वाचनम्
ಭಾಗಸೂಚನಾ
ಜಟಾಯು ರಾವಣನಿಗೆ ದುಷ್ಕರ್ಮದಿಂದ ಹಿಂದೆಗೆಯುವಂತೆ ತಿಳಿಯ ಹೇಳಿದುದು, ಅವನು ಕೇಳದಿರಲು ಯುದ್ಧಕ್ಕೆ ಆಹ್ವಾನಿಸಿದುದು
ಮೂಲಮ್ - 1
ತಂ ಶಬ್ದಮವಸುಪ್ತಸ್ತು ಜಟಾಯುರಥ ಶುಶ್ರುವೇ ।
ನಿರೈಕ್ಷದ್ ರಾವಣಂ ಕ್ಷಿಪ್ರಂ ವೈದೇಹೀಂ ಚ ದದರ್ಶ ಸಃ ॥
ಅನುವಾದ
ಆಗ ಜಟಾಯು ಮಲಗಿದ್ದನು. ಅದೇ ಸ್ಥಿತಿಯಲ್ಲಿ ಅವನು ಸೀತೆಯ ಕರುಣಕ್ರಂದನ ಕೇಳಿದನು. ಕೇಳುತ್ತಲೇ ಕೂಡಲೇ ಕಣ್ಣುತೆರೆದು ವಿದೇಹನಂದಿನೀ ಮತ್ತು ರಾವಣನನ್ನು ನೋಡಿದನು.॥1॥
ಮೂಲಮ್ - 2
ತತಃ ಪರ್ವತಶೃಂಗಾಭಸ್ತೀಕ್ಷ್ಣತುಂಡಃ ಖಗೋತ್ತಮಃ ।
ವನಸ್ಪತಿಗತಃ ಶ್ರೀಮಾನ್ ವ್ಯಾಜಹಾರ ಶುಭಾಂ ಗಿರಮ್ ॥
ಅನುವಾದ
ಪಕ್ಷಿಗಳಲ್ಲಿ ಶ್ರೇಷ್ಠನಾದ ಶ್ರೀಮಾನ್ ಜಟಾಯುವಿನ ಶರೀರ ಪರ್ವತ ಶಿಖರದಂತೆ ಎತ್ತರವಾಗಿತ್ತು. ಅವನ ಕೊಕ್ಕು ಬಹಳ ತೀಕ್ಷ್ಣವಾಗಿತ್ತು. ಅವನು ಮರದಲ್ಲಿ ಕುಳಿತೇ ರಾವಣನನ್ನು ಸಂಬೋಧಿಸಿ ಹೀಗೆ ಶುಭವಚನವನ್ನಾಡಿದನು.॥2॥
ಮೂಲಮ್ - 3½
ದಶಗ್ರೀವ ಸ್ಥಿತೋ ಧರ್ಮೇ ಪುರಾಣೇ ಸತ್ಯಸಂಶ್ರಯಃ ।
ಭ್ರಾತಸ್ತ್ವಂ ನಿಂದಿತಂ ಕರ್ಮ ಕರ್ತುಂ ನಾರ್ಹಸಿ ಸಾಂಪ್ರತಮ್ ॥
ಜಟಾಯುರ್ನಾಮ ನಾಮ್ನಾಹಂ ಗೃಧ್ರರಾಜೋ ಮಹಾಬಲಃ ।
ಅನುವಾದ
ದಶಮುಖ ರಾವಣನೇ! ನಾನು ಸನಾತನ ಧರ್ಮದಲ್ಲಿ ಸ್ಥಿತನಾದ, ಸತ್ಯಪ್ರತಿಜ್ಞ ಹಾಗೂ ಮಹಾಬಲವಂತನಾದ ಗೃಧ್ರರಾಜ ಜಟಾಯುವಾಗಿದ್ದೇನೆ. ತಮ್ಮ! ಈಗ ನನ್ನ ಮುಂದೆ ನೀನು ಇಂತಹ ನಿಂದಿತ ಕರ್ಮಮಾಡಬಾರದ.॥3½॥
