वाचनम्
ಭಾಗಸೂಚನಾ
ರಾವಣನಿಂದ ಸೀತೆಯ ಅಪಹರಣ, ಸೀತೆಯ ವಿಲಾಪ, ಜಟಾಯುವಿನ ವಿರೋಧ
ಮೂಲಮ್ - 1
ಸೀತಾಯಾ ವಚನಂ ಶ್ರುತ್ವಾ ದಶಗ್ರೀವಃ ಪ್ರತಾಪವಾನ್ ।
ಹಸ್ತೇ ಹಸ್ತಂ ಸಮಾಹತ್ಯ ಚಕಾರ ಸುಮಹದ್ ವಪುಃ ॥
ಅನುವಾದ
ಸೀತೆಯ ಈ ಮಾತನ್ನು ಕೇಳಿ ಪ್ರತಾಪಿ ದಶಮುಖ ರಾವಣನು ಚಪ್ಪಾಳೆ ತಟ್ಟಿ ಶರೀರವನ್ನು ಬಹಳ ದೊಡ್ಡದಾಗಿಸಿ ಕೊಂಡನು.॥1॥
ಮೂಲಮ್ - 2
ಸ ಮೈಥಿಲೀಂ ಪುನರ್ವಾಕ್ಯಂ ಬಭಾಷೇ ವಾಕ್ಯಕೋವಿದಃ ।
ನೋನ್ಮತ್ತಯಾ ಶ್ರುತೌ ಮನ್ಯೇ ಮಮ ವೀರ್ಯಪರಾಕ್ರಮೌ ॥
ಅನುವಾದ
ಅವನು ವಾಕ್ಯಕೋವಿದನಾಗಿದ್ದನು. ಅವನು ಮೈಥಿಲಿಯಲ್ಲಿ ಪುನಃ ಹೀಗೆ ಹೇಳತೊಡಗಿದನು. ನಾನು ತಿಳಿದಂತೆ ನೀನು ಹುಚ್ಚಿಯಾಗಿರುವೆ, ಅದಕ್ಕಾಗಿ ನೀನು ನನ್ನ ಬಲ ಪರಾಕ್ರಮವನ್ನು ನಿರ್ಲಕ್ಷಿಸಿದೆ.॥2॥
ಮೂಲಮ್ - 3
ಉದ್ವಹೇಯಂ ಭುಜಾಭ್ಯಾಂ ತು ಮೇದಿನೀಮಂಬರೇ ಸ್ಥಿತಃ ।
ಆಪಿಬೇಯಂ ಸಮುದ್ರಂ ಚ ಮೃತ್ಯುಂ ಹನ್ಯಾಂ ರಣೇ ಸ್ಥಿತಃ ॥
ಅನುವಾದ
ಎಲಗೇ! ನಾನು ಆಕಾಶದಲ್ಲಿ ನಿಂತುಕೊಂಡೇ ಈ ಇಡೀ ಪೃಥ್ವಿಯನ್ನು ಎತ್ತಬಲ್ಲೆ; ಸಮುದ್ರವನ್ನು ಕುಡಿಯಬಲ್ಲೆನು ಮತ್ತು ಯುದ್ಧದಲ್ಲಿ ಸ್ಥಿತನಾಗಿ ಮೃತ್ಯುವನ್ನು ಕೊಲ್ಲಬಲ್ಲೆ.॥3॥
ಮೂಲಮ್ - 4
ಅರ್ಕಂ ತುದ್ಯಾಂ ಶರೈಸ್ತೀಕ್ಷ್ಣೈರ್ವಿಭಿಂದ್ಯಾಂ ಹಿ ಮಹೀತಲಮ್ ।
ಕಾಮರೂಪೇಣ ಉನ್ಮತ್ತೇ ಪಶ್ಯ ಮಾಂ ಕಾಮರೂಪಿಣಮ್ ॥
ಅನುವಾದ
ಕಾಮ ಮತ್ತು ರೂಪದಿಂದ ಉನ್ಮತ್ತಳಾದ ನಾರಿಯೇ! ನಾನು ಬಯಸಿದರೆ ನನ್ನ ತೀಕ್ಷ್ಣಬಾಣಗಳಿಂದ ಸೂರ್ಯನನ್ನೂ ನೋಯಿಸಬಲ್ಲೆನು. ಈ ಭೂತಳವನ್ನೇ ವಿದೀರ್ಣಗೊಳಿಸುವೆನು. ನಾನು ಇಚ್ಛಾನುಸಾರ ರೂಪವನ್ನು ಧರಿಸಲು ಸಮರ್ಥನಾಗಿದ್ದೇನೆ, ನೀನು ನನ್ನ ಕಡೆಗೆ ನೋಡು.॥4॥
ಮೂಲಮ್ - 5
ಏವಮುಕ್ತವತಸ್ತಸ್ಯ ರಾವಣಸ್ಯ ಶಿಖಿಪ್ರಭೇ ।
ಕ್ರುದ್ಧಸ್ಯ ಹರಿಪರ್ಯಂತೇ ರಕ್ತೇ ನೇತ್ರೇ ಬಭೂವತುಃ ॥
ಅನುವಾದ
ಹೀಗೆ ಹೇಳುತ್ತಾ ಕ್ರೋಧಗೊಂಡ ರಾವಣನ ಕಣ್ಣುಗಳು ಉರಿಯುವ ಬೆಂಕಿಯಂತೆ ಕೆಂಪಾದವು.॥5॥
ಮೂಲಮ್ - 6
