०५५ सीतां प्रति रावणदर्पोक्तिः

वाचनम्
ಭಾಗಸೂಚನಾ

ರಾವಣನು ಸೀತೆಗೆ ತನ್ನ ಅಂತಃಪುರವನ್ನು ತೋರಿಸಿದುದು ಮತ್ತು ತನ್ನ ಭಾರ್ಯೆ ಆಗುವಂತೆ ಪುನಃ ಅವಳನ್ನು ಒತ್ತಾಯಿಸಿದುದು

ಮೂಲಮ್ - 1

ಸಂದಿಶ್ಯ ರಾಕ್ಷಸಾನ್ ಘೋರಾನ್ ರಾವಣೋಽಷ್ಟೌ ಮಹಾಬಲಾನ್ ।
ಆತ್ಮಾನಂ ಬುದ್ಧಿವೈಕ್ಲವ್ಯಾತ್ ಕೃತಕೃತ್ಯಮಮನ್ಯತ ॥

ಅನುವಾದ

ಈ ಪ್ರಕಾರ ಎಂಟು ಮಹಾಬಲಿ ಭಯಂಕರ ರಾಕ್ಷಸರಿಗೆ ಜನಸ್ಥಾನಕ್ಕೆ ಹೋಗಲು ಆಜ್ಞಾಪಿಸಿ ರಾವಣನು ವಿಪರೀತ ಬುದ್ಧಿಯ ಕಾರಣ ತನ್ನನ್ನು ಕೃತಕೃತ್ಯನೆಂದು ತಿಳಿದನು.॥1॥

ಮೂಲಮ್ - 2

ಸ ಚಿಂತಯಾನೋ ವೈದೇಹೀಂ ಕಾಮಬಾಣೈಃ ಪ್ರಪೀಡಿತಃ ।
ಪ್ರವಿವೇಶ ಗೃಹಂ ರಮ್ಯಂ ಸೀತಾಂ ದ್ರಷ್ಟುಮಭಿತ್ವರನ್ ॥

ಅನುವಾದ

ಅವನು ವೈದೇಹಿಯನ್ನು ಸ್ಮರಿಸುತ್ತಾ ಕಾಮಬಾಣದಿಂದ ಅತ್ಯಂತ ಪೀಡಿತನಾಗಿದ್ದನು. ಆದ್ದರಿಂದ ಆಕೆಯನ್ನು ನೋಡಲಿಕ್ಕಾಗಿ ಲಗುಬಗೆಯಿಂದ ತನ್ನ ರಮಣೀಯ ಅಂತಃಪುರವನ್ನು ಪ್ರವೇಶಿಸಿದನು.॥2॥

ಮೂಲಮ್ - 3

ಸ ಪ್ರವಿಶ್ಯ ತು ತದ್ವೇಶ್ಮ ರಾವಣೋ ರಾಕ್ಷಸಾಧಿಪಃ ।
ಅಪಶ್ಯದ್ರಾಕ್ಷಸೀಮಧ್ಯೇ ಸೀತಾಂ ದುಃಖಪರಾಯಣಾಮ್ ॥

ಮೂಲಮ್ - 4½

ಅಶ್ರುಪೂರ್ಣಮುಖೀಂ ದೀನಾಂ ಶೋಕಭಾರಾಭಿಪೀಡಿತಾಮ್ ।
ವಾಯುವೇಗೈರಿವಾಕ್ರಾಂತಾಂ ಮಜ್ಜಂತೀಂ ನಾವಮರ್ಣವೇ ॥
ಮೃಗಯೂಥಪರಿಭ್ರಷ್ಟಾಂ ಮೃಗೀಂ ಶ್ವಭಿರಿವಾವೃತಾಮ್ ।

ಅನುವಾದ

ಆ ಭವನವನ್ನು ಪ್ರವೇಶಿಸಿ ರಾವಣನು - ರಾಕ್ಷಸಿಯರ ನಡುವೆ ದುಃಖದಲ್ಲಿ ಮುಳುಗಿದ್ದ ಸೀತೆಯನ್ನು ನೋಡಿದನು. ಆಕೆಯು ಕಂಬನಿಗರೆಯುತ್ತಿದ್ದಳು. ದುಸ್ಸಹ ಶೋಕದಿಂದ ಅತ್ಯಂತ ಪೀಡಿತ ಹಾಗೂ ದೀನಳಾಗಿ ವಾಯುವೇಗದಿಂದ ಅಶಾಂತವಾದ ಸಮುದ್ರದಲ್ಲಿ ಮುಳುಗುತ್ತಿರುವ ನೌಕೆಯಂತೆ ಕಾಣುತ್ತಿದ್ದಳು. ನಾಯಿಗಳಿಂದ ಸುತ್ತುವರೆದ ಗುಂಪಿನಿಂದ ಅಗಲಿದ ಒಂಟಿ ಹೆಣ್ಣು ಜಿಂಕೆಯಂತೆ ಕಂಡುಬರುತ್ತಿದ್ದಳು.॥3-4½॥

