वाचनम्
ಭಾಗಸೂಚನಾ
ಸೀತಾದೇವಿಯು ರಾವಣನಿಗೆ ತನ್ನ ಪರಿಚಯವನ್ನು ಮಾಡಿಕೊಟ್ಟು ಅರಣ್ಯಕ್ಕೆ ಬಂದ ಕಾರಣವನ್ನು ತಿಳಿಸಿದುದು, ರಾವಣನು ಸೀತೆಯನ್ನು ತನ್ನ ಪಟ್ಟದರಸಿಯನ್ನಾಗಿ ಮಾಡಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದುದು, ಸೀತಾದೇವಿಯ ತಿರಸ್ಕಾರ
ಮೂಲಮ್ - 1
ರಾವಣೇನ ತು ವೈದೇಹೀ ತದಾ ಪೃಷ್ಟಾ ಜಿಹೀರ್ಷುಣಾ ।
ಪರಿವ್ರಾಜಕರೂಪೇಣ ಶಶಂಸಾತ್ಮಾನಮಾತ್ಮನಾ ॥
ಅನುವಾದ
ಸೀತೆಯನ್ನು ಅಪಹರಿಸುವ ಇಚ್ಛೆಯಿಂದ ಪರಿವ್ರಾಜಕ ಸನ್ಯಾಸಿಯ ರೂಪವನ್ನು ಧರಿಸಿ ಬಂದಿರುವ ರಾವಣನು ಆಗ ವಿದೇಹನಂದಿನಿಯಲ್ಲಿ ಈ ರೀತಿ ಕೇಳಿದಾಗ, ಅವಳು ಸ್ವತಃ ತನ್ನ ಪರಿಚಯವನ್ನು ಹೇಳಿದಳು.॥1॥
ಮೂಲಮ್ - 2
ಬ್ರಾಹ್ಮಣಶ್ಚಾತಿಥಿಶ್ಚೈಷ ಅನುಕ್ತೋ ಹಿಶಪೇತ ಮಾಮ್ ।
ಇತಿ ಧ್ಯಾತ್ವಾ ಮುಹೂರ್ತಂ ತು ಸೀತಾ ವಚನಮಬ್ರವೀತ್ ॥
ಅನುವಾದ
ಇವರು ಬ್ರಾಹ್ಮಣ ಮತ್ತು ಅತಿಥಿಯಾಗಿದ್ದಾರೆ, ಇವರ ಮಾತಿಗೆ ಉತ್ತರಿಸದಿದ್ದರೆ ಇವರು ಶಾಪ ಕೊಡುವರು ಎಂದು ಮುಹೂರ್ತ ಕಾಲ ಯೋಚಿಸಿ ಈ ಪ್ರಕಾರ ಹೇಳತೊಡಗಿದಳು.॥2॥
ಮೂಲಮ್ - 3
ದುಹಿತಾ ಜನಕಸ್ಯಾಹಂ ಮೈಥಿಲಸ್ಯ ಮಹಾತ್ಮನಃ ।
ಸೀತಾ ನಾಮ್ನಾಸ್ಮಿ ಭದ್ರಂ ತೇ ರಾಮಸ್ಯ ಮಹಿಷೀ ಪ್ರಿಯಾ ॥
ಅನುವಾದ
ಬ್ರಾಹ್ಮಣರೇ! ನಿಮಗೆ ಒಳ್ಳೆಯದಾಗಲಿ, ನಾನು ಮಿಥಿಲೆಯ ರಾಜಾ ಮಹಾತ್ಮಾ ಜನಕನ ಮಗಳು ಮತ್ತು ಅವಧ ನರೇಶ ಶ್ರೀರಾಮಚಂದ್ರನ ಪ್ರಿಯರಾಣಿಯಾಗಿದ್ದೇನೆ. ನನ್ನ ಹೆಸರು ಸೀತೆ ಎಂದಾಗಿದೆ.॥3॥
ಮೂಲಮ್ - 4
ಉಷಿತ್ವಾ ದ್ವಾದಶ ಸಮಾ ಇಕ್ಷ್ವಾಕೂಣಾಂ ನಿವೇಶನೇ ।
ಭುಂಜಾನಾ ಮಾನುಷಾನ್ಭೋಗಾನ್ ಸರ್ವಕಾಮಸಮೃದ್ಧಿನೀ ॥
ಅನುವಾದ
ವಿವಾಹದ ಬಳಿಕ ಹನ್ನೆರಡು ವರ್ಷ ಇಕ್ವಾಕ್ಷುವಂಶೀ ದಶರಥ ಮಹಾರಾಜನ ಅರಮನೆಯಲ್ಲಿ ಇದ್ದು, ನಾನು ನನ್ನ ಪತಿಯೊಂದಿಗೆ ಎಲ್ಲ ಮನೋವಾಂಛಿತ ಭೋಗಗಳನ್ನು ಅನುಭವಿಸಿದೆ. ನಾನು ಅಲ್ಲಿ ಸುಖವಾಗಿ ಇದ್ದೆ.॥4॥
ಮೂಲಮ್ - 5
ತತ್ರತ್ರಯೋದಶೇ ವರ್ಷೇ ರಾಜಾಮಂತ್ರಯತ ಪ್ರಭುಃ ।
ಅಭಿಷೇಚಯಿತುಂ ರಾಮಂ ಸಮೇತೋ ರಾಜಮಂತ್ರಿಭಿಃ ॥
ಅನುವಾದ
ಹದಿಮೂರನೆಯ ವರ್ಷದ ಪ್ರಾರಂಭದಲ್ಲಿ ಸಮರ್ಥ ದಶರಥ ಮಹಾರಾಜರು ಮಂತ್ರಿಗಳೊಂದಿಗೆ ಚರ್ಚಿಸಿ ಶ್ರೀರಾಮಚಂದ್ರನಿಗೆ ಯುವರಾಜನಾಗಿ ಪಟ್ಟಾಭಿಷೇಕ ಮಾಡಲು ನಿಶ್ಚಯಿಸಿದರು.॥5॥
ಮೂಲಮ್ - 6
ತಸ್ಮಿನ್ಸಂಭ್ರಿಯಮಾಣೇ ತು ರಾಘವಸ್ಯಾಭಿಷೇಚನೇ ।
ಕೈಕೇಯೀ ನಾಮ ಭರ್ತಾರಂಮಮಾರ್ಯಾ ಯಾಚತೇ ವರಮ್ ॥
ಅನುವಾದ
ಶ್ರೀರಘುನಾಥನ ಪಟ್ಟಾಭಿಷೇಕದ ಸಾಮಗ್ರಿಯನ್ನು ಸಿದ್ಧಗೊಳಿಸಿದಾಗ ನನ್ನ ಅತ್ತೆ ಕೈಕೇಯಿಯು ತನ್ನ ಪತಿಯ ಬಳಿ ವರಗಳನ್ನು ಬೇಡಿದಳು.॥6॥