ಸದ್ಯಃ ಸೌಮ್ಯಂ ಪರಿತ್ಯಜ್ಯ ತೀಕ್ಷ್ಣರೂಪಂ ಸ ರಾವಣಃ ।
ಸ್ವಂ ರೂಪಂ ಕಾಲರೂಪಾಭಂ ಭೇಜೇ ವೈಶ್ರವಣಾನುಜಃ ॥
ಅನುವಾದ
ಕುಬೇರನ ತಮ್ಮನಾದ ರಾವಣನು ತನ್ನ ಸೌಮ್ಯರೂಪವನ್ನು ಮರೆಮಾಡಿ ತೀಕ್ಷ್ಣಕಾಲನಂತೆ ವಿಕರಾಳ ತನ್ನ ಸ್ವಾಭಾವಿಕ ರೂಪವನ್ನು ಧರಿಸಿದನು.॥6॥
ಮೂಲಮ್ - 7
ಸಂರಕ್ತನಯನಃ ಶ್ರೀಮಾಂಸ್ತಪ್ತಕಾಂಚನಭೂಷಣಃ ।
ಕ್ರೋಧೇನ ಮಹತಾವಿಷ್ಟೋ ನೀಲಜೀಮೂತಸಂನಿಭಃ ॥
ಅನುವಾದ
ಆಗ ರಾವಣನ ಎಲ್ಲ ನೇತ್ರಗಳೂ ಕೆಂಪಾಗಿದ್ದವು. ಅವನು ಪುಟಕ್ಕಿಟ್ಟ ಚಿನ್ನದ ಒಡವೆಗಳಿಂದ ಅಲಂಕೃತನಾಗಿದ್ದನು. ಮಹಾಕ್ರೋಧದಿಂದಾಗಿ ನೀಲಮೇದಂತೆ ಕಪ್ಪಾಗಿ ಕಾಣುತ್ತಿದ್ದನು.॥7॥
ಮೂಲಮ್ - 8
ದಶಾಸ್ಯೋ ವಿಂಶತಿಭುಜೋ ಬಭೂವ ಕ್ಷಣದಾಚರಃ ।
ಸ ಪರಿವ್ರಾಜಕಚ್ಛದ್ಮ ಮಹಾಕಾಯೋ ವಿಹಾಯ ತತ್ ॥
ಅನುವಾದ
ಆ ವಿಶಾಲಕಾಯ ನಿಶಾಚರನು ಪರಿವ್ರಾಜಕ ಕಪಟ ವೇಷವನ್ನು ತ್ಯಜಿಸಿ, ಹತ್ತು ಮುಖ ಮತ್ತು ಇಪ್ಪತ್ತು ತೋಳುಗಳಿಂದ ಕಾಣಿಸಿಕೊಂಡನು.॥8॥
ಮೂಲಮ್ - 9
ಪ್ರತಿಪೇದೇ ಸ್ವಕಂ ರೂಪಂ ರಾವಣೋ ರಾಕ್ಷಸಾಧಿಪಃ ।
ರಕ್ತಾಂಬರಧರಸ್ತಸ್ಥೌ ಸ್ತ್ರೀರತ್ನಂ ಪ್ರೇಕ್ಷ್ಯ ಮೈಥಿಲೀಮ್ ॥
ಅನುವಾದ
ಆಗ ರಾಕ್ಷಸಾಧಿಪ ರಾವಣನು ಸಹಜ ರೂಪವನ್ನಾಂತು ಕೆಂಪಾದ ಬಟ್ಟೆ ತೊಟ್ಟುಕೊಂಡು, ಸ್ತ್ರೀರತ್ನ ಸೀತೆಯ ಕಡೆಗೆ ನೋಡುತ್ತಾ ನಿಂತುಕೊಂಡನು.॥9॥
ಮೂಲಮ್ - 10
ಸ ತಾಮಸಿತಕೇಶಾಂತಾಂ ಭಾಸ್ಕರಸ್ಯ ಪ್ರಭಾಮಿವ ।
ವಸನಾಭರಣೋಪೇತಾಂ ಮೈಥಿಲೀಂ ರಾವಣೋಽಬ್ರವೀತ್ ॥
ಅನುವಾದ
ಕಪ್ಪಾದ ಕೂದಲುಳ್ಳ ಮೈಥಿಲಿಯು ವಸ್ತ್ರಾಭೂಷಣಗಳಿಂದ ಅಲಂಕೃತಳಾಗಿ ಸೂರ್ಯಪ್ರಭೆಯಂತೆ ಕಂಡುಬರುತ್ತಿದ್ದಳು. ರಾವಣನು ಆಕೆಯಲ್ಲಿ ಹೇಳಿದನು.॥10॥
ಮೂಲಮ್ - 11
ತ್ರಿಷು ಲೋಕೇಷು ವಿಖ್ಯಾತಂ ಯದಿ ಭರ್ತಾರಮಿಚ್ಛಸಿ ।
ಮಾಮಾಶ್ರಯ ವರಾರೋಹೇ ತವಾಹಂ ಸದೃಶಃ ಪತಿಃ ॥
ಅನುವಾದ
ಸುಂದರಿಯೇ! ನೀನು ಮೂರು ಲೋಕಗಳಲ್ಲಿ ವಿಖ್ಯಾತ ಪುರುಷನನ್ನು ತನ್ನ ಪತಿಯನ್ನಾಗಿಸಿಕೊಳ್ಳಲು ಬಯಸುವೆಯಾದರೆ ನನ್ನನ್ನು ಆಶ್ರಯಿಸು. ನಾನೇ ನಿನಗೆ ಯೋಗ್ಯಪತಿಯಾಗಿದ್ದೇನೆ.॥11॥