ಮೂಲಮ್ - 5

ಅಧೋಗತಮುಖೀಂ ಸೀತಾಂ ತಾಮಭ್ಯೇತ್ಯ ನಿಶಾಚರಃ ॥

ಮೂಲಮ್ - 6

ತಾಂ ತು ಶೋಕವಶಾತ್ ದೀನಾಮವಶಾಂ ರಾಕ್ಷಸಾಧಿಪಃ ।
ಸ ಬಲಾದ್ದರ್ಶಯಾಮಾಸ ಗೃಹಂ ದೇವಗೃಹೋಪಮಮ್ ॥

ಅನುವಾದ

ಶೋಕದಿಂದ ದೀನಳಾಗಿ ವಿವಶಳಾಗಿ ತಲೆತಗ್ಗಿಸಿಕೊಂಡು ಕುಳಿತಿರುವ ಸೀತೆಯ ಬಳಿಗೆ ಹೋಗಿ ರಾಕ್ಷಸಾಧಿಪ ನಿಶಾಚರ ರಾವಣನು ಆಕೆಯನ್ನು ಒತ್ತಾಯಪೂರ್ವಕವಾಗಿ ದೇವಗೃಹದಂತಿರುವ ತನ್ನ ಸುಂದರ ಭವನವನ್ನು ತೋರಿಸಿದನು.॥5-6॥

ಮೂಲಮ್ - 7

ಹರ್ಮ್ಯಪ್ರಾಸಾದಸಂಬಾಧಂ ಸ್ತ್ರೀಸಹಸ್ರನಿಷೇವಿತಮ್ ।
ನಾನಾಪಕ್ಷಿಗಣೈರ್ಜುಷ್ಟಂ ನಾನಾರತ್ನ ಸಮನ್ವಿತಮ್ ॥

ಅನುವಾದ

ಅದು ಎತ್ತರವಾದ ಸೌಧಗಳಿಂದ ಏಳು ಅಂತಸ್ತಿನ ಮನೆಗಳಿಂದ ತುಂಬಿತ್ತು. ಅವುಗಳಲ್ಲಿ ಸಾವಿರಾರು ಸ್ತ್ರೀಯರು ವಾಸಿಸುತ್ತಿದ್ದರು. ಗುಂಪು ಗುಂಪಾದ ನಾನಾ ಜಾತಿಯ ಪಕ್ಷಿಗಳು ಅಲ್ಲಿ ಕಲರವ ಮಾಡುತ್ತಿದ್ದವು. ನಾನಾ ಪ್ರಕಾರದ ರತ್ನಗಳು ಆ ಅಂತಃಪುರದ ಶೋಭೆಯನ್ನು ಹೆಚ್ಚಿಸಿದ್ದವು.॥7॥

ಮೂಲಮ್ - 8

ದಾಂತಕೈಸ್ತಾಪನೀಯೈಶ್ಚ ಸ್ಘಾಟಿಕೈ ರಾಜತೈಸ್ತಥಾ ।
ವಜ್ರವೈಡೂರ್ಯಚಿತ್ರೈಶ್ಚ ಸ್ತಂಭೇರ್ದೃಷ್ಟಿ ಮನೋರಮೈಃ ॥

ಅನುವಾದ

ಅದರಲ್ಲಿ ಅನೇಕ ಕಂಬಗಳಿದ್ದು, ಆನೆಯದಂತ, ಶುದ್ಧ ಚಿನ್ನ, ಸ್ಫಟಿಕ ಮಣಿ, ಬೆಳ್ಳಿ, ವಜ್ರ, ವೈಢೂರ್ಯಗಳಿಂದ ಜಟಿತವಾಗಿ ಬಹಳ ವಿಚಿತ್ರವಾಗಿ ಕಂಡುಬರುತ್ತಿದ್ದವು.॥8॥

ಮೂಲಮ್ - 9

ದಿವ್ಯದುಂದುಭಿನಿರ್ಘೋಷಂ ತಪ್ತಕಾಂಚನಭೂಷಣಮ್ ।
ಸೋಪಾನಂ ಕಾಂಚನಂ ಚಿತ್ರಮಾರುರೋಹ ತಯಾ ಸಹ ॥

ಅನುವಾದ

ಆ ಭವನದಲ್ಲಿ ದಿವ್ಯ ದುಂದುಭಿಗಳ ಮಧುರ ಘೋಷ ಆಗುತ್ತಿತ್ತು. ಆ ಅಂತಃಪುರವನ್ನು ಪುಟಕ್ಕಿಟ್ಟ ಬಂಗಾರದ ಒಡವೆಗಳಿಂದ ಅಲಂಕರಿಸಲಾಗಿತ್ತು. ರಾವಣನು ಸೀತೆಯನ್ನು ಕರೆದುಕೊಂಡು ಚಿನ್ನದಿಂದ ನಿರ್ಮಿಸಿದ ವಿಚಿತ್ರ ಮೆಟ್ಟಿಲುಗಳನ್ನು ಹತ್ತಿದನು.॥9॥

