०५२ सीताविलापः

वाचनम्
ಭಾಗಸೂಚನಾ

ರಾವಣನಿಂದ ಸೀತಾಪಹರಣ

ಮೂಲಮ್ - 1

ಸಾ ತು ತಾರಾಧಿಪಮುಖೀ ರಾವಣೇನ ನಿರೀಕ್ಷ್ಯ ತಮ್ ।
ಗೃಧ್ರರಾಜಂ ವಿನಿಹತಂ ವಿಲಲಾಪ ಸುದುಃಖಿತಾ ॥

ಅನುವಾದ

ರಾವಣನು ರೆಕ್ಕೆ ಕತ್ತರಿಸಿದ್ದರಿಂದ ಬಿದ್ದ ಗೃಧ್ರರಾಜ ಜಟಾಯುವನ್ನು ನೋಡಿ ಚಂದ್ರಮುಖಿ ಸೀತೆಯು ಅತ್ಯಂತ ದುಃಖಿತಳಾಗಿ ವಿಲಾಪಿಸತೊಡಗಿದಳು.॥1॥

ಮೂಲಮ್ - 2

ನಿಮಿತ್ತಂ ಲಕ್ಷಣಂ ಸ್ವಪ್ನಂ ಶಕುನಿಸ್ವರದರ್ಶನಮ್ ।
ಅವಶ್ಯಂ ಸುಖದುಃಖೇಷು ನರಾಣಾಂ ಪರಿದೃಶ್ಯತೇ ॥

ಅನುವಾದ

ಮನುಷ್ಯರ ಸುಖ-ದುಃಖ ಪ್ರಾಪ್ತಿಯ ಸೂಚಕ ಲಕ್ಷಣಗಳು, ಸ್ವಪ್ನ, ಪಕ್ಷಿಗಳ ಸ್ವರ, ಅವುಗಳ ಎಡಬಲ ದರ್ಶನ ಮುಂತಾದ ಶುಭಾಶುಭ ನಿಮಿತ್ತ ಶಕುನಗಳು ಅವಶ್ಯವಾಗಿ ಕಂಡುಬರುತ್ತವೆ.॥2॥

ಮೂಲಮ್ - 3

ನ ನೂನಂ ರಾಮ ಜಾನಾಸಿ ಮಹದ್ ವ್ಯಸನಮಾತ್ಮನಃ ।
ಧಾವಂತಿ ನೂನಂ ಕಾಕುತ್ಸ್ಥಮದರ್ಥಂ ಮೃಗಪಕ್ಷಿಣಾಃ ॥

ಅನುವಾದ

ಕಕುತ್ಸ್ಥ ಕುಲಭೂಷಣ ಶ್ರೀರಾಮಾ! ನನ್ನ ಅಪಹರಣದ ಸೂಚನೆಯನ್ನು ಕೊಡಲು ಈ ಮೃಗ, ಪಕ್ಷಿಗಳು ಅಶುಭ ಸೂಚಕವಾಗಿ ಓಡುತ್ತಿವೆ, ಆದರೆ ಅದರಿಂದ ಸೂಚಿತವಾದರೂ ನೀವು ನನಗೊದಗಿದ ಈ ಮಹಾಸಂಕಟವನ್ನು ಖಂಡಿತವಾಗಿ ತಿಳಿಯಲಾರಿರಿ. (ಏಕೆಂದರೆ ತಿಳಿದಮೇಲೆ ನೀವು ಇದನ್ನು ಉಪೇಕ್ಷಿಸುತ್ತಿರಲಿಲ್ಲ..॥3॥

ಮೂಲಮ್ - 4

ಅಯಂ ಹಿ ಕೃಪಯಾ ರಾಮ ಮಾಂ ತ್ರಾತುಮಿಹ ಸಂಗತಃ ।
ಶೇತೇ ವಿನಿಹತೋ ಭೂಮೌ ಮಮಾಭಾಗ್ಯಾದ್ ವಿಹಂಗಮಃ ॥

ಅನುವಾದ

ಅಯ್ಯೋ ರಾಮಾ! ಕೃಪೆಮಾಡಿ ನನ್ನನ್ನು ಕಾಪಾಡಲು ಬಂದಿರುವ ಈ ಪಕ್ಷಿಶ್ರೇಷ್ಠ ಜಟಾಯು ಈ ನಿಶಾಚರನಿಂದ ಗಾಯಗೊಂಡು ನೆಲದಲ್ಲಿ ಬಿದ್ದಿರುವನು. ಇದು ನನ್ನ ದುರ್ಭಾಗ್ಯವೇ ಆಗಿದೆ.॥4॥

ಮೂಲಮ್ - 5

ತ್ರಾಹಿ ಮಾಮದ್ಯ ಕಾಕುತ್ಸ್ಥ ಲಕ್ಷ್ಮಣೇತಿ ವರಾಂಗನಾ ।
ಸುಸಂತ್ರಸ್ತಾ ಸಮಾಂದಚ್ಛಣ್ವತಾಂ ತು ಯಥಾಂತಿಕೇ ॥

ಅನುವಾದ

ಹಾ ರಾಮಾ! ಹಾ ಲಕ್ಷ್ಮಣ! ಈಗ ನೀವಿಬ್ಬರೂ ನನ್ನನ್ನು ರಕ್ಷಿಸಿರಿ ಎಂದು ಹೇಳುತ್ತಾ ಅತ್ಯಂತ ಹೆದರಿದ ಸುಂದರೀ ಸೀತೆಯು ಹೀಗೆ ಬಳಿ ಇರುವ ದೇವತೆಗಳು ಮತ್ತು ಮನುಷ್ಯರು ಕೇಳುವಂತೆ ಆಕ್ರಂದನ ಮಾಡತೊಡಗಿದಳು.॥5॥