ಮೂಲಮ್ - 4½
ರಾಜಾ ಸರ್ವಸ್ಯ ಲೋಕಸ್ಯ ಮಹೇಂದ್ರವರುಣೋಪಮಃ ॥
ಲೋಕಾನಾಂ ಚ ಹಿತೇ ಯುಕ್ತೋ ರಾಮೋ ದಶರಥಾತ್ಮಜಃ ।
ಅನುವಾದ
ದಶರಥನಂದನ ಶ್ರೀರಾಮಚಂದ್ರನು ಸಮಸ್ತ ಜಗತ್ತಿಗೆ ಸ್ವಾಮಿಯಾಗಿದ್ದಾನೆ. ಇಂದ್ರ, ವರುಣರಂತೆ ಪರಾಕ್ರಮಿ ಹಾಗೂ ಸರ್ವಲೋಕಗಳ ಹಿತದಲ್ಲಿ ತತ್ಪರನಾಗಿರುವವನು.॥4½॥
ಮೂಲಮ್ - 5½
ತಸ್ಯೈಷಾ ಲೋಕನಾಥಸ್ಯ ಧರ್ಮಪತ್ನೀ ಯಶಸ್ವಿನೀ ॥
ಸೀತಾ ನಾಮ ವರಾರೋಹಾ ಯಾಂ ತ್ವಂ ಹರ್ತುಮಿಹೇಚ್ಛಸಿ ।
ಅನುವಾದ
ಇವಳು ಆ ಜಗದೀಶ್ವರ ಶ್ರೀರಾಮನ ಯಶಸ್ವಿನೀ ಧರ್ಮಪತ್ನಿಯಾಗಿರುವಳು. ನೀನು ಕದ್ದುಕೊಂಡು ಹೋಗಲು ಬಯಸುತ್ತಿರುವ ಈ ಸುಂದರ ಶರೀರವುಳ್ಳ ದೇವಿಯ ಹೆಸರು ಸೀತೆಯಾಗಿದೆ.॥5½॥
ಮೂಲಮ್ - 6
ಕಥಂ ರಾಜಾ ಸ್ಥಿತೋ ಧರ್ಮೇಪರದಾರಾನ್ಪರಾಮೃಶೇತ್ ॥
ಮೂಲಮ್ - 7
ರಕ್ಷಣೀಯಾ ವಿಶೇಷೇಣ ರಾಜದಾರಾ ಮಹಾಬಲ ।
ನಿವರ್ತಯ ಗತಿಂ ನೀಚಾಂ ಪರದಾರಾಭಿಮರ್ಶನಾತ್ ॥
ಅನುವಾದ
ತನ್ನ ಧರ್ಮದಲ್ಲಿ ಸ್ಥಿರನಾಗಿದ್ದ ಯಾರೇ ರಾಜನು ಪರಸ್ತ್ರೀಯನ್ನು ಹೇಗೆ ತಾನೇ ಸ್ಪರ್ಶಿಸಬಲ್ಲನು? ಮಹಾಬಲಿ ರಾವಣ! ರಾಜರ ಸ್ತ್ರೀಯರನ್ನು ಎಲ್ಲರೂ ವಿಶೇಷವಾಗಿ ರಕ್ಷಿಸಬೇಕು. ಪರಸ್ತ್ರೀಯ ಸ್ಪರ್ಶದಿಂದ ಪ್ರಾಪ್ತವಾಗುವ ನೀಚಗತಿಯಿಂದ ದೂರವುಳಿಯಬೇಕು.॥6-7॥
ಮೂಲಮ್ - 8
ನ ತತ್ಸಮಾಚರೇದ್ಧೀರೋ ಯತ್ಪರೋಽಸ್ಯ ವಿಗರ್ಹಯೇತ್ ।