ಮೂಲಮ್ - 10

ದಾಂತಕಾ ರಾಜತಾಶ್ಚೈವ ಗವಾಕ್ಷಾಃ ಪ್ರಿಯದರ್ಶನಾಃ ।
ಹೇಮಜಾಲವೃತಾಶ್ಚಾಸಂಸ್ತತ್ರ ಪ್ರಾಸಾದಪಂಕ್ತಯಃ ॥

ಅನುವಾದ

ಅಲ್ಲಿ ಹಸ್ತಿದಂತದಿಂದ ಹಾಗೂ ಬೆಳ್ಳಿಯಿಂದ ನಿರ್ಮಿಸಿದ ಸುಂದರವಾಗಿ ಕಂಡುಬರುವ ಕಿಟಕಿಗಳು ಇದ್ದವು. ಚಿನ್ನದ ಜಾಲರಿಗಳಿಂದ ಮುಚ್ಚಿದ್ದ ಪ್ರಾಸಾದಗಳ ಸಾಲುಗಳೂ ಕಾಣುತ್ತಿದ್ದವು.॥10॥

ಮೂಲಮ್ - 11

ಸುಧಾಮಣಿವಿಚಿತ್ರಾಣಿ ಭೂಮಿಭಾಗಾನಿ ಸರ್ವಶಃ ।
ದಶಗ್ರೀವಃ ಸ್ವಭವನೇ ಪ್ರಾದರ್ಶಯತ ಮೈಥಿಲೀಮ್ ॥

ಅನುವಾದ

ಆ ಭವನದ ನೆಲವು ಸುಣ್ಣ-ಸುರ್ಖಿಯಿಂದ ಗಟ್ಟಿಯಾಗಿಸಿ, ಅದರಲ್ಲಿ ಮಣಿಗಳನ್ನು ಜೋಡಿಸಿದ್ದರು. ಅದರಿಂದ ಅದೆಲ್ಲವೂ ವಿಚಿತ್ರವಾಗಿ ಕಂಡುಬರುತಿತ್ತು. ದಶಗ್ರೀವನು ತನ್ನ ಭವನದ ಎಲ್ಲ ವಸ್ತುಗಳನ್ನು ಮೈಥಿಲಿಗೆ ತೋರಿಸಿದನು.॥11॥

ಮೂಲಮ್ - 12

ದೀರ್ಘಿಕಾಃ ಪುಷ್ಕರಿಣ್ಯಶ್ಚ ನಾನಾಪುಷ್ಪಸಮಾವೃತಾಃ ।
ರಾವಣೋ ದರ್ಶಯಾಮಾಸ ಸೀತಾಂ ಶೋಕಪರಾಯಣಮ್ ॥

ಅನುವಾದ

ರಾವಣನು ಅನೇಕ ಬಾವಿಗಳನ್ನು ಬಗೆ ಬಗೆಯ ಹೂವುಗಳಿಂದ ಮುಚ್ಚಿದ್ದ ಅನೇಕ ಕಲ್ಯಾಣಿಗಳನ್ನು ಸೀತೆಗೆ ತೊರಿಸಿದನು. ಸೀತೆಯು ಅದೆಲ್ಲವನ್ನು ನೋಡಿ ಶೋಕದಲ್ಲಿ ಮುಳುಗಿದಳು.॥12॥

ಮೂಲಮ್ - 13

ದರ್ಶಯಿತ್ವಾ ತು ವೈದೇಹೀಂ ಕೃತ್ಸೃಂ ತದ್ಭವನೋತ್ತಮಮ್ ।
ಉವಾಚ ವಾಕ್ಯಂ ಪಾಪಾತ್ಮಾ ಸೀತಾಂ ಲೋಭಿತುಮಿಚ್ಛಯಾ ॥

ಅನುವಾದ

ಆ ಪಾಪಾತ್ಮಾ ನಿಶಾಚರನು ವೈದೇಹಿಯನ್ನು ತನ್ನ ಸುಂದರ ಭವನವನ್ನು ತೋರಿಸಿ ಆಕೆಯನ್ನು ಮರಳುಗೊಳಿಸುವ ಇಚ್ಛೆಯಿಂದ ಈ ಪ್ರಕಾರ ಹೇಳಿದನು.॥13॥

ಮೂಲಮ್ - 14

ದಶ ರಾಕ್ಷಸಕೋಟ್ಯಶ್ಚ ದ್ವಾವಿಂಶತಿರಥಾಪರಾಃ ।
ವರ್ಜಯಿತ್ವಾ ಜರಾವೃದ್ಧಾನ್ ಬಾಲಾಂಶ್ಚ ರಜನೀಚರಾನ್ ॥