ಮೂಲಮ್ - 6

ತಾಂ ಕ್ಲಿಷ್ಟಮಾಲ್ಯಾಭರಣಾಂ ವಿಲಪಂತೀಮನಾಥವತ್ ।
ಅಭ್ಯಧಾವತ ವೈದೇಹೀಂ ರಾವಣೋ ರಾಕ್ಷಸಾಧಿಪಃ ॥

ಅನುವಾದ

ಆಕೆಯ ಪುಷ್ಪಹಾರ, ಒಡವೆಗಳು ಮಲಿನವಾಗಿ ಚೆಲ್ಲಿಹೋಗಿದ್ದವು. ಅವಳು ಅನಾಥಳಂತೆ ವಿಲಾಪಿಸುತ್ತಿದ್ದಳು. ಆ ಸ್ಥಿತಿಯಲ್ಲಿ ರಾಕ್ಷಸಾಧಿಪ ರಾವಣನು ಆ ವೈದೇಹಿ ಕಡೆಗೆ ಓಡಿದನು.॥6॥

ಮೂಲಮ್ - 7

ತಾಂ ಲತಾಮಿವ ವೇಷ್ಟಂತೀ ಮಾಲಿಂಗಂತೀಂ ಮಹಾದ್ರುವಾನ್ ।
ಮುಂಚ ಮುಂಚೇತಿ ಬಹುಶಃ ಪ್ರಾಪ ತಾಂ ರಾಕ್ಷಸಾಧಿಪಃ ॥

ಅನುವಾದ

ಅವಳು ಹಬ್ಬಿದ ಲತೆಯಂತೆ ದೊಡ್ಡ-ದೊಡ್ಡ ಮರಗಳನ್ನು ಅಪ್ಪಿಕೊಳ್ಳುತ್ತಿದ್ದಳು ಮತ್ತು ‘ನನ್ನನ್ನು ಸಂಕಟದಿಂದ ಪಾರು ಮಾಡಿರಿ, ಬಿಡಿಸಿರಿ’ ಎಂದು ಪದೇ ಪದೇ ಹೇಳುತ್ತಿರುವಾಗಲೇ ರಾವಣನು ಆಕೆಯ ಬಳಿಗೆ ಬಂದನು.॥7॥

ಮೂಲಮ್ - 8

ಕ್ರೋಶಂತಿಂ ರಾಮ ರಾಮೇತಿ ರಾಮೇಣ ರಹಿತಾಂ ವನೇ ।
ಜೀವಿತಾಂತಾಯ ಕೇಶೇಷು ಜಗ್ರಾಹಾಂತಕಸಂನಿಭಃ ॥

ಮೂಲಮ್ - 9

ಪ್ರಧರ್ಷಿತಾಯಾಂ ವೈದೇಹ್ಯಾಂ ಬಭೂವ ಸಚರಾಚರಮ್ ।
ಜಗತ್ಸರ್ವಮಮರ್ಯಾದಂ ತಮಸಾಂಧೇನ ಸಂವೃತಮ್ ॥

ಅನುವಾದ

ವನದಲ್ಲಿ ಶ್ರೀರಾಮನಿಂದ ಅಗಲಿದ ಸೀತೆಯು ರಾಮಾ ರಾಮಾ ಎಂದು ಜಪಿಸುತ್ತಿದ್ದುದನ್ನು ನೋಡಿ ಆ ಕಾಲನಂತಹ ವಿಕರಾಳ ರಾಕ್ಷಸನು ತನ್ನ ವಿನಾಶಕ್ಕಾಗಿಯೇ ಅವಳ ಕೂದಲನ್ನು ಹಿಡಿದನು. ಸೀತೆಯನ್ನು ಹೀಗೆ ತಿರಸ್ಕರಿಸಿದಾಗ ಸಮಸ್ತ ಚರಾಚರ ಜಗತ್ತಿಗೂ ಮರ್ಯಾದಾರಹಿತ ಹಾಗೂ ಅಂಧಕಾರ ಆವರಿಸಿದಂತಾಯ್ತು.॥8-9॥

ಮೂಲಮ್ - 10

ನ ವಾತಿ ಮಾರುತಸ್ತತ್ರ ನಿಷ್ಪ್ರಭೋಽಭೂದ್ದಿವಾಕರಃ ।
ದೃಷ್ಟ್ವಾ ಸೀತಾಂ ಪರಾಮೃಷ್ಟಾಂ ದೇವೋ ದಿವ್ಯೇನ ಚಕ್ಷುಷಾ ॥

ಅನುವಾದ

ಅಲ್ಲಿ ವಾಯುವಿನ ಗತಿ ನಿಂತು ಹೋಯಿತು. ಸೂರ್ಯನು ಮಂಕಾದನು. ಶ್ರೀಮಾನ್ ಪಿತಾಮಹ ಬ್ರಹ್ಮದೇವರು ದಿವ್ಯದೃಷ್ಟಿಯಿಂದ ಆ ರಾಕ್ಷಸನಿಂದ ವಿದೇಹನಂದಿನಿಯ ಕೇಶಾಕರ್ಷಣರೂಪೀ ಅಪಮಾನವನ್ನು ನೋಡಿ ‘ಸರಿ, ಈಗ ಕಾರ್ಯ ಸಿದ್ಧವಾಯಿತು’ ಎಂದು ನುಡಿದರು.॥10॥

