०५१ जटायु-रावणयुद्धम्

वाचनम्
ಭಾಗಸೂಚನಾ

ಜಟಾಯು ಮತ್ತು ರಾವಣರ ಘೋರಯುದ್ಧ, ರಾವಣನು ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿದುದು

ಮೂಲಮ್ - 1

ಇತ್ಯುಕ್ತಃ ಕ್ರೋಧಮ್ರಾಕ್ಷಸ್ತಪ್ತಕಾಂಚನಕುಂಡಲಃ ।
ರಾಕ್ಷಸೇಂದ್ರೋಽಭಿದುದ್ರಾವ ಪತಗೇಂದ್ರಮಮರ್ಷಣಃ ॥

ಅನುವಾದ

ಜಟಾಯು ಹೀಗೆ ಹೇಳಿದಾಗ ರಾವಣನು ಕ್ರೋಧದಿಂದ ಕಣ್ಣುಕೆಂಪಾಗಿಸಿ ಸಿಟ್ಟುಗೊಂಡು ಆ ಪಕ್ಷಿರಾಜನ ಕಡೆಗೆ ಓಡಿದನು. ಆಗ ಅವನ ಕಿವಿಯಲ್ಲಿ ಸ್ವರ್ಣಕುಂಡಲಗಳು ಓಲಾಡುತ್ತಿದ್ದವು.॥1॥

ಮೂಲಮ್ - 2

ಸ ಸಂಪ್ರಹಾರಸ್ತುಮುಲಸ್ತಯೋಸ್ತಸ್ಮಿನ್ ಮಹಾಮೃಧೇ ।
ಬಭೂವ ವಾತೋದ್ಧತಯೋರ್ಮೇಘಯೋರ್ಗಗನೇ ಯಥಾ ॥

ಅನುವಾದ

ಆ ಮಹಾಸಮರದಲ್ಲಿ ಅವರಿಬ್ಬರೂ ಭಯಂಕರ ಪ್ರಹಾರ ಮಾಡತೊಡಗಿದರು. ಆಕಾಶದಲ್ಲಿ ವಾಯುವು ಹಾರಿಸಿದ ಎರಡು ಮೇಘಗಳು ಪರಸ್ಪರ ಅಪ್ಪಳಿಸಿದಂತೆ ತೋರುತ್ತಿತ್ತು.॥2॥

ಮೂಲಮ್ - 3

ತದ್ಬಭೂವಾದ್ಭುತಂ ಯುದ್ಧಂ ಗೃಧ್ರರಾಕ್ಷಸಯೋಸ್ತದಾ ।
ಸಪಕ್ಷಯೋರ್ಮಾಲ್ಯವತೋರ್ಮಹಾಪರ್ವತಯೋರಿವ ॥

ಅನುವಾದ

ಆಗ ಗೃಧ್ರ ಮತ್ತು ರಾಕ್ಷಸನಲ್ಲಿ ದೊಡ್ಡ ಯುದ್ಧವು ಹತ್ತಿಕೊಂಡಿತು, ಎರಡು ರೆಕ್ಕೆಗಳುಳ್ಳ ಮೌಲ್ಯವಂತ ಪರ್ವತಗಳು ಒಂದು ಮತ್ತೊಂದರೊಡನೆ ಡಿಕ್ಕಿಹೊಡೆದಂತೆ ಅನ್ನಿಸುತ್ತಿತ್ತು..॥3॥

ಟಿಪ್ಪನೀ

*ಮೌಲ್ಯವಂತ ಪರ್ವತಗಳು ಎರಡು ಎಂದು ತಿಳಿಯಲಾಗಿದೆ. ಒಂದು ದಂಡಕಾರಣ್ಯದ ಕಿಷ್ಕಿಂಧೆಯ ಸಮೀಪವಿದೆ. ಮತ್ತೊಂದು ಮೇರು ಪರ್ವತದ ಬಳಿ ಇದೆ. ಇವೆರಡೂ ಪರ್ವತಗಳು ಬಹಳ ದೂರದಲ್ಲಿವೆ, ಇವುಗಳಲ್ಲಿ ಸಂರ್ಷದ ಸಂಭವವೇ ಇರಲಾರದು. ಅದಕ್ಕಾಗಿ ‘ಸಪಕ್ಷ’ (ರೆಕ್ಕೆಗಳುಳ್ಳ) ಎಂಬ ವಿಶೇಷಣ ಕೊಡಲಾಗಿದೆ. ರೆಕ್ಕೆಗಳುಳ್ಳ ಪರ್ವತಗಳು ಎಂದಾದರೂ ಹಾರಿ ಒಂದರ ಬಳಿಗೆ ಇನ್ನೊಂದು ಬಂದಂತಿದೆ.

ಮೂಲಮ್ - 4

ತತೋ ನಾಲೀಕನಾರಾಚೈಸ್ತೀಕ್ಷ್ಣಾಗ್ರೈಶ್ಚ ವಿಕರ್ಣಿಭಿಃ ।
ಅಭ್ಯವರ್ಷನ್ಮಹಾಘೋರೈರ್ಗೃಧ್ರರಾಜಂ ಮಹಾಬಲಮ್ ॥

ಅನುವಾದ

ರಾವಣನು ಮಹಾಬಲಿ ಗೃಧ್ರರಾಜ ಜಟಾಯುವಿನ ಮೇಲೆ ನಾಲೀಕ, ನಾರಾಚು ಹಾಗು ಹರಿತವಾದ ತುದಿಗಳುಳ್ಳ ವಿಕರ್ಣಿ ಎಂಬ ಮಹಾಭಯಂಕರ ಅಸ್ತ್ರಗಳನ್ನು ಮಳೆಗರೆದನು.॥4॥