ಮೂಲಮ್ - 7½
ಪ್ರತಿಗೃಹ್ಯ ತು ಕೈಕೇಯೀ ಶ್ವಶುರಂ ಸುಕೃತೇನ ಮೇ ।
ಮಮ ಪ್ರವ್ರಾಜನಂ ಭರ್ತುರ್ಭರತಸ್ಯಾಭಿಷೇಚನಮ್ ॥
ದ್ವಾವಯಾಚತ ಭರ್ತಾರಂ ಸತ್ಯಸಂಧಂ ನೃಪೋತ್ತಮಮ್ ।
ಅನುವಾದ
ಕೈಕೇಯಿಯು ನನ್ನ ಮಾವನವರಿಂದ ಸತ್ಯದ ಮೇಲೆ ಆಣೆಮಾಡಿಸಿ, ವಚನಬದ್ಧಳಾಗಿಸಿದಳು. ಮತ್ತೆ ತನ್ನ ಸತ್ಯಪ್ರತಿಜ್ಞ ಪತಿಯಾದ ರಾಜಶಿರೋಮಣಿಯಲ್ಲಿ ನನ್ನ ಪತಿಗಾಗಿ ವನವಾಸ ಮತ್ತು ಭರತನಿಗೆ ಪಟ್ಟಾಭಿಷೇಕ ಎಂಬ ಎರಡು ವರಗಳನ್ನು ಬೇಡಿದಳು.॥7॥
ಮೂಲಮ್ - 8
ನಾದ್ಯ ಭೋಕ್ಷ್ಯೇ ನ ಚ ಸ್ವಪ್ಸ್ಯೇ ನ ಪಾಸ್ಯೇ ಚ ಕಥಂಚನ ॥
ಏಷ ಮೇ ಜೀವಿತಸ್ಯಾಂತೋ ರಾಮೋ ಯದ್ಯಭಿಷಿಚ್ಯತೇ ।
ಅನುವಾದ
ಇಂದು ಶ್ರೀರಾಮನಿಗೆ ಅಭಿಷೇಕ ಮಾಡಿದರೆ, ನಾನು ಏನನ್ನು ತಿನ್ನುವುದಿಲ್ಲ, ಕುಡಿಯುವುದಿಲ್ಲ ಹಾಗೂ ಎಂದೂ ನಿದ್ದೆ ಮಾಡದೆ ನನ್ನ ಜೀವನವನ್ನು ಕೊನೆಗೊಳಿಸುವೆನೆಂದು ಕೈಕೇಯಿಯು ಹಟ ಹಿಡಿದಳು.॥8॥
ಮೂಲಮ್ - 9½
ಇತಿ ಬ್ರುವಾಣಾಂ ಕೈಕೇಯೀಂ ಶ್ವಶುರೋ ಮೇ ಸ ಪಾರ್ಥಿವಃ ॥
ಅಯಾಚತಾರ್ಥೈರನ್ವರ್ಥೈರ್ನ ಚ ಯಾಂಚಾಂ ಚಕಾರ ಸಾ ।
ಅನುವಾದ
ಹೀಗೆ ನುಡಿಯುವ ಕೈಕೇಯಿಯ ಬಳಿ ನನ್ನ ಮಾವಂದಿರು - ‘ನೀನು ಎಲ್ಲ ಪ್ರಕಾರದ ಉತ್ತಮ ವಸ್ತುಗಳನ್ನು ತೆಗೆದುಕೋ, ಆದರೆ ಶ್ರೀರಾಮನ ಪಟ್ಟಾಭಿಷೇಕದಲ್ಲಿ ವಿಘ್ನವನ್ನುಂಟುಮಾಡಬೇಡ’ ಎಂದು ಬೇಡಿಕೊಂಡರು. ಆದರೆ ಈ ಬೇಡಿಕೆ ಕೈಕೇಯಿಯಲ್ಲಿ ಸಫಲವಾಗಲಿಲ್ಲ.॥9½॥
ಮೂಲಮ್ - 10½
ಮಮ ಭರ್ತಾ ಮಹಾತೇಜಾ ವಯಸಾ ಪಂಚವಿಂಶಕಃ॥
ಅಷ್ಟಾದಶ ಹಿ ವರ್ಷಾಣಿ ಮಮ ಜನ್ಮನಿ ಗಣ್ಯತೇ ।
ಅನುವಾದ
ಆಗ ನನ್ನ ಮಹಾತೇಜಸ್ವೀ ಪತಿಯ ವಯಸ್ಸು ಇಪ್ಪತ್ತೈದು ವರ್ಷಗಳಿಗಿಂತ ಹೆಚ್ಚಾಗಿತ್ತು. ಹುಟ್ಟಿದಂದಿನಿಂದ ಲೆಕ್ಕಹಾಗಿದರೆ ನನ್ನ ವಯಸ್ಸು ಹದಿನೆಂಟು ವರ್ಷ ಆಗಿತ್ತು.॥10½॥
ಮೂಲಮ್ - 11½
ರಾಮೇತಿ ಪ್ರಥಿತೋ ಲೋಕೇ ಸತ್ಯವಾನ್ ಶೀಲವಾನ್ ಶುಚಿಃ ॥
ವಿಶಾಲಾಕ್ಷೋ ಮಹಾಬಾಹುಃ ಸರ್ವಭೂತಹಿತೇ ರತಃ ।
ಅನುವಾದ
ಶ್ರೀರಾಮನು ಜಗತ್ತಿನಲ್ಲಿ ಸತ್ಯವಾದೀ, ಸುಶೀಲ ಮತ್ತು ಪವಿತ್ರನೆಂದು ವಿಖ್ಯಾತನಾಗಿರುವನು. ಅವರ ನೇತ್ರಗಳು ವಿಶಾಲವಾಗಿದ್ದು, ಭುಜಗಳು ನೀಳವಾಗಿವೆ. ಅವರು ಸಮಸ್ತ ಪ್ರಾಣಿಗಳ ಹಿತದಲ್ಲೇ ತತ್ಪರರಾಗಿರುತ್ತಾರೆ.॥11½॥
ಮೂಲಮ್ - 12½
ಕಾಮಾರ್ತಶ್ಚ ಮಹಾರಾಜಃ ಪಿತಾ ದಶರಥಃ ಸ್ವಯಮ್ ॥
ಕೈಕೇಯ್ಯಾಃ ಪ್ರಿಯಕಾಮಾರ್ಥಂ ತಂ ರಾಮಂ ನಾಭ್ಯಷೇಚಯತ್ ।
ಅನುವಾದ
ಅವರ ತಂದೆ ಮಹಾರಾಜರು ಕಾಮಪೀಡಿತರಾದ್ದರಿಂದ ಕೈಕೇಯಿಯ ಪ್ರಿಯವನ್ನುಮಾಡುವ ಇಚ್ಛೆಯಿಂದ ಶ್ರೀರಾಮನ ಪಟ್ಟಾಭಿಷೇಕ ಮಾಡಲಿಲ್ಲ.॥12½॥
