०५४ भूषणप्रक्षेपणम्-लङ्काप्रवेशं च

वाचनम्
ಭಾಗಸೂಚನಾ

ಸೀತಾದೇವಿಯು ತನ್ನ ಆಭರಣಗಳನ್ನು, ವಸ್ತ್ರವನ್ನೂ ಕಪಿಗಳ ಮಧ್ಯದಲ್ಲಿ ಎಸೆದುದು, ಲಂಕೆಯನ್ನು ಸೇರಿದ ರಾವಣನು ಸೀತೆಯನ್ನು ಅಂತಃಪುರದಲ್ಲಿಟ್ಟುದುದು, ಎಂಟು ಮಂದಿ ರಾಕ್ಷಸರನ್ನು ಜನಸ್ಥಾನದಲ್ಲಿ ಗುಪ್ತಚಾರರನ್ನು ನಿಯಮಿಸಿದುದು

ಮೂಲಮ್ - 1

ಹ್ರಿಯಮಾಣಾ ತು ವೈದೇಹೀ ಕಂಚಿನ್ನಾಥಮಪಶ್ಯತೀ ।
ದದರ್ಶ ಗಿರಿಶೃಂಗಸ್ಥಾನ್ ಪಂಚ ವಾನರಪುಂಗವಾನ್ ॥

ಅನುವಾದ

ರಾವಣನಿಂದ ಅಪಹೃತಳಾದ ವೈದೇಹಿಯು ಆಗ ಯಾರೂ ತನ್ನ ಸಹಾಯಕ್ಕೆ ಕಾಣದಿದ್ದಾಗ, ಮಾರ್ಗದಲ್ಲಿ ಒಂದು ಪರ್ವತದ ಶಿಖರದಲ್ಲಿ ಐದು ಶ್ರೇಷ್ಠ ವಾನರರು ಕುಳಿತಿರುವುದನ್ನು ನೋಡಿದಳು.॥1॥

ಮೂಲಮ್ - 2

ತೇಷಾಂ ಮಧ್ಯೇ ವಿಶಾಲಾಕ್ಷೀ ಕೌಶೇಯಂ ಕನಕಪ್ರಭಮ್ ।
ಉತ್ತರೀಯಂ ವರಾರೋಹಾ ಶುಭಾನ್ಯಾಭರಣಾನಿ ಚ ॥

ಮೂಲಮ್ - 3

ಮುಮೋಚ ಯದಿ ರಾಮಾಯ ಶಂಸೇಯುರಿತಿ ಭಾಮಿನೀ ।
ವಸ್ತ್ರಮುತ್ಸೃಜ್ಯ ತನ್ಮಧ್ಯೇ ನಿಕ್ಷಿಪ್ತಂ ಸಹಭೂಷಣಮ್ ॥

ಅನುವಾದ

ಆಗ ಸುಂದರ ಅಂಗಗಳುಳ್ಳ ವಿಶಾಲಲೋಚನೆ ಭಾಮಿನಿ ಸೀತೆಯು ಇವರು ಭಗವಾನ್ ಶ್ರೀರಾಮನಿಗೆ ಏನಾದರೂ ಸಮಾಚಾರ ಹೇಳಬಹುದು ಎಂದು ಯೋಚಿಸಿ, ತನ್ನ ಪೀತಾಂಬರದ ಉತ್ತರಿಯದಲ್ಲಿ ಒಡವೆಗಳನ್ನು ಕಟ್ಟಿ ವಾನರರ ನಡುವೆ ಎಸೆದಳು.॥2-3॥

ಮೂಲಮ್ - 4½

ಸಂಭ್ರಮಾತ್ತು ದಶಗ್ರೀವಸ್ತತ್ಕರ್ಮ ಚ ನ ಬುದ್ಧವಾನ್ ।
ಪಿಂಗಾಕ್ಷಾಸ್ತಾಂ ವಿಶಾಲಾಕ್ಷೀಂ ನೇತ್ರೈರನಿಮಿಷೈರಿವ ॥
ವಿಕ್ರೋಶಂತೀಂ ತದಾ ಸೀತಾಂ ದದೃಶುರ್ವಾನರೋತ್ತಮಾಃ ।