ಮೂಲಮ್ - 15

ತೇಷಾಂ ಪ್ರಭುರಹಂ ಸೀತೇ ಸರ್ವೇಷಾಂ ಭೀಮಕರ್ಮಣಾಮ್ ।
ಸಹಸ್ರಮೇಕಮೇಕಸ್ಯ ಮಮ ಕಾರ್ಯಪುರಃಸರಮ್ ॥

ಅನುವಾದ

ಸೀತೇ! ನನ್ನ ಅಧೀನದಲ್ಲಿ ಮೂವತ್ತೆರಡು ಕೋಟಿ ರಾಕ್ಷಸರಿದ್ದಾರೆ. ಈ ಸಂಖ್ಯೆಯು ಮುದುಕರು ಮತ್ತು ಬಾಲಕ ನಿಶಾಚರರನ್ನು ಬಿಟ್ಟು ಹೇಳಿರುವೆನು. ಭಯಂಕರ ಕರ್ಮಮಾಡುವ ಈ ಎಲ್ಲ ರಾಕ್ಷಸರಿಗೆ ನಾನು ಒಡೆಯನಾಗಿದ್ದೇನೆ. ನನ್ನೊಬ್ಬನ ಸೇವೆಯಲ್ಲೇ ಒಂದು ಸಾವಿರ ರಾಕ್ಷಸರಿದ್ದಾರೆ.॥14-15॥

ಮೂಲಮ್ - 16

ಯದಿದಂ ರಾಜತಂತ್ರಂ ಮೇ ತ್ವಯಿ ಸರ್ವಂ ಪ್ರತಿಷ್ಠಿತಮ್ ।
ಜೀವಿತಂ ಚ ವಿಶಾಲಾಕ್ಷಿ ತ್ವಂ ಮೇ ಪ್ರಾಣೈರ್ಗರೀಯಸೀ ॥

ಅನುವಾದ

ವಿಶಾಲಲೋಚನೇ! ನನ್ನ ಈ ಎಲ್ಲ ರಾಜ್ಯ ಮತ್ತು ಜೀವನ ನಿನ್ನ ಮೇಲೆಯೇ ಅವಲಂಬಿಸಿದೆ. (ಅಥವಾ ಇದೆಲ್ಲವೂ ನಿನ್ನ ಚರಣಗಳಲ್ಲಿ ಅರ್ಪಿತವಾಗಿದೆ.) ನೀನು ನನಗೆ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯಳಾಗಿರುವೆ.॥16॥

ಮೂಲಮ್ - 17

ಬಹ್ವೀನಾಮುತ್ತಮಸ್ತ್ರೀಣಾಂ ಮಮ ಯೋಽಸೌ ಪರಿಗ್ರಹಃ ।
ತಾಸಾಂ ತ್ವಮೀಶ್ವರೀ ಸೀತೇ ಮಮ ಭಾರ್ಯಾ ಭವ ಪ್ರಿಯೇ ॥

ಅನುವಾದ

ಸೀತೇ! ನನ್ನ ಅಂತಃಪುರವು ನನ್ನ ಅನೇಕ ಸುಂದರೀ ಭಾರ್ಯೆಯರಿಂದ ತುಂಬಿರುವುದು, ನೀನು ಅವರೆಲ್ಲರ ಒಡತಿಯಾಗು. ಪ್ರಿಯೆ! ನನ್ನ ಭಾರ್ಯೆಯಾಗು.॥17॥

ಮೂಲಮ್ - 18

ಸಾಧು ಕಿಂ ತೇಽನ್ಯಥಾಬುದ್ಧ್ಯಾ ರೋಚಯಸ್ಯ ವಚೋ ಮಮ ।
ಭಜಸ್ವ ಮಾಭಿತಪ್ತಸ್ಯ ಪ್ರಸಾದಂ ಕರ್ತುಮರ್ಹಸಿ ॥

ಅನುವಾದ

ನನ್ನ ಈ ಹಿತಕರ ಮಾತನ್ನು ಒಪ್ಪಿಕೋ, ಇದನ್ನು ಮೆಚ್ಚಿಕೋ. ಇದಕ್ಕೆ ವಿಪರೀತ ವಿಚಾರವನ್ನು ಮನಸ್ಸಿಗೆ ತರುವುದರಿಂದ ಏನು ಲಾಭ? ನನ್ನನ್ನು ಅಂಗೀಕರಿಸು. ನಾನು ಪೀಡಿತನಾಗಿದ್ದೇನೆ. ನನ್ನ ಮೇಲೆ ಕೃಪೆ ಮಾಡು.॥18॥

ಮೂಲಮ್ - 19

ಪರಿಕ್ಷಿಪ್ತಾ ಸಮುದ್ರೇಣ ಲಂಕೇಯಂ ಶತಯೋಜನಾ ।
ನೇಯಂ ಧರ್ಷಯಿತುಂ ಶಕ್ಯಾ ಸೇಂದ್ರೈರಪಿ ಸುರಾಸುರೈಃ ॥

ಅನುವಾದ

ಸಮುದ್ರದಿಂದ ಆವರಿಸಿರುವ ಈ ಲಂಕೆಯ ರಾಜ್ಯದ ವಿಸ್ತಾರ ನೂರು ಯೋಜನವಾಗಿದೆ. ಇಂದ್ರನ ಸಹಿತ ಸಮಸ್ತ ದೇವತೆಗಳೂ ಅಸುರರೂ ಸೇರಿದರೂ ಇದನ್ನು ಧ್ವಂಸಮಾಡಲಾರರು.॥19॥