ಮೂಲಮ್ - 13½
ಅಭಿಷೇಕಾಯ ತು ಪಿತುಃ ಸಮೀಪಂ ರಾಮಮಾಗತಮ್ ॥
ಕೈಕೇಯೀ ಮಮ ಭರ್ತಾರಮಿತ್ಯುವಾಚ ದ್ರುತಂ ವಚಃ ।
ಅನುವಾದ
ಶ್ರೀರಾಮಚಂದ್ರನು ಅಭಿಷೇಕಕ್ಕಾಗಿ ತಂದೆಯ ಬಳಿಗೆ ಬಂದಾಗ ಕೈಕೇಯಿಯು ನನ್ನ ಪತಿಯಾದ ರಾಮನಲ್ಲಿ ಕೂಡಲೇ ಹೀಗೆ ಹೇಳಿದಳು.॥13½॥
ಮೂಲಮ್ - 14
ತವ ಪಿತ್ರಾ ಸಮಾಜ್ಞಪ್ತಂ ಮಮೇದಂಶೃಣು ರಾಘವ ॥
ಮೂಲಮ್ - 15½
ಭರತಾಯ ಪ್ರದಾತವ್ಯಮಿದಂ ರಾಜ್ಯಮಕಂಟಕಮ್ ।
ತ್ವಯಾ ತು ಖಲು ವಸ್ತವ್ಯಂ ನವ ವರ್ಷಾಣಿ ಪಂಚ ಚ ॥
ವನೇ ಪ್ರವ್ರಜ ಕಾಕುತ್ಸ್ಥ ಪಿತರಂ ಮೋಚಯಾನೃತಾತ್ ।
ಅನುವಾದ
ರಘುನಂದನ! ನಿನ್ನ ತಂದೆಯವರು ಕೊಟ್ಟ ಆಜ್ಞೆಯನ್ನು ನನ್ನ ಬಾಯಿಂದ ಕೇಳು. ಈ ನಿಷ್ಕಂಟಕ ರಾಜ್ಯವನ್ನು ಭರತನಿಗೆ ಕೊಡಲಾಗುವುದು, ನೀನಾದರೋ ಹದಿನಾಲ್ಕು ವರ್ಷ ವನದಲ್ಲೇ ವಾಸಿಸಬೇಕಾಗುವುದು. ಕಾಕುತ್ಸ್ಥ! ನೀನು ಕಾಡಿಗೆ ಹೋಗಿ ತಂದೆಯನ್ನು ಅಸತ್ಯ ಬಂಧನದಿಂದ ಬಿಡಿಸು.॥14-15½॥
ಮೂಲಮ್ - 16½
ತಥೇತ್ಯುವಾಚ ತಾಂ ರಾಮಃ ಕೈಕೇಯೀಮಕುತೋಭಯಃ ॥
ಚಕಾರ ತದ್ವಚಃ ಶ್ರುತ್ವಾ ಭರ್ತಾ ಮಮ ದೃಢವ್ರತಃ ।
ಅನುವಾದ
ಯಾವುದಕ್ಕೂ ಭಯಪಡದ ಶ್ರೀರಾಮನು ಕೈಕೇಯಿಯ ಆ ಮಾತನ್ನು ಕೇಳಿ ‘ಹಾಗೆಯೇ ಆಗಲಿ’ ಎಂದು ಹೇಳಿ ಸ್ವೀಕರಿಸಿದರು. ನನ್ನ ಸ್ವಾಮಿ ದೃಢತೆಯಿಂದ ತನ್ನ ಪ್ರತಿಜ್ಞೆಯನ್ನು ಪಾಲಿಸುವವರಾಗಿದ್ದಾರೆ.॥16½॥
ಮೂಲಮ್ - 17½
ದದ್ಯಾನ್ನ ಪ್ರತಿಗೃಹ್ಣೀಯಾತ್ ಸತ್ಯಂ ಬ್ರೂಯಾನ್ನ ಚಾನೃತಮ್ ॥
ಏತದ್ಬ್ರಾಹ್ಮಣ ರಾಮಸ್ಯ ವ್ರತಂ ಧೃತಮನುತ್ತಮಮ್ ।
ಅನುವಾದ
ಶ್ರೀರಾಮನು ಕೇವಲ ಕೊಡುವುದಲ್ಲದೆ ಯಾರಿಂದ ಏನನ್ನೂ ಪಡೆಯುವುದಿಲ್ಲ. ಅವರು ಸದಾ ಸತ್ಯವನ್ನೇ ನುಡಿಯುವರು, ಸುಳ್ಳಾಡುವುದಿಲ್ಲ. ಬ್ರಾಹ್ಮಣನೇ! ಇದು ಶ್ರೀರಾಮಚಂದ್ರನ ಸರ್ವೋತ್ತಮ ವ್ರತವಾಗಿದೆ. ಅದನ್ನು ಧರಿಸಿಕೊಂಡಿರುವರು.॥17½॥
ಮೂಲಮ್ - 18
ತಸ್ಯ ಭ್ರಾತಾ ತು ವೈಮಾತ್ರೋ ಲಕ್ಷ್ಮಣೋ ನಾಮ ವೀರ್ಯವಾನ್ ॥
ಮೂಲಮ್ - 19
ರಾಮಸ್ಯ ಪುರುಷವ್ಯಾಘ್ರಃ ಸಹಾಯಃ ಸಮರೇರಿಹಾ ।
ಸ ಭ್ರಾತಾ ಲಕ್ಷ್ಮಣೋ ನಾಮ ಬ್ರಹ್ಮಚಾರೀ ದೃಢವ್ರತಃ॥
ಅನುವಾದ
ಶ್ರೀರಾಮನ ಮಲತಾಯಿಯ ಮಗ ತಮ್ಮನಾದ ಲಕ್ಷ್ಮಣನು ಬಹಳ ಪರಾಕ್ರಮಿಯಾಗಿದ್ದಾನೆ. ಯುದ್ಧರಂಗದಲ್ಲಿ ಶತ್ರುಗಳನ್ನು ಸಂಹರಿಸುವ ಪುರುಷಸಿಂಹ ಲಕ್ಷ್ಮಣನು ಶ್ರೀರಾಮನಿಗೆ ಸಹಾಯಕನಾಗಿದ್ದಾನೆ. ಅವನು ಬ್ರಹ್ಮಚರ್ಯ ಮತ್ತು ಉತ್ತಮ ವ್ರತವನ್ನು ದೃಢವಾಗಿ ಪಾಲಿಸುವವನಾಗಿದ್ದಾನೆ.॥18-19॥
ಮೂಲಮ್ - 20½
ಅನ್ವಗಚ್ಛದ್ ಧನುಷ್ಪಾಣಿಃ ಪ್ರವ್ರಜಂತಂ ಮಯಾ ಸಹ ।