ಅನುವಾದ

ರಾವಣನು ಅವಸರದಲ್ಲಿದ್ದರಿಂದ ಸೀತೆಯ ಈ ಕಾರ್ಯವನ್ನು ತಿಳಿಯದೇ ಹೋದನು. ಆ ಪಿಂಗಳ ಕಣ್ಣಿನ ಶ್ರೇಷ್ಠವಾನರರು ಆಗ ಗಟ್ಟಿಯಾಗಿ ವಿಲಪಿಸುತ್ತಿರುವ ವಿಶಾಲಾಕ್ಷಿ ಸೀತೆಯ ಕಡೆಗೆ ನೋಡುತ್ತಿದ್ದರು.॥4½॥

ಮೂಲಮ್ - 5½

ಸ ಚ ಪಂಪಾಮತಿಕ್ರಮ್ಯ ಲಂಕಾಮಭಿಮುಖಃ ಪುರೀಮ್ ॥
ಜಗಾಮಮೈಥಿಲೀಂ ಗೃಹ್ಯ ರುದತೀಂ ರಾಕ್ಷಸೇಶ್ವರಃ ।

ಅನುವಾದ

ರಾಕ್ಷಸೇಶ್ವರ ರಾವಣನು ಪಂಪಾ ಸರೋವರವನ್ನು ದಾಟಿ ಅಳುತ್ತಿರುವ ಸೀತೆಯನ್ನು ಎತ್ತಿಕೊಂಡು ಲಂಕಾಪುರಿಗೆ ಹೊರಟುಹೋದನು.॥5½॥

ಮೂಲಮ್ - 6½

ತಾಂ ಜಹಾರ ಸುಸಂಹೃಷ್ಟೋ ರಾವಣೋ ಮೃತ್ಯುಮಾತ್ಮನಃ ॥
ಉತ್ಸಂಗೇನೈವ ಭುಜಗೀಂ ತೀಕ್ಷ್ಣದಂಷ್ಟ್ರಾಂ ಮಹಾವಿಷಾಮ್ ।

ಅನುವಾದ

ನಿಶಾಚರ ರಾವಣನು ಬಹಳ ಹರ್ಷದಿಂದ ಸೀತಾರೂಪೀ ತನ್ನ ಮೃತ್ಯುವನ್ನೇ ಕದ್ದುಕೊಂಡು ಹೋಗುತ್ತಿದ್ದನು. ಅವನು ವೈದೇಹಿ ರೂಪದ ತೀವ್ರವಾದ ಕೊರೆದಾಡೆಯ ಮಹಾವಿಷದ ಸರ್ಪಿಣಿಯನ್ನೇ ಎತ್ತಿಕೊಂಡಿದ್ದನು.॥6½॥

ಮೂಲಮ್ - 7½

ವನಾನಿ ಸರಿತಃ ಶೈಲಾನ್ಸರಾಂಸಿ ಚ ವಿಹಾಯಸಾ ॥
ಸ ಕ್ಷಿಪ್ರಂ ಸಮತೀಯಾಯ ಶರಶ್ಚಾಪಾದಿವ ಚ್ಯುತಃ ।

ಅನುವಾದ

ಅವನು ಧನುಸ್ಸಿನಿಂದ ಬಿಟ್ಟ ಬಾಣದಂತೆ ವೇಗವಾಗಿ ಆಕಾಶಮಾರ್ಗದಿಂದ ಅನೇಕ ವನ, ನದಿ, ಪರ್ವತಗಳನ್ನು, ಸರೋವರಗಳನ್ನು ದಾಟಿ ಹೋದನು.॥7½॥

