಯಿಂದ ನನ್ನ ಬಳಿಗೆ ಬಾರದಿದ್ದರೆ ನನ್ನ ಅಡಿಗೆಯವರು ಬೆಳಗಿನ ಉಪಹಾರಕ್ಕಾಗಿ ನಿನ್ನ ಶರೀರವನ್ನು ತುಂಡು-ತುಂಡು ಮಾಡಿಬಿಡುವರು.॥24-25॥
ಮೂಲಮ್ - 26
ಇತ್ಯುಕ್ತ್ವಾ ಪರುಷಂ ವಾಕ್ಯಂ ರಾವಣಃ ಶತ್ರುರಾವಣಃ ।
ರಾಕ್ಷಸೀಶ್ಚ ತತಃ ಕ್ರುದ್ಧ ಇದಂ ವಚನಮಬ್ರವೀತ್ ॥
ಅನುವಾದ
ಸೀತೆಯ ಬಳಿ ಹೀಗೆ ಕಠೋರವಾದ ಮಾತನ್ನು ಹೇಳಿ ಶತ್ರುಗಳನ್ನು ಅಳಿಸುವ ರಾವಣನು ಕುಪಿತನಾಗಿ ರಾಕ್ಷಸಿಯರಲ್ಲಿ ಹೀಗೆ ಹೇಳಿದನು.॥26॥
ಮೂಲಮ್ - 27
ಶೀಘ್ರಮೇವ ಹಿ ರಾಕ್ಷಸ್ಯೋ ವಿರೂಪಾ ಘೋರದರ್ಶನಾಃ ।
ದರ್ಪಮಸ್ಯಾಪನೇಷ್ಯಂತು ಮಾಂಸಶೋಣಿತಭೋಜನಾಃ ॥
ಅನುವಾದ
ತನ್ನ ವಿಕರಾಳ ರೂಪವುಳ್ಳ ಭಯಂಕರವಾಗಿ ಕಾಣುವ, ರಕ್ತ-ಮಾಂಸವನ್ನು ತಿನ್ನುವ ರಾಕ್ಷಸಿಯರೇ! ನೀವು ಬೇಗನೇ ಈ ಸೀತೆಯ ಅಹಂಕಾರ ದೂರಗೊಳಿಸಿರಿ.॥27॥
ಮೂಲಮ್ - 28
ವಚನಾದೇವ ತಾಸ್ತಸ್ಯ ಸುಘೋರಾ ಘೋರದರ್ಶನಾಃ ।
ಕೃತಪ್ರಾಂಜಲಯೋ ಭೂತ್ವಾ ಮೈಥಿಲೀಂ ಪರ್ಯವಾರಯನ್ ॥
ಅನುವಾದ
ರಾವಣನು ಇಷ್ಟು ಹೇಳುತ್ತಲೇ ಆ ಭಯಂಕರವಾಗಿ ಕಾಣುವ ಅತ್ಯಂತ ಘೋರ ರಾಕ್ಷಸಿಯರು ಕೈಮುಗಿದುಕೊಂಡಿದ್ದ ಮೈಥಿಲಿಯನ್ನು ಸುತ್ತುವರಿದು ನಿಂತುಕೊಂಡರು.॥28॥
ಮೂಲಮ್ - 29
ಸ ತಾಃ ಪ್ರೋವಾಚ ರಾಜಾಸೌ ರಾವಣೋ ಘೋರದರ್ಶನಾಃ ।
ಪ್ರಚಲ್ಯ ಚರಣೋತ್ಕರ್ಷೈರ್ದಾರಯನ್ನಿವ ಮೇದಿನೀಮ್ ॥
ಅನುವಾದ
ಆಗ ರಾವಣನು ತನ್ನ ಕಾಲುಗಳಿಂದ ಭೂಮಿಯನ್ನು ನಡುಗಿಸುತ್ತಾ ಮೂರು ನಾಲ್ಕು ಹೆಜ್ಜೆ ನಡೆದು ಆ ಭಯಾನಕ ರಾಕ್ಷಸಿಯರಲ್ಲಿ ಹೇಳಿದನು .॥29॥