ಮೂಲಮ್ - 5

ಸ ತಾನಿ ಶರಜಾಲಾನಿ ಗೃಧ್ರಃ ಪತ್ರರಥೇಶ್ವರಃ ।
ಜಟಾಯುಃ ಪ್ರತಿಜಗ್ರಾಹ ರಾವಣಾಸ್ತ್ರಾಣಿ ಸಂಯುಗೇ ॥

ಅನುವಾದ

ಪಕ್ಷಿರಾಜ ಗೃಧ್ರಜಾತಿಯ ಜಟಾಯು ಯುದ್ಧದಲ್ಲಿ ರಾವಣನ ಆ ಬಾಣ ಸಮೂಹಗಳನ್ನು ಹಾಗೂ ಇತರ ಅಸ್ತ್ರಗಳ ಆಘಾತವನ್ನು ಸಹಿಸಿಕೊಂಡನು.॥5॥

ಮೂಲಮ್ - 6

ತಸ್ಯ ತೀಕ್ಷ್ಣ ನಖಾಭ್ಯಾಂ ತು ಚರಣಾಭ್ಯಾಂ ಮಹಾಬಲಃ ।
ಚಕಾರ ಬಹುಧಾ ಗಾತ್ರೇ ವ್ರಣಾನ್ ಪತಗಸತ್ತಮಃ ॥

ಅನುವಾದ

ಜೊತೆಗೆ ಆ ಮಹಾಬಲಿ ಪಕ್ಷಿ ಶಿರೋಮಣಿಯು ತನ್ನ ತೀಕ್ಷ್ಣವಾದ ಉಗುರುಗಳಿಂದ ಪ್ರಹರಿಸಿ ರಾವಣನ ಶರೀರದಲ್ಲಿ ಅನೇಕ ಗಾಯಗಳನ್ನು ಮಾಡಿದನು.॥6॥

ಮೂಲಮ್ - 7

ಅಥ ಕ್ರೋಧಾದ್ದಶಗ್ರೀವೋ ಜಗ್ರಾಹ ದಶ ಮಾರ್ಗಣಾನ್ ।
ಮೃತ್ಯುದಂಡನಿಭಾನ್ಘೋರಾನ್ ಶತ್ರೋರ್ನಿರ್ಧನಕಾಂಕ್ಷಯಾ ॥

ಅನುವಾದ

ಆಗ ದಶಗ್ರೀವನು ಕ್ರೋಧಗೊಂಡು ತನ್ನ ಶತ್ರುವನ್ನು ಕೊಂದುಹಾಕುವ ಇಚ್ಛೆಯಿಂದ ಕಾಲ ದಂಡಕ್ಕೆ ಸಮಾನವಾದ ಹತ್ತು ಬಾಣಗಳನ್ನು ಕೈಗೆತ್ತಿಕೊಂಡನು.॥7॥

ಮೂಲಮ್ - 8

ಸ ತೈಬಾಣೈರ್ಮಹಾವೀರ್ಯಃ ಪೂರ್ಣಮುಕ್ತೈರಜಿಹ್ಮಗೈಃ ।
ಬಿಭೇದ ನಿಶಿತೈಸ್ತೀಕ್ಷ್ಣೈರ್ಗೃಧ್ರಂ ಘೋರೈಃ ಶಿಲೀಮುಖೈಃ ॥

ಅನುವಾದ

ಮಹಾಪರಾಕ್ರಮಿ ರಾವಣನು ಧನುಸ್ಸನ್ನು ಆಕಾರ್ಣಾಂತ ಸೆಳೆದು, ತುದಿಯಲ್ಲಿ ಮುಳ್ಳುಗಳುಳ್ಳ ಹರಿತವಾದ ನೇರವಾಗಿ ಹೋಗುವ ಬಾಣಗಳನ್ನು ಪ್ರಯೋಗಿಸಿದನು. ಅವುಗಳಿಂದ ಗೃಧ್ರರಾಜನನ್ನು ಕ್ಷತ ವಿಕ್ಷತಗೊಳಿಸಿದನು.॥8॥

ಮೂಲಮ್ - 9

ಸ ರಾಕ್ಷಸರಥೇ ಪಶ್ಯನ್ ಜಾನಕೀಂ ಬಾಷ್ಪಲೋಚನಾಮ್ ।
ಅಚಿಂತಯಿತ್ವಾ ಬಾಣಾಂಸ್ತಾನ್ರಾಕ್ಷಸಂ ಸಮಭಿದ್ರವತ್ ॥

ಅನುವಾದ

ಜನಕ ನಂದಿನೀ ಸೀತೆಯು ರಾಕ್ಷಸನ ರಥದಲ್ಲಿ ಕುಳಿತು ಅಳುತ್ತಿರುವುದನ್ನು ಜಟಾಯು ನೋಡಿ, ತನ್ನ ಶರೀರದಲ್ಲಿ ನೆಟ್ಟಿದ್ದ ಬಾಣಗಳ ಪರಿವೆ ಮಾಡದೆ ಒಮ್ಮೆಲೇ ರಾಕ್ಷಸನ ಮೇಲೆ ಎರಗಿದನು.॥9॥

ಮೂಲಮ್ - 10

ತತೋಽಸ್ಯ ಸಶರಂ ಚಾಪಂ ಮುಕ್ತಾಮಣಿವಿಭೂಷಿತಮ್ ।
ಚರಣಾಭ್ಯಾಂ ಮಹಾತೇಜಾ ಬಭಂಜ ಪತಗೋತ್ತಮಃ ॥

ಅನುವಾದ

ಮಹಾತೇಜಸ್ವೀ ಪಕ್ಷಿರಾಜ ಜಟಾಯುವು ಮುತ್ತು ರತ್ನಗಳಿಂದ ವಿಭೂಷಿತ, ಬಾಣಸಹಿತ ರಾವಣನ ಧನುಸ್ಸನ್ನು ತನ್ನ ಎರಡೂ ಕಾಲುಗಳಿಂದ ಒದೆದು ತುಂಡರಿಸಿಬಿಟ್ಟನು.॥10॥