ಮೂಲಮ್ - 20

ನ ದೇವೇಷು ನ ಯಕ್ಷೇಷು ನ ಗಂಧರ್ವೇಷು ನರ್ಷಿಷು ।
ಅಹಂ ಪಶ್ಯಾಮಿ ಲೋಕೇಷು ಯೋ ಮೇ ವೀರ್ಯಸಮೋ ಭವೇತ್ ॥

ಅನುವಾದ

ನನ್ನ ಪರಾಕ್ರಮಕ್ಕೆ ಸಮಾನವಾಗಿ ದೇವತೆಗಳಲ್ಲಿ, ಯಕ್ಷರಲ್ಲಿ, ಗಂಧರ್ವರಲ್ಲಿ, ಋಷಿಗಳಲ್ಲಿ, ಯಾರನ್ನೂ ನಾನು ನೊಡುವುದಿಲ್ಲ.॥20॥

ಮೂಲಮ್ - 21

ರಾಜ್ಯಭ್ರಷ್ಟೇನ ದೀನೇನ ತಾಪಸೇನ ಪದಾತಿನಾ ।
ಕಿಂ ಕರಿಷ್ಯಸಿ ರಾಮೇಣ ಮಾನುಷೇಣಾಲ್ಪ ತೇಜಸಾ ॥

ಅನುವಾದ

ರಾಮನಾದರೋ ರಾಜ್ಯಭ್ರಷ್ಟ, ದೀನ, ತಪಸ್ವೀ, ಕಾಲ್ನಡಿಗೆಯಿಂದ ನಡೆಯುವ ಮನುಷ್ಯನಾದ್ದರಿಂದ ಅಲ್ಪ ತೇಜವುಳ್ಳವನಾಗಿದ್ದಾನೆ. ಅವನನ್ನು ನಂಬಿ ಏನು ಮಾಡುವೆ.॥21॥

ಮೂಲಮ್ - 22

ಭಜಸ್ವ ಸೀತೇ ಮಾಮೇವ ಭರ್ತಾಹಂ ಸದೃಶಸ್ತವ ।
ಯೌವನಂ ಹ್ಯಧ್ರುವಂ ಭೀರು ರಮಸ್ವೇಹ ಮಯಾ ಸಹ ॥

ಅನುವಾದ

ಸೀತೆ! ನನ್ನನ್ನು ತನ್ನವನಾಗಿಸಿಕೋ. ನಾನು ನಿನಗೆ ಯೋಗ್ಯಪತಿಯಾಗಿದ್ದೇನೆ. ಭೀರು! ಯೌವ್ವನವು ಸದಾ ಇರುವಂತಹುದಲ್ಲ. ಆದ್ದರಿಂದ ಇಲ್ಲಿ ಇದ್ದು ನನ್ನೊಂದಿಗೆ ರಮಿಸು.॥22॥

ಮೂಲಮ್ - 23

ದರ್ಶನೇ ಮಾ ಕೃಥಾ ಬುದ್ಧಿಂ ರಾಘವಸ್ಯ ವರಾನನೇ ।
ಕಾಸ್ಯ ಶಕ್ತಿರಿಹಾಗಂತುಮಪಿ ಸೀತೇ ಮನೋರಥೈಃ ॥

ಅನುವಾದ

ವರಾನನೇ! ಸೀತೆ! ಇನ್ನು ನೀನು ರಾಮನ ದರ್ಶನದ ವಿಚಾರವನ್ನು ಬಿಟ್ಟುಬಿಡು. ಇಲ್ಲಿಯವರೆಗೆ ಬರುವ ಮನೋರಥ ಮಾಡಲೂ ಕೂಡ ಆ ರಾಮನಲ್ಲಿ ಇಷ್ಟು ಶಕ್ತಿ ಎಲ್ಲಿದೆ.॥23॥

ಮೂಲಮ್ - 24

ನ ಶಕ್ಯೋ ವಾಯುರಾಕಾಶೇ ಪಾಶೈರ್ಬದ್ಧುಂ ಮಹಾಜವಃ ।
ದೀಪ್ಯಮಾನಸ್ಯ ವಾಪ್ಯಗ್ನೇರ್ಗ್ರಹೀತುಂ ವಿಮಲಾಂ ಶಿಖಾಃ ॥

ಅನುವಾದ

ಆಕಾಶದಲ್ಲಿ ಮಹಾವೇಗದಿಂದ ಬೀಸುವ ವಾಯುವನ್ನು ಹಗ್ಗಗಳಿಂದ ಕಟ್ಟಲಾಗುವುದಿಲ್ಲ ಅಥವಾ ಪ್ರಜ್ವಲಿಸುವ ಅಗ್ನಿಯ ನಿರ್ಮಲ ಜ್ವಾಲೆಗಳನ್ನು ಕೈಯಿಂದ ಹಿಡಿದುಕೊಳ್ಳಲಾಗುವುದಿಲ್ಲ.॥24॥