ಮೂಲಮ್ - 8½

ತಿಮಿನಕ್ರನಿಕೇತಂ ತು ವರುಣಾಲಯಮಕ್ಷಯಮ್ ॥
ಸರಿತಾಂ ಶರಣಂ ಗತ್ವಾ ಸಮತೀಯಾಯ ಸಾಗರಮ್ ।

ಮೂಲಮ್ - 9½

ಸಂಭ್ರಮಾತ್ಪರಿವೃತ್ತೋರ್ಮೀ ರುದ್ಧಮೀನಮಹೋರಗಃ ॥
ವೈದೇಹ್ಯಾಂ ಹ್ರಿಯಮಾಣಾಯಾಂ ಬಭೂವ ವರುಣಾಲಯಃ ।

ಅನುವಾದ

ವಿದೇಹ ನಂದಿನೀ ಜಗನ್ಮಾತೆ ಜಾನಕಿಯ ಅಪಹರಣವಾಗುವುದನ್ನು ನೋಡಿ ವರುಣಾಲಯ ಸಮುದ್ರಕ್ಕೆ ತುಂಬಾ ಗಾಬರಿಯಾಯಿತು. ಅದರಿಂದ ಏಳುತ್ತಿದ್ದ ಅಲೆಗಳು ಶಾಂತವಾಗಿದ್ದು ಅದರೊಳಗೆ ವಾಸಿಸುವ ಮೀನುಗಳ, ದೊಡ್ಡ ದೊಡ್ಡ ಸರ್ಪಗಳ ಗತಿ ನಿಂತುಹೋಯಿತು.॥8½-9½॥

ಮೂಲಮ್ - 10½

ಅಂತರಿಕ್ಷಗತಾ ವಾಚಃ ಸಸೃಜುಶ್ಚಾರಣಾಸ್ತದಾ ॥
ಏತದಂತೋ ದಶಗ್ರೀವ ಇತಿ ಸಿದ್ಧಾಸ್ತಥಾಬ್ರುವನ್ ।

ಅನುವಾದ

ಆಗ ಆಕಾಶ ಸಂಚಾರಿಗಳಾದ ಚಾರಣರು ಹಾಗೂ ಸಿದ್ಧರೂ-ಈಗ ದಶಗ್ರೀವ ರಾವಣನ ಅಂತ್ಯಕಾಲ ಸಮಿಪಿಸಿತು ಎಂದು ಅಂದುಕೊಂಡರು.॥10½॥

ಮೂಲಮ್ - 11½

ಸ ತು ಸೀತಾಂ ವಿಚೇಷ್ಟಂತೀಮಂಕೇನಾದಾಯ ರಾವಣಃ ॥
ಪ್ರವಿವೇಶ ಪುರೀಂ ಲಂಕಾಂ ರೂಪಿಣೀಂ ಮೃತ್ಯುಮಾತ್ಮನಃ ।

ಅನುವಾದ

ಸೀತೆಯು ಒದ್ದಾಡುತ್ತಿದ್ದಳು. ರಾವಣನು ತನ್ನ ಸಾಕಾರ ಮೃತ್ಯುವಿನಂತೆ ಆಕೆಯನ್ನು ಎತ್ತಿಕೊಂಡು ಲಂಕಾಪುರಿಯನ್ನು ಪ್ರವೇಶಿಸಿದನು.॥11½॥

ಮೂಲಮ್ - 12½

ಸೋಽಭಿಗಮ್ಯ ಪುರೀಂ ಲಂಕಾಂ ಸುವಿಭಕ್ತಮಹಾಪಥಾಮ್ ॥
ಸಂರೂಢಕಕ್ಷ್ಯಾಂ ಬಹುಲಾಂ ಸ್ವಮಂತಃಪುರಮಾವಿಶತ್ ।

ಅನುವಾದ

ಅಲ್ಲಿ ಬೇರೆ-ಬೇರೆ ವಿಶಾಲ ರಾಜಮಾರ್ಗಗಳಿದ್ದವು. ಪುರಿಯ ದ್ವಾರದಲ್ಲಿ ಅನೇಕ ರಾಕ್ಷಸರು ಎಲ್ಲೆಡೆ ಆವರಿಸಿಕೊಂಡಿದ್ದರು. ಆ ನಗರಿಯು ತುಂಬಾ ವಿಸ್ತಾರವಾಗಿತ್ತು. ಅಲ್ಲಿಗೆ ಹೋಗಿ ರಾವಣನು ತನ್ನ ಅಂತಃಪುರವನ್ನು ಪ್ರವೇಶಿಸಿದನು.॥12½॥