ಮೂಲಮ್ - 11

ತತೋಽನ್ಯದ್ ಧನುರಾದಾಯ ರಾವಣಃ ಕ್ರೋಧಮೂರ್ಛಿತಃ ।
ವವರ್ಷ ಶರವರ್ಷಾಣಿ ಶತಶೋಽಥ ಸಹಸ್ರಶಃ ॥

ಅನುವಾದ

ಮತ್ತೆ ರಾವಣನು ಕ್ರೋಧಗೊಂಡು ಇನ್ನೊಂದು ಧನುಸ್ಸನ್ನು ಕೈಗೆತ್ತಿಕೊಂಡು ಅವನು ನೂರಾರು ಸಾವಿರ ಬಾಣಗಳ ಮಳೆಯನ್ನು ಸುರಿಸಿದನು.॥11॥

ಮೂಲಮ್ - 12

ಶರೈರಾವಾರಿತಸ್ತಸ್ಯ ಸಂಯುಗೇ ಪತಗೇಶ್ವರಃ ।
ಕುಲಾಯಮಭಿಸಂಪ್ರಾಪ್ತಃ ಪಕ್ಷೀವಚ್ಚ ಬಭೌ ತದಾ ॥

ಅನುವಾದ

ಆಗ ಆ ಯುದ್ಧರಂಗದಲ್ಲಿ ಗೃಧ್ರರಾಜನ ಸುತ್ತಲು ಬಾಣಗಳ ಬಲೆಯೇ ನೇಯ್ದಂತಿತ್ತು. ಅವನು ಆಗ ಗೂಡಿನಲ್ಲಿ ಕುಳಿತಿರುವ ಪಕ್ಷಿಯಂತೆ ಕಂಡುಬರುತ್ತಿದ್ದನು.॥12॥

ಮೂಲಮ್ - 13

ಸ ತಾನಿ ಶರಜಾಲಾನಿ ಪಕ್ಷಾಭ್ಯಾಂ ತು ವಿಧೂಯ ಹ ।
ಚರಣಾಭ್ಯಾಂ ಮಹಾತೇಜಾ ಬಭಂಜಾಸ್ಯ ಮಹದ್ಧನುಃ ॥

ಅನುವಾದ

ಬಳಿಕ ಮಹಾತೇಜಸ್ವೀ ಜಟಾಯುವು ತನ್ನ ಎರಡೂ ರೆಕ್ಕೆಗಳಿಂದಲೇ ಆ ಬಾಣಗಳನ್ನು ಹಾರಿಸಿಬಿಟ್ಟನು ಮತ್ತು ಪಂಜದಿಂದ ಹೊಡೆದು ಪುನಃ ರಾವಣನ ಧನುಸ್ಸನ್ನು ತುಂಡರಿಸಿದನು.॥13॥

ಮೂಲಮ್ - 14

ತಚ್ಚಾಗ್ನಿ ಸದೃಸಂ ದೀಪ್ತಂ ರಾವಣಸ್ಯ ಶರಾವರಮ್ ।
ಪಕ್ಷಾಭ್ಯಾಂ ಸ ಮಹಾತೇಜಾ ವ್ಯಧುನೋತ್ ಪುತಗೇಶ್ವರಃ ॥

ಅನುವಾದ

ಅಗ್ನಿಯಂತೆ ಪ್ರಜ್ವಲಿತವಾದ ರಾವಣನ ಕವಚವನ್ನು ಮಹಾತೇಜಸ್ವೀ ಪಕ್ಷಿರಾಜನು ರೆಕ್ಕೆಗಳಿಂದಲೇ ಪುಡಿ ಪುಡಿ ಮಾಡಿಬಿಟ್ಟನು.॥14॥

ಮೂಲಮ್ - 15

ಕಾಂಚನೋರಶ್ಛದಾವ್ ದಿವ್ಯಾನ್ ಪಿಶಾಚವದನಾನ್ ಖರಾನ್ ।
ತಾಂಶ್ಚಾಸ್ಯ ಜವಸಂಪನ್ನಾನ್ ಜಘಾನ ಸಮರೇ ಬಲೀ ॥

ಅನುವಾದ

ಅನಂತರ ಆ ಬಲವಂತ ವೀರನು ಸಮರದಲ್ಲಿ ಪಿಶಾಚಿಯಂತೆ ಮುಖವುಳ್ಳ, ಎದೆಯ ಮೇಲೆ ಸ್ವರ್ಣಕವಚ ಕಟ್ಟಿರುವ ರಥಕ್ಕೆ ಹೂಡಿದ ಆ ವೇಗಶಾಲೀ ಕತ್ತೆಗಳನ್ನು ಹೊಡೆದುರುಳಿಸಿದನು.॥15॥

ಮೂಲಮ್ - 16

ಅಥ ತ್ರಿವೇಣುಸಂಪನ್ನಂ ಕಾಮಗಂ ಪಾವಕಾರ್ಚಿಷಮ್ ।
ಮಣಿಸೋಪಾನಚಿತ್ರಾಂಗಂ ಬಭಂಜ ಚ ಮಹಾರಥಮ್ ॥

ಅನುವಾದ

ಬಳಿಕ ಅಗ್ನಿಯಂತೆ ಪ್ರಕಾಶವುಳ್ಳ, ಮಣಿಮಯ ಮೆಟ್ಟುಲುಗಳುಳ್ಳ, ವಿಚಿತ್ರ ಅಂಗಗಳುಳ್ಳ, ಇಚ್ಛಾನುಸಾರ ನಡೆಯುವ ರಾವಣನ ‘ತ್ರಿವೇಣು’ (ರಥದ ನೊಗ) ಸಂಪನ್ನ ವಿಶಾಲ ರಥವನ್ನು ಮುರಿದು ಹಾಕಿದನು.॥16॥