ಯಥಾಽಽತ್ಮನಸ್ತಥಾನ್ಯೇಷಾಂ ದಾರಾ ರಕ್ಷ್ಯಾ ವಿಮರ್ಶನಾತ್ ॥
ಅನುವಾದ
ಧೀರನೇ! ಬೇರೆಯವರು ನಿಂದಿಸುವ ಕರ್ಮವನ್ನು ನೀನು ಮಾಡಬೇಡ. ಪರಪುರಷನಿಂದ ತನ್ನ ಪತ್ನಿಯನ್ನು ರಕ್ಷಿಸುವಂತೆಯೇ ಇತರರ ಪತ್ನಿಯರನ್ನು ರಕ್ಷಿಸಬೇಕು.॥8॥
ಮೂಲಮ್ - 9
ಅರ್ಥಂ ವಾ ಯದಿ ವಾ ಕಾಮಂ ಶಿಷ್ಟಾ ಶಾಸ್ತ್ರೇಷ್ವನಾಗತಮ್ ।
ವ್ಯವಸ್ಯಂತ್ಯನುರಾಜಾನಂ ಧರ್ಮಂ ಪೌಲಸ್ತ್ಯನಂದನ ॥
ಅನುವಾದ
ಪುಲಸ್ತ್ಯಕುಲನಂದನ! ಶಾಸ್ತ್ರಗಳಲ್ಲಿ ಹೇಳದಿರುವ ಧರ್ಮವನ್ನಾಗಲೀ, ಅರ್ಥವನ್ನಾಗಲೀ ಕಾಮವನ್ನಾಗಲೀ ರಾಜರು ಆಚರಿಸಿದರೆ, ಅದನ್ನು ನೋಡಿ ಇತರರೂ ಆಚರಿಸತೊಡಗುತ್ತಾರೆ. (ಆದ್ದರಿಂದ ರಾಜನು ಅನುಚಿತ ಅಥವಾ ಅಶಾಸ್ತ್ರೀಯ ಕರ್ಮದಲ್ಲಿ ಪ್ರವೃತ್ತನಾಗಬಾರದು..॥9॥
ಮೂಲಮ್ - 10
ರಾಜಾ ಧರ್ಮಶ್ಚ ಕಾಮಶ್ಚ ದ್ರವ್ಯಾಣಾಂ ಚೋತ್ತಮೋ ನಿಧಿಃ ।
ಧರ್ಮಃ ಶುಭಂ ವಾ ಪಾಪಂ ವಾ ರಾಜಮೂಲಂ ಪ್ರವರ್ತತೇ ॥
ಅನುವಾದ
ರಾಜನು ಧರ್ಮ ಮತ್ತು ಕಾಮದ ಪ್ರವರ್ತಕ ಹಾಗೂ ದ್ರವ್ಯಗಳ ಉತ್ತಮನಿಧಿಯಾಗಿದ್ದಾನೆ, ಆದ್ದರಿಂದ ಧರ್ಮ, ಸದಾಚಾರ ಅಥವಾ ಪಾಪ ಇವುಗಳ ಪ್ರವತ್ತಿಯ ಮೂಲ ಕಾರಣ ರಾಜನೇ ಆಗಿದ್ದಾನೆ.॥10॥
ಮೂಲಮ್ - 11
ಪಾಪಸ್ವಭಾವಶ್ಚಪಲಃ ಕಥಂ ತ್ವಂ ರಕ್ಷಸಾಂ ವರ ।
ಐಶ್ವರ್ಯಮಭಿಸಂಪ್ರಾಪ್ತೋ ವಿಮಾನಮಿವ ದುಷ್ಕೃತಿಃ ॥
ಅನುವಾದ
ನಿನ್ನ ಸ್ವಭಾವ ಇಂತಹ ಪಾಪಪೂರ್ಣವಾಗಿದೆ ಮತ್ತು ನೀನು ಇಷ್ಟು ಚಪಲನಾಗಿರುವೆ. ಹಾಗಿರುವಾಗ ಪಾಪಿಗೆ ದೇವತೆಗಳ ವಿಮಾನಪ್ರಾಪ್ತವಾದಂತೆ ನಿನಗೆ ಈ ಐಶ್ವರ್ಯ ಹೇಗೆ ಪ್ರಾಪ್ತವಾಯಿತು.॥11॥