ಮೂಲಮ್ - 25

ತ್ರಯಾಣಾಮಪಿ ಲೋಕಾನಾಂ ನ ತಂ ಪಶ್ಯಾಮಿ ಶೋಭನೇ ।
ವಿಕ್ರಮೇಣ ನಯೇದ್ಯಸ್ತ್ವಾಂ ಮದ್ಭಾಹುಪರಿಲಾಪಿತಾಮ್ ॥

ಅನುವಾದ

ಶೋಭನೇ! ನನ್ನ ಭುಜಗಳಿಂದ ಸುರಕ್ಷಿತವಾದ ನಿನ್ನನ್ನು ಪರಾಕ್ರಮದಿಂದ ಇಲ್ಲಿಂದ ಕೊಂಡು ಹೋಗುವ ವೀರನನ್ನು ನಾನು ಮೂರು ಲೋಕಗಳಲ್ಲಿಯೂ ಯಾರನ್ನೂ ನೋಡುವುದಿಲ್ಲ.॥25॥

ಮೂಲಮ್ - 26

ಲಂಕಾಯಾಃ ಸುಮಹದ್ರಾಜ್ಯಮಿದಂ ತ್ವಮನುಪಾಲಯ ।
ತ್ವತ್ಪ್ರೇಷ್ಯಾ ಮದ್ವಿಧಾಶ್ಚೈವ ದೇವಾಶ್ಚಾಪಿ ಚರಾಚರಮ್ ॥

ಅನುವಾದ

ಲಂಕೆಯ ಈ ವಿಶಾಲ ರಾಜ್ಯವನ್ನು ನೀನೇ ಆಳು. ನನ್ನಂತಹ ರಾಕ್ಷಸನು, ದೇವತೆಗಳು ಹಾಗೂ ಸಮಸ್ತ ಚರಾಚರ ಜಗತ್ತು ನಿನಗೆ ಸೇವಕರಾಗಿ ಇರುವೆವು.॥26॥

ಮೂಲಮ್ - 27½

ಅಭಿಷೇಕಜಲಕ್ಲಿನ್ನಾ ತುಷ್ಟಾ ಚ ರಮಯಸ್ವ ಚ ॥
ದುಷ್ಕೃತಂ ಯತ್ಪುರಾ ಕರ್ಮ ವನವಾಸೇನ ತದ್ಗತಮ್॥
ಯಚ್ಚ ತೇ ಸುಕೃತಂ ಕರ್ಮ ತಸ್ಯೇಹ ಫಲಮಾಪ್ನುಹಿ ।

ಅನುವಾದ

ಲಂಕೆಯ ರಾಜ್ಯಕ್ಕೆ ಪಟ್ಟಾಭಿಷಿಕ್ತಳಾಗಿ, ಆ ಜಲದಿಂದ ಆರ್ಧ್ರಳಾಗಿ, ಸುಂತುಷ್ಟವಾಗಿ ನೀನು ಕ್ರೀಡಾ ವಿನೋದಲ್ಲಿ ತೊಡಗು. ನಿನ್ನ ಮೊದಲಿನ ದುಷ್ಕರವಾದ ವನವಾಸದ ಕಷ್ಟ ಮುಗಿದುಹೋಯಿತು. ಇನ್ನು ನಿನ್ನ ಉಳಿದಿರುವ ಪುಣ್ಯ ಕರ್ಮದ ಫಲವನ್ನು ಇಲ್ಲಿ ಅನುಭವಿಸು.॥27½॥

ಮೂಲಮ್ - 28½

ಇಹ ಸರ್ವಾಣಿ ಮಾಲ್ಯಾನಿ ದಿವ್ಯಗಂಧಾನಿ ಮೈಥಿಲಿ ॥
ಭೂಷಣಾನಿ ಚ ಮುಖ್ಯಾನಿ ತಾನಿ ಸೇವ ಮಯಾ ಸಹ ।

ಅನುವಾದ

ಮಿಥಿಲೇಶಕುಮಾರೀ! ನೀನು ನನ್ನೊಂದಿಗೆ ಇಲ್ಲಿ ಇದ್ದು, ಎಲ್ಲ ಪ್ರಕಾರದ ಪುಷ್ಪಹಾರ, ದಿವ್ಯಗಂಧ ಮತ್ತು ಶ್ರೇಷ್ಠ ಆಭೂಷಣಾದಿಗಳನ್ನು ಸೇವಿಸುತ್ತಾ ಇರು.॥28॥

ಮೂಲಮ್ - 29

ಪುಷ್ಪಕಂ ನಾಮ ಸುಶ್ರೋಣಿ ಭ್ರಾತುರ್ವೈಶ್ರವಣಸ್ಯ ಮೇ ॥

ಮೂಲಮ್ - 30½

ವಿಮಾನಂ ಸೂರ್ಯಸಂಕಾಶಂ ತರಸಾ ನಿರ್ಜಿತಂ ರಣೇ ।
ವಿಶಾಲಂ ರಮಣೀಯಂ ಚ ತದ್ವಿಮಾನಂ ಮನೋಜವಮ್ ॥
ತತ್ರ ಸೀತೇ ಮಯಾ ಸಾರ್ಧಂ ವಿಹರಸ್ವ ಯಥಾಸುಖಮ್ ।