ಮೂಲಮ್ - 17

ಪೂರ್ಣಚಂದ್ರಪ್ರತೀಕಾಶಂ ಛತ್ರಂ ಚ ವ್ಯಜನೈಃ ಸಹ ।
ಪಾತಯಾಮಾಸ ವೇಗೇನ ಗ್ರಾಹಿಭೀ ರಾಕ್ಷಸೈಃ ಸಹ ॥

ಮೂಲಮ್ - 18

ಸಾರಥೇಶ್ಚಾಸ್ಯ ವೇಗೇನ ತುಂಡೇನ ಚ ಮಹಚ್ಛಿರಃ ।
ಪುನರ್ವ್ಯಪಹವಚ್ಛ್ರೀಮಾನ್ ಪಕ್ಷಿರಾಜೋ ಮಹಾಬಲಃ ॥

ಅನುವಾದ

ಇದಾದ ಬಳಿಕ ಪೂರ್ಣ ಚಂದ್ರನಂತೆ ಸುಶೋಭಿತ ಛತ್ರವನ್ನು ಮತ್ತು ಚಾಮರಗಳನ್ನು, ಅದನ್ನು ಧರಿಸಿರುವ ರಾಕ್ಷಸರ ಸಹಿತ ವೇಗವಾಗಿ ಹೊಡೆದುರುಳಿಸಿದನು. ಮತ್ತೆ ಆ ಮಹಾಬಲಿ ತೇಜಸ್ವೀ ಪಕ್ಷಿರಾಜನು ಅತಿ ವೇಗದಿಂದ ಕೊಕ್ಕಿನಿಂದ ರಾವಣನ ಸಾರಥಿಯ ತಲೆಯನ್ನು ಶರೀರದಿಂದ ಬೇರ್ಪಡಿಸಿದನು.॥17-18॥

ಮೂಲಮ್ - 19

ಸ ಭಗ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ ।
ಅಂಕೇನಾದಾಯ ವೈದೇಹೀಂ ಪಪಾತ ಭುವಿ ರಾವಣಃ ॥

ಅನುವಾದ

ಹೀಗೆ ಧನುಸ್ಸು ತುಂಡಾಯಿತು, ರಥಮುರಿದು ಹೋಯಿತು, ಕುದುರೆ ಸತ್ತುಹೋದವು, ಸಾರಥಿಯು ಕಾಲವಶನಾದನು ಆಗ ರಾವಣನು ಸೀತೆಯನ್ನೆತ್ತಿಕೊಂಡೇ ನೆಲಕ್ಕೆ ಬಿದ್ದುಬಿಟ್ಟನು.॥19॥

ಮೂಲಮ್ - 20

ದೃಷ್ಟ್ವಾನಿಪತಿತಂ ಭೂಮೌ ರಾವಣಂ ಭಗ್ನವಾಹನಮ್ ।
ಸಾಧು ಸಾಧ್ವಿತಿ ಭೂತಾನಿ ಗೃಧ್ರಾರಾಜಮಪೂಜಯನ್ ॥

ಅನುವಾದ

ರಥ ಮುರಿದು ರಾವಣನು ನೆಲಕ್ಕೆ ಬಿದ್ದಿರುವುದನ್ನು ನೋಡಿ ಎಲ್ಲ ಪ್ರಾಣಿಗಳು ‘ಭಲೆ, ಭಲೆ’ ಎಂದುಹೇಳುತ್ತಾ ಗೃಧ್ರರಾಜನ್ನು ಪ್ರಶಂಸಿಸಿದವು.॥20॥

ಮೂಲಮ್ - 21

ಪರಿಶ್ರಾತಂ ತು ತಂ ದೃಷ್ಟ್ವಾ ಜರಯಾ ಪಕ್ಷಿಯೂಥಪಮ್ ।
ಉತ್ಪಪಾತ ಪುನರ್ಹೃಷ್ಟೋ ಮೈಥಿಲೀಂ ಗೃಹ್ಯ ರಾವಣಃ ॥

ಅನುವಾದ

ವೃದ್ಧನಾದ ಕಾರಣ ಪಕ್ಷಿರಾಜನು ಬಳಲಿರುವುದನ್ನು ನೋಡಿ ರಾವಣನಿಗೆ ಬಹಳ ಹರ್ಷವಾಯಿತು. ಮತ್ತು ಅವನು ಮೈಥಿಲಿಯನ್ನು ಎತ್ತಿಕೊಂಡೇ ಆಕಾಶಕ್ಕೆ ಹಾರಿದನು.॥21॥

ಮೂಲಮ್ - 22

ತಂ ಪ್ರಹೃಷ್ಟಂ ನಿಧಾಯಾಂಕೇ ರಾವಣಂ ಜನಕಾತ್ಮಜಾಮ್ ।
ಗಚ್ಛಂತಂ ಖಡ್ಗಶೇಷಂ ಚ ಪ್ರಣಷ್ಟಹತಸಾಧನಮ್ ॥

ಮೂಲಮ್ - 23

ಗೃಧ್ರರಾಜಃ ಸಮುತ್ಪತ್ಯ ರಾವಣಂ ಸಮಭಿವತ್ ।
ಸಮಾವಾರ್ಯ ಮಹಾತೇಜಾ ಜಟಾಯುರಿದಮಬ್ರವೀತ್ ॥

ಅನುವಾದ

ಜಾನಕಿಯನ್ನು ಎತ್ತಿಕೊಂಡು ರಾವಣನು ಆನಂದದಿಂದ ಹೋಗಲು ತೊಡಗಿದಾಗ ಅವನ ಇತರ ಎಲ್ಲ ಸಾಧನೆಗಳು ನಾಶವಾಗಿದ್ದರೂ ಒಂದು ಖಡ್ಗ ಅವನ ಬಳಿ ಉಳಿದಿತ್ತು. ಅವನು ಹೋಗುವುದನ್ನು ಕಂಡು ಮಹಾತೇಜಸ್ವಿ ಗೃಧ್ರರಾಜ ಜಟಾಯು ಹಾರಿ ರಾವಣನ ಕಡೆಗೆ ಓಡಿ, ಅವನನ್ನು ತಡೆದು ಈ ಪ್ರಕಾರ ಹೇಳಿದನು-॥22-23॥