ಮೂಲಮ್ - 12
ಕಾಮಸ್ವಭಾವೋ ಯಃಸೋಽಸೌ ನ ಶಕ್ಯಸ್ತಂ ಪರಿಮಾರ್ಜಿತುಮ್ ।
ನ ಹಿ ದುಷ್ಟಾತ್ಮನಾಮಾರ್ಯಮಾವಸತ್ಯಾಲಯೇ ಚಿರಮ್ ॥
ಅನುವಾದ
ಯಾರ ಸ್ವಭಾವದಲ್ಲಿ ಕಾಮದ ಪ್ರಧಾನತೆ ಇದೆಯೋ ಅವನ ಆ ಸ್ವಭಾವವನ್ನು ತೋಳೆದುಹಾಕಲಾಗುವುದಿಲ್ಲ. ಏಕೆಂದರೆ ದುಷ್ಟಾತ್ಮರ ಮನೆಯಲ್ಲಿ ದೀರ್ಘಕಾಲದ ಬಳಿಕವೂ ಪುಣ್ಯವು ನೆಲೆಸುವುದಿಲ್ಲ.॥12॥
ಮೂಲಮ್ - 13
ವಿಷಯೇ ವಾ ಪುರೇ ವಾ ತೇ ಯದಾ ರಾಮೋ ಮಹಾಬಲಃ ।
ನಾಪರಾಧ್ಯತಿ ಧರ್ಮಾತ್ಮಾ ಕಥಂ ತಸ್ಯಾಪರಾಧ್ಯಸಿ ॥
ಅನುವಾದ
ಮಹಾಬಲಿ ಧರ್ಮಾತ್ಮಾ ಶ್ರೀರಾಮನು ನಿನ್ನ ರಾಜ್ಯದಲ್ಲಿ ಅಥವಾ ನಗರದಲ್ಲಿ ಯಾವುದೇ ಅಪರಾಧ ಮಾಡದಿದ್ದಾಗ ನೀನು ಅವನಲ್ಲಿ ಅಪರಾಧ ಏಕೆ ಮಾಡುತ್ತಿರುವೆ.॥13॥
ಮೂಲಮ್ - 14
ಯದಿ ಶೂರ್ಪಣಖಾಹೇತೋರ್ಜನಸ್ಥಾನಗತಃ ಖರಃ ।
ಅತಿವೃತ್ತೋ ಹತಃ ಪೂರ್ವಂ ರಾಮೇಣಾಕ್ಲಿಷ್ಟಕರ್ಮಣಾ॥
ಮೂಲಮ್ - 15
ಅತ್ರ ಬ್ರೂಹಿ ತಥಾತತ್ತ್ವಂ ಕೋ ರಾಮಸ್ಯ ವ್ಯತಿಕ್ರಮಃ ।
ಯಸ್ಯ ತ್ವಂ ಲೋಕನಾಥಸ್ಯ ಹೃತ್ವಾ ಭಾರ್ಯಾಂ ಗಮಿಷ್ಯಸಿ ॥
ಅನುವಾದ
ಮೊದಲು ಶೂರ್ಪಣಖಿಯ ಸೇಡು ತೀರಿಸಲು ಯುದ್ಧಕ್ಕೆ ಬಂದ ಅತ್ಯಾಚಾರೀ ಖರನನ್ನು ಸುಲಭವಾಗಿ ಮಹಾಕರ್ಮವನ್ನು ಮಾಡುವ ಇದರಲ್ಲಿ ಶ್ರೀರಾಮನು ವಧಿಸಿದರೆ ಅಪರಾಧವೇನಿದೆ? ನೀನು ಸರಿಯಾಗಿ ತಿಳಿಸು. ಅದರಿಂದ ನೀನು ಆ ಜಗಧೀಶ್ವರನ ಪತ್ನಿಯನ್ನು ಕದ್ದುಕೊಂಡು ಹೋಗಲು ಬಯಸುತ್ತಿರುವೆಯಲ್ಲ.॥14-15॥