ಮೂಲಮ್ - 12
ಮಾಂ ಭಜಸ್ವ ಚಿರಾಯ ತ್ವಮಹಂ ಶ್ಲಾಘ್ಯಃ ಪ್ರಿಯಸ್ತವ ।
ನೈವ ಚಾಹಂ ಕ್ವಚಿದ್ಭದ್ರೇ ಕರಿಷ್ಯೇ ತವ ವಿಪ್ರಿಯಮ್ ॥
ಅನುವಾದ
ಭದ್ರೆ! ನನ್ನನ್ನು ದೀರ್ಘಕಾಲಕ್ಕಾಗಿ ಸ್ವೀಕರಿಸು ನಾನು ನಿನಗೆ ಗೌರವಾನ್ವಿತ, ಪ್ರಶಂಸನೀಯ ಪತಿಯಾಗುವೆನು. ಎಂದಿಗೂ ನಿನ್ನ ಮನಸ್ಸಿಗೆ ಪ್ರತಿಕೂಲವಾಗಿ ವರ್ತಿಸಲಾರೆನು.॥12॥
ಮೂಲಮ್ - 13½
ತ್ಯಜ್ಯತಾಂ ಮಾನುಷೋ ಭಾವೋ ಮಯಿ ಭಾವಃ ಪ್ರಣೀಯತಾಮ್ ।
ರಾಜ್ಯಾಚ್ಚ್ಯುತಮಸಿದ್ಧಾರ್ಥಂ ರಾಮಂ ಪರಿಮಿತಾಯುಷಮ್ ॥
ಕೈರ್ಗುಣೈರನುರಕ್ತಾಸಿ ಮೂಢೇ ಪಂಡಿತಮಾನಿನಿ ।
ಅನುವಾದ
ಮನುಷ್ಯನಾದ ರಾಮನ ವಿಷಯದಲ್ಲಿ ನಿನಗೆ ಇರುವ ಅನುರಾಗವನ್ನು ತ್ಯಜಿಸಿಬಿಡು. ತನ್ನನ್ನು ಬುದ್ಧಿವಂತೆ ಎಂದು ತಿಳಿದಿರುವ ನಾರಿಯೇ! ರಾಜ್ಯಭ್ರಷ್ಟನಾದ, ವಿಫಲ ಮನೋರಥನಾದ, ಸೀಮಿತ ಆಯುಸ್ಸುಳ್ಳ ಆ ರಾಮನಲ್ಲಿ ಯಾವ ಗುಣಗಳಿಂದ ನೀನು ಅನುರಕ್ತಳಾಗಿರುವೆ.॥13½॥
ಮೂಲಮ್ - 14½
ಯಃ ಸ್ತ್ರಿಯೋ ವಚನಾದ್ರಾಜ್ಯಂ ವಿಹಾಯ ಸಸುಹೃಜ್ಜನಮ್ ॥
ಅಸ್ಮಿನ್ ವ್ಯಾಲಾನುಚರಿತೇ ವನೇ ವಸತಿ ದುರ್ಮತಿಃ ।
ಅನುವಾದ
ಒಂದು ಸ್ತ್ರೀಯು ಹೇಳಿದ್ದರಿಂದ ಸುಹೃದರ ಸಹಿತ ಇಡೀ ರಾಜ್ಯವನ್ನು ತ್ಯಾಗಮಾಡಿ, ಈ ಹಿಂಸಕ ಪ್ರಾಣಿಗಳಿಂದ ತುಂಬಿದ ವನದಲ್ಲಿ ವಾಸಿಸುವ ರಾಮನ ಬುದ್ಧಿ ಎಂತಹುದು? ಅವನು ಸರ್ವದಾ ಮೂಢನಾಗಿದ್ದಾನೆ.॥14½॥
ಮೂಲಮ್ - 15
ಇತ್ಯುಕ್ತ್ವಾ ಮೈಥಿಲೀಂ ವಾಕ್ಯಂ ಪ್ರಿಯಾರ್ಹಾಂ ಪ್ರಿಯವಾದಿನೀಮ್ ॥
ಮೂಲಮ್ - 16
ಅಭಿಗಮ್ಯ ಸುದುಷ್ಟಾತ್ಮಾ ರಾಕ್ಷಸಃ ಕಾಮಮೋಹಿತಃ ।
ಜಗ್ರಾಹ ರಾವಣಃ ಸೀತಾಂ ಬುಧಃ ಖೇ ರೋಹಿಣೀಮಿವ ॥
ಅನುವಾದ
ಪ್ರಿಯವಚನಗಳನ್ನು ಕೇಳಲು ಯೋಗ್ಯಳಾದ, ಎಲ್ಲರೊಡನೆ ಪ್ರಿಯವಾಗಿ ಮಾತನಾಡುತ್ತಿದ್ದ ಆ ಮೈಥಿಲಿಯಲ್ಲಿ ಇಂತಹ ಅಪ್ರಿಯವಾಗಿ ಮಾತನ್ನಾಡಿ ಕಾಮಮೋಹಿತನಾಗಿ ಆ ಅತ್ಯಂತ ದುಷ್ಟಾತ್ಮಾ ರಾವಣನು ಬಳಿಗೆ ಹೋಗಿ, (ತಾಯಿಯಂತೆ ಆದರಣೀಯಳಾಗಿದ್ದ) ಸೀತೆಯನ್ನು ಹಿಡಿದುಕೊಂಡನು. *ಬುಧನು ಆಕಾಶದಲ್ಲಿ ತನ್ನ ತಾಯಿ ರೋಹಿಣಿಯನ್ನು ಹಿಡಿದಂತ.॥15-16॥