ಜಟೀ ತಾಪಸರೂಪೇಣ ಮಯಾ ಸಹ ಸಹಾನುಜಃ ॥
ಪ್ರವಿಷ್ಟೋ ದಂಡಕಾರಣ್ಯಂ ಧರ್ಮನಿತ್ಯೋ ದೃಢವ್ರತಃ ।
ಅನುವಾದ
ಶ್ರೀರಘುನಾಥನು ನನ್ನೊಂದಿಗೆ ಕಾಡಿಗೆ ಹೊರಡುವಾಗ ಲಕ್ಷ್ಮಣನೂ ಧನುರ್ಬಾಣಗಳನ್ನು ಧರಿಸಿ ಅವರ ಹಿಂದೆಯೇ ನಡೆದನು. ಹೀಗೆ ನಾನು ಮತ್ತು ಅನುಜನೊಂದಿಗೆ ಶ್ರೀರಾಮನು ಈ ದಂಡಕಾರಣ್ಯಕ್ಕೆ ಬಂದಿರುವೆವು. ಅವರು ದೃಢಪ್ರತಿಜ್ಞೆ ಹಾಗೂ ನಿತ್ಯ ನಿರಂತರ ಧರ್ಮದಲ್ಲೇ ತತ್ಪರರಾಗಿರುವರು. ತಲೆಯಲ್ಲಿ ಜಟೆಧರಿಸಿ ತಪಸ್ವೀವೇಷದಲ್ಲಿ ಇಲ್ಲಿ ಇರುತ್ತಾರೆ.॥20½॥
ಮೂಲಮ್ - 21
ತೇ ವಯಂ ಪ್ರಚ್ಯುತಾ ರಾಜ್ಯಾತ್ ಕೈಕೇಯ್ಯಾಸ್ತು ಕೃತೇ ತ್ರಯಃ ॥
ಮೂಲಮ್ - 22½
ವಿಚರಾಮ ದ್ವಿಜಶ್ರೇಷ್ಠ ವನಂ ಗಂಭೀರಮೋಜಸಾ ।
ಸಮಾಶ್ವಸ ಮುಹೂರ್ತಂ ತು ಶಕ್ಯಂ ವಸ್ತುಮಿಹ ತ್ವಯಾ ॥
ಆಗಮಿಷ್ಯತಿ ಮೇ ಭರ್ತಾ ವನ್ಯಮಾದಾಯ ಪುಷ್ಕಲಮ್ ।
ಅನುವಾದ
ದ್ವಿಜಶ್ರೇಷ್ಠನೇ! ಹೀಗೆ ನಾವು ಮೂವರು ಕೈಕೆಯಿಂದಾಗಿ ರಾಜ್ಯದಿಂದ ವಂಚಿತರಾಗಿ ಈ ಗಂಭೀರ ವನದಲ್ಲಿ ನಮ್ಮ ಬಲದ ಭರವಸೆಯಿಂದ ಸಂಚರಿಸುತ್ತಿದ್ದೇವೆ. ತಾವು ಇಲ್ಲಿ ಎರಡುಗಳಿಗೆ ವಿಶ್ರಾಂತಿ ಮಾಡಿರಿ. ಈಗಲೇ ನನ್ನ ಸ್ವಾಮಿಯು ಸಾಕಷ್ಟು ಕಾಡಿನ ಫಲ-ಮೂಲಗಳನ್ನು ತೆಗೆದುಕೊಂಡು ಬರುವರ.॥21-22½॥
ಮೂಲಮ್ - 23
ರುರೂನ್ಗೋಧಾನ್ ವರಾಹಾಂಶ್ಚ ಹತ್ವಾಽಽದಾಯಾಮಿಷಂ ಬಹು ॥
ಮೂಲಮ್ - 24
ಸ ತ್ವಂ ನಾಮ ಚ ಗೋತ್ರಂ ಚ ಕುಲಮಾಚಕ್ಷ್ವ ತತ್ತ್ವತಃ ।
ಏಕಶ್ಚ ದಂಡಕಾರಣ್ಯೇ ಕಿಮರ್ಥಂ ಚರಸಿ ದ್ವಿಜ ॥
ಅನುವಾದ
ಕ್ರೂರ ಮೃಗಗಳನ್ನು, ಆಡುಗಳನ್ನು, ಕಾಡುಹಂದಿಗಳನ್ನು ಕೊಂದು, ತಪಸ್ವೀ ಜನರಿಗೆ ಉಪಯುಕ್ತವಾದ ಅನೇಕ ಫಲ ಮೂಲಗಳನ್ನು ಎತ್ತಿಕೊಂಡು ಈಗಲೇ ಬರುವರು. ಆಗ ನಿಮ್ಮ ವಿಶೇಷ ಸತ್ಕಾರವಾಗುವುದು. ಬ್ರಾಹ್ಮಣನೇ! ಈಗ ನೀವೂ ನಿಮ್ಮ ನಾಮ-ಗೋತ್ರ ಮತ್ತು ಕುಲದ ಪರಿಚಯ ಸರಿಯಾಗಿ ತಿಳಿಸಿರಿ. ನೀವು ಏಕಾಂಗಿಯಾಗಿ ಈ ದಂಡಕಾರಣ್ಯದಲ್ಲಿ ಏಕೆ ತಿರುಗಾಡುತ್ತಿರುವಿರಿ.॥23-24॥
ಮೂಲಮ್ - 25
ಏವಂ ಬ್ರುವಂತ್ಯಾಂ ಸೀತಾಯಾಂ ರಾಮಪತ್ನ್ಯಾಂ ಮಹಾಬಲಃ ।
ಪ್ರತ್ಯುವಾಚೋತ್ತರಂ ತೀವ್ರಂ ರಾವಣೋ ರಾಕ್ಷಸಾಧಿಪಃ ॥
ಅನುವಾದ
ರಾಮಪತ್ನೀ ಸೀತೆಯು ಹೀಗೆ ಕೇಳಿದಾಗ ಮಹಾಬಲ ರಾಕ್ಷಸರಾಜ ರಾವಣನು ಅತ್ಯಂತ ಕಠೋರ ಶಬ್ದಗಳಲ್ಲಿ ಉತ್ತರಿಸಿದನು.॥25॥
ಮೂಲಮ್ - 26
ಯೇನ ವಿತ್ರಾಸಿತಾ ಲೋಕಾಃ ಸದೇವಾಸುರಮಾನುಷಾಃ ।
ಅಹಂ ಸ ರಾವಣೋ ನಾಮ ಸೀತೇ ರಕ್ಷೋಗಣೇಶ್ವರಃ॥
ಅನುವಾದ
ಸೀತೆ! ಯಾರ ಹೆಸರಿನಿಂದ ದೇವತೆಗಳು, ಅಸುರರು, ಮನುಷ್ಯರ ಸಹಿತ ಗಡ-ಗಡನೆ ನಡುಗುತ್ತಿರುವರೋ ಆ ರಾಕ್ಷಸರಾಜ ರಾವಣನು ನಾನೇ ಆಗಿದ್ದೇನೆ.॥26॥