ಮೂಲಮ್ - 16
ಕ್ಷಿಪ್ರಂ ವಿಸೃಜ ವೈದೇಹೀಂ ಮಾ ತ್ವಾ ಘೋರೇಣ ಚಕ್ಷುಷಾ ।
ದಹೇದ್ದಹನಭೂತೇನ ವೃತ್ರಮಿಂದ್ರಾಶನಿರ್ಯಥಾ ॥
ಅನುವಾದ
ರಾವಣ! ಈಗ ಬೇಗನೇ ವೈದೇಹಿಯನ್ನು ಬಿಡು, ಅದರಿಂದ ಶ್ರೀರಾಮನಚಂದ್ರನು ತನ್ನ ಅಗ್ನಿಯಂತಹ ಭಯಂಕರ ದೃಷ್ಟಿಯಿಂದ ನಿನ್ನನ್ನು ಸುಟ್ಟು ಭಸ್ಮವಾಗಿಸದಿರಲಿ. ಇಂದ್ರನು ವಜ್ರದಿಂದ ವೃತ್ರಾಸುರನನ್ನು ವಿನಾಶ ಮಾಡಿದಂತೆಯೇ ಶ್ರೀರಾಮನ ರೋಷಪೂರ್ಣ ದೃಷ್ಟಿ ದಗ್ಧ ಮಾಡಿಬಿಟ್ಟೀತು.॥16॥
ಮೂಲಮ್ - 17
ಸರ್ಪಮಾಶೀವಿಷಂ ಬದ್ಧ್ವಾ ವಸ್ತ್ರಾಂತೇ ನಾವಬುಧ್ಯಸೇ ।
ಗ್ರೀವಾಯಾಂ ಪ್ರತಿಮುಕ್ತಂ ಚ ಕಾಲಪಾಶಂ ನ ಪಶ್ಯಸಿ ॥
ಅನುವಾದ
ನೀನು ನಿನ್ನ ಬಟ್ಟೆಯಲ್ಲಿ ವಿಷಧರ ಸರ್ಪವನ್ನು ಕಟ್ಟಿಕೊಂಡಿರುವೆ ಆದರೂ ನಿನಗೆ ತಿಳಿಯುತ್ತಿಲ್ಲ. ನೀನು ಕತ್ತಿಗೆ ಸಾವಿನ ಉರುಳನ್ನು ಹಾಕಿಕೊಂಡಿರುವುದೂ ನಿನಗೆ ಹೊಳೆಯುವುದಿಲ್ಲ.॥17॥
ಮೂಲಮ್ - 18
ಸ ಭಾರಃ ಸೌಮ್ಯ ಭರ್ತವ್ಯೋ ಯೋ ನರಂ ನಾವಸಾದಯೇತ್ ।
ತದನ್ನಮಪಿ ಭೋಕ್ತವ್ಯಂ ಜೀರ್ಯತೇ ಯದನಾಮಯಮ್ ॥
ಅನುವಾದ
ಸೌಮ್ಯ! ಮನುಷ್ಯನು ಕತ್ತು ಉಳುಕಿಹೋಗದಷ್ಟೇ ಭಾರವನ್ನು ಎತ್ತಿಕೊಳ್ಳಬೇಕು. ಹೊಟ್ಟೆಗೆ ಹೋಗಿ ಪಚನವಾಗುವಷ್ಟೇ ಅನ್ನವನ್ನು ತಿನ್ನಬೇಕು. ಅದು ಹೊಟ್ಟೆಗೆ ಹೋಗಿ ರೋಗವನ್ನು ಉಂಟುಮಾಡಬಾರದು.॥18॥
ಮೂಲಮ್ - 19