ಟಿಪ್ಪನೀ
*ಬುಧನು ಆಕಾಶದಲ್ಲಿ ತನ್ನ ಮಾತೆ ರೋಹಿಣಿಯನ್ನು ಹಿಡಿಯುವ ದುಸ್ಸಾಹಸ ಮಾಡಿದಂತೆ, ಇಲ್ಲಿ ಅಭೂತೋಪವಾಲಂಕಾರವಿದೆ. ಬುಧನು ಚಂದ್ರನ ಪುತ್ರನು, ರೋಹಿಣಿ ಚಂದ್ರನ ಪತ್ನೀ. ಬುಧನು ಎಂದೂ ರೋಹಿಣಿಯನ್ನು ಹಿಡಿದಿರಲಿಲ್ಲ, ಹೀಗೆ ಮಾಡಲೂ ಸಾಧ್ಯವಿಲ್ಲ. ಒಂದೊಮ್ಮೆ ಬುಧನು ಕಾಮವಶನಾಗಿ ತನ್ನ ತಾಯಿ ರೋಹಿಣಿಯನ್ನು ಹಿಡಿದುಕೋಂಡರೆ ಅದು ಎಂತಹ ಘೋರ ಪಾಪವಾಗುವುದೋ ಅದನ್ನೇ ರಾವಣನು ಸೀತೆಯನ್ನು ಹಿಡಿದುಕೊಂಡು ಮಾಡಿದ್ದನು ಎಂದು ಇಲ್ಲಿ ತೋರಿಸಲಾಗಿದೆ.
ಮೂಲಮ್ - 17
ವಾಮೇನ ಸೀತಾಂ ಪದ್ಮಾಕ್ಷೀಂ ಮೂರ್ಧಜೇಷು ಕರೇಣ ಸಃ ।
ಊರ್ವೋಸ್ತು ದಕ್ಷಿಣೇನೈವ ಪರಿಜಗ್ರಾಹ ಪಾಣಿನಾ ॥
ಅನುವಾದ
ಅವನು ಎಡಕೈಯಿಂದ ಕಮಲನಯನೀ ಸೀತೆಯ ಕೂದಲು ಸಹಿತ ತಲೆಯನ್ನು ಹಿಡಿದುಕೊಂಡು, ಬಲಕೈಯಿಂದ ಆಕೆಯ ತೊಡೆಗಳನ್ನು ಹಿಡಿದೆತ್ತಿಕೊಂಡನು.॥17॥
ಮೂಲಮ್ - 18
ತಂ ದೃಷ್ಟ್ವಾ ಗಿರಿಶೃಂಗಾಭಂ ತೀಕ್ಷ್ಣ ದಂಷ್ಟ್ರಂ ಮಹಾಭುಜಮ್ ।
ಪ್ರಾದ್ವವನ್ಮುತ್ಯುಸಂಕಾಶಂ ಭಯಾರ್ತಾ ವನದೇವತಾಃ ॥
ಅನುವಾದ
ಆಗ ತೀಕ್ಷ್ಣವಾದ ಕೋರೆದಾಡೆಗಳುಳ್ಳ, ವಿಶಾಲಭುಜಗಳಿಂದ ಕೂಡಿದ ಪರ್ವತ ಶಿಖರದಂತೆ ಕಂಡು ಬರುವ ಆ ಕಾಲನಂತಹ ವಿಕರಾಳ ರಾಕ್ಷಸನನ್ನು ನೋಡಿ ಸಮಸ್ತ ವನದೇವತೆಗಳು ಭಯಗೊಂಡು ಓಡಿಹೋದರು.॥18॥
ಮೂಲಮ್ - 19
ಸ ಚ ಮಾಯಾಮಯೋ ದಿವ್ಯಃ ಖರಯುಕ್ತಃ ಖರಸ್ವನಃ ।
ಪ್ರತ್ಯದೃಶ್ಯತ ಹೇಮಾಂಗೋ ರಾವಣಸ್ಯ ಮಹಾರಥಃ ॥
ಅನುವಾದ
ಅಷ್ಟರಲ್ಲಿ ಕತ್ತೆಗಳಿಂದ ಹೂಡಿದ ಹಾಗೂ ಕತ್ತೆಯಂತೆ ಶಬ್ದ ಮಾಡುವ ರಾವಣನ ವಿಶಾಲ ಸುವರ್ಣಮಯ ಮಾಯಾ ನಿರ್ಮಿತ ದಿವ್ಯರಥವು ಅಲ್ಲಿ ಕಾಣಿಸಿಕೊಂಡಿತು.॥19॥
ಮೂಲಮ್ - 20
ತತಸ್ತಾಂ ಪರುಷೈವಾಕ್ಯೈರಭಿತರ್ಜ್ಯ ಮಹಾಸ್ವನಃ ।
ಅಂಕೇನಾದಾಯ ವೈದೇಹೀಂ ರಥಮಾರೋಪಯತ್ತದಾ ॥
ಅನುವಾದ