ಮೂಲಮ್ - 27
ತ್ವಾಂ ತು ಕಾಂಚನವರ್ಣಾಭಾಂ ದೃಷ್ಟ್ವಾ ಕೌಶೇಯವಾಸಿನೀಮ್ ।
ರತಿಂ ಸ್ವಕೇಷು ದಾರೇಷು ನಾಧಿಗಚ್ಛಾಮ್ಯನಿಂದಿತೇ ॥
ಅನುವಾದ
ಅನಿಂದ್ಯಸುಂದರೀ! ನಿನ್ನ ಅಂಗಾಂಗಗಳ ಕಾಂತಿ ಸುವರ್ಣದಂತೆ ಇದೆ, ಅದರ ಮೇಲೆ ರೇಶ್ಮೆ ಸೀರೆಯು ಶೋಭಿಸುತ್ತಿದೆ. ನಿನ್ನನ್ನು ನೋಡಿದ ಮೇಲೆ ನನ್ನ ಮನಸ್ಸು ನನ್ನ ಸ್ತ್ರೀಯರ ಕಡೆಗೆ ಹೋಗುವುದಿಲ್ಲ.॥27॥
ಮೂಲಮ್ - 28
ಬಹ್ವೀನಾಮುತ್ತಮಸ್ತ್ರೀಣಾಮಾಹೃತಾನಾಮಿತಸ್ತತಃ ।
ಸರ್ವಾಸಾಮೇವ ಭದ್ರಂ ತೇ ಮಮಾಗ್ರಮಹಿಷೀ ಭವ ॥
ಅನುವಾದ
ನಾನು ಅಲ್ಲಿಂದ-ಇಲ್ಲಿಂದ ಅನೇಕ ಸುಂದರಿಯರಾದ ಸ್ತ್ರೀಯರನ್ನು ಕದ್ದು ತಂದಿರುವೆನು. ಅವರೆಲ್ಲರಲ್ಲಿ ನೀನು ನನ್ನ ಪಟ್ಟ ರಾಣಿಯಾಗು, ನಿನಗೆ ಒಳ್ಳೆಯದಾಗಲಿ.॥28॥
ಮೂಲಮ್ - 29
ಲಂಕಾ ನಾಮ ಸಮುದ್ರಸ್ಯ ಮಧ್ಯೇ ಮಮ ಮಹಾಪುರೀ ।
ಸಾಗರೇಣ ಪರಿಕ್ಷಿಪ್ತಾ ನಿವಿಷ್ಟಾ ಗಿರಿಮೂರ್ಧನಿ ॥
ಅನುವಾದ
ಲಂಕೆ ನನ್ನ ರಾಜಧಾನಿಯಾಗಿದೆ. ಆ ಮಹಾಪುರಿಯು ಸಮುದ್ರದ ನಡುವೆ ಒಂದು ಪರ್ವತದ ಮೇಲೆ ನೆಲೆಸಿದೆ. ಸುತ್ತಲೂ ಸಮುದ್ರದಿಂದ ಆವರಿಸಿಕೊಂಡಿದೆ.॥29॥
ಮೂಲಮ್ - 30
ತತ್ರ ಸೀತೇ ಮಯಾ ಸಾರ್ಧಂ ವನೇಷು ವಿಹರಿಷ್ಯಸಿ ।
ನ ಚಾಸ್ಯ ವನವಾಸಸ್ಯ ಸ್ಪೃಹಯಿಷ್ಯಸಿ ಭಾಮಿನಿ ॥
ಅನುವಾದ
ಸೀತೆ! ಅಲ್ಲಿ ನೀನು ಇದ್ದು ನನ್ನೊಂದಿಗೆ ನಾನಾ ಪ್ರಕಾರದ ವನಗಳಲ್ಲಿ ಸಂಚರಿಸುವೆ, ಭಾಮಿನಿ! ಮತ್ತೆ ನಿನ್ನ ಮನಸ್ಸಿನಲ್ಲಿ ವನವಾಸದ ಇಚ್ಛೆ ಎಂದಿಗೂ ಉಂಟಾಗಲಾರದು.॥30॥
ಮೂಲಮ್ - 31
ಪಂಚ ದಾಸ್ಯಃ ಸಹಸ್ರಾಣಿ ಸರ್ವಾಭರಣಭೂಷಿತಾಃ ।
ಸೀತೇ ಪರಿಚರಿಷ್ಯಂತಿ ಭಾರ್ಯಾ ಭವಸಿ ಮೇ ಯದಿ ॥
ಅನುವಾದ
ಸೀತೆ! ನೀನು ನನ್ನ ಭಾರ್ಯೆಯಾದರೆ ಎಲ್ಲ ರೀತಿಯ ಆಭರಣಗಳಿಂದ ವಿಭೂಷಿತರಾದ ಐದು ಸಾವಿರ ದಾಸಿಯರು ಸದಾ ನಿನ್ನ ಸೇವೆ ಮಾಡುವರು.॥31॥
ಮೂಲಮ್ - 32
ರಾವಣೇನೈವಮುಕ್ತಾ ತು ಕುಪಿತಾ ಜನಕಾತ್ಮಜಾ ।
ಪ್ರತ್ಯುವಾಚಾನವದ್ಯಾಂಗೀ ತಮನಾದೃತ್ಯ ರಾಕ್ಷಸಮ್ ॥
ಅನುವಾದ
ರಾವಣನು ಹೀಗೆ ಹೇಳಿದಾಗ ನಿರ್ದೋಷ ಅಂಗಗಳುಳ್ಳ ಜನಕನಂದಿನೀ ಸೀತೆಯು ಕುಪಿತಳಾಗಿ ರಾಕ್ಷಸನನ್ನು ತಿರಸ್ಕರಿಸುತ್ತಾ ಅವನಲ್ಲಿ ಹೀಗೆ ಉತ್ತರಿಸಿದಳು.॥32॥
ಮೂಲಮ್ - 33
ಮಹಾಗಿರಿಮಿವಾಕಂಪ್ಯಂ ಮಹೇಂದ್ರಸದೃಶಂ ಪತಿಮ್ ।
ಮಹೋದಧಿಮಿವಾಕ್ಷೋಭ್ಯಮಹಂ ರಾಮಮನುವ್ರತಾ ॥
ಅನುವಾದ