ಯತ್ಕೃತ್ವಾ ನ ಭವೇದ್ಧರ್ಮೋ ನ ಕೀರ್ತಿರ್ನ ಯಶೋ ಧ್ರುವಮ್ ।
ಶರೀರಸ್ಯ ಭವೇತ್ಖೇದಃ ಕಸ್ತತ್ಕರ್ಮ ಸಮಾಚರೇತ್ ॥
ಅನುವಾದ
ಯಾವ ಕಾರ್ಯವನ್ನು ಮಾಡುವುದರಿಂದ ಧರ್ಮವಾಗುವುದಿಲ್ಲವೋ, ಕೀರ್ತಿ ಉಂಟಾಗುವುದಿಲ್ಲವೋ, ಅಕ್ಷಯ ಯಶಪ್ರಾಪ್ತವಾಗುವುದಿಲ್ಲವೋ, ಬದಲಿಗೆ ಶರೀರಕ್ಕೆ ಕ್ಲೇಶವೇ ಯಾವುದೋ, ಅಂತಹ ಕರ್ಮವನ್ನು ಯಾರು ತಾನೇ ಮಾಡುವನು.॥19॥
ಮೂಲಮ್ - 20
ಷಷ್ಟಿರ್ವರ್ಷಸಹಸ್ರಾಣಿ ಜಾತಸ್ಯ ಮಮ ರಾವಣ ।
ಪಿತೃಪೈತಾಮಹಂ ರಾಜ್ಯಂ ಯಥಾವದನುತಿಷ್ಠತಃ ॥
ಅನುವಾದ
ರಾವಣ! ತಂದೆ ತಾತಂದಿರಿಂದ ಪ್ರಾಪ್ತವಾದ ಈ ಪಕ್ಷಿಗಳ ರಾಜ್ಯವನ್ನು ವಿಧಿವತ್ತಾಗಿ ಪಾಲಿಸುತ್ತಾ ನನಗೆ ಈಗ ಅರವತ್ತು ಸಾವಿರ ವರ್ಷಗಳು ಕಳೆದಿವೆ.॥20॥
ಮೂಲಮ್ - 21
ವೃದ್ಧೋಽಹಂ ತ್ವಂ ಯುವಾ ಸರಥಃ ಕವಚೀ ಶರೀ ।
ನ ಚಾಪ್ಯಾದಾಯ ಕುಶಲೀ ವೈದೇಹೀಂ ಮೇ ಗಮಿಷ್ಯಸಿ ॥
ಅನುವಾದ
ಈಗ ನಾನು ಮುದುಕನಾಗಿದ್ದೇನೆ, ನೀನು ಯುವಕನಾಗಿರುವೆ. (ನನ್ನ ಬಳಿಯಲ್ಲಿ ಯುದ್ಧ ಸಾಮಗ್ರಿಯೂ ಇಲ್ಲ,) ಆದರೂ ನಿನ್ನ ಬಳಿ ಧನುಸ್ಸು, ಕವಚ, ಬಾಣ, ರಥ ಎಲ್ಲವೂ ಇದ್ದರೂ ನೀನು ಸೀತೆಯನ್ನೆತ್ತಿಕೊಂಡು ಕ್ಷೇಮವಾಗಿ ಹೋಗಲಾರೆ.॥21॥
ಮೂಲಮ್ - 22
ನ ಶಕ್ತಸ್ತ್ವಂ ಬಲಾದ್ಧರ್ತುಂ ವೈದೇಹೀಂ ಮಮ ಪಶ್ಯತಃ ।
ಹೇತುಭಿರ್ನ್ಯಾಯಸಂಯುಕ್ತೈರ್ಧ್ರುವಾಂ ವೇದಶ್ರುತೀಮಿವ ॥
ಅನುವಾದ