ಮೂಲಮ್ - 24

ವಜ್ರಸಂಸ್ಪರ್ಶಬಾಣಸ್ಯ ಭಾರ್ಯಾಂ ರಾಮಸ್ಯ ರಾವಣ ।
ಅಲ್ಪಬುದ್ಧೇ ಹರಸ್ಯೇನಾಂ ವಧಾಯ ಖಲು ರಾಕ್ಷಸಾಮ್ ॥

ಅನುವಾದ

ಮಂದಬುದ್ಧಿಯುಳ್ಳ ರಾವಣನೇ! ಯಾರ ಬಾಣಗಳ ಸ್ಪರ್ಶ ವಜ್ರದಂತೆ ಇದೆಯೋ, ಆ ರಾಮನ ಧರ್ಮಪತ್ನಿ ಈ ಸೀತೆಯನ್ನು ನೀನು ನಿಶ್ಚಯವಾಗಿಯೂ ರಾಕ್ಷಸರ ವಧೆಗಾಗಿಯೇ ಕೊಂಡುಹೋಗುತ್ತಿರುವೆ.॥24॥

ಮೂಲಮ್ - 25

ಸಮಿತ್ರಬಂಧುಃ ಸಾಮಾತ್ಯಃ ಸಬಲಃ ಸಪರಿಚ್ಛದಃ ।
ವಿಷಪಾನಂ ಪಿಬಸ್ಯೇತತ್ ಪಿಪಾಸಿತ ಇವೋದಕಮ್ ॥

ಅನುವಾದ

ಬಾಯಾರಿದ ಮನುಷ್ಯನು ನೀರನ್ನು ಕುಡಿಯುವಂತೆಯೇ ನೀನು ಮಿತ್ರ, ಬಾಂಧವ, ಮಂತ್ರಿ, ಸೈನ್ಯ ಹಾಗೂ ಪರಿವಾರ ಸಹಿತ ಹೀಗೆ ವಿಷಪಾನಮಾಡುತ್ತಿರುವೆ.॥25॥

ಮೂಲಮ್ - 26

ಅನುಬಂಧಮಜಾನಂತಃ ಕರ್ಮಣಾಮವಿಚಕ್ಷಣಾಃ ।
ಶೀಘ್ರಮೇವ ವಿನಶ್ಯಂತಿ ಯಥಾ ತ್ವಂ ವಿನಶಿಷ್ಯಸಿ ॥

ಅನುವಾದ

ತನ್ನ ಕರ್ಮಗಳ ಪರಿಣಾಮವನ್ನು ತಿಳಿಯದ ಅಜ್ಞಾನಿ ಜನರು ಶೀಘ್ರವಾಗಿಯೇ ನಾಶವಾಗುವಂತೆಯೇ ನೀನೂ ಕೂಡ ವಿನಾಶದ ಹೊಂಡದಲ್ಲಿ ಬೀಳುತ್ತಿರುವೆ.॥26॥

ಮೂಲಮ್ - 27

ಬದ್ಧಸ್ತ್ವಂ ಕಾಲಪಾಶೇನ ಕ್ವ ಗತಸ್ತಸ್ಯ ಮೋಕ್ಷ್ಯಸೇ ।
ವಧಾಯ ಬಡಿಶಂ ಗೃಹ್ಯ ಸಾಮಿಷಂ ಜಲಜೋ ಯಥಾ ॥

ಅನುವಾದ

ನೀನು ಕಾಲಪಾಶದಿಂದ ಬಂಧಿತನಾಗಿರುವೆ. ಎಲ್ಲಿಗೆ ಹೋಗಿ ಅದರಿಂದ ಬಿಡುಗಡೆ ಹೊಂದುವೆ? ನೀರಿನಲ್ಲಿರುವ ಮೀನು ಮಾಂಸದ ತುಂಡನ್ನು ಗಾಳದ ಸಹಿತ ತನ್ನ ವಧೆಗಾಗಿಯೇ ನುಂಗುವಂತೆ ನೀನೂ ಕೂಡ ತನ್ನ ಸಾವಿಗಾಗಿಯೇ ಸೀತೆಯನ್ನು ಅಪಹರಿಸುತ್ತಿರುವೆ.॥27॥

ಮೂಲಮ್ - 28

ನಹಿ ಜಾತು ದುರಾಧರ್ಷೌಕಾಕುಸ್ತ್ಥೌತವ ರಾವಣ ।
ಧರ್ಷಣಂ ಚಾಶ್ರಮಸ್ಯಾಸ್ಯ ಕ್ಷಮಿಷ್ಯೇತೇ ತು ರಾಘವೌ ॥

ಅನುವಾದ

ರಾವಣ! ಕಾಕುತ್ಸ್ಥರಾದ ಶ್ರೀರಾಮ-ಲಕ್ಷ್ಮಣರು ದುರ್ಧರ್ಷವೀರರಾಗಿದ್ದಾರೆ. ನೀನು ಅವರ ಆಶ್ರಮದಲ್ಲಿ ಮಾಡಿದ ಅಪಮಾನಜನಕ ಅಪರಾಧವನ್ನು ಅವರು ಎಂದೂ ಕ್ಷಮಿಸಲಾರರು.॥28॥