ನನ್ನ ಪತಿದೇವರು ಭಗವಾನ್ ಶ್ರೀರಾಮನು ಮಹಾಪರ್ವತದಂತೆ ಅವಿಚಲವಾಗಿದ್ದಾರೆ. ಇಂದ್ರನಂತೆ ಪರಾಕ್ರಮಿಗಳಾಗಿದ್ದಾರೆ. ಮಹಾಸಾಗರದಂತೆ ಪ್ರಶಾಂತರಾಗಿದ್ದು, ಎಂದೂ ಯಾರೂ ಕ್ಷುಬ್ಧರಾಗಿಸಲಾರರು. ನಾನು ತನು-ಮನ-ಪ್ರಾಣಗಳಿಂದ ಅವರನ್ನು ಅನುಸರಿಸುವವಳು ಹಾಗೂ ಅವರಲ್ಲೇ ಅನುರಾಗಿಯಾಗಿದ್ದೇನೆ.॥33॥
ಮೂಲಮ್ - 34
ಸರ್ವಲಕ್ಷಣಸಂಪನ್ನಂ ನ್ಯಗ್ರೋಧ ಪರಿಮಂಡಲಮ್ ।
ಸತ್ಯಸಂಧಂ ಮಹಾಭಾಗಮಹಂ ರಾಮಮನುವ್ರತಾ ॥
ಅನುವಾದ
ಶ್ರೀರಾಮಚಂದ್ರನು ಸಮಸ್ತ ಶುಭ ಲಕ್ಷಣಗಳಿಂದ ಸಂಪನ್ನನೂ, ವಟವೃಕ್ಷದಂತೆ ಎಲ್ಲರಿಗೆ ತನ್ನ ಛತ್ರಛಾಯೆಯಲ್ಲಿ ಆಶ್ರಯ ಕೊಡುವವನೂ, ಸತ್ಯಪ್ರತಿಜ್ಞನೂ, ಮಹಾ ಸೌಭಾಗ್ಯಶಾಲಿಯು ಆಗಿದ್ದಾನೆ. ನಾನು ಅವರ ಅನನ್ಯ ಅನುರಾಗಿಣಿ ಆಗಿದ್ದೇನೆ.॥34॥
ಮೂಲಮ್ - 35
ಮಹಾಬಾಹುಂ ಮಹೋರಸ್ಕಂ ಸಿಂಹವಿಕ್ರಾಂತಗಾಮಿನಮ್ ।
ನೃಸಿಂಹಂ ಸಿಂಹಸಂಕಾಶಮಹಂ ರಾಮಮನುವ್ರತಾ ॥
ಅನುವಾದ
ಅವರ ಎದೆಯು ವಿಶಾಲವಾಗಿದ್ದು, ಭುಜಗಳು ಉದ್ದವಾಗಿವೆ. ಅವರು ಸಿಂಹದಂತೆ ಬಹಳ ಗರ್ವದಿಂದ ನಡೆಯುತ್ತಾರೆ ಹಾಗೂ ಸಿಂಹದಂತೆ ಪರಾಕ್ರಮಿಯಾಗಿದ್ದಾರೆ. ನಾನು ಆ ಪುರುಷಸಿಂಹ ಶ್ರೀರಾಮನಲ್ಲೇ ಅನನ್ಯ ಭಕ್ತಿಯನ್ನಿಡುವವಳು.॥35॥
ಮೂಲಮ್ - 36
ಪೂರ್ಣಚಂದ್ರಾನನಂ ರಾಮಂ ರಾಜವತ್ಸಂ ಜಿತೇಂದ್ರಿಯಮ್ ।
ಪೃಥುಕೀರ್ತಿಂ ಮಹಾಬಾಹುಮಹಂ ರಾಮಮನುವ್ರತಾ ॥
ಅನುವಾದ
ರಾಜಕುಮಾರ ಶ್ರೀರಾಮನ ಮುಖವು ಪೂರ್ಣಚಂದ್ರನಂತೆ ಮನೋಹರವಾಗಿದೆ. ಅವರು ಜಿತೇಂದ್ರಿಯರಾಗಿದ್ದು, ಅವರ ಯಶಸ್ಸು ಮಹತ್ತರವಾಗಿದೆ. ಆ ಮಹಾಬಾಹು ಶ್ರೀರಾಮನಲ್ಲೇ ನನ್ನ ಮನಸ್ಸು ದೃಢವಾಗಿ ನೆಟ್ಟಿದೆ.॥36॥
ಮೂಲಮ್ - 37
ತ್ವಂ ಪುನರ್ಜಂಬುಕಃ ಸಿಂಹೀಂ ಮಾಮಿಹೇಚ್ಛಸಿ ಸುದುರ್ಲಭಾಮ್ ।
ನಾಹಂ ಶಕ್ಯಾ ತ್ವಯಾ ಸ್ಪ್ರಷ್ಟುಮಾದಿತ್ಯಸ್ಯ ಪ್ರಭಾ ಯಥಾ ॥
ಅನುವಾದ
ಪಾಪೀ ನಿಶಾಚರನೇ! ನೀನು ನರಿ ಮತ್ತು ನಾನು ಸಿಂಹಿಣಿಯಾಗಿದ್ದೇನೆ. ನಾನು ನಿನಗೆ ಸರ್ವಥಾ ದುರ್ಲಭಳಾಗಿದ್ದೇನೆ. ಏನು, ನೀನು ನನ್ನನ್ನು ಪಡೆಯಲು ಬಯಸುವೆಯಾ? ಎಲವೊ! ಸೂರ್ಯಪ್ರಭೆಯನ್ನು ಯಾರೂ ಮುಟ್ಟಲಾರರು; ಅಂತೆಯೇ ನೀನು ನನ್ನನ್ನು ಸ್ಪರ್ಶಿಸಲಾರೆ.॥37॥
ಮೂಲಮ್ - 38
ಪಾದಪಾನ್ ಕಾಂನಾನ್ ನೂನಂ ಬಹೂನ್ ಪಶ್ಯಸಿ ಮಂದಭಾಕ್ ।
ರಾಘವಸ್ಯ ಪ್ರಿಯಾಂ ಭಾರ್ಯಾಂ ಯಸ್ತ್ವಮಿಚ್ಛಸಿ ರಾಕ್ಷಸ ॥
ಅನುವಾದ
ಮಂದಭಾಗ್ಯ ರಾಕ್ಷಸನೇ! ಇಷ್ಟು ನಿನ್ನ ಸಾಹಸವೇ? ನೀನು ಶ್ರೀರಘುನಾಥನ ಪ್ರಿಯಪತ್ನಿಯನ್ನು ಅಪಹರಿಸಲು ಬಯಸುತ್ತಿರುವೆಯಾ? ನಿಶ್ಚಯವಾಗಿಯೂ ನಿನಗೆ ಅನೇಕ ಚಿನ್ನದ ವೃಕ್ಷಗಳು ಕಾಣುತ್ತಿವೆ. ಈಗ ನೀನು ಮೃತ್ಯುವಿನ ಬಳಿಗೆ ತಲುಪಿರುವೆ.॥38॥
ಮೂಲಮ್ - 39
ಕ್ಷುಧಿತಸ್ಯ ಚ ಸಿಂಹಸ್ಯ ಮೃಗಶತ್ರೋಸ್ತರಸ್ವಿನಃ ।