ಯಾವುದೇ ನ್ಯಾಯ ಸಂಗದ ಹೇತುಗಳಿಂದ ಸತ್ಯ, ಸಿದ್ಧವಾದ ವೈದಿಕ ಶ್ರುತಿಯನ್ನು ತನ್ನ ಯುಕ್ತಿಗಳಿಂದ ಬದಲಾಗಿಸಲಾಗದಂತೆ ನಾನು ನೋಡು ನೋಡುತ್ತಿರುವಾಗ ನೀನು ಸೀತೆಯನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಲಾರೆ.॥22॥
ಮೂಲಮ್ - 23
ಯುಧ್ಯಸ್ವ ಯದಿ ಶೋರೋಽಸಿ ಮುಹೂರ್ತಂ ತಿಷ್ಠ ರಾವಣ ।
ಶಯಿಷ್ಯಸೇ ಹತೋ ಭೂಮೌ ಯಥಾ ಪೂರ್ವಂ ಖರಸ್ತಥಾ ॥
ಅನುವಾದ
ರಾವಣ! ನೀನು ಶೂರವೀರನಾಗಿದ್ದರೆ ಯುದ್ಧ ಮಾಡು, ನನ್ನೆದುರಿಗೆ ಮೂಹೂರ್ತಕಾಲ ನಿಂತುಕೋ, ಮತ್ತೆ ಮೊದಲು ಖರನು ಸತ್ತುಹೋದಂತೆ ನೀನೂ ನನ್ನಿಂದ ಹತನಾಗಿ ಎಂದೆಂದಿಗೂ ಭೂಮಿಯಲ್ಲಿ ಮಲಗಿ ಬಿಡುವೆ.॥23॥
ಮೂಲಮ್ - 24
ಅಸಕೃತ್ಸಂಯುಗೇ ಯೇನ ನಿಹತಾ ದೈತ್ಯದಾನವಾಃ ।
ನ ಚಿರಾಚ್ಚೀರವಾಸಾಸ್ತ್ವಾಂ ರಾಮೋ ಯುಧಿ ವಧಿಷ್ಯತಿ ॥
ಅನುವಾದ
ನಾರುಮಡಿಯನ್ನು ಧರಿಸಿದ ಭಗವಾನ್ ಶ್ರೀರಾಮನು ಯುದ್ಧದಲ್ಲಿ ಅನೇಕ ಬಾರಿ ದೈತ್ಯರನ್ನು ದಾನವರನ್ನು ವಧಿಸಿದಂತೆ ನಿನ್ನನ್ನೂ ಶೀಘ್ರವಾಗಿ ಯುದ್ಧ ಭೂಮಿಯಲ್ಲಿ ವಿನಾಶಗೊಳಿಸುವೆನು.॥24॥
ಮೂಲಮ್ - 25
ಕಿಂ ನು ಶಕ್ಯಂ ಮಯಾ ಕರ್ತುಂ ಗತೌ ದೂರಂ ನೃಪಾತ್ಮಜೌ ।
ಕ್ಷಿಪ್ರಂ ತ್ವಂ ನಶ್ಯಸೇ ನೀಚ ತಯೋರ್ಭೀತೋ ನ ಸಂಶಯಃ ॥
ಅನುವಾದ
ಆ ರಾಜಕುಮಾರರಿಬ್ಬರೂ ಬಹುದೂರ ಹೋಗಿರುವರು, ಈಗ ನಾನೇನು ಮಾಡಬಲ್ಲೆ ನೀಚನೇ! (ನಾನು ಅವರನ್ನು ಕರೆಯಲು ಹೋದರೆ) ನೀನು ಆ ಇಬ್ಬರಿಗೂ ಹೆದರಿ ಕಣ್ಮರೆಯಾಗುವೆ ಇದರಲ್ಲಿ ಸಂಶಯವೇ ಇಲ್ಲ.॥25॥