ರಥವು ಪ್ರಕಟವಾಗುತ್ತಲೇ ಜೋರಾಗಿ ಗರ್ಜಿಸುವ ರಾವಣನು ಕಠೋರ ವಚನಗಳಿಂದ ವೈದೇಹಿಯನ್ನು ಗದರಿಸುತ್ತಾ ಹಿಂದಿನಂತೆ ಎತ್ತಿಕೊಂಡು ರಥದಲ್ಲಿ ಕುಳ್ಳಿರಿಸಿದನು.॥20॥
ಮೂಲಮ್ - 21
ಸಾ ಗೃಹೀತಾತಿಚುಕ್ರೋಶ ರಾವಣೇನ ಯಶಸ್ವಿನೀ ।
ರಾಮೇತಿ ಸೀತಾ ದುಃಖಾರ್ತಾ ರಾಮಂ ದೂರಂ ಗತಂ ವನೇ ॥
ಅನುವಾದ
ರಾವಣನು ಹಿಡಿದುಕೊಂಡಾಗ ಯಶಸ್ವಿನೀ ಸೀತೆಯು ದುಃಖದಿಂದ ವ್ಯಾಕುಲಳಾದಳು. ಕಾಡಿನಲ್ಲಿ ದೂರ ಹೋಗಿರುವ ಶ್ರೀರಾಮನನ್ನು ‘ಹೇ ರಾಮಾ!’ ಎಂದು ಗಟ್ಟಿಯಾಗಿ ಕೂಗತೊಡಗಿದಳು.॥21॥
ಮೂಲಮ್ - 22
ತಾಮಕಾಮಾಂ ಸ ಕಾಮಾರ್ತಃ ಪನ್ನಗೇಂದ್ರವಧೂಮಿವ ।
ವಿಚೇಷ್ಟ ಮಾನಾಮಾದಾಯ ಉತ್ಪಪಾತಾಥ ರಾವಣಃ ॥
ಅನುವಾದ
ಸೀತೆಯ ಮನಸ್ಸಿನಲ್ಲಿ ರಾವಣನ ಕಾಮನೆ ಇರಲಿಲ್ಲ. ಆಕೆಯು ಅವನಿಂದ ಸರ್ವಥಾ ವಿರಕ್ತಳಾಗಿದ್ದಳು. ಅವನ ಸೆರೆಯಿಂದ ತನ್ನನ್ನು ಬಿಡಿಸಿಕೊಳ್ಳಲು ಏಟುತಿಂದ ಸರ್ಪಿಣಿಯಂತೆ ರಥದಲ್ಲಿ ಚಡಪಡಿಸುತ್ತಿದ್ದಳು. ಅದೇ ಸ್ಥಿತಿಯಲ್ಲಿ ಕಾಮಪೀಡಿತನಾದ ರಾಕ್ಷಸನು ಆಕೆಯನ್ನು ಎತ್ತಿಕೊಂಡು ಆಕಾಶಕ್ಕೆ ಹಾರಿ ಹೊರಟನು.॥22॥
ಮೂಲಮ್ - 23
ತತಃ ಸಾ ರಾಕ್ಷಸೇಂದ್ರೇಣ ಹ್ರಿಯಮಾಣಾ ವಿಹಾಯಸಾ ।
ಭೃಶಂ ಚುಕ್ರೋಶ ಮತ್ತೇವ ಭ್ರಾಂತಚಿತ್ತಾ ಯಥಾತುರಾ ॥
ಅನುವಾದ
ರಾಕ್ಷಸೇಂದ್ರನು ಸೀತೆಯನ್ನು ಕದ್ದು ಆಕಾಶಮಾರ್ಗದಿಂದ ಎತ್ತಿಕೊಂಡು ಹೋಗುತ್ತಿದ್ದಾಗ ಆಕೆಯ ಚಿತ್ತ ಭ್ರಮಿತವಾಯಿತು. ಅವಳು ಹುಚ್ಚಳಂತಾಗಿ ದುಃಖಾತುರಳಾಗಿ ಗಟ್ಟಿಯಾಗಿ ವಿಲಾಪ ಮಾಡತೊಡಗಿದಳು.॥23॥
ಮೂಲಮ್ - 24
ಹಾ ಲಕ್ಷ್ಮಣ ಮಹಾಬಾಹೋ ಗುರುಚಿತ್ತಪ್ರಸಾದಕ ।
ಹ್ರಿಯಮಾಣಾಂ ನ ಜಾನೀಷೇ ರಕ್ಷಸಾ ಕಾಮರೂಪಿಣಾ ॥
ಅನುವಾದ
ಹಾ ಮಹಾಬಾಹು ಲಕ್ಷ್ಮಣಾ! ನೀನು ಗುರುಹಿರಿಯರ ಮನಸ್ಸನ್ನು ಪ್ರಸನ್ನಗೊಳಿಸುವವನು; ಈಗ ಕಾಮರೂಪೀ ರಾಕ್ಷಸನು ನನ್ನನ್ನು ಕದ್ದುಕೊಂಡು ಹೋಗುತ್ತಿರುವನು, ಆದರೆ ನಿನಗೆ ಇದು ತಿಳಿಯದೇ.॥24॥
ಮೂಲಮ್ - 25
ಜೀವಿತಂ ಸುಖಮರ್ಥಂ ಚ ಧರ್ಮಹೇತೋಃ ಪರಿತ್ಯಜನ್ ।
ಹ್ರಿಯಮಾಣಾಮಧರ್ಮೇಣ ಮಾಂ ರಾಘವ ನ ಪಶ್ಯಸಿ ॥
ಅನುವಾದ