ಮೂಲಮ್ - 11

ಕೃತಂ ಕಾರ್ಯಮಿತಿ ಶ್ರೀಮಾನ್ವ್ಯಾಜಹಾರ ಪಿತಾಮಹಃ ।
ಪ್ರಹೃಷ್ಟಾ ವ್ಯಥಿತಾಶ್ಚಾಸನ್ಸರ್ವೇ ತೇ ಪರಮರ್ಷಯಃ ॥

ಮೂಲಮ್ - 12

ದೃಷ್ಟ್ವಾ ಸೀತಾಂ ಪರಾಮೃಷ್ಟಾಂ ದಂಡಕಾರಣ್ಯವಾಸಿನಃ ।
ರಾವಣಸ್ಯ ವಿನಾಶಂ ಚ ಪ್ರಾಪ್ತಂ ಬುದ್ಧ್ವಾ ಯದೃಚ್ಛಯಾ ॥

ಅನುವಾದ

ಸೀತೆಯ ಕೂದಲನ್ನು ಹಿಡಿದೆಳೆಯುವುದನ್ನು ನೋಡಿ ದಂಡಕಾರಣ್ಯದಲ್ಲಿರುವ ಎಲ್ಲ ಮಹರ್ಷಿಗಳು ಮನಸ್ಸಿನಲ್ಲೇ ವ್ಯಥಿತರಾದರು. ಜೊತೆಗೆ ರಾವಣನ ವಿನಾಶಕಾಲವು ಹತ್ತಿರ ಬಂದಿದೆ ಎಂದು ತಿಳಿದು ಬಹಳ ಹರ್ಷಗೊಂಡರು.॥11-12॥

ಮೂಲಮ್ - 13

ಸ ತು ತಾಂ ರಾಮ ರಾಮೇತಿ ರುದಂತೀಂ ಲಕ್ಷ್ಮಣೇತಿ ಚ ।
ಜಗಾಮಾದಾಯ ಚಾಕಾಶಂ ರಾವಣೋ ರಾಕ್ಷಸೇಶ್ವರಃ ॥

ಅನುವಾದ

ಅಯ್ಯೋ ರಾಮ! ಹಾ ಲಕ್ಷ್ಮಣ! ಎಂದು ಅಳುತ್ತಿದ್ದ ಸೀತೆಯನ್ನು ಅದೇ ಸ್ಥಿತಿಯಲ್ಲಿ ರಾವಣನು ಆಕೆಯನ್ನೆತ್ತಿಕೊಂಡು ಆಕಾಶಮಾರ್ಗವಾಗಿ ಹೊರಟುಹೋದನು.॥13॥

ಮೂಲಮ್ - 14

ತಪ್ತಾಭರಣವರ್ಣಾಂಗೀ ಪೀತಕೌಶೇಯವಾಸಿನೀ ।
ರರಾಜ ಪಾಜಪುತ್ರೀ ತು ವಿದ್ಯುತ್ಸೌದಾಮಿನೀ ಯಥಾ ॥

ಅನುವಾದ

ಪುಟಕ್ಕಿಟ್ಟ ಚಿನ್ನದ ಒಡವೆಗಳಿಂದ ಸೀತೆಯ ಶರೀರ ಅಲಂಕೃತವಾಗಿತ್ತು. ಅವಳು ಹಳದಿ ರೇಶ್ಮೆ ಸೀರೆಯನ್ನುಟ್ಟಿದ್ದಳು. ಆದ್ದರಿಂದ ಆಗ ಸೀತೆಯು ಸುದಾಮ ಪರ್ವತದಿಂದ ಪ್ರಕಟವಾದ ವಿದ್ಯುಲ್ಲತೆಯಂತೆ ಪ್ರಕಾಶಿಸುತ್ತಿದ್ದಳು.॥14॥

ಮೂಲಮ್ - 15

ಊದ್ಧೂತೇನ ಚ ವಸ್ತ್ರೇಣ ತಸ್ಯಾಃ ಪೀತೇನ ರಾವಣಃ ।
ಅಧಿಕಂ ಪರಿಬಭ್ರಾಜ ಗಿರಿರ್ದೀಪ್ತ ಇವಾಗ್ನಿನಾ ॥

ಅನುವಾದ

ಹಾರಾಡುತ್ತಿದ್ದ ಹಳದಿ ಸೀರೆಯಿಂದ ಕೂಡಿದ ಸೀತೆಯನ್ನೆತ್ತಿಕೊಂಡ ರಾವಣನು ದಾವಾನಲದಿಂದ ಉರಿಯುತ್ತಿರುವ ಪರ್ವತದಂತೆ ಶೋಭಿಸುತ್ತಿದ್ದನು.॥15॥

ಮೂಲಮ್ - 16

ತಸ್ಯಾಃ ಪರಮಕಲ್ಯಾಣ್ಯಾಸ್ತಾಮ್ರಾಣಿ ಸುರಭೀಣಿ ಚ ।
ಪದ್ಮಪತ್ರಾಣಿ ವೈದೇಹ್ಯಾ ಅಭ್ಯಕೀರ್ಯಂತ ರಾವಣಮ್ ॥

ಅನುವಾದ

ಆ ಪರಮಕಲ್ಯಾಣಿ ವಿದೇಹಕುಮಾರಿಯ ಶರೀರದಲ್ಲಿ ಧರಿಸಿದ ಕಿಂಚಿತ್ ಅರುಣಕಮಲ ಪುಷ್ಪಗಳ ಸುಗಂಧಿತ ಎಸಳುಗಳು ಕಿತ್ತು-ಕಿತ್ತು ರಾವಣನ ಮೇಲೆ ಬೀಳುತ್ತಿದ್ದವು.॥16॥