ಆಶೀವಿಷಸ್ಯ ವದನಾದ್ ದಂಷ್ಟ್ರಾಮಾದಾತುಮಿಚ್ಛಸಿ ॥
ಮೂಲಮ್ - 40
ಮಂದರಂ ಪರ್ವತಶ್ರೇಷ್ಠಂ ಪಾಣಿನಾ ಹರ್ತುಮಿಚ್ಛಸಿ ।
ಕಾಲಕೂಟಂ ವಿಷಂ ಪೀತ್ವಾ ಸ್ವಸ್ತಿಮಾನ್ ಗಂತುಮಿಚ್ಛಸಿ ॥
ಮೂಲಮ್ - 41
ಅಕ್ಷಿ ಸೂಚ್ಯಾ ಪ್ರಮೃಜಸಿ ಜಿಹ್ವಯಾಲೇಢಿ ಚ ಕ್ಷುರಮ್ ।
ರಾಘವಸ್ಯ ಪ್ರಿಯಾಂ ಭಾರ್ಯಾಮಧಿಗಂತುಂ ತ್ವಮಿಚ್ಛಸಿ ॥
ಅನುವಾದ
ನೀನು ಶ್ರೀರಾಮನ ಪ್ರಿಯ ಪತ್ನಿಯನ್ನು ಹಸ್ತಗತಮಾಡಿಕೊಳ್ಳುಲು ಬಯಸುತ್ತಿರುವೆ. ಅತ್ಯಂತ ವೇಗಶಾಲಿ ಮೃಗವೈರೀ ಹಸಿದ ಸಿಂಹದ ಮತ್ತು ವಿಷದ ಹಾವಿನ ಹಲ್ಲುಗಳನ್ನು ಕಿತ್ತುಕೊಳ್ಳಲು ಬಯಸಿದಂತೆ ಅನಿಸುತ್ತದೆ. ಪರ್ವತಶ್ರೇಷ್ಠ ಮಂದರಾಚಲವನ್ನು ಕೈಯಿಂದ ಎತ್ತಿಕೊಂಡು ಹೋಗಲು ಇಚ್ಛಿಸುತ್ತಿರುವೆ. ಕಾಲಕೂಟ ವಿಷವನ್ನು ಕುಡಿದು ಕ್ಷೇಮವಾಗಿ ಇರಲು ಆಶಿಸುತ್ತಿರುವೆ. ಸೂಜಿಯಿಂದ ಕಣ್ಣುಗಳನ್ನು ಚುಚ್ಚಿಕೊಳ್ಳುತ್ತಿರುವೆ, ನಾಲಿಗೆಯಿಂದ ಹರಿತವಾದ ಕತ್ತಿಯನ್ನು ನೆಕ್ಕುತ್ತಿರುವೆ.॥39-41॥
ಮೂಲಮ್ - 42½
ಅವಸಜ್ಯ ಶಿಲಾಂ ಕಂಠೇ ಸಮುದ್ರಂ ತರ್ತುಮಿಚ್ಛಸಿ ।
ಸೂರ್ಯಾಚಂದ್ರಮಸೌ ಚೋಭೌ ಪಾಣಿಭ್ಯಾಂಹರ್ತುಮಿಚ್ಛಸಿ ॥
ಯೋ ರಾಮಸ್ಯ ಪ್ರಿಯಾಂ ಭಾರ್ಯಾಂ ಪ್ರಧರ್ಷಯಿತುಮಿಚ್ಛಸಿ ।
ಅನುವಾದ
ಕತ್ತಿಗೆ ಕಲ್ಲನ್ನು ಕಟ್ಟಿಕೊಂಡು ಸಮುದ್ರವನ್ನು ದಾಟಬೇಕೆಂದಿರುವೆಯಾ? ಸೂರ್ಯ-ಚಂದ್ರರನ್ನು ತನ್ನ ಕೈಯಿಂದ ತುಡುಕಲು ಬಯಸುವೆಯಾ? ನೀನು ಶ್ರೀರಾಮಚಂದ್ರನ ಪ್ರಿಯ ಪತ್ನಿಯಮೇಲೆ ಬಲಾತ್ಕಾರಮಾಡಲು ಹೊರಟಿರುವೆಯಲ್ಲ.॥42½॥
ಮೂಲಮ್ - 43½
ಅಗ್ನಿಂ ಪ್ರಜ್ವಲಿತಂ ದೃಷ್ಟ್ವಾ ವಸ್ತ್ರೇಣಾಹರ್ತುಮಿಚ್ಛಸಿ ॥
ಕಲ್ಯಾಣವೃತ್ತಾಂ ಯೋ ಭಾರ್ಯಾಂ ರಾಮಸ್ಯಾಹರ್ತುಮಿಚ್ಛಸಿ ।
ಅನುವಾದ
ನೀನು ಕಲ್ಯಾಣಮಯ ಆಚಾರವನ್ನೂ ಪಾಲಿಸುವ ಶ್ರೀರಾಮನ ಭಾರ್ಯೆಯನ್ನು ಅಪಹರಿಸಲು ಬಯಸಿದರೆ ಖಂಡಿತವಾಗಿ ಉರಿಯುತ್ತಿರುವ ಬೆಂಕಿಯನ್ನು ನೋಡಿಯೂ ಬಟ್ಟೆಯಲ್ಲಿ ಕಟ್ಟಿಕೊಳ್ಳಲು ಇಚ್ಚಿಸುತ್ತಿರುವೆ.॥43½॥
ಮೂಲಮ್ - 44
ಅಯೋಮುಖಾನಾಂ ಶೂಲಾನಾಮಗ್ರೇ ಚರಿತುಮಿಚ್ಛಸಿ ।
ರಾಮಸ್ಯ ಸದೃಶೀಂ ಭಾರ್ಯಾಂ ಯೋಽಧಿಗಂತುಂ ತ್ವಮಿಚ್ಛಸಿ ॥
ಅನುವಾದ
ಸರ್ವಥಾ ಶ್ರೀರಾಮನಿಗೆ ಯೋಗ್ಯಳಾದ ಅವನ ಪತ್ನಿಯನ್ನು ಕೈವಶಮಾಡಿಕೊಳ್ಳಲು ನೀನು ಬಯಸಿದರೆ ಖಂಡಿತವಾಗಿ ಕಬ್ಬಿಣದ ಶೂಲಗಳ ತುದಿಯ ಮೇಲೆ ಕಾಲಿಟ್ಟು ನಡೆಯಲು ಬಯಸಿದಂತೆ ಆಗಿದೆ.॥44॥
ಮೂಲಮ್ - 45
ಯದಂತರಂ ಸಿಂಹಸೃಗಾಲಯೋರ್ವನೇ
ಯದಂತರಂ ಸ್ಯಂದನಿಕಾಸಮುದ್ರಯೋಃ ।
ಸುರಾಗ್ರ್ಯಸೌವೀರಕಯೋರ್ಯದಂತರಂ
ತದಂತರಂ ದಾಶರಥೇಸ್ತವೈವ ಚ ॥
ಅನುವಾದ