ಅನುವಾದ

ಸುಂದರೀ! ಸೂರ್ಯನಂತೆ ಪ್ರಕಾಶಿತವಾದ ಈ ಪುಷ್ಪಕವಿಮಾನ ನನ್ನ ಅಣ್ಣ ಕುಬೇರನದ್ದಾಗಿತ್ತು. ಅದನ್ನು ನಾನು ಬಲವಂತವಾಗಿ ಗೆದ್ದುಕೊಂಡಿರುವೆ. ಇದು ಅತ್ಯಂತ ರಮಣೀಯ, ವಿಶಾಲ ಹಾಗೂ ಮನೋವೇಗದಿಂದ ಚಲಿಸುವುದಾಗಿದೆ. ಸೀತೆ! ನೀನು ಅದರಲ್ಲಿ ನನ್ನೊಂದಿಗೆ ಕುಳಿತು ಸುಖವಾಗಿ ವಿಹರಿಸು.॥29-30½॥

ಮೂಲಮ್ - 31½

ವದನಂ ಪದ್ಮಸಂಕಾಶಂ ವಿಮಲಂ ಚಾರುದರ್ಶನಮ್ ॥
ಶೋಕಾರ್ತಂ ತು ವರಾರೋಹೇ ನ ಭ್ರಾಜತಿ ವರಾನನೇ ।

ಅನುವಾದ

ವರಾರೋಹೇ ಸುಮುಖೀ! ಈ ಕಮಲದಂತಹ ಸುಂದರ, ನಿರ್ಮಲ ಮತ್ತು ಮನೋಹರವಾಗಿ ಕಾಣುವ ನಿನ್ನ ಮುಖವು ಶೋಕದಿಂದ ಪೀಡಿತವಾದ್ದರಿಂದ ಶೋಭಿಸುವುದಿಲ್ಲ.॥31½॥

ಮೂಲಮ್ - 32½

ಏವಂ ವದತಿ ತಸ್ಮಿನ್ ಸಾ ವಸ್ತ್ರಾಂತೇನ ವರಾಂಗನಾ ॥
ಪಿಧಾಯೇಂದುನಿಭಂ ಸೀತಾ ಮಂದಮಶ್ರೂಣ್ಯವರ್ತಯತ್ ।

ಅನುವಾದ

ರಾವಣನು ಹೀಗೆ ಮಾತನಾಡತೊಡಗಿದಾಗ, ಪರಮ ಸುಂದರೀ ಸೀತಾದೇವಿಯು ಚಂದ್ರನಂತಹ ಮನೋಹರ ತನ್ನ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡು ನಿಧಾನವಾಗಿ ಕಂಬನಿಗರೆದಳು.॥32½॥

ಮೂಲಮ್ - 33½

ಧ್ಯಾಯಂತೀಂ ತಾಮಿವಾಸ್ವಸ್ಥಾಂ ಸೀತಾಂ ಚಿಂತಾಹತಪ್ರಭಾಮ್ ॥
ಉವಾಚ ವಚನಂ ಪಾಪೋ ರಾವಣೋ ರಜನೀಚರಃ ।

ಅನುವಾದ

ಸೀತೆಯು ಶೋಕದಿಂದ ಅಸ್ವಸ್ಥಳಂತಾಗಿದ್ದಳು. ಚಿಂತೆಯಿಂದ ಆಕೆಯ ಕಾಂತಿಯು ಮರೆಯಾಗಿತ್ತು ಮತ್ತು ಅವಳು ಭಗವಾನ್ ರಾಮನನ್ನು ಧ್ಯಾನಿಸತೊಡಗಿದಳು. ಆ ಸ್ಥಿತಿಯಲ್ಲಿ ಆಕೆಯ ಬಳಿ ಆ ವೀರ ನಿಶಾಚರ ರಾವಣನು ಈ ಪ್ರಕಾರ ನುಡಿದನು.॥33½॥

ಮೂಲಮ್ - 34½

ಅಲಂ ವ್ರೀಡೇನ ವೈದೇಹಿ ಧರ್ಮಲೋಪಕೃತೇನ ತೇ॥
ಆರ್ಷೋಽಯಂ ದೈವನಿಷ್ಪಂದೋ ಯಸ್ತ್ವಾಮಭಿಭವಿಷ್ಯತಿ ।

ಅನುವಾದ

ವಿದೇಹನಂದಿನೀ! ತನ್ನ ಪತಿಯ ತ್ಯಾಗ ಮತ್ತು ಪರ ಪುರುಷನ ಅಂಗೀಕಾರದಿಂದ ಆಗುವ ಧರ್ಮಲೋಪದ ಆಶಂಕೆ ಯಿಂದ ನೀನು ನಾಚಿಕೊಳ್ಳಬೇಕಾಗಿಲ್ಲ, ಇಂತಹ ಲಜ್ಜೆಯು ವ್ಯರ್ಥವಾಗಿದೆ. ದೇವಿ! ನಿನ್ನೊಂದಿಗೆ ಆದ ನನ್ನ ಸ್ನೇಹ ಸಂಬಂಧವು ಆರ್ಷಧರ್ಮಶಾಸ್ತ್ರಗಳ ಮೂಲಕ ಸಮರ್ಥಿತವಾಗಿದೆ..॥34½॥