ಮೂಲಮ್ - 29

ಯಥಾ ತ್ವಯಾ ಕೃತಂ ಕರ್ಮ ಭೀರುಣಾ ಲೋಕಗರ್ಹಿತಮ್ ।
ತಸ್ಕರಾಚರಿತೋ ಮಾರ್ಗೋ ನೈಷ ವೀರನಿಷೇವಿತಃ ॥

ಅನುವಾದ

ನೀನು ಹೇಡಿ ಮತ್ತು ಅಂಜು ಬುರುಕನಾಗಿರುವೆ. ನೀನು ಮಾಡಿದ ಲೋಕನಿಂದಿತ ಕರ್ಮವು ಕಳ್ಳರ ದಾರಿಯಾಗಿದೆ. ವೀರಪುರುಷರು ಎಂದಿಗೂ ಇಂತಹ ಮಾರ್ಗವನ್ನು ಆಶ್ರಯಿಸುವುದಿಲ್ಲ.॥29॥

ಮೂಲಮ್ - 30

ಯುಧ್ಯಸ್ಯ ಯದಿ ಶೂರೋಽಸಿ ಮುಹೂರ್ತಂ ತಿಷ್ಠ ರಾವಣ ।
ಶಯಿಷ್ಯಸೇ ಹತೋ ಭೂಮೌ ಯಥಾ ಭ್ರಾತಾ ಖರಸ್ತಥಾ ॥

ಅನುವಾದ

ರಾವಣ! ನೀನು ಶೂರನಾಗಿದ್ದರೆ ಎರಡು ಘಳಿಗೆ ನಿಲ್ಲು ಮತ್ತು ನನೊಡನೆ ಯುದ್ಧಮಾಡು. ಮತ್ತೆ ನಿನ್ನ ತಮ್ಮ ಖರನು ಸತ್ತುಹೋದಂತೆ ನೀನೂ ಕೂಡ ಧರೆಗೆ ಒರಗುವೆ.॥30॥

ಮೂಲಮ್ - 31

ಪರೇತಕಾಲೇ ಪುರುಷೋ ಯತ್ಕರ್ಮ ಪ್ರತಿಪದ್ಯತೇ ।
ವಿನಾಶಾಯಾತ್ಮನೋಽಧರ್ಮ್ಯಂ ಪ್ರತಿಪನ್ನೋಽಸಿ ಕರ್ಮ ತತ್ ॥

ಅನುವಾದ

ವಿನಾಶಕಾಲದಲ್ಲಿ ಮನುಷ್ಯನು ಕರ್ಮಮಾಡುವಂತೆಯೇ ನೀನೂ ಕೂಡ ನಿನ್ನ ವಿನಾಶಕ್ಕಾಗಿಯೇ ಇಂತಹ ಅಧರ್ಮಪೂರ್ಣ ಕರ್ಮವನ್ನು ತನ್ನದಾಗಿಸಿಕೊಂಡಿರುವೆ.॥31॥

ಮೂಲಮ್ - 32

ಪಾಪಾನುಬಂಧೋ ವೈ ಯಸ್ಯ ಕರ್ಮಣಃ ಕೋ ನು ತತ್ ಪುಮಾನ್ ।
ಕುರ್ವೀತ ಲೋಕಾಧಿಪತಿಃ ಸ್ವಯಂಭೂರ್ಭಗವಾನಪಿ ॥

ಅನುವಾದ

ಯಾವ ಕರ್ಮವನ್ನು ಮಾಡುವುದರಿಂದ ಕರ್ತೃವು ಪಾಪದ ಫಲಕ್ಕೆ ಭಾಗಿಯಾಗುತ್ತಾನೋ, ಆ ಕರ್ಮವನ್ನು ಯಾವನು ತಾನೇ ಮಾಡಬಲ್ಲನು? ಲೋಕಪಾಲ ಇಂದ್ರ, ಸ್ವಯಂಭೂ ಬ್ರಹ್ಮನೂ ಕೂಡ ಅಂತಹ ಕರ್ಮಮಾಡಲಾರರು.॥32॥

ಮೂಲಮ್ - 33

ಏವಮುಕ್ತ್ವಾ ಶುಭಂ ವಾಕ್ಯಂ ಜಟಾಯುಸ್ತಸ್ಯ ರಕ್ಷಸಃ ।
ನಿಪಪಾತ ಭೃಶಂ ಪೃಷ್ಠೇದಶಗ್ರೀವಸ್ಯ ವೀರ್ಯವಾನ್ ॥

ಮೂಲಮ್ - 34

ತಂ ಗೃಹೀತ್ವಾ ನಖೈಸ್ತೀಕ್ಷ್ಣೈರ್ವಿದದಾರ ಸಮಂತತಃ ।
ಅಧಿರೂಢೋ ಗಜಾರೋಹೋ ಯಥಾ ಸ್ಯಾದ್ದುಷ್ಟವಾರಣಮ್ ॥

ಅನುವಾದ

ಈ ಪ್ರಕಾರ ಉತ್ತಮ ವಚನವನ್ನಾಡಿ ಪರಾಕ್ರಮಿ ಜಟಾಯು ರಾಕ್ಷಸ ದಶಗ್ರೀವನ ಬೆನ್ನ ಮೇಲೆ ಜೋರಾಗಿ ಹೋಗಿ ಕುಳಿತುಕೊಂಡು ಅವನನ್ನು ಹಿಡಿದುಕೊಂಡು ಯಾವನೋ ಮಾವುತನು ದುಷ್ಟ ಆನೆಯ ಮೇಲೆ ಕುಳಿತುಕೊಂಡು ಅಂಕುಶದಿಂದ ತಿವಿಯುವಂತೆ ಹರಿತವಾದ ಉಗುರುಗಳಿಂದ ಎಲ್ಲೆಡೆ ಪರಚಲು ತೊಡಗಿದನು.॥33-34॥