ಕಾಡಿನಲ್ಲಿರುವ ಸಿಂಹ ಮತ್ತು ನರಿಗೂ, ಸಮುದ್ರ ಹಾಗೂ ಸಣ್ಣ ನದಿಗೂ, ಅಮೃತ ಮತ್ತು ನವಣೆಯ ಗಂಜಿಗೂ, ಅಂತರ ಇರುವಷ್ಟೇ ದಶರಥನಂದನ ಶ್ರೀರಾಮನಿಗೂ, ನಿನಗೂ ಅಂತರವಿದೆ.॥45॥
ಮೂಲಮ್ - 46
ಯದಂತರಂ ಕಾಂಚನಸೀಸಲೋಹಯೋ-
ರ್ಯದಂತರಂ ಚಂದನವಾರಿಪಂಕಯೋಃ ।
ಯದಂತರಂ ಹಸ್ತಿ ಬಿಡಾಲಯೋರ್ವನೇ
ತದಂತರಂ ದಾಶರಥೇಸ್ತವೈವ ಚ ॥
ಅನುವಾದ
ಬಂಗಾರ ಮತ್ತು ಸೀಸಕ್ಕೂ, ಚಂದನಮಿಶ್ರಿತ ನೀರಿಗೂ-ಕೆಸರಿಗೂ, ಕಾಡಾನೆಗೂ-ಕಾಡುಬೆಕ್ಕಿಗೂ ಅಂತರ ಇರುವಷ್ಟೇ ಶ್ರೀರಾಮನಿಗೂ ನಿನಗೂ ಅಂತರವಿದೆ.॥46॥
ಮೂಲಮ್ - 47
ಯದಂತರಂ ವಾಯಸವೈನತೇಯಯೋ-
ರ್ಯದಂತರಂ ಮದ್ಗು ಮಯೂರಯೋರಪಿ ।
ಯದಂತರಂ ಹಂಸಗೃಧ್ರಯೋರ್ವನೇ
ತದಂತರಂ ದಾಶರಥೇಸ್ತವೈವ ಚ ॥
ಅನುವಾದ
ಗರುಡ ಮತ್ತು ಕಾಗೆಗೂ, ನವಿಲು ಹಾಗೂ ನೀರು ಕಾಗೆಗೂ, ರಾಜಹಂಸಕ್ಕೂ-ರಣಹದ್ದಿಗೂ, ಅಂತರ ವಿರುವಷ್ಟೇ ಶ್ರೀರಾಮ ಮತ್ತು ನಿನಗೂ ಅಂತರವಿದೆ.॥47॥
ಮೂಲಮ್ - 48
ತಸ್ಮಿನ್ಸಹಸ್ರಾಕ್ಷಸಮಪ್ರಭಾವೇ
ರಾಮೇ ಸ್ಥಿತೇ ಕಾರ್ಮುಕಬಾಣಪಾಣೌ ।
ಹೃತಾಪಿ ತೇಽಹಂ ನ ಜರಾಂ ಗಮಿಷ್ಯೇ
ಆಜ್ಯಂ ಯಥಾ ಮಕ್ಷಿಕಯಾವಗೀರ್ಣಮ್ ॥
ಅನುವಾದ
ಸಹಸ್ರ ನೇತ್ರಧಾರೀ ಇಂದ್ರನಂತೆ ಪ್ರಭಾವಶಾಲೀ ಶ್ರೀರಾಮಚಂದ್ರನು ಕೈಯಲ್ಲಿ ಧನುಷ್ಯ ಮತ್ತು ಬಾಣಗಳನ್ನು ಧರಿಸಿ ನಿಂತುಕೊಂಡಾಗ ನೀನು ನನ್ನನ್ನು ಅಪಹರಣ ಮಾಡಿಯೂ ನೊಣದೊಡನೆ ನುಂಗಿದ ತುಪ್ಪವನ್ನು ಜೀರ್ಣಿಸಿಕೊಳ್ಳದಂತೆ ನೀನು ಜೀರ್ಣಿಸಿಕೊಳ್ಳಲಾರೆ.॥48॥
ಮೂಲಮ್ - 49
ಇತೀವ ತದ್ವಾಕ್ಯಮದುಷ್ಟಭಾವಾ
ಸುದುಷ್ಟಮುಕ್ತ್ವಾ ರಜನೀಚರಂ ತಮ್ ।
ಗಾತ್ರಪ್ರಕಂಪಾದ್ ವ್ಯಥಿತಾ ಬಭೂವ
ವಾತೋದ್ಧತಾ ಸಾ ಕದಲೀವ ತನ್ವೀ ॥
ಅನುವಾದ
ಸೀತೆಯ ಮನಸ್ಸಿನಲ್ಲಿ ಯಾವುದೇ ದುರ್ಭಾವ ಇಲ್ಲದಿದ್ದರೂ ಆ ರಾಕ್ಷಸನಲ್ಲಿ ಹೀಗೆ ಅತ್ಯಂತ ದುಃಖಜನಕ ಮಾತನ್ನು ಹೇಳಿ ಸೀತೆಯು ರೊಷದಿಂದ ನಡುಗತೊಡಗಿದಳು. ಶರೀರದ ಕಂಪನದಿಂದ ಕೃಶಾಂಗೀ ಸೀತೆಯು ಗಾಳಿಯಿಂದ ನಡುಗುವ ಬಾಳೆಗಿಡದಂತೆ ವ್ಯಥಿತಳಾದಳು.॥49॥
ಮೂಲಮ್ - 50
ತಾಂ ವೇಪಮಾನಾಮುಪಲಕ್ಷ್ಯ ಸೀತಾಂ
ಸ ರಾವಣೋ ಮೃತ್ಯು ಸಮಪ್ರಭಾವಃ ।
ಕುಲಂ ಬಲಂ ನಾಮ ಚ ಕರ್ಮ ಚಾತ್ಮನಃ
ಸಮಾಚಚಕ್ಷೇ ಭಯಕಾರಣಾರ್ಥಮ್ ॥
ಅನುವಾದ
ನಡುಗುತ್ತಿರುವ ಸೀತೆಯನ್ನು ನೋಡಿ ಮೃತ್ಯುವಿನಂತೆ ಪ್ರಭಾವವುಳ್ಳ ರಾವಣನು ಆಕೆಯ ಮನಸ್ಸಿನಲ್ಲಿ ಭಯವನ್ನುಂಟು ಮಾಡಲು ತನ್ನ ಕುಲ, ಬಲ, ನಾಮ, ಕರ್ಮದ ಪರಿಚಯ ಮಾಡಿಸಲು ತೊಡಗಿದನು.॥50॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತೇಳನೆಯ ಸರ್ಗ ಸಂಪೂರ್ಣವಾಯಿತು.॥47॥