ಮೂಲಮ್ - 17

ತಸ್ಯಾಃ ಕೌಶೇಯಮುದ್ಧೂತಮಾಕಾಶೇ ಕನಕಪ್ರಭಮ್ ।
ಬಭೌ ಚಾದಿತ್ಯರಾಗೇಣ ತಾಮ್ರಮಭ್ರಮಿವಾತಪೇ ॥

ಅನುವಾದ

ಆಕಾಶದಲ್ಲಿ ಹಾರಾಡುತ್ತಿದ್ದ ಅವನ ಸುವರ್ಣಕಾಂತಿಯ ರೇಶ್ಮೆ ಪೀತಾಂಬರವು ಸಂಧ್ಯಾಕಾಲದ ಸೂರ್ಯನ ಕಿರಣಗಳಿಂದ ತಾಮ್ರವರ್ಣ ಪಡೆದ ಮೇಘ ಖಂಡದಂತೆ ಶೋಭಿಸುತ್ತಿತ್ತು.॥17॥

ಮೂಲಮ್ - 18

ತಸ್ಯಾಸ್ತದ್ ವಿಮಲಂ ವಕ್ತ್ರಮಾಕಾಶೇ ರಾವಣಾಂಕಗಮ್ ।
ನ ರರಾಜ ವಿನಾ ರಾಮಂ ವಿನಾಲಮಿವ ಪಂಕಜಮ್ ॥

ಅನುವಾದ

ಆಕಾಶದಲ್ಲಿ ರಾವಣನ ಹಿಡಿತದಲ್ಲಿದ್ದ ಸೀತೆಯ ನಿರ್ಮಿಲ ಮುಖವು ಶ್ರೀರಾಮನಿಲ್ಲದೆ ನಾಳರಹಿತ ಕಮಲದಂತೆ ಶೋಭಿಸುತ್ತಿರಲಿಲ್ಲ.॥18॥

ಮೂಲಮ್ - 19

ಬಭೂವ ಜಲದಂ ನೀಲಂ ಭಿತ್ತ್ವಾ ಚಂದ್ರ ಇವೋದಿತಃ ।
ಸುಲಲಾಟಂ ಸುಕೇಶಾಂತಂ ಪದ್ಮಗರ್ಭಾಭಮವ್ರಣಮ್ ॥

ಮೂಲಮ್ - 20

ಶುಕ್ಲೈಃ ಸುವಿಮಲೈರ್ದಂತೈಃ ಪ್ರಭಾವದ್ಭಿರಲಂಕೃತಮ್ ।
ತಸ್ಯಾಃ ಸುನಯನಂ ವಕ್ತ್ರಮಾಕಾಶೇ ರಾವಣಾಂಕಗಮ್ ॥

ಅನುವಾದ

ಸುಂದರ ಲಲಾಟ ಮತ್ತು ಮನೋಹರ ಕೇಶಯುಕ್ತ, ಕಮಲದ ಒಳಭಾಗದಂತೆ ಕಾಂತಿಯುಳ್ಳ, ಯಾವುದೇ ಕಲೆಗಳಿಲ್ಲದ, ಬಿಳಿಯ ನಿರ್ಮಲವಾಗಿ ಹೊಳೆಯುವ ದಂತಪಂಕ್ತಿಯಿಂದ ಅಲಂಕೃತ, ಸುಂದರ ನೇತ್ರಗಳಿಂದ ಸುಶೋಭಿತ ಆಕಾಶದಲ್ಲಿ ರಾವಣನ ಅಧೀನದಲ್ಲಿದ್ದ ಸೀತೆಯ ಮುಖವು ಕಪ್ಪಾದ ಮೋಡಗಳನ್ನು ಭೇದಿಸಿ ಉದಯಿಸಿದ ಚಂದ್ರನಂತೆ ಕಂಡುಬರುತ್ತಿತ್ತು.॥19-20॥

ಮೂಲಮ್ - 21

ರುದಿತಂ ವ್ಯಪಮೃಷ್ಟಾಸ್ರಂ ಚಂದ್ರವತ್ಪ್ರಿಯದರ್ಶನಮ್ ।
ಸುನಾಸಂ ಚಾರು ತಾಮ್ರೋಷ್ಠಮಾಕಾಶೇ ಹಾಟಕಪ್ರಭಮ್ ॥

ಮೂಲಮ್ - 22

ರಾಕ್ಷನೇಂದ್ರಸಮಾಧೂತಂ ತಸ್ಯಾಸ್ತದ್ ವದನಂ ಶುಭಮ್ ।
ಶುಶುಭೇ ನ ವಿನಾ ರಾಮಂ ದಿವಾಚಂದ್ರ ಇವೋದಿತಃ ॥

ಅನುವಾದ

ಚಂದ್ರನಂತೆ ಪ್ರಿಯವಾಗಿ ಕಾಣುವ ಸೀತೆಯ ಆ ಸುಂದರ ಮುಖವು ಆಗಲೇ ಅತ್ತಿರುವಂತಿತ್ತು. ಕಂಬನಿ ಒರೆಸಲಾಗಿತ್ತು. ಅವಳ ನೀಳವಾದ ಮೂಗು ಹಾಗೂ ತಾಮ್ರದಂತಹ ಕೆಂಪಾದ ಮನೋಹರ ತುಟಿಗಳಿದ್ದವು. ಆಕಾಶದಲ್ಲಿ ಅವಳು ತನ್ನ ಸ್ವರ್ಣಕಾಂತಿಯನ್ನು ಚೆಲ್ಲುತ್ತಿದ್ದವು. ರಾಕ್ಷಸರಾಜ ವೇಗವಾಗಿ ಹೋಗುವುದರಿಂದ ಅವಳು ನಡುಗುತ್ತಿದ್ದಳು. ಹೀಗೆ ಆಕೆಯ ಆ ಮನೋಹರ ಮುಖವು ಶ್ರೀರಾಮನಿಲ್ಲದೆ ಹಗಲಿನಲ್ಲಿ ಉದಯಿಸಿದ ಚಂದ್ರನಂತೆ ಕಾಂತಿಹೀನವಾಗಿತ್ತು.॥21-22॥