ಮೂಲಮ್ - 35

ವಿದದಾ ನಖೈರಸ್ಯ ತುಂಡ ಪೃಷ್ಠೇ ಸಮರ್ಪಯನ್ ।
ಕೇಶಾಂಶ್ಚೋತ್ಪಾಟಯಾಮಾಸ ನಖಪಕ್ಷಮುಖಾಯುಧಃ ॥

ಅನುವಾದ

ಉಗುರು, ರೆಕ್ಕೆ ಮತ್ತು ಕೊಕ್ಕು ಇವೇ ಜಟಾಯುವಿನ ಆಯುಧಗಳಾಗಿದ್ದವು. ಅವನು ಉಗುರುಗಳಿಂದ ಪರಚುತ್ತಾ, ಬೆನ್ನಿಗೆ ಕೊಕ್ಕಿನಿಂದ ಚುಚ್ಚುತ್ತಾ ಕೂದಲಗಳನ್ನು ಹಿಡಿದು ಕೀಳುತ್ತಿದ್ದನು.॥35॥

ಮೂಲಮ್ - 36

ಸ ತಥಾ ಗೃಧ್ರರಾಜೇನ ಕ್ಲಿಶ್ಯಮಾನೋ ಮುಹುರ್ಮುಹುಃ ।
ಅಮರ್ಷಸ್ಫುರಿತೋಷ್ಠಃ ಸನ್ ಪ್ರಾಕಂಪತ ಚ ರಾಕ್ಷಸಃ ॥

ಅನುವಾದ

ಹೀಗೆ ಗೃಧ್ರರಾಜನು ಪದೇ-ಪದೇ ನೋಯಿಸುತ್ತಿದ್ದಾಗ ರಾವಣನು ನಡುಗಿಹೋದನು. ಸಿಟ್ಟಿನಿಂದ ಅವನ ತುಟಿಗಳು ಅದುರತೊಡಗಿದವ.॥36॥

ಮೂಲಮ್ - 37

ಸಂಪರಿಷ್ವಜ್ಯ ವೈದೇಹೀಂ ವಾಮೇನಾಂಗೇನ ರಾವಣಃ ।
ತಲೇನಾಭಿಜಘಾನಾರ್ತೋ ಜಟಾಯುಂ ಕ್ರೋಧಮೂರ್ಛಿತಃ ॥

ಅನುವಾದ

ಆಗ ಕ್ರೋಧ ತುಂಬಿದ ರಾವಣನು ಸೀತೆಯನ್ನು ಎಡಕೈಗಳಿಂದ ಹಿಡಿದುಕೊಂಡು ಅತ್ಯಂತ ಪೀಡಿತನಾಗಿ ಬಲಗೈಯಿಂದ ಜಟಾಯುವಿಗೆ ಒಂದು ಏಟನ್ನು ಕೊಟ್ಟನು.॥37॥

ಮೂಲಮ್ - 38

ಜಟಾಯುಸ್ತಮತಿಕ್ರಮ್ಯ ತುಂಡೇನಾಸ್ಯ ಖಗಾಧಿಪಃ ।
ವಾಮಬಾಹೂನ್ದಶ ತದಾ ವ್ಯಪಾಹರದರಿಂದಮಃ ॥

ಅನುವಾದ

ಆದರೆ ಆ ಏಟನ್ನು ತಪ್ಪಿಸಿಕೊಂಡು ಶತ್ರುದಮನ ಗೃಧ್ರರಾಜ ಜಟಾಯು ತನ್ನ ಕೊಕ್ಕಿನಿಂದ ಕುಟುಕಿಕುಟುಕಿ ರಾವಣನ ಎಡಭುಜಗಳನ್ನು ಕಿತ್ತು ಹಾಕಿದನು.॥38॥

ಮೂಲಮ್ - 39

ಸಂಛಿನ್ನಬಾಹೋಃ ಸದ್ಯೋ ವೈ ಬಾಹವಃ ಸಹಸಾಭವನ್ ।
ವಿಷಜ್ವಾಲಾವಲೀಯುಕ್ತಾ ವಲ್ಮೀಕಾದಿವ ಪನ್ನಗಾಃ ॥

ಅನುವಾದ

ಬಾಹುಗಳು ತುಂಡಾದಾಗ ಹುತ್ತದಿಂದ ಪ್ರಕಟಗೊಳ್ಳುವ ವಿಷಜ್ವಾಲೆಗಳಿಂದ ಕೂಡಿದ ಸರ್ಪಗಳಂತೆ ಕೂಡಲೇ ಬೇರೆ ಹೊಸ ಭುಜಗಳು ಚಿಗುರಿದವು.॥39॥

ಮೂಲಮ್ - 40

ತತಃ ಕ್ರೋಧಾದ್ದಶಗ್ರೀವಃ ಸೀತಾಮುತ್ಸೃಜ್ಯ ವೀರ್ಯವಾನ್ ।
ಮುಷ್ಟಿಭ್ಯಾಂ ಚರಣಾಭ್ಯಾಂ ಚ ಗೃಧ್ರರಾಜಮಪೋಥಯತ್ ॥

ಅನುವಾದ

ಆಗ ಪರಾಕ್ರಮಿ ದಶಾನನ ಸೀತೆಯನ್ನು ಬಿಟ್ಟು ಗೃಧ್ರರಾಜನನ್ನು ಕ್ರೋಧದಿಂದ ಮುಷ್ಟಿಗಳಿಂದ ಹಾಗೂ ಒದೆಗಳಿಂದ ಹೊಡೆಯಲುತೊಡಗಿದನು.॥40॥

ಮೂಲಮ್ - 41

ತತೋ ಮುಹೂರ್ತಂ ಸಂಗ್ರಾಮೋ ಬಭೂವಾತುಲವೀರ್ಯಯೋಃ ।
ರಾಕ್ಷಸಾನಾಂ ಚ ಮುಖ್ಯಸ್ಯ ಪಕ್ಷಿಣಾಂ ಪ್ರವರಸ್ಯ ಚ ॥