ಹಾ ರಘುನಂದನ! ನೀವು ಧರ್ಮಕ್ಕಾಗಿ ಪ್ರಾಣಗಳ ಮೋಹ, ಶರೀರದ ಸುಖ, ರಾಜ್ಯವೈಭವ ಎಲ್ಲವನ್ನು ಬಿಟ್ಟಿರುವಿರಿ. ಈ ರಾಕ್ಷಸನು ನನ್ನನ್ನು ಅಧರ್ಮದಿಂದ ಕದ್ದುಕೊಂಡು ಹೋಗುತ್ತಿದ್ದಾನೆ, ಆದರೆ ನಿನಗೆ ಕಾಣುತ್ತಿಲ್ಲವೆ.॥25॥
ಮೂಲಮ್ - 26
ನನು ನಾಮಾವಿನೀತಾನಾಂ ವಿನೇತಾಸಿ ಪರಂತಪ ।
ಕಥಮೇವಂ ವಿಧಂ ಪಾಪಂ ನ ತ್ವಂ ಶಾಧಿ ಹಿ ರಾವಣಮ್ ॥
ಅನುವಾದ
ಪರಂತಪ ಆರ್ಯಪುತ್ರ! ನೀವಾದರೋ ದುಮಾರ್ಗದಲ್ಲಿ ನಡೆಯುವ ದುರ್ಜನರನ್ನು ದಂಡಿಸಿ, ಸರಿದಾರಿಗೆ ತರುವವನಾಗಿರುವೆ. ಹೀಗಿರುವಾಗ ಇಂತಹ ಪಾಪೀ ರಾವಣನನ್ನು ಏಕೆ ದಂಡಿಸುವುದಿಲ್ಲ.॥26॥
ಮೂಲಮ್ - 27
ನತು ಸದ್ಯೋಽವಿನೀತಸ್ಯ ದೃಶ್ಯತೇ ಕರ್ಮಣಃ ಫಲಮ್ ।
ಕಾಲೋಽಪ್ಯಂಗೀಭವತ್ಯತ್ರ ಸಸ್ಯಾನಾಮಿವ ಪಕ್ತಯೇ ॥
ಅನುವಾದ
ದುರ್ಜನರಿಗೆ ದುಷ್ಟಕರ್ಮದ ಫಲ ಆಗಲೇ ಸಿಗುತ್ತದೆ ಎಂದು ಕಾಣುವುದಿಲ್ಲ; ಏಕೆಂದರೆ ಪೈರು ಬೆಳೆಯಲು ಅನುಕೂಲ ಸಮಯದ ಅಪೇಕ್ಷೆ ಇರುವಂತೆ ಇದರ ಕಾರಣ ಕಾಲವೂ ಸಹಕಾರಿಯಾಗುತ್ತದೆ.॥27॥
ಮೂಲಮ್ - 28
ತ್ವಂ ಕರ್ಮ ಕೃತವಾನೇತತ್ ಕಾಲೋಪಹತಚೇತನಃ ।
ಜೀವಿತಾಂತಕರಂ ಘೋರಂ ರಾಮಾದ್ವ್ಯಸನಮಾಪ್ನುಹಿ ॥
ಅನುವಾದ
ರಾವಣ! ನಿನ್ನ ತಲೆಯಮೇಲೆ ಕಾಲನು ಕುಣಿಯುತ್ತಿದ್ದಾನೆ. ಅದೇ ನಿನ್ನ ವಿಚಾರಶಕ್ತಿ ನಾಶಮಾಡಿಬಿಟ್ಟಿದೆ. ಅದಕ್ಕಾಗಿ ನೀನು ಇಂತಹ ಪಾಪಕರ್ಮವನ್ನು ಮಾಡಿದೆ. ನಿನಗೆ ಶ್ರೀರಾಮನಿಂದ ಪ್ರಾಣಾಂತಕವಾದ ಭಯಂಕರ ಸಂಕಟಪ್ರಾಪ್ತವಾಗಲಿ.॥28॥
ಮೂಲಮ್ - 29
ಹಂತೇದಾನೀಂ ಸಕಾಮಾತು ಕೈಕೇಯೀ ಭಾಂಧವೈಃ ಸಹ ।
ಹ್ರಿಯೇಯಂ ಧರ್ಮಕಾಮಸ್ಯ ಧರ್ಮಪತ್ನೀ ಯಶಸ್ವಿನಃ ॥
ಅನುವಾದ
ಅಯ್ಯೋ! ಈಗ ಕೈಕೇಯಿಯು ತನ್ನ ಬಂಧು ಬಾಂಧವರೊಂದಿಗೆ ಸಫಲ ಮನೋರಥವಾದಳು, ಏಕೆಂದರೆ ಧರ್ಮದ ಅಭಿಲಾಶೆಯುಳ್ಳ ಯಶಸ್ವೀ ಶ್ರೀರಾಮನ ಧರ್ಮ ಪತ್ನಿಯಾಗಿದ್ದರೂ ನನ್ನನ್ನು ರಾಕ್ಷಸನೊಬ್ಬನು ಕದ್ದುಕೊಂಡು ಹೋಗುತ್ತಿದ್ದಾನೆ.॥29॥
ಮೂಲಮ್ - 30
ಆಮಂತ್ರಯೇಜನಸ್ಥಾನೇ ಕರ್ಣಿಕಾರಾಂಶ್ಚಪುಷ್ಪಿತಾನ್ ।