ಮೂಲಮ್ - 23

ಸಾ ಹೇಮವರ್ಣಾ ನೀಲಾಂಗ ಮೈಥಿಲೀ ರಾಕ್ಷಸಾಧಿಪಮ್ ।
ಶುಶುಭೇ ಕಾಂಚನೀ ಕಾಂಚೀ ನೀಲಂ ಗಜಮಿವಾಶ್ರಿತಾ ॥

ಅನುವಾದ

ಮೈಥಿಲಿಯ ಶ್ರೀ ಅಂಗಕಾಂತಿಯು ಸುವರ್ಣದಂತೆ ಹೊಳೆಯುತ್ತಿತ್ತು ಮತ್ತು ರಾವಣನ ಶರೀರವು ಕಡು ಕಪ್ಪಾಗಿತ್ತು.ಅವನ ಹಿಡಿತದಲ್ಲಿದ್ದ ಸೀತೆಯು ಕಪ್ಪಾದ ಆನೆಗೆ ಚಿನ್ನದ ಉಡಿದಾರ ತೊಡಿಸಿದಂತೆ ಕಂಡುಬರುತ್ತಿದ್ದಳು.॥23॥

ಮೂಲಮ್ - 24

ಸಾ ಪದ್ಮಪೀತಾ ಹೇಮಾಭಾ ರಾವಣಂ ಜನಕಾತ್ಮಜಾ ।
ವಿದ್ಯುದ್ಘನಮಿವಾವಿಶ್ಯ ಶುಶುಭೇ ತಪ್ತಭೂಷಣಾ ॥

ಅನುವಾದ

ಕಮಲ ಕೇಸರದಂತೆ ಹಳದಿ ಮತ್ತು ಸುವರ್ಣ ಕಾಂತಿಯುಳ್ಳ ಸೀತೆಯು ಶೋಭಿಸುತ್ತಿದ್ದಳು.॥24॥

ಮೂಲಮ್ - 25

ತಸ್ಯಾ ಭೂಷಣಘೋಷೇಣ ವೈದೇಹ್ಯಾ ರಾಕ್ಷಸೇಶ್ವರಃ ।
ಬಭೂವ ವಿಮಲೋ ನೀಲಃ ಸಘೋಷ ಇವ ತೋಯದಃ ॥

ಅನುವಾದ

ವೈದೇಹಿಯ ಆಭೂಷಣಗಳ ಝಣತ್ಕಾರದಿಂದ ರಾಕ್ಷಸೇಶ್ವರನು ಗರ್ಜಿಸುತ್ತಿರುವ ನಿರ್ಮಲ ನೀಲಮೇಘದಂತೆ ಗೋಚರಿಸುತ್ತಿದ್ದನು.॥25॥

ಮೂಲಮ್ - 26

ಉತ್ತಮಾಂಗಚ್ಚ್ಯುತಾ ತಸ್ಯಾಃ ಪುಷ್ಪವೃಷ್ಟಿಃ ಸಮಂತತಃ ।
ಸೀತಾಯಾ ಹ್ರಿಯಮಾಣಾಯಾಃ ಪಪಾತ ಧರಣೀತಲೇ ॥

ಅನುವಾದ

ಕದ್ದುಕೊಂಡು ಹೋಗುತ್ತಿರುವ ಸೀತೆಯ ಮುಡಿಯಿಂದ ಹೂವುಗಳು ಚೆಲ್ಲಿ ಪೃಥ್ವಿಯಲ್ಲಿ ಎಲ್ಲೆಡೆ ಬೀಳುತ್ತಿದ್ದವು.॥26॥

ಮೂಲಮ್ - 27

ಸಾ ತು ರಾವಣವೇಗೇನ ಪುಷ್ಪವೃಷ್ಟಿಃ ಸಮಂತತಃ ।
ಸಮಾಧೂತಾ ದಶಗ್ರೀವಂ ಪುನರೇವಾಭ್ಯವರ್ತತ ॥

ಅನುವಾದ

ಸುತ್ತಲೂ ಆಗುತ್ತಿರುವ ಆ ಹೂವುಗಳ ವೃಷ್ಟಿಯು ರಾವಣನ ವೇಗದಿಂದ ಎದ್ದಿರುವ ಗಾಳಿಯಿಂದ ಪುನಃ ಆ ದಶಾನನ ಮೇಲೆಯೇ ಬೀಳುತ್ತಿತ್ತು.॥27॥

ಮೂಲಮ್ - 28

ಅಭ್ಯವರ್ತತ ಪುಷ್ಪಾಣಾಂ ಧಾರಾ ವೈಶ್ರವಣಾನುಜಮ್ ।
ನಕ್ಷತ್ರಮಾಲಾ ವಿಮಲಾ ಮೇರುಂ ನಗಮಿವೋನ್ನತಮ್ ॥

ಅನುವಾದ

ಕುಬೇರನ ತಮ್ಮ ರಾವಣನ ಮೇಲೆ ಬೀಳುತ್ತಿದ್ದ ಹೂ ಮಳೆಯು ಆಗ ಎತ್ತರವಾದ ಮೇರುಪರ್ವತದ ಮೇಲೆ ಇಳಿಯುವ ನಿರ್ಮಲ ನಕ್ಷತ್ರಮಾಲೆಯಂತೆ ಶೋಭಿಸುತ್ತಿತ್ತು.॥28॥