ಮೂಲಮ್ - 13½

ತತ್ರ ತಾಮಸಿತಾಪಾಂಗೀಂ ಶೋಕಮೋಹ ಸಮನ್ವಿತಾಮ್ ॥
ನಿದಧೇ ರಾವಣಃ ಸೀತಾಂ ಮಯೋ ಮಾಯಾಮಿವಾಸುರೀಮ್ ।

ಅನುವಾದ

ಕಾಡಿಗೆಯಂತೆ ಕಣ್ಣುಳ್ಳ ಸೀತೆಯು ಶೋಕ-ಮೋಹದಲ್ಲಿ ಮುಳುಗಿದ್ದಳು. ರಾವಣನು ಆಕೆಯನ್ನು ಮಯಾಸುರನು ಮೂರ್ತಿಮಂತ ಆಸುರೀ ಮಾಯೆಯನ್ನು ಸ್ಥಾಪಿಸಿದ್ದ ಆ ಅಂತಃಪುರದಲ್ಲಿ ಇರಿಸಿದನು..॥13½॥

ಟಿಪ್ಪನೀ

*ರಾಮಾಯಣ ತಿಲಕ ವ್ಯಾಖ್ಯೆಯ ವಿದ್ವಾಂಸನು ಇಲ್ಲಿ ಕೊಟ್ಟಿರುವ ಸೀತೆಯ ಉಪಮೆಯಿಂದ ಮಾಯಾಮಯಿ ಸೀತೆಯೇ ಲಂಕೆಗೆ ಬಂದಿದ್ದಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವನು. ಮುಖ್ಯ ಸೀತೆಯಾದರೋ ಅಗ್ನಿಯಲ್ಲಿ ಪ್ರವಿಷ್ಟಳಾಗಿದ್ದಳು. ಅದಕ್ಕಾಗಿ ರಾವಣನಿಂದ ಅವಳನ್ನು ತರಲಾಗಲಿಲ್ಲ. ಮಾಯಾರೂಪಿಣೀಯಾದ್ದರಿಂದಲೇ ರಾವಣನಿಗೆ ಈಕೆಯ ಸ್ವರೂಪದ ಜ್ಞಾನವಾಗಲಿಲ್ಲ ಎಂದು ಹೇಳಿರುವನು.

ಮೂಲಮ್ - 14½

ಅಬ್ರವೀಚ್ಚ ದಶಗ್ರೀವಃ ಪಿಶಾಚೀರ್ಘೋರದರ್ಶನಾಃ ॥
ಯಥಾ ನೈನಾಂ ಪುಮಾನ್ ಸ್ತ್ರೀ ವಾ ಸೀತಾಂ ಪಶ್ಯತ್ಯಸಂಮತಃ ।

ಅನುವಾದ

ಅನಂತರ ದಶಗ್ರೀವನು ಭಯಂಕರ ಆಕಾರವುಳ್ಳ ಹೆಣ್ಣು ಪಿಶಾಚಿಗಳನ್ನು ಕರೆದು-‘ನೀವೆಲ್ಲರೂ ಎಚ್ಚರಿಕೆಯಿಂದ ಸೀತೆಯನ್ನು ರಕ್ಷಿಸಿರಿ. ಯಾವುದೇ ಸ್ತ್ರೀಯಾಗಲೀ, ಪುರುಷರಾಗಲಿ ನನ್ನ ಆಜ್ಞೆಯಿಲ್ಲದೆ ಸೀತೆಯನ್ನು ನೋಡುವುದು ಅಥವಾ ಭೆಟ್ಟಿಯಾಗುವುದು ಕೂಡದು’ ಎಂದು ಅಪ್ಪಣೆ ಮಾಡಿದನು.॥14½॥

ಮೂಲಮ್ - 15½

ಮುಕ್ತಾಮಣಿಸುವರ್ಣಾನಿ ವಸ್ತ್ರಾಣ್ಯಾಭರಣಾನಿ ಚ ॥
ಯದ್ಯದೀಚ್ಛತ್ ತದೈವಾಸ್ಯಾ ದೇಯಂ ಮಚ್ಛಂದತೋ ಯಥಾ ।

ಅನುವಾದ

ಅವಳಿಗೆ ಮುತ್ತು ಮಣಿ, ಸುವರ್ಣ, ವಸ್ತ್ರ ಮತ್ತು ಆಭೂಷಣಾದಿಗಳು ಅವಳು ಇಚ್ಛಿಸಿದ ವಸ್ತ್ರವನ್ನು ಕೂಡಲೇ ಪೂರೈಸಬೇಕು. ಇದಕ್ಕೆ ಯಾವುದೇ ನನ್ನ ಅಡ್ಡಿ ಇಲ್ಲ.॥15½॥

ಮೂಲಮ್ - 16½

ಯಾ ಚ ವಕ್ಷ್ಯತಿ ವೈದೇಹೀಂ ವಚನಂ ಕಿಂಚಿದಪ್ರಿಯಮ್ ॥
ಅಜ್ಞಾನಾದ್ಯದಿ ವಾ ಜ್ಞಾನಾನ್ನ ತಸ್ಯಾ ಜೀವಿತಂ ಪ್ರಿಯಮ್ ।

ಅನುವಾದ

ನಿಮ್ಮಲ್ಲಿ ಯಾರಾದರೂ ತಿಳಿದೋ ತಿಳಿಯದೆಯೋ ವಿದೇಹ ಕುಮಾರೀ ಸೀತೆಯಲ್ಲಿ ಯಾವುದೇ ಅಪ್ರಿಯವಾದ ಮಾತನ್ನು ಆಡಿದುದು ನನಗೆ ತಿಳಿದರೆ ನೀವು ಮೃತ್ಯುವಿನಿಂದ ಕೈತೊಳೆದುಕೊಳ್ಳಬೇಕಾದೀತು.॥16½॥

ಮೂಲಮ್ - 17

ತಥೋಕ್ತ್ವಾ ರಾಕ್ಷಸೀಸ್ತಾಸ್ತು ರಾಕ್ಷಸೇಂದ್ರಃ ಪ್ರತಾಪವಾನ್ ॥

ಮೂಲಮ್ - 18

ನಿಷ್ಕ್ರಮ್ಯಾಂತಃಪುರಾತ್ತಸ್ಮಾತ್ ಕಿಂ ಕೃತ್ಯಮಿತಿ ಚಿಂತಯನ್ ।
ದದರ್ಶಾಷ್ಟೌ ಮಹಾವೀರ್ಯಾನ್ ರಾಕ್ಷಸಾನ್ ಪಿಶಿತಾಶನಾನ್ ॥

ಅನುವಾದ

ರಾಕ್ಷಸಿಯರಿಗೆ ಹೀಗೆ ಅಜ್ಞಾಪಿಸಿ ಪ್ರತಾಪಿ ರಾವಣನು ‘ಈಗ ಮುಂದೇನು ಮಾಡುವುದು’ ಎಂದು ಯೋಚಿಸುತ್ತಾ ಅಂತಃಪುರದಿಂದ ಹೊರಗೆ ಬಂದು, ಹಸಿಮಾಂಸವನ್ನು ತಿನ್ನುವ ಎಂಟುಮಂದಿ ಮಹಾ ಪರಾಕ್ರಮಿ ರಾಕ್ಷಸರನ್ನು ಕರೆಸಿದನು.॥17-18॥

ಮೂಲಮ್ - 19

ಸ ತಾನ್ದೃಷ್ಟ್ವಾ ಮಹಾವೀರ್ಯೋ ವರದಾನೇನ ಮೋಹಿತಃ ।
ಉವಾಚತಾನಿದಂ ವಾಕ್ಯಂ ಪ್ರಶಸ್ಯ ಬಲವೀರ್ಯತಃ ॥

ಅನುವಾದ

ಬ್ರಹ್ಮದೇವರ ವರದಿಂದ ಮೋಹಿತನಾದ ಮಹಾಪರಾಕ್ರಮಿ ರಾವಣನು ಅವರ ಬಲ-ಪರಾಕ್ರಮವನ್ನು ಹೊಗಳುತ್ತಾ ಅವರಲ್ಲಿ ಈ ಪ್ರಕಾರ ಹೇಳಿದನು.॥19॥

ಮೂಲಮ್ - 20

ನಾನಾ ಪ್ರಹರಣಾಃ ಕ್ಷಿಪ್ರಮಿತೋ ಗಚ್ಛತ ಸತ್ವರಾಃ ।
ಜನಸ್ಥಾನಂ ಹತಸ್ಥಾನಂ ಭೂತಂ ಪೂರ್ವಂ ಖರಾಲಯಮ್ ॥

ಅನುವಾದ

ವೀರರೇ! ನೀವೆಲ್ಲರೂ ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳೊಂದಿಗೆ ಶೀಘ್ರವಾಗಿ ಮೊದಲು ಖರನು ವಾಸಿಸುತ್ತಿದ್ದ ಜನಸ್ಥಾನಕ್ಕೆ ತೆರಳಿರಿ. ಆ ಸ್ಥಾನ ಈಗ ಹಾಳುಬಿದ್ದಿದೆ.॥20॥

ಮೂಲಮ್ - 21

ತತ್ರಾಸ್ಯತಾಂ ಜನಸ್ಥಾನೇ ಶೂನ್ಯೇ ನಿಹತರಾಕ್ಷಸೇ ।
ಪೌರುಷಂ ಬಲಮಾಶ್ರಿತ್ಯ ತ್ರಾಸಮುತ್ಸೃಜ್ಯ ದೂರತಃ ॥

ಅನುವಾದ

ಅಲ್ಲಿಯ ಎಲ್ಲ ರಾಕ್ಷಸರು ಸತ್ತುಹೋಗಿರುವರು. ಶೂನ್ಯವಾದ ಜನಸ್ಥಾನದಲ್ಲಿ ನೀವು ನಿಮ್ಮ ಬಲ-ಪೌರುಷದ ಭರವಸೆಯಿಂದ ಭಯವನ್ನು ದೂರಗೊಳಿಸಿ ಇರಿ.॥21॥

ಮೂಲಮ್ - 22

ಬಹುಸೈನ್ಯಂ ಮಹಾವೀರ್ಯಂ ಜನಸ್ಥಾನೇ ನಿವೇಶಿತಮ್ ।
ಸದೂಷಣಖರಂ ಯುದ್ಧೇ ನಿಹತಂ ರಾಮಸಾಯಕೈಃ ॥

ಅನುವಾದ

ನಾನು ಅಲ್ಲಿ ಬಹಳ ದೊಡ್ಡ ಸೈನ್ಯದೊಂದಿಗೆ ಮಹಾಪರಾಕ್ರಮಿ ಖರ-ದೂಷಣರನ್ನು ನೆಲೆಗೊಳಿಸಿದ್ದೆ. ಆದರೆ ಅವರೆಲ್ಲರನ್ನೂ ಯುದ್ಧದಲ್ಲಿ ರಾಮನು ಕೊಂದುಹಾಕಿದನು.॥22॥

ಮೂಲಮ್ - 23

ತತಃ ಕ್ರೋಧೋ ಮಮಾಪೂರ್ವೋ ಧೈರ್ಯಸ್ಯೋಪರಿ ವರ್ತತೇ ।
ವೈರಂ ಚ ಸುಮಹಜ್ಜಾತಂ ರಾಮಂ ಪ್ರತಿ ಸುದಾರುಣಮ್ ॥

ಅನುವಾದ

ಇದರಿಂದ ನನ್ನ ಮನಸ್ಸಿನಲ್ಲಿ ಭಾರೀ ಕ್ರೋಧ ಉಂಟಾಗಿದೆ ಮತ್ತು ಅವನ ಧೈರ್ಯದ ಮೇರೆ ಮೀರಿ ಹೆಚ್ಚುತ್ತಿದೆ. ಇದಕ್ಕಾಗಿ ರಾಮನೊಂದಿಗೆ ನನಗೆ ಭಯಂಕರ ಭಾರೀ ವೈರ ಉಂಟಾಗಿದೆ.॥23॥

ಮೂಲಮ್ - 24

ನಿರ್ಯಾತಯಿತುಮಿಚ್ಛಾಮಿ ತಚ್ಚ ವೈರಂ ಮಹಾರಿಪೋಃ ।
ನ ಹಿ ಲಪ್ಸ್ಯಾಮ್ಯಹಂ ನಿದ್ರಾಮಹತ್ವಾ ಸಂಯುಗೇ ರಿಪುಮ್ ॥

ಅನುವಾದ

ನಾನು ನನ್ನ ಮಹಾಶತ್ರುವಿನೊಂದಿಗೆ ಸೇಡು ತೀರಿಸಿಕೊಳ್ಳಬೇಕೆಂದು ಬಯಸುತ್ತೇನೆ. ಆ ಶತ್ರುವನ್ನು ಸಂಗ್ರಾಮದಲ್ಲಿ ಕೊಲ್ಲದೆ ನನಗೆ ಸಮಾಧಾನವಿರದು.॥24॥

ಮೂಲಮ್ - 25

ತಂ ತ್ವಿದಾನೀಮಹಂ ಹತ್ವಾ ಖರದೂಷಣ ಘಾತಿನಮ್ ।
ರಾಮಂ ಶರ್ಮೋಪಲಪ್ಸ್ಯಾಮಿ ಧನಂ ಲಬ್ಧ್ವೇವ ನಿರ್ಧನಃ ॥

ಅನುವಾದ

ರಾಮನು ಖರ-ದೂಷಣರನ್ನು ವಧಿಸಿರುವನು, ಆದ್ದರಿಂದ ನಾನೂ ಕೂಡ ಈಗ ಅವನನ್ನು ಕೊಂದು ಸೇಡು ತೀರಿಸಿಕೊಳ್ಳುವೆನು, ಆಗಲೇ ನನಗೆ ಶಾಂತಿ ಸಿಗಬಹುದು. ನಿರ್ಧನ ಮನುಷ್ಯನು ಧನವನ್ನು ಪಡೆದು ಸಂತುಷ್ಟನಾಗುವಂತೆಯೇ ನಾನು ರಾಮನನ್ನು ವಧಿಸಿ ಶಾಂತಿಯನ್ನು ಪಡೆಯಬಲ್ಲೆ.॥25॥

ಮೂಲಮ್ - 26

ಜನಸ್ಥಾನೇ ವಸದ್ಭಿಸ್ತು ಭವದ್ಭೀ ರಾಮಮಾಶ್ರಿತಾ ।
ಪ್ರವೃತ್ತಿರುಪನೇತವ್ಯಾ ಕಿಂ ಕರೋತೀತಿ ತತ್ತ್ವತಃ ॥

ಅನುವಾದ

ಜನಸ್ಥಾನದಲ್ಲಿ ಇದ್ದು ನೀವು ರಾಮನ ಸಮಾಚಾರ ತಿಳಿಯಿರಿ ಮತ್ತು ಅವನು ಯಾವಾಗ ಏನು ಮಾಡುತ್ತಾನೆ? ಇದನ್ನು ಸರಿಯಾಗಿ ತಿಳಿಯುತ್ತಾ ಇರಿ. ನೀವು ತಿಳಿದಿರುವುದನ್ನು ನನಗೆ ತಿಳಿಸುತ್ತಾ ಇರಿ.॥26॥

ಮೂಲಮ್ - 27

ಅಪ್ರಮಾದಚ್ಚ ಗಂತವ್ಯಂ ಸರ್ವೈರೇವ ನಿಶಾಚರೈಃ ।
ಕರ್ತವ್ಯಶ್ಚ ಸದಾ ಯತ್ನೋ ರಾಘವಸ್ಯ ವಧಂ ಪ್ರತಿ ॥

ಅನುವಾದ

ನೀವೆಲ್ಲ ನಿಶಾಚರರು ಎಚ್ಚರಿಕೆಯಿಂದ ಅಲ್ಲಿಗೆ ಹೋಗಿ ರಾಮನ ವಧೆಗಾಗಿ ಸದಾ ಪ್ರಯತ್ನಿಸುತ್ತಾ ಇರಿ.॥27॥

ಮೂಲಮ್ - 28

ಯುಷ್ಮಾಕಂ ತು ಬಲಂ ಜ್ಞಾತಂ ಬಹುಶೋ ರಣಮೂರ್ಧನಿ ।
ಅತಶ್ಚಾಸ್ಮಿಂಜನಸ್ಥಾನೇ ಮಯಾ ಯೂಯಂ ನಿವೇಶಿತಾಃ ॥

ಅನುವಾದ

ಅನೇಕ ಸಲ ಯುದ್ಧದ ಸಂದರ್ಭದಲ್ಲಿ ನಿಮ್ಮ ಬಲದ ಪರಿಚಯ ನನಗೆ ಆಗಿದೆ, ಅದಕ್ಕಾಗಿ ಜನಸ್ಥಾನದಲ್ಲಿ ನಿಮ್ಮನ್ನು ಇರಿಸಲು ನಿಶ್ಚಯಿಸಿರುವೆನು.॥28॥

ಮೂಲಮ್ - 29

ತತಃ ಪ್ರಿಯಂ ವಾಕ್ಯಮುಪೇತ್ಯ ರಾಕ್ಷಸಾ
ಮಹಾರ್ಥಮಷ್ಟಾವಭಿವಾದ್ಯ ರಾವಣಮ್ ।
ವಿಹಾಯ ಲಂಕಾಂ ಸಹಿತಾಃ ಪ್ರತಸ್ಥಿರೇ
ಯತೋ ಜನಸ್ಥಾನಮಲಕ್ಷ್ಯದರ್ಶನಾಃ ॥

ಅನುವಾದ

ರಾವಣನ ಈ ಮಹಾನ್ ಪ್ರಯೋಜನದಿಂದ ತುಂಬಿದ ಪ್ರಿಯಮಾತನ್ನು ಕೇಳಿ ಆ ಎಂಟು ರಾಕ್ಷಸರೂ ಅವನಿಗೆ ನಮಸ್ಕರಿಸಿ, ಅದೃಶ್ಯರಾಗಿ ಒಮ್ಮೆಲೇ ಲಂಕೆಯನ್ನು ಬಿಟ್ಟು ಜನಸ್ಥಾನದ ಕಡೆಗೆ ಹೊರಟು ಹೋದರು.॥29॥

ಮೂಲಮ್ - 30

ತತಸ್ತು ಸೀತಾಮುಪಲಭ್ಯ ರಾವಣಃ
ಸುಸಂಪ್ರಹೃಷ್ಟಃ ಪರಿಗೃಹ್ಯ ಮೈಥಿಲೀಮ್ ।
ಪ್ರಸಜ್ಯ ರಾಮೇಣ ಚ ವೈರಮುತ್ತಮಂ
ಬಭೂವ ಮೋಹಾನ್ಮುದಿತಃ ಸ ರಾವಣಃ ॥

ಅನುವಾದ

ಅನಂತರ ಮಿಥಿಲೇಶಕುಮಾರಿ ಸೀತೆಯನ್ನು ಪಡೆದು, ಆಕೆಯನ್ನು ರಾಕ್ಷಸಿಯರ ಕಣ್ಗಾವಲಿನಲ್ಲಿರಿಸಿ ರಾವಣನಿಗೆ ಬಹಳ ಹರ್ಷವಾಯಿತು. ಶ್ರೀರಾಮನೊಂದಿಗೆ ಭಾರೀ ವೈರವನ್ನು ಕಟ್ಟಿಕೊಂಡು ಆ ರಾಕ್ಷಸನು ಮೋಹವಶ ಆನಂದಪಟ್ಟನು.॥30॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥54॥