ಮೂಲಮ್ - 30
ಅಶೋಕವನಿಕಾಮಧ್ಯೇ ಮೈಥಿಲೀ ನೀಯತಾಮಿತಿಮ್ ।
ತತ್ರೇಯಂ ರಕ್ಷ್ಯತಾಂ ಗೂಢಂ ಯುಷ್ಮಾಭಿಃ ಪರಿವಾರಿತಾ ॥
ಅನುವಾದ
ನಿಶಾಚರಿಯರೇ! ನೀವು ಮಿಥಿಲೇಶಕುಮಾರೀ ಸೀತೆಯನ್ನು ಅಶೋಕವನಕ್ಕೆ ಕರೆದುಕೊಂಡು ಹೋಗಿ ಹಾಗೂ ಸುತ್ತಲು ಆವರಿಸಿಕೊಂಡು ಅಲ್ಲಿ ಗುಪ್ತವಾಗಿ ಈಕೆಯನ್ನು ರಕ್ಷಿಸಿರಿ.॥30॥
ಮೂಲಮ್ - 31
ತತ್ರೈನಾಂ ತರ್ಜನೈ ರ್ಘೋರೈಃ ಪುನಃ ಸಾಂತ್ವೈಶ್ಚ ಮೈಥಿಲೀಮ್ ।
ಆನಯಧ್ವಂ ವಶಂ ಸರ್ವಾ ವನ್ಯಾಂ ಗಜವಧೂಮಿವ ॥
ಅನುವಾದ
ಅಲ್ಲಿ ಮೊದಲಿಗೆ ಭಯಂಕರ ಗರ್ಜಿಸಿ ಇವಳನ್ನು ಹೆದರಿಸಿರಿ, ಮತ್ತೆ ಸಿಹಿಯಾದ ಮಾತುಗಳಿಂದ ಸಮಜಾಯಿಸಿ, ಕಾಡಿನ ಹೆಣ್ಣಾನೆಯಂತೆ ಈ ಮೈಥಿಲಿಯನ್ನು ನೀವೆಲ್ಲರೂ ವಶದಲ್ಲಿ ತರಲು ಪ್ರಯತ್ನಿಸಿರಿ.॥31॥
ಮೂಲಮ್ - 32
ಇತಿಪ್ರತಿಸಮಾದಿಷ್ಟಾ ರಾಕ್ಷಸ್ಯೋ ರಾವಣೇನ ತಾಃ ।
ಅಶೋಕವನಿಕಾಂ ಜಗ್ಮುರ್ಮೈಥಿಲೀಂ ಪ್ರತಿಗೃಹ್ಯ ತು ॥
ಅನುವಾದ
ರಾವಣನು ಈ ಪ್ರಕಾರ ಆದೇಶಿಸಿದಾಗ ಆ ರಾಕ್ಷಸಿಯರು ಮೈಥಿಲಿಯನ್ನು ಕರೆದುಕೊಂಡು ಅಶೋಕವನಕ್ಕೆ ಹೋದರು.॥32॥
ಮೂಲಮ್ - 33
ಸರ್ವಕಾಮಲೈರ್ವೃಕ್ಷೈರ್ನಾನಾಪುಷ್ಪಲೈರ್ವೃತಾಮ್ ।
ಸರ್ವಕಾಲಮದೈಶ್ಚಾಪಿ ದ್ವಿಜೈಃ ಸಮುಪಸೇವಿತಾಮ್ ॥
ಅನುವಾದ
ಆ ವಾಟಿಕೆಯು ಎಲ್ಲ ಕಾಮನೆಗಳನ್ನು ಫಲಪ್ರದ ಮಾಡುವ ಕಲ್ಪವೃಕ್ಷಗಳಿಂದ ಹಾಗೂ ಬಗೆ ಬಗೆಯ ಹೂವು ಹಣ್ಣುಗಳುಳ್ಳ ಇತರ ವೃಕ್ಷಗಳಿಂದ ತುಂಬಿದ್ದು, ಎಲ್ಲ ಕಾಲಗಳಲ್ಲಿ ಮದಮತ್ತ ಪಕ್ಷಿಗಳು ಅಲ್ಲಿ ವಾಸಿಸುತ್ತಿದ್ದವು.॥33॥