ಕ್ಷಿಪ್ರಂ ರಾಮಾಯ ಶಂಸಧ್ವಂ ಸೀತಾಂ ಹರತಿ ರಾವಣಃ ॥
ಅನುವಾದ
ಜನಸ್ಥಾನದಲ್ಲಿ ಅರಳಿದ ಕಣಗಿಲೆ ವೃಕ್ಷಗಳಲ್ಲಿ ನಾನು ಪ್ರಾರ್ಥಿಸುತ್ತಿದ್ದೇನೆ. ನೀವು ಬೇಗನೆ ಸೀತೆಯನ್ನು ರಾವಣನು ಕದ್ದುಕೊಂಡು ಹೋದನು ಎಂದು ಶ್ರೀರಾಮನಲ್ಲಿ ಹೇಳಿರಿ.॥30॥
ಮೂಲಮ್ - 31
ಹಂಸಸಾರಸಸಂಘುಷ್ಟಾಂ ವಂದೇ ಗೋದಾವರೀ ನದೀಮ್ ।
ಕ್ಷಿಪ್ರಂ ರಾಮಾಯ ಶಂಸ ತ್ವಂ ಸೀತಾಂ ಹರತಿರಾವಣಃ ॥
ಅನುವಾದ
ಹಂಸ ಮತ್ತು ಸಾರಸಗಳ ಕಲರವದಿಂದ ಕೂಡಿದ ಗೋದಾವರಿನದಿಯನ್ನು ನಾನು ವಂದಿಸುತ್ತೇನೆ. ಅಮ್ಮಾ ಸೀತೆಯನ್ನು ರಾವಣ ಕದ್ದುಕೊಂಡು ಹೋದನು ಎಂದು ನೀನು ಶೀಘ್ರವಾಗಿ ಶ್ರೀರಾಮನಿಗೆ ತಿಳಿಸು.॥31॥
ಮೂಲಮ್ - 32
ದೈವತಾನಿ ಚ ಯಾನ್ಯಸ್ಮಿನ್ ವನೇ ವಿವಿಧಪಾದಪೇ ।
ನಮಸ್ಕರೋಮ್ಯಹಂ ತೇಭ್ಯೋ ಭರ್ತುಃ ಶಂಸತ ಮಾಂ ಹೃತಾಮ್ ॥
ಅನುವಾದ
ಈ ವನದಲ್ಲಿರುವ ಬೇರೆ ಬೇರೆ ವೃಕ್ಷಗಳಲ್ಲಿರುವ ದೇವತೆಗಳೆಲ್ಲರಿಗೆ ನಾನು ನಮಸ್ಕರಿಸುತ್ತೇನೆ. ನೀವೆಲ್ಲರೂ ಬೇಗನೇ ಶ್ರೀರಾಮನಲ್ಲಿ-ನಿನ್ನ ಪತ್ನಿಯನ್ನು ರಾಕ್ಷಸನು ಕದ್ದುಕೊಂಡು ಹೋದನು ಎಂದು ಸೂಚಿಸಿರಿ.॥32॥
ಮೂಲಮ್ - 33
ಯಾನಿ ಕಾನಿಚಿದಪ್ಯತ್ರ ಸತ್ತ್ವಾನಿ ವಿವಿಧಾನಿ ಚ ।
ಸರ್ವಾಣಿ ಶರಣಂ ಯಾಮಿ ಮೃಗಪಕ್ಷಿಗಣಾನಿ ವೈ ॥
ಮೂಲಮ್ - 34
ಹ್ರಿಯಮಾಣಾಂ ಪ್ರಿಯಾಂ ಭರ್ತುಃ ಪ್ರಾಣೇಭ್ಯೋಽಪಿ ಗರೀಯಸೀಮ್ ।
ವಿವಶಾ ತೇಹೃತಾ ಸೀತಾ ರಾವಣೇನೇತಿ ಶಂಸತ ॥
ಅನುವಾದ
ಇಲ್ಲಿ ಇರುವ ನಾನಾ ಪ್ರಕಾರದ ಪಶು-ಪಕ್ಷಿಗಳೆಲ್ಲರಿಗೆ ನಾನು ಶರಣಾಗಿದ್ದೇನೆ. ನನ್ನ ಸ್ವಾಮಿ ಶ್ರೀರಾಮ ಚಂದ್ರನಲ್ಲಿ ‘ನಿನ್ನ ಪ್ರಾಣಪ್ರಿಯಳಾಗಿದ್ದ ಸೀತೆಯನ್ನು ಅಸಹಾಯ ಸ್ಥಿತಿಯಲ್ಲಿ ರಾವಣನು ಕದ್ದುಕೊಂಡು ಹೋದನು’ ಎಂದು ಹೇಳಿರಿ.॥33-34॥
ಮೂಲಮ್ - 35
ವಿದಿತ್ವಾ ತು ಮಹಾಬಾಹುರಮುತ್ರಾಪಿ ಮಹಾಬಲಃ ।
ಆನೇಷ್ಯತಿ ಪರಾಕ್ರಮ್ಯ ವೈವಸ್ವತಹೃತಾಮಪಿ ॥
ಅನುವಾದ
ಮಹಾಬಾಹು ಶ್ರೀರಾಮನು ಬಹಳ ಬಲಾಢ್ಯನಾಗಿದ್ದಾನೆ. ನಾನು ಪರಲೋಕಕ್ಕೆ ಹೋಗಿರುವೆ ಎಂದು ತಿಳಿದರೆ ಯಮನಿಂದ ಅಪಹತಳಾದೆನೆಂದು ತಿಳಿದರೆ ನನ್ನನ್ನು ಪರಾಕ್ರಮದಿಂದ ಅಲ್ಲಿಂದ ಮರಳಿ ಕರೆತರುವನು.॥35॥