ಮೂಲಮ್ - 26
ನಹಿ ಮೇ ಜೀವಮಾನಸ್ಯ ನಯಿಷ್ಯಸಿ ಶುಭಾಮಿಮಾಮ್ ।
ಸೀತಾಂ ಕಮಲಪತ್ರಾಕ್ಷೀಂ ರಾಮಸ್ಯ ಮಹೀಷೀಂ ಪ್ರಿಯಾಮ್ ॥
ಅನುವಾದ
ಕಮಲನಯನೇ ಈ ಶುಭಲಕ್ಷಣ ಸೀತೆಯು ಶ್ರೀರಾಮನ ಪ್ರಿಯ ಪಟ್ಟದರಸಿಯಾಗಿದ್ದಾಳೆ. ಈಕೆಯನ್ನು ನಾನು ಜೀವಂತವಾಗಿರುವಾಗ ನೀನು ಕೊಂಡುಹೋಗಲಾರೆ.॥26॥
ಮೂಲಮ್ - 27
ಅವಶ್ಯಂ ತು ಮಯಾ ಕಾರ್ಯಂ ಪ್ರಿಯಂ ತಸ್ಯ ಮಹಾತ್ಮನಃ ।
ಜೀವಿತೇನಾಪಿ ರಾಮಸ್ಯ ತಥಾ ದಶರಥಸ್ಯ ಚ ॥
ಅನುವಾದ
ನಾನು ಪ್ರಾಣವನ್ನಾದರೂ ಕೊಟ್ಟು ಮಹಾತ್ಮಾ ಶ್ರೀರಾಮ ಮತ್ತು ದಶರಥನ ರಾಜನ ಪ್ರಿಯ ಕಾರ್ಯವನ್ನು ಅವಶ್ಯವಾಗಿ ಮಾಡಬೇಕು.॥27॥
ಮೂಲಮ್ - 28
ತಿಷ್ಠತಿಷ್ಠ ದಶಗ್ರೀವ ಮುಹೂರ್ತಂ ಪಶ್ಯ ರಾವಣ ।
ವೃಂತಾದಿವ ಫಲಂ ತ್ವಾಂ ತು ಪಾತಯೇಯಂ ರಥೋತ್ತಮಾತ್ ।
ಯುದ್ಧಾತಿಥ್ಯಂ ಪ್ರದಾಸ್ಯಾಮಿ ಯಥಾಪ್ರಾಣಂ ನಿಶಾಚರ ॥
ಅನುವಾದ
ದಶಮುಖ ರಾವಣನೇ! ನಿಲ್ಲು, ನಿಲ್ಲು! ಕೇವಲ ಎರಡುಗಳಿಗೆ ನಿಲ್ಲು ಮತ್ತೆ ನೋಡು, ತೊಟ್ಟಿನಿಂದ ಹಣ್ಣುಬೀಳುವಂತೆ ನಿನ್ನನ್ನು ಈ ಉತ್ತಮ ರಥದಿಂದ ಕೆಳಕ್ಕೆ ಬೀಳಿಸುವೆನು. ನಿಶಾಚರನೇ! ನನ್ನ ಶಕ್ತಿಗನುಸಾರ ನಾನು ಯುದ್ಧದಲ್ಲಿ ನಿನಗೆ ಚೆನ್ನಾಗಿ ಆತಿಥ್ಯ ಸತ್ಕಾರ ಮಾಡುವೆನು. ನಿನಗೆ ಸರಿಯಾದ ಕಾಣಿಕೆಕೊಡುವೆನ.॥28॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐವತ್ತನೆಯ ಸರ್ಗ ಸಂಪೂರ್ಣವಾಯಿತು.॥50॥