ಮೂಲಮ್ - 34
ಸಾ ತು ಶೋಕಪರೀತಾಂಗೀ ಮೈಥಿಲೀ ಜನಕಾತ್ಮಜಾ ।
ರಾಕ್ಷಸೀವಶಮಾಪನ್ನಾ ವ್ಯಾಘ್ರೀಣಾಂ ಹರಿಣೀ ಯಥಾ ॥
ಅನುವಾದ
ಆದರೆ ಅಲ್ಲಿಗೆ ಹೋದಾಗ ಜಾನಕಿಗೆ ಅಂಗಾಂಗಗಳಲ್ಲಿ ಶೋಕವೇ ವ್ಯಾಪಿಸಿತು. ರಾಕ್ಷಸಿಯರ ವಶದಲ್ಲಿ ಬಿದ್ದಿರುವ ಆಕೆಯ ಸ್ಥಿತಿಯು ಹೆಣ್ಣುಹುಲಿಗಳ ನಡುವೆ ಸಿಕ್ಕಿಕೊಂಡ ಹೆಣ್ಣು ಜಿಂಕೆಯಂತೆ ಆಯಿತು.॥34॥
ಮೂಲಮ್ - 35
ಶೋಕೇನ ಮಹತಾ ಗ್ರಸ್ತಾ ಮೈಥಿಲೀ ಜನಕಾತ್ಮಜಾ ।
ನ ಶರ್ಮ ಲಭತೇ ಭೀರುಃ ಪಾಶಬದ್ಧಾ ಮೃಗೀ ಯಥಾ ॥
ಅನುವಾದ
ಮಹಾ ಶೋಕದಿಂದ ಗ್ರಸ್ತಳಾದ ಜಾನಕಿಯು ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಹೆಣ್ಣು ಜಿಂಕೆಯಂತೆ ಭಯಭೀತಳಾಗಿ ನೆಮ್ಮದಿಯನ್ನು ಕಳೆದುಕೊಂಡಳು.॥35॥
ಮೂಲಮ್ - 36
ನ ವಿಂದತೇ ತತ್ರ ತು ಶರ್ಮ ಮೈಥಿಲೀ
ವಿರೂಪನೇತ್ರಾಭಿರತೀವ ತರ್ಜಿತಾ ।
ಪತಿಂ ಸ್ಮರಂತೀ ದಯಿತಂ ಚ ದೇವರಂ
ವಿಚೇತನಾಭೂದ್ಭಯಶೋಕಪೀಡಿತಾ ॥
ಅನುವಾದ
ವಿಕರಾಳ ರೂಪ ಮತ್ತು ಕಣ್ಣುಗಳುಳ್ಳ ರಾಕ್ಷಸಿಯರು ಅತ್ಯಂತ ನಿಂದನೆಯನ್ನು ಕೇಳಿದ್ದರಿಂದ ಮಿಥಿಲೇಶ ಕುಮಾರಿ ಸೀತೆಗೆ ಅಲ್ಲಿ ಶಾಂತಿ ಇರಲಿಲ್ಲ. ಅವಳು ಭಯ-ಶೋಕದಿಂದ ಪೀಡಿತಳಾಗಿ ಪ್ರಿಯತಮ ಪತಿಯನ್ನು ಹಾಗೂ ಮೈದುನನನ್ನು ಸ್ಮರಿಸುತ್ತಾ ಎಚ್ಚರತಪ್ಪಿದಂತಾದಳು.॥36॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತಾರನೆಯ ಸರ್ಗ ಸಂಪೂರ್ಣವಾಯಿತು.॥56॥