ಮೂಲಮ್ - 36
ಸಾ ತದಾ ಕರುಣಾ ವಾಚೋ ವಿಲಪಂತೀ ಸುದುಃಖಿತಾ ।
ವನಸ್ಪತಿಗತಂ ಗೃಧ್ರಂ ದದರ್ಶಾಯತಲೋಚನಾ ॥
ಅನುವಾದ
ಆಗ ಅತ್ಯಂತ ದುಃಖಿತೆಯಾಗಿ ಕರುಣಾಜನಕ ಮಾತನ್ನು ಹೇಳುತ್ತಾ ವಿಲಾಪಿಸುತ್ತಿರುವ ಸೀತೆಯು ಒಂದು ಮರದಲ್ಲಿ ಕುಳಿತಿರುವ ಗೃಧ್ರರಾಜ ಜಟಾಯುವನ್ನು ನೋಡಿದಳು.॥36॥
ಮೂಲಮ್ - 37
ಸಾ ತಮುದ್ವೀಕ್ಷ್ಯ ಸುಶ್ರೋಣೀ ರಾವಣಸ್ಯ ವಶಂಗತಾ ।
ಸಮಾಕ್ರಂದದ್ ಭಯಪರಾ ದುಃಖೋಪಹತಯಾ ಗಿರಾ ॥
ಅನುವಾದ
ರಾವಣನ ವಶವಾಗಿದ್ದ ಸುಂದರಿ ಸೀತೆಯು ಅತ್ಯಂತ ಭಯಭೀತಳಾಗಿದ್ದಳು. ಜಟಾಯುವನ್ನು ನೋಡಿ ಅವಳು ದುಃಖದಿಂದ ಕರುಣಾಕ್ರಂದನ ಮಾಡುತ್ತಾ ಹೇಳಿದಳು.॥37॥
ಮೂಲಮ್ - 38
ಜಟಾಯೋ ಪಶ್ಯ ಮಾಮಾರ್ಯ ಹ್ರಿಯಮಾಣಾಮನಾಥವತ್ ।
ಅನೇನ ರಾಕ್ಷಸೇಂದ್ರೇಣಾಕರುಣಂ ಪಾಪಕರ್ಮಣಾ ॥
ಅನುವಾದ
ಆರ್ಯ ಜಟಾಯುವೇ! ನೋಡು, ಈ ಪಾಪಾಚಾರೀ ರಾಕ್ಷಸೇಂದ್ರನು ಅನಾಥಳಂತೆ ನನ್ನನ್ನು ನಿರ್ದಯವಾಗಿ ಕದ್ದುಕೊಂಡು ಹೋಗುತ್ತಿದ್ದಾನೆ.॥38॥
ಮೂಲಮ್ - 39
ನೈಷ ವಾರಯಿತುಂ ಶಕ್ಯಸ್ತ್ವಯಾ ಕ್ರೂರೋ ನಿಶಾಚರಃ ।
ಸತ್ತ್ವವಾನ್ ಜಿತಕಾಶೀ ಚ ಸಾಯುಧಶ್ಚೈವ ದುರ್ಮತಿಃ ॥
ಅನುವಾದ
ಆದರೆ ನೀನು ಈ ಕ್ರೂರೀ ನಿಶಾಚರನನ್ನು ತಡೆಯುತ್ತಿಲ್ಲ; ಏಕೆಂದರೆ ಇವನು ಬಲಿಷ್ಠನಾಗಿದ್ದಾನೆ. ಅನೇಕ ಯುದ್ಧಗಳಲ್ಲಿ ವಿಜಯ ಪಡೆದಿದ್ದರಿಂದ ಇವನ ದುಸ್ಸಾಹಸ ಹೆಚ್ಚಾಗಿದೆ. ಇವನ ಕೈಯಲ್ಲಿ ಆಯುಧವಿದೆ ಮತ್ತು ಇವನ ಮನಸ್ಸಿನಲ್ಲಿ ದುಷ್ಟತೆ ತುಂಬಿದೆ.॥39॥
ಮೂಲಮ್ - 40
ರಾಮಾಯ ತು ಯಥಾತತ್ತ್ವಂ ಜಟಾಯೋ ಹರಣಂ ಮಮ ।
ಲಕ್ಷ್ಮಣಾಯ ಚ ತತ್ಸರ್ವಮಾಖ್ಯಾತವ್ಯಮಶೇಷತಃ ॥
ಅನುವಾದ
ಆರ್ಯ ಜಟಾಯುವೇ! ನನ್ನ ಅಪಹರಣವಾದ ಎಲ್ಲ ಸಮಾಚಾರವನ್ನು ನೀನು ಶ್ರೀರಾಮ-ಲಕ್ಷ್ಮರಲ್ಲಿ ಹಾಗೆಯೇ ಪೂರ್ಣವಾಗಿ ತಿಳಿಸು.॥40॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥49॥