ಮೂಲಮ್ - 29

ಚರಣಾನ್ನೂಪುರಂ ಭ್ರಷ್ಟಂ ವೈದೇಹ್ಯಾ ರತ್ನಭೂಷಿತಮ್ ।
ವಿದ್ಯುನ್ಮಂಡಲಸಂಕಾಶಂ ಪಪಾತ ಧರಣೀತಲೇ ॥

ಅನುವಾದ

ವೈದೇಹಿಯ ರತ್ನಖಚಿತ ಒಂದು ಕಾಲಿನ ನೂಪುರವು ಜಾರಿ ವಿದ್ಯುನ್ಮಂಡಲದಂತೆ ನೆಲಕ್ಕೆ ಬಿತ್ತು.॥29॥

ಮೂಲಮ್ - 30

ತರುಪ್ರವಾಲರಕ್ತಾ ಸಾ ನೀಲಾಂಗಂ ರಾಕ್ಷಸೇಶ್ವರಮ್ ।
ಪ್ರಾಶೋಭಯತ ವೈದೇಹೀ ಗಜಂ ಕಕ್ಷ್ಯೇವ ಕಾಂಚನೀ ॥

ಅನುವಾದ

ನವಪಲ್ಲವಗಳಂತೆ ಕೊಂಚ ಅರುಣವರ್ಣವುಳ್ಳ ಸೀತೆಯು ಆ ಕಾಡಿಗೆಯ ಬೆಟ್ಟದಂತೆ ಇದ್ದ ರಾಕ್ಷಸನ ಶೋಭೆಯು ಆನೆಯನ್ನು ಕಟ್ಟುವ ಬಂಗಾರದ ಸರಪಳಿಯಂತೆ ಅದರ ಶೋಭೆಯನ್ನು ಹೆಚ್ಚಿಸುವಂತೆ ಕಾಣುತ್ತಿತ್ತು.॥30॥

ಮೂಲಮ್ - 31

ತಾಂ ಮಹೋಲ್ಕಾಮಿವಾಕಾಶೇ ದೀಪ್ಯಮಾನಾಂ ಸ್ವತೇಜಸಾ ।
ಜಹಾರಾಕಾಶಮಾವಿಶ್ಯ ಸೀತಾಂ ವೈಶ್ರವಣಾನುಜಃ ॥

ಅನುವಾದ

ಆಕಾಶದಲ್ಲಿ ಬಹಳ ದೊಡ್ಡ ಉಲ್ಕೆಯು ಹೊಳೆಯುವಂತೆ ಪ್ರಕಾಶಿತ ಸೀತೆಯನ್ನು ರಾವಣನು ಆಕಾಶಮಾರ್ಗವನ್ನು ಆಶ್ರಯಿಸಿ ಕದ್ದುಕೊಂಡು ಹೋಗುತ್ತಿದ್ದನು.॥31॥

ಮೂಲಮ್ - 32

ತಸ್ಯಾಸ್ತಾನ್ಯಗ್ನಿವರ್ಣಾನಿ ಭೂಷಣಾನಿ ಮಹೀತಲೇ ।
ಸಘೋಷಾಣ್ಯವಕೀರ್ಯಂತ ಕ್ಷೀಣಾಸ್ತಾರಾ ಇವಾಂಬರಾತ್ ॥

ಅನುವಾದ

ಜಾನಕಿಯ ಶರೀರದಲ್ಲಿ ಅಗ್ನಿಯಂತಹ ಪ್ರಕಾಶವುಳ್ಳ ಆಭೂಷಣಗಳಿದ್ದವು. ಅವು ಖಣ್-ಖಣ್ ಎಂದು ಶಬ್ಧಮಾಡುತ್ತಾ ಆಕಾಶದಿಂದ ತಾರೆಗಳು ಕಳಚಿ ಭೂಮಿಗೆ ಬೀಳುವಂತೆ ಒಂದೊಂದಾಗಿ ಬೀಳತೊಡಗಿದವು.॥32॥

ಮೂಲಮ್ - 33

ತಸ್ಯಾಸ್ತನಾಂತರಾದ್ ಭ್ರಷ್ಟೋ ಹಾರಸ್ತಾರಾಧಿಪದ್ಯುತಿಃ ।
ವೈದೇಹ್ಯಾ ನಿಪತನ್ಭಾತಿ ಗಂಗೇವ ಗಗನಚ್ಚ್ಯುತಾ ॥

ಅನುವಾದ

ಆ ವಿದೇಹನಂದಿನೀ ಸೀತೆಯ ವಕ್ಷಸ್ಥಳದಿಂದ ಜಾರಿ ಬೀಳುತ್ತಿರುವ ಚಂದ್ರಹಾರವು ಗಗನ ಮಂಡಲದಿಂದ ಕೆಳಗೆ ಇಳಿಯುತ್ತಿರುವ ಗಂಗೆಯಂತೆ ಕಾಣುತ್ತಿತ್ತು.॥33॥

ಮೂಲಮ್ - 34

ಉತ್ಪಾತವಾತಾಭಿರತಾ ನಾನಾ ದ್ವಿಜಗಣಾಯುತಾಃ ।
ಮಾ ಭೈರಿತಿ ವಿಧೂತಾಗ್ರಾ ವ್ಯಾಜಹ್ರುರಿವ ಪಾದಪಾಃ ॥

ಅನುವಾದ

ರಾವಣನ ವೇಗದಿಂದ ಉಂಟಾದ ಉತ್ಪಾತಸೂಚಕ ವಾಯುವಿನ ಹೊಡೆತಕ್ಕೆ ಅಲುಗಾಡುತ್ತಿರುವ ವೃಕ್ಷಗಳ ಮೇಲೆ ಕುಳಿತ ನಾನಾ ಪ್ರಕಾರದ ಹಕ್ಕಿಗಳು ಕೋಲಾಹಲ ಮಾಡುತ್ತಿದ್ದವು. ಆ ವೃಕ್ಷಗಳು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ ಇರುವುದನ್ನು ನೋಡಿ ಅವುಗಳು ‘ನೀನು ಹೆದರಬೇಡ’ ಎಂದು ಹೇಳುತ್ತಿರುವವೋ ಎಂದೆನಿಸುತ್ತಿತ್ತು.॥34॥

ಮೂಲಮ್ - 35

ನಲಿನ್ಯೋ ಧ್ವಸ್ತಕಮಲಾಸ್ತ್ರಸ್ತಮಿನಜಲೇಚರಾಃ ।
ಸಖೀಮಿವ ಗತೋತ್ಸಾಹಾಂ ಶೋಚಂತೀವ ಮೈಥಿಲೀಮ್ ॥

ಅನುವಾದ

ಕಮಲಗಳು ಒಣಗಿದ್ದು, ಮೀನು ಮೊದಲಾದ ಜಲಚರಗಳು ಭಯಗೊಂಡಿದ್ದ ಪುಷ್ಕರಣಿಗಳು ಉತ್ಸಾಹಹೀನಳಾದ ಸೀತೆಯನ್ನು ತನ್ನ ಸಖಿ ಎಂದು ತಿಳಿದು ಶೋಕಿಸುತ್ತಿರುವಂತೆ ಇದ್ದವು.॥35॥

ಮೂಲಮ್ - 36

ಸಮಂತಾದಭಿಸಂಪತ್ಯ ಸಿಂಹವ್ಯಾಘ್ರಮೃಗದ್ವಿಜಾಃ ।
ಅನ್ವಧಾವಂಸ್ತದಾ ರೋಷಾತ್ ಸೀತಾಛಾಯಾನುಗಾಮಿನಃ ॥

ಅನುವಾದ

ಸೀತಾಪಹರಣದ ಸಮಯ ರಾವಣನ ಮೇಲೆ ಸಿಟ್ಟು ಬಂದು ಸಿಂಹ, ಹುಲಿ, ಜಿಂಕೆ,ಪಕ್ಷಿ ಮುಂತಾದ ಎಲ್ಲ ಪ್ರಾಣಿಗಳು ಸೀತೆಯ ನೆರಳನ್ನು ಅನುಸರಿಸುತ್ತಾ ಎಲ್ಲೆಡೆ ಓಡಾಡುತ್ತಿದ್ದವು.॥36॥

ಮೂಲಮ್ - 37

ಜಲಪ್ರಪಾತಾಸ್ರಮುಖಾಃ ಶೃಂಗೈರುಚ್ಛ್ರಿತಬಾಹುಭಿಃ ।
ಸೀತಾಯಾಂ ಹ್ರಿಯಮಾಣಾಯಾಂ ವಿಕ್ರೋಶಂತೀವ ಪರ್ವತಾಃ ॥

ಅನುವಾದ

ಸೀತೆಯ ಅಪರಹಣವಾದಾಗ ಅಲ್ಲಿಯ ಪರ್ವತಗಳು ಜಲಪಾತ ರೂಪದಲ್ಲಿ ಕಂಬನಿಯನ್ನು ಸುರಿಸುತ್ತಾ ಎತ್ತರ ಶಿಖರಗಳ ರೂಪದಲ್ಲಿ ತನ್ನ ಭುಜಗಳನ್ನೆತ್ತಿ ಜೋರಾಗಿ ಕಿರಿಚಿ ಕೊಳ್ಳುತ್ತಿರುವಂತೆ ಇತ್ತು.॥37॥

ಮೂಲಮ್ - 38

ಹ್ರಿಯಮಾಣಾಂ ತು ವೈದೇಹೀಂ ದೃಷ್ಟ್ವಾ ದೀನೋ ದಿವಾಕರಃ ।
ಪ್ರವಿಧ್ವಸ್ತಪ್ರಭಃ ಶ್ರೀಮಾನಾಸೀತ್ ಪಾಂಡುರಮಂಡಲಃ ॥

ಅನುವಾದ

ಸೀತೆಯ ಅಪಹರಣವನ್ನು ನೋಡಿ ಶ್ರೀಮಾನ್ ಸೂರ್ಯನು ದುಃಖಿತನಾಗಿ, ಅವನ ಪ್ರಭೆಯು ಮರೆಯಾಗಿ ಮುಖಮಂಡಲವು ಮಂಕಾಯಿತು.॥38॥

ಮೂಲಮ್ - 39

ನಾಸ್ತಿ ಧರ್ಮಃ ಕುತಃ ಸತ್ಯಂ ನಾರ್ಜವಂ ನಾನೃಶಂಸತಾ ।
ಯತ್ರ ರಾಮಸ್ಯ ವೈದೇಹೀಂ ಸಿತಾಂ ಹರತಿ ರಾವಣಃ ॥

ಮೂಲಮ್ - 40

ಇತಿ ಭೂತಾನಿ ಸರ್ವಾಣಿ ಗಣಶಃ ಪರ್ಯದೇವಯನ್ ।
ವಿತ್ರಸ್ತಕಾ ದೀನಮುಖಾ ರುರುದುರ್ಮೃಗಪೋತಕಾಃ ॥

ಅನುವಾದ

ಅಯ್ಯೋ! ಶಿವನೇ! ಶ್ರೀರಾಮಚಂದ್ರನ ಧರ್ಮಪತ್ನಿ ವಿದೇಹ ನಂದಿನೀ ಸೀತೆಯನ್ನು ರಾವಣನು ಕದ್ದುಕೊಂಡು ಹೋಗುತ್ತಿರುವಾಗ ಜಗತ್ತಿನಲ್ಲಿ ಧರ್ಮವೇ ಇಲ್ಲವಾಗಿದೆ, ಸತ್ಯವೂ ಎಲ್ಲೋ ಹೊರಟುಹೋಗಿದೆ, ಸರಳತೆ ದಯೆಯು ಸರ್ವಥಾ ಲೋಪವಾಯಿತು ಎಂದು ಹೇಳಬೇಕಾಗುತ್ತದೆ. ಹೀಗೆ ಅಲ್ಲಿಯ ಪ್ರಣಿಗಳು ಗುಂಪು-ಗುಂಪಾಗಿ ವಿಲಾಪಿಸುತ್ತಿದ್ದವು. ಮೃಗಗಳ ಮರಿಗಳೂ ಭಯಭೀತರಾಗಿ, ದೀನವದನದಿಂದ ಅಳುತ್ತಿದ್ದವು.॥39-40॥

ಮೂಲಮ್ - 41½

ಉದ್ವೀಕ್ಷ್ಯೋದ್ವೀಕ್ಷ್ಯ ನಯನೈರ್ಭಯಾದಿವ ಲಕ್ಷಣೈಃ ।
ಸುಪ್ರವೇಪಿತಗಾತ್ರಾಶ್ಚ ಬಭೂವುರ್ವನದೇವತಾಃ ॥
ವಿಕ್ರೋಶಂತೀ ದೃಢಂ ಸೀತಾಂ ದೃಷ್ಟ್ವಾ ದುಃಖಂ ತಥಾ ಗತಾಮ್ ।

ಅನುವಾದ

ಶ್ರೀರಾಮನನ್ನು ಜೋರು-ಜೋರಾಗಿ ಕೂಗುತ್ತಾ, ಭಾರೀ ದುಃಖದಲ್ಲಿ ಬಿದ್ದಿರುವ ಸೀತೆಯನ್ನು ತಮ್ಮ ವಿಲಕ್ಷಣ ಕಣ್ಣುಗಳಿಂದ ಪದೇ-ಪದೇ ನೋಡುತ್ತಾ ವನದೇವತೆಗಳು ಭಯದಿಂದ ಗಡ-ಗಡನೆ ನಡುಗತೊಡಗಿದವು.॥41॥

ಮೂಲಮ್ - 42

ತಾಂ ತು ಲಕ್ಷ್ಮಣ ರಾಮೇತಿ ಕ್ರೋಶಂತೀ ಮಧುರಸ್ವರಾಮ್ ॥

ಮೂಲಮ್ - 43

ಅವೇಕ್ಷಮಾಣಾಂ ಬಹುಶೋ ವೈದೇಹೀಂ ಧರಣೀತಲಮ್ ।
ಸ ತಾಮಾಕುಲಕೇಶಾಂತಾಂ ವಿಪ್ರಮೃಷ್ಟವಿಶೇಷಕಾಮ್ ।
ಜಹಾರಾತ್ಮವಿನಾಶಾಯ ದಶಗ್ರೀವೋ ಮನಸ್ವಿನೀಮ್ ॥

ಅನುವಾದ

ವಿದೇಹನಂದಿನಿಯು ಹಾ ರಾಮಾ! ಹಾ ಲಕ್ಷ್ಮಣಾ! ಎಂದು ಕರೆಯುತ್ತಾ ಪುನಃ ಪುನಃ ಭೂಮಿಯ ಕಡೆಗೆ ನೋಡುತ್ತಿದ್ದಳು. ಆಕೆಯ ಮುಡಿಯು ಬಿಚ್ಚಿ ಕೆದರಿಕೊಂಡಿತ್ತು. ಹಣೆಯ ಕುಂಕುಮ ಹರಡಿಕೊಂಡಿತ್ತು. ಅಂತಹ ಸ್ಥಿತಿಯಲ್ಲಿ ದಶಗ್ರೀವ ರಾವಣನು ತನ್ನ ವಿನಾಶಕ್ಕಾಗಿಯೇ ಮನಸ್ವಿನೀ ಸೀತೆಯನ್ನು ಎತ್ತಿಕೊಂಡು ಹೋಗುತ್ತಿದ್ದನು.॥42-43॥

ಮೂಲಮ್ - 44

ತತಸ್ತು ಸಾ ಚಾರುದತೀ ಶುಚಿಸ್ಮಿತಾ
ವಿನಾಕೃತಾ ಬಂಧುಜನೇನ ಮೈಥಿಲೀ ।
ಅಪಶ್ಯತೀ ರಾಘವಲಕ್ಷ್ಮಣಾವುಭೌ
ವಿವರ್ಣವಕ್ತ್ರಾಭಯಭಾರಪೀಡಿತಾ ॥

ಅನುವಾದ

ಆಗ ಮನೋಹರ ಹಲ್ಲು ಮತ್ತು ಮುಗುಳ್ನಗೆಯ ಮೈಥಿಲಿಯು ತನ್ನ ಬಂಧುಗಳಿಂದ ಅಗಲಿದ್ದಳು. ರಾಮ-ಲಕ್ಷ್ಮಣರನ್ನು ನೋಡದೆ ಭಯದಿಂದ ವ್ಯಾಕುಲಳಾಗಿದ್ದಳು. ಆಕೆಯ ಮುಖಕಾಂತಿಯು ಮಂಕಾಗಿತ್ತು.॥44॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತೆರಡನೆಯ ಸರ್ಗ ಸಂಪೂರ್ಣವಾಯಿತು.॥52॥