ಅನುವಾದ

ಆಗ ಆ ಇಬ್ಬರೂ ಅನುಪಮ ಪರಾಕ್ರಮಿ ವೀರ ರಾಕ್ಷಸರಾಜ ರಾವಣ ಮತ್ತು ಪಕ್ಷಿರಾಜ ಜಟಾಯು ಇದರಲ್ಲಿ ಎರಡುಗಳಿಗೆ ಘೋರ ಸಂಗ್ರಾಮ ನಡೆಯುತ್ತಿತ್ತು.॥41॥

ಮೂಲಮ್ - 42

ತಸ್ಯ ವ್ಯಾಯಚ್ಛಮಾನಸ್ಯ ರಾಮಸ್ಯಾರ್ಥೇ ಸ ರಾವಣಃ ।
ಪಕ್ಷೌ ಪಾದೌ ಚ ಪಾರ್ಶ್ವೌ ಚ ಖಡ್ಗಮುದ್ಧೃತ್ಯ ಸೋಽಚ್ಛಿನತ್ ॥

ಅನುವಾದ

ಅನಂತರ ರಾವಣನು ಖಡ್ಗವನ್ನು ಎತ್ತಿಕೊಂಡು ಶ್ರೀರಾಮನಿಗಾಗಿ ಪರಾಕ್ರಮ ತೋರುವ ಜಟಾಯುವಿನ ಎರಡು ರೆಕ್ಕೆಗಳನ್ನು ಕಾಲು ಹಾಗೂ ಪಕ್ಕೆಯನ್ನು ಕತ್ತರಿಸಿಹಾಕಿದನು..॥42॥

ಮೂಲಮ್ - 43

ಸಚ್ಛಿನ್ನ ಪಕ್ಷಃ ಸಹಸಾ ರಕ್ಷಸಾ ರೌದ್ರಕರ್ಮಣಾ ।
ನಿಪಪಾತ ಮಹಾಗೃಧ್ರೋ ಧರಣ್ಯಾಮಲ್ಪಜೀವಿತಃ ॥

ಅನುವಾದ

ಭಯಂಕರ ಕರ್ಮ ಮಾಡುವ ಆ ರಾಕ್ಷಸನು ರಕ್ಕೆಗಳನ್ನು ಕತ್ತರಿಸಿದಾಗ ಮಹಾಗೃಧ್ರ ಜಟಾಯುವು ಮರಣಾಸನ್ನನಾಗಿ ಭೂಮಿಗೆ ಬಿದ್ದು ಬಿಟ್ಟನು.॥43॥

ಮೂಲಮ್ - 44

ತಂ ದೃಷ್ಟ್ವಾ ಪತಿತಂ ಭೂಮೌ ಕ್ಷತಜಾರ್ದ್ರಂ ಜಟಾಯುಷಮ್ ।
ಅಭ್ಯಧಾವತ ವೈದೇಹೀ ಸ್ವಬಂಧುಮಿವ ದುಃಖಿತಾ ॥

ಅನುವಾದ

ತನ್ನ ಬಾಂಧವರಂತಿದ್ದ ಜಟಾಯು ರಕ್ತಸಿಕ್ತನಾಗಿ ನೆಲದಲ್ಲಿ ಬಿದ್ದಿರುವುದನ್ನು ನೋಡಿ ಸೀತೆಯು ದುಃಖದಿಂದ ವ್ಯಾಕುಲಳಾಗಿ ಅವನ ಕಡೆಗೆ ಓಡಿದಳು.॥44॥

ಮೂಲಮ್ - 45

ತಂ ನೀಲಜೀಮೂತನಿಕಾಶಕಲ್ಪಂ
ಸುಪಾಂಡುರೋರಸ್ಕಮುದಾರವೀರ್ಯಮ್ ।
ದದರ್ಶ ಲಂಕಾಧಿಪತಿಃ ಪೃಥಿವ್ಯಾಂ
ಜಟಾಯುಷಂ ಶಾಂತಮಿವಾಗ್ನಿದಾವಮ್ ॥

ಅನುವಾದ

ಜಟಾಯುವಿನ ಶರೀರ ಕಾಂತಿಯು ನೀಲಿ ಮೋಡದಂತೆ ಕಪ್ಪಾಗಿತ್ತು. ಅವನ ಎದೆಯ ಭಾಗವು ಬೆಳ್ಳಗಿತ್ತು. ಅವನು ಮಹಾಪರಾಕ್ರಮಿಯಾಗಿದ್ದರೂ ಆಗ ಆರಿದ ದಾವಾನಲದಂತೆ ಭೂಮಿಯಲ್ಲಿ ಬಿದ್ದಿದ್ದನು. ಲಂಕಾಪತಿ ರಾವಣನು ಅವನನ್ನು ಈ ಅವಸ್ಥೆಯಲ್ಲಿ ನೋಡಿದನು.॥45॥

ಮೂಲಮ್ - 46

ತತಸ್ತು ತಂ ಪತ್ರರಥಂ ಮಹೀತಲೇ
ನಿಪಾತಿತಂ ರಾವಣವೇಗಮರ್ದಿತಮ್ ।
ಪುನಶ್ಚ ಸಂಗೃಹ್ಯ ಶಶಿಪ್ರಭಾನನಾ
ರುದೋದ ಸೀತಾ ಜನಕಾತ್ಮಜಾ ತದಾ ॥

ಅನುವಾದ

ಅನಂತರ ರಾವಣನು ವೇಗದಿಂದ ಹೊಸಕಿ ಹಾಕಿ ಧರಾಶಾಯಿಯಾದ ಜಟಾಯುವನ್ನು ಹಿಡಿದುಕೊಂಡು ಚಂದ್ರಮುಖೀ ಜನಕನಂದಿನಿ ಸೀತೆಯು ಪುನಃ ಆಗ ಅಳತೊಡಗಿದಳು.॥46॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತೊಂದನೆಯ ಸರ್ಗ ಸಂಪೂರ್ಣವಾಯಿತು. ॥51॥