ಟಿಪ್ಪನೀ
  • ಹೀಗೆ ಹೇಳಿ ರಾವಣನು ಸೀತಾದೇವಿಗೆ ಮೋಸಮಾಡಲು ಬಯಸುತ್ತಿದ್ದನು. ವಾಸ್ತವವಾಗಿ ಇಂತಹ ಪಾಪಕತ್ಯಗಳನ್ನು ಧರ್ಮಶಾಸ್ತ್ರಗಳು ಸಮರ್ಥನ ಮಾಡುವುದಿಲ್ಲ. ಕುಮಾರಿ ಕನ್ಯೆಯನ್ನು ಬಲವಂತವಾಗಿ ಅಪಹರಣವು ಶಾಸಗಳಲ್ಲಿ ರಾಕ್ಷಸ ವಿವಾಹವೆಂದು ಹೇಳಲಾಗಿದೆ. ಆದರೆ ಅದನ್ನು ನಿಂದ್ಯವೆಂದೇ ತಿಳಿಯಲಾಗಿದೆ. ಈ ಪಾಪದಿಂದಲೇ ಚಿನ್ನದ ಲಂಕೆಯು ಮಣ್ಣುಗೂಡಿತು ಮತ್ತು ರಾವಣನ ಸೈನ್ಯಬಲ-ಕುಲ-ಪರಿವಾರ ಸಹಿತವಾಗಿ ನಾಶವಾಗಿ ಹೋಯಿತು.
ಮೂಲಮ್ - 35½

ಏತೌ ಪಾದೌ ಮಯಾ ಸ್ನಿಗ್ಧೌ ಶಿರೋಭಿಃ ಪರಿಪೀಡಿತೌ॥
ಪ್ರಸಾದಂ ಕುರು ಮೇ ಕ್ಷಿಪ್ರಂ ವಶ್ಯೋ ದಾಸೋಽಹಮಸ್ಮಿ ತೇ ।

ಅನುವಾದ

ನಿನ್ನ ಈ ಕೋಮಲ ಮತ್ತು ನುಣುಪಾದ ಚರಣಗಳಲ್ಲಿ ನಾನು ನನ್ನ ಹತ್ತು ತಲೆಗಳನ್ನು ಇಡುವೆನು. ಈಗ ಶೀಘ್ರವಾಗಿ ನನ್ನ ಮೇಲೆ ಕೃಪೆ ಮಾಡು. ನಾನು ಸದಾ ನಿನ್ನ ಅಧೀನವಾಗಿರುವ ದಾಸನಾಗಿದ್ದೇನೆ.॥35½॥

ಮೂಲಮ್ - 36½

ಇಮಾಃ ಶೂನ್ಯಾ ಮಯಾ ವಾಚಃ ಶುಷ್ಯಮಾಣೇನ ಭಾಷಿತಾಃ ॥
ನ ಚಾಪಿ ರಾವಣಃ ಕಾಂಚಿನ್ಮೂರ್ಧ್ನಾ ಸ್ತ್ರೀಂ ಪ್ರಣಮೇತ ಹ ।

ಅನುವಾದ

ನಾನು ಕಾಮಾಗ್ನಿಯಿಂದ ಬೆಂದು ಈ ಮಾತನ್ನು ಹೇಳಿರುವೆನು. ಇವು ನಿಷ್ಪಲವಾಗದಿರುವಂತೆ ಕೃಪೆ ಮಾಡು. ಏಕೆಂದರೆ ರಾವಣನು ಯಾವುದೇ ಸ್ತ್ರೀಯಳಿಗೆ ತಲೆಬಾಗಿ ವಂದಿಸುವುದಿಲ್ಲ. ಕೇವಲ ನಿನ್ನ ಎದುರಿಗೆ ತಲೆ ಬಾಗಿರುವೆನು.॥36½॥

ಮೂಲಮ್ - 37

ಏವಮುಕ್ತ್ವಾ ದಶಗ್ರೀವೋ ಮೈಥಿಲೀಂ ಜನಕಾತ್ಮಜಮ್ ।
ಕೃತಾಂತವಶಮಾಪನ್ನೋ ಮಮೇಯಮಿತಿ ಮನ್ಯತೇ ॥

ಅನುವಾದ

ಮಿಥಿಲೇಶಕುಮಾರಿ ಜಾನಕಿಯ ಬಳಿ ಹೀಗೆ ಹೇಳಿ ಕಾಲಕ್ಕೆ ವಶೀಭೂತನಾದ ರಾವಣನು ಮನಸ್ಸಿನಲ್ಲೇ ‘ಈಗ ಇವಳು ನನ್ನ ಅಧೀನಳಾದಳು’ ಎಂದುಕೊಂಡನು.॥37॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತೈದನೆಯ ಸರ್ಗ ಸಂಪೂರ್ಣವಾಯಿತು.॥55॥