वाचनम्
ಭಾಗಸೂಚನಾ
ಸೀತೆಯು ರಾವಣನನ್ನು ಧಿಕ್ಕರಿಸಿದುದು
ಮೂಲಮ್ - 1
ಖಮುತ್ಪತಂತಂ ತಂ ದೃಷ್ಟ್ವಾ ಮೈಥಿಲೀ ಜನಕಾತ್ಮಜಾ ।
ದುಃಖಿತಾ ಪರಮೋದ್ವಿಗ್ನಾ ಭಯೇ ಮಹತಿವರ್ತಿನೀ ॥
ಅನುವಾದ
ರಾವಣನು ಆಕಾಶದಿಂದ ಹಾರಿ ಹೋಗುವುದನ್ನು ನೋಡಿ ಮೈಥಿಲಿಯು ದುಃಖಮಗ್ನಳಾಗಿ ಅತ್ಯಂತ ಉದ್ವಿಗ್ನವಾಗಿದ್ದಳು. ಅವಳು ಭಾರೀ ದುಃಖದಲ್ಲಿ ಬಿದ್ದಿದ್ದಳು.॥1॥
ಮೂಲಮ್ - 2
ರೋಷರೋದನತಾಮ್ರಾಕ್ಷೀ ಭೀಮಾಕ್ಷಂ ರಾಕ್ಷಸಾಧಿಪಮ್ ।
ರುದಂತೀ ಕರುಣಂ ಸೀತಾ ಹ್ರಿಯಮಾಣಾ ತಮಬ್ರವೀತ್ ॥
ಅನುವಾದ
ಅಳುವುದರಿಂದ ಮತ್ತು ರೋಷದಿಂದ ಆಕೆಯ ಕಣ್ಣುಗಳು ಕೆಂಪಾಗಿದ್ದವು. ಅಪಹೃತಳಾದ ಸೀತೆಯು ಕರುಣಾಜನಕವಾಗಿ ಅಳುತ್ತಾ ಆ ಭಯಂಕರ ನೇತ್ರವುಳ್ಳ ರಾವಣನಲ್ಲಿ ಹೀಗೆ ಹೇಳಿದಳು.॥2॥
ಮೂಲಮ್ - 3
ನ ವ್ಯಪತ್ರಪಸೇ ನೀಚ ಕರ್ಮಣಾನೇನ ರಾವಣ ।
ಜ್ಞಾತ್ವಾ ವಿರಹಿತಾಂ ಯೋ ಮಾಂ ಚೋರಯಿತ್ವಾ ಪಲಾಯಸೇ ॥
ಅನುವಾದ
ಎಲವೋ ನೀಚ ರಾವಣನೇ! ನಿನಗೆ ನಿನ್ನ ಈ ಕೆಟ್ಟ ಕರ್ಮದಿಂದ ನಾಚಿಕೆಯಾಗುವುದಿಲ್ಲವೇ? ನನ್ನ ಸ್ವಾಮಿಯು ಇಲ್ಲದಿರುವಾಗ, ಒಬ್ಬಂಟಿಗಳಾದ, ಅಸಹಾಯಕಳಾದ ನನ್ನನ್ನು ಕದ್ದುಕೊಂಡು ಹೋಗುತ್ತಿರುವೆಯಲ್ಲ.॥3॥
ಮೂಲಮ್ - 4
ತ್ವಯೈವ ನೂನಂ ದುಷ್ಟಾನ್ ಭೀರುಣಾ ಹರ್ತುಮಿಚ್ಛತಾ ।
ಮಮಾಪವಾಹಿತೋ ಭರ್ತಾ ಮೃಗರೂಪೇಣ ಮಾಯಯಾ ॥
ಅನುವಾದ
ದುಷ್ಟನೇ! ನೀನು ಬಹಳ ಅಂಜುಬುರುಕ ಮತ್ತು ಹೇಡಿಯಾಗಿರುವೆ. ನಿಶ್ಚಯವಾಗಿಯೂ ನನ್ನನ್ನೇ ಕದ್ದುಕೊಂಡು ಹೋಗಲು ನೀನೇ ಮಾಯೆಯಿಂದ ಮೃಗರೂಪದಲ್ಲಿ ಬಂದು ನನ್ನ ಸ್ವಾಮಿಯನ್ನು ಆಶ್ರಮದಿಂದ ದೂರಮಾಡಿರುವೆ.॥4॥
ಮೂಲಮ್ - 5
ಯೋ ಹಿ ಮಾಮುದ್ಯತಸ್ತ್ರಾತುಂ ಸೋಽಪ್ಯಯಂ ವಿನಿಪಾತಿತಃ ।
ಗೃಧ್ರರಾಜಃ ಪುರಾಣೋಽಸೌ ಶ್ವಶುರಸ್ಯ ಸಖಾ ಮಮ ॥
ಅನುವಾದ
ನನ್ನ ಮಾವನವರ ಸ್ನೇಹಿತ ಆ ಮುದುಕ ಜಟಾಯು ನನ್ನನ್ನು ರಕ್ಷಿಸಲು ಮುಂದಾದಾಗ ಅವನನ್ನೂ ನೀನು ಕೊಂದು ಹಾಕಿದೆ.॥5॥
ಮೂಲಮ್ - 6
ಪರಮಂ ಖಲು ತೇ ವೀರ್ಯಂ ದೃಶ್ಯತೇ ರಾಕ್ಷಸಾಧಮ ।
ವಿಶ್ರಾವ್ಯ ನಾಮಧೇಯಂ ಹಿ ಯುದ್ಧೇ ನಾಸ್ಮಿ ಜಿತಾತ್ವಯಾ ॥
ಮೂಲಮ್ - 7
ಈದೃಶಂ ಗರ್ಹಿತಂಕರ್ಮ ಕಥಂ ಕೃತ್ವಾ ನ ಲಜ್ಜಸೇ ।
ಸ್ತ್ರಿಯಾಶ್ಚಾ ಹರಣಂ ನೀಚ ರಹಿತೇ ಚ ಪರಸ್ಯಚ ॥
ಅನುವಾದ
ನೀಚರಾಕ್ಷಸನೇ! ಖಂಡಿತವಾಗಿ ನಿನ್ನಲ್ಲಿ ಭಾರೀ ಬಲ ಕಂಡುಬರುತ್ತದೆ. ಏಕೆಂದರೆ ನೀನು ಮುದಿ ಪಕ್ಷಿಯನ್ನು ಕೊಂಡು ಕೆಡಹಿದೆ. ನೀನು ನಿನ್ನ ನಾಮವನ್ನು ತಿಳಿಸಿ ಶ್ರೀರಾಮ-ಲಕ್ಷ್ಮಣರೊಡನೆ ಯುದ್ಧಮಾಡಿ ನನ್ನನ್ನು ಗೆದ್ದುಕೊಂಡಿಲ್ಲ. ಎಲವೋ ನೀಚನೇ! ಯಾರೂ ರಕ್ಷಕರಿಲ್ಲದ ಜಾಗಕ್ಕೆ ಹೋಗಿ ಪರಸ್ತ್ರೀಯನ್ನು ಅಪಹರಣದಂತಹ ನಿಂದಿತ ಕಾರ್ಯ ಮಾಡಿಯೂ ನಿನಗೆ ನಾಚಿಕೆಯಾಗುವುದಿಲ್ಲವೇ.॥6-7॥
ಮೂಲಮ್ - 8
ಕಥಯಿಷ್ಯಂತಿ ಲೋಕೇಷು ಪುರುಷಾಃ ಕರ್ಮ ಕುತ್ಸಿತಮ್ ।
ಸುನೃಶಂ ಸಮಧರ್ಮಿಷ್ಠಂ ತವ ಶೌಟೀರ್ಯಮಾನಿನಃ ॥
ಅನುವಾದ
ನೀನಾದರೋ ತನ್ನನ್ನು ದೊಡ್ಡ ಶೂರ-ವೀರನೆಂದು ತಿಳಿಯುತ್ತಿರುವೆ, ಆದರೆ ಜಗತ್ತಿನ ಎಲ್ಲ ವೀರ ಪುರುಷರು ನಿನ್ನ ಈ ಕರ್ಮವನ್ನು ನಿಂದಿತ, ಕ್ರೂರತಾಪೂರ್ಣ ಮತ್ತು ಪಾಪಪೂರ್ಣವೆಂದು ಹೇಳುವರು.॥8॥
ಮೂಲಮ್ - 9
ಧಿಕ್ತೇ ಶೌರ್ಯಂ ಚ ಸತ್ತ್ವಂ ಚ ಯತ್ತ್ವಯಾ ಕಥಿತಂ ತದಾ ।
ಕುಲಾಕ್ರೋಶಕರಂ ಲೋಕೇ ಧಿಕ್ತೇ ಚಾರಿತ್ರಮೀದೃಶಮ್ ॥
ಅನುವಾದ
ನೀನು ಮೊದಲು ತನ್ನ ಶೌರ್ಯದ ಬಡಾಯಿ ಕೊಚ್ಚಿಕೊಂಡಿರುವುದಕ್ಕೆ ಧಿಕ್ಕಾರವಿರಲಿ. ಕುಲಕ್ಕೆ ಕಳಂಕವನ್ನು ಹಚ್ಚುವ ನಿನ್ನ ಇಂತಹ ಚರಿತ್ರೆಗೆ ಜಗತ್ತಿನಲ್ಲಿ ಧಿಕ್ಕಾರ ಉಂಟಾದೀತು.॥9॥
ಮೂಲಮ್ - 10
ಕಿಂ ಶಕ್ಯಂ ಕರ್ತುಮೇವಂಹಿ ಯಜ್ಜವೇನೈವ ಧಾವಸಿ ।
ಮುಹೂರ್ತಮಪಿ ತಿಷ್ಠ ತ್ವಂ ನ ಜೀವನ್ಪ್ರತಿಯಾಸ್ಯಸಿ ॥
ಅನುವಾದ
ಆದರೆ ಈಗ ಏನು ಮಾಡಲಾಗುವುದು? ಏಕೆಂದರೆ ನೀನು ತುಂಬಾ ವೇಗವಾಗಿ ಓಡಿಹೋಗುತ್ತಿರುವೆ. ಎಲವೋ! ಎರಡುಗಳಿಗೆ ನಿಲ್ಲು, ಮತ್ತೆ ನೀನು ಇಲ್ಲಿಂದ ಜೀವಂತವಾಗಿ ಹೋಗಲಾರೆ.॥10॥
ಮೂಲಮ್ - 11
ನಹಿ ಚಕ್ಷುಃಷ್ಪಥಂ ಪ್ರಾಪ್ಯ ತಯೋಃ ಪಾರ್ಥಿವಪುತ್ರಯೋಃ ।
ಸಸೈನ್ಯೋಽಪಿ ಸಮರ್ಥಸ್ತ್ವಂ ಮುಹೂರ್ತಮಪಿ ಜೀವಿತುಮ್ ॥
ಅನುವಾದ
ಆ ಇಬ್ಬರೂ ರಾಜಕುಮಾರರ ಕಣ್ಣಿಗೆ ಬಿದ್ದರೆ ನೀನು ಸೈನ್ಯ ಸಹಿತನಾಗಿದ್ದರೂ ಎರಡು ಗಳಿಗೆ ಬದುಕಿ ಇರಲಾರೆ.॥11॥
ಮೂಲಮ್ - 12
ನ ತ್ವಂ ತಯೋಃ ಶರಸ್ಪರ್ಶಂ ಸೋಢುಂ ಶಕ್ತಃ ಕಥಂಚನಃ ।
ವನೇ ಪ್ರಜ್ವಲಿತಸ್ಯೇವ ಸ್ಪರ್ಶಮಗ್ನೇರ್ವಿಹಂಗಮಃ ॥
ಅನುವಾದ
ಆಕಾಶದಲ್ಲಿ ಹಾರುವ ಪಕ್ಷಿಯು ಕಾಡಿನಲ್ಲಿ ಉರಿಯುವ ಕಾಡ್ಗಿಚ್ಚನ್ನು ಸಹಿಸಲಾರದೋ ಹಾಗೆಯೇ ನೀನು ನನ್ನ ಪತಿ ಮತ್ತು ಅವರ ತಮ್ಮನ ಬಾಣಗಳನ್ನು ಯಾವ ರೀತಿಯಿಂದಲೂ ಸಹಿಸಲಾರೆ.॥12॥
ಮೂಲಮ್ - 13½
ಸಾಧು ಕೃತ್ವಾಽಽತ್ಮನಃ ಪಥ್ಯಂ ಸಾಧು ಮಾಂ ಮುಂಚ ರಾವಣ ।
ಮತ್ಪ್ರಧರ್ಷಣಸಂಕ್ರುದ್ಧೋ ಭ್ರಾತ್ರಾ ಸಹ ಪತಿರ್ಮಮ ॥
ವಿಧಾಸ್ಯತಿ ವಿನಾಶಾಯ ತ್ವಂ ಮಾಂ ಯದಿ ನ ಮುಂಚಸಿ ।
ಅನುವಾದ
ರಾವಣ! ನೀನು ನನ್ನನ್ನು ಬಿಡದಿದ್ದರೆ ನನ್ನ ಅವಮಾನದಿಂದ ಕುಪಿತರಾದ ನನ್ನ ಪತಿದೇವರು ತನ್ನ ಸಹಭವನೊಡನೆ ಆಕ್ರಮಣ ಮಾಡುವರು ಹಾಗೂ ನಿನ್ನ ವಿನಾಶದ ಉಪಾಯ ಮಾಡುವರು. ಆದ್ದರಿಂದ ನೀನು ತನ್ನ ಒಳಿತನ್ನು ಚೆನ್ನಾಗಿ ಯೋಚಿಸಿ ನನ್ನನ್ನು ಬಿಟ್ಟು ಬಿಡು. ಇದರಿಂದ ನಿನಗೆ ಒಳ್ಳೆಯದಾಗಬಹುದ.॥13॥
ಮೂಲಮ್ - 14½
ಯೇನ ತ್ವಂ ವ್ಯವಸಾಯೇನ ಬಲಾನ್ಮಾಂ ಹರ್ತುಮಿಚ್ಛಸಿ ॥
ವ್ಯವಸಾಯಸ್ತು ತೇ ನೀಚ ಭವಿಷ್ಯತಿ ನಿರರ್ಥಕಃ ।
ಅನುವಾದ
ನೀಚನೇ! ನೀನು ಯಾವ ಅಭಿಪ್ರಾಯದಿಂದ ನನ್ನನ್ನು ಕದಿಯಲು ಬಯಸುತ್ತಿರುವೆಯೋ ಆ ನಿನ್ನ ಅಭಿಪ್ರಾಯ ವ್ಯರ್ಥವಾಗುವುದು.॥14॥
ಮೂಲಮ್ - 15½
ನಹ್ಯಹಂ ತಮಪಶ್ಯಂತೀ ಭರ್ತಾರಂ ವಿಬುಧೋಪಮಮ್ ॥
ಉತ್ಸಹೇ ಶತ್ರುವಶಗಾ ಪ್ರಾಣಾನ್ ಧಾರಯಿತುಂ ಚಿರಮ್ ।
ಅನುವಾದ
ನಾನು ನನ್ನ ದೇವರಂತಹ ಪತಿಯನ್ನು ಕಾಣದಿರುವಾಗ ಶತ್ರುವಿನ ಅಧೀನದಲ್ಲಿ ಹೆಚ್ಚು ಕಾಲ ಬದುಕಿರಲಾರೆ.॥15॥
ಮೂಲಮ್ - 16
ನ ನೂನಂ ಚಾತ್ಮನಃ ಶ್ರೇಯಃ ಪಥ್ಯಂ ವಾ ಸಮವೇಕ್ಷಸೇ ॥
ಮೂಲಮ್ - 17
ಮೃತ್ಯುಕಾಲೇ ಯಥಾ ಮರ್ತ್ಯೋ ವಿಪರೀತಾನಿ ಸೇವತೇ ।
ಮುಮೂರ್ಷೂಣಾಂ ತು ಸರ್ವೇಷಾಂ ಯತ್ಪಥ್ಯಂ ತನ್ನ ರೋಚತೇ ॥
ಅನುವಾದ
ಖಂಡಿತವಾಗಿ ನೀನು ನಿನ್ನ ಶ್ರೇಯಸ್ಸನ್ನು ಮತ್ತು ಹಿತವನ್ನು ವಿಚಾರ ಮಾಡುವುದಿಲ್ಲ. ಸಾವು ಹತ್ತಿರವಾದಾಗ ಮನುಷ್ಯನು ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ತಿನ್ನತೊಡಗುವನೋ, ಅದೇ ಸ್ಥಿತಿಯೇ ನಿನ್ನದಾಗಿದೆ. ಸಾಧಾರಣವಾಗಿ ಮರಣಾಸನ್ನ ಮನುಷ್ಯನಿಗೆ ಪಥ್ಯ ರುಚಿಸುವುದಿಲ್ಲ.॥16-17॥
ಮೂಲಮ್ - 18
ಪಶ್ಯಾಮೀಹ ಹಿ ಕಂಠೇ ತ್ವಾಂ ಕಾಲಪಾಶಾವಪಾಶಿತಮ್ ।
ಯಥಾ ಚಾಸ್ಮಿನ್ ಭಯಸ್ಥಾನೇ ನ ಬಿಭೇಷಿ ದಶಾನನ ॥
ಅನುವಾದ
ನಿಶಾಚರನೇ! ನಿನ್ನ ಕತ್ತಿನಲ್ಲಿ ಕಾಲಪಾಶ ಬಿದ್ದಿದೆ ಎಂದೇ ನಾನು ತಿಳಿಯುತ್ತೇನೆ; ಅದಕ್ಕಾಗಿ ಈ ಭಯದ ಸ್ಥಾನದಲ್ಲಿಯೂ ನೀನು ನಿರ್ಭಯನಾಗಿರುವೆ.॥18॥
ಮೂಲಮ್ - 19
ವ್ಯಕ್ತಂ ಹಿರಣ್ಯಮಯಾಂಸ್ತ್ವಂ ಹಿ ಸಂಪಶ್ಯಸಿ ಮಹೀರುಹಾನ್ ।
ನದೀಂ ವೈತರಣೀಂ ಘೋರಾಂ ರುಧಿರೌಘವಿವಾಹಿನೀಮ್ ॥
ಮೂಲಮ್ - 20½
ಖಡ್ಗಪತ್ರವನಂ ಚೈವ ಭೀಮಂ ಪಶ್ಯಸಿ ರಾವಣ ।
ತಪ್ತಕಾಂಚನಪುಷ್ಪಾಂ ಚ ವೈಡೂರ್ಯಪ್ರವರಚ್ಛದಾಮ್॥
ದ್ರಕ್ಷ್ಯಸೇ ಶಾಲ್ಮಲೀಂ ತೀಕ್ಷ್ಣಾಮಾಯಸೈಃ ಕಂಟಕೈಶ್ಚಿತಾಮ್ ।
ಅನುವಾದ
ರಾವಣ! ಅವಶ್ಯವಾಗಿ ನೀನು ಈಗ ಸುವರ್ಣಮಯ ವೃಕ್ಷಗಳನ್ನು ನೋಡುತ್ತಿರಬೇಕು. ರಕ್ತವೇ ಹರಿಯುತ್ತಿರುವ ಭಯಂಕರ ವೈತರಣೀ ನದಿಯ ದರ್ಶನ ಮಾಡುತ್ತಿರಬೇಕು. ಭಯಾನಕ ಅಸಿಪತ್ರವನವನ್ನು ನೋಡಲು ಬಯಸುತ್ತಿರುವೆ. ಕಾದ ಸುವರ್ಣದಂತೆ ಹೂವುಗಳುಳ್ಳ, ಶ್ರೇಷ್ಠ ವೈಢೂರ್ಯಮಣಿಯಂತೆ ಎಲೆಗಳುಳ್ಳ ತೀಕ್ಷ್ಣ ಕಬ್ಬಿಣದ ಮುಳ್ಳುಗಳಿರುವ ಬೂರುಗದ ವೃಕ್ಷವನ್ನೂ ಈಗ ನೀನು ಬೇಗನೇ ನೋಡಲಿರುವೆ.॥19-20॥
ಮೂಲಮ್ - 21
ನಹಿ ತ್ವಮೀದೃಶಂ ಕೃತ್ವಾ ತಸ್ಯಾಲೀಕಂ ಮಹಾತ್ಮನಃ ॥
ಮೂಲಮ್ - 22
ಧರಿತುಂ ಶಕ್ಷ್ಯಸಿ ಚಿರಂ ವಿಷಂ ಪೀತ್ವೇವ ನಿರ್ಘೃಣ ।
ಬದ್ಧಸ್ತ್ವಂ ಕಾಲಪಾಶೇನ ದುರ್ನಿವಾರೇಣ ರಾವಣ ॥
ಅನುವಾದ
ನಿರ್ದಯೀ ನಿಶಾಚರನೇ! ನೀನು ಮಹಾತ್ಮಾ ಶ್ರೀರಾಮನಿಗೆ ಇಂತಹ ಮಹಾಪರಾಧ ಮಾಡಿ ವಿಷಪಾನ ಮಾಡಿದ ಮನುಷ್ಯನಂತೆ ಹೆಚ್ಚುಕಾಲ ಬದುಕಿರಲಾರೆ. ರಾವಣ! ನೀನು ಅಟಲ ಕಾಲಪಾಶದಿಂದ ಬಂಧಿತನಾಗಿರುವೆ.॥21-22॥
ಮೂಲಮ್ - 23
ಕ್ವ ಗತೋ ಲಪ್ಸ್ಯಸೇ ಶರ್ಮ ಮಮ ಭರ್ತುರ್ಮಹಾತ್ಮನಃ ।
ನಿಮೇಷಾಂತರಮಾತ್ರೇಣ ವಿನಾ ಭ್ರಾತರಮಾಹವನೇ॥
ಮೂಲಮ್ - 24½
ರಾಕ್ಷಸಾ ನಿಹತಾ ಯೇನ ಸಹಸ್ರಾಣಿ ಚತುರ್ದಶ ।
ಕಥಂ ಸ ರಾಘವೋ ವೀರಃ ಸರ್ವಾಸ್ತ್ರ ಕುಶಲೋ ಬಲೀ ॥
ನ ತ್ವಾಂ ಹನ್ಯಾಚ್ಛರೈಸ್ತೀಕ್ಷ್ಣೇರಿಷ್ಟಭಾರ್ಯಾಪಹಾರಿಣಮ್ ।
ಅನುವಾದ
ನನ್ನ ಮಹಾತ್ಮಾ ಪತಿಯಿಂದ ಬದುಕುಳಿದು ನೀನು ಎಲ್ಲಿಗೆ ಹೋಗಿ ಶಾಂತಿ ಪಡೆಯಬಲ್ಲೆ? ಅವರು ತನ್ನ ಅನುಜ ಲಕ್ಷ್ಮಣನ ಸಹಾಯವಿಲ್ಲದೆಯೇ ಯುದ್ಧದಲ್ಲಿ ರೆಪ್ಪೆ ಮಿಟಕಿಸುವಷ್ಟರಲ್ಲಿ ಹದಿನಾಲ್ಕುಸಾವಿರ ರಾಕ್ಷಸರ ವಿನಾಶ ಮಾಡಿಬಿಟ್ಟಿರುವರು. ಸಮಸ್ತ ಅಸ್ತ್ರಗಳನ್ನು ಪ್ರಯೋಗಿಸುವುದರಲ್ಲಿ ಕುಶಲರಾದ ಬಲವಂತ ವೀರ ರಘುನಾಥನು ತನ್ನ ಪ್ರಿಯಪತ್ನಿಯ ಅಪಹರಣ ಮಾಡುವ ನಿನ್ನಂತಹ ಪಾಪಿಯನ್ನು ತೀಕ್ಷ್ಣವಾದ ಬಾಣಗಳಿಂದ ಮೃತ್ಯುವಶನಾಗಿಸದೆ ಬಿಡಲಾರರು.॥23-24॥
ಮೂಲಮ್ - 25
ಏತಚ್ಚಾನ್ಯಚ್ಚ ಪರುಷಂ ವೈದೇಹೀ ರಾವಣಾಂಕಗಾ ।
ಭಯಶೋಕಸಮಾವಿಷ್ಟಾ ಕರುಣಂ ವಿಲಲಾಪ ಹ ॥
ಅನುವಾದ
ರಾವಣನ ಹಿಡಿತದಲ್ಲಿ ಸಿಲುಕಿರುವ ವೈದೇಹಿಯು ಭಯ, ಶೋಕದಿಂದ ವ್ಯಾಕುಲಳಾಗಿ, ಇನ್ನೂ ಅನೇಕ ಕಠೋರ ಮಾತುಗಳನ್ನು ಹೇಳಿ, ಕರುಣಾ ಸ್ವರದಲ್ಲಿ ವಿಲಾಪಿಸತೊಡಗಿದಳು.॥25॥
ಮೂಲಮ್ - 26
ತದಾ ಭೃಶಾರ್ತಾ ಬಹು ಚೈವ ಭಾಷಿಣೀಂ
ವಿಲಾಪಪೂರ್ವಂ ಕರುಣಂ ಚ ಭಾಮಿನೀಮ್ ।
ಜಹಾರಪಾಪಸ್ತರುಣೀಂ ವಿವೇಷ್ಟ ತೀಂ
ನೃಪಾತ್ಮಜಾಮಾಗತಗಾತ್ರವೇಪಥುಃ ॥
ಅನುವಾದ
ಅತ್ಯಂತ ದುಃಖಾತುರಳಾಗಿ ವಿಲಾಪಪೂರ್ವಕ ಅನೇಕ ಕರುಣಾ ಪೂರ್ಣ ಮಾತನ್ನು ಹೇಳುತ್ತಿರುವ, ಬಿಡಿಸಿಕೊಳ್ಳಲು ನಾನಾ ಪ್ರಕಾರದಿಂದ ಪ್ರಯತ್ನಿಸುತ್ತಿರುವ ತರುಣ ಭಾಮಿನಿ ರಾಜಕುಮಾರಿ ಸೀತೆಯನ್ನು ಆ ಪಾಪಿ ನಿಶಾಚರನು ಕದ್ದುಕೊಂಡು ಹೋದನು. ಆಗ ಹೆಚ್ಚಿನ ಭಾರದಿಂದ ಅವನ ಶರೀರ ನಡುಗುತ್ತಿತ್ತು.॥